ಮೊದಲನೆಯ ಪರಿಚ್ಛೇದ

ಕುವಲಯಗಳು ತಮ್ಮೊಡೆಯನ ಆಗಮನದಿಂದ ಆನಂದದಿಂದ ಉಬ್ಬಿ ಸುಧಾವೃಷ್ಟಿಯಲ್ಲಿ ತೊಯ್ದು ತುಳುಕುತ್ತಿದ್ದವು. ಸುತ್ತಲಿನ ವೃಕ್ಷಲತೆಗಳು ಇವುಗಳ ನಲಿದಾಟವನ್ನು ನೋಡಿ ಮೆಲ್ಲನೆ ಮರ್ಮರ ಶಬ್ದವನ್ನು ಮಾಡುತ್ತ, ಹಾಸ್ಯ ಮಾಡುತ್ತಲಿದ್ದುವು. ಇತರ ಪುಷ್ಪಗಳು ಇವುಗಳ ಸೊಬಗನ್ನು ನೋಡಿ ಸಹಿಸಲಾರದೆ ಮುಖವನ್ನು ಮುಚ್ಚಿಕೊಂಡವು. ಮಂದಾನಿಲನು ಈ ಕೋಪವನ್ನು ಶಾಂತಮಾಡಲು ಮೆಲ್ಲನೆ ಒಂದೊಂದು ಪುಷ್ಪದ ಬಳಿಯಲ್ಲಿಯೂ ಹೋಗಲಾರಂಭಿಸಿದನು. ಚಕೋರಗಳು ಆಹ್ಲಾದದಿಂದ ಒಡೆಯನಿಗೆ ಸ್ವಾಗತವನ್ನೀಯಲು ಸಿದ್ಧವಾಗುತ್ತಿದ್ದುವು. ಸಮುದ್ರರಾಜನು ತನ್ನ ಮಗನ ಸೊಬಗನ್ನು ನೋಡಿ ಉಬ್ಬುತ್ತಿದ್ದನು. “ನನ್ನ ಮಗನಿಲ್ಲದಿದ್ದರೆ ಈ ಮನುಷ್ಯ ಮಾತ್ರದವರ ಪಾಡೇನು? ನನ್ನ ಮಗಳಾದರೊ ಸುಂದರೀ ವರ್ಗಕ್ಕೆ ರಾಣಿ! ಜಗತ್ಕರ್ತನೆ ಪತ್ನಿ ! ನನ್ನ ಅದೃಷ್ಟಕ್ಕೆ ಎಣೆಯುಂಟೆ!” ಎಂದು ಯೋಚಿಸುತ್ತಿದ್ದನು. ಇಂತು ಪ್ರಪಂಚದ ನಾಟಕವನ್ನು ಆರಂಭ ಮಾಡುವುದಕ್ಕಾಗಿ ಸೂತ್ರಧಾರನಾದ ಚಂದ್ರಮನು ತಾರಕಾಪುಷ್ಪಗಳನ್ನೆರಚುತ್ತಾ ಮೆಲ್ಲನೆ ತಲೆದೋರಿದನು.

ನಾರಾಯಣರಾಯನ ಪತ್ನಿಯಾದ ಕಮಲಮ್ಮನು ತೋಟದಲ್ಲಿ ಒಂದು ಕಲ್ಲಿನಮೇಲೆ ಕುಳಿತಿದ್ದಳು. ಇದಿರಿಗೆ ಮಗಳು ಶಾಂತಿಯು ನಿಂತಿದ್ದಳು.

ಶಾಂತಿ: ಅಮ್ಮ, ನನ್ನನ್ನು ಕರೆದುದು ಏಕೆ?

ಕಮಲಮ್ಮ : ಬಾಮ್ಮ ಕೂತುಕೊ. ವಿಷಯವು ಘನತರವಾದುದು.

ಶಾಂತಿಯ ಮುಖವು ಗಂಭೀರವಾಯ್ತು. ಮೆಲ್ಲಗೆ ಇದಿರಿನಲ್ಲಿದ್ದ ಕಲ್ಲಿನ ಮೇಲೆ ಕುಳಿತುಕೊಂಡಳು. ಸ್ವಲ್ಪ ಹೊತ್ತಿನವರೆವಿಗೆ ಇಬ್ಬರೂ ನೀರವವಾಗಿದ್ದರು. ಪ್ರಕೃತಿಯು ಶಾಂತಿಯ ಆಗಮನದಿಂದ ಶಾಂತವಾದಂತಿದ್ದಿತು.

ಕ: ಶಾಂತಿ, ಕೈಗೆ ಎಟುಕದ ಹಣ್ಣನ್ನು ಬಲವಂತಪಡಿಸುವುದು ಸಾಧ್ಯವೇ! ಅಥವಾ ಅದು ದೊರಕಲಿಲ್ಲವೆಂದು ನಿದ್ರಾಹಾರಗಳನ್ನು ತ್ಯಜಿಸುವುದು ಸರಿಯೆ? ಯೋಚಿಸಿ ನೋಡು; ನಿನ್ನ ಸುಖದುಃಖಗಳನ್ನು ನಿನಗಿಂತಲೂ ಹೆಚ್ಚಾಗಿ ನೋಡುವರು ಆರೂ ಇಲ್ಲ ಹೀಗೇಕೆ ಕೊರಗುವೆ?

ಶಾ: ಅಮ್ಮ, ವಿಧಿಯನ್ನು ಮಾರ್ಪಡಿಸಲು ಸ್ವತಃ ಬ್ರಹ್ಮನಿಂದಲೇ ಸಾಧ್ಯವಿಲ್ಲ, ಆಯಾಕಾಲಕ್ಕೆ ಆಗತಕ್ಕದ್ದು ಆಗಲೇಬೇಕು. ಅಲ್ಲದೆ, ಅಂತಹ ಹಣ್ಣಾವುದನ್ನೂ ಹೊಂದಲು ನಾನು ಇಷ್ಟವುಳ್ಳವಳಾಗಿಲ್ಲ.

ಕ: ಹೆತ್ತ ತಾಯಿಯಿಂದ ನಿನ್ನ ದುಃಖವನ್ನು ಮರೆಮಾಚಲು ಪ್ರಯತ್ನಿಸುತ್ತಿರುವೆ. ಎಂತಹ ಹುಚ್ಚು ಶಾಂತಿ! ಎಂದಿಗಾದರೂ ಸಾಧ್ಯವೆ? ಈಚೆಗೆ ಊಟದಲ್ಲಿ ನಿನಗೆ ಅಭಿಲಾಷೆಯಿಲ್ಲ. ಆವಾಗಲೂ ಏಕಾಂಗಿಯಾಗಿರಲು ಅಪೇಕ್ಷಿಸುವೆ. ಇದ್ದಕ್ಕಿದ್ದ ಹಾಗೆಯೇ ಕಣ್ಣಿನಲ್ಲಿ ನೀರು ತೊಟ್ಟಿಕ್ಕುವುದು. ಇವೆಲ್ಲಾ ಏತರ ಲಕ್ಷಣ! ಈ ವಿಧವಾದ ನಡತೆಯನ್ನು ಬೇರೆ ದಾರಿಗೆ ತಿರುಗಿಸು. ನಿನ್ನ ಮುಂದಿನ ಜೀವನಕ್ಕೆ ಅದು ಸುಖದಾಯಕವಾಗುವುದು. ಎಷ್ಟು ದಿನ ಹೀಗಿರಲು ಸಾಧ್ಯ?

ಶಾ: ಮುಂದೆ ಜೀವಿಸಿ ನನಗಾಗಬೇಕಾದುದೇನು? ಅಥವಾ ನನ್ನ ಜೀವನಕ್ಕಾದರೂ ಏನಾಗಬೇಕು? ಸೃಷ್ಟಿಸಿದ ದೇವರು ಹೇಗಾದರೂ ರಕ್ಷಿಸುವನು. ಪೂಜ್ಯ ತಾಯಿತಂದೆಗಳಾದ ನಿಮ್ಮ ಸೇವೆಯನ್ನು ಮಾಡಿ ನನ್ನ ಜನ್ಮಸಾರ್ಥಕಗೊಳಿಸುವೆನು. ತಾಯಿ ! ನನಗಿನ್ನೇತರಲ್ಲಿಯೂ ಆಸೆಯಿಲ್ಲ. ಈ ವಿಷಯವಾಗಿ ವೃಥಾ ಚಿಂತಿಸಿ ನಿನ್ನ ಜೀವನವನ್ನು ದುಃಖಮಯವಾಗಿ ಮಾಡಿಕೊಳ್ಳಬೇಡ. ಇದೇ ನನ್ನ ಪ್ರಾರ್ಥನೆ.

ಕ: ಶಾಂತಿ, ನೀನು ನಮಗೆ ಒಬ್ಬಳೇ ಮಗಳು. ನಮ್ಮ ಆಶೆಯನ್ನೆಲ್ಲಾ ನಿನ್ನಲ್ಲಿಟ್ಟಿರುವೆವು. ನಿನ್ನ ಸುಖಮಯವಾದ ಸಂಸಾರವನ್ನು ನೋಡಿ ಸಂತೋಷಪಡುವುದು ನಮ್ಮದೃಷ್ಟದಲ್ಲಿಲ್ಲವೆ?

ಶಾ: ನನಗೆ ಇಷ್ಟವಿಲ್ಲದ ಸಂಸಾರಬಂಧಗಳಿಂದ ಬದ್ಧಳಾಗಿ ತೊಳಲುವುದನ್ನು ನೋಡುವುದು ನಿಮಗೆ ಆನಂದವೇ?

ಕ: ನೀನಿನ್ನೂ ಅರಿಯದ ಬಾಲೆ. ನೀನಾವುದನ್ನು ತೊಳಲುವುದೆಂದು ಹೇಳುವಿಯೋ ಅದೇ ಪ್ರಾಪಂಚಿಕ ಸುಖ. ಆ ಬಂಧನಗಳೇ ಮುಕ್ತಿಗೆ ಸಹಾಯಕವಾದ ಸಾಧನಗಳು.

ಶಾ: ಪ್ರಾಪಂಚಿಕ ಸುಖಕ್ಕೆ ನಾನೆಂದೋ ತಿಲಾಂಜಲಿಯನ್ನು ಕೊಟ್ಟಿರುವೆನು. ಇನ್ನು ಮುಕ್ತಿಯನ್ನು ಪಡೆಯಬೇಕಾದರೆ ಆ ಬಂಧನಗಳೇ ಆಗಬೇಕೆ? ದೇವರಲ್ಲಿನ ಭಕ್ತಿ, ತಾಯಿತಂದೆಗಳಲ್ಲಿ ಪ್ರೀತಿ, ಇಷ್ಟ ಸಹೋದರ ಸಹೋದರಿಯರಲ್ಲಿನ ಅಭಿಮಾನ, ಪ್ರಾಣಿಮಾತ್ರದಲ್ಲಿನ ದಯೆ, ಇವುಗಳೆಲ್ಲಾ ಸಾಧನಗಳಲ್ಲವೆ? ತಾಯಿ! ನೀವು ಸ್ವಾರ್ಥಪರರಾಗಿ ನಿಮ್ಮ ಈ ಚಿಕ್ಕಸಂಸಾರದ ಬಂಧನಗಳಿಂದ ಬದ್ಧರಾಗಿ ಅದಕ್ಕಾಗಿಯೇ ಜೀವವನ್ನರ್ಪಿಸುತ್ತಿರುವಿರಿ. ನನಗಾದರೊ ಈ ಜಗತ್ತೇ ಸಂಸಾರ. ಈ ಸಂಸಾರದ ಮೂಲಕ ಸ್ವಾರ್ಥವನ್ನು ತ್ಯಜಿಸಿ ಮುಕ್ತಿಯನ್ನು ಪಡೆವುದು ಅಸಾಧ್ಯವೆ?

ಕ: ಸಂಸಾರದಿಂದ ಗೆದ್ದು ಪಡೆಯುವ ಮುಕ್ತಿಯೇ ಶ್ರೇಷ್ಠವಾದುದು. ಹಾಗಿಲ್ಲದಿದ್ದರೆ ಪೂರ್ವದಿಂದಲೂ ಈ ಪದ್ಧತಿಯು ಬೀಳುತ್ತಿತ್ತೆ!

ಶಾ: ಅಮ್ಮಾ, ನಿನ್ನ ಭ್ರಮೆಗೆ ನಾನೇನು ಹೇಳಲಿ? ಮುಕ್ತಿಯಲ್ಲಿ ಶ್ರೇಷ್ಠ ಕನಿಷ್ಠವೆಂಬ ಭೇದವಿದೆಯೇ, ಹಾಗಿದ್ದರೂ ಸ್ವಾರ್ಥವನ್ನು ತ್ಯಜಿಸಿ ಪಡೆಯುವ ಮುಕ್ತಿಯೇ ಶ್ರೇಷ್ಠವಲ್ಲವೆ? ಪೂರ್ವದ ಪದ್ಧತಿಯೆಂದು ಹೇಳಿದಿ. ಗಾರ್ಗಿಯು ವಿವಾಹಿತಳೆ? ಅವಳು ಪರಮಪದವಿಯನ್ನು ಪಡೆಯಲಿಲ್ಲವೆ? ಅಥವಾ ನೀನವಳನ್ನು ಪೂಜ್ಯಳೆಂದು ಒಪ್ಪುವುದಿಲ್ಲವೆ?

ಕ: ಅಮ್ಮಾ, ನನಗದಾವುದೂ ತಿಳಿಯದು. ನಿನ್ನನ್ನು ಕೇಳಿಕೊಳ್ಳುವೆನು. ನನ್ನಿಷ್ಟವನ್ನು ಪೂರ್ತಿಮಾಡು.

ಶಾ: (ಗದ್ಗದ ಸ್ವರದಲ್ಲಿ) ಇಲ್ಲ, ನನ್ನ ಮನಸ್ಸಿಗೆ ವಿರೋಧವಾಗಿ ನಾನು ಹೋಗಲಾರೆ. ತಾಯಿ! ಈ ವಿಷಯದಲ್ಲಿ ಮಾತ್ರ ನನ್ನನ್ನು ಕ್ಷಮಿಸಲಾರೆಯಾ? ಶಾಂತಿಯು ಅಂಜಲಿಬದ್ಧಳಾಗಿ ತಾಯಿಯ ಪದತಲದಲ್ಲಿ ಬಿದ್ದಳು. ತಾಯಿಯು ಕಣ್ಣೀರು ಸುರಿಸುತ್ತಾ ಮಗಳನ್ನೆಬ್ಬಿಸಿ “ಶಾಂತಿ, ಇನ್ನೂ ಕೆಲವು ದಿನಗಳು ಯೋಚಿಸು. ಆಗಲಾದರೂ ನಿನ್ನ ಮನಸ್ಸಿಗೆ ನಾನು ಹೇಳುವುದು ಸರಿಯಾಗಿ ಕಂಡುಬಂದರೂ ಬರಬಹುದು. “ಅಮ್ಮಾ! ಕಂಬನಿಸುರಿಸಬೇಡ. ನಿನ್ನ ಒಂದೊಂದು ಕಂಬನಿಯೂ ನನಗೆ ಮರ್ಮಾಂತಿಕ ಯಾತನೆಯನ್ನುಂಟು ಮಾಡುತ್ತೆ. ನಾನು ಸಂಸಾರಿಯಾಗದಿದ್ದರೂ ಬೇಡ. ಜನರು ಆಡಿದರೂ ಆಡಿಕೊಳ್ಳಲಿ. ನೀನೆಮ್ಮ ಪ್ರಾಣ. ಚಿರಾಯುಷ್ಯತಿಯಾಗಿ ನಮ್ಮ ಕಣ್ಣೆದುರಿಗಿದ್ದರೆ ಅದು ನಮ್ಮ ಪರಮ ಸೌಭಾಗ್ಯ. ಹೊತ್ತು ಬಹಳವಾಯ್ತು, ಇನ್ನು ನಡೆ”

ತಾಯಿ ಮಕ್ಕಳಿಬ್ಬರು ಒಳಗೆ ಹೋದರು. ತಾಯಿಯು ಮಗಳ ದುಃಖದ ವಿಷಯ ಚಿಂತಿಸುತ್ತಾ ರಾತ್ರಿಯನ್ನು ಕಳೆದಳು. ಮಗಳು ತಾಯಿತಂದೆಗಳಿಗೆ ತನ್ನಿಂದುಂಟಾದ ಯಾತನೆಯ ವಿಷಯ ಯೋಚಿಸುತ್ತಾ ಕಣ್ಣೀರು ಸುರಿಸುತ್ತಾ ರಾತ್ರಿಯನ್ನು ಕಳೆದಳು.

ಎರಡನೆಯ ಪರಿಚ್ಛೇದ

ನಾರಾಯಣರಾಯರ ಮನೆಯ ಬಲಪಾರ್ಶ್ವದ ಒಂದು ಕೊಠಡಿಯಲ್ಲಿ ಶಾಂತಿಯು ಒಂದು ಪುಸ್ತಕವನ್ನೋದುತ್ತಾ ಕುಳಿತಿದ್ದಳು. ಕೊಠಡಿಯು ಚೊಕ್ಕಟ್ಟವಾಗಿದ್ದಿತು. ಉತ್ತಮವಾದ ಕೆಲವು ಪಠಗಳು ತೂಗುಹಾಕಲ್ಪಟ್ಟಿದ್ದುವು. ಹೆಚ್ಚಿನ ಅಲಂಕಾರಗಳೇನೂ ಇರಲಿಲ್ಲ.

ಯುವಕನೊಬ್ಬನು ಬಾಗಿಲಬಳಿ ಬಂದು ನಿಂತನು. ಅವನಿಗೆ ಸುಮಾರು ಇಪ್ಪತ್ತೆರಡು ಅಥವಾ ಇಪ್ಪತ್ತೂರು ವರ್ಷ; ಗಂಭೀರವಾದ ಮುಖ. ಸ್ವಲ್ಪ ಹೊತ್ತು ಹಾಗೆಯೇ ನಿಂತಿದ್ದನು. ಶಾಂತಿಯು ನಿಶ್ಚಲಚಿತ್ತದಿಂದ ಓದುತ್ತಿದ್ದಳು. ಅನಂತರದಲ್ಲಿ ಯುವಕನು “ಶಾಂತಿ ಒಳಗೆ ಬರಬಹುದೆ?” ಎಂದು ಕೇಳಿದನು. ಶಾಂತಿಯು ತಿರುಗಿ ನೋಡಿದಳು. ಮುಖವು ಪ್ರಪುಲ್ಲವಾಯ್ತು. “ಅಗತ್ಯವಾಗಿ ದಯಮಾಡಿ ಉಪೇಂದ್ರ! ಇಷ್ಟು ದಿನಕ್ಕೆ ಇಂದು ಸ್ನೇಹಿತರ ನೆನಪಾಯ್ತೆ?

ಉಪೇಂದ್ರ : ಬಂದರೂ ಹೋದರೂ ತಿಳಿಯದಷ್ಟು, ಕಾವ್ಯಗಳಲ್ಲಿ ಮಗ್ನಳಾಗಿರುವಾಗ ನಾನು ಬಂದರೂ ಪ್ರಯೋಜನವೇನು?

ಶಾ: ಇಷ್ಟೆಲ್ಲಾ ಏತಕ್ಕೆ? ಬರಲಿಕ್ಕೆ ಇಷ್ಟವಿಲ್ಲವೆಂದರೆ ನಾನು ಆಕ್ಷೇಪಿಸುವೆನೆ?

ಉ: ಅನ್ಯಾಯವಾಗಿ ದೂರುವೆ. ಹಾಗಿದ್ದರೆ ಈಗ ಬರುತ್ತಿದ್ದೇನೆ?

ಶಾ: ಗಾಳಿಯು ಆವಾಗಲೂ ಒಂದೇ ಕಡೆ ಬೀಸುವುದಿಲ್ಲ. ಈ ದಿನ ಈ ಕಡೆಗೆ ಬೀಸಿರಬಹುದೆಂದು ತೋರುತ್ತದೆ. ಅದಿರಲಿ, ಶೈವಲೆಗೆ ಕ್ಷೇಮವಷ್ಟೆ?

ಉ: ದೇವರನುಗ್ರಹದಿಂದ ಕ್ಷೇಮವಾಗಿರುವಳು.

ಶಾ: ಕಾರ್ಖಾನೆಯಲ್ಲಿ ಕೆಲಸವು ಸರಿಯಾಗಿ ನಡೆಯುತ್ತಿರಬಹುದು. ಈ ಸಾರಿ ಹೆಚ್ಚಿಗೆ ಲಾಭವಾಯಿತೆ?

ಉ: ಹೆಚ್ಚು ಲಾಭವಾಯ್ತೆಂದು ಹೇಳಲಾಗುವುದಿಲ್ಲ. ಆದರೂ ಆವ ವಿಧದಲ್ಲಿಯೂ ನಷ್ಟವಿಲ್ಲ.

ಸ್ವಲ್ಪ ಹೊತ್ತಿನವರೆಗೂ ಇಬ್ಬರೂ ಮೌನವಾಗಿದ್ದರು. ಶಾಂತಿಯ ಮುಖಭಾಗವು ಗಂಭೀರವಾಗಿದ್ದಿತು. ಯುವಕನು ಏನೋ ಚಿಂತಿಸುತ್ತಿದ್ದಂತೆ ಕಂಡುಬಂದಿತು.

ಉ: ಶಾಂತಿ, ಸದ್ಯದಲ್ಲಿಯೇ ನೀನು ಕಲ್ಯಾಣಪುರಕ್ಕೆ ಹೊರಡುವುದಾಗಿ ಕೇಳಿದೆ. ನಿಜವೆ?

ಶಾ: ಹೌದು, ನಿಮಗಾರು ಹೇಳಿದರು?

ಉ: ಹೇಗೋ ವರ್ತಮಾನವು ತಿಳಿಯಿತು. ಆಕಸ್ಮಿಕವಾಗಿ ಹೊರಡಲು ಕಾರಣವೇನು?

ಶಾ: ಆಕಸ್ಮಿಕ! ಹಾಗೆಂದರೇನು? ಅಲ್ಲಿಯ ಶಾಲೆಯಲ್ಲಿ ಉಪಾಧ್ಯಾಯಿನಿಯ ಕೆಲಸವು ದೊರೆಯಿತು. ಸ್ಥಳವು ಚೆನ್ನಾಗಿರುವುದು. ಅದಕ್ಕಾಗಿ ಹೋಗುವೆನು.

ಉ: ಏಕೆ? ಇಲ್ಲಿ ಶಾಲೆಗಳಿಲ್ಲವೆ? ನಿನಗಾರೂ ಕೆಲಸವನ್ನು ಕೊಡಲು ಒಪ್ಪಲಿಲ್ಲವೆ?

ಶಾ: ಅಲ್ಲಿ ವೇತನವು ಹೆಚ್ಚಾಗಿ ದೊರಕುವುದು. ಅಲ್ಲದೆ ಮೊದಲೇ ಹೇಳಿದೆನಲ್ಲ. ಸ್ಥಳವು ಉತ್ತಮವಾದುದು.

ಉ: ಹುಟ್ಟಿ ಬೆಳೆದ ಈ ಸ್ಥಳವು ಅಸಹ್ಯವಾಯ್ತೆ? ಕೆಲಸಕ್ಕೆ ಇಲ್ಲಿ ಪ್ರಯತ್ನಿಸಿ ನೋಡಿದಿಯಾ?

ಶಾ: ಇಲ್ಲ.

ಉ: ಅದೇಕೆ ಶಾಂತಿ? ನಮ್ಮ ಸಹವಾಸವು ನಿನಗೆ ಬೇಡವಾಯ್ತೆ?

ಶಾ:ಇಲ್ಲ ಉಪೇಂದ್ರ ನಿಮ್ಮಗಳ ಸಹವಾಸವು ನನಗೆ ಬೇಡವಾಗಲಿಲ್ಲ. ಆದರೆ ನನ್ನ ಸಹವಾಸವು ಈ ಪ್ರಪಂಚಕ್ಕೆ ಬೇಡವಾಗಿದೆ. ಅದೃಷ್ಟಕ್ಕಾರು ಹೊಣೆ. ವೃಥಾ ನಿನ್ನ ಮನಸ್ಸಿಗೆ ವ್ಯಥೆಯನ್ನುಂಟು ಮಾಡಿದುದಕ್ಕೆ ಕ್ಷಮಿಸು. ನೀನೀ ವಿಷಯವನ್ನು ಎತ್ತದಿದ್ದರೆ ನಾನು ಹೀಗೆ ಮಾತನಾಡುತ್ತಿರಲಿಲ್ಲ. ಇನ್ನು ಮುಂದೆ ನೀನಾಗಲೀ ನಾನಾಗಲೀ ಈ ಮಾತನ್ನೆತ್ತದಿರಬೇಕು. ಇದೇ ಮೊದಲು, ಇದೇ ಕಡೆ!

ಉ: ಇದೇ ಕಡೆಯಾಗದಂತೆ ಇದನ್ನು ಮರೆಯುವಂತೆ ನೀನು ಮಾಡಬೇಕು.

ಶಾ: ಎಂತಹ ಮಾತನ್ನಾಡುವೆ? ಶೈವಲಿನಿಯನ್ನುಳಿದು ಇನ್ನಾರನ್ನಾದರೂ ಪ್ರೀತಿಸಲು ನಿನಗೆ ಸಾಧ್ಯವೆ? ಅಥವಾ ಒಂದು ಘಳಿಗೆಯಾದರೂ ಅವಳನ್ನು ಮರೆಯಬಲ್ಲೆಯಾ?

ಉ: ನಿನಗೇನುತ್ತರವನ್ನು ಹೇಳಲಿ? ಇತರರಂತೆ ಅಜ್ಞಳಲ್ಲ. ನಿನಗುಚಿತ ತೋರಿದಂತೆ ಮಾಡು. ನಿನ್ನಿಂದ ನಾನೆಷ್ಟೋ ಉಪಕಾರವನ್ನು ಹೊಂದಿರುವೆನು. ಅದನ್ನೆಲ್ಲಾ ಮರೆಯಬಲ್ಲೆನೆ? ನಿನ್ನೀ ಸ್ಥಿತಿಯು ನನಗೆ ದಾರುಣ ವ್ಯಥೆಯನ್ನುಂಟು ಮಾಡುತ್ತೆ! ನಾನೆಲ್ಲಿಯೋ ಒಂದು ಕೊನೆಯಲ್ಲಿದ್ದೆ. ನೀನೆಲ್ಲಿಯೋ ಇದ್ದೆ. ನಮ್ಮಲ್ಲಿ ಈ ಸ್ನೇಹವು ಏತಕ್ಕೆ ಉತ್ಪನ್ನವಾಯ್ತು? ನಿನ್ನ ಸುಖಮಯವಾದ ಜೀವನಕ್ಕೆ ಕಂಟಕನಾಗಿ ನಾನೇತನಕ್ಕೆ ಬಂದೆ?

ಶಾ: ಏತಕ್ಕೆ ಹಂಬಲಿಸುವೆ? ದೇವರ ಚಿತ್ತಕ್ಕೆ ನೀನಾಗಲೀ ನಾನಾಗಲೀ ಹೋಣೆಯಲ್ಲ. ನಾನು ಹೇಗಿದ್ದರೂ ಎಲ್ಲಿದ್ದರೂ ನಿನ್ನಲ್ಲಿ ಒಂದೇ ವಿಧವಾದ ಸ್ನೇಹವನ್ನಿಡುವೆನು. ನೀನು ಸುಖವಾಗರಿಬೇಕೆಂಬುದೇ ನನ್ನಿಷ್ಟ. ಹಾಗೊಂದು ವೇಳೆ ಕಷ್ಟವು ಬಂದರೆ ಆಗ ಮಾತ್ರ ಸಹೋದರಿಯೊಬ್ಬಳಿರುವಳೆಂಬುದನ್ನು ಮರೆಯಬೇಡ.

ಉಪೇಂದ್ರನ ವಿಶಾಲವಾದ ಕಣ್ಣುಗಳಲ್ಲಿ ನೀರು ತುಂಬಿತು. ನೀರವವಾಗಿ ಅಪ್ಪಣೆಯನ್ನು ಪಡೆದು ಗೃಹಾಭಿಮುಖನಾದನು. ಶಾಂತಿಯು ನಿಟ್ಟುಸಿರುಬಿಟ್ಟು ಏನನ್ನೋ ಚಿಂತಿಸುತ್ತಾ ಅಲ್ಲಿಯೇ ಕುಳಿತಳು.

ಮೂರನೆಯ ಪರಿಚ್ಛೇದ

ಉಪೇಂದ್ರನು ರಾಮರಾಯರ ಏಕಮಾತ್ರ ಪುತ್ರ. ಅತುಳೈಶ್ವರ್ಯಧಿಪತಿಯಾದ ರಾಮರಾಯರು ಗತಿಸಿ ಈಗ ಎಂಟು ವರ್ಷಗಳಾಗಿದ್ದವು. ಅವರು ಕಟ್ಟಿದ ಸುಂದರವಾದ ಉಪವನದಿಂದ ಕೂಡಿದ ‘ಮನೋನಿಧಿ’ಗೆ ಈಗ ಉಪೇಂದ್ರನೇ ಅಧಿಕಾರಿ. ಇವನು ಬಿ. ಎಸ್. ಸಿ. ಪರೀಕ್ಷೆಯಲ್ಲಿ ಉತ್ತಮ ರೀತಿಯಲ್ಲಿ ತೇರ್ಗಡೆ ಹೊಂದಿ ಒಂದು ನೇಯ್ಗೆಯ ಕಾರ್ಖಾನೆಯನ್ನು ನಿರ್ವಹಿಸುತ್ತಿದ್ದನು. ಈಗ ವೃದ್ಧಳಾದ ತಾಯಿಯು ಮತ್ತು ಇವನ ಪತ್ನಿಯಾದ ಶೈವಲಿನಿಯು, ಇವರನ್ನುಳಿದು ಮತ್ತಾರು ಇರಲಿಲ್ಲ. ಇವನು ಓದುತ್ತಿರುವಾಗಲೇ ಶಾಂತಿಯ ಪರಿಚಯವುಂಟಾಯ್ತು. ಇಬ್ಬರೂ ಗುಣಶಾಲಿಗಳಾದುದರಿಂದ ಸ್ನೇಹವು ವೃದ್ಧಿಯಾಯ್ತು. ಪರಸ್ಪರ ಕೆಲವು ದಿನಗಳವರೆವಿಗೂ ನೋಡಿದಿದ್ದರೆ ಇಬ್ಬರೂ ಕಾತರರಾಗುತ್ತಿದ್ದರು. ಆದರೆ, ಇಬ್ಬರ ಕಾತರತೆಗೂ ಬಹು ವ್ಯತ್ಯಾಸವಿದ್ದಿತು. ಉಪೇಂದ್ರನು ಕೇವಲ ಸ್ನೇಹಭಾವದಿಂದ ನೋಡುತ್ತಿದ್ದನು. ಶಾಂತಿಯು ಅನ್ಯಥಾ ಭಾವಿಸುತ್ತಿದ್ದಳು. ಹೀಗಿದ್ದರೂ ಒಂದು ದಿನವಾದರೂ ಅವಳಿದನ್ನು ಹೊರಪಡಿಸಿರಲಿಲ್ಲ. ಎಷ್ಟೋಸಾರೆ ಅವಳ ಮನಸ್ಸಿಗೆ ಉಂಟುಮಾಡುತ್ತಿರುವ ವ್ಯಥೆಯನ್ನರಿಯದೆ ಅವನು ಶೈವಲಿನಿಯ ವಿಚಾರವಾಗಿ ಮಾತನಾಡುತ್ತಿದ್ದನು. ಅವಳು ಹಾಸ್ಯವಿನೋದಗಳಿಂದ ಅವನನ್ನು ಆನಂದಪಡಿಸಿ ತಾನು ಸಂತೋಷಪಡುತ್ತಿದ್ದಳು ವಿನಾ ತನ್ನ ದುಃಖವನ್ನು ಹೊರಪಡಿಸುತ್ತಿರಲಿಲ್ಲ. ಆವ ದುಃಖವನ್ನೂ ತಾಯಿಯಿಂದ ಮರೆಮಾಚುವುದು ಬಹು ಕಷ್ಟ. ಹಾಗೆಯೇ ಶಾಂತಿಯ ವ್ಯಥೆಯು ಅವಳ ತಾಯಿಯಾದ ಕಮಲಮ್ಮನಿಗೆ ತಿಳಿಯಿತು. ಅವಳ ಅಜಾಗರೂಕತೆಯಿಂದ ಉಪೇಂದ್ರನಿಗೂ ಗೊತ್ತಾಯಿತು. ಇದಕ್ಕೆ ತಾನು ಕಾರಣನಾದುದಕ್ಕಾಗಿ ವ್ಯಥೆಗೊಂಡನು. ಅವಳ ಕಷ್ಟಕ್ಕಾಗಿ ಪ್ರಾಣವನ್ನು ಅರ್ಪಿಸಲು ಸಿದ್ಧನಾಗಿದ್ದನು. ಆದರೆ ಶೈವಲಿನಿಯನ್ನು ಮನಃಪೂರ್ವಕವಾಗಿ ಪ್ರೀತಿಸುತ್ತಿದ್ದನು. ಇದರಿಂದ ಶಾಂತಿಯು ತನಗೆ ಅನುರೂಪನಾದವನನ್ನು ವಿವಾಹವಾಗಿ ಸುಖವಾಗಿರುವುದಲ್ಲದೆ ಬೇರೆ ಅವ ಮಾರ್ಗವೂ ತೋರಿಲಿಲ್ಲ. ಅವಳು ಕಲ್ಯಾಣಪುರಕ್ಕೆ ಹೋಗುವುದಾಗಿ ಕೇಳಿ ಅದನ್ನು ನಿಲ್ಲಿಸುವುದಕ್ಕೆ ಪ್ರಯತ್ನಪಟ್ಟನು. ಮತ್ತೂ ತನ್ ಇಷ್ಟವನ್ನು ತಿಳಿಸಿದನು. ಈ ವಿಷಯದಲ್ಲಿ ಮಾತ್ರ ಅವಳ ಯೋಗ್ಯತೆಯನ್ನು ತಿಳಿಯದೆ ಹೋದನು. ಒಂದು ಸಾರಿ ದಾನ ಮಾಡಿದುದನ್ನು ಪುನಃ ಪರಿಗ್ರಹಿಸುವುದು ಯೋಗ್ಯವೇ? ಹೀಗಿರುವಲ್ಲಿ ಅವಳು ಇತರರನ್ನು ಪ್ರೀತಿಸುವುದು ಹೇಗೆ ಸಾಧ್ಯ? ಅವಳ ಪ್ರೇಮವು ಪವಿತ್ರವಾದುದು. ಐಹಿಕ ಸುಖವನ್ನೇ ಇಚ್ಛಿಸುತ್ತಿರಲಿಲ್ಲ. ಆದುದರಿಂದಲೇ ಎಂತಹ ದುಃಖವನ್ನಾದರೂ ತಾಳ್ಮೆಯಿಂದ ಸಹಿಸುವ ಶಕ್ತಿಯಿತ್ತು. ತಾನು ಕಣ್ಣೆದುರಿಗಿರುವುದರಿಂದ ಉಪೇಂದ್ರನಿಗೆ ಉಂಟಾಗುವ ದುಃಖವನ್ನು ತಪ್ಪಿಸುವುದಕ್ಕಾಗಿಯೇ? ಅವಳು ಕಲ್ಯಾಣಪುರಕ್ಕೆ ಹೋದುದು.

ಇಂದು ಉಪೇಂದ್ರನು ಒಂದು ಕೋಣೆಯಲ್ಲಿ ಶತಪಥ ತಿರುಗುತ್ತಿದ್ದನು. ಮುಖದ ಮೇಲೆ ಘರ್ಮಬಿಂದುಗಳಿದ್ದುವು. ವಿಶಾಲವಾದ ಲಲಾಟದಲ್ಲಿ ನರಗಳು ಉಬ್ಬಿದ್ದುವು. ಕ್ಷಣ ಕ್ಷಣಕ್ಕೂ ಚಕಿತಭಾವದಿಂದ ಪಕ್ಕದಲ್ಲಿನ ಕೋಣೆಯಕಡೆ ತಿರುಗಿ ನೋಡುತ್ತಿದ್ದನು. ಸ್ವಲ್ಪ ಹೊತ್ತಿನಲ್ಲಿಯೇ ಒಬ್ಬ ವೈದ್ಯಳು ಕೋಣೆಯೊಳಗಿಂದ ಬಂದಳು. ಉಪೇಂದ್ರನು ಆತುರದಿಂದ “ತಾಯಿ! ಅವಳು ಈಗ ಹೇಗಿರುವಳು?” ಎಂದು ಕೇಳಿದನು.

ವೈದ್ಯ: ಇನ್ನು ಹತ್ತು ನಿಮಿಷದೊಳಗೆ ಹೆರಿಗೆಯಾಗುವುದು. ಮಗುವಿನ ಆಸೆಯೇ ಇಲ್ಲವೆಂದು ತೋರುವುದು. ತಾಯಿಯ ಜೀವಕ್ಕೂ ಬಹಳ ಅಪಾಯವಿದೆ. ದೇವರ ದಯೆಯಿಂದ ಒಳ್ಳೆಯದಾದರಂತೂ ಸರಿಯೆ. ಹೇಗೂ ತಾವು ಆವುದಕ್ಕೂ ಸಿದ್ಧವಾಗಿರಬೇಕು. ಇಷ್ಟು ಹೇಳಿ ವೈದ್ಯಳು ಪುನಃ ಒಳಗೆ ಹೋದಳು. ಉಪೇಂದ್ರನಿಗೆ ತಲೆಯ ಮೇಲೆ ಸಿಡ್ಲು ಬಡೆದಂತಾಯ್ತು. ಆದರೂ ಸಹನೆಯಿಂದ ಗಡಿಯಾರವನ್ನೆದುರಿಗಿಟ್ಟುಕೊಂಡು ಹತ್ತು ನಿಮಿಷಗಳಾಗುವುದನ್ನೇ ಕಾಯುತ್ತಿದ್ದನು. ಒಂದೊಂದು ನಿಮಿಷವನ್ನೂ ಒಂದೊಂದು ಯುಗವಾಗಿ ಕಳೆದನು. ಸ್ವಲ್ಪ ಹೊತ್ತಿನಲ್ಲಿಯೇ ದಾಸಿಯೊಬ್ಬಳು ಬಂದು ಹೆಣ್ಣು ಮಗುವು ಜನನವಾಯಿತೆಂದು, ಶುಭವರ್ತಮಾನವನ್ನು ಹೇಳಿದಳು. ಅವನ ಕಣ್ಣುಗಳಿಂದ ಆನಂದಭಾಷ್ಪವು ಉಕ್ಕಿಬಂದಿತು. ತನ್ನ ಜೀವನಕ್ಕಿಂತಲೂ ಹೆಚ್ಚಾಗಿದ್ದ ಶೈವಲೆಯ ಪ್ರಾಣವನ್ನುಳಿಸಿದ ಆ ಶರಣಾಗತ ರಕ್ಷಕನಿಗೆ ಧನ್ಯವಾದಗಳನ್ನರ್ಪಿಸಿದನು.

* * *

ಶೈವಲಿನಿಯು ಮೂರು ತಿಂಗಳ ಮೇಲೆ ಆರೋಗ್ಯವನ್ನು ಹೊಂದಿದಳು. ಮಗುವು ದಿನೇದಿನೇ ಪುಷ್ಟಿಯನ್ನು ಹೊಂದುತ್ತಾ ಬಂದಿತು. ತಾಯಿತಂದೆಗಳಂತೆ ಬಹುಸುಂದರವಾಗಿದ್ದಿತು. ಪಾರ್ವತಮ್ಮನ ಇಷ್ಟದ ಮೇರೆಗೆ ಅದಕ್ಕೆ “ಸರಸ” ಎಂದು ನಾಮಕರಣ ಮಾಡಿದರು. ಉತ್ಸವವು ಬಹು ವಿಜೃಂಭಣೆಯಿಂದ ನಡೆಯಿತು.

ನಾಲ್ಕನೆಯ ಪರಿಚ್ಛೇದ

ಸಾಯಂಕಾಲ ಆರು ಘಂಟೆಯ ಸಮಯ. ಸಂಧ್ಯಾರಾಗವು ಮೇಘಗಳಿಂದ ಪ್ರತಿಬಿಂಬಿತವಾಗಿ ಸುತ್ತಲಿನ ಆಗಸವನ್ನೆಲ್ಲಾ ಕೆಂಪಾಗಿ ಮಾಡಿರುವುದನ್ನು ನೋಡಿದರೆ ಗೃಹವನೈದುತ್ತಿರುವ ಸೂರ್ಯದೇವನಿಗೆ ಕದಲಾರತಿಯನ್ನು ಮಾಡಿ ಚಲ್ಲಿದಂತಿದ್ದಿತು. ಪಕ್ಷಿಗಳು ಗೂಡುಗಳನ್ನು ಸೇರುತ್ತಾ ಚಿಲಿಪಿಲಿ ಧ್ವನಿಗುಟ್ಟುತ್ತಲಿದ್ದವು. ಕೆಲಸವನ್ನು ಮುಗಿಸಿಕೊಂಡು ನೆಮ್ಮದಿಯಿಂದ ಕೆಲವರು ಮನೆಗೆ ಹೋಗುತ್ತಲೂ, ಮತ್ತೆ ಕೆಲವರು ವಿಹಾರಾರ್ಥವಾಗಿ ವನಗಳಿಗೆ ಹೋಗುತ್ತಲೂ ಇದ್ದರು. ಮಂದಮಾರುತವು ಪುಷ್ಪಗಳ ಸೌರಭವನ್ನು ಎಲ್ಲೆಡೆಯಲ್ಲಿಯೂ ಪ್ರಸರಿಸುತ್ತಿದ್ದಿತು. ‘ಮನೋವಿಧಿ’ಯ ಪುಷ್ಪಗಳು ಧಾರಾಳವಾಗಿ ಸುಗಂಧವನ್ನು ವನದಲ್ಲೆಲ್ಲಾ ಬೀರುತ್ತಿದ್ದವು. ಮಾವಿನ ಚಿಗುರು ತೋರಣದಂತೆಯೂ, ಅಶೋಕದ ಗೊಂಚಲುಗಳು ಮಣಿದೀಪದಂತೆಯೂ ಪ್ರಕಾಶಿಸುತ್ತಿದ್ದುವು. ಅಲ್ಲಿಲ್ಲಿ ಒಂದೊಂದು ದುಂಬಿಯು ಮಾತ್ರ ಇನ್ನೂ ಝೇಂಕರಿಸುತ್ತಿದ್ದಿತು. ಕಾಲುದಾರಿಯಲ್ಲಿ ಹುಲ್ಲಿನಲ್ಲಿಯೇ ಬೆಳೆದಿದ್ದ ಸುಂದರವಾದ, ಚಿತ್ರವಿಚಿತ್ರವಾದ ಸಣ್ಣಪುಷ್ಪಗಳು ‘ಯೋಗ್ಯತೆಯು ಹೆಚ್ಚಿದಷ್ಟೂ ತಗ್ಗಿ ನಡೆಯಬೇಕೆಂದು’ ಹೇಳುವಂತೆ ಎಲ್ಲ ರಡಿಯಾಳುಗಳಾಗಿದ್ದವು. ಫಲಭರಿತವಾದ ಕೊಂಬೆಗಳು ಕೈಗೆಟುಕುವಂತೆ ಬಾಗಿರುವುದನ್ನು ನೋಡಿದರೆ ಸ್ವಾರ್ಥತ್ಯಾಗವು ಅವಶ್ಯಕವಾದ ಶ್ರೇಷ್ಠ ಗುಣಗಳಲ್ಲಿ ಒಂದೆಂದು ತೋರಿಸುವಂತಿದ್ದಿತು. ಇಂತಹ ಸುಂದರವಾದ ವನದಲ್ಲಿ ಈಗ ಮೂರು ವರ್ಷದ ಬಾಲೆಯಾದ ಸರಸೆಯು ತನ್ನ ಪುಟ್ಟ ಕೈಗಳಿಂದ ಒಂದು ನಾಯಿಯ ಬಾಲವನ್ನು ಹಿಡಿದೆಳೆಯುತ್ತಾ ಕೇಕೇ ಹಾಕುತ್ತಾ ಆಡುತ್ತಲಿದ್ದಳು. ಸಮೀಪದಲ್ಲಿಯೇ ಶೈವಲೆಯು ಒಂದು ವರ್ಷದ ಮಗುವೊಂದನ್ನು ಎತ್ತಿಕೊಂಡು ಕುಳಿತಿದ್ದಳು. ಆ ಮಗುವೇ ಸರಸೆಯ ತಮ್ಮನಾದ ಮಾಧವ. ಮಹಾಶಯ ಉಪೇಂದ್ರನು ಅಲ್ಲಿಯೇ ನಿಂತು ಮಗಳ ಲೀಲೆಯನ್ನು ನೋಡಿ ಆನಂದಿಸುತ್ತಿದ್ದನು. ಆ ನಾಯಿಯು ಬಹುದಿನಗಳಿಂದಲೂ ಇಲ್ಲಿಯೇ ಪಾಲಿತವಾದುದು. ಅದು ಸರಸೆಯನ್ನು ಕಚ್ಚಲಿಲ್ಲ. ಆದರೆ ನೋವನ್ನು ಸಹಿಸಲಾರದೆ ಕೂಗುವುದಕ್ಕೆ ಆರಂಭ ಮಾಡಿತು. ಅದು ಕೂಗುವುದು ಹೆಚ್ಚಿದಷ್ಟೂ ಈ ತುಂಟೆಯ ನಗುವು ಹೆಚ್ಚಿ ವನದಲ್ಲೆಲ್ಲಾ ಪ್ರತಿಧ್ವನಿತವಾಗುತ್ತಿತ್ತು. ನಾಯಿಯ ಸಂಕಟವನ್ನು ನೋಡಿ ಉಪೇಂದ್ರನು “ಪಾಪ ಹಾಯಾಗುತ್ತಮ್ಮ ಇಲ್ಲಿ ಬಾ” ಎಂದು ಕರೆದನು. ಸರಸೆಯು ಒಂದು ಸಾರಿ ತಂದೆಯ ಕಡೆ ನೋಡಿದಳು. ಪುನಃ ಘಟ್ಟಿಯಾಗಿ ನಗುತ್ತಾ ನಾಯಿಯ ಕಡೆಗೆ ತಿರುಗಿದಳು. ಕಡೆಗೆ ಉಪೇಂದ್ರನೇ ಹೋಗಿ ಅವಳನ್ನು ಎತ್ತಿಕೊಂಡು ಬಂದನು.

ಉ: ಶೈವಲೆ, ಇವಳು ನಿನ್ನ ಸ್ವಭಾವವನ್ನು ಸಂಪೂರ್ಣವಾಗಿ ಹೊತ್ತಿರುವಳು.

ಶೈ: ಅಂತೂ ನನ್ನನ್ನು ದುಷ್ಟಸ್ವಭಾವದಳೆಂಬದಂತೆ ಆಯ್ತು! ಸಹಜವೆ. ನಾನು ವಿದ್ಯಾವತಿಯು ಅಲ್ಲ, ನಿಮಗೆ ಹಾಗೆ ತೋರುವುದು ಸ್ವಾಭಾವಿಕ.

ಉ: ಇದೇನು ಶೈವಲೆ? ಹಾಸ್ಯಕ್ಕಾಗಿ ಹೇಳಿದ ಮಾತನ್ನು ನೀನಿಷ್ಟು ಮನಸ್ಸಿಗೆ ಹಚ್ಚಿಕೊಳ್ಳಬಹುದೇ? ಚೇಷ್ಟೆ ಮಾಡುವುದು ಮಕ್ಕಳ ಸ್ವಭಾವ, ಮತ್ತು ಅವರಿಗೆ ಅದೇ ಅಲಂಕಾರ. ಅದಕ್ಕೆ ನೀನಾಗಲೀ ನಾನಾಗಲಿ ಕಾರಣರೇ?

ಶೈ: ಕ್ಷಮಿಸಿರಿ. ನಾನು ಅಜ್ಞಳು. ನಿಜವಾಗಿಯೂ ಅದೇ ಅಭಿಪ್ರಾಯವಿದೆಯೆಂದು ತಿಳಿದು ಮನನೊಂದು ಹಾಗೆಂದೆನು.

ಉ: ನನ್ನ ಸ್ವಭಾವವು ನಿನಗೆ ತಿಳಿಯದೆ? ಸ್ವಪ್ನದಲ್ಲಿಯೂ ನಿನ್ನ ವಿಷಯವಾಗಿ ಒಂದು ಕುಂದನ್ನಾದರೂ ಇದುವರೆಗೂ ಎಣಿಸಿಲ್ಲ. ಇನ್ನು ಮುಂದೆಯೂ ಎಣಿಸುವಂತಿಲ್ಲ. ಪುನಃ ಎಂದೂ ಇಂತಹ ಅನುಮಾನಕ್ಕೆ ಆಸ್ಪದವನ್ನು ಕೊಡಬೇಡ.

ಇಬ್ಬರ ಮುಖವೂ ಗಂಭೀರವಾದುದನ್ನು ನೋಡಿ ಸರಸೆಯು ಮೆಲ್ಲಗೆ ತಂದೆಯ ಮುಖವನ್ನು ಮಾಧವನ ಕಡೆಗೆ ತಿರುಗಿಸಿ ತನ್ನ ಚಿಕ್ಕ ಬೆರಳುಗಳಿಂದ ಕೂಸನ್ನು ತೋರಿಸುತ್ತಾ ‘ತಮ್ಮಾ ನಿದ್ದೇ ಮಾತಾನೆ’ ಎಂದು ಮುದ್ದಾಗಿ ಹೇಳಿದಳು. ಉಪೇಂದ್ರನ ಚಿಂತಿತಭಾವವು ದೂರವಾಗಿ ಮುಖವು ಪ್ರಪುಲ್ಲವಾಯ್ತು. ಪ್ರೇಮದಿಂದ ಅವಳ ತಲೆಯನ್ನು ಸವರುತ್ತಾ ಮುದ್ದಿಟ್ಟನು. ಈ ಸಮಯದಲ್ಲಿ ಉಪೇಂದ್ರನ ಮಿತ್ರನಾದ ಗೋಪಾಲನು ಬಂದನು. ಇವನು ಆಗಾಗ ಮನೆಗೆ ಬರುವ ಪದ್ಧತಿಯಿದ್ದಿತು. ಆದುದರಿಂದ ಎಲ್ಲರ ಬಳಕೆಯಿದ್ದಿತು. ಇವನು ಉಪೇಂದ್ರನಿಗಿಂತಲೂ ಸುಂದರ. ಆದರೆ ಇವನ ಮುಖವು ಚಂಚಲ. ಆ ಗಂಭೀರವಾದ ತೇಜಸ್ಸು ಇರಲಿಲ್ಲ. ಶೈವಲಿಯ ತಾಯಿತಂದೆಗಳು ಮೊದಲು ಅವಳನ್ನು ಇವನಿಗೇ ಕೊಟ್ಟ ವಿವಾಹ ಮಾಡಬೇಕೆಂದಿದ್ದರು. ಆದರೆ ದೈವಸಂಕಲ್ಪವನ್ನಾರು ಬಲ್ಲರು? ಉಪೇಂದ್ರನಿಗೆ ಪತ್ನಿಯಾದಳು.

ಉ: ಬಾ ಗೋಪಾಲ. ಇಂದೇನು ಅಪರೂಪ ದರ್ಶನ? ಒಳಗೆ ಹೋಗೋಣವೆ?

ಗೋ: ಬೇಡ ಉಪೇಂದ್ರ, ಇಲ್ಲಿಯೇ ಚೆನ್ನಾಗಿದೆ.

ಗೋಪಾಲನು ಸರಸೆಯನ್ನು ಒತ್ತಂಬದಿಂದ ಎತ್ತಿಕೊಳ್ಳಲು ಹೋದನು. ಅವಳು ಅಳುತ್ತಾ ತಂದೆಯನ್ನು ಘಟ್ಟಿಯಾಗಿ ತಬ್ಬಿಕೊಂಡಳು. ಉಪೇಂದ್ರನು “ಗೋಪಾಲ! ಮಕ್ಕಳು ಮೃದುಪುಷ್ಪಗಳಂತೆ; ಅವರೊಡನೆ ಬಹಳ ಜಾಗರೂಕರಾಗಿರಬೇಕು” ಎಂದು ಹೇಳಿ ಅವಳನ್ನು ಸಮಾಧಾನ ಮಾಡಲು ಕರೆದುಕೊಂಡು ಹೋದನು.

ಗೋ: ಶೈವಲಿನಿ, ಈಗ ಕ್ಷೇಮವಷ್ಟೇ?

ಶೈ: ಅಹುದು. ಈಚೆಗೆ ನೀವು ಬಹು ಅಪರೂಪರಾಗಿರುವಿರಿ. ಸಧ್ಯದಲ್ಲಿಯೇ ಮದುವೆಯ ಔತಣವನ್ನು ಕೊಡುವಂತೆ ತೋರುವುದು.

ಗೋ: (ಬೇಸರದಿಂದ) ನನಗೆ ಮದುವೆ! ಈ ಜನ್ಮದಲ್ಲಿ ಇಲ್ಲವೆಂದು ತೋರುವುದು. ನನ್ನ ಹಣೆಯಲ್ಲಿ ಅಂತಹ ಸುಖವೇ ಬರೆದಿಲ್ಲ.

ಶೈ: ಛೇ, ಹಾಗೆನ್ನಬೇಡ. ಪ್ರತಿಯೊಬ್ಬರಿಗೂ ಸುಖದೊಡನೆ ದುಃಖವೂ, ದುಃಖದೊಡನೆ ಸುಖವೂ ಇದ್ದೇ ಇರುವುದಲ್ಲವೆ?

ಗೋ: ಅದು ಪ್ರಾಪಂಚಿಕ ಧರ್ಮ. ಆದರೆ ಸುಖವನ್ನೇ ಹಚ್ಚಾಗಿ ಅನುಭವಿಸುವ ಪುಣ್ಯಶಾಲಿಗಳೂ ಇರುವರು. ಕಷ್ಟವನ್ನೇ ಹೆಚ್ಚಾಗಿ ಅನುಭವಿಸುವ ದುರದೃಷ್ಟಿಗಳೂ ಕೆಲವರಿರುವರು. ಅಂತಹವರಲ್ಲಿ ನಾನೊಬ್ಬ.

ಶೈ: ನಿಮ್ಮ ತಿಳುವಳಿಕೆಯು ತಪ್ಪು ನಿಮಗಿಂತಲೂ ಹೆಚ್ಚಿನ ದುರದೃಷ್ಟಿಗಳು ಈ ಪ್ರಪಂಚದಲ್ಲಿಲ್ಲವೆ? ಮನೆಯಲ್ಲಿ ಕೂತರೂ ಸುಖವಾಗಿ ಜೀವಿಸುವಷ್ಟು ಅನುಕೂಲವಿದೆ. ಇದೂ ಅಲ್ಲದೆ ನೀವು ವಿದ್ಯಾವಂತರು. ಹೀಗಿರುವಲ್ಲಿ ಏನೂ ಇಲ್ಲದೆ ಅಲೆಯುವ ಈ ಬಡ ಭಿಕ್ಷುಕರ ಪಾಡೇನು? ಅವರಿಗಿಂತಲೂ ನಿಮ್ಮ ಅದೃಷ್ಟವು ಹೀನವಾದುದೆ?

ಗೋ: ದೇವರ ದಯೆಯಿಂದ ಸುಖಜೀವನಕ್ಕೆ ನನಗಾವ ಕೊರತೆಯೂ ಇಲ್ಲ. ನನ್ನ ದುಃಖವು ಅಂತಹುದಲ್ಲ. ಇಹಜೀವನದ ಸುಖವನ್ನೆಲ್ಲಾ ಒಂದೆಡೆಯಲ್ಲಿ ನೆಲಸಿದ್ದೆನು. ಆ ಪದಾರ್ಥವು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತಾಯ್ತು. ಅದರೊಂದಿಗೆ ನನ್ನ ಸುಖಸಂತೋಷಗಳೆಲ್ಲಾ ಲೀನವಾದವು. ಅಂದಿನಿಂದಲೂ ನಾನು ಶಾಂತಿಯೆಂಬುದನ್ನೇ ಕಾಣೆನು. ನಾನೀಗ ಜೀವಿಸುವುದು ಆಸಕ್ತಿಯಿಲ್ಲದ ಜೀವನ. ನಾನು ದುರದೃಷ್ಟಿಯಲ್ಲವೆ?

ಶೈ: ದೇವರ ಇಚ್ಛೆಯ ಮುಂದೆ ಮನುಷ್ಯ ಮಾತ್ರದವರಾದ ನಮ್ಮ ಇಚ್ಛೆಯು ಏನು ನಡೆದೀತು? ಇದಕ್ಕಾಗಿ ನಿಮ್ಮ ಜೀವನವನ್ನು ವಂಚಿಸುವುದು ಕೇವಲ ಕೇವಲ ತಪ್ಪು. ಆತ್ಮದ್ರೋಹವು ಬಹು ಪಾಪಕರವಲ್ಲವೆ?

ಗೋ: ನಾಲ್ಕಾರು ಮಾತಿನಲ್ಲಿ ಮೃದುವಾಗಿ ಅದೆಷ್ಟು ಚೆನ್ನಾಗಿ ಬೋಧಿಸುವೆ? ನೀನು ಉಪಾಧ್ಯಾಯಿನಿಯಾಗಿದ್ದರೆ ನಮ್ಮ ಸ್ತ್ರೀಯರು ಎಷ್ಟೋ ಉತ್ತಮ ಸ್ಥಿತಿಗೆ ಬರುತ್ತಿದ್ದರು. (ಸ್ವಲ್ಪ ಹೊತ್ತಿನ ನಂತರ) ಕೇಳು. ನನ್ನ ಜೀವನ ಸರ್ವಸ್ವಳಾಗಿದ್ದ ಆ ಬಾಲೆಯಾದರೂ ಸುಖವಾಗಿದ್ದರೆ ನಾನಿಷ್ಟು ವ್ಯಥೆಪಡುತ್ತಿರಲಿಲ್ಲ.

ಶೈ: ಅವಳ ದುಃಖಕ್ಕೆ ಕಾರಣವನ್ನು ಕೇಳಬಹುದೆ?

ಗೋ: ಅವಳು ಬಹು ಸರಳಸ್ವಭಾವದವಳು. ಅವಳ ಪತಿಯು ಅವಳನ್ನು ವಂಚಿಸುತ್ತಿರುವನು. ನಾನು ಇನ್ನೂ ಅವಳನ್ನು ನನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ನೆನಸಿಕೊಂಡರೆ ಹೃದಯವು ನಡಗುವುದು.

ಶೈ: ಅಹುದು. ಅದಕ್ಕಿಂತಲೂ ಹೆಚ್ಚು ಮರ್ಮಾತಿಕ ಪೀಡನೆಯು ಇನ್ನಾವುದೂ ಇರಲಾರದು. “ದಯಾಮಯ! ನಿನ್ನ ಕೃಪೆಯು ಅನಂತವಾದುದು. ನಮ್ಮ ಪರಸ್ಪರ ಪ್ರೀತಿಯು ಒಂದೇ ವಿಧವಾಗಿರುವಂತೆ ದಯಪಾಲಿಸು”. ಈ ಕಡೆಯ ಮಾತುಗಳನ್ನು ಶೈವಲಿನಿಯು ಮೆಲ್ಲಗೆ ಹೇಳಿದಳು. ಆದರೂ ಅದು ಗೋಪಾಲನ ಕಿವಿಗೆ ಬಿತ್ತು. ಅವನ ಮುಖವು ತಕ್ಷಣವೇ ವಿವರ್ಣವಾಯ್ತು. ಕೂಡಲೇ ಶೈವಲಿನಿಯಿಂದ ಬೀಳ್ಗೊಂಡು ಅವನು ಗೃಹಭಿಮುಖವಾಗಿ ಹೊರಟನು.

ಅಯ್ದನೆಯ ಪರಿಚ್ಛೇದ

ಲಕ್ಷ್ಮೀನಿಲಯ”ವು ಕಲ್ಯಾಣಪುರದ ಸ್ತ್ರೀವಿದ್ಯಾನಿಲಯಗಳಲ್ಲಿ ಒಂದು. ಇದು ಬಹು ಅಭಿವೃದ್ಧಿಯಲ್ಲಿದ್ದಿತು. ಶ್ರೀಮತಿ ಗಿರಿನಂದಿನಿಯು ಮುಖ್ಯಾಧ್ಯಕ್ಷಳು. ಅನೇಕ ಬಾಲೆಯರು ಇಲ್ಲಿಗೇ ಬರುತ್ತಿದ್ದರು. ಪರಸ್ಥಳದಿಂದ ಬರುವ ಉಪಾಧ್ಯಾಯಿನಿಯರ ಮತ್ತು ವಿದ್ಯಾರ್ಥಿನಿಯರ ಅನುಕೂಲತೆಗಾಗಿ ಶಾಲೆಯ ಹಿಂದೆಯೇ ಒಂದು ಮಂದಿರವನ್ನು ಕಟ್ಟಿಸಿದ್ದರು. ಎಲ್ಲಾ ವಿಷಯಗಳಲ್ಲಿಯೂ ಬಹು ಅನುಕೂಲವಾಗಿದ್ದಿತು.

ಬೆಳಿಗ್ಗೆ ಹನ್ನೊಂದರ ಸಮಯ ಬಾಲೆಯರೆಲ್ಲರೂ ಹೊರಗಿದ್ದರು. ಕೆಲವರು ಗುಂಪುಗುಂಪಾಗಿ ಮಾತನಾಡುತ್ತಲೂ, ಕೆಲವರು ಸೀಸದ ಕಡ್ಡಿಗಳನ್ನು ಚೀವುತ್ತಲೂ, ಮತ್ತೆ ಕೆಲವರು ಓದುತ್ತಲೂ ಇದ್ದರು. ದೇವರ ಪ್ರಾರ್ಥನೆಗಾಗಿ ಎಲ್ಲರೂ ಸೇರುವುದಕ್ಕೆ ಘಂಟೆಯು ಬಾರಿಸಲ್ಪಟ್ಟಿತು. ಕೆಲವರು ಒಳಗೆ ಹೋದರು; ಮತ್ತೆ ಕೆಲವರು ಇನ್ನೂ ಹೊರಗೇ ಇದ್ದರು. ಉಪಾಧ್ಯಾಯಿನಿಯರು ಒಬ್ಬೊಬ್ಬರಾಗಿ ಬರತೊಡಗಿದರು.

ನಳಿನಿ: ಅಗೋ ಕನಸು, ಎಮ್ಮೆ ಬಂದೇ ಬಂತು! ಕುಳ್ಳಗೆ, ದಪ್ಪವಾಗಿರುವ ಒಬ್ಬ ಉಪಾಧ್ಯಾಯಿನಿಯು ಮೆಲ್ಲಗೆ ಬಂದಳು. ಪಾಪ! ಸೀತವಾಗಿದ್ದಿತೋ ಏನೋ, ಸೀನುತ್ತಾ ಹೋದಳು ಎಂದಳು. ಕುಸುಮಳು ತಕ್ಷಣವೇ ‘ಶತಯುಷ ಚಿರಂಜೀವಿ!’ ಎಂದಳು. ಬಾಲೆಯರೆಲ್ಲರೂ ತಮ್ಮ ಸರಳವಾದ ನಗುವಿನಿಂದ ಪಾಠಶಾಲೆಯನ್ನೆಲ್ಲಾ ಹಾಸ್ಯಮಯವಾಗಿ ಮಾಡಿದರು. ನಲಿನಿಯು ಪುನಃ ‘ಅಗೊ ನಮ್ಮ ‘ಏನೊಂದ್ರೆ’ ಬರ್ತಾ ಇದೆ! ಒಂದೇ ಕಡೆಗೆ ವಾಲಿ ಬೀಳುವಂತಿದೆ ನೋಡಿ, ಎಂದಳು. ತೆಳ್ಳಗೆ ಉದ್ದವಾಗಿರುವ ಕನ್ನಡ ಉಪಾಧ್ಯಾಯಿನಿಯು ಬಂದು ಒಂದು ಗುಂಪಿನ ಕಡೆಗೆ ತಿರುಗಿ ‘ಏನೂಂದ್ರೆ, ಇಲ್ಲೇ ಇದ್ದೀರಾ? ಘಂಟೆ ಹೊಡೆದಿದ್ದು ಕೇಳಿಸಲಿಲ್ಲಾಂತ ಕಾಣುತ್ತೆ’ ಎಂದಳು.

ಹುಡುಗಿಯರು: ನೀವು ಹೋಗಿ ಮೇಡಂ, ನಾವು ಬರುತ್ತೇವೆ ಎಂದರು.

ಉಪಾಧ್ಯಾಯಿನಿಯು ಕುಸುಮಳನ್ನು ನೋಡಿ ‘ಸೀಸದ ಕಡ್ಡಿ ಆಮೇಲೆ ಜೀವಬಹುದೂಂದ್ರೆ’ ಎಂದು ಹೇಳುತ್ತಾ ಒಳಗೆ ಹೋದಳು. ಕುಸುಮಳು ‘ಆಗಲೀಂದ್ರೆ ನೀವು ಹೋಗಿ’ ಎಂದಳು. ಪುನಃ ಅದೇ ನಗುವೆದ್ದಿತು.

ಈ ಹೊತ್ತಿಗೆ ಸರಿಯಾಗಿ ಲಕ್ಷ್ಮೀ ಮಂದಿರದಿಂದ ಒಬ್ಬ ಯುವತಿಯು ಮೆಲ್ಲಗೆ ಬರುತ್ತಿದ್ದಳು. ಅವಳನ್ನು ನೋಡಿದೊಡನೆಯೇ ಎಲ್ಲರೂ ಬೇಗ ಬೇಗನೆ ಒಳಗೆ ಹೋದರು. ಮರ್ಮರ ಶಬ್ದವು ನಿಂತು ಎಲ್ಲವೂ ಶಾಂತವಾಯ್ತು. ಯುವತಿಯು ಮುಗುಳ್ನಗೆಯನ್ನು ನಗುತ್ತಾ ಒಳಗೆ ಬಂದು ತನ್ನ ಸ್ಥಳಕ್ಕೆ ಹೋದಳು. ಪ್ರತಿಯೊಬ್ಬರು ಹಸನ್ಮುಖದಿಂದ ನಮಸ್ಕರಿಸಿದರು. ಇವಳು ಮತ್ತಾರೂ ಅಲ್ಲ; ನಮ್ಮ ಪೂರ್ವ ಪರಿಚಿತಳಾದ ಶಾಂತಿ!

ಹನ್ನೊಂದಕ್ಕೆ ಸರಿಯಾಗಿ ಅಧ್ಯಕ್ಷರು ಬಂದರು. ಗಣಪತಿಯ ಪ್ರಾರ್ಥನೆ, ಸರಸ್ವತಿ ಪ್ರಾರ್ಥನೆ ಮುಂತಾದವು ಕ್ರಮವಾಗಿ ನಡೆದು ಆನಂತರ ಗಿರಿನಂದಿನಿಯು ಈ ರೀತಿಯಾಗಿ ಹೇಳಿದಳು. “ಬಾಲೆಯರು! ನಿಮ್ಮ ಮುಖ್ಯ ಕರ್ತವ್ಯಗಳಲ್ಲಿ ಒಂದರ ವಿಷಯವಾಗಿ ಈ ದಿನ ನಿಮಗೆ ಹೇಳಬೇಕೆಂದಿರುವೆನು. ಜೀವದಾತನಾದ ಮತ್ತೂ ನಮ್ಮನ್ನೂ ರಕ್ಷಿಸುತಿರುವ ಪರಮಾತ್ಮನಿಗೆ ನಾವೆಷ್ಟು ಋಣಿಗಳೆಂದೂ, ಅವನ ಸೇವೆಯನ್ನು ಮನಃಪೂರ್ವಕವಾಗಿ ಹೇಗೆ ಮಾಡಬೇಕೆಂದೂ ನಿಮಗೆ ತಿಳಿದೇ ಇದೆ. ಜನ್ಮದಾತರಾದ ನಮ್ಮ ತಾಯಿತಂದೆಗಳು ಅಂತಹ ಪರಮಾತ್ಮನಿಗೆ ಸಮ. ಚಿಕ್ಕವರಾದ ನಮ್ಮನ್ನು ಇಷ್ಟು ದೊಡ್ಡವರನ್ನಾಗಿ ಮಾಡಲು ಅವರೆಷ್ಟು ಕಷ್ಟಪಡುವರು! ನಮಗೇನಾದರೂ ಸಂಕಟವುಂಟಾದರೆ ಅವರೆಷ್ಟು ಕಾತರರಾಗುವರು! ಆ ಋಣವನ್ನು ಈ ಜನ್ಮದಲ್ಲಿ ಮಾತ್ರವೇ ಅಲ್ಲ, ಆವಾಗಲೂ ನಾವು ತೀರಿಸುವಂತಿಲ್ಲ. ಹೀಗಿರುವಲ್ಲಿ, ಅವರ ಸೇವೆಯನ್ನು ಶಿರಸಾವಹಿಸಿ ಮಾಡಬೇಕು. ಆದರೆ, ‘ಮಾಡಬೇಕು ಆದುದರಿಂದ ಮಾಡುವೆನು,’ ಎಂಬ ಬೇಸರದಿಂದಾಗಲಿ ಭೈದಿಂದಾಗಲೀ ಮಾಡತಕ್ಕುದಲ್ಲ. ಸಂಪೂರ್ಣ ಪ್ರೀತಿಯಿಂದ ಸಂತೋಷದಿಂದ ಮಾಡಬೇಕು. ಅಂತಹ ಸೇವೆಯು ದೊರಕುವುದು ನಿಮ್ಮ ಅದೃಷ್ಟ ವಿಶೇಷ. ಅಲ್ಲದೆ ತಾಯಿತಂದೆಗಳನ್ನು ಪ್ರೀತಿಸತೊಡಗಿದರೆ ಒಡಹುಟ್ಟಿದವರಲ್ಲಿಯೂ ಪ್ರೀತಿಯು ಹುಟ್ಟುವುದು. ಅನಂತರ ‘ನನ್ನವರು’ ‘ತಮ್ಮವರು’ ಎಂಬ ವಾತ್ಸಲ್ಯವುಂಟಾಗುವುದು. ಇವರಿಂದ ನೆರೆಹೊರೆಯವರಲ್ಲಿ ಅಭಿಮಾನವು ಹುಟ್ಟಿ, ಅದಕ್ಕಾಗಿ ಉಪಕಾರ ಮಾಡಲು ನೀವು ಸಮರ್ಥರಾಗುವಿರಿ. ಆದುದರಿಂದ, ಮೊದಲು ನಿಮ್ಮ ತಾಯಿ ತಂದೆಗಳನ್ನು ಪ್ರೀತಿಸಿ, ಕೈಲಾದಮಟ್ಟಿಗೂ ಅವರ ಸೇವೆಯನ್ನು ಮಾಡಲು ಪ್ರಯತ್ನಿಸಬೇಕು. ಮನಃಪೂರ್ವಕವಾಗಿ ಮಾಡಿದರೆ ಇದಕ್ಕಿಂತಲೂ ಹೆಚ್ಚಿನ ತಪಸ್ಸಿಲ್ಲ. ನೀವೆಲ್ಲರೂ ನಿಮ್ಮ ಕೈಲಾದ ಮಟ್ಟಿಗೂ ನಿಜವಾಗಿ ಪ್ರಯತ್ನಪಡುವಿರೆಂದು ಮಾತು ಕೊಡುವಿರಾ?

ಎಲ್ಲರೂ (ಗಂಭಿರವಾಗಿ) “ನಿಜವಾಗಿಯೂ ಪ್ರಯತ್ನಿಸುವೆವು.”

ಅಧ್ಯಕ್ಷರು: ಕೇಳಿ ಸುಖಿಯಾದೆನು. ನಿಮ್ಮ ಮುಖಭಾವವು ನೀವದನ್ನು ಮಾಡುವಿರೆಂದು ಸೂಚಿಸುತ್ತಿದೆ. ಈಗ ಇನ್ನೊಂದು ವಿಷಯವನ್ನು ಹೇಳತಕ್ಕದ್ದಿದೆ. ಮಂದಿರದ ಆಡಳಿತವನ್ನು ನೋಡುತ್ತಿದ್ದ ಶ್ರೀಮತಿ ಕಮಲಮ್ಮನು ಕಾರಣಾಂತರದಿಂದ ಬಿಟ್ಟು ಹೋದುದು ನಿಮಗೆ ತಿಳಿದೇ ಇದೆ. ಈಗ ಈ ಕೆಲಸಕ್ಕೆ ಬೇರೆ ಉಪಾಧ್ಯಾಯಿನಿಯನ್ನು ನೇಮಿಸಬೇಕಾಗಿದೆ. ಆದುದರಿಂದ ನೀವು ಒಬ್ಬೊಬ್ಬರೂ “ನಿಮಗಿಷ್ಟು ಬಂದವರ ಹೆಸರನ್ನು ಬರೆದುಕೊಡಿ.” ಎಲ್ಲರೂ ಬರೆದುಕೊಟ್ಟರು. ನಳಿನಿಯನ್ನು ಕರೆದು ಒಬ್ಬೊಬ್ಬರ ಹೆಸರನ್ನು ಬೇರ್ಪಡಿಸಿ ಯಾರ ಹೆಸರು ಹೆಚ್ಚಾಗಿರುವುದೋ ನೋಡುವಂತೆ ಹೇಳಿದಳು. ನಳಿನಿಯು ಬೇರ್ಪಡಿಸಿದಳು. ಅಧ್ಯಕ್ಷ್ಯಳು ಮಂದಹಾಸಯುಕ್ತೆಯಾಗಿ “ಎಂಟು ಹತ್ತು ಚೀಟಿಗಳನ್ನುಳಿದು ಎಲ್ಲವೂ ಶ್ರೀಮತಿ ಶಾಂತಿಯ ಹೆಸರಿನಲ್ಲಿದೆ. ಆದುದರಿಂದ ಅವಳನ್ನೇ ಮಂದಿರಕ್ಕೆ ಅಧ್ಯಕ್ಷಳನ್ನಾಗಿ ಮಾಡಿರುವೆನು. ನಿಮಗೆ ಒಪ್ಪಿತವಷ್ಟೆ?” ಎಂದು ಶಾಂತಿಯ ಕಡೆ ತಿರುಗಿನೋಡಿ “ನಿಮಗೆ ಒಪ್ಪಿತವಷ್ಟೇ?’ ಎಂದು ಕೇಳಿದಳು.

: ತಮಗೊಪ್ಪಿತವಾದರೆ ಆನಂದದಿಂದ ಸ್ವೀಕರಿಸುವೆನು.

: ನಿಮ್ಮ ಉಪಕಾರವು ಚಿರಸ್ಮರಣೀಯವಾದುದು. ದೇವರು ಕಲ್ಯಾಣಮಾಡಲಿ! (ಬಾಲೆಯರ ಕಡೆತಿರುಗಿ) “ನೀವು ಸರಸ್ವತಿ ಪೂಜೆಗೆ ರಜವನ್ನು ಕೇಳಿದಿರಿ. ಇಂದು ರಜವನ್ನು ಕೊಟ್ಟಿರುವೆನು. ಎಲ್ಲರೂ ಆ ಮಹಾತಾಯಿಯನ್ನು ಚೆನ್ನಾಗಿ ವಿದ್ಯಕೊಡುವಂತೆ ಪ್ರಾರ್ಥಿಸಿ ನಮ್ಮಗಳಿಗೆ ಕೀರ್ತಿಯನ್ನು ತನ್ನಿ” ಎಂದು ಹೇಳಿ ಹೊರಟುಹೋದಳು.

ಅನಂತರ ಎಲ್ಲರೂ ಸಂತೋಷದಿಂದ ಕುಣಿಯುತ್ತ ಶಾಂತಿಯ ಬಳಿ ಓಡಿಹೋಗಿ “ಪಠವನ್ನೆಲ್ಲಿಡಬೇಕು? ಏನು ಹಣ್ಣನ್ನು ತರಬೇಕು! ಯಾವ ಹಾಡನ್ನು ಹೇಳಬೇಕು? ಅರಶಿನ ಕುಂಕುಮದ ತಟ್ಟೆ ಎಲ್ಲಿಡಬೇಕು” ಮುಂತಾಗಿ ಒಂದರ ಮೇಲೊಂದು ಪ್ರಶ್ನೆಯನ್ನು ಕೇಳತೊಡಗಿದರು. ಶಾಂತಿಯು ಮೆಲ್ಲನೆ ನಗುತ್ತಾ ‘ಎಲ್ಲರೂ ಒಂದೇ ಸಾರೆ ಕೇಳಿದರೆ ಉತ್ತರವನ್ನು ಹೇಳಲು ನನಗೆ ಹತ್ತು ಬಾಯಿಗಳಿವೆಯ? ಆತುರಪಟ್ಟಿರೆ ಕೆಲಸವು ಚೆನ್ನಾಗಾಗುವುದಿಲ್ಲ. ಯೋಚಿಸಿ ಮಾಡಬೇಕು. ಎಲ್ಲವನ್ನೂ ಹೇಳುವೆನು ನಡೆಯಿರಿ; ಎಂದು ಹೇಳುತ್ತಾ ಎಲ್ಲರನ್ನೂ ಕರೆದುಕೊಂಡು ಮಂದಿರಕ್ಕೆ ಹೋದಳು.

ಸಂಧ್ಯಾಕಾಲ, ಸುಮಾರು ಏಳುಘಂಟೆಯ ಸಮಯಕ್ಕೆ ನಾವು ಮಂದಿರದ ಕಡೆ ಹೋಗುತ್ತಿದ್ದಾಗ ಮಧುರವಾದ ಕಂಠದಲ್ಲಿ ‘ಮತ್ತಿನಾರತಿಯೆತ್ತಿರೆ ಶತಪತ್ರಸಂಭವನರಸಿಗೆ’ ಎಂಬುದನ್ನು ಹಾಡುತ್ತಿದ್ದುದು ನಮ್ಮ ಕಿವಿಗೆ ಬಿದ್ದಿತು.