ಮೊದಲನೆ ಸುರುಳಿ

ಆಧುನಿಕ ರೀತಿಯಿಂದ ಅಲಂಕೃತವಾದ ದಿವಾಣಖಾನೆ; ಒಂದು ಮೂಲೆಗೆ ರೇಡಿಯೊ’- ಅದಕ್ಕೆ ಎದುರಿನ ಮೂಲೆಯಲ್ಲಿ ಗ್ರಾಮೊಪೋನೊಂದು ಕಾಣುತ್ತಲಿದೆ. ಗೋಡೆಗಳ ಮೇಲ್ ಬದಿಯನ್ನು, ತೂಗಿ ಹಾಕಿದ ಚಿತ್ರಪಟಗಳು ಮುಚ್ಚಿಬಿಟ್ಟಿವೆ. ನೆಲವೆಲ್ಲ ರತ್ನಗಂಬಳಿಯ ಹಾಸಿನ ಕೆಳಕ್ಕೆ ಆಗಿದ್ದು, ಎಲ್ಲೆಲ್ಲಿಯೂ ಬೆಲೆಬಾಳುವ ಫರ್ನಿಚರ್’ ಗಳಿವೆ. ನಟ್ಟನಡುವೆ ಇದ್ದ ದುಂಡುಮೇಜಿನ ಮೇಲೆ ಪುಷ್ಟಪಾತ್ರೆಯೊಂದು; ಅದರೊಳಗೆ ಅಂದವಾಗಿ ತಲೆಯೆತ್ತಿ ನಿಂತಿದ್ದ ಹೂಗೊಂಚಲು ತನ್ನ ಪರಿಮಳವನ್ನು ತೆರೆತೆರೆಯಾಗಿ ದಿವಾಣಖಾನೆಯ ವಾತಾವರಣದಲ್ಲಿ ತುಂಬುತ್ತಲಿದೆ.

ನೋಡಿದಲ್ಲಿ ಪರದೆಗಳು ಜೋತು ಹಾಕಿವೆ. ಎಲೆಕ್ಟ್ರಿಕ್ ಫ್ಯಾನೊಂದು ಗುಡು ಗುಡುತ್ತ ತಿರುಗುತ್ತಿದೆ. ಈ ಹೊಸ ಕಾಲದ ಸಿರಿವಂತಿಕೆಯ ಅಧಿದೇವತೆಯೇನೊ ಎಂಬಂತಿದ್ದ ನಲಿನಿಯು ಜಾರ್ಜೆಟ್ಟನ್ನು ತೊಟ್ಟುಕೊಂಡು, ಮಂಡೆಯನ್ನೂರಿ, ಬಲಕ್ಕೊರಗಿನ ದೇಹ ಎಡಕ್ಕೊರಗಿದ ಮುಖಗಳಿಂದ ಕುಳಿತಿರುವಳು; ತನ್ನ ನಿಡಿದಾದ ಮೆಲುಬೆರಳುಗಳನ್ನು ಹಾರ್ಮೋನಿಯಮ್ಮಿನ ಮೇಲೆ ಕುಣಿದಾಡಿ ಸುತ್ತಲಿರುವಳು. ಹಠಾತ್ತಾಗಿ ಅಲ್ಲಿ ಪ್ರಭಾಕರನು ಪ್ರವೇಶಿಸುವನು.

“Hallo, darling ನಲಿನೀ, ಏನ ನಡದsದ?…. ಲಗೂನs ಚಹಾ ಕೊಡತೀ ಏನು? ನೋಡು; ನಾನು…..ಇಗಿಂದೀಗ ಎಂಗೇಜಮೆಂಟೊಂದದ.”

“ಇದೇನ ಮಾತು ಪ್ರಭಾಕರಾ ಇದು? ಮುಂಜಾನೆ ಎದ್ದಕೂಡಲೆ ಹೊರಗಹ್ವಾದಾಂವಾ ಇದೀಗ ಮನಿಗೆ ಬಂದಿ! ಮತ್ತ ಈಗಿಂದೀಗs ಹೊರಗೆ ಹೋಗೂ ಅವಸರ ಏನದು?”

“I am sorry. ಆದರೆ ಈಗಿಂದೀಗs ಡ್ರೆಸ್ ಮಾಡಿಕೊಂಡು ಬರತೀನಂತೆ ಒಬ್ಬ ಫ್ರೇಂಡ್ ಗೆ ಮಾತುಕೊಟ್ಟು ಬಂದೀನಿ; ಅಂವ ಅಲ್ಲೆ ನನ್ನ ಹಾದೀ ನೋಡತಿದ್ದಾನು!”

ಹುಸಿಮುನಿಸಿನಿಂದ ನಲಿನಿ ಸಿಡಿನುಡಿದಳು.

“ಚಲೋ ಆತು! ಚಹಾದ ದಸಿಂದ ನಿನ್ನ ಹಾದೀ ನಾನು ನೋಡಲಿಕ್ಕೆ ಹತ್ತಿ ತಾಸಿಂತಾಸಾತು. ನಿನಗೇನು? ಗೆಳ್ಯಾನ ಹತ್ತರ ಹೋಗೂದs ದೊಡ್ಡದಾಗಿ ಕಾಣಿಸ್ತದಲ್ಲ?”

“ಛೇ! ಛೇ!? ಮೊಲಾ ಎದ್ದಾಗ ನಾಯಿ ಎಲ್ಲೊ ಹೋತಂತ ಹಾಂಗ ವ್ಯಾಳ್ಯಾ ಇಲ್ಲಾ ಹೊತ್ತಿಲ್ಲಾ ನಿನಗಂತೂ ಬೇಕಾದಾಗ ಬೇಕಾದದ್ದು ನೆನಪಾಗತರಿತsದ! ನೀವು Indian ಹೆಂಗಸರು ಎಲ್ಲರೂ ಹೀಂಗs! ನಿಮಗೆ ವ್ಯಾಳ್ಯಾದ ಮಹತ್ತ್ವನs ಗೊತ್ತಿರೂದಿಲ್ಲ. ಏನು? ಐದ ಮಿನೀಟಿನ್ಯಾಗ ಚಹಾ ಸಿಗೂಹಾಂಗ ಅದನೋ, ಏನ ಹಾಂಗs ಹೊರಟಬಿಡಲ್ಯೊ?”

ಔದಾಸೀನ್ಯದ ಇಳಿದನಿಯಲ್ಲಿ ನಲಿನಿ ಉಸಿರಿದಳು.

“ಅಷ್ಟೇನೂ ಸಿಟ್ಟಿಗೇಳೂ ಕಾರಣಿಲ್ಲ. ತರಸ್ತೀನಿ ಚಹಾ! ನಿಮ್ಮಂಥವರ ಮುಂದೆ ಮಾಡೊದೇನು!”

ಮಾತಿನ ಕೊನೆಗೆ ನಲಿನಿ ನಿಡುಸುಯಿಲೊಂದನ್ನು ಬಿಡುವಳು.

“That’s good ! ಸರಿಯಾದ ಮಾತು ! ನೋಡು ನಲೂ! ಈಗ ಹ್ಯಾಂಗ ಮಾತಾಡಿದಿ?”

ಚಿಂತಾಭಾವದವಳಾಗಿ ನಲಿನಿ ಸುಮ್ಮನೆ ಕುಳಿತಿದ್ದಾಳೆ. ನಲಿನಿಯ ಗೆಳತಿ ಸುಧೆಯು ಅಲ್ಲಿ ಬಂದು, ಬೆರಗಿನ ದನಿಯಲ್ಲಿ ಒಮ್ಮೆಲೆ ಕೇಳುತ್ತಾಳೆ.

“ಅಯ್ಯೋ!ಇದೇನsನಲೂ! ಹೀಂಗ್ಯಾಕ ಮಾರೀ ಬಾಡಿಸಿಕೊಂಡು ಕೂತೀದಿ ನಿನಗೇನs ಚಿಂತಿ? ಹೊಸದಾಗಿ ಮದುವಿಯಾದಾಕಿ; ಒಳ್ಳೆ ಇಂಗ್ಲೆಂಡ್ ರಿಟರ್ನ್ಡ್‌ಜೋಡು ಸಿಕ್ಕಾನ; ಹೀಂಗಿರುವಾಗ ಯಾವಾಗಲೂ ನಗನಗತs ಇರೂದು ಬಿಟ್ಟು ಇದೇನs ತಾಯೀ ಅಳಮಾರಿ? ಅದೇನೋ ಹೇಳತಾರಲ್ಲಾ ದೈವಿದ್ದೂ ದತ್ತಗೇಡಿತನಾನೋ ಏನೋ!”

ಸುಧೆಯ ಮಾತಿಗೆ ನಲಿನಿಯಿಂದ ಉತ್ತರ ದೊರೆಯದಿರಲು ಆಕೆ ತೀರ ಹತ್ತಿರ ಹೋಗುವಳು. ಸಲುಗೆಯಿಂದ ಹೆಗಲಮೇಲೆ ಕೈಯನ್ನಿರಿಸಿ ಕೇಳುವಳು.

“ಇದೇನs! ಇದೇನು ಹುಚ್ಚಾಟಾ ನಡಿಸೀದಿ ಮತ್ತ ! ಆದದ್ದಾದರೂ ಏನು ಬಿಡs ಹುಚ್ಚಿ! ಸರೀ ಒರಸಿಗೋ ಕಣ್ಣೀರು! ಏನಾತು? ನನಗೆ ಹೇಳೂವಂಥಾದು ಅಲ್ಲೇನದು ಮತ್ತ?”

‘ಸುಧಾ, ನೋಡು…. ಏಬೇಕಾದ್ದಾದ್ರೂ ಹೆಣ್ಣಾಗಿ ಹುಟ್ಟಬಾರದು ನೋಡು!ಹೆಣ್ಣಿನ ಜನ್ಮಕ್ಕೆ ಎಲ್ಲಿಯ ಗಂಡ? ಯಾವ ಹತ್ತೀಕಾಯಿ? ನಾ ಖರೋಖರ ಹೇಳ್ತೀನ ನೋಡು ಸುಧಾ…ನೀ ಬಂದು ಸಹಾನುಭೂತೀವು ಒಂದೆರಡು ಮಾತಾಡಿದಿ; ಮನಸಿಗೆಷ್ಟೋ ಹಾಯ ಅನಿಸಿತು. ನೀನs ನನ್ನ ಖರೇ ಗೆಳತಿ ನೋಡು ಸುಧಾ!”

“ಅಲ್ಲ! ನೀ ಅನ್ನೂದರೆ ಏನಂತಿ!ನನಗೆ ಒಂದೂ ಅರ್ಥಾಗವಲ್ಲದು ನಿನ್ನ ಮಾತಿಂದು.

ಇಷ್ಟ ಮನಸಿಗೆ ಕೆಟ್ಟ ಅನಿಸಿಗೊಳ್ಳೂಹಾಂಗ ಅದದ್ದಾದರೂ ಏನು? ಪ್ರಭಾಕರಂದು ನಿನ್ನ ಮ್ಯಾಲ ಪ್ರೀತಿ ಇಲ್ಲಾಂತೇನೂ ಅನಿಸಿಲ್ಲ ಹೌದಲ್ಲೊ… ಹಾಂಗೇನಾದರೂ ಇದ್ದರ ಹೇಳು ಮತ್ತ?”

“ಬೀಡು ತಾಯಿ ನೀ ಅಂತೂ ಏನಂರೆ ಇಲ್ಲದ್ದs ಮಾತಾಡತೀ, ಪ್ರೀತಿಯಿಲ್ಲಾಂತ ಎಂದಾದರೂ ಅನಿಸೀತೇನs? ನಮ್ಮೊಳಗ ಇರೊ ಇಷ್ಟು ಪ್ರೀತಿ ಇನ್ನ ಯಾರಲ್ಲಿದ್ದೀತು? ನೀ ಹಿಂಗ ಏನಾರೇ ಮಾತಾಡಿ ನಮ್ಮ ಸಂಸಾರಕ್ಕೆ ಕಣ್ಣಹಚ್ಚಬ್ಯಾಡ. ನೋಡು ಸುಧಾ ನನ್ನ ಚಿಂತೀ ಕಾರಣs ಬ್ಯಾರೇ ಅದ. ನಿನಗದು ಗೊತ್ತಿಲ್ಲ. “

“ಹೌದು ಗೊತ್ತಿಲ್ಲ! ಅದಕ್ಯಂತs ನಾ ನಿನ್ನ ಕೇಳತಿರೂದು!”

“ಒಂದ ಮಾತು ಬಿಟ್ಟರ ನನ್ನಂಥಾ ಸುಖದ ಹೆಣ್ಣು ನಾನs! ಆದರೆ ಆ ಮಾತಿನ ಕಡೆ ದುರ್ಲಕ್ಷ್ಯ ಮಾಡಬೇಕೆಂದರ ನನ್ನಿಂದ ಆಗವ್ಲೊಂದಾಗೇದ; ನಾನsರೆ ಏನಮಾಡಲೆವ್ವಾ ಸುಧಾ!”

“ಅಲ್ಲs ಇದೇನು ಅಡ್ಡಡ್ಡs ಮಾತಾಡಲಿಕ್ಕೆ ಹತ್ತೀದಿ? ಏನಿದ್ದದ್ದು ಸರಳ ಹೇಳಬಾರದು!” ಅದs ಅದರಿಂದ ಹೊರಬಿದ್ದು ಒಂದು ಘಳಗಿ ನನ್ನ ಜತೆಗೆ ಮಾತಾಡಲಿಕ್ಕೆ ಸುಧಾ ಅವರಿಗೆ ವ್ಯಾಳ್ಯಾ ಸಿಗೂದಿಲ್ಲ. ಆದರ ನನ್ನ ಹುಚ್ಚಖೋಡಿ ಮನಸು ಮಾತ್ರ ಈಗ ಬಂದಾನು ಇನ್ನೊಂದು ಸ್ವಲ್ಪ ತಡದು ಬಂದಾನು ಅಂತ ಹಾದೀನ ನೋಡುತಿರತಂದ. “

“ಸರಿಹೋತು ಬಿಡು! ನಾ ಏನೋ ಅಂತ ಘಾಬರ್ಯಾಗಿ ಹೋಗಿದ್ದೆ. ಅಲ್ಲs ಹುಡಿಗೀ, ಗೊತ್ತಿಲ್ಲೇನು ನಿನಗೆ” ಮನಿ ಮನೀಗೂ ಮಣ್ಣಿನ ಒಲಿಗಳೇ! ಎಲ್ಲಾರ ಮನೀ ದ್ವಾಸಿನೂ ತೂತs ನೋಡ ನಲೂ! ನಂದsರೆ ಸ್ಥಿತಿ ಏನಂತ ತಿಳದೀದಿ? ನಿಂದಬೇಕು ನಂದಬ್ಯಾಡ ಹೀಂಗಾಗೇದ. ಈಗ ಇದಕ್ಕ ಏನಾರೆ ಉಪಾಯಾ ಹುಡಿಕಿ ತಗೀ

ಸರೀ ನಿನ್ನಂತೇ ಆಗಲಿ ಸುಧಾ! ಉಪಾಯ ಏನಾರೇ ಇದ್ದರೆ ಹೇಳತೀನದಕ?”

ರಮಾಬಾಯಿ ತಮ್ಮ ನಡುಮನೆಯಲ್ಲಿ ಅಕ್ಕಿಯನ್ನಾರಿಸುತ್ತ ಕುಳಿತಿದ್ದಾರೆ.

ಅಲ್ಲೆ ಒಂದೆಡೆಯಲ್ಲಿ ಅರ್ಧಮರ್ಧ ಹೊಲಿದ ಕುಪ್ಪಸವೂ ಹೊಲಿಗೆಯ ಬೇರೆ ಸಾಮಾನುಗಳು ಬಿದ್ದಿವೆ. ರಮಾಬಾಯಿ ಕೂಗಿ ಹೇಳಿದರು!

ಏ ಗುಂಡೀ! ಬಾಳ್ಯಾನ್ನ ಹೊರಗ ಕರಕೊಂಡು ಹೋಗ ತಾಯೀ…ಕೈಕಾಲರೆ ಬೀಳಲ್ಯಾ! ನಾ ಅಕ್ಕ ತಾರಿಸ ಬೇಕಾಗೇದ ಸಂಜೀ ಅಡಿಗಿಗ ಅಕ್ಕಿ ಬ್ಯಾಡs! ಹೋಗು ಥೋಡೆ ಬರೂತನಕಾ ಬಕ್ಕಬಾರಲು ಬಿದ್ದು!”

ನಾ ಹೋಗೂದಿಲ್ಲ ಹೋಗು ಬಾಳ್ಯಾನ ಎತ್ತಿಕೊಂಡು! ಬಾಳ್ಯಾ ಬೋಳ್ಯಾ! ನಾ ನಿಮ್ಮ ಮನಿಗೆ ಹೋಗಬೇಕಾಗೇದ ಅದಕ್ಕೆ!”

ಒಮ್ಮೆಲೆ ಮಾಧವರಾಯರು ಒಳಕ್ಕೆ ಬಂದು, ತಮ್ಮ ಅಧಿಕಾರವಾಣಿಯಲ್ಲಿ ಹೆಂಡತಿಗೆ ಆರ್ಡರ್ ಮಾಡಿದರು.

ಹುಂ! ಬಿಡದನ್ನ, ಏಳು ಮದಲ… ಐದಾರು ಕಪ್ಪು ಕಾಫೀ, ಏನಾರೆ ಫರಾಳ ಮಾಡು! ಹುಂ ಎದ್ದs ಬಿಡು ಈಗಿಲೆ”

ಬೇಸತ್ತ ದನಿಯಲ್ಲಿ ರಮಾಬಾಯಿ ಹೇಳಿದರು.

ಸಾಕುಸಾಕಾಗಿ ಹೋತು ನನ್ತಾಯೀ! ಈಗಷ್ಟೇ ಈಗ ಚಹಾ ಮಾಡಿಕೊಟ್ಟು, ಇಲ್ಲೆ ಆರಸಲಿಕ್ಕೆ ಕೂತಕೊಂಡೀನಿ. ಈಗ ಮತ್ತ್ಯಾರು ಬಂದು ನಿಂತರು ಧೂತ್ ಅಂತ?”

ಸಾಕು ಸಾಕು! ಈಗ ಮಾತೇನೂ ಬೇಕಾಗಿಲ್ಲ; ಬೇಕಾದದ್ದು ಕಾಫೀ ಫರಾಳಾ ಆತಿಲ್ಲೋ?”

ರಮಾಬಾಯಿ ಒಳಕ್ಕೆ ಬಂದು ಮಾತಿಗೆ ಮೊದಲು ಮಾಡಿದರು.

“ಯಾಕ್ರೇ ರಮಾಬಾಯರs! ಯಾಕೋ ಸಿಟ್ಟಿನೊಳಗೆ ಇದ್ದಾಂಗ ಕಾಣಸ್ತಂದ… ಗುಡೀಗೇನು ಬರವರಿದ್ದೀರೋ ಇಲ್ಲೋ? ನನಗೇನೂ ಮನೀಗೆ ಲಗೂನೇ ಹೋಗಬೇಕಾಗೇದ. ಇಂದ ರಾತ್ರೀ ಯಾರೋ ನಾಕೈದು ಮಂದಿ ಊಟಕ್ಕೆ ಬರವರಿದ್ದಾರಂತ.”

“ಗುಡೀಗೆ ಬರೂವಂಥಾ ದೈವ ನಂದೆಲ್ಲೆ ಅದs ಹೇಳ್ರಿ ಸೀತಾಬಾಯೀ! ಬರಬೇಕಂತ ಮನಸೀನಾಗೇನೂ ಮಾಡಿಕೊಂಡಿದ್ದೆ. ಆದರ ನಡವ ಇವೊಂದು ಬರತಾವಲ್ಲಾ ಚಹಾನೋ ಕಾಫೀನೋ ಅಂತ! ಸುಡ್ಲಿ ನನ್ನ ತಾಯೀ: ಈ ಸುಡಗಾಡ ಕೆಲಸದಾಗ ದೇವರಿಗೆ ಹೋಗಲಿಕ್ಕೆ ಸುದ್ಧಾ ಹೊತ್ತು ಸಿಗೂದಿಲ್ಲ?”

“ಹಾಗಾಂದರ ನಾ ಹೋಗತೀನ್ರೆವ್ವಾ! ಈಗ ನಿಂತು ಮತ್ತೊಂದು ಮಾತಾಡೀನಂದ್ರೂ ಪುರಸೊತಿಗಿ ಇಲ್ಲ. “

ಮಾತಿನ ಕೊನೆಯೊಡನೆಯೆ ಸೀತಾಬಾಯಿ ಹೊರಟುಹೋಗುವರು.

ಮನೆಯ ಕಟ್ಟೆಯ ಮೇಲೆ ಶಾಸ್ತ್ರಿಗಳು ಚಂಚಿಯನ್ನು ಬಿಚ್ಚಿಕೊಂಡು ಕುಳಿತಿದ್ದಾರೆ. ಶಾಸ್ತ್ರಿಗಳ ಹೆಂಡತಿ ಪಡಸಾಲೆಯಲ್ಲಿ ಕಾಯಿಪಲ್ಯ ಹೆಚ್ಚುವುದರಲ್ಲಿ ತೊಡಗಿದ್ದಾರೆ. ಇದ್ದಕ್ಕಿದ್ದ ಹಾಗೆಯೇ ಶಾಸ್ತ್ರಿಗಳು ಕೂಗಿ ಹೇಳಿದರು.

“ಏನು! ಕೇಳಿಸಿತೇನ ನಿನಗ! ಇಂದು ರಾತ್ರಿ ಇಸ್ಪೇಟಾಡಲಿಕ್ಕಂತ ಜನಾ ಬರವರು. ನೀ ಮತ್ತ ಲಗೂನ ಕಸಾ ಉಡಿಸಿ ಹಾಸಿ ಇಟ್ಟರು. ಇನ್ನೊಂದು ಮಾತು; ನಾ ಹೇಳಿದಾಗ ಕಾಫೀ ತಯಾರಿರಬೇಕೂ ಹೀಂಗ ವ್ಯವಸ್ಥಾ ಇಟ್ಟಿರು!…ತಿಳೀತೇನು?”

ಶಾಸ್ತ್ರಿಗಳ ಹೆಂಡತಿ ಬೇಜಾರುಗೊಂಡವರಾಗಿಹೇಳಿದರು.

ತ್ರಾಸಾತು ಆಗಿಹೋತು. ಇನ್ನಮ್ಯಾಲ ಇಂದಂತೂ ಆ ಚಂಚಾಳಚೌಕಡೀ ಚಾಕರೀ ಮಾಡೋದು ನನ್ನ ಕಡಿಂದದ ಆಗದ ಮಾತು. ಮನೀ ಕೆಲಸೇನು ಕಡಿಮೇ? ಮನಿಸ್ಯಾ ದುಡುದುದುಡದು ಹೆಣಾಬಿದ್ದು ಹೋಗತs; ಅದರದೇನsರೆ ನಿಮಗೆ ಎಚ್ಚರ?

“ಅಬ್ಬಾ! ಯಾಕ? ಮಾತ್ಯಾಕೋ ಬಹಳ ಖಾರಖಾರ ಹೊಂಡಲಿಕ್ಕೆ ಹತ್ಯಾವ! ನಾಲಿಗಿ ಇದ್ದಷ್ಟs ಅದನೋ ಏನ ಉದ್ದಾಗೇದೋ? ಅಂತs! ದುಡದು ಹೆಣಾಬಿದ್ದು ಹೋಗತsದಂತ! ದೊಡ್ಡ ಉಪಕಾರಾನ ಮಾಡತಿದ್ದೀ ನನ್ನ ಮ್ಯಾಲ! ಹೇಳಿದ್ಹಾಂಗ ಎಲ್ಲಾ ಆಗದಿದ್ರ ಮುಂದಿನ ಪರಿಣಾಮಾ ನೋಡಿಕೊಂಡರು ಆತು!”

* * *

ಎರಡನೆಯ ಸುರುಳಿ

ದತ್ತಾತ್ರೇಯ ದೇವಸ್ಥಾನದಲ್ಲಿ ಇಂದು ದರ್ಶನಕ್ಕೆಂದು ಬಂದ ಹೆಂಗಸರ ಗಲಾಟೆ ವಿಪರೀತವಾಗಿದೆ. ಭಕ್ತಿಭಾವದಿಂದ ಕೆಲವರು ಅಕ್ಕಿ-ದುಡ್ಡುಗಳ ತೆರಿಗೆಯನ್ನು ಸಲ್ಲಿಸುತ್ತಿದ್ದಾರೆ. ಇನ್ನು ಕೆಲವರು ತೀರ್ಥ ತೆಗೆದುಕೊಂಡು ಪರಿಶುದ್ಧರಾಗುತ್ತಿದ್ದಾರೆ. ಬೇರೆ ಕೆಲವರು ಅವಸರವಸರದಿಂದ ಪ್ರದಕ್ಷಿಣೆ ಸುತ್ತುತ್ತಿದ್ದಾರೆ. ಆಗ ಪಾರ್ವತೀಬಾಯಿಯವರು ಬಂದು ದೇವಾಲಯದ ಗಂಟೆಯನ್ನು ಬಾರಿಸಿ, ಅಲ್ಲಿಯೆ ನಿಂತಿದ್ದ ಉಮಾಬಾಯಿಯವರೊಂದಿಗೆ ಮಾತನಾಡಲಾರಂಭಿಸಿದರು.

“ಇದ್ರೇನೇ ಉಮಾಬಾಯಿ! ಹೀಂಗ್ಯಾಕಾಗೀದೀರಿ ಈ ಸರತೇ? ಅಗದೀ ಒಣಗಿ ಹೋದ್ಹಾಂಗ ಕಾಣಸ್ತೀರಲಾ! ಜಡ್ಡಪಡ್ಡ ಆಗೇದೋ ಏನು?”

“ಎಲ್ಲೀ ಮಣ್ಣಾಗಿಂದರವ್ವಾ ಜಡ್ಡು ಪಡ್ಡು…? ಮತ್ತ ಬ್ಯಾರೇ ಜಡ್ಡು ಬರಬೇಕ್ಯಾಕ..? ಇದ್ದದ್ದೇನ ಕಡಿಮಿ ಆಗೇದ? ಹಗಲೂ ಹನ್ನೆರಡು ತಾಸು ಮಂದೀ…..ಅದರಾಗು ಹೆಂಗಸರ ಜೀವ ಸಣ್ಣಮಣ್ಣಾಗಿ ಹೋಗುದಲ್ಲಾ ಪಾರ್ವತಿಬಾಯಿ!”

“ಹೌದು ನೋಡ್ರವ್ವಾ! ನಿಮ್ಮ ಮಾತು ಖರೇ ಆದs. ಈಗ ಎಲ್ಲಿ ನೋಡಿದಲ್ಲೆಲ್ಲಾ ಇದೇ ಹಣಿಬಾರಾನs! ಓಹೋ! ಶಾಸ್ತ್ರೀಯವರ ಹೆಂಡತಿ ಬಂದರು ನೋಡ್ರಿ! ಬರ್ರಿ‍ರಂಗಮ್ಮಾ! ಇಲ್ಲಿ ಕೇಳಿದಿರೇನು ಉಮಾಬಾಯಿ ಏನೋ ಅಂತಾರ!”

“ಎಲ್ಲಾ ಕೇಳಿದ್ದಾಂಗದs ಬಿಡ ನನ್ನ ತಾಯೀ. ಮೊನ್ನೆ ನಮ್ಮ ಮನಿಗೆ ಬಂದಾಗ ಎಲ್ಲಾನೂ ಕತೀ ಮಾಡಿ ಹೇಳಿದರು. ಹೆಣ್ಣಾಗಿ ಹುಟ್ಟೀದೀವಿ; ಮಾಡೋದೇನು? ಬಂದದ್ದು ಅನುಭೋಗಿಸಬೇಕೂ ಆತು. ನಂದಾರೇ ಏನ ಹೇಳಲಿ? ಈಗ ಇಲ್ಲಿ ನಿಂತು ಮತ್ತೊಂದು ಮಾತಾಡೀನಂದ್ರ ಪುರಸತ್ತಿಲ್ಲಾಗೇದ”

ಶಾಸ್ತ್ರಿಗಳ ಹೆಂಡತಿ ಇನ್ನು ಹೊರಡುವವರ; ಅಷ್ಟರಲ್ಲಿಯೆ ಇಂದಿರಾಬಾಯಿ ತಮ್ಮ ಚುರುಕುನೋಟಗಳನ್ನು ಹೊರಳಿಸುತ್ತ ಅಲ್ಲಿಗೆ ಪ್ರವೇಶಿಸುವರು. ಒಳಗೆ ಕಾಲಿಕ್ಕುತ್ತಿರುವಾಗಲೇ ಅವರು ಮಾತನ್ನಾರಂಭಿಸುವರು.

“ಇದೇನ್ರೇ ಎಲ್ಲಾರೂ ಇಲ್ಲೇ ಈ ಘಂಟೀಹತ್ರ ನಿಂತುಕೊಂಡಿದ್ದೀರಿ? ಏನೋ ಮಸಲತ್ತು ನಡದ್ದಾಂಗ ಕಾಣಸ್ತಂದ? ನಿಮಗೊಂದು ಹೊಸಾಸುದ್ಧಿ ಹೇಳಬೇಕಾಗೇದ. ನಮ್ಮ ಸುಧಾ ಇಲ್ಲs? ಆಕೀ ಗೆಳತಿ ಒಬ್ಬಾಕಿ ಇದ್ದಾಳ ‘ನಲಿನಿ’ ಅಂತ. ನಿಮಗ ಆಕೀದು ಗೊತ್ತಿರಲಿಕ್ಕಿಲ್ಲ. ಮನ್ನೆ ಮನ್ನೆ ಮದಿವಿ ಆಗಿ ಇಲ್ಲಿಗೆ ಬಂದಾಳ. ಆಕೀ ನಮ್ಮ ಸುಧಾ ಇಬ್ಬರೂ ಕೂಡಿ ಮುನಸೀಪಾಲಿಟೀ ಹಾಲಿನಾಗ ಒಂದು ಹೆಂಗಸರ ಸಭಾ ಕೂಡಸವರಿದ್ದಾರೆ. ನೀವೆಲ್ಲಾ ಸಭಾಕ್ಕ ಬರಬೇಕು ತಿಳೀತೇನು?”

ಉಮಾಬಾಯಿ ಅಚ್ಚರಿಗೊಂಡು ಕೇಳುವರು:

“ಹೀಂಗೇನು? ಎಂಥಾ ಸಭಾ? ಯಾತಕ್ಕ ಕೂಡಸವರಿದ್ದಾರೆ? ಏನೇನು? ಹೇಳ್ರೆಲಾ ನಮಗಷ್ಟು!”

“ಸಭಾಗಿಭಾ ಮಾಡಿದರ ಏನಾಗಬೇಕದರಿಂದ?ಈ ಕಲತ ಹುಡಿಗೇರಿಗಂತೂ ಬ್ಯಾರೇ ಕೆಲಸs ಇಲ್ಲ. ಮನೀಕೆಲಸಾ ಕೇಳದರ ದೊಡ್ಡದೊಂದು ಕುಂಬಳಕಾಯಿ ಅಂತ ಇವರು ಸಭಾ ಮಾಡತಾರಂತ…! ಲಕ್ಚsರ್ ಕುಡತಾರಂತ…!”

ಶಾಸ್ತ್ರಿಗಳ ಹೆಂಡತಿ ಹೇಳಿದರು.

“ನನಗಂತೂ ಅವತ್ತ ಸಭಾಕ ಬರಲಿಕ್ಕಾಗೂಹಾಂಗಿಲ್ಲ. ನಮ್ಮ ಅಣ್ಣನ ಸೊಸೀಗೆ ಅಂದ ಬಯಕೀ ಊಟಾ ಮಾಡೂದದs ತೂಗಮಂಚದಮ್ಯಾಲ ಕೂಡಿಸಿ…! ಮತ್ತು ರ್ಪಾತಿಬಾಯಿ ನಿಮಗ ಇಲ್ಲೇ ಹೇಳಿಬಿಡತೀನಿ…ಅರಷಣಾ ಕೂಕಮಕ್ಕ ಬರಬೇಕs. ಆವೊತ್ತ ನಮ್ಮ ಮನಿಗೆ! ಸುಮ್ಮಸುಮ್ಮನs ಎಡತಾಕೂದsರೆ ಯಾಕ? ಹೌದಲ್ಲೋ? ಸ್ವಲ್ಪ ಲಗೂನs ಬಂದಬಿಡ್ರಿ ಆತು, ಯಾರಾದರೂ ಬೇಕಲಾ..ಸ್ವಲ್ಪ ಕೈನೆರವಿಗೆ!”

ಇಂದಿರಾಬಾಯಿ ಮರುಕದ ದನಿಯಲ್ಲಿ ಹೇಳಿದರು

“ಅಯ್ಯ…. ! ಎಲ್ಲಾರೂ ಹೀಂಗ್ಯಾಕ ಮಾಡತೀರೇ? ಸುಮ್ಮನs ಬಂದು ನೋಡಿ ಹೊಗೂದಕ ಏನ ಬಂದsದ? ಬಂದು ನೋಡ್ರಿ! ಸಂಸಾರಕ್ಕ ಉಪಯೋಗ ಆಗುವಂಥಾ ಮಾತು ನಿಮಗೆ ಎಷ್ಟೋ ಕೇಳಲಿಕ್ಕೆ ಸಿಗತಾವ”

ಇದಿಷ್ಟು ಮಾತುಕತೆ ನಡೆದಿರುವಾಗಲೆ ಅಲ್ಲಿ ಇನ್ನೂ ಎಷ್ಟೊ ಜನ ಹೆಂಗಸರು ನೆನೆಯುವರು. ಅವರಲ್ಲಿಯ ಅನೇಕ ಜನರು ಸಭೆಗೆ ಬರುವುದಕ್ಕೆ ಒಪ್ಪಿಕೊಳ್ಳುವರು. ಕೆಲವರು “ನೋಡೋಣ! ಸಾಧ್ಯಾದರ ಬರತೀವಿ” ಎನ್ನುವರು.

* * *

ಮೂರನೆಯ ಸುರುಳಿ

ರಮಾಬಾಯಿ ತಮ್ಮ ಯಜಮಾನರಿಗೆ ಹೇಳಿದರು;

ಇಂದು ಮುನಿಸಿಪಾಲಿಟಿ ಹಾಲಿನಾಗ ಹೆಂಗಸರ ಸಭಾ ಕೂಡುದದ. “

ಸ್ವಾಭಾವಿಕ ಅಧಿಕಾರ ಸ್ವರದಲ್ಲಿ ಮಾಧವರಾಯರೆಂದರು

“ಏನ ಸಭಾ ಬ್ಯಾಡಾ-ಗಿಬಾ ಬ್ಯಾಡಾ! ಎಲ್ಲಿಯೂ ಹೋಗೂ ಕಾರಣಿಲ್ಲ! ಹುಡಗ್ಗ ಮೊದಲs ಹುಗಳು ನೆಗಡಿ ಬಂದsದ. ತಿಳ್ಯೂದಿಲ್ಲೇನು? ಈಗ ಸಭಾ ಅಂತ ಸಭಾ! ವ್ಯಾಳ್ಯಾ ಗೊತ್ತಿಲ್ಲಾ ಹೊತ್ತ ಗೊತ್ತಿಲ್ಲಾ! ಏನsರೆ ಮಾಡತೀರಿ ಆತು!”

ಯಜಮಾನರ ಮಾತಿನಿಂದ ರಮಾಬಾಯಿಗೆ ಸಿಟ್ಟು ಬಂದಿತು. ಸಭೆಗೆ ಹೋಗುವ ಹಟ ಅವರಲ್ಲಿ ಇನ್ನಿಷ್ಟು ಹೆಚ್ಚಿತು. ಹುಡುಗನನ್ನು ಒಕ್ಕಲಿಗಿತ್ತಿಯ ಕಡೆಗೆ ಕೊಟ್ಟು ಹೋದರಾಯಿತೆಂದು ಗುಣಗುಣಿಸುತ್ತ ಮನೆಗೆಲಸಕ್ಕೆ ಹೊರಟು ಹೋದರು.

ಸುಧೆಯು ತನ್ನ ಗಂಡನಿಗೆ ಹೇಳಿದಳು

“ಇಂದ ಸಂಜೇ ಕಡೆ ನಾ ಸಭಾಕ ಹೋಗತೀನಿ..! ಡಾ. ಸುಮತೀಬಾಯಿಯವರು ಸಭಾಕ ಅಧ್ಯಕ್ಷರಾಗಲಿಕ್ಕೆ ಒಪ್ಪಿಗೊಂಡಾರ. ನಾ ಸೆಕ್ರೆಟರಿ ಇದ್ದೀನಿ; ಅದಕ್ಕಂತs ಲಗೂನs ಹೋಗಬೇಕಾಗತsದ. ನೀವು ಹುಡುಗಿನ್ನಷ್ಟು ನೋಡಿಕೊಂಡಿರ್ರಿ‍ಆತು. ಮತ್ತ ಇನ್ನೊಂದು; ಇದ್ದಲೀ ಒಲೀಮ್ಯಾಲ ಕುಕsರ್ ಇಟ್ಟು ಹೊರತೀನಿ. ಬರಾಬರಿ ಏಳೂವರಿ ಘಂಟೇಕ ಅದನ್ನ ಇಳಿಸಿಡ್ರಿ…ತಿಳೀತೇನೆ?”

ಓದುತ್ತಿದ್ದ ವರ್ತಮಾನ ಪತ್ರದಿಂದ ಮುಖವನ್ನು ಮೇಲಕ್ಕೆತ್ತಿ ವಿನಾಯಕರಾಯರು ಹೇಳಿದರು

“ಏನು? ಸಭಾಕ ಹೋಗ್ತೀ? ಆದರ…ನಾವು ನಿರ್ಣಯ ಮಾಡೀವಿ. ಮಿತ್ರ ಸಮಾಜದಾಗ ಇಂದ ‘ಬ್ರಿಜ್’ ಆಡೂದು ಅಂತ. ದ ಈವೊತ್ತಂತೂ ನನಗೇನೂ ಮನ್ಯಾಗಿರಲಿಕ್ಕೆ ಆಗೂದಿಲ್ಲ!”

ನಾನೂ ಕೇಳೂ ಹಾಂಗಿಲ್ಲ. ಮನೀ ಏನ ನನೊಬ್ಬಾಕೀದs ಅಲ್ಲಬಾ!”

ಹೋಗು ಹೋಗು, ನಿಂದsರೆ ಆಗಲಿ! ಮನ್ಯಾಗಿರತೀನಿ…ಹುಡುಗಿನ್ನ ಆಡಸತ…ಅತಿಲ್ಲೋ! ಇನ್ನೇನಾದರೂ ಏನು?”

ಹಿಗ್ಗು-ಹೆಮ್ಮೆಗಳ ದನಿಯಲ್ಲಿ ಸುಧೆ ಮಾತನಾಡಿದಳು.

ಇಷ್ಟೇನೂ ನನ್ನ ಮ್ಯಾಲ ದೊಡ್ಡ ಉಪಕಾರ ಮಾಡಿದ್ಹಾಂಗ ಮಾತಾಡೂದು ಬೇಕಾಗಿಲ್ಲ!”

ಮ್ಯುನಸಿಪಲ್ ಹಾಲಿನಲ್ಲಿ ಹೆಂಗುಸುರು ಒಗ್ಗೂಡಿದ್ದಾರೆ. ಕೈಗೆ ಗಡಿಯಾರ ಒಂದು ಚಿನ್ನದ ಬಳೆಯಿಟ್ಟುಕೊಂಡು ಮೋಟಾರಿನಲ್ಲಿ ಕುಳಿತುಬಂದವರೂ ಮುಂದಣ ಕುರ್ಚಿಗಳಲ್ಲಿ ಕುಳಿತಿರುವರು. ಉಳಿದವರು ಬಾಕುಗಳ ಮೇಲೂ ಹಾಸಿದ ಖಾನೆಯ ಮೇಲೂ ಕುಳಿತಿರುವರು. ಚಿಕ್ಕ ಹುಡುಗ-ಹುಡುಗಿಯರು ಗದ್ದಲ ಮಾಡುತ್ತ ಗುಂಪುಗೂಡಿರುವರು. ಮನೆಯಲ್ಲಿ ಮಾತನಾಡಬೇಕಿದ್ದ ಸ್ತ್ರೀಧುರೀಣರು ವ್ಯಾಸಪೀಠದ ಮೇಲಿನ ಕುರ್ಚಿಗಳಲ್ಲಿ ವಿರಾಜಮಾನರಾಗಿರುವರು. ಸಭೆಯು ಆರಕ್ಕೆ ಆರಂಭವಾಯಿತು. ಸೆಕ್ರೆಟರಿ ರಮಾಬಾಯಿಯವರು ಮಾತನಾಡಲು ತೊಡಗಿದರು.

ಪ್ರಿಯ ಸೋದರಿಯರೇ! ಇಂದು ಎಲ್ಲ ಇಲ್ಲಿ ಏಕೆ ಒಟ್ಟುಗೂಡಿದ್ದೇವೆ ಎಂಬುದನ್ನು ನೀವೆಲ್ಲ ಬಲ್ಲಿರಿ. ಹೆಂಗಸರಿಗೆ ಸಂಬಂಧಿಸಿರುವ ಹಲವು ಮಹತ್ತ್ವದ ವಿಷಯಕ್ಕೆ ಇಂದು ಚರ್ಚೆಯಾಗಬೇಕಾಗಿದೆ. ಇಲ್ಲಿ ಕುಳಿತಿದ್ದ ನನ್ನ ಮಿತ್ರ ಜನ ಅಕ್ಕತಂಗಿಯರು ತಮ್ಮ ತಮ್ಮ ಅನಿಸಿಕೆಗಳನ್ನು ಈ ಸಭೆಯಲ್ಲಿ ಮಂಡಿಸುವವರಿದ್ದಾರೆ. ಈಗ ನಾನು ನಿಮ್ಮ ವೇಳೆಯನ್ನು ಹೆಚ್ಚು ತೆಗೆದುಕೊಳ್ಳದೆ ಇಂದಿನ ಸಭೆಗೆ ಪೂರ್ಣ ಯೋಗ್ಯರಾದ ಡಾ. ಸುಮತೀ ಬಾಯಿವರು ಸಭೆಯ ಅಧ್ಯಕ್ಷರಾಗಬೇಕೆಂದು ನಾನು ಅವರಿಗೆ ವಿನಂತಿ ಮಾಡಿಕೊಳ್ಳುತ್ತೇನೆ.

ಸಭಿಕರ ಚಪ್ಪಾಳೆಗಳ ಗಲಾಟೆಯಲ್ಲಿಯೆ ಅಧ್ಯಕ್ಷರು ಸ್ಥಾನಾಪನ್ನರಾಗಿ ತಮ್ಮ ಮಾತನ್ನ ಆರಂಭಿಸಿದರು.

“ಈಗ ಸೌಭಾಗ್ಯವತೀ ನಲಿನೀ ಸರ ದೇಸಾಯಿಯವರು ತಮ್ಮ ಭಾಷಣವನ್ನಾರಂಭಿಸಬೇಕೆಂದು ನಾನು ಭಿನ್ನವಿಸುತ್ತೇನೆ.”

ತನ್ನ ಸ್ಥಳದಿಂದೆದ್ದು ಬಂದು, ಅಧ್ಯಕ್ಷರ ಟೇಬಲ್ಲಿನ ಹತ್ತಿರ ನಿಂತು ನಲಿನಿಯು ಉಪನ್ಯಾಸವನ್ನಾರಂಭಿಸಿದಳು.

“ಅಧ್ಯಕ್ಷರೇ, ನನ್ನ ಪ್ರಿಯ ಸೋದರಿಯರೆ, ಇಂದು ನೀವೆಲ್ಲ ಇಲ್ಲಿ ಒಟ್ಟುಗೂಡಿದುದನ್ನು ನೋಡಿ ನನಗೆ ಬಹಳೇ ಆನಂದವಾಗುತ್ತಿದೆ. ಸದ್ಯ ನಾನು ನನ್ನವೆಂದು ನಾಲ್ಕು ಮಾತುಗಳನ್ನು ತಮ್ಮೆದುರು ಇಡಬೇಕೆಂದು ಇಚ್ಛಿಸುತ್ತೇನೆ. ಗಂಡಸರ ಲಕ್ಷ್ಯವು ಮನೆಗಿಂತ ಹೊರಕ್ಕೇ ಹೆಚ್ಚಾಗಿ ಹೋಗಹತ್ತಿತೆಂದರೆ, ಆಗ ಅವರನ್ನು ಮನೆಯ ಕಡೆಗೆ ಎಳೆದು, ಹೇಗೆ ತಡೆ ಹಿಡಿಯಲಿಕ್ಕೆ ಬಂದೀತೆಂಬ ಮಾತಿನ ಚರ್ಚೆಯು ಇಂದಿನ ಸಭೆಯಲ್ಲಿ ಆಗಬೇಕಾಗಿದೆ. ನಾವು ಈ ವಿಷಯದಲ್ಲಿ ಸಾಕಷ್ಟು ವಿಚಾರವನ್ನು ಮಾಡಿ ಒಂದು ಸಾರ್ವಜನಿಕ ಸಭೆಯನ್ನೇ ಕೂಡಿಸಬೇಕೆಂದು ನಿರ್ಣಯಿಸಿದೆವು. ಈ ನಿರ್ಣಯದ ಪ್ರತ್ಯಕ್ಷಫಲವೇ ಈ ಸಭೆ. ಈ ಸಭೆಯನ್ನು ಯಶಸ್ವಿಯನ್ನಾಗಿ ಮಾಡಲಿಕ್ಕೆ, ಇಲ್ಲಿ ಕೂಡಿದ ನನ್ನ ಅಕ್ಕತಂಗಿಯರ ಸಹಕಾರ್ಯವು ಅವಶ್ಯವಾಗಿರಬೇಕು. ಮದುವೆ ಮಾಡಿಕೊಳ್ಳುವುದಕ್ಕಿಂತ ಮೊದಲು ನಾನು ಹೆಚ್ಚು ಸುಖಿಯಾಗಿದ್ದೆನೆಂಬುದು ನನ್ನ ಅನುಭವದ ಮಾತಾಗಿದೆ. ಏಕೆಂದರೆ ಆಗ ಬಿಚ್ಚು ಮನದಿಂದ ನನ್ನ ಗೆಳತಿಯರೊಂದಿಗೆ ನಕ್ಕು ಕೆಲಿದು ಆಡುತ್ತಲಿದ್ದೆ. ಆದರೆ ಈ ತಾತ್‌ಪೂರ್ತಿಕ ಗೆಳತಿಯರಿಂದ ಪ್ರಯೋಜನವೇನೆಂಬ ವಿಚಾರದಿಂದ, ಜೀವನದುದ್ದಕ್ಕೂ ಒಡನಾಡಿಯಾಗಿರಬಹುದಾದ ಗೆಳೆಯನೊಬ್ಬನನ್ನು ಆರಿಸಿ ಸ್ವೀಕರಿಸಿದೆ ಆದರೆ ಮದುವೆಯಾದ ಬಳಿಕ ಬಂದ ಅನುಭವವೇ ಬೇರೆ ರೀತಿಯದು! ನನ್ನ ಗಂಡನಿಗೆ ನನಗಿಂತಲೂ ತಮ್ಮ ಗೆಳೆಯರ ಬಳಗವೇ ಹೆಚ್ಚು ಮಹತ್ತ್ವದ್ದಾಗಿ ಕಾಣುತ್ತಲಿದೆಯೆಂಬುದನ್ನು, ಅವರ ಆಚರಣೆಯಿಂದಲೆ ನಾನು ಕಂಡುಕೊಂಡಿದ್ದೇನೆ. ಗೆಳೆಯರೊಡನೆ ಹರಟೆ ಹೊಡೆಯುವುದರಲ್ಲಿಯೂ, ಅವರೊಡನೆ ತಿರುಗಾಡುವುದರಲ್ಲಿಯೂ, ಆಟವಾಡುವುದರಲ್ಲಿಯೂ ನನ್ನ ಪತಿರಾಜರ ವೇಳೆಯೆಲ್ಲ ಹೊರಟುಹೋಗುತ್ತದೆ. ಹಾಯಾಗಿ ಕುಳಿತು ನನ್ನೊಡನೆ ನಾಲ್ಕು ಮಾತುಗಳನ್ನಾಡಲಿಕ್ಕೂ ಅವರಿಗೆ ವೇಳೆ ಸಿಕ್ಕುವುದಿಲ್ಲ. ಮನೆಯು ಅವರ ಪಾಲಿಗೆ ಬರೀ ಊಟಕ್ಕೆ, ಚಹಾ ಉಪಕಾರಕ್ಕೆ ಇದ್ದಂತಿದೆ. ಇಂದು ಒಬ್ಬ ಗೆಳೆಯನ ಮನೆಗೆ ಹೋದರೆ, ನಾಳೆ ಮತ್ತೊಬ್ಬನನ್ನು ಮನೆಗೆ ಕರೆದುಕೊಂಡು ಬರುವುದು; ಈ ಗೊಂದಲದಲ್ಲಿ ತಮಗಾಗಿ ತಮ್ಮ ಸಾಮೀಪ್ಯಕ್ಕಾಗಿ ಯಾರಾದರೂ ತಳಮಳಿಸುತ್ತಿದ್ದಾರೆಯೇ… ಎಂಬುದರ ಪರಿವೆಯೆ ಅವರಿಗೆ ಇರುವುದಿಲ್ಲ. ಜೀವನದಲ್ಲಿ ಗೆಳೆಯರಿಗೊಂದು ಸ್ಥಾನವಿದೆ. ಈ ಮಾತು ನಿಜ! ಆದರೆ ಇಲ್ಲದ ಮಹತ್ತ್ವ ಆ ಸ್ಥಾನಕ್ಕೇ ದೊರೆಯಹತ್ತಿರದ ಅದರ ಪರಿಣಾಮವು ಜೀವನದಲ್ಲಿ ಅಸಮಾಧಾನ ಅಸಂತುಷ್ಟಿಗಳನ್ನು ತಂದೊಡ್ಡದೆ ಬಿಡದು. ಗೆಳೆಯರಿರಬೇಕು! ಅವರ ಮಹತ್ತ್ವ ಎಲ್ಲಿಯವರೆಗೆ? ಮದುವೆಯಾಗುವವರೆಗೆ ಮಾತ್ರ. ಮದುವೆಯಾಯಿತೆಂದರೆ ಗೆಳೆಯರಿಗಿದ್ದ ಮಹತ್ತ್ವು ಕಡಿಮೆಯಾಗಲಿಕ್ಕೇ ಬೇಕು. ಏಕೆಂದರೆ ಜೀವನದ ಜೊತೆಗಾತಿಯೆಂದು ಕೈಹಿಡಿದ ವ್ಯಕ್ತಿಯ ಬೇಕು-ಬೇಡಗಳ ಕಡೆಗೂ ಭಾವನೆಗಳ ಕಡೆಗೂ ಸರಿಯಾಗಿ ಲಕ್ಷ್ಯವನ್ನು ಗಂಡಸರು ಕೊಡಬೇಕಲ್ಲವೇ? ತಮ್ಮ ಹೆಂಡಂದಿರು ಸಂತುಷ್ಟರಾಗಿರುವಂತೆ ಗಂಡಂದಿರು ಆಚರಿಸಬೇಕಲ್ಲವೇ? ಯಾವ ಗಂಡಸರಿಗೆ ಗೆಳೆಯರೇ ಹೆಚ್ಚಿನವರಾಗಿ ತೋರುವರೋ ಅವರು ಮದುವೆ ಮಾಡಿಕೊಳ್ಳದೆ ಇರುವುದೇ ಉತ್ತಮ ಅದನ್ನು ಬಿಟ್ಟು ಹೆಂಡತಿಗೆ ಅಸಮಾಧಾನ ಅತೃಪ್ತಿಗಳಿಂದ ನಿಟ್ಟುಸಿರು ಹಾಕಲಿಕ್ಕೆ ಹೆಚ್ಚುವುದು ಎಲ್ಲಿಯ ನ್ಯಾಯ? ತಾವೆಲ್ಲರೂ ನನ್ನ ಅನುಭವದ ಈ ಮಾತನ್ನು ಕುರಿತು ಯೋಗ್ಯ ವಿಚಾರ ಮಾಡಬೇಕೆಂದು ಬೇಡಿಕೊಳ್ಳುತ್ತೇನೆ.” ಮಾತನ್ನು ಮುಗಿಸಿ ನಲಿನಿಯು ಕುಳಿತು ಕೊಳ್ಳುವಳು. ಸುಧೆಯು ಎದ್ದು ಮಾತನಾಡಲಾರಂಭಿಸುವಳು.

“ಅತೀ ಸರ್ವತ್ರ ವರ್ಜಯೇತ್” ಎಂದು ಸಂಸ್ಕೃತದಲ್ಲಿ ನೀತಿಯ ಮಾತೊಂದಿದೆ. ಗೆಳೆಯರಿಗೆ ಮಿತಿಮೀರಿ ಮಹತ್ತ್ವ ಕೊಡುವುದೇನೂ ಒಳ್ಳೆಯದಲ್ಲವೆಂದು ಇದೀಗ ಮಾತಾಡಿದವರ ಅಭಿಪ್ರಾಯದಂತೆಯೆ ನನ್ನ ಅಭಿಪ್ರಾಯವೂ ಇದೆ. ಏಕೆಂದರೆ ಇದರಿಂದ ಹೆಂಗುಸರ ಎಷ್ಟೋ ಭಾವನೆಗಳು ಮಣ್ಣುಗೂಡಿ ಹೋಗುತ್ತವಲ್ಲದೆ, ಸಂಸಾರದಲ್ಲಿ ಇನ್ನೂ ಎಷ್ಟೆಷ್ಟೊ ಅಡಚಣೆಗಳು ಉಂಟಾಗುತ್ತವೆ. ನಮ್ಮ ಮನೆಯಲ್ಲಿಯೂ ಇದೇ ಹಣೆಯಬರಹವೇ! ಗಂಡಸರ ಲಕ್ಷ್ಯ ಮನೆಯ ಕಡೆಗೆ ಏನೂ ಇಲ್ಲದುದರಿಂದ, ಎಲ್ಲ ಜವಾಬುದಾರಿಯೂ ನನ್ನೊಬ್ಬಳ ಮೇಲೆ ಬೀಳುವುದು. ಕೋರ್ಟಿನಲ್ಲಿಯ ತಮ್ಮ ಕೆಲಸ ತೀರಿತೋ, ಕೂಡಲೆ ಬ್ರಿಜ್ ಆಡಲಿಕ್ಕೆಂದು ಕ್ಲಬ್ಬಿಗೆ ಹೋಗುವರು. ಅಲ್ಲಿ ಹೋದರೆಂದಾಯಿತು; ತಮಗೊಂದು ಮನೆ, ಸಂಸಾರ ಇದೆಯೆಂಬ ಮಾತೇ ಅವರ ನೆನಪಿನಲ್ಲಿರುವುದಿಲ್ಲ. ಅದಕ್ಕಾಗಿಯೇ ಬಂದು ಹೋದವರನ್ನು ಉಪಚರಿಸುವುದು, ಮನೆಗೆ ಬೇಕಾದ ಸಾಮಾನು ತರಿಸುವುದು, ಆಳು-ಹೋಳುಗಳ ಮೇಲೆ ಕಣ್ಣಿಡುವುದು, ಬೇನೆ-ಬೇಸರಿಕೆ, ಔಷಧ-ಪಥ್ಯ, ಬ್ಯಾಂಕಿನ ಕೊಡುಕೊಳ್ಳುವ ವ್ಯವಹಾರ ಇದೆಲ್ಲವನ್ನೂ ನಾನು ಒಬ್ಬಳೇ ನೋಡಿಕೊಳ್ಳಬೇಕಾಗುವುದು. ಸಂಸಾರದಲ್ಲಿ ಗಂಡಹೆಂಡರಿಬ್ಬರೂ ಒಬ್ಬರ ಕಾರ್ಯದಲ್ಲೊಬ್ಬರು ನೆರವಾಗಿ, ಒಬ್ಬರೊಬ್ಬರ ಅಡಚಣೆಗಳು ದೂರವಾಗುವಂತೆ ಆದಷ್ಟು ಪ್ರಯತ್ನಿಸುತ್ತಿರಬೇಕೆಂದು ನನ್ನ ಸ್ಪಷ್ಟವಾದ ಅಭಿಪ್ರಾಯವಿದೆ. “

ರಮಾಬಾಯಿ ಎದ್ದುನಿಂತ ಮಾತನಾಡ ತೊಡಗಿದರು.

“ಇನ್ನೇನು ನಮ್ಮವ್ವಾ? ಹೀಂಗಾದರ ಕೇಳೂದೇನದ! ಮುಗಲು ಮೂರsಬಟ್ಟು ಉಳದ್ಹಾಂಗಾಗತsದ! ಹೆಂಗಸರ ತೊಂದರಿ ಕಡಿಮಿ ಆಗಿ, ಅವರಿಗೆ ಎಷ್ಟೊಂದು ವ್ಯಾಳ್ಯಾ ಶ್ರಮಾ ಉಳೀತsದಂತೀರಿ! ಅದರ ಹಿಂಗೆಲ್ಲ ಆಗಲಿಕ್ಕೆ ಕೂತsದ ಈಗ? ಇಲ್ಲೆ ನೋಡ್ರಿ, ನಿಮ್ಮ ಗಂಡಂದಿರು ಹೊರಗ ಹೋಗತಾರ; ನಿಮ್ಮ ಕೆಲಸಾ ನಿಮಗ ಮಾಡಲಿಕ್ಕೆ ಅವಕಾಶಾ ಅರೆ ಮಾಡಿಕೊಡತಾರ! ಆದರ ನಮ್ಮಲ್ಲೇನs ತಾಯೀ! ಎಲ್ಲಾ ವಿಚಿತ್ರs ಮನ್ಯಾಗ ಸಿಕ್ಕ ಮಂದಿನ್ನೆಲ್ಲಾ ಕೂಡಿಸಿಕೊಳ್ಳೂದು; ಹರಟೀ ಹೊಡಿಯೂದುಹಲ್ಲ ತಗಿಯೂದು, ಬೀಡಿ ಸಿಗರೇಟು ಸೇದೂದು, ಆ ಮ್ಯಾಲ ಚಹಾ ಫರಾಳಾ ಹಣಿಯೂದು. ನನ್ನ ಆಯುಷ್ಯ ಎಲ್ಲಾ ಇದರಾಗ ಸಂವದು ಹೋಗತsದ ನೋಡ್ರಿ…ರಂದೀ ಹರವೂದು ಅದನ್ನ ನಿಸ್ತರಸೂದು! ಜಲಮs ಸಾಕಸಾಕಾಗಿ ಹೋಗೇದ ನನಗ. ಇಂಥಾದರಾಗ ನನಗ ಮನೀ ಬಿಟ್ಟು ಹೊರಬೀಳ್ಳಿಕ್ಕೆ ವ್ಯಾಳ್ಯಾ ಹ್ಯಾಂಗ ಸಿಗಬೇಕು ನೀವs ನೋಡ್ರಿ! ಇಷs ಅಲ್ಲ! ಪ್ರೀತಿಂದs ಹೆಣೀಬೇಕಂತ ಹಿಡದದ್ದು ಎಷ್ಟೋ ಹೆಣಿಕಿ ಅರ್ದಾಮರ್ದಾ ಆಗಿ ಬಿದ್ದಾವ; ಅವನ್ನ ತಗೆದು ನೋಡಲಿಕ್ಕೆ ಸುದ್ದಾ; ಸವಡಿಲ್ಲಾ?”

ಇಂದಿರಾಬಾಯಿ ಮಾತನಾಡ ತೊಡಗಿದರು

“ಮತ್ತ ಈ ಗೆಳ್ಯಾರು ಅನ್ನೋರಿಗೆಲ್ಲಾ ಹೊತ್ತು-ವ್ಯಾಳ್ಯಾದ ಖಬರು ಹ್ಯಾಂಗ ಉಳ್ಯೂದಿಲ್ಲೋ ಯಾರಿಗ್ಗೊತ್ತು! ಓಮ್ಮೆ ಹರಟೀಹೊಡೀಲಿಕ್ಕೆ ಸುರೂ ಆದರ ಆತು, ಕೆಲಸ ಬಗೀಹರದಾಂಗಾತು. ಎರಡನೇದವರು ಸತ್ತಾರೋ ಬದಕ್ಯಾರೋ ಅಂಬೂದನ್ನ ನೋಡಬೇಕೆಂಬೂ ಎಚ್ಚರನs ಇರೂದಿಲ್ಲ ಅವರಿಗೆ ಹೊತ್ತಲ್ಲದ ಹೊತ್ತಿನೊಳಗೆ ಒಬ್ಬರ ಮನೀಗೆ ಹೋಗೂದು; ಅವರದೂ ವ್ಯಾಳ್ಯಾದಂಡ.. ತಮ್ಮದೂ ವ್ಯಾಳ್ಯಾದಂಡ. ಊಟದ ಹೊತ್ತಿನಾಗ ಇನ್ನೊಬ್ಬರ ಮನಿಗೆ ಹೋಗೂದು; ತಮ್ಮ ಮನೀ ಅನ್ನಾನೂ ಅರಸೂದೂ; ಇದಕ್ಕೆಲ್ಲಾ ನಾವು ಏನಾದರೂ ಉಪಾಯ ಹುಡಕಲಿಕ್ಕೇ ಬೇಕು. “

ಪಾರ್ವತಿಬಾಯಿಯವರಿಗೆ ಮಾತನಾಡುವ ಸ್ಫೂರ್ತಿಯಾಯಿತು.

“ಅಧ್ಯಕ್ಷರೆ, ಮತ್ತು ಅಕ್ಕತಂಗಿಯರೆ!’ ಈಗ ನನಗೇನೂ ಹೆಚ್ಚಿಗೆ ಹೇಳಬೇಕಾಗಿಲ್ಲ. ಅದರ ಒಂದು ಮಾತು ಮಾತ್ರ ಕೇಳಿತೀನಿ… ಏನಾದರೂ ಮಾಡಿ ಗಂಡಸರ ಸೊಕ್ಕು ಛಲೋತಿ ನಾಂಗ ಮುರೀಬೇಕಾಗೇದ.. ಹೆಂಗಸರಿಗೆ ಎಷ್ಟು ತ್ರಾಸಗತದಂಬೂ ಕಲ್ಪನಾನs ಇರೂದಿಲ್ಲ…. ಅವರಿಗೆ. ಹೊತ್ತಲ್ಲದ ಹೊತ್ತಿನಾಗ ಬರತಾರ…! ಚಹಾ ಮಾಡೂ ಅಂತಾರ…! ಅದನ್ನ ಮಾಡೂ ಅಂತಾರ…! ಇದನ್ನ ಮಾಡೂ ಅಂತಾರ…! ಒಬ್ಬರು ಇಬ್ಬರು ಆದರ ಯಾರಾದರೂ ಮಾಡಿಕೊಟ್ಟಾರು ಅನ್ನ್ರಿ…! ಊರಾಗಿನ ಮಂದಿನ್ನೆಲ್ಲಾ ಕಟಿಗೊಂಡ ಬಂದರ ಹೆಂಗಸರೇನು ಬಡಕೋ ಬೇಕು? ಗಂಡಸರು ಹೀಂಗೆಲ್ಲಾ ಮಾಡತಿರೂದು ಬಂದಾಲಿಕ್ಕೇ ಬೇಕು!”

ಬರಲಿಕ್ಕಾಗುವುದಿಲ್ಲವೆಂದು ಹೇಳಿದ ಶಾಸ್ತ್ರಿಗಳ ಹೆಂಡತಿಯವರೂ ಬಂದಿದ್ದರು. ಅವರಿಗೂ ಮಾತನಾಡುವ ಆವೇಶ ಬಂದಿತು.

“ಇಲ್ಲಿ ನೋಡ್ರಿ! ನಾವೊಂದೆರಡು ಮಾತು ಆಡಬೇಕಂತೀನಿ. ನಾ ಏನು ಓದಿದಾಕಿ ಅಲ್ಲಾ, ಬರೆದಾಕಿ ಅಲ್ಲಾ! ನೀವೆಲ್ಲಾ ಮಾತಾಡಿದ್ಹಾಂಗ ಜೋರು ಜೋರಿನಿಂದ ಮಾತಾಡಲಿಕ್ಕೆ ನನಗೇನೂ ಬರೂದಿಲ್ಲ. ಆದರ ನನಗೂ ಇಷ್ಟ ಮಾತ್ರ ಮ್ಯಾಲs ಮ್ಯಾಲ ಅನಸ್ತಂದ. ಗಂಡಸರು ಹೆಂಗಸರನ ಹೀಂಗ ಕೂಲೀ ಜನರ್ಹಾಂಗ ದುಡಿಸಿಕೊ ಬಾರದು! ಹೆಂಗಸರಿಗೇನ ಜೀವಿಲ್ಲs? ಕಷ್ಟ ಸುಖ ಅವರಿಗೆ ಗೊತ್ತಾಗೂದಿಲ್ಲs? ಈಗ ನೀವೆಲ್ಲಾ ಏನ ಮಾತಾಡಿದಿರಿ…ಅದೆಲ್ಲಾ ಹೆಂಗಸಾಗಿ ಹುಟ್ಟಿದ ಪ್ರತಿಯೊಬ್ಬಾಕಿಗೂ ಖರೇ ಅನಸೂಹಾಂಗದs! ಅಧ್ಯಕ್ಷರು ಶಾಣ್ಯಾರಿದ್ದಾರ. ಇದಕ್ಕ ಏನಾದರೂ ಉಪಾಯ ಅವರು ಹೇಳಿಕೊಡಬೇಕೂ ಅಂತ ನಾ ಬೇಡಿಕೋತೀನಿ…!

ಡಾ. ಸುಮತೀಬಾಯಿಯವರು ನಿಂತು ಮಾತನಾಡಿದರು.

“ಪ್ರಿಯ ಸೋದರಿಯರೆ, ನೀವೆಲ್ಲ ಅಧ್ಯಕ್ಷಪದದ ಮಾನವನ್ನು ನನಗೆ ಕೊಟ್ಟದ್ದಕ್ಕಾಗಿ ನಾನು ಅತ್ಯಂತ ಕೃತಜ್ಞಳಾಗಿದ್ದೇನೆ. ಇದುವರೆಗೆ ಇಲ್ಲಿ ಮಾತನಾಡಿದವರ ಮಾತುಗಳನ್ನೆಲ್ಲ ತಾವು ಶಾಂತ ರೀತಿಯಿಂದ ಕುಳಿತು ಕೇಳಿಕೊಂಡದ್ದಕ್ಕಾಗಿ ನನಗೆ ಬಹಳೇ ಸಂತೋಷವಾಗಿರುತ್ತದೆ. ಇಂದಿನ ಸಭೆಯು ತುಂಬಾ ಮಹತ್ತ್ವದ ಸಭೆಯು! ಇಂತಹ ಆಕರ್ಷಕವಾದ ಚರ್ಚೆಯನ್ನು ಇದುವರೆಗೆ ನಾನು ಎಲ್ಲಿಯೂ ಕಂಡಿರಲಿಲ್ಲ. ಕೇಳಿರಲಿಲ್ಲ…! ನಾನು ಡಾಕ್ಟರಳಾಗಿದ್ದರೂ, ಅನೇಕ ಪ್ರಕಾರದ ಅನುಭವಗಳನ್ನು ಪಡೆದಿದ್ದರೂ, ನಿಮ್ಮಂತೆಯೆ ನಾನೂ ಒಂದೂ ಮನೆಯ ಗೊಂಬೆಯಾಗಿದ್ದೇನೆ. ಇಂದು ಇಲ್ಲಿ ನನ್ನ ಅನೇಕ ಅಕ್ಕತಂಗಿಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಅವೆಲ್ಲವುಗಳನ್ನು ಕುರಿತು ವಿಚಾರ ಮಾಡಿ ನೋಡಿದಲ್ಲಿ, ಎಲ್ಲ ಹೆಂಗಸರೂ ಇನ್ನು ಮುಂದೆ ಮೊದಲಿನಂತೆ ಮೂಕದನವಾಗಿ ವರ್ತಿಸುವುದರಲ್ಲಿ ಅರ್ಥವಿಲ್ಲವೆಂದು ತೋರುತ್ತದೆ. ಹೆಂಗಸರಿಗೂ ಒಂದು ವ್ಯಕ್ತಿತ್ವವಿದೆಯೆಂಬುದನ್ನು ಗಂಡಸರಿಗೆ ತೋರಿಸಿ ಕೊಡಲಿಕ್ಕೆ ಇಂದಿನಿಂದ ನಾವು ದೃಢಪ್ರತಿಜ್ಞರಾಗಿ ಮುಂದುವರಿಯಬೇಕು. ನಾನೇನು ಗಂಡಸರ ಮೇಲೆ ಬಂಡೆಬ್ಬಿಸಬೇಕೆಂದು ಹೇಳುವುದಿಲ್ಲ; ನಾವು ಅವರಿಗೆ ಸಂಪೂರ್ಣ ಅನುಕೂಲೆಯರಾಗಿಯೆ ಮುಂದೂ ನಡೆಯೋಣ! ಆದರೆ ನಮ್ಮನ್ನು ಸಂಪೂರ್ಣ ದುರ್ಲಕ್ಷಿಸಿ, ಗಂಡಸರು ಅಡ್ಡತಿಡ್ಡ ದಾರಿಯಿಂದ ನಡೆಯತೊಡಗಿದರೆ ನಿರ್ಬಂಧಿಸುವುದರ ಹೊರತು ಬೇರೆ ದಾರಿಯಿಲ್ಲ. ವೇಳೆಯಲ್ಲದ ವೇಳೆಯಲ್ಲಿ ಯಾರಾದರೂ ಮನೆಗೆ ಬಂದರೆ, ಶಿಷ್ಟಾಚಾರದ ಹೆಸರಿನಿಂದ ಅವರ ಆದರಾತಿಥ್ಯವನ್ನು ಮಾಡಬೇಕಾದ ಕಾರಣವೇನೂ ಇಲ್ಲ. ಮತ್ತೊಂದು ಮಾತೆಂದರೆ ಹೆಂಗಸರ ತಮ್ಮ ಅಂಜುಗುಳಿತನವನ್ನೂ, ಮಿತಿಮೀರಿದ ಸಹನಶೀಲತೆಯನ್ನೂ ಸ್ವಲ್ಪ ಬದಿಗೆ ಸರಿಸಿ ಇಡಲಿಕ್ಕೆ ಕಲಿಯಬೇಕು. ಏಕೆಂದರೆ ಹೀಗೆ ಮಾಡಿದ ಹೊರತು ಗಂಡಸರಿಗೆ ಹೆಂಗಸರ ಕಷ್ಟ-ನಷ್ಟಗಳ ಕಲ್ಪನೆಯೆ ಉಂಟಾಗುವುದಿಲ್ಲ. ಹೆಂಗಸರು ಮನೆವಾರ್ತೆ ನೋಡಿಕೊಳ್ಳಬೇಕು. ಮನೆಯ ಜನರ ಬೇಕುಬೇಡಗಳನ್ನು ನೋಡಿಕೊಂಡು ಅವರೆಲ್ಲರ ಹಿತಕ್ಕಾಗಿ ಹಗಲಿರುಳೂ ಹೆಣಗಬೇಕು. ಅನೇಕ ತೊಂದರೆಗಳನ್ನು ಸಹನೆ ಮಾಡಬೇಕು. ಗಂಡಸರ ದೃಷ್ಟಿಯಲ್ಲಿ ಇದಕ್ಕೆ ಯಾವ ಬೆಲೆಯೂ ಇಲ್ಲ. ಹೀಗಾಗದಂತೆ ನಾವಿನ್ನು ಅವಶ್ಯಕವಾಗಿ ಎಚ್ಚರಪಟ್ಟು ಕೊಂಡಿರಬೇಕು. ಗಂಡಸರಿಗೆ ಬರೀ ಎಂಟೇ ಎಂಟು ದಿನ ಮನೆಯನ್ನು ಒಪ್ಪಿಸಿಕೊಟ್ಟು ನೋಡಿರಿ! ಆಗ ಅವರಿಗೆ ಹೆಂಗಸರ ಕೆಲಸ ತಾವು ತಿಳಿದುಕೊಂಡಷ್ಟು ಸುಲಭವಲ್ಲವೆಂಬ ಮಾತು ಗೊತ್ತಾಗುವುದು. ನಾನು ಖಂಡಿತವಾಗಿ ಹೇಳುತ್ತೇನೆ. ಎಂಟು ದಿನ ಬೇಡ; ಎರಡೇ ದಿನಗಳಲ್ಲಿ ಅವರು ಸೋತು ಸುಣ್ಣವಾಗಿ ಹೋಗುವರು. ನಿತ್ಯವೂ ಎದ್ದು ಮಾಡಿದ್ದನ್ನೇ ಮಾಡುತ್ತ ಕೂಡುವುದೆಂದರೆ ಅದೇನು ಸಾಧಾರಣ ಕೆಲಸವಲ್ಲ. ಈಗ ಮೊದಲನೆಯವರಾಡಿದ ಮಾತುಗಳ ಬಗ್ಗೆ ವಿಚಾರಮಾಡೋಣ! ಗಂಡಸರಿಗೆ ಅವರ ದುರ್ಲಕ್ಷ್ಯವಿದ್ದರು ತಮ್ಮ ಹಿತಾಹಿತಗಳ ವಿಚಾರದಲ್ಲಿಯೆ ಅವರು ಮುಳುಗಿ ಹೋಗಿದ್ದ, ಹೆಂಡಂದಿರು ಹೇಳಿದಂತೆ ಕೇಳಕೊಂಡು ಹಾಕಿದಷ್ಟು ತಿಂದು ಸುಮ್ಮನೆ ಬಿದ್ದರಿಬೇಕೆಂಬ ದುರಾಗ್ರಹವು ಅವರಿಗಿದ್ದರೆ, ಹೆಂಡಂದಿರು ಎಲ್ಲಿಯವರೆಗೆ ತಾಳಿಕೊಂಡಿರಬೇಕು? ಇದಕ್ಕಾಗಿ ಪ್ರತಿಕಾರವನ್ನಿವರು ಮಾಡಲಿಕ್ಕೇ ಬೇಕು. ಇಂತಹ ಸಂದರ್ಭದಲ್ಲಿ, ಗಂಡನ ಬಗ್ಗೆ ಹೆಂಡತಿಯ ಮನಸ್ಸಿನಲ್ಲಿ ತಿಳಿಯದಂತೆಯೇ ಅಶ್ರದ್ಧೆ ತಲೆದೋರಿದರೆ ಆಶ್ಚರ್ಯಪಡಬೇಕಾದದ್ದೇನೂ ಇಲ್ಲ. ಆದುದರಿಂದ ನನ್ನ ಅಕ್ಕತಂಗಿಯರಲ್ಲಿ ನ್ನ ಬಿನ್ನಹವಿಷ್ಟಿದೆ: ಅನ್ಯಾಯಕ್ಕೆ ತಡೆಯೊಡ್ಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬರೀ ಮೆತ್ತಗಾಗಿ ಹೇಡಿತನದಿಂದ ನಡೆಯುವುದರಲ್ಲಿ ಸ್ವಾರಸ್ಯವೇನೂ ಇಲ್ಲ. ಇಲ್ಲಿ ನೆರೆದವರಲ್ಲಿ ಕೆಲವು ಜನರಾದರೂ ತಮ್ಮ ವ್ಯಕ್ತಿತ್ವವನ್ನು ಸಂರಕ್ಷಿಸಿಕೊಳ್ಳುವಂತೆ ಆಚರಿಸತೊಡಗಿದಲ್ಲಿ…ಅದರಿಂದ ಗಂಡಸರಲ್ಲಿ ಸ್ವಲ್ಪವಾದರೂ ಸದ್ಭುದ್ಧಿ. ತಲೆದೋರಿದಲ್ಲಿ, ಇಂದಿನ ಈ ಸಭೆಯಿಂದ ಏನಾದರೂ ಕೆಲಸವಾದಂತಾಯಿತೆಂದು ಹೇಳಬಹುದು. ಅಂತಹ ಒಳ್ಳೆಯ ದಿನವನ್ನು ಕಾಣುವ ಯೋಗವು ಬೇಗನೆ ಒದಗಿರಲೆಂದು ಆಶಿಸಿ, ಮತ್ತೊಂದು ಸಲ ತಮ್ಮೆಲ್ಲರಿಗೆ ಕೃತಜ್ಞತೆಗಳನ್ನರ್ಪಿಸಿ ನನ್ನ ಮಾತನ್ನು ಮುಗಿಸುತ್ತೇನೆ.

ಅಧ್ಯಕ್ಷರಿಗೆ ಹೂಮಾಲೆ ಹಾಕಿ ಅಭಿನಂದನೆಗಳನ್ನರ್ಪಿಸಿದ ಮೇಲೆ ಸಭೆಯು ಕೊನೆಗೊಳ್ಳುವುದು.

* * *

 

– ಸೌ. ವಿಮಲಾಬಾಯಿ ದೇಶಪಾಂಡೆ ಬಿ. ಎ.,
ಜಯಂತಿ, ಸಂಪುಟ ೧, ಸಂಚಿಕೆ ೩, ೧೯೩೮