ನವದಾಂಪತ್ಯದ ಅನುಭವ ಸುಖವನ್ನಿರತವರಿಗೇ ಗೊತ್ತಾ ಬಸಪ್ಪನ ಸಂಸಾರದ ಸವಿ. ಮನದೊಲವಿನ ಮಡದಿಯ ಕಟಾಕ್ಷಯದಿಂದಾಕರ್ಷಿಸಲ್ಪಡದ ಪುರುಷನಾರು! ಅಬಲೆಯ ಸೊಬಗಿನ ಮೋಹಜಾಲದಿಂದ ಆಹ್ಲಾದಿತ ಮನಸ್ಕನಾಗದಿರುವ ಮನುಷ್ಯನು ಮಹಾತ್ಮನಾಗಿರಬೇಕು, ಇಲ್ಲವೆ ಮರುಳನಾಗಿರಬೇಕು. ನಮ್ಮ ಬಸಪ್ಪನು ಮಹಾತ್ಮನೂ ಅಲ್ಲ, ಮರಳನೂ ಅಲ್ಲ. ಪ್ರಾಪಂಚಿಕ ಕಷ್ಟ ಸುಖಗಳ ಸಾಗರತರಂಗಗಳಲ್ಲಿ ತೇಲಾಡುತ್ತಿರುವ ಮಾನವ ಕೋಟಿಗಳಲ್ಲೊಬ್ಬನು. ಅಶಿಕ್ಷಿತಜನರು ಪ್ರೇಮದ ಪ್ರಾಬಲ್ಯವನ್ನಿರಿಯ ರೆಂದೆಣಿಸುವ ಸುಶಿಕ್ಷಿತರೀಗಲೂ ಉಂಟು. ಆದರೆ ಮಾನವ ಸ್ವಭಾವವು ಎಲ್ಲೆಲ್ಲಿಯೂ ಒಂದೇ ಅಲ್ಲವೆ?

ನೀಲಮ್ಮನನ್ನು ನೋಡುವುದಕ್ಕೆ ಮೊದಲು ಯಾರಾದರೂ, ಬಸಪ್ಪನು ಸಾಯುವಾಗ ತನ್ನ ಮೊದಲ ಹೆಂಡತಿಗೆ ಕೊಟ್ಟ ವಚನವನ್ನು ಮುರಿಯುತ್ತಾನೆಂದೆಣಿಸಿರಲಿಲ್ಲ. ಆದರೆ ದೈವಪ್ರೇರಣೆಯೋ, ಹಣೆಯಬರಹವೋ, ಏನೆಂದಾದರೂ ಹೇಳಿಕೊಳ್ಳಬಹುದು. ಹೆಣ್ಣಿನ ಹಂಬಲವನ್ನು ತೊರೆದ ಬಸಪ್ಪನ ಹೃದಯವು ನೀಲಮ್ಮನನ್ನು ನೋಡಿದ ಕೂಡಲೆ ಕರಗಿ ನೀರಾಯಿತು. ಬಸಪ್ಪನು ದಷ್ಟಪುಷ್ಟ ಮನುಷ್ಯ. ಲೌಕಿಕನು. ಮೇಲೆ ಪ್ರಪಂಚಜ್ಞಾನವನ್ನು ಚೆನ್ನಾಗಿ ಅರಿತವನು. ಮೇಲೂ, ತನಗೆ ಬೇಕಾದುದನ್ನು ಸಾಧಿಸಲು ಹೆದರುವ ಪುಕ್ಕನಲ್ಲ.

ಬಸಪ್ಪನು ನೆರೆಯೂರಿಗೆ ಮರಿಯಣ್ಣನ ಜಾತ್ರೆಗೆ ಹೋಗಿದ್ದ. ಅಲ್ಲಿಗೆ ನೀಲಮ್ಮನ ತಾಯಿ ತಂದೆಗಳೂ ಬಂದಿದ್ದರು. ಜಾತ್ರೆಗೆ ಹಂಬಲವಿಲ್ಲದ ಹಳಬರುಂಟೆ? ನೀಲಮ್ಮನಿಗೆ ಈಗ ಹದಿನೈದು ತುಂಬಿ ಹದಿನಾರರಲ್ಲಿ ಬಿದ್ದಿದೆ. ಹುಡುಗಿಯೂ ರೂಪವತಿಯಲ್ಲದಿದ್ದರೂ, ಕಳೆವಂತಿ. ಬಣ್ಣ ಸಾದಗಪ್ಪು, ವಿಶಾಲವಾದ ಕಾಡಿಗೆಕಣ್ಣು, ತೀಡಿದ ನಿಡಿಹುಬ್ಬು. ಬಾಗಿದ ಮೂಗು. ಅದರ ಮೇಲೆ ಮಿರುಗುವ ಹಸರುಕಲ್ಲಿನ ಮೂಗುಬೊಟ್ಟು, ಗುಂಗುರು ಕೂದಲಿಂದಾವರಿಸಿದ ಮುದ್ದಾದ ಪುಟ್ಟ ಹಣೆ. ಕಿರುನಗೆಯಿಂದ ಮಿನುಗುತ್ತಿರುವ ಕೆಂದುಟಿ. ಹರೆಯಿಂದ ಹುರಿದುಂಬಿದ ಮೈಕಟ್ಟು. ಹುಡುಗಿಯು ಅಷ್ಟು ಎತ್ತರವಾಗಿರದಿದ್ದರೂ, ಕುಳ್ಳಾಗಿರಲಿಲ್ಲ.

ಬಸಪ್ಪನು ಪಂಪಾಪತಿಯ ದರ್ಶನಮಾಡಿಕೊಂಡು ದೇವಸ್ಥಾನದ ಜಗಲಿಯ ಮೇಲೆ ಸ್ವಲ್ಪ ಶಾಸ್ತ್ರಕ್ಕೆಂದು ಕೂತುಕೊಂಡು. ತೆಂಗಿನ ಚಿಪ್ಪನ್ನೊಡೆದು ದೇವರ ಪ್ರಸಾದವನ್ನು ಬಾಯಲ್ಲಿ ಹಾಕಿಕೊಂಡು, ಅತ್ತಿತ್ತ ನೋಡುತ್ತಿದ್ದ. ಇನ್ನೂ ದೇವರ ದರ್ಶನಕ್ಕೆ ಬರುತ್ತಿರುವ ಜನರ ಗುಂಪು ತಂಡ ತಂಡವಾಗಿ ಬರುತ್ತಲೇ ಇತ್ತು. ನೀಲಮ್ಮನೂ ತಾಯಿ ತಂದೆಗಳೊಡನೆ ಗುಡಿಯಿಂದ ಹೊರಗೆ ಬಂದಳು. ಹಳ್ಳಿಗಾಡಿನವರು ಸರಳ ಸ್ವಭಾವದವರು. ಒಣ ಡಂಭಾಚಾರವನ್ನು ಅರಿಯರು. ಒಬ್ಬರ ಪರಿಚಯವನ್ನೊಬ್ಬರು ಮಾಡಿಕೊಳ್ಳುವುದಕ್ಕವರಿಗಾರೂ ಮಧ್ಯಸ್ಥರು ಬೇಕಾಗಿಲ್ಲ. ಅದರಲ್ಲಿ ಜಾತ್ರೆಯಂತಹ ಸ್ಥಳದಲ್ಲಿ ಇದು ಅತಿ ನಿರಾಯಾಸವಾಗಾಗುವ ಕೆಲಸ. ಹೊಗೆಬಂಡಿಯಲ್ಲಿ ಪ್ರಯಾಣ ಮಾಡುವಾಗಲೂ, ನೌಕೆಯಲ್ಲಿ ಹೋಗುವಾಗಲೂ ಜನರಲ್ಲೊಂದು ವಿಧವಾದ ಸ್ನೇಹಭಾವವುಂಟಾಗುವುದಿಲ್ಲವೇ?

ಬಸಪ್ಪನು ಮೆಲ್ಲನೆದ್ದು ಅವರ ಹಿಂದೆಯೇ, ಸ್ವಲ್ಪ ದೂರ ಹೋದ. ಸಮಯ ನೋಡಿ ಮಾತಿಗೆ ಮೊದಲು ಮಾಡಿದ.

ಬಸಪ್ಪ: “ಈ ಸಲ ಗದ್ದಲ ಕಮ್ಮಿ. ದೇವರ ದರ್ಶನ ಸುಸೂತ್ರವಾಗಿ ಆಯಿತು.

ಗೌರಣ್ಣ: “ಹೌದು, ಸ್ವಾಮಿ ಹೋದ ವರ್ಷ ಬಂದು, ದೇವರ ದರ್ಶನಕ್ಕೆ ಮೂರು ತಾಸು ಕಾದಿದ್ದು, ಈ ಪೂಜಾರಿಗೆ ಹನ್ನೆರಡಾಣೆ ಲಂಚಕೊಟ್ಟೆ. ಆದರೂ ಎರಡು ನಿಮಿಷವಾದರೂ ದೇವರನ್ನು ಕಣ್ತುಂಬ ನೋಡೋದಕ್ಬಿಡ್ಲಿಲ್ಲ. ಏನ್ಜನ ಕಿಕ್ರಿಸಿದ್ರಂದ್ರೀ. ನಿಮ್ದ್ಯಾ ಊರ್ರೀ‍. ನನ್ಹೆಸರು ಗೌರಣ್ಣ. ನಮ್ದು ಕಂತೇಹಳ್ಳಿ.

ಬಸಪ್ಪ: “ನನ್ಹೆಸ್ರು ಬಸಪ್ಪ. ನಮ್ದು ಕಾರೇಹಳ್ಳಿ. ಇಲ್ಲಿಂದ್ಮೂರ್ಮೆಲು. ನಿಮ್ಮೂರ್ಗೋಗ್ಬೇಕಾದ್ರೆ ನಮ್ಮೂರ್ಮೇಲೆ.”

ಹೀಗೆ ಮಾತಿಗೆ ಮೊದಲಿಲ್ಲ, ಕಥೆಗೆ ಕಾಲಿಲ್ಲ. ಗೌರಣ್ಣನಿಗೆ ಹರಟೆ ಬೇಕು; ಬಸಪ್ಪನಿಗೆ ಅವರ ಪರಿಚಯಬೇಕು.

ಗೌರಣ್ಣ ಜೋಡೆತ್ತಿನ ಬಂಡಿಯಲ್ಲಿ ಬಂದಿದ್ದ. ನೀಲಮ್ಮ, ಪಾರ್ವತಮ್ಮ, ತಾನು ಮೂರೇ ಜನ. ಬಂಡಿಯಲ್ಲಿ ಬೇಕಾದಷ್ಟು ಸ್ಥಳವಿತ್ತು. ಬಸಪ್ಪ ಒಬ್ಬನೆ. ಹೊತ್ತು ಮುಳುಗಿತು. “ಕತ್ತಲೆಯಾಯ್ತು. ನಾವ್ಹೇಗಾದ್ರೂ ನಿಮ್ಮೂರ್ಮೇಲೆ ಹೋಗ್ಬೇಕು. ಬಂಡೀಲ್ಬೇಕಾದಷ್ಟು ಸ್ಥಳ ಇದೆ. ಬನ್ರೀ” ಅಂದ ಗೌರಣ್ಣ. ರೋಗಿ ಬಯಸಿದ್ದೂ ಹಾಲನ್ನ, ವೈದ್ಯ ಹೇಳಿದ್ದೂ ಹಾಲನ್ನ. ಬಸಪ್ಪನನ್ನೊಪ್ಪಸುವುದಕ್ಕೆ ಬಲವಂತ ಬೇಕೆ?

ದಾರಿಯುದ್ದಕ್ಕೂ ಆ ಮಾತು, ಈ ಮಾತು ಆಡುತ್ತಾ ಎತ್ತುಗಳನ್ನು ಹೋದಹಾಗೆ ಬಿಟ್ಟ ಗೌರಣ್ಣ. ಸರಿ, ಕಾರೇಹಳ್ಳಿಗೆ ಬರುವ ಹೊತ್ತಿಗೆ ಹೊತ್ತು ಎಂಟು ಘಂಟೆಯಾಯಿತು. ರಾತ್ರಿ ನಮ್ಮ ಮನೆಯಲ್ಲಿಯೇ ತಂಗಿದ್ದು ಹೊತ್ತಾರೆ ಎದ್ದು ಊರಿಗೆ ಹೊರಡಬೇಕೆಂದು ಬಸಪ್ಪನ ಬಲಾತ್ಕಾರ. ಗೌರಣ್ಣನಿಗೂ, ಕಾಳುರಾತ್ರಿಯಲ್ಲಿ ಹೆಂಗಸರನ್ನು ಕರೆದುಕೊಂಡು ಮುಂದಕ್ಕೆ ಪ್ರಯಾಣ ಮಾಡುವುದು ಯುಕ್ತವಲ್ಲವೆಂದು ತೋರಿತು.

ಬಸಪ್ಪನಿಗೆ ಹತ್ತಿಹೊಂದಿದವರಾದರೂ ಇಲ್ಲ. ಮನೆಯಲ್ಲಿರುವುದು ತಾಯಿ ಮಗ ಇಬ್ಬರೆ. ಸೂರಕ್ಕನಿಗೆ ತಾಯಿ ಕಡೆಯಿಂದ ಬಂದ ಆಸ್ತಿ ಇವರಿಗೆ ಉಂಡುಡುವುದಕ್ಕೆ ತಾಪತ್ರಯವಿಲ್ಲದಷ್ಟಿದ್ದಿತು. ಬಸಪ್ಪನೂ ಸಾಗುವಳಿಯಿಂದ ಸಂಸಾರ ಸಾಗುವಷ್ಟು ಗಳಿಸುತ್ತಿದ್ದ. ಸೂರಕ್ಕನ ಸ್ವಭಾವವು ಸಕ್ಕರೆಯಂತಹದು. ಆಕೆಗೆ ಮಗನೆಂದರೆ ಪಂಚಪ್ರಾಣ. ಅವನೂ ಸದ್ಗುಣಿ. ಯಾವ ವಿಧವಾದ ದುರ್ವ್ಯಸನಗಳೂ ಇಲ್ಲ. ಸ್ವಲ್ಪ ಓದುಬರಹವೂ ಬರುವುದು. ಒಂಭತ್ತನೆಯ ಕ್ಲಾಸಿನವರೆಗೂ ಓದಿದ್ದ. ಅವನಿಗೆ ಶಾಲೆಯಲ್ಲಿ ಓದುತ್ತಿರುವಾಗ ಎಲ್ಲಕ್ಕಿಂತಲೂ ಹಿಂದೂದೇಶದ ಚರಿತ್ರೆಯೆಂದರೆ ತುಂಬಾ ಇಷ್ಟ. ಅದರಲ್ಲೂ ಶಿವಾಜಿಯ ಚರಿತ್ರೆಯನ್ನೂ ಓದುವುದಕ್ಕೆ ಕುಳಿತನೆಂದರೆ ಅನ್ನನೀರನ್ನೂ ಮರೆತು ಬಿಡುವನು. ಈಗಲೂ ಇವನೋದದ ಶಿವಾಜಿಯ ವಿಷಯವಾಗಿ ಬರೆದ ಐತಿಹಾಸಿಕ ಕಾದಂಬರಿಗಳೊಂದೂ ಉಳಿದಿಲ್ಲ. ಎಲ್ಲರೂ ಸಾಮಾನ್ಯವಾಗಿ ಕಾದಂಬರಿಗನ್ನೊಂದು ಸಲ ಓದುತ್ತಾರೆ. ಇವನದರೂ ಆ ಕಾದಂಬರಿಗಳನ್ನೆಷ್ಟು ಸಲ ಓದಿದ್ದಾನೋ, ಲೆಕ್ಕವಿಲ್ಲ. ಇನ್ನೂ ಅವನ್ನೋದುತ್ತಾನೆ. ಸೂರಕ್ಕನಿಗೆ ಓದುಬರಹ ಒಂದೂ ಬಾರದು. ಆಕೆಗಿರುವುದೊಂದೇ ಕೊರತೆ “ಮಗನಿಗೆ ಓದಿನ ಹುಚ್ಚ್ಯಾವಾಗ ಬಿಟ್ಟೀತು. ಸಂಸಾರದ ಹಚ್ಚ್ಯಾವಾಗ ಹಿಡಿದೀತು. ಮೊಮ್ಮಗನನ್ನ್ಯಾವಾಗ ಕಂಡೇನು? ಎಂದು ನೆರೆಮನೆಯ ಹೆಂಗಸರಿಗೆ ಹೇಳಿಕೊಂಡು ಉಸುರ್ಗರೆಯುತ್ತಿದ್ದಳು.

ಸೂರಕ್ಕನು ಮಗನ ದಾರಿಯನ್ನೆದುರುನೋಡುತ್ತಾ, ನಡುಮನೆಯಲ್ಲಿ ದೀಪವನ್ನಿಟ್ಟುಕೊಂಡು ಬೇಳೆಯನ್ನಾರಿಸುತ್ತಾ ಕುಳಿತಿದ್ದನು. ಮನೆಯ ಮುಂದೆ ಬಂಡಿ ನಿಂತಿದ್ದುದನ್ನು ನೋಡಿ ಯಾರಿರಬಹುದೆಂದು ಹಾಗೆ ಬಗ್ಗಿ ನೋಡುವುದರೊಳಗೆ ಬಸಪ್ಪನು ಬಂಡಿಯಿಂದಿಳಿದು ಬಂದು, “ಅಮ್ಮ, ದೀಪ ತೊಗೊಂಡ್ಬಾ” ಎಂದು ಕೂಗಿದನು. ಸೂರಕ್ಕನು ಯಾರೋ ಗಂಡಸರು ಬಂದರಿಬೇಕೆಂದು ದೀಪವನ್ನು ತಂದು ಜಗುಲಿಯ ಮೇಲಿಟ್ಟು ಒಳಬಾಗಿಲಲ್ಲಿ ಹೋಗಿ ನಿಂತಳು. ಪಾರ್ವತಮ್ಮ, ನೀಲಮ್ಮ ಬಂಡಿಯಿಂದಿಳಿದು ಬಂದರು. ಬಸಪ್ಪನು ತಾಯಿಗೆ “ಅವರನ್ನು ಒಳಗೆ ಕರೆದುಕೊಂಡು ಹೋಗಮ್ಮ”ಎಂದ.

ಸೂರಕ್ಕ ಒಳಗೆ ಕರೆದೊಯ್ದು ಆದರಿಸಿ ಕೂಡಿಸಿದಳು. ಹೊತ್ತಾಗಿದ್ದುದರಿಂದ ನೀರಿನ ಮನೆಗೆ ಕರೆದುಕೊಂಡು ಹೋಗಿ ಅವರು ಕೈಕಾಲು ತೊಳೆದುಕೊಂಡ ಮೇಲೆ ಅಡುಗೆಯ ಮನೆಯಲ್ಲಿ ಚಾಪೆಹಾಕಿ ಅವರನ್ನು ಕೂಡಿಸಿ ತಾನು ಊಟದ ಸಿದ್ಧತೆ ಮಾಡತೊಡಗಿದಳು.

ಬೆಳಿಗ್ಗೆ ಹಬ್ಬದ ಊಟ. ಹುಳಿ, ಸಾರು, ಪಲ್ಯ ಮುಂತಾದ ಸಾಧಕಗಳು ಉಳಿದಿದ್ದುವು. ಬೇಗ ಒಂದು ಅನ್ನ ಮಾಡಿ ಬಂದವರಿಗೆ ಬಡಿಸಿದಳು. ಊಟವಾದ ಮೇಲೆ ಗೌರಣ್ಣ, ಬಸಪ್ಪ ಎಲೆ ಅಡಕೆ ಹಾಕಿಕೊಳ್ಳುತ್ತಾ ಹೊರಗಿನ ಪಡಸಾಲೆಯಲ್ಲಿ ಕುಳಿತಿದ್ದರು.

ಸೂರಕ್ಕನು ಬೇಗ ಊಟದ ಶಾಸ್ತ್ರ ಮುಗಿಸಿಕೊಂಡು ಪಾರ್ವತಮ್ಮನ ಜೊತೇಲಿ ಮಾತಾಡುತ್ತಾ ಕುಳಿತರು. ಪಾಪ ಅವರಿಗಿನ್ನೂ ಬಂದ ಅತಿಥಿಗಳೊಡನೆ ಮಾತಾಡುವುದಕ್ಕವಕಾಶವೇ ದೊರೆತಿರಲಿಲ್ಲ.

ಇಬ್ಬರು ಹೆಂಗಸರು ಕಲೆತರೆ ಸರಿ. ಮೊದಲು ಬರುವುದು ಮದುವೆ ಮಾತು. ಅದರಲ್ಲೂ ಸೂರಕ್ಕನಿಗೆ ಬೆಳೆದ ಹಣ್ಣಿನಲ್ಲಿ ಇಲ್ಲದ ಕುತೂಹಲ.

ಸೂರಕ್ಕ:ಏನಮ್ಮಾ, ಮಗಳು ಮದುವೆಗಾಗಿದ್ದಾಳೆ. ವರ ಗೊತ್ತಾಗಿದೆಯೇ?”

ಪಾರ್ವತಮ್ಮ: “ಇಲ್ಲಮ್ಮ, ಈಗಿನ ಕಾಲದಲ್ಲೊಂದು ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದ ಹಾಗೆ. ವರ ಸಿಗುವುದೊಂದು ಮಹಾ ಗಂಡಾಂತರವಾಗಿದೆ. ನಮ್ಮವರಿಗಂತೂ ಯಾವ ವರ ಬಂದರೂ ಸರಿಬೀಳುವುದಿಲ್ಲ. ವಿದ್ಯಾವಂತ ಅಳಿಯ ಬೇಕಂತೆ.”

ಸೂರಕ್ಕ: “ಏನೋ, ಕಂಕಣಬಂಧನ ಕಾಲ ಕಲೆತು ಬರಬೇಕಲ್ಲ ಸಮಯ ಬಂದರೆ ಎಲ್ಲಾ ಸಿದ್ಧಿಸುತ್ತೆ”

ಮಾತು ಮುಗಿಯುವ ಹೊತ್ತಿಗೆ ಘಂಟೆ ಹನ್ನೊಂದಾಯಿತು. ಮರುದಿನ ಬೇಗ ಹೊರಡಬೇಕಾಗಿದ್ದುದರಿಂದ ಎಲ್ಲರೂ ಮಲಗಿಕೊಂಡರು.

ಸೂರಕ್ಕನು ಮನಸ್ಸಿನಲ್ಲಿ ಮಗ ಒಪ್ಪಿದರೆ ನೀಲಮ್ಮನನ್ನೇ ಮನೆಗೆ ಕರೆತರಬೇಕೆಂದು ಅಂದುಕೊಂಡರು.

ನಸುಕಿನಲ್ಲಿಯೇ ಎದ್ದು ಗೌರಣ್ಣ, ಪಾರ್ವತಮ್ಮ, ನೀಲಮ್ಮನು ಊರಿಗೆ ಹೊರಟರು. ಬೆಳೆದ ಹುಡುಗಿ ಮನೆಯಲ್ಲಿರುವುದು ತಂದೆ ತಾಯಿಗಳಿಗೊಂದು ಎದೆಯ ಮೇಲೆ ಕಲ್ಲನ್ನು ಹೊತ್ತ ಹಾಗೆ. ಹೆಣ್ಣು ಗಂಡಿನ ಕಡೆಯವರಿಬ್ಬರೂ ಒಪ್ಪಿದ ಮೇಲೆ ತಡವೇತರದು? ಇಬ್ಬರ ಜಾತಕವನ್ನೂ ನೋಡಿದ್ದಾಯಿತು. ಎಲ್ಲ ಕಲೆತು ಬಂದು ಶ್ರಾವಣದಲ್ಲಿ ವಿವಾಹವೂ ನಡೆಯಿತು. ನಿಷೇಕವೂ ಆಯಿತು. ಹುಡುಗಿಯು ಬೆಳೆದಿರುವಾಗ ಆಲಸ್ಯವೇಕೆ? ಬಸಪ್ಪನಿಗೆ ಮೆಚ್ಚಿನ ಮಡದಿಯೂ, ಸೂರಕ್ಕನಿಗೂ ಮುದ್ದಿನ ಸೊಸೆಯೂ ಬಂದಳು.

ಪ್ರೌಢ ದಾಂಪತ್ಯದ ಫಲಕ್ಕೆ ವಿಳಂಬವೆ? ಸೂರಕ್ಕನಿಗಂತೂ ಹಿಡಿಸಲಾರದಷ್ಟು ಸಂತೋಷ. ಎಲ್ಲವೂ ಸಾಂಗವಾಯಿತು. ಪುತ್ರೋತ್ಸಾವವೂ ಆಯಿತು. ಆದರೆ ಸಂಸಾರದಲ್ಲಿ ಸುಖವನ್ನು ಮಾತ್ರ ಕಂಡ ಪುಣ್ಯಾತ್ಮರುಂಟೆ! ಅದೂ ಅಲ್ಲದೆ ಒಂದು ವೇಳೆ ಯಾವಾಗಲೂ ಸುಖವಿದ್ದರೆ ಜನರಿಗೆ ಬದುಕಿನಲ್ಲಿ ಬೇಸರವುಂಟಾಗುವುದು. ಪ್ರಸಿದ್ಧ ಆಂಗ್ಲೇಯ ಲೇಖಕನಾದ ಆಲ್ಡನ್ ಹೇಳಿದ ಮಾತೇನೂ ಸುಳ್ಳಲ್ಲ. “Life is worry, worry is life. without worry a person is half dead.” ಚಿಂತೆಯಿಲ್ಲದ ಜೀವನ ಮಾರ್ಧುಯವಿಲ್ಲದೆ ಮಾಗಿದ ಹಣ್ಣಿನಂತೆ. ಇದು ಸೃಷ್ಟಿಯ ನಿಯಮ. ಇದಕ್ಕೆ ಹೊರಗಾದ ಮಾನವನುಂಟೆ?

ಹೆತ್ತ ಮೂರನೆಯ ದಿನ ನೀಲಮ್ಮನಿಗೆ ಸ್ವಲ್ಪ ಮೈಕಾವಾಯಿತು. ಒಡನೆ ವೈದ್ಯರನ್ನು ಕರೆಯಿಸಿ ನೋಡಿಸಿದರು. ಬಸಪ್ಪನಾಗಲೀ, ಸೂರಕ್ಕನಾಗಲೀ ಔಷಧ ಪಥ್ಯಗಳಿಗೇನೂ ಕೊರತೆಮಾಡಲಿಲ್ಲ. ಆದರೆ ದೈವ ಸಂಕಲ್ಪವನ್ನು ತಡೆಯುವುದಕ್ಕಾದೀತೆ! ನೀಲಮ್ಮನ ಜ್ವರವು ಹೆಚ್ಚಾಯಿತು. ಒಂದಕ್ಕೊಂದು ಬೆಳೆದು, ರೋಗವು ಬಲಿತು ಎಲ್ಲರಿಗೂ ಎಲ್ಲರೂ ನೀಲಮ್ಮನ ಆಶೆಯನ್ನು ಬಿಟ್ಟರು ಒಂಭತ್ತನೆಯ ದಿನ ನೀಲಮ್ಮನು ಮುಚ್ಚಿದ ಕಣ್ಣು ತೆಗೆಯಲಿಲ್ಲ. ಮೈ ಮೇಲೆ ಎಚ್ಚರವಿರಲಿಲ್ಲ. ಹುಚ್ಚಾಬಟ್ಟೆ ಬಡಬಡಿಸುವುದು, ರಾತ್ರಿ ಒಂದು ಘಂಟೆಗೆ ಕಣ್ಣುಬಿಟ್ಟು ನೋಡಿದಳು. ಸ್ವಲ್ಪ ಪ್ರಜ್ಞೆ ಬಂದಹಾಗಿತ್ತು. ಹೆತ್ತ ತಾಯಿಗಿಂತ ಹೆಚ್ಚಾಗಿ ಸೂರಕ್ಕ ರಾತ್ರಿ ಹಗಲು ರೋಗಿಯ ಶೂಶ್ರೂಷೆ ಮಾಡುತ್ತಿದ್ದಳು. ನೀಲಮ್ಮನಿಗೆ ಸ್ವಲ್ಪ ಗೆಲುವಾಗಿದ್ದುದನ್ನು ನೋಡಿ, ಸೂರಕ್ಕ,

“ನೀಲಾ, ಏನಮ್ಮ ನಾನಾರು? ಗುರ್ತು ಸಿಕ್ಕಿತೇ” ಎಂದಳು.

ನೀಲಮ್ಮ: “ಅತ್ತೆಮ್ಮ”…. ಸ್ವಲ್ಪ ಹೊತ್ತು ಹಾಗೆ ನೋಡುತ್ತಾ “ಅವರೆಲ್ಲಿ?”

ಸೂರಕ್ಕ: “ಇಲ್ಲಿಯೇ ಇದ್ದಾನೆ. ಕರೆಯಲೆ?”

ನೀಲಮ್ಮನು ‘ಹೂಂ’ ಎಂದು ತಲೆಯಲ್ಲಾಡಿಸಿದಳು. ಸೂರಕ್ಕನು ಬಸಪ್ಪನನ್ನು ಕರೆದು, ಸ್ವಲ್ಪ ಹಾಲನ್ನು ಬಿಸಿ ಮಾಡಿ ತರೋಣವೆಂದು ಅಡಿಗೆಯ ಮನೆಗೆ ಹೋದಳು.

ಬಸಪ್ಪನು ಬಗ್ಗಿ ನೀಲೆಯ ತಲೆಯನ್ನು ಸವರುತ್ತಾ “ನೀಲಾ, ಏನು” ಎಂದು ಗದ್ಗದಕಂಠದಲ್ಲಿ ಕೇಳಿದನು.

ನೀಲಮ್ಮ: “ಅಯ್ಯೋ, ಅಳಬೇಡಿ, ನೀವು…. ಕಣ್ಣೀರು ಬಿ…ಡುವಷ್ಟು ಯೋಗ್ಯವಾದ ವಸ್ತು…ನಾನಲ್ಲ. ನಾನು ಮಹಾ…. ಪಾಪಿ…. ಕೊನೆಯ ಕಾಲದಲ್ಲಿ ನಿಮ್ಮ ಕ್ಷಮೆಯನ್ನು ಬೇಡು…ತ್ತೇನೆ. ಇಲ್ಲದಿದ್ದರೆ…. ನನಗೆ…. ನರಕದಲ್ಲೂ, ಸ್ಥಳ ದೊರಕದು…. ಅ..ಮ್ಮಾ…ನೀರು…”

ಬಸಪ್ಪನು ಎರಡು ಚಮಚೆ ಹಾಲನ್ನು ಬಾಯಲ್ಲಿ ಬಿಟ್ಟ. ಹಾಗೆ ಅವಳ ಕೈಯನ್ನು ಹಿಡಿದುಕೊಂಡು ನೆಲದ ಮೇಲೆ ಮಂಡೆಗಾಲೂರಿ ಕುಳಿತು, ಮೆಲ್ಲಗೆ ಸವರುತ್ತಾ, “ಮಾತಾಡಿ ಆಯಾಸ ಮಾಡಿಕೋಬೇಡ ನೀಲೂ, ಈಗ ನಿದ್ರೆ ಮಾಡು. ನಾಳೆ ಎಲ್ಲಾ ಹೇಳುವಂತೆ.”

“ಅಯ್ಯೋ ನಾಳೆಯಂ… ತೆ… ನಿಮ್ಗೊಂದು… ಹುಚ್ಚು.” ಅವನ ಕೈಯನ್ನೊತ್ತಿ, “ಮಗು… ನಿಮ್ಮದ… ಲ್ಲಾ. ಕ್ಷಮಿ…ಸುವಿರಾ” ಧ್ವನಿಯು ಮೊದಲೆ ಕ್ಷೀಣ. ಆಯಾಸದಿಂದ ಮಾತೇ ಹೊರಡಲೊಲ್ಲದು. ಬಸಪ್ಪ ಇನ್ನೂ ಬಗ್ಗಿದ. “ಮಗುವಿನ ಹೆಸರ…. ಶಿವ…”

ಮುಂದೆ ನಾಲಿಗೆ ನಿಂತುಹೋಯಿತು. ಬಾಯಾಡಲಿಲ್ಲ. ಕಣ್ಣು ಮುಚ್ಚಿದುವು. ಪುನಃ ತೆಗೆಯಲಿಲ್ಲ.

ಮಾನವ ಸ್ವಭಾವದ ಮರ್ಮವನ್ನರಿತ ಮೇಧಾವಿಗಳುಂಟೆ! ಪಾಶ್ಚಾತ್ಯ ದೇಶಗಳಿಗೆ ಹೋಗಿ ಮನಃಶಾಸ್ತ್ರ (Psychology) ವನ್ನು ಪರಿಶೋಧಿಸಿ ಬಂದಿರುವ ಪಂಡಿತರೆಲ್ಲಾ, ಮನಃಶಾಸ್ತ್ರವು ತೋಡಿದಷ್ಟೂ ಆಳವಿದೆ ಎಂದು ಹೇಳುತ್ತಾರೆ.

ಹೆಂಡಿತಿಯ ಮರಣಾನಂತರ ಬಸಪ್ಪನು ಮೊದಲಿನ ಬಸಪ್ಪನಲ್ಲ. ಯಾರನ್ನಿವನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದನೋ, ಅವಳು ಕುಲಟೆ, ವ್ಯಭಿಚಾರಿಣಿ, ಮೋಸಗಾರ್ತಿ. ಅವನಿಗೆ ಮಂಕು ಹಿಡಿದಂತಾಯಿತು. ಯಾವ ಭಾವನೆಯ ಪ್ರಜ್ಞೆಯೂ ಇರಲಿಲ್ಲ. ಪ್ರಾಪಂಚಿಕ ವ್ಯವಹಾರದಲ್ಲಾವುದರಲ್ಲಿಯೂ ಅವನಿಗೆ ರುಚಿ ಇಲ್ಲ. ಮಗುವಿನ ಮೇಲೆ ಪ್ರೇಮವೂ ಇಲ್ಲ. ದ್ವೇಷವೂ ಇಲ್ಲ. ಯಾವಾಗಲಾದರೂ “ಪಾಪ ಅದೇನು ಮಾಡೀತು” ಎಂದು ಕನಿಕರಪಡುವನು.

ಸೂರಕ್ಕನು “ಇನ್ನೊಂದು ಮದುವೆ ಮಾಡಿಕೊ, ನನಗೆ ವಯಸ್ಸಾಯಿತು. ಮಗುವನ್ನು ನೋಡಿಕೊಳ್ಳುವುದಕ್ಕಾದರೂ ಯಾರಾದರೂ ಬೇಡವೆ?” ಎಂದು ಪೀಡಿಸುವಳು. ಇವನದಾವುದಕ್ಕೂ ಕಿವಿಗೊಡನು. ಇವನಿಗೆ ಸಂಸಾರದಲ್ಲಿ ಉತ್ಸಾಹವಿಲ್ಲ. ಸ್ತ್ರೀಸಂಪರ್ಕದಲ್ಲಿ ಲಾಲಸೆ ಇಲ್ಲ, ಜೀವಿತದಲ್ಲೆ ಬೇಸರ.

ಹೀಗೆಯೇ ಮೂರು ವರ್ಷಗಳಾದುವು. ಅವನ ಜಡವಾದ ಮನಸ್ಸು ಸ್ವಲ್ಪ ಚಲಿಸತೊಡಗಿತು. ಇತ್ತೀಚೆಗೆ ನೀಲೆಯಾಡಿದ ಕೊನೆಯ ಮಾತುಗಳು ಇವನನ್ನು ಪದೇ ಪದೇ ಪೀಡಿಸುವುವು. ಇದುವರೆಗಿದ್ದ ಉದಾಸೀನತೆಯು ಈಗಿಲ್ಲ. ಇವನನ್ನು ಈಗ ಅಹರ್ನಿಶೆಯು ದಹಿಸುತ್ತಿದ್ದುದೊಂದೇ ಒಂದು ಯೋಚನೆ. ಬಾಲೆಯಾದ ನೀಲೆಯ ಹೃದಯವನ್ನು ಚೋರಿಸಿದವನನ್ನು ಕಂಡುಹಿಡಿಯಬೇಕೆಂಬ ಕುತೂಹಲ. ಆ ಕುತೂಹಲದಲ್ಲಿ ದ್ವೇಷವಿಲ್ಲ. ಈರ್ಷೆ ಇಲ್ಲ. ಕಂಡುಹಿಡಿದ ಮೇಲೆ ಏನು ಮಾಡಬೇಕೆಂಬ ಊಹೆ ಇಲ್ಲ. ಅವನ ಮನಸ್ಸು ಈ ರೀತಿಯಾದ ಯೋಚನಾತರಂಗಗಳಲ್ಲಿ ಹೊಯ್ದಾಡುತ್ತಿರುವ ಸಮಯಕ್ಕೆ ಸರಿಯಾಗಿ ಗೌರಣ್ಣನ ಕಡೆಯಿಂದ ಒಂದು ದಿನ ಕಾಗದ ಬಂದಿತು.

“ಮಗಳೇನೋ ತೀರಿ ಹೋದಳು. ಅತ್ತೂ ಫಲವಿಲ್ಲ. ಹೇಗಾದರೂ ಮೊಮ್ಮಗನನ್ನೊಂದು ಸಲ ಕರೆತಂದು ಬೆಟ್ಟಿಕೊಡಿಸಿ”ರೆಂದು. ಬಸಪ್ಪನು ಮಗುವನ್ನೆತ್ತಿಕೊಂಡು ಮಾರನೇ ದಿನವೇ ಕಂತೀಹಳ್ಳಿಗೆ ಬಂದನು.

ಪಾಪ ಗೌರಣ್ಣ-ಪಾರ್ವತಮ್ಮನದು ಬೇಡಾದ ಬಾಳು. “ಇದ್ದೊಬ್ಬ ಮಗಳು ಕಾಲವಾದಳು. ಮಗುವನ್ನಾದರೂ ನೋಡಿ ಕಾಲ ಹಾಕುತ್ತೇವೆ. ಇಲ್ಲೇ ಬಿಟ್ಟು ಹೋಗಿ” ಎಂದು ಪರಿಪರಿಯಾಗಿ ಬೇಡಿಕೊಂಡನು.

ಬಸಪ್ಪನು ಒಪ್ಪಲಿಲ್ಲ. ಈಗವನಿಗೆ ಮಗುವಿನ ಮೇಲೆ ಇಲ್ಲದ ಅಭಿಮಾನ. ಅದು ಪ್ರೇಮಸ್ವರೂಪವೇ, ದ್ವೇಷದ ಬೀಜವೋ ಹೇಳಲಾಗದು, ಅವನು ಮಗುವನ್ನು ಬಿಟ್ಟು ಕ್ಷಣ ಇರಲಾರ.

ಪಾಪ ಮುದುಕರಿಗೆ ಇನ್ನೆರಡು ದಿನವಾದರೂ ಮೊಮ್ಮಗನನ್ನಿಟ್ಟುಕೊಂಡಿರಬೇಕೆಂದಾಸೆ. ಆ ಊರ ಜಹಗೀರದಾರರ ಮಗ ಸೀಮೆಗೆ ವಿದ್ಯಾಭ್ಯಾಸಕ್ಕೆ ಹೋಗಿ ತಿರುಗಿ ಬರುತ್ತಿದ್ದನು. ಹಳ್ಳಿ ಜನರು ಒಳ್ಳೆ ಸಂಭ್ರಮದಿಂದ ಅವನನ್ನು ಬರಮಾಡಿಕೊಳ್ಳಬೇಕೆಂದು ಆಡಂಬರದಿಂದ ಸಲಕರಣೆ ಮಾಡುತ್ತಿದ್ದರು. ಗೌರಣ್ಣನು ಈ ಉತ್ಸವವನ್ನು ನೋಡಿಕೊಂಡು ಹೋಗುವಂತೆ ಅಳಿಯನನ್ನು ಪ್ರಾರ್ಥಿಸಲು ಕೊನೆಗೆ ಬಸಪ್ಪನು ಒಪ್ಪಿಕೊಂಡನು.

ಮಾತಿಗೆ ಮಾತು ಬಂದು ಬಸಪ್ಪನು, ಜಹಗೀರದಾರನ ಮಗನ ವಿಷಯವಾಗಿ ಗೌರಣ್ಣನನ್ನು ಪ್ರಶ್ನಿಸತೊಡಗಿದನು. ಹುಡುಗನು ಬಹಳ ಸಭ್ಯನೆಂದೂ ನೀಲಮ್ಮನೂ ಅವನೂ ಒಂದೇ ಕಡೆ ಅಡಿ ಬೆಳೆದವರೆಂದೂ, ದೊಡ್ಡವರ ಮಗನಾದರೂ ಜಂಬವಿಲ್ಲದೆ ತಮ್ಮ ಮನೆಗೆ ಬಂದು ಹೋಗುತ್ತಾ ತುಂಬಾ ಸಲಿಗೆಯಿಂದಿದ್ದನೆಂದೂ ಗೌರಣ್ಣನು ಹುಡುಗನ ಗುಣಗಳನ್ನು ವರ್ಣಿಸಿ ಹೇಳಿದನು.

ಬಸಪ್ಪ “ಅವರ ಹೆಸರೇನು?”

ಗೌರಣ್ಣ: “ಸದಾಶಿವರಾಯ. ಆದರೆ ನಾವೆಲ್ಲಾ ಶಿವಪ್ಪನೆಂದು ಕರೆಯುತ್ತೇವೆ.” ಬಸಪ್ಪನಿಗೆ ಮಿಂಚಿನಂತೆ ಒಂದರಕ್ಷಣದಲ್ಲಿ ಹೊಳೆಯಿತು. ಸಾಯುವಾಗ ನೀಲೆಯು ಮಗುವಿಗೆ ‘ಶಿವಪ್ಪ’ನೆಂದು ಹೆಸರಿಡಬೇಕೆಂದು ಕೋರಿದುದರರ್ಥ.

ಒಂದು ಚಿಕ್ಕ ಹಳ್ಳಿಯಲ್ಲಿ ಜಹಗೀರದಾರನೆಂದರೆ ರಾಜನಿದ್ದ ಹಾಗೆ. ಅದರಲ್ಲೂ ಸೀಮೆಗೆ ಹೋಗಿ ಬರುವನೆಂದರೆ ಕೇಳಬೇಕಾದ್ದೇನು? ಅವರ ಮನೆಮುಂದೆ ಹಳ್ಳಿಯವರೆಲ್ಲ ಕಲೆತು, ಮಾವಿನ ಎಲೆಗಳಿಂದಲೂ, ಬಾಳೆಯ ಕಂಬಗಳಿಂದಲೂ ಅಲಂಕಾರ ಮಾಡಿದ್ದರು. ಹಳ್ಳಿಯ ಜನರೆಲ್ಲರೂ ಅಲ್ಲಿ ನೆರೆದಿದ್ದರು. ಸದಾಶಿವರಾಯನು ಇದಕ್ಕೆಲ್ಲ ಬಹಳ ಸಂತೋಷಪಟ್ಟು ಕೃತಜ್ಞತೆಯಿಂದ ತಲೆಬಾಗಿ ಕೈಮುಗಿದು ಯುಕ್ತವಚನಗಳಿಂದ ಎಲ್ಲರನ್ನೂ ಆದರಿಸಿ ಮನ್ನಿಸಿದನು. ಬಸಪ್ಪನೂ ಈ ಗುಂಪಿನಲ್ಲಿ ಸೇರಿ ಸದಾಶಿವರಾಯನನ್ನು ಎವೆಯಿಕ್ಕದೆ ನೋಡಿದನು. ಅವನ ಭವ್ಯವಾದ ಆಕಾರ, ಸೌಮ್ಯ ರೂಪು, ಶಾಂತವಾದ ಕಳೆಯಿಂದ ಮುಗ್ಧನಾದನು. ವಿಚಿತ್ರವಾದ ಯೋಚನಾತರಂಗಗಳವನ ಹೃದಯವನ್ನು ಅಲ್ಲೋಲಕಲ್ಲೋಲ ಮಾಡತೊಡಗಿದುವು. ತನ್ನ ಮುಂದೆ ನಡೆಯುತ್ತಿರುವುದಾವುದೂ ಅವನ ದೃಷ್ಟಿಗೆ ಗೋಚರಿಸುತ್ತಿರಲಿಲ್ಲ. ಅವನ ಮನೋನಿರ್ಮಿತ ಭಾವನೆಯ ಘಟನೆಗಳಲ್ಲಿಯೇ ಅವನು ಲೀನನಾದನು. ಸದಾಶಿವರಾಯನು ಬಸಪ್ಪನ ಮನೋರಾಜ್ಯದಲ್ಲಿ ಸಾಧಾರಣವಾದ ಒಬ್ಬ ಜಹಗೀರದಾರನ ಮಗನಾಗಿರಲಿಲ್ಲ. ಮರಾಠಾಧಿಪತಿ ಶಿವಛತ್ರಪತಿಯ ವಂಶೋತ್ಪನ್ನನಾದ ರಾಜಪುತ್ರನಾಗಿದ್ದನು. ಬಸಪ್ಪನು ಪುನಃ ಊರಿಗೆ ತಿರುಗಿ ಬಂದ ಮೇಲೂ ಅವನಿಗೆ ಈ ಹುಚ್ಚು ಬಿಡಲಿಲ್ಲ. ನೀಲೆಯು ಅವನಿಗೆ ಈಗ ವ್ಯಭಿಚಾರಿಣಿಯಾಗಿ ಕಾಣಿಸಲಿಲ್ಲ. ತನಗನುರೂಪವಾದ ಪತಿಯನ್ನು ವರಿಸಿದ, ಬಡ ರೈತನ ಹೊಟ್ಟೆಯಲ್ಲಿ ಜನ್ಮವೆತ್ತಿದ ಮಹಾಸ್ವಾಧಿಯಾದಳು. ಅವಳಿಂದ ಹುಟ್ಟಿದ ಮಗು ತನ್ನ ವಂಶವನ್ನುದ್ಧರಿಸುವುದಕ್ಕೆ ಪುನರ್ಜನ್ಮವೆತ್ತಿದ ಶಿವಾಜಿರಾಜ. ಅವನ ಲಾಲನೆ ಪಾಲನೆಯಂತಹ ಸುಫಲವನ್ನು ತನಗೊದಲಿಸಿಕೊಟ್ಟ ಪರಮೇಶ್ವರನನ್ನು ಭಕ್ತಿ ಪೂರ್ವಕವಾಗಿ ನಮಿಸಿದನು. ಶ್ರೀಕೃಷ್ಣನ ಸಾಕುತಂದೆಯಾದ ನಂದನಿಗೂ ತನಗೂ ಇರುವ ಭೇದವೇನೆಂದು ಮನದಲ್ಲಿ ಹಿಗ್ಗುವನು.

ಪಾಪ, ಸೂರಕ್ಕನಿಗಿದು ಯಾವುದೂ ತಿಳಿಯದು. ತಾಯಿ ಇಲ್ಲದ ಮಗುವನ್ನು ಮುದ್ದಿಸು ವುದರಲ್ಲಿವಳಿಗಾವ ಅಗಾಧವೂ ತೋರದು. ಹೆಂಡತಿಯ ಮರಣದಿಂದ ಅನುಭವಶಾಲಿಯೂ, ಲೌಕಿಕ ಜ್ಞಾನಿಯೂ ಆದ ಬಸಪ್ಪನೂ ಹೀಗಾದನೇ, ಎಂದು ಆಡಿಕೊಳ್ಳುವರು ಜನರು.

ಹೀಗೆಯೇ ಒಂದೊಂದಾಗಿ ಹದಿನೈದು ವರ್ಷಗಳಾದುವು. ಬಸಪ್ಪನ ಭ್ರಮೆಯು ಹೆಚ್ಚಾಗುತ್ತಾ ಬಂದಿತೇ ವಿನಾ ಕಮ್ಮಿಯಾಗಲಿಲ್ಲ. ಈ ಮನೋವಿಭ್ರಮಣೆಗಿಂತ ಹೆಚ್ಚಿನ ವಿಭ್ರಮಣೆಯೇನುಂಟು?

ಶಿವಪ್ಪನು ಬೆಳೆದ ಹಾಗೆಲ್ಲಾ ಬಸಪ್ಪನ ಪ್ರತಿಬಿಂಬವೇನೋ, ಎಂಬ ಹಾಗೆ ಕಾಣುತ್ತಿದ್ದನು. ಶಿವಾಜಿಯ ಗುರುತುಗಳಾಗಲಿ? ಸದಾಶಿವರಾಯನ ಹೋಲಿಕೆಯಾಗಲೀ ಅವನಲ್ಲಿ ಕಾಣುತ್ತಿರಲಿಲ್ಲ. ಇದೊಂದು ದೊಡ್ಡ ಯೋಚನೆ ಬಸಪ್ಪನಿಗೆ.

ಒಂದು ಸಲ ಗೌರಣ್ಣ, ಪಾರ್ವತಮ್ಮ ಮೊಮ್ಮಗನನ್ನು ನೋಡಬೇಕೆಂದು ಕಾರೇಹಳ್ಳೀಗೆ ಬಂದು ಅಲ್ಲಿಯೇ ಒಂದು ತಿಂಗಳಿದ್ದರು. ಮಗಳನ್ನು ಕರೆದುಕೊಂಡ ದುಃಖವು ಮಾಸಿತ್ತು. ದುಃಖವನ್ನು ದೂರಮಾಡುವುದಕ್ಕೆ ಕಾಲಕ್ಕಿಂತಲೂ ಮೀರಿದ ಪಥ್ಯವಾವುದು?ಈಗ ಪಾರ್ವತಮ್ಮನು ನೀಲೆಯ ಹೆಸರೆತ್ತಿದೊಡನೆ ಅಳುತ್ತಿರಲಿಲ್ಲ. ನೀಲಮ್ಮನು ಮಗುವಾಗಿರುವಾಗ ಆಡುತ್ತಿದ್ದ ಆಟಪಾಟಗಳನ್ನೂ ಮಾಡುತ್ತಿದ್ದ ಕುಚೇಷ್ಟೆಗಳನ್ನೂ ವರ್ಣಿಸಿ ವರ್ಣಿಸಿ ಹೇಳವಳು. ಅದು ಅವಳಿಗೆ ಒಂದು ವಿಧವಾದ ಸಮಾಧಾನವನ್ನು ಕೊಡುವುದು.

ಮಧ್ಯಾಹ್ನದ ಹೊತ್ತು. ಅದೇ ಊಟವಾಗಿತ್ತು. ಗೌರಣ್ಣ ಪಡಸಾಲೆಯ ಚಾಪೆಯ ಮೇಲೆ ಮಲಗಿದ್ದ. ಹೊತ್ತು ಕಳೆಯುವುದಕ್ಕೆ ಬಸಪ್ಪ ಇಸ್ಪೇಟನ್ನಿಟ್ಟುಕೊಂಡು ತನ್ನಷ್ಟಕ್ಕೆ ತಾನೆ ಪೇಷೆನ್ಸ (patience) ಆಡುತ್ತಿದ್ದ. ಪಾರ್ವತಮ್ಮನೂ, ಸೂರಕ್ಕನೂ ಒಳಮನೆಯಲ್ಲಿ ಕುಳಿತುಕೊಂಡು ಎಲೆ ಹಚ್ಚುತ್ತಿದ್ದರು. ಇಬ್ಬರು ಹೆಂಗಸರು ಕೂತುಕಂಡು ಸುಮ್ಮನೆ ಕೆಲಸಮಾಡುವುದಕ್ಕಾದೀತೆ! ಪಾರ್ವತಮ್ಮನು ನೀಲಮ್ಮನ ಬಾಲ್ಯದ ವಿಷಯಗಳನ್ನೇನೋ ಹೇಳುತ್ತಿದ್ದಳು.

“ನಮ್ಮಮ್ಮನಂತಹ ಕಲ್ಪನಾಶಕ್ತಿಯುಳ್ಳವರ್ಯಾರು ಇಲ್ಲ ಕಣ್ರೀ. ಅವರಿಗೆ ಬಲಹೀನವಾಗಿದ್ದಾಗ ಮತಿಭ್ರಮಣೆಯಾಗುತ್ತಿದ್ದಿತಂತೆ. ಆಗವರು ಏನೇನೋ ಮಾತಾಡ್ತಿದ್ರಂತೆ. ಆಮೇಲ್ಕೆಳಿದ್ರೆ ಅವರ್ಗೇನೂ ಗೊತ್ತಾಗ್ತಿರಲಿಲ್ಲ. ಅಂಥಾವೆ ಚಿನ್ಹೆಗಳು ನಮ್ಮ ನೀಲಮ್ಮನಲ್ಲೂ ಕಂಡ್ಬರ್ತಿದ್ದುವು. ತನ್ಮನೋ ರಾಜ್ಯದಲ್ಲಿರುವಾಗವಳಿಗೇನೂ ಹೊರಗಿನ ಪ್ರಪಂಚಜ್ಞಾನವೇ ಇರ್ತಿರಲಿಲ್ಲ. ಒಮ್ಮೊಮ್ಮೆ ಅವಳಾಡೋ ಮಾತ್ಕೇಳೀ ನಂಗಂತೂ ದಿಗ್ಭ್ರಮೆ ಹಿಡಿದಂತಾಗುತ್ತಿತ್ತು. ಚಿಕ್ಕೋಳಾಗಿದ್ದಾಗ ಅವಳ್ಯಾವಾಗ್ಲೂ ನಮ್ಮೂರ ಜಹಗೀರ್ದಾರರ ಮಗನ್ನೇ ಮದ್ವೇ ಮಾಡ್ಕೋತೀನಿ ಅಂತಿದ್ಲು. ಅವಳ್ಗೇನೂ ತಿಳೀದು, ಹದಿನಾಲ್ಕು ವರ್ಷದ್ಹಡುಗಿಯಾಗಿದ್ರೂ ಅವಳು ಹಾಗೆ ನಂಬಿದ್ಲು. ಅವರು ಸೀಮೇಗೋದೋದಕ್ಹೋದ್ಮೇಲೆ ಕೂಡ ಅವಳಂದುಕೊಂಡಿದ್ಲು, ಅವರ್ಬಂದು ತನ್ನನ್ಮದ್ವೇಯಾಗ್ತಾರೆ ಅಂತ.”

ಹೊರಗೆ ಕೂತಿದ್ದ ಬಸಪ್ಪನಿಗಿದೆಲ್ಲಾ ಕೇಳಿಸಿತು. ಅವನ ಕಣ್ಣೀಗೆ ನಿಚ್ಚಳವಾಯಿತು. ತಲೆಯನ್ನಾವರಿಸಿದ ಮಬ್ಬಾರಿ ಹೋಯಿತು. ನಿಜ ಸಂಗತಿಯು ವಿಶದವಾಯಿತು. ಹೆರಿಡಿಟೀ (Heredity)ವಂಶಪಾರಂಪರ್ಯವಾಗಿ ಬಂದ ಮತಿಭ್ರಮಣೆ ಎಂಬ ರೋಗದ ಪ್ರಭಾವವೆಂತಹುದು! ಪಾಪ, ನೀಲೆಯು ಬಾಲ್ಯದ ಹಗಲುಗನಸುಗಳನ್ನು ಅಂತ್ಯ ಕಾಲದಲ್ಲಿ ನಿಜವೆಂದು ನಂಬಿದಳು. ಆದರೆ ಬಸಪ್ಪನಿಗೆ ಹೆಂಡತಿಯು ನಿಷ್ಕಲಂಕಳೆಂದು ಕೇಳಿದ ಮೇಲೆ ಆನಂದವಾಗುವುದಕ್ಕೆ ಬದಲು ಆಕುಲವುಂಟಾಯಿತು. ಅವನು ಮನಸ್ಸಿನಲ್ಲಿ ಮಾಡಿಕೊಂಡಿದ್ದ ಮಂಡಿಗೆಯೆಲ್ಲ ಸುಟ್ಟು ಬೂದಿಯಾಯಿತು.

ಇದನ್ನು ಹೇಗಾದರೂ ಪೂರಾ ಗೊತ್ತುಹಚ್ಚಬೇಕೆಂದು ಬಸಪ್ಪನು ಗೌರಣ್ಣನೆದ್ದ ಕೂಡಲೆ ಸದಾಶಿವರಾಯನು ಸೀಮೆಗೆ ಹೋದ ಕಾಲವಾವುದೆಂದು ವಿಚಾರಿಸಲು ನೀಲಮ್ಮನ ಮದುವೆಯಾಗುವುದಕ್ಕೆ ಒಂದು ವರ್ಷ ಮುಂಚಿತವಾಗಿ ಎಷ್ಟು ಯೋಚನೆ ಮಾಡಿದರೂ ಬಸಪ್ಪನಿಗೆ ಬಗೆಹರಿಯಲಿಲ್ಲ.

ಬೆಂಗಳೂರಿನಲ್ಲಿದ್ದ, ಮನಃಶಾಸ್ತ್ರಪ್ರವೀಣರಾಗಿ ವಿಲಾಯತಿಯಲ್ಲಿ ವ್ಯಾಸಂಗ ಮಾಡಿ ಅನೇಕ ಪದಕಗಳನ್ನು ಪಡೆದ ಡಾಕ್ಟರ್ ರಾಮರಾಯರ ಹೆಸರು ಕಂತೇಹಳ್ಳಿಗೂ ಹರಡಿತ್ತು. ಬಸಪ್ಪನು ನೋಡಿ ಬರಬೇಕೆಂದು ಹೊರಟ.

ಅವನ ಕಥೆಯನ್ನೆಲ್ಲಾ ಕೇಳಿದ ಮೇಳೆ ರಾಮರಾಯರು ಹಾಗೆ ಸ್ವಲ್ಪ ಹೊತ್ತು ಮೌನವಾಗಿದ್ದರು. ಅನಂತರ ಮೆಲ್ಲಗೆ “ಮನಸ್ಸು ಅತ್ಯಂತ ಖಿನ್ನವಾಗಿರುವಾಗಲೂ, ದೇಹವು ಬಲಹೀನವಾಗಿರುವಾಗಲೂ, ಮತ್ತು ಮೃತ್ಯುಕಾಲದಲ್ಲಿಯೂ, ಜನರು ಮತಿ ಭ್ರಾಂತರಾಗಿ ಹೀಗೆ ಹೇಳುವುದುಂಟು. ಇದಕ್ಕೆ ಇಂಗ್ಲೀಷಿನಲ್ಲಿ (Hallucination)ಎನ್ನುತ್ತಾರೆ. ಅದರಲ್ಲೂ ಅವರು ಯಾವುದನ್ನು ಉತ್ಕಟೇಚ್ಛೆಯಿಂದ ಕೋರುತ್ತಾರೋ, ಅದು ಸಿದ್ಧಿಸಿದ ಹಾಗೆ ಅವರಿಗೆ ಇಂತಹ ಸಂಭವಗಳಲ್ಲಿ ತೋರುವುದು. ನಿಮ್ಮ ಪತ್ನಿಯು ಬಾಲ್ಯಸ್ನೇಹಿತನನ್ನು ಮನಸ್ಸಿನಲ್ಲಿ ಪ್ರೇಮಿಸುತ್ತಿರಬಹುದು. ಆ ಪ್ರೇಮವನ್ನು ಜಾಗರೂಕಾವಸ್ಥೆಯಲ್ಲಿ ಇತರರಿಂದ ಅವರು ಬಚ್ಚಿಟ್ಟಿರಬಹುದು. ಇಂತಹ ಉದಾಹರಣೆಗಳೆಷ್ಟೋ ಇವೆ. ಮಾನವಸ್ವಭಾವವೊಂದು ಯಕ್ಷಿಣಿ ಇದ್ದ ಹಾಗಿದೆ. ಅದರ ಕುಚೋದ್ಯವನ್ನರಿಯವುದು ಬಹಳ ಕಷ್ಟ” ಎಂದರು.

ಬಸಪ್ಪನು ಪೆಚ್ಚು ಮುಖ ಹಾಕಿಕೊಂಡು ಊರಿಗೆ ಬಂದ. ಮಗನು ಜಗುಲಿಯ ಮುಂದೆ ಹಳ್ಳಿಯ ಹುಡುಗರೊಂದಿಗೆ ಆಡುತ್ತಿದ್ದ. ಅವನನ್ನು ನೋಡಿದ ಕೂಡಲೆ ಒತ್ತಿಟ್ಟ ಅವನ ರೋಷವು ಎಲ್ಲೆಮೀರಿತು. ಆವೇಶ ಬಂದವನಂತೆ ಮಗನ ಕಿವಿಯನ್ನು ಹಿಡಿದು ಎಳೆಯುತ್ತಾ

“ಛಿ, ಪಿಶಾಚಿಯೆ, ತೊಲಗು ನನ್ನ ಮುಂದಿರಬೇಡ. ಇಂತಹ ಆಟಗಳೇ ನಿನಗೆ! ಈ ಹಳ್ಳಿಗಾಡರೊಂದಿಗೇಕೆ ಸೇರುತ್ತೀ?”

“ನಾಗರ ಜೊತೆಯಲ್ಲಿ ಸೇರಬೇಕಪ್ಪ ಮತ್ತೆ?”

“ಸದಾಶಿವರಾಯನ ಮಗ ಹೀಗೆಯೇ ಆಡುತ್ತಾನೆ? ಕಾಲೇಜಿನಲ್ಲಿ ಹೋಗಿ ಓದುತ್ತಾನೆ. “

‘ಅವನಿಗೂ ನನಗೂ ಸಂಬಂಧವೇನಪ್ಪ. ಅವನು ದೊಡ್ಡವರ ಮಗ. ಅದಕ್ಕೆ ನಾನೇನು ಮಾಡಲಿ. “

“ಏನು ಮಾಡಲಿ? ಸರ್ವನಾಶಮಾಡಿದೆ!” ಎಂದು ಭರಭರನೆ ಹೊರಟು ಹೋದ. ಹೋಗುತ್ತಾ “ಇವನು ನನ್ನ ಮಗನೆ? ಎಂದಿಗೂ ಇರಲಾರದು. ನನ್ನ ಮಗನೆ?” ಮಗನಲ್ಲಿ ಇವನ ರಚನಾಪ್ರಪಂಚದ ಶಿವಾಜಿರಾಜನ ಮೃತ ಶರೀರ.

ಬಸಪ್ಪನನ್ನಾವರಿಸಿದ್ದುದಿದೆಂತಹ ಯಕ್ಷಿಣಿ ಇರಬೇಕು!

* * *

 

– ಶ್ರೀಮತಿ ಎಸ್. ಕಮಲಾದೇವಿ ಎಂ. ಎ.,
ಜಯಕರ್ನಾಟಕ ಸಂ. ೧೬, ಸಂ. ೧, ೧೯೩೮