ರಮಾ,

ನೀನು ಹೋದಾಗಿನಿಂದ ನನಗೆ ತೀರ ಒಬ್ಬಳೇ ಒಬ್ಬಳಾಗಿರುವಂತೆ ಅನಿಸಹತ್ತಿದೆ. ನೀನು ಇಲ್ಲಿ ಇರುವಾಗ ನಾವು ಎಷ್ಟು ಮೋಜು ಮಾಡಿದೆವು! ವಸಂತ ಮತ್ತು ನಾನು ಹರಟೆಕೊಚ್ಚುವಾಗ ದಿನದಿನವೂ ನಿನ್ನ ನೆನಪು ಮಾಡುತ್ತೇವೆ. ರಮಾ, ಬಹಳ ದಿನಗಳಾದುವು, ನಿನ್ನಲ್ಲಿ ಒಂದು ಸಂಗತಿಯನ್ನು ಕೇಳಬೇಕೆಂದು ಹವಣಿಸುತ್ತಲೇ ಇದ್ದೇನೆ. ಕೇಳಲೇ? ನೀನು ಕೋಪಿಸಿಕೊಳ್ಳಲಿಕ್ಕಿಲ್ಲವಷ್ಟೇ? ಯಾರು ಬಲ್ಲರವ್ವ! ಮದುವೆಯಾದಾಗಿನಿಂದ ನಿನ್ನ ಬಂಣ ಕೊಂಚ ಬದಲಾಗಿದೆ. ನಿಜವಾಗಿ ನೀನು ಮೊದಲಿನ ರಮೆಯಲ್ಲ ನೋಡೀಗ. ನೀನು ಇಲ್ಲಿ ಇದ್ದಾಗ ಮೊದಲಿನಂತೆ ಮನಬಿಚ್ಚಿ ನನ್ನೊಡನೆ ವರ್ತಿಸಿಲಿಲ್ಲ. ನನಗೂ ವಸಂತರಿಗೂ ಸಮಾಧಾನವೆನಿಸಬೇಕೆಂದು ನಮ್ಮ ಹಂಚಿಕೆಗಳಿಗೆ ನೀನು ಕೋರಿಕೆಯ ಒಪ್ಪಿಗೆಯನ್ನು ಕೊಡುತ್ತಿದ್ದಿ. ಕೃಷ್ಣರಾಜ ಸಾಗರ ನೋಡಲಿಕ್ಕೆ ಹೋದಾಗಲೂ ನನ್ನೊಡನೆ ಸಂಕೋಚದಿಂದ ವರ್ತಿಸಿದಿ. ನನಗೇನು ತಿಳಿಯುದಿಲ್ಲವೆಂದು ಕೊಂಡೆಯಾ? ನಿಜವಾಗಿ ವಸಂತರೆಲ್ಲಿಯಾದರೂ ನಿನಗೆ ಮನಕ್ಕೆ ನಾಟುವ ಮಾತನ್ನಾಡಿರಬಹುದೇ ಎಂದು ಅಂಜಿಕೆಯಾಗುತ್ತದೆ. ಹಾಗೆ ಆಡುವ ಸ್ವಭಾವ ಅವರದಲ್ಲ, ಆದರೂ ಇಚ್ಛೆಯಿಲ್ಲದಿದ್ದರೂ ಒಮ್ಮೊಮ್ಮೆ ಬಾಯಿಂದ ಒಂದು ಬಗೆಯ ಮಾತು ಜಾರಿಹೋಗಿ ಬಿಡುತ್ತದೆ. ರಮಾ, ಹೇಳೆ ನೀನು ಇತ್ತೀಚೆಗೆ ಯಾಕೆ ಖಿನ್ನಳಾಗಿ ತೋರುವಿ? ನಿನಗೇನು ಆಗುತ್ತಿದೆ? ನಿನಗೆ ಏನೋ ಮನಸ್ಸು ಕೊರೆಯುತ್ತಿದೆ ಖಂಡಿತ. ನಿನ್ನ ಇಳಿಮೋರೆಯನ್ನು ನೋಡಿ ನನಗೆ ಎಷ್ಟು ಕೆಡುಕೆನಿಸುತ್ತದೆ!ನನಗೆ ಎತ್ತಲೂ ಮನಸ್ಸು ಹತ್ತುತ್ತಿರಲಿಲ್ಲ. ಆದರೆ ವಸಂತರಿಗಾಗಿ ಹೇಗೋ ನಾನು ಕೆಲಸ ಮುಗಿಸುತ್ತಿದ್ದೆ. ರಮಾ, ನಿನ್ನ ದುಃಖವನ್ನು ಹೀಗೇ ಒತ್ತಿಡಬೇಕೆನ್ನುವಿಯಾ? ಇತ್ತೀಚೆಗೆ ನೀನು ಸೊರಗುತ್ತಲೂ ನಡೆದಿರುವೆ! ನನಗೆ ಹೇಳು ನೋಡೋಣ ನಿನಗೇನಾವುದುದೆಂದು. ನಾನು ವಸಂತರ ಸಹಾಯದಿಂದ ಕೂಡ ನಿನ್ನ ದುಃಖವನ್ನು ಇಲ್ಲದಂತೆ. ಮಾಡಲಿಕ್ಕೆ ಸಾಧ್ಯವಿದ್ದಷ್ಟು ಯತ್ನಸುತ್ತೇನೆ. ರಮಾ ನಾನು ಇಂದಿನವರೆಗೆ ಅಚ್ಚ ಅಕ್ಕತಂಗಿಯರಂತೆ ಇದ್ದೆವು. ಚಿಕ್ಕಂದಿನ ಚಿಕ್ಕಂದದ ದಿನಗಳಲ್ಲಿ ನಾನು ಎಲ್ಲದರಲ್ಲಿ ನಿನ್ನ ಪಾಲುಗಾರಳಾಗಿದ್ದೆ. ನಾನು ನಿನ್ನ ನಿಜವಾದ ಪ್ರೀತಿಯ ಗೆಳತಿಯಲ್ಲವೇ? ಅಂದ ಮೇಲೆ ನಿನ್ನ ದುಃಖದ ಪಾಲುಗಾರಳಾಗುವ ಅಧಿಕಾರ ನನಗಿಲ್ಲವೇ? ನೀನು ಖಿನ್ನಳಾಗಿರುವಾಗ ನಾನು ಸಂತೋಷದಿಂದ ಇರುವದು ಹೇಗೆ? ನೀನು ನನ್ನಿಂದ ಏನನ್ನೋ ಮುಚ್ಚಿಡುತ್ತಿರುವಿ. ನಾನು ನಿನಗೆ ಈ ವಿಷಯಕ್ಕೆ ಒಂದು ಸಲ ಕೇಳಿದ್ದೆ. ಅದಕ್ಕೆ “ಅದು ಯಾವಾಗಲೂ ಹಾಗೇ, ಮತ್ತಾವಾಗಲಾದರೂ ಹೇಳುತ್ತೇನೆ” ಎಂದು ಹಾರಿಕೆಯ ಉತ್ತರವನ್ನು ಕೊಟ್ಟಿದ್ದೆ. ಅಥವಾ ಉತ್ತರ ಕೊಡುವುದು ನಿನ್ನ ಜೀವದ ಸುತ್ತು ಬಂದಿರಬಹುದು. ನನ್ನ ಮನಸ್ಸಿನಿಂದ ಅದು ಮರೆಯಾಗದು. ನಾನು ಸುಖದ ಶಿಖರದಲ್ಲಿರುವಾಗ ನೀನು ಕೊರಗುತ್ತಿರುವುದನ್ನು ಹೇಗೆ ನೋಡಲಿ? ವಸಂತರು ಕೂಡ ಒಂದು ದಿನ ಕೇಳುತ್ತಿದ್ದರು. ನಾನೂ ಅವರೂ ನಿನ್ನ ವಿಷಯದಲ್ಲಿ ಏನೇನೋ ಮಾತಾಡುತ್ತಲಿದ್ದೆವು. ನೀನು ಅವರಿಗೆ ಬಹಳ ಸೇರುತ್ತಿಯೆಂದು ಅವರೇ ಸರಳವಾಗಿ ಹೇಳಿದರು. ನಿನ್ನ ಗುಣ, ನಿನ್ನ ವಿಚಾರ, ನಿನ್ನ ನನ್ನ ಪ್ರೇಮ, ಇವುಗಳನ್ನು ಅವರು ಅನುದಿನವೂ ಕೊಂಡಾಡುತ್ತಾರೆ. ಆದರೆ ನೀನು ಈ ವಯಸ್ಸಿನಲ್ಲಿಯೆ ಇಷ್ಟು ಗಂಭೀರೆಯೂ, ವಿಚಾರಿಯೂ ಹೇಗಾದೆಯೆಂಬುದೇ ನಮ್ಮಿಬ್ಬರಿಗೂ ತಿಳಿಯದ ಗುಟ್ಟಾಗಿದೆ. ಹೇಳೆ ನೀನು ಎಷ್ಟು ಯೋಚನಾಪರಳೇಕೆ ಆಗಿರುವಿ? ನಿನ್ನ ಪತಿ ನಿನ್ನನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿರುವರಷ್ಟೆ? ಕೋಪಿಸಬೇಡವ್ವಾ! ನನ್ನ ಮನದಲ್ಲಿ ಇಲ್ಲದ ಸಲ್ಲದ ವಿಚಾರಗಳೆಲ್ಲ ಬರುತ್ತಿವೆ. ಆದ್ದರಿಂದ ಒಂದು ಸಲ ಎಲ್ಲ ಸಂಶಯಗಳ ನಿವಾರಣ ಮಾಡಿಕೊಳ್ಳಬೇಕೆಂದಿದ್ದೇನೆ. ಹೀಗೆಲ್ಲ ಬರೆದುದಕ್ಕೆ ನನ್ನನ್ನು ದೂರಬೇಡ ಆಂ! ನಮ್ಮ ಮೆಚ್ಚಿನವರಿಗೆ ಭಾವೋದ್ರೇಕದಿಂದ ಬರೆಯುವಾಗ ಮೈಮರೆತು ಹೋಗುತ್ತದೆ. ಅದನ್ನು ಯಾರಾದರೂ ಓದಿದರೆ ನಮ್ಮನ್ನು ಹುಚ್ಚರೆನ್ನಬಹುದು ಎಂಬ ಎಚ್ಚರವೂ ಉಳಿಯುವುದಿಲ್ಲ. ಆದ್ದರಿಂದ ಅಂಥದೇನಾದರೂ ನನ್ನಿಂದ ಬರೆಯಲ್ಪಟ್ಟಿದ್ದರೆ ನನ್ನನ್ನು ಕ್ಷಮಿಸು. ನನ್ನೆದುರು ಚೆನ್ನಾಗಿ ಮನಬಿಚ್ಚಿ ಮಾತಾಡು. ನಾನು ಪೂರ್ಣ ನಿನ್ನವಳೇ. ನನ್ನ ಲಗ್ನವಾದುದರಿಂದ ನಾನಿನ್ನು ಬರಿ ವಸಂತರವಳೇ ಎಂದು ನಿನಗೆ ಅನ್ನಿಸುವುದೇಕೆ? ಲಗ್ನವಾದರೆ ಹಿಂದಿನ ಪ್ರೀತಿಯ ಸಂಬಂಧಗಳು ಬಿಚ್ಚಿ ಹೋಗುವುವೇ? ಹೀಗೇನಾದರೂ ನೀನು ತಿಳಿದುಕೊಂಡಿದ್ದರೆ ನನಗೆ ಬಹಳ ಖೇದವೆನಿಸುವುದು. ನಾನು ನಿನ್ನವಳೇ, ಪೂರ್ಣ ನಿನ್ನವಳೇ. ನೀನು ನನ್ನವಳು. ನಿನ್ನ ತಾಯಿ ತೀರಿದಳೆಂದು ನೀನು ಇಷ್ಟು ಕೊರಗುವೆಯಾ? ರಮಾ, ನಾನು ನಿನ್ನನ್ನು ಹೇಗೆ ಸಮಾಧಾನ ಪಡಿಸಲಿ? ಹೌದು ನಿನ್ನ ತಾಯಿಯೆಂದರೆ ಮಮತೆಯ ಮೂರ್ತಿಯೇ ಸೈ. ನನ್ನ ತಾಯಿಯು ಚಿಕ್ಕಂದಿನಲ್ಲಿಯೇ ತೀರಿಕೊಂಡಿದ್ದರೂ ನಾನು ಮಾತೃಪ್ರೇಮದಿಂದ ವಂಚಿತಳಾಗಿರಲಿಲ್ಲ. ನಿನ್ನ ತಾಯಿಯೇ ನನ್ನ ತಾಯಿಯಾಗಿದ್ದಳು. ನೀನಂತೂ ಅವಳ ನೆತ್ತರದಿಂದಲೇ ಹುಟ್ಟಿ ಬೆಳೆದವಳು, ನಿನಗೆ ಸುಖವಾಗಲೆಂದೇ ಅವಳೂ ನಿನ್ನನ್ನು ಸಿರಿವಂತರಾದ I. C. S. ಆದವರ ಮನೆಗೆ, ನೀರಿನಂತೆ ದುಡ್ಡು ವೆಚ್ಚ ಮಾಡಿ ಕೊಟ್ಟಳು….. ಊಹೂಂ ನನ್ನ ಸಂಶಯವೇ ತಪ್ಪು; ತೀರಾ ತಪ್ಪು; ಎಂಥ ಹುಚ್ಚಿಯಂತ ಪ್ರಶ್ನೆ ಕೇಳಿದೆ ನಾನು! ರಮಾ, ಹಾಗಾದರೆ ನಿನಗೆ ಆಗುವುದಾದರೂ ಏನು? ನೀನು ನಿನ್ನ ದುಗುಡವನ್ನು ಮರೆತು ನನ್ನವಳಾಗೆ ರಮಾ. ನೀನು ಇಷ್ಟು ಬೇಗ ನಮ್ಮನ್ನು ಬಿಟ್ಟು ಏಕೆ ಹೊರಟು ಹೋದೆ? ನಿಮ್ಮವರ ಅತ್ತ ಕಡೆಯ ಸೆಳೆತವು ತೀವ್ರವಾಯಿತೆ? ನನಗೆ ಹೇಳಬೇಕೆಂದಿರುವುದನ್ನು ಈಗಲೆ ಹೇಳಿಬಿಡು ನೋಡೋಣ. ಆಗಿನಿಂದ ನನ್ನ ಪ್ರತಿಯೊಂದು ನಿಮಿಷವೂ ಬೇಸರದಿಂದ ತುಂಬಿಹೋಗಿದೆ. ನನಗೆ ಸಮಾಧಾನವೇ ಇಲ್ಲ. ಈಗ ಮಾತ್ರ ಸುಮ್ಮನೆ ಹಾರಿಕೆಯ ಉತ್ತರ ಕೊಡಬೇಡ. ಇಲ್ಲದಿದ್ದರೆ ನಿನ್ನ ಮೇಲೆ ನಾನು ಬಹಳ ಸಿಟ್ಟಿಗೆದ್ದೇನು ನೋಡು!…. ಹೂಂ ನಿನಗೆ ನನ್ನ ಸಿಟ್ಟಿನ ಹಂಗಾದರೂ ಇದೆಯ? ನಿನ್ನ ಉತ್ತರಕ್ಕಾಗಿ ಚಾತಕದಂತೆ ಕಾತರಿಸುತ್ತಿರುವ

ನಿನ್ನವಳೇ
‘ಉಮಾ’

ಉಮಾ,

ನಿನ್ನ ಪತ್ರ ಓದಿದೆ. ಓದಿ ನನ್ನ ಮನಸ್ಸಿಗೆ ಏನು ಅನಿಸಿತೆಂಬುದನ್ನು ಹೇಗೆ ಹೇಳಲಿ? ಇಷ್ಟು ದಿನ ಒತ್ತಿಟ್ಟ ಭಾವನೆಗಳು ಜ್ವಾಲಾಗ್ನಿಯಂತೆ ಒಮ್ಮೆಲೆ ಸ್ಫೋಟವಾದವು. ತಡೆದಿಟ್ಟ ಕಂಬನಿಗಳಿಗೆ ಎಡೆಕೊಟ್ಟು ಒಂದು ಸಲ ನನ್ನಲ್ಲೆ ತುಂಬಾ ಅತ್ತುಬಿಟ್ಟೆ, ಮನಸ್ಸು ಹಗುರಾಯಿತು. ಉಮಾ, ನನಗೆ ಏನು ಕೊರಗು ಹೇಳು ಎಂದು ಕೇಳುತ್ತಿ. ಏನು ಹೇಳಲಿ? ಹೇಗೆ ಹೇಳಲಿ? ಹೋಗಲಿ ಬಿಡು. ನನ್ನ ದುಃಖವನ್ನು ಜಗತ್ತಿಗೆ ಹೇಳಿ ಅಳುವುದರಿಂದೇನು ಪ್ರಯೋಜನ? ಜಗತ್ತು ನನ್ನ ಕೆಸಲಗಳಲ್ಲಿ ತೊಡಗಿ ಬಿಟ್ಟಿದೆ. ಒಬ್ಬ ವ್ಯಕ್ತಿ ಎಲ್ಲಿಯೋ ನಿಟ್ಟುಸಿರಿಡುವುದು. ಸಮಾಜವು ಅದರ ವಿಷಯಕ್ಕೆ ಕುರುಡಾಗಿ ಬಿಡುವುದು. ಉಮಾ, ನಿನಗಾದರೂ ಈ ದುಃಖವನ್ನು ಹೇಳಿ ನಿನ್ನ ಹರುಷದ ಬಾಳಿನಲ್ಲೇಕೆ ಕಹಿ ಬೆರೆಸಲಿ? ಉಮಾ, ನೀನು ನಿನ್ನ ಹಟವನ್ನು ಬಿಡುವುದಿಲ್ಲ. ತಿರುತಿರುಗಿ ಮೂರು ನಾಲ್ಕು ಪತ್ರಗಳನ್ನು ನೀನು ಬರೆದೆ. ನಿನಗೇಕೆ ಸುಮ್ಮನೆ ಹೇಳುವುದು ಎಂದು ಒಂದು ಅನಿಸುವುದು. ಆದರೆ ನಿನ್ನ ಪತ್ರಗಳನ್ನು ಓದಿ ನನ್ನ ಎದೆಯು ಶೋಕದಿಂದ ಉಕ್ಕಿ ಬರುವುದು. ನಿನ್ನೆದುರಾದರು ನನ್ನ ಹೃದಯವನ್ನು ಹಗುರು ಮಾಡಿಕೊಳ್ಳಲೆ! ಉಮಾ, ನಿನಗೆ ಬರೆಯದೆ ಇನ್ನಾರಿಗೆ ಬರೆಯಲಿ? ಉಮಾ, ನನ್ನ ದುಃಖವನ್ನು ನಿವಾರಣೆ ಮಾಡುವೆನೆಂದು ನೀನೆನ್ನುವೆ. ನೀನೊಬ್ಬ ಹುಚ್ಚಿ. ನನ್ನ ದುಗುಡವನ್ನು ನಿನಗೇ ಅಲ್ಲ, ಯಾವ ಅದ್ಭುತ ಶಕ್ತಿಗೂ ಕಡಿಮೆ ಮಾಡುವ ಸಾಮರ್ಥ್ಯವಿಲ್ಲ. ದುರ್ದೈವದ ಬೇಗೆಯಿಂದ ಒರಟಾದ ನನ್ನ ಮನಸ್ಸೇ ಆ ದುಗುಡವನ್ನು ಅರಗಿಸಿಕೊಳ್ಳಬಲ್ಲನು. ಅಲ್ಲೆ ಉಮಾ, ವಸಂತನದು ನಿನ್ನ ಮೇಲೆ ನಿಜವಾಗಿ ಎಷ್ಟು ಪ್ರೇಮವಿದೆಯೇ! ಅವನು ಕಚೇರಿಯಿಂದ ಬರುವುದೇ ತಡ; ಸಂಜೆವರೆಗಿನ ವಿರಹವನ್ನೆಲ್ಲ ನಗೆ, ಹರಟೆ, ಹಾಡುಗಳಿಂದ ಮರೆಸಿಬಿಡುವಿರಿ! ನಿಜವಾಗಿ ಉಮಾ, ನಿನ್ನ ವಿಷಯದಲ್ಲಿ ನನಗೆ ಮತ್ಸರವೆನಿಸುವುದು. ಅಲ್ಲಿ ನೋಡು ಆ ತೋಟದೊಳಗಿನ ಗಂಡು ಹೆಣ್ಣು ಹಕ್ಕಿಗಳು ತಮ್ಮ ಪ್ರಣಯಾನಂದಲ್ಲಿಯೇ ಮುಳುಗಿ ಹೋಗಿವೆ. ಅವುಗಳ ಮೇಲೂ ನನಗೆ ಹೊಟ್ಟೆಕಿಚ್ಚು. ಆ ನೋಟವು ನನಗೆ ಸಹಿಸುವುದಿಲ್ಲ. ನನಗೆ ಕಿಚ್ಚಿನವಳೆಂದು ಬೇಕಾದರೆ ಅನ್ನು. ನನಗೆ ಸಿರಿವಂತರೂ, ಬುದ್ಧಿವಂತರೂ ಆದ ಪತಿ ಸಿಕ್ಕಿರುವರೆಂದೂ ನೀನೆನ್ನುವಿ. ಜನರಿಂದ ಆಯ್. ಸಿ. ಎಸ್‌ರ ಪತ್ನಿ ಎನಿಸಿಕೊಳ್ಳುವುದರಲ್ಲಿ ನನಗೆಷ್ಟು ಮಾನ! ನಿಜವಾಗಿ ಜಗತ್ತಿನ ಕಣ್ಣಲ್ಲಿ ನಾನು ಬಹಳ ಸುಖಿಯೆಂದೇ ಬಹುಶಃ ನನಗೆ ಇಷ್ಟು ದುಃಖವಿರಬಹುದೇ? ಜಗತ್ತಿಗೇನು ಗೊತ್ತು ನನ್ನ ಕೊರಗು? ನನ್ನ ಮೇಲಿನ ನನ್ನ ಪತಿಯ ಪ್ರೇಮವನ್ನು ನೀನು ವಿಚಾರಿಸುವೆ. ನಿಜವಾಗಿ ಅವರದು ನನ್ನ ಮೇಲೆ ಎಷ್ಟು ಪ್ರೇಮವಿತ್ತು! ನೀನು ಹಿಂದೆ ನಮ್ಮಲ್ಲಿ ಇರಲಿಕ್ಕೆ ಬಂದಾಗ ನನ್ನ ಮತ್ತು ಅವರ ಪ್ರೇಮದ ಮೂಲಕವೇ ನಾನು ಮೈಮರೆತು ಹೋದಾಗ ನೀನು ನನಗೆ ಚೇಷ್ಟೆ ಮಾಡುತ್ತಿರಲಿಲ್ಲವೇ? ಹೌದು, ಅದು ನನ್ನ ಜೀವನದ ವಸಂತ ಋತುವಾಗಿತ್ತು. ಅಂತಹ ಸೌಭಾಗ್ಯಯೋಗವು ಜನ್ಮದಲ್ಲಿ ಒಂದೇ ಸಲ ಬರುತ್ತದೆ. ನನ್ನ ಮನಸ್ಸಿನ ನೋವಿನ ಮೇಲೆ ಬರೆ ಕೊಡಲೆಂದೇ, ಆ ಸವಿದಿನಗಳು ಇಂದು ನೆನಪಿಗೆ ಬರುತ್ತಿವೆ! ಆ ದಿನಗಳು ಹೋದವು!

ಉಮಾ, ನಿನಗೆ ಹೇಗೆ ಹೇಳಲಿ? ನನ್ನ ಗಾಡಿ ನಡೆಯದಂತಾಗಿದೆ. ನನ್ನ ಕೈ ಸೋತು ಹೋಗಿದೆ. ನಮ್ಮವರು ಸಿರಿವಂತರಿದ್ದಾರೆ; ಬುದ್ಧಿವಂತರಿದ್ದಾರೆ. ದೊಡ್ಡ ಕೆಲಸದಲ್ಲಿದ್ದಾರೆ. ಅವರು ಸಿರಿವಂತರೂ, ದೊಡ್ಡ ಕೆಲಸದವರೂ ಆದ್ದರಿಂದಲೇ ಅವರಿಂದ ನನ್ನ ಬಾಳುವೆ ಮಣ್ಣುಗೂಡಿದೆ. ಉಮಾ ನನ್ನ ಮೇಲೆ ನನ್ನ ಪತಿಯ ಪ್ರೇಮವಿತ್ತು. ಆದರೆ ಈಗ ಇದೆಯೇ? ಅವರು ಸಿರಿವಂತಿಕೆ ಮತ್ತು ಮಾನವಂತಿಕೆಯಲ್ಲಿ ಮೈಮರೆತಿದ್ದಾರೆ. ಅವರ ಕಣ್ಣಿಗೆ ದೊಡ್ಡಸ್ತಿಕೆಯ ಪರದೆ ಬಂದಿದೆ. ಅದರಿಂದ ಅವರಿಗೆ ಅಣ್ಣತಮ್ಮ, ಅಕ್ಕತಂಗಿ, ಪತ್ನಿ, ಸೇವಕ, ಆಪ್ತರೊಬ್ಬರೂ ಕಾಣದಂತಾಗಿದೆ. ಯಾವಾಗಲೂ ಅವರಿಗೆ ಆ ಸೆರೆಯ ಬಾಟ್ಲಿ, ಆ ಸಿಗರೇಟಿನ ಪೆಟ್ಟಿಗೆಯ ಮೇಲೆ ಲಕ್ಷ್ಯ. ಆ ನಿರ್ಜೀವ ವಸ್ತುಗಳೇ ಅವರಿಗೆ ನನಗಿಂತ ಪ್ರಿಯವಾಗಿವೆ. ಅವರ ಮೈಗೆ ಬರುವ ನಾತ! ಅವರಿಗೆ ಮತ್ತೇರಿತೆಂದರೆ ನನಗೆ ಅವರನ್ನು ನೋಡಿದರೆ ಅಂಜಿಕೆಯಾಗುತ್ತದೆ. ಗಾಬರಿಯಾಗಿ ನಾನು ನನ್ನ ಕೋಟೆಯಲ್ಲಿ ಸೇರಿ ಬಾಗಿಲಿಕ್ಕಿ ಒಳಗಿನಿಂದ ಚಿಲಕ ಹಾಕಿಬಿಡುತ್ತೇನೆ. ಇಡೀ ದಿನ ಕಚೇರಿಯಲ್ಲಿ ದುಡಿದು ಬಂದರೂ ತಮ್ಮ ಗುಂಗಿನಲ್ಲಿಯೇ ಸೈ. ನಾನು ಹೊರಗೆಲ್ಲಿ ಹೋಗಬೇಕಾದರೂ ಕಳವಿನಂದಲೇ. ತಮ್ಮ ಮತ್ತಿನಲ್ಲಿ ಅವರು ಒಂದೊಂದು ಸಲ ಹೊಡೆದೂ ಬಿಡುವರು. ತಮ್ಮ ಹುರುಪಿನಲ್ಲಿ ನನ್ನನ್ನು ಒಮ್ಮೆ ಹತ್ತರ ಕರೆದುಕೊಳ್ಳುವರು ನಂತರ ಕಟುಕರಂತೆ ದೂರ ನೂಕಿಬಿಡುವರು. ಅವರು ನನ್ನನ್ನು ತಮ್ಮ ತೋಳಿನಲ್ಲಿ ಬಿಗಿಯಾಗಿ ಹಿಡಿದಾಗ ಅವರ ಸ್ಪರ್ಶವೇ ನನಗೆ ಅಸಹ್ಯವೆನಿಸುವುದು. ಆದರೆ ನಾನು ಹೆಣ್ಣು ಹೆಂಗಸು. ಉಮಾ, ಇದನ್ನೆಲ್ಲ ನಾನು ಸಹಿಸುತ್ತಿದ್ದೆ. ಆದರೆ ಸಹನೆಗೂ ಒಂದು ಮೇರೆಯಿಲ್ಲವೇ? ನಾಲ್ಕು ಜನರು ಮೋಡ ನೋಡುವಾಗಲೇ ನನ್ನನ್ನು ದೂರ ಸರಿಸಿ ತಮಗೆ ಬೇಕೆನಿಸಿದ ಹೆಂಗಸರನ್ನು ಮನೆಯಲ್ಲಿ ತರುತ್ತಾರೆ! ಆ ವೇಶ್ಯೆಯರನ್ನು ಮೋಟರಿನಲ್ಲಿ ಜೊತೆಗೆ ಕೂಡಿಸಿಕೊಂಡು ತಿರುಗಲಿಕ್ಕೆ ಹೋಗುತ್ತಾರೆ! ಆ ಬೀರಿಯರದು ನನ್ನ ಮೇಲೂ ಒತ್ತಾಯ! ನಾನು ಅವರ ದಾಸಿಯಂತಾಗಿದ್ದೇನೆ! ನನ್ನ ಮನೆಯಲ್ಲಿ ನನಗೆ ಅಧಿಕಾರವಿಲ್ಲ. ರಾತ್ರಿ ಯಾವುದೋ ಕ್ಲಬ್ಬಿಗೆ ಹೋಗುತ್ತಾರಂತೆ! ದೇವಾ, ಗಂಡ ಬಡವನಾಗಿದ್ದರೇನು ಹಾನಿ? ಇಂಥ ಶ್ರೀಮಂತನಾದರೂ ಮೂರ್ಖ ಮತ್ತು ವ್ಯಸನಿಯಾದ ಗಂಡ ಬೇಡ! ಉಮಾ ತಾಯಿ… ತಾಯಿಯ ನೆನಪು ಹೇಗೆ ಮಾಸೀತು? ನನ್ನ ಈ ವೈಭವ ಈ ಮನೆ ನೋಡಿ ಅವಳು ದಂಗುಬಡೆದು ಹೋದಳು. ಬಲು ಮಿದುವಾದ ಹೃದಯ ಅವಳದು. ನನ್ನ ಈ ಕೊರಗನ್ನು ನೋಡಿಯೇ ಪಾಪ ಅವಳು ಪ್ರಾಣನೀಗಿದಳು. ಆದರೆ ನನ್ನ ಮನವೆಷ್ಟು ಬಿರುಸು. ನಾನು ಇನ್ನೂ ಏಕೆ ಸಾಯಲೊಲ್ಲೆ. ಅವತ್ತು ಅವ್ವ ಇಲ್ಲಿರುವಾಗಲೆ ಅವರು ನನಗೆ ಎಂಥ ಅಪಮಾನ ಮಾಡಿದರು! ಅವ್ವನು ಅದೇ ಬಂದಿದ್ದಳು. ಅವರು ಎಲ್ಲಿಯೋ ಹೋಗಬೇಕೆಂಬ ಹವಣಿಕೆಯಲ್ಲಿ ಕುರ್ಚಿ ಮೇಲೆ ಕೂತಿದ್ದರು. ನಾನು ಅವ್ವನು ಬಂದ ಸುದ್ಧಿ ಅವರಿಗೆ ಹೇಳಿದರೆ, ‘ಬಂದರೆ ಬಂದಳು’ ಎಂದೆನ್ನಬೇಕೆ! ಅಲ್ಲಿಗೇ ಮುಗಿಯಲಿಲ್ಲ. ನಾನು ಅವರೊಡನೆ ಅಷ್ಟು ಎಂದೂ ಮಾತನಾಡುವವಳಲ್ಲ. ಅಂದು ಅವ್ವ ಬಂದಾಳೆ; ಅವರು ಹೊರಗೆ ಹೊರಟು ಹೋಗಿಬಿಟ್ಟರೆ ಅವ್ವನಿಗೆ ಸಮಾಧಾನವಾಗಲಿಕ್ಕಿಲ್ಲ ಎಂದೆಣಿಸಿ ನಾನು ಅವರ ಕಾಲು ಹಿಡಿದುಕೊಂಡೆ. “ನನ್ನದಿದೊಂದೇ ಮಾತನ್ನು ಕೇಳಿರಲ್ಲ!” ಎಂದು ವಿನಯದಿಂದ ಅಂದೆ. ಆದರೆ ಅವರು ರೇಗಿ ಕಾಲಿನಿಂದ ನನ್ನನ್ನು ದೂರ ನೂಕಿಬಿಟ್ಟರು. ಅವರ ಬೂಟು ನನ್ನ ಹೊಟ್ಟೆಯಲ್ಲಿ ಚುಚ್ಚಿದ್ದರಿಂದ ‘ಅವ್ವಯ್ಯಾ’ ಎಂದು ನಾನು ಚೀರಿದೆ. ನಿಜವಾಗಿ ಅವರ ಬೂಟಿನ ನೋವು ನಾನು ಲಕ್ಷಿಸುವವಳಲ್ಲ. ಆದರೆ ನನ್ನ ಹೃದಯಕ್ಕೆ ಎಂಥ ಗಾಯವಾಯಿತು. ಅವ್ವನು ಬಂದುದನ್ನು ನಾನು ನೋಡಿದೆ. ನನಗೆ ಮೂರ್ಛೆಬಂದಿತ್ತು. ನಾನು ನಿಶ್ಚೇಷ್ಟಳಾಗಿ ಬಿದ್ದಿದ್ದೆ. ಎಷ್ಟೊತ್ತಿನವರೆಗೆ ಎಚ್ಚರ ಬರಲಿಲ್ಲ ನನಗೆ. ಆಗ ಅವ್ವನಿಗೆ ಹೇಗೆ ಅನಿಸಿರಬಹುದು. ಅವಳು ಒಂದೇ ಸಮನೆ ಮನೆಗೆ ನಡೆಯೆಂದು ನನಗೆ ಗಂಟು ಬಿದ್ದಿದ್ದಳು. ಮನೆಗೆ ಹೋಗಿಯಾದರೂ ಮಾಡುವದೇನಿದೆ? ನನ್ನ ಈ ಒಣಮೋರೆಯನ್ನು ದಿನಾಲು ಅವಳಿಗೆ ತೋರಿಸಲಿಕ್ಕೆ? ಪಾಪ ಅವ್ವನು ನನ್ನ ದುಃಖವನ್ನು ನೋಡಿ ಚಡಪಡಿಸುತ್ತಲೇ ಸತ್ತುಹೋದಳು. ಅವ್ವಾ…!ನನ್ನನ್ನು ನಿನ್ನ ಸಂಗಡವೇ ಏಕೆ ಒಯ್ಯಲಿಲ್ಲ? ಅವ್ವಾ ನೀನು ದುಡ್ಡಿಗೆ ಮರುಳಾದೆ. ಈ ವಿಚಾರವು ಲಗ್ನದ ಸಮಯಕ್ಕೆ ನಿನ್ನ ತಲೆಯಲ್ಲಿ ಬಂದಿದ್ದರೆ? ಉಮಾ, ಈ ನಾಚಿಕೆಗೇಡಿನ ಬಾಳನ್ನು ಹೇಗೆ ಕೊನೆಮುಟ್ಟಿಸಲಿ? ಆಯುಷ್ಯ ಮುಗಿಯಲಿಲ್ಲ; ಜೀವಕೊಡಲಿಕ್ಕೆ ಧೈರ್ಯವಿಲ್ಲ. ಅದಕ್ಕೇ ಈ ಉರಿ ಬಿಸಿಲಿನಲ್ಲಿ ಬಂಡೆಗಲ್ಲಿನ ಮೇಲೆ ನಡೆದಾಟ. ದೇವರು ದೊಡ್ಡವನಿದ್ದಾನೆ ಅವನು ಒಂದು ದಿನ ಈ ಬಳಲಿಕೆಯಿಂದ ನನ್ನನ್ನು ಬಿಡುಗಡೆ ಮಾಡಲೇಬಹುದು. ಉಮಾ, ನಿನಗೂ, ವಸಂತನಿಗೂ ನನ್ನ ಕೃತಜ್ಞತೆಗಳಿರಲಿ. ನಿಮ್ಮ ಉಪಕಾರವನ್ನು ನಾನು ಹೇಗೆ ತೀರಸಲಿ? ನಾನು ಜೀವದಿಂದಿರುವವರೆಗೆ ನಿಮ್ಮಿಬ್ಬರ ಸುಖವನ್ನು ಚಿಂತಿಸುತ್ತೇನೆ. ನಿನ್ನಂಥ ಮತ್ತು ವಸಂತನಂಥ ಮಿತ್ರರು, ನನ್ನ ದುಃಖದ ಜೀವನದಲ್ಲಿ ಮೇಲಿಂದ ಮೇಲೆ ಪ್ರೇಮದಿಂದ ಧೈರ್ಯಕೊಡಲಿಕ್ಕಿರುವರೆಂಬುದೇ ಒಂದು ಸುಖದ ಸಂಗತಿಯಾಗಿದೆ.

ಎಂದಾದರೂ ನನಗೆ ಏನಾದರೂ ಆದದ್ದನ್ನು ಕೇಳಿ ಬೆಚ್ಚಿಬೀಳಬೇಡ.

ಯಾವಾಗಲೂ ನಿನ್ನವಳೇ ಆದ
‘ರಮಾ’

* * *

– ಸೌ. ಸುಭದ್ರಾಬಾಯಿ ಜೋಶಿ
ಜಯಕರ್ನಾಟಕ, ಸಂ. ೧೬, ಸಂಚಿಕೆ ೩, ೧೯೩೮