ಆರನೆಯ ಪರಿಚ್ಛೇದ

ಉಪೇಂದ್ರನು ತನ್ನ ಕಾರ್ಖಾನೆಯ ಸಲುವಾಗಿ ಕೆಲವು ಸಾಮಾನುಗಳನ್ನು ತರಲು ಕಲ್ಯಾಣಪುರಕ್ಕೆ ಹೋಗಿ ಎರಡು ದಿನಗಳಾಗಿದ್ದುವು. ಸರಸ ಮತ್ತು ಮಾಧವ ಇವರಿಬ್ಬರೂ ಪಾರ್ವತ್ಮನವರಿಂದ ಕತೆಯನ್ನು ಕೇಳುತ್ತಿದ್ದರು. ಅವರೇನು ಹೇಳುತ್ತಿದ್ದರೋ ಇವರೇನು ಕೇಳುತ್ತಿರೋ ಮಧ್ಯಮಧ್ಯ ದೊಡ್ಡದಾಗಿ ನಗುತ್ತಿರುತ್ತದ್ದರು. ಇತ್ತ ಶೈವಲಿಯು ತನ್ನ ವೀಣೆಯನ್ನು ಸುಖವಾಗಿ ನುಡಿಸುತ್ತಾ ಶಾಂತಿಯತೇತ ಸೌಖ್ಯಮು ತೀದು?? ಎಂದು ಹಾಡುತ್ತಿರಲು ಆರೋ ಹಿಂದಿನಿಂದ “ನಿಜವಾದ ಮಾತು.” ಶಾಂತಿಯಿಲ್ಲದಿದ್ದರೆ ಈ ಪ್ರಪಂಚದಲ್ಲೆಲ್ಲೆಯೂ ಸೌಖ್ಯವಿಲ್ಲ ಎಂದಂತಾಯ್ತು. ಹಿಂದಿರುಗಿ ನೋಡಿದಳು; ಗೋಪಾಲನು ನಿಂತಿದ್ದನು.

ಶೈ : ನೀವು ಬಂದು ಬಹಳ ಹೊತ್ತಾಯಿತೆ?

ಗೋ: ಇಲ್ಲ, ನೀನು ಹೇಳುವುದನ್ನು ದೃಢೀಕರಿಸಲು ನಾನೀಗಲೇ ಬಂದೆನು. ಉಪೇಂದ್ರನೆಲ್ಲಿ?

ಶೈ: ಅವರು ಮೊನ್ನೆ ರಾತ್ರಿ ಕಲ್ಯಾಣಪುರಕ್ಕೆ ಹೋದರು.

ಗೋ: ಬರುವುದಾವಾಗ?

ಶೈ: ಬೇಗ ಬರುವುದಾಗಿ ಹೇಳಿದರು. ಖಂಡಿತವಾಗಿ ತಿಳಿಯದು. ಗೋಪಾಲನು ಮುಗುಳ್ನಗೆ ನಕ್ಕನು.

ಶೈ: ಅದೇಕೆ ನಗುವಿರಿ?

ಗೋ: ಏನೋ ಒಂದು ವಿಷಯವು ನೆನಪಿಗೆ ಬಂತು, ನಕ್ಕೆನು.

ಶೈ: ಅದೇನು?

ಗೋ: ನಿನಗದನ್ನು ಹೇಳುವುದರಿಂದ ಬಾಧಕವಿರಬಹುದು. ಕ್ಷಮಿಸು.

ಶೈ: ಬಾಧಕವೇನೂ ಇಲ್ಲ; ಹೇಳಲೇಬೇಕು.

ಗೋ: ಶಾಂತಿಯೆಂಬುವಳೊಬ್ಬಳು ಕಲ್ಯಾಣಪುರದಲ್ಲಿರುವಳು, ಗೊತ್ತೆ?

ಶೈ: ಹೌದು, ಅವಳ ವಿಷಯವೇನು?

ಗೋ: ಉಪೇಂದ್ರನಿಗೂ ಅವಳಿಗೂ ಬಹುಕಾಲದ ಸ್ನೇಹ. ಅವಳು ಅವನನ್ನೇ ವಿವಾಹವಾಗಬೇಕೆಂದಿದ್ದಳು. ಆದರೆ ದೈವಚಿತ್ತ; ನಿನ್ನೊಡನೆ ನನ್ನ ಸಂಬಂಧವು ತಪ್ಪಿದಂತೆ ಅದೂ ತಪ್ಪಿತು. ಶೈವಲೆಯ ಮುಖವು ಕೆಂಪೇರಿತು. ಅವಳು ಏನನ್ನೋ ಯೋಚಿಸುತ್ತಾ ನಿಂತಳು.

ಗೋ: ಈಗ ಅವನು ಹೋದ ನಿಮಿತ್ತವೇನು?

ಶೈ: ನೆಯ್ಗೆಯ ಕೆಲವು ಯಂತ್ರಗಳನ್ನು ತರಲು ಹೋಗಿರುವರು.

ಗೋ : ಇಲ್ಲಿ ಸಿಕ್ಕದ ಯಂತ್ರಗಳೂ ಇವೆಯೆ? ಶೈವಲೆ ಇನ್ನು ನಾನಾವುದನ್ನೂ ಮುಚ್ಚಿಡುವುದಿಲ್ಲ. ಉಪೇಂದ್ರನು! ಶಾಂತಿಯನ್ನು ಮನಃಪೂರ್ವಕವಾಗಿ ಪ್ರೀತಿಸುವನು. ಸಾಧಾರಣ ಯಂತ್ರಗಳಿಗಾಗಿ ಅಲ್ಲಿಗೇಕೆ ಹೋಗಬೇಕು? ಅಲ್ಲದೆ ತಾನೇ ಹೋಗಬೇಕಾದ ಅಗತ್ಯವೇನು?ನಿನಗಾಗಿ ಪ್ರಾಣವನ್ನಿರ್ಪಿಸಲು ಸಿದ್ಧವಾಗಿದ್ದೆ! ಈಗಲೂ ಸಿದ್ಧನಾಗಿರುವೆನು. ಆದುದರಿಂದ ನಿನಗೊದಗುವ ಕಷ್ಟವನ್ನು ನೋಡಿ ಸಹಿಸಲಾರದೆ ಹೇಳಿದನು. ಶೈವಲೆ, ನಾನು ಧನಿಕನಲ್ಲ. ಆದುದರಿಂದಲೇ ನಿನ್ನನ್ನು ಪಡೆಯಲಾರದೆ ಹೋದೆನು. ಆದರೆ ನನ್ನ ಪ್ರೇಮವು ಗಾಢವಾದುದು.

ಶೈ : ಗೋಪಾಲ! ಎಂಥಹ ಮಾತನ್ನು ಹೇಳುವಿ? ನನ್ನ ಪತಿಯು ಎಂತಹ ದಯಾಮಯ! ಎಷ್ಟು ಗಂಭೀರವಾದ ತೇಜೋಯುಕ್ತವಾದ ಮುಖ! ಇಂತಹ ಪಾಪಕಾರ್ಯದಲ್ಲ ಎಂದಿಗೂ ಪ್ರವರ್ತಿಸದು! ಇನ್ನೊಮ್ಮೆ ಹೀಗೆ ಹೇಳದಿರು.

ಗೋ: ಈಗ ನೀನು ಹೀಗೆ ಹೇಳುವುದು ಸ್ವಾಭಾವಿಕವಾಗಿದೆ. ಇನ್ನು ಕೆಲವು ದಿನಗಳು ಅವನನ್ನು ಪರೀಕ್ಷಿಸಿ ನೋಡು. ಅನಂತರ ತಿಳಿಯುವುದು.

ಸ್ವಲ್ಪ ಹೊತ್ತಿನನಂತರ ಗೋಪಾಲನು ಹೊರಟುಹೋದನು. ಶೈವಲಿಯು ದುರ್ಧರವಾದ ಚಿಂತೆಯಲ್ಲಿ ಮಗ್ನಳಾದಳು. “ನನಗೆ ಸ್ವಲ್ಪ ದೇಹಾಲಾಸ್ಯವಾದರೆ ನಿದ್ರಾಹಾರಗಳನ್ನು ತೊರೆಯುವರು. ಏನನ್ನಾದರೂ ಅಪೇಕ್ಷಿಸುವುದೇ ತಡ, ತಂದುಕೊಡುವರು. ಹಾಗಾದರೆ ನನ್ನಲ್ಲಿ ಪ್ರೀತಿಯಿಲ್ಲವೆ? ಆದರೆ ಒಂದೊಂದು ವೇಳೆ ನನ್ನೊಡನೆ ಶಾಂತಿಯ ವಿಚಾರವಾಗಿ ಚೆನ್ನಾಗಿ ಮಾತನಾಡುವರು. ಅವಳು ತಮ್ಮನ್ನು ಪ್ರೀತಿಸುತ್ತಿದ್ದ ವಿಷಯವನ್ನು ಮಟ್ಟಿಗೆ ಹೇಳಿಲ್ಲ. ತಾವು ಪ್ರತಿಯಾಗಿ ಪ್ರೀತಿಸದೆ ಇರುತ್ತಿದ್ದರೂ ಅದನ್ನು ಹೇಳಲು ಅಡ್ಡಿಯೇನು? ಅಲ್ಲದೆ, ಇಷ್ಟು ಸಾರಿ ತಾವೇ ಸ್ವತಃ ಕಲ್ಯಾಣಪುರಕ್ಕೆ ಹೋಗಲು ಕಾರಣವೇನು? ನನ್ನ ನಿಷ್ಕಲ್ಮಷವಾದ ಪ್ರೀತಿಗೆ ಇದು ಪ್ರತಿಫಲವೇನು? ಗೋಪಾಲನು ಪ್ರೇಮದ ನಿಧಿಯನ್ನೇ ಅರ್ಪಿಸಿದ. ಆಗ ಅದನ್ನು ನಿರಾಕರಿಸಿದುದಕ್ಕೆ ಇಂದು ನನಗೀ ಫಲ! ಜಗಧೀಶ್ವರಾ! ಇದೇ ನಿನ್ನ ಪ್ರಪಂಚ ಧರ್ಮವೆ?” ಹೀಗೆ ಶೈವಲಿಯು ಆ ರಾತ್ರಿಯನ್ನೆಲ್ಲಾ ಯೋಚನೆಯಲ್ಲಿಯೇ ಕಳೆದಳು.

ಮರುದಿನ ಉಪೇಂದ್ರನು ಬಂದನು. ಶೈವಲಿನಿಯು ದೇಹಾಲಸ್ಯದಿಂದ ಮಲಗಿದ್ದಳು. ಅಲ್ಲದೆ ಎಂದಿನಂತೆ ಅವನನ್ನು ನೋಡಲು ಆತುರಳಾಗಿರಲಿಲ್ಲ. ಆದರೆ, ಕೇವಲ ಕೂಡಲೆ ಬಂದು ಅವಳನ್ನು ನೋಡಿದನು.

ಶೈ: ಇಷ್ಟು ಜಾಗ್ರತೆಯಾಗಿ ಬರಲು ಕಾರಣವೇನು?

ಉ: ಶೈವಲೆ! ಇದೇನು ಹೊಸಪರಿ? ಕಾರ್ಯವು ಮುಗಿದೊಡನೆ ಎಂದಿನಂತೆ ಬಂದೆನು. ದಯಾರಸಭರಿತವಾದ, ನಿರ್ಮಲವಾದ ಮತ್ತು ಪ್ರೇಮಕ್ಕೆ ನಿಧಿಯಾದ ಆ ಕಣ್ಣುಗಳನ್ನು ನೋಡಿ ಯಾರಾದರೂ ಸಂಶಯಪಡಲು ಸಾಧ್ಯವೆ? ಶೈವಲೆಯ ಹೃದಯದಲ್ಲಿ ಶೂಲವನ್ನು ನಾಟಿದಂತಾಯ್ತು. ಅವಳು ತನ್ನ ಮನಸ್ಸಿನಲ್ಲಿರುವುದನ್ನೆಲ್ಲಾ ಒಂದನ್ನೂ ಬಿಡದೆ ಹೇಳಬೇಕೆಂದು ಯೋಚಿಸಿದಳು. ಆದರೆ ಅದು ಸಾಧ್ಯವಾಗಲಿಲ್ಲ. ತನ್ನ ದುಃಖವನ್ನು ಸಹಿಸಲಾರದೆ ಅವನ ಕಾಲಡಿಯಲ್ಲಿ ಬಿದ್ದು “ಸ್ವಾಮಿ!ನನ್ನನ್ನು ನಿರಾಕರಿಸಬೇಡಿರಿ. ನಿಮ್ಮ ಪ್ರೇಮದಿಂದ ವಂಚಿತಳನ್ನಾಗಿ ಮಾಡಬೇಡಿರಿ” ಎಂದು ದೀನಸ್ವರದಲ್ಲಿ ಕೇಳಿಕೊಂಡಳು. ಉಪೇಂದ್ರನಿಗೂ ತಿಳಿಯಲಿಲ್ಲ. ಅವನು ಭ್ರಾಂತನಾಗಿ “ಶೈವಲೆ, ನಿನಗಾಲಸ್ಯವಾಗಿದೆಯೇ? ಏನಾದರೂ ದುಃಸ್ವಪ್ನವನ್ನು ಕಂಡೆಯಾ?” ಎಂತು ಕೇಳಿದನು.

ಶೈ: ನೀನವಳನ್ನು ಮದುವೆಯಾಗಬೇಡ! ನನ್ನ ಮಕ್ಕಳ ಪಾಡೇನು?

ಉ: ನೀನು ಕೆಟ್ಟ ಸ್ವಪ್ನವನ್ನು ಕಂಡು ಈ ರೀತಿಯಾಗಿ ಮಾತನಾಡುತ್ತಿರಬೇಕು. ಸ್ವಲ್ಪ ಚೇತರಿಸಿಕೊ. (ಪಕ್ಕದಲ್ಲಿಯೇ ಕುಳಿತು ಸಂತೈಸತೊಡಗಿದನು.)

ಶೈ: ನೀನವಳನ್ನು ಮದುವೆಯಾಗುವುದಿಲ್ಲವೆಂದು ಮಾತು ಕೊಡು.

ಉ: ಶೈವಲೆ? ನೀನಾರ ವಿಷಯವಾಗಿ ಮಾತನಾಡುತ್ತಿ? ನನಗೊಂದು ಅರ್ಥವಾಗುವುದಿಲ್ಲ.

ಶೈ: ಶಾಂತಿ!

ಉಪೇಂದ್ರನು ಹುಬ್ಬುಗಂಟಿಕ್ಕಿದನು. “ಪ್ರೀತಿಯನ್ನು ಎಷ್ಟು ವಿಧವಾಗಿ ದೃಢೀಕರಿಸಬಹುದೋ ಅಷ್ಟು ವಿಧಗಳಲ್ಲಿಯೂ ದೃಢೀಕರಿಸಿದೆನು. ನಾನಾವಾಗಲೂ ನಿನಗೆ ದ್ರೋಹವನ್ನೆಣಿಸಿಲ್ಲ. ನಿನಗದನ್ನಾರು ಹೇಳಿದರು? ನನ್ನಲ್ಲಿ ದ್ವೇಷವನ್ನುಂಟು ಮಾಡಲು ಯಾರಾದರೂ ಪ್ರಯತ್ನಪಡುತ್ತಿರುವರೆ? ನಿನ್ನ ಅನುಮಾನಕ್ಕೆ ಕಾರಣವೇನು?”

ಶೈವಲೆಯು ಗೋಪಾಲನ ವಿಷಯವಾಗಿ ಹೇಳಬೇಕೆಂದು ಯೋಚಿಸಿ ಕಡೆಗೆ ತನ್ನ ವಿಚಾರ ಅಭಿಪ್ರಾಯ ಕೆಡುವುದೆಂದು “ಇಲ್ಲ” ವೆಂದಳು.

ಉ: ಹಾಗಾದರೆ ಕೆಟ್ಟ ಸ್ವಪ್ನವನ್ನು ಕಂಡೆಯಾ?

ಶೈವಲೆಯು “ಅಹುದು, ಕೆಲವು ವೇಳೆ ದುಃಸ್ವಪ್ನವನ್ನು ಕಾಣುವೆನು. ಅಶಕ್ತಿಯಿಂದ ಇಲ್ಲದ ಯೋಚನೆಗಳುಂಟಾಗುವುವು” ಎಂದಳು. ಇದು ಬೇರೆ ಯಾವ ಮಾರ್ಗವೂ ತೋರದೆ ಹೇಳಿದ ಉತ್ತರದಂತಿದ್ದಿತು.

ಉಪೇಂದ್ರ: ಇನ್ನೊಂದು ಸಾರಿ ಇವುಗಳ ವಿಚಾರ ಯೋಚಿಸಬೇಡ. ಇಬ್ಬರಿಗೂ ಹಿತಕರವಲ್ಲ. ನಾವು ಪ್ರೇಮ ಬಂಧನದಿಂದ ಮಾತ್ರವೇ ಅಲ್ಲದೆ ಶಾಸ್ತ್ರಪ್ರಕಾರವೂ ಬದ್ಧರು. ನಮ್ಮನ್ನು ಬೇಧಿಸಲು ಆರಿಂದಲೂ ಸಾಧ್ಯವಿಲ್ಲ.

ಉಪೇಂದ್ರನು ಇದನ್ನು ಸಂಪೂರ್ಣವಾಗಿ ಮರೆತನು. ಆಲಸ್ಯದಲ್ಲಿದ್ದಾಗ ಬಿದ್ದ ಸ್ವಪ್ನವೆಂದು ತಿಳಿದನು. ಇದೇ ಅಲಸ್ಯಕ್ಕೆ ಕಾರಣವೆಂಬುದನ್ನು ಅವನು ತಿಳಿಯಲಿಲ್ಲ. ಶೈವಲೆಯು ಲಜ್ಜಿತಳಾಗಿ ಆ ಸಮಯದಲ್ಲಿ ಅದನ್ನು ಮರೆತಳು. ಆದರೆ ವಿಷಮ ಸಮಯದಲ್ಲಿ ನಾಟಿದ ವಿಷವೃಕ್ಷವು ಪುನಃ ಬೇರೂರಿತು.

ಏಳನೆಯ ಪರಿಚ್ಛೇದ

ಶೈವಲಿನಿಯು ದಿನೇ ದಿನೇ ಶಕ್ತಿಗುಂದುತ್ತಾ ಬಂದಳು. ವೈದ್ಯರು “ಹವೆ ಬದಲಾಯಿಸುವುದು ಅವಶ್ಯಕ” ವೆಂದು ಹೇಳಿದರು. ಆದರೆ ಅವಳು ಮನೆಯಿಂದ ಹೊರಡಲು ಒಪ್ಪಲಿಲ್ಲ. “ಶೈವಲೆ ನನಗಾಗಿ ನೀನು ಮನೆಯಿಂದ ಹೊರಡುವುದಕ್ಕೆ ಒಪ್ಪದಿರುವುದು ಸರಿಯೆ. ಆದರೆ, ನೀನು ಕ್ಷೀಣಗತಿಯನ್ನು ಹೊಂದುತ್ತಾ ಹೋದರೆ ನನಗಾದರೂ ಸುಖವೆಲ್ಲಿಯದು? ನಿನ್ನ ಜೀವಕ್ಕಿಂತಲೂ ಹೆಚ್ಚಿನದು ಯಾವುದೂ ಇಲ್ಲ. ನೀನು ತೌರುಮನೆಗೆ ಹೋಗಿ ಬಹಳ ದಿನಗಳೂ ಆದವು. ಅದುದರಿಂದ ನೀನು ಕೆಲವು ದಿನಗಳ ಮಟ್ಟಿಗಾದರೂ ಸಾಗರಕ್ಕೆ ಖಂಡಿತವಾಗಿಯೂ ಹೋಗಲೇಬೇಕು.” ಎಂದು ಉಪೇಂದ್ರನು ಬಲವಂತಪಡಿಸಿದ ನಂತರ ಅವಳು ತೌರುಮನೆಗೆ ಹೋದಳು. ಸರಸ ಮತ್ತು ಮಾಧವ ಇವರಿಬ್ಬರೂ ಅಜ್ಜಿಯನ್ನು ಬಿಟ್ಟು ಬರಲೊಪ್ಪಲಿಲ್ಲವಾದ್ದರಿಂದ ಉಪೇಂದ್ರನು ಬಳಿಯಲ್ಲಿಯೇ ಬಿಟ್ಟಿದ್ದಳು. ಉಪೇಂದ್ರನು ಸಮಯ ದೊರೆತಾಗಲೆಲ್ಲ ಹೋಗಿ ಬರುತ್ತಿದ್ದನು.

ನಮ್ಮಿಚ್ಛೆಯು ಒಂದಾಗಿದ್ದರೆ ದೈವಸಂಕಲ್ಪವೇ ಬೇರೆಯಾಗಿರುವುದು. ಅದನ್ನು ಬಲ್ಲವರಾರು? ಹಣೆಯಲ್ಲಿ ಬರೆದುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವೇ ಇಲ್ಲ.

ಶೈವಲೆಯು ಸಾಗರಕ್ಕೆ ಹೋದ ಕೆಲವು ದಿವಸಗಳ ಮೇಲೆ ಗೋಪಾಲನು ತನ್ನ ತಾಯಿತಂದೆಗಳನ್ನು ನೋಡುವುದಕ್ಕಾಗಿ ಹೋದನು. ಅವನಿಗೆ ಲೀಲೆಯೆಂಬ ಹದಿನಾರು ವರ್ಷದ ಸುಂದರಿ ಸಹೋದರಿಯೊಬ್ಬಳಿದ್ದಳು. ಅವಳೂ ಶೈವಲೆಯೂ ಬಾಲ್ಯಸ್ನೇಹಿತರು. ಸ್ನೇಹಿತಳನ್ನು ನೋಡಲು ಶೈವಲೆಯು ಹೊರಟಳು. ಆಕಸ್ಮಿಕವಾಗಿ ಗೋಪಾಲನ ಸಂದರ್ಶನವಾಯ್ತು. ಗೋಪಾಲನು ಬಹು ಆದರದಿಂದ ಉಪಚರಿಸಿದನು. ಅವಳನ್ನು ಆಗಾಗ್ಗೆ ಬರುವಂತೆ ಹೇಳಿ ಬಹು ಆದರದಿಂದ ಕಂಡು ದಿನೇ ದಿನೇ ಉಪೇಂದ್ರನ ವಿಷಯದಲ್ಲ ಅನುಮಾನವನ್ನು ಹೆಚ್ಚಿಸತೊಡಗಿದನು. ಒಂದು ದಿನ ಅವರೀರ್ವರಿಗೆ ಈ ರೀತಿಯಾದ ಸಂಭಾಷಣೆಯು ನಡೆಯಿತು.

ಗೋ: ಶೈವಲೆ! ಎಷ್ಟೋ ಸಾರಿ ಹೇಳಿರುವೆನು. ಈಗಲೂ ಹೇಳುವೆನು. ನಿನ್ನ ಸರಳಸ್ವಭಾವವನ್ನು ತಿಳಿದು ಉಪೇಂದ್ರನು ನಿನ್ನನ್ನು ಮೋಸಗೊಳಿಸುತ್ತಿರುವನು. ಅವನು ಶಾಂತಿಯನ್ನು ಮನಃಪೂರ್ವಕವಾಗಿ ಪ್ರೀತಿಸುತ್ತಿರುವನು. ಅವಳು ವಿದ್ಯಾವತಿ ಮತ್ತು ಚತುರೆ, ಅವನನ್ನು ಆಕರ್ಷಿಸುತ್ತಿರುವಳು. ನೀನವನನ್ನು ಪ್ರೀತಿಸುವುದು ಬಂಡೆಯ ಮೇಲೆ ನೀರು ಸುರಿದಂತೆ.

ಶೈವಲಿನಿಯು ನೀರವವಾಗಿದ್ದಳು. ಗೋಪಾಲನು ಹೇಳತೊಡಗಿದನು. “ನಿನ್ನ ಹಿತವನ್ನು ಚಿಂತಿಸುವವನಂತೆ ಇಲ್ಲಿಗೆ ಕೆಲವು ದಿನಗಳು ಇರುವಂತೆ ಕಳುಹಿಸಿದನು. ಆದರೆ, ಅದು ಸುಳ್ಳು. ತಾನು ನಿರಾತಂಕವಾಗಿರಲು ಹೀಗೆ ಮಾಡಿರುವನು. ನಾನಿಲ್ಲಿದ್ದಾಗ ಶಾಂತಿಯನ್ನು ನೋಡಿದ್ದೆನು. ಮತ್ತು ಹೊರಡುವಾಗ “ನಿನಗೆ ಹೇಳುವುದೇನಾದರೂ ಇದೆಯೆ” ಎಂದು ಕೇಳಿದುದಕ್ಕೇ ಏನೂ ಯೋಚಿಸಬೇಕಾದುದಿಲ್ಲ. ಸುಖವಾಗಿರುವೆನು” ಎಂದು ಹೇಳುವಂತೆ ಹೇಳೀದನು. ಅವನು ನಿಜವಾಗಿಯೂ ಸಂತೋಷವಾಗಿರುವನು. ನಿನ್ನನ್ನು ಸ್ವಪ್ನದಲ್ಲಿಯೂ ನೆನಸುವಂತಿಲ್ಲ.” ಶೈವಲೆಯ ಮುಖದಲ್ಲಿ ಕ್ರೋಧದ ಚಿಹ್ನೆಯು ಕಂಡುಬಂದುವು. ಇದೇ ಸಮಯವೆಂದು ಗೋಪಾಲನು ಮುಂದುವರಿದನು. “ಸಂದರ್ಭವು ಹೀಗಿರುವಾಗ ನೀನು ಮಾತ್ರ ಕಷ್ಟಪಡುವುದೇಕೆ? ಈ ಪ್ರಪಂಚದಲ್ಲಿ ಪಾಪಕ್ಕೆ ಪ್ರತೀಕಾರವಿಲ್ಲದೆ? ನೀನೂ ಸುಖಪಡದೆ ಅವನ ಸಂತೋಷಕ್ಕೂ ಏಕೆ ಕಂಟಕಳಾಗಿರಬೇಕು? ನೀನಿಚ್ಛಿಸುವೆಯಾದರೆ ಸುಖಸಾಗರವೇ ನಿನ್ನ ಪದತಲದಲ್ಲಿರುವುದು. ಶೈವಲೆಯ ಕ್ರೋಧದ ಚಿಹ್ನೆಗಳು ಇಳಿಯಲಿಲ್ಲ. ಬಹಳ ಹೊತ್ತಿನವರಿಗೂ ಮಾತಾನಾಡುತ್ತಲಿದ್ದು ಅನಂತರ ಮನೆಗೆ ಬಂದಳು. ಬಂದವಳು ಒಂದು ಪತ್ರವನ್ನು ಬರೆದಿಟ್ಟು ಮಲಗಿದಳು. ಪತ್ರವು ಈ ರೀತಿಯಲ್ಲಿದ್ದಿತು.

“ಸಾಗರ”
ವೈಶಾಖ ಶುದ್ಧ ಪಂಚಮಿ

ಉಪೇಂದ್ರ,

ನಿನ್ನ ಸುಖಕ್ಕೆ ಕಂಟಕಳಾಗಿರುವೆನೆಂದು ತಿಳಿದು ಅದನ್ನು ತಪ್ಪಿಸಲು ಇಂದು ನಾನು ಗೃಹವನ್ನು ತೊರೆದು ಹೋಗುವೆನು. ಮುಂದೆ ನನ್ನ ಮಕ್ಕಳು ಕೇಳಿ‌ದರೆ ನನ್ನ ಈ ಕೆಲಸಕ್ಕೆ ನಿನ್ನ ಅವಿಶ್ವಾಸವೇ ಕಾರಣವೆಂದು ಹೇಳು.

ಇತಿ
ಶೈವಲೆ

ಮರುದಿನ ಬೆಳಿಗ್ಗೆ ಎದ್ದುನೋಡುವಲ್ಲಿ ಶೈವಲೆಯು ಗೃಹದಲ್ಲಿರಲಿಲ್ಲ. ಅವಳ ತಾಯಿತಂದೆಗಳು ಶಕ್ತಿಮೀರಿ ಹುಡುಕಿಸಿದರು. ಆದರೂ ಅವಳ ಸುಳಿವೇ ಇಲ್ಲ! ವಂಶಕ್ಕೆ ಅಪಮಾನವನ್ನು ತಂದ ಇವಳ ಹೆಸರನ್ನು ಉಚ್ಚರಿಸುವುದನ್ನೂ ಬಿಟ್ಟರು.

ಶೈವಲೆ! ನಿನಗಾವುದರಲ್ಲಿಯೂ ಕಡಿಮೆಯಾಗಿರಲಿಲ್ಲ. ಧನ, ಸುಖ, ಸಂಪತ್ತು ಎಲ್ಲವೂ ಇದ್ದುವು. ಇಷ್ಟು ವರ್ಷಗಳೂ ಒಡನಾಡಿ ನಿನ್ನ ಪತಿಯಗುಣವನ್ನು ತಿಳಿಯಲಾರದೆಯೇ ಹೋದೆಯೇ? ಹೊ‌ಟ್ಟೆಯ ಕಿಚ್ಚಿಗೆ ಆಸ್ಪದವನ್ನು ಕೊಟ್ಟು ನಿನ್ನ ಮುದ್ದಾದ ಸಂಸಾರಕ್ಕೆ ಕಿಚ್ಚನ್ನು ಹಚ್ಚಿದೆ!

ಎಂಟನೆಯ ಪರಿಚ್ಛೇದ

ಇತ್ತು ಉಪೇಂದ್ರನಿಗೆ ಶೈವಲೆಯ ಪತ್ರವು ತಲ್ಪಿ ತಲೆಯ ಮೇಲೆ ಶಿಡ್ಲು ಬಡಿದಂತಾಯ್ತು. ಅವಳ ಅಸುಖಕ್ಕೆ ತಾನೇ ಕಾರಣವೆಂದು ಬರೆದುದನ್ನು ನೋಡಿ ಕ್ರೋಧಗೊಂಡನು. ಆದರೆ ಅವನ ನಿಜವಾದ ಪ್ರೀತಿಯು ಅವನನ್ನು ಹುಚ್ಚನನ್ನಾಗಿ ಮಾಡಿತು. ಇದೇ ಕಾರಣದಿಂದ ಅವಳು ಪ್ರಾಣತ್ಯಾಗ ಮಾಡಿದ್ದರೆ ಜತೆಯಲ್ಲಿಯೇ ಅವನೂ ತನ್ನ ಪ್ರಾಣವನ್ನು ಸಮರ್ಪಿಸುತ್ತಿದ್ದನು. ಆದರೆ ಆ ನೀಚನ ಮಾತನ್ನು ಕೇಳಿ ಇಂತಹ ಹೇಯವಾದ ಕಾರ್ಯವನ್ನು ಮಾಡಿರುವುದಕ್ಕಾಗಿ ಅತ್ಯಂತ ವ್ಯಥೆಗೊಂಡನು. ಮಕ್ಕಳನ್ನು ನೋಡಿದಾಗಲೆಲ್ಲ ಈ ವ್ಯಥೆಯು ಹೆಚ್ಚುತ್ತಿದ್ದಿತು. ಸದ್ಗೃಹಸ್ಥನಿಗೆ ಎಂತಹ ಅಪಮಾನ!

ವೃದ್ಧಳಾದ ಪಾರ್ವತಮ್ಮನು ಪುನಃ ವಿವಾಹ ಮಾಡಿಕೊಳ್ಳುವಂತೆ ಉಪೇಂದ್ರನನ್ನು ಒತ್ತಾಯ ಪಡಿಸತೊಡಗಿದಳು. ಅನು ಏನಾದರೂ ಅವಳು ತನ್ನ ಧರ್ಮಪತ್ನಿ, ಅವಳು ಜೀವನದಲ್ಲಿರುವವರೆಗೂ ನಾನು ಖಂಡಿತವಾಗಿ ವಿವಾಹ ಮಾಡಿಕೊಳ್ಳುವುದಿಲ್ಲವೆಂದು ಹೇಳಿದನು. ತಾಯಿಯ ಆರೈಕೆಯು ತಪ್ಪಿ ಮಕ್ಕಳು ಕೃಶರಾಗುತ್ತಾ ಬಂದರು. ಆರು ತಿಂಗಳೊಳಗಾಗಿಯೆ ಮುದ್ದು ಮಗುವಾದ ಮಾಧವನು ಕ್ಷಯರೋಗದಿಂದ ಮೃತನಾದನು. ಉಪೇಂದ್ರನ ದುಃಖಕ್ಕೆ ಪಾರವಿಲ್ಲವಾಯಿತು. ಇತ್ತ ತಾಯಿಯ ಒತ್ತಾಯವು ಹೆಚ್ಚಾಯಿತು. ಅಪ್ಪಾ! ತಾಯಿಯ ಆರೈಕೆಯು ಇಲ್ಲದೆ ಮಾಧವನು ಮೃತನಾದನು. ಇನ್ನೂ ಹೀಗೆಯೇ ಇದ್ದರೆ ಸರಸಿಯೂ ಅದೇ ಗತಿಯನ್ನು ಹೊಂದುವಳು. ನಾನಂತೂ ವೃದ್ಧಳು. ಇನ್ನೊಂದು ಕ್ಷಣಕ್ಕೆ ಸಾಯುವೆನೋ, ಈಗಲೇ ಸಾಯುವೇನೋ ಹೇಳಲಾಗದು. ನಾನು ನಿನ್ನ ಇಷ್ಟಕಷ್ಟಗಳನ್ನೂ ನೋಡಿದುದು ಸಾಲದೆ, ಸಾಯುವಾಗಲೂ ಮನಸ್ಸಿಗೆ ನೆಮ್ಮದಿಯಿಲ್ಲದೆ ಸಾಯಬೇಕೆ? ನಿನಗಿನ್ನೂ ಚಿಕ್ಕವಯಸ್ಸು, ನನಗೆದುರು ಹೇಳದಿರು, ಈಗಲೇ “ಇನ್ನೊಂದು ಲಗ್ನವನ್ನು ಮಾಡಿಕೊ” ಎಂದು ಕಣ್ಣೀರು ಸುರಿಸುತ್ತಾ ಮಗನನ್ನು ಕೇಳಿಕೊಂಡಳು. ಉಪೇಂದ್ರನು ಪ್ರತಿಹೇಳಲಾರದೆ ಹೋದನು. ವೃದ್ಧಳಾದ ತಾಯಿಯ ಮನಸ್ಸು ನೋಯಿಸುವುದು ಉಚಿತವಾಗಿ ತೋರಲಿಲ್ಲ. ಕಡೆಗೆ ಕೆಲವು ದಿವಸಗಳಲ್ಲಿಯೇ ಶೈವಲೆಯ ಬಾಲ್ಯ ಸ್ನೇಹಿತಳಾದ ಚಂಪಾವತಿಯೊಡನೆ ಉಪೇಂದ್ರನಿಗೆ ಲಗ್ನವು ಗದ್ದಲವಿ‌ಲ್ಲದೆ ನೆರವೇರಿತು.

ಯಾವ ಸರಳವಾದ ಪ್ರೇಮದ ನಿಧಿಗೆ ಶೈವಲೆಯು ಏಕಾಧಿಕಾರಿಯಾಗಿದ್ದಳೋ ಅದಕ್ಕೆ ಚಂಪೆಯು ಅಧಿಕಾರಿಯಾದಳು. ಯಾರನ್ನು ಶೈವಲೆಯು ನಿರಾಕರಿಸಿದಳೊ ಆ ಪುರುಷ ರತ್ನವನ್ನು ಇಂದು ಚಂಪೆಯು ಹೃದಯದಲ್ಲಿ ಧಾರಣ ಮಾಡಿದಳು. ಶೈವಲೆ, ಇಂದು ನೀನೆಲ್ಲಿರುವೆ?

* * *

ಶೈವಲೆಯು ಮನೆಯಲ್ಲಿ ಬಿಟ್ಟ ಮರುಕ್ಷಣದಿಂದಲೇ ತಾನು ಮಾಡಿದ ತಪ್ಪನ್ನು ತಿಳಿದುಕೊಂಡಳು. ಆದರೆ ಹಿಂದಕ್ಕೆ ಹೋಗಲು ಧೈರ್ಯವು ಸಾಲದೆ ಹೋಯ್ತು. ಆ ನೀಚನ ಮಾತನ್ನು ಬುದ್ಧಿಯಿಲ್ಲದೆ ಕೇಳಿದಳು. ಇನ್ನು ಪ್ರಪಂಚಕ್ಕೆ ಮುಖವನ್ನು ತೋರಿಸುವ ಬಗೆಯೆಲ್ಲಿ? ಅಂತೂ ಅವನ ಹೇಳಿಕೆಯಂತೆ ಪದ್ಮಪುರಕ್ಕೆ ಹೋದಳು. ಅಲ್ಲಿ ಕೆಲವು ದಿವಸಗಳ ನಂತರ ಅವಳನ್ನು ತ್ಯಜಿಸಿ ನಿರಾಶ್ರಿತಳನ್ನಾಗಿ ಮಾಡಿ ಗೋಪಾಲನು ಹೊರಟು ಹೋದನು. ಆಗ ಉದಾರಿಯಾದ ಉಪೇಂದ್ರನ ಮೂರ್ತಿಯು ಅವಳ ಕಣ್ಣಿಗೆ ಕಟ್ಟಿದಂತಾಯ್ತು. ಸರಳವಾದ ಪ್ರೇಮದಿಂದ ತುಂಬಿದ ದಯಾರಸಭರಿತವಾದ ಆ ಹೃದಯದಲ್ಲಿಯ ಪಶ್ಚಾತ್ತಾಪ ಹಿಂದಿನ ಒಂದೊಂದು ಸಂಗತಿಯೂ ನೆನಪಿಗೆ ಬಂದು ಅವಳ ಹೃದಯದಲ್ಲಿ ಶೂಲವು ನೆಟ್ಟಂತಾಯ್ತು. ಮಗುವಿನಂತೆ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಹಾಲುಚೆಲ್ಲಿದ ನಂತರ ಅತ್ತು ಫಲವೇನು? ಬಹಳ ಹೊತ್ತಿನ ಮೇಲೆ ತಾನೇ ಚೇತರಿಸಿಕೊಂಡಳು. ಜೀವನಕ್ಕೆ ಬೇರೆ ಉಪಾಯವಿಲ್ಲದೆ ಒಂದೊಂದಾಗಿ ಮಾರಲುಪಕ್ರಮಿಸಿದಳು. ದಿನೇ ದಿನೇ ದುಃಖದಿಂದ ಕೊರಗಿ ಕೃಷವಾಗುತ್ತಾ ಬಂದಳು. ಈಗ ಸ್ವತಃ ಉಪೇಂದ್ರನೇ ಬಂದರೂ ಅವಳನ್ನು ಗುರ್ತಿಸುವುದು ಕಷ್ಟವಾಗಿದ್ದಿತು. ಮಕ್ಕಳ ನೆನಪಾದಾಗ ಅವಳ ಹೃದಯವು ಒಡೆದುಹೋಗುವುದು. ಸ್ವಲ್ಪ ಮಟ್ಟಿಗೆ ತನ್ನ ದುಃಖವನ್ನು ಮರೆಯಲು ಚಂಚಲೆಯೆಂಬ ಸ್ನೇಹಿತಳ ಮನೆಗೆ ಹೋಗುತ್ತಿದ್ದಳು. ಅವಳೀಗ ಗುರುತು ಸಿಗದಂತೆ ಮುಖಾವರಣವನ್ನು ಹಾಕಿಕೊಂಡು ಹೆಸರನ್ನು ‘ಶಾಲಿನಿ’ ಎಂದು ಮಾರ್ಪಡಿಸಿಕೊಂಡಿದ್ದಳು. ಇನ್ನು ಮುಂದೆ ನಾವೂ ಅವಳನ್ನು ಶಾಲಿನಿಯೆಂದೇ ಕರೆಯುವೆವು.

ಚಂಚಲೆಯು ರಾಮರಾಯನೆಂಬ ಧನಿಕನ ಮಗಳು. ಒಂದು ದಿನ ಮಾತನಾಡುವಾಗ ಆಕಸ್ಮಾತ್ತಾಗಿ ಉಪೇಂದ್ರನ ವಿಷಯವು ಬಂದಿತು.

ಚಂಚಲೆ : ಶಾಲಿನಿ, ರಾಮದುರ್ಗದಲ್ಲಿ ಉಪೇಂದ್ರನೆಂದು ನೇಯ್ಗೆಯ ಅಧಿಕಾರಿಯೊಬ್ಬನಿರುವನು, ಬಲ್ಲೆಯಾ

ಶಾ: ಇಲ್ಲ. (ಶಾಲಿನಿಯ ಮುಖವು ಕೆಂಪೇರಿತು. ಚಂಚಲೆಯು ಅದನ್ನು ಗಮನಿಸಲಿಲ್ಲ.)

ಚಂ : ಅವನು ಮಹಾ ಸದ್ಗುಣಿ. ಅವನಿಗೆ ಶೈವಲಿಯೆಂದು ಸುಖಸಾಗರದಲ್ಲಿ ತೇಲುತ್ತಿದ್ದ ಅವಳನ್ನು ನೋಡಿ ಇತರರು ಹೊಟ್ಟೆಕಿಚ್ಚು ಪಡುತ್ತಿದ್ದರು. ಆದರೆ ಆ ಪಾಪಿಷ್ಟಳು ಯಾವನೋ ನೀಚನ ಮಾತನ್ನು ಕೇಳಿ ಇಲ್ಲದ ಅಪವಾದವನ್ನು ಅವನ ಮೇಲೆ ಹೊರಿಸಿ ಹಾಳಾಗಿ ಹೋದಳು. ಉಪೇಂದ್ರನು ದಾರುಣವಾದ ದುಃಖಕ್ಕೆ ಒಳಗಾದನು. ಆರು ತಿಂಗಳೊಳಗೆ ಅವನ ಮಗ ಮಾಧವನು ಆರೈಕೆ ಮಾಡುವವರಿಲ್ಲದೆ ಕ್ಷಯರೋಗದಲ್ಲಿ ಮೃತನಾದನು.

ಶಾಲಿನಿಯು ನಿಟ್ಟುಸಿರು ಬಿಟ್ಟುದನ್ನು ಕೇಳಿ ಚಂಚಲೆಯು ತಿರುಗಿ ನೋಡಿದಳು. ಅವಳ ಕಣ್ಣಿನಲ್ಲಿ ಅವಿರಳವಾಗಿ ಅವಳ ಹೃದಯವನ್ನು ಸುರಿಯುತ್ತಲಿದ್ದಿತು. ಚಂಚಲೆಯ ಒಂದೊಂದು ಮಾತೂ ಅವಳ ಹೃದಯವನ್ನು ಭೇದಿಸುವಂತಿದ್ದಿತು.

ಚಂ : ಶಾಲಿನಿ! ಇದೇನು? ನೀನವಳ ವಿಷಯವಾಗಿ ಏನಾದರೂ ಬಲ್ಲೆಯಾ?

ಶಾ: ಇಲ್ಲ. ಚಂಚಲೆ, ನನಗೂ ಒಬ್ಬ ಮಗನಿದ್ದನು; ಆ ಕಂದನೂ ಕ್ಷಯದಲ್ಲಿಯೇ ಪ್ರಾಣವನ್ನು ತ್ಯಜಿಸಿದನು. ಆದರೆ ಈ ಅಭಾಗಿನಿಯು ಅವನ ಮೃತಕಾಲದಲ್ಲಿ ಸಮೀಪದಲ್ಲಿದ್ದು ಉಪಚರಿಸದೆ ಹೋದಳು.

ಚಂ : ಕ್ಷಮಿಸು, ನನಗಿದು ತಿಳಿದಿರಲಿಲ್ಲ.

ಶಾ: (ಸ್ವಲ್ಪ ಹೊತ್ತಿನ ನಂತರ) ಹೇಳು ಚಂಚಲೆ, ಪುನಃ ಅವನು ವಿವಾಹವಾದನೆ?

ಚಂ : ಅಹುದು. ತಾಯಿಯ ಬಲಾತ್ಕಾರದಿಂದ ಚಂಪಾವತಿಯೆಂಬುವಳನ್ನು ವಿವಾಹವಾದನು. ಕೆಲವು ದಿನಗಳಲ್ಲಿಯೇ ಆ ವೃದ್ಧಳು ತೀರಿಹೋದಳು. ಶಾಲಿನಿಯು ಮರ್ಮಾಹತಳಾದಳು. ಸಹಸ್ರವೃಶ್ಚಿಕಗಳು ಏಕಕಾಲದಲ್ಲಿ ಕಡಿದಂತಾಯ್ತು. ಶಾಂತಿಯ ವಿಷಯದಲ್ಲಿ ತಾನು ಪಟ್ಟ ಅನುಮಾನವು ಕೇವಲ ತಪ್ಪೆಂದು ಈಗ ಅರ್ಥವಾಯ್ತು. ಚಂಚಲೆಯು ಮುಂದೆ ಹೇಳತೊಡಗಿದಳು. “ಅವನಿಗೆ ಸರಸೆಯೆಂಬ ಮಗಳೊಬ್ಬಳಿರುವಳು. ಅವಳೂ ಬರಬರುತ್ತಾ, ಕೃಶವಾಗುತ್ತಿರುವಳಂತೆ; ಆದುದರಿಂದ ನೋಡಿಕೊಳ್ಳಲು ದಾಸಿಯೊಬ್ಬಳು ಬೇಕು. ಒಳ್ಳೆಯವರಾರಾದರೂ ಇದ್ದರೆ ಹೇಳಬೇಕೆಂದು ನಮ್ಮ ತಂದೆಗೆ ಬರೆದಿರುವರು.

ಶಾಲಿನಿಯು ಮನಸ್ಸಿಗೆ ಆವುದೋ ಒಂದು ಉತ್ತೇಜಕವಾದ ಅಭಿಪ್ರಾಯವು ಹೊಳೆಯಿತು.

ಶಾ: ಚಂಚಲೆ! ಈ ಪ್ರಪಂಚಲದಲ್ಲಿ ನನಗೆ ನನ್ನವರೆನ್ನುವವರಾರೂ ಇಲ್ಲ. ಅಲ್ಲದೆ ಮಕ್ಕಳ ಖಾಯಿಲೆಯ ವಿಷಯದಲ್ಲಿ ಹೆಚ್ಚು ಅನುಭವಸ್ಥಳು.

ಚಂ : ಹಾಗೆಂದು ದಾಸಿಯಾಗುವೆಯಾ?

ಶಾ : ನಿರರ್ಥಕಳಾಗಿ ಜೀವಿಸುವುದಕ್ಕೆ ಬದಲು ತಾಯಿಯಿಲ್ಲದ ಆ ಕೂಸಿಗೆ ಉಪಕಾರ ಮಾಡುವುದು ಉತ್ತಮವಲ್ಲವೆ?

ಚಂ : (ಸ್ವಲ್ಪ ಯೋಚಿಸು) ನಿಜ ಶಾಲಿನಿ. ನಮ್ಮ ತಂದೆಯು ಒಂದು ಮಾತು ಹೇಳಿದರೆ ಅವರು ಒಪ್ಪುವರು. ಆದುದರಿಂದ ಯೋಚಿಸಿ ಹೇಳು. ಇನ್ನೂ ಸಮಯವಿದೆ.

ಶಾ: ಚಂಚಲೆ, ಯೋಚಿಸಿಯೇ ಹೇಳಿದೆನು. ವಿಳಂಬವು ಒಳ್ಳೆಯದಲ್ಲ. ಅವರು ದಯವಿಟ್ಟು ಇಂದೇ ಪತ್ರವನ್ನು ಬರೆದರೆ ನಾನು ನಾಳೆನೇ ಖಂಡಿತವಾಗಿ ಹೊರಡುವೆನು.

ಶಾಲಿನಿಯು ಬೀಳ್ಗೊಂಡು ಮನೆಗೆ ಹೋದಳು.

ಒಂಭತ್ತನೆಯ ಪರಿಚ್ಛೇದ

ಶಾಂತಿಯು ತನ್ನ ಕೊಠಡಿಯ ಕಿಟಕಿಯ ಬಳಿನಿಂತಿದ್ದಳು. ಹನ್ನೆರಡು ಘಂಟೆಯಾದರೂ ಇನ್ನೂ ನಿದ್ರೆಯಿಲ್ಲ. ಕಾರಣವೇನು? ಅಮೃತಕರನು ಪತ್ರ, ಪುಷ್ಟಫಲಗಳಲ್ಲಿ ತನ್ನ ಕಿರಣಗಳನ್ನು ಬೀರಿ ಕ್ರೀಡಿಸುತ್ತಿದ್ದುದನ್ನು ನೋಡುತ್ತಿದ್ದಳೆ? ಆದರೆ ಇದೇಕೆ ಶೂನ್ಯದೃಷ್ಟಿ? ಮಲಯಮಾರುತನ ಸುಖಸೇವನೆಯಿಂದ ತೃಪ್ತಿಹೊಂದುತ್ತಲಿದ್ದಳೆ? ಇಲ್ಲ. ಪ್ರತಿಯೊಬ್ಬರಿಂದಲೂ ಪ್ರೀತಿಸಲ್ಪಡುವ ನಮ್ಮ ಚತುರ ಉಪಾಧ್ಯಾಯಿನಿಗೆ ಶಾಲೆಯ ಸಂಬಂಧ ಕಂಬನಿಗರಿಯುವಂತೆ ಚಿಂತೆಯಾದರೂ ಏನಿದ್ದಿತು? ಶಾಂತಿಯು ಅಸ್ಪಷ್ಟವಾಗಿ ತಾನೇ ಮಾತನಾಡಿಸಿಕೊಳ್ಳಲು ಪ್ರಾರಂಭಿಸಿದಳು. ಆತ್ಮಘಾತವು ಅತಿ ಹೇಯವಾದುದು. ಪರಮಾತ್ಮ! ಕೃಪಾಕರ! ಇದುವರೆಗೂ ಹೇಗೆ ತಾಳ್ಮೆಯಿಂದ ಸಹಿಸುವಂತೆ ಶಕ್ತಿಯನ್ನು ಕೊಟ್ಟೆಯೋ ಇನ್ನು ಮುಂದೆಯೂ ಹಾಗೆಯೇ ಶಕ್ತಿಯನ್ನು ಕೊಡು. ತೊಂದರೆಯುಂಟಾಗಬಾರದೆಂಬ ಆ ಊರನ್ನೇ ಬಿಟ್ಟುಬಂದರೂ ನನ್ನಿಂದಲೇ ಇಂತಹ ಸಂಕಟವುಂಟಾಯ್ತೆ? ಆವ ಕಾಲಕ್ಕೆ ಏನೇನು ನಡಿಯಬೇಕೋ ಅದು ನಡಿಯಲೇಬೇಕು. ಸಹಜೀವನದಲ್ಲಿ ನನಗಾವ ಆಸೆಯೂ ಇಲ್ಲ. ಈ ಕೆಲಸವೂ ಸಾಕು. ಕೆಲವು ಅನಾಥ ಬಾಲೆಯರೊಡನೆ ಆ ಸದಾನಂದನ ಭಜನೆಯಲ್ಲಿ ನನ್ನೀ ಜೀವನವನ್ನು ಕಳೆಯುವೆನು. ಅದೇ ಸರಿಯಾದ ಮಾರ್ಗ” ಶಾಂತಿಯು ಈ ರೀತಿಯಾಗಿ ತನ್ನ ಮುಂದಿನ ಮಾರ್ಗವನ್ನು ನಿರ್ಧರಿಸಿ ನಿದ್ರಾಗತಳಾದಳು.

ಮರುದಿನ ಅಧ್ಯಕ್ಷಳಾದ ಗಿರಿನಂದಿನಿಯನ್ನು, ನೋಡಲು ಹೋದಳು. ಅವಳು ಅತ್ಯಂತ ಆದರದಿಂದ ಬರಮಾಡಿಕೊಂಡು ಆಸನವನ್ನು ಗ್ರಹಿಸುವಂತೆ ಹೇಳಿದಳು.

ಶಾಂ : ತಮಗೆ ಸಮಯವಿದ್ದರೆ ಒಂದೆರಡು ಮಾತುಗಳನ್ನಾಡುವುದಕ್ಕೆ ಬಂದೆನು.

ಗಿರಿ: ಅಗತ್ಯವಾಗಿ ಆಗಬಹುದು. ವಿಷಯವೇನು?

ಶಾಂ: “ಉಪಾಧ್ಯಾಯಿನಿಯ ವೃತ್ತಿಯನ್ನು ಕೈಗೊಂಡು ಈಗ ಆರು ವರ್ಷಗಳಾದುವು. ಕಾರ್ಯವನ್ನು ತೃಪ್ತಿಕರವಾಗಿ ಮಾಡುತ್ತಿರುವೆನೋ ಇಲ್ಲವೊ? ಅದು ನನಗೆ ತಿಳಿಯದು. ಅಂತೂ ಇನ್ನು ಈ ವೃತ್ತಿಯನ್ನು ಅನುಸರಿಸುವ ಅಭಿಲಾಷೆಯಿಲ್ಲ. ಪಿತ್ರಾರ್ಜಿತವಾದ ಆಸ್ತಿಯು ತಕ್ಕಮಟ್ಟಿಗಿರುವುದು. ಒಂಟಿಗಳಾದ ನನಗೆ ಧನದಿಂದಲಾದರೂ ಆಗಬೇಕಾದುದೇನು? ಇರುವ ಧನದಲ್ಲಿಯೇ ಒಂದು ಸಣ್ಣ ಕುಟೀರದಲ್ಲಿ ಕೆಲವು ಅನಾಥ ಬಾಲೆಯರೊಂದಿಗೆ ದೇವರ ಸೇವೆಯನ್ನು ಮಾಡಿಕೊಂಡಿರಬೇಕೆಂದು ಯೋಚಿಸುತ್ತೇನೆ. ಆದುದರಿಂದ ತಾವು ದಯವಿಟ್ಟು ನಾನು ಅಪ್ಪಣೆಯನ್ನು ನೀಡಬೇಕು. ತಾನು ನನ್ನಲ್ಲಿ ತೋರಿಸಿದ ಆದರೋಪಾಚಾರಗಳಿಗೆ ನಾನು ಜನ್ಮಾವಧಿಯೂ ಕೃತಜ್ಞಳಾಗಿರುವೆನು.”

ಶಾಂತಿ ಕಂಠವು ಬಿಗಿದುಬಂದಿತು. ಮುಂದೆ ಮಾತನಾಡಲಾರದೆ ಹೋದಳು.

ಗಿರಿ: ಅದೇಕೆ ಶಾಂತಿ? ಇದೊಂದು ವಿಧವಾದ ದೇಶ ಸೇವೆಯಲ್ಲವೆ? ದೇಶಸೇವೆಯನ್ನು ಮಾಡಿದರೆ ದೇವರ ಸೇವೆಯನ್ನು ಮಾಡಿದಂತಲ್ಲವೆ? ಇಷ್ಟೊಂದು ಬೇಸರವೇಕೆ? ನಿನಗಾವುದರಲ್ಲಿ ಕೊರತೆಯಿದ್ದರೂ ಅದನ್ನು ಮರೆಮಾಚದೆ ಹೇಳು. ಬಲಗೈಯಂತಿರುವ ನಿನ್ನನ್ನು ಕಳೆದುಕೊಂಡು ನಾನೇನು ಮಾಡಲಿ? ನೀನು ಬಂದಾಗಿನಿಂದ ವಿದ್ಯಾನಿಲಯವು ಶುಕ್ಲಪಕ್ಷದ ಚಂದ್ರನಂತೆ ವೃದ್ಧಿಹೊಂದುತ್ತಲಿದೆ. ಅದು ಕ್ಷೀಣದೆಸೆಗೆ ಬರುವುದನ್ನು ನೋಡಲು ನಿನಗಿಷ್ಟವೆ? ಆರಾದರೂ ನಿಂದಿಸಿದ್ದರೆ ಸ್ಪಷ್ಟವಾಗಿ ಹೇಳು. ನಾನು ತಕ್ಕಶಿಕ್ಷೆಯನ್ನು ವಿಧಿಸುವೆನು. ನಿನ್ನನ್ನು ಖಂಡಿತವಾಗಿಯೂ ಬಿಡಲಾಗುವುದಿಲ್ಲ.

ಶಾಂ: ತಾಯಿ! ನನ್ನನ್ನಾರು ನಿಂದಿಸಲಿಲ್ಲ. ಒಡಹುಟ್ಟಿದ ಸಹೋದರಿಯಂತೆ ಪ್ರೀತಿಸುತ್ತಿರುವರು. ಆದರೆ ನನಗೀಗ ಆಸಕ್ತಿಯಿಲ್ಲ. ನನ್ನಂತೆಯೇ ಕೆಲಸ ಮಾಡುವುದಕ್ಕೆ ಶಕ್ತಿಯುಳ್ಳ ವಿದ್ಯಾರ್ಥಿನಿಯರು ಇದೇ ಶಾಲೆಯಿಂದಲೇ ಈ ಸಾರಿ ತೇರ್ಗಡೆ ಹೊಂದಿರುವರು. ನಿಮ್ಮ ಕಾರ್ಯಕ್ಕೆ ಯಾವ ವಿಧವಾದ ತೊಂದರೆಯೂ ಉಂಟಾಗದು. ದಯೆವಿಟ್ಟು ನನಗಪ್ಪಣೆಯನ್ನೀಯಬೇಕು.

ಗಿರಿ: ನಿನಗೆ ಪ್ರತಿಯಾಗಿ ಹೇಳುವುದಕ್ಕೆ ನನಗಿಷ್ಟವಿಲ್ಲ. ಆದರೆ ಇಷ್ಟೊಂದ ವಿರಕ್ತಿಯೇಕೆ?

ಶಾಂ: ವಿರಕ್ತಿಯಿಲ್ಲ. ಈ ವಿಶ್ವಪ್ರಪಂಚದಲ್ಲಿ ನನ್ನವರೆನ್ನುವರು ಯಾರೂ ಇಲ್ಲ. ಕೆಲವು ಅನಾಥಬಾಲೆಯರಿಗಾದರೂ ಆಧಾರವಾಗಿರಬೇಕೆಂಬುದೊಂದೇ ಅಭಿಲಾಷೆ.

ಗಿರಿ: ಶಾಂತಿ, ನಿನ್ನನ್ನು ಬಹುದಿನಗಳಿಂದಲೂ ಪ್ರಶ್ನಿಸಬೇಕೆಂದಿದ್ದೆ, ನೀನು ಮನಸ್ಸಿಗೆ ವ್ಯಥೆಯನ್ನುಂಟು ಮಾಡಿಕೊಳ್ಳದಿದ್ದರೆ ಕೇಳುವೆನು.

ಶಾಂ: ಅಗತ್ಯವಾಗಿ ಕೇಳಬಹುದು.

ಗಿರಿ: ಸುಗುಣ ಸೌಜನ್ಯಗಳಿಗೆ ನಿಧಿಯಾದ ನೀನು ಇನ್ನೂ ಅವಿವಾಹಿತಳಾಗಿರಲೂ ಕಾರಣವೇನು?

ಶಾಂ : (ಗದ್ಗದಿತಳಾಗಿ) ಅಂತಹ ಸುಖವನ್ನು ಪಡೆದಿಲ್ಲ ತಾಯಿ! ನಾನು ಅಭಾಗಿನಿ. ಅದರ ಕಾರಣವನ್ನು ಯಾರ ಮುಂದೆಯೂ, ಯಾವಾಗಲೂ ಹೇಳುವುದಿಲ್ಲವೆಂದು ಶಪಥಮಾಡಿದ್ದೇನೆ, ಕ್ಷಮಿಸಿ.

ಗಿರಿ: ಒಳ್ಳೇಯದಮ್ಮ, ನಿನಗೆ ದೇವರು ಪೂರ್ಣವಾಗಿ ಅನುಗ್ರಹಮಾಡಲಿ! ಶಾಂತಿಯು ಹಿಂದಿರುಗಿದಳು. ಅವಳು ಹೊರಡುವುದಕ್ಕೆ ಹಿಂದಿನ ದಿನ ಬಾಲೆಯರೆಲ್ಲರಿಗೂ ಈ ಸಂಗತಿಯು ತಿಳಿಯಿತು. ಪ್ರತಿಯೊಬ್ಬರೂ ರೋಧಿಸತೊಡಗಿದರು. ಮರುದಿನ ನಾಲ್ಕೈದು ತಟ್ಟೆಗಳ ತುಂಬ ಫಲಪುಷ್ಪಗಳನ್ನೂ ಉತ್ತಮವಾದ ನಕ್ಷೆ ಕೆಲಸ ಮಾಡಿದ ಒಂದು ಕುಂಕುಮದ ಪೇಲೆಯನ್ನೂ ಕೃತಜ್ಞಪೂರ್ವಕವಾದ ನಾಲ್ಕಾರು ಮಾತುಗಳೊಡನೆ ತಂದೊಪ್ಪಿಸಿದರು. ಶಾಂತಿಯು ಹಲವು ಬುದ್ದಿವಾದದ ಮಾತುಗಳನ್ನು ಹೇಳಿ, ತಿಳಿಯದೆ ತಾನೇನು ತಪ್ಪು ಮಾಡಿದ್ದರೂ ಕ್ಷಮಿಸಬೇಕೆಂದು ಕೇಳಿಕೊಂಡಳು. ಪ್ರತಿಯೊಬ್ಬರ ಕಣ್ಣಿನಲ್ಲಿಯೂ ಧಾರಾಕಾರವಾಗಿ ಅಶ್ರುವು ಸುರಿಯಲಾರಂಭವಾಯಿತು. ಶಾಂತಿಯು ದುಃಖವನ್ನು ತಡಿಯಲಾರದೆ ಹೋದಳು. ವಿಳಂಬವಾದಷ್ಟು ದುಃಖವು ಹೆಚ್ಚುವುದೆಂದು ಎಲ್ಲರಿಂದಲೂ ಬೀಳ್ಗೊಂಡು ಆ ಕ್ಷಣವೇ ಹೊರಟಳು.

ಹತ್ತನೆಯ ಪರಿಶ್ಛೇದ

ಈಗ ‘ಮನೋನಿಧಿ’ಗೆ ಚಂಪೆಯೇ ಅಧಿಕಾರಿ. ಇವಳು ಕಠಿಣವೆನಿಸಿಕೊಳ್ಳದಿದ್ದರೂ ಒಳ್ಳೆಯವಳೆನಿಸಿಕೊಂಡಿರಲಿಲ್ಲ. ಸೇವಕರೆಲ್ಲರೂ ಶೈವಲೆಯನ್ನು ಬಹಳವಾಗಿ ಜ್ಞಾಪಿಸಿಕೊಳ್ಳುತ್ತಾ” ಅವಳಿಗಾಗಿ ಮರುಕಪಡುತ್ತಿದ್ದರು. ರಾಧೆಯೆಂಬ ಸೇವಕಿಯು ಎದುರುಬಾಗಿಲಲ್ಲಿ ಯಾರನ್ನೋ ಇದಿರುನೋಡುತ್ತಿದ್ದಳು. ಸ್ವಲ್ಪ ಹೊತ್ತಿನೊಳಗಾಗಿ ಒಂದು ಗಾಡಿಯು ಬಂದು ನಿಂತಿತು. ಗಾಡಿಯಿಂದ ಒಬ್ಬ ಸ್ತ್ರೀಯು ಇಳಿದುಬಂದಳು. ರಾಧೆಯು ಜಾಗ್ರತೆಯಿಂದ ಮುಂದೆ ಬಂದು ‘ಶಾಲಿನಿಯೆನ್ನುವವರು ತಾವೆ? ಪದ್ಮಪುರದಿಂದ ಬಂದಿರಾ?” ಎಂದು ಕೇಳಿದಳು. ಸ್ತ್ರೀಯು “ಅಹುದೆಂದು” ಉತ್ತರವಿತ್ತಳು. ರಾಧೆಯು ಗಾಡಿಯಲ್ಲಿದ್ದ ಸಾಮಾನನ್ನು ಒಳಗಿಡಿಸಿ ಶಾಲಿನಿಯನ್ನು ಕರೆದುಕೊಂಡು ಹೋದಳು. ಪ್ರತಿಕ್ಷಣದಲ್ಲಿಯೂ ‘ಉಪೇಂದ್ರನು ಎಲ್ಲಿ ಇದಿರುಬರುವನೋ ತನ್ನನ್ನು ಎಲ್ಲಿ ಗುರ್ತಿಸುವನೋ’ ಎಂದು ಶಾಲಿನಿಯ ಹೃದಯವು ಹೊಡೆದುಕೊಳ್ಳಲಾರಂಭವಾಯಿತು. ಮುಖಾವರಣವನ್ನು ಘಟ್ಟಿಯಾಗಿ ಎಳೆದುಕೊಂಡಳು. ಎಲ್ಲಿ ರಾಜ್ಯವಾಳುತ್ತಿದ್ದಳೋ ಅಲ್ಲಿ ಪರಿಕೀಯಳಂತೆ ತನ್ನ ಸೇವಕಿಯ ಹಿಂದೆ ದಗ್ಧಹೃದಯಳಾಗಿ ಹೋಗತೊಡಗಿದಳು.

ರಾಧೆಯು ಮಹಡಿಯ ಮೇಲೆ ಒಂದು ಕೊಠಡಿಗೆ ಕರೆದು ಹೋಗಿ “ಇಂದು ನಿಮಗಾಗಿ ಸಿದ್ಧ ಮಾಡಲ್ಪಟ್ಟಿದೆ. ಮತ್ತು ನಿಮ್ಮ ಕೆಲಸಗಳಿಗಾಗಿ ನನ್ನನ್ನು ನೇಮಿಸಿರುವರು. ಏನು ಬೇಕಾದರೂ ನಿಸ್ಸಂಕೋಚವಾಗಿ ಹೇಳಿದರೆ ತಂದುಕೊಡುವೆನು. ಈಗ ಹೋಗಿ ಉಪಾಹಾರಕ್ಕೆ ಸಿದ್ಧಪಡಿಸುವೆನು. ನಿಮಗೆ ಕೆಳಗೆ ಬರುವುದಕ್ಕೆ ದಾರಿ ತಿಳಿವುದಷ್ಟೆ”

ಪ್ರತಿಯೊಂದು ಮೂಲೆಯಲ್ಲಿದ್ದ ಪದಾರ್ಥವನ್ನೂ ಹೇಳಬಲ್ಲ ಅವಳಿಗೆ ದಾರಿ ತಿಳಿಯದೆ! ಅತಿ ಕ್ಷೀಣಸ್ವರದಲ್ಲಿ “ತಿಳಿಯುವುದು” ಎಂದಳು. ರಾಧೆಯು ಹೋದೊಡನೆಯೇ ಬಾಗಿಲಿನ ಅಗಣಿಯನ್ನು ಹಾಕಿ ಅಲ್ಲಿಯೇ ಕುಳಿತಳು. ಸರಸೆಯನ್ನು ಆ ಕ್ಷಣವೇ ನೋಡಿ ಮುದ್ದಿಸಬೇಕೆಂದು ಜೀವವು ತುಡಿದುಕೊಳ್ಳುತ್ತಿದ್ದರೂ ಅವಳಾರಿಗೂ ಮುಖವನ್ನು ತೋರಿಸುವ ಸ್ಥಿತಿಯಲ್ಲಿರಲಿಲ್ಲ. ಕೈಕೊಂಡ ಕಾರ್ಯವು ಎಷ್ಟು ಕಠಿಣವಾದುದೆಂದು ಆಗ ಭೋದೆಯಾಯ್ತು. ಸಹಿಸಲಸದಳವಾದ ಯಾತನೆಯುಂಟಾಗಿ ಕಂಬನಿಯು ಪ್ರವಹಿಸತೊಡಗಿದವು. ಅಂಜಲಿಬದ್ದಳಾಗಿ ತಾನು ಹಸುಕೂಸಿಗಾಗಿ ಕೈಕೊಂಡ ಕಾರ್ಯವನ್ನು ಶಾಂತಚಿತ್ತದಿಂದ ನಿರ್ವಹಿಸುವಂತೆ ಶಕ್ತಿಕೊಡಲು ಆ ಶರಣಾಗತ ರಕ್ಷಕನನ್ನು ಪ್ರಾರ್ಥಿಸಿದಳು! ಶಾಲಿನಿ! ‘ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಮ್’

ಸ್ವಲ್ಪ ಹೊತ್ತಿನ ಮೇಲೆ ಚೇತರಿಸಿಕೊಂಡು ಫಲಾಹಾರದ ಶಾಸ್ತ್ರವನ್ನು ಮಾಡಿದಳು. ಅನಂತರ ರಾಧೆಯು ಬಂದು, ‘ನಿಮಗೆ ಪ್ರಯಾಣದಿಂದ ಹೆಚ್ಚು ಆಯಾಸವಾಗದಿದ್ದರೆ ಅಮ್ಮನವರು ನೋಡುವುದಕ್ಕೆ ಇಷ್ಟಪಡುತ್ತಾರೆಂದು ತಿಳಿಸಿದಳು. ಹಗಲು ಹೊತ್ತಿಗಿಂತ ರಾತ್ರಿ ನೋಡುವುದೇ ಉತ್ತಮವೆಂದು ಕೂಡ್ಲೆ ಎದ್ದು ಹೋದಳು. ಚಂಪೆಯು ಕುಳಿತುಕೊಳ್ಳುವಂತೆ ಹೇಳಿದಳು.

ಚಂಪೆ : ಬಹಳ ಆಯಾಸವಾದಂತೆ ಕಾಣುತ್ತೆ, ನೀವು ಇಷ್ಟಪಟ್ಟರೆ ನಾಳೆಯೇ ಮಾತನಾಡೋಣ.

ಶಾಲಿನಿ: ಇಲ್ಲ, ನನಗೇನು ಅಷ್ಟು ಆಯಾಸವಾಗಿಲ್ಲ.

ಚಂಪೆ : ನಿಮಗೆ ಮಕ್ಕಳಿದ್ದರೆಂದು ಚಂಚಲೆಯು ಬರೆದಿದ್ದಳು. ಎಷ್ಟು ಜನ ಮತ್ತು ಅವರು ಏತರಿಂದ ಮರಣಹೊಂದಿದರೆಂದು ಕೇಳಬಹುದೆ?

ಶಾ: (ನಿಟ್ಟುಸಿರುಬಿಟ್ಟು)ನನಗೆ ಇಬ್ಬರು ಮಕ್ಕಳಿದ್ದರು. ಇಬ್ಬರೂ ವಿಷಮಶೀತಜ್ವರದಲ್ಲಿ ಕಾಲವಾಗಿ ನನ್ನನ್ನು ನಿರ್ಗತಿಕಳನ್ನಾಗಿ ಮಾಡಿದರು!

ಚಂ : ಬಹುಕಷ್ಟ! ಆದರೆ ಅದೃಷ್ಟಕ್ಕೇನು ಮಾಡುವುದು? ನೀವು ಈಗಿಲ್ಲಿಗೆ ಬಂದಿರುವುದು ಅವರ ಮೊದಲನೆಯ ಹೆಂಡತಿಯ ಮಗಳನ್ನು ನೋಡಿಕೊಳ್ಳುವುದಕ್ಕೆ; ಅದು ತಿಳಿದಿರುವುದಷ್ಟೆ?

ಶಾ: ಅಹುದು! ಮಗುವು ಆರೋಗ್ಯಸ್ಥಿತಿಯಲ್ಲಿಲ್ಲವೆಂದು ಕೇಳಿದೆ.

ಚ: ಆರೋಗ್ಯವಿಲ್ಲದೆ ಏನು! ಸ್ವಲ್ಪ ಬಡವಾಗಿರುವುದು. ತಾಯಿಯ ಆರೈಕೆಯಿಲ್ಲದುದರಿಂದ ಅದು ಸ್ವಾಭಾವಿಕ. ಅವಳ ತಾಯಿಯ ವಿಷಯ ಗೊತ್ತಷ್ಟೆ?

ಶಾ: ಕೇಳಿಬಲ್ಲೆನು, ಆಕೆಯು ಮೃತಳಾದಳೆಂದೂ ಕೇಳಿದೆನು.

ಚ: ಅಹುದು, ಈಚೆಗೆ ಪಾಪಮಯವಾದ ಜೀವನವು ಕೊನೆಗಂಡಿತಂತೆ. ಆ ಪಾಪಿಷ್ಟಳು ಬಂಗಾರದಂತಹ ಮನುಷ್ಯನ ಮೇಲೆ ಕಳಂಕವನ್ನು ಹೊರಿಸಿಹೋದಳು. ಜನರೆಲ್ಲರೂ ಆ ಹುಡುಗಿಯ ಕಡೆ ಕೈತೋರಿಸಿ ಮಾತಾಡಿಕೊಳ್ಳುವರಂತೆ. ಆದುದರಿಂದ ನೀವಾದಷ್ಟು ಪ್ರಯತ್ನಪಟ್ಟು ಅವಳ ತಾಯಿಯ ದುಷ್ಟಗುಣಗಳು ಅಂಕುರಿಸದಂತೆ ಮಾಡಬೇಕು. ಮತ್ತು ಆ ಹುಡುಗಿಯು ಆಗಾಗ್ಗೆ ತನ್ನ ತಾಯಿಯ ವಿಷಯ ಮಾತನಾಡುವಳಂತೆ; ನೀವದಕ್ಕೆ ಉತ್ತೇಜನ ಕೊಡಲಾಗದು.

ಈ ಸಮಯಕ್ಕೆ ಉಪೇಂದ್ರನು ಬಂದನು. ಶಾಲಿನಿಗೆ ಏನು ಮಾಡುವುದಕ್ಕೂ ತೋಚದೆ ಹೋಯಿತು. ಎಂದಾದರೂ ಒಂದು ದಿನ ಎದುರಿಸಲೇ ಬೇಕು. ಆದಷ್ಟು ಜಾಗ್ರತೆ ಒಳ್ಳೆಯದೆಂದು ಹಾಗೆಯೇ ನಿಂತಳು. ಉಪೇಂದ್ರನು ಚಂಪೆಯ ಬಳಿ ಇದ್ದ ಎಳೆಯ ಮಗುವನ್ನು ಎತ್ತಿಕೊಂಡು ಆದರದಿಂದ ಮುದ್ದಿಟ್ಟನು.

ಶಾಲಿನಿಯ ಹೃದಯದಲ್ಲಿ ಶೂಲವನ್ನು ನೆಟ್ಟಂತಾಯ್ತು. ಹಿಂದೊಂದು ಸಾರಿ ತನ್ನ ಮಗುವನ್ನು ಹೀಗೆಯೇ ಆದರಿಸಿದ್ದನು! ಆಗ ತಾನೂ ಹೀಗೆಯೇ ಸಂತೋಷದಿಂದ ಪಕ್ಕದಲ್ಲಿ ನಿಂತಿದ್ದಳು! ಈಗ ಅಪರಿಚಿತೆ!

ಉ : (ಶಾಲಿನಿಯ ಕಡೆಗೆ ತಿರುಗಿ) ನಿಮಗೆ ಪ್ರಯಾಣದಲ್ಲೇನೂ ಕಷ್ಟವಾಗಲಿಲ್ಲವಷ್ಟೆ?

ಶಾ: ಇಲ್ಲ, ಎಲ್ಲವೂ ಅನುಕೂಲವಾಗಿದ್ದಿತು.

ಉ: ಇಲ್ಲಿ ನೀವು ದಾಕ್ಷಿಣ್ಯ ಪಡಬೇಕಾದುದಿಲ್ಲ. ನಿಮ್ಮ ಮನೆಯೆಂದೇ ಭಾವಿಸಬೇಕು. ಮಗುವನ್ನು ನೋಡಿದಿರಷ್ಟೇ?

ಶಾ: ಮಗುವು ಮಲಗಿರುವುದಾಗಿ ಹೇಳಿದರು! ನೋಡಲಾಗಲಿಲ್ಲ.

ಉಪೇಂದ್ರನು ಚಂಪೆಯ ಕಡೆ ನೋಡಿದನು. ಅವಳು, “ಇಂದೇ ಬಂದಿರುವರು. ಕೊಂಚ ಆಯಾಸವನ್ನು ಪರಿಹರಿಸಿಕೊಳ್ಳಲೆಂದು ಹಾಗೆ ಹೇಳಿದೆ. ನಾಳೆ ಬೆಳಿಗ್ಗೆ ನೋಡುವರು” ಉಪೇಂದ್ರನ ಮುಖಭಾವವು ಈ ಉತ್ತರದಿಂದ ತೃಪ್ತಿಹೊಂದಿದಂತೆ ತೋರಲಿಲ್ಲ. ಯಾರೂ ಮಾತನಾಡಲಿಲ್ಲ. ಮೌನವು ಅಸಹ್ಯಕರವಾಗಿದ್ದಿತು. ಕಡೆಗೆ ಉಪೇಂದ್ರನು “ಇವಳನ್ನು ನೋಡಿದಿರಾ” ಎಂದು ಮಗುವನ್ನು ಶಾಲಿನಿಗೆ ತೋರಿದನು.

ಶಾ: ಮುದ್ದಾದ ಮಗು. ತಂದೆಯನ್ನೇ ಹೋಲುವುದು! ಹೆಸರೇನು?

ಉ: (ನಗುತಾ) ಇವಳು ರಾಜಕಾರ್ಯಪ್ರವೀಣೆ! ಶ್ರೀಮತಿ ಜಯಂತಿ!

ಚ: ‘ಸರಸ’ ಎಂದು ಇಡಬೇಕೆಂದು ಬಹಳವಾಗಿ ಇಷ್ಟವಿದ್ದಿತು. ಆದರೆ ಅದನ್ನಾಗಲೇ ಇಟ್ಟಿರುವರಾದುದರಿಂದ ‘ಜಯಂತಿ’ ಯೆಂದಿಡಬೇಕಾಯ್ತು.

ಶಾಲಿನಿಯು ಇನ್ನು ಹೆಚ್ಚು ಹೊತ್ತು ಕುಳಿತಿರಲಾಗದೆ ಆಯಾಸವಾಗಿರುವುದೆಂದು ಹೇಳಿ ಅಪ್ಪಣೆಯನ್ನು ಪಡೆದು ಅಲ್ಲಿಂದ ಹೊರಟಳು. ಉಪೇಂದ್ರನು ಕಿಟಕಿಯ ಬಳಿಹೋಗಿ ಎರಡು ಕೈಗಳಿಂದಲೂ ಮುಖವನ್ನು ಮುಚ್ಚಿಕೊಂಡು, ತಲೆಯನ್ನು ತಗ್ಗಿಸಿ, ಗಾಢವಾದ ಚಿಂತೆಯಲ್ಲಿ ಮಗ್ನನಾದನು. ಚಂಪೆಯು ಮೆಲ್ಲಗೆ ಹೋಗಿ “ಇದೇನು! ಮೇಲೆ ಆಕಾಶವು ಕಳಚಿ ಬಿದ್ದಿತೆ?” ಎಂದು ಕೇಳಿದಳು.

ಉ :  ಚಂಪಾ! ನನಗವಳ ನೆನಪಾಗುವುದು.

: ಯಾರ ನೆನಪು?

ಉ: ಅದೇ ಸ್ವರ, ಅದೇ ರೂಪ.

ಚಂ : ನಿಮಗೇನು ಭ್ರಮೆಯೇ? ಯಾರ ಸ್ವರ? ಯಾರ ರೂಪ?

ಉ :  ಏನೂ ಇಲ್ಲ. ಚಂಪಾ, ನನಗೆ ಹಸಿವಾಗುತ್ತಿದೆ. “ಊಟಕ್ಕೆ ಸಿದ್ಧಪಡಿಸು ನಡೆ” ಚಂಪೆಯು ಹೊರಟುಹೋದಳು. ಉಪೇಂದ್ರನು ಅಲ್ಲಿಯೇ ಚಿಂತಿಸುತ್ತಾ ನಿಂತನು.