ತನ್ನ ಪುಟ್ಟ ಮನೆಯ ಮುಂದಿನ ವರಾಂಡದಲ್ಲಿ ಒಂದು ವಿರಾಮ ಕುರ್ಚಿಯಲ್ಲಿ ಕುಳಿತು, “Hindu” ವರ್ತಮಾನ ಪತ್ರಿಕೆಯನ್ನು ಓದುತಲಿದ್ದ ಮನೋಹರನು “ಎಲ್ಲಿಗೆ ಹೊರಡುತ್ತಲಿದ್ದೀಯೆ ಲೀಲಾ?” ಎಂದು ತನ್ನಹ ಹೆಂಡತಿಯನ್ನು ಕುರಿತು ಪ್ರಶ್ನಿಸಿದನು.

ಅದೇ ವರಾಂಡದಲ್ಲಿ ಒಂದು ಮೂಲೆಯಲ್ಲಿ ಇರಿಸಿದ್ದ ಚಪ್ಪಲಿಗಳನ್ನು ಕಾಲುಗಳಿಗೆ ಏರಿಸಿಕೊಳ್ಳುತ್ತಲಿದ್ದ ಹದಿನಾರು ವರ್ಷಗಳ ವಯಸ್ಸಿನ ತರುಣಿಯೊರ್ವಳು, ಕೋಗಿಲೆಯನ್ನು ಅಣಕಿಸುವಂತಹ ಮಧುರ ಧ್ವನಿಯಲ್ಲಿ, ನಸುನಗುತ್ತ ಹೇಳಿದಳು.

“ಎಲ್ಲಿಯೂ ಇಲ್ಲ; ನಾವಿಬ್ಬರೂ ಇನ್ನು ಒಂದು ತಿಂಗಳು ಕಾಲ ಮಾತ್ರವೇ ಒಟ್ಟಿಗೆ ಇರುವೆವು ಅಲ್ಲವೇ? ಅದುವರೆಗಾದರೂ ಇಬ್ಬರೂ ಜೊತೆಗೂಡಿ, ಖುಷಿಯಾಗಿ ಸಂಜೆಯಲ್ಲಿ ತಿರುಗಾಡಿ ಬರೋಣವೆಂದು ಆಶೆಯಾಗಿದೆ. ಅದಕ್ಕಾಗಿಯೇ ಹೊರಡಲು ಸಿದ್ಧಳಾಗುತ್ತಿರುವೆನು.”

“ಸರಿ ಸರಿ! ಹಾಗಾದರೆ ಬಾ, ಹೋಗೋಣ! ಲೀಲಾ, ನಾನು ವಿಲಾಯಿತಿಗೆ ಹೋಗುವುದಕ್ಕಾಗಿ ಬೇಕಾದ ಬಟ್ಟೆಬರೆಗಳನ್ನು ಅಣಿ ಮಾಡಿಕೊಳ್ಳಲು, ಬೆಂಗಳೂರಿಗೆ ಹೋಗಬೇಕಾಗಿದೆ. ವಿಲಾಯಿತಿಗೆ ಹೋಗುವುದಕ್ಕಾಗಿ ಬೆಂಗಳೂರಿಗೆ ಹೋಗಿ, ಇನ್ನೂ ಅನೇಕ ಏರ್ಪಾಡುಗಳನ್ನು ಮಾಡಬೇಕಾಗಿದೆ. ನಾಳೆಯ ದಿನ ಬೆಳಗು ನಿನ್ನನ್ನು ಕರೆದುಕೊಂಡು ಹೋಗಿ, ಮಂಡ್ಯದಲ್ಲಿ ಸೋದರತ್ತೆಯ ಹತ್ತಿರ ಬಿಟ್ಟು ಬರುತ್ತೇನೆ; ಅನಂತರ ನಾನು ಬೆಂಗಳೂರಿಗೆ ಹೋಗಿ ನನ್ನ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು, ಹಿಂತಿರುಗಿ ಬಂದನಂತರ ಮನೆಯನ್ನು ಖಾಲಿಮಾಡಬಹುದು. “

“ನಾಲ್ಕು ವರ್ಷಗಳ ಕಾಲ ತಮ್ಮನ್ನು ಆಗಲಿ ನಾನು ಇರಬೇಕಲ್ಲಾ! ನನಗೆ ತಮ್ಮನ್ನು ಅಗಲಿರಬೇಕಾಗುವುದು ಎಂಬುದನ್ನು ನೆನಸಿಕೊಂಡ ಕ್ಷಣದಲ್ಲೆಲ್ಲಾ ದುಃಖವು ಗಂಟಲನ್ನು ಕಟ್ಟಿಬಿಡುವುದು. ಮೈ ‘ಜಂ’ ಎನ್ನುವುದು. ನಾನು ತಮ್ಮನ್ನಗಲಿ ಹೇಗೆ ಕಾಲವನ್ನು ಕಳೆಯಲಿ?…” ಎಂದು ಮುಂದೆ ಮಾತನಾಡಲಾರದೆ ಲೀಲಾ ಕಣ್ಣುಗಳಿಂದ ಗಳಗಳನೆ ಕಂಬನಿ ಸುರಿಸಿದಳು.

ಮನೋಹರನು ಮಹಸ್ಸಿನೊಳಗೆ ಯೋಚಿಸಿದ. “ಸರಿ, ಸರಿ, ನಿನ್ನ ಬಿನ್ನಾಣತನ ಚೆನ್ನಾಗಿ ಬಲ್ಲೆ! ನಿನ್ನನ್ನು ಸೋದರತ್ತೆಯ ಹತ್ತಿರದಲ್ಲಿ ಬಿಟ್ಟುಬಂದ ನಂತರ, ನಿನಗೆ ತಿಳಿಯದಂತೆ, ಆ ನಿನ್ನ ಮೇಜಿನ ಡ್ರಾಯರಿನಲ್ಲಿ ಮರೆಮಾಚಿ ಕಾಗದಪತ್ರಗಳನ್ನು ಇಟ್ಟಿರುವೆಯಲ್ಲಾ! ಅವುಗಳನ್ನೆಲ್ಲಾ ನಾನು ಓದಿ ನೋಡಿದ ನಂತರವೇ ನಿನ್ನ ಪ್ರೇಮವು ಬಯಲಿಗೆ ಬೀಳುವುದು….”! ಬಳಿಕ ಗಟ್ಟಿಯಾಗಿ ಹೇಳಲಾರಂಬಿಸಿದ “ಲೀಲಾ, ಹೀಗೆ ಅಳಬಾರದು! ಭಗವಂತನು ನಮ್ಮನ್ನು ಶೀಘ್ರದಲ್ಲಿಯೇ ಒಂದುಗೂಡಿಸುವನು; ಭಯಪಡಬಾರದು ನನ್ನ ಪ್ರೀತಿಯ ಲೀಲೂ! ನಾನು ಪದೇ ಪದೇ ತಪ್ಪದೇ ಕಾಗದ ಬರೆಯುವೆನು. ಎಷ್ಟು ದಿನಗಳವರೆಗೆ ಈ ೭೦ ರೂಪಾಯಿ ಸಂಬಳದಲ್ಲಿಯೇ ಕಾಲಕಳೆಯುತ್ತಲಿರುವುದು! ವೃಥಾ ವ್ಯಥೆಪಡಬಾರದು ಲೀಲಾ!” ಎಂದು ಹೆಂಡತಿಗೆ ಸಮಾಧಾನವನ್ನು ಹೇಳಿ, ಅವಳನ್ನು ಕರೆದುಕೊಂಡು ತಿರುಗಾಡಲು ಹೊರಟನು.

* * *

ಲೀಲಾವತಿಯು ಮನೋಹರನ ಸೋದರತ್ತೆಯ ಮಗಳು. ಅವಳ ತಂದೆ ಅವಳ ಬಾಲ್ಯಾವಸ್ಥೆಯಲ್ಲಿಯೇ ‘ಟೈಫಾಯಿಡದ’ ಎಂಬ ಅಂಟುರೋಗಕ್ಕೆ ತುತ್ತಾಗಿ ಕಾಲಾಧೀನರಾದರು. ಆಕೆ, ಆಕೆಯ ತಾಯಿಯಾದ ರತ್ನಮ್ಮ, ಲೀಲೆಯ ಮತ್ತೊಬ್ಬ ಸೋದರಮಾವನೂ ಮನೋಹರನ ಚಿಕ್ಕ ತಂದೆಯೂ ಆದ ನಾರಾಯಣರಾಯರ ಆಶ್ರಯದಲ್ಲಿ ವಾಸಿಸುತ್ತಲಿದ್ದರು. ಶೈಶವದಲ್ಲಿಯೇ ತಾಯಿ-ತಂದೆಯವರನ್ನು ಕಳೆದುಕೊಂಡ ಮನೋಹರನು ಕೂಡ ಚಿಕ್ಕ ತಂದೆಯವರಿಂದ ಬೆಂಗಳೂರಿನ ಇಂಜಿನೀಯರಿಂಗ್ ಕಾಲೇಜಿನಲ್ಲಿ ಓದಿಸಲ್ಪಟ್ಟು, ಪ್ರಥಮ ತರಗತಿಯಲ್ಲಿ ತೇರ್ಗಡೆ ಹೊಂದಿ, ಕನ್ನಂಬಾಡಿ (ಕೃಷ್ಣರಾಜಸಾಗರ) ಕಟ್ಟೆಯಲ್ಲಿ ಎಪ್ಪತ್ತು ರೂಪಾಯಿ ಸಂಬಳದಲ್ಲಿ ಇದ್ದನು. ಅನಂತರ ತನ್ನ ಸೋದರತ್ತೆಯ ಮಗಳಾದ ಲೀಲಾವತಿಯನ್ನು ಮನೋಹರನು ಮದುವೆಯಾಗಿ ಗೃಹಸ್ಥನಾಗಿ ವಾಸಿಸುತ್ತಿರುವಲ್ಲಿ, ಕಥೆ ಪ್ರಾರಂಭವಾಗಿರುವುದು, ಸಂಸಾರ ಮಾಡಲು ತೊಡಗಿದ ಆರು ತಿಂಗಳಲ್ಲಿಯೆ ಮನೋಹರ, ತಂದೆ ಇಟ್ಟುಹೋಗಿದ್ದ ಪಿತ್ರಾರ್ಜಿತದಲ್ಲಿ ಕಲೆವನ್ನು ಮಾರಿ, ಆ ಹಣದ ಸಹಾಯದಿಂದ ವಿಲಾಯತಿಗೆ ಹೋಗಿ, ಇನ್ನೂ ಹೆಚ್ಚಾಗಿ ಓದಿ, ಹೆಚ್ಚು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದು ಬರಬೇಕೆಂದ. ಆಗಲಾದರೂ ತನಗೆ ದೊಡ್ಡ ಉದ್ಯೋಗವೊಂದು ಸಿಕ್ಕಬಹುದು ಎಂಬ ನಂಬಿಗೆಯಿಂದ ವಿಲಾಯಿತಿಗೆ ಹೋಗಲು ಮನೋಹರನು ತೀರ್ಮಾನಿಸಿದ್ದ.

ಲೀಲಾವತಿಯೂ ಮನೋಹರನೂ ಪ್ರೇಮಪೂರ್ವಕವಾಗಿ ಮದುವೆಯಾಗಿದ್ದರೂ, ಲೀಲೆಯು ಮಾಡುತ್ತಲಿದ್ದ ಒಂದು ಪುಟ್ಟ ಕೆಲಸದಿಂದ ಮನೋಹರನು ನೈಜವನ್ನರಿಯದವನಾಗಿ ಅವಳ ಮೇಲೆ ಸಂಶಯಪಡಲಾರಂಭಿಸಿದನು. ತನ್ನ ಹತ್ತಿರದಲ್ಲಿ ಎಳ್ಳಷ್ಟೂ ಮರೆಮಾಚದೆ, ತನ್ನನ್ನೆ ದೈವವನ್ನಾಗಿ ಭಾವಿಸುವುದಾಗಿಯೂ, ತನ್ನನ್ನು ಬಹುವಾಗಿ ಪ್ರೀತಿಸುವುದಾಗಿಯೂ ಪದೇ ಪದೇ ಹೇಳುತ್ತಿರುವ ಲೀಲೆಯು, ತನ್ನ ‘ಡ್ರಾಯರ್’ ವಿಷಯವಾಗಿ ಮಾತ್ರ ತನ್ನೊಡನೆ ಯಾವ ವಿಷಯವನ್ನೂ ತಿಳಿಸದಿರುವುದಕ್ಕಾಗಿ, ಅವಳ ಮೇಲೆ ಅವನಿಗೆ ಸಂಶಯವು ಅಧಿಕವಾಗುತ್ತಲೇ ಬಂದಿತು. ಆ ವಿಷಯವನ್ನು ಅವಳೇ ತನಗೆ ತಿಳಿಸಬೇಕಲ್ಲದೆ, ತಾನಾಗಿಯೇ ಅವಳನ್ನು ಕೇಳಿ ತಿಳಿಯುವುದು ಅನುಚಿತವೆಂದರಿತವನಾಗಿ, ಸುಮ್ಮನೆ ಇದ್ದ. ಆದರೂ ಅವನು ಅದನ್ನು, ಅವಳನ್ನು ಕೇಳದೆಯೆ ತಾನೇ ತಿಳಿಯಬೇಕೆಂದು ತೀರ್ಮಾನಿಸಿದನು. ಅದೇ ರೀತಿಯಲ್ಲಿ ಮನೋಹರನು ಲೀಲೆಯನ್ನು ಮಂಡ್ಯಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬಂದ ನಂತರ, ತನ್ನ ಕೆಲಸವನ್ನು ಮಾಡಿ ಮುಗಿಸಿದನು.. ಆ ಡ್ರಾಯರಿಗೆ ಬೇರೆ ಯಾವುದೋ ಬೀಗದಕೈ ಒಂದನ್ನು ಹಾಕಿ ತೆರೆದು ನೋಡಿದನು. ಅದರಲ್ಲಿ ಕಾಗದಗಳ ಕಟ್ಟೊಂದು ಇದ್ದಿತು. ಅದರಲ್ಲೊಂದು ಕಾಗದವನ್ನು ತೆಗೆದು, ಬಿಚ್ಚಿ ಓದಿದನು. ಅದರಲ್ಲಿ ಕೆಳಗೆ ಕಂಡಂತೆ ಬರೆದಿದ್ದಿತು.

“ನನ್ನ ಪ್ರೇಮದ ಪುತ್ಥಳಿಯೇ, ನಾನೇನು ಮಾಡಲಿ ಪ್ರಿಯೇ? ನಾವು ಮಾಡಿರುವ ಪುಣ್ಯವು ಎಷ್ಟು ಮಾತ್ರವೇ ಎಂದು ತೋರುತ್ತದೆ. ದೇವರು ನಮ್ಮನ್ನು ಯಾಕೆ ಹೀಗೆ ಆಗಲಿಸಿದನೋ ಕಾಣೆ! ನೀನು ವೃಥಾ ನನ್ನ ಸಲುವಾಗಿ ಚಿಂತಿಸದೆ, ನಮ್ಮ ಅದೃಷ್ಟವು ಇಷ್ಟೇ ಎಂದು ಮನಸ್ಸನ್ನು ಶಾಂತಪಡಿಸಿಕೊಳ್ಳಬೇಕು. ಪ್ರಿಯೇ, ಮತ್ತೇನೂ ಬರೆಯಲು ತೋಚದೆ ಪರಿತಪಿಸುತ್ತಲಿರುವ ನಿನ್ನ ಪ್ರೇಮಕಾಂತ”

ಇದನ್ನು ಓದಿ ಮುಗಿಸುತ್ತಲೆ ಮನೋಹರನ ಕಣ್ಣುಗಳು ಕೆಂಪೇರಿದುವು. ತುಟಿಗಳು ಅಲುತೊಡಗಿದವು. ಆ ಪತ್ರದಿಂದ ಅದನ್ನು ಬರೆದವನ ನೈಜವಾದ ಹೆಸರು ತಿಳಿದುಬರಲಿಲ್ಲ. ಬರೆದವನು ತಾನಾರೆಂಬುದನ್ನು ಇನ್ನಾರೂ ಅರಿಯಬಾರದೆಂದೇ ಹೀಗೆ ಮಾಡಿರುತ್ತಾನೆಂದು ಊಹಿಸಿದನು. ತನ್ನ ಪತ್ನಿ ಬೇರೊಬ್ಬ ಚೋರನಾಥನೊಡನೆ ಪತ್ರ ವ್ಯವಹಾರ ಮಾಡುತ್ತಲಿರುವಳೆಂದೂ, ತನ್ನ ಹೆಂಡತಿಯ ಕಳಂಕ ಬುದ್ಧಿಯನ್ನು ತಾನು ಕಂಡು ಹಿಡಿದುಬಿಟ್ಟೆನೆಂದೂ ಆಲೋಚಿಸಿದನು.

ಆ ಕ್ಷಣವೇ ಮನೋಹರನಿಗೆ ಲೀಲೆಯ ವಿಷಯವಾಗಿದ್ದ ಪ್ರೇಮಭಾವವು ಕೋಪ ಮತ್ತು ತಿರಸ್ಕಾರದ ರೂಪವನ್ನು ತಾಳಿತು. ‘ಇನ್ನು ಮೇಲೆ ಎಂದೆಂದಿಗೂ ಆ ಕಳಂಕಿನಿಯ ಮುಖವನ್ನು ಕಾಣುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿಕೊಂಡವನಾಗಿ, ಕನ್ನಂಬಾಡಿ ಕಟ್ಟೆಯಿಂದ ನೆಟ್ಟಗೆ ಬೆಂಗಳೂರಿಗೆ ಬಂದು, ಅಲ್ಲಿಗೆ ವಿಲಾಯಿತಿಗೆ ತೆರಳಿದನು. ತನ್ನ ಮನೆಯ ಬೀಗದ ಕೈಯನ್ನು ಮಂಡ್ಯಕ್ಕೆ ಹೆಂಡತಿಯ ವಿಳಾಸಕ್ಕೆ ಪೋಸ್ಟಿನ ಮೂಲಕವಾಗಿ ಕಳುಹಿಸಿಬಿಟ್ಟನು.

* * *

ಮಂಡ್ಯದಲ್ಲಿ ಮನೋಹರನ ಆಗಮನವನ್ನು ನಿರೀಕ್ಷಿಸುತ್ತಲಿದ್ದ ಲೀಲಾ, ಅವಳ ತಾಯಿ, ಸೋದರಮಾವನ ಮೊದಲಾದವರೆಲ್ಲರೂ, ಅವನು ಬಾರದಿರುವುದನ್ನು ಕಂಡು ಬಹಳ ಪೇಚಾಡಿದರು. ಲೀಲೆಯ ಸೋದರ ಮಾವನು ಬೆಂಗಳೂರಿಗೆ ಬಂದು ವಿಚಾರಿಸಿದುದರಲ್ಲಿಯೂ ಮನೋಹರನ ವಿಷಯವೇನೂ ಸರಿಯಾಗಿ ತಿಳಿದುಬರಲಿಲ್ಲ. ಮನೆಯ ಬೀಗದ ಕೈಯೊಂದು ಮಾತ್ರವೇ ಟಪಾಲಿನ ಮೂಲಕ ಬಂದು ಸೇರಿತು. ಅದರ ಜೊತೆಯಲ್ಲಿ ಒಂದು ಕಾಗದ ಕೂಡ ಬಾರದಿರುವುದನ್ನು ಕಂಡು, ಎಲ್ಲರೂ ವಿಷಯವನ್ನರಿಯದೆ ವಿಪರೀತವಾಗಿ ಚಿಂತಿಸಿದರು. ತನ್ನ ಪತಿಯ ಸಮಾಚಾರವನ್ನರಿಯದೆ ಸುಕುಮಾರಿ ಲೀಲಾವತಿಯು ತುಂಬ ಪರಿತಪಿಸಿದಳು. ಇದೇ ರೀತಿಯಲ್ಲಿ ಮನೋಹರನ ಪತ್ತೆಯೂ ಸಿಕ್ಕದೆ ಕೆಲವು ತಿಂಗಳುಗಳೂ ಕಳೆದು ಹೋದವು. ಲೀಲೆಯ ಸುಂದರಶರೀರವು ದಿನೇ ದಿನೇ ಕೃಶವಾಗುತ್ತ ಬರತೊಡಗಿತು. ಅವಳ ದುಃಖವು ದಿನೇ ದಿನೇ ಹೆಚ್ಚಾಗುತ್ತಲಿದ್ದಿತು. ನಾರಾಯಣರಾಯರು ಲೀಲೆಯನ್ನು ಪಾಠಶಾಲೆಗಾದರೂ ಸೇರಿಸಿದರೆ ತನ್ನ ದುಃಖವನ್ನು ಸ್ವಲ್ಪ ಮರೆಯುವಳೆಂಬ ವಿಚಾರದಿಂದ, ಅವಳನ್ನು ಅವಳ ತಾಯಿಯನ್ನೂ ಬೆಂಗಳೂರಿನಲ್ಲಿ ಒಂದು ಮನೆಯನ್ನು ಮಾಡಿಟ್ಟು, ಲೀಲೆಯನ್ನು ಪಾಠಶಾಲೆಗೆ ಸೇರಿಸಿದರು.

ಲೀಲೆಯು ಪಾಠಶಾಲೆಯನ್ನು ಸೇರಿ ಚೆನ್ನಾಗಿ ಓದಿ, ಹುಡುಗಿಯರು ಉಪಾಧ್ಯಾಯಿನಿರೇ ಮೊದಲಾಗಿ ಎಲ್ಲರ ಬಳಿಯಲ್ಲಿಯೂ ಒಳ್ಳೆಯ ಹೆಸರುವಾಸಿಯನ್ನು ಪಡೆದಳು. ಓದು ಮುಗಿದ ಮೇಲೆ ಮೆಡಿಕಲ್ ಕಾಲೇಜಿನಲ್ಲಿ ಸೇರಿಕೊಂಡಳು.

ಮನೋಹರನು ಇಂಗ್ಲೆಂಡಿನಿಂದ ಹಿಂದಿರುಗಿದನಂತರ, ಆತನಿಗೆ ನಾಗಪುರದಲ್ಲಿ ಮುನ್ನೂರು ರೂಪಾಯಿ ಸಂಬಳದ ಅಧಿಕಾರವೊಂದು ದೊರೆಯಿತು. ಅವನು ತನ್ನ ಪ್ರೇಮಮಯಿಯನ್ನು ಕಾಣಬೇಕೆಂದು ಆತುರಗೊಂಡನಾದರೂ, ಆಕೆಯ ಅಪಾರವಾದ ಅಪರಾಧವನ್ನು ಅವನಿಂದ ಮರೆಯಲು ಅಸಾಧ್ಯವಾಯಿತು. ಅವನ ಆ ಕಾಲದ ಸ್ನೇಹಿತರೆಲ್ಲರೂ ಹೊಸಬರೇ ಆಗಿ ಇದ್ದುದರಿಂದ, ಅವರೊಂದಿಗೆ ತಾನು ಬ್ರಹ್ಮಚಾರಿ ಎಂದೂ, ತಾನು ತನ್ನ ಜೀವಿತವನ್ನೆಲ್ಲಾ ಮದುವೆ ಮಾಡಿಕೊಳ್ಳದೆಯೇ ಕಳೆಯಬೇಕೆಂದು ನಿರ್ಧರಿಸಿರುವೆನೆಂದು ಹೇಳಿಕೊಳ್ಳುತ್ತಿದ್ದನು. ಮುಂದೆ ಕೆಲವು ದಿವಸಗಳಲ್ಲಿಯೇ ಮನೋಹರನು ಖಾಯಿಲೆಯಿಂದ ನರಳುತ್ತಾ ಆಸ್ಪತ್ರೆಯಲ್ಲಿ ಮಲಗಿದನು. ಖಾಯಿಲೆ ವಿಪರೀತಕ್ಕಿಟ್ಟುಕೊಂಡಿದ್ದಿತು.

* * *

ನಾಗಪುರದಲ್ಲಿ ಒಂದು ಬಂಗಲೆಯಲ್ಲಿ ಯುವಕನೋರ್ವನು ಆಗಮಿಸಿದನು. ಬಂಗಲೆಯ ದೊಡ್ಡ ಹಾಲಿನಲ್ಲಿ ಆಗ ತಾನೆ ಬಹುಖಾಯಿಲೆಯಿಂದೆದ್ದು ಚೇತರಿಸಿಕೊಂಡು ಓಡಾಡಲಿಕ್ಕೆ ಆರಂಭಿಸಿರುವ ಮನೋಹರನು ಮೇಜು, ಕುರ್ಚಿ, ಸೋಫಾಗಳನ್ನು ಸರಿ(Arrange)ಪಡಿಸುತ್ತಲಿದ್ದನು. ಆ ಕದದ ಹತ್ತಿರ ಶಬ್ದವಾಗುವುದನ್ನು ಕೇಳಿ, ತಿರುಗಿ ನೋಡಿ “ಹಲ್ಲೊ(Hallo)ಗೋವಿಂದ್! ನಾಲ್ಕೈದು ದಿವಸಗಳಿಂದ ನಿನ್ನ ಸುಳಿವೇ ಇಲ್ಲವಲ್ಲಾ!” ಎಂದು ಹೇಳುತ್ತಾ ಸ್ನೇಹಿತನಿಗೆ ಹಸ್ತಲಾಘವ ಕೊಟ್ಟು, ಅವನನ್ನು ಒಂದು ಕುರ್ಚಿಯಲ್ಲಿ ಕುಳ್ಳಿರಿಸಿ, ತಾನೂ ಒಂದರಲ್ಲಿ ಕುಳಿತನು.

ಗೋವಿಂದನು ಆಶ್ಚರ್ಯದೊಡನ ಕೇಳಿದನು. “ಮನೋಹರಾ! ಏನು ಡ್ರಾಯಿಂಗ್ ರೂಮನ್ನು ಬಹಳ ಶೃಂಗಾರವಾಗಿ ಸಜ್ಜುಗೊಳಿಸಿರುವೆಯೆಲ್ಲಾ! ಯಾರಾದರೂ ಅತಿಥಿಗಳು ಬರುವರೇನು?”

“ನಾನು ಆಸ್ಪತ್ರೆಯಲ್ಲಿ ಮಲಗಿರುವಾಗ ನನಗೆ ಆದರದೊಡನೆ ಚಿಕಿತ್ಸೆ ಶುಶ್ರೂಷೆಗಳನ್ನ ಮಾಡಿ, ನನ್ನ ಖಾಯಿಲೆಯನ್ನು ವಾಸಿ ಮಾಡಿದ – ಸುಗುಣ ಸ್ವರೂಪಿಣಿಯಾದ ಆ (Nurse)ನರ್ಸನ್ನು ಇಂದು ಸಂಜೆಗೆ ‘ಟೀ’ಗೆ ಕರೆದಿದ್ದೇನೆ. ಆಕೆಗೆ ನಾನು ಇಂದು ನನ್ನ ಕೃತಜ್ಞತೆಯನ್ನು ತೋರಿಸಿ, ನನ್ನ ಕೈಯಿಂದಾದ ಬಹುಮಾನವನ್ನು ಕೊಡಲು ನಿರ್ಧರಿಸಿದ್ದೇನೆ.

“ಎಷ್ಟು ರೂಪಾಯಿಗಳನ್ನು ಕೊಡಬೇಕೆಂದಿರುವೆ? ಆಕೆಯ ವಯಸ್ಸು ಎಷ್ಟಿರಬಹುದು?”

“೧೦೦ ರೂಪಾಯಿಗಳನ್ನು ಕೊಡಬೇಕೆಂದಿದ್ದೇನೆ. ಆಕೆಗೆ ಸುಮಾರು ೨೨ ವರ್ಷದ ವಯಸ್ಸಿರಬಹುದು. ಹೆಸರು ಮಿಸೆಸ್ ಮಧುರಾಬಾಯಿ. ಅವಳ ವಿಷಯವಾಗಿ ಮತ್ತಾವುದೂ ನನಗೆ ತಿಳಿಯದು!”

ಗೋವಿಂದನು ಯಾವುದೋ ಅವಸರದ ಕಾರ್ಯವಿದೆಯೆಂದು ಹೇಳಲು, ಮನೋಹರನು ಅವನನ್ನು ಬೀಳ್ಕೊಟ್ಟನು. ಐದು ನಿಮಿಷದಲ್ಲಿಯೇ ಡಾಕ್ಟರ್ ಮಧುರಾಬಾಯಿಯವರು ಮನೋಹರನ ಬಂಗಲೆಯೊಳಕ್ಕೆ ಪ್ರವೇಶಿಸಿದರು.

ಮನೋಹರನು ಆಕೆಯನ್ನು ಆದರದೊಡನೆ ಬರಮಾಡಿಕೊಂಡು ಟೀ, ಫಲಾಹಾರಾದಿಗಳಿಂದ ಸತ್ಕರಿಸಿದನು. ಅನಂತರ ಮನೋಹರನು ೧೦೦ ರೂಪಾಯಿಗಳ ನೋಟೊಂದನ್ನು ಒಳಗೊಂಡ ಒಂದು ಲಕೋಟೆಯನ್ನು, ಮಧುರಬಾಯಿಯವರ ಕೈಯಲ್ಲಿ ಆದರರೊಡನೆ ಕೊಟ್ಟು, “ತಾಯೀ, ಮಧುರಾಬಾಯಿಯವರೆ! ತಾವು ನನಗೆ ಪ್ರಾಣಭಿಕ್ಷೆಯನ್ನು ಕೊಟ್ಟು ಆದರ-ಸತ್ಕಾರಗಳಿಂದ ನನಗೆ ಶುಶ್ರೂಷೆ ಮಾಡಿದುದನ್ನು ನಾನು ಎಂದೆಂದಿಗೂ ಮರೆಯಲಾರೆನು. ನನ್ನ ಈ ಚಿಕ್ಕ ಬಹುಮಾನವನ್ನು ದಯೆಯಿಟ್ಟು ಸ್ವೀಕರಿಸಬೇಕು.” ಎಂದು ನುಡಿದನು. ಮಧುರಾಬಾಯಿಯು ಅವುಗಳನ್ನು ಸ್ವೀಕರಿಸಿದವಳಾಗಿ, ತನ್ನ ಹ್ಯಾಂಡ್ ಬ್ಯಾಗಿನಿಂದ ಚಿಕ್ಕದೊಂದು ಪೋಟೋವನ್ನು ತೆಗೆದು ಮನೋಹರನಿಗೆ ತೋರಿಸಿ “ಈ ಪಟದಲ್ಲಿರುವವರು ನಿಮಗೆ ತಿಳಿದವರೇ?” ಎಂದು ಕೇಳಿದಳು.

ಆ ಪಟವನ್ನು ನೋಡಿ ಮನೋಹರನು ಆತ್ಯಾಶ್ಚರ್ಯಗೊಂಡನು. ಅವನ ಮದುವೆಯಲ್ಲಿ ವಧೂವರರನ್ನು ಕುಳ್ಳಿರಿಸಿ ಹಿಡಿದ ಪೋಟೋ ಅದು. ತತ್‌ಕ್ಷಣ ಮಧುರಾಬಾಯಿಯವರನ್ನು ಕುರಿತು ಕೇಳಿದ: “ತಾಯೀ! ತಮ್ಮ ಹತ್ತಿರದಲ್ಲಿ ಈ ಪಟವು ಬರಲು ಕಾರಣವೇನು? ಇದು ನನ್ನ ಮದುವೆಯಲ್ಲಿ ತೆಗೆದು ಪೋಟೋ!”

ಮಧುರಾಬಾಯಿ ಹೇಳಲಾರಂಭಿಸಿದರು. “ಈ ಪಟವನ್ನು ನನಗೆ ಕೊಟ್ಟವಳು ನನ್ನ ಸ್ನೇಹಿತೆ ಲೀಲಾ ಎಂಬುವವಳು. ತಾವು ಆಕೆಯನ್ನು ತ್ಯಜಿಸಿರುವುದಾಗಿಯೂ, ದಯೆಯಿಟ್ಟು ಏನನಾದರೂ ಮಾಡಿ ತನ್ನನ್ನು ನಿಮ್ಮೊಡನೆ ಸೇರಿಸಬೇಕೆಂಬುದಾಗಿಯೂ ನನ್ನನ್ನು ಬಹಳವಾಗಿ ಬೇಡುತ್ತಲಿದ್ದಾಳೆ ಲೀಲಾ. ಅದುದರಿಂದ ಈ ಪಟವನ್ನು ತಮಗೆ ತೋರಿಸಿ, ತಮ್ಮೊಡನೆ ಅವಳ ವಿಷಯವಾಗಿ ಮಾತನಾಡಲು ಉಪಕ್ರಮಿಸಿದೆನು.”

ಸರಿ ತಮ್ಮ ಅಭಿಪ್ರಾಯ ಗೊತ್ತಾಯಿತು. ಅವಳು ಬಹಳ ಕೆಟ್ಟವಳು. ಅವಳನ್ನು ನಾನು ಎಂದೆಂದಿಗೂ ನೋಡಲಾರೆನು. ದಯೆಯಿಟ್ಟು ಅವಳ ಹೆಸರನ್ನು ಕೂಡ ನನ್ನೆದುರಿಗೆ ಉಚ್ಚರಿಸಬೇಡಿರೆಂದು ಕೇಳಿಕೊಳ್ಳುತ್ತೇನೆ!”

ಮಧುರಾಬಾಯಿ ತನ್ನ ಕೋಕಿಲ ಧ್ವನಿಯಲ್ಲಿ ಭಿನ್ನವಿಸಿದಳು. “ಆ ಹುಡುಗಿ ಒಳ್ಳೆಯವಳಲ್ಲಾ! ಅಂಥಾ ಸದ್ಗುಣಶಾಲಿನಿಯು ಏನು ಕೆಟ್ಟ ಕೆಲಸ ಮಾಡಿದಳೆಂಬುದನ್ನು ದಯವಿಟ್ಟು ನನಗೆ ತಿಳಿಸಲಾಗುವುದೇ?”

ತತ್‌ಕ್ಷಣ ಮನೋಹರನು ವಿಷಯವನ್ನು ಅಲ್ಪದರಲ್ಲಿಯೇ ತಿಳಿಸಿದನು.

ಮಧುರಬಾಯಿ ಕರುಣಸ್ವರದಲ್ಲಿ ಹೇಳಿದಳು. “ಅಯ್ಯೋ! ಇಂತಹ ಕೆಟ್ಟ ಕೆಲಸವನ್ನು ಮಾಡಿದೆನೆಂಬುದನ್ನು ಕನಸಿನಲ್ಲಿಯಾದರೂ ಕಾಣಬಹುದೇ ನೀವು? ನಮ್ಮ ಪಕ್ಕದ ಮನೆಯ ಪದ್ಮಾವತಿಯು, ತನ್ನನ್ನು ಕಷ್ಟಪಡಿಸುವ ಅತ್ತೆ ನಾದಿನಿಯರು ದೂರ ದೇಶದಲ್ಲಿರುವ ತನ್ನ ಗಂಡನು ತನಗೆ ಬರೆಯುವ ಕಾಗದಪತ್ರಗಳನ್ನು ಪೆಟ್ಟಿಗೆಯಿಂದ ಶೋಧಿಸಿ ನೋಡಿಬಿಡುತ್ತಾರೆಂಬ ಭೀತಿಯಿಂದ, ಅವುಗಳನ್ನು ನನ್ನವಶಕ್ಕೆ ಒಪ್ಪಿಸಿ, ಭದ್ರವಾಗಿ ಇಟ್ಟಿರೆಂದು ಕೇಳಿದಳಾದುದರಿಂದ, ಅವುಗಳನ್ನು ಆ ಡ್ರಾಯರಿನಲ್ಲಿ ಹಾಕಿ ಇಟ್ಟಿದ್ದೆನು. ನಾನು ಅವುಗಳನ್ನು ಅವಳು ಕೊಟ್ಟಂತೆಯೇ ಇಟ್ಟಿದ್ದೆ. ಇದರಿಂದ ಇಷ್ಟು ವಿಪರೀತ ಉಂಟಾಗಬಹುದೆಂದು ನಾನು ಇದುವರೆಗೂ ಅರಿಯೆನಲ್ಲಾ! ನನ್ನ ಮೇಲೆ ತಾವು ಇಂತ ವಿಪರೀತವಾದ ಅಪರಾಧವನ್ನು ಹೊರಿಸಬಹುದೇ?” ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಅವನ ಪಾದಗಳಲ್ಲಿ ನಮಸ್ಕರಿಸಿದಳು ಲೀಲಾ.

ತತ್‌ಕ್ಷಣವೆ ಮನೋಹರನು, ತನ್ನ ಪತ್ನಿಯ ಹೊರತು ಇತರರು ಯಾರೂ ತನ್ನನ್ನು ಖಾಯಿಲೆಯಲ್ಲಿ ಅಷ್ಟೊಂದು ರೀತಿಯಲ್ಲಿ ಉಪಚರಿಸಲಾರರೆಂದು ಎನಿಸಿತು. ಆಗ ತನ್ನ ತಪ್ಪು ತಿಳಿವಳಿಗೆ ಬಹಳವಾಗಿ ನೊಂದುಕೊಂಡು, ಪತ್ನಿಯನ್ನು ಮೇಲಕ್ಕೆತ್ತಿ ಸಂತೈಸಿದನು. ಅನಂತರ ಮನೋಹರನು ಲೀಲೆಯನ್ನು “ಹೆಸರನ್ನು ಏಕೆ ಬದಲಾಯಿಸಿಕೊಂಡೆ?” ಎಂದು ಕೇಳಿದ. “ಸ್ಕೂಲಿನಲ್ಲಿ ಸಂಗಾತಿಯರು ತನ್ನ ಮಧುರಧ್ವನಿಯನ್ನು ಕೇಳಿ ಹಿಗ್ಗಿ, ತನಗೆ ಈ ಹೆಸರನ್ನಿಟ್ಟರಾದುದರಿಂದ ಅದನ್ನೇ ತಾನೂ ಬದಲಾಯಿಸಿಕೊಂಡೆ!” ಎಂದು ಹೇಳಿದಳು.

 

– ಶ್ರೀಮತಿ ಎಸ್. ಆರ್. ಜಯಲಕ್ಷ್ಮಿ
ಜಯಂತಿ, ಸಂಪುಟ ೧, ಸಂಚಿಕೆ ೧೨, ೧೯೩೯