“ಈವೊತ್ತೇನು, ಅಡಿಗೆ ಮನೆಯ ಮೇಲ್ಚಿಚಾರಣೆಗೆ ಬರಲೇ ಇಲ್ಲವಲ್ಲಾ?” “’ಮೇಷ್ಟ್ರು’ ತುಂಬಾ ‘ಹೋಂ ವರ್ಕ್‌’ ಕೊಟ್ಟು ಬಿಟ್ಟಿದ್ದಾರೆ; ಏನು ಮಾಡ್ಲಿ!” “ಅವರಿಗೇನು ಹೆಂಡಿರು ಮಕ್ಕಳಿಲ್ವೇನ್ರಿ?”

“ಹೆಂಡಿರು ಅಂದ್ರೇನೆ? ಅವರಿಗೆಷ್ಟು ಲಗ್ನಾಂತ ನೀನು ಅನ್ನೋದು? ನನಗೆ ಗೊತ್ತಿದ್ದ ಹಾಗೆ ಅವರಿಗಿರೋಳು ಒಬ್ಬಳೇ ಹೆಂಡ್ತಿ! ಅವರು ಆಫೀಸಿನಲ್ಲಿ ನಮ್ಮ ಮೇಲೆ ಅಧಿಕಾರ ಚಲಾಯಿಸೋ ಹಾಗೆ ಅದೇಕೆ ಅದಕ್ಕೂ ಹೆಚ್ಚು ಜರ್ಬಾಗಿ, ಆಕೆ ಮನೇಲಿ ಅವರ ಮೇಲೆ ಅಧಿಕಾರ ನಡಿಸ್ತಾಳಂತೆ!”

“ಓಹೋ! ಹೀಗೇನು? ಸರಿ!”

“ಸರಿಯೇನು ಬೆಸ! ಮನೇಲಿ ಅಮ್ಮಾವ್ರಿಂದ ಬೈಸ್ಕೊಂಡು ಬರೋದು; ಆಫೀಸಿನಲ್ಲಿ ನಮ್ಮನ್ನು ಬೈಯೋದು! ಮೂಟೆ ಮೂಟೆ ಕೆಲಸವನ್ನ ‘ಮನೇಲಿ ಮಾಡ್ಕೊಂಡು ಬನ್ನಿ’ ಅಂತ ನಮಗೆ ಹೇಳೋದು!”

“ಕೊಟ್ಟರೇನಾಯ್ತು. ‘ಹೆಣ್ಣು ತಿರುಗಿ ಕೆಟ್ಟಿತು, ಗಂಡು ಕೂತು ಕೆಟ್ಟಿತು ಅಂತ ಗಾದೆಯೇ ಇದೆ. ಮನೇಲಿ ಬಂದು ಸುಮ್ಮನೆ ಕೂತ್ಕಳ್ಳೋ ಬದು, ಒಂದಿಷ್ಟು ಕೆಲಸಾ ಮಾಡಿದ್ರೆ…”

“ಹೌದು-ಹೌದು, ನಾವೆಲ್ಲ ಸಂಸಾರ ಗಿಂಸಾರ ಇಲ್ಲದ ಸಂನ್ಯಾಸಿಗಳಾಗಿ ಬಿಟ್ಟೇವೇನು? ಹಗಲೆಲ್ಲಾ ಆಫೀಸಿನಲ್ಲಿ ದುಡಿದೂ ದುಡಿದೂ ಸಾಕಾಗಿ ಮನೆಗೆ ಬಂದ ಮೇಲೆ, ಏನೋ ಕೈಹಿಡಿದ ಅವಳ ಸಂಗಡ ಒಂದು ನಾಲ್ಕು ಸುಖ-ದುಃಖದ ಮಾತನ್ನೋ ಸುದ್ದಿ-ಸಮಾಚಾರಗಳನ್ನೋ ಮಾತನಾಡುತ್ತಾ ಕುಳಿತರೆ ಸ್ವಲ್ಪ ಹಾಯಾಗಿರುತ್ತದೆ; ಅದಕ್ಕೂ ಅವಕಾಶ ಕೊಡಬೇಡೀ ಅಂತ ಇವರ ಮೇಲಿನವರಿಂದ ಆರ್ಡರೇನೂ ಬಂದಿಲ್ಲವಲ್ಲಾ!”

“ಒಹೋಹೋ! ಗೊತ್ತಿದೆ ಬಿಡಿ, ನೀವು, ಸುಖ-ದುಃಖದ ಮಾತನಾಡೋದು! ಒಂದು ದಿನವಾದರೂ ನೀವು ನನ್ನ ಸುಖ-ದುಃಖದ ಮಾತನಾಡಿದ್ದಿರೇನು? ಆಫೀಸಿನಲ್ಲಿ ಈವತ್ತು ಕಾಫಿಗಾಗಿ ಯಾರಿಗೆ ಚಕ್ರ ಹಾಕಿದ್ದಾಯಿತು, ಹೆಡ್ ಕ್ಲಾರ್ಕ್‌‌ರ ಕಣ್ಣು ತಪ್ಪಿಸಿ ಯಾರ್ಯಾರ ಸುದ್ದೀನ ಮಾತನಾಡಿಯಾಯ್ತು, ಅವರನ್ನ ಇವರನ್ನ ಹೇಗೆ ಚೇಷ್ಟೆ ಮಾಡಿದ್ದಾಯಿತು. ಇಂತಹ ಮಾತನ್ನು ಬಿಟ್ಟು; ಬೇರೆ ಯಾವ ಮಾತನ್ನ ನೀವು ನನ್ನ ಸಂಗಡ ಆಡ್ತೀರಿ? ಮತ್ತೆ ನೀವು ಆಫೀಸಿನಲ್ಲಿ ಮಾಡುವ ಕೆಲಸಾನೂ ಅಷ್ಟಕ್ಕಷ್ಟೇ ಅಂತ ಕಾಣುತ್ತೆ. ಆಫೀಸರರಿಗೆ ‘ಮೇಷ್ಟ್ರು’, ಹೆಡ್‌ಕ್ಲಾರ್ಕ್‌‌ರಿಗೆ ‘ಗೂಬೆ’ ಇತ್ಯಾದಿ ಹೆಸರುಗಳನ್ನಿಟ್ಟು ಲೇವಡಿ ಮಾಡ್ತಾ ಇರುವವರಿಗೆ, ಕೆಲಸಾ ಮಾಡ್ಲಿಕ್ಕೆ ಕಾಲ ಎಲ್ಲಿ ಸಿಗಬೇಕು?”

“ಶ್ರೀರಾಮ…..!”

“ಯಾಕಪ್ಪಾ, ನಡುವೆ ಶ್ರೀರಾಮನ ಮೇಲೆ ಅನುಗ್ರಹ?”

“ರಾಮನ ಮೇಲಲ್ಲ ಅನುಗ್ರಹ; ಆತ ನನ್ನ ಮೇಲೆ ಅನುಗ್ರಹ ಮಾಡಲೀ ಅಂತ! ಮನೆಗೆ ಬಂದ್ಮೇಲೆ ನೀನೆಲ್ಲಿ ಕೆಲಸ ಮಾಡೋಕೆ ಬಿಡ್ತಿ ನಾಳೆ ಬೈಸಿಕೊಳ್ಳುವವನು ನಾನು! ನಿನಗೇನು ಅದರ ಪರಿವೆ? ಒಂದು ಸಾವಿರ ಸಲ ಹೇಳಿದ್ದೇನೆ, ‘ಕೆಲಸ ಮಾಡುವಾಗ ಮಾತಾಡಿಸಬೇಡ’ ಅಂತ! ಗಂಡನ ಮಾತು ಕೇಳುವ ಪತಿವ್ರತೆಯರ ಕಾಲ ಕಳೆದು ಹೋಯ್ತು! ಪಾಪ ಅಂತ ಇದುವರೆಗೂ ಬಿಟ್ಟಿದ್ದೇನೆ; ಇನ್ನೊಮ್ಮೆ ಆಫೀಸರರು ಬೈಯುತ್ತಲೆ ‘ಸ್ವಾಮೀ, ಏನ್ಮಾಡೋದು ಮನೇಲಿ ಅಗ್ನಿಸಾಕ್ಷಿಯಾಗಿ ಕೈಹಿಡಿದ ಹೆಂಡತಿ ಒಬ್ಬಳಿದ್ದಾಳೆ; ವಿಘ್ನೇಶ್ವರನ ಅವತಾರ ಅದು; ಪ್ರತಿ ಕೆಲಸಕ್ಕೂ ವಿಘ್ನ ಅವಳಿಂದ; ಆದ್ದರಿಂದ ಕೆಲಸ ಆಗಲಿಲ್ಲ! ಅಂತ ಹೇಳ್ಬಿಡ್ತೀನಿ.”

“ಹೆಂಡತೀನ ಸುಮ್ಮನೆ ಕುಳ್ಳಿರಿಸೋಕೆ ಆಗದಿದ್ದ ನೀವು ಎಂಥಾ ಗಂಡಸರು’ ಅಂತ ಅವರು ಕೇಳಿಬಿಟ್ಟರೆ?….”

“ಹೆಂಡತಿಯು ಬಾಯಿ ಮುಚ್ಚಿಸೋದು ಕಠಿನಾ ಎಂಬೂ ಸಂಗತಿ ಅವರಿಗೂ ಚೆನ್ನಾಗಿ ಗೊತ್ತಿದೆ. ಹಾಗಿದ್ದೂ ಅವರು ಕೇಳಿಯೇ ಬಿಟ್ರೂ ಅಂದ್ರೆ ‘ಸ್ವಾಮೀ ನಿಮ್ಮನೇಲಿ ಹೇಗೋ ನಮ್ಮನೇಲಿಯೂ ಹಾಗೆ!’ ಅಂತ ಅಂದ್ಬಿಡ್ತೇನೆ!”

“ಸರಿ, ನಿಮ್ಮನ್ನು ‘ಡಿಸ್ ಮಿಸ್‌’ ಮಾಡಿ ಬಿಡ್ತಾರೆ!”

“ಒಳ್ಳೇದೇ ಆಯ್ತು! ಆಗ ಇಪ್ಪತ್ತುನಾಲ್ಕು ತಾಸೂ ನಿನ್ನ ಮುಂದೆ ಕೂತು, ನಿನ್ನ ಸುಖ-ದುಃಖಾನ ವಿಚಾರಿಸಿ ಕೇಳ್ತೇನೆ! ನಿನ್ನಿಂದ ಬರುವ ಅಪವಾದನೂ ತಪ್ತು!”

“ಹೊಟ್ಟೆಗೆ?”

“ಹುಟ್ಟಿಸಿದ ದೇವರು ಹುಲ್ಲು ಮೇಯಿಸ್ತಾನೆಯೆ?”

“ಸರಿ ಹೋಯ್ತು ಬಿಡಿ! ಹಾಗೆಲ್ಲಾ ಹುಚ್ಚಾಪಟ್ಟೆ ಮಾಡಿ, ಸಿಕ್ಕಿದ್ದ ಕೆಲಸಾ ಬಿಟ್ಟು ಬಿಡಬೇಡಿ! ಏಳಿ ಊಟಕ್ಕೆ ಇನ್ನು!”

* * *

“ಏನು ಈವೊತ್ತು ಸುಮ್ನೆ ಕೂತಿದ್ದೀರಿ?”

“ಇನ್ನೇನು ಮಾಡ್ಲಿ? ಅಳೊದೊಂದೇ ಬಾಕಿಯಿದೆ!”

“ಯಾಕೆ ಆಫೀಸಿನಲ್ಲಿ ಕಾಫೀ ಕುಡಿಸೋರು ಯಾರೂ ಸಿಕ್ಕಲಿಲ್ಲವೇನೊ!”

“ಆಂ! ನಾನೇನು ಮಗೂ ಅಂತ ತಿಳಿದಿದ್ದಿಯೇನು, ಕಾಫೀ, ಸಿಗಲಿಲ್ಲಾ ಅಂತ ಅಳೋಕೆ? ಹೆಚ್ಚಿನವಳು ನೀನು!”

“ಮತ್ತೆ ಈ ಗ್ರಹಣ ಯಾಕೇ ಅಂತ?”

“ಹೆಂಡತಿಯೆನ್ನುವ ರಾಹು ಹಿಡಿದು ಈ ಗ್ರಹಣ ಬಂತು! ತಿಳಿಯಿತೇನು? ನಿನ್ನೆ ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಳ್ಳತಾ ಇದ್ದರೆ, ನೀನು ಇಲ್ಲದ ಹರಟೆ ಎತ್ತಿ ಸಮಯವನ್ನು ಕಳೆದೆ. ಕೆಲಸ ಆಗಲಿಲ್ಲ. ಮೇಷ್ಟ್ರು ಅಲ್ಲಾ ಆಫೀಸರು ತರಾಟೆಗೆ ತಗೊಂಡರು! ಬಾಯಿಗೆ ಬಂದದ್ದು ಬಾರದ್ದು ಎಲ್ಲಾ ಆಡಿಬಿಟ್ಟರು!”

“ಇಷ್ಟೇನೋ?”

“ನಿನಗೆ ‘ಇಷ್ಟೇನೋ’ – ನನಗೆ ಎಷ್ಟೇನೋ ಎಂತ ಅನಿಸತದೆ! ‘ಹಾಳು ಕೆಲಸ ಬಾವೀಗೆ ಬಿದ್ದುಕೊಳ್ಲಿ’ ಅನಿಸತದೆ!”

“ಹಾಳು ಕೆಲಸ ಬಾವೀಗೆ ಬಿದ್ರೆ, ಈ ಹಾಳು ಹೊಟ್ಟೆ ಹಿಟ್ಟಿಲ್ಲದೆ ಒದ್ದಾಡತದೆ!”

“ಒದ್ದಾಡಿದರೆ ಒದ್ದಾಡಲಿ! ಅಲ್ಲಿ ಆಫೀಸರು, ಇಲ್ಲಿ ನೀನು, ಹೀಗೆ ಗೋಳುಹೊಯ್ಕೊಳ್ತಾ ಇದ್ದರೆ, ನಾನೇನು ಮಾಡಲಿ?”

“ನಾಲ್ಕು ಮಾತನಾಡಿದರೂ ಗೋಳುಹೊಯ್ಕೊಂಡ ಹಾಗೇನು? ಇನ್ನು ಮೇಲೆ ಉಸಿರೆತ್ತಿದರೆ ದೇವರಾಣೆ!”

“ನಿಲ್ಲು ನಿಲ್ಲು; ಆಣೆಗೀಣೆ ಹಾಕ್ಕೋಬೇಡ! ನೀನು ಮಾತನಾಡಿದರೆ ಇಷ್ಟು ಅನರ್ಥ ಆಗ್ತಿರುವಾಗ, ಮೌನವಾಗಿದ್ದರೆ ಇನ್ನೇನನಾಹುತಾ ಆಗತದೋ! ಅಲ್ಲಾ, ನೀನು ಮಾತನಾಡಬಾರದೂ ಎಂದಲ್ಲ ನಾನು ಹೇಳಿದ್ದು! ಮಾತನಾಡುವ ಹೆಂಡ್ತಿ ಬೇಡಾ ಅಂತಿದ್ರೆ, ಒಂದು ಗೊಂಬೇನ ಲಗ್ನವಾಗ್ತಾ ಇದ್ದೆ. ಆದರೆ ಸಮಯವರಿತು ಮಾತನಾಡಬೇಕು! ಆ ಸಂಸ್ಕೃತ ಶ್ಲೋಕ ಹೇಳ್ತಿರೋ ಹಾಗೆ ‘ಕಾರ್ಯೇಷು ಮಂತ್ರಿ’ ಆಗ್ಬೇಕು! ಸಂಸಾರದಲ್ಲಿ ಹೆಂಡತಿಯೆಂದರೆ ಗಂಡನಿಗೆ ಕುರುಡನ ಕೈಯ ಕೋಲಾಗಬೇಕು; ಕತ್ತಲಲ್ಲಿ ಹಿಡಿದ ಕೈದೀವಿಗೆಯಾಗಬೇಕು.”

“ಮತ್ತೇ?”

“ಮತ್ತೆ, ಕಾರ್ಯಕ್ಕೆ ಸ್ಫೂರ್ತಿ ಕೊಡಬೇಕು, ಬುದ್ಧಿಗೆ ಪ್ರೋತ್ಸಾಹ ಕೊಡಬೇಕು!”

“ಮತ್ತೆ…”

“ಮತ್ತೆ, ಮತ್ತೆ, ಆತನಿಗೆ… ಹುಂ… ಆತನಿಗೆ… ಆತನ ಚೈತನ್ಯ ದೇವಿಯಾಗಬೇಕು!”

“ಸರಿ!”

“ಸsರ್ರಿ‍ಏನು?”

“ನಾನು ದೇವಿಯಾದ ಮೇಲೆ, ನನ್ನನ್ನೇನು ಮಂಟಪದಲ್ಲಿ ಕೂಡ್ರಿಸಿ ಪೂಜೆ ಮಾಡ್ತೀರೇನೊ!”

“ದೇವಿಯಾಗು, ಆ ಮೇಲೆ ಹೇಳ್ತೇನೆ! ಅದಿರಲಿ, ಇನ್ನು ಮೇಲೆ ನಾವು ಕೆಲವೊಂದು ಶರ್ತುಗಳನ್ನು ಹಾಕಿಕೊಳ್ಳೋಣ!”

“ಬೇಡ! ಶರ್ತು, ಕರಾರು, ಒಪ್ಪಂ ಏನು ಬೇಡ; ನನ್ನ ಪಾಡಿಗೆ ತೆಪ್ಪಗೆ ಇರ್ತೇನೆ! ನಿಮ್ಮ ಕೆಲಸಾ ನೀವು ಮಾಡ್ಕೋಳ್ಳಿ! ನೀವು ಹೇಳಿದ ಹಾಗೆ ‘ಕೋಲು’ ‘ಕೈದೀವಿಗೆ’ ‘ಸ್ಫೂರ್ತಿ’ ‘ಚೈತನ್ಯ’ ಎಲ್ಲಾ ಆದ್ಮೇಲೆ, ನಾನಿನ್ನು ನಿಮ್ಮ ಕೂಡ ಮಾತನಾಡೋದು!”

“ಅಂದರೆ ಏನು, ಅಸಹಕಾರ ಮಾಡ್ತೀಯೋ ಏನು?”

“ಅಸಹಕಾರವಲ್ಲ, ಸಹಕಾರ ಮಾಡ್ತೇನೆ? ನಿಮ್ಮ ಕೆಲಸಕ್ಕೆ ನನ್ನ ಬಾಯಿ ವಿಘ್ನ ಅಂತ ಅಂದ್ಮೇಲೆ, ನಾನು ಬಾಯಿ ಮುಚ್ಚಿಕೊಂಡಿದ್ದರೆ ನಿಮಗೆ ಸಹಕಾರ ಮಾಡಿದಂತಾಗಲಿಲ್ವೇನು?”

“ವಾದಮಾಡ್ಬೇಡವೆ! ನಾನು ಹೇಳಿದ್ದು ನೀನು ಬಾಯಿ ಮುಚ್ಕೊಂಡಿರಬೇಕೂ ಅಂತಲ್ಲ! ನೋಡು ನನ್ನ ಕೆಲಸ ಆಗದಿರೋಹಾಗೆ ನಿನ್ನ ಮಾತನಾಡಬಾರದು! ಕೆಲಸ ಆಗದಿದ್ರೆ ಆಫೀಸರು ಸಿಟ್ಟಾಗ್ತಾರೆ! ಆಫೀಸರ ಮರ್ಜೀ ಇಲ್ಲದಿದ್ರೆ ‘ಪ್ರಮೋಷನ್’ ಆಗೋದಿಲ್ಲ; ‘ಪ್ರಮೋಷನ್’ ಸಿಗದಿದ್ದರೆ ಹೆಚ್ಚಿನ ಸಂಬಳ ಇಲ್ಲ; ಹೆಚ್ಚಿನ ಸಂಬಳ ಇಲ್ಲದೆ ನಾವು ಹ್ಯಾಗೆ ಸುಖಪಡೋದು?”

“ಹೌದು!”

“ಹೌದಲ್ಲೊ?”

“ಹೌದು!”

* * *

“ಯಾರಮ್ಮಾ ನೀನು?”

“ತಮ್ಮ ಆಫೀಸಿನಲ್ಲಿ”

“ನನ್ನ ಆಫೀಸಿನಲ್ಲಿ…?”

“ಹಾಂ. ಅಲ್ಲ ತಮ್ಮ ಯಜಮಾನ್ರ ಆಫೀಸಿನಲ್ಲಿ…”

“ಸರಿ ಸರಿ!”

“ತಮ್ಮ ಯಜಮಾನ್ರ ಆಫೀಸಿನಲ್ಲಿ ನಮ್ಮ ನೆಯವ್ರು ಕ್ಲಾರ್ಕು!”

“ಯಾರು? ವಿಟ್ಠಲರಾಯರೋ? ಅಲ್ಲ, ಅವರು ವಯಸ್ಸಾದವರು; ನೀನಿನ್ನೂ ಚಿಕ್ಕವಳು! ರಾಮರಾಯರೋ? ಇರಲಿಕ್ಕಿಲ್ಲ. ನಿನ್ನಂಥ ಹುಡುಗಿ ಸಿಗಲು ಅವನೇನೂ ಸ್ವರ್ಗದಿಂದ ಇಳಿದು ಬಂದಿಲ್ಲ! ಮತ್ತಾರು? ಆಂ! ಮಧೂಸೂದನನೋ?ಹೌದು, ಅವನೇ ನಿನಗೆ ತಕ್ಕ ಗಂಡ! ಅಲ್ಲವೆ?”

“ಹುಂ!”

“ಸರಿ, ಹುಡುಗ ಒಳ್ಳೆಯವ; ನಮ್ಮವರು ಸುಮ್ಮನೆ ಅವನ ಮೇಲೆ ರೇಗ್ತಿರ್ತಾರೆ!”

“ಕೆಲಸ-ಗಿಲಸ ಸರಿಯಾಗಿ ಆಗದಿದ್ದರೆ!”

“ಇಲ್ಲ, ಇಲ್ಲ, ಆತ ಚೆನ್ನಾಗಿ ಕೆಲಸ ಮಾಡ್ತಾನಂತೆ; ಆದರೆ ನಮ್ಮವರು ಸ್ವಲ್ಪ ಹಾಗೇ! ಯಾರನ್ನಾದರೂ ಗದರಿಸ್ತಾ ಇದ್ರೇನೇ ಅವರಿಗೆ ಸಮಾಧಾನ! ಇರಲಿ ಬಿಡು, ಮತ್ತೇನಮ್ಮಾ ನೀನು ಬಂದದ್ದು?”

“…….”

“ಹೇಳು ಹೆದರ್ಕೋಬೇಡ!”

“ನಮ್ಮ ಅಣ್ಣ ಜ್ಯೋತಿಷ್ಯ-ಗೀತಿಷ್ಯ ಹೇಳ್ತಾನೆ!”

“ಹುಂ!”

“ನಮ್ಮವರಿಗೆ ಐದು ವರ್ಷ ಸರ್ವೀಸಾಯ್ತು; ಇನ್ನೂ ಮೇಲಿನ ಜಾಗೆ ಸಿಕ್ಕಿಲ್ಲಾ…. ಅಂತ ನಾನು, ಒಂದು ದಿನ ಹೀಗೆಯೆ ಮಾತನಾಡ್ತಾ ಹೇಳ್ದೆ; ಅದಕ್ಕಾತ ‘ಈ ಊರ ಆಫೀಸಿನಲ್ಲಿ ಕೆಲಸ ಮಾಡುವವರಿಗೆ ಸಾಧಾರಣವಾಗಿ ಪ್ರಮೋಷನ್ ಆಗೋದಿಲ್ಲಾ ಅಂತ ಜ್ಯೋತಿಷ್ಯದಲ್ಲಿ ಕಂಡುಬಂದಿದೆ ನನಗೆ; ನಿನ್ನ ಗಂಡನ ಮಾತಿರಲಿ, ಅವರ ಆಫೀಸರು ಇಷ್ಟೊತ್ತಿಗೆ ಅಮಲ್ದಾರರ ಬದಲು ‘ಡೆಪ್ಯೂಟಿ’ ಆಗಬೇಕಿತ್ತು. ಅವರು ಈ ಆಫೀಸಿನಲ್ಲಿರುವುದರಿಂದ ಅವರ ಪ್ರಮೋಷನ್ನಿಗೂ…’…”

“ಹೀಗೇನು ಸಮಾಚಾರ? ಇರಬೇಕು ಅನ್ನು! ಇಲ್ಲಾಂದ್ರೆ ಹತ್ತು ವರ್ಷ ಸರ್ವಿಸ್ ಆಗುದರೊಳಗೇ ಅಮಲ್ದಾರರಾದವರು, ಅಮಲ್ದಾರರಾಗಿ ಆರು ವರ್ಷಆದರೂ ‘ಡೆಪ್ಯೂಟಿ’ ಆಗಲಿಲ್ಲಾ ಅಂದರೆ! ವಿಚಾರ ಮಾಡ್ತೇನಮ್ಮಾ, ಈ ವಿಷಯಾನ?”

“ನಮ್ಮವರಿಗಷ್ಟು ಇಲ್ಲಿಂದ ಬೇರೆ ಊರಿಗೆ ವರ್ಗಮಾಡ್ಸಿಬಿಟ್ರೆ……”

“ಆಗ್ಲಿ, ಆಗ್ಲಿ!”

“ಬರತೀನಮ್ಮಾ!”

“ಬಾ, ಸ್ವಲ್ಪ ತಡಿ, ಕುಂಕುಮ ಹಚ್ಚಕೊಂಡು ಹೋಗು!”

* * *

“ಕೇಳಿದಿರೇನು?”

“ಹೇಳುವುದಕ್ಕೆ ಮೊದಲೇ ಕೇಳುವುದು ಹ್ಯಾಗೆ?”

“ನಿಮ್ಮ ಆಫೀಸಿನ ಕ್ಲಾರ್ಕು ಮಧೂಸೂದನ…”

“ಏನಂತೆ, ಆತನ ಸಮಾಚಾರ? ಮುಂಡೇಮಕ್ಳು…”

“ಯಾಕ್ಬಯ್ತೀರಿ ಅವನನ್ನ? ಸಮಾಚಾರ ಅವಂದಲ್ಲ, ಅವನ ಹೆಂಡ್ತೀದು?

“ಏನ್ಗಲಾಟೆ ಇದು?”

“ಗಲಾಟೆಯೂ ಅಲ್ಲ, ಗಿಲಾಟೆಯೂ ಅಲ್ಲ, ಹೇಳದ್ದಷ್ಟು ಕೇಳಿ! ಆಕೆಯ ಅಣ್ಣ ಜ್ಯೋತಿಷ್ಯ ಹೇಳ್ತಾನಂತೆ; ಈ ಊರ ಆಫೀಸಿನಲ್ಲಿರುವ ಯಾರಿಗೂ ಪ್ರಮೋಷನ್ ಆಗೋದು ಕಠಿಣಾ ಅಂತ ಹೇಳಿ, ‘ನಿನ್ನ ಗಂಡನ್ನ ಬೇರೆ ಊರಿಗೆ ವರ್ಗಾಯಿಸಿಕೊ’ ಅಂದ್ನಂತೆ!”

“ಏನೀಗ? ಅವನನ್ನ ವರ್ಗ ಮಾಡಿಸ್ಬೇಕಂತನೂ?”

“ಅವಳಂದದ್ದು ಹಾಗೆ; ನಾನನ್ನೂದು…”

“ನೀನನ್ನೂದು ಹ್ಯಾಗೆ?”

“ನೀವೇ ಯಾಕೆ ಇನ್ನೊಂದೂರಿಗೆ ವರ್ಗ ಮಾಡಿಸ್ಕೋಬಾರ್ದು? ಅಮಲ್ದಾರರಾಗಿ ಆರುವರ್ಷ ಆದರೂ ‘ಡೆಪ್ಯೂಟಿ’ ಮಾತೇ ಇಲ್ಲ!”

“ಹುಚ್ಚಿ ನೀನು? ಬೇರೆ ಊರಿಗೆ ವರ್ಗ ಮಾಡ್ಸಿಕೊಂಡ್ರೆ ‘ಡೆಪ್ಯೂಟಿ’ ಆಗ್ತೇನೇ? ಎಂಥ ಜ್ಯೋತಿಷ್ಯ ಹೇಳ್ತಾನೋ ಆ ಪೆದ್ದ! ಆಫೀಸಿಗೂ ಪ್ರಮೋಷನ್ನಿಗೂ…”

“ನಿಮ್ಮ ಬುದ್ಧಿವಂತಿಕೇನೇ ಖರ್ಚು ಮಾಡ್ಬೇಡಿ; ಯಾಕಿರಬಾರ್ದೂ ಅಂತ! ಬೇರೆ ಊರಿಗೆ ಹೋದ್ರೆ ನಮಗೆ ನಷ್ಟ ಏನು? ಏನೋ ಅವನ ಮಾತು ಯಾಕೆ ನಿಜಾ ಆಗ್ಬಾರ್ದು?”

“ಆಯ್ತು, ಇನ್ನು ವರ್ಗಮಾಡಿಸಿಕೊಂಡ ವಿನಾ ನೀನು ನನಗೆ ನಿದ್ದೆ ಮಾಡೋಕೆ ಬಿಡುವಹಾಗಿಲ್ಲ! ಆಯ್ತು, ಪ್ರಯತ್ನ ಮಾಡ್ತೇನೆ! ಬೇಕಾದರೆ, ಆ ಮಧುಸೂದನ…”

“ಏನ್ಬೇಡ, ಮಂದಿಗೆ ಉಪಕಾರ ಮಾಡಹೋಗಿ ನಮ್ಮ ಕಾರ್ಯ ಕೆಡಸ್ಕೋಬಾರ್ದು! ಡೆಪ್ಯುಟಿ ಆದನಂತ್ರ…”

“ಆಗ್ಲಿ!”

* * *

“ಏನು ನಗೆಯಾಡ್ತಾ ಬರ್ತಿದ್ದೀರಿ?”

“ಶನಿ ತೊಲಗತದೆ!”

“ಹಾಗಂದ್ರೆ!”

“ನಮ್ಮ ಆಫೀಸರಿಗೆ ಟ್ರಾನ್ಸಫರ್ ಆಗ್ಹೋಯ್ತು! ತಾವೇ ಕಷ್ಟಪಟ್ಟು ಟ್ರಾನ್ಸಫರ್ ಮಾಡಿಸಿಕೊಂಡಿದ್ದಾರೆ! ಇನ್ನು ಮೇಲೆ ಈ ಊರಿಗೆ ಬರುವ ಅಮಲ್ದಾರರು ಬಹಳ ಒಳ್ಳೆಯವರಂತೆ! ನಮ್ಮ ಹೆಡ್ ಕ್ಲಾರ್ಕ್‌ಹೇಳಿದರು. ಇನ್ನೇನು ನಿನ್ನ ಹತ್ತಿರ ಸುಖ-ದುಃಖದ ಮಾತನಾಡ್ಕೋಬಹುದು! ಈ ಹೊಸ ಆಫೀಸರು ಹೋಂವರ್ಕ್ ಕೊಡುವ ‘ಮೇಷ್ಟ್ರು’ ಅಲ್ಲವಂತೆ!”

“ಹೇಳಿ, ನಿಮ್ಮ ಕೈದೀವಿಗೆ ಅದ್ನೋ ಇಲ್ವೋ?”

“ಅಂದ್ರೆ?”

“ಅಂದ್ರೆ – ನೀವು ಆವೊತ್ತು ಕೈದೀವಿಗೆಯ ಉಪನ್ಯಾಸ ಕೊಟ್ಟ ಮಾರನೆಯ ದಿನವೇ, ನಾನು ಆಫೀಸರ ಅಮ್ಮಾವ್ರ ಹತ್ತಿರ ದಯೆಮಾಡ್ಸಿ ‘ನಮ್ಮಣ್ಣ ಜೋತಿಷ್ಯ ಹೇಳ್ತಾನೆ. ಈ ಊರ ಆಫೀಸಿನಲ್ಲಿದ್ದೋರಿಗೆ ಪ್ರಮೋಷನ್ ಆಗೋಲ್ವಂತೆ, ಕಾರಣ ನಮ್ಮವರಿಗೆ ಬೇರೆ ಊರಿಗೆ ವರ್ಗಾಯಿಸಿ ಕೊಡಿ’ ಅಂತ ಹೇಳ್ಕೊಂಡೆ; ತನ್ನ ಗಂಡನಿಗೇ ಪ್ರಮೋಷನ್ ಕೊಡ್ಸೋಣಾ ಅಂತ ಅವರು, ತನ್ನ ಗಂಡ ಟ್ರಾನ್ಸಫರ್ ಮಾಡ್ಸಿಕೊಳ್ಳೋ ಹಾಗೆ ಮಾಡಿದರು!”

“ಬೇಷ್, ಪ್ರಮೋಷನ್ ಸಿಕ್ರೂ ಸಿಗಲಿ ಬೇಕಾದರೆ ಆತನಿಗೆ; ನಮ್ಮ ಶನೀ ತೊಲಗಿತಲ್ಲಾ ಸಾಕು! ಅಲ್ವೇ, ನಿನ್ನ ಅಣ್ಣ ಎಂದಿನಿಂದಲೇ ಜ್ಯೋತಿಷ್ಯ ಹೇಳೋಕೆ ಶುರು ಮಾಡಿದ್ದು?”

“ಅಣ್ಣ ಅಲ್ಲ, ನಾನು ಜೋತಿಷ್ಯ ಹೇಳೋಕೆ ಶುರು ಮಾಡಿದ್ದು! ನಿಮ್ಮಿಂದ ‘ವಿಘ್ನೇಶ್ವರ’ ಅಂತ ಹೇಳಿಸಿಕೊಳ್ಳಲಾರದೆ…”

“ಹುಂ ! ಈಗಲೂ ನಿನಗೆ ‘ವಿಘ್ನೇಶ್ವರ’ ಅಂತ ಹೆಸರು ತಪ್ಪಿದ್ದಲ್ಲ!”

“ಗಂಡ ಅನ್ನೂ ಅಧಿಕಾರ!”

“ಅಧಿಕಾರ ಅಲ್ಲವೇ ಹುಚ್ಚಿ! ಆಗ ನೀನು ವಿಘ್ನಮಾಡುವ ಈಶ್ವರ ಅಂತ ಹೇಳಿದ್ದೆ; ಈಗ ನೀನು ವಿಘ್ನ ಪರಿಹಾರ ಮಾಡುವ ಈಶ್ವರ! ಎಲ್ಲಿ, ವಿಘ್ನೇಶ್ವರ ಈ ಕಡೆ ತಿರುಗಲಿ!”

“ಯಾಕೇ?”

“ಅನುಗ್ರಹ ಮಾಡ್ಲಿಕ್ಕೆ?”

“ಇಶ್…!”

 

– ಕುಮಾರಿ ತಾರಾ ಹೆಗಡೆ, ಸಿರಸಿ
ಜಯಂತಿ, ಸಂಪುಟ ೫, ಸಂಚಿಕೆ ೬,೧೯೪೩