ಬನದೇವತೆಯು ಆಗ ನಿಂತಿದ್ದಳೇನೊ
ಬನದೊಳಗೆ ಅವಳು ಹಾಡುವಳೇನೊ!
ಬನದೊಳಗೆ ಅವಳು ಹಾಡುವಳೇನೋ! ||೧||
ಕೇಳಬೇಕೆಂಬಾಶೆ ಹುಟ್ಟಿತು ಆಗ
ಹಾಡುವ ಧ್ವನಿಯಂತು ಕೇಳಿತು ಎನಗೆ
ಹಾಡುವ ಧ್ವನಿಯಂತು ಕೇಳಿತು ಎನಗೆ ||೨||
ಬನದ ಸಿರಿಯ ನೋಡಿ ತಲ್ಲಣಗೊಂಡಿತು
ಮನಸಿನ ಸೊಗಸನು ಹೇಳಲಾರೆ
ಮನಸಿನ ನೊಗಸನು ಹೇಳಲಾರೆ ||೩||
ಬನದೇsವತೆಯನು ನೋಡುವೆನೆಂದು
ಕುಣಿಕುಣಿದಾಡಿದೆ ಅಂದೆಲ್ಲ ಹಗಲು
ಕುಣಿಕುಣಿದಾಡಿದೆ ಅಂದೆಲ್ಲ ಹಗಲ ||೪||
ಬನದೇsವತೆಯನು ನೋಡಬೇಕೆಂದು
ತಿರುಗಿದೆ ಇರುಳಲ್ಲಿ ಬನದೊಳಗೆಲ್ಲ
ತಿರುಗಿದೆ ಇರುಳಲ್ಲಿ ಬನದೊಳಗೆಲ್ಲ ||೫||
ಸಿಕ್ಕಿದಳೇನೋ ಸಿಕ್ಕಿದೇನೋ
ಎನುತ ತಿರುಗಾಡಿದೆ ಬನದೊಳಗೆಲ್ಲ
ಎನುತ ತಿರುಗಾಡಿದೆ ಬನದೊಳಗೆಲ್ಲ ||೬||
ಬರುವೆನು ಈಗಲೆ ಎನ್ನುತಲವಳು
ಓಡಿದಳೆಲ್ಲಿಗೋ ಕಾಣಿಸಲಿಲ್ಲ
ಓಡಿದಳೆಲ್ಲಿಗೋ ಕಾಣಿಸಲಿಲ್ಲ ||೭||
ಬರುವೆನೆಂದು ಹೇಳಿ ಹೇಳಿ ಅವಳು
ಎನ್ನ ಕಣ್ಣಿಗೆ ಕಡೆಗೆ ಬೀಳಲಿಲ್ಲ
ಎನ್ನ ಕಣ್ಣಿಗೆ ಕಡೆಗೆ ಬೀಳಲಿಲ್ಲ ||೮||
* * *
– ಕಮಲಾ
ಜಯಕರ್ನಾಟಕ, ಸಂಪುಟ ೧೦, ಸಂಚಿಕೆ ೧, ೧೯೩೨
Leave A Comment