ವಿಮಲಾಬಾಯಿ ಮೇಲುಕೋಟೆಯವರ ಮೇಲಿನ ಮಾತುಗಳು ಅತಿಶಯೋಕ್ತಿಯದಲ್ಲ ಎಂಬುದಕ್ಕೆ ಪೂರಕವಾಗಿ ೧೯೪೯ರ ದೇಶಬಂಧು ಪತ್ರಿಕೆಯಲ್ಲಿ ಪ್ರಕಟಗೊಂಡ ಆರ್. ಕಲ್ಯಾಣಮ್ಮ ನವರನ್ನು ಕುರಿತ ಬೈರಾಡಿ ವೆಂಕಟಕೃಷ್ಣರಾಯರ ಲೇಖನದ ಮಾತುಗಳನ್ನು ಗಮನಿಸಬಹುದು. ವಿಮಲಾಬಾಯಿಯವರ ಮಾತಿನ ಹಿಂದೆ ಈ ಕೆಳಗಿನ ವಿಚಾರವಿದ್ದರೂ ಇರಬಹುದು.

ಕಾಲು ಶತಮಾನಕ್ಕಿಂತ ಹೆಚ್ಚು ಕಾಲ ಸಾಹಿತ್ಯ ಕ್ಷೇತ್ರದಲ್ಲಿ ದುಡಿದ ಹಿರಿಯ ಸೋದರಿ ಎಂದೋ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗದ್ದುಗೆಗೆ ಏರಬೇಕಾಗಿತ್ತು. ನಾಲ್ಕಾರು ಬಾರಿ ಇವರ ಹೆಸರು ಚುನಾವಣಾ ಪಟ್ಟಿಯಲ್ಲೂ ಇತ್ತು. ಅವರು ಆಯ್ಕೆಯಾಗದಿದ್ದುದು ಕನ್ನಡ ಸೋದರರ ಕರ್ತವ್ಯ ಲೋಪವೆಂದೇ ನಾನು ಹೇಳುತ್ತೇನೆ. ಸಹೋದರಿ ಸಾಹಿತಿಯೊಬ್ಬಳನ್ನು ಗೌರವಿಸುವಷ್ಟು ಸ್ಥಾನ ಅವರಿಗೆ ಬಿಟ್ಟುಕೊಡುವಷ್ಟು ತ್ಯಾಗಿಗಳು ನಾವು ಇನ್ನೂ ಆಗಿಲ್ಲವೆಂದು ಹೇಳಿದರೆ ಮಾತು ಕಟ್ಟು ಆದೀತೆ.[1]

ಮಹಿಳೆಯರ ಸಾಹಿತ್ಯಕ್ಕೆ ಸಿಗಬೇಕಾದ ಮನ್ನಣೆ ಕುರಿತು ಇಷ್ಟು ಧ್ವನಿಪೂರ್ವಕವಾಗಿ ಮಾತನಾಡುವ ಅಂದಿನ ಲೇಖಕಿಯರು ತಮ್ಮ ಸಾಹಿತ್ಯ ಚರಿತ್ರೆಯ ರಚನೆಯ ಸಂದರ್ಭದಲ್ಲಿ ಮಾತ್ರ ಪ್ರಧಾನಧಾರೆಗಿಂತ ಭಿನ್ನವಾದ ಹಾಗೂ ಮಹಿಳಾ ರಾಜಕಾರಣಕ್ಕೆ ಪೂರಕವಾದ ದಿಕ್ಕಿನಲ್ಲಿ ತಮ್ಮ ತಾತ್ವಿಕತೆಯನ್ನು, ವೈಧಾನಿಕತೆಯನ್ನು ಅಳವಡಿಸಿಕೊಳ್ಳವತ್ತ ಗಮನಹರಿಸಿರುವುದು ಕಂಡುಬರುವುದಿಲ್ಲ. ಬದಲಿಗೆ ಲೇಖಕಿಯರ ಕುರಿತ ಮಾಹಿತಿಯನ್ನು ಒಂದೆಡೆ ಕಲೆಹಾಕಬೇಕು, ಒಪ್ಪವಾಗಿ ಜೋಡಿಸಬೇಕು, ಸಾಧನೆಯನ್ನು ಗುರುತಿಸಬೇಕು ಎಂಬ ಉತ್ಸಾಹದೊಂದಿಗೆ ಅಂದಿನ ಕನ್ನಡದ/ಕರ್ನಾಟಕದ ಗುರುತಿನ ರಾಜಕಾರಣಕ್ಕಾಗಿ ತನ್ನ ಕೊಡುಗೆಯನ್ನು ನೀಡಬೇಕೆಂಬ ಆಶಯ ಮಾತ್ರ ಇಲ್ಲಿ ಎದ್ದು ಕಾಣುತ್ತದೆ:

ನಮ್ಮ ನುಡಿಯ ನೈಜವನ್ನು ಕಾಯ್ದುಕೊಂಡು ಬಂದವರು ಸ್ತ್ರೀಯರು. ನಮ್ಮ ಸಾಹಿತ್ಯದಲ್ಲಿಯೇ ಮಾತಿಗೆ ದೃಷ್ಟಾಂತವುಂಟು. ನಮ್ಮ ಕಾವ್ಯಗಳಲ್ಲಿ ಸೇರಿದ ಛಂದಸ್ಸು ತ್ರಿಪದಿಯಾಗಿರಲಿಕ್ಕೆ ಸಾಕೆಂದು ಮೊದಲೇ ನಾವು ಒಂದೆಡೆಗೆ ಹೇಳಿದ್ದೇನೆ. ಅದನ್ನು ರೂಪಿಸಿದವರು ಸ್ತ್ರೀಯರು. ತಾಯಿ ತನ್ನ ಮಗುವನ್ನು ತೊಟ್ಟಿಲಲ್ಲಿಟ್ಟು ತೂಗುವಾಗ ತೊಟ್ಟಿಲಿನ ಜೀಕನೊಡನೆ ಕನ್ನಡ ತಾಯಿಯ ಭಾವವೂ ಜೀಕಿ ಜೋಗುಳ ತ್ರಿಪದಿಯಲ್ಲಿ ರೂಪುಗೊಂಡಿರಬೇಕು. ಈ ತ್ರಿಪದಿ ಅಚ್ಚ ಕನ್ನಡ ಮಟ್ಟು, ೯-೧೦-೧೧ನೆಯ ಶತಮಾನಗಳ ಕಾವ್ಯಗಳಲ್ಲಿ ಹೆಚ್ಚಾಗಿ ಪಂಪ, ಪೊನ್ನ, ರನ್ನರ ಚಂಪೂಕಾವ್ಯಗಳಲ್ಲಿ ಒಡೆದು ಕಾಣುತ್ತದೆ…..ಆ ಕಾವ್ಯಗಳು ರಚಿತವಾದುದು ಪರುಷರಿಂದ. ಯಾವ ಕನ್ನಡ ಕವಯತ್ರಿಯೂ ಚಂಪೂ ಶೈಲಿಯಲ್ಲಿ ಕಾವ್ಯವನ್ನು ಬರೆದಿಲ್ಲವೆಂಬುದನ್ನು ನಿಮ್ಮ ಗಮನಕ್ಕೆ ತರಲಿಚ್ಛಿಸುತ್ತಿವೆ. ಕವಯತ್ರಿಯರು ಬಳಸಿಕೊಂಡ ಮಟ್ಟಗಳೆಂದರೆ ತ್ರಿಪದಿ, ಸಾಂಗತ್ಯ, ಷಟ್ಪದಿ ಮೊದಲಾದ ಅಚ್ಚಕನ್ನಡ ಮಟ್ಟುಗಳು ಮಾತ್ರ. ಈಗ ನಮ್ಮ ಕವಿಗಳು ಬಳಸುತ್ತಿರುವ ಮಟ್ಟಗಳು ತ್ರಿಪದಿ, ಸಾಂಗತ್ಯ, ಷಟ್ಪದಿಗಳ ರೂಪಾಂತರಗಳೇ. ಇವು ನಿರ್ಮಾಣವಾಗುವುದಕ್ಕೆ ಕನ್ನಡ ಕವಯತ್ರಿಗಳು ಉಳಿಸಿಕೊಂಡು ಬಂದ ಕನ್ನಡ ಮಟ್ಟುಗಳು ಕಾರಣವೆಂದು ನಾನು ಸದಾಭಿಮಾನದಿಂದ ಹೇಳಬಯಸುತ್ತೇನೆ. ಕನ್ನಡದ ಕನ್ನಡತನವನ್ನು ಕಾಪಾಡಿಕೊಂಡು ಬಂದವರು ಅವರು ಇನ್ನು ಮುಂದೆಯೂ ಕನ್ನಡದ ಕನ್ನಡತನವನ್ನೂ ಕನ್ನಡ ನಾಡಿನ ಸಂಸ್ಕೃತಿಯನ್ನೂ ಉಳಿಸಿಕೊಳ್ಳುವ ಹೊಣೆ ಹೆಚ್ಚಾಗಿ ಹೆಣ್ಣುಮಕ್ಕಳ ಮೇಲೆಯೇ ಇದೆ.[2]

ಮೇಲಿನ ಮಾತುಗಳು ಅತ್ಯಂತ ತರ್ಕಬದ್ದವಾಗಿ ಮಹಿಳೆಯ ಸಾಹಿತ್ಯದ ಗುರುತನ್ನು, ವೈಶಿಷ್ಟ್ಯವನ್ನು ಪ್ರತಿಪಾದಿಸಲೆತ್ನಿಸುತ್ತಲೇ ಅಂತಿಮವಾಗಿ ಅದನ್ನು ಕನ್ನಡದ ಗುರುತಿನೊಳಗೆ ಅಂತರ್ಗತಗೊಳಿಸುತ್ತದೆ. ಸಮಕಾಲೀನ ಸಂದರ್ಭದ ಕನ್ನಡದ ಗುರುತು ರಾಜಕಾರಣದ ಹೊಣೆಯನ್ನು ಸ್ತ್ರೀ ಹೊರಬೇಕೆಂದು ಭಾವಿಸುತ್ತದೆ. ಪ್ರಧಾನಧಾರೆಯು ತನಗೆ ಒದಗಿಸಿದ ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ಅದರ ರಾಜಕಾರಣಕ್ಕೆ ಮುಡುಪಾಗಿಸುತ್ತದೆ. ಸಾಹಿತ್ಯ ಸಮ್ಮೇಳನಗಳ ಮಹಿಳಾ ಗೋಷ್ಠಿಗಳ ಬಹುತೇಕ ಎಲ್ಲ ಭಾಷಣಗಳು ಕರ್ನಾಟಕ ಏಕೀಕರಣದ ತಾತ್ವಿಕ ಚೌಕಟ್ಟಿನೊಳಗೇ ಮಹಿಳೆಯರ ಸಾಹಿತ್ಯ ಚಟುವಟಿಕೆಯನ್ನು ಪರಿಭಾವಿಸುತ್ತವೆ. ಅಷ್ಟರಮಟ್ಟಿಗೆ ಮಹಿಳಾ ಸಾಹಿತ್ಯದ ಗುರುತು ಈ ಕಾಲಘಟ್ಟದಲ್ಲಿ ಅಧೀನ ಗುರುತಾಗಿದೆ. ಈ ಕಾಲಘಟ್ಟದ ಮಹಿಳಾ ಸಾಹಿತ್ಯ ಪರಂಪರೆ ಪ್ರಧಾನಧಾರೆಯ ಮಾರ್ಗದರ್ಶನದೊಳಗೇ ರಚನೆಗೊಂಡದ್ದಾಗಿದೆ.

ಪರಂಪರೆಯ ನಿರ್ಮಾಣದ ಸಮಕಾಲೀನ ಸಂದರ್ಭ

ಕನ್ನಡದಲ್ಲಿ ಮಹಿಳಾ ಸಾಹಿತ್ಯ ಚರಿತ್ರೆಯ ಪ್ರಸ್ತಾಪವನ್ನು ಲಿಂಗರಾಜಕಾರಣದ ನೆಲೆಯಲ್ಲಿ, ಪ್ರಾತಿನಿಧ್ಯದ ಪ್ರಶ್ನೆಯಾಗಿ ಗುರುತಿಸಿಕೊಂಡದ್ದು ೧೯೮೦ರ ನಂತರದಲ್ಲಿ ತಿರುಮಲಾಂಬ ಕುರಿತ ವಾಚಿಕೆ ಸಿದ್ಧಪಡಿಸಿದ ಹಿನ್ನೆಲೆಯಲ್ಲಿ ವಿಜಯದಬ್ಬೆ ಇದು ಮಹಿಳಾ ಸಾಹಿತ್ಯ ಚರಿತ್ರೆ ರಚನೆಯ ಪೂರ್ವಭಾವಿ ಕೆಲಸವೆಂದು ಮಹಿಳೆಯರ ಸಂದರ್ಭದಲ್ಲಿ ಮಾಡಬೇಕಾಗಿ ಬಂದ ಈ ಸಂಶೋಧನಾ ಚಟುವಟಿಕೆಗೆ ಲಿಂಗರಾಜಕಾರಣವೇ ಮುಖ್ಯ ಕಾರಣವೆಂದು ಸೂಚಿಸುತ್ತಾರೆ.[3]

ಈ ಹಂತದ ಕನ್ನಡದಲ್ಲಿನ ಮಹಿಳಾ ಸಾಹಿತ್ಯ ಪರಂಪರೆಯ ಶೋಧನ ಕೆಲಸವು ಪ್ರಧಾನವಾಗಿ ಬದುಕು-ಬರಹದ ವೈಧಾನಿಕತೆಯಲ್ಲಿ ಪ್ರಸ್ತುತಗೊಂಡುದಾಗಿದೆ. ಮಹಿಳೆಯೊಬ್ಬಳ ಸಾಹಿತ್ಯಾಸಕ್ತಿಯ ಹಿಂದಿನ ಸಾಮಾಜಿಕ ಪ್ರೇರಣೆ, ಪ್ರಭಾವ ಹಾಗೂ ಒತ್ತಡಗಳನ್ನು ಗುರುತಿಸುವ ಮೂಲಕ ಅವಳ ಸಾಹಿತ್ಯವನ್ನು ವಿವರಿಸಲು ಸಾಧ್ಯ ಎನ್ನುವ ಪ್ರಮೇಯದೊಂದಿಗೆ ಈ ಮಾದರಿ ತಳುಕು ಹಾಕಿಕೊಂಡಿದೆ. ಮಹಿಳೆಯರ ಸಾಮಾಜಿಕ ಸ್ಥಾನಮಾನ ಹಾಗೂ ಅವಳ ಸಾಹಿತ್ಯಿಕ ಚಟುವಟಿಕೆಯ ನಡುವೆ ನೇರ ಸಂಬಂಧವಿದೆ. ಹಾಗಾಗಿ\ ಲೇಖಕಿಯೊಬ್ಬಳ ವೈಯಕ್ತಿಕ ಬದುಕಿನ ವಿವರಳಗು ಸಾಹಿತ್ಯ ಕೃಷಿಯಷ್ಟೇ ಮುಖ್ಯವಾದದು ಎಂದು ಪರಿಗಣಿಸಿ ಈ ವೈಧಾನಿಕತೆಯಲ್ಲಿ ಮಾಹಿತಿ ಶೋಧ ನಡೆಸಲಾಗಿದೆ. ಕೃತಿ ವಿಶ್ಲೇಷಣೆಯ ಸಂದರ್ಭದಲ್ಲಿ ಕೂಡ ವೈಯಕ್ತಿಕ ವಿವರಗಳನ್ನು ಮಹತ್ವದ ಪರಿಕರಗಳಾಗಿ ಬಳಸಲಾಗಿದೆ. ಉದಾಹರಣೆಗೆ, ತಿರುಮಲಾಂಬ ಅವರ ಸಾಹಿತ್ಯ ಚಟುವಟಿಕೆಯ ಸಂದರ್ಭವನ್ನು ಅವರ ವೈಧವ್ಯದೊಂದಿಗೆ ತಳುಕು ಹಾಕಿ ವಿಶ್ಲೇಷಿಸಿದ ಕ್ರಮ. ತಿರುಮಲಾಂಬ ಸಾಹಿತ್ಯ ವಾಚಿಕೆ ರೂಪಿಸಿದ ದಬ್ಬೆಯವರು ‘ಸಾಹಿತಿ ತಿರುಮಲಾಂಬ ಕನ್ನಡಿಗರಿಗೆ ದೊರೆತದ್ದು ಅವರ ವೈಯಕ್ತಿಕ ಕೌಟುಂಬಿಕ ಬದುಕಿನ ಆಘಾತದ ಒಡಲಿನೊಳಗಿಂದ’ ಎಂದು ವ್ಯಾಖ್ಯಾನಿಸುತ್ತಾರೆ:

ಇದ್ದಕ್ಕಿದ್ದಂತೆ ಎದುರಾದ ಆಘಾತ ಅವರನ್ನು ಅಲುಗಿಸಿದರೂ ಧೃತಿಗೆಡದೆ ಅವರು ತಮ್ಮ ಬದುಕಿನ ದಾರಿಯನ್ನು ಕಂಡುಕೊಂಡರು. ಬದುಕಿನ ಒಂದು ನಿಟ್ಟಿನ ಮೇಲೆ ಶಾಶ್ವತ ತೆರೆಬಿದ್ದಿತು. ಆದರೆ ಆಘಾತದ ಒಡಲಲ್ಲೇ ಸಂಪಾದಕಿ, ಲೇಖಕಿ, ಪ್ರಕಾಶಕಿ ತಿರುಮಲಾಂಬ ಹುಟ್ಟಿದರು.[4]

ಸ್ತ್ರೀವಾದದ ಪ್ರಕಾರ ಮಹಿಳೆ ಎಂಬುದು ಒಂದು ಜೈವಿಕ ಘಟಕವಾಗಿರುವಂತೆ ಸಾಮಾಜಿಕ ಘಟಕವೂ ಹೌದು. ಹಾಗಾಗಿ ಈ ಘಟಕವನ್ನು ಸಮಾಜದ ಇನ್ನಿತರ ಎಲ್ಲ ಘಟಕಗಳು, ಸಂಸ್ಥೆಗಳು ಪ್ರಭಾವಿಸುತ್ತಿರುತ್ತವೆ. ಈ ಎಲ್ಲದರ ಸಂಸರ್ಗದಲ್ಲಿ ಮಹಿಳೆಯ ಸ್ವರೂಪವು ವ್ಯಾಖ್ಯಾನಗೊಳ್ಳುತ್ತಿರುತ್ತದೆ. ಅಂತೆಯೇ ಸ್ತ್ರೀವಾದವು ಸಾಹಿತ್ಯವನ್ನೊಂದು ಚಾರಿತ್ರಿಕ ನಿರ್ಮಿತಿಯಾಗಿ, ಸಾಂಸ್ಕೃತಿಕ ಉತ್ಪಾದನೆಯಾಗಿ ಪರಿಭಾವಿಸುತ್ತದೆ. ಮಹಿಳೆ ಮತ್ತು ಸಾಹಿತ್ಯ ಕುರಿತ ಸ್ತ್ರೀವಾದದ ಈ ಎರಡು ನಿಲುವುಗಳು ಕಲೆತು ಅಂತಿಮವಾಗಿ ಲೇಖಕಿ ಹಾಗೂ ಅವಳ ಲೇಖನ ಚಟುವಟಿಕೆಯನ್ನು ಸಾಮಾಜಿಕ ಉತ್ಪನ್ನವಾಗಿ ವ್ಯಾಖ್ಯಾನಿಸುತ್ತದೆ. ಅಂತಹ ಸಾಮಾಜಿಕ ಉತ್ಪಾದನೆಯ ವಿಶ್ಲೇಷಣೆಗೆ ಸಾಮಾಜಿಕ ಪರಿಕರಗಳು ಅತ್ಯಗತ್ಯವೆಂದು ಭಾವಿಸುತ್ತದೆ. ಲೇಖಕಿಯ ಸಾಮಾಜಿಕ ಸಂದರ್ಭ, ವೈಯಕ್ತಿಕ ಬದುಕು ಹಾಗೂ ಅವಳ ಬರಹದ ಕುರಿತ ಪ್ರತಿಕ್ರಿಯೆ (ವಿಮರ್ಶೆ) ಇತ್ಯಾದಿಗಳೆಲ್ಲವೂ ಅವಳ ಬರಹವನ್ನು ಪ್ರಭಾವಿಸುತ್ತಿರುತ್ತವೆ ಎನ್ನುವ ಆಲೋಚನೆಯೊಂದಿಗೆ ಸ್ತ್ರೀವಾದ ತನ್ನ ಸಾಂಸ್ಕೃತಿಕ ವಿಮರ್ಶೆಯ ಪರಿಕರಗಳನ್ನು ರೂಪಿಸಿಕೊಳ್ಳುತ್ತದೆ.[5]

ಇಂದು ಪ್ರಧಾನಧಾರೆಯ ಸಾಹಿತ್ಯ ವಿಮರ್ಶೆಯೂ ಸಾಂಸ್ಕೃತಿಕ ವಿಮರ್ಶೆಯನ್ನು ಪ್ರಸ್ತಾಪಿಸುತ್ತಿದೆಯಾದರೂ ಅದರ ಪ್ರಧಾನ ವಿಮರ್ಶಾ ಪರಿಕರಗಳಲ್ಲಿ ಪ್ರತಿಭೆ, ಸೃಜನಶೀಲತೆ ಮತ್ತು ವ್ಯುತ್ಪತ್ತಿ ಎಂಬ ಪರಿಕರಗಳಿಗೆ ಇನ್ನೂ ವಿಶೇಷ ಸ್ಥಾನವಿದೆ. ಆದರೆ ಲಿಂಗ ಅಸಮಾನತೆಯ ಸಾಮಾಜಿಕ ಸನ್ನಿವೇಶದಲ್ಲಿ ಮೇಲಿನ ವಿಮರ್ಶಾ ಪರಿಕರಗಳು ಮಹಿಳೆಯರ ಸಂದರ್ಭದಲ್ಲಿ ಭಿನ್ನ ತೀರ್ಮಾನವೊಂದಕ್ಕೆ ದಾರಿ ಮಾಡಿಕೊಡುತ್ತವೆ. ಸಾಹಿತ್ಯ ಚಟುವಟಿಕೆಯೂ ಪ್ರತಿಭಾಜನ್ಯವೆಂದು, ಸೃಜನಶೀಲವಾದುದೆಂದು ಗುರುತಿಸುವಾಗ ಸ್ತ್ರೀ ಎರಡನೆ ದರ್ಜೆ ಪ್ರತಿಭೆಯುಳ್ಳವಳಾಗುವ ಮೂಲಕ ನಿರಾಕರಣೆಗೊಳ್ಳುತ್ತಾಳೆ. ಹಾಗೆ ಸಾಹಿತ್ಯವನ್ನೊಂದು ವ್ಯುತ್ಪತ್ತಿ ಪ್ರಧಾನ ಚಟುವಟಿಕೆಯಾಗಿ ಪರಿಗಣಿಸಿದಾಗಲೂ ಶಿಕ್ಷಣ, ತರಬೇತಿ, ಅವಕಾಶ ಇತ್ಯಾದಿ ಎಲ್ಲ ಬಗೆಯ ಸವಲತ್ತುಗಳಿಗೆ ಎರವಾಗುವ ಮಹಿಳೆ ಸಾಹಿತ್ಯದ ಆವರಣದ ಹೊರಗುಳಿಯುತ್ತಾಳೆ ಅಥವಾ ಪರಿಧಿಯಲ್ಲಿ ನಿಲ್ಲುತ್ತಾಳೆ. ಸಾಹಿತ್ಯ ಪರಂಪರೆಯೊಂದರಲ್ಲಿನ ಮಹಳೆಯ ಗೈರು ಹಾಜರಿ, ಕೆಳಮಟ್ಟದ ಸಾಧನೆ, ಪರಂಪರೆಯಲ್ಲಿ ದಾಖಲಾಗದಿರುವುದು ಇತ್ಯಾದಿ ಸಂಗತಿಗಳೆಲ್ಲವೂ ಈ ವಿಚಾರಕ್ಕೆ ಹೊಂದಿಕೊಂಡಂತೆಯೇ ಮುಂದುವರಿಯುತ್ತದೆ. ಇದನ್ನೇ ವರ್ಜೀನಿಯ ವುಲ್ಫ ತನ್ನ ದ ರೂಂ ಆಫ್ ಒನ್ಸ್ ಓನ್ ಕೃತಿಯಲ್ಲಿ ‘ಮಹಿಳೆಯರ ಸಾಂಸ್ಕೃತಿಕ ಬಡತನವು ಅವರ ಭೌತಿಕ ದ್ರಾರಿದ್ಯ್ರಕ್ಕೇ ಸಂಬಂಧಿಸಿದ್ದು’ ಎಂದು ನಿರೂಪಿಸುತ್ತಾಳೆ.[6]

ಪ್ರಧಾನಧಾರೆಯು ಬಳಸುವ ಪ್ರತಿಭೆ, ಸೋಪಜ್ಞತೆ, ಸೃಜನಶೀಲತೆ ಮತ್ತು ವುತ್ಪತ್ತಿ ಇತ್ಯಾದಿ ಸಾಹಿತ್ಯ ಪರಿಕರಗಳು ಮಹಿಳೆಯ ಸಂದರ್ಭದಲ್ಲಿ ಹುಟ್ಟು ಹಾಕುವ ಈ ಬಿಕ್ಕಟ್ಟನ್ನು ಗಮನಿಸಿಯೇ ಸ್ತ್ರೀವಾದಿ ವಿಮರ್ಶೆ ಅದರ ವಿಮರ್ಶಾ ಮಾನದಂಡಗಳ ಬಗ್ಗೆ ತೀವ್ರ ವಿರೋಧವನ್ನೊಡ್ಡುತ್ತದೆ. ಮೂಲಭೂತವಾಗಿಯೇ ಪ್ರತಿಭೆ ಎಂಬುದೊಂದು ಅಮೂರ್ತ ಪರಿಕಲ್ಪನೆ. ಅದನ್ನು ಕೆಲವು ನಿರ್ದಿಷ್ಟ ಸಂಗತಿಗಳ ಆಧಾರದಲ್ಲಿ ಮೂರ್ತಗೊಳಿಸಿಕೊಳ್ಳಬಹುದು ಎನ್ನುವುದಾದರೂ ಅದು ಒಂದು ಹಂತದ ವ್ಯುತ್ಪತ್ತಿಯನ್ನು, ತರಬೇತಿಯನ್ನು, ಪರಿಶ್ರಮವನ್ನು ಬಯಸುವುದೇ ಆಗಿದೆ. ಆದರೆ ಮಹಿಳೆಯರ ಸಂದರ್ಭದಲ್ಲಿ ಲಿಂಗ ಅಸಮಾನತೆಯು ಏರ್ಪಡಿಸುವ ಈ ಕೊರತೆಯನ್ನು ಸಮಾಜವು ಪ್ರತಿಭಾಹೀನತೆಯ ಸಂಗತಿಯಾಗಿ ವ್ಯಾಖ್ಯಾನಿಸಿ ಮರೆಮಾಚುತ್ತದೆ.

ಸಿಮೋನ ದ ಬುವಾ ಅವರ ಪ್ರಸಿದ್ಧೋಕ್ತಿಯಾದ ‘One is not born but rather becames a women’ ಎಂಬ[7] ಮಾತು ‘ಮಹಿಳೆ’ ಎಂಬುದನ್ನೊಂದು ಸಾಮಾಜಿಕ ನಿರ್ಮಿತಿಯಾಗಿ ಪರಿಭಾವಿಸುವ ಹಿನ್ನೆಲೆಯಲ್ಲಿಯೇ ಮಹಿಳೆಯೊಬ್ಬಳು ಲೇಖಕಿಯಾಗುವ ಪ್ರಕ್ರಿಯೆಯನ್ನು ಸಹ ಸಾಮಾಜಿಕ ಸಂಗತಿಗಳೊಂದಿಗೆ ವಿವರಿಸುತ್ತದೆ.[8] ಮಹಿಳೆಯೊಬ್ಬಳು ಲೇಖಕಿಯಾಗುವ ಈ ಸಂದರ್ಭದಲ್ಲಿ ಲೇಖಕಿಯ ಪ್ರತಿಭೆಯನ್ನು ಊರ್ಜಿತಗೊಳಿಸುವ ಹಲವು ಸಾಮಾಜಿಕ ಸಂಗತಿಗಳು ಮುಖ್ಯವಾಗುತ್ತವೆ. ಸಮಾಜದಿಂದ ದೊರೆಯುವ ಪ್ರೋತ್ಸಾಹ-ಅವಕಾಶಗಳು, ಒಡ್ಡುವ ಪ್ರತಿಬಂಧಕ-ನಿಯಂತ್ರಣಗಳು ಅವಳ ಸಾಹಿತ್ಯ ರಚನೆಯ ಮೇಲೆ ನಿಶ್ಚಿತ ಪರಿಣಾಮವನ್ನು ಬೀರುವುದಾಗಿರುತ್ತದೆ ಎಂಬುದನ್ನು ಬದುಕು-ಬರಹದ ವೈಧಾನಿಕತೆಯ ಮೂಲಕ ಸ್ತ್ರೀವಾದಿ ಚಿಂತನೆಯು ಗುರುತಿಸುತ್ತ, ಪ್ರಧಾನಧಾರೆಯ ಲಿಂಗರಾಜ ಕಾರಣದ ಧೋರಣೆ ಹಾಗೂ ಮಹಿಳೆಯರ ಸಾಹಿತ್ಯಿಕ ಸನ್ನಿವೇಶಗಳೆರಡನ್ನು ಮುಖಾಮುಖಿಯಾಗಿಸಿ ವಿವರಿಸಲು ಯತ್ನಿಸುತ್ತದೆ. ಹಾಗೆ ಇಲ್ಲಿ ಸಾಹಿತ್ಯ ಅಧ್ಯಯನವನ್ನು ಸಮಾಜ ಅಧ್ಯಯನದ ಭಾಗವಾಗಿ ವಿಸ್ತರಿಸಲು ಅವಕಾಶ ದೊರೆಯುತ್ತದೆ. ಇದು ಸ್ತ್ರೀವಾದವು ನಂಬಿರುವ ‘ಸಾಹಿತ್ಯಿಕ ಪ್ರಶ್ನೆಯು ಅಂತಿಮವಾಗಿ ಸಾಮಾಜಿಕ ಪ್ರಶ್ನೆ’ ಎಂಬುದನ್ನು ರುಜು ವಾತುಪಡಿಸುತ್ತದೆ ಸಹ.

ಈ ದಿಕ್ಕಿನಿಂದ ನೋಡಿದರೆ ಸ್ತ್ರೀವಾದಿ ಸಾಹಿತ್ಯ ವಿಮರ್ಶೆಯ ಸಾಹಿತ್ಯ ಪರಂಪರೆಯ ಪರಿಕಲ್ಪನೆಯು ಕೇವಲ ಸಾಹಿತ್ಯ ಪರಿಕಲ್ಪನೆಯಾಗಿರದೆ, ಸ್ತ್ರೀವಾದಿ ರಾಜಕಾರಣದ ಹಲವು ಧಾರಗಳಲ್ಲಿ ಒಂದಾಗಿರುವುದರಿಂದ ಅದು ಮೂರು ಮುಖ್ಯ ನೆಲೆಗಳಲ್ಲಿ ಸಾಹಿತ್ಯ ಚಟುವಟಿಕೆಯನ್ನು ಪರಿಗಣಿಸುತ್ತದೆ.

೧. ಸಾಹಿತ್ಯ ಕ್ಷೇತ್ರದಲ್ಲಿನ ಪುರಷ ಪ್ರಧಾನತೆಯನ್ನು ಬಯಲಿಗೆಳೆಯುವುದು

೨. ಕಡಗಣಿಸಲ್ಪಟ್ಟ ಮಹಿಳಾ ಸಾಹಿತ್ಯವನ್ನು ಮುನ್ನೆಲೆಗೆ ತರುವುದು

೩. ಮೇಲಿನ ಎರಡೂ ಚಟುವಟಿಕೆಯನ್ನು ಅಂತಿಮವಾಗಿ ಲಿಂಗಸಮಾನತೆಯ ರಾಜಕಾರಣದ ಪರಿಕರವಾಗಿ ಸಂಯೋಜಿಸುವುದು.

ಮೇಲಿನ ಮೂರು ನೆಲೆಗಳಿಗೆ ಅನುಗುಣವಾಗಿಯೇ ಸ್ತ್ರೀವಾದಿ ಸಾಹಿತ್ಯ ವಿಮರ್ಶೆ ತನ್ನ ವಿಮರ್ಶಾ ಪರಿಕರಗಳನ್ನು, ಮಾನದಂಡಗಳನ್ನು ರೂಪಿಸಿಕೊಳ್ಳುತ್ತದೆ ಹಾಗೂ ಅವು ಪ್ರಧಾನಧಾರೆಯ ವಿಮರ್ಶಾಪರಿಕರ ಹಾಗೂ ಮಾನದಂಡಗಳೆದುರು ತನ್ನದೆ ಆದ ಅರ್ಥಖಚಿತತೆಯನ್ನು ಹೊಂದಿದೆ. ಸ್ತ್ರೀವಾದಿ ವಿಮರ್ಶೆಯ ಈ ತಾತ್ವಿಕತೆಗೆ ಅನುಗುಣವಾಗಿಯೇ ಕನ್ನಡದ ಸಂದರ್ಭವು ಕೆಲಸ ನಿರ್ವಹಿಸುತ್ತಿದೆ.

ಮಹಿಳಾ ಸಾಹತ್ಯವೊಂದು ಆತ್ಮಕಥಾನಕ ಎಂಬ ಸಂಕಥನ

ಸ್ತ್ರೀವಾದಿ ಸಾಹಿತ್ಯ ಅಧ್ಯಯನವು ಅಳವಡಿಸಿಕೊಂಡ ಬದುಕು ಬರಹದ ಮಾದರಿಯ ಅಂತಿಮವಾಗಿ ಮಹಿಳಾ ಸಾಹಿತ್ಯವೊಂದು ಆತ್ಮಕಥಾನಕ ಎಂಬ ಪ್ರಮೇಯವನ್ನು ಉಂಟು ಮಾಡಿತು. ಬುವಾ ಪುರುಷ ಪ್ರಧಾನ ವ್ಯವಸ್ಥೆಯಲ್ಲಿನ ಮಹಿಳೆಯ ಅಭಿವ್ಯಕ್ತಿ ಸಾಧ್ಯಸಾಧ್ಯತೆಗಳನ್ನು ವಿಶ್ಲೇಷಿಸುತ್ತ ಈ ವ್ಯವಸ್ಥೆಯಲ್ಲಿ ಮಹಿಳೆಯ ಅಭಿವ್ಯಕ್ತಿಯು ಅವಳ ಬದುಕಿನ ಅರ್ಥ ಸಾಧ್ಯತೆಯೊಂದಿಗೆ ಹೆಣೆದುಕೊಂಡ ಬಗೆಯನ್ನು ವಿವರಿಸುತ್ತ, ಮಹಿಳೆಯ ಬರವಣಿಗೆಯನ್ನು ಸರಿಸುಮಾರು ಆತ್ಮಕಥಾನಕವೆಂದೇ ಗುರುತಿಸಬಹುದು ಎನ್ನುತ್ತಾಳೆ. ಏಕೆಂದರೆ ಅವಳ ಬರಹದ ಸಾಧ್ಯತೆಗಳು ನೂರಕ್ಕೆ ನೂರು ಅವಳ ಬದುಕಿನ ವಿಧಾನದೊಂದಿಗೆ ರೂಪುಗೊಳ್ಳುವುವಾಗಿರುತ್ತದೆ. ಹಾಗಾಗಿಯೇ ಅವಳ ಬರಹಳು ಸಾಹಿತ್ಯ ವಿಮರ್ಶೆಯ ಪ್ರೊಫೇಷನಲಿಸಂನ ನಿರೀಕ್ಷೆಗಳನ್ನು ಈಡೇರಿಸುವುದು ಸಾಧ್ಯವಾಗುವುದಿಲ್ಲ. ಹಾಗೆ ನೋಡಿದರೆ ಪುರುಷ ಪ್ರಧಾನ ವಿಮರ್ಶೆ ಮಹಿಳಾ ಸಾಹಿತ್ಯದ ಸಂದರ್ಭದಲ್ಲಿ ಎತ್ತುವ ಕಲೆಗಾರಿಕೆಯ ಪ್ರಶ್ನೆ ಈ ಬಿಕ್ಕಟ್ಟಿನಿಂದಲೇ ಹುಟ್ಟಿಕೊಂಡಿದ್ದು, ಮಹಿಳೆಯರ ಸಂದರ್ಭದಲ್ಲಿ ಉಂಟಾಗುವ ಸಾಮಾಜಿಕ ಕೊರತೆಗಳಿಗೂ, ಮಹಿಳಾ ಸಾಹಿತ್ಯದ ಸಂದರ್ಭದಲ್ಲಿ ಎತ್ತಲಾಗುವ ‘ಗಂಭೀರ ಸಾಹಿತ್ಯ’ ‘ಶ್ರೇಷ್ಠಸಾಹಿತ್ಯ’ದ ವಿಚಾರಕ್ಕೂ ಇದಕ್ಕೂ ನಿಕಟವಾದ ಸಂಬಂಧವಿದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯ ಮತ್ತು ಅನುಭವಕ್ಕಿರುವ ಸಂಬಂಧವನ್ನು ಕುರಿತ ಗ್ರಹಿಕೆಗಳನ್ನು ಪರಿಶೀಲಿಸುವುದು ಬದುಕು-ಬರಹದ ವೈಧಾನಿಕತೆಯನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳುವಲ್ಲಿ ನೆರವಾಗುವುದು.

ಸಾಹಿತ್ಯ ರಚನೆಯ ಸಂದರ್ಭದಲ್ಲಿ ವ್ಯಕ್ತಿಯ ವೈಯಕ್ತಿಕ ಅನುಭವದ ಪಾತ್ರವೇನು ಎಂಬ ಪ್ರಶ್ನೆಯನ್ನು ಪ್ರಧಾನಧಾರೆಯು ಸಾಕಷ್ಟು ಗಂಭೀರವಾಗಿ ಪರಿಗಣಿಸಿದೆ. ಈ ಚರ್ಚೆಯಲ್ಲಿ ಅದು ಆತ್ಮಕಥೆ (Autobiagraphy) ಹಾಗೂ ಆತ್ಮಕಥಾನಕ (Autobiagrahical) ಎಂಬೆರಡು ಪರಿಕಲ್ಪನೆಗಳನ್ನು ಗುರುತಿಸಿಕೊಂಡಿದೆ. ಅದರಂತೆ ೧೭ನೇ ಶತಮಾನದಿಂದೇಚೆಗೆ ಜೀವನ ಚರಿತ್ರೆ ಹಾಗೂ ಅದರೊಂದು ಮಾದರಿಯಾದ ಆತ್ಮಕಥೆಗಳನ್ನು ಸಾಹಿತ್ಯ ಪ್ರಕಾರವೆಂದು ಸ್ವೀಕರಿಸುವುದರೊಂದಿಗೆ, ಕಥನವೊಂದನ್ನು ಆತ್ಮಕಥಾನಕದ ರೂಪದಲ್ಲಿ ಪ್ರಸ್ತುತಪಡಿಸುವ ತಂತ್ರವೊಂದನ್ನು ೧೯ನೇ ಶತಮಾನದಿಂದೇಚೆಗೆ ಅಳವಡಿಸಿಕೊಂಡಿದೆ.[9] ಅನುಭವವು ಸಾಹಿತ್ಯಕ್ಕೆ ಅಧಿಕೃತತೆಯನ್ನು, ಜೀವಂತಿಕೆಯನ್ನು, ಸಮೃದ್ಧಿಯನ್ನು ಒದಗಿಸುತ್ತದೆ ಎಂಬ ವಿಚಾರವನ್ನು ಮಾನ್ಯ ಮಾಡುತ್ತದೆಯಾದರೂ ಅದನ್ನು ಸಾಹಿತ್ಯದ ಅಂತಿಮ ಹಾಗೂ ಕಡ್ಡಾಯ ಸಂಗತಿಯಾಗಿ ಪರಿಗಣಿಸಿಲ್ಲ. ಸಾಹಿತ್ಯದ ಶ್ರೇಷ್ಠತೆಯ ಪ್ರಶ್ನೆಯನ್ನು ನೂರಕ್ಕೆ ನೂರು ಅಧಿಕೃತತೆಯ ವಿಚಾರಕ್ಕೆ ಮೀಸಲಿಟ್ಟಿಲ್ಲ. ಲೇಖಕನೊಬ್ಬ ಅನುಭವಕ್ಕೆ ಬದ್ಧನಾಗಿಯೇ ಬರೆಯಬೇಕೆಂದೋ ಅಥವಾ ಲೇಖಕನೊಬ್ಬನ ಬರಹ ವೈಯಕ್ತಿಕ ಅನುಭವವನ್ನೇ ಅಭಿವ್ಯಕ್ತಿಸುತ್ತದೆಂದೋ ಅದು ಪ್ರತಿಪಾದಿಸುವುದಿಲ್ಲ. ಬದಲಿಗೆ ಆತ್ಮಕಥೆಗಳನ್ನು ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿ ಪರಿಗಣಿಸುವ, ಹಾಗೇ ಉತ್ತಮ ಪುರುಷ ನಿರೂಪಣಾ ತಂತ್ರವಾಗಿ ಪರಿಭಾವಿಸುವ ನೆಲೆಯಲ್ಲಿ ಇದನ್ನೊಂದು ತಾಂತ್ರಿಕ ಸಂಗತಿಯಾಗಿ ವಿಶ್ಲೇಷಿಸುತ್ತದೆ. ಇವೆಲ್ಲದರ ಜೊತೆ‌ಗೇ ಸಾಹಿತ್ಯಾಭಿವ್ಯಕ್ತಿಯಲ್ಲಿ ಅನುಭವ ಪ್ರಾಮಾಣ್ಯದ ಪ್ರಶ್ನೆ. ಅಧಿಕೃತತೆಯ ಪ್ರಶ್ನೆ ಅದರ ಕಲಾತ್ಮಕತೆಗೆ ತೊಡಕಾಗುವ ಸಂಗತಿಯೂ ಆಗಬಲ್ಲದೆಂಬ ಅನುಮಾನವನ್ನೂ ಹೊಂದಿದೆ.

ಕನ್ನಡದ ಸಂದರ್ಭದಲ್ಲಿ ಬದುಕು ಬರಹದ ವೈಧಾನಿಕತೆಯ ಪರಿಕಲ್ಪನೆ ಇತ್ತೀಚೆಗೆ ಸೇರ್ಪಡೆಗೊಂಡುದಾದರೂ, ಆಧುನಿಕ ಸಾಹಿತ್ಯದ ಆರಂಭಿಕ ಕಾಲಘಟ್ಟವು ಇದಕ್ಕೆ ಸಂವಾದಿಯಾದ ಚರ್ಚೆಯನ್ನು ‘ಅನುಭವ’ ಎಂಬ ಪರಿಕಲ್ಪನೆಯ ಅಡಿಯಲ್ಲಿ ೧೯೩೦ರ ಸುಮಾರಿಗೆ ಕೈಗೊಂಡಿದೆ. ಅನುಭವದ ಪ್ರಶ್ನೆಯನ್ನು ತನ್ನ ಸಾಹಿತ್ಯ ರಾಜಕಾರಣದ ಸಂದರ್ಭದಲ್ಲಿ ಮಹತ್ವದ ಸಂಗತಿಯಾಗಿ ಸ್ವೀಕರಿಸುತ್ತ ಮಹಿಳಾ ಸಾಹಿತ್ಯವೆಂಬ ವರ್ಗೀಕರಣವನ್ನು ಸಿಂಧುತ್ವಗೊಳಿಸಿಕೊಳ್ಳುವ ಅಗತ್ಯ ಅಂಶಗಳಲ್ಲಿ ಒಂದಾಗಿ ‘ಅನುಭವ’ವನ್ನು ಗುರುತಿಸಿದೆ. ಮಹಿಳೆಯರೂ ಸಾಹಿತ್ಯವನ್ನು ಏಕೆ ಬರೆಯಬೇಕು? ಮಹಿಳಾ ಮತ್ತು ಪುರುಷ ಸಾಹಿತ್ಯದ ವಿಭಜನೆಯ ಮುಖ್ಯ ನೆಲೆಯಾವುದು? ಪುರುಷ ಸಾಹಿತ್ಯಕ್ಕಿಂತ ಮಹಿಳಾ ಸಾಹಿತ್ಯ ಹೇಗೆ ಭಿನ್ನ? ಮಹಿಳಾ ಸಾಹಿತ್ಯದ ಅನನ್ಯತೆಯ ಸ್ವರೂಪವೇನು? ಇವೇ ಮುಂತಾದ ಪ್ರಶ್ನೆಗಳ ಸಂದರ್ಭದಲ್ಲಿ ಮಹಿಳಾ ಅನುಭವವನ್ನು ಪ್ರಮುಖ ಪರಿಕಲ್ಪನೆಯಾಗಿ ಪ್ರಸ್ತುತಪಡಿಸುತ್ತದೆ.

ಪುರುಷರು ಎಷ್ಟೇ ಸೂಕ್ಷ್ಮ ಸಂವೇದಿಗಳಾದಾಗಲೂ ಸ್ತ್ರೀ ಬದುಕಿನ ಅನುಭವವನ್ನು ಅವರು ತಮ್ಮದಾಗಿರಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಸಾಹಿತ್ಯ ಕ್ಷೇತ್ರದಲ್ಲಿನ ಪುರುಷರ ಸಾಧನೆ ಅತಿಶಯವಾದುದಾದರೂ ಅದು ಸಂಪೂರ್ಣ. ಸಾಹಿತ್ಯವು ಸಮಾಜದ ಪ್ರತಿಬಿಂಬ ಎನ್ನುವುದಾದರೆ ಅದರ ಅರ್ಧಭಾಗವಾದ ಸ್ತ್ರೀ ಸಮಾಜದ ಅಭಿವ್ಯಕ್ತಿಯು ಅಲ್ಲಿರಲೇಬೇಕು. ಈ ಕೊರತೆಯನ್ನು ತುಂಬಲು ಮಹಿಳೆಯರೇ ಸಾಹಿತ್ಯ ರಚಿಸಬೇಕಾಗಿದೆ ಎಂಬ ತರ್ಕವನ್ನು ಸ್ವಾತಂತ್ರ್ಯಪೂರ್ವದ ಲೇಖಕಿಯರು ಪ್ರಬಲವಾಗಿ ಪ್ರತಿಪಾದಿಸುತ್ತಾರೆ.[10] ಈ ತರ್ಕವೇ ಮುಂದುವರಿದು ಮಹಿಳೆಯೇ ಮೊದಲ ಲೇಖಕಿಯಾಗಿರಬೇಕು ಎಂಬ ಊಹೆಯನ್ನು ಹಾದು ಅಂತಿಮವಾಗಿ ಸಾಹಿತ್ಯವೇ ಸ್ತ್ರೀ ಎಂಬ ವಾದವಾಗಿ ಬೆಳೆದು ಸಾಹಿತ್ಯದ ಮಹಿಳೀಕರಣ (Feminisation of Literature) ನೆಲೆಯನ್ನು ತಲುಪುತ್ತದೆ. ಸ್ತ್ರೀ ಕಾವ್ಯ ರಚಿಸಬಲ್ಲಳು, ಕಾವ್ಯಕ್ಕೆ ಪ್ರೇರಕಶಕ್ತಿಯಾಗಬಲ್ಲಳು,ಕಾವ್ಯವೇ ಆಗಬಲ್ಲಳು, ಕಾವ್ಯದ ಅಧಿದೇವತೆಯಾಗುವಳು ಎಂಬ ವಿವಿಧ ನೆಲೆಗಟ್ಟಿನಲ್ಲಿ ಮಹಿಳೆ ಮತ್ತು ಸಾಹಿತ್ಯ ಪ್ರಕ್ರಿಯೆಯನ್ನು ವಿವರಿಸಿಕೊಂಡುದನ್ನು ಅಂದಿನ ಮಹಿಳಾ ಸಾಹಿತ್ಯ ಮೀಮಾಂಸೆಯ ಪ್ರಯತ್ನಗಳು, ಮುಖ್ಯವೇದಿಕೆಗಳು ಎತ್ತಿ ತೋರಿಸುತ್ತವೆ:

ನಮ್ಮ ಸಾಹಿತ್ಯಕ್ಕೆ ಅದರಂತೆ ಪ್ರಪಂಚದ ಎಲ್ಲ ಸಾಹಿತ್ಯಗಳಿಗೆ ಸ್ತ್ರೀಯೇ ಪ್ರೇರಕಳು; ಸ್ಫೂರ್ತಿದಾಯಕಳು. ಅವಳೇ ಮೊದಲು ಕವಿಯಿತ್ರಿಯಾಗಿರಬೇಕು. ಅವಳಿಂದಲೇ ಸಾಹಿತ್ಯ ರಚನೆ ಮೊದಲಾಗಿರಲಿಕ್ಕೆ ಸಾಕು. ಏಕಂದರೆ ಸ್ತ್ರೀ ಭಾವನಾ ಪ್ರಧಾನಳು; ಸ್ತ್ರೀ ಪ್ರಪಂಚವು ವ್ಯವಹಾರ ಪ್ರಪಂಚವಲ್ಲ; ಭಾವ ರಾಜ್ಯವು. ಅವಳು ಅಂತರಂಗದ ಜೀವಿ. ಸಾಹಿತ್ಯ, ಅದರಲ್ಲಿಯೂ ಕಾವ್ಯವು, ಹೆಚ್ಚಾಗಿ ಅಂತರಂಗದ ಪ್ರಪಂಚಕ್ಕೆ ಸೇರಿದುದು…. ಸ್ತ್ರೀ ಕಾವ್ಯ ರಚನೆ ಮಾಡುವದಲ್ಲದೆ ಕಾವ್ಯ ರಚಿಸುವವರಿಗೆ ಸ್ಫೂರ್ತಿಯನ್ನು ನೀಡಬಲ್ಲಳು; ಸ್ತ್ರೀಯು ಸ್ಫೂರ್ತಿಯ ಮೂರ್ತಿ; ಸ್ಫೂರ್ತಿಯನ್ನು ನೀಡುವ ಕಾರ್ಯ ಅವಳ ಸ್ವಭಾವಕ್ಕೆ ಸಹಜವಾದುದು. ಆ ಶಕ್ತಿ ಅವಳಗಿದೆಯಂತಲೇ ಸ್ತ್ರೀಗೆ ಸ್ತ್ರೀ ಪುರುಷರೆಲ್ಲರಿಗೆ ಜನನಿಯಾದ, ಜಗನ್ಮಾತೆಗೆ ‘ಶಕ್ತಿ‘ ಎಂಬ ಅರ್ಥ ಸೂಚಕವಾದ ಹೆಸರು ಬಂದಿರಲಿಕ್ಕೆ ಸಾಕು. ಸ್ತ್ರೀಯರು ವಿಶೇಷವಾಗಿ ಕಾವ್ಯ ರಚನೆ ಮಾಡಿದ್ದರೆ, ಕಾವ್ಯಕ್ಕೆ ಸ್ಫೂರ್ತಿಯನ್ನು ನೀಡಿದ್ದರೆ ಅವರ ಹೆಸರುಗಳೇಕೆ ಉಳಿದು ಬಂದಿಲ್ಲ? ಎಂಬ ಪ್ರಶ್ನೆಯನ್ನು ಕೆಲವರು ಎತ್ತಬಹುದು. ಈ ಪ್ರಶ್ನೆಗೆ ಸಮಾಧಾನವಿಲ್ಲದೆ ಇಲ್ಲ. ಹೆಸರಿಗಾಗಿ ತವಕ ಪಡುವದು ಸಾಮಾನ್ಯವಾಗಿ ಸ್ತ್ರೀಯರಲ್ಲಿ ಕಂಡುಬರುವುದಿಲ್ಲ. ಹಿಂದೆನಿಂತು ನಿರಾಸಕ್ತಿಯಿಂದ ಪ್ರೇರಣೆಯನ್ನು ನೀಡುವವಳು ಅವಳು. ಮೇಲಾಗಿ ಮೊದಲೇ ಹೇಳಿದಂತೆ ಸ್ತ್ರೀಯರ ಪ್ರಪಂಚ ವ್ಯವಹಾರದ ಪ್ರಪಂಚವಲ್ಲ.[11]

ಆಧುನಿಕ ಸಂದರ್ಭದಲ್ಲಿ ಮಹಿಳೆಯರು ಮಂಡಿಸುವ ಈ ಸಾಹಿತ್ಯದ ಮಹಿಳೀಕರಣದ ವಿಚಾರವು ಕನ್ನಡ ಸಾಹಿತ್ಯದಲ್ಲಿ ಪ್ರಾಚೀನ ಕವಿಗಳಿಂದಲೇ ಬಳಕೆಗೊಂಡಿರುವುದು. ಕಾವ್ಯಾಂಗನೆ, ಕಾವ್ಯಕನ್ಯೆ, ವಾಗ್ದೇವಿ ಇತ್ಯಾದಿ ಪರಿಕಲ್ಪನೆಗಳನ್ನು ಕನ್ನಡದ ಹಳೆಯ ಸಾಹಿತ್ಯದಲ್ಲಿ ಎಲ್ಲೆಂದರಲ್ಲಿ ನಾವು ನೋಡಬಹುದು. ಸಾಹಿತ್ಯವನ್ನೇ ಸ್ತ್ರೀಗೆ ಹೋಲಿಸುವ, ಕಾವ್ಯ ಪ್ರಕಾರವನ್ನು ಸ್ತ್ರೀಗೆ ಹೋಲಿಸುವ, ಕಾವ್ಯಗುಣಗಳಲ್ಲಿ ಮೃದು, ಮಧುರ, ಲಲಿತ ಇತ್ಯಾದಿಗಳನ್ನು ಸ್ತ್ರೀ ಎನ್ನುವ ಮೂಲಕ ಕನ್ನಡ ಕಾವ್ಯ ಪರಂಪರೆ ಪ್ರಾಚೀನ ಕಾಲದಿಂದಲೂ ಸಾಹಿತ್ಯದ ಮಹಿಳೀಕರಣವನ್ನು ತನ್ನ ರಾಜಕಾರಣದ ಭಾಗವಾಗಿ ನಿರ್ವಹಿಸುತ್ತಲೇ ಬಂದಿದೆ. ಸಾಹಿತ್ಯದ ಮಹಿಳೀಕರಣದ ಹಿಂದಿನ ಪ್ರಧಾನಧಾರೆಯ ಆಶಯವು ಸ್ತ್ರೀಯನ್ನು ಸೌಂದರ್ಯದ, ಮೃದು ಮಧುತೆಯ ಪ್ರತೀಕವಾಗಿಸಿ ಆಸ್ವಾದಿಸುವುದು ಹಾಗೂ ಪುರುಷನ ಸಾಧನೆಯಾಗಿ, ಆಭರಣವಾಗಿ, ಸೃಜನಶೀಲತೆಯಾಗಿ ಪರಿಭಾವಿಸುವುದೇ ಆಗಿದ್ದು, ಇದು ಸ್ತ್ರೀಯರ ಸಂದರ್ಭದಲ್ಲಿ ಪುರುಷ ಪ್ರಧಾನತೆ ಹೊಂದಿದ್ದ ‘ಉಪಭೋಗಿತನ’ವನ್ನು ಊರ್ಜಿತಗೊಳಿಸುವುದೇ ಆಗಿದೆ. ಹಾಗಾಗಿ ಪ್ರಧಾನಧಾರೆಯ ಚೌಕಟ್ಟಿನೊಳಗೆ ಮಾಡುವ ಈ ರೀತಿಯ ಮಹಿಳೀಕರಣವು ಸ್ತ್ರೀವಾದಿ ರಾಜಕಾರಣಕ್ಕೆ ಅಪಾಯಕಾರಿಯಾದುದಾಗಿದೆ.

ಮೇಲುನೋಟಕ್ಕೆ ಅಂದಿನ ಲೇಖಕಿಯರು ಕೈಗೊಂಡ ಈ ಮಹಿಲಾ ಸಾಹಿತ್ಯ ಮೀಮಾಂಸೆ ಕ್ರಾಂತಿಕಾರಿಯಾಗಿ ಕಾಣುತ್ತದೆಯಾದರೂ ಅಂತರ್ಯದಲ್ಲಿ ಅದು ಪ್ರಧಾನಧಾರೆಯ ಮೀಮಾಂಸೆಯಿಂದಲೇ ಹೊರಹೊಮ್ಮಿದ್ದಾಗಿದೆ. ಈ ಮೇಲಿನ ಉದಾಹರಣೆಯನ್ನು ಗಮನಿಸಿದರೂ ಸ್ತ್ರೀಯನ್ನು ಸಾಹಿತ್ಯದ ಅಧಿದೇವತೆಯಾಗಿ ಪ್ರತಿಷ್ಠಾಪಿಸುವುದು ರಮ್ಯ ಎನ್ನಿಸುವುದಾದರೂ ಒಟ್ಟು ಸಾಮಾಜಿಕ ರಚನೆಯ ಸಂದರ್ಭದಲ್ಲೇಕೆ ಸಾಹಿತ್ಯ ಸಂದರ್ಭದಲ್ಲಿಯೂ ಕೂಡ ಇದು ಹೆಚ್ಚು ಉಪಯುಕ್ತವಾದುದಲ್ಲ. ‘ಸ್ತ್ರೀಯರ ಪ್ರಪಂಚ ವ್ಯವಹಾರದ ಪ್ರಪಂಚವಲ್ಲ’ ಎನ್ನುವ ಇಲ್ಲಿನ ಮಾತುಗಳು ಸಾಹಿತ್ಯದ ಅದರಲ್ಲೂ ಕಾವ್ಯದ ಅಧಿದೇವತೆಯಾಗುವ ಮೂಲಕ ಸ್ತ್ರೀ ಕಳೆದುಕೊಂಡ ಇನ್ನಿತರ ಹಲವು ಅಧಿಕಾರ ವಲಯಗಳನ್ನು ಮನಗಾಣಿಸುತ್ತದೆ. ಸಾಹಿತ್ಯದ ಒಳಗೂ ಭಾವ ಜಗತ್ತಿಗೆ ಹೊರತಾದ ಬೌದ್ಧಿಕ, ವಿಚಾರವಾದಿ ರೂಪಗಳಿಗೆ ಆಕೆ ಎರವಾಗಬೇಕಾದುದನ್ನು ಇಲ್ಲಿ ಗಮನಿಸಬಹುದು.

ಹಾಗೇ ನೋಡಿದರೆ ಬುದ್ಧಿ, ಭಾವಗಳೆಂಬ ವಿಭಜನಾ ಕ್ರಮಗಳೇ ಪ್ರಧಾನಧಾರೆಯದ್ದಾಗಿದ್ದು, ಅದು ಅದರ ಲಿಂಗರಾಜಕಾರಣದ ಉದ್ದೇಶವನ್ನು ಈಡೇರಿಸಿಕೊಳ್ಳುವ ಪ್ರಮುಖ ಸಾಧನವಾಗಿದೆ. ಹೆಣ್ಣನ್ನು ಭಾವಜಗತ್ತಿಗೆ ಸಂವಾದಿಯಾಗಿಸುವುದು, ಗಂಡನ್ನು ಬುದ್ಧಿ ಪ್ರಧಾನವೆಂದು ಪರಿಭಾವಿಸುವುದೇ ಲಿಂಗಪೂರ್ವಾಗ್ರಹದ ಪ್ರಮುಖ ಭೂಮಿಕೆಯಾಗಿದೆ. ಈ ಅರ್ಥದಲ್ಲಿ ಅಂದಿನ ಲೇಖಕಿಯರು ಸಾಹಿತ್ಯ ಮೀಮಾಂಸೆಯ ಸಂದರ್ಭದಲ್ಲಿ ತೋರಿಸಿದ ವೈಚಾರಿಕ ಎಚ್ಚರಿಕೆ ಇನ್ನೊಂದು ಅರ್ಥದಲ್ಲಿ ಸಾಂಪ್ರದಾಯಿಕತೆಯ ಒಳಗೇ ನೇಯ್ದುದಾಗಿತ್ತು. ಈ ಮಹಿಳಾ ಸಾಹಿತ್ಯ ಮೀಮಾಂಸೆ ನೂರಕ್ಕೆ ನೂರು ಪುರುಷ ಪ್ರಧಾನತೆಯ ನೆಲೆಯದೇ ಆಗಿತ್ತು. ಆ ಕಾರಣಕ್ಕಾಗಿಯೇ ಈ ಮೀಮಾಂಸೆಯ ಬಗ್ಗೆ ಪ್ರಧಾನಧಾರೆಗೆ ಯಾವ ತಕರಾರು ಇರಲಿಲ್ಲ. ಅಂತೆಯೇ ಪ್ರಧಾನಧಾರೆಯ ಚೌಕಟ್ಟನೊಳಗೇ ಸ್ತ್ರೀಯರು ಝಳಪಿಸ ತೊಡಗಿದ ಸಾಹಿತ್ಯಿಕ ಖಡ್ಗದ ಬಗ್ಗೆ ಅಲ್ಲಿ ಆತಂಕವೇನು ಕಂಡುಬರುವುದಿಲ್ಲ ಸಹ.

ಇಷ್ಟಾಗಿಯೂ ಇದನ್ನು ಕನ್ನಡ ಸಾಹಿತ್ಯ ಚರ್ಚೆಗೆ ಸೀಮಿತವಾಗಿಸಿಕೊಂಡು ನೋಡುವುದಾದರೆ ನಿಜಕ್ಕೂ ಇದು ಫೀನಿಕ್ಸನ ಕತೆಯಂತೆ. ಸಾಹಿತ್ಯಕ್ಕೆ ಸ್ತ್ರೀಯನ್ನೂ ಸ್ಫೂರ್ತಿಯಾಗಿ, ಅಧಿದೇವತೆಯಾಗಿ ಕಲ್ಪಿಸಿಕೊಂಡು ಸುಖಿಸಿದ ಪಿತೃಪ್ರಧಾನ ಸಮಾಜ ಸಾಹಿತ್ಯ ಅಭಿವ್ಯಕ್ತಿಯ ಸಂದರ್ಭದಲ್ಲಿ ಸ್ತ್ರೀಯನ್ನು ನಿರಾಕರಿಸಿದೆ, ನಿಯಂತ್ರಿಸಿದೆ. ಈ ಹತ್ತಿಕ್ಕಲ್ಪಟ್ಟ ಸಮಾಜದಿಂದ ಆಕೆ ತನ್ನ ಅಸ್ತಿತ್ವವನ್ನು, ಅಸ್ಮಿತೆಯನ್ನು ಗಳಿಸಿಕೊಳ್ಳುವುದು ಸಾಮಾನ್ಯ ಸಂಗತಿಯಲ್ಲ. ಹಾಗಾಗಿ ಈ ಕಾಲಘಟ್ಟದ ಲೇಖಕಿಯರ ಹೆಗ್ಗಳಿಕೆ ಇರುವುದು ಸಾಹಿತ್ಯದ ಅಧಿದೇವತೆ ಎಂಬ ವೈಭವೀಕರಣವನ್ನು ‘ಲೇಖಕಿ’ಯ ಮೂಲಕ ವಾಸ್ತವಕ್ಕಿಳಿಸಿದ ಸಂಗತಿಯಲ್ಲಿ ಕಾವ್ಯದ ಪ್ರಾರ್ಥನೆಯ ವಸ್ತುವಾಗಿದ್ದವಳು ಕಾವ್ಯ ರಚಕಳಾಗಿ ಅಸ್ತಿತ್ವ ಹೊಂದಿದ್ದರಲ್ಲಿ ಈ ಹಂತದಲ್ಲಿ ಮಹಿಳೆಯನ್ನು ಲೇಖಕಿಯಾಗಿ ಉರ್ಜಿತಗೊಳಿಸುವ ಅಂದಿನ ಲೇಖಕಿಯರು ಮಹಿಳಾ ಸಾಹಿತ್ಯದ ಅಸ್ತಿತ್ವ ಹಾಗೂ ಅಸ್ಮಿತೆಯ ಮುಖ್ಯ ಪರಿಕರವಾಗಿ ಮಹಿಳಾ ಅನುಭವವನ್ನು ಬಳಸಿಕೊಳ್ಳುತ್ತಾರೆ. ಮಹಿಳಾ ‘ಅನುಭವ’ವು ಮಹಿಳಾ ಸಾಹಿತ್ಯದ ‘ಅನನ್ಯತೆ’ಯನ್ನು ಸ್ಥಾಪಿಸುತ್ತದೆ ಎಂಬ ವಿಶ್ಲೇಷಣೆಯೊಂದಿಗೆ ಮಹಿಳಾ ಸಾಹಿತ್ಯದ ಅಸ್ತಿತ್ವವನ್ನು , ಅಸ್ಮಿತೆಯನ್ನು ಸಿದ್ಧಿಸಿಕೊಳ್ಳುತ್ತಾರೆ.

ಮಹಿಳಾ ಸಾಹಿತ್ಯ ನಿರ್ವಚನದ ಸಂದರ್ಭದಲ್ಲಿ ಅನುಭವಕ್ಕೆ ನೀಡಲಾದ ಈ ಪ್ರಾಧಾನ್ಯತೆಯು ಅಂತಿಮವಾಗಿ ಮಹಿಳೆಯರ ಬರವಣಿಗೆ ಆತ್ಮಚರಿತ್ರಾತ್ಮಕವಾದುದು ಎಂಬ ಪ್ರತಿಕ್ರಿಯೆಯನ್ನು ಸ್ವೀಕರಿಸುವಂತಾಗಿಸಿತು. ಹಾಗೂ ಮಹಿಳೆಯರ ಸಾಹಿತ್ಯ ಮಹಿಳಾ ವಿಷಯ ಕೇಂದ್ರಿತವಾದ ಬರವಣಿಗೆಯಾಗಿರಬೇಕಾಗಿದೆ ಎಂಬ ವಿಚಾರ ಬಲಗೊಂಡಿತು. ಆ ಮೂಲಕ ಸ್ವಾತಂತ್ರಪೂರ್ವದಲ್ಲಿಯೇ ಮಹಿಳಾ ಸಾಹಿತ್ಯದ ನಿರ್ವಚನ ಒಂದು ನಿರ್ದಿಷ್ಟತೆಯನ್ನು ಪಡೆಯಿತು. ಅಂತೆಯೇ ಬೇಂದ್ರೆಯವರು ಅಂದಿನ ಮಹಿಳಾ ಸಾಹಿತ್ಯ ಕುರಿತು ಹೀಗೆ ಪ್ರತಿಕ್ರಿಯಿಸಿದರು.

ಲೇಖಕಿಯರು ಕಾವ್ಯ, ನಾಟಕ, ಪ್ರಬಂಧ ಮೊದಲಾದ ಎಲ್ಲ ಸಾಹಿತ್ಯ ರೂಪಗಳಲ್ಲಿಯು ಮುಂದೆ ಬರುತ್ತಿದ್ದಾರೆ. ಆತ್ಮಚರಿತ್ರ್ಯಾಪರ ಬರವಣಿಗೆ ಅಲ್ಲಲ್ಲಿ ತಲೆಯೆತ್ತುತ್ತಲಿದೆ. ಆದರೆ ಬೆರಗುಗೊಳಿಸುವ ಬರವಣಿಗೆ ಇನ್ನೂ ಬರಬೇಕಿದೆ.[12]

ಸ್ವಾತಂತ್ರ್ಯಪೂರ್ವಕ್ಕೆ ಹೋಲಿಸಿದರೆ ೧೯೮೦ರ ಸ್ತ್ರೀವಾದಿ ಚಿಂತನೆಯ ಸಂದರ್ಭವು ಮಹಿಳಾ ಸಾಹಿತ್ಯ ಎಂಬ ಪರಿಕಲ್ಪನೆಯನ್ನು ಕುರಿತು ಪ್ರತ್ಯೇಕವಾದ ಸೈದ್ಧಾಂತಿಕ ಚರ್ಚೆಯನ್ನು ನಡೆಸಿರುವುದು ಕಂಡುಬರುವುದಿಲ್ಲ. ಬದಲಿಗೆ ಈ ಹಿಂದಿನ ಮಹಿಳೆಯರಿಂದ ಗುರುತುಗೊಂಡ ಮಹಿಳಾ ಸಾಹಿತ್ಯ ಎಂಬ ನಿರ್ವಚನವನ್ನು ಹೆಚ್ಚು ಕಡಿಮೆ ಹಾಗೆ ಇಟ್ಟುಕೊಂಡು ಅದರ ಪರಂಪರೆಯ ಶೋಧ ಹಾಗೂ ಅನನ್ಯತೆಯನ್ನು ಪ್ರತಿಪಾದಿಸುವ ಶ್ರಮಕ್ಕೆ ಕೈ ಹಾಕಿದ್ದಾಗಿದೆ.

ಈ ಹಿಂದಿನ ಲೇಖಕಿಯರು ‘ಅನುಭವ’ ಎಂದು ಕರೆದುದ್ದನ್ನು ಸಂವೇದೆನ ಎಂಬುದಾಗಿ ಪುನರ್ ವ್ಯಾಖ್ಯಾನಿಸುವ ಈ ಕಾಲವು ಮಹಿಳಾ ಸಾಹಿತ್ಯವು ಆತ್ಮಕಥಾನಕವಾದುದು ಎಂಬುದನ್ನು ಬದುಕು-ಬರಹದ ವೈಧಾನಿಕತೆಯ ಮೂಲಕ ‘ಮಹಿಲಾ ಸಂವೇದನೆ’ ಎಂಬ ಚರ್ಚೆಯಾಗಿ ಕೈಗೆತ್ತಿಕೊಳ್ಳುತ್ತದೆ. ಅದರ ಭಾಗವಾಗಿ ಪುರುಷ ಸಾಹಿತ್ಯದಲ್ಲ ಕಂಡುಬರುವ ಜೀವಂತಿಕೆಯ ಸ್ತ್ರೀ ಮಾದರಿಗಳು, ಸ್ತ್ರೀಪರ ಕಾಳಜಿಗಳು ಹಾಗೂ ಮಹಿಳೆಯರ ಬರಹದಲ್ಲಿ ಪುನರುತ್ಪಾದನೆಗೊಳ್ಳುವ ಸಿದ್ಧ ಸ್ತ್ರೀ ಮಾದರಿಗಳು, ಪುರುಷ ಕೇಂದ್ರಿತ ಆಲೋಚನಾ ಕ್ರಮ ಇವುಗಳನ್ನು ಸ್ತ್ರೀವಾದಿ ವಿಮರ್ಶೆ ವ್ಯಾಖ್ಯಾನಿಸುವ ಕ್ರಮ ಯಾವುದಾಗಿರಬೇಕು ಎಂಬ ಪ್ರಶ್ನೆಯೊಂದಿಗೆ ಮುನ್ನಡೆಯುತ್ತದೆ.

ಈ ಸಂದರ್ಭದಲ್ಲಿ ಸ್ತ್ರೀವಾದಿ ವಿಮರ್ಶೆ ಅಭಿವ್ಯಕ್ತಿಯೇ ನಿರಾಕರಣೆಗೊಂಡ ಸಾಮಾಜಿಕ ಸಂದರ್ಭದಲ್ಲಿ ಪ್ರಾಥಮಿಕ ಹಂತದಲ್ಲಿ ಸ್ತ್ರೀಯರ ಅಭಿವ್ಯಕ್ತಿಯನ್ನು ಅದರ ಭೌತಿಕ ಅಸ್ತಿತ್ವಕ್ಕೆ ಕಾರಣಕ್ಕೇ ಮಾನ್ಯ ಮಾಡಬೇಕಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಮಹಿಳೆಯರು ಬರೆದ ಯಾವುದೇ ಬರವಣಿಗೆಯನ್ನು ಸಂವೇದನೆಯನ್ನು ಪ್ರಶ್ನೆ ಎತ್ತದ ಮಹಿಳಾ ಸಾಹಿತ್ಯವಾಗಿ ಸ್ವೀಕರಿಸುತ್ತದೆ. ಹಾಗೂ ಅದರೊಳಗಿಂದ ಕಟ್ಟಿಕೊಳ್ಳಬಹುದಾದ ಸ್ತ್ರೀ ಸಂವೇದನೆಗಾಗಿ ಹುಡುಕಾಡುತ್ತದೆ. ಕೊನೆಗೆ ಈ ಮಹಿಳೆಯರ ಬರವಣಿಗೆಯಲ್ಲಿ ಸ್ತ್ರೀ ಸಂವೇದನೆಯ ಗೈರು ಹಾಜರಿ ಏಕೆ? ಎಂಬ ಪ್ರಶ್ನೆಯೊಂದಿಗೆ ಅದನ್ನು ಅಧ್ಯಯನ ಯೋಗ್ಯ ಪಠ್ಯವಾಗಿಸುತ್ತದೆ. ಹಾಗೆ ಪುರುಷ ಸಾಹಿತ್ಯದಲ್ಲಿನ ಸ್ತ್ರೀ ಮಾದರಿ ಹಾಗೂ ಸ್ತ್ರೀಪರ ಕಾಳಜಿಗಳ ಅಂತಃ ಸತ್ವವನ್ನು ಓರೆ ಹಚ್ಚುವ ಮೂಲಕ ಅವುಗಳು ಲಿಂಗರಾಜಕಾರಣದೊಂದಿಗೆ ಹೊಂದಿರುವ ಸಂಬಂಧ ಸ್ವರೂಪವನ್ನು ಕುರಿತು ಚಿಂತಿಸುತ್ತವೆ.[13]

ಮಹಿಳಾ ಸಾಹಿತ್ಯ ಎಂಬ ಪರಿಕಲ್ಪನೆ ಸ್ತ್ರೀವಾದಿ ಸಾಹಿತ್ಯ ವಿಮರ್ಶೆಯ ಪರಿಕರಗಳಲ್ಲಿ ಒಂದೇ ಹೊರತು ಅದೇ ಪ್ರಧಾನವಾದುದದಲ್ಲ. ಹಾಗೆ ಮಹಿಳೆಯರ ಬರವಣಿಗೆ ಆತ್ಮ ಕಥಾನಕವಾದುದು ಎಂಬುದಾದರೂ ಅಷ್ಟೆ. ಅದೊಂದು ಸ್ತ್ರೀವಾದಿ ರಾಜಕಾರಣವನ್ನು ಈಡೇರಿಸಿ ಕೊಡುವ, ಪ್ರಧಾನಧಾರೆಯ ಸಾಹಿತ್ಯಿಕ ರಾಜಕಾರಣವನ್ನು ಒಡೆಯುವ ವಿಶಿಷ್ಟ ವಿಮರ್ಶಾ ಪರಿಕರವೇ ಹೊರತು ಅದಕ್ಕೆ ಮಹಿಳಾ ಸಾಹಿತ್ಯವೆಂಬುದು ಲೇಖಕಿಯ ವೈಯಕ್ತಿಕ ಬದುಕಿನ ರಹಸ್ಯಗಳ ಸ್ಫೋಟವಲ್ಲ; ರೋಚಕ ವೃತ್ತಾಂತವೂ ಅಲ್ಲ.[14]

ಇಷ್ಟಾಗಿಯೂ ಕನ್ನಡದ ಸಂದರ್ಭದಲ್ಲಿ ಹಲವು ಬಾರಿ ಬದುಕು-ಬರಹದ ವೈಧಾನಿಕತೆಯಲ್ಲಿ ವ್ಯಾಪ್ತಿ ಮೀರಿದ ಗ್ರಹಿಕೆಗಳೂ ಕಾಣಿಸಿಕೊಂಡಿವೆ. ಉದಾಹರಣೆಗೆ, ತಿರುಮಲಾಂಬ ಅವರಿಗೆ ವಿಧವಾ ವಿವಾಹದ ಬಗ್ಗೆ ತನ್ನದೇ ಆದ ತಾತ್ವಿಕ ಭಿನ್ನಾಭಿಪ್ರಾಯವಿರಬಹುದು ಎಂಬುದಕ್ಕೆ ಬದಲಾಗಿ ಸ್ವತಃ ವಿಧವೆಯಾದ ತಿರುಮಲಾಂಬ ಅವರಿಗೆ ವಿಧವಾ ವಿವಾಹದ ಪರವಾಗಿ ಮಾತನಾಡುವುದು ಮುಜುಗರದ ಸಂಗತಿಯಾಗಿತ್ತು ಎಂಬಂತೆ ವೈಯಕ್ತಿಕತೆಯೊಂದಿಗೆ ತಳುಕು ಹಾಕಿ ಈ ಕೆಳಗಿನಂತೆ ವಿಶ್ಲೇಷಿಸುವುದು.

ವಿಧವೆಯರ ದುಸ್ಥಿತಿಗಳನ್ನು ಮುಖ್ಯ ವಸ್ತುವಾಗಿ ಪರಿಗಣಿಸುವ ಕಾದಂಬರಿಗಳನ್ನು ಇವರು ರಚಿಸಿದ್ದಾರೆ. ಆದರೆ ಇವರು ಕಾದಂಬರಿಗಳಲ್ಲಿ ವಿಧವಾ ವಿವಾಹವನ್ನು ಸೂಚಿಸುವಷ್ಟು ಧೈರ್ಯವಹಿಸದಿರುವುದಕ್ಕೆ ಮುಖ್ಯವಾಗಿ ಅವರ ವ್ಯಕ್ತಿತ್ವದ ಸಂದರ್ಭದ ಮಿತಿಯೇ ಕಾರಣವಿರಬಹುದು.[15]

ಹಾಗೆ ನೋಡಿದರೆ ಮಹಿಳಾ ಸಾಹಿತ್ಯವನ್ನು ಸ್ವವೃತ್ತಾಂತವಾಗಿ ನೋಡುವ ಪರಿಪಾಠ ಬಹಳ ಹಿಂದಿನದು. ಲೇಖಕಿಯೊಬ್ಬಳ ಬದುಕು ಬರಹಗಳನ್ನು ಅಭಿನ್ನಗೊಳಿಸುತ್ತ ಸ್ವಚರಿತ್ರೆವೆಂಬ ಮಾದರಿಯಲ್ಲಿ ವಿಶ್ಲೇಷಿಸುವ ಕ್ರಮವನ್ನೂ ನಾವು ಪ್ರಧಾನಧಾರೆಯಲ್ಲಿಯೇ ಅಕ್ಕ ಮಹಾದೇವಿಯ ಸಂದರ್ಭದಲ್ಲಿ ಕಾಣಬಹುದಾಗಿದೆ.

ಸಾಹಿತ್ಯ ಚರಿತ್ರೆಯ ಸಂದರ್ಭದಲ್ಲಿ ಬದುಕು-ಬರಹಗಳು ಅಭಿನ್ನಗೊಳ್ಳುವ ಮಾದರಿಗೆ ಅತ್ಯುತ್ತಮ ಉದಾಹರಣೆ ಅಕ್ಕಮಹಾದೇವಿ. ಅಕ್ಕನ ವಚನಗಳನ್ನು ಹರಿಹರನಿಂದ ಹಿಡಿದು ಆಧುನಿಕ ಸಂದರ್ಭದ ಸ್ತ್ರೀವಾದಿಗಳವರೆಗೆ ಎಲ್ಲರೂ ಆಕೆಯ ವೈಯಕ್ತಿಕ ಬದುಕಿನ ವಿವರಗಳೊಂದಿಗೆ ತಳುಕು ಹಾಕಿಯೇ ಗ್ರಹಿಸಿದ್ದಾರೆ. ಅಕ್ಕಮಹಾದೇವಿಯನ್ನು ಒಬ್ಬ ಶ್ರೇಷ್ಠ ಲೇಖಕಿಯೆಂದು ಸ್ವೀಕರಿಸುವುದಕ್ಕೆ ಪ್ರಧಾನಧಾರೆಯ ರಾಜಕಾರಣ ಎಂದೂ ಹಿಂತೆಗೆದಿಲ್ಲ. ಅಂತೆಯೇ ಆಕೆಯ ಬದುಕು-ಬರಹಗಳನ್ನು ತನ್ನ ಪರಂಪರೆಯಾಗಿ ಗುರುತಿಸಿಕೊಳ್ಳುವುದಕ್ಕೆ ಸ್ತ್ರೀವಾದ ಯಾವತ್ತೂ ಹೆಮ್ಮೆಪಟ್ಟಿದ್ದಾಗಿದೆ. ಕನ್ನಡದಲ್ಲಿ ಈಕೆ ಒಂದು ರೀತಿಯಲ್ಲಿ ಪ್ರಧಾನಧಾರೆ ಹಾಗೂ ಸ್ತ್ರೀವಾದಿ ವಿಮರ್ಶೆಗಳು ಸಂಧಿಸುವ ಕೂಟ. ಕನ್ನಡದ ಸ್ತ್ರೀವಾದಿ ವಿಮರ್ಶೆ ಪ್ರಧಾನಧಾರೆಯೊಂದಿಗೆ ಹತ್ತು ಹಲವು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಅದು ತನ್ನನ್ನು ಸಂಪೂರ್ಣವಾಗಿ ಪ್ರತ್ಯೇಕಗೊಳಿಸಿಕೊಂಡಿದ್ದೇನಲ್ಲ. ಅದರ ತಾತ್ವಿಕತೆ ಹಾಗೂ ವೈಧಾನಿಕತೆಗಳು ತೀರ ವ್ಯತಿರಿಕ್ತವಾದುದೂ ಅಲ್ಲ ಎಂಬ ವಿಚಾರವನ್ನು ಚರ್ಚಿಸುವಲ್ಲಿ ನಮಗೆ ಅಕ್ಕಮಹಾದೇವಿ ಕುರಿತ ಸಾಹಿತ್ಯ ಚರಿತ್ರೆ ಹಾಗೂ ಸ್ತ್ರೀವಾದಿ ವಿಮರ್ಶೆಗಳು ಅತ್ಯಂತ ಉಪಯುಕ್ತವಾಗುತ್ತವೆ.

[1] ಬೈರಾಡಿ ವೆಂಕಟಕೃಷ್ಣರಾಯರು, ಶ್ರೀಮತಿ ಆರ್. ಕಲ್ಯಾಣಮ್ಮ, ದೇಶಬಂಧು ಏಪ್ರಿಲ್ ೩ ೧೯೪೯, ಹೆರಂಜೆ ಕೃಷ್ಣಭಟ್ಟ (ಸಂ), ರಾಷ್ಟ್ರಕವಿ ಗೋವಿಂದ ಪಯ ಸಂಶೋಧನಾ ಕೇಂದ್ರ ಉಡುಪಿ ೧೯೯೮, ಪು. ೧೬೦

[2] ಶ್ರೀಮತಿ ಪದ್ಮವತಿದೇವಿ ಅಂಗಡಿ ಮಹಿಳಾಗೋಷ್ಠಿ ಅಧ್ಯಕ್ಷ ಭಾಷಣ, ೭೪ನೇ ಸಾಹಿತ್ಯ ಸಮ್ಮೇಳನ, ರಬಕವಿ. ೧೯೪೪

[3] ವಿಜಯಾದಬ್ಬೆ (ಸಂ), ಹಿತೈಷಿಣಿಯ ಹೆಜ್ಜೆಗಳನ್ನು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ೧೯೯೨, ಪು. ೧೩೦

[4] ಅದೇ, ಪು. ೬

[5] Caral Watts, Releasing possibility into form; cultural choice and the woman writer, Isobel armstrong (ed) New Feminist discourse, Rautledge, London, 1992, Pp. 83-101

[6] Virginia Woolf, A Room of ones own, Harmonds worth, Penguin, 1967 (1728), Pp. 4-46

[7] Simone de Beauvoir, The second Sex, Harmondsworth, 1983, P/295

[8] Caral Watts, Releasing possibility into form ; cultural choice and the woman writer, Isobel armstrong (ed) New Feminist discourse, Rautledge, London, 1992, Pp. 83-101

[9] ನಾಗಭೂಷಣಸ್ವಾಮಿ ಓ. ಎಲ್., ವಿಮರ್ಶೆಯ ಪರಿಭಾಷೆ, ಅಂಕಿತ ಪ್ರಕಾಶನ ಬೆಂಗಳೂರು, ೧೯೯೮, ಪು. ೮೧

[10] ಉಷಾ ಎಂ., ಕಲೆ ನಮಗಿರಲಿ, ಶಾಸ್ತ್ರ ಅವರಿಗಿರಲಿ, ಸುರುಚಿ, ಸಿ. ವಿ. ಜಿ. ಪಬ್ಲಿಕೇಷನ್, ಬೆಂಗಳೂರು ೨೦೦೪, ಪು. ೪೯-೫೯

[11] ಶ್ರೀಮತಿ ಪದ್ಮಾವತಿದೇವಿ ಅಂಗಡಿ, ಮಹಿಳಾ ಗೋಷ್ಠಿ ಅಧ್ಯಕ್ಷಭಾಷಣ, ೨೮ನೇ ಸಾಹಿತ್ಯ ಸಮ್ಮೇಳನ, ರಬಕವಿ, ೧೯೪೪

[12] ಬೇಂದ್ರೆ ದ. ರಾ., ಇಂದಿನ ಕನ್ನಡದ ವಾಙ್ಮಯದ ಹಾದಿ, ವಾಮನಬೇಂದ್ರೆ (ಸಂ), ಸಾಹಿತ್ಯದ ವಿರಾಟ ಸ್ವರೂಪ, ಸಮಾಜ ಪುಸ್ತಕಾಲಯ, ಧಾರವಾಡ ೧೯೭೪, ಪು. ೩೪೦

[13] ಉಲ್ಲೇಖಿತ : Laura Marcus, Femimist aesthetics and the new realism, Isombel Armstrong (ed), New Femimist Discourse, Routledge London, 1992, Pp. 11

[14] ಭಕ್ತಿ ಸಾಹಿತ್ಯ ಪರಂಪರೆಯ ಹಲವು ಕವಯತ್ರಿಯರು ದಾಂಪತ್ಯ ವಿಘಟನೆಯ ಹಿನ್ನೆಲೆಯವರು ಹಾಗೂ ಹೊಸಗನ್ನಡದ ಆರಂಭಿಕ ಲೇಖಕಿಯರಲ್ಲಿ ಹಲವರು ವೈಧವ್ಯಕ್ಕೆ ಒಳಗಾದವರು ಎಂಬ ವಿಚಾರ ಈ ದಿಕ್ಕಿನಲ್ಲಿ ಅಲೋಚಿಸುವಂತೆ ಒತ್ತಾಯಿಸುತ್ತದೆ.

[15] ಗಾಯತ್ರಿ ಎನ್., ನವೋದಯ ಸಾಹಿತ್ಯದಲ್ಲಿ ಸಂಸ್ಕೃತಿಯ ವಿಕಾಸ ಮತ್ತು ಸ್ತ್ರೀ, ಬರಗೂರು ರಾಮಚಂದ್ರಪ್ಪ(ಸಂ), ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಯ ಸ್ವರೂಪ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ೧೯೯೩- ಪು. ೧೩೦-೧೩೧