ನನಗೆ ಸುಂದರಮ್ಮನ ಪರಿಚಯವಾಗಿದ್ದ ತುರಂಗದಲ್ಲಿಯೆ; ಮದ್ರಾಸ್, ಪ್ರಾಂತ್ಯದೊಳಗಿನ ತುರಂಗವಾದುದರಿಂದ, ಅಲ್ಲಿಯ ಬಹುತರ ಎಲ್ಲ ಕೈದಿಗಳು ತಮಿಳರು ಇಲ್ಲಿವೆ ತೆಲುಗರು. ಕರ್ನಾಟಕದ ಹೆಣ್ಣುಗಳೆಂದರೆ ನಾನೊಬ್ಬಳೇ. ಬೇರೆ ತುರಂಗದಿಂದ ನನ್ನನ್ನು ಅಲ್ಲಿಗೆ ಕರೆದೊಯ್ದು ದಿನ ದೀಪಾವಳಿಯ ಹಬ್ಬವಾಗಿದ್ದಿತು. ದಕ್ಷಿಣದವರಲ್ಲಿ ಉತ್ತರ ಕರ್ನಾಟಕರಲ್ಲಿವಷ್ಟು ಈ ಹಬ್ಬಕ್ಕೆ ಮಹತ್ತ್ವವಿಲ್ಲದಿದ್ದರೂ ಸವಿಯೂಟ ದೀಪದ ಅಲಂಕಾರಗಳ ರೂಢಿಯೂ ಇವರಲ್ಲೂ ಇದೆ. ದೀಪಾವಳಿಯ ದಿನ ಹಾಲು-ಬೆಲ್ಲ ಸೇರಿಸಿ, ಸಾಗೂ ಅಕ್ಕಿಯ ಪಾಯಸ ಮಾಡಬೇಕೆಂದು, ತುರಂಗದಲ್ಲಿಯೂ, ಹೆಣ್ಣು ಮಕ್ಕೆಳೆಲ್ಲ ಸೇರಿ ಮೊದಲದಿನವೇ ನಿಶ್ಚಯಿಸಿದ್ದರು. ಆದರೆ, ಆ ನಿರ್ಧಾರವು ಒಂದು ಆಕಸ್ಮಿಕ ಘಟನೆಯಿಂದ ಮುರಿದು ಬಿತ್ತು. ಅಲ್ಲದೆ ಸಂತೋಷದ ಪರಿಶ್ರಮದ ಬದಲು ದುಃಖದ ಮೌನದಲ್ಲಿ ನಮ್ಮ ಅಂದಿನ ಹಬ್ಬದ ದಿನವು ಕೊನೆಗಂಡಿತು.

ನನ್ನ ಪ್ರಯಾಣದ ಸಹಭಾಗಿಗಳಾಗಿದ್ದ ಪೋಲೀಸರು ನನ್ನನ್ನು ತುರಂಗದ ಮಹಾದ್ವಾರದ ತನಕ ಬಿಟ್ಟಮೇಲೆ, ಸದಸ್ಯಳನ್ನಾಗಿ ಸೇರಿಸುವ ಕ್ರಮಗಳೆಲ್ಲವೂ ಹೊರ ಕೊಠಡಿಯಲ್ಲಿ ಮುಗಿದು, ವಾರ್ಡರರನ್ನು ಕೂಡಿ ನನ್ನ ನಿಯಮಿತ ಸ್ಥಳಕ್ಕೆ ಹೋಗುವಾಗ, ರಾಜಕೀಯ ಕೈದಿಗಳ ವಿಭಾಗದಲ್ಲಿ ಸ್ವಲ್ಪ ಕೋಲಾಹಲವೆದ್ದಂತೆ ಕಂಡಿತು. ಕೈದಿಗಳು ತಂಡತಂಡವಾಗಿ ಒಳಗಿನ ಸಣ್ಣ ಗೇಟಿನ ಬಳಿಗೂ ದವಾಖಾನೆಯ ಬಳಿಗೂ ಓಡಾಡುತ್ತಲೂ, ಚಿಂತಾಕ್ರಾಂತ ಮುದ್ರೆಯಿಂದ ತಂತಮ್ಮೊಳಗೆ ಏನೇನೋ ಮಾತನಾಡುತ್ತಲೂ ಅಡ್ಡಾಡುತ್ತಿದ್ದರು. ಅಷ್ಟರಲ್ಲಿ ಹೊಸ ವ್ಯಕ್ತಿಯು ಅವರೊಳಗೆ ಬರುವುದನ್ನು ಕಂಡು, ಕೆಲವರು ನನ್ನ ಬಳಿಗೆ ಬಂದರು. ನನ್ನ ಔತ್ತರೇಯ ಪದ್ಧತಿಯು ಪೋಷಾಕನ್ನು ನೋಡಿ ಅವರಲ್ಲಿ ಸ್ವಲ್ಪ ಕುತೂಹಲ ಉತ್ಪನ್ನವಾಗಿರಬೇಕು. ಆಗ ಅವರು ತಮ್ಮ ಭಾಷೆಯಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದರು. ನನಗೆ ಒಂದೂ ಅರ್ಥವಾಗಲಿಲ್ಲ. ಕೊನೆಗೆ ಅಲ್ಪಸ್ವಲ್ಪ ಇಂಗ್ಲಿಷ್ ಬರುತ್ತಿದ್ದಳೊಬ್ಬಳು “ನಿಮಗೆ ಕನ್ನಡ ಬರುತ್ತದೆಯೇನು?” ಎಂದು ಕೇಳಿದಳು. ನಾನು ಬರುತ್ತದೆಯೆನ್ನಲು ಕೂಡಲೆ ಅವಳು ಹೋಗಿ ಸುಂದರಮ್ಮನನ್ನು ನಾನಿದ್ದಲ್ಲಿಗೆ ಕರಕೊಂಡು ಬಂದಳು. ತನ್ನ ಭಾಷೆ ತಿಳಿಯುವವಳೊಬ್ಬಳು, ದೊರೆತಳೆಂದು ಸುಂದರಮ್ಮನಿಗೆ ಬಹಳೇ ಆನಂದವಾದಂತೆ ತೋರಿತು. ನನ್ನ ಸಾಮಾನುಗಳನ್ನೆಲ್ಲ ತೋರಿಸಿದ ಕೋಣೆಯಲ್ಲಿ ಇಟ್ಟಾದ ಮೇಲೆ ನಾನು ಸುಂದರಮ್ಮನ ಕೂಡ “ಕೈದಿಗಳಲ್ಲಿ ಕೋಲಾಹಲಕ್ಕೆ ಕಾರಣವೇನು? ದೀಪಾವಳಿಯ ಸಲುವಾಗಿ ವಿಶೇಷವೇನಾದರೂ ಇದೆಯೇ?” ಎಂದು ಕೇಳಿದೆ.

ಛೆ, ಈವೊತ್ತು ಬೆಳಗಿನಲ್ಲಿ ಒಬ್ಬ ಖೂನಿಯ ಕೈದಿಯನ್ನು ಫಾಸಿಗೆ ಕೊಟ್ಟರು”

ಆ ರಾತ್ರಿ ನಾವು ದೀಪಾವಳಿಯ ದೀಪಗಳನ್ನು ಹಚ್ಚಲಿಲ್ಲ. ಏಕೆಂದರೆ ನಮ್ಮ ತುರಂದೊಳಗಿನ ಒಂದು ದೀಪವನ್ನು ಆ ದಿನ ನಂದಿಸಲಾಗಿತ್ತು!

* * *

ಒಬ್ಬೊಬ್ಬ ಕೈದಿಗೆ ಒಂದೊಂದು ಕೊಠಡಿಯೆಂದು ಆ ತುರಂಗದ ಕ್ರಮ. ಆದರೆ, ೧೯೩೨ರಲ್ಲಿ ಆ ಕ್ರಮವನ್ನು ಅನುಸರಿಸುವುದು ಅಶಕ್ಯವಾಗಿ‌ತ್ತು. ಒಂದರಲ್ಲಿ ಇಬ್ಬರು ಮಲಬೇಕಾಗಿಬಂದರೂ, ಸಂಗಾತಿಗಳನ್ನು ಆರಿಸುವ ಸ್ವಾತಂತ್ರ್ಯವನ್ನು ನಮಗೆ ಕೊಟ್ಟಿದ್ದರಿಂದ ಅಂದಿನ ಆ ಬಿಕ್ಕಟ್ಟಿನ ಪರಿಸ್ಥಿತಿಯು ನಮಗೆ ಸುಖದಾಯಕವೇ ಆಯಿತು. ತನ್ನ ಸಹವಾಸಿನಿಯಾಗಿದ್ದ ಒಬ್ಬ ತೆಲುಗು ಸ್ತ್ರೀಯನ್ನು ನನಗಾಗಿ ನಿಯಮಿಸಿದ್ದ ಕೊಠಡಿಗೆ ಹೋಗುವಂತೆ ವಿನಂತಿಮಾಡಿ, ಸುಂದರಮ್ಮನು ತನ್ನ ಕೊಠಡಿಗೆ ನಾನು ಬರುವಂತೆ ಆಗ್ರಹಪಡಿಸಿದಳು. ಇದರ ಕಾರಣವನ್ನು ಸ್ವಲ್ಪ ಹೊತ್ತಿನ ತರುವಾಯ ಅವಳೇ ನನಗೆ ಹೇಳಿದಳು. “ಮಾಲತೀಬಾಯಿ, ನೀವು ಇಲ್ಲಿಗೆ ಹೊಸದಾಗಿ ಬಂದವರು, ಪರಪ್ರಾಂತ್ಯ, ಅದು ಅಲ್ಲದೆ ತುರಂಗ” ಮತ್ತು ಮೆಲ್ಲಗಿನ ಸ್ವರದಲ್ಲಿ ಹೇಳಿದಳು, “ಈ ಹೊತ್ತು ಫಾಸಿಗೆ ಕೊಟ್ಟ ಸ್ತ್ರೀಯ ನೆನಪಾದೊಡನೆ ಹೊಟ್ಟೆಯಲ್ಲಿ ಧಡಕ್ಕೆನ್ನುತ್ತದೆ. ನಿಜವಾಗಿ, ಮಾಲತೀಬಾಯಿ, ಇಲ್ಲಿ ರಾತ್ರಿಯಲ್ಲಿ ಚಮತ್ಕಾರಿಕ ಸ್ವರಗಳು ಕೇಳಿಬರುತ್ತವೆ.” ಪ್ರಯಾಣದ ದಣಿವಿದ್ದುದರಿಂದ ನಾನು ಅವಳೊಡನೆ ಹೆಚ್ಚು ಮಾತನ್ನಾಡದೆ ಬೇಗನೆ ಮಲಗಿದೆನು.

* * *

ನಾನು ಅಲ್ಲಿಗೆ ಬಂದು ಬಹಳ ದಿವಸಗಳಾಗಿದ್ದುವು. ಈ ಅವಧಿಯಲ್ಲಿ ನನಗೂ ಸುಂದರಮ್ಮನಿಗೂ ಪರಿಚಯವು ಬೆಳೆಯಿತು. ಪ್ರಾಯದಲ್ಲಿ ಅವಳು ನನಗಿಂತ ಎಷ್ಟೋ ಹಿರಿಯಳು. ಅವಳಿಗೆ ತೆಲುಗು ಚೆನ್ನಾಗಿ ಬರುತ್ತಿತ್ತು. ಕನ್ನಡ ಮಾತನಾಡುವಾಗ ದಿವಸಗಳನ್ನು ಅವಳು ಆಂಧ್ರಪ್ರದೇಶದಲ್ಲಿ ಕಳೆದುದೇ ಇದಕ್ಕೆ ಕಾರಣ. ಅವಳ ಗಂಡ ಪೆನುಗೊಂಡೆಯಲ್ಲಿ ಡಾಕ್ಟರಾಗಿದ್ದರು. ಅವಳಿಗೆ ಓದುಬರಹ ಸ್ವಲ್ಪವೂ ಬರುತ್ತಿದ್ದಿಲ್ಲ. ತುರಂಗದಲ್ಲಿರುವಾಗ, ಹಿಂದೀ ಕಲಿಯುವ ವಿಚಾರ ಬಂದು, ಅವಳು ಪಾಟಿ ಹಿಡಿದು, ‘ಅ ಆ’ ಕಲಿಯಲಿಕ್ಕೆ ಪ್ರಾರಂಭಿಸಿದಳು. ಮಧ್ಯಮ ವಯಸ್ಕಳಾಗುವ ತನಕ, ವಿದ್ಯೆಯ ಯಾವುದೊಂದು ಸಂಸ್ಕಾರವೂ ಇಲ್ಲದ ಅವಳಿಗೆ ಶಿಕ್ಷಣವು ತೀರ ಕಷ್ಟಸಾಧ್ಯವಾಗುತ್ತಿತ್ತು. ಒಂದು ಪಾಠ ಕಲಿಯಲು ಸುಮಾರು ಒಂದು ತಿಂಗಳು ಹತ್ತುತ್ತಿತ್ತು. ಮೊದಲನೆಯ ಪಾಠ ಮುಗಿದು ಎರಡನೆಯ ಪಾಠ ಮುಗಿಸುವಷ್ಟರಲ್ಲಿ, ಮೊದಲು ಕಲಿತದ್ದು ಪೂರ್ಣ ಮರೆತು ಹೋಗುತ್ತಿತ್ತು.

ಮಾಲತೀ, ಈಗ ಕಲಿತರೆ ನನಗೆ ವಿದ್ಯೆ ಬಂದೀತೇ? ನನ್ನ ಜನ್ಮ ಹೀಗಯೇ ಹೋಗುವುದಲ್ಲಾ, ನನಗೆ ಇಷ್ಟುವಯಸ್ಸಾದದ್ದು ವ್ಯರ್ಥ, ಅಕ್ಷರದ ಗುರುತಿಲ್ಲದ ಮನುಷ್ಯ ಪಶುವಿನಂತೆಯೇ ಅಲ್ಲವೇ?” ಎಂದು ಅವಳು ನಿರಾಶೆಯಿಂದ ಉದ್ಗಾರ ತೆಗೆಯುವಾಗ ನಾವೆಲ್ಲರೂ ಅವಳಿಗೆ ಸಮಾಧಾನ ಹೇಳುತ್ತಿದ್ದೆವು. ಸುಂದರಮ್ಮ ಆಗಾಗ ಉದಾಸೀನಭಾವದಿಂದ ತಮ್ಮ ಕತೆ ಹೇಳುತ್ತಿದ್ದರು.

ನನಗೆ ಹನ್ನೆರಡನೆಯ ವರ್ಷದಲ್ಲಿ ಲಗ್ನವಾಯಿತು. ಪಾಟಿ, ಪೆನ್ಸಿಲ್ ಒಮ್ಮೆಯೂ ಕೈಯಲ್ಲಿ ಹಿಡಿದು ಗೊತ್ತಿಲ್ಲ. ವಿದ್ಯೆ ಕಲಿಯದುದರಿಂದ ಏನಾದರೂ ಕೊರತೆ ನನಗಿದೆಯೆಂಬುದು ಈ ತನಕ ನನಗೆ ಕಂಡು ಬರಲಿಲ್ಲ. ಕಲಿಯಬೇಕೆಂಬ ಇಚ್ಛೆಯೂ ನನಗುಂಟಾಗಲಿಲ್ಲ. ಆದರೆ, ಈಗ ತುರಂಗಕ್ಕೆ ಬಂದ ಮೇಲೆ, ಯಾವಾಗ ನನ್ನವರಿಗೆ ಎರಡು ಪ್ರಙ್ತಿಯ ಪತ್ರ ಬರೆಯಲಿಕ್ಕೂ ಆಗುವುದಿಲ್ಲವೆಂಬುದು ತಿಳಿಯಿತೋ……”

ತುರಂದಲ್ಲಿಯ ದಿನದಿನದ ಕಾರ್ಯಕ್ರಮವು ಭೇದವಿಲ್ಲದ ಒಂದೆಗತಿಯಿಂದ ಸಾಗುತ್ತಿತ್ತು. ಒಂದು ದಿನ ಸಂಜೆ, ಊಟ ಮುಗಿದ ನಂತರ ಕೋಣೆಗಳಿಗೆ ಬೀಗ ಹಾಕುವ “ವಾರ್ಡರ ಅಮ್ಮ”ನು ಬೀಗದ ಕೈಗೊಂಚಲು ಹಿಡಿದುಕೊಂಡು “ವಾಂಗೊ ವಾಂಗೊ (ತಮಿಳಿನಲ್ಲಿ ಬನ್ನಿ ಬನ್ನಿ ಎಂಬರ್ಥ)” ಎಂದು ಕರೆಯುವ ಮಧ್ಯದ ಸ್ವಲ್ಪ ಅವಕಾಶದಲ್ಲಿ ಅಂಗಳದಲ್ಲಿ ಅಡ್ಡಾಡುತ್ತಿರುವಾಗ, ಫಾಸಿಗೆ ಕೊಟ್ಟ ಸ್ತ್ರೀಯ ನೆನಪಾಗಿಯೇನೋ! ಸುಂದರಮ್ಮ ಕೇಳಿದಳು ; “ನಿಮಗೆ ಭೂತಪ್ರೇತಗಳ ಮೇಲೆ ನಂಬಿಕೆ ಇದೆಯೇನು?”

“ಸುಮ್ಮನೆ ಹುಚ್ಚು ವಿಚಾರ ತಲೆಗೆ ಹಚ್ಚಿಕೊಳ್ಳಬೇಡಿ!” ಎಂದು ಹೇಳಿ ನಾನು ಸಂಭಾಷಣೆಯನ್ನು ಬೇರೆ ವಿಷಯದ ಕಡೆಗೆ ತಿರುಗಿಸಲು ಯತ್ನಿಸಿದೆ.

“ನೀವು ನಂಬಲಿಕ್ಕಿಲ್ಲ, ಭೂತ ಪ್ರೇತಗಳನ್ನು; ಆದರೆ ನನಗೆ ಪೂರ್ಣ ನಂಬಿಕೆಯಿದೆ. ನನ್ನ ಯಜಮಾನರ ಮೈಮೇಲೆ ಭೂತ ಸಂಚಾರವಾಗಿತ್ತು” ಸುಂದರಮ್ಮ.

ಈಗೇನಾದರೂ ಅಂತೀರಿ; ಅವರೇನು – ಒಳ್ಳೇಯ ವಿದ್ಯಾವಂತರು ಇಂತಹ ಮಾತಿನ ಮೇಲೆ – ವಿಶ್ವಾಸ?”

ಏನು ಹೇಳುತ್ತೀ ಮಾಲತಿ? ನಿಮ್ಮಲೆಲ್ಲಾ ಇದೆಲ್ಲಾ ಸುಳ್ಳೆಂದು ಹೇಳುವರೇನು? ನಮ್ಮ ಯಜಮಾನರಿಗೆ ಇದರಲ್ಲಿ ಏನೂ ಇಲ್ಲದಿರುವುದರಿಂದಲೇ ಅತ್ತೆಯ ಶ್ರಾದ್ಧ ಸಹ ಮಾಡವುದಿಲ್ಲಮ್ಮ ಮಾಘಮಾಸದ ಅಮಾವಾಸ್ಯೆ ಭೂತಸಂಚಾರವಾಗಿ ಕೊನೆಗೆ ಮಂತ್ರವಾದಿಯನ್ನು ತಡಿದೆವು. ಅವನನ್ನು ನೋಡಿ ಅವರು ತಾಂಡವ ಮಾಡಿದರು ದೇಹದಲ್ಲಿ ಭೂತದ ಆವೇಶ ಇದ್ದವರು ಇದೇ ರೀತಿ ಮಾಡುತ್ತಾರೆ.” ಎಂದು ಮಂತ್ರವಾದಿ ಹೇಳಿದ.

“ಉಚ್ಛಾಟನೆ ಮಾಡಿದನೇನು ಅವನು ಅದನ್ನು?”

ತಿಳಿಯದಮ್ಮ ! ಅವರು ಬಹಳ ಪ್ರಯತ್ನ ಮಾಡಿದರು. ಆ ಮೇಲೆ ಅಣ್ಣ ಆ ಮಂತ್ರವಾದಿಯನ್ನು ಬಿಟ್ಟ ಒಬ್ಬ ದಕ್ಷಿಣದೇಶದ ಪ್ರಖ್ಯಾತ ವೈದ್ಯರಿಂದ ಔಷಧ ಪ್ರಾರಂಭಿಸಿದರು. ಬಳಿಕ ಒಡನೆ ಹೋದ ಬುದ್ಧಿಯನ್ನು ಅವರು ಸಂಪಾದಿಸಿದರು. ಆದರೆ ಈಗಲೂ ಏನೂ ಮಾಡುವುದಿಲ್ಲ. “

ಸುಂದರಮ್ಮಾ, ನೀವೇ ಹೇಳಿರಿ; ಇಲ್ಲಿ ಮಂತ್ರವಾದಿಯದೇನು ಬಂತು? ಔಷಧದಿಂದ ಅವರಿಗೆ ಗುಣವಾದದ್ದು?”

ಆದರೆ ಮಂತ್ರವಾದಿಯು ಒಂದೇ ಸಲಕ್ಕೆ ಗುಣಮಾಡಿ ಬಿಡುತ್ತಿದ್ದ” – ಅವಳ ದೀನಮುಖವನ್ನು ನೋಡಿ ನನಗೆ ಬಹಳ ದುಃಖವೆನಿಸಿತು.

ಒಂದು ದಿವಸ ನಾನು ಅವರ ಊರಿನ ಆಂಧ್ರಮಹಿಳೆಯೊಡನೆ ಮಾತನಾಡುವಾಗ, ಆಕೆ ಹೀಗೆ ಹೇಳಿದಳು : “ಸುಂದರಮ್ಮನ ಗಂಡನಿಗೆ ಹುಚ್ಚು ಹಿಡಿದಿತ್ತು; ಅದನ್ನೇ ಅವಳು ‘ಭೂತ ಸಂಚಾರವಾಗಿದಿತ್ತು’ ಎಂದು ಹೇಳುತ್ತಾಳೆ. ಆದರೆ ನಿಜವಾಗಿಯೂ ಅದು ಹುಚ್ಚೇ! ಹುಚ್ಚು ಹಿಡಿದಾಗ, ಅವರು ದವಾಖಾನೆಯ ಸಾಮಗ್ರಿಗಳನ್ನು ಎಲ್ಲೆಲ್ಲಿಯೋ ಬೀಸಾಡಿದ್ದರು. ಸುಂದರಮ್ಮ ಆ ಸಮಯದಲ್ಲಿ ಆತ್ಮಹತ್ಯೆಯ ಪ್ರಯತ್ನವನ್ನು ಸಹ ಮಾಡಿದ್ದಳು. ಗುಣವಾದ ಮೇಲೆ ಅವಳ ಗಂಡ ಹೇರಳ ಹಣ ಖರ್ಚುಮಾಡಿ ಪುನಃ ದವಾಖಾನೆಯಲ್ಲಿ ತೆಗೆದರು. ಆದರೆ, ಬೇಗನೆ ಸತ್ಯಾಗ್ರಹ ಚಳವಳಿಯ ಪ್ರಾರಂಭವಾಯಿತು. ಅದರಲ್ಲಿ ಅವರು ದುಮುಕಿದರು. ಈಗ ತುರಂಗದಲ್ಲಿದ್ದಾರೆ. ತಂದೆ, ತಾಯಿ ಇಬ್ಬರೂ ತುರಂಗದಲ್ಲಿದ್ದ ಸುಂದರಮ್ಮನ ಎಂಟುವರ್ಷದ ಹುಡುಗಿ ಅಜ್ಜಿಯ ಬಳಿ ಇದ್ದಾಳೆ.”

ಸುಂದರಮ್ಮನು ಆಗಾಗ ಬಹಳ ದುಃಖದಲ್ಲಿಯೂ ಯೋಚನೆಯಲ್ಲಿಯೂ ಮುಳುಗಿರಲು ಕಾರಣವೇನೆಂಬುದು ಈಗ ನನಗೆ ತಿಳಿದಂತಾಯಿತು.

* * *

ಸಂಜೆಯ ಹೊತ್ತಿನಲ್ಲಿ ವಾರ್ಡರ್ ಅಮ್ಮನು ಕೈದಿಗಳಿಗೆ ಬಂದ ಪತ್ರಗಳನ್ನು ಹಂಚಿದಳು. ಮನೆಯಿಂದ ಬರುವ ಪತ್ರಗಳಿಂದ ಆನಂದವೆಷ್ಟಾಗಬಹುದೆಂಬುದನ್ನು ತಿಳಿಯಬೇಕಾದರೆ ಕೆಲವು ದಿವಸವಾದರೂ ಜೈಲಿನ ಅನುಭವ ಪಡೆಯಬೇಕು. ಬಂದ ಪತ್ರಗಳನ್ನು ಓದಿ, ತಮಗೆ ಏನೂ ಸಂಬಂಧವಿಲ್ಲದ ಇತರ ಕೈದಿಗಳಿಗೆ ಅವನ್ನು ಓದಿ ಹೇಳಿ, ಅವುಗಳಲ್ಲಿ ಬರೆದ ವೃತ್ತಾಂತಗಳನ್ನು ವಿವರಿಸಿ ಹೇಳುವುದರಲ್ಲಿ ಎಲ್ಲರೂ ಮಗ್ನರಾಗಿದ್ದರು. ಹೊರಗಣ ಜಗತ್ತಿನ ಭೇದಭಾವಗಳು ಜೇಲಿನಲ್ಲಿ ಕಂಡುಬರುತ್ತಿದ್ದಿಲ್ಲ. ನಾವೆಲ್ಲರೂ ಒಂದೆ ಮನೆಯವರಂತೆ ಇರುತ್ತಿದ್ದೆವು. ಪತ್ರಗಳನ್ನು ಕೈದಿಗಳಿಗೆ ಹಂಚುವ ಸಮಯವು ಸುಂದರಮ್ಮನಿಗೆ ಅತ್ಯಂತ ದುಃಖದ ಸಮಯವಾಗಿ ಪರಿಣಮಿಸುತ್ತಿತ್ತು. ಜೇಲಿಗೆ ಬಂದ ಮೇಲೆ ಅವಳಿಗೆ ಒಂದೇ ಒಂದೂ ಪತ್ರ ಬಂದಿರಲಿಲ್ಲ. ಪತ್ರಗಳ ಕಟ್ಟನ್ನು ತಕ್ಕೊಂಡು ವಾರ್ಡರ್ ಅಮ್ಮನು ಬರುವುದನ್ನು ಕಂಡೊಡನೆ ಅವಳು ಕಣ್ಣೀರು ಸುರಿಸುತ್ತಾ ತನ್ನ ಕೊಠಡಿಯ ಕಡೆಗೆ ಹೋದಳು. ಆದರೆ, ಪತ್ರಗಳನ್ನು ಓದುವುದರಲ್ಲಿ ಮಗ್ನರಾದ ಪ್ರತಿಯೊಬ್ಬರೂ ಅವಳ ಕೊಠಡಿಯ ಕಡೆ ಹೋಗಿ, ಅವಳನ್ನು ಸಮಾಧಾನಪಡಿಸಲು, ಎರಡು ಮಾತು ಆಡದೆ ಇರಲಿಲ್ಲ. ಆದರೆ, ಸಹಾನುಭೂತಿಯ ಮಾತುಗಳು ಅವಳ ದುಃಖವನ್ನು ಇನ್ನೂ ಹೆಚ್ಚಿಸಿದ್ದುವು. ಅವಳು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು.

ಸುಂದರಮ್ಮನ ಗಂಡ ಅದೇ ಊರಿನ ಗಂಡಸರ ಜೇಲಿನಲ್ಲಿದ್ದರು. ಭೌಗೋಳಿಕ ದೃಷ್ಟಿಯಿಂದ ಎರಡು ಜೈಲುಗಳ ಅಂತರವು ಇನ್ನೂರು ಗಜಮಾತ್ರವಿದ್ದರೂ, ಕೈದಿಗಳ ದೃಷ್ಟಿಯಿಂದ ಅದು ದಾಟಲಸಾಧ್ಯವಾದ ಮಹಾಸಾಗರವೇ ಆಗಿತ್ತು. ‘ಬ’ ವರ್ಗದ ಕೈದಿಗಳಾದ ನಮಗೆ ತಿಂಗಳಿಗೊಂದರಂತೆ ಪತ್ರ ಬರೆಯುವುದಕ್ಕೆ ಅನುಮತಿ ಇತ್ತು. ಆದರೆ ಒಂದು ಜೇಲಿನಿಂದ ಇನ್ನೊಂದು ಜೇಲಿಗೆ ಪತ್ರಬರೆಯಬಾರದೆಂಬ ನಿಯಮವಿದ್ದುದರಿಂದ, ಇನ್ನೂರು ಗಜದ ಅಂತರದೊಳಗಿರುವ ಗಂಡ ಹೆಂಡಿರಿಗೆ ಒಬ್ಬರ ವರ್ತಮಾನ ಇನ್ನೊಬ್ಬರಿಗೆ ತಿಳಿಯುವುದು ಅವಶ್ಯವಿತ್ತು. ಯಾವ ರೀತಿಯಲ್ಲಿಯೂ ಸುದ್ಧಿಯನ್ನು ಕಳಿಸುವುದಕ್ಕೆ ಸಾಧ್ಯವೇ ಇದ್ದಿಲ್ಲ.

ಸುಂದರಮ್ಮನ ತಾಯಿಯು ಊರಲ್ಲಿದ್ದಳು. ಆದರೆ, ಅವಳಿಗೇನು ಗೊತ್ತು ಜೇಲಿನಲ್ಲಿ ತಿಂಡಿ ತೀರ್ಥಕ್ಕಿಂತ ತನ್ನವರಿಂದ ಎರಡು ಪಂಕ್ತಿಯ ಪತ್ರ ಬಂದರೆ, ಅದರ ಮೇಲೆಯೇ ತಿಂಗಳತನಕ ಜೀವಿಸಬಹುದು ಎಂದು! ಇಲ್ಲದಿದ್ದರೆ ಮಾತೃಹೃದಯ, ಬೇರೆಯವರ ಕಾಲುಹಿಡಿದಾದರೂ ಮಗಳಿಗೆ ಮೊಮ್ಮಗಳ ಕುಶಲವಾರ್ತೆಯನ್ನು ತಿಳುಹಲು ಪತ್ರಬರೆಯಿಸದೆ ಇರುತ್ತಿದ್ದಳೇ?

ಸುಂದರಮ್ಮನಿಗೆ ಮನೆಯ ನೆನಪಾಗದಂತೆ ನಾನು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೆವು. ಆದರೆ ಅದು ಎರಡೂ ಸಫಲವಾಗುತ್ತಿದ್ದಲ್ಲ. “ಇಲ್ಲ, ಮಾಲತಿ, ನನಗೆ ಮನೆಯ ನೆನಪನ್ನು ಮರೆಯಲು ಸಾಧ್ಯವಿಲ್ಲ. ನನಗೆ ಹೊರಗಣ ಜಗತ್ತಿನ ಪರಿಚಯವಾದದ್ದೇ ಇಲ್ಲಿಗೆ ಬಂದ ನಂತರ. ಅದರೊಡನೆ ನನ್ನತನ (ಆತ್ಮೀಯತೆ) ಇಷ್ಟು ಬೇಗನೆ ಹ್ಯಾಗೆ ಹೊಂದಬೇಕು?

ನನ್ನ ಲೀಲೆಯು ನಾನು ಹೊರಡುವಾಗ ಶಾಲೆಗೆ ಹೋಗಿದ್ದಳು. ಪಾಪ, ಮನೆಗೆ ಬಂದ ಮೇಲೆ ಕಳವಳಗೊಂಡು ಎಷ್ಟು ಅತ್ತಳೊ! ‘ಮಗಳ ಮಾಯೆಯನ್ನು ಮುರಿದುಹೋಗುತ್ತಿಯೇನು? ಎಷ್ಟು ನಿಷ್ಠುರಳಮ್ಮಾ ನೀನು?” ಎಂದು ನನ್ನ ತಾಯಿ ಆಗ ಹೇಳಿದ ಈಗಲೂ ಮನದಲ್ಲಿ ಪ್ರತಿಧ್ವನಿಗೊಡುತ್ತಿವೆ. ಮಾಲತಿ, ಮನೆಯ ಹೊರಗಿನ ಯಾವುದಾದರೂ ಸತ್ಕಾರ್ಯದಲ್ಲಿ ಮನಸ್ಸನ್ನು ಇಡಲು ಏನು ಮಾಡಲಿ ನಾನು?”

* * *

ನಮ್ಮ ಜೇಲಿನಿಂದ ಕಾಣುವ ದೃಶ್ಯವು ಬಹಳ ಮನೋಹರವಾಗಿತ್ತು. ಮದರಾಸು ಪ್ರಾಂತ್ಯದ ಯಾವತ್ತೂ ಸ್ತ್ರೀಕೈದಿಗಳು ಬರುವ ಮಧ್ಯವರ್ತಿ ತುರಂಗವಾದುದರಿಂದ ಅದರ ನಿವೇಶನಕ್ಕೆ ಬಹಳ ದೊಡ್ಡದಿತ್ತು. ಎರಡು ಕಡೆಗಳಲ್ಲಿ ಕೊಠಡಿಗಳ ಸಾಲು; ಒಂದು ಕಡೆಯಲ್ಲಿ ಆಫೀಸು ಹಾಗೂ ದೊಡ್ಡ ಹೆಬ್ಬಾಗಿಲು. ನಾಲ್ಕನೆಯ ಕಡೆಯಲ್ಲಿ ಜೇಲು ಆಸ್ಪತ್ರೆ ಇದ್ದು, ನಡುವೆ ವಿಸ್ತಾರವಾದ ಬಯಲಿದ್ದಿತು. ಅಲ್ಲಿ ನಾವು ಸಂಜೆಯ ಹೊತ್ತು ಯಾವಾಗಲೂ ಅಡ್ಡಾಡುತ್ತಿದ್ದೆವು. ಸುತ್ತಲಿನ ಪ್ರಕಾರದ ಗೋಡೆ, ಕೊಠಡಿಗಳ ಸಾಲು ಇವುಗಳಿಂದ ನಮ್ಮ ಮನಸ್ಸಿಗೆ ಒಡೆದು ಕಾಣಿಸುವ ಬಂಧನದ ಅರಿವು, ದೂರದಲ್ಲಿ ತೋರುವ ಗುಡ್ಡವನ್ನೂ ಮೇಲೆ ಕಾಣುವ ಶುಭ್ರ ಆಕಾಶವನ್ನೂ ನೋಡಿ ಮರೆಯಾಗುತ್ತಿತ್ತು. ಆದರೆ ಕೆಲವು ಸಾರೆ ವಿರೋಧಾಭಾಸದಿಂದ ಅದರ ತೀಕ್ಷ್ಣತೆಯು ಇನ್ನಷ್ಟೂ ಹೆಚ್ಚಾಗಿರುತ್ತಿತ್ತು. ಮುಳುಗುವ ಸೂರ್ಯನ ಹೊಂಬಣ್ಣದ ಕಿರಣಗಳು ಆ ಗುಡ್ಡದಲ್ಲಿಯ ವೃಕ್ಷಗಳು ಮೇಲೆ ಬೀಳುವಾಗ, ಪಕ್ಷಿಗಳಂತೆ ಹಾರಿ ಹೋಗಿ ಆ ವೃಕ್ಷಗಳ ಮೇಲೆ ಕೂಡಬೇಕೆಂದು ನಮಗೆ ಅನಿಸುತ್ತಿತ್ತು. ನಮ್ಮಲ್ಲಿ ಸೃಷ್ಟಿಯ ಸೊಬಗನ್ನು ನೋಡಿ ಆನಂದಿಸುವ ಕವಯಿತ್ರಿಯರೂ ಚಿತ್ರಲೇಖಕರೂ ಯಾರೂ ಇರಲಿಲ್ಲ. ನಾವು ಇದಕ್ಕಿಂತ ಮೊದಲು ಎಷ್ಟೋ ಗುಡ್ಡಗಳನ್ನು ನೋಡಿದ್ದರೂ ಈ ಗುಡ್ಡವನ್ನು ನೋಡಿದಾಗ ಮಾತ್ರ “ಈ ಗುಡ್ಡದ ಶಿಖರದ ಮೇಲೆ ಹೋಗಿ ಸೃಷ್ಟಿಯ ಸೌಂದರ್ಯ ನೋಡಬೇಕು; ನಾನು ಬಿಡುಗಡೆಯಾದ ನಂತರ ಮೊದಲು ಅಲ್ಲಿಗೆ ಹೋಗುವೆನು.” ಎಂಬ ಶಬ್ದಗಳು ಪ್ರತಿಯೊಬ್ಬರ ಬಾಯಿಂದಲೂ ಬರುತ್ತಿದ್ದುವು. ನಮ್ಮ ಪಾರತಂತ್ರ್ಯದಂದ ಮುಕ್ತರಾಗಿ ಸ್ವಾತಂತ್ರ್ಯದ ಶಿಖರವನ್ನು ನಾವು ಮುಟ್ಟುವುದೆಂದು ಎಂಬ ವಿಚಾರಗಳು ನನ್ನ ಮನಸ್ಸಿನಲ್ಲೂ ಆಗಾಗ ಬರುತ್ತಿದ್ದುವು. ಆ ಗುಡ್ಡದ ಮೇಲೆ ತರತರದ ಉಡುಪನ್ನು ಧರಿಸಿ, ಸ್ತ್ರೀ ಪುರಷರೂ ಮಕ್ಕಳೂ ಸಂಧ್ಯಾಕಾಲದಲ್ಲಿ ವಿಹರಿಸುತ್ತಿದ್ದರು. ನಾಲ್ಕು ಗೋಡೆಗಳು ಮಧ್ಯೆ ನಮ್ಮ ಶರೀರವನ್ನು ಬಂಧಿಸಿದ್ದರೂ ಗುಡ್ಡದ ಮೇಲೆ ಸ್ವಚ್ಛಂದವಾಗಿ ತಿರುಗಾಡುವವರ ಸ್ಥಳದಲ್ಲಿ ನಮ್ಮನ್ನು ಕಲ್ಪಿಸಿಕೊಂಡು, ಕ್ಷಣ ಮಾತ್ರ ಸ್ವಾತಂತ್ರ್ಯದ ಸುಖವನ್ನು ಮನೋಭೂಮಿಯಲ್ಲಿ ಅನುಭವಿಸುತ್ತಿದ್ದಾಗ, ವಾರ್ಡರರ “ವಾಂಗೊ ವಾಂಗೊ” ಎಂಬ ಕರ್ಕಶ ಧ್ವನಿಯು ಕಲ್ಪನಾಸಾಮ್ರಾಜ್ಯದ ಸ್ವಾತಂತ್ರ್ಯವನ್ನು ಮಣ್ಣುಗೂಡಿಸುತ್ತಿತ್ತು. ಆ ಧ್ವನಿಯನ್ನು ಕೇಳಿದೊಡನೆ ಧಾನ್ಯ ಹೆಕ್ಕಿ ತಿನ್ನಲು ಹೊರಗೆ ಬಿಟ್ಟ ಹಕ್ಕಿಗಳನ್ನು, ಧನಿಯು ಗೂಡಿನೊಳಗೆ ಹಾಕಲು ಕರೆಯುವಂತೆ ನಮ್ಮೆಲ್ಲರಿಗೆ ಭಾಸವಾಗುತ್ತಿತ್ತು. ನಾವು ಕೂಡ ದೂರದ ಗುಡ್ಡಕ್ಕೆ ದಾರಿ ಹೋದ ಮನಸ್ಸನ್ನು ಹಿಂದಕ್ಕೆ ಭಾಸವಾಗುತ್ತಿತ್ತು. ನಾವು ಕೂಡ ದೂರದ ಗುಡ್ಡಕ್ಕೆ ಹಾರಿ ಹೋದ ಮನಸ್ಸನ್ನು ಹಿಂದಕ್ಕೆ ಕರೆದು ದೇಹಪಂಜರದಲ್ಲಿ ಕೂಡಿಸಿ, ನಮ್ಮ ನಮ್ಮ ಕೋಣೆಗಳಿಗೆ ಹೋಗುತ್ತಿದ್ದೆವು. ವಾರ್ಡರರು ಹೊರಗಿನಿಂದ ಬೀಗ ಇಕ್ಕತ್ತಿದ್ದರು.

ಒಂದು ದಿನ ಎಂದಿನಂತೆ ನಮ್ಮನ್ನು ಕೋಣೆಯಲ್ಲಿ ಸೇರಿಸಿದ ನಂತರ ಬಾಗಿಲಿನ ಸರಳಿಗೆ ಹೊರಗಿನಿಂದ ಕಟ್ಟಲ್ಪಟ್ಟ (ಜೈಲು ನಿಯಮದಂತೆ ಕಂದೀಲು ಕೋಣೆಯ ಒಳಗಿರಬಾರದು.) ಕಂದೀಲಿನ ಅಲ್ಪ ಬೆಳಕಿನಲ್ಲಿ ಸುಂದರಮ್ಮನು ಮೈ-ಮೈ, ಪ-ಪ ಪಢ ರ-ಹೀ ರಹೀ ಮೈ ಪಢ ರಹೀ ಹುಂ; ತುಂ-ಪಢ-ಅ-ತೇ ತುಂ ಪಢತೇಹೋ” ಎಂದು ಓದುತ್ತಾ ಹಿಂದೀ ಅಭ್ಯಾಸ ನಡೆಯಿಸಿದ್ದಳು. ನನಗೆ ತಲೆನೋವು ಇದ್ದುದರಿಂದ ಬೇಗನೆ ಮಲಗಿದೆ; ಆದರೆ ನಿದ್ದೆಹತ್ತಲಿಲ್ಲ. ಮನೆಯವರ ನೆನಪಾಯಿತು. ವಾರ್ಡರಳು ಗಂಟೆ ಹೊಡೆದಳು. ಆಗಲೇ ದೂರದಿಂದ ಉಗಿ ಬಂಡಿಯ ಸಿಳ್ಳು ಕೇಳಿಸಿತು. ರಾತ್ರಿಯ ಶಾಂತ ವಾತಾವರಣದಲ್ಲಿ ‘ಮನೆಯ ಹೋಗೋಣ ಬಾ’ ಎಂದು ಅದು ಕರೆವಂತೆ ನನಗೆ ಭಾಸವಾಯಿತು. “ಈ ಉಗಿಬಂಡಿಯು ಆತುರತೆಯಿಂದ ಕಾತರರಾದ ಎಷ್ಟು ಜೀವಿಗಳ ಭೆಟ್ಟಿಯನ್ನು ಮಾಡಿಸುತ್ತಿರಬಹುದು!ಇದೇ ಬಂಡಿಯಿಂದಲ್ಲವೋ ನನ್ನನ್ನು ಮನೆಯಿಂದ ಇಷ್ಟು ದೂರ ತಂದದ್ದು? ಇನ್ನು ನಾನು ಇದೇ ಬಂಡಿಯಿಂದಲ್ಲವೇ, ನನ್ನವರ ಬಳಿಗೆ ಹೋಗುವೆನು! ನನ್ನ ಪ್ರಿಯತಮನ ಭೆಟ್ಟಿಯ ಆನಂದವು ಪುನಃ ದೊರೆತಾಗ, ಈ ಕರಿಯ ಹೆಬ್ಬಾಗಿಲಿನ ಹಿಂದೆ ಬಂಧಿಸಲ್ಪಟ್ಟ ಸೋದರಿಯರ ನೆನಪಾದೀತೆ?” ಇತ್ಯಾದಿ ವಿಚಾರಗಳಲ್ಲಿ ಮಗ್ನಳಾದ ನನ್ನ ಕಣ್ಣಿನಲ್ಲಿ, ನನಗೆ ತಿಳಿಯದೆಯೇ ನೀನು ಹರಿಯಲಾರಂಭಿಸಿತು. ಸುಂದರಮ್ಮನ ಓದು ಫಕ್ಕನೆ ನಿಂತಿತು.

“ಮಾಲತೀ ಏನಿದು? ಮುಖ ನೋಡೋಣ! ನನಗೆ ಯಾವಾಗಲೂ ಧೈರ್ಯಕೊಡುವವಳು ನೀನು! ಈವೊತ್ತು ಇದೇನು ಹೀಗೆ! ನಿನ್ನ ಬಿಡುಗಡೆಗೆ ಎರಡು ತಿಂಗಳು ಮಾತ್ರ ಇದೆ. ನೀನು ಹೀಗೆ ಮಾಡಿದರೆ ಆ ಜನ್ಮ ಶಿಕ್ಷೆಯಾದವರು ಏನು ಮಾಡಬೇಕು? ಅವರಿಗೆ ಸಾಯುವ ಮೊದಲು ಒಮ್ಮೆಯಾದರೂ ಮನೆಯವರನ್ನು ಒಮ್ಮೆಯಾದರೂ ಮನೆಯವರನ್ನು ನೋಡೇವೆಂಬ ಆಶೆ ಇದೆಯೆ?” ಇದನ್ನು ಕೇಳಿ ನನಗೆ ನಿಜವಾಗಿಯೂ ನಾಚಿಕೆಯೆನಿಸಿತು. ಪರ್ವತದಷ್ಟೆಂದು ತೋರುವ ನನ್ನ ದುಃಖವು, ಅವರ ದುಃಖದೊಡನೆ ಹೋಲಿಸಿದರೆ ಒಂದು ಸಾಸಿವೆ ಕಾಳನಳತೆ!

* * *

ನನ್ನ ಬಿಡುಗಡೆಗೆ ಸ್ವಲ್ಪ ದಿವಸಗಳು ಉಳಿದಿದ್ದುವು. ಅಷ್ಟರಲ್ಲಿ ವಿಶೇಷ ಸಂಗತಿಯೊಂದು ನಡೆಯಿತು. ನಮ್ಮ ಜೇಲಿಗೆ ಯುರೋಪಿಯನ್ ಸ್ತ್ರೀಯೊಬ್ಬಳು ರಾಜಕೀಯ ಕೈದಿಯಾಗಿ ಬಂದಳು. ಅವಳು ಯಾವಾಗಲೂ ನಮಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ತನ್ನ ಅನುಭವದ ವಿಷಯಗಳನ್ನು ಹೇಳುತ್ತಿದ್ದಳು. ಶಾಲಾ-ಕಾಲೇಜುಗಳ ವಾತಾವರಣದಲ್ಲಿ ಹಾಗೂ ಕೇವಲ ಪುಸ್ತಕ ಪ್ರವಚನದಲ್ಲಿ ಸಿಕ್ಕಲಾರದ ಜ್ಞಾನವು ಅವಳು ಹೇಳುವ ಸ್ವಾನುಭವದ ಕಥೆಗಳಲ್ಲಿ ಸಿಕ್ಕಿದುವು; ಅವು ಮನೋರಂಜಕ ಮಾತ್ರವಲ್ಲ; ಬೋಧಪ್ರದವೂ ಆಗಿದ್ದುವು. ರಾತ್ರಿಯಲ್ಲಿ ಕೊಠಡಿಗೆ ಬಂದ ನಂತರ ನಾನು ಅವುಗಳನ್ನು ಸುಂದರಮ್ಮನಿಗೆ ಕನ್ನಡದಲ್ಲಿ ಹೇಳುತ್ತಾ ಇದ್ದೆನು. ಅವಳಿಗೆ ಅವನ್ನು ತಿಳಿಸಬೇಕಾದರೆ, ಯುರೋಪ್ ಎಂದರೇನು ಎಂಬಲ್ಲಿಂದ ಪ್ರಾರಂಭಿಸಬೇಕಾಗುತ್ತಿತ್ತು. ನಮ್ಮ ಮಾತು ಅಶಿಕ್ಷಿತರಿಗೆ ತಿಳಿಯಲು ಎಷ್ಟು ಕಠಿಣವಾಗುತ್ತದೆಂದಬುದೂ, ಅವರಿಗೆ ತಿಳಿಯುವಂತೆ ಹೇಳುವುದು ನಮಗೆ ಎಷ್ಟು ಪ್ರಯಾಸವೆಂಬುದೂ ಆಗ ನನಗೆ ತಿಳಿಯಿತು. ನಗರಗಳಲ್ಲಿ ಕೂತು “ಹಳ್ಳಿಗರ ಸುಧಾರಣೆ” ಎಂಬ ವಿಷಯದಲ್ಲಿ ಉದಾತ್ತ ಭಾಷಣ ಮಾಡುವ ನಮ್ಮ ಮುಂದಾಳುಗಳು, ನಿಜವಾಗಿ ಹಳ್ಳಿಗರಲ್ಲಿ ಬೆರೆತುಕೊಂಡು ಕೆಲಸ ಮಾಡಲು ಹೊರಟರೆ ಎಷ್ಟು ಒಳಿತಾಗುತ್ತಿತ್ತು! ದೇಶಸೇವಕನು ಪಡೆಯಬೇಕಾದ ಪ್ರಥಮ ಶಿಕ್ಷಣವೆಂದರೆ ಹಳ್ಳಿಗರಿಗೆ ತಿಳಿಯುವ ಭಾಷೆಯಲ್ಲಿ ವಿಷಯಗಳನ್ನು ತಿಳಿಸಲು ಕಲಿಯುವುದು!” ಎಂಬ ಮಾತಿನ ಅನುಭವ ಅಂದು ನನಗೆ ಆಯಿತು.

* * *

ನನ್ನ ಬಿಡುಗಡೆಗೆ ಕೆಲವೇ ದಿವಸಗಳು ಉಳಿದಿದ್ದುವು. ಆಗಿನ ನನ್ನ ಮನಃಸ್ಥಿತಿಯು ತವರುಮನೆಗೆ ಬಂದು ಹಿಂತಿರುಗುವ ತರುಣಿಯರು ಸ್ಥಿತಿಯಂತಿತ್ತು. ಒಂದೆಡೆ ಪ್ರಿಯತಮನನ್ನು ಕಾಣುವ ಉತ್ಸುಕತೆಯ ಆನಂದ; ಇನ್ನೊಂದೆಡೆ ಪರಿಚಿತ ಗೆಳತಿಯರನ್ನು ಅಗಲುವ ದುಃಖ. ಒಂದು ವರ್ಷದಿಂದಲೂ ಆಟ, ಪಾಠ, ಊಟ ಇತ್ಯಾದಿ ಎಲ್ಲ ಕಾರ್ಯಗಳಲ್ಲಿ ಸರ್ವವಿಧದಿಂದ ಸಮಭಾಗಿಯಾಗಿದ್ದವರನ್ನು ಬೀಳ್ಕೊಳ್ಳುವಾಗ, ಯಾವ ಕಲ್ಲೆದೆಯೂ ಕರಗದೆ ಇರಲಾರದು. ಅಲ್ಲದೆ ಅವರನ್ನು ಪುನಃ ಕಾಣುವ ಸಂದರ್ಭಗಳು ಸಿಗುವಂತೆಯೇ ಇದ್ದಿಲ್ಲ. ನಾನು ಆಂಧ್ರ ತಮಿಳು ನಾಡಿಗೆ ಹೋಗುವುದಾಗಲಿ, ಅವರು ಕರ್ನಾಟಕ ಮಹಾರಾಷ್ಟ್ರಗಳಿಗೆ ಬರುವುದಾಗಲಿ ದುರ್ಲಭವೇ ಆಗಿತ್ತು.

ಇಂದು ದಶಂಬರ ೩೧ನೆಯ ತಾರೀಖಿನ ದಿನ. ಮರುದಿನ ನನ್ನ ಬಿಡುಗಡೆಯಾಗುವುದಿತ್ತು. ಆ ದಿನ ಸಂಜೆ, ಮೇಲೆ ಹೇಳಿದ ಯುರೋಪಿಯನ್ ಮಹಿಳೆಯ ಸುತ್ತಲೂ ನಾವೆಲ್ಲರೂ ಕೂಡಿದ್ದೆವು. ನನ್ನ ಪಾಲಿಗೆ ಅಂದಿನದು ಅವಳ ಕೊನೆಯ ವ್ಯಾಖ್ಯಾನ. ವರ್ತಮಾನ ಪತ್ರದಿಂದ ಒಂದು ತಲೆಬರಹವನ್ನು (head line) ಅವಳು ಓದಿ ಹೇಳಿದಳು; “ಒಬ್ಬ ತರುಣ ಸ್ತ್ರೀಯು ಆತ್ಮಹತ್ಯೆ ಮಾಡಿಕೊಂಡಳು. ಕಾರಣವು ತಿಳಿದಿಲ್ಲ.” ಇದನ್ನು ಓದಿದೊಡನೆ ಅವಳ ಮುಖಮುದ್ರೆಯು ಗಂಭೀರವಾಯಿತು. ತನ್ನ ಖೋಲಿಗೆ ಹೋಗಿ ಅವಳು ಒಂದು ರೋಜನಿಸಿ (diary)ಯನ್ನು ತಕ್ಕೊಂಡು ಬಂದು ಒಂದು ಹಾಳೆಯನ್ನು ಓದಲು ತೊಡಗಿದ್ದಳು.

“ಒಂದಲ್ಲ ಇನ್ನೊಂದು ರೀತಿಯ ಆಶಾಭಂಗದಿಂದಾಗಿ ಎಷ್ಟು ಜೀವಗಳು ಆತ್ಮಹತ್ಯೆಯಿಂದ ಅಂತ್ಯಗೊಂಡಿರಬಹುದು? ಯಾರಿಗೆ ಜೀವವೇ ಬೇಡವೆನಿಸುತ್ತದೊ ಅಂಥವರು ಅದನ್ನು ಇತರ ದುಃಖಿತರ ಸೇವೆಯಲ್ಲಿ ಸವೆಯಿಸಿದರೆ ಆತ್ಮಹತ್ಯೆಯಿಂದ ಕೂಡ ಶಾಂತವಾಗಲಸಾಧ್ಯವಾದ ಅವರ ಜೀವದ ತಳಮಳವು ಲೋಕಸೇವೆಯಲ್ಲಾದರೂ ಶಾಂತವಾಗುದೆಂದು ನಿಮಗೆ ಎನಿಸುವುದಿಲ್ಲವೆ?” ಆಕೆ ಮುಂದೆ ಹೇಳಿದಳು.

ನನಗೆ ಕೆಲವು ವರ್ಷಗಳ ಹಿಂದೆ ಆಗಿ ಹೋದ ಒಂದು ಸಂಗತಿಯ ನೆನಪು ಆಯಿತು. ಆಗ ನಾನು ಒಂದು ಶಾಲೆಯ ಮುಖ್ಯ ಅಧ್ಯಾಪಿಕೆಯಾಗಿದ್ದೆನು. ಅಲ್ಲಿ ಗ್ರೇಸ್ ಮತ್ತು ಶಾಂತಾ ಎಂಬ ಇಬ್ಬರು ವಿದ್ಯಾರ್ಥಿನಿಯರಿದ್ದರು. ಅವರಿಬ್ಬರಲ್ಲಿ ಬಲವಾದ ಮೈತ್ರಿ ಇತ್ತು; ಮಾತ್ರವಲ್ಲದೆ ಅವರ ವಿಚಾರ, ಧ್ಯೇಯಗಳು ಒಂದೇ ಇದ್ದುವು. ನಾನು ಆ ಶಾಲೆಯನ್ನು ಬಿಡುವ ಸಮಯದಲ್ಲಿ ಹುಡುಗಿಯರೊಡನೆ “ನೀವು ಮುಂದೆ ಏನು ಮಾಡುವಿರಿ?” ಎಂದು ಕೇಳಿದೆನು. ಗ್ರೇಸಳು “ತಾನು ಡಾಕ್ಟರಳಾಗುವೆನು” ಎಂದಳು. ಅವಳ ಹಾಗೂ ಶಾಂತೆಯ ವಿಚಾರಗಳು ಬಹುತರ ಒಂದೇ ಇರುತ್ತಿದ್ದುದರಿಂದ ಅವಳೂ ಒಂದೇ ಉತ್ತರ ಕೊಡುವಳು ಎಂದು ಎಣಿಸಿದ್ದೆ. ಆದರೆ, ಅವಳು ಏನೂ ಮಾತನಾಡಲಿಲ್ಲ. ಗ್ರೇಸಳನ್ನು ವಿಚಾರಿಸಲಾಗಿ, ಅವಳ ಲಗ್ನವು ನಿಶ್ಚಯವಾಗಿದೆಯೆಂದೂ ಹುಡುಗನು ಅವಳಿಗೆ ಒಪ್ಪಿಗೆಯಿದ್ದ ಅನುರೂಪ ವರನೆಂದೂ ಗೊತ್ತಾಯಿತು. ನಾನು ಶಾಂತೆಯ ಅಭಿನಂದನೆ ಮಾಡಿದೆನು.

ಬಹಳ ವರ್ಷಗಳ ನಂತರ ನಾನು ಅದೇ ಊರಿಗೆ ಹೋಗಿ, ಅವರಿಬ್ಬರ ವಿಷಯದಲ್ಲಿ ವಿಚಾರಿಸುವಾಗ, ಗ್ರೇಸಳು ಕ್ರೈಸ್ಥ ಸನ್ಯಾಸಿನಿ (nun)ಯಾಗಿ ಅನಾಥಾಲಯದ ಚಾಲಕಳಾಗಿರುವಳೆಂದು ತಿಳಿಯಿತು. ಶಾಂತೆಯ ಲಗ್ನವಾದ ಸ್ವಲ್ಪ ಸಮಯದಲ್ಲೇ ಅವಳ ಲಗ್ನವೂ ಆಯಿತೆಂದೂ, ಆದರೆ ಒಂದೆರಡು ವರ್ಷಗಳಲ್ಲಿಯೆ ಅವಳ ಗಂಡನು ಸಮುದ್ರಸ್ನಾನಕ್ಕೆ ಹೋದಾಗ ಮುಳುಗಿ ಸತ್ತನೆಂದೂ ತಿಳಿಯಿತು. ಅನಾಥಾಲಯಕ್ಕೆ ಹೋಗಿ ಗ್ರೇಸಳನ್ನು ಭೆಟ್ಟಿಯಾಗಿ ಅವಳ ಹಾಗೂ ಶಾಂತೆಯ ಬಾಳನ್ನು ಕುರಿತು ವಿಚಾರಿಸಿಕೊಂಡೆನು.

“ನಾವು ಭಿನ್ನ ಭಿನ್ನ ಧರ್ಮದವರಾದರೂ ಬಾಲ್ಯಾರಭ್ಯ ಗೆಳತಿಯರು. ನಮ್ಮ ವಿಚಾರಗಳು ಒಂದೆಬಗೆಯವಾಗಿದ್ದುವು. ಸಾಧಾರಣ ಒಟ್ಟಿಗೆಂಬಂತೆ ನಮಗೆ ಮದುವೆಯಾಯಿತು. ನಮ್ಮ ಮೇಲೆ ದುಃಖದ ಪ್ರಸಂಗಗಳೂ ಒಂದೇ ಸಾರೆ ಒಂದೇ ರೀತಿಯಿಂದ ಬಂದುವು. ದಾಂಪತ್ಯ ಸುಖವನ್ನು ಎರಡುವರ್ಷ ನಾವಿಬ್ಬರೂ ಸಂಪೂರ್ಣ ಅನುಭವಿಸಿದೆವು. ನನ್ನ ಗಂಡನಿಗೆ ನೀರಿನಲ್ಲಿ ಅಪಘಾತವಾಯಿತು. ಅವಳ ಗಂಡನು ಜ್ವರಕ್ಕೆ ತುತ್ತಾದನು. ಶಾಂತೆಗೆ ವೈಧವ್ಯದುಃಖವು ಸಹನೆಯ ಮೇರೆಯನ್ನು ಮೀರಿಸಿತು. ದುಃಖದಿಂದ ಬೆಂದ ಆತ್ಮಕ್ಕೆ ಸಹಿಷ್ಣುತೆಯೂ ಹಿಂದೂ ಸಮಾಜದಲ್ಲಿರದುದರಿಂದ, ಅವಳು ದುಃಖವನ್ನು ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಂಡಳು. ನನಗೂ ಆತ್ಮಹತ್ಯೆಯ ವಿಚಾರವು ಅನೇಕ ಸಾರೆ ಬರುತ್ತಿತ್ತು. ನನ್ನ ಪ್ರಿಯತಮನಿದ್ದೆಡೆಗೆ ಹೋಗಬೇಕೆಂದು ಮನಸ್ಸು ನನ್ನನ್ನು ಬಲವಾಗಿ ಸೆಳೆಯುತ್ತಿತ್ತು. ಆದರೆ, ಇಂಥ ಪರಿಸ್ಥಿತಿಯಲ್ಲಿ ಸನ್ಯಾಸಿನಿಯರ ಸಂಸರ್ಗವಾಯಿತು. ಅವರ ಶಾಂತವಾದ ಜೀವನ, ದುಃಖಿತರ ಸೇವೆ ಇವನ್ನು ಕಂಡು, ನನ್ನ ಸುಖಜೀವನವು ಸಮಾಪ್ತವಾದರೂ ಜೀವನದ ಜ್ಯೋತಿಯನ್ನು ಆರಿಸುವುದಕ್ಕಿಂತ ಉರಿಸುತ್ತಾ ಇಟ್ಟರೆ ನೆರೆಹೊರೆಯ ಅಂಧಕಾರವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಬಹುದೆಂಬ ವಿಚಾರವು ಮೂಡಿತು. ನಾನು ಆತ್ಮಹತ್ಯೆಯ ವಿಚಾರವನ್ನು ಬಿಟ್ಟು, ಸನ್ಯಾಸಿಯಾಗಿ ಈ ಅನಾಥಬಾಲಕರ ರಕ್ಷಣೆಯನ್ನು ಕೈಕೊಂಡೆನು. ಆಗಾಗ, ಶಾಂತೆಯ ನೆನಪಾಗಿ ದುಃಖವಾಗುತ್ತದೆ. ಇಂತಹ ಸಂಸ್ಥೆಗಳು ಹಿಂದೂ ಸಮಾಜದಲ್ಲಿರುತ್ತಿದ್ದರೆ, ಸದಾ ದುಃಖದಲ್ಲಿ ಕಣ್ಣೀರು ಸುರಿಸುವ ಹಿಂದೂ ವಿಧವೆಯರ ನಿರುಪಯುಕ್ತ ಜೀವನವನ್ನು ಉಪಯುಕ್ತತೆಯ ಹಾಗೂ ಸಮಾಜೋನ್ನತಿಯ ದಾರಿಗೆ ಹಚ್ಚಬಹುದಾಗಿತ್ತು.”

“ಒಬ್ಬ ತರುಣಿಯ ಆತ್ಮಹತ್ಯೆಯ ಸುದ್ಧಿಯನ್ನು ವರ್ತಮಾನಪತ್ರದಲ್ಲಿ ಓದಿ ನನಗೆ ಗ್ರೇಸ್, ಮತ್ತು ಶಾಂತೆಯರ ನೆನಪಾಯಿತು” ಎಂದು ಆ ಯುರೋಪಿಯನ್ ಬಾಯಿಯು ನಮಗೆ ಹೇಳಿದಳು.

ಅವಳ ಉತ್ಸಾಹ, ಹಿಂದೂಸ್ಥಾನದ ಜನರ ವಿಷಯದಲ್ಲಿ ಅವಳಿಗಿರುವ ಕಳಕಳಿ ಇವುಗಳನ್ನು ನೋಡಿ ನಮಗೆಲ್ಲರಿಗೆ ಅವಳ ವಿಷಯದಲ್ಲಿ ಆದರ, ಗೌರವಗಳು ತೋರಿದುವು. ಅವಳ ಸ್ವಾರ್ಥತ್ಯಾಗದ ಜ್ಯೋತಿಯು ನಮ್ಮ ಆಂತರ್ಯದೊಳಗಿನ ಸಣ್ಣ ಸಣ್ಣ ದೀಪಗಳನ್ನು ಬೆಳಗಿಸಿತು. ಆ ಬೆಳಕಿನಲ್ಲಿ ನಾವು ವಿಶ್ವಬಂಧುತ್ವದ ದೃಶ್ಯವನ್ನು ಕಂಡೆವು.

ಅದು ನನ್ನ ಜೇಲಿನೊಳಗಿನ ಕೊನೆಯ ದಿನಸವಾದರೂ ಸುಂದರಮ್ಮನು ನನ್ನೊಡನೆ ಏನೂ ಮಾತನಾಡಲಿಲ್ಲ. ಒಂದು ಗೂಢವಾದ ತತ್ತ್ವವನ್ನು ಕಥೆಯ ರೂಪದಿಂದ ಹೇಳಿದರೆ ಅಜ್ಞ ಬಾಲಕನಿಗೂ ತಿಳಿಯುವಂತೆ, ಈ ದಿನದ ವಿಷಯವು ಅವಳಿಗೆ ಸರಿಯಾಗಿ ತಿಳಿಯಿತು.

* * *

ತುರಂಗದಿಂದ ಹೊರಗೆ ಬಂದು ಮೂರು ವರ್ಷಗಳಾಗಿದ್ದುವು. ಸುಂದರಮ್ಮ ಏನು ಮಾಡುತ್ತಿರಬಹುದು…… ಎಂದು ತಿಳಿಯಬೇಕೆಂದು ಕುತೂಹಲವು ಆಗಾಗ ಉತ್ಪನ್ನವಾಗುತ್ತಿತ್ತು. ಆದರೆ, ತಿಳಿಯುವ ಬಗೆ ಹೇಗೆ? ನಿರಕ್ಷರಳಾದ ಆಂಧ್ರಮಹಿಳೆಗೆ ನಾನು ಪತ್ರಬರೆಯುವುದಾದರೂ ಯಾವ ಭಾಷೆಯಲ್ಲಿ?

ಆಕಸ್ಮಾತ್ ಒಂದು ದಿನ, ತುರಂಗದಲ್ಲಿದ್ದ ಒಬ್ಬ ಸೋದರಿಯ ಪತ್ರ ಬಂತು. ತಾನು ಕಾರಣಾಂತರದಿಂದ ಮಂಗಳೂರಿಗೆ ಬರುವುದಾಗಿ ಬರೆದಿದ್ದಳು. ರೈಲ್ವೆ ನಿಲ್ದಾಣದಲ್ಲಿ ಅವಳನ್ನು ಸ್ವಾಗತೀಕರಿಸಿದೊಡನೆ ಸುಂದರಮ್ಮನ ವಿಷಯಕ್ಕೆ ಕೇಳಿದೆನು.

“ಮಾಲತೀ, ಸುಂದರಮ್ಮನ ದುರ್ದೈವ ಏನೆಂದು ಹೇಳಲಿ! ಅವಳ ಮುದ್ದುಮಗಳಾದ ಲೀಲೆಯು ಇಹಲೋಕವನ್ನು ಬಿಟ್ಟು ಹೋದಳು; ಗಂಡನಿಗೆ ಪುನಃ ಭಯಂಕರ ಹುಚ್ಚು ಹಿಡಿದು, ಔಷಧೋಪಚಾರಗಳೇನೂ ಸಫಲವಾಗದೆ, ಈಗ ಹುಚ್ಚರ ಆಸ್ಪತ್ರೆಯಲ್ಲಿದ್ದಾನೆ. ಗುಣವಾಗುವ ಲಕ್ಷಣಗಳು ಕಾಣುವುದಿಲ್ಲ. “

ನನ್ನ ತಲೆಗೆ ಯಾರೋ ಬಡಿದಂತಾಯಿತು. ‘ಇಷ್ಟು ದೊಡ್ಡ ಝಝಾವಾತದಲ್ಲಿ ಸುಂದರಮ್ಮನ ಜೀವನಜ್ಯೋತಿಯು ಆರಿಹೋದೀತೇ, ಅಥವಾ ಇತರರಿಗೆ ಪ್ರಕಾಶಕೊಡಲು ಮಿಣಿಮಿಣಿಯಾಗಿಯಾದರೂ ಉಳಿದೀತೇ?’ ಎಂಬ ಪ್ರಶ್ನೆಯನ್ನು ನನಗೆ ನಾನೇ ವಿಚಾರಿಸಹತ್ತಿದೆ. ಈ ದಿವಸವೂ ದೀಪಾವಳಿಯ ಹಬ್ಬದ ದಿನವಾಗಿತ್ತು. ರಾತ್ರಿ ಎಲ್ಲೆಲ್ಲಿಯೂ ದೀಪಗಳ ಬೆಳಕು. ದೀಪಾವಳಿಯ ಬೆಳಕಿನಂತೆಯೇ ನಮ್ಮ ಜೀವನಜ್ಯೋತಿಯೂ ಆದೀತೇ?

 

– ಸೌ. ಕಮಲಾಬಾಯಿ ತಲಚೇರಿಕರ್
ಜಯಂತಿ, ಸಂಪುಟ ೧, ಸಂಚಿಕೆ ೩, ೧೯೩೮