ಜೀವನದ ಸಾಗರದಿ ಸುಖವ ಕಾಣಲು ಹೆಣಗು
ತೀಸಾಡಿ ಕೈಸೋತು ನುಗ್ಗುತಿಹ ತೆರೆಯೊಡನೆ
ಕೈಮೀರಿ ಸಾಗಿಹೆನು. ಎಲ್ಲಿಂದ ಬಂದಿಹೆನು
ಎಂಬುದರ ಅರಿವೆನಗೆ ಇಲ್ಲದಾಯಿತು ಹೆಣಗು
ತಿರಲಿಲ್ಲ ಭೋರ್ಗರೆಯುವಲೆಗಳಲಿ. ಸುಖವೀಗ
ಕಾಣುವುದು ಆಗ ಕಾಣುವುದೆನುತ ದಡ ಬಿಟ್ಟು
ಧೈರ್ಯದಲಿ ದುಡುಕಿರಲು ಗಾಸಿಯಾದೆನು ಕೆಟ್ಟು.

ಸುಖವೋ ಬಿಸಿಲ್ಗುದುರೆ! ಒಂದೊಂದು ತೆರೆಯೆನ್ನ
ಸೆಳೆದೊಯ್ದು ಕಾಡುತಿರೆ ಬಂದೆಯೌ ಕಾಪಿಡಲು
ನೀ ದೇವಿ. ಆದರದಿ ಮಣಿಯಿತೀ ಶಿರ ನಿನ್ನ
ಪಾದದಲಿ. ಅರ್ಭಕನ ಪೊರೆಯಲಿಹ ದೇವಿಯೊಲು
ಕಣ್ಗೆಸೆವೆ, ಸುರಲಲನೆ! ನೀನೆನ್ನೊಳಿಹ ಭಾವ
ಗಳ ದೇವಿ! ಮನದೊಡತಿ! ನಮ್ಮನೀ ಭವದಲ್ಲಿ
ಬೇರೆಯಾಗಿಸಬೇಡ-ಬೇಡವೆನು ಕಾತರದಿ.

* * *

– ಕು. ವತ್ಸಲಾ ಜೋಶಿ
ಜಯ ಕರ್ನಾಟಕ, ಸಂಪುಟ ೧೩, ಸಂಚಿಕೆ ೮, ೧೯೩೫