“ಏಕೆ ಶಂಕರಪ್ಪನವರೆ, ಮಾಘಮಾಸ ಮುಗಿದು ಎರಡು ತಿಂಗಳುಗಳಾದರೂ, ವೈಶಾಖ ಅರ್ಧಮುಗಿದರೂ ನೀವು ಏನು…?”

“ಇನ್ನು ಮೇಲೆ ಆ ಸುದ್ಧಿಯನ್ನೇ ಎತ್ತಬೇಡಿ ಶಾಸ್ತ್ರಿಗಳೆ…. ನನ್ನ ಮುಂದೆ! ಮನಸ್ಸಿಗೆ ತುಂಬ ಬೇಜಾರವೆನಿಸಿದೆ!”

“ನೀವು ನಿಮಗಾದ ವ್ಯಸನದ ಮೂಲಕ ಹೀಗೆ ಹೇಳುತ್ತಿರುವುದು ಸ್ವಾಭಾವಿಕ; ಆದರೆ ಏನು ಮಾಡುವುದಿದೆ? ಸತ್ತವರ ಹಿಂದೆ ಯಾರೂ ಸಾಯುವಂತಿಲ್ಲ! ನೀವೇ ಯೋಚಿಸಿ ನೋಡಿ…..; ಅವರಿಗೆ ಮಣ್ಣು ಮರೆ, ನಮಗೆ ಅನ್ನಮರೆ! ಅದೇ ದುಃಖ ಹಾಗೆಯೆ ಉಳಿದರೆ ಪ್ರಪಂಚ ನಡೆದೀತೇನು? ಎಲ್ಲೋ ನಿಮಗೊಂದು ಹುಚ್ಚು! ಆಳೂ-ಬೀಳೂ, ಬಡ್ಡೀ-ಬಾಕೀ, ಎಲ್ಲಾ ವಿಚಾರಿಸಿ ರೋಸಿಕೊಂಡು ಮನೆಗೆ ಬಂದರೆ, ನಿಮ್ಮ ಸುಖ-ದುಃಖ ವಿಚಾರಿಸುವವರು ಮನೆಯೊಳಗೆ ಒಬ್ಬರಿಲ್ಲದೆ ಹೋದರೆ, ಎಷ್ಟು ಇದ್ದರೂ ಏನು ಪ್ರಯೋಜನ ಹೇಳಿ! ಏನೋ ಬಡಜನರಾದರೆ ಸಾಲದ ಶೂಲಕ್ಕಂಜಿ ಕೂತಲ್ಲೇ ಕುದಿಯುತ್ತಾ ಇರಬಹುದು. ನಿಮ್ಮಂಥವರಿಗೇ ಆ ವ್ಯಸನ? ನಿಮ್ಮ ವಯಸ್ಸೆಷ್ಟಿದೆಯೋ ಅಷ್ಟು ಕನ್ಯೆಯರನ್ನು ತಂದು ನಿಮ್ಮ ಅಂಗಳದಲ್ಲಿ ನಿಲ್ಲಿಸೇನು ನನಗೆ ಹೇಳಿದರೆ!”

“ನಿಜ, ನಿಮಗೆ ಹೇಳಿದರೆ, ತಂದು ನಿಲ್ಲಿಸುವವರೇ ಇದ್ದೀರಿ; ಆದರೆ ನಮ್ಮ ಚಿರಂಜೀವಿ ಶಿವಕೂಮಾರನು ವಯಸ್ಸಿಗೆ ಬಂದಿದ್ದಾನೆ. ಅವನಿಗೆ ಮದುವೆ ಮಾಡಿ ಮನೆಮಾರೆಲ್ಲಾ ಒಪ್ಪಿಸಿಕೊಟ್ಟು ‘ಶಿವ ಶಿವ’ ಎಂದು ಕಾಲಕಳೆಯಬಹುದು ನಾನು!”

“ಅವನ ವಿದ್ಯಾಭ್ಯಾಸ ಪೂರ್ಣ ಮುಗಿಯುವುದಕ್ಕೆ ಇನ್ನೂ ಎರಡೂ ಮೂರು ವರ್ಷಗಳಿವೆ. ಏಕೆ ಅಷ್ಟು ಅವಸರ?… ಮಗನಿಗೆ ಮದುವೆ ಮಾಡಿದರೆ, ಸೊಸೆ ಮನೆಗೆ ಬಂದಾಗ ಮನೆಗೆಲಸ ತೋರಿಸಿ ಕೊಡುವುದಕ್ಕೆ ನುರಿತವರೊಬ್ಬರು ಬೇಕೋ ಬೇಡವೋ? ಇಬ್ಬರೂ ಸಣ್ಣವರಾದರೆ ಮನೆಯ ರೀತಿ-ನಡತೆ ಹೇಗೆ ಗೊತ್ತಾಗಬೇಕು ಅವರಿಗೆ? ಮೊದಲು ನೀವು ಮದುವೆಯಾದರೆ ಈಗ ಬಂದವರಿಗೆ ಎರಡು ವರ್ಷ ಮನೆಯ ನಡೆವಳಿ-ನುಡಿವಳಿಯೆಲ್ಲಾ ಗೊತ್ತಾಗಿರುತ್ತದೆ; ಆ ಮೇಲೆ ಬಂದ ಸೊಸೆಗೂ ಹೇಳುವವರಾಗುತ್ತಾರೆ. ಹೌದೋ ಅಲ್ಲವೋ, ಆಲೋಚನೆ ಮಾಡಿ!ಅದೋ, ಈಗ ಏನೋ ಹೇಳಿದರಿಲ್ಲ! ಹಾಂ! ಶಿವಶಿವ ಎಂದು ಕಾಲಕಳೆಯಬಹುದೆಂದಲ್ಲಾ ನೀವು ಹೇಳಿದ್ದು? ಅಲ್ಲಾ ಎಂಥಾ ಹುಚ್ಚು ನಿಮಗೆ! ಮದುವೆ ಮಾಡಿಕೊಂಡರೆ ಶಿವಶಿವ ಎನ್ನುವುದಕ್ಕೆ ಬರುವುದಿಲ್ಲವೆಂದು ಕೊಂಡಿರುವಿರೇನು ನೀವು? ಶಿವನಿಗೇನು ಸಂಸಾರವಿಲ್ಲವೇನು? ಆತನಿಗೂ ಇಬ್ಬರಿದ್ದಾರೆ ಹೆಂಡಿರು! ಇಬ್ಬರು!! ಸಂಸಾರಿಗರು ಸಂಸಾರಿಗಳನ್ನು ಅರಿತುಕೊಳ್ಳುತ್ತಾರೆಯಲ್ಲದೆ ಸಂನ್ಯಾಸಿಗಳನ್ನು ಸನ್ಮಾಸಿಸಬಹುದೇ ಆ ಸಂಸಾರಿಗರು? ಆಲೋಚನೆ ಇಲ್ಲದಲೆ “ತಾವು ನಡೆದುದೇ ಹೆದ್ದಾರಿ! ಎನ್ನುವವರಿಗೆ ಹೇಳುವುದು ಸಾಧ್ಯವಿಲ್ಲ ಶಂಕರಪ್ಪಾ!”

“ನೋಡಿ ಶಾಸ್ತ್ರಿಗಳೇ, ನಾನೇನೋ ನಿರ್ಧಾರ ಮಾಡಿಕೊಂಡಿರುವುದು ಮದುವೆಯಾಗಬಾರದೂ ಎಂದು; ಆದರೆ ಹಲ ಕೆಲವು ಜನರು ಬಂದು ನಿಮ್ಮ ಹಾಗೆ ಹೇಳುತ್ತಾರೆ. ಏನು ಮಾಡುವುದಕ್ಕೂ ತೋಚದ ಹಾಗೆ ಮನಸ್ಸು ಅಂ…ಹ..ರಿ..ದಾ..ಡು..ತ್ತ..ದೆ!”

“ಹರಿದಾಡುವುದಕ್ಕೆ ಶಂಕ್ರಪ್ಪಾ, ನಿರ್ಧಾರಮಾಡಿರಿ! ‘ಶುಭಸ್ಯ ಶೀಘ್ರಂ’ ಅಂತೆ, ನಾಳೆಯ ಸಪ್ತಮೀ ಸೋಮವಾರ ಶುಭಮೂಹೂರ್ತವಿದೆ;ಈ ರಾತ್ರಿಯೇ ಹೊರಡುತ್ತೇನೆ ನಾನು. ಹುಡುಗಿ ನೋಡುವುದಕ್ಕೆ ಲಕ್ಷಣವಾಗಿದ್ದರೆ ಸರಿ, ಬಣ್ಣದಲ್ಲೇನಿದೆ? ‘ಕೆಂಪು ಮೂರು ಡೊಂಕು ಮುಚ್ಚಿತು’ ಎಂದು. ನಾನೆಲ್ಲಾ ನೋಡಿ ಮಾತುಕತೆ ಮುಗಿಸಿಕೊಂಡೇ ಬರುತ್ತೇನೆ; ‘ಕನ್ಯಾಶುಲ್ಕ’ದ ಮಾತು ಒಂದು ವೇಳೆ ಬಂದರೆ ಐದುನೂರಕ್ಕಾದರೂ ‘ಹೂಂ’ ಎಂದು ಬರಲೇನು?”

* * *

ಶಂಕರಪ್ಪನವರು ಮೂರಿಪ್ಪತ್ತು ವರ್ಷಗಳನ್ನು ದಾಟಿ ಮುಗ್ಗಿರಿಸುವುದರಲ್ಲಿದ್ದರು. ಅವರಿಗೆ ಮೊದಲನೆಯ ಹೆಂಡತಿ ಮಹಾಕಾಲಮ್ಮನವರು ತೀರಿದ್ದರು. ಸಂಸಾರವನ್ನೂ, ಶಂಕರಪ್ಪನವರನ್ನೂ ದರ್ಪದಿಂದ ನಡೆಯಿಸಿಕೊಂಡು ಹೋಗುತ್ತಿದ್ದ ದಾಕ್ಷಾಯಣಮ್ಮನವರು ತಮ್ಮ ಹೆಸರಿಗೆ ಹದಿನಾರು ವರ್ಷದ ಚಿ. ಶಿವಕುಮಾರನನ್ನು ಬಿಟ್ಟು, ಕ್ಷಯದ ಕುಂಡದಲ್ಲಿ ಬಿದ್ದು ಭಸ್ಮವಾಗಿ ಹೋಗಿದ್ದರು. ಶಂಕರಪ್ಪನವರು ವಿರಕ್ತಿಯನ್ನು ತಾಳಿ ಗುಡ್ಡಗಾಡನ್ನು ಸೇರದೆ, ತಮ್ಮ ಸ್ವಂತದ ಗಡಿನಾಡಿನಲ್ಲೆ ಇದ್ದು, ಧರ್ಮಕರ್ಮಗಳನ್ನು ನಡಸಿಕೊಂಡು ಹೋಗುತ್ತಿದ್ದರು. ಯಾರಾದರೂ ಮತ್ತೊಂದು ವಿವಾಹದ ವಿಷಯ ಎತ್ತಿದರೆ, ಅರೆಮನಸ್ಸಿನಿಂದ ಹೊರಡುತ್ತಿದ್ದ ಅವರ “ಉತ್ತರವೆಂದರೆ” “ಇನ್ನೇಕೆ ಆ ಮಾತು?” ಎಂದು. ಮಿಸ್ ರಾಮತಿಲಕ (ಸಿನಿಮಾ ಸ್ಟಾರ್) ‘ಸತೀ ಸಾವಿತ್ರಿ’ ಆದ ಹಾಗೆ. ನಿಜವಿಲ್ಲದಿದ್ದರೂ ನಟನೆಗೆ ಮಾತ್ರ ಹೇಳಿ ಜನರ ಮನದ ಗುಟ್ಟನ್ನು ತಿಳಿದುಕೊಳ್ಳುತ್ತಿದ್ದರು. ಧನವಿದ್ದ ಮಹಾರಾಯರಿಗೆ ಮದುವೆ ಬೇಡವೆಂದು ಹೇಳುವ ಮಾನವರು ಯಾರು? ನಾರದರಂತಹ ಮಧ್ಯಸ್ಥಿಕೆಯ ಮಹಾದೇವಶಾಸ್ತ್ರಿಗಳ ಆಗಮನವಾಗಿ ಗಿರಿಜೆಯನ್ನು ಹುಡುಕಿ ತರುವುದಕ್ಕೆ ಟೊಂಕಕಟ್ಟಿದ ಮೇಲೆ, ಶಂಕರಪ್ಪನವರಿಗೆ ಹೊಸ ವಧುವನ್ನು ಕಾಣುವ ಮುದಿವ್ಯಾಮೋಹವು ಹೆಚ್ಚಿ, ‘ಎಷ್ಟಾದರೂ ಎರಡು ಕೈಗಳಿಗೆ ನಾಲ್ಕು ಕೈಗಳಾದರೆ ಆ ಸುಖವೇ ಬೇರೆ!’ ಎಂದುಕೊಂಡು ‘ರಾಮಯ್ಯಾ’ ಸೀತಮ್ಮನನ್ನು ಮದುವೆಯಾಗುತ್ತೀಯಾ?’ ಎಂದರೆ ‘ಹುಂ!ಹುಂ!’ ಎಂದು ತಲೆಹಾಕುವಂತೆ, ಶಂಕರಪ್ಪನವರು ಗಂಗೆ(ಕೌಲೆ)ತ್ತಾದುದೇನು ಆಶ್ಚರ್ಯವಿಲ್ಲ.

ಶಂಕರಪ್ಪನವರ ಮನೆಯ ಮುಂದೆ ಮಂಗಳವಾದ್ಯಗಳು ಮೊಳಗುತ್ತಿವೆ. ವಾದ್ಯಗಳ ಗಲಾಟೆಯೊಳಗೆ ತಪ್ಪೋ-ಒಪ್ಪೋ ಮರೆತ ಮಂತ್ರಗಳ ಸುರಿಮಳೆಯ ಸುರಿಯುತ್ತಿದೆ ಶಾಸ್ತ್ರಿಗಳ ಬಾಯಿಂದ. ಶಾಸ್ತ್ರಿಗಳು ಮಾಡಿಸುವ ಪ್ರಮಾಣಗಳಿಗೆಲ್ಲಾ ತಿಳಿದೋ, ತಿಳಿಯದೆಯೋ(!) ಒಪ್ಪಿಕೊಳ್ಳುತ್ತಿದ್ದಾರೆ ವಧೂವರರು. ಹಸುರುಮಂಟಪದಲ್ಲಿ ಅವರು ಕುಳಿತರು. ‘ಸುಮುಹುರ್ತೇ ಸಾವಧಾನ’ ಸಮೀಪಕ್ಕೆ ಬಂದಿತು. ಸಂಸಾರ ಎಷ್ಟು ಭಾರವಾದರೂ ಸಾಗಿಸಿಕೊಂಡು ಹೋಗಲೇಬೇಕೆಂಬ ಆಜ್ಞೆಯ ಗುದ್ದಿ ಶಂಕರಪ್ಪನವರ ಕೈಯಿಂದ, ದೇವರಿಗೆ ಬಿಟ್ಟ ಕರುವಿನ ಹಾಗೆ ಇದ್ದ ಹದಿನೈದು ವರ್ಷದ ಗಿರಿಜೆಯ ಕೊರಳಿಗೆ ಗುಳದಾಳಿ (ತಾಳಿ)ಯ ರೂಪವಾಗಿ ಬಿದ್ದಿತು. ಬೇಡವಾದ ಭಾರ ಕೊರಳಿಗೆ, ಬಿದ್ದುದಕ್ಕಾಗಿ ಕಣ್ಣುಗಳಿಂದ ನೀರು ಸುರಿಸುತ್ತಿದ್ದಳು ಗಿರಿಜೆ. ಮಾಂಗಲ್ಯಧಾರಣ ಮುಕ್ತಾಯವಾದ ಮೇಲೆ, ಸೂರ್ಯರಶ್ಮಿಯಿಂದ ತುಂಬಿ ನೋಡಲಿಕ್ಕೆ ಬಾರದಂತಹ ಆಕಾಶದಲ್ಲಿ, ಅರುಂಧತಿಯನ್ನು ತೋರಿಸಿ ನೀನು (ಅರುಂಧತಿಯ) ಹಾಗೆಯೇ ಇರಬೇಕೆಂಬ ಅರ್ಥದಿಂದ ಗಿರಿಜೆಗೆ ತಿಳಿ ಹೇಳಿದರು. ಶಾಸ್ತ್ರಿಗಳೇ! ಇಷ್ಟು ಜನರೆದುರಿಗೆ ನೀವೇ ಇಷ್ಟು ಸುಳ್ಳಾಡಿದ ಮೇಲೆ ನನ್ನ ನಡತೆಯಲ್ಲಿಯೂ ಸುಳ್ಳಾದರೆ ತಪ್ಪೇನು?” ಎಂದಂದುಕೊಂಡಿರಬಹುದು ಗಿರಿಜೆ ಮನದೊಳಗೆ. ವಧೂ-ವರರನ್ನು ಮುತ್ತೈದೆಯರಿಗೊಪ್ಪಿಸಿಕೊಟ್ಟು ತಮಗೆ ಬರುವ ಅಕ್ಕಿ, ಕೊಬ್ಬರಿ, ದಕ್ಷಿಣೆ ಮೊದಲಾದುವನ್ನು ಮೂಟೆಕಟ್ಟಿಕೊಂಡು ಹೋಗುವಾಗ “ಶತಸಂವತ್ಸರಂ ದೀರ್ಘಮಾಯಃ” ಎಂದು ವಧೂವರರನ್ನು ಆಶೀರ್ವದಿಸಿ ಹೊರಟು ಹೋದರು ಶಾಸ್ತ್ರಿಗಳು. ಇಂತಹ ಶಾಸ್ತ್ರಿಗಳ ಆಶೀರ್ವಾದದ ಪ್ರಭಾವವನ್ನು ಪಡೆದುಕೊಂಡ ವಧೂವರರೆಷ್ಟು ಜನರು ಎನ್ನುವುದೇ ಸಂಶಯ. ಹದಿನಾರನೆಯ ದಿನದ ನಾಗೋಲಿ ಆಗುವ ಮುಂಚಿತವಾಗಿಯೇ ‘ನಾನು ನಿನ್ನವನೆ ಶಿವಶಿವ!’ ಎಂದು ನಾಲಗೆನಾಚಿ ನೀರ ಬಿಡಿಸಕೊಂಡು ಸಾಯುವ ಮುದುಕನಿಗೂ ಅದೇ ಆಶೀರ್ವಾದವನ್ನೇ ಮಾಡುವುದು. ಆಶೀರ್ವಾದವೆಂದರೆ ಅದರಲ್ಲಿ ಸ್ವಲ್ಪ ಮಟ್ಟಿಗಾದರೂ ನಿಜವಿರಬೇಕು! ದಕ್ಷಿಣೆಯ ಆಶೆಗೆ ಮಾಡಿದ ಆಶೀರ್ವಾದವು ಅಶುಭವಾದೀತೇ ಹೊರತು ಆಶೀರ್ವಾದವಾಗಬಹುದೇ? ಅರ್ಧಶತವರ್ಷಗಳನ್ನು ಕಳೆದ ಶಂಕರಪ್ಪನವರು ಹದಿನೈದು ವರ್ಷದ ಗಿರಿಜೆಯ ಕೂಡ ಶತವರ್ಷ ಬಾಳುವುದು ಹೇಗೆ? ಯಾತ್ರೆಗೆ ಮುಂಚಿತವಾಗಿಯೇ ಟಿಕೀಟು ತೆಗೆದುಕೊಳ್ಳುವವರು ಶಂಕರಪ್ಪನವರೇ ಎಂದು ಅದರ ಅರ್ಥ ಮೇಲೆಯೆ ಇದೆ. ಅಂತು ಇಂತು ಗಿರಿಜಮ್ಮನವರಿಗೇನೋ ತಪ್ಪಿದ್ದಲ್ಲ… ಅಥವಾ ಆಶೀರ್ವಾದದ ಪ್ರಭಾವ! ‘ಇದೆಲ್ಲಾ ಹೀಗಿದ್ದರೂ ನೀವು ಹಾಗೆ ಹೇಳಿದಿರಲ್ಲಾ ಶಾಸ್ತ್ರಿಗಳೇ?’ ಎಂದು ಯಾರಾದರೂ ಕೇಳಿದರೆ, ‘ಅಯ್ಯೋ ತಲೆಹೋಕ! ಹಾಗೆ ಹೇಳುವುದೇ ನಮ್ಮ ಧರ್ಮ; ಯಾರಿದ್ದರೇನು, ಈ ಹೊತ್ತೇ ಯಾರು… ನಮಗೇನು? ಬಿದ್ದಿದೆ ಹಾಗೆ ಹೇಳುವ ರೂಢಿ; ಹೇಳಲೇ ಬೇಕು!’ ಎನ್ನುವವರೇ ಶಾಸ್ತ್ರಿಗಳು. ಆದಿಶಕ್ತಿಗಿಂತಲೂ ಮೊದಲು ಅವತಾರ ತಾಳಿದ ರೂಢಿಗೆ ರುಮಾಲು ಇಡುವವರೇ ಪ್ರತಿಯೊಬ್ಬರು. ಮುಂದುವರಿದ ರಾಷ್ಟ್ರಗಳ ಮುಂದಾಳುಗಳೇ ಅದಕ್ಕೆ ಮುಂಡಾಸ ಸುತ್ತುತ್ತಿರುವಾಗ, ನಮ್ಮ ಬಡಶಾಸ್ತ್ರಿಗಳ ಕೈಯಿಂದ ಆದೀತೇ ಅದರ ಮೇಲೆ ಸುಣ್ಣ ನೀರು ಸುರಿಯುವುದು? ಪಾಪ! ಅವರೂ ಒಂದು ಮುಂಡಾಸ ಸುತ್ತುವವರೇ ಅದಕ್ಕೆ!

ಮದುಮಕ್ಕಳನ್ನು ಮಧ್ಯದಲ್ಲಿಯೆ ಬಿಟ್ಟು ಆಡಬಾರದ ಅವಲಕ್ಷಣದ ಮಾತುಗಳನ್ನು ಮದುವೆಯ ಮನೆಯಲ್ಲಿ ಆಡಿದುದಕ್ಕಾಗಿ ಕ್ಷಮಿಸಿ! ಸಿಟ್ಟು ಬಂದರೆ ಶಿಕ್ಷಿಸಿ! ಮುತ್ತೈದೆಯರು ಉರುಟಣಿ, ಉಡುಗೊರೆ ಜರುಗಿಸುತ್ತಿದ್ದರು. ಅಲ್ಲಿಯೆ ಮುಂದೆ ಕುಳಿತು ನೋಡುತ್ತಿದ್ದ ನಾಲ್ಕು ವರ್ಷದ ಮಗು, ಇದ್ದಕ್ಕಿದ್ದ ಹಾಗೆ ಅಂಜಿ ಅಳುತ್ತಾ ತನ್ನ ತಾಯಿಯ ಕಡೆ ಹೋಯಿತು. ತಾಯಿ ‘ಏನು ಮಗು, ಅಳುವುದೇಕೆ?’ ಎಂದು ಎತ್ತಿ ಮುದ್ದಿಸುತ್ತಾ ಕೇಳಿದ್ದಕ್ಕೆ “ಅಲ್ಲೆ(ಹಸೆಯ ಮೇಲೆ) ಕೂತ ತಾತ ಅಂಜಿಸಿದರು!” ಎಂದು ಹೇಳುತ್ತಾ ಹಲ್ಲು ತುಟಿಯ ಮೇಲೆ ತಂದು ತೋರಿಸಿತು ಮಗು. “ಅಂಜಿಸಿಲ್ಲಪ್ಪಾ! ಕಟ್ಟಿಸಿಕೊಂಡ ಹಲ್ಲುಗಳು ಅವು ಹಾಗೆಯೇ; ಆಕಳಿಸಿದರೆ ಸರಿದಿರಬಹುದು” ಎಂದು ಮುಸುಕು ಮರೆಮಾಡಿ ಮಗುವಿಗೆ ತಿಳಿಹೇಳಿ, ಮನಿಸನಲ್ಲೇ ನಕ್ಕರು ನಾಗಮ್ಮನವರು. “ಏನು ಹುಡುಗರೇ ತಾಯಿ! ಇಲ್ಲದ ಪ್ರಶ್ನೆ ಕೇಳಿ ಇದ್ದುದನ್ನೆಲ್ಲ ಹೊರಗೆಡಹುತ್ತವೆ ನೋಡು, ಈ ಹುಡುಗರು!” ಎಂದರು ಪಕ್ಕದಲ್ಲೇ ಕುಳಿತ ಪಾರ್ವತಮ್ಮನವರು. ಅವರಿಬ್ಬರ ಅಣಕದ ಮಾತಿಗಾಗಿ ಉದರಲ್ಲೇ ಉರಿಯನ್ನಡಗಿಸಿಕೊಂಡು, “ಪೂರ್ವದಲ್ಲೆಲ್ಲಾ ಗಂಡನ ಎಪ್ಪತ್ತನೆಯ ವರ್ಷ ಮುಗಿದರೆ, ಹೆಂಡತಿಯ ಇಪ್ಪತ್ತನೆಯ ವರ್ಷ ಮುಗಿಯುತ್ತಿತ್ತಂತೆ; ಎರಡು ಮಕ್ಕಳ ತಾಯಿಯಾದಳೆಂದರೆ ಅರ್ಧ ಮುದಿತನವೇ ಆಳುತ್ತದೆ ಹೆಣ್ಣನ್ನು!” ಎಂದರು ಮುದಿ ಅಳಿಯಂದಿರಿದ್ದ ಅತ್ತೆಯರ ಗುಂಪಿಗೆ ಸೇರಿದ ಸಾವಿತ್ರಮ್ಮನವರು. “ಹಡೆಯದ ಮಕ್ಕಳು, ದುಡಿಯದ ಬಂಗಾರ ಯಾರಿಗುಂಟು ಯಾರಿಗಿಲ್ಲ? ಅದಕ್ಕೂ ಹಿಂದಿನ ಪುಣ್ಯಬೇಕು!” ಎಂದರು ಬಡತನದಲ್ಲಿಯೇ ಬಂಜೆತನವನ್ನು ಅನುಭವಿಸಿದ ಭವಾನಮ್ಮನವರು. ಜನರಿಗೇನೋ ಅಪಹಾಸ್ಯ, ಗಿರಿಜೆಯ ಜನ್ಮಕ್ಕೇನೋ ಅಮಾವಾಸ್ಯ. ಯಾರು ಹೇಗಾಡಿಕೊಂಡರೇನು, ಬಿಟ್ಟರೇನು, ನಿಲುವಂಗಿಯ ಶಂಕರಪ್ಪವರ ಅರ್ಧಾಂಗಿಯಾಗಿ ಹೋದಳು ಗಿರಿಜೆ!

* * *

ಗಿರಿಜೆ ಮನೆಗೆ ಬಂದು ಕೆಲವು ತಿಂಗಳುಗಳಾದುವು. ಶಂಕರಪ್ಪನವರಿಗೆ ಗಿರಿಜೆಯ ಮನದ ಗುಟ್ಟೇ ತಿಳಿಯಲಿಲ್ಲ. ಅವರು ಹಿತ್ತಿಲುಬಾಗಿಲಿಗೆ ಹೋದರೆ ಇವಳು ತಲೆಬಾಗಿಲಿಗೆ ಬರುತ್ತಿದ್ದಳು; ಅವರು ತಲೆಬಾಗಿಲಿಗೆ ಬಂದರೆ, ಇವಳು ಹಿತ್ತಿಲು ಬಾಗಿಲಿಗೆ ಹೋಗುತ್ತಿದ್ದಳು. ಸೂರ್ಯ ಪಶ್ಚಿಮಾಂಬುಧಿಗೆ ಇಳಿಯುತ್ತಲೆ ಗಿರಿಜೆ ಶಯನಾಂಬುಧಿ ಸೇರುತ್ತಿದ್ದಳು. ತಲೆಶೂಲೆ, ಉದರಶೂಲೆ, ಜ್ವರ, ಯಾವುದಾದರೂ ಕಾಯಿಲೆಯ ನೆಪ ಕಾದಿರುತ್ತಿದ್ದಿತು. ಅವಳನ್ನು “ಏನು, ಏಕೆ ಮಲಗಿದ್ದೀಯಾ?”ಎಂದು ಕೇಳಿ ತಿಳಿದುಕೊಳ್ಳಬೇಕೆಂಬ ಕುತೂಹಲ ಶಂಕರಪ್ಪನವರಿಗೆ; ಆದರೆ ಮಲಗಿದ ಕೋಣೆಯೊಳಗೆ ಹೋಗುವ ಧೈರ್ಯವಿರಲಿಲ್ಲ. ಧೈರ್ಯವಿರಲಿಲ್ಲವೆಂದಲ್ಲ, ಕೈ ಹಿಡಿದ ಹೆಂಡತಿಯ ಕೋಣೆಗೆ ಹೋಗುವುದಕ್ಕೆ ಯಾರ ಅಪ್ಪಣೆಯಾದರೂ ಬೇಕೇ ಎಲ್ಲಾದರೂ? ಗಂಡ ಹೆಂಡತೀನ ಬಡಿದರೆ ಗೌಡ ಯಾರು ಕೇಳಲಿಕ್ಕೆ? ಎನ್ನುವ ಮಾತೇನೋ ನಿಜ! ಆದರೆ ಹೋದ ಮೇಲೆ ಆಗುತ್ತಿದ್ದ ಮನಸ್ಸಿನ ಅಸಮಾಧಾನಕ್ಕೆ ಅಂಜುತ್ತಿದ್ದರು ಅವರು. ಪ್ರಭಾತದವರ ‘ದುನಿಯಾನ ಮಾನೇ’ ನೆನಪಿಗೆ ಬಂದು ಮನಸ್ಸು ಅಲ್ಲೋಲಕಲ್ಲೋಲವಾಗಿ “ಒಂದು ವೇಳೆ ಅದನ್ನು ಈ ಹುಡುಗಿ ನೋರಿಬಹುದೇ? ನೋಡಿದ್ದರೆ ಹೇಗೆ?” ಎನ್ನು ಪ್ರಶ್ನೆಯು, ಭೇತಾಳನ ರೂಪದಿಂದ ಬಾಯಿತೆರೆದು ನಿಂತಂತೆ ಕಾಣುತ್ತಿದ್ದಿತು ಅವರಿಗೆ. ಮತ್ತೆ ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದರು. “ಹಳ್ಳಿಗಾಡಿನಲ್ಲಿ ನೋಡುವುದಾದರೆ ಹೇಗೆ? ನೋಡಿರಲಿಕ್ಕಿಲ್ಲ! ಸಣ್ಣ ವಯಸ್ಸು, ತಾಯಿಯ ಸಲುಗೆಯಿಂದ ಬೆಳಸಿದ ಮಂಕು ಇನ್ನೂ ಹೋಗಿಲ್ಲ! ಹೇಗಾದರೂ ಆಗಲಿ, ಮನೆಗೇನೋ ಬಂದಿರುವಳಲ್ಲಾ! ಇನ್ನೂ ಕೆಲವು ದಿನಗಳು ಹೋಗಲಿ! ಸಲಿಗೆಕೊಟ್ಟು ನೋಡಿ ಆಯಿತು; ಇನ್ನು ಶಿಕ್ಷಿಸಿ ಎಷ್ಟೋ ಹೆಣ್ಣುಗಳನ್ನು ಪಳಗಿಸಿದ ನನಗೆ, ಈ ಹುಡುಗಿಯು ಎದುರಾಗಿದೆ ಎಂದು ಜನರಿಗೆ ತಿಳಿದರೆ ಅಪಹಾಸ್ಯಕ್ಕೆ ಗುರಿಯಾದೇನಲ್ಲಾ! ಹೇಗಾದರೂ ಇದ್ದುಕೊಳ್ಳಲಿ, ಇರುತ್ತಾ ತನಗೆ ತಾನೇ ತಿಳಿದುಕೊಂಡಾಳು!” ಎಂದೆಂದುಕೊಂಡು ಸಂಸಾರವನ್ನು ಸಾರವಿಲ್ಲದೆ ಸಾಗಿಸಿಕೊಂಡು, ದಿನಕ್ಕೆ ದಿನ ಸಮಾಧಾನ ಹೊಂದುತ್ತಿದ್ದರು ಶಂಕರಪ್ಪನವರು.

“ನಿದ್ದಂಡಿ ಮುದುಕಂಗೆ| ಮುದ್ದು ಹೆಂಡತಿ ಯಾಕೆ | ಗದ್ದೆಯಾ ಹಸುರು ತಿನ ಹೋಗಿ ಮುದಿಕೋಣ | ಬಿದ್ದು ಸತ್ತಂತೆ ಸರ್ವಜ್ಞ” ಎಂಬ ಸರ್ವಜ್ಞ ಕವಿಯ ವಚನಕ್ಕೆ ಸರಿಯಾಗಿಯೆ ಹೋಲುತ್ತಿದ್ದಿತು ಅವರ ಬಾಳುವೆ.

* * *

ಗಿರಿಜೆಯನ್ನು ಬೀಳ್ಕೊಡುವಾಗ ತಾಯಿ ಹೇಳಿದ ಸಮಾಧಾನದ ಮಾತೆಂದರೆ-

ಗದ್ದೆ ತೋಟಗಳುಂಟು | ಉದ್ಯೋಗ ಮೊದಲುಂಟು | ಭದ್ರದಲಿ ದ್ರವ್ಯ ಉಂಟೇ | ಅಮ್ಮಾ | ಕೊಟ್ಟರೇನೇ ಮುದುಕಗೆ || ತಾಳೆವೊಲೆ ಬ್ಯಾಳಿಮಣಿಸಾಕೇ | ಅಮ್ಮಾ | ಬಹಳ ಪ್ರಾಯದ ಗಂಡ ಬೇಕೇ | ನಿನ್ನ | ಕೊಟ್ಟರೇನು ಮುದುಕಗೆ ||

ಈ ಹಳೆಯ ಹಾಡಿನಲ್ಲಿ ಅಡಗಿರುವ ಅರ್ಥವೇ ಮಗಳಿಗೆ ಹೇಳಿದ ತಾಯಿಯ ಸಮಾಧಾನದ ನೀತಿ. ತಾಯಿಯ ನೀತಿಗೆ ಬೆಂಬಲವಾಗಿ ಮಹತ್ತ್ವದ ಮಾತನ್ನೇ ಹೇಳಿದ್ದರು ತಂದೆಯವರು. “ಕೊಟ್ಟ ಮನೆಗೂ ಹುಟ್ಟಿದ ಮನೆಗೂ ಕೀರ್ತಿತರ ಬೇಕಮ್ಮಾ ಹೆಣ್ಣಾಗಿ ಹುಟ್ಟಿದ ಮೇಲೆ. ಜನರೇನು, ಹೇಗಿದ್ದರೂ ಅಂದುಕೊಳ್ಳುವವರೇ; ಸಣ್ಣ ವಯಸ್ಸಿನ ಪೋಲಿ ಗಂಡನಾಗುವುದಕ್ಕಿಂತಲೂ ಅನುಭವಸ್ಥ ಗಂಡನಾಗುವುದೆ ಉತ್ತಮ! ನಿನ್ನ ಹಿತಕ್ಕಾಗಿಯೇ ಹೆಣಗುವವರು ನಾವು, ಅಷ್ಟು ಆಲೋಚನೆ ಇಲ್ಲದಲೆ ಮಾಡೇವೇನು? ನಾವು ಮಾಡಿರುವೆವೆಂಬುದು ತೋರಿಕೆಗೆ ಮಾತ್ರ; ಎಲ್ಲಾ ನಿನ್ನ ಅದೃಷ್ಟ! ಅದನ್ನು ತಪ್ಪಿಸಲಿಕ್ಕೆ ಯಾರಿಗೆ ಸಾಧ್ಯ ನೀನೆ ಹೇಳು! ‘ಪಾಲಿಗೆ ಬಂದದ್ದು ಪಂಚಾಮೃತ’! ಹೇಗಿದ್ದರೂ ಅವರು ನಿನಗೆ ದೈವಸಮಾನರು. ಅವರು ಏನು ಹೇಳಿದರೂ ‘ಚಾಚು’ ತಪ್ಪದೆ ಪ್ರೀತಿ-ಶ್ರದ್ಧೆಗಳಿಂದ ನಡೆಯಿಸಿಕೊಂಡು ಹೋಗುವುದೇ ನಿನಗೆ ಶುಭ, ನಮಗೆ ಕೀರ್ತಿ” ಹೀಗೆಯೆ ಇನ್ನೂ ಕೆಲವು ನೀತಿಗಳನ್ನು ಗಿರಿಜೆಗೆ ತಿಳಿ ಹೇಳಿ ಕಳುಹಿಸಿದ್ದರು. ತಮ್ಮ ತಪ್ಪಿನ ಮಬ್ಬಿಗೆ ಅವಳ ದೈವದ ಟಾರ್ಚನ್ನು ಬಿಡಿಸಿ, ತಾವೇನೋ ಬೆಳಕಿಗೆ ಬಿದ್ದು, ಅವಳನ್ನು ಮಬ್ಬಿಗೆ ತಳ್ಳಿದರು ಅವಳ ಮಾತಾಪಿತೃಗಳು. ಗಿರಿಜೆಯ ಹಿಡಿತಕ್ಕೆ ಸಿಲುಕದ ಹಾಗೆ ಹಿಡಿಯಲಿಕ್ಕೆ ಹೋದಷ್ಟು ಕಿವಿಗೆ ಗಾಳಿಗೆ ಹೊಕ್ಕ ಎಳೆಗರುವಿನ ಹಾಗೆ ಜಿಗಿಯುತ್ತಿದ್ದಿತು ಅವಳ ಮನಸ್ಸು. ನೋಡಬೇಕೆಂಬ ಸಾಹಸದಿಂದ ಬಾಗಿಲ ಮರೆಯಲ್ಲಿ ನಿಂತು ನೋಡುತ್ತಲೆ ಆ ನೆರೆಯ ಕೂದಲು, ಸುಕ್ಕಿದ ಮುಖ, ಸಂಸಾರದ ಸುಖ-ದುಃಖಗಳಿಗೆ ಸವೆದ ಸೊಣಕಲು ಮೈಕಟ್ಟು, ಮುಪ್ಪಿಗೆ ಸ್ನೇಹವಾದ ಉಬ್ಬಸ, ಆ ಉಬ್ಬಸಕ್ಕೆ ತಡಿಯಲಾರದೆ ಹಾರುತ್ತಿರುವ ಪಕ್ಕೆ ಇದೆಲ್ಲಾ ಒಂದೇ ಸಾರಿ ಪ್ರತ್ಯಕ್ಷವಾಗುತ್ತಲೆ ಮನಸ್ಸು ವ್ಯಥೆಗೊಂಡು, ತಡೆಯಲಾರದ ದುಃಖ ತಾಳ್ಮೆಗೆ ಬರುವವರೆಗೂ ಕಂಬನಿಗರೆಯುತ್ತಿದ್ದಳು ಗಿರಿಜೆ. ಅಕ್ಕಪಕ್ಕದ ಬಡ ಸಂಸಾರಿಗಳು ಬೀಸುವಾಗ ಹೇಳುತ್ತಿದ್ದೆ:

“ಚಂದರಾಮಗ ಚುಕ್ಕಿ ಇಂಬಾಗಿ ಇರಬೇಕು | ರಂಬೀಗೆ ಪುರುಷ ವರನಾಗಿ | ರಂಬೀಗೆ ಪುರುಷ ವರನಾಗಿ ಇದ್ದsರ ಬಂಗಾರವೇನು ಸುಡಬೇಕು?”

ಎಂಬ ಹಾಡು ಆಗಾಗ ಕೇಳಿಸುತ್ತಿದ್ದಿತು ಗಿರಿಜೆಗೆ. ‘ತಾನೂ ಸಮವರವುಳ್ಳ ಬಡ ಸಂಸಾರಿಯಾಗಿದ್ದರೆ?” ಎನ್ನುವ ಪ್ರಶ್ನೆಯು ತಾಂಡವವಾಡುತ್ತಿದ್ದತು ಅವಳ ಮುಂದೆ. “ಹೇಗಿದ್ದರೂ ಅವರು ನಿನಗೆ ದೈವದ ಸಮಾನರು” ಎಂದು ತಂದೆ ಹೇಳಿದ ನೀತಿಯನ್ನು ನೆನಪಿಸಿಕೊಂಡು ಎಚ್ಚರುಗೊಳ್ಳುತ್ತಿದ್ದಳು ಅವಳು. “ದೇವನನ್ನು ಶ್ರದ್ಧೆಯಿಂದ ಪೂಜಿಸು (ಉಪಚರಿಸು) ವೆನಲ್ಲದೆ, ಪ್ರೇಮಿಸಲಾರೆ! ತನಗಾಗಿ ಬಂದವರಿಗೆಲ್ಲಾ ಪ್ರೇಮವನ್ನು ಹರಿದು ಹಂಚಿ, ವಿಚ್ಛಿನ್ನವಾಗಿ ಪತನ ಹೊಂದಿದ ಪ್ರೇಮಕ್ಕೆ ತನ್ನ ಪವಿತ್ರವಾದ ಪ್ರೇಮವನ್ನು ಕೊಟ್ಟು ಎಂದೂ ಅಪವಿತ್ರ ಕೊಳ್ಳಲಾರೆ! ದೇವನಿಗೆ ದ್ರೋಹ ಮಾಡುವುದು ಪಾಪಕ್ಕೆ ಸೋಪಾನವೇ ಹೊರತು ಪ್ರೇಮಿಸದೆ ಹೋದರೆ ಪಾಪವಿಲ್ಲ” ಎಂದು ನಿರ್ಧಾರ ಮಾಡಿ, ಹೇಗೋ ತನ್ನ ಹದಿನೈದು ವರ್ಷದ ಬಾಳನ್ನು ತಂದುಕೊಂಡು, ಬಲವಂತದಿಂದ ಬರುವ ದಿನಗಳನ್ನು ಬೇಸರದಿಂದ ತಳ್ಳುತ್ತಿದ್ದಳು ಗಿರಿಜೆ.

* * *

ಯುಗಾದಿಯ ಹಬ್ಬಕ್ಕೆ ಭವಿಷ್ಯ ಹೇಳುವ ಕೇಳುವ ರೂಢಿ ಇದೆಯಲ್ಲಾ ನಮ್ಮಲ್ಲಿ; ಎಂತಲೇ ಶಾಸ್ತ್ರಿಗಳ ಸವಾರಿಯೂ ಬಂದಿತು ಶಂಕರಪ್ಪನವರ ಮನೆಗೆ. ಭವಿಷ್ಯ ಹೇಳುವುದಕ್ಕೆ ಪ್ರಾರಂಭಿಸಿದರು ಶಾಸ್ತ್ರೀಗಳು. “ಶಂಕರಪ್ಪಾ, ನಿಮಗೆ ಮೂರನೆಯ ಶನಿ ಗಿರಿಜಮ್ಮನವರಿಗೆ ಎರಡನೆಯ ಗುರುವು ಕೇಳುವುದೇನಿದೆ! ‘ಸುಪುತ್ರವತೀಭವ’ ಆಗಲೇಬೇಕು ಈ ವರ್ಷ ಗಿರಿಜಮ್ಮನವರು. ಶಂಕರ-ಗಿರಿಜೆಯರ ಕಲ್ಯಾಣದ ಕುರುಹನ್ನು ಎಂದರೆ ಕುಮಾರಸ್ವಾಮಿಯನ್ನು ನೋಡಬೇಡವೇ ಇಷ್ಟೆಲ್ಲಾ ಮಾಡಿದ ನಾನು!” ಎಂದು ಉತ್ಸಾಹದ ಮೇಲ್ನಗೆ ನಕ್ಕು ಹೇಳಿದರು ಶಾಸ್ತ್ರಿಗಳು. “ಎರಡನೆಯ ಗುರುವೇಕೆ! ನನ್ನ, ನಿನ್ನ ಮತ್ತು ಅವರ (ಶಂಕರಪ್ಪನವರ)ಗುರುವು ಬಂದು ಹೇಳಿದರೂ ಈ ವರ್ಷ ಒಂದೇ ಅಲ್ಲ. ಇನ್ನೂ ಹತ್ತು ವರ್ಷ… ಮರೆತೆ! ಆ ಜನ್ಮ ಪುತ್ರವತಿಯಾಗಲಾರೆ!” ಎಂಬ ನಿರ್ಧಾರದ ನಗು ನಕ್ಕಳು ಗಿರಿಜೆ ಮನದೊಳಗೆ. ಅವರ ಭವಿಷ್ಯ ಪೂರ್ತಿಯಾಗಬಹುದೇ ನೀವೇ ಹೇಳಿ! ‘ಯಾರೀಗೆ ಯಾರಿಲ್ಲ ಜೀವವೆ’ ಎಂದು ಸಂ…ವಿಲ್ಲದ ಸಂಸಾರವನ್ನು ನಡೆಯಿಸಿಕೊಳ್ಳುತ್ತಿದ್ದ ಅವರ ಮನದ ಪಿಶಾಚಿಯು, ಅವರಿಗೆ ಸುಪುತ್ರನನ್ನು ಕಾಣಿಸುವುದೆಂದರೇನು? ಹೀಗೂ ಉಂಟೇ?

– ಶ್ರೀಮತಿ ಟಿ. ವಿ. ಸರ್ವಮಂಗಳಾಂಬಾ
ಜಯಂತಿ, ಸಂಪುಟ ೯, ಸಂಚಿಕ ೧, ೧೯೪೦