ಒಂದನೂ ಅರಿಯದೆಯೆ ಮರುಗಿದಳು ಬಾಲೆ
ಕಂಬನಿಗಳುದುರುತಿರೆ ಹಲುಬಿದಳು ಲೋಲೆ;
ಪತಿಯೆಂದರೇನೆಂದು ತಿಳಿಯಲಾರಳು ಅವಳು,
‘ಏನಮಾಳ್ಪರೋ’ ಎಂದು ವ್ಯಥೆಯಪಡುತಿಹಳು;
“ನನ್ನ ನೋಡುತ ಎಲ್ಲರೂ ಮನದಿ ದುಃಖಪರು;
ಕಣ್ಣೀರ ಸುರಿಸುತ್ತ ನಿಟ್ಟುಸಿರ ಸೂಸುವರು;
ಪತಿಯೆ? ಅವನಾರಮ್ಮ? ಯಾರವನು ನನಗರುಹ…!
ಅವ ಸತ್ತರೇಕಿಂತು ನನ್ನ ಪಿಡಿಸುತಿರುವೆ?
ಅಯ್ಯೊ! ಬಳೆ ಕಳಚುವರು! ಅಮ್ಮ, ನೀ ನೋಡೆ!

ಕಿವಿಯೋಲೆ ಬಿಚ್ಚುವರು ಬೇಡೆಂದು ಹೇಳೆ!
ಸತ್ತವನಿಗೇಕಮ್ಮ ಬಳೆಗಳೀ ಒಡವೆಗಳು?
ಧರಿಸಿರಲು ನಾನವನು ಹೊಟ್ಟೆಯುರಿ ಅವಗೇನು?
ಎಲ್ಲವೂ ನನಗೆಂದು ಅಂದೆ ನೀನೆನಗಿತ್ತೆ;

ಆದರೂ ಏಕಮ್ಮ ಇಂದವುಗಳನು ಕಿತ್ತೆ?”
ಒಂದನೂ ಅರಿಯದೆಯೆ ಮರುಗಿದಳು ಬಾಲೆ!
ಕಂಬನಿಗಳುದುರುತಿರೆ ಹಲುಬಿದಳು ಲೋಲೆ!
ಎದೆಯ ಸಂಕಟ ಹೆಚ್ಚಿ ಮನಕದನು ತಂದು,
ದುಮ್ಮಾನದಲಿ ಬೆಂದು ಕಡುನೊಂದು ನಿಂದು;
“ಅಯ್ಯೋ! ಮುಡಿದಿಹ ಹೂವ ಕೀಳುವರು ಅಮ್ಮಾ!
ಏಕಿಂತು ಮಾಡುವರೊ ಹೇಳೆನಗೆ ಅಮ್ಮಾ?
ಮಲ್ಲಿಗೆಯ ಮೊಗ್ಗುಗಳು ಗಿಡದೊಳಗೆ ತುಂಬಿರಲು
ನನ್ನ ತುರುಬಿನ ಮೊಗ್ಗನೇಕಿಂತು ಕೀಳುವರು?
ಏನೇನೊ ಮಾಡುವರು; ಸಹಿಸಲಾರೆನು ಅಯ್ಯೊ!
ಅಮ್ಮ! ನೀನೇಕಿದನು ತಡೆಯದಂತಿರುವೆಯೇ?”
ದಿನವೆಲ್ಲ ಅಳುತಳುತ ಮರುಗಿದಳು ಬಾಲೆ!
ಕಣ್ಣೀರ ಸುರಿಸುತ್ತ ಹಲುಬಿದಳು ಲೋಲೆ!

* * *

– ಶ್ರೀಮತಿ ಬಿ. ವಿ. ಜಯಮ್ಮ
ಜಯಂತಿ, ಸಂಪುಟ ೧, ಸಂಚಿಕೆ ೪, ೧೪೩೮