ಹಾ! ಎನ್ನ ಮನದನ್ನ ಏನಿದೀ ದುರ್ವಾರ್ತೆ!
ಸಿಡಿಲಿನಂದದಿ ಬಡಿದು ಕೆಡಹಿತೀ ಸತಿಯನ್ನು
ಒಡಲು ಬೆಂದಿಹುದಿಂದು ಮನವು ಕುಂದಿಹುದೀಗ,
ಅಂತರಾಳದ ವೆತೆಯನಿನ್ನೆಂತು ಒರೆಯುವೆನು!

ವೈರಿಗಣವೊಡ್ಡಿದಾ ಚಕ್ರವ್ಯೂಹದ ಬಲೆಯ
ತರಿದೊಗೆದು ಬರುವೆ ನಾ ಎಂದೆನುತೆ ತೆರಳಿ ನೀ
ಮರಳಲಾಗದ ತೆರದ ಕಪಟಜಾಲಕೆ ಸಿಲ್ಕಿ
ಅರಿಗಳಾ ನಡುವನಲಿ ಅಸುವ ನೀಗಿದೆಯಲ್ತೆ!

ಎನ್ನಬಾಳಿನ ರವಿಯೆ, ಎನ್ನ ಕಂಗಳ ಬೆಳಕೆ,
ಇನ್ನು ಮುಂದೆಂದು ಮೂಡದವೋಲು ಮುಳುಗಿದೆಯ!
ಎನ್ನ ನೋಡದ ತೆರದಿ ಕಣ್ಮರೆಯ ಸೇರಿದೆಯ!
ಮುನ್ನ ನುಡಿ ನುಡಿಯದಲೆ ನೆಲದಿ ನೀನೊರಗಿದೆಯ!

ಹೆತ್ತವರ, ಒಡಹುಟ್ಟು, ಬಂಧುಬಳಗವನೆಲ್ಲ
ಅತ್ತ ನಾ ತೊರೆದೊಡೆಯು ನಿನಗಂದು ವಧುವಾಗಿ
ಸತತ ನೀ, ನಾನವರನಗಲಿದಾ ಉರುತರದ
ವೆತೆಗಳಂ ಮರೆವಂಥ ಒಲವನ್ನು ಎನಗಿತ್ತೆ.

ಎನ್ನಬಾಳಿನ ರವಿಯೆ, ಎನ್ನ ಕಂಗಳ ಬೆಳಕೆ,
ಇನ್ನು ಮುಂದೆಂದು ಮೂಡದವೋಲು ಮುಳುಗಿದೆಯ!
ಎನ್ನ ನೋಡದ ತೆರದಿ ಕಣ್ಮರೆಯ ಸೇರಿದೆಯ!
ಮುನ್ನ ನುಡಿ ನುಡಿಯದಲೆ ನೆಲದಿ ನೀನೊರಗಿದೆಯ!

ಹೆತ್ತವರ, ಒಡಹುಟ್ಟು, ಬಂಧುಬಳಗವನೆಲ್ಲ
ಅತ್ತ ನಾ ತೊರೆದೊಡೆಯು ನಿನಗಂದು ವಧುವಾಗಿ
ಸತತ ನೀ, ನಾನವರನಗಲಿದಾ ಉರುತರದ
ವೆತೆಗಳಂ ಮರೆವಂಥ ಒಲವನ್ನು ಎನಗಿತ್ತೆ.

ಎಮ್ಮ ಒಲವಿನ ಫಲವು ಮೂಡಿ ಅರಳುವ ಮೊದಲೆ
ಎಮ್ಮ ಬಾಳಿನ ಕನಸು ನನಸೆನಿಸುತಿಹ ಮೊದಲೆ,
ಎಮ್ಮ ಹಡೆದವರೆಮ್ಮ ನೋಡಿ ನಲಿಯುವ ಮೊದಲೆ,
ಎಮ್ಮ ನೀ ಸೇರದೊಲು ಯಮನೂರ ಸಾರಿದೆಯ!

ಪೂರ್ವ ಜನ್ಮದ ಆವ ಪಾಪಕರ್ಮದ ಫಲದಿ
ಭಾವನೆಗೆ ನಿಲುಕದಿಹ ಬರಿದಾದ ಬಾಳನನು
ಭವಿಸಲಿಹುದೋ! ಮೇಣು ಅಳಲ ಸಹಿಸಲಿಹುದೋ!
ಜೀವವನು ತೊರೆವೆ ನಾನಿನ್ನೇಕೆ ನೀನಿರದೆ!!

“ಕುರುಕುಲದ ಹೆಮ್ಮರದ ಹಿರಿಯ ಕೊಂಬೆಗಳೆಲ್ಲ
ಕುರುಕ್ಷೇತ್ರದೀ ರಣದಿ ಫಲಗಳನು ಕಳೆದುಳಿದು
ಬರಿದಾಗಿ ನಿಂದಿಹವು, ಹಿರಿಯಾಸೆ ಕಳೆದಿಹವು,
ತರಳೆ ನಿನ್ನನ್ನೆ ನೆರೆನಂಬಿ ನೋಡುತಲಿಹೆವು;

“ವೀರಸತಿ ನೀನಹುದು ಧೈರ್ಯವನು ತಾಳೆ”ನುತೆ
ಹಿರಿಯರೆಲ್ಲರು ಬಂದು ಹೇಳುತಿಹರೆನಗಿಂದು
ಅರಸ ನೀನಿಲ್ಲದಿರೆ ಧೃತಿಯ ಪಡೆಯುವೆನೆಂತು!
ಉರುತರದ ಬೇಗೆಯಲಿ ಜೀವಧಾರಣೆಯೆಂತು!!

ಕುಲವನ್ನು ಬೆಳೆಯಿಸುವ ಹೊಣೆಯನ್ನು ನನಗಿತ್ತು
ನಲ್ಲ ನೀ ತೆರಳಿರಲು ಅಬಲೆಯಾಗಿಹೆ ನಾನು,
ಕಳೆದಿಹನು ಧೃತಿಯನ್ನು, ತಳೆದಿಹೆ ನಿರಾಸೆಯನು,
ಬಾಳುತಿಹೆ ಕೊರಗುತಲಿ ಮರುಗುತಲಿ ಅನುದಿನವು.

ಆರಿದ್ದರೇನೆನಗೆ, ಹೃನ್ಮಂದಿರದ ಮೂರ್ತಿ!
ಅರಿಹಸ್ತದಿಂ ತರಿದು ಚೂರುಚೂರಾಗಿರಲು,
ವೀರಮಣಿ ಎನ್ನ ಜೀವಾಧಾರ ಸ್ತಂಭವೇ
ಉರುಳಿ ನೀ ತುಂಡಿರಿದು ಭಾಗ್ಯವಳಿದಿರಲಿಂತು

ಕಷ್ಟದೀ ಬಾಳಿನಲಿ ಸುಖಶಾಂತಿಯಿನ್ನಿಹುದೆ!
ಪರಮಾತ್ಮ ಸೆರಗೊಡ್ಡಿ ಬೇಡುತಿಹೆ ಕರುಣೆಯನು,
ಬೀರೆನಗೆ, ಪತಿಯನ್ನು ಸೇರುವಾ ಪಥವನ್ನು
ತೋರೆನಗೆ, ತಾಳ್ವನೇ ಕಟುತರದ ಈ ವ್ಯಥೆಯ!

ಬರಲಾರೆ, ತನುಮನದ ರೂಪದಲಿ ಎಮ್ಮಬಳಿ
ಅರಿತಿಹೆನು ನಾನಿದನು ಅತಿಯಾದ ಕಷ್ಟದಲಿ
ಅರಿಕೆಯನು ಮಾಡುತಿಹೆ ಅರೆಘಳಿಗೆ ಮರೆಯದೆಯೆ
ಅರಸ ನೀನಾಗೆನಗೆ ಮುಂದಿನಾ ಜನ್ಮದಲಿ.

– “ಸುಮ”
ಜೀವನ, ಸಂಪುಟ ೭, ಸಂಚಿಕೆ ೪, ೧೯೪೦