ಅಲ್ಲಿ ಬಾಣ ಬಯಲ ತುಂಬ ತರುಣಿಕಿರಣ ತುರುಗಿದೆ,
ಇಲ್ಲಿ ಬುವಿಯ ತಟ್ಟೆಯೊಳಗೆ ಅದರ ಭಯು ಹರಿದಿದೆ;
ಕಣ್ಣ ಮನವ ಸೆಳೆಯುವಂಥ ವಿವಿಧಪುಷ್ಟ ಬಿರಿದಿದೆ,
ತೆಂಗು-ನಿಂಬೆಯಿಂದ ತೋಟ ತುಂಬಿ ಬೆಳೆದು ನಿಂತಿದೆ!


ಹಸಿರು ಕುಡಿಯು ಮಂಜುಮಣಿಯ ಕುಣಿತದಿಂದ ನಗುತಿದೆ,
ಮಂದವಾತ ಕುಸುಮವಿಸರದೊಡನೆ ಸರಸವೆಸಗಿದೆ;
ದೂರದಲ್ಲಿ ಹಕ್ಕಿಯೊಂದು ಹಾಡಿ ಹೊನಲ ಹರಿಸಿದೆ,
ಪ್ರಕೃತಿ ರಮ್ಯವಾಗಿ ಬೀಗಿ ಸುತ್ತುಮುತ್ತು ಬೆಳಗಿದೆ!


ಇಂಥ ವಿಮಲ ಭಾವ-ಭಂಗಿ ಬೆರೆತು ನಲಿವ ತಿರಿಯೊಳು
ತಾಣವಿಲ್ಲ, ಮಾನವಿಲ್ಲ, ಉಣಲು ಇಲ್ಲ ಅನ್ನವು!
ಒಂದೆ ಜೀವ ಮಿಡಿದು ಸಿಡಿವ ಸುಖವು ಸಾಲದೆಂದು ಒಂದು
ಕಣ್ಣ ಮಣಿಯನೆದೆಗೆ ಜಿಗಿದು ಸಾಗುತಿರುವಳೊರ್ವಳು!


ಉಟ್ಟ ತುಂಡು ದೇಹದರ್ಧ ಮಾತ್ರ ಬಳಸಿ ಮುಚ್ಚಿದೆ:
ಬಿಟ್ಟ ಭಾಗವದಕೆ ಕೂಸೆ ವಸನವಾಗಿ ನಿಂತಿದೆ.
ದಿಟ್ಟಿಯಲ್ಲಿ ಬಹಳ ದಿನದ ರುದ್ರ ಹಸಿವು ಮೂಡಿದೆ;
ಒಡಲಭಾದೆಯಿಂದ ಮುಖವು ಸಾವ ಕಳೆಯ ತಳೆದಿದೆ!


ಆರುಮಾರು ನಡೆದು ಮುಂದೆ ಕಣ್ಣುಸುತ್ತಿ ಬೀಳಲು,
ಮುಂದೆ ಸಾಗಲಾರದವಳು ಮಡಕೆ ಬೀಸಿ ಕುಳಿತಳು
ಒಡನೆ ಕೂಸ ಕಣ್ಣಿದಿಟ್ಟಯವಳ ಬಡಿದು ಕುಲಕಿತು
‘ಹೊರಡು ಬೇಗ’ ಎಂದು ಮುದುಡಿ ಬಿದ್ದ ಮನವ ದೂಡಿತು!


ಬೆಚ್ಚಿ ಎದ್ದು ಕೂಸನಪ್ಪಿ ಬಿಗಿದು ಕಣ್ಣನೀರ ಮಿಡಿದು,
ಒಡನೆ ಮುತ್ತನೊಂದವಿತ್ತು ಬಿದ್ದ ಮಡಕೆಯೆತ್ತಿ ಹಿಡಿದು
‘ಗುಡ್ಡದಷ್ಟು ಕಷ್ಟಬರಲಿ, ಕಂದ ನಿನ್ನ ಬಾಳ ಬೆಳಕು
ನನ್ನ ಹೃದಯ ತುಂಬಿ ಇರಲಿ’ ಎಂದು ನಗುತ ನಡೆದಳು.


ಹೊಲೆಯ ಹಟ್ಟಿಯಲ್ಲಿ ಹುಟ್ಟಿ ಬೆಳೆದು ಬಂದ ಫಲವೆ ಇಂದು
ಇಳೆಯ ತುಳಿತಗಳಿಗೆ ಮೇಯ್ಯನೋಡ್ಡುವಂತೆ ಮಾಡಿತೆಂದು,
ಹಳಿದು ವಿಧಿಯ, ಜರಿದು ತನ್ನ, ಮುಂದೆ ಸಾಗಲೊಡನೆ ತಾನು
ಕಂಡಳೊಂದು ಹರ್ಮ್ಯವನ್ನು, ಒಡನೆ ಜೀವ ಚಿಗಿತಿತು!


‘ಕವಳ ತಾಯಿ’ ಎಂದು ಅಂಜಿ ಅಂಜಿ ನುಡಿಯೆ ಸುತ್ತಲೂ
‘ಹೊರಡು ಆಚೆ’ ಎಂಬ ನುಡಿ, ಗುಡುಗಿ ಗುಡಿಗಿ ಮೊಳಗಿತು.
ಹಿಡಿದ ಮಡಕೆ ನಾಚಿ ನೆಲದ ಕಡೆಗೆ ಇಳಿಯ ತೊಡಗಿತು
ದಿಟ್ಟಿಯೊಡನೆ ಸುತ್ತಲಿರುವ ಮಣ್ಣ ಹುಡುಕ ತೊಡಗಿತು


ಒಡನೆ ಓಡಿಹೋಗಿ, ಬಿದ್ದ ಅನ್ನದುಂಡೆಯೊಂದನೆತ್ತಿ,
ಕೊಡವಿ ನೀರಿನೊಳಗೆ ಕಲಸಿ, ಮುದ್ದುಮಗುವಿಗದನು ತಿನಿಸಿ,
ತಾನು ತಿಂದು, ತೃಪ್ತಿ ತಳೆದು ಸತ್ತ ನಗೆಯನೊಂದ ಬೀರಿ,
ನಡೆದಳಾಕೆ ಬೆರಗನಾಂತು ಜಗದ ನೀತಿ-ನಡತೆಗೆ.

೧೦
ಮೂರು ದಿವಸವಳಿದ ಕೂಸ ಬಿಗಿದ ಶವವದೊಂದು
ಮರದ ಬುಡವನಪ್ಪಿ, ಮಲಗಿ, ಹಸಿದು ಎಲೆಯ ಹೊದ್ದಿದೆ.
ಒಡಕು ಮಡಕೆ, ಹರಿದ ಚಾಪೆ ಇವೇ ಅವಳ ನಂಟರು;
ಬರಿಯ ನಾಯಿ-ಕಾಗೆ-ಹದ್ದೇ ಕಾವ ಬಂಟರು!

೧೧
ತಿಮಿರವಡಸಿ ನಿಂತ ಮುಗಿಲ ಕೆಲವು ತಾರೆ ಬೆಳಗಿರೆ
ಕಿವಿಯ ಕೊರೆವ ಮಿಡತೆಕೂಗು ‘ಚೀರ್’ ಎಂದು ಮೊಳಗಿರೆ
ಚಂದ್ರನಂದು ದುಃಖ ತುಂಬಿ ಮುಗಿಲ ಮರೆಗೆ ನಿಂತನು;
ಬಾಲ ತಾಯಿ ಮುಚ್ಚಿ ಮೊಗವ ಕಂಬನಿ ಮಳೆಗರೆದಳು

* * *

– ಶ್ರೀಮತಿ ಎಲ್. ವಿ. ಕಾವೇರಮ್ಮ
ಜಯಂತಿ, ಸಂಪುಟ ೪, ಸಂಚಿಕೆ ೬, ೧೯೪೧