ನಗುತಲಿರುವೆ, ನಗುತಲಿರುವೆ
ಬಾಳ ಹಣತೆಯುರಿವವರೆಗೆ!


ದುಃಖದುಗ್ರ ಜ್ವಾಲೆಗಗ್ನಿ
ಕುಂಡವಾಗಿ ನಿಲ್ಲುವೆ!
ಸುಖದ ಮುಗಿಲಿನೊಡನೆ ಆವೆ-
ಯಾಗಿ ನಡೆದು ನಲಿಯುವೆ!


ಜಗದ ತುಳಿತದಿದಿರು ಮುಳ್ಳು
ಕಂಟಿಯಾಗಿ ನಿಲ್ಲುವೆ!
ಜನದ ನುಡಿಯ ನಂಜಿನಿದಿರು
ಕಾಲಕೂಟವಾಗುವೆ!


ದುಷ್ಟರೆಸೆವ ಕಲ್ಲಿನಿದಿರು
ಬೆಟ್ಟವಾಗಿ ನಿಲ್ಲುವೆ!
ಇಷ್ಟರಿಡುವ ಹಾಲಿನಲ್ಲಿ
ಬೆಲ್ಲವಾಗಿ ಬೆರೆಯುವೆ!


ಕೂಸಿಗಿಂತ ಕಿರಿಯಳಾಗಿ
ಜಗದ ಕೂಡೆ ಆಡುವೆ!
ತಾಯಿಗಿಂತ ಹಿರಿಯಳಾಗಿ
ಪ್ರೀತಿತೊರೆಯ ಹರಿಸುವೆ!


ಗಾಳಿಯಂತೆ ತೇಲಿ ಜಗದಸ
ಸುಗುಣಸುರಭಿ ಹೀರುವೆ!
ಗಂಗೆಯಂತೆ ಹರಿದು ಬಾಳ
ಕಲುಷವ ತೊಳೆ-ತೊಳೆಯುವೆ!


ಹೂವಿಗಿಂತ ಮೃದುಲವಾಗಿ
ವಿಶ್ವಶಿವಗ ಬಾಗುವೆ!
ಜೇನಿಗಿಂತ ಮಧುರವಾಗಿ
ಬಾಳವೀಣೆ ಮಿಡಿಯುವೆ!

ನಗುತಲಿರುವೆ, ನಗುತಲಿರುವೆ,
ಬಾಳ ಹಣತೆಯುರಿವವರೆಗೆ!

* * *

– ಶ್ರೀಮತಿ ಎಲ್. ವ್ಹಿ. ಕಾವೇರಮ್ಮ
ಜಯಂತಿ, ಸಂಪುಟ ೪, ಸಂಚಿಕೆ ೯, ೧೯೪೨