ಮುನ್ನುಗ್ಗು ಮುನ್ನಗ್ಗು ಬಾಳ ಹೆದ್ದಾರಿಯಲಿ,
ಕೀಳ್ತನದ ಕಲ್ -ಮುಳ್ಳ ಕಿತ್ತೊಗೆಯುತ-
ಹಿರಿತನಕೆ ಬಂದಿರಿವ ಮಂದಿಗಳ ಕಿಡನೋಟ-
ವಿಷದೃಷ್ಟಿಗಳಿಗೆಲ್ಲ ಮೊಗದಿರುಹುತ!


ಮೊದಲಡಿಯಲುಕ್ಕುಕ್ಕಿ ಹರಿಯುತಿಹ ಹುಮ್ಮಸವು
ಹರಿಹಿಂಗಬಹುದೊಡನೆ – ಮರುಹೆಜ್ಜೆಗೆ,
ನೀ ನೆನೆದ ಹೆಬ್ಬಯಕೆ – ಹೊಂಗನಸು-ನನಸೆಲ್ಲ
ಮಣ್‌ಗೂಡುತಿರಬಹುದು ಗಳಿ-ಗಳಿಗೆಗೆ!


ಆದೊಡೆಯು ಬೆದರಿ ನೀ ಬದಲುಗೊಳದಿರು, ಸಟಿಯ
ಬೆಲೆಗೆ ನಿನ್ನಾತ್ಮವನು ಬಲಿಗೊಡದಿರು!
ಕಾಳ್ಗಿಚ್ಚು ಎದ್ದಿರಲಿ, ಕಲ್ ಮಳೆಯು ಕವಿದಿರಲಿ,
ಉಕ್ಕಿನೊಲು ಮಾಡು ನೀ ತನು-ಮನವನು!


ದುಃಖದುಡಿಗೆಯನು ಧರಿಸಿರುವಂದು ನೀ ಕಂಡ
ಮುಸುಕೆಳೆದ ಸಿರಿಜಗದ ಮರ್ಮಗಳನು-
ಬಚ್ಚಿಡದೆ ಬದಿಗೆಳೆದು, ಸುಖದುಣಿಸ ಕಂಡಾಗ
ಬಡಜನದ ಸೇವೆಯಲಿ ಸವಿಸೊಡಲನು!


ಬಾಗದಿರು ಸಿರಿತನಕೆ, ಕರಗದಿರು ಸಟಿನುಡಿಗೆ,
ಬೀಳಿದಿರುದ ರಂಗೆರೆವ ಕವಡುವಲೆಗೆ!
ನೀಡಿದಿರು ದಾನವನು ಜೈತನ್ಯವಿರ್ದ್ದವಗೆ
ಈಡಾಡು ಬಾಳನ್ನು ದೀನಕುಲಕೆ!


ಮುನ್ನುಗ್ಗು ಮುನ್ನುಗ್ಗು ಬಾಳಹೆದ್ದಾರಿಯಲಿ,
ಕೀಳ್ತನದ ಕಲ್ – ಮುಳ್ಳ ಕಿತ್ತೊಗೆಯುತ
ಮುನ್ನುಗ್ಗು ಮುನ್ನುಗ್ಗು ಅಡಗಿರುವ ಹಿರಿಬೆಳಕ
ನಾಡಿನಲಿ ಹಬ್ಬಿಸುವೆನೆಂದೆನ್ನುತ!

* * *

– ಶ್ರೀಮತಿ ಎಲ್. ಬಿ. ಕಾವೇರಮ್ಮ
ಜಯಂತಿ, ಸಂಪುಟ ೫, ಸಂಚಿಕೆ ೬, ೧೯೪೨