ಮಾನವನ ನಾಶವನು ಕಂಡು
ಕಣ್ಣು ಹನಿತುಂಬಿ ಮಂಜಾಗುವುದು
ನೊಂದೆದೆಯ ಬಿಸುಸುಯ್ವುದು
ಜನತೆಯೀ ಮೌಢ್ಯವನು ನೋಡಿ ಇಂದು.

ಸಾವು ನೋವುಗಳಿಂಗೆ ಬೆದರದೆಯೆ,
ಅಳಿಯೆ ನಾಗರಿಕತೆಯದನು ಲಕ್ಷಿಸದೆ,
ಬಂಧು ಬಳಗದ ಅಳಲಿಗಿಷ್ಟಿಷ್ಟು ಮರುಗದೆ,
ರಾಜ್ಯ ಗೆಲ್ಲುವ ಕಾರ್ಯ ಮುಂಬರಿಯುತಿಹುದು;
ಸಾಮ್ರಾಜ್ಯ ಕಟ್ಟುವಾ ಆಶೆ ಬೆಳೆಯುತಿಹುದು;
ಶಾಂತಿಯನ್ನುಳಿಸುವಾ ಬಯಕೆ ಅಳಿಯುತಿಹುದು.

ಜನಕೆ ನೆಮ್ಮದಿ ಹೋಯ್ತು,
ಸಮತೆಯಾ ನುಡಿ ಮಡಿದುಹೋಯ್ತು
ಹಗೆತನವು ಅಂಕುರಿಸಿಯಾಯ್ತು,
ಗೆಳೆತನವು ಮುರಿದಹೋಯ್ತು,
ಗೆಳೆತನವು ಮುರಿದುಹೋಯ್ತು.

ಇಂದಿನೀಬಾಳು ಎಂಥ ಗೋಳು!
ಓ ದೇವ! ಎಮ್ಮ ಮೊರೆಯ ಕೇಳು!
ಮಾನವನ ಮೂರ್ಖತೆಯ ದಹಿಸು
ಜೀವದ ಬೆಲೆಯವನಿಗೆ ತಿಳಿಸು
ಮನುಜನಿಗೆ ಮನುಜತೆಯ ನೀಡು
ನಿನ್ನ ಕೃಪೆ ಎಮಗೆ ಜ್ಞಾನದ ಬೀಡು.

* * *

– ನೂರ್‌ಜಹಾನ್ ಬೇಗಂ
ಹೂಮಾಲೆ, ಮೈಸೂರು ಪ್ರಾಂತ್ಯ ಪ್ರಕಟಣೆ, ೧೯೪೩