ಆಧುನಿಕ ಮಹಿಳಾ ಸಾಹಿತ್ಯದ ಕುರಿತ ಒಂದಿಷ್ಟು ಕೆಲಸ ಮಾಡಬೇಕು ಎನ್ನುವ ಆಸೆ ನನ್ನಲ್ಲಿ ಚಿಗುರಿದ್ದು ವಿದ್ಯಾರ್ಥಿ ದೆಸೆಯಲ್ಲಿ. ಅದು ವಿಜಯದಬ್ಬೆಯವರು ತಿರುಮಲಾಂಬ ಅವರ ಕುರಿತು ಕೆಲಸ ಮಾಡುತ್ತಿದ್ದ ದಿನಗಳು. ಮಹಿಳಾ ಸಾಹಿತ್ಯ ಮತ್ತು ಸ್ತ್ರೀವಾದಿ ವಿಮರ್ಶೆಗಳನ್ನು ಪಠ್ಯಕ್ರಮದೊಳಗೆ ಸೇರಿಲ್ಲದ ಆ ದಿನಗಳಲ್ಲಿ ದಬ್ಬೆಯವರು ತರಗತಿಯ ಹೊರಗೆ ತಮ್ಮ ಸಂಶೋಧನಾ ಆಸಕ್ತಿಯನ್ನು ವಿದ್ಯಾರ್ಥಿಗಳಾದ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ಅಂದಿನ ನನ್ನ ಆಸೆಯನ್ನು ಸ್ವಲ್ಪ ಮಟ್ಟಿಗಾದರೂ ಈಡೇರಿಸಿಕೊಳ್ಳುವ ಅವಕಾಶವನ್ನು ಕನ್ನಡ ವಿಶ್ವವಿದ್ಯಾಲಯ ನನಗೆ ಒದಗಿಸಿತು. ಅದಕ್ಕೆ ನಾನು ಋಣಿಯಾಗಿದ್ದೇನೆ.

ಪ್ರಸ್ತುತ ಅಧ್ಯಯನದ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಹಲವು ಗ್ರಂಥಾಲಯಗಳು ಹಾಗೂ ವ್ಯಕ್ತಿ ಸಂಗ್ರಹಗಳನ್ನು ನಾನು ಪರಿಶೀಲಿಸಿದ್ದೇನೆ. ಅವುಗಳಲ್ಲಿ ಪ್ರಮುಖವಾದವು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ವೀರಶೈವ ವಿದ್ಯಾವರ್ಧಕ ಸಂಘ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು, ಮಿಥಿಕ್ ಸೊಸೈಟಿ ಹಾಗೂ ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಮೈಸೂರು. ಇಲ್ಲಿ ತುಂಬು ಹೃದಯದಿಂದ ನೆನೆಯಬೇಕಾದ ಹೆಸರು ಜಯಂತಿ ಪತ್ರಿಕೆಯ ಸಂಪಾದಕರಾಗಿದ್ದ ಬೆಟಗೇರಿ ಕೃಷ್ಣಶರ್ಮರ ಮಗ ಶ್ರೀ ಸುರೇಂದ್ರ ಬೆಟಗೇರಿಯವರದು. ಅಪರಿಚತಳಾದ ನಾನು ಪೂರ್ವನುಮತಿಯಿಲ್ಲದೆ ಅವರ ಮನೆಗೆ ಹೋದಾಗ, ಕನಿಷ್ಠ ಇನ್ನೊಮ್ಮೆ ಬನ್ನಿ ನೋಡೋಣ ಎನ್ನುವ ಮಾತನ್ನು ಹೇಳದೆ, ಒಳಗೆ ಕರೆದು ಸತ್ಕರಿಸಿ ತಮ್ಮಲ್ಲಿದ್ದ ಜಯಂತಿ ಪತ್ರಿಕೆಗಳನ್ನು ಒದಗಿಸಿದ್ದಲ್ಲದೆ, ಹಳೆ ಪತ್ರಿಕೆಗಳನ್ನು ನನ್ನೊಡನೆ ತಾವು ಹೊತ್ತು ತಂದು ನೆರಳಚ್ಚು ಮಾಡಿಸಿ ಕೊಟ್ಟಿದ್ದಾರೆ. ಅವರ ಈ ಅಂತಃಕರಣವನ್ನು ನಾನು ಮರೆಯಲಾರೆ. ಹಾಗೆಯೇ ವಿದ್ಯಾವರ್ಧಕ ಸಂಘದ ಶ್ರೀ ಅಂಗಡಿಯವರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಗ್ರಂಥಾಲಯದ ಶ್ರೀ ಬಸವರಾಜ ಪಾಟೀಲ ಅವರನ್ನು ಕೂಡ.

ಈ ಅಧ್ಯಯನದ ಸಂದರ್ಭದಲ್ಲಿ ಈಗಾಗಲೇ ನಡೆದಿರುವ ಸಂಶೋಧನಾ ಕೆಲಸಗಳ ಕುರಿತ ನನ್ನ ಭಿನ್ನ ನಿಲುವೇನೇ ಇದ್ದರೂ, ಅವರ ಪರಿಶ್ರಮದ ಮೇಲೆಯೇ ಈ ಅಧ್ಯಯನವು ಮುಂದುವರಿದಿದೆ. ಆ ಎಲ್ಲ ಅಧ್ಯಯನಕಾರರಿಗೆ ನಾನು ಅಭಾರಿ. ಅಧ್ಯಯನದ ಬಗ್ಗೆ ಮೌಲಿಕವಾದ ಮೌಲ್ಯಮಾಪನ ವರದಿಯನ್ನು ನೀಡಿದ ವಿದ್ವಾಂಸರಿಗೂ ವಂದನೆಗಳು. ಅಧ್ಯಯನದ ಸಂದರ್ಭದಲ್ಲಿ ಅದರ ಬಗ್ಗೆ ಕುತೂಹಲದಿಂದ ವಿಚಾರಿಸುತ್ತಿದ್ದ ಹಾಗೂ ಚರ್ಚಿಸುತ್ತಿದ್ದ ಸಹೋದ್ಯೋಗಿ ಮಿತ್ರರಾದ ಶ್ರೀ ತಾರಕೇಶ್ವರ ಹಾಗೂ ವಿಶ್ವವಿದ್ಯಾಲಯದ ಇನ್ನಿತರ ಎಲ್ಲ ಸಹೋದ್ಯೋಗಿ ಮಿತ್ರರನ್ನು ಇಲ್ಲಿ ಸ್ಮರಿಸುತ್ತೇನೆ.

ಈ ಅಧ್ಯಯನವನ್ನು ಕೈಗೊಳ್ಳುವುದಕ್ಕೆ ಬೇಕಾದ ಎಲ್ಲ ನೈತಿಕ ಹಾಗೂ ಭೌತಿಕ ನೆರವನ್ನು ಒದಗಿಸಿಕೊಟ್ಟು ಪ್ರೋತ್ಸಾಹಿಸಿದ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ. ಎ. ವಿವೇಕ ರೈ ಅವರಿಗೆ ನಾನು ವಿಶೇಷವಾಗಿ ಆಭಾರಿಯಾಗಿದ್ದೇನೆ. ಅಧ್ಯಯನ ಯೋಜನೆಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮತ್ತು ಅವರ ಬಳಗಕ್ಕೆ ಹಾಗೂ ಅಕ್ಷರ ಸಂಯೋಜಿಸಿದ ಶ್ರೀ ಸಾವಳಗಿ ಶಿವಲಿಂಗೇಶ್ವರ ಗ್ರಾಫಿಕ್ಸ್‌ನು ಶ್ರೀಮತಿ ಬಿ. ರಶ್ಮಿ ಅವರಿಗೂ ವಂದನೆಗಳು.

ಡಾ. ಎಂ. ಉಷಾ