ಹಣ್ಣುಗಿಡಕೆ ಕಣ್ಣು ಬಹಳ! ಜೀವ ಸಣ್ಣದಾಯಿತು
ಇನ್ನು ಬಣ್ಣಿಸುವುದು ಬೇಕೆ ಮನುಜ ಜನುಮದಿರವನು?

ಗಿಡದ ಕುತ್ತಗಳಿಗೆ ಮೊತ್ತಮೊದಲು ಕದುಕು ಗಿಳಿಗಳ;
ಬಿಡದೆ ಅದರ ಹೂವ-ರಸವು ಸೊತ್ತು ಬಳಗಕಳಿಗಳ

ಮಂಗಕಾಡು-ಹೊಲವು ಗಿಡವು; ಹಣ್ಣು ಚಂಡಿನಾಟವು
ಅಂಗಳದಲಿ ಬಿದ್ದು ಕಾಯಿ ಹುಣ್ಣು-ಹಣ್ಣು ಆದುವು

ಇರುಳು ನರಿಯ ಬಳಗ ಗಿಡಕೆ ಹಿರಿದು ಕುತ್ತದಿರುವದು
ಇರದೆ ಬೇರೆ ಪಕ್ಷಿ-ಮೃಗದ ಹಿಂಡು ಸುತ್ತು ಸುಳಿವುದು

ಹಣ್ಣು ನಿಲುಕದಿರಲು ಜನರು ದೊಣ್ಣೆ ಏಟ ಕೊಡುವರು
ಸಣ್ಣ ದೊಡ್ಡ ಕಲ್ಲುಗಳನು ಬಗೆದು ಡವಗಿ ಬಡಿವರು

ಹಣ್ಣು ಕೆಡಿಸಲೆಷ್ಟು ಪ್ರಾಣಿ ಜನರು ಕಷ್ಟಪಡುವರು
ಹಣ್ಣು ಆಗಲಿರುವ ಮನುಜಜನುಮಕೆಷ್ಟು ಕೊಡುವರೋ!

ಗಾಳಿ ಬಿಸಿಲು ಮಳೆಯು ಬಡಿದು ಕಾಯ ಹಣ್ಣ ಮಾಡವೇ!
ದಾಳಿಯಂದವಾಗಿ ಬಂದ ದುಃಖ ಸುಖವನೀಯದೆ!

ಇಷ್ಟು ಕುತ್ತಗಳಿಗು ತುತ್ತು ಹೆಣ್ಣು ಜೀವಮಾನವು!
ಎಷ್ಟು ಕುತ್ತ ಬಂದರೇನು?ಬಿಡದೆ ಗಿಡವು ಹಣ್ಣನು?

ಬೇಲಿಹಣ್ಣು ಮೇಲೆ ಕಣ್ಣನಿಡುವ ಹಲವು ಅಣ್ಣರು
ಮೇಲು ಸವಿಯ ಉಣ್ಣಲೆಳಸಿ ಅದರ ಪಾಡನರಿಯರು

ಮೈಯ ಒಳಗೆ ಮನವ ಪಕ್ವಮಾಡಿ ರಸವ ಹರಿಸಲು
ಒಯ್ಯನೆಂತು ಅದು ಬರುವುದು! ಹಣ್ಣಿನಲ್ಲಿ ಹಣ್ಣದು!

* * *

– ‘ಇರಾ
ಹೂಮಾಲೆ, ಮೈಸೂರು ಪ್ರಾಂತ ಸಮಿತಿ, ಕ. ಸಾ. ಪ. , ಬೆಂಗಳೂರು, ೧೯೪೩