ತೇಲಿಹೋಗು, ತೇಲಿಹೋಗು
ಬಾಳಹೊನಲಿನೊಡನೆ ಕಂದ!
ತನ್ನ ಬಾಳರಂಗನೆರೆದು
ನಿನ್ನ ಬಾಳ ಬೀಡಿಗೆ,
ಮೆರುಗನಿತ್ತ ಕಾಯಮನದ
ಬನಕೆ ಬಣ್ಣವೆರೆಯುತೆ!
ತೇಲಿಹೋಗು, ತೇಲಿಹೋಗು!       ||೧||

ಪ್ರೀತಿಯಜ್ಞ ಕುಂಡದಲ್ಲಿ
ಜಾತಿಬಲಿಯು ನೀಯುತೆ!
ಸತ್ಯಜ್ಯೋತಿ ಬೆಳಗುವಲ್ಲಿ
ತನುಮನವನು ಬೆಳಗುತೆ!
ತೇಲಿಹೋಗು, ತೇಲಿಹೋಗು!       ||೨||

ಸ್ವಾರ್ಥಭೂತಕಿದಿರು ಪೆಡಂ-
ಭೂತವಾಗಿ ನಿಲ್ಲುತ!
ಕಾಮದಲೆಯ ಬಡಿತದಿದಿರು
ಬಂಡೆಯಾಗಿ ನಿಲ್ಲುತ,
ತೇಲಿಹೋಗು, ತೇಲಿಹೋಗು!       ||೩||

ದುಃಖವಿತ್ತ ಹುತ್ತಕೆದಕಿ
ಮತ್ತು ಹಗೆಯ ಬೆಳೆಸದೆ;
ಹಿತವನೆರೆದ ಕುಲಕೆ ಫಲವ-
ನಿತ್ತು ಋಣವ ನಿಲಿಸದೆ!
ತೇಲಿಹೋಗು, ತೇಲಿಹೋಗು!       ||೪||

ಬಾಳಗದ್ದೆಯಲ್ಲಿ ಬೆಳೆದ
ಬೆಳೆಯ ಕಂಡು ಹಿಗ್ಗದೆ!
ಕಳಪೆನೆಲವನಗಿದು ನಗುವ
ಕೋಪ ಮೂಡಲಂದದೆ!
ತೇಲಿಹೋಗು, ತೇಲಿಹೋಗು!       ||೫||

* * *

– ಶ್ರೀ ಎಲ್. ವಿ. ಕಾವೇರಮ್ಮ
ಜಯಂತಿ, ಸಂಪುಟ ೫, ಸಂಚಿಕೆ ೯, ೧೯೪೩