ನೀರೊಳು ಪೋಗಲು ತವಕಿಪೆನು
ಏಕಾಂತವು ತಾನಲ್ಲಿಗೆ ಪೋಗಲು
ನೀಲಾಕಾಶದ ತಳದಲ್ಲಿ
ನನಗೆ ಬೇಕಾದುದು ಹಡಗೊಂದು
ಅದ ನಡೆಯಿಸಲು ನಾವಿಕನೊರ್ವ
ಹಡಗಿನ ಮರಮರ ಶಬ್ದವ ಕೇಳುತ
ರಭಸದಿ ಹರಿಯುವ ಅಲೆಯನು ನೋಡುತ
ಹಡಗಿನ ಕುಣಿಯುವ ಪಟವನು ಬಗೆಯುತ
ಸಂಜೆಯ ರಾಗದ ಚೆಲುವನು ಸವಿಯುತ
ಅಲೆಗಳ ಹೊಡೆಯುವ ಭಯವಹ ಸ್ವಚ್ಛದ
ಕೂಗನದೆಂತು ಅಲಕ್ಷಿಸಲಿ
ರಜನಿಯ ಸ್ವಚ್ಛದ ಮೋಡದ ತೆರೆಯಲಿ
ಮಿನುಗುವ ತಾರೆಯ ಕಳೆಯನು ನೋಡುತ
ನೀರಿನ ಹಕ್ಕಿಯ ಹಾಡನ್ನುಲಿಯುತ
ನೀರೊಳು ಪೋಗಲು ತವಕಿಪೆನು
ಆ-ನಂದದ ಖನಿಯದು ಜೀವನಕೆ
ಕುಣಿಯುವ ನಲಿಯುವ ನರ್ತಕಿಯಂದದಿ
ನನಗೆ ಬೇಕಾದುದು ಹಡಗೊಂದು
ಅದ ನಡೆಯಿಸಲು ನಾವಿಕನೊರ್ವ
ಅದರಲಿ ನಗುತ ಪಯಣವ ಬೆಳೆಸುವ
ಅಂತರ್ಯಾಮಿಯ ನೆನೆಯುತಲಿ

* * *

– ಪಿ. ಎಸ್. ರುಕ್ಮಿಣಿ*
ಹೂಮಾಲೆ, ಮೈಸೂರು ಪ್ರಾಂತ್ಯ ಪ್ರಕಟಣೆ, ೧೯೪೩