ಓಡುಜೀವ! ಓಡುಜೀವ! ಸಾಕು ನಿನ್ನ ಬಯಕೆಯು
ತಣಿಯದಂಥ ತೀರದಂಥ ಬರಿಯ ಹಾರೈಕೆಯು!
ಇಲ್ಲಿ ಈ ಲೋಕದಲ್ಲಿ, ಸ್ವಾರ್ಥವಿಡಿದ ನರಕದಲ್ಲಿ
ತೃಪ್ತಿತೀರದಾಟದಲ್ಲಿ, ಆಶೆ ಬೆಳೆದ ಬಯಲಿನಲ್ಲಿ
ಆದಿ ಅಂತ್ಯವಿಲ್ಲದಂಥ ಹುಚ್ಚು ಕಿಚ್ಚ ಕುಣಿತದಲ್ಲಿ
ಮೋಹದೊನಕೆ ಬಡಿತದಲ್ಲಿ ಮಾಯೆ ಮೈsಗೂಡಿದಲ್ಲಿ
ನಿನ್ನ ಬಯಕೆಗಿಲ್ಲ ಸ್ಥಾನ; ನಿನ್ನ ದುಡಿಮೆಗಿಲ್ಲ ಮಾನ;
ನಿನ್ನ ಸತ್ಯಕಿಲ್ಲ ಕರುಣ; ಆತ್ಮದ ಬಲಿಗಿಲ್ಲ ಪಣ್ಯ;
ಇಲ್ಲ ಇಲ್ಲ ಬಯಸಿದನ್ನ ನಾಶವಿರದ ಸುಖದ ಸದನಸ
ಅಂದು ಇಂದು ಅಲ್ಲು ಇಲ್ಲು ಎಲ್ಲು ದುಃಖ ದಾನ ಪಾನ
ಹೀರಿದಷ್ಟು ಹೆಚ್ಚುತಿಹುದು ಪ್ರೀತಿಮುಗಿಲ ಮೈಯಬಣ್ಣ
ಅದರ ಕೈಯೊಳಿಹುದು ತಪನ, ಅದರ ಮೈಯೊಳಿಹುದು ಮರಣಸ
ಅಳುವೆ ಬಾಳು, ಬಾಳೆ ಅಳುವು, ಇದುವೆ ಅದರ ಹೃದ್ಧನ
ಅಳುವಿನಲ್ಲೆ ಮು‌ಕ್ತಿಯಿಹುದು, ಇದುವೆ ಅದರ ಸಾಂತ್ವನ !        ||೧||

ಅಲ್ಲಿ ಆ ಲೋಕದಲ್ಲಿ ಸತ್ಯನಲಿವ ನಾಕದಲ್ಲಿ
ಮೋಹಮಾಯೆಯಲ್ಲಿ ಸುಟ್ಟ ಮಸನದಂಚಿನಂಚಿನಲ್ಲಿ
ಗಂಡು ಹೆಣ್ಣು ಸಮತೆಯಿಂದ ಬಾಳನೂಲ ನೇಯುವಲ್ಲಿ
ಹಸಿವಿನಾsವರಣದಲ್ಲೆ ತೃಪ್ತಿಬೇಡ ಮಾಡಿದಲ್ಲಿ
ನರನು ಹರನು ಒಂದೆಯೆನಿಸಿ ಬ್ರಹ್ಮಗೀತ ಹಾಡುವಲ್ಲಿ
ನಿನ್ನ ಪ್ರೀತಿಗಿಹುದು ಸ್ಥಾನ; ನಿನ್ನ ತಪಸಿಗಿಹುದು ಮಾನ!
ನಿನ್ನ ದೈವಕಿಹುದು ಕರುಣ; ಆತ್ಮಕಿಹುದು ಆತ್ಮದನ್ನ;
ಹರಿಯುತಿಹುದು ಎಂದೆಂದಿಗು ಬತ್ತದಂಥ ಸುಖದ ಯಮುನ
ಅಲ್ಲು ಇಲ್ಲು ಎಲ್ಲು ಎಲ್ಲು ಬೆಳಗುತಿಹುದು ಶಾಂತಿಕಿರಣ
ತೀಡಿದಷ್ಟು ಹೊಳೆಯುತಿಹುದು ಪ್ರೀತಿಮೂರ್ತಿಯಮಲವದನ
ಅದರ ಹೃದಯದಾಳದಲ್ಲಿ ಮಿಂಚುತಿಹುದು ಮುಕ್ತಿರತ್ನಸದ
ಹರುಷರಸವೆ ಅದರ ಅನ್ನ; ಶಾಂತಿಯೆಸಳೆ ಅದರ ವಸನ:
ಅದರ ಜಿಹ್ವೆಯಲ್ಲೆ ಇಹುದು ನೀನು ಹುಡುಕುತ್ತಿದ್ದ ವಚನ
ಅದರ ಕೈಯತುದಿಯೊಳಿಹುದು ನೀನು ಬಯಸುತ್ತಿದ್ದ ಶಮನ    ||೨||

* * *

– ಎಲ್. ವಿ. ಕಾವೇರಮ್ಮ
ಪ್ರಬುದ್ಧ ಕರ್ನಾಟಕ, ಸಂಪುಟ ೨೬, ಸಂಚಿಕೆ ೧, ೧೯೪೪