ತಿಂಗಳ ಹಸುಳೆಯ ಮಡಿಲೊಳಗಿಟ್ಟು
ಒರ್ವ ಬಿಕಾರಿಯು ಬರುತಿಹಳು
ಕುಡಿಕೆಯ ಹಾಲಿಗೆ ಕೇರಿಗಳಲೆಯುತ
ಸಂಕಟದಿಂದಲಿ ಸೊರಗಿಹಳು ೧
ಮೈಕೈ ಮುಚ್ಚದ ಮಾರುದ್ಧದ ಹಳೆ
ಚಿಂದಿಯ ಬಟ್ಟೆಯನುಟ್ಟಿಹಳು
ಜೂಲರಿವೆಗಳನು ಬೊಂತೆಯ ಮಾಡಿ
ಹಸುಳೆಯನದರೊಳು ಕಟ್ಟಿಹಳು ೨
ಬೇಡುವೆ ನಿಮ್ಮನು ಮಕ್ಕಳ ಪಡೆದಿಹ
ಪುಣ್ಯಾತ್ಮರೆ ಓ ಕೃಪೆ ಮಾಡಿ
ಬೇಡೆನು ಬೇರಾವುದನೊಕ್ಕುಡಿತೆಯ
ಹಾಲನು ಕರುಣಿಸಿ ಕೈನೀಡಿ ೩
ಕರುಳನು ಇರಿಯುವ ತೆರದಲಿ ದೈನ್ಯದಿ
ಬೇಡುತಲಿರೆ ಕೆಲರಾಲಿಪರು
ಕೆಲಸ ಮಾಡುವ ಸೋಮಾರಿಯೆ ತೊಲಸ
ಗಾಚೆಗೆನುತ ಹೀಯಾಳಿಪರು ೪
ನಲ್ಲನ ಮರಣದ ಬೆಂಗುದಿಯೊಂದು
ಹಸಿದಿಹ ಶಿಶುರೋದನವೊಂದು
ಬಿಸಲಿನ ಬೇಗೆಯು ಬಳಲಿಕೆಯೊಂದು
ಜನಗಳ ಕ್ರೌರ್ಯದ ನುಡಿಯೊಂದು ೬
ರವಿಯೇರಿದ ನಡುನೆತ್ತಿಯನಾದರು
ಹಾಲೆಲ್ಲೆಲ್ಲಿಯು ದೊರೆಯದಿರೆ
ರೋದನ ಹಚ್ಚಿತು ಹಸುಳೆಯು ಬಲ್ಲುದೆ
ಏನನು ಗೈವಳು ಆ ನೀರೆ? ೬
ಅಡಿಗಡಿಗಾಸತಿ ನಿಟ್ಟುಸಿರಿಡುತಲಿ
ಬೆಟ್ಟಿಡುವಳು ಶಿಶು ಬಾಯೊಳಗೆ
ಮಿಡಿಯುತ ಕಣ್ಣೀರನು ಕಡು ಬಿಸಿಲಲಿ
ನಡೆತರುತಿರಲೊಂದೆಡೆಯೊಳಗೆ ೭
ಮಕ್ಕಳ ಪಡೆಯುವ ಬಯಕೆಯೊಳೊಬ್ಬಳು
ಭಕ್ತಿಯೊಳೆಲ್ಲವನಣಿ ಮಾಡಿ
ಸರ್ಪನ ಪೂಜಿಸೆ ಹುತ್ತದ ಸಹಿಹದೊ
ಳಿದ್ದಳು ಸಕಲವ ಶುಚಿಮಾಡಿ ೮
ಬಗೆ ಬಗೆ ಹೂಗಳು ಹಣ್ಣುಗಳಡಕಿಹು
ದಗಣಿತವಾಗಿವೆ ತಟ್ಟೆಯೊಳು
ಹಸುವಿನ ಹಾಲನು ತುಂಬಿಟ್ಟಿರುವುದು
ತೆರೆದ ಬಾಯ ಬಲು ಬಟ್ಟಲೊಳು ೯
ಹಾಲನು ಕಾಣುತ ಮುಗ್ಗಿರಿಸುವುದನು
ಕಾಣದೆ ಬಂದಳು ಧಾವಿಸುತ
ಹಸುಳೆಯ ಪುಣ್ಯವಿದೆನ್ನನು ದೇವರು
ಕೈ ಬಿಡುನೆನುತಲಿ ಭಾವಿಸುತ ೧೦
ಮಡಿಲೊಳಗಿಂದಾ ಮಗುವನು ತೆಗೆದು
ಮಡಿಯೊಳಗಿದ್ದಾ ಮಾನಿನಿಯ
ಅಡಿಯೊಳಗಿಡುತಿಂತೆಂದಳು ಬಿಕ್ಕುತ
ಒಡಲಿನೊಳಡಗಿಹ ವೇದನೆಯ ೧೧
ತಾಯೇ ನೀನಿಂದೆನ್ನಯ ದೇವರು
ಈ ಶಿಶು ನಿನ್ನದು ನೀನೊಲಿದು
ಕುಡಿಕೆಯ ಹಾಲನು ಕೊಟ್ಟಿದ ಬದುಕಿಸು
ಹರಿ ದಯೆಗೆಯ್ವನು ನಿನಗೊಲಿದು ೧೨
ಕೇಳುತೆ ಕನಲ್ದುರಿದೆದ್ದಳು ಕ್ರೋಧದೊ
ಳಾಸೀಮಂತಿನಿ ತಾನಾಗ
ನಡೆ ತೊಲಗೆನ್ನಯ ಮಡಿಯನು ಕೆಡಿಸಿದೆ
ಯೆಲೆ ನೀಚಾತ್ಮಳೆ ನೀನೀಗ ೧೩
ಅಯ್ದೆಯಹೆಯ ನೀ, ಶಿಶು ನಿನ್ನದೆ ಛೀ,
ಬೇಡಲು ಬಾರದೆ ನಾಚಿಕೆಯು
ಸುಡು ಸುಡು ನಿನ್ನಯ ಜನ್ಮವ ನಿನ್ನೀ
ಬಾಳುವೆಯಿದು ಬಲು ಹೇಸಿಕೆಯು ೧೪
ಕಿವಿಗಳ ಮುಚ್ಚುತ ಶಿವಶಿವಯೆಂದಳು
ಕಠಿನೋಕ್ತಿಗಳಿಗೆ ಮನನೊಂದು
ಕುತ್ತಿಗೆ ಸೆರೆ ಬಿಗಿಯುತಲಿರೆ ಗೊಗ್ಗರ
ದನಿಯಲಿ ಹೇಳಿದಳಿಂತೆಂದು ೧೫
ತಾಯೇ ನೀನೊರೆದಂದದಿ ಕುಲಟೆಯು
ನಾನಲ್ಲವು ಮೇಣ್ನಿಮ್ಮಂತೆ
ಕುಲ ಸತಿಯಾಗಿಹೆ ದಿಕ್ಕೆನಗಿಲ್ಲವು
ದುರ್ದೈವಿಗಳಾರೆನ್ನಂತೆ ೧೬
ಕೂಲಿಯ ದುಡಿದು ಜೀವಿಸುತ್ತಿದ್ದೆವು
ಕಾಲನು ಸೆಳೆದನು ಗಂಡನನು
ಆತನೊಲುಮೆಯನು ಒಡಲಲಿ ಹೊತ್ತೇ
ಕಳೆದುಕೊಂಡೆ ನಾನಿನಿಯನನು ೧೭
ಅಳಿವುದು ಮೀಸಲು, ಹಾಲಿತ್ತರೆ ವ್ರತ
ಕೆಡುವುದು ಎನುತಲಿ ತವಕದೊಳು
ಪೂಜೆಗೈದು ಆ ಹಾಲೆಲ್ಲವನೂ
ಸುರಿದಳು ಹುತ್ತಕೆ ಭಕುತಿಯೊಳು ೧೮
ಮಕ್ಕಳ ಬಯಸುತ ಸುರಿದಾ ಹಾಲನು
ಹುತ್ತ ಕುಡಿಯುತರೆನಿಮಿಷದಲಿ
ಹಸಿವಿಂ ಸೊರಗಿಹ ಹಸುಳೆಯ ಸೆಳೆದುದು
ಮೃತ್ಯುವು ತಾ ಮರುಗಳಿಗೆಯಲಿ ೧೯
ಕಿಟ್ಟನೆ ಕೀರಿದಳಪ್ಪಿದಳೆದೆಗದ
ಹಾರಿತು ನಿಮಿಷದಿ ತಾಯುಸಿರುಸ
ಬಂಜೆ ನೋಹಿಯನು ತೀರಿಸಿ ನಡೆದಳು
ಎದುರ ದೇವರನು ದೂಡಿದಳು ೨೦
ನೋಹಿಗಳೆನ್ನುತೆ ಮೀಸಲಿದೆನ್ನುತೆ
ನೀಡದೆ ಊಡದೆ ಕೊಲ್ಲುವರು
ಮಾನವತೆಗೆ ಮನ ತೆರೆಯದು ಸೋಲದು
ಹೆಂಗರುಳೇ ಕಗ್ಗಲ್ಲಹುದು. ೨೧
* * *
– ಎಂ. ಬಿ. ಗೌರಮ್ಮ ಅಚ್ಯುತರಾವ್,
ಪ್ರಬುದ್ಧ ಕರ್ನಾಟಕ, ಸಂಪುಟ ೨೬, ಸಂಚಿಕೆ ೨, ೧೯೪೪
Leave A Comment