ಮದುವೆಯಾದ ಹೊಸದರಲ್ಲಿ
ನಿನ್ನ ಕಂಡ ಮೋಹದಲ್ಲಿ
ಹೊಸದು ಬದುಕು ನನ್ನದಾಯಿತು;
ನಾಕ ನೆಲಕೆ ಇಳಿದು ಬಂದಿತು.
ನಿನ್ನ ಎಳೆಯ ಚೆಲುವಿನಲ್ಲಿ
ಎನ್ನ ಬಾಳ ಉಗುವ ಸೊಗ,ದ
ನಿನ್ನ ತೊಳಪ ಕಂಗಳಲ್ಲಿ
ಎದೆಯ ಬೆಳಕ ಕಂಡೆನೇ.
ಎರಳೆಗಣ್ಣು ತಿಳಿಯನೋಟ
ಸಿರಿಗೊರಳಿನ ಇಂಪಿನುಲುಹು
ಹೊಸದು ಹಾವ ಭಾವಗಳನು
ಮಿಡಿದು, ಎದೆಯ ತುಂಬಿತೇ.
ಹೊಸದು ಸೊಬಗು ಕಣ್ಗೆ ತೋರಿ
ಹೊಸದು ರಾಗ ಕಿವಿಯ ತಾಗಿ
ಹೊಸದೆ ಭಾವ ಬಗೆಯ ತುಂಬಿ
ಬಾಳ ಹೊಲಬು ಬೇರೆಯಾಯಿತು.
ಎಳೆಯ ಹುಡುಗಿ, ನಿನ್ನ ಮೋಹ
ಎನ್ನ ಬದುಕ ಹರಸಿತೆಂದು
ಬಗೆದು ನಿನ್ನ ಬಯಸಿದನೇ
ಪಡೆದು ಹಿಗ್ಗಿ ಹಾಡಿದೆನೇ
ಜೀವವೆರಡು, ಭಾವವೊಂದುಸ
ಎಂದು ನುಡಿದು, ನುಡಿಸಿ ನಲಿದು
ಮಡದಿಯಿವಳೆ ಬಾಳಿನೊಡತಿ
ಎನ್ನ ಒಡವೆ, ತೊಡವು ಎಂದೆಯೇ.
ಒಡಲಿದಿಗೋ ನಿನ್ನದೆಂದು
ಎನ್ನದೆಲ್ಲವನ್ನು ತೆತ್ತು
ಒಲುಮೆಗಿಂತ ಹಿರಿಯ ಸುಖವ
ಹಿರಿಯ ಸಿರಿಯ ಬಯಸಲಿಲ್ಲ.
ನಿನ್ನ ಸಂಗಪ್ರೀತಿಯಲ್ಲಿ
ತಿರೆಯ ಸುಖವ ಸೂರೆಗೊಂಡೆ
ನನ್ನ ಸ್ನೇಹದಲ್ಲಿ ಎಲ್ಲ
ಸುಖಗಳನ್ನು ನೀನು ಕಂಡೆಯೇ.
* * *
ವರುಷವಾರು ಉರುಳೀ ಈಗ
ಪ್ರೇಮ ಮಾಸಿ ಹಳೆಯದಾಗಿ
ಇಂದು ಸಂಗ, ಬರಿಯ ಭಂಗ;
ಇಲ್ಲವಿಲ್ಲಿ ಸುಖದ ನೆಳಲು
ನಿನ್ನ ಒನಪು ಕಣ್ಗೆ ಶೂಲ
ನುಡಿಯ ಬೆಡಗು ಬಾಣದೇಟು
ನಿನ್ನ ಸೊಲ್ಲು ಕಿವಿಗೆ ಹೊಲ್ಲ
ನೆಮ್ಮದಿಯೇ ಕನಸು ಈಗ
ಬಾ ಎಂದು ಬಾಯ ಕರೆ
ದೂರ ಎದೆ ಮೊರೆಯುತಿದೆ
ನಲ್ಲೆಯೆಂಬ ನುಡಿಯೆ ನಂಜು
ತುಟಿಯ ಮುತ್ತು ವಿಷದ ತುತ್ತು
ಎಲ್ಲರಂತೆ ನೀನು ನನಗೆ
ಕರುಬು, ಕೋಪ, ರೋಷ, ತಾಪ,
ಪಾಪ, ನಮ್ಮ ಬೇರೆ ಮಾಡಿವೆ
ಎದೆಗಳೆರಡು ದೂರ ಸಿಡಿದೆವೆ.
ಅಧರದಲ್ಲಿ ಮಧುವೆ ಸರಿ
ಹೃದಯದಲ್ಲಿ ವಿಷ ಒಸರಿ
ನಿನಗು ಇಲ್ಲ, ಸುಖ ಶಾಂತಿ;
ಕಣ್ಣ ನೋಡಿ ತಿಳಿಯಲಾರೆನೇ?
ಆದರೇನು? ಬಾಯಬಿಡೆವು
ರೂಢಿಗೊಗ್ಗಿ, ಜನಕೆ ತಗ್ಗಿ
ಕೂಡಿ ಬಾಳ ಹೊರೆಯುತಿಹೆವು
ಕೊರಗಿ ಬೆಂದು ಬೂದಿಯಾಗಿ
ಮೇಲೆ ಮೇಲೆ ಮುಗುಳುನಗೆ
ಒಳಗೆ ಕುಸಿದು ಕುದಿಯುತಿಹೆವು
ಹಿಗ್ಗು ತಗ್ಗಿ, ನುಗ್ಗುನುರಿದು
ನೊಂದು ನರಳಿ ಸವೆಯುತಿಹೆವು
ಹರಿದ ಹೃದಯ ಹೊಂದಬಹುದೆ?
ಮುರಿದ ಮನಸು ಬೆರೆವುದುಂಟೆ?
ಕಳೆದು ಹೋದ ಕಾಲ ಬಹುದೆ?
ಸುಖದ ನೆನಪದೊಂದೆ ನಮತೆ?
ಗಾಯ ಎಂದು ಮಾಯವುದು?
ಎದೆಯ ತುಮುಲಯುದ್ಧವಿದಕೆ
ತುಯ್ಯಲಾಟಕಿಹುದೆ ನಿಲು?
ಬಂಧವಿದಕೆ ಬಹುದೆ ಬಿಡು?
* * *
– ಶ್ರೀಮತಿ ಉಮಾದೇವಿ
ಜೀವನ, ಸಂಪುಟ ೭, ಸಂಚಿಕೆ ೫, ೧೯೪೬
Leave A Comment