ಎಮ್ಮನದ ದೀವಿಗೆಯನಾರಿಸುವ ಜನರಿವರು.
ತೈಲವಿಲ್ಲದೆ ದೀಪ ಬಾಡುತಿರುವುದು ಇಲ್ಲಿ.
ಸಾರಮಿಲ್ಲದ ಬಾಳು ಸುಡುತಿಹುದು ಮನವ.
ನೇಹಿಗರು ಈಗಿಲ್ಲ, ಬಾಹಿರಳು ಆಗಿಹೆನು.
ಮೋಹನದ ರಸವೆನಗೆ ಸುಳಿವ ತೋರಿಲ್ಲ.
ಇನಿರಸದ ಮಧುವಿನಿಂ ಮತ್ತಳಾದಾ ಎನ್ನ,
ವಿರಸ ಬಾಳ್ವೆಗೆ ನೂಕಿ, ಬಾಗಿಲನು ಹಾಕಿದರು.
ಕರುಣವಿಲ್ಲವೆ ನಿಮಗೆ, ದಯೆಯ ಸುಳಿವಿಲ್ಲ?
ಮಾಸವುರುಳಿದ ಹಾಗೆ, ಮಾಸುತಿರುವುದು ಆಸೆ
ಅರುಳುವುದೆ ಮತ್ನೆನ್ನ ಮನದ ತಾವರೆಯು?
ಉದಯಭಾನುವು ಮತ್ತೆ ಉದಿಸುವನೆ ಹೃದಯದಲಿ?
ಆಸೆಯುರುಳುವುದೊಮ್ಮೆ, ಆಸೆಯರಳುವುದೊಮ್ಮೆ
ಮರುಕೊಳಿಪ ಆಸೆಗಳ ಕೊಲ್ಲಲೋ, ಗೆಲ್ಲಲೋ?

* * *

– ಶ್ರೀ ಲೀಲಾವತಿ ಪಿಚ್ಚಮುತ್ತು
ಜೀವನ, ಸಂಪುಟ ೭, ಸಂಚಿಕೆ ೪, ೧೯೪೬