೧
ಅಗಲಿ ನಡೆದೆ ನಗುದ ಕಂದ
ಮುಗಿಲಿನಾಚೆ ಸಗ್ಗ ಬಯಸಿ
ಮನುಜ ಜೀವನಕ್ಕೆ ಹೇಸಿ
ದುಃಖರಾಶಿಗೆಮ್ಮ ಹೊಗಿಸಿ
೨
ಎಣಿಕೆ ಗೈಯಲಾಗದಂಥ
ಊರನೀನು ಸೇರಿನಿಂದೆ
ದೂರ ಬಾನ ಹೃದಯದಲ್ಲಿ
ಕಾಂಬೆಯೇನು ತಾರೆಯಾಗಿ?
೩
ಅರಳಿ ನಲಿವ ಹೂವ ಮೊಗ್ಗು
ಅರಳ್ವ ಮುನ್ನ ಉದುರಿ ಹೋಯ್ತೆ!
ಬಾಳಸವಿಯ ಹೀರ್ವ ಮೊದಲೆ
ಬಾಳ್ವ ಬಯಕೆ ಇಲ್ಲದಾಯ್ತೆ|
೪
ಬಾನಿನೆದೆಯ ಬೆಳಗುವಂತೆ
ಮನೆಯ ಬೆಳಗಿ ಸುಖದೊಳಾಡೆ
ಮುದ್ದು ಮಗಳೆ ಎದ್ದುಬಾರೆ
ಹೃದಯಕಿನಿತು ಶಾಂತಿನೀಡೆ
* * *
– ಶ್ರೀ ಜಿ. ಮೀರಾ
ಜೀವನ, ಸಂಪುಟ ೭, ಸಂಚಿಕೆ ೫, ೧೯೪೯
Leave A Comment