ಬಾಯ್ತೆರೆದು ಮುತ್ತಿರುವ
ದಳ್ಳುರಿಯ ಮಧ್ಯದೊಳು
ಚಿಚ್ಛಕ್ತಿಯೊಂದೆದ್ದಿತು
ಇದೆ ಸಮಯ-ಇದೆ ಸಮಯ
ತಡಮಾಡದಿರು ಏಳು
ರೂಪವನು ಇಳಿಸೆಂದಿತು ||೧||
ರೂಪವೆಂದರೆ ಏನೊ
ಚಿತ್ರವಾಗಿದೆ ಮಾತು
ಶಿಲ್ಪಿಯೇ ನಾನೆಂದೆನು.
ಪರಿಹರಿಪೆ ಸಂಶಯವ
ನೋಡೆನುತ ಬಹುತರದ
ಭಾವಗಳ ತಂದೊಡ್ಡಿತು ||೨||
ರೂಪಗಳ ಭಟ್ಟಿ ಇದು
ಆನಂದಮಿಲ್ಲಿಹುದು
ಬಿತ್ತರಿಸು ಏಳೆಂದಿತು
ಇರಲಿರಲು ಬಹುದೆಂದು
ಗೈಮೆ ಇದು ಸುಖವೆಂದು
ಚಟಪಟಿಸಿ ನಾನೆದ್ದೆನು ||೩||
ಭಾವನೋದ್ರೇಕದೊಳು
ಉಲ್ಲಾಸ ಉಕ್ಕೇರಿ
ಬಹು ದೂರ ನಾ ಸಾಗಿದೆ
ಆನಂದ ಸಿಗದಾಗಿ
ಅತ್ತಿತ್ತ ಸುಳಿದಾಡಿ
ಕಂಗೆಟ್ಟು ಬೆದಕಾಡಿದೆ ||೪||
ಓ ರೂಪವೇ ನಿನ್ನ
ಕಾಣಲೋಸುಗವೆಂದು
ಹೊಸ ರಾಜ್ಯಕ್ಕೆ ತಂದೆನು.
ಭಾವ ಶೃಂಗವೊ ನಿನ್ನ
ಗಮ್ಯ ಸ್ಥಾನವದೆಲ್ಲಿ
ಇಳಿದು ಬಾ ಬಳಿಗೆಂದೆನು ||೫||
ಕೂಗದಿರು ಕಂಡತ್ತ
ಓಡದಿರು ಬಾ ಇಲ್ಲಿ
ವಾಹಿನಿಗೆ ಅಂತ್ಯವಿಲ್ಲ
ತಾನಾಗಿ ಬಂದುದನುಸದ
ಪುಟ್ಟವಿಟ್ಟು ಬೆಲೆ ಕಟ್ಟಿ
ರೂಪ ಕೊಡು ಅದಕೆಂದಿತು ||೬||
ರೂಪಿಸುವ ಬಗೆ ಏನೊ
ಬಣ್ಣಗಳ ನಾನರಿಯೆ
ಪಾಠವೆನಗಿಲ್ಲೆಂದೆನು.
ಭಾವಗಳ ಕಟ್ಟಿರಿಸಿ
ಅರ್ಥವನು ಬಿಚ್ಚಿಡುವ
ಪದಗಳನು ತಾ ಎಂದಿತು ||೭||
ನಿನ್ನ ಕಲ್ಪನೆಯೊಳಗೆ
ಚಿತ್ರ ತಾನೇಳುವುದು
ನವನೀತ ಉದಯಿಪಂತೆ
ಭಾವದೊಳು ಕಾಂತಿಯುತ
ಔಪಾಸನೆಯು ಮೂಡೆ
ಸಾವಿಲ್ಲ ಆ ರೂಪಕೆ ||೮||
ಭಾವಗಳು ಉನ್ನತದ
ವಜ್ರಗಳು ಇದ್ದಂತೆ
ವಾಕ್ಯಗಳು ಚಿನ್ನದಂತೆ
ನಿನ್ನ ನಿಪುಣತೆಯೊಡನೆ
ಕಟ್ಟಡವ ಕಟ್ಟಿರಿಸೆ
ಪೂರ್ಣತೆಯು ಬಹುದೆಂದಿತು ||೯||
ಕಟ್ಟಿದಿರು ಕಬ್ಬಿಣದ
ಕಟ್ಟಡದಿ ಪುಷ್ಪವನು
ಮಕರಂದಮುಂಟು ಒಳಗೆ.
ಮಕರಂದಮಿಲ್ಲದೊಡೆ
ಸುಮದೊಳಗೆ ಸುಖವಿಲ್ಲ
ಪೋಗದಿರು ಆ ಗೊಡೆವೆಗೆ ||೧೦||
ಅನುಭವ ಕ್ಷೇತ್ರವನು
ಹೊಕ್ಕು ನೋಡಿದೊಡಲ್ಲಿ
ನುಡಿಗಳಿಗೆ ಕ್ಷಾಮವಿಲ್ಲ.
ಸುಲಭಶೈಲಿಯ ಸೊಗದ
ಕಬ್ಬಿನಂತಹ ಸವಿಯ
ವಾಕ್ಯಗಳ ತಾ ಎಂದಿತು ||೧೧||
ದಿಶೆದಿಶೆಗು ಅಲೆದಲೆದು
ವಾಕ್ಯಗಳ ಆಯ್ದಾಯ್ದು
ಸಡಗರದಿ ನಾ ತಂದೆನು.
ಸುಲಭಶೈಲಿಯ ಸೊಗದ
ಕಬ್ಬಿನಂತಹ ಸವಿಯ
ವಾಕ್ಯಗಳೊ ನೋಡೆಂದೆನು ||೧೨||
ಸಾಕು ಬಿಡು ಸಾಕು ಬಿಡು
ಏನ ತಂದೆಯೊ ಕಾಣೆ
ಈ ಭಾವಕೀ ಪದಗಳೇ?
ಕಡಿವಾಣವಿಲ್ಲದಿಹ
ಪದಗಳಿವು ಛೀ ಎಂದು
ಮೂದಲಿಸಿ ಸಿಡಿಗುಟ್ಟಿತು ||೧೩||
ನಿನ್ನಂತೆ ಕಂಡವರು
ಸಿಡಿಗುಟ್ಟುವರೊ ಏನೊ
ರೂಪವೇ ಬೇಡೆಂದೆನು
ಅನ್ಯರಾ ಗೊಡವೇನು
ನಿನ್ನ ಕತೆ ನಿನದಿರಲು
ಅಭಿಮಾನ ಬಿಡು ಎಂದಿತು ||೧೪||
ರೂಪವದು ನಮದಲ್ಲ
ಅನ್ಯರಿಗೆ ಹಕ್ಕಿಲ್ಲ
ವಿಶ್ವಕರ್ಮದ-ಗಣಿ-ಇದು.
ಆಳಕ್ಕೆ ತಕ್ಕಂತೆ
ಏಳುತಿದೆ ಆನಂದ
ಜನಕಜೇ ಕೇಳೆಂದಿತು ||೧೫||
* * *
– ಶ್ರೀಮತಿ ಬೆಳಗೆರೆ ಜಾನಕಮ್ಮ
ಜೀವನ, ಸಂಪುಟ ೭, ಸಂಚಿಕೆ ೪, ೧೯೪೬
Leave A Comment