ಕಂದ ನೀನೆನ್ನ ಕಣ್ಣಂಗಳದೊಳಾಡುತಿರು
ಮಂದಹಾಸವ ಬೀರಿ ನನ್ನ ನೀ ನೋಡುತಿರು
ನಂದ ನೀ ಬಳಿಯಲಿರೆ ಬಾಳಿನೀ ಬೇನೆಗಳು
ಕಂದಿ ಮರೆಯಾಗುವುದು, ನಮ್ಮ ನೀ ತೊರೆಯದಿರು.

ನಿನ್ನೊಲುಮೆ ಹಿರಿನಲುಮೆ ಎನ್ನ ಒಡಲಿನ ಚಿಲುಮೆ
ನಿನ್ನೊಳಿಹು ಘನರೋಷ ಬಿಗಿವ ಪ್ರೇಮದ ನಾಶ
ನಿನ್ನ ಆ ಹುಸಿಮುನಿಸು ಎನಗದುವೆ ಬಲು ಸೊಗಸು
ನಿನ್ನ ಬಿನ್ನಾಣ ನೀನೆನಗೀದ ಮನ್ನಣೆಯು

ನಿನ್ನ ಆ ನೋಟ ಮಾಡುತಲಿಹುದು ಅತಿ ಮಾಟ
ನಿನ್ನ ಉರುಕಾಟವಾಗಿಹುದೆನ್ನ ಮನದೂಟ
ನಿನ್ನ ರಾಗವೆ ಸತತ ನಾ ಬಯಸುತಿಹ ಭೋಗ;
ನಿನ್ನ ತೊದಲುವ ನುಡಿಯು ಬಾಳಿನ ಹೊಸಲು ಕುಡಿಯು.

ನಲಿ ನಲಿದು ಆಡುತಲಿ ಕುಣಿಕುಣಿದು ಓಡುತಲಿ
ಬಾಲ ನೀ ಬೀಳಲ್ಕೆ ಕಂಬನಿಯ ಮುತ್ತುಗಳು
ಗಲ್ಲದಲಿ ಉರುಳುರುಳಿ ಉದುರುತಲಿ ಕೂಡುತಿರೆ,
ಕಲ್ಲೆದೆಯು ಕರಗುವುದು ನಿನ್ನ ರೋದನದಿಂದ.

ಮುದ್ದು ನಿನ್ನಯ ಅಂದದಿಂದ ಎನಗಾನಂದ,
ಚಂದಿರನ ನಾಚಿಸುವ ಮೊಗದಿಂದ ಕೂಡಿ ನೀ
ಮಲ್ಲಿಗೆಯ ಬನದಲ್ಲಿ ಆಡುತಿಹ ಮರಿದುಂಬಿ
ಯಂದದಲಿ ಇಹ ಕಂಗಳಿಂದ ನೀ ನೋಡುತಿರೆ.

* * *

– “ಸುಮ
ಜೀವನ, ಸಂಪುಟ ೭, ಸಂಚಿಕೆ ೭, ೧೯೪೬