ನಮ್ಮ ಹಿಂದಿನ ಲೇಖಕಿಯರು ಏನನ್ನು ಕುರಿತು ಹೇಗೆ ಬರೆದರು, ಅವರು ವ್ಯವಸ್ಥೆಯ ಸ್ವರೂಪಕ್ಕೆ, ಮನುಷ್ಯ ಸಂಬಂಧಗಳಿಗೆ, ಇತಿಹಾಸಕ್ಕೆ ವರ್ತಮಾನಕ್ಕೆ ಹೇಗೆ ಪ್ರತಿಕ್ರಿಯಿಸಿದರು, ತಮ್ಮೊಳಗನ್ನು ಹೇಗೆ ಹಂಚಿಕೊಂಡರು ಎಂಬೆಲ್ಲ ಕುತೂಹಲವೇ ನನ್ನನ್ನು ಇಂಥ ಕೆಲಸಗಳಿಗೆ ಹಚ್ಚಿದೆ. ಇದು ಹೀಗಿತ್ತು ಎಂದು ಕಾಣುವ ಆಸೆಯಷ್ಟೇ ಅಲ್ಲ. ಅದು ಹಾಗೆಯೇ ಏಕಾಯ್ತು, ಇವತ್ತಿನ ನಮಗೆ ಅದು ಹೇಗೆ, ಎಲ್ಲಿ ಅರ್ಥಪೂರ್ಣ ಎಂಬ ಪ್ರಶ್ನೆಗಳೂ ಹುಡುಕಾಟಕ್ಕೆ ಪ್ರೇರಕವಾಗಿವೆ. (ವಿಜಯಾದಬ್ಬೆ ‘ನೆನಕೆ’, ಸಾರಸರಸ್ವತಿ, ಮಹಿಳಾ ಸಾಹಿತ್ಯಿಕ, ಹುಬ್ಬಳ್ಳಿ, ೧೯೯೬)

ಮಹಿಳೆಯರ ಆಧುನಿಕ ಸಾಹಿತ್ಯದ ಆರಂಭಿಕ ನಡೆಯನ್ನು ಗುರುತಿಸುವ ದಿಕ್ಕಿನಲ್ಲಿ ಕೆಲಸ ಮೊದಲುಗೊಂಡು ದಶಕ ಕಳೆದಿದೆ. ೧೯೯೨ರಲ್ಲಿ ಪ್ರಕಟಗೊಂಡ ತಿರುಮಲಾಂಬ ಬದುಕು-ಬರಹವನ್ನೊಳಗೊಂಡ ‘ಹಿತೈಷಿಣಿಯ ಹೆಜ್ಜೆಗಳು’ ಇದರ ಆರಂಭಿಕ ಕೃತಿಯಾಗಿದೆ. ತಿರುಮಲಾಂಬ ಅಲ್ಲದೆ ಶ್ಯಾಮಲಾದೇವಿ, ಸರಸ್ವತಿದೇವಿ ಗೌಡರ ಕುರಿತ ಸಾಹಿತ್ಯ ವಾಚಿಕೆಗಳನ್ನೂ ಸಿದ್ಧಪಡಿಸುವ ಮೂಲಕ ಈ ಬಗೆಯ ಕೆಲಸದ ಮುಂಚೂಣಿಯಲ್ಲಿದ್ದ ವಿಜಯದಬ್ಬೆಯವರು ಈ ಚಟುವಟಿಕೆಯ ಆಶಯವನ್ನು ಹೀಗೆ ಸೈದ್ಧಾಂತೀಕರಿಸಿ ಕೊಳ್ಳುತ್ತಾರೆ.

ಮಹಿಳೆಯ ಚರಿತ್ರೆಯ ಶೋಧ ಮತ್ತು ಪುನಾರಚನೆಯಲ್ಲಿ ಸ್ತ್ರೀವಾದಕ್ಕಿರುವ ಆಸಕ್ತಿಯಂತೆ ಸ್ತ್ರೀವಾದಿ ವಿಮರ್ಶೆಗೆ ಮಹಿಳಾ ಸಾಹಿತ್ಯ ಪರಂಪರೆಯಲ್ಲಿ ಆಸಕ್ತಿಯಿದೆ. ಇಂಥದೊಂದು ಪರಂಪರೆಯ ಪ್ರಜ್ಞೆ ಹೂತಹೋದ ಸ್ತ್ರೀಯರ ಆತ್ಮವಿಶ್ವಾಸವನ್ನು ಎತ್ತಬಹುದು, ನ್ಯಾಯ ಪಡೆಯದ ಲೇಖಕಿಯರು ನ್ಯಾಯ ಪಡೆಯಬಹುದು. ಪರಂಪರೆಯ ಗುಣಮಿತಿಗಳು ಮುಂದಿನ ದಾರಿ ಮೇಲೆ ಬೆಳಕು ಚಲ್ಲಬಹುದು. ಇಂದಿನ ಸ್ತ್ರೀಯನ್ನು ಅರ್ಥಮಾಡಿಕೊಳ್ಳಲು ನೆರವಾಗಬಹುದು. ಹೀಗೆ ಪರಂಪರೆಯ ತಿಳಿವಿಗೆ ರಚನಾತ್ಮಕ ಪಾತ್ರವಿದೆ.[1]

ಹೆಚ್ಚು ಕಡಿಮೆ ಈ ಸೈದ್ಧಾಂತಿಕ ಆಶಯವನ್ನು ಮುಂದಿಟ್ಟುಕೊಂಡೇ ಇದುವರೆಗೆ ಹಲವು ಸಂಶೋಧನಾ ಕೆಲಸಗಳು ನಡದಿದ್ದು, ಅವುಗಳ ಫಲವಾಗಿ ಶಾಂತಾಬಾಯಿ ನೀಲಗಾರ, ತಿರುಮಲಾಂಬ, ಆರ್‌. ಕಲ್ಯಾಣಮ್ಮ, ಶ್ಯಾಮಲಾದೇವಿ, ಸರಸ್ವತಿಬಾಯಿ ರಾಜವಾಡೆ, ಸರಸ್ವತಿದೇವಿ ಗೌಡರ, ಕೊಡಗಿನ ಗೌರಮ್ಮ, ಬೆಳಗೆರೆ ಜಾನಕಮ್ಮ, ಬೆಳಗೆರೆ ಪಾರ್ವತಮ್ಮ ಮತ್ತು ದೇವಾಂಗನಾಶಾಸ್ತ್ರಿ ಮುಂತಾದ ಹಲವು ಹತ್ತು ಹಿರಿಯ ಲೇಖಕಿಯರು ಆಧುನಿಕ ಮಹಿಳಾ ಸಾಹಿತ್ಯದ ಕೊಂಡಿಗಳಾಗಿ ಬೆಳಕಿಗೆ ಬಂದಿದ್ದಾರೆ. ಅವರ ವೈವಿಧ್ಯಮಯ ಸಾಹಿತ್ಯರಾಶಿ ಓದುಗರ ಹಾಗೂ ವಿಮರ್ಶಕರ ಮುಂದಿದೆ. ಕನ್ನಡದ ಸ್ತ್ರೀವಾದಿ ವಿಮರ್ಶೆ ಈ ಲೇಖಕಿಯರನ್ನು ಬಹುಪಾಲು ಮರೆತುಹೋದ, ಹೂಳಲ್ಪಟ್ಟ, ನಿರ್ಲಕ್ಷ್ಯಕ್ಕೆ ಒಳಗಾದ ಲೇಖಕಿಯರೆಂದು ಸಂಭೋಧಿಸುತ್ತದೆ. ಹಾಗೂ ಅದಕ್ಕೆ ಪುರುಷ ಪ್ರಧಾನ ವ್ಯವಸ್ಥೆಯ ಸಾಹಿತ್ಯ ರಾಜಕಾರಣವನ್ನು ಕಾರಣವಾಗಿ ಗುರುತಿಸುತ್ತದೆ.

ಮಹಿಳಾ ಸಾಹಿತ್ಯ ಪರಂಪರೆ ಹಾಗೂ ಲಿಂಗರಾಜಕಾರಣದ ಪ್ರಶ್ನೆಯನ್ನು ಇನ್ನೊಂದು ನೆಲೆಯಿಂದ ಪ್ರವೇಶಿಸುವ ತೇಜಸ್ವಿನಿ ನಿರಿಂಜನ ಹಾಗೂ ಸೀಮಂತಿನಿ ನಿರಂಜನರು ಸಮಕಾಲೀನ ಸಂದರ್ಭದಲ್ಲಿ ಕೂಡ ಮಹಿಳಾ ಸಾಹಿತ್ಯವು ದಾಖಲಾಗುತ್ತಲೇ ತಿರಸ್ಕೃತಗೊಳ್ಳುವ ಇನ್ನೊಂದು ಮಾದರಿಯನ್ನು ಅನುಪಮಾ ನಿರಂಜನರ ‘ಮಾಧವಿ’ ಕೃತಿಯ ಉದಾಹರಣೆಯೊಂದಿಗೆ ವಿವರಿಸುತ್ತಾರೆ.[2] ಪ್ರಾಚೀನ ಕಾಲವಿರಲಿ, ಸಮಕಾಲೀನ ಸಂದರ್ಭದಲ್ಲಿ ಕೂಡ ಗಮನಾರ್ಹವಾದ ಕೃತಿಯೊಂದನ್ನು ನೋಡಿಯೂ ಪಕ್ಕಕ್ಕಿಡುವ ಮೂಲಕ ಮಹಿಳಾ ಸಾಹಿತ್ಯವನ್ನು ಮೂಲೆಗುಂಪಾಗಿರುವ ಲಿಂಗರಾಜಕಾರಣವನ್ನು ಪ್ರಶ್ನಿಸುತ್ತಾರೆ. ‘ಪ್ರಧಾನಧಾರೆ’ಯ[3] ಪೂರ್ವಾಗ್ರಹಪೀಡಿತ ವಿಮರ್ಶೆ ಹಾಗೂ ಸ್ಥಾಪಿತ ಮೌಲ್ಯಗಳ ಸಾಹಿತ್ಯ ರಾಜಕಾರಣವು ತನಗೆ ಅಪಥ್ಯವೆನಿಸುವ ಕೃತಿಯ ಇರವನ್ನು ಕೇವಲ ಮೌನದ ಮೂಲಕವೇ ಅಳಿಸಲೆತ್ನಿಸುತ್ತದೆ. ಹಾಗಾಗಿ ಮಹಿಳಾ ಸಾಹಿತ್ಯದ ಮೇಲಿನ ಪ್ರಧಾನಧಾರೆಯ ಲಿಂಗರಾಜಕಾರಣದ ಪ್ರಹಾರ ಒಮ್ಮೆ ಮಾತುಗಾರಿಕೆಯದಾದರೆ ಇನ್ನೊಮ್ಮೆ ಮೌನಾಶ್ರಯಿದಾದುದು ಆಗಿರಬಲ್ಲದು. ಅಂತೆಯೇ ಅದು ಕೇವಲ ಪರಂಪರೆಗೆ ಮಾತ್ರ ಸಂಬಂಧಿಸಿದ ಸಂಗತಿಯಲ್ಲ. ಸಮಕಾಲೀನ ಸನ್ನಿವೇಶವೂ ಹೌದು. ಈ ಅರ್ಥದಲ್ಲಿ ತಿರುಮಲಾಂಬ ಮರೆತು ಹೋದ ಲೇಖಕಿಯ ಮಾದರಿಯಾದರೆ ಅನುಪಮ ನಿರಂಜನ ಸಮಕಾಲೀನ ಸಂದರ್ಭದ ಉದಾಹರಣೆಯಾಗುತ್ತಾರೆ.

ಮೇಲಿನ ಎರಡು ಮಾದರಿಗಳಲ್ಲದೆ ಮಹಿಳಾ ಸಾಹಿತ್ಯವನ್ನು ಧೃತಿಗೆಡಿಸುವ ಇನ್ನೊಂದು ಮಾದರಿಯನ್ನು ನಾನು ಬೇರೆಡೆ ಪ್ರಸ್ತಾಪಿಸಿದ್ದೇನೆ.[4] ಗಂಭೀರ ವಿಮರ್ಶೆಯ ಹೆಸರಿನಲ್ಲಿ ತನ್ನ ವಿಮರ್ಶಾ ಮೌಲ್ಯಗಳನ್ನು ಮಹಿಳಾ ಸಾಹಿತ್ಯದ ಮೇಲೆ ಹೇರುವ ಯಾಜಮಾನ್ಯ ಧೋರಣೆಯ ಮೂಲಕ ಅದನ್ನು ಕಳಪೆಯದೆಂದೋ, ಅಸಾಹಿತ್ಯಿಕವೆಂದೂ ವರ್ಗೀಕರಿಸುವ ಕ್ರಮ ಇದು. ಮಾಸ್ತಿ ವೆಂಕಟೇಶ ಅಯ್ಯಂಗಾರರು ತಿರುಮಲಾಂಬ ಅವರ ಸಾಹಿತ್ಯ ಕುರಿತಂತೆ ‘ಸತಿ ಹಿತೈಷಿಣಿ’ ಎಂಬ ಹೆಸರಿನ ವಿಮರ್ಶಾಲೇಖನವೊಂದನ್ನು ಬರೆದು ನಂತರದಲ್ಲಿ ತಾವೇ ಅದನ್ನೊಂದು ಕಟುವಿಮರ್ಶೆ ಎಂಬುದಾಗಿ ಒಪ್ಪಿಕೊಂಡ ಸಂಗತಿಯು ಮಹಿಳಾ ಸಾಹಿತ್ಯದ ಬಗ್ಗೆ ಸಹಾನುಭೂತಿಯ ಮಾತನಾಡುತ್ತಲೇ, ಅದೆ ಹೆಚ್ಚುಗಾರಿಕೆಯನ್ನು ಪ್ರಸ್ತಾಪಿಸುತ್ತಲೇ ತನ್ನ ವಿಮರ್ಶಾ ಮಾನದಂಡಗಳ ಮೂಲಕ ಪ್ರಹಾರ ಮಾಡುವ ಕ್ರಮಕ್ಕೆ ಉದಾಹರಣೆಯಾಗಿದೆ:

ಗ್ರಂಥ ಕರ್ತ್ರಿಯವರ ವಿಷಯದಲ್ಲಿ ಗೌರವ ಇಲ್ಲದಿದ್ದರೆ ನಾನು ವಿಮರ್ಶೆಯನ್ನು ಬರೆಯುತ್ತಿರಲಿಲ್ಲ. ಆದರೆ ವಿಮರ್ಶೆಯಲ್ಲಿ ಒಂದೆರಡು ಕಡೆ ಮಾತುಗಳು ಸ್ವಲ್ಪ ಕಠಿಣವಾದುದೆಂದು ಈಚೆಗೆ ನನಗೆ ತೋರಿದೆ.[5]

ಮಾಸ್ತಿಯವರು ತಮ್ಮ ಸಮಕಾಲೀನ ಸಂದರ್ಭದಲ್ಲಿ ಸಾಹಿತ್ಯ ಚಟುವಟಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದ, ಅದರ ವಿವಿಧ ಸ್ಥರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ತಿರುಮಲಾಂಬ ಅವರ ಸಾಹಿತ್ಯವನ್ನು ವಾಸ್ತವಿಕತೆ-ಕಲಾತ್ಮಕತೆಗಳೆಂಬ ಅತ್ಯಂತ ಸಾಪೇಕ್ಷವಾದ ಅಥವ ಅಮೂರ್ತವಾದ ಪರಿಕಲ್ಪನೆಯನ್ನು ತಮ್ಮ ಅಗತ್ಯಕ್ಕನುಗುಣವಾಗಿ ವ್ಯಾಖ್ಯಾನಿಸಿ ಬಳಸುವ ಮೂಲಕ ಇಲ್ಲಿ ವಿಮರ್ಶಿಸಿದ್ದಾರೆ. ಈ ವಿಮರ್ಶೆ ತಿರುಮಲಾಂಬ ಅವರ ಬರವಣಿಗೆಯನ್ನು ಹಿಮ್ಮೆಟ್ಟಿಸಿಲ್ಲವೆಂಬುದು ನಿಜವಾದರೂ, ವಿಮರ್ಶೆಯ ಮರ್ಜಿಯ ಮೇರೆಗೆ ಕೃತಿಯೊಂದು ಪರಂಪರೆಯಲ್ಲಿ ತನ್ನ ಸ್ಥಾನ ಕಾಯ್ದುಕೊಳ್ಳಬೇಕಾದ ಸನ್ನಿವೇಶದಲ್ಲಿ ನಿರ್ಲಕ್ಷ್ಯಕ್ಕೊಳಗಾಗಲು ಕಾಣಿಕೆ ಸಲ್ಲಿಸಿರಬಹುದೆಂಬುದು ಗಮನಿಸಬೇಕಾದುದು. ಸ್ವತಃ ಮಾಸ್ತಿಯವರೇ ವಿಮರ್ಶೆಯ ಜವಾಬ್ದಾರಿಯನ್ನು ಗುರುತಿಸುವಂತೆ[6] ವಿಮರ್ಶೆ ಓದುಗರ ಮಾರ್ಗದರ್ಶಿಯಾಗಿ ಕೆಲಸ ಮಾಡಬೇಕು ಎನ್ನುವುದಾದರೆ, ಖಂಡಿತವಾಗಿ ಮಾಸ್ತಿಯವರು ಬರೆದ ಸಹಿಹಿತೈಷಿಣಿ ವಿಮರ್ಶೆ ತಿರುಮಲಾಂಬ ಅವರ ಸಾಹಿತ್ಯದ ಓದುಗರಿಗೆ ಅವಸರದ, ಅವೈಜ್ಞಾನಿಕವೆನ್ನಬಹುದಾದ ಅಥವಾ ಪೂರ್ವಾಗ್ರಹಕ್ಕೆ ಒಳಗಾದ ಮಾರ್ಗದರ್ಶನವೊಂದನ್ನು ನೀಡುವುದಾಗಿದೆ. ಪ್ರಧಾನಧಾರೆಯ ಯಾವುದೇ ಲೇಖಕರಿಗೆ ಕಡಿಮೆ ಇಲ್ಲದ ತಿರುಮಲಾಂಬರಂತಹ ಸಾಹಿತ್ಯ ಪರಿಶ್ರಮಿಯು ಆಧುನಿಕ ಕನ್ನಡ ಸಾಹಿತ್ಯ ಪರಂಪರೆಗೆ ಮರೆತು ಹೋದುದು ಹೇಗೆ ಎಂಬ ಪ್ರಶ್ನೆಗೆ ಸ್ವಲ್ಪಮಟ್ಟಿಗಾದರೂ ಉತ್ತರ ಹೊಳೆಯಿಸಬಲ್ಲುದಾಗಿದೆ. ಮಾಸ್ತಿಯವರ ಉದಾಹರಣೆಯಂತೆ ತಮ್ಮ ವಿಮರ್ಶಾಪರಿಕರಗಳನ್ನು ಮಹಿಳಾ ಸಾಹಿತ್ಯದ ಮೇಲೆ ಹೇರುವ ಮೂಲ ಅದನ್ನು ಅಡಿಗೆ ಮನೆ ಸಾಹಿತ್ಯವೆಂದು, ಜನಪ್ರಿಯ ಸಾಹಿತ್ಯವೆಂದು ಹಣೆಪಟ್ಟಿ ಕಟ್ಟಿ ಪಕ್ಕಕ್ಕಿಡುವ, ಅಸ್ಪೃಶ್ಯಗೊಳಿಸುವ ಸನ್ನಿವೇಶವನ್ನು ಸಮಕಾಲೀನ ಸಂದರ್ಭದಲ್ಲಿ ಕೂಡ ಕಾಣಬಹುದಾಗಿದೆ.

ಮೇಲಿನ ಮೂರು ಉದಾಹರಣೆಗಳು ಮಹಿಳಾ ಸಾಹಿತ್ಯ ಮತ್ತು ಪ್ರಧಾನಧಾರೆಯ ಲಿಂಗರಾಜಕಾರಣದ ಪ್ರಶ್ನೆ ಎಷ್ಟೊಂದು ಆಳವಾದುದು ಹಾಗೂ ನಾಜೂಕಾದುದು ಎಂಬುದನ್ನು ತೋರಿಸುತ್ತದೆ. ಹಾಗೆಯೇ ಈ ಬಗೆಯ ಹಲವು ನಿದರ್ಶನಗಳು ಪುರುಷ ಸಾಹಿತ್ಯದ ಸಂದರ್ಭದಲ್ಲಿ ಸಿಗಲಾರವೆ? ವಿಮರ್ಶೆಯ ಲಕ್ಷ್ಯ-ನಿರ್ಲಕ್ಷ್ಯಗಳೆರಡನ್ನೂ ಪೂರ್ವಾಗ್ರಹಪೀಡಿತ ಲಿಂಗರಾಜಕಾರಣವೆಂದು ವ್ಯಾಖ್ಯಾನಿಸುವುದಾದರೆ ಮಹಿಳಾ ಸಾಹಿತ್ಯವನ್ನು ಪರಿಭಾವಿಸುವ ಬಗೆ ಹೇಗೆ? ಇತ್ಯಾದಿ ಹಲವು ಮಹತ್ವದ ಪ್ರಶ್ನೆಗಳು ಇಲ್ಲಿ ಹುಟ್ಟಿಕೊಳ್ಳುತ್ತವೆ. ಈ ಬಗೆಯ ವಿಮರ್ಶೆಗಳು ಮೇಲುನೋಟಕ್ಕೆ ಮಹಿಳೆಯರ ಬರಹದ ಮೇಲೆ ಪರಿಣಾಮ ಬೀರಿದಂತೆ ಭಾಸವಾದರೂ ವಾಸ್ತವದಲ್ಲಿ ಅದು ಸಾಹಿತ್ಯ ಪರಂಪರೆಯೊಂದನ್ನು ಅಖಂಡವಾಗಿಯೇ ಘಾಷಿಗೊಳಿಸುವುದಾಗಿದೆ. ಈ ಬಗೆಯ ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡೇ ಡಾಲೆಸ್ಟೆಂಡರ್ (Dale Spender) ಮಹಿಳಾ ಸಾಹಿತ್ಯದ ವಿಚಾರದಲ್ಲಿ ಲಿಂಗ ಅಸಮಾನತೆಯ ರಾಜಕಾರಣವು ಆರಂಭಿಸುವ ಈ ವಿಶ್ಲೇಷಣಾ ಕ್ರಮವು ಅಂತಿಮವಾಗಿ ಮಹಿಳೆಯನ್ನು ಮೀರಿ, ಸಾಹಿತ್ಯವನ್ನೂ ಮೀರಿ ಸಮಾಜವನ್ನು ವ್ಯಾಪಿಸುವುದಾಗುತ್ತದೆ ಎನ್ನುತ್ತಾರೆ.

ಯಾವಾಗ ಸಾಹಿತ್ಯ ಪರಂಪರೆಯೊಂದು ಒಂದು ಸಣ್ಣ ಆಯ್ದಗುಂಪಿನ ದೃಷ್ಟಿಕೋನಗಳು ಹಾಗೂ ಮೌಲ್ಯಗಳನ್ನು ಮಾತ್ರ ಪ್ರತಿನಿಧಿಸುತ್ತ, ಅದರ ಚೌಕಟ್ಟಿಗೆ ಒಳಪಡದವುಗಳನ್ನು ಗುರುತಿಸಲು ಯೋಗ್ಯವಲ್ಲವೆಂದು ತೀರ್ಮಾನಿಸುತ್ತದೆಯೋ, ಆಗ ಸಾಹಿತ್ಯ ಪರಂಪರೆಯಲ್ಲಿ ಒಳ್ಳೆಯ-ಕೆಟ್ಟ, ಶ್ರೀಮಂತ-ಬಡ, ಪ್ರಧಾನ-ಅಧೀನ ಇತ್ಯಾದಿ ವಿಭಜನೆಗಳು ಸಿದ್ಧಗೊಳ್ಳುತ್ತವೆ ಹಾಗೂ ವಿಭಜನೆಯ ಪರಿಣಾಮವು ಅವು ಗುರುತಿಸಿಕೊಂಡಿದ್ದ ಮಹಿಳೆಯ ಬರಹಗಳು ಆಚೆಗೂ ವಿಸ್ತಾರಗೊಂಡು ಪರಿಣಾಮಿಸತೊಡಗುತ್ತದೆ. ಇದು ಮಹಿಳೆ, ಪುರುಷ…. ಹೀಗೆ ಇಡೀ ಸಮಾಜವನ್ನೇ ಆವರಿಸುತ್ತದೆ.[7]

ಈ ಮಾತುಗಳು ಸ್ಪಷ್ಟವಾಗಿ ಸ್ತ್ರೀವಾದಿ ಸಾಹಿತ್ಯ ವಿಮರ್ಶೆಯ ವಿಸ್ತೃತ ತಳಹದಿಯನ್ನು ನಿರೂಪಿಸುತ್ತದೆ. ಇಂದು ಮಹಿಳಾ ಸಾಹಿತ್ಯದ ವ್ಯಾಪ್ತಿಯದು ಮಾತ್ರ ಎಂಬಂತೆ ಕಾಣುವ ಪುರುಷಪ್ರಧಾನ ಸಾಹಿತ್ಯಲಿಂಗರಾಜಕಾರಣವು ಪರಿಣಾಮದಲ್ಲಿ ಇಡೀ ಸಾಹಿತ್ಯ ಪರಂಪರೆಯಲ್ಲಿ ಅದಕ್ಕೂ ಮೀರಿ ಸಮಾಜವನ್ನೇ ಟೊಳ್ಳಾಗಿಸುವ ನೆಲೆಯದಾಗಿರುತ್ತದೆ. ಹಾಗೆಯೇ ಮೇಲುನೋಟಕ್ಕೆ ಮಹಿಳೆಯ ಸಾಹಿತ್ಯದ ಪರ ಎನ್ನುವ ಸ್ತ್ರೀವಾದಿ ವಿಮರ್ಶೆಯು ಆಳದಲ್ಲಿ ಒಟ್ಟಾರೆಯಾಗಿಯೇ ಸಾಹಿತ್ಯ ಪರಂಪರೆಯೊಂದರ ಆರೋಗ್ಯದತ್ತ ಕಾಳಜಿವಹಿಸಿದ ಚಿಂತನೆಯಾಗಿದೆ. ಏಕೆಂದರೆ ವಾಸ್ತವದಲ್ಲಿ ಸಾಹಿತ್ಯ ಮತ್ತು ಲಿಂಗರಾಜಕಾರಣದ ಪ್ರಶ್ನೆ ಕೇವಲ ಸಾಹಿತ್ಯದ ಪ್ರಶ್ನೆ ಮಾತ್ರವಲ್ಲ. ಬದಲಿಗೆ ಅದೊಂದು ಸಾಮಾಜಿಕ ಸನ್ನಿವೇಶದ ಪ್ರತಿಬಿಂಬವಾಗಿರುತ್ತದೆ.

ಮೇಲಿನ ಮಾತುಗಳನ್ನು ಕನ್ನಡದ ಸಂದರ್ಭದಲ್ಲಿ ಪ್ರಚಲಿತದಲ್ಲಿರುವ ಜನಪ್ರಿಯ-ಗಂಭೀರ ಎಂಬ ಪರಿಕಲ್ಪನೆಯನ್ನು ಕುರಿತ ಚರ್ಚೆಯ ಸಂದರ್ಭದಲ್ಲಿಒ ಗಮನಿಸಬಹುದು.[8] ಕನ್ನಡದಲ್ಲಿ ಬಹುಪಾಲು ಲೇಖಕಿಯರು ಜನಪ್ರಿಯ ಲೇಖಕಿಯರು ಎಂಬ ಹಣೆಪಟ್ಟಿಯೊಂದಿಗೆ ಗುರುತುಗೊಂಡಿದ್ದಾರೆ. ಆದರೆ ಅದೇ ಮಾದರಿಯಲ್ಲಿ ಬರೆಯುವ ಹಲವು ಲೇಖಕರು ಈ ಹಣೆಪಟ್ಟಿಯ ಗಣನೆಗೂ ಒಳಗಾಗದೆ ವಿಮರ್ಶಾಜಗತ್ತಿನಲ್ಲಿ ಕಾಣೆಯಾಗಿದ್ದಾರೆ. ಅಪಾರವಾದ ಓದುಗವರ್ಗವನ್ನು ಹೊಂದಿರುವ ಜನಪ್ರಿಯ ಸಾಮಾಜಿಕ ಮತ್ತು ಪತ್ತೆದಾರಿ ಕಾದಂಬರಿಗಳ ಲೇಖಕರ ಇರವನ್ನೂ ಕೂಡ ಈ ಹೊತ್ತಿನ ವಿಮರ್ಶಾ ಜಗತ್ತು ದಾಖಲಿಸುತ್ತಿಲ್ಲ. ಅಷ್ಟರಮಟ್ಟಿಗೆ ಮಹಿಳಾ ಸಾಹಿತ್ಯದ ಸಂದರ್ಭದಲ್ಲಿ ವ್ಯಕ್ತಗೊಳ್ಳುವ ವಿಮರ್ಶಾರಾಜಕಾರಣ ಆಳದಲ್ಲಿ ಪುರುಷರ ಸಾಹಿತ್ಯವನ್ನು ವ್ಯಾಪಿಸುತ್ತಿದೆ. ಪುರುಷ ಪ್ರಧಾನ್ಯದೊಳಗೂ ಒಂದು ನಿರ್ದಿಷ್ಟ ಗುಂಪನ್ನು ಮಾತ್ರ ಪರಂಪರೆಯ ವಕ್ತಾರವಾಗಿ ಮುಂಚೂಣಿಗೆ ತರಲಾಗುತ್ತಿದೆ. ಜನಪ್ರಿಯ-ಗಂಭೀರ ಎಂಬ ಶ್ರೇಣಿಕೃತ ವಿಭಜನೆಯ ಪರಿಕಲ್ಪನೆಗಳ ಮೂಲಕ ಸಾಹಿತ್ಯ ವಿಮರ್ಶೆ ‘ಗಂಭೀರ’ವೆಂಬ ಒಂದು ವರ್ಗವನ್ನು ಮಾತ್ರ ಪರಿಗಣಿಸುತ್ತದೆ. ‘ಜನಪ್ರಿಯ’ವೆಂಬ ಇನ್ನೊಂದು ವರ್ಗವನ್ನು ಪರಂಪರೆಯ ಪರಿಧಿಯಲ್ಲಿ ಅಥವಾ ಆಚೆಗೆ ಇಟ್ಟು ವ್ಯವಹರಿಸಲಾಗುತ್ತದೆ. ಈ ವಿಮರ್ಶಾ ರಾಜಕಾರಣದ ವಿರುದ್ಧ ಸ್ತ್ರೀವಾದವು ಎತ್ತುವ ತಕರಾರುಗಳು ಮೇಲುನೋಟಕ್ಕೆ ಮಹಿಳಾ ಸಾಹಿತ್ಯವನ್ನು ಕುರಿತಂತೆ ಕಂಡರು ಆಳದಲ್ಲಿ ಅದು ಒಟ್ಟಾರೆಯಾಗಿಯೇ ವಿಮರ್ಶಾ ಜಗತ್ತಿನ ಸ್ಥಾಪಿತ ಮೌಲ್ಯಗಳನ್ನೂ ಶ್ರೇಷ್ಠತೆಯ ರಾಜಕಾರಣವನ್ನೂ ಪ್ರಶ್ನಿಸುವುದಾಗಿದೆ. ಈ ಅರ್ಥದಲ್ಲಿ ಸ್ತ್ರೀವಾದಿ ವಿಮರ್ಶೆ ಪಾರ್ಶ್ವಿಕ ನೆಲೆಯದಲ್ಲ. ಹೋಲಿಸ್ಟಿಕ್ ಅಪ್ರೋಚನ್ನು ಹೊಂದಿದ್ದು.

ಇನ್ನು ಮಹಿಳಾ ಸಾಹಿತ್ಯ ಕುರಿತ ಲಕ್ಷ್ಯ-ನಿರ್ಲಕ್ಷ್ಯಗಳ ವಿಚಾರ. ಪುರುಷ ಪ್ರಧಾನ ಸಾಮಾಜಿಕ ಸಂದರ್ಭದಲ್ಲಿ ಮೇಲುನೋಟಕ್ಕೆ ಈ ಪರಿಕಲ್ಪನೆಗಳು ವಿರುದ್ಧಾರ್ಥಕವಾಗಿದಂತೆ ಕಂಡುಬಂದರೂ ಅಂತರ್ಯದಲ್ಲಿ ಇವು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಒಂದು ಇನ್ನೊಂದಕ್ಕೆ ಚಲಾವಣೆಯನ್ನು ನೀಡುತ್ತಿರುತ್ತವೆ. ಸೂಕ್ತವಾಗಿ ನೋಡಿದರೆ ಪ್ರೋತ್ಸಾಹದ, ಕಾಳಜಿಯ, ಉದಾರತೆಯ ಸಂವೇದನೆಗಳು, ಸನ್ನಿವೇಶಗಳು ಪರಿಣಾಮದಲ್ಲಿ ದ್ವಿಮುಖವಾದುದಾಗಿರುತ್ತವೆ. ಪುರು ಪ್ರಾಧಾನ್ಯತೆಯಲ್ಲಿ ಸ್ತ್ರೀ ಪುರುಷಾಧಿಪತ್ಯದ ಶೋಷಣೆ-ರಕ್ಷಣೆಗಳೆಂಬ ಎರಡೂ ನೆಲೆಗಳಿಂದಲೂ ಅಸಮಾನತೆಗೆ ಒಳಗಾಗುವಂತೆ, ಸಾಹಿತ್ಯದಲ್ಲಿ ಕೂಡ ಲಕ್ಷ್ಯ-ನಿರ್ಲಕ್ಷ್ಯಗಳೆರಡೂ ಅಸಮಾನತೆಯನ್ನು ಪ್ರತಿನಿಧಿಸುತ್ತಿರುತ್ತವೆ. ಏಕೆಂದರೆ ಯಜಮಾನ್ಯದ ಸ್ಥಾನದಲ್ಲಿ ನಿಂತ ಪ್ರಧಾನಧಾರೆಯು ತೋರುವ ಪ್ರೋತ್ಸಾಹವೆಂಬುದು ಅಂತರ್ಯದಲ್ಲಿ ನಿರ್ದೇಶನಗಳನ್ನು ನೀಡುವುದಾಗಿರುತ್ತದೆ. ಇದಕ್ಕೊಂದು ಅತ್ಯುತ್ತಮ ಉದಾಹರಣೆ ‘ಮಹಿಳಾ ಸಾಹಿತ್ಯ’ವೆಂಬ ಪರಿಕಲ್ಪನೆ.

೧೯೩೦ರ ದಶಕದಲ್ಲಿಯೇ ಹೆಚ್ಚು ಚಾಲ್ತಿಯಲ್ಲಿ ಕಂಡುಬರುವ ‘ಮಹಿಳಾಸಾಹಿತ್ಯ’ ಎಂಬ ಪರಿಕಲ್ಪನೆಯು ಅಂದು ಕೂಡ ಯಾವುದೇ ಶ್ಲೇಷೆಯಿಲ್ಲದೆ, ಮಹಿಳೆಯರು ಬರೆದ ಸಾಹಿತ್ಯ ಎಂಬರ್ಥದಲ್ಲಿಯೇ ಬಳಕೆಗೊಂಡಿದೆ. ಮಹಿಳಾ ಸಾಹಿತ್ಯದ ವಸ್ತುವನ್ನು ಗುರುತಿಸುವಾಗಲೂ ಮಹಿಳೆಯರಿಗೆ ಸಂಬಂಧಿಸಿದ ವಿಚಾರ ಎಂಬ ಅರ್ಥದಲ್ಲಿಯೇ ಗುರುತಿಸಲಾಗಿದೆ. ಈ ಸಾಹಿತ್ಯದ ಅಗತ್ಯ, ಅನನ್ಯತೆ ಏನು ಎನ್ನುವುದನ್ನು ‘ಪುರುಷರು ಇದುವರೆಗೆ ಸಾಹಿತ್ಯದಲ್ಲಿ ತುಂಬಲಾರದ ಮಹಿಳಾ ಜಗತ್ತನ್ನು ಮಹಿಳೆಯರೇ ಸಮರ್ಥವಾಗಿ ತುಂಬಬಲ್ಲರು’ ಎಂಬ ಆಲೋಚನೆಯೊಂದಿಗೆ ಸ್ವೀಕರಿಸಲಾಗಿದೆ. ಸ್ವಾತಂತ್ರ್ಯಪೂರ್ವದ ಲೇಖಕಿಯರು ತಮ್ಮ ಬರಹಗಳಲ್ಲಿ ಮಹಿಳಾ ಕೇಂದ್ರಿತ ಎಂಬ ವಿಚಾರವನ್ನು ವಿಸ್ತೃತ ನೆಲೆಯಲ್ಲಿ ನಿರ್ವಹಿಸಿರುವರಾದರೂ, ಆದರೆ ಸೈದ್ಧಾಂತಿಕ ಗ್ರಹಿಕೆಯಲ್ಲಿ ಸೀಮಿತ ಗ್ರಹಿಕೆಗೆ ಒಳಗಾಗಿದ್ದಾರೆ. ಮಹಿಳೆಯರಿಗೆ ಸಂಬಂಧಿಸಿದ ಎನ್ನುವಾಗ ‘ಗೃಹಕೇಂದ್ರಿತ’ ಎಂಬ ವಿವರಣೆಯನ್ನೇ ಸ್ವೀಕರಿಸಿದ್ದಾರೆ. ಆ ಕಾರಣಕ್ಕಾಗಿಯೇ ಮುಂದೆ ಮಹಿಳಾ ಸಾಹಿತ್ಯದ ಅನನ್ಯತೆಗಾಗಿ ಗುರುತುಗೊಳ್ಳಬಹುದಾದ ಮಹಿಳಾ ಸಾಹಿತ್ಯವೆಂಬ ಪರಿಕಲ್ಪನೆ ಪ್ರತ್ಯೇಕತೆಗಾಗಿ, ಸೀಮಿತಾರ್ಥದಲ್ಲಿ ಗ್ರಹಿತಗೊಳ್ಳತೊಡಗಿತು.[9]

ಪ್ರಸ್ತುತ ಸಂದರ್ಭದಲ್ಲಿ ಪ್ರಧಾನವಾದರೆ ಹಾಗೂ ಸ್ತ್ರೀವಾದಿಗಳಿಬ್ಬರೂ ಬಳಸುತ್ತಿರುವ ‘ಮಹಿಳಾ ಸಾಹಿತ್ಯ’ವೆಂಬ ಪರಿಕಲ್ಪನೆಯು ಇಬ್ಬಾಯ ಅಲಗು. ಇದರಲ್ಲಿ ನಿರ್ಲಕ್ಷ್ಯವೊಂದು ಕಡೆ, ಲಕ್ಷ್ಯವಿನ್ನೊಂದು ಕಡೆ. ಮಹಿಳಾ ಸಾಹಿತ್ಯ ಎಂಬ ಪರಿಕಲ್ಪನೆಯ ಮೂಲಕ ಒಂದು ಕಡೆ ಮಹಿಳೆಯರ ಬರವಣಿಗೆಗೆ ಅಸ್ತಿತ್ವವನ್ನು ಅನನ್ಯತೆಯನ್ನು ನೀಡುವ ಪ್ರಯತ್ನ ನಡೆಯುತ್ತಿದ್ದರೆ, ಇನ್ನೊಂದೆಡೆ ಈ ಪರಿಕಲ್ಪನೆಯೇ ಅದನ್ನು ಪ್ರಧಾನಧಾರೆಯಿಂದ ಪ್ರತ್ಯೇಕವಾಗಿಸುವ ವಿಭಜನೆ ಕ್ರಮದ ಪರಿಕರವಾಗಿ ಬಳಕೆಗೊಳ್ಳುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮಹಿಳಾ ಸಾಹಿತ್ಯ ಕುರಿತ ಪೂರ್ವಾಗ್ರಹವನ್ನು ನಿವಾರಿಸಲು ‘ಮಹಿಳಾ ಸಾಹಿತ್ಯ’ವೆಂಬ ವರ್ಗೀಕರಣವನ್ನೇ ಬಳಸಬೇಕಾಗಿದೆ. ಸಾಹಿತ್ಯಿಕ ಲಿಂಗರಾಜಕಾರಣದ ಅಪಾಯದ ಬಗ್ಗೆ ಹೆಚ್ಚು ಹೆಚ್ಚು ಪ್ರಸ್ತಾಪಿಸುತ್ತಲೇ ಅದಕ್ಕೆ ಲಿಂಗರಾಜಕಾರಣದ ಪ್ರತಿಕ್ರಿಯೆಯನ್ನೇ ನೀಡುವುದು ಅನಿವಾರ್ಯ ಎನ್ನುವಂತಹ ‘ವೈಚಾರಿಕ ದ್ವಂದ್ವ’ವೊಂದು ಗಟ್ಟಿಗೊಳ್ಳುತ್ತಿದೆ. ಅದನ್ನನುಸರಿಸಿ ಮಹಿಳಾ ಸಾಹಿತ್ಯವನ್ನು ಪ್ರೋತ್ಸಾಹಿಸುವ, ಹಾಗೇ ಪ್ರತ್ಯೇಕವಾಗಿಡುವ ಸನ್ನಿವೇಶವು ಇಂದು ಅಸ್ತಿತ್ವದಲ್ಲಿದೆ. ಅದನ್ನು ಗಮನಿಸಿ ಆತಂಕಿತರಾದ ಕೆಲವು ಲೇಖಕಿಯರು ೧೯೮೦ರ ಸುಮಾರಿನಲ್ಲಿ ‘ನಮ್ಮ ಕೃತಿಗಳನ್ನು ಮಹಿಳಾ ಸಾಹಿತ್ಯದ ಲೇಬಲ್ಲಿನಡಿಯಲ್ಲಿ ಗುರುತಿಸಬೇಡಿ’ ಎನ್ನುವಂತಾಯಿತು. ೧೯೮೨ರಲ್ಲಿ ಮೈಸೂರಿನಲ್ಲಿ ಮೊದಲ ಬಾರಿಗೆ ಲೇಖಕಿಯರ ಸಮ್ಮೇಳವೊಂದನ್ನು ಹಾ. ಮಾ. ನಾಯಕ ಅವರು ಆಯೋಜಿಸಿದಾಗ ಅದನ್ನು ಅಂದಿನ ಪ್ರಮುಖ ಸ್ತ್ರೀವಾದಿ ಲೇಖಕಿಯಾಗಿದ್ದ ವಿಜಯಾದಬ್ಬೆಯವರೇ ವಿರೋಧಿಸಿದ್ದನ್ನು ಸ್ತ್ರೀವಾದಿ ಲೇಖಕಿಯಾದ ಎಲ್. ಸಿ. ಸುಮಿತ್ರ ಅವರು ನೆನಪು ಮಾಡಿಕೊಳ್ಳುತ್ತಾರೆ.[10] ಕರ್ನಾಟಕ ಲೇಖಕಿಯರ ಸಂಘ ೧೯೭೭ರಲ್ಲಿ ಆರಂಭಗೊಂಡಾಗ ಅನುಪಮಾ ನಿರಂಜನ ಅವರು ಅದನ್ನು ವಿರೋಧಿಸಿದ್ದನ್ನು ಸಂಘದ ಅಧ್ಯಕ್ಷನಾಗಿದ್ದ ಲೇಖಕಿ ನಾಗಮಣಿ ಎಸ್. ರಾವ್ ಅವರು ದಾಖಲಿಸುತ್ತಾರೆ.[11] ಮುಂದೆ ಇವರಿಬ್ಬರೂ ಮಹಿಳಾ ಸಾಹಿತ್ಯದ ಚಟುವಟಿಕೆಯ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಾರೆ.

ಮಹಿಳಾ ಸಾಹಿತ್ಯದ ಸಂದರ್ಭದಲ್ಲಿ ಮಹಿಳಾ ರಾಜಕಾರಣವು ಎದುರಿಸುವ ಈ ಬಿಕ್ಕಟ್ಟನ್ನು ಬಿಡಿಸುವ ಕಾರಣಕ್ಕಾಗಿಯೇ ರೀಟಾ ಪೆಲ್ಸ್ಕಿ ಸ್ತ್ರೀವಾದಿ ಸಾಹಿತ್ಯವೆಂಬ ಇನ್ನೊಂದು ಪರಿಕಲ್ಪನೆಯನ್ನು ಬಳಸುತ್ತಾ, ಮಹಿಳಾ ಸಾಹಿತ್ಯವನ್ನು ಎರಡು ಬಗೆಯಲ್ಲಿ ವರ್ಗೀಕರಿಸುತ್ತಾರೆ. ಅವರ ಪ್ರಕಾರ ಲಿಂಗವ್ಯವಸ್ಥೆಯನ್ನು ಸಮಸ್ಯೀಕರಿಸಿಕೊಂಡ ಬರವಣಿಗೆಯು ಮಾತ್ರ ಸ್ತ್ರೀವಾದಿ ಸಾಹಿತ್ಯವಾಗಿದ್ದು, ಉಳಿದಂತೆ ಮಹಿಳೆಯರಿಂದ ಬರೆಯಲಾಗುವ ಎಲ್ಲ ಸಾಮಾನ್ಯ ಬರವಣಿಗೆಯನ್ನು ಆಕೆ ‘ಮಹಿಳೆಯ ಸಾಹಿತ್ಯ’ ಎನ್ನುತ್ತಾರೆ.[12]

ಈ ವರ್ಗೀಕರಣವು ಕನ್ನಡದ ಸಂದರ್ಭದಲ್ಲಿ ವಿಶೇಷವಾಗಿ ಗುರುತುಗೊಂಡದ್ದಾಗಿ ಕಾಣುವುದಿಲ್ಲವಾದರೂ ಅದು ಇನ್ನೊಂದು ಪರಿವರ್ತಿತ ರೂಪದಲ್ಲಿ ಚಲಾವಣೆಯಲ್ಲಿರುವುದನ್ನು ಗಮನಿಸಬಹುದು. ಪ್ರಧಾನಧಾರೆಯು ತನ್ನ ವಿಮರ್ಶೆಯಲ್ಲಿರುವ ಜನಪ್ರಿಯ-ಗಂಭೀರ ಎಂಬ ವರ್ಗೀಕರಣದೊಳಗೆ ಮಹಿಳೆಯರ ಸಾಹಿತ್ಯ ಮತ್ತು ಸ್ತ್ರೀವಾದಿ ಸಾಹಿತ್ಯವನ್ನು ಅಂತರ್ಗತಗೊಳಿಸಿಕೊಂಡು ಸ್ತ್ರೀವಾದಿ ಸಾಹಿತ್ಯ ರಚನೆಗಳನ್ನು ಗಂಭೀರ ಸಾಹಿತ್ಯವೆಂದು ಸ್ವೀಕರಿಸುತ್ತ ಉಳಿದ ಮಹಿಳೆಯರ ಬರವಣಿಗೆಯನ್ನು ಜನಪ್ರಿಯ ಸಾಹಿತ್ಯವೆಂದು ಪಕ್ಕಕ್ಕಿಡುತ್ತಿದೆ. ಸ್ತ್ರೀವಾದಿ ಸಾಹಿತ್ಯ ವಿಮರ್ಶೆಯಾದರೂ ಈ ತಾತ್ವಿಕ ಗ್ರಹಿಕೆಗೆ ಒಳಪಟ್ಟಂತೆಯೇ ಜನಪ್ರಿಯ-ಗಂಭೀರ ಎಂಬ ವಿಮರ್ಶಾ ಪರಿಕಲ್ಪನೆಗಳನ್ನು ಬಳಸುತ್ತಿದೆ.

ಹೀಗೆ ಸಮಕಾಲೀನ ಸ್ತ್ರೀವಾದಿ ಸಾಹಿತ್ಯ ವಿಮರ್ಶೆಯು ಮಹಿಳಾ ಸಾಹಿತ್ಯವೆಂಬ ಪರಿಕಲ್ಪನೆಯನ್ನು ದುಡಿಸಿಕೊಳ್ಳುವಾಗ ಆಳದಲ್ಲಿ ಪ್ರಧಾನಧಾರೆಯ ವಿಮರ್ಶೆಯೊಂದಿಗೆ ಸಹಮತವನ್ನು ಹೊಂದಿರುವುದರಿಂದಲೇ ಇಂದು ಅದಕ್ಕೆ ಶ್ರೇಣೀಕೃತ ವರ್ಗೀಕರಣವನ್ನು ದಾಟಿ ಮುನ್ನಡೆಯಲಾಗುತ್ತಿಲ್ಲ. ಮಹಿಳೆಯರ ಸಮಗ್ರ ಬರವಣಿಗೆಯನ್ನು ತನ್ನ ತೆಕ್ಕೆಯೊಳಗೆ ತೆಗೆದುಕೊಳ್ಳಲಾಗುತ್ತಿಲ್ಲ. ಕನ್ನಡದ ಎಲ್ಲ ಲೇಖಕಿಯರ ಮುಖವಾಣಿಯಾಗಿ ತನ್ನನ್ನು ವಿಸ್ತರಿಸಿಕೊಳ್ಳಲಾಗುತ್ತಿಲ್ಲ. ಬದಲಿಗೆ ಪ್ರಧಾನಧಾರೆಯಂತೆಯೇ ಸ್ತ್ರೀವಾದಿ ವಿಮರ್ಶೆಯೂ ಮಹಿಳಾ ಸಾಹಿತ್ಯದೊಳಗಿನ ಒಂದು ಸಣ್ಣ ಆಯ್ದ ಗುಂಪಿನ ಪ್ರತಿನಿಧೀಕರಣವನ್ನು ಮಾತ್ರ ನೆರವೇರಿಸುತ್ತಿರುವಂತೆ ಕಂಡುಬರುತ್ತದೆ. ಯಾವ ಗುಣಲಕ್ಷಣವನ್ನು ಡಾಲೆಸ್ಟೆಂಡರ್ ಪ್ರಧಾನಧಾರೆಯ ದೋಷವಾಗಿ ಗುರುತಿಸುತ್ತಾಳೆಯೋ ಅದರ ಅಂಚಿನಲ್ಲಿಯೇ ಸ್ತ್ರೀವಾದಿ ವಿಮರ್ಶೆಯು ನಿಂತಿರುವಂತೆ ಭಾಸವಾಗುತ್ತದೆ. ಪರಂಪರೆಯ ಶೋಧದ ಸಂದರ್ಭವಿರಲಿ, ಸಮಕಾಲೀನ ವಿಮರ್ಶೆಯಲ್ಲಿರಲಿ ಸ್ತ್ರೀವಾದವು ಜನಪ್ರಿಯ-ಗಂಭೀರ ಎಂಬ ವರ್ಗೀಕರಣವನ್ನು ಪ್ರಮುಖ ಮಾನದಂಡವಾಗಿಟ್ಟುಕೊಂಡೇ ಮುಂದುವರಿಯುತ್ತಿದೆ. ಪರಂಪರೆಯ ಶೋಧದ ಕೆಲಸವು ಗಂಭೀರ ಲೇಖಕಿಯೊಬ್ಬಳ ಅನಾವರಣದೊಂದಿಗೆ ತಳುಕುಹಾಕಿಕೊಳ್ಳುತ್ತಿದೆ. ಈ ಗಂಭೀರ-ಜನಪ್ರಿಯ ಪರಿಕಲ್ಪನೆಗಳು ಮೂಲಭೂತವಾಗಿ ಶ್ರೇಷ್ಠ-ಕನಿಷ್ಠವೆಂಬ ಮೌಲ್ಯ ನಿರ್ಣಯದ ಮಾನದಂಡಗಳೂ ಆಗಿರುವುದರಿಂದ ‘ಶ್ರೇಷ್ಠ ಪರಂಪರೆ’ ಯೊಂದರ ನಿರ್ಮಾಣದ ಕೆಲಸವನ್ನು ಈ ಪರಂಪರೆಯ ಶೋಧವು ನಿರ್ವಹಿಸುತ್ತಿದೆ. ಶ್ರೇಣಿಕರಣದ ವಿರುದ್ಧ ಯುದ್ಧ ಸಾರುವ ಸ್ತ್ರೀವಾದಿ ರಾಜಕಾರಣವು ಶ್ರೇಣಿಕರಣಕ್ಕೆ ಪಕ್ಕಾಗುವ ಈ ಸನ್ನಿವೇಶದಲ್ಲಿ ಒಮ್ಮೆ ನಿಂತು ಹಿಂದೆ ತಿರುಗಿ ನೋಡುವುದು, ತನ್ನನ್ನು ತಾನು ವಿಮರ್ಶಿಸಿಕೊಳ್ಳುವುದು ಅಗತ್ಯ.

ಮಹಿಳಾ ಸಾಹಿತ್ಯ ಪರಂಪರೆ ನಿರ್ಮಾಣದ ಪೂರ್ವಪ್ರಯತ್ನಗಳು

ಸಾಹಿತ್ಯ ಚರಿತ್ರೆಯ ರಚನೆಯು ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದ ಮುಖ್ಯ ಚಟುವಟಿಕೆಗಳಲ್ಲಿ ಒಂದು. ೧೮೭೫ರ ನಾಗವರ್ಮನ ಛಂದೋಬುಧಿ ಗ್ರಂಥಕ್ಕೆ ಪೀಠಿಕೆಯ ರೂಪದಲ್ಲಿ ಕಿಟ್ಟೆಲ್ ಬರೆದ ಬರಹವನ್ನು ಮೊದಲ ಪ್ರಯತ್ನವೆಂದು ಗುರುತಿಸುವುದಾದರೆ ಕನ್ನಡ ಸಾಹಿತ್ಯ ಚರಿತ್ರೆಯ ರಚನೆಯ ಪರಿಶ್ರಮ ೧೨೫ ವರ್ಷಗಳಿಗೆ ಮೀರಿದ್ದು. ಅವುಗಳ ಉದ್ದೇಶ, ಸ್ವರೂಪ ಹಾಗೂ ದೃಷ್ಟಿಕೋನಗಳಲ್ಲಿ ಹಲವು ವೈವಿಧ್ಯವನ್ನು ನಾವು ಇಂದು ಕಾಣಬಹುದಾದರೂ, ಸ್ಥೂಲವಾಗಿ ಇವುಗಳನ್ನು ಕವಿಚರಿತೆ ಹಾಗೂ ಸಾಹಿತ್ಯ ವಿಶ್ಲೇಷಣೆಯ ಮೊತ್ತವೆಂದು ಪರಿಗಣಿಸಬಹುದು. ಹಾಗೆಯೇ ಪ್ರತಿಯೊಂದು ಸಾಹಿತ್ಯ ಚರಿತ್ರೆಯ ಪ್ರಯತ್ನವು ತನ್ನದೇ ಆದ ಭಿನ್ನ ಸಾಹಿತ್ಯ ರಾಜಕಾರಣದ ಉದ್ದೇಶವನ್ನು ಹೊಂದಿದ್ದರು ಒಟ್ಟಾರೆಯಾಗಿ ಅದು ಲೇಖಕರನ್ನು ಚಾರಿತ್ರಿಕ ಕಾಲಾನುಕ್ರಮಣಿಕೆಯಲ್ಲಿ ಅಣಿಗೊಳಿಸುತ್ತಲೇ, ವಿವಿಧ ವಿಭಜನಾ ಕ್ರಮದಲ್ಲಿ ಅದನ್ನು ಜೋಡಿಸುತ್ತ, ಮಹಾಕವಿ, ಪ್ರಾತಿನಿಧಿಕ ಕವಿ, ಸೋಪಜ್ಞಕವಿ, ಪ್ರಧಾನಕವಿ, ಸೃಜನಶೀಲಕವಿ ಇತ್ಯಾದಿ ಮಾದರಿಗಳಲ್ಲಿ ಶ್ರೇಣೀಕರಿಸುವುದರಲ್ಲೂ ಆಸಕ್ತವಾದುದಾಗಿದೆ. ಈ ಆಸಕ್ತಿ ಅಂತಿಮವಾಗಿ ಸಾಹಿತ್ಯದ ಶ್ರೇಷ್ಠತೆಯ ಪ್ರಶ್ನೆಯನ್ನು ಮುನ್ನಡೆಸುತ್ತಿದ್ದು, ಈ ಮಾದರಿಗಳ ಆವಿಷ್ಕಾರಕ್ಕೆ ಪೂರಕ ಸಂಗತಿಯಾಗಿ ಸಾಹಿತ್ಯ ಕೃತಿಗಳೊಂದಿಗೆ ಕವಿಯ ವೈಯಕ್ತಿಕ ವಿವರಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುತ್ತದೆ. ಹಾಗಾಗಿಯೇ ಪ್ರಧಾನಧಾರೆ ಸಾಹಿತ್ಯ ಚರಿತ್ರೆಗಳಲ್ಲಿ ಕವಿಯ ಬದುಕು ಬರಹಗಳ ಹೊಂದಾಣಿಕೆಯ ಮಾದರಿಯೊಂದಿದ್ದು, ಈ ನೆಲೆಯಲ್ಲಿ ಬಿ. ಎಂ. ಶ್ರೀ ಅವರು ಈ ಕೆಳಗಿನಂತೆ ವಿವರಿಸುತ್ತಾರೆ.

ಸಾಹಿತ್ಯದ ಗ್ರಂಥ ವಿವರಣೆಯನ್ನು ಮಾಡುವಾಗ, ಆ ಗ್ರಂಥಗಳನ್ನು ಬರೆದ ಕವಿಗಳ ವಿಷಯವನ್ನೂ ಹೇಳತಕ್ಕದ್ದು ಸ್ವಾಭಾವಿಕವಾಗಿಯೇ ಇದೆ. ಆದರೆ ನಮ್ಮ ದೇಶದಲ್ಲಿ ಕವಿಗಳ ಕಾಲ, ಜೀವನ ಚರಿತ್ರೆ ಮುಂತಾದ ಸಂಗತಿಗಳಿಗೆ ಪೂರ್ವಿಕರು ಗಮನಕೊಟ್ಟಿಲ್ಲವಾದದ್ದರಿಂದ, ಕವಿಗಳ ವಿಷಯವಾಗಿ ನಮಗೆ ತಿಳಿದಿರುವ ನಿಜಾಂಶಗಳು ಬಹಳ ಸ್ವಲ್ಪವೇ…ಚರಿತ್ರೆಕಾರನಿಗೆ ಸಂಗತಿಗಳಿಂದ ಹೆಚ್ಚು ಪ್ರಯೋಜನವಿಲ್ಲ. ಅವನಿಗೆ ಸಹಾಯಕವಾಗುವುದು, ಕವಿ ತಾನು ಗ್ರಂಥವನ್ನು ಪೂರೈಸಿದ ವರ್ಷ, ತನ್ನ ರಾಜ, ಗುರು, ತನಗೆ ಹಿಂದಿದ್ದ ಕವಿಗಳು ಇವುಗಳನ್ನು ತಿಳಿಸುವುದು…..[13]

ಬಿ. ಎಂ. ಶ್ರೀಯವರ ‘ಕವಿಗಳ ವಿಷಯ ಚರಿತ್ರಕಾರನಿಗೆ ಹೆಚ್ಚು ಪ್ರಯೋಜನಕ್ಕೆ ಬರಲಾರದು’ ಎಂಬ ನಿಲುವು ವಾಸ್ತವಚಾಗಿ ಆಕರ ಸಾಮಗ್ರಿಗಳ ಕೊರತೆಯ ಅಸಹಾಯಕತೆಯಿಂದ ಹೊರಟಿದ್ದಾಗಿದೆ. ಹಾಗೆ ನೋಡಿದರೆ ಕನ್ನಡ ಸಾಹಿತ್ಯ ಪರಂಪರೆಯ ನಿರ್ಮಾಣದ ಮಹತ್ವದ ಲೇಖಕರಲ್ಲಿ ಮೊದಲಿಗರಾದ ಆರ್. ನರಸಿಂಹಾಚಾರ್ಯ ಅವರು ತಮ್ಮ ಕೃತಿಯನ್ನು ‘ಕವಿಚರಿತೆ’ ಎಂದೇ ಹೆಸರಿಸುತ್ತಾರೆ. ಅದಕ್ಕೆ ಅನುಗುಣವಾಗಿ ಕನ್ನಡ ಸಾಹಿತ್ಯ ಚರಿತ್ರೆಯ ಪ್ರಧಾನ ಅಂಶಗಳಲ್ಲಿ ಕವಿಯ ವೈಯಕ್ತಿಕ ಸಂಗತಿಗಳ ಚರ್ಚೆಯು ಒಂದಾಗಿ ನಡೆದು ಬಂದಿದ್ದು, ಇದಕ್ಕೊಂದು ಅತ್ಯುತ್ತಮ ಉದಾಹರಣೆ ಅಕ್ಕಮಹಾದೇವಿ ಕುರಿತ ಸಾಹಿತ್ಯ ಚರಿತ್ರೆಯ ಪುಟಗಳು. ಈ ಎಲ್ಲ ಸಾಹಿತ್ಯ ಚರತ್ರೆಗಳಲ್ಲಿ ಕಂಡುಬರುವ ಅಕ್ಕಮಹಾದೇವಿಯ ಪ್ರಸ್ತಾಪವು ಕಾವ್ಯಾಭಿವ್ಯಕ್ತಿ ಹಾಗೂ ಕವಿಯ ಜೀವನ ವಿವರಗಳೆಂದು ಭಾವಿಸಲಾದ ಸಂಗತಿಗಳೆರಡನ್ನು ಅವಿನಾಗೊಳಿಸಿ ಬದುಕೇ ಬರಹವೆಂಬಂತೆ ವಿಶ್ಲೇಷಣೆಗೊಂಡ ಮಾದರಿಯಾಗಿದೆ. ಹಾಗಾಗಿಯೇ ಕನ್ನಡದ ಸಂದರ್ಭದಲ್ಲಿ ಹಲವು ಬಾರಿ ಕವಿ ಚರಿತೆ ಹಾಗೂ ಸಾಹಿತ್ಯ ಚರತ್ರೆಗಳೆಂಬ ಎರಡು ಭಿನ್ನ ಪರಿಕಲ್ಪನೆಗಳು ಸಮಾನಾರ್ಥಕ ಪದಗಳೆಂಬಂತೆ ಬಳಕೆಗೊಳ್ಳುತ್ತದೆ. ಆರ್. ನರಸಿಂಹಾಚಾರ್ಯರ ಕವಿ ಚರಿತೆಯೇ ಅಲ್ಪಸ್ವಲ್ಪ ಮಾರ್ಪಡಿನೊಂದಿಗೆ, ವಿಸ್ತೃತ ಮಾಹಿತಿಯೊಂದಿಗೆ ಸಾಹಿತ್ಯ ಚರಿತ್ರೆಯಾಗಿ ಕಾಲದಿಂದ ಕಾಲಕ್ಕೆ ಹೊರಹೊಮ್ಮುತ್ತಿದೆ.

ಆರ್. ನರಸಿಂಹಾಚಾರ್ಯರ ಕವಿಚರಿತೆ ರಚನೆಯ ನಂತರ ೧೯೨೦ರ ಆಸುಪಾಸಿನಲ್ಲಿಯೇ ಮಹಿಳಾ ಸಾಹಿತ್ಯ ಚರಿತ್ರೆ ರಚನೆಯ ಸಣ್ಣ ಸಣ್ಣ ಪ್ರಯತ್ನಗಳು ಆರಂಭಗೊಂಡದ್ದನ್ನು ಅಂದಿನ ಸಾಹಿತ್ಯ ಪತ್ರಿಕೆಗಳಲ್ಲಿ ಕಾಣಬಹುದಾಗಿದೆ. ಬಿಡಿ ಬರಹಗಳು ರೂಪದಲ್ಲಿರುವ ಈ ಪ್ರಯತ್ನಗಳಲ್ಲಿ ಅಂದಿನ ಸ್ತ್ರೀಪುರುಷರಿಬ್ಬರೂ ಪರಿಶ್ರಮಿಸಿರುವುದು ಗಮನಾರ್ಹ. ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಕಂಡುಬರುವ ಈ ಬಗೆಯ ಎಲ್ಲ ಮಹಿಳಾ ಸಾಹಿತ್ಯ ಚರಿತ್ರೆಯ ಬಿಡಿ ಬಿಡಿ ಬರಹಗಳು ಪ್ರಧಾನವಾಗಿ ಕವಿಚರಿತೆಯಲ್ಲಿ ಉಲ್ಲೇಖಿತರಾದ ಮಹಿಳೆಯರ ಪ್ರಸ್ತಾಪಗಳನ್ನು ಪ್ರತ್ಯೇಕಿಸಿ ಕಾಲಾನುಕ್ರಮಣಿಕೆಯಲ್ಲಿ ಜೋಡಿಸಿ ಕೊಡುವದಾಗಿದ್ದು, ನಂತರದ ಹಂತದಲ್ಲಿ ಈ ಪಟ್ಟಿ ವಿಸ್ತೃತಗೊಳ್ಳುತ್ತ ಹೋದದ್ದನ್ನು ಗಮನಿಸಬಹುದಾಗಿದೆ. ವಿಸ್ತರಣೆಯ ಹಂತದಲ್ಲಿ ಇದಕ್ಕೆ ಕನ್ನಡ ಪ್ರದೇಶದವರೆನ್ನಲಾದ ಸಂಸ್ಕೃತ ಲೇಖಕಿಯರು, ಮೌಖಿಕ ಪರಂಪರೆಯ ಹಾಡುಗಾರ್ತಿಯರು ಹಾಗೂ ಕವಿಚರಿತೆಯ ಪರಿಷ್ಕರಣಾ ಆವೃತ್ತಿಗಳು ಒದಗಿಬಂದಿವೆ.

ಈ ಕಾಲಘಟ್ಟದ ಮಹಿಳಾ ಸಾಹಿತ್ಯ ಚರಿತ್ರೆಯ ರಚನೆಗಳನ್ನು ಗಮನಿಸುವುದಾದರೆ ಅವುಗಳ ತಾತ್ವಿಕ ನೆಲೆಯೂ ಕನ್ನಡ ಗುರುತು ರಾಜಕಾರಣದ್ದಾಗಿರುವುದು ಸ್ಪಷ್ಟಗೋಚರ. ಮಹಿಳೆಯರ ಸಾಹಿತ್ಯಿಕ ಸಾಧನೆ ಎಂಬುದು ವಿಶಾಲಾರ್ಥದಲ್ಲಿ ಕನ್ನಡ/ಕರ್ನಾಟಕದ ಸಾಧನೆಯನ್ನು ಕಟ್ಟಿಕೊಡುವುದೆಂಬ ಹಿನ್ನೆಲೆಯಲ್ಲಿ ಕೈಗೊಳ್ಳಲಾದ ಈ ಪ್ರಯತ್ನಗಳು ಕೆಲವೊಮ್ಮೆ ಕಲ್ಪಿತ ಸಾಹಿತ್ಯ ಚರಿತ್ರೆಯ ದೂರಾನ್ವಯದ ಪರಿಶ್ರಮಕ್ಕೂ ಕೈಹಾಕಿದಿದ್ದೆ. ಇದಕ್ಕೊಂದು ಉತ್ತಮ ಉದಾಹರಣೆ ವಾಗ್ಭೂಷಣ ಪತ್ರಿಕೆಯ ‘ಕನ್ನಡ ಕವಿಯಿತ್ರಿಯರು’ ಎಂಬ ಲೇಖನ. ಇಲ್ಲಿ ಲೇಖಕರು ಕನ್ನಡ ಕವಿಯತ್ರಿಯರ ಸಂಖ್ಯೆಯನ್ನು ದ್ವಿಗುಣಗೊಳಿಸಲು ಬಳಸುವ ತರ್ಕ ಕುತೂಹಲಕಾರಿಯಾದುದು ಹಾಗೂ ಚರ್ಚಾಸ್ಪದವಾದುದೂ ಆಗಿದೆ.

ಸಂಪಿಗೆಯ ಗಿಡಗಳೂ ತೆಂಗಿನ ಮರಗಳೂ ದಕ್ಷಿಣ ದೇಶದೊಳಗೆ ಹೇರಳವಾಗಿರುತ್ತವೆ. ತೆಂಗಿನ ಗಿಡಗಳಿಗೆ ಗುಂಗೇಹುಳುಗಳ ಕಾಟ ತಪ್ಪಬೇಕೆಂದು ಸುಳಿಗಳಲ್ಲಿ ಸಂಪಿಗೇ ಹೂವುಗಳನ್ನಿಡುವುದುಂಟು…..ಈ ರೀತಿಯ ವಾಡಿಕೆಯು ಬೇರೆ ನಾಡಿನವರಿಗೆ ತಿಳಿಯದು. ಕನ್ನಡ ಕವಿಗಳೇ ಬಹಳವಾಗಿ ಸಂಪಿಗೇ ಗಿಡಗಳನ್ನು ವರ್ಣಿಸಿದ್ದು ಕಂಡುಬರುತ್ತದೆ…ಹೀಗೆ ಚಂಪಕ ವರ್ಣನ ಮಾಡಿದ್ದರಿಂದಲೂ, ಲಕ್ಷ್ಮೀ ಎಂಬ ಹೆಸರಿನಿಂದಲೂ ಈಕೆಯೂ ಕರ್ನಾಟಕದವಳೇ ಇರಬಹುದೆಂದು ತರ್ಕವಾಗುತ್ತದೆ.[14]

ಹೀಗೆ ಮುಂದುವರಿದು ‘ವಿಜ್ಜಿಕಾ ಎಂಬುವಳನ್ನು ದಂಡಿ ಕಪ್ಪಾಗಿದ್ದಳು ಎನ್ನುತ್ತಾನೆ…. ‘ ಇತ್ಯಾದಿ ಲಘು ಆಧಾರಗಳ ಮೇಲೆ ಕೂಡ ಕರ್ನಾಟಕದ ಮಹಿಳೆಯರ ಸಾಧನೆಯನ್ನು ಲಂಬಿಸುವ ಪ್ರಯತ್ನ ಈ ಲೇಖನದಲ್ಲಿ ಕಂಡುಬರುತ್ತದೆ.

ಪ್ರಧಾನಧಾರೆಯ ಸಾಹಿತ್ಯಚರಿತ್ರೆ ರಚನೆಯ ಪರಿಶ್ರಮಕ್ಕೆ ಸಂವಾದಿಯಾಗಿಯೇ ಅಂದು ಕನ್ನಡ ಕವಿಯತ್ರಿಯರ ಪರಂಪರೆಯನ್ನು ಗುರುತಿಸುವ ಕೆಲವು ಮೊದಲುಗೊಂಡಿರುವುದಕ್ಕೆ ಮೇಲಿನ ಲೇಖನವೇ ಉದಾಹರಣೆಯಾಗಿದೆ. ಕನ್ನಡ ಕಾವ್ಯ ಪರಂಪರೆಯ ಹೆಗ್ಗಳಿಕೆಯನ್ನು ಸಾಧಿಸುವ ಸಂದರ್ಭದಲ್ಲಿ ಉಂಟಾದ ಮಹಿಳೆಯರ ಪ್ರಾತಿನಿಧ್ಯದ ಕೊರತೆಯನ್ನು ತುಂಬಿಕೊಳ್ಳುವ ಈ ಪ್ರಯತ್ನವು ಪ್ರಧಾನಧಾರೆಯ ಕನ್ನಡ ರಾಜಕಾರಣವನ್ನು ತನ್ನ ತಾತ್ವಿಕತೆಯಾಗಿ ಹೊಂದಿದ್ದೇ ಹೊರತು ಮಹಿಳಾ ರಾಜಕಾರಣವನ್ನಲ್ಲ.

ಈ ಸಂದರ್ಭದ ಮಹಿಳಾ ಸಾಹಿತ್ಯ ಚರಿತ್ರೆ ರಚನೆಯ ಹಿಂದಿನ ತಾತ್ವಿಕ ನಿಲುವು ಪ್ರಧಾನಧಾರೆಯದೇ ಆಗಿತ್ತು ಎಂಬುದನ್ನು ವಿವರಿಸಿಕೊಂಡಬಲ್ಲ ಇನ್ನೊಂದು ಸಂಗತಿಯು ನಮಗೆ ದೊರೆಯುತ್ತದೆ. ಅದೆಂದರೆ ೧೯೧೫ರ ಸುಮಾರಿಗೆ ಕಾಣಿಸಿಕೊಳ್ಳುವ ಕನ್ನಡ ಲೇಖಕಿಯರನ್ನು ಒಗ್ಗೂಡಿಸುವ ಸಾಹಿತ್ಯ ಚರಿತ್ರೆಯ ಪರಿಶ್ರಮವು ನಂತರದಲ್ಲಿ ೧೯೩೦ರ ಸುಮಾರಿಗೆ ಹೀಗೆ ಒ‌ಗ್ಗೂಡಲ್ಪಟ್ಟ ಲೇಖಕಿಯರನ್ನು ಮತ್ತೆ ವಿಂಗಡಿಸುವ ಕೆಲಸಕ್ಕೆ ತೊಡಗಿದ್ದನ್ನು ಕಾಣಬಹುದು. ಬೆರಳೆಣಿಕೆಯಷ್ಟು ಲೇಖಕಿಯರನ್ನು ವಚನಕಾರ್ತಿಯರು, ಕೃಷ್ಣದೇವರಾಯನ ಕಾಲದ ಕವಯತ್ರಿಯರು ಇತ್ಯಾದಿಯಾಗಿ ವರ್ಗೀಕರಿಸುವ ಈ ಪ್ರಯತ್ನಗಳು ಮೂಲಭೂತವಾಗಿ ಮಹಿಳಾ ಸಾಹಿತ್ಯ ಚರಿತ್ರೆಯ ರಚನೆಯ ಪ್ರಕ್ರಿಯೆಯ ಹಿಂದಿನ ಮಹಿಳಾ ರಾಜಕಾರಣಕ್ಕಿಂತ ಭಿನ್ನವಾದ ತಾತ್ವಿಕ ಆಸಕ್ತಿಯನ್ನು, ರಾಜಕೀಯ ನಿಲುವನ್ನು ವ್ಯಕ್ತಪಡಿಸುತ್ತದೆ. ಪ್ರಧಾನಧಾರೆಯ ವಿಭಜನಾ ಕ್ರಮಗಳನ್ನು ಮಹಿಳಾ ಸಾಹಿತ್ಯ ಚರಿತ್ರೆಯು ಅನುಸರಿಸಿದ ಕ್ರಮವನ್ನು ನಿರೂಪಿಸುತ್ತದೆ.[15] ಅವುಗಳ ವಿಭಜನಾ ಕ್ರಮಗಳ ಹಿಂದಿನ ತಾತ್ವಿಕ, ರಾಜಕೀಯ ನಿಲುವುಗಳಿಗೆ ತನ್ನನ್ನು ಒಗ್ಗಿಸಿಕೊಂಡದ್ದನ್ನು ಸೂಚಿಸುತ್ತದೆ. ಏಕೆಂದರೆ ಈ ವಿಭಜನಾ ಕ್ರಮಗಳು ಯಾವ ರೀತಿಯಿಂದಲೂ ಮಹಿಳಾ ಸಾಹಿತ್ಯ ಚರಿತ್ರೆಯ ರಾಜಕಾರಣವನ್ನು ಪ್ರತಿನಿಧಿಸುವ ಕ್ರಮಗಳಲ್ಲ.

ತನ್ನೆಲ್ಲ ಇತಿಮಿತಿಗಳ ನಡುವೆಯೇ ಈ ಬಗೆಯ ಹಲವು ಬಿಡಿ ಪ್ರಯತ್ನಗಳ ಅಂತಿಮ ಫಲವೆನ್ನುವಂತೆ ಸರೋಜಿನಿ ಮಹಿಷಿಯರ ‘ಕರ್ನಾಟಕ ಕವಿಯತ್ರಿಯರು’ ಕೃತಿಯು ರೂಪುಗೊಂಡಿದೆ.[16] ಪಿಎಚ್‌. ಡಿ. ಅಧ್ಯಯನದ ನೆಪದಲ್ಲಿ ಹೊರಬಂದ ಈ ಕೃತಿ ಮಹಿಳಾ ಸಾಹಿತ್ಯ ಚರಿತ್ರೆಯ ಸಂದರ್ಭದಲ್ಲೊಂದು ಮಹತ್ವಾಕಾಂಕ್ಷಿ ಪ್ರಯತ್ನ. ವಿವಿಧ ಲಿಖಿತ ಆಕರಳಿಂದ ಮಾಹಿತಿ ಕ್ರೋಢಿಕರಿಸುವುದರೊಂದಿಗೆ ಕ್ಷೇತ್ರಕಾರ್ಯದ ಮೂಲಕ ಮೌಖಿಕ ಪರಂಪರೆಯ ಮಾಹಿತಿಯನ್ನು, ಹಸ್ತಪ್ರತಿಗಳ ಉಲ್ಲೇಖಗಳನ್ನು ಅಣಿಗೊಳಿಸುವ ಹಾಗೂ ಕನ್ನಡ ಎಂಬುದನ್ನು ಕರ್ನಾಟಕವೆಂಬ ಪ್ರದೇಶವಾಚಿಕೆಗೆ ವಿಸ್ತರಿಸಿಕೊಳ್ಳುವ ವೈಶಿಷ್ಟ್ಯವುಳ್ಳ ಈ ಕೃತಿ ನಿರ್ದಿಷ್ಟ ವಿಭಜನಾ ಕ್ರಮದೊಂದಿಗೆ ವಿಸ್ತೃತ ಮಹಿಳಾ ಸಾಹಿತ್ಯ ಚರಿತ್ರೆಯಾಗಿ ಹೊಮ್ಮಿದೆ. ಇಷ್ಟಾಗಿಯೂ ಪ್ರಧಾನಧಾರೆಯ ತಾತ್ವಿಕತೆ ಹಾಗೂ ವೈಧಾನಿಕತೆಯೊಂದಿಗೆ ಯಾವುದೇ ಭಿನ್ನಮತವನ್ನು ದಾಖಲಿಸದೆ ಮಹಿಳೆಯರ ಸಾಹಿತ್ಯಿಕ ಸಾಧನೆಯನ್ನು ಪ್ರತ್ಯೇಕವಾಗಿ ಒಂದೆಡೆ ಕಲೆಹಾಕಿ ಅದರ ಗಾತ್ರ ಹಾಗೂ ವೈವಿಧ್ಯವನ್ನು ಒಟ್ಟಂದರಲ್ಲಿ ಸಾಕಾರಗೊಳಿಸುವ ಪ್ರಯತ್ನ ಮಾತ್ರ ಇದರದಾಗಿದೆ. ಇಲ್ಲಿ ಮಹಿಳೆಯರನ್ನು ಹೆಕ್ಕಿ ತೆಗೆಯಬೇಕು, ಪರಂಪರೆಯ ಸಾಮಗ್ರಿಯಾಗಿ ಜೋಡಿಸಬೇಕು, ಅವರ ಸಾಧನೆಯನ್ನು ಗುರುತಿಸಬೇಕು ಎಂಬ ಆಶಯ ಗಮನಾರ್ಹವಾದುದಾಗಿದ್ದರೂ ಅದನ್ನೊಂದು ರಾಜಕೀಯ ಪ್ರಶ್ನೆಯಾಗಿ, ವೈಧಾನಿಕತೆಯ ಸಮಸ್ಯೆಯಾಗಿ ಮುಖಾಮುಖಿಯಾಗಿಲ್ಲ. ಹಾಗಾಗಿ ಅದರೆಲ್ಲ ಮಹತ್ವವನ್ನು ಗೌರವಿಸುತ್ತಲೇ ಪ್ರಧಾನಧಾರೆಯ ಚೌಕಟ್ಟಿನೊಳಗೆ ಸಾಹಿತ್ಯ ಚರಿತ್ರೆಯ ರಚನಾ ಕೆಲಸ ಇಲ್ಲಿ ಮುಂದುವರಿದಿದೆ ಎನ್ನಬೇಕಾಗುತ್ತದೆ.

ಸ್ವಾತಂತ್ರ್ಯ ಪೂರ್ವದ ಲೇಖಕಿಯರು ಮಹಿಳಾ ಸಾಹಿತ್ಯ ಎಂಬ ಪರಿಕಲ್ಪನೆಯ ನಿರ್ವಚನದಲ್ಲಿ ಸಾಕಷ್ಟು ಸೂಕ್ಷ್ಮವಾದ ನೆಲೆಯಲ್ಲಿ ಮೀಮಾಂಸೆಯನ್ನು ನಡೆಸಿದವರು ಹಾಗೂ ಮಹಿಳಾ ಸಾಹಿತ್ಯಪರ ರಾಜಕೀಯ ನಿಲುವನ್ನು ತಳೆದವರು ಎಂಬುದಕ್ಕೆ ಸಾಕಷ್ಟು ಆಧಾರಗಳು ನಮಗೆ ಈ ಕಾಲದ ಅವರ ಬರಹಗಳಿಂದ ದೊರೆಯುತ್ತವೆ. ಅಂದಿನ ಕನ್ನಡ ಸಾಹಿತ್ಯ ಸಮ್ಮೇಳನಗಳ ಮಹಿಳಾ ಗೋಷ್ಠಿಗಳ ಅಧ್ಯಕ್ಷ ಭಾಷಣಗಳು ಈ ವಿಚಾರಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳಾಗಿವೆ:

ನಮ್ಮನಾಡಿನ ಉದ್ಧಾರವಾಗಬೇಕಾದರೆ, ಸಮಭಾಗಿ ಸ್ತ್ರೀ ಸಮಾಜವು ಚೇತರಿಸಿಕೊಂಡು ಮುಂದುವರಿಯಬೇಕು. ಸಾಹಿತ್ಯ ಪರಿಷತ್ತಿನ ಮೂವತ್ತು ಮೂರು ವರ್ಷಗಳ ಅನುಭವವನ್ನು ನೋಡಿದರೆ, ಮತ್ತು ಅವಧಿಯಲ್ಲಿ ಹುಟ್ಟಿದ ಕನ್ನಡ ಸಾಹಿತ್ಯದ ಸಮಾವಲೋಕನವನ್ನು ಮಾಡಿದರೆ, ನಮ್ಮ ಭಾಗವೆಷ್ಟಿದೆಯೆಂಬುದನ್ನು ಚೆನ್ನಾಗಿ ಅರ್ಥವಾಗುವುದು. ಈ ೩೩ ವರ್ಷಗಳಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನವನ್ನಲಂಕರಿಸುವ ಪುಣ್ಯ ನಮ್ಮ ಅಕ್ಕತಂಗಿಯರಿಗ ಲಭಿಸಿಲ್ಲ. ಇದಕ್ಕೆ ಕಾರಣ ನಮ್ಮ ಅಣ್ಣತಮ್ಮಂದಿರೇ ಎಂದು ನಾವು ಭಾವಿಸುವುದಿಲ್ಲ. ಅಂಥ ಯೋಗ್ಯತೆಯನ್ನು ಸಂಪಾದಿಸುವಲ್ಲಿ ನಾವು ಹಿಂದುಳಿದಿದ್ದೇವೆ ಅಥವಾ ಒಬ್ಬಿಬ್ಬ ಅಕ್ಕತಂಗಿಯರು ಯೋಗ್ಯತೆಯನ್ನು ಪಡೆದಿದ್ದರೂ, ಅವರಿಗೆ ಸಲ್ಲಿಸಬೇಕಾಗಿದ್ದ ಗೌರವವನ್ನು ಸಲ್ಲಿಸುವಲ್ಲಿ ನಾವು ತಾಟಸ್ಥ್ಯವನ್ನು ತಾಳಿದ್ದೇವೆ ಎಂದು ಮಾತ್ರ ನಾನು ಹೇಳಬಲ್ಲೆ ಮಲಗಿದವರಿಗೆ ಜಾಗೃತಲೋಕದಲ್ಲಿ ಎಡೆಯಿಲ್ಲ. ಮಲಗಿದವರನ್ನು ಎಬ್ಬಿಸಿ, ಅವರಿಗೆ ಸಲ್ಲುವ ಭಾಗವನ್ನು ಸಲ್ಲಿಸುವಷ್ಟು ವಿನಯವನ್ನು ಅದು ಕಲಿತಿಲ್ಲ. ಆದುದರಿಂದ ನಮ್ಮ ಉದ್ಧಾರವನ್ನು ನಾವು ಕಾಣಬೇಕಾದ ಮೈ ತುಂಬ ಎಚ್ಚರದಿಂದ ಇರಬೇಕು[17]

[1] ವಿಜಯಾದಬ್ಬೆ, ಆಶಯ ಲೇಖನ, ಬರಗೂರು ರಾಮಚಂದ್ರಪ್ಪ (ಸಂ) ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಯ ಸ್ವರೂಪ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ೧೯೯೩, ಪು. ೨೯

[2] ತೇಜಸ್ವಿನಿ ನಿರಂಜನ, ಸೀಮಂತಿನಿ ನಿರಂಜನ (ಸಂ) ಪ್ರಸ್ತಾವನೆ, ಸ್ತ್ರೀವಾದಿ ಸಾಹಿತ್ಯ ವಿಮರ್ಶೆ, ಕ್ರೈಸ್ಟ್, ಕಾಲೇಜು ಕನ್ನಡ ಸಂಘ, ಬೆಂಗಳೂರು, ೧೯೯೪, ಪು. ೧-೫೯

[3] ಪ್ರಧಾನ ಧಾರೆ-ಅಧೀನ ಧಾರೆ ಎಂಬ ವಿಭಜನಾ ಕ್ರಮದ ಸಾಧಕ-ಬಾಧಕಗಳನ್ನು ಗಮನಿಸುತ್ತಲೇ ಇಲ್ಲಿ ಅದನ್ನು ಅಧ್ಯಯನದ ಅನುಕೂಲಕ್ಕಾಗಿ ಬಳಸಲಾಗುತ್ತಿದೆ.

[4] ಉಷಾ ಎಂ., ಕನ್ನಡದ ಮೊದಲ ವಸ್ತುನಿಷ್ಠ ವಿಮರ್ಶೆಯ ಸುತ್ತ, ಸುರುಚಿ, ಸಿ. ವಿ. ಜಿ ಪಬ್ಲಿಕೇಷನ್, ಬೆಂಗಳೂರು, ೨೦೦೪, ಪು. ೩೮-೪೮

[5] ಮಾಸ್ತಿ ವೆಂಕಟೇಶ ಅಯ್ಯಂಗಾರ, ಮುನ್ನುಡಿ ವಿಮರ್ಶೆ, ಶ್ರೀ ಪ್ರೆಸ್, ಬೆಂಗಳೂರು, ೧೯೩೩ (ಎರಡನೆ ಮುದ್ರಣ)

[6] ಮಾಸ್ತಿ ವೆಂಕಟೇಶ ಅಯ್ಯಂಗಾರ, ಸಾಹಿತ್ಯದಲ್ಲಿ ವಿಮರ್ಶೆಯ ಕಾರ್ಯ, ವಿಮರ್ಶೆ, ಸಿಟಿ ಪ್ರೆಸ್, ಬೆಂಗಳೂರು, ೧೯೩೩ (ಎರಡನೇ ಮುದ್ರಣ),ಪು. ೩-೪

[7] Dale spender, Women and Literary History, Chatherine Belsey and Jane Moore(ed), The Feminist Reader, The Mecmillan press Ltd, London, 1989, Pp. 31

[8] ಉಷಾ ಎಂ., ಜನಪ್ರಿಯ-ಗಂಭೀರ್ ಸಾಹಿತ್ಯ ಪರಕಲ್ಪನೆ, ಸುರುಚಿ, ಸಿ. ವಿ. ಜಿ. ಪಬ್ಲಿಕೇಶನ್, ಬೆಂಗಳೂರು, ೨೦೦೪

[9] ಉಷಾ ಎಂ., ಶಾಸ್ತ್ರ ಅವರಿಗಿರಲಿ, ಕಲೆ ನಮಗಿರಲಿ, ಸುರುಚಿ, ಸಿ. ವಿ. ಜಿ. ಪಬ್ಲಿಕೇಶನ್, ಬೆಂಗಳೂರು, ೨೦೦೪

[10] ಸುಮಿಶ್ರ ಎಲ್. ಸಿ., ಅವರೊಂದಿಗೆ ಸಮಕಾಲೀನ ಸಾಹಿತ್ಯ ಸಂದರ್ಭವನ್ನು ಕುರಿತಂದೆ ಲೋಕಾಭಿರಾಮದ ಹರಟೆಯಲ್ಲಿದ್ದಾಗ ಮಾತಿನ ನಡುವೆ ಅವರು ಇವನ್ನು ಹಂಚಿಕೊಂಡರು.

[11] ಉಷಾ ಎಂ., ಮಾತುಕತೆ, ಮಹಿಳಾ ಅಧ್ಯಯನ, ಸಂ. ೧ ಸಂ. ೨, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

[12] ಉಲ್ಲೇಖಿತ :Rita Felski, Beyond Feminist Acthetics: Feminist Literature & Social Change Laura Marcus Feminist aesthetics & the New realism, ISOBEL Armustrong (Ed) New Feminist Discourse Routledge 1992, Lonodon.

[13] ಶ್ರೀಕಂಠಯ್ಯ ಬಿ. ಎಂ., ಕನ್ನಡ ಸಾಹಿತ್ಯ ಚರಿತ್ರೆ, ವಿ. ಸೀತಾರಾಮಯ್ಯ (ಸಂ), ಶ್ರೀ ಸಾಹಿತ್ಯ ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿ. ವಿ. ಮೈಸೂರು ೧೯೮೩

[14] …. ?…., ಕನ್ನಡ ಕವಿಯತ್ರಿಯರು, ವಾಗ್ಭೂಷಣ ಸಂ. ೨೦, ಸಂ. ೬, ಧಾರವಾಡ,೧೯೧೬

[15] ಕೆಲವು ಉದಾಹರಣೆಗಳು -ಸುಶೀಲಮ್ಮ ಪುಲವತಿ, ಕೃಷ್ಣದೇವರಾಯನ ಕಾಲದ ಕವಯತ್ರಿಯರು, ಕನ್ನಡನುಡಿ, ಸಂ. -, ಸಂ-, ಬೆಂಗಳೂರು (೧೯೩೯) ಶಿವಮೂರ್ತಿ ಶಾಸ್ತ್ರಿ ಬಿ., ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಸೇವೆ, ಕನ್ನಡನುಡಿ ಸಂ-, ಸಂ-, ಬೆಂಗಳೂರು ೧೯೪೭

[16] ಸರೋಜಿನಿ ಮಹಿಷಿ, ಕರ್ನಾಟಕ ಕವಯತ್ರಿಯರು, ಕರ್ನಾಟಕ ಸಹಕಾರಿ ಸಾಹಿತ್ಯ ಸಂಘ; ಧಾರವಾಡ, ೧೯೬೫

[17] ಶ್ರೀಮತಿ ವಿಮಲಾಬಾಯಿ ಮೇಲುಕೋಟೆ ಮಹಿಳಾಗೋಷ್ಠಿ ಅಧ್ಯಕ್ಷ ಭಾಷಣ, ೩೩ನೇ ಕ. ಸಾ. ಸಮ್ಮೇಳನ, ಸೊಲ್ಲಾಪುರ, ೧೯೫೦