ಮಣ್ಣು ಹೊನ್ನಿನ ಗೂಡು
ಮಣ್ಣು ಜೀವದ ಸೂಡು
ಮಣ್ಣು ಹೆಣ್ಣಿನ ಬೀಡು
ಮಣ್ಣು ಗಂಡಿನ ನಾಡು     ||೧||

ಮಣ್ಣು ಪಾವನಮೆಂದು
ತುಳಸಿ ಮೃತ್ತಿಕೆಯಾಯ್ತು
ಬಣ್ಣಬಣ್ಣದ ಮಣ್ಣು
ಮೈಗೆ ಪೂಸುವ ಗಂಧ     ||೨||

ಉಪ್ಪು ಸಿಹಿ ಕಾರಗಳ
ಷಡ್ರಸಾಹಾರಗಳ
ಜೀವಕೇ ತವರಿದುವು
ಮಣ್ಣೂ ಸಂಜೀವನವು      ||೩||

ಮಣ್ಣಿಂದ ಸಾಗರವು
ಸಾಗರದಿ ಮುತ್ತುಗಳು
ಹೊನ್ನು ರನ್ನಗಳೆಲ್ಲ
ಮಣ್ಣಿಂದಮೈಶ್ವರ್ಯ       ||೪||

ಈ ರಾಜ್ಯ ಸಂಪದವುಸ
ಈ ಸೌಧವರಮನೆಯು
ಸಾಮ್ರಾಜ್ಯ ಸಿಂಹಾಸ-
ನಗಳು ಮಾಯದ ಮಣ್ಣು  ||೫||

ನೀರೊಳಗೆ ಮುಳುಗಿಪುದು
ಆಗಸದಿ ಹಾರಿಪುದುಸ
ನೆಲದಲ್ಲಿ ನಡೆಸುವುದು
ಶಕ್ತಿಗೇ ಗಣಿಯಿದುವು       ||೬||

ದೈವಸೃಷ್ಟಿಯ ಮಣ್ಣು
ಬ್ರಹ್ಮಾಂಡಮಾಯ್ತಿಂದು
ಚಣಚಣಕೆ ಹೊಸಯುಗವ
ಕರೆಯುತಿದೆ ತೋರುತಿದೆ  ||೭||

ಸಕಲ ಬಗೆಗಳ ಜೀವ
ಖನಿಜ ಸಂಪದ ಭಾವ
ದೈವಶಕ್ತಿಯ ತೀವಿ
ತುಂಬಿರುವ ವರ ಕಣಜ    ||೮||

ಆ ನಾಡು ಈ ಕಾಡು
ಎಂಬ ಭಾವದ ಮಾಯೆ
ಆಸೆ ಕಲಹದಸೂಯೆ
ಮಣ್ಗುಂಟೆ ಪರಿಕಿಸಲು      ||೯||

ಮಣ್ಣಲ್ಲದಿನ್ನಿಲ್ಲ
ನಿತ್ಯವಸ್ತುವೆ ಮಣ್ಣು
ಮನವರಿಯದಿರ್ದೊಡೀ
ಕಣ್ಣರಿಯದೇ ನಿಜವ        ||೧೦||

ದೇವರ್ಗೆ ಮಣ್ಣೆಂದ-
ರೇನು ಪ್ರೇಮವೊ ಕಾಣೆ
ಅಮೃತವನೆ ಬಿತ್ತಿಹನು
ಜೀವಕಳೆ ತುಂಬುವನು    ||೧೧||

ಮಣ್ಣಿಗಿಹ ಸುತ್ಯಾಗ
ಶುಚಿ ಪ್ರೀತಿ ವಾತ್ಸಲ್ಯ
ವೈರಾಗ್ಯಮುಪಕಾರ
ಗುಣವೊಲಿಯಲೆಮಗಿಂದು ||೧೨||

* * *

– “ಪದ್ಮ
ಜೀವನ, ಸಂಪುಟ ೭, ಸಂಚಿಕೆ ೮, ೧೯೪೬