‘ಹೊಲೆಯರ ಹೆಣ್ಣು’ ಕವಿತೆಯು ಜಾತಿಸಮಸ್ಯೆಯನ್ನು ಮಹಿಳೆಯ ಸಂದರ್ಭದಲ್ಲಿ ಸಮಸ್ಯೀಕರಿಸಿಕೊಂಡ ನೆಲೆಯು ಗಮನಾರ್ಹವಾದುದು. ‘ವಿಮಲ ಭಾವ ಭಂಗಿ ಬೆರೆತು ನಲಿವ ತಿರೆಯೊಳು ತಾಣವಿಲ್ಲ, ಮಾನವಿಲ್ಲ, ಉಣಲು ಇಲ್ಲ ಅನ್ನವು’ ಎನ್ನುವ ಮಾತುಗಳು ನಿಸರ್ಗ ಸೌಂದರ್ಯಕ್ಕೆ ಮಾನವ ನಿರ್ಮಿತ ಜಾತಿಪದ್ಧತಿಯ ಸಾಮಾಜಿಕ ಕುರೂಪವನ್ನು ಮುಖಾಮುಖಿಯಾಗಿಸುತ್ತದೆ. ‘ಉಟ್ಟ ತುಂಡು ದೇಹದರ್ಧ ಮಾತ್ರ ಬಳಸಿ ಮುಚ್ಚಿದೆ ಬಿಟ್ಟ ಭಾಗವದಕೆ ಕೂಸೆ ವಸನವಾಗಿ ನಿಂತಿದೆ’ಎಂಬ ಚಿತ್ರಣ ದಲಿತ ಹೆಣ್ಣಮಕ್ಕಳ ಸಂದರ್ಭದಲ್ಲಿ ಬಡತನವು ಹೆಣ್ತನದ ವಿಚಾರದೊಂದಿಗೆ ದ್ವಿಗುಣಗೊಳ್ಳುವುದನ್ನು ಪ್ರತಿನಿಧಿಸುತ್ತದೆ. ಜಾತಿ ಸಮಸ್ಯೆಯು ಪ್ರಧಾನವಾಗಿ ಸುಧಾರಣಾವಾದಿ ನೆಲೆಯಿಂದಲೇ ಗುರುತುಗೊಳ್ಳುತ್ತಿದ್ದ, ಮಹಿಳಾ ವಿಷಯವು ಜಾತಿ ವಿಚಾರವನ್ನು ವ್ಯಾಪ್ತಿಗೆ ಇನ್ನು ಗುರುತಿಸಿಕೊಂಡಿಲ್ಲದ ಕಾಲದಲ್ಲಿ ಅವೆರಡನ್ನೂ ಒಗ್ಗೂಡಿಸಿಕೊಂಡ ಈ ಕವಿತೆ ತನ್ನ ಕಾಲಘಟ್ಟಕ್ಕಿಂತ ಮುಂದಿರುವಂತೆ ಕಾಣುತ್ತದೆ. ೧೯೯೦ರ ದಶಕದಲ್ಲಷ್ಟೇ ಸ್ಪಷ್ಟವಾಗಿ ರೂಪುಗೊಂಡ ದಲಿತ ಸ್ತ್ರೀವಾದದ ಗುರುತುಗಳು ಈ ಕವಿತೆಯಲ್ಲಿ ಅಡಕವಾಗಿರುವುದು ಮಹತ್ವದ್ದೆನಿಸುತ್ತದೆ.

ಹೆಣ್ಣನ್ನು ಹಣ್ಣಿನೊಂದಿಗೆ ಸಮೀಕರಿಸುವ ಉಪಮೆಯು ಸಾಂಪ್ರದಾಯಿಕ ಸಮಾಜದ್ದೇ ಆದರೂ ಅದನ್ನು ಭಿನ್ನ ಪರಿಣಾಮಕ್ಕಾಗಿ ಬಳಸಿಕೊಳ್ಳುವ ‘ಹೆಣ್ಣು-ಹೆಣ್ಣಯ’ ಕವಿತೆಯ ಸಂವೇದನೆಯ ಗಮನಾರ್ಹವಾದುದು. ‘ಇಷ್ಟು ಕುತ್ತಗಳಿಗು ತುತ್ತು ಹೆಣ್ಣು ಜೀವಮಾನವು! ಎಷ್ಟು ಕುತ್ತ ಬಂದರೇನು? ಬಿಡದೆ ಗಿಡವು ಹಣ್ಣನು? ಎನ್ನುವ ಮಾತುಗಳು ಪುರುಷ ಪ್ರಧಾನತೆಯ ಎಲ್ಲ ಒತ್ತಡಗಳ ನಡುವೆಯು ಜೀವಂತಿಕೆಯನ್ನು ತನ್ನತನವನ್ನು ಉಳಿಸಿಕೊಳ್ಳುವ ಹೆಣ್ಣಿನ ಅಸ್ತಿತ್ವವನ್ನು ಸಾಂಕೇತಿಕವಾಗಿ ಪ್ರತಿಬಿಂಬಿಸುತ್ತದೆ.

ಇನ್ನುಳಿದ ಕವಿತೆಗಳು ಹೀಗೆ ನೇರವಾಗಿ ಮಹಿಳಾ ವಿಷಯವನ್ನು ಕುರಿತವಾಗಿಲ್ಲದಿದ್ದರೂ, ಅವು ಸ್ತ್ರೀ ಸಂವೇದನೆಯ ನೆಲೆಯಲ್ಲಿ ನಿಂತು ಭಿನ್ನ ವಿಷಯಗಳನ್ನು ಪ್ರಸ್ತುತಪಡಿಸುವುದನ್ನು ಗಮನಿಸಬಹುದು. ಉದಾಹರಣೆಗೆ ಈ ಕೆಳಗಿನ ಕವಿತೆಗಳನ್ನು ಗಮನಿಸಬಹುದು.

ಕುಣಿಯುವ ನಲಿಯುವ ನರ್ತಕಿಯಂದದಿ
ನನಗೆ
ಬೇಕಾದುದು ಹಡಗೊಂದು
ಅದ
ನಡೆಯಿಸಲು ನಾವಿಕನೊರ್ವ(ಕನಸು)
“ಕೂಸಿಗಿಂತ ಕಿರಿಯಳಾಗಿ
ಜಗದ
ಕೂಡೆ ಆಡುವೆ|
ತಾಯಿಗಿಂತ
ಹಿರಯಳಾಗಿ
ಪ್ರೀತಿಯ
ತೊರೆಯ ಹರಿಸುವೆ” | (ನಗುತಲಿರುವೆ)
“ಎಮ್ಮನದ ದೀವಿಗೆಯನಾರಿಸುವ ಜನರಿವರು
ತೈಲವಿಲ್ಲದೆ
ದೀಪ ಬಾಡತಿರುವುದು ಇಲ್ಲಿ
ಸಾರಮಿಲ್ಲದ
ಬಾಳು ಸುಡುತಿಹುವುದು ಮನವ
ನೋಹಿಗರು
ಈಗಿಲ್ಲ, ಬಾಹಿರಳು ಆಗಿಹೆನು(ನಿರಾಶೆ)

ಮೇಲಿನ ಕವಿತೆಗಳಲ್ಲಿ ವಿಶೇಷ ಒತ್ತಿನೊಂದಿಗೆ ಇಲ್ಲಿ ಮುದ್ರಿಸಲಾಗಿರುವ ನಾವಿಕ ನೋರ್ವ, ಹಿರಿಯಳಾಗಿ, ಬಾಹಿರಳು ಇತ್ಯಾದಿ ಪ್ರಯೋಗಗಳು ಕವಿತೆಯ ವಕ್ತೃ ಸ್ತ್ರೀ ಎಂಬುದನ್ನು ಗುರುತಿಸಲು ಸಹಾಯಕವಾಗಿವೆ.

ಆದರೆ ಈ ಕವಿತೆಗಳು ಕಟ್ಟಿಕೊಳ್ಳುವ ಸ್ತ್ರೀ ಸಂವೇದನೆಯು ಅಂದಿನ ಪ್ರಧಾನಧಾರೆಯು ನಿರ್ವಹಿಸಿದ್ದ ಸ್ತ್ರೀಯ ಚೌಕಟ್ಟಿನೊಳಗೆ ಇರುವುದು ಗಮನಾರ್ಹ. ಈ ಕವಿತೆಯೊಳಗೆ ಪ್ರತಿನಿಧಿತವಾಗುವ ಸ್ತ್ರೀ ಹಾಗೂ ಸ್ತ್ರೀ-ಪುರುಷ ಸಂಬಂಧವು ಪ್ರಧಾನಧಾರೆಯ ನೆಲೆಯದೇ ಆಗಿರುವುದನ್ನು ‘ಕುಣಿಯುವ ನಲಿಯುವ ನರ್ತಕಿಯಂದದಿ ನನಗೆ ಬೇಕಾದದು ಹಡಗೊಂಡು ಅದ ನಡೆಯಿಸಲು ನಾವಿಕನೋರ್ವ’ ದಂತಹ ಉದಾಹರಣೆಗಳು ಸಮರ್ಥಿಸುತ್ತವೆ. ಉಳಿದಂತೆ ಮಹಿಳಾ ಸಮಸ್ಯೆ ಕುರಿತ ಕವಿತೆಗಳು ಸುಧಾರಣಾವಾದಿ ಚೌಕಟ್ಟಿನೊಳಗೆ ನಿರ್ಮಿತಗೊಂಡವಾಗಿವೆ.

ಈ ಕಾಲಘಟ್ಟದ ಕವಿತೆಗಳಿಗೆ ಹೋಲಿಸಿದರೆ ಸಣ್ಣಕತೆಗಳ ಸಂದರ್ಭದಲ್ಲಿ ಲೇಖಕಿಯರು ಹೆಚ್ಚು ಪ್ರಯೋಗಶೀಲರಾಗಿರುವುದು ಕಂಡುಬರುತ್ತದೆ. ಸಣ್ಣಕತೆ ಎಂಬುದಕ್ಕೆ ಪರ್ಯಾಯವಾಗಿ ಅನುಭವ ಚಿತ್ರ, ಅನುಭವ ಕಥನ, ಚಿತ್ರಾವಲಿ ಹೀಗೆ ಭಿನ್ನ ಹೆಸರುಗಳಿಂದ ಇವು ಪ್ರಕಟಗೊಂಡಿವೆ. ಆದರೆ ಈ ಹೆಸರುಗಳು ಆಯಾ ಬರಹಗಳು ಸ್ವರೂಪವನ್ನಾಧರಿಸಿ ಸಂಪಾದಕರು ನೀಡಿದ್ದೆ ಅಥವ ಲೇಖಕಿಯರು ಪರಿಭಾವಿಸಿದ್ದೋ ಹೇಳುವುದು ಸಾಧ್ಯವಿಲ್ಲ. ಕಥೆಯ ಸಂವಿಧಾನದ ದೃಷ್ಟಿಯಿಂದ ನೋಡಿದಾಗ ‘ಗೆಳೆಯರ ಸುಳಿದಾಟ ಹೆಂಡಂದಿರಿಗೆ ಪ್ರಾಣ ಸಂಕಟ’ ದಂತಹ ಪ್ರಯೋಗ ದೃಶ್ಯ ವಿವರಣೆ ಹಾಗೂ ಸಂಭಾಷಣೆಯಿಂದಲೇ ಮೈ ತಳೆದದ್ದಾಗಿದೆ. ಕಥನದ ತಂತ್ರಗಾರಿಕೆಯನ್ನು ಇಲ್ಲವೆನ್ನುವಷ್ಟು ಕ್ವಚಿತ್ತಾಗಿ ಬಳಸಿ ರೂಪುಗೊಂಡ ಬರಹವಾದ್ದರಿಂದ ಅದನ್ನು ‘ಚಿತ್ರಾವಲಿ’ ಎಂದು ಗುರುತಿಸಲಾಗಿದೆ. ‘ವಿಘ್ನೇಶ್ವರ’ ಕವಿತೆಯಂತೂ ಪೂರ್ಣಪ್ರಮಾಣದಲ್ಲಿ ಸಂಭಾಷಣೆಯಿಂದಲೇ ಕಟ್ಟಿದ್ದಾಗಿದೆ. ಇಡೀ ಕತೆಯಲ್ಲಿ ಅಪ್ಪಿತಪ್ಪಿ ಕೂಡು ಒಂದು ವಾಕ್ಯದ ನಿರೂಪಣೆ, ವಿವರಣೆ ಕಾಣಿಸುವುದಿಲ್ಲ. ಆದರೆ ಇದನ್ನು ಕತೆ ಎಂದೇ ಕರೆಯಲಾಗಿದೆ.

ಸಣ್ಣಕತೆಯ ತಂತ್ರಗಾರಿಕೆಯ ಬಗ್ಗೆ ಲೇಖಕಿಯರು ಸೂಕ್ಷ್ಮತೆಯನ್ನು ಹೊಂದಿದವರಾಗಿದ್ದರು ಎಂಬುದಕ್ಕೆ ‘ಗುಪ್ತಜ್ವಾಲೆ’ ಕತೆಯು ಒಳ್ಳೆಯ ಉದಾಹರಣೆಯಾಗಿದೆ. ಈ ಕತೆಯು ಆಯ್ಕೆ ಮಾಡಿಕೊಂಡಿರುವ ಪತ್ರ ನಿರೂಪಣಾ ಮಾದರಿ ಕತೆಯ ವಸ್ತುವಿನೊಂದಿಗೆ ಸಾವಯವ ಸಂಬಂಧ ಹೊಂದಿದ್ದಾಗಿದೆ. ಇತ್ತೀಚಗಷ್ಟೇ ಕಾನೂನಿ ಚೌಕಟ್ಟಿಗೆ ತರಲು ಸಾಧ್ಯವಾಗಿರುವ ಕೌಟುಂಬಿಕ ಹಿಂಸೆಯಂತಹ ವಿಚಾರವನ್ನು ೧೯೩೮ರಲ್ಲಿ ತನ್ನ ಕಥೆಯ ವಸ್ತುವಾಗಿಸಿಕೊಂಡ ಲೇಖಕಿ ಅದಕ್ಕೆ ‘ಗುಪ್ತಜ್ವಾಲೆ’ ಎಂದು ಹೆಸರಿಟ್ಟಿರುವುದು ಸಾಂಕೇತಿಕವಾಗಿದೆ. ಕೌಟುಂಬಿಕ ಸಂಗತಿಗಳು, ದಾಂಪತ್ಯದ ವಿರಸಗಳು ಸಾರ್ವಜನಿಕಗೊಳ್ಳಬಾರದು ಎಂಬ ಸಾಮಾಜೀಕರಣದ ಸಂದರ್ಭದಲ್ಲಿ ಹೆಣ್ಣು ಮಗಳೊಬ್ಬಳು ತನ್ನ ಮೇಲೆ ನಡೆಯುವ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ಆತ್ಮೀಯ ಗೆಳತಿಯಲ್ಲಿ ಪತ್ರ ಮಾದರಿಯ ಖಾಸಗೀ ಅಭಿವ್ಯಕ್ತಿಯಲ್ಲಿ ತೆರೆದಿಡುವುದು ಅರ್ಥಗರ್ಭಿತವಾಗಿದೆ.

‘ಶೈವಲೆ’ ಕೃತಿಯು ಗಾತ್ರದ ದೃಷ್ಟಿಯಿಂದ ನೀಳ್ಗತೆಯ ಸ್ವರೂಪದ್ದಾದರೂ ವಸ್ತುವಿನ ಹರಹು ಹಾಗೂ ಕತೆಯ ಬೆಳವಣಿಗೆಯಿಂದ ಕಿರು ಕಾದಂಬರಿ ಎನ್ನಬಹದಾಗಿದೆ. ಅಲ್ಲದೆ ಲೇಖಕಿ ಕಥೆಯ ಬೆಳವಣಿಗೆಯನ್ನು ೧೫ ಪುಟ್ಟ ಪರಿಚ್ಛೇದಗಳಾಗಿ ವಿಂಗಡಿಸಿಕೊಂಡಿರುವುದು ಈ ವಿಚಾರವನ್ನು ಸಮರ್ಥಿಸುತ್ತದೆ. ಮಹಿಳಾ ವಿಷಯ ಕೇಂದ್ರಿತವಾದ ‘ಹೀಗೂ ಉಂಟೇ’ ಎಂಬ ಕತೆಯ ಅಸಮದಾಂಪತ್ಯದ ವಸ್ತುವನ್ನು ವಿಡಂಬನೆಯ ನೆಲೆಯಲ್ಲಿ ನಿರ್ವಹಿಸಿರುವುದು ಹಾಗೂ ‘ನಿರ್ಭಾಗೈ’ ಕತೆಯು ವೈಧವ್ಯದ ಸಮಸ್ಯೆಯನ್ನು ಅತ್ಯಂತ ಭಾವುಕ ನೆಲೆಯಲ್ಲಿ ನಿರ್ವಹಿಸಿರುವುದು ಈ ಕಾಲಘಟ್ಟದಲ್ಲಿ ಎರಡು ಭಿನ್ನ ಧಾಟಿಗಳಲ್ಲಿ ಮಹಿಳಾ ಸಮಸ್ಯೆಯು ನಿರೂಪಿತಗೊಳ್ಳುವುದನ್ನು ತೋರಿಸಿಕೊಡುತ್ತದೆ.

ಒಟ್ಟಾರೆಯಾಗಿ ಈ ಕಾಲಘಟ್ಟದ ಮಹಿಳಾ ವಿಷಯ ಕೇಂದ್ರಿತ ಕತೆಗಳನ್ನು ಗಮನಿಸಿದರೆ ಯಾವ ಕತೆಗಳು ತಮ್ಮ ವಸ್ತುವನ್ನು ಲಘು ಹರಟೆಗಳಾಗಿ, ಪ್ರಹಸನದ ಮಾದರಿಯಲ್ಲಿ ಪ್ರಸ್ತುತಪಡಿಸುತ್ತವೆಯೋ ಅಲ್ಲಿ ಲವಲವಿಕೆಯ ಸಂಭಾಷಣೆ ಪ್ರಧಾನವಾಗಿದೆ. ಇದಕ್ಕೆ ಹೊರತಾಗಿ ವಸ್ತುವನ್ನು ಭಾವುಕ ನೆಲೆಯಲ್ಲಿ ಸಮಸ್ಯೀಕರಿಸಿಕೊಂಡಿರುವಲ್ಲಿ ಆ ಕತೆಗಳು ನಿರೂಪಣೆಗೆ ಒತ್ತುಕೊಟ್ಟಿದೆ. ಅಷ್ಟರಮಟ್ಟಿಗೆ ಈ ಕತೆಗಳು ಅಂದಿನ ಲೇಖಕಿಯರು ಆಶಯ -ಆಕೃತಿಗಳನ್ನು ಕುರಿತು ಪ್ರಜ್ಞಾಪೂರ್ವಕವಾಗಿದ್ದುದನ್ನು ತೋರಿಸುತ್ತದೆ.

ಇನ್ನು ವಸ್ತುವಿನ ದೃಷ್ಟಿಯಿಂದ ನೋಡಿದರೆ ಈ ಕಾಲಘಟ್ಟದಲ್ಲಿ ಮಹಿಳಾ ವಿಷಯ ಕೇಂದ್ರಿತವಲ್ಲದ ಸಣ್ಣಕತೆಗಳನ್ನು ಕಾಣಬಹುದಾದರೂ ಅವುಗಳ ಸಂಖ್ಯೆ ಕಡಿಮೆ. ಆದರೆ ಕಾವ್ಯದ ಸಂದರ್ಭದಲ್ಲಿ ಪರಿಸ್ಥಿತಿ ಇದಕ್ಕೆ ಭಿನ್ನವಾಗಿದೆ. ಅಲ್ಲಿ ಮಹಿಳಾ ವಿಷಯ ಕೇಂದ್ರಿತ ಹಾಗೂ ಇತರ ವಿಷಯಗಳ ಕುರಿತ ಅದರಲ್ಲೂ ನಾಡು-ನುಡಿ ಕೇಂದ್ರಿತವಾದ ಕವನಗಳು ಸಾಕಷ್ಟು ದೊರೆಯುತ್ತವೆ. ಭಾರತೀಯತೆಯ ಅಭಿಮಾನ, ಸ್ವಾತಂತ್ರಕ್ಕಾಗಿ ಹಂಬಲ, ಭಾರತೀಯ ಸಮಾಜದ ಶುದ್ಧೀಕರಣ ಇವುಗಳೊಂದಿಗೆ ಕನ್ನಡ ನಾಡನ್ನು ಕಟ್ಟುವ ಹುಮ್ಮಸಿನ ಕವಿತೆಗಳು ಕಂಡುಬರುತ್ತವೆ.

ಮಹಿಳಾ ವಿಷಯಗಳ ಪ್ರಸ್ತುತಿಗೆ ವೈಚಾರಿಕ ಲೇಖನ ಮಾದರಿಯನ್ನು ಈ ಸಮಯದ ಲೇಖಕಿಯರು ಬಳಸಿರುವುದಾದರೂ ಅದನ್ನು ಕಥಾನಕದ ರೂಪದಲ್ಲಿ ಪ್ರಸ್ತುತಪಡಿಸುವುದು ಹೆಚ್ಚು ಪ್ರಯೋಜನಕಾರಿ ಎಂಬ ನಂಬಿಕೆ ಇರುವಂತಿದೆ. ಈ ನಂಬಿಕೆಯಿಂದಲೇ ಶಾಂತಾಬಾಯಿ ನೀಲಗಾರ ವಾಗ್ಬೂಷಣ ಪತ್ರಿಕೆಯ ಆಹ್ವಾನದಲ್ಲಿ ವಸ್ತುವಿನ ವಿಚಾರದಲ್ಲಿ ಪತ್ರಿಕೆಯ ಆಶಯವನ್ನು ಈಡೇರಿಸಿದರೂ ಆಕೃತಿಯ ಸಂದರ್ಭದಲ್ಲಿ ಅವರು ನೀಡಿದ ನಿಬಂಧದ ಮಾದರಿಯನ್ನು ಮೀರಿ ಕಥಾನಕವಾಗಿ ಪ್ರಸ್ತುತಪಡಿಸಿದ್ದಾರೆ. ಮಹಿಳಾ ವಿಷಯವನ್ನು ಒಂದೆಡೆ ವಿಸ್ತಾರವಾದ ಹರಹಿನಲ್ಲಿ ನೇರನುಡಿಯಲ್ಲಿ ವಿಮರ್ಶಾತ್ಮಕ ಧಾಟಿಯಲ್ಲಿ ತಮ್ಮ ಲೇಖನಗಳ ಮೂಲಕ ಪ್ರತಿಪಾದಿಸಲು ಯತ್ನಿಸುತ್ತಲೇ ಇನ್ನೊಂದೆಡೆ ಪ್ರತಿಯೊಂದು ವಸ್ತುವನ್ನು ನಿರ್ದಿಷ್ಟ ಪಾತ್ರಗಳ ರಚನೆ, ಸನ್ನಿವೇಶ ನಿರ್ಮಾಣ ಹಾಗೂ ಕಥಾಹಂದರದಲ್ಲಿ ಎರಕ ಹೊಯ್ಯಲು ಯತ್ನಿಸಿದ್ದಾರೆ. ಒಟ್ಟಾರೆ ಹೇಳುವುದಾದರೆ ಯಾವೆಲ್ಲ ಮಾದರಿಗಳಲ್ಲಿ ಮಹಿಳಾ ವಿಷಯವನ್ನು ಅಭಿವ್ಯಕ್ತಿಸಬಹುದೋ ಅವೆಲ್ಲವನ್ನೂ ಬಳಸಿಕೊಳ್ಳುವ ಪರಿಶ್ರಮಕ್ಕೆ ಈ ಕಾಲಘಟ್ಟ ಸಾಕ್ಷಿಯಾಗಿದೆ.

ಈ ಕಾಲಘಟ್ಟದ ಕತೆಗಳ ವೈಶಿಷ್ಟ್ಯ ಅವು ಮಹಿಳಾ ವಿಷಯವನ್ನು ಪರಿಭಾವಿಸಿದ ಎರಡು ಭಿನ್ನ ಮಾದರಿಗಳಲ್ಲಿದೆ. ಒಂದೆಡೆ ನಿರ್ಭಾಗೈ, ಅಂಧಃ ಸಮಾಜ, ಗುಪ್ತಜ್ವಾಲೆ, ಶೈವಲೆಯಂತಹ ಕತೆಗಳು ಅತ್ಯಂತ ಭಾವುಕವಾಗಿ ದಟ್ಟ ವಿಷಾದದ ನೆಲೆಯಲ್ಲಿ ವೈಧವ್ಯ, ಅಸಮದಾಂಪತ್ಯ, ಕೌಟುಂಬಿಕ ಹಿಂಸೆಗಳನ್ನು ಕಥನವಾಗಿಸಿದರೆ, ಇನ್ನೊಂದೆಡೆ ವಿಘ್ನೇಶ್ವರ, ಗೆಳೆಯರ ಸುಳಿದಾಟ ಹೆಂಡಂದಿರಿಗೆ ಪ್ರಾಣಸಂಕಟದಂತಹ ಕತೆಗಳು ಸ್ತ್ರೀ ಸಮಾನತೆಯ ಪರಿಕಲ್ಪನೆಯನ್ನು ಪ್ರಹಸನದ ದಾಟಿಯಲ್ಲಿ ಪರಿಭಾವಿಸುತ್ತದೆ. ಈ ಕತೆಗಳ ಹೆಣ್ಣು ಮಕ್ಕಳು ಆತ್ಮವಿಶ್ವಾಸದ ಜೊತೆಗೆ, ಹಗುರವಾದ ವಾಗ್ವಾದದ ನೆಲೆಯಲ್ಲಿ ಮಹಿಳಾ ಪ್ರಶ್ನೆಯನ್ನು ಮಂಡಿಸುತ್ತಾರೆ. ಮಹಿಳಾ ಸಮಸ್ಯೆಯನ್ನು ಭಾವುಕ ನೆಲೆಯಲ್ಲಿ ಪರಿಭಾವಿಸುತ್ತಲೇ, ಸುಧಾರಣೆಯ ಪ್ರಯತ್ನ ನಡೆಸುತ್ತಲೇ ಸ್ತ್ರೀ ಸಮಾನತೆಯ ಪ್ರಶ್ನೆಯನ್ನು ಮಾತ್ರ ಹಗುರವಾದ ಧಾಟಿಯಲ್ಲಿ ಕುಚೋದ್ಯಕ್ಕೊಳಪಡಿಸುವ ಅಂದಿನ ಸಾಮಾಜಿಕ ಸನ್ನಿವೇಶದ ಛಾಯೆ ಈ ಕತೆಗಳ ಮೇಲೆ ಬಿದ್ದಿರುವುದನ್ನು ಗಮನಿಸಬಹುದಾಗಿದೆ. ಮಹಿಳಾ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಲೇ ಭಾರತೀಯ ಸಂದರ್ಭಕ್ಕೆ ಸ್ತ್ರೀವಾದದ ಅಗತ್ಯವು ಸಂಶಯಾಸ್ಪದವಾದುದೆಂಬ ಸುಧಾರಣಾವಾದಿ ಚಿಂತನೆಯ ಧೋರಣೆ ಈ ಕತೆಗಳ ಹಿಂದಿರಲಿಕ್ಕೂ ಸಾಕು. ಆದರೆ ಈ ಕತೆಗಳ ಸ್ತ್ರೀ ಸಮಾನತೆಯ ವಿಚಾರವನ್ನು ನವಿರು ಹಾಸ್ಯದ ನೆಲೆಯಲ್ಲಿ ಪ್ರಸ್ತುತ ಪಡಿಸಿದರೂ ಅವುಗಳನ್ನು ಸಂಪೂರ್ಣವಾಗಿ ಋಣಾತ್ಮಕವಾಗಿ ಪರಿಭಾವಿಸಿಲ್ಲವೆಂಬುದು ಅವು ಸುಧಾರಣಾವಾದಿ ಚಿಂತನೆಗೆ ಪೂರ್ಣ ಅಡಿಯಾಳಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಮಹಿಳಾ ಸಂಘಗಳು ಅವುಗಳ ಠರಾವುಗಳು ಕುಚೋದ್ಯಕ್ಕೆ ಒಳಗಾಗುತ್ತಿದ್ದ ಅಂದಿನ ಸನ್ನಿವೇಶದಲ್ಲಿ ಗೆಳೆಯರ ಸುಳಿದಾಟ…..ಕತೆಯು ನವಿರಾದ ವಿವರಣೆಯ ದಾಟಿಯಲ್ಲಿಯೇ ರೂಪುಗೊಂಡರೂ ಮಹಿಳಾ ಸಂಘದ ಅಪಹಾಸ್ಯದಲ್ಲಿ, ಸೋಲಿನಲ್ಲಿ ಮುಕ್ತಾಯಗೊಳ್ಳುವುದಿಲ್ಲ ಎಂಬುದು ಗಮನಾರ್ಹ. ಹಾಗೆಯೇ ‘ಹೀಗೂ ಉಂಟೆ?’ ಕತೆಯ ನಾಯಕಿ ಅಸಮದಾಂಪತ್ಯದ ಹಾನಿಗೆ ಒಳಗಾಗುತ್ತಲೇ ಅಂತಹ ದಾಂಪತ್ಯವನ್ನು ತಾನು ಎಂದಿಗೂ ಸ್ವೀಕರಿಸುವುದಿಲ್ಲ ಎಂಬ ತೀರ್ಮಾನ ಕೈಗೊಳ್ಳುವಷ್ಟು ದೃಢಳಾಗುತ್ತಾಳೆ.

ಈ ಕಾಲಘಟ್ಟದ ಲೇಖಕಿಯರು ತಮ್ಮ ಕತೆಗಳ ವಸ್ತುವನ್ನು ಅತ್ಯಂತ ವಿಭಿನ್ನವಾಗಿ ನಿರ್ವಹಿಸಬಲ್ಲರು ಎಂಬುದಕ್ಕೆ ಉದಾಹರಣೆಯಾಗಿ ‘ಯಾರ ಮಗು?’ ಹಾಗೂ ‘ಜೀವನ ಜ್ಯೋತಿ’ ಕತೆಗಳನ್ನು ಗಮನಿಸಬಹುದು. ಜೀವನ ಜ್ಯೋತಿ ಕತೆಯು ಸ್ವಾತಂತ್ರ್ಯ ಹೋರಾಟದ ದಿನಗಳ ರಾಜಕೀಯ ಖೈದಿಯೊಬ್ಬಳ ಅನುಭವವನ್ನು ವಸ್ತುವಾಗಿ ಹೊಂದಿದ್ದಾಗಿದ್ದು ಇದನ್ನು ಅನುಭವ ಕಥನ ಎಂದೇ ಕರೆಯಲಾಗಿದೆ. ಗಮನಾರ್ಹ ಸಂಗತಿ ಎಂದರೆ ಇಡೀ ಕತೆಯಲ್ಲಿ ಎಲ್ಲಿಯೂ ಸ್ವಾತಂತ್ರ್ಯ ಹೋರಾಟದ ರಾಜಕೀಯ ವಿವರಗಳು ಕಾಣಿಸುವುದಿಲ್ಲ. ಬದಲಿಗೆ ಅಲ್ಲಿಯೂ ಪ್ರಧಾನವಾಗಿ ಕಾಣುವುದು ಕೌಟುಂಬಿಕ ನೆಲೆಯೇ. ಜೈಲಿನ ಬಹುಭಾಷಿಕ ಪರಿಸರ, ಖೂನಿಯೊಬ್ಬನ ಘಾಷಿ ಶಿಕ್ಷೆಗೂ ಕಂಬನಿ ಮಿಡಿವ ಮಾನವೀಯ ಮನಸ್ಥಿತಿ, ಕುಟುಂಬದಿಂದ ಬೇರ್ಪಟ್ಟ ಬೇಗುದಿ, ಕುಟುಂಬದಿಂದ ಬರುವ ಆತ್ಮೀಯರ ಪತ್ರಕ್ಕಾಗಿ ಕಾಯುವ ಕಾತರ ಇತ್ಯಾದಿ ವಿವರಗಳೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡು ರಾಜಕೀಯ ಖೈದಿಗಳಾದ ಮಹಿಳೆಯರ ಭಿನ್ನ ಅನುಭವವನ್ನು ಈ ಕತೆ ದಾಖಲು ಮಾಡುತ್ತದೆ. ರಾಷ್ಟ್ರೀಯ ಹೋರಾಟವು ರಾಜಕೀಯ ಸಂಗತಿ ಮಾತ್ರವಲ್ಲ ಅದಕ್ಕೆ ಕೌಟುಂಬಿಕ ಮುಖವೊಂದಿದೆ ಎಂಬುದನ್ನು ಈ ಕತೆ ಕಥನವಾಗಿಸುತ್ತದೆ.

‘ನನಗೆ ಮನೆಯ ನೆನಪನ್ನು ಮರೆಯಲು ಸಾಧ್ಯವಿಲ್ಲ. ನನಗೆ ಹೊರಗಣ ಜಗತ್ತಿನ ಪರಿಚಯವಾದದ್ದೇ ಇಲ್ಲಿಗೆ ಬಂದ ನಂತರ, ಅದರೊಡನೆ ನನ್ನತನ (ಆತ್ಮೀಯತೆ) ಇಷ್ಟು ಬೇಗನೆ ಹ್ಯಾಗೆ ಹೊಂದಬೇಕು?’ ‘ನನ್ನ ಲೀಲೆಯು ನಾನು ಹೊರುಡವಾಗ ಶಾಲೆಗೆ ಹೋಗಿದ್ದಳು. ಪಾಪ, ಮನೆಗೆ ಬಂದ ಮೇಲೆ ಕಳವಳಗೊಂಡು ಎಷ್ಟು ಅತ್ತಳೊ!…. ‘ ಎನ್ನುವ ಸುಂದರಮ್ಮನ ಮಾತುಗಳು ಆ ಭಿನ್ನತೆಯನ್ನು ದಾಖಲಿಸದೆ ಇರಲಾರದು.

ಇಲ್ಲಿನ ಮಹಿಳಾ ರಾಜಕೀಯ ಖೈದಿಗಳ ರಾಜಕೀಯ ನಿಲುವು, ಯುರೋಪಿನ ವಿರುದ್ಧವಾದುದಾದರೂ, ಆ ಕಾರಣಕ್ಕಾಗಿಯೇ ಅವರು ಜೈಲುವಾಸಿಗಳಾಗಿದ್ದರೂ ಯುರೋಪಿಯನ್ ರಾಜಕೀಯ ಖೈದಿಯೊಬ್ಬಳು ಕ್ರೈಸ್ತ ಸಮಾಜದೊಂದಿಗೆ ತೌಲನಿಕವಾಗಿ ಪ್ರಸ್ತಾಪಿಸುತ್ತಲೇ ವ್ಯಕ್ತಪಡಿಸುವ ಹಿಂದು ಸಮಾಜ ಹಾಗೂ ಅದರಲ್ಲಿನ ಸ್ತ್ರೀಯರ ಬಗೆಗಿನ ಕಾಳಜಿಯನ್ನು ಗೌರವದಿಂದ ನೋಡುತ್ತಾರೆ. ಅವಳ ಸ್ವಾರ್ಥತ್ಯಾಗದ ಬೆಳಕಲ್ಲಿ ನಾವು ವಿಶ್ವ ಬಂಧುತ್ವವನ್ನು ಕಂಡೆವು ಎನ್ನುತ್ತಾರೆ. ಅಂದರೆ ಈ ಕತೆ ಧರ್ಮ ಮತ್ತು ರಾಜಕೀಯವನ್ನು ಬೆರೆಸಿ ಪ್ರತಿಕ್ರಿಯಿಸುವ ಪ್ರಧಾನ ಮಾದರಿಗಿಂತ ಭಿನ್ನವಾದುದಾಗಿದೆ. ಈ ಕತೆಯಲ್ಲಿ ನಿರೂಪಕಿ ಹಿಂದೂ ಸಮಾಜದ ಕುರಿತ ಟೀಕೆಯನ್ನು, ಕ್ರೈಸ್ತ ಸಮಾಜದ ಪ್ರಸರಣವನ್ನು ಸ್ತ್ರೀ ಸುಧಾರಣೆಯ ಕಾಳಜಿಯೊಂದಿಗೆ ತಳುಕು ಹಾಕಿ ಗ್ರಹಿಸುವ ಪ್ರಯತ್ನ ಮಾಡಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿನ ನಿರೂಪಕಿಯ ರಾಜಕೀಯ ನಿಲುವು ಪ್ರಧಾನಧಾರೆಯ ಸೈದ್ಧಾಂತಿಕತೆಗಿಂತ ಭಿನ್ನವಾದುದು.

ಪ್ರಸ್ತುತ ಇಲ್ಲಿ ದಾಖಲಿಸಲಾಗಿರುವ ಯಾರ ಮಗು ಕತೆಯು ಮನೋವಿಜ್ಞಾನದ ಪರಿಕರವನ್ನು ಅತ್ಯಂತ ಸಂಕೀರ್ಣ ಸ್ಥರದಲ್ಲಿ ಬಳಸಿದ ಆರಂಭದ ಕನ್ನಡದ ಕತೆಗಳಲ್ಲಿ ಒಂದಾಗಿದೆ. ತ್ರಿವೇಣಿ ಈ ಸಂದರ್ಭದಲ್ಲಿ ಹೆಸರುಗೊಂಡ ಮಹತ್ವದ ಲೇಖಕಿಯಾದರೂ ಪ್ರಸ್ತುತ ಕತೆಯ ಸಂಕೀರ್ಣತೆಯನ್ನು ಅವು ಸರಿಗಟ್ಟಲಾರವು. ಸಾಯುವ ಹೊತ್ತಿನಲ್ಲಿನ ಹೆಂಡತಿಯ ‘ಈ ಮಗು ನಿನ್ನಂದಲ್ಲ’ ಎಂಬ ಬಡಬಡಿಕೆಯೊಂದಿಗೆ ಆರಂಭಗೊಳ್ಳುವ ನಾಯಕನ ಮಾನಸಿಕ ತಾಕಲಾ     ಟಗಳು ಕತೆಯ ಉದ್ದಕ್ಕೂ ಭಿನ್ನ ತಿರುವುಗಳನ್ನು ಕಾಣುತ್ತಲೇ ಹೋಗುತ್ತವೆ. ಕತೆಯ ಆರಂಭದಲ್ಲಿ ಪ್ರಾಸಾಂಗಿಕವೆನ್ನುವಂತೆ ಬಂದ ‘ಇವನೋದದ ಶಿವಾಜಿಯ ವಿಷಯವಾಗಿ ಬರೆದ ಐತಿಹಾಸಿಕ ಕಾದಂಬರಿಗಳೊಂದೂ ಉಳಿದಿಲ್ಲ’ ಎಂಬ ವಿವರಣೆ ಕತೆಗೆ ನೀಡುವ ತಿರುವು ಅನಿರೀಕ್ಷಿತವಾದುದಾಗಿದೆ.

ಮಗುವು ತನ್ನದಲ್ಲ. ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹೆಂಡತಿ ಮೋಸಗಾರ್ತಿ ಎಂಬ ನಂಬಿಕೆಯೊಂದಿಗೆ ಮಂಕಾದ, ನಿರಾಶನಾದ ನಾಯಕನ ಮನಸ್ಥಿತಿ ನಿಧಾನವಾಗಿ ಭಿನ್ನ ಸ್ಥಿತಿಯತ್ತ ತೆರಳುತ್ತದೆ. ದಿನಗಳು ಕಳೆದಂತೆ, ಘಟನೆ ಇತಿಹಾಸ ಸೇರಿದಂತೆ ತನಗಾದ ಅ‌ನ್ಯಾಯ ಅಥವಾ ಹೆಂಡತಿಯ ಕುಟಿಲತೆ ಎಂಬ ನೆಲೆಯಲ್ಲಿದ್ದ ವಿಚಾರ ಹೆಂಡತಿಯ ಹೃದಯವನ್ನು ಅಪಹರಿಸಿದ ಚೋರನಾಗಿರಬಹುದು ಎಂಬ ಕೌತುಕದ ಕಡೆಗೆ ಪರಿವರ್ತನೆಗೊಳ್ಳುತ್ತದೆ. ಈ ಮನಸ್ಥಿತಿಯನ್ನು ಲೇಖಕಿ ‘ಕುತೂಹಲದಲ್ಲಿ ದ್ವೇಷವಿಲ್ಲ, ಈರ್ಷೆ ಇಲ್ಲ. ಕಂಡುಹಿಡಿದ ಮೇಲೆ ಏನು ಮಾಡಬೇಕೆಂಬ ಊಹೆ ಇಲ್ಲ’ ಎಂದು ವಿವರಿಸುತ್ತಾರೆ. ಮುಂದೆ ಆ ಮಗುವಿನ ಜನನಕ್ಕೆ ಕಾರಣನಾದವನು ಜಹಗೀರದಾರನ ಮಗ ಎಂಬ ಸುಳಿವು ಸಿಗುತ್ತಿದ್ದಂತೆ ನಾಯಕನ ಮನಸ್ಥಿತಿ ಇನ್ನೊಂದು ಅನಿರೀಕ್ಷಿತ ತಿರುವು ಪಡೆಯುತ್ತದೆ. ಬಾಲ್ಯದಿಂದಲೂ ಅವನಿಗಿದ್ದ ಶಿವಾಜಿ ಕುರಿತ ಅಭಿಮಾನದೊಳಗೆ ಜಹಗೀರದಾರನ ಕುರಿತ ವಿಚಾರವು ಪರಕಾಶಪ್ರವೇಶ ಆತ ಶಿವಾಜಿಯ ಮಗನನ್ನು ತಾನು ಸಾಕುತ್ತಿರುವೆನೆಂಬ ಹೆಮ್ಮಯ ಭ್ರಮೆಗೆ ಒಳಗಾಗುತ್ತಾನೆ. ಈ ಮನಸ್ಥಿತಿಯಲ್ಲಿ ಆತನ ಕಣ್ಣಿಗೆ ಹೆಂಡತಿ ವ್ಯಭಿಚಾರಿಣಿಯಲ್ಲ. ಆ ಮಗು ಅನೈತಿಕ ಶಿಶುವು ಅಲ್ಲ. ಬದಲಿಗೆ ಆತನೇ ಗೋಕುಲದಲ್ಲಿ ಶ್ರೀಕೃಷ್ಣನ ಸಾಕುತಂದೆಯಾದ ನಂದ.

ಊಳಿಗಮಾನ್ಯ ಸಮಾಜದಲ್ಲಿ ಅರಸೊತ್ತಿಗೆಯ ಯಾಜಮಾನ್ಯ ಕುರಿತ ಒಪ್ಪಿತ ಮೌಲ್ಯಗಳು ಸಾಮಾನ್ಯ ಜನರಲ್ಲಿ ಉಂಟು ಮಾಡಬಲ್ಲ ದಾಸ್ಯದ ಪರಮಾವಧಿಯ ಮಾನಸಿಕ ಸ್ಥಿತಿಯನ್ನು ಇಲ್ಲಿ ಕಾಣಬಹುದಾಗಿದೆ. ಅದನ್ನಿಲ್ಲಿ ಲೇಖಕಿ ಶಿವಾಜಿ ಶಿವಾಜಿ ಕುರಿತ ಕಾದಂಬರಿಗಳು, ಕಾದಂಬರಿಗಳ ಕುರಿತ ಅರೆ ಶಿಕ್ಷಿತನ ಅಭಿಮಾನ, ಅಭಿಮಾನವು ಸೃಷ್ಟಿಸುವ ದಾಸ್ಯದ ನೆಲೆಯಲ್ಲಿ ಬೆಳೆಸುತ್ತಾರೆ. ಇದು ವಸಾಹತಶಾಹಿ ಭಾರತ ಸಮಾಜದ ಪ್ರಮುಖ ನೆಲೆಯೊಂದನ್ನು ಪ್ರಸ್ತುತಪಡಿಸುತ್ತದೆ ಸಹ. ಏಕೆಂದರೆ ರಾಜ ಪ್ರಭುತ್ವದ ವಿರುದ್ಧದ ವೈಚಾರಿಕತೆ ರೂಪುಗೊಳ್ಳುತ್ತಿದ್ದ ಹೊತ್ತಿನಲ್ಲಿ ಶಿವಾಜಿಯಂತಹ ರಾಜ ಸ್ವಾತಂತ್ರ್ಯ ಹೋರಾಟದ (ಹಿಂದೂತ್ವವಾದಿ) ‘ಮಾದರಿ ಪಾತ್ರ’ (role model) ವಾದುದು, ಐತಿಹಾಸಿಕ ಕಾದಂಬರಿಗಳು ರಾಷ್ಟ್ರಾಭಿಮಾನದ ಪ್ರಚೋದನೆಯ ಸಂದರ್ಭದಲ್ಲಿ ಮಹತ್ವದ ಪಾತ್ರವಹಿಸಿದ್ದು ಭಾರತ ರಾಷ್ಟ್ರೀಯ ಹೋರಾಟದ ಇತಿಹಾಸದ ಸಂಗತಿಗಳಾಗಿವೆ.

ಮೇಲಿನ ಮನೋವಿಭ್ರಮಣೆಯ ಸ್ಥಿತಿಯಲ್ಲಿ ಹದಿನೈದು ವರ್ಷ ಕಳೆದ ಬಳಿದ ಮಗನಲ್ಲಿ ತನ್ನದೇ ಪ್ರತಿರೂಪವನ್ನು ಕಾಣುತ್ತ ಹೋದಂತೆ ನಾಯಕ ಇನ್ನೊಂದು ವಿಭ್ರಮಣೆಗೆ ಒಳಗಾಗುತ್ತಾನೆ. ತನ್ನ ಹೆಂಡತಿಯು ಸಾಯುವ ಹೊತ್ತಿನಲ್ಲಿ ಭ್ರಮೆಗೊಳಗಾಗಿ ಈ ಮಗು ನಿನ್ನದಲ್ಲ ಎಂದಿದ್ದಳು ಎಂಬ ಸತ್ಯ ಅರಿವಾಗುತ್ತಲೇ ಆತನು ಮಗನಲ್ಲಿ ಕಾಣುತ್ತಿದ್ದ ಶಿವಾಜಿಯ ರಚನಾ ಪ್ರಪಂಚ ಕುಸಿಯುತ್ತದೆ. ತನ್ನ ಹೆಂಡತಿಯು ನಿಷ್ಕಲಂಕಳೆಂದು ಕೇಳಿ ಆನಂದವಾಗುವುದಕ್ಕೆ ಬದಲು ವ್ಯಾಕುಲವುಂಟಾಗುತ್ತದೆ. ಅವನು ಮನಸ್ಸಿನಲ್ಲಿ ಮಾಡಿಕೊಂಡಿದ್ದ ಮಂಡಿಗೆಯೆಲ್ಲ ಸುಟ್ಟು ಬೂದಿಯಾಗುತ್ತದೆ. ಆತ ತನ್ನ ಮಗನೇ ಎಂಬ ಸತ್ಯವನ್ನು ಸ್ವೀಕರಿಸುವುದು ಶಿವಾಜಿಯ ಮಗನೆಂಬ ಸುಳ್ಳಿಗಿಂತ ಕಠಿಣವಾದುದಾಗುತ್ತದೆ. ನಾಯಕ ಈಗ ಮಗನನ್ನು ದ್ವೇಷಿಸುವ ಇನ್ನೊಂದು ಮಾನಸಿಕ ಸ್ಥಿತಿಗೆ ಒಳಗಾಗುತ್ತಾನೆ. ಈ ಮನಸ್ಥಿತಿಯನ್ನು ಲೇಖಕಿ ‘ಬಸಪ್ಪನನ್ನಾವರಿಸಿದ್ದಂತಹ ಯಕ್ಷಿಣಿ ಇರಬೇಕು!’ ಎಂಬ ಉದ್ಗಾರದಲ್ಲಿ ಮುಗಿಸುತ್ತಾರೆ. ಆದರೆ ಈ ಕತೆ ಅತ್ಯಂತ ಧ್ವನಿಪೂರ್ಣವಾಗಿ ಮನುಷ್ಯನ ಮಾಸನಿಕ ದಾಸ್ಯವನ್ನು ಎತ್ತಿ ತೋರಿಸುತ್ತದೆ.

ಇಲ್ಲಿ ಲೇಖಕಿ ಹೆಣ್ಣಿನ ಶೀಲದಂತಹ ಪ್ರಚೋದಕ ವಿಚಾರವನ್ನು ಊಳಿಗಮಾನ್ಯ ನಂಬಿಕೆಗೆ ಮುಖಾಮುಖಿಯಾಗಿಸುತ್ತ ಊಳಿಗಮಾನ್ಯ ಮೌಲ್ಯಗಳು ಹೇಗೆ ಸಮಾಜವನ್ನು ಭ್ರಮಾವಸ್ಥೆಗೆ ತರುತ್ತವೆ ಎಂಬುದನ್ನು ಕಟ್ಟಿಕೊಡಲು ಯತ್ನಿಸುತ್ತಾರೆ. ಪುರುಷಪ್ರಧಾನ ಸಮಾಜದಲ್ಲಿ ಕೂಡ ಒಬ್ಬ ಪುರುಷನ ದೃಷ್ಟಿಕೋನದಲ್ಲಿ ಅತ್ಯಂತ ಘೋರ ಅಪಚಾರವಾಗಿ ಕಾಣಬಹುದಾಗಿದ್ದ ಹೆಣ್ಣಿನ ಶೀಲದ ಪ್ರಶ್ನೆಯು ಊಳಿಗಮಾನ್ಯ ವ್ಯವಸ್ಥೆಯ ಅಡಿಯಲ್ಲಿ ಸಹನೀಯವಾಗಿ ಬಿಡುತ್ತದೆ. ಅಷ್ಟರ ಮಟ್ಟಿಗೆ ಊಳಿಗಮಾನ್ಯ ಮೌಲ್ಯಗಳ ಪುರುಷನ ಮೇಲೂ ಯಾಜಮಾನ್ಯ ಹೊಂದಿವೆ.

ಈ ಸಂಗತಿಯನ್ನು ಇನ್ನೊಂದು ನೆಲೆಯಲ್ಲಿ ವಿಶ್ಲೇಷಿಸುವುದಾದರೆ ತನ್ನ ಹೆಂಡತಿಯ ಶೀಲದ ಪ್ರಶ್ನೆಯನ್ನು ಎದುರಿಸಲಾರದ ಗಂಡಸು ಅದನ್ನು ವೈಭವೀಕರಿಸಿ ಸ್ವೀಕರಿಸುವ ಮನಸ್ಥಿತಿಗೆ ತೆರಳುತ್ತಾನೆ. ಶಿವಾಜಿ ಮಹಾರಾಜನ ಮಗುವನ್ನು ಹೊಟ್ಟೆಯಲ್ಲಿ ಹೊತ್ತ ಹೆಂಡತಿ ತನಗೆ ಪ್ರಶ್ನಾತೀತಳು ಎನ್ನುವ ಮನಸ್ಥಿತಿಯಲ್ಲಿ ಆತ ತನ್ನೆದುರಿನ ಸತ್ಯವನ್ನು ಸ್ವೀಕರಿಸಲು ಯತ್ನಿಸುತ್ತಾನೆ. ಇದು ಒಂದರ್ಥದಲ್ಲಿ ಊಳಿಗಮಾನ್ಯ ಪುರುಷ ಪ್ರಧಾನ ಸಮಾಜದಲ್ಲಿ ಗಂಡು ತನ್ನ ಅಸಹಾಯಕತೆಯನ್ನು ಮರೆಮಾಚಿಕೊಳ್ಳುವ ತಂತ್ರಗಾರಿಕೆಯಾಗಿದೆ. ಹಾಗಾಗಿ ಈ ಕತೆಯು ಮಗು ಯಾರದು? ಎಂಬ ಪತ್ತೆದಾರಿಕೆ, ಹಾಗೂ ಅದು ನೈತಿಕತೆ? ಅನೈತಿಕವೇ? ಎಂಬ ವಾಗ್ವಾದ ಈ ಯಾವ ವಿಚಾರವನ್ನು ಕೇಂದ್ರವಾಗಿಸಿಕೊಳ್ಳದೆ ಅದರ ಆಳದಲ್ಲಿರುವ ಇಂತಹ ಪ್ರಶ್ನೆಗಳನ್ನು ಸಮಾಜದಲ್ಲಿ ಹರಿದಾಡಲು ಬಿಡುವ ವ್ಯವಸ್ಥೆಯನ್ನು ಸೂಚ್ಯವಾಗಿ ಕಟ್ಟಿಕೊಡಲು ಯತ್ನಿಸುತ್ತದೆ. ಲೇಖಕಿ ಸಮಾಜದ ಮೌಲ್ಯಗಳು ರೂಪಿತಗೊಳ್ಳುವ ಹಾಗೂ ಅವುಗಳನ್ನು ಸ್ವೀಕರಿಸುವಂತಹ, ನಿರಾಕರಿಸುವಂತಹ ಮಾನಸಿಕ ಸ್ಥಿತಿಗಳನ್ನು ನಿರ್ಮಿಸುವ ಸಾಮಾಜಿಕ ಸಂಗತಿಗಳನ್ನು ಕತೆಯಾಗಿಸಲು ಯತ್ನಿಸುತ್ತಾರೆ. ಮಹಿಳಾ ವಿಷಯವನ್ನು ತೀರ ಮೇಲುಸ್ಥರದಲ್ಲಿ ಸಮಸ್ಯೀಕರಿಸಿ, ವೈಭವೀಕರಿಸಿ ಚಿತ್ರಿಸುತ್ತಿದ್ದ ಅಂದಿನ ಸಾಹಿತ್ಯ ಸನ್ನಿವೇಶದಲ್ಲಿ ಪಾತಿವ್ರತ್ಯ, ಗಂಡು ಹೆಣ್ಣಿನ ಸಂಬಂಧದಂತಹ ಸಾಮಾಜಿಕ ವಸ್ತುವೊಂದನ್ನು ವ್ಯವಸ್ಥೆಯ ಮೂಲಭೂತ ನೆಲೆಯಿಂದ ಗ್ರಹಿಸಲೆತ್ನಿಸುವ ಮೂಲಕ ಈ ಕತೆಯು ಸಾಹಿತ್ಯ ರಚನೆಯೊಂದು ಸಾಮಾಜಿಕ ವಿಶ್ಲೇಷಣೆಯ ಅತ್ಯುತ್ತಮ ಮಾದರಿಯಾಗಬಹುದೆಂಬದನ್ನು ತೋರಿಸುತ್ತದೆ.

ಅಧ್ಯಯನದ ವೈಧಾನಿಕತೆ

ಈವರೆಗೆ ನಡೆದಿರುವ ಪಾಯ ಸಂಶೋಧನೆಯು ಪ್ರಧಾನವಾಗಿ ಲೇಖಕಿ ಕೇಂದ್ರಿತವಾದುದಾಗಿದ್ದು, ಅದು ಲೇಖಕಿಯ ವೈಯಕ್ತಿಕ ಬದುಕು-ಬರಹದ ವೈಧಾನಿಕತೆಯ ಮೂಲಕ ರೂಪಿತವಾದ ಮಹಿಳಾ ಸಾಹಿತ್ಯ ಚರಿತ್ರೆಯನ್ನು ಆಗುಮಾಡಿಸುವ ಆಶಯದೊಂದಿಗೆ ಹೆಣೆದುಕೊಂಡದ್ದಾಗಿದೆ.[1] ಪ್ರಧಾನಧಾರೆಯ ಪುರುಷಪ್ರಧಾನ ಲಿಂಗರಾಜಕಾರಣ ಧೋರಣೆಯನ್ನು ಪ್ರಶ್ನಿಸುತ್ತಲೇ ತನ್ನನ್ನು ಪ್ರಧಾನಧಾರೆಗೆ ಸರಿಸಮಾನವಾಗಿಸಿಕೊಳ್ಳುವುದು, ಅಲ್ಲಿನ ತನ್ನ ಸ್ಥಾನವನ್ನು ಕಾಯ್ದುಕೊಳ್ಳುವುದು ಅದರ ಮುಖ್ಯ ಕಾಳಜಿಯಾಗಿದೆ. ಅದಕ್ಕಾಗಿಯೇ ಈ ವೈಧಾನಿಕತೆಯು ತನ್ನ ಪರಂಪರೆಯ ಶೋಧವನ್ನು ಪೂರ್ಣಪ್ರಮಾಣದ ಯಶಸ್ವೀ ಲೇಖಕಿಯೊಬ್ಬಳ ಮುಂದುವರಿದು ಪ್ರಾತಿನಿಧಿಕ ಲೇಖಕಿಯಾಗುವ, ಶ್ರೇಷ್ಠ ಲೇಖಕಿಯಾಗುವ ಮೂಲಕ ಪ್ರಧಾನಧಾರೆಯ ಸಾಹಿತ್ಯ ಪರಂಪರೆಯೊಳಗೆ ತನ್ನ ಸ್ಥಾನ ಕಾಯ್ದುಕೊಳ್ಳುವುದು ಸಾಧ್ಯವಾಗುತ್ತದೆ ಹಾಗೂ ಅಲ್ಲಿ ಮಹಿಳಾ ಸಾಹಿತ್ಯವನ್ನು ಪ್ರತಿನಿಧಿಸುವುದು ಈಡೇರುತ್ತದೆ ಎಂದು ಭಾವಿಸುತ್ತದೆ. ತನ್ನ ಪರಂಪರೆಯನ್ನು ಕಟ್ಟಿಕೊಳ್ಳುವುದು, ಅದರ ಶ್ರೇಷ್ಠತೆಯನ್ನು ವ್ಯಾಖ್ಯಾನಿಸುವುದು, ಸ್ತ್ರೀಯನ್ನು ಪರಂಪರಾಹೀನಳಾಗಿ ಉಳಿಸುವುದು ಹಾಗೂ ಆ ಮೂಲಕ ಅವಳ ಕೆಳದರ್ಜೆಯನ್ನು ಸಾಧಿಸಿ ತೋರಿಸುವುದು ಪುರುಷಪ್ರಧಾನ ರಾಜಕಾರಣ. ಈ ರಾಜಕಾರಣವನ್ನು ತನ್ನ ಪರಂಪರೆಯೊಂದರ ರಚನೆಯ ಮೂಲಕ ಭಗ್ನಗೊಳಿಸಲು ಯತ್ನಿಸುವುದು ಮಹಿಳಾ ಸಾಹಿತ್ಯ ಪರಂಪರೆಯ ಶೋಧದ ಪ್ರತಿರಾಜಕಾರಣದ ಉದ್ಧೇಶ. ಅದಕ್ಕಾಗಿ ಅದು ಪ್ರಧಾನಧಾರೆಯ ವೈಧಾನಿಕತೆಯನ್ನು ಬಳಸುತ್ತಲೇ ಅದನ್ನು ಬಗ್ಗಿಸುವ ತಂತ್ರಗಾರಿಕೆಗೆ ಹೊಂದಿಕೊಳ್ಳುತ್ತದೆ.

ಸ್ತ್ರೀವಾದಿ ಸಾಹಿತ್ಯ ವಿಮರ್ಶೆಯ ತಾಯಂದಿರ ಶೋಧದ[2] ಚಟುವಟಿಕೆಯು ಸ್ವೀಕರಿಸುವ ಈ ವೈಧಾನಿಕತೆಯು ಒಂದು ಹಂತದಲ್ಲಿ ಪ್ರಧಾನಧಾರೆಗೆ ತನ್ನ ಭಿನ್ನಮತವನ್ನು ಪ್ರದರ್ಶಿಸುತ್ತಲೇ ಇನ್ನೊಂದು ಹಂತದಲ್ಲಿ ಅದರೊಂದಿಗೆ ಸಹಮತವನ್ನೂ, ಸಾಹಚರ್ಯವನ್ನು ಏರ್ಪಡಿಸಿಕೊಳ್ಳುವುದಾಗುತ್ತದೆ. ಈಗಾಗಲೇ ಪ್ರಸ್ತಾಪಿಸಿರುವಂತೆ ಸಾಹಿತ್ಯ ಪರಂಪರೆಯೊಂದರ ನಿರ್ಮಾಣದ ತಾತ್ವಿಕತೆಯೇ ಪ್ರಧಾನಧಾರೆಯ ವೈಧಾನಿಕತೆ ಯೊಂದಿಗೆ ತಳುಕು ಹಾಕಿಕೊಂಡಿದ್ದಾಗಿದೆ. ಅಂತೆಯೇ ಮಹಿಳಾ ಪರಂಪರೆಯ ನಿರ್ಮಾಣದ ಚಟುವಟಿಕೆಯು ಒಟ್ಟಾರೆಯಾಗಿಯೇ ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ಸಶಕ್ತಗೊಳಿಸುವುದರಲ್ಲಿ ಆಸಕ್ತವಾದುದು. ಕನ್ನಡದಲ್ಲಿ ಮಾತ್ರವಲ್ಲದೆ ಜಾಗತಿಕ ನೆಲೆಯಲ್ಲಿ ಕಾಣಸಿಗುವ ಹಲವು ಸ್ತ್ರೀವಾದಿ ಚಿಂತಕಿಯರ ಈ ಮಾದರಿಯ ಸಶಕ್ತೀಕರಣದ ಆಶಯವನ್ನು ಡಾಲೆ ಸ್ಪೆಂಡರ್ Dale Spender ಈ ರೀತಿ ಕ್ರೊಢೀಕರಿಸಿಕೊಡುತ್ತಾಳೆ ಸಹ:

ಅನ್ನ ಭಾಷಾ ಸಾಹಿತ್ಯ ಪರಂಪರೆಯ ಸಂದರ್ಭದಲ್ಲಿಯು ಕಾಣಸಿಗುವ ಸಾಹಿತ್ಯ ಪರಂಪರೆಯೊಂದರ ಉಪಯುಕ್ತಕತೆಯ ಪ್ರಶ್ನೆ ಅದಕ್ಕೆ ನಾವು ಕೊಡುವ ಪಾತ್ರ ಮತ್ತು ಮಹತ್ವವನ್ನು ಅವಲಂಬಿಸಿರುತ್ತದೆ. ಒಂದು ದಿಕ್ಕಿನಿಂದ ನೋಡುವುದಾದರೆ, ಮಹಿಳೆಯರ ಸಾಹಿತ್ಯಿಕ ಕೊಡುಗೆಯ ಶೋಧ ಅಥವಾ ಪುರುಷರು ನಡೆಸಿದ ಸಾಹಿತ್ಯಿಕ ಲಿಂಗರಾಜಕಾರಣವನ್ನು ಬಯಲುಗಳೆಯುವ ಪ್ರತ್ಯಕ್ಷಶ್ರಮ ಎರಡು ತಕ್ಷಣದ ಅಥವಾ ಕಣ್ಣಿಗೆ ಕಾಣುವ ಯಾವ ವ್ಯತ್ಯಾಸವನ್ನು ಉಂಟುಮಾಡದು. ಇದು ಮಹಿಳೆಯರ ಬಡತನದ ಸ್ಥಿತಿ ಸುಧಾರಣೆಯ ಮೇಲೆ ಯಾವ ನೇರ ಪರಿಣಾಮವನ್ನು ಬೀರದು ಅಥವಾ ಪ್ರಪಂಚ ಮಹಾಯುದ್ಧವನ್ನು ನಿಲ್ಲಿಸುವ ಯಾವ ನಾಟಕೀಯ ಬೆಳವಣಿಗೆಯನ್ನು ಇದು ತರಲಾರದು ನಿಜ. ಆದರೆ ಇನ್ನೊಂದು ದಿಕ್ಕಿನಿಂದ ನೋಡಿದರೆ ಮಹಿಳೆಯ ಕೊಡುಗೆ ಹಾಗೂ ಅರ್ಥಗಾರಿಕೆಯ ಪುನರ್‌ಸ್ಥಾಪನೆಯು ಸಾಂಸ್ಕೃತಿಕ ಪರಿಧಿಯ ಒಳಗೆ ಅಗಾಧವಾದ ವ್ಯತ್ಯಾಸವನ್ನು ತರಬಲ್ಲದಾಗಿದೆ…. ವಿಶಾಲಾರ್ಥದಲ್ಲಿ ಪರಿಭಾವಿಸುವುದಾದರೆ, ಮಹಿಳೆಯರ ಕೊಡುಗೆಯ ಕುರಿತ ತಿಳುವಳಿಕೆಯು ಒಟ್ಟು ಸಮಾಜದ ಅಭ್ಯಾಸಗಳು ಹಾಗೂ ತೀರ್ಮಾನಗಳ ಮೇಲೆ ಗಮನಾರ್ಹವಾದ ಬದಲಾವಣೆಯನ್ನು ತರಬಲ್ಲದಾಗಿದೆ.[3]

ಸ್ತ್ರೀವಾದದ ಸಾಹಿತ್ಯ ಪರಂಪರೆಯ ನಿರ್ಮಾಣದ ತಾತ್ವಿಕತೆಯೇ ಎಲ್ಲವನ್ನೂ ಒಳಗೊಂಡತೆಯೇ ಒಟ್ಟು ಸಾಮಾಜಿಕ ಸಂದರ್ಭದಲ್ಲಿಯೇ ಫಲಿತಗಳನ್ನು ನಿರೀಕ್ಷಿಸುವುದಾಗಿರುವುದರಿಂದ ಸಹಜವಾಗಿಯೇ ಅದು ಪ್ರಧಾನಧಾರೆಯೊಂದಿಗೆ ಸಾಹಚರ್ಯವನ್ನು ಅಪೇಕ್ಷಿಸುವುದೇ ಆಗುತ್ತದೆ. ಸ್ವಾತಂತ್ರ್ಯ ಪೂರ್ವದ ಕನ್ನಡದ ಸಂದರ್ಭವಾದರೂ ಇದಕ್ಕೆ ಸಂವಾದಿಯಾದ ಆಶಯವನ್ನೇ ತನ್ನ ಆದರ್ಶವಾಗಿ ಸ್ವೀಕರಿಸಿದ್ದಾಗಿದೆ. ಹಾಗೂ ವಿಶಾಲಾರ್ಥದಲ್ಲಿ ಕನ್ನಡ ರಾಜಕಾರಣವನ್ನು ಬೆಂಬಲಿಸಿದ್ದಾಗಿದೆ.

ಸಮಕಾಲೀನ ಸ್ತ್ರೀವಾದಿ ವಿಮರ್ಶೆಯು ಇಷ್ಟು ನೇರವಾಗಿ ಮಹಿಳಾ ಸಾಹಿತ್ಯವನ್ನು ಕನ್ನಡ ಸಾಹಿತ್ಯದ ಉಡಿಯೊಳಗೆ ಹಾಕದಿದ್ದರೂ ಪ್ರಧಾನಧಾರೆಯ ವಿಮರ್ಶಾ ರಾಜಕಾರಣವನ್ನು ಪ್ರಶ್ನಿಸುತ್ತಲೇ, ಕನ್ನಡ ಸಾಹಿತ್ಯ ಪರಂಪರೆಯ ಸಹಯೋಗವನ್ನು ಸ್ವೀಕರಿಸುತ್ತದೆ. ಪರಂಪರೆಯಲ್ಲಿ ಮರೆಯಾದ, ಹೂಳಲ್ಪಟ್ಟ ಲೇಖಕಿಯರ ಶೋಧ ಹಾಗೂ ಸಾಧನೆಯ ಗುರುತಿಸುವಿಕೆಯ ಪರಿಶ್ರಮವು ಅಂತಿಮವಾಗಿ ಶ್ರೇಷ್ಠ, ಪ್ರಾತಿನಿಧಿಕ ಲೇಖಕಿಯರನ್ನು, ಹೆಕ್ಕಿ ಕನ್ನಡ ಸಾಹಿತ್ಯ ಪರಂಪರೆಗೆ ಜೋಡಿಸುವ ಮೂಲಕ ಕನ್ನಡ ಸಾಹಿತ್ಯದ ಶ್ರೇಷ್ಠತೆಯನ್ನು, ಅನನ್ಯತೆಯನ್ನು ಸ್ಥಾಪಿಸುವುದರಲ್ಲಿಗೇ ಹೋಗಿ ಸೇರುತ್ತದೆ. ಅಂದರೆ ಕನ್ನಡ ಸ್ತ್ರೀವಾದಿ ಸಾಹಿತ್ಯ ವಿಮರ್ಶೆಯ ಸದ್ಯದ ಬಹುಮುಖ್ಯ ತಕರಾರಿರುವುದು ಮಹಿಳೆಯರ ಸಾಹಿತ್ಯದ ಬಗೆಗಿನ ಪ್ರಧಾನಧಾರೆಯ ಧೋರಣೆ ಕುರಿತಂತೆಯೇ. ಉಳಿದಂತೆ ಒಟ್ಟಾರೆಯಾಗಿಯೇ ‘ಸಾಹಿತ್ಯ’, ‘ಸಾಹಿತ್ಯ ಪರಂಪರೆ’ ಎಂಬುದರ ಬಗ್ಗೆಯೇ ಇಂದು ವ್ಯಕ್ತವಾಗುತ್ತಿರುವ ಭಿನ್ನ ಅಭಿಪ್ರಾಯಗಳು, ಚರ್ಚೆಗಳು ಸ್ತ್ರೀವಾದಿ ಸಂದರ್ಭಕ್ಕೆ ಹೊರತಾಗಿಯೇ ಉಳಿದಿವೆ. ಉದಾಹರಣೆಗೆ, ಶ್ರೇಷ್ಠ ಸಾಹಿತ್ಯ ಎಂಬ ಪರಿಕಲ್ಪನೆಯ ಸಂದರ್ಭದಲ್ಲಿ ಲೇಖಕಿಯರನ್ನು ಪರಿಗಣಿಸಲಾಗಿಲ್ಲ ಎನ್ನುವ ನೇರ ಆರೋಪ ಬೇರೆ. ಹಾಗೆಯೇ ‘ಶ್ರೇಷ್ಠ ಸಾಹಿತ್ಯ’ ಎಂಬ ಪರಿಕಲ್ಪನೆ ಯಾಕೆ ಸಾಹಿತ್ಯದಲ್ಲಿ ಹುಟ್ಟಿಕೊಳ್ಳುತ್ತದೆ, ಅದು ಕಾಲದಿಂದ ಕಾಲಕ್ಕೆ ಹೇಗೆ ಬದಲಾಗುತ್ತ ಹೋಗುತ್ತದೆ, ಈ ಬದಲಾವಣೆಗೆ ಕಾರಣವಾದ ಸಂಗತಿಗಳು ಯಾವುವು? ಸಾಹಿತ್ಯ ಅಧ್ಯಯನದಲ್ಲಿ ಈ ಬದಲಾವಣೆಗೆ ಕಾರಣವಾದ ಸಂಗತಿಗಳು ಯಾವುವು? ಸಾಹಿತ್ಯ ಅಧ್ಯಯನದಲ್ಲಿ ಈ ಪರಿಕಲ್ಪನೆ ಅನಿವಾರ್ಯವೇ ಎಂಬ ಪ್ರಶ್ನೆಗಳ ಹಿನ್ನೆಲೆಯಲ್ಲಿ ಶ್ರೇಷ್ಠ ಸಾಹಿತ್ಯ ಎಂಬ ಪರಿಕಲ್ಪನೆಯಲ್ಲಿ ಲೇಖಕಿಯರು ಹೇಗೆ ಮತ್ತು ಯಾಕೆ ಹೊರತಾದರು ಎಂಬ ಪ್ರಶ್ನೆಯನ್ನು ಕೈಗೆತ್ತಿಕೊಳ್ಳುವುದು ಬೇರೆ. ಹಾಗೆಯೇ ಪುರುಷ ಪ್ರಧಾನತೆ ತನ್ನ ಪರಂಪರೆಯನ್ನು ಜಾಣತನದಿಂದ ಕಾಯ್ದುಕೊಂಡಿದೆ ಹಾಗೂ ಮಹಿಳೆಯರನ್ನು ಪರಂಪರಾಹೀನ ಸ್ಥಿತಿಯಲ್ಲಿ ಉಳಿಸಲು ಯತ್ನಿಸಿದೆ ಎಂಬ ಹಿನ್ನೆಲೆಯಲ್ಲಿ ಮಹಿಳಾ ಪರಂಪರೆಯ ರಚನೆಗೆ ತೊಡಗುವುದು ಅಥವಾ ಪರಂಪರೆ ಎಂಬ ಪ್ರಧಾನ ಧಾರೆಯ ಪರಿಕಲ್ಪನೆಯನ್ನೇ ಪ್ರಶ್ನಿಸುವುದು ಎರಡೂ ಭಿನ್ನ ಸೈದ್ದಾಂತಿಕ ನೆಲೆಗಳಾಗಿದ್ದು, ಸದ್ಯದ ಕನ್ನಡದ ಸಂದರ್ಭವು ಇವುಗಳಲ್ಲಿ ಮೊದಲಿನ ಸೈದ್ದಾಂತಿಕ ನೆಲೆಯಲ್ಲಿ ಕಾರ್ಯಪ್ರವೃತ್ತವಾಗಿದೆ.

ಪ್ರಸ್ತುತ ಶೋಧದ ಕೆಲಸವು ಇದುವರೆಗಿನ ಬದುಕು-ಬರಹದ ವೈಧಾನಿಕತೆಯನ್ನು ಅಳವಡಿಸಿಕೊಂಡದ್ದಲ್ಲ. ಪೂರ್ಣ ಪ್ರಮಾಣದ, ಪ್ರಾತಿನಿಧಿಕ, ಶ್ರೇಷ್ಠ ಲೇಖಕಿಯರ ಅನಾವರಣ, ಅದಕ್ಕೆ ಪೂರಕವಾದ ಬದುಕು-ಬರಹದ ವೈಧಾನಿಕತೆಯ ಬಳಕೆ ಇಲ್ಲಿಲ್ಲ. ಮಹಿಳೆಯರ ಸಾಹತ್ಯಾಭಿವ್ಯಕ್ತಿ ಪ್ರಧಾನ ಸಾಹಿತ್ಯ ಪರಂಪರೆಯನ್ನು ಸರಿಗಟ್ಟಬಲ್ಲದೋ, ಮಹಿಳೆಯರು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಯಾವ ಸ್ಥಾನ ಪಡೆಯಬಲ್ಲರು ಇತ್ಯಾದಿ ತೌಲನಿಕ ಪ್ರಶ್ನೆಗಳನ್ನು ಈ ಅಧ್ಯಯನ ಪರಿಗಣಿಸಿದ್ದಲ್ಲ. ಬದಲಿಗೆ ಲೇಖಕಿಯೊಬ್ಬಳ ವೈಯಕ್ತಿಕ ಬದುಕಿನ ಸನ್ನಿವೇಶಕ್ಕಿಂತ ಒಟ್ಟಾರೆಯಾಗಿಯೇ ಮಹಿಳೆಯರ ಸಾಹಿತ್ಯಾಭಿವ್ಯಕ್ತಿಯು ಸುತ್ತವರಿಯಲ್ಪಟ್ಟಿರುವ ಸಾಮಾಜಿಕ, ಸಾಹಿತ್ಯಿಕ ಸನ್ನಿವೇಶವನ್ನು ಕಟ್ಟಿಕೊಳ್ಳುವ ಆಶಯದೊಂದಿಗೆ ಇದು ರೂಪುಗೊಂಡಿದೆ ಸ್ವಾತಂತ್ರ್ಯ ಪೂರ್ವದ ಸನ್ನಿವೇಶಕ್ಕೆ ಅನುಗುಣವಾಗಿ ಪ್ರತಿಫಲನಗೊಂಡ ಮಹಿಳೆಯರ ಸಾಹಿತ್ಯಾಭಿವ್ಯಕ್ತಿಯ ಸ್ವರೂಪ ಮತ್ತು ವೈಚಾರಿಕ ಆಕೃತಿಯನ್ನು ಅರಿಯುವುದಾಗಿದೆ.

ಸ್ತ್ರೀವಾದಿ ಸಾಹಿತ್ಯ ವಿಮರ್ಶೆಯಾದರೂ ತನ್ನ ಸಾಹಿತ್ಯಿಕ ಪರಕಲ್ಪನೆಗಳನ್ನು ಈಗಾಗಲೇ ಸ್ಥಾಪಿತಗೊಂಡಿರುವ ಪುರುಷ ಕೇಂದ್ರಿತ ಸಾಹಿತ್ಯ ಪರಿಕಲ್ಪನೆಗಳನ್ನು ಪ್ರಶ್ನಿಸುವುದರೊಂದಿಗೆ ಆರಂಭಿಸುತ್ತದೆ. ಒಂದು ನಿರ್ದಿಷ್ಟ ಸಾಮಾಜಿಕ ಸನ್ನಿವೇಶದಲ್ಲಿ ಪುರುಷನ ಬರವಣಿಗೆಗೆ ದೊರೆಯುವ ಅವಕಾಶ, ಮಾನಸಮ್ಮಾನಗಳು ಮಹಿಳೆಯರದಕ್ಕಿಂತ ಹೇಗೆ ಮತ್ತು ಏಕೆ ಭಿನ್ನವಾದುದಾಗಿರುತ್ತದೆ ಎಂಬ ಹುಡುಕಾಟವೇ ಆಗಿರುತ್ತದೆ. ಅಂತೆಯೇ ಪ್ರಸ್ತುತ ಅಧ್ಯಯನದ ಶೋಧ ಮತ್ತು ವಿಶ್ಲೇಷಣೆಗಳೂ ಈ ನೆಲೆಯದೇ ಆಗಿದೆ.

ಇದುವರೆಗೆ ಪ್ರಸ್ತುತಪಡಿಸಲಾದ ಮಹಿಳಾ ಸಾಹಿತ್ಯದ ಕುರಿತ ಕೆಲವು ಮಾಹಿತಿಗಳು ಹಾಗೂ ಮಹಿಳಾ ಸಾಹಿತ್ಯದ ಮಾದರಿಯ ಕನ್ನಡದಲ್ಲಿನ ಮಹಿಳಾ ಸಾಹಿತ್ಯದ ಸ್ವರೂಪ ಹಾಗೂ ಪ್ರಧಾನಧಾರೆಯೊಂದಿಗಿನ ಅದರ ಸಂಬಂಧವನ್ನು ವಿವರಿಸಿಕೊಳ್ಳುವಲ್ಲಿ ಸ್ವಲ್ಪಮಟ್ಟಿಗಿನ ನೆರವನ್ನು ನೀಡುವುದಾಗಿದೆ. ಇಷ್ಟಾಗಿಯೂ ಕ್ರೈಸ್ತ ಸ್ತ್ರೀಯರ ಸಾಹಿತ್ಯ ಚಟುವಟಿಕೆಯ ಸಾಧ್ಯತೆಗಳು, ಕನ್ನಡ ಮಹಿಳೆಯರ ಇಂಗ್ಲೀಷ್ ಬರವಣಿಗೆಯ ವಿಚಾರ, ಮಹಿಳೆಯರ ಸಾಹಿತ್ಯೇತರ ಬರಹದ ಸ್ವರೂಪ ಇತ್ಯಾದಿ ಕ್ಷೇತ್ರಗಳು ಅಧ್ಯಯನಕ್ಕೆ ಒಳಪಡಿಸಬಹುದಾದ ವಿಷಯಗಳಾಗಿವೆ.

ಸ್ತ್ರೀವಾದಿ ಚಿಂತನೆ ಎಂಬುದೇ ಮೂಲಭೂತವಾಗಿ ಪ್ರತಿಕ್ರಿಯಾತ್ಮಕವಾದುದು. ಈಗಾಗಲೆ ಅಸ್ತಿತ್ವದಲ್ಲಿರುವ ಪುರುಷ ಪ್ರಧಾನ ಸಮಾಜ ಹಾಗೂ ಅದರ ಚಿಂತನಾ ಕ್ರಮದ ಲಿಂಗತ್ವ ಕುರಿತ ಪೂರ್ವಾಗ್ರಹಗಳನ್ನು ಪ್ರಶ್ನಿಸುತ್ತ ಈ ಚಿಂತನೆ ತನ್ನನ್ನು ತಾನು ರೂಪಿಸಿಕೊಂಡಿದೆ. ಹಾಗಾಗಿಯೇ ಸ್ತ್ರೀವಾದದ ಎಲ್ಲ ಪರಿಕಲ್ಪನೆಗಳು ತೌಲನಿಕ ಪರಿಕಲ್ಪನೆಗಳಾಗಿವೆ. ಅಂದರೆ ಪುರುಷ ಪ್ರಧಾನ ಸಮಾಜದಲ್ಲಿ ಪುರುಷನು ಹೊಂದಿರುವ ಸವಲತ್ತುಗಳು, ಹಕ್ಕುಗಳು, ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ರೂಪಿತವಾದವುಗಳೇ. ಆದ್ದರಿಂದಲೇ ಈ ಚಿಂತನೆಯಲ್ಲಿ ‘ಸ್ವಾತಂತ್ರ್ಯ’ದ ಪರಿಕಲ್ಪನೆಗಿಂತ ಸಮಾನತೆಯ ಪರಿಕಲ್ಪನೆಗೆ ಹೆಚ್ಚು ಒತ್ತು.

[1] ಕರ್ನಾಟಕ ಲೇಖಕಿಯರ ಸಂಘವು ಈ ರೀತಿಯ ಸಂಶೋಧನೆಯ ಬೆನ್ನೆಲುಬಾಗಿ ನಿಂತಿದ್ದು, ಅದರ ಅಧ್ಯಕ್ಷರಾಗಿದ್ದ ಹೇಮಲತಾ ಮಹಿಷಿಯವರ ಸಂದರ್ಶನದ ಮಾತುಗಳು ಇದಕ್ಕೆ ಪೂರಕವಾಗಿದೆ. ಎಂ. ಉಷಾ, ಮಾತುಕತೆ, ಎಚ್. ಎಸ್. ಶ್ರೀಮತಿ (ಸಂ) ಮಹಿಳಾ ಅಧ್ಯಯನ ಸಂ. ೧ ಸಂಚಿಕೆ ೨, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯

[2] ಇಂಗ್ಲೀಷ್‌ನಲ್ಲಿ ಮಹಿಳಾ ಸಾಹಿತ್ಯ ಪರಂಪರೆಯ ಚರ್ಚೆಯ ಸಂದರ್ಭದಲ್ಲಿ ಬಳಸಲಾದ Genealogy ಎಂಬ ಪರಿಕಲ್ಪನೆಯನ್ನು ತೇಜಸ್ವಿನಿ ಮತ್ತು ಸೀಮಿಂತಿನಿ ನಿರಂಜನರು ತಾಯಂದಿರ ಶೋಧದ ಚಟುವಟಿಕೆಯಾಗಿ ಕನ್ನಡದಲ್ಲಿ ಪ್ರಸ್ತುತ ಪಡಿಸುತ್ತಾರೆ. ತೇಜಸ್ವೀನಿ ನಿರಂಜನ, ಸೀಮಾಂತಿನಿ ನಿರಂಜನ ಸ್ತ್ರೀವಾದಿ ಸಾಹಿತ್ಯ ವಿಮರ್ಶೆ, ಕ್ರೈಸ್ಟ್ ಕಾಲೇಜು, ಕನ್ನಡ ಸಂಘ, ಬೆಂಗಳೂರು, ೧೯೯೪

[3] Dala Spender, Women and Literary History, Catherine Belsay and Jane Moore (Ed), The Feminist Reader, The Macmillan Press Ltd, London, 1989, Pp.