ಮಹಿಳಾ ಸಾಹಿತ್ಯ ಮತ್ತು ಪಾಶ್ಚಾತ್ಯ ಪ್ರೇರಣೆಯ ಸಂಗತಿ

ತನ್ನ ಪಾಡಿಗೆ ‘ವಾಟ್?- ವಾಟ್‌ಸಾರ್? ಎನ್ನಾ?- ಎನ್ನಾಂಗೋ? ಏಮಿ?- ಏಮಂಡಿ? ಮುಂತಾದ ಭಾಷೆಗಳ ಬೆನ್ನು ಹತ್ತಿದ ಪುರುಷನು ಮನೆಗೆ ಬಂದರೆ, ‘ಯಾರಿದ್ದೀರಿ ಮನೆಯಲ್ಲಿ‘ ಎನ್ನದ ಹೊರತು ಮೋಕ್ಷವಿಲ್ಲದಾದ ಮೇಲೆ ನುಡಿ ತಾಯಿಗೆ ಅಳಿಲು ಸೇವೆ ಆಯಿತಾದರೂ ಯಾರಿಂದ? (ಶ್ರೀಮತಿ ತೊಗರಿ ಸರ್ವಮಂಗಳಾಂಬ ವೀರಮಲ್ಲಪ್ಪ, ಮಹಿಳಾ ಗೋಷ್ಠಿ ಅಧ್ಯಕ್ಷ ಭಾಷಣ, ೨೯ನೇ ಸಾಹಿತ್ಯ ಸಮ್ಮೇಳನ, ಮದರಾಸು, ೧೯೪೫)

ಆಧುನಿಕ ಕನ್ನಡ ಸಾಹಿತ್ಯದ ಹಿಂದಿನ ಬಹುದೊಡ್ಡ ಪ್ರೇರಣೆಗಳಲ್ಲಿ ಒಂದಾಗಿ ಪ್ರಧಾನಧಾರೆಯು ಪಾಶ್ಚಾತ್ಯ ಸಾಹಿತ್ಯದ ಪ್ರಭಾವವನ್ನು ಗುರುತಿಸಿದೆ. ಆಧುನಿಕ ವಿದ್ಯಾಭ್ಯಾಸ ಹಾಗೂ ಸಮಾಜ ಸುಧಾರಣಾ ಚಳುವಳಿಗಳು ಜೊತೆಗೆ ಆರಂಭಗೊಂಡ ಪಾಸ್ಚಾತ್ಯೀಕರಣ ಪ್ರಕ್ರಿಯೆಯು ಭಾರತದ ನಗರ ಪ್ರದೇಶಗಳ ಮೇಲೆ ಅಪಾರ ಪರಿಣಾಮ ಬೀರತೊಡಗಿತು. ೧೮೫೦ರ ಹೊತ್ತಿಗೆ ಇಂಗ್ಲೀಷ್ ಕಲಿತ, ನಗರಗಳಲ್ಲಿ ನೆಲೆನಿಂತ ಒಂದು ಸಣ್ಣ ಗುಂಪು ಸಾಹಿತ್ಯಿಕ ಚಟುವಟಿಕೆಯನ್ನು ತನ್ನ ಕೈಗೆತ್ತಿಕೊಂಡಿತು. ತಮ್ಮ ಬದಲಾದ ಸಾಹಿತ್ಯಿಕ ನಿಲುವುಗಳನ್ನು ಅಂದಿನ ಪತ್ರಿಕೆಗಳಲ್ಲಿ ಚರ್ಚಿಸತೊಡಗಿದರು. ಅದಕ್ಕನುಗುಣವಾಗಿ ಹೊಸಬಗೆಯ ಸಾಹಿತ್ಯವನ್ನು ಗದ್ಯ ಹಾಗೂ ಪದ್ಯಗಳೆರಡರಲ್ಲೂ, ಸೃಷ್ಟಿಸತೊಡಗಿದರು.[1] ಹೀಗೆ ಆಧುನಿಕ ಕನ್ನಡ ಸಾಹಿತ್ಯವು ಪಾಶ್ಚಾತ್ಯ ಚಿಂತನೆ ಹಾಗೂ ಸಾಹಿತ್ಯ ರೂಪಗಳನ್ನು ಯಥಾವತ್ತಾಗಿ ಅನುಕರಿಸಿದ್ದರೂ ಅವುಗಳನ್ನು ಭಾರತೀಯ ಸಂದರ್ಭಕ್ಕನುಗುಣವಾಗಿ ಪುನಾ ರೂಪಿಸಿ ಕೊಂಡ ಸಂಗತಿಯನ್ನು ಆಧುನಿಕ ಕನ್ನಡ ಸಾಹಿತ್ಯ ಚರಿತ್ರಕಾರರೂ ಸ್ವೀಕರಿಸಿದ್ದಾರೆ.[2] ಇಂಗ್ಲೀಷ್ ಕಲಿಕೆಗೆ ಹೊರತಾದ ಬಸವಪ್ಪಶಾಸ್ತ್ರಿಗಳಂತಹವರು ಬೇರೆಯವರ ನೆರವಿನೊಂದಿಗೆ ಇಂಗ್ಲೀಷ್ ಸಾಹಿತ್ಯವನ್ನು ಕನ್ನಡಿಸುವ ಕೆಲಸಕ್ಕೆ ಕೈ ಹಾಕಿದರು ಎಂಬ ಉದಾಹರಣೆಯನ್ನು ಒಳಗೊಂಡಂತೆ ಇಂಗ್ಲಿಷ್ ನಾಟಕ, ಕಾವ್ಯಗಳ ಅನುವಾದದ ಆಲೆಯೊಂದು ಈ ಸಂದರ್ಭದಲ್ಲಿ ಕಂಡುಬರುತ್ತದೆ. ಇನ್ನು ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಮಿಷನರಿಗಳ ಕೊಡುಗೆ ಎಷ್ಟೆಂಬುದನ್ನು ಹೊಸದಾಗಿ ಏನು ಇಲ್ಲಿ ದಾಖಲಿಸಬೇಕಿಲ್ಲ.

ಕನ್ನಡದ ಸಂದರ್ಭವನ್ನು ನಿರ್ದಿಷ್ಟವಾಗಿ ಗಮನಿಸುವುದಾದರೆ ಪಾಶ್ಚಾತ್ಯ ಪ್ರೇರಣೆ ಎಂಬುದು ಕಾವ್ಯದ ಸಂದರ್ಭದಲ್ಲಿ ಪಶ್ಚಿಮದಿಂದ ನೇರವಾಗಿ ಬಂದಿದ್ದರೆ, ಕಾದಂಬರಿಯು ಬಂಗಾಳಿ ಮತ್ತು ಮರಾಠಿ ಮಧ್ಯವರ್ತಿಗಳ ಮೂಲಕ ಬಂದುದಾಗಿದೆ. ಆದ್ದರಿಂದಲೇ ಅಂದಿನ ಕನ್ನಡದ ಲೇಖಕರು ಪಾಶ್ಚಾತ್ಯರ ಕೃತಿಗಳನ್ನು ಭಾಷಾಂತರಿಸುವಾಗ, ತಮ್ಮ ಹೊಸ ಕೃತಿಗಳನ್ನು ರಚಿಸುವಾಗ ಕನ್ನಡೇತರ ಸಾಹಿತ್ಯ ಪರಂಪರೆಗಳ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸುತ್ತಾರೆ. ತಮ್ಮ ಆಧುನಿಕ ರಚನೆಗಳ ಸ್ವರೂಪವನ್ನು ಪಾಶ್ಚಾತ್ಯ ವಿಮರ್ಶೆಯ ನೆಲೆಯಲ್ಲಿ ವಿವರಿಸಲು ಯತ್ನಿಸುತ್ತಾರೆ. ಇಂಗ್ಲೀಷ್, ಬಂಗಾಳಿ, ಮರಾಠಿ ಇತ್ಯಾದಿ ಭಾಷೆಗಳ ಸಾಹಿತ್ಯವನ್ನು, ಲೇಖಕರನ್ನು ಕನ್ನಡಿಗರಿಗೆ ಉತ್ಸಾಹದಿಂದ ಪರಿಚಯಿಸಲು ಮುಂದಾಗುತ್ತಾರೆ. ತಮ್ಮ ಆಧುನಿಕ ಕನ್ನಡ ಸಾಹಿತ್ಯದ ಪ್ರಯೋಗಶೀಲತೆಯನ್ನು, ಹೊಸತನವನ್ನು, ಸಮೃದ್ಧಿಯನ್ನು ಪಾಶ್ಚಾತ್ಯ ಸಾಹಿತ್ಯ ಧಾರೆಗಳೊಂದಿಗಿನ ಸಂವಾದದೊಂದಿಗೆ ರೂಪಿಸಿ ಕೊಂಡವರಾಗಿದ್ದಾರೆ. ಹೀಗೆ ಕನ್ನಡದಲ್ಲಿ ಆಧುನಿಕ ಕಾವ್ಯ ಬರೆಯುವುದರ ಪೂರ್ವದಲ್ಲಿ ಹಲವರು ಇಂಗ್ಲೀಷ್ ಲೇಖಕರಾಗುವ ಉತ್ಸಾಹವನ್ನೂ ತೋರಿದ್ದಾರೆ ಸಹ. ಬಿ. ಎಂ. ಶ್ರೀ ಕುವೆಂಪು, ಕೈಲಾಸಂ ಮುಂತಾದ ಲೇಖಕರು ಕನ್ನಡದಂತೆ ಇಂಗ್ಲೀಷಿನಲ್ಲಿಯು ಬರಹ ಕೈಗೊಂಡವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಶ್ಚಾತ್ಯ ಸಾಹಿತ್ಯ ಪ್ರೇರಣೆ ಕುರಿತ ಸಾಹಿತ್ಯ ಚರಿತ್ರೆಕಾರ ಈ ಒತ್ತನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಅಂದಿನ ಮಹಿಳಾ ಸಾಹಿತ್ಯ ಸಂದರ್ಭವನ್ನು ಗಮನಿಸುವುದು ಕುತೂಹಲಕಾರಿಯಾದುದಾಗಿದೆ.

ಕ್ರೈಸ್ತ ಮಿಷನರಿಗಳ ಸಾಹಿತ್ಯಿಕ ಚಟುವಟಿಕೆಯನ್ನು ಪ್ರಸ್ತಾಪಿಸುವ ಸಂದರ್ಭದಲ್ಲಿ ಹಾವನೂರರು ೧೮೫೭ರವರೆಗೆ ಒಟ್ಟು ೬೩ ಜರ್ಮನ್ ಸ್ತ್ರೀಪುರುಷರು ಇಲ್ಲಿಯ ಬಾಸಲ್ ಮಿಷನ್ ಕೇಂದ್ರಕ್ಕೆ ಬಂದಿದ್ದರು ಎಂಬುದನ್ನು ಪ್ರಸ್ತಾಪಿಸುತ್ತಾರೆ.[3] ಹಾಗೆ ಬಂದ ಸ್ತ್ರೀಯರು ಇಲ್ಲಿನ ಸ್ತ್ರೀ ಶಿಕ್ಷಣ ಹಾಗೂ ಸ್ತ್ರೀವೈದ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ ಲೇಡಿ ಕ್ಯಾಂಬೆಲ್ಲಳ ಅನುವಾದದ ಸಂಗತಿಯೊಂದನ್ನು ಹೊರತುಪಡಿಸಿ ಕ್ರೈಸ್ತ ಮಹಳೆಯರು ಇಲ್ಲಿನ ಸಾಹಿತ್ಯಿಕ ಚಟುವಟಿಕೆಯಲ್ಲಿ ಕೈ ಹಾಕಿದ ಬಗ್ಗೆ ಯಾವುದೇ ಮಾಹಿತಿ ಸದ್ಯಕ್ಕೆ ಲಭಿಸುತ್ತಿಲ್ಲ.[4] ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಅಥವಾ ಮಹಿಳಾ ಸಾಹಿತ್ಯದ ಈ ಚರ್ಚೆಯಲ್ಲಿ ಕ್ರೈಸ್ತ ಸ್ತ್ರೀಯರ ಪ್ರಸ್ತಾಪವು ಇಲ್ಲದಂತಾಗಿದೆ.

ಸ್ತ್ರೀಯರಿಗೆ ದೊರೆತ ಶಿಕ್ಷಣದ ಅವಕಾಶದಿಂದಾಗಿ ಅಂದಿನ ಮಹಿಳೆಯರು ಸಾಹಿತ್ಯದ ಓದುಗರಾಗಿ ಹಾಗೂ ಬರಹಗಾರರಾಗಿ ರೂಪುಗೊಂಡರು ಎಂಬುದು ಈಗಾಗಲೇ ಸಿದ್ಧಗೊಂಡ ವಿಚಾರ. ಆದರೆ ಆಧುನಿಕ ಶಿಕ್ಷಣ ಹಾಗೂ ಸಾಹಿತ್ಯದ ಹೆಬ್ಬಾಗಿಲು ಅಂದಿನ ಪುರುಷರಿಗೆ ತೆರೆದಷ್ಟು ನೇರವಾಗಿ ಮಹಿಳೆಯರಿಗೆ ತೆರೆಯಲ್ಪಟ್ಟಿದ್ದಲ್ಲ. ಸ್ತ್ರೀಶಿಕ್ಷಣಕ್ಕೆ ದೊರೆತ ಪ್ರೋತ್ಸಾಹದಿಂದಾಗಿ ಮಹಿಳೆಯರು ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡರಾದರೂ ಅದು ಭಾರತೀಯ ಸ್ತ್ರೀಗೆ ಹೆಚ್ಚು ಉಪಯುಕ್ತವಾಗಲಾರದೆಂಬ ಅಭಿಪ್ರಾಯವು ಅದನ್ನು ಹಿಂಬಾಲಿಸಿಯೇ ಬಂದಿತು. ಸೂಕ್ಷ್ಮವಾಗಿ ಗಮನಿಸುವುದಾದರೆ ಸ್ತ್ರೀಯರು ಗಮನಾರ್ಹ ಪ್ರಮಾಣದಲ್ಲಿ ಶಿಕ್ಷಣಕ್ಕೆ ಪ್ರವೇಶ ಪಡೆದುದು, ಸ್ತ್ರೀಯರಿಗೆ ಪಾಶ್ಚಾತ್ಯರ ಶಿಕ್ಷಣದ ಅಗತ್ಯವಿದೆಯೇ ಎಂಬ ಪ್ರಶ್ನೆ ಎದ್ದಿದ್ದು ಹಾಗೂ ದೇಶಿಯ ಭಾಷೆಗಳಲ್ಲಿ ಪಾಶ್ಚಾತ್ಯ ಶಿಕ್ಷಣವನ್ನು ನೀಡಬೇಕೆಂಬ ಅಭಿಪ್ರಾಯ ಮುಂಚೂಣಿಗೆ ಬಂದದ್ದು – ಇವುಗಳಿಗೆ ಅಂತರ್ ಸಂಬಂಧವಿದೆ. ಸ್ತ್ರೀಪುರುಷರ ನಡುವೆ ಅಂತರವಿರಬೇಕು. ಆ ಅಂತರವು ಶ್ರೇಣೀಕರಣದ್ದಾಗಿರಬೇಕು. ಈ ಶ್ರೇಣೀಕರಣದಲ್ಲಿ ಸ್ತ್ರೀ ಪುರುಷರಿಗಿಂತ ಒಂದು ಹೆಜ್ಜೆ ಹಿಂದಿದ್ದು ಆತನ ಸಹವರ್ತಿಯಾಗಿರಬೇಕೆಂದು ಆಶಯವುಳ್ಳ ಸಮಾಜ ಸಹಜವಾಗಿಯೇ ಸ್ತ್ರೀಯರ ಪ್ರತ್ಯೇಕ ಶಿಕ್ಷಣವನ್ನು, ಪ್ರತ್ಯೇಕ ಪಠ್ಯಕ್ರಮವನ್ನು ನಿರೀಕ್ಷಿಸಿತು. ಇದರ ಮುಂದುವರಿಕೆಯಾಗಿ ದೇಶ ಭಾಷೆಗಳಲ್ಲಿನ ಶಿಕ್ಷಣದ ಪ್ರಸ್ತಾಪವನ್ನು ಮುಂದೆ ಹೆಣ್ಣುಮಕ್ಕಳಿಗೆ ಆದರ್ಶವಾದುದು ಎಂದು ಪರಿಭಾವಿಸಿ ಕೊಂಡಿತು.

ಸ್ತ್ರೀ ಶಿಕ್ಷಣವು ಜಾರಿಗೆ ಬಂದ ಅಲ್ಪ ಸಮಯದಲ್ಲಿಯೇ ದೇಶಿ ಸುಧಾರಣಾವಾದದಿಂದ ಪ್ರೇರಿತವಾದ ದೇಶಿ ಬಾಲಿಕಾ ಪಾಠಶಾಲೆಗಳು ಆರಂಭಗೊಂಡವು. ಭಾರತೀಯ ಸ್ತ್ರೀಯ ಪಾಶ್ಚಾತ್ಯೀಕರಣವನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಪ್ರತ್ಯೇಕ ಪಠ್ಯಕ್ರಮ ಪರಿಚಯವಾಯಿತು. ಈ ಶೈಕ್ಷಣಿಕ ಚಟುವಟಿಕೆಯ ಅಗತ್ಯಕ್ಕೆಂಬಂತೆ ಪಠ್ಯಕ್ರಮಗಳ ಭಾಗವಾಗಿ ಹಿಂದಿನ ಕಾವ್ಯಗಳನ್ನು ಪುನಾರಚಿಸಲಾಯಿತು. ಇದಕ್ಕೆ ಕನ್ನಡದ ಉದಾಹರಣೆಯಾಗಿ ಮಹಾರಾಣಿ ಬಾಲಿಕಾ ಪಾಠಶಾಲೆಯ ವಿದ್ಯಾರ್ಥಿನಿಯರಿಗೋಸ್ಕರವೇ ಸಿದ್ಧಪಡಿಸಲಾದ ಕಲ್ಯಾಣ ಗೀತ ಮಂಜರಿ, ದಮಯಂತೀ ಸ್ವಯಂವರ, ಬಾಲಿಕಾ ಗೀತಾ ಮುಕ್ತಕಲಾಪ, ಸಾವಿತ್ರೀ ಚರಿತ್ರೆಗಳನ್ನು ಗಮನಿಸಬಹುದು.

ಹೀಗೆ ಪ್ರಧಾನಧಾರೆಯ ಶಿಕ್ಷಣ ಹಾಗೂ ಸಾಹಿತ್ಯಾಧ್ಯನಗಳಿಂದ ಸ್ತ್ರೀಯರನ್ನು ಪ್ರತ್ಯೇಕಿಸುವ ಪ್ರಯತ್ನದ ಕಾರಣದಿಂದಾಗಿ ಮಹಿಳೆಯರ ಶೈಕ್ಷಣಿಕ ಹಾಗೂ ಸಾಹಿತ್ಯಿಕ ಅವಕಾಶಗಳು ಕುಗ್ಗುವುದರೊಂದಿಗೆ ಪ್ರತ್ಯೇಕ ಪಾತಳಿಯಲ್ಲಿ ಕೂಡ ನಿಲ್ಲುವಂತಾಯಿತು. ಅದಕ್ಕನುಗುಣವಾಗಿ ಪಾಶ್ಚಾತ್ಯ ಸಾಹಿತ್ಯದೊಂದಿಗಿನ ಮಹಿಳೆಯರ ಕೊಡುಕೊಳ್ಳುವಿಕೆ ಕೂಡ ಭಿನ್ನಸ್ವರೂಪದ್ದಾಯಿತು.

ಪ್ರತ್ಯೇಕ ಸ್ತ್ರೀಶಿಕ್ಷಣದ ವಿಚಾರವು ಪಠ್ಯಕ್ರಮದ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಚಲಾವಣೆಗೆ ಬರಲಿಲ್ಲವಾದರೂ ಪಠ್ಯೇತರ ಚಟುವಟಿಕೆಯ ಸಂದರ್ಭದಲ್ಲಿ ಮಹಿಳೆಯನ್ನು ಪುರುಷನಿಗಿಂತ ಭಿನ್ನ ಶ್ರೇಣಿಯಲ್ಲಿ ಪ್ರತಿಷ್ಠಾಪಿಸುವುದರಲ್ಲಿ ಈ ಕಾಲಘಟ್ಟವು ಯಶಸ್ವಿಯಾಯಿತು. ಭಾರತೀಯ ಸಂಸ್ಕೃತಿ, ದೇಶಭಾಷೆ, ದೇಶ ಸಾಹಿತ್ಯ ಇತ್ಯಾದಿ ವಿಚಾರಗಳಲ್ಲಿ ಮಹಿಳೆಯನ್ನು ಯಶಸ್ವಿಯಾಗಿ ನೆಲೆಗೊಳಿಸಲಾಯಿತು. ಪರಿಣಾಮವಾಗಿ ಮಹಿಳೆಯರ ಶಿಕ್ಷಣವು ಇಂಗ್ಲೀಷ್ ಭಾಷಾ ಕಲಿಕೆ ಹಾಗೂ ಪಾಶ್ಚಾತ್ಯ ಸಾಹಿತ್ಯ ಕಲಿಕೆಯನ್ನು ಒಳಗೊಂಡಂತೆಯೇ ಪುರುಷರದಕ್ಕಿಂತ ಭಿನ್ನಗೊಂಡಿತು. ಉನ್ನತ ಶಿಕ್ಷಣದ ಸಾಧ್ಯತೆಗಳು ಕ್ಷೀಣವಾಗಿದ್ದರಿಂದ ಪಾಶ್ಚಾತ್ಯ ಸಾಹಿತ್ಯದ ಇವರ ಓದು ಸೀಮಿತಗೊಂಡಿತು ಹಾಗೂ ಭಾರತೀಯ ಪುರುಷರ ಮಧ್ಯಸ್ಥಿಕೆಯಲ್ಲಿ ಮುಂದುವರಿಯಿತು. ಇದರಿಂದ ಹೆಚ್ಚಿನ ಮಹಿಳೆಯರು ನೇರವಾಗಿ ಪಾಶ್ಚಾತ್ಯ ಸಾಹಿತ್ಯದ ಓದಿಗೆ ತೊಡಗುವುದಕ್ಕಿಂತ ಹೆಚ್ಚಾಗಿ ತಮ್ಮ ಪುರುಷರು ಪಾಶ್ಚಾತ್ಯದಿಂದ ಅರಗಿಸಿಕೊಂಡು ದೇಶ ಭಾಷೆಗಳಲ್ಲಿ ಅವರು ಪ್ರಯೋಗಿಸ ತೊಡಗಿದ ಆಧುನಿಕ ಸಾಹಿತ್ಯದ ಓದಿಗೆ ಮಾತ್ರ ಹೆಚ್ಚು ತೆರೆದುಕೊಳ್ಳುತ್ತ ತಮ್ಮ ಪುರುಷರು ಹಾಕಿಕೊ‌ಟ್ಟ ಮಾರ್ಗದಲ್ಲಿ ಅಳುಕುತ್ತಲೇ ಪ್ರವೇಶ ಪಡೆದ ಸಹವರ್ತಿಗಳಾದರು. ಈ ಪ್ರಕ್ರಿಯೆಯನ್ನೇ ಸಿಸಿರ್ ಕುಮಾರ್ ಅವರು ‘ಇಂಗ್ಲೀಷ್ ಕಲಿತ ಭಾರತೀಯ ಪುರುಷ ತಾನೇ ಕಲ್ಪಿಸಿಕೊಂಡ ಶ್ರೇಷ್ಠತೆಯೊಂದಿಗೆ ಭಾರತೀಯ ಭಾಷಾ ಸಾಹಿತ್ಯಕ್ಕಿಂತ ಇಂಗ್ಲೀಷ್ ಸಾಹಿತ್ಯದ ಓದನ್ನು ಬಯಸಿದ. ಇಂಗ್ಲೀಷ್ ಕಲಿಯದ ಅಥವಾ ಅಲ್ಪಸ್ವಲ್ಪ ಇಂಗ್ಲೀಷ್ ಕಲಿತ ಭಾರತೀಯ ಸ್ತ್ರೀಯರೇ ಭಾರತೀಯ ಭಾಷಾ ಸಾಹಿತ್ಯದ ನಿಜವಾದ ಓದುಗರು’ ಎಂದು ವಿವರಿಸುತ್ತಾರೆ.[5]

ಈ ನೆಲೆಯಿಂದ ಕನ್ನಡ ಸಾಹಿತ್ಯವನ್ನು ಗಮನಿಸುವುದಾದರೆ, ಪ್ರತ್ಯೇಕ ಶಿಕ್ಷಣ, ದೇಶ ಭಾಷೆಯ ಬಳಕೆಯ ಪ್ರಶ್ನೆ ಕನ್ನಡ ಮಹಿಳೆಯರ ಸಂದರ್ಭದಲ್ಲಿಯೂ ಪ್ರಬಲವಾಗಿದ್ದುದನ್ನು ಕಾಣಬಹುದು. ಈ ಹಿಂದೆ ಪ್ರಸ್ತಾಪಿಸಲಾದಂತೆ ಕನ್ನಡ ಮತ್ತು ಮಹಿಳೆ ಎಂಬುದನ್ನು ಈ ಕಾಲಘಟ್ಟವು ಸಮೀಕರಿಸಿಕೊಂಡ ಕ್ರಮವು ಸ್ವತಃ ಮಹಿಳೆಯರ ಮೇಲೆ ಅಪಾರ ಪರಿಣಾಮ ಬೀರಿತು. ಅವರು ತಮ್ಮನ್ನು ತಾವೇ ಪರುಷರಿಗಿಂತ ಕನ್ನಡ ಭಾಷೆ-ಸಂಸ್ಕೃತಿಯ ಹೆಚ್ಚಿನ ನಿಷ್ಠಾಳುಗಳಾಗಿ ಪರಿಭಾವಿಸಿಕೊಂಡಿದ್ದರು ಎಂಬುದಕ್ಕೆ ಅಂದಿನ ಪ್ರಮುಖ ಲೇಖಕಿಯರು ಈ ವಿಚಾರಕ್ಕೆ ಸ್ಪಂದಿಸಿದ ರೀತಿಯಿಂದ ತಿಳಿದುಬರುತ್ತದೆ.

ಸಾಹಿತ್ಯಕ್ಕೂ ನಿಕಟ ಸಂಬಂಧವಿರುವುದರಿಂದ ಶಿಕ್ಷಣವನ್ನು ಕುರಿತು ನಾವು ಪರಿಶೀಲಿಸಬೇಕಾದುದು ನಮ್ಮ ಕರ್ತವ್ಯ. ಇಂದು ಸಿಕ್ಕುತ್ತಿರುವ ಸ್ತ್ರೀ ಶಿಕ್ಷಣವು ಅಷ್ಟು ಉಪಯುಕ್ತವಿಲ್ಲ ಮತ್ತು ಸ್ತ್ರೀಯರ ದೃಷ್ಟಿಯಿಂದ ಪೂರ್ಣ ಅಹಿತಕಾರಿಯಾಗಿದೆ ಎನ್ನಲಿಕ್ಕೆ ಅಡ್ಡಿಯಿಲ್ಲ…. ಸ್ತ್ರೀಯರಿಗೆ ದೊರೆಯಬೇಕಾದ ಶಿಕ್ಷಣವು ಅವರ ಕರ್ತವ್ಯ ಕರ್ಮಗಳನ್ನು ಜೀವನದಲ್ಲಿ ಅವರಿಗಿರುವ ಸ್ಥಾನಮಾನಗಳನ್ನು ಅನುಸರಿಸುವಂಥದಿರಬೇಕು…. ಮಕ್ಕಳಿಗೆ ಮೊಲೆ ಹಾಲಿನೊಂದಿಗೆ ಸಾಹಿತ್ಯ ಸಂಸ್ಕೃತಿಗಳನ್ನು ಸಹಜವಾಗಿ ಪೂರೈಸುವವಳು ತಾಯಿ ಎಂಬುದನ್ನು ನಾವು ಲಕ್ಷ್ಯದಲ್ಲಿಟ್ಟರೆ, ಸ್ತ್ರೀ ಶಿಕ್ಷಣದ ಮಹತ್ವವು ಮನದಟ್ಟಾಗುವುದು.[6]

ತಿರುಮಲಾಂಬ ಕೂಡ ತಮ್ಮ ನಭಾ, ವಿರಾಗಣಿ ಮುಂತಾದ ಕಾದಂಬರಿಗಳ ಮೂಲಕ ಈ ವಿಚಾರವನ್ನೇ ಪ್ರಸ್ತುತಪಡಿಸುವುದನ್ನು ಗಮನಿಸಬಹುದು. ಶಿಕ್ಷಣ ಸಂದರ್ಭದಲ್ಲಿ ಸ್ತ್ರೀಯರಿಗೆ ಹಾಕಿಕೊಟ್ಟ ಈ ಆದರ್ಶವು ಮುಂದುವರಿದು ಕನ್ನಡ ಭಾಷೆ ಹಾಗೂ ಸಾಹಿತ್ಯ ಪರಂಪರೆಯ ಅಳಿವು ಉಳಿವಿನ ಜವಾಬ್ದಾರಿಯನ್ನು ಸಂಸ್ಕೃತಿಯ ಸಂಗತಿಯಾಗಿಸಿ ಸ್ತ್ರೀಯ ನಿಷ್ಠೆಯ ವಿಚಾರವಾಗಿ ಮುಂಚೂಣಿಗೆ ತರಲಾಯಿತು. ಕನ್ನಡ ಭಾಷೆ ಹಾಗೂ ಸಾಹಿತ್ಯ ಪರಂಪರೆಯ ಪರಿಮಳವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸವು ಮೊಲೆ ಹಾಲೂಡಿಕೆಯ ಸಂಗತಿಯೊಂದಿಗೆ ಮಿಳಿತಗೊಂಡಿತು. ದೇಶ ಭಾಷೆಯಲ್ಲಿ ನೆಚ್ಚಿ ಬದುಕಬೇಕಾದ ಪುರುಷಪ್ರಧಾನ ನೆಲೆಯ ಸಾಮಾಜಿಕ ಸನ್ನೆವೇಶದೊಂದಿಗೆ ದೇಶ ಭಾಷೆಯನ್ನು ಉದ್ಧರಿಸಬೇಕೆಂಬ ನೈತಿಕ ಹೊಣೆಗಾರಿಕೆಯೊಂದನ್ನು ಈ ಕಾಲದ ಸ್ತ್ರೀಯರು ಪುರುಷರಿಗಿಂತ ಹೆಚ್ಚಾಗಿ ಹೊತ್ತರು.

ಇಷ್ಟಾಗಿಯೂ ಈ ಕಾಲದಲ್ಲಿ ಸ್ತ್ರೀಯನ್ನು ಪ್ರತ್ಯೇಕ ಶಿಕ್ಷಣಕ್ಕೆ ದೇಶ ಭಾಷೆಗೆ, ಸಾಹಿತ್ಯಕ್ಕೆ ಸಂಸ್ಕೃತಿಗೆ ಹತ್ತಿರವಾಗಿಸುವ, ವಕ್ತಾರರಾಗಿಸುವ ಕೆಲಸ ಎಷ್ಟೇ ಪ್ರಬಲವಾಗಿ ನಡೆಯಿತಾದರೂ ಪ್ರಧಾನಧಾರೆಯ ಶಿಕ್ಷಣಕ್ಕೆ ಅವಳನ್ನು ಸಂಪೂರ್ಣ ಎರವಾಗಿಸುವುದು ಸಾಧ್ಯವಾಗಲಿಲ್ಲ. ಸಮಾಜದ ಮುಷ್ಠಿಯಷ್ಟಾದರೂ ಹೆಣ್ಣು ಮಕ್ಕಳು ಆಧುನಿಕ ಶಿಕ್ಷಣ, ಅದರ ಭಾಗವಾಗಿ ಪಾಶ್ಚಾತ್ಯ ಸಾಹಿತ್ಯಗಳ ಪರಿಚಯ ಪಡೆದರು. ಗಡಿ ಭಾಗಗಳಲ್ಲಿದ್ದ ಹೆಣ್ಣ ಮಕ್ಕಳು ಮದುವೆಯ ಕೊಡುಕೊಳ್ಳುವಿಕೆಯಲ್ಲಿ ಹುಟ್ಟಿದ ಮನೆ, ಮೆಟ್ಟಿದ ಮನೆಗಳೆರಡರ ಭಾಷೆಗಳನ್ನು ಒಗ್ಗೂಡಿಸಿಕೊಂಡರು. ರಾಷ್ಟ್ರೀಯ ವಿಚಾರಧಾರೆಯ ಭಾಗವಾಗಿ ಬಂಗಾಳಿ, ಹಿಂದಿ, ಮರಾಠಿ ಭಾಷೆಗಳ ಪರಿಚಯವನ್ನು ಪಡೆದರು. ಹಿಂದಿ ಕಲಿಕೆ ಅಂದಿನ ಗಾಂಧಿವಾದಿ ಚಟುವಟಿಕೆಗಳಲ್ಲಿ ಖಾದಿಯಷ್ಟೇ ಮು‌ಖ್ಯವಾಗಿತ್ತು.

ಸಾಹಿತ್ಯದ ಸಂದರ್ಭದಲ್ಲಿ ಕೂಡ ಪರಂಪರೆಯ ಪ್ರೀತಿ ರಕ್ಷಣೆ ಇತ್ಯಾದಿ ಒತ್ತಡಗಳ ನಡುವೆಯು ಮಹಿಳೆಯರು ಭಿನ್ನ ಭಾಷಾ ಸಾಹಿತ್ಯಕ್ಕೆ ಆಧುನಿಕ ಪ್ರಕಾರಗಳಿಗೆ ಸ್ವಲ್ಪ ಮಟ್ಟಿಗಾದರು ತೆರೆದುಕೊಂಡರು. ಮೇಲ್ವರ್ಗದ ಬೆರಳಿಕೆಯ ಲೇಖಕಿಯರಿಗೆ ಹವ್ಯಾಸವಾಗಿ ಪಾಶ್ಚಾತ್ಯ ಅಥವಾ ಕನ್ನಡೇತರ ಸಾಹಿತ್ಯದ ಓದು ದೊರಕಿತು. ವಾಸಂತಿ ಬಾಯಿ ಪಡುಕೋಣೆ, ಸರಸ್ವತಿ ಬಾಯಿ ರಾಜವಾಡೆ, ಪಾವಂಜೆ ಮಂದಾಕಿನಿ, ಲೀಲಾಬಾಯಿ ಕಾಮತ್ ಮುಂತಾದವರಿಗೆ ಕನ್ನಡೇತರ ನೆಲದ ಸಹವಾಸವು ಒದಗಿಬಂತು. ಗಾಂಧಿ ಸೇವಾಶ್ರಮದ ಸಾಹಚರ್ಯ, ಅನ್ಯಭಾಷಿಕ ಕುಟುಂಬದೊಂದಿಗಿನ ವೈವಾಹಿಕ ಸಂಬಂಧ, ಪತಿಯ ಉದ್ಯೋಗದ ನಿಮಿತ್ತ ದೊರೆತ ಅನ್ಯ ಭಾಷಿಕ ಪರಿಸರದ ಜೀವನ, ಶಿಕ್ಷಿತ -ಸಾಹಿತ್ಯಾಸಕ್ತ – ಪತ್ರಿಕೋದ್ಯಮಿ ಪತಿಯ ಸಂಸರ್ಗ ಇತ್ಯಾದಿಗಳಿಂದಾಗಿ ಕನ್ನಡದ ಅಂದಿನ ಹಲವು ಲೇಖಕಿಯರು ಕನ್ನಡೇತರ ಸಾಹಿತ್ಯಕ್ಕೆ ತೆರೆದುಕೊಂಡರು.

ಆದರೆ ಇವರಲ್ಲಿ ಹೆಚ್ಚಿನವರಿಗೆ ಉನ್ನತ ಶಿಕ್ಷಣದ ಅವಕಾಸದ ಸಾಧ್ಯತೆಗಳು ಇರಲಿಲ್ಲವಾದ್ದರಿಂದ ಅನ್ಯ ಸಾಹಿತ್ಯ ಪರಂಪರೆಯೊಂದಿಗಿನ ಇವರ ಸಂಸರ್ಗ ಬಹುಪಾಲು ಶಾಲಾಪಠ್ಯಗಳು ಹಾಗೂ ಪತ್ರಿಕೆಗಳ ಮೂಲಕ ಪಡೆದುದಾಗಿತ್ತು. ಹಲವು ಬಾರಿ ಈಗಾಗಲೇ ನಡೆದ ದೇಶಭಾಷೆಗಳ ಭಾಷಾಂತರಗಳ ಮೂಲಕವೂ ಆಗಿರುತ್ತಿತ್ತೇ ಹೊರತು ಉನ್ನತ ಶಿಕ್ಷಣದ ಅಧ್ಯಯನ ಸಾಮಗ್ರಿಯಾಗಿ ಅಲ್ಲ. ಅಂದರೆ ಈ ಕಾಲಘಟ್ಟದಲ್ಲಿ ಮೇಲ್ವರ್ಗದ ಪುರುಷರ ಕನ್ನಡೇತರ ಸಾಹಿತ್ಯಾಸಕ್ತಿಯ ಹೆಬ್ಬಾಗಿಲು ಸಾಂಪ್ರದಾಯಕ (Formal) ನೆಲೆಯಿಂದ ರೂಪಿತವಾದುದಾದರೆ ಅದೇ ವರ್ಗದ ಸ್ತ್ರೀಯರ ಆಸಕ್ತಿಯ ಕಿಟಕಿಯು ಅಸಾಂಪ್ರದಾಯಕ (Informal) ನೆಲೆಯಿಂದ ತೆರೆದುಕೊಂಡದ್ದಾಗಿತ್ತು. ಸ್ತ್ರೀಯರು ಪಡೆದ ಕನ್ನಡೇತರ ಸಾಹಿತ್ಯ ಪರಂಪರೆಯ ಜ್ಞಾನವೆಂಬುದು ಪುರುಷರ ಜ್ಞಾನದ ವಿಸ್ತರಣೆಗಿಂತ ಭಿನ್ನವಾದುದು ಹಾಗೂ ಸೀಮಿತವಾದು ದಾಗಿತ್ತು. ಆದ್ದರಿಂದ ಸಹಜವಾಗಿಯೇ ಇವರಿಗೆ ತಮ್ಮನ್ನು ತಾವು ಪಾಶ್ಚಾತ್ಯ ಸಾಹಿತ್ಯ ಧಾರೆಯ ಅಥವಾ ಕನ್ನಡೇತರ ಸಾಹಿತ್ಯ ಪರಂಪರೆಗಳ ಅಧಿಕೃತ ಓದುಗರು ಎಂದು ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ.[7]

ಪಾಶ್ಚಾತ್ಯ ಅಥವಾ ಕನ್ನಡೇತರ ಭಾರತೀಯ ಭಾಷೆ ಸಾಹಿತ್ಯದ ಓದು ಕನ್ನಡ ಲೇಖಕಿಯರಿಗೆ ವಿಸ್ತೃತ ನೆಲೆಯಲ್ಲಿ ದೊರೆಯಲಿಲ್ಲವಾದರೂ ತಮ್ಮ ಪರಿಸರದಲ್ಲಿ ಒದಗಿದ ಸಾಹಿತ್ಯಕೃತಿಗಳಲ್ಲಿ ತಮಗೆ ಪ್ರಿಯವೆನಿಸಿದ, ಹೊಸತೆನ್ನಿಸಿದ ಕತೆಗಳನ್ನು, ಕವಿತೆಗಳನ್ನು, ಅಪರೂಪಕ್ಕೆ ನಾಟಕವನ್ನು ಭಾಷಾಂತರಿಸುವ ಕೆಲಸಕ್ಕೆ ಅವರು ಕೈ ಹಚ್ಚಿದರು. ಈ ಕೆಲಸದಲ್ಲಿ ಅಂದಿನ ಅನ್ಯಭಾಷಾ ಪತ್ರಿಕೆಗಳು ಇವರಿಗೆ ಮೂಲಕೃತಿಗಳನ್ನು ಓದಗಿಸುವಲ್ಲಿ ನೆರವಾದಂತೆ, ಕನ್ನಡ ಪತ್ರಿಕೆಗಳು ಇವರ ಭಾಷಾಂತರಿತ ಕೃತಿಗಳ ಪ್ರಕಟಣೆಗೆ ನೆರವಾದವು. ಇಷ್ಟಾಗಿಯೂ ತಮ್ಮನ್ನು ತಾವು ಭಿನ್ನ ಸಾಹಿತ್ಯಧಾರೆಗಳ ಅಧಿಕೃತ ಓದುಗರೆಂದು ಪರಿಭಾವಿಸಲಾಗದ ಈ ಲೇಖಕಿಯರಿಗೆ ತಮ್ಮನ್ನು ತಾವು ಮುಂಚೂಣಿಯ ಭಾಷಾಂತರಕಾರರೆಂದು ಪರಿಭಾವಿಸುವುದೂ ಸಾಧ್ಯವಾಗಲಿಲ್ಲ. ತಾವು ಭಾಷಾಂತರಕ್ಕೆ ಆಯ್ಕೆಮಾಡಿಕೊಂಡ ಕೃತಿ ಘನವಾದುದೋ ಅಲ್ಲವೋ ಭಾಷಾಂತರಿಸುತ್ತಿರುವ ವಿಧಾನ ಸಮರ್ಪಕವಾದುದೇ ಅಲ್ಲವೇ? ಈ ಭಾಷಾಂತರವು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಸ್ವೀಕೃತಗೊಳ್ಳಬೇಕಾದ ಬಗೆ ಯಾವುದು ಇತ್ಯಾದಿ ಯಾವ ಸೈದ್ಧಾಂತಿಕ ಪ್ರಶ್ನೆಗಳನ್ನು ನಿಭಾಯಿಸುವ ಆತ್ಮವಿಶ್ವಾಸವನ್ನು ಒದಗಿಸಲಿಲ್ಲ. ಹಾಗೆ ನೋಡಿದರೆ ವಾಸಂತಿಬಾಯಿ ಪಡುಕೋಣೆ, ಸೀತಾದೇವಿ ಪಡುಕೋಣೆ, ಲೀಲಾಬಾಯಿ ಕಾಮತ್ ಮುಂತಾದ ಲೇಖಕಿಯರು ಭಾಷಾಂತರ ಚಟುವಟಿಕೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು[8] ಅವರು ಕನ್ನಡ ಸಾಹಿತ್ಯ ಹಾಗೂ ಭಾಷಾಂತರ ಚರ್ಚೆಗಳ ಸಂದರ್ಭದಲ್ಲಿ ಮುನ್ನೆಲೆಗೆ ಬರಲಿಲ್ಲ. ಅವರ ಭಾಷಾಂತರಗಳು ಮುಂದಿನ ಭಾಷಾಂತರಕಾರರಿಂದ ಯಾವುದೇ ಪ್ರತಿಕ್ರಿಯೆಯನ್ನು ಪಡೆಯಲಿಲ್ಲ. ಅವರು ಕನ್ನಡೇತರ ಸಾಹಿತ್ಯ ಪರಂಪರೆಯನ್ನು ಕನ್ನಡ ಜನತೆಗೆ ಪರಿಚಯಿಸುವ ಮಧ್ಯವರ್ತಿ ವಿದ್ವಾಂಸರಾಗಿ ಗುರುತುಗೊಳ್ಳಲಿಲ್ಲ. ಈ ಬಗೆಯ ಎಲ್ಲ ಚರ್ಚೆಯನ್ನು ಅಂದಿನ ಪುರುಷ ಭಾಷಾಂತರಕಾರರ ಕೃತಿಗಳ ಸಂದರ್ಭದಲ್ಲಿ ಕಾಣಬಹುದಾಗಿದೆ. ಕುತೂಹಲದ ಸಂಗರಿ ಎಂದರೆ ಅಂದಿನ ಬಹುತೇಕ ಎಲ್ಲ ಭಾಷಾಂತರಕಾರರು ರೂಪಾಂತರವನ್ನು ಮಾಡುವ ಮೂಲಕ ಮೂಲಕೃತಿಗೆ ನಿಷ್ಠರಾಗಿಲ್ಲದ ಸಂದರ್ಭದಲ್ಲಿ ಭಾಷಾಂತರಕಾರ್ತಿಯರು ಮಾತ್ರ ಮೂಲನಿಷ್ಠ ಭಾಷಾಂತರವನ್ನೇ ನೆಚ್ಚಿದ್ದರು. ಇದೂ ಒಂದು ರೀತಿಯಲ್ಲಿ ಪುರುಷ ಪ್ರಧಾನ್ಯವೂ ಅವರಿಗೆ ದತ್ತವಾಗಿಸಿದ ವಿಧೇಯತೆಯನ್ನೇ ಸೂಚಿಸುತ್ತದೆ.

ಈ ಎಲ್ಲದರ ನಡುವೆಯು ಪಾಶ್ಚಾತ್ಯ ಹಾಗೂ ಕನ್ನಡೇತರ ಸಾಹಿತ್ಯಾಧಾರೆಗಳ ನಿಯಮಿತ ಪರಿಚಯದ ಹಿನ್ನೆಲೆಯಲ್ಲಿ ಭಾಷಾಂತರದೊಂದಿಗೆ ತಮ್ಮ ಆಧುನಿಕ ಸಾಹಿತ್ಯ ರಚನೆಯ ಪ್ರಯತ್ನದಲ್ಲಿ ಲೇಖಕಿಯರು ಆತ್ಮವಿಶ್ವಾಸದಿಂದ ಕೈಗತ್ತಿಕೊಂಡ ಪ್ರಕಾರ ಸಣ್ಣಕತೆ. ವೈಯಕ್ತಿಕ ಬದುಕಿನ ಚಟುವಟಿಕೆಗಳ ನಡುವಿನ ಸಮಯ ಹೊಂದಾಣಿಕೆ ಹಾಗೂ ಪತ್ರಿಕೆಗಳಲ್ಲಿನ ಪ್ರಕಟಣೆಗಿದ್ದ ತೆರೆದ ಅವಕಾಶಗಳೆರಡರ ಹಿನ್ನೆಲೆಯಲ್ಲಿ ಈ ಪ್ರಕಾರವನ್ನು ಲೇಖಕಿಯರು ಕುತೂಹಲದಿಂದ, ಹುಮ್ಮಸ್ಸಿನಿಂದ ಒಗ್ಗಿಸಿಕೊಳ್ಳಲೆತ್ನಿಸಿದರು. ಕನ್ನಡದ ಪತ್ರಿಕೆಗಳು ಅವರ ಭಾಷಾಂತರಗಳನ್ನು ಪ್ರಕಟಿಸುವ ಮೂಲಕ ಇವರ ಕೆಲಸವನ್ನು ಉತ್ತೇಜಿಸಿತು. ಅನ್ಯ ಭಾಷಾ ಪತ್ರಿಕೆಗಳು ಕಥಾವಸ್ತುವನ್ನು, ಮಾದರಿಗಳನ್ನು ಒದಗಿಸತೊಡಗಿತು.

ಇಂಗ್ಲೀಷ್ ಸಾಹಿತ್ಯಾಧ್ಯಯನವಿಲ್ಲದ ತಿರುಮಲಾಂಬ ಅಂತಹವರು ಕಾದಂಬರಿಯಂತಹ ಪಾಶ್ಚಾತ್ಯ ಮಾದರಿಯನ್ನು ರೂಢಿಸಿಕೊಳ್ಳುವ ಸಂದರ್ಭದಲ್ಲಿ ಸಾಕಷ್ಟು ಪರಿಶ್ರಮಿಸಿದರು. ಪರಂಪರಾಗತ ಗದ್ಯ ಮಾದರಿಯ ನಿರೂಪಣೆ ಹಾಗೂ ವಿಪುಲ ಸಂಭಾಷಣೆಗಳನ್ನು ಹೊಂದಿಸಿಕೊಂಡು ಕಾದಂಬರಿ ಎಂಬುದನ್ನು ಸಾಕ್ಷಾತ್ಕರಿಸಿಕೊಳ್ಳಹೊರಟರು. ತಮ್ಮ ಪ್ರಕಾರಗಳ ರಚನಾ ಸಂವಿಧಾನವನ್ನು ಗ್ರಹಿಸಿ ಅಲ್ಲಿ ತಮ್ಮ ಆಲೋಚನೆಗಳಿಗೆ ರೂಪ ಕೊಡಲಾರಂಭಿಸಿದರು. ಕಾದಂಬರಿಯ ಒಳಗೆ ನಾಟಕದ ದೃಶ್ಯಗಳನ್ನು ಜೋಡಿಸುತ್ತಲೂ, ನಾಟಕದ ಚೌಕಟ್ಟಿನೊಳಗೆ ನಿರೂಪಣೆಯನ್ನು ಮಾಡುತ್ತಲೂ ಅವುಗಳನ್ನು ದಕ್ಕಿಸಿಕೊಳ್ಳಲೆತ್ನಿಸಿದರು.

ಹಾಗೆ ನೋಡಿದರೆ ತಿರುಮಲಾಂಬ ಅವರ ಸಾಹಿತ್ಯವು ಆಧುನಿಕ ಸಾಹಿತ್ಯ ಪ್ರಕಾರವಾದ ಕಾದಂಬರಿಯು ಕನ್ನಡದ ಸಂದರ್ಭದಲ್ಲಿ ರೂಪುಗೊಳ್ಳುವಾಗ ಹೊಂದಿದ ಹಲವು ಅವಸ್ಥೆಗಳನ್ನು ಅರಿಯಲು ಉತ್ತಮ ಆಕರ ಸಾಮಗ್ರಿಯಾಗಿದೆ. ತಿರುಮಲಾಂಬ ಅವರ ವಿವೇಕೋದಯ ನಾಟಕವು ಪೌರಾಣಿಕ ವಸ್ತುವೊಂದನ್ನು ಸಮಕಾಲೀನ ಧ್ವನಿಯೊಂದಿಗೆ ಪುರಾರಚಿಸುವ ಮಾದರಿಗೆ ಆರಂಭಿಕ ಉದಾಹರಣೆಯಾಗುತ್ತದೆ. ಅವರ ಕವಿತೆಗಳು ಸಾಂಪ್ರದಾಯಿಕ ಸಂವೇದನೆಯಿಂದ ಆಧುನಿಕ ಸಂವೇದನೆಗೆ ಹೊರಳುವ ಸಂಕ್ರಮಣವ್ಯವಸ್ಥೆಯನ್ನು ವಿವರಿಸಿಕೊಳ್ಳುವುದಕ್ಕೆ ನೆರವಾಗುತ್ತವೆ. ಇನ್ನಿತರ ಸಾಹಿತ್ಯ ಪ್ರಕಾರಗಳ ಸಂದರ್ಭದಲ್ಲಿಯಾದರೂ ಸರಿ ಮಹಿಳೆಯರ ರಚನೆಯನ್ನು ಅಧ್ಯಯನದ ಆಕರ ಸಾಮಗ್ರಿಯಾಗಿ ಬಳಸುವುದು ಕನ್ನಡದಲ್ಲಿ ಆಧುನಿಕ ಸಾಹಿತ್ಯ ರೂಪುಗೊಂಡ ಸಂದರ್ಭವನ್ನು ಮತ್ತಷ್ಟು ನಿಚ್ಚಳವಾಗಿ ಅರಿಯಲು ನೆರವಾಗುತ್ತದೆ. ಇದಕ್ಕೆ ಈ ಸಂಕಲನದಲ್ಲಿ ಒದಗಿಸಲಾಗಿರುವ ಸಣ್ಣ ಕತೆಗಳ ವಿಭಿನ್ನ ಪ್ರಯೋಗಗಳು ಉದಾಹರಣೆಯಾಗುತ್ತವೆ.

ಆದರೆ ಪ್ರಧಾನಧಾರೆಯು ‘ಸಾಹಿತ್ಯಪರಿಶ್ರಮಿ’ ಎನ್ನುವಾಗ ಪುರುಷನನ್ನು ಮಾತ್ರ ಪರಿಭಾವಿಸುವುದರಿಂದ ಲೇಖಕಿಯರ ಸಾಹಿತ್ಯವನ್ನು ಅಧ್ಯಯನದ ಆಕರ ಸಾಮಗ್ರಿಯಾಗಿ ಪರಿಗಣಿಸುವುದಿಲ್ಲ. ಅದಕ್ಕೆ ಬದಲಾಗಿ ಮಹಿಳೆಯ ಸಾಹಿತ್ಯವನ್ನು ಪುರುಷ ಸಾಹಿತ್ಯದ ಅನುಕರಣೆಯಾಗಿ ಅಥವಾ ಪುರುಷ ಸಾಹಿತ್ಯವನ್ನು ಸರಿಗಟ್ಟಲಾರದ ಅಪಕ್ವ ರಚನೆಗಳಾಗಿ ಮಾತ್ರ ಪರಿಭಾವಿಸಲಾಗುತ್ತವೆ. ಹಾಗಾಗಿ ಮಹಿಳೆಯರ ಸಾಹಿತ್ಯ ಇಲ್ಲಿ ಒಂದೋ ಉಪೇಕ್ಷಿತಗೊಳ್ಳುತ್ತದೆ. ಇಲ್ಲ, ಅನುಕಂಪದೊಂದಿಗೆ ಪ್ರೋತ್ಸಾಹಿಸಲ್ಪಡುತ್ತವೆ. ಆದರೆ ಈ ಎರಡೂ ರೀತಿಯ ನೋಟವು ಅಸಹಜವಾದುದರಿಂದ ಅದಕ್ಕೆ ಮಹಿಳಾ ಸಾಹಿತ್ಯವನ್ನು ಉಳಿದ ಸಾಹಿತ್ಯದಂತೆ ಆಕರ ಸಾಮಗ್ರಿಯಾಗಿ ಸ್ವೀಕರಿಸುವ ಹಾಗೂ ಅವುಗಳ ಮೂಲಕವೂ ಸಾಹಿತ್ಯ ಪ್ರಕ್ರಿಯೆಯನ್ನು ವಿವರಿಸಿಕೊಳ್ಳುವ ಸಾಧ್ಯತೆಗಳು ದಕ್ಕುವುದಿಲ್ಲ. ಈ ಅರ್ಥದಲ್ಲಿ ಏಕಪಕ್ಷೀಯವಾದ ಆಕರಗಳಿಂದ ರೂಪುಗೊಂಡಿರುವ ಈ ಹೊತ್ತಿನ ಎಲ್ಲ ಸಾಹಿತ್ಯ ಅಧ್ಯಯನದ ವಿಶ್ಲೇಷಣೆಗಳು, ಫಲಿತಗಳು ಆರಂಭದ ಹಂತದಲ್ಲಿಯೇ ದೃಷ್ಟಿದೋಷದ ಸಮಸ್ಯೆಗೆ ಒಳಗಾದುದಾಗಿದೆ. ಎಲ್ಲಿಯವರೆಗೆ ಪ್ರಧಾನಧಾರೆಯು ಪೂರ್ವಾಗ್ರಹಕ್ಕೊಳಪಟ್ಟು ತನ್ನ ಆಕರಗಳನ್ನು ಗುರುತಿಸಿಕೊಳ್ಳುತ್ತದೋ ಅಲ್ಲಿಯವರೆಗೆ ಕನ್ನಡ ಕಾವ್ಯ ಪರಂಪರೆಯ ನಿರ್ಮಾಣದ ಸಂಗತಿಯು ಅಪರಿಪೂರ್ಣವಾಗಿರುತ್ತದೆ.

ಪ್ರಸ್ತುತ ಅಧ್ಯಯನದ ಆಕರ ಸಾಮಗ್ರಿ

ಮಹಿಳೆಯರ ಆಧುನಿಕ ಸಾಹಿತ್ಯದ ಆರಂಭವನ್ನು ೧೯೦೦ರ ಆಸುಪಾಸಿನಲ್ಲಿಯೇ ಗುರುತಿಸಬಹುದಾದರೂ ಪ್ರಸ್ತುತ ಅಧ್ಯಯನವು ತನ್ನ ಸಾಹಿತ್ಯ ವಿಶ್ಲೇಷಣೆಯ ಮಾದರಿಗಾಗಿ ೧೯೩೦-೪೦ರ ೨ದಶಕಗಳ ಪತ್ರಿಕೋದ್ಯಮ ಬರಹವನ್ನು ಆಕರ ಸಾಮಗ್ರಿಯಾಗಿ ಅವಲಂಬಿಸಿದೆ. ಏಕೆಂದರೆ ಈ ಕಾಲಘಟ್ಟವು ಪತ್ರಿಕಾ ಸಾಹಿತ್ಯದ ದೃಷ್ಟಿಯಿಂದ ಸಮೃದ್ಧವಾದುದಲ್ಲದೆ, ಇದು ಹೆಚ್ಚಿನ ಸಂಖ್ಯೆಯಲ್ಲಿ ಲೇಖಕಿಯರನ್ನು ಅಧ್ಯಯನ ವ್ಯಾಪ್ತಿಗೆ ಒಳಪಡಿಸಿಕೊಳ್ಳಲು ನೆರವಾಗುತ್ತದೆ. ಈಗಾಗಲೇ ಗುರುತು ಗೊಂಡಿರುವ ಲೇಖಕಿಯರ ಪಟ್ಟಿಯನ್ನು ವಿಸ್ತರಿಸಲು ಅವಕಾಶ ಕಲ್ಪಿಸುತ್ತದೆ. ಮಹಿಳಾ ಸಾಹಿತ್ಯ ಎಂಬ ಪರಿಕಲ್ಪನೆಯನ್ನು ಒಂದು ಸಾಮುದಾಯಿಕ ಪ್ರಕ್ರಿಯೆಯು ನೆಲೆಯಲ್ಲಿ ಅರ್ಥೈಸಿಕೊಳ್ಳಲು ಸಹಾಯಕವಾಗುತ್ತದೆ.

ತಿರುಮಲಾಂಬನಂತಹವರು ಗ್ರಂಥಕರ್ತೆಯಾಗಿ, ಪ್ರಕಾಶಕಿಯಾಗಿ, ಪತ್ರಿಕಾ ಸಂಪಾದಕಿಯಾಗಿ ಬೆಳೆದು ನಿಂತ ವಿರಳ ಉದಾಹರಣೆಯಿದ್ದರೂ ಅಂದಿನ ಲೇಖಕಿಯರಿಗೆ ಅಭಿವ್ಯಕ್ತಿಗಾಗಿ ಒದಗಿಬಂದ ಬಹುದೊಡ್ಡ ವೇದಿಕೆ ‘ಪತ್ರಿಕೆ’ಯೇ.[9] ಈ ದಿಕ್ಕಿನಲ್ಲಿ ೧೯೩೦-೪೦ರ ಸಮಯ ಮಹಿಳಾ ಸಾಹಿತ್ಯದ ದೃಷ್ಟಿಯಿಂದ ಹೆಚ್ಚು ಸಮೃದ್ಧವಾದುದು. ಪ್ರೋತ್ಸಾಹದಾಯಕವಾದುದು. ಈ ಸಮಯ ಮಹಿಳೆ ಕನ್ನಡ ಪತ್ರಿಕೋದ್ಯಮದ ಓದುಗಳಾಗಿ ಹಾಗು ಬರಹಗಾರಳಾಗಿ ಪ್ರಧಾನವಾಗಿ ಗುರುತುಗೊಂಡ ಕಾಲ. ಪ್ರಧಾನಧಾರೆ ಗುರುತಿಸುವ ಮಧ್ಯಮವರ್ಗದ ಓದುಗ ನಿರ್ಮಾಣದ ಈ ಕಾಲಘಟ್ಟದಲ್ಲಿಯ ಶಿಕ್ಷಿತ ಗೃಹಿಣಿ ಹಾಗೂ ಉದ್ಯೋಗಸ್ಥ ಮಹಿಳೆ ಕೂಡ ಈ ವರ್ಗವನ್ನು ಸಮೃದ್ಧಗೊಳಿಸಿದವರು. ಆ ಕಾರಣಕ್ಕಾಗಿಯೇ ಮಹಿಳೆಯ ಅಭಿರುಚಿಯನ್ನು ತಿದ್ದಬೇಕೆಂಬ ‘ಯಜಮಾನಿಕೆ’ಯೊಂದಿಗೆ ಮಹಿಳೆಯರ ಅಭಿರುಚಿಗೆ ಆದ್ಯತೆ ನೀಡಿಬೇಕೆಂಬ ‘ವ್ಯಾವಹಾರಿಕ ವಿವೇಕ’ವೂ ಪತ್ರಿಕೆಗಳಿಗೆ ಮೂಡಿದ ಕಾಲ ಇದು. ಆದ್ದರಿಂದಲೇ ಈ ಕಾಲಘಟ್ಟದ ಪತ್ರಿಕೆಗಳು ಆದರ್ಶಗೃಹಿಣಿಯ ತಮ್ಮ ಅಜಂಡಾವನ್ನು ಪ್ರತಿಪಾದಿಸುವ ಭಿನ್ನದಾರಿಗಳನ್ನು ಆವಿಷ್ಕರಿಸಿಕೊಳ್ಳುತ್ತವೆ. ಹಾಗೂ ಅದಕ್ಕೆ ಹೊರತಾಗಿಯೂ ಮಹಿಳೆಯರು ಮಾತನಾಡಬಹುದೆಂಬ ನೆಲೆಗೆ ಮಹಿಳಾ ವಿಷಯವನ್ನು ವಿಸ್ತರಿಸುತ್ತಾರೆ. ಇದಕ್ಕೊಂದು ಕುತೂಹಲಕಾರಿ ಉದಾಹರಣೆ ಜಯಂತಿ ಪತ್ರಿಕೆಯ ಮೊದಲ ಸಂಚಿಕೆಯ ‘ನವಯುವತಿ’ಯ ‘ಅಡುಗೆಯ ಮನೆಯ ಅವಶ್ಯಕತೆ ಇದೆಯೇ?’ ಎಂಬ ಬರಹ ಹಾಗೂ ಅದಕ್ಕೆ ಜೋಶಿ ಶಂಕರರಾಯರು ಹಾಗೂ ಜೋಶಿ ರಾಮಾಚಾರ್ಯರು ಲೇಖನವು ಬರೆದಿರುವ ‘ಹೆಣ್ಣು ಅಡುಗೆಯ ಮನೆಯಲ್ಲಿ ಏಕೆ?’ ಎಂಬ ಪ್ರತಿಕ್ರಿಯೆಯ ಲೇಖನಗಳು.[10]

‘ಹೆಣ್ಣು ಮಕ್ಕಳ ಬುದ್ಧಿವಂತಿಕೆ, ಪ್ರತಿಭೆಗಳ ಅಡುಗೆ ಮನೆಯೊಳಗೆ ಸುಟ್ಟು ಬೂದಿಯಾಗಬೇಕೆ? ಎಂಬ ಪ್ರಶ್ನೆಯೊಂದಿಗೆ ಸ್ತ್ರೀ ಉದ್ಯೋಗ, ಸಾಮುದಾಯಿಕ ಅಡುಗೆ ಮನೆ (Community kichen) ಸ್ತ್ರೀಯರ ಆತ್ಮ ವಿಕಾಸ ಇತ್ಯಾದಿ ವಿಚಾರಗಳನ್ನು ಪ್ರತಿಪಾದಿಸುವ ನವಯುವತಿ ಎಂಬ ಹೆಸರಿನಿಂದ ಬಂದ ಲೇಖನವನ್ನು ಅತ್ಯಂತ ಆಕರ್ಷಕ ತಲೆಬರಹದೊಂದಿಗೆ ಪ್ರಕಟಿಸುವ ಜಯಂತಿ ಪತ್ರಿಕೆ ಈ ಕುರಿತಂತೆ ಸಂವಾದಕ್ಕೆ ಅವಕಾಶ ಮಾಡಿಕೊಡುತ್ತದೆ. ಇದಕ್ಕೆ ಉತ್ತರವಾಗಿ ಬಂದ ಜೋಶಿ ರಾಮಾಚಾರ್ಯರ ‘ಹೆಣ್ಣು ಅಡುಗೆ ಮನೆಯಿಂದ ಹೊರಬಂದರೆ ಆಗಬಹುದಾದ ಸಾಮಾಜಿಕ ಹಾನಿ, ನೈತಿಕ ಅಧಃಪತನ, ನೈಸರ್ಗಿಕ ಅಸಮತೋಲನ ಇತ್ಯಾದಿಗಳನ್ನು ತರ್ಕಬದ್ಧವಾಗಿ ವಾದವಾಗಿ ಜೋಡಿಸುತ್ತಲೇ ‘ನ ಸ್ತ್ರೀ ಸ್ವಾತಂತ್ರ್ಯ ಮರ್ಹತಿ’ ಎಂಬುದು ಕೇವಲ ಮನುವಿನ ಮಾತಲ್ಲ; ನಿಸರ್ಗದ ನಿಯಮ’ ಎಂದು ವಾದಿಸುತ್ತದೆ.

ಈ ಚರ್ಚೆಯು ಕುರಿತು ಮುಂದುವರಿದ ಇನ್ನಾವ ಮಾಹಿತಿಯು ದೊರೆಯದಿರುವ ಹಿನ್ನೆಲೆಯಲ್ಲಿ ಮೇಲಿನ ಲೇಖನಗಳಷ್ಟಕ್ಕೆ ಸೀಮಿತಗೊಳಿಸಿ ನೋಡುವುದಾದರೆ ಇಲ್ಲಿ ಅತ್ಯಂತ ಆಕರ್ಷಕವಾಗಿ ಎತ್ತಲ್ಪಟ್ಟ ಬಹುಮುಖ್ಯವಾಗಿ ಮಹಿಳಾ ಪ್ರಶ್ನೆಯೊಂದು ಅಷ್ಟೇ ಯುಕ್ತಪ್ರಧಾನವಾಗಿ ಸಾಂಪ್ರದಾಯಿಕ ನಿಲುವಿನ ಸಮರ್ಥನೆಯೊಂದಿಗೆ ಮುಕ್ತಾಯಗೊಳ್ಳುವುದನ್ನು ಗಮನಿಸಬಹುದು. ಪತ್ರಿಕೆಯು ತನ್ನ ಯಶಸ್ವಿನ ಭಾಗವಾಗಿ ಇಂತಹ ಭಿನ್ನ ಅಭಿರುಚಿಯ ಬಗ್ಗೆ ವಾದ-ವಿವಾದದ ವೇದಿಕೆಯನ್ನು ಒದಗಿಸಿರುವುದು ಗಮನಾರ್ಹವಾಗಿದೆ. ಜೊತೆಗೆ ಈ ಹಿಂದೆ ಪ್ರಸ್ತಾಪಿಸಲಾಗಿರುವ ಜಾ. ನ. ಇಂದಿರಾ ಅವರ ‘ಒಂದು ಪತ್ರ’ದ ಪ್ರಸ್ತಾಪವೂ ಅಂದಿನ ಪತ್ರಿಕೆಗಳು ಸ್ತ್ರೀಯರ ಭಿನ್ನ ಆಲೋಚನೆಗಳನ್ನು ದಾಖಲಿಸಲಾದರೂ ಈ ಕಾಲಘಟ್ಟದಲ್ಲಿ ಅವಕಾಶ ಮಾಡಿಕೊಟ್ಟಿದೆ ಎಂಬುದನ್ನು ತೋರಿಸುತ್ತದೆ. ಈ ಕಾರಣಕ್ಕಾಗಿ ೧೯೩೦-೪೦ರ ದಶಕದ ಪತ್ರಿಕೆಗಳು ಮಹಿಳಾ ಅಭಿವ್ಯಕ್ತಿಯ ದೃಷ್ಟಿಯಿಂದ ಮಹತ್ವದ ಆಕರ ಸಾಮಗ್ರಿಯಾಗುತ್ತದೆ.

ಆಧುನಿಕ ಲೇಖಕರ ಕಾದಂಬರಿ ಹಾಗೂ ಹೊಸಗನ್ನಡ ಕಾವ್ಯದ ಬೆಳವಣಿಗೆಯ ಸಂದರ್ಭದಲ್ಲಿ ಕಂಡುಬರುವ ಚಾರಿತ್ರಿಕ ಕಾಲಾನಿಕ್ರಮಣಿಕೆಯಂತೆಯೇ ಲೇಖಕಿಯ ಬರವಣಿಗೆಯಲ್ಲಿ ಕೂಡ ಆಧುನಿಕ ಗದ್ಯ-ಪದ್ಯಗಳ ಬೆಳವಣಿಗೆಯ ನಡುವೆ ಒಂದೆರಡು ದಶಕಗಳ ಅಂತರವಿದೆ. ೨೦ನೇ ಶತಮಾನದ ಮೊದಲ ದಶಕದಿಂದಲೇ ಲೇಖಕಿಯರ ಆಧುನಿಕ ಗದ್ಯದ ಮಾದರಿಗಳು ದೊರೆತರೆ ಮೂರನೇ ದಶಕದ ಹೊತ್ತಿಗೆ ಆಧುನಿಕ ಕಾವ್ಯದ ಸ್ಪಷ್ಟ ನಿದರ್ಶನಗಳು ಕಾಣತೊಡಗುತ್ತವೆ. ಹಾಗಾಗಿ ಲೇಖಕಿಯರ ಆಧುನಿಕ ಸಾಹಿತ್ಯದ ಗದ್ಯ ಪದ್ಯಗಳನ್ನೊಳಗೊಂಡ ಒಟ್ಟು ನೋಟಕ್ಕೆ ೧೯೩೦-೪೦ರ ದಶಕ ಹೆಚ್ಚು ಉಪಯುಕ್ತವಾದುದು.

ಈ ಕಾಲಘಟ್ಟವು ಮಹಿಳೆಯ ಗದ್ಯ ಪದ್ಯ ರಚನೆಗಳ ಕುರಿತ ತೌಲನಿಕ ಚರ್ಚೆಯು ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಈ ಸಮಯದಲ್ಲಿ ಲೇಖಕಿಯರು ಅತ್ಯುತ್ಸಾಹದಿಂದ ಸಾಹಿತ್ಯದ ಭಿನ್ನ ಪ್ರಕಾರಗಳಲ್ಲಿ ಕೈಯಾಡಿಸಲು ಪ್ರಯತ್ನಿಸಿರುವುದನ್ನು ಕಾಣಬಹುದಾದರೂ ಅವುಗಳನ್ನು ಗದ್ಯ-ಪದ್ಯ ಮಾದರಿಗಳಲ್ಲಿ ಸಿದ್ಧಪಡಿಸಿಕೊಂಡು, ಈ ಮಾದರಿಯ ಪ್ರಾತಿನಿಧಿಕ ಪ್ರಕಾರವಾಗಿ ಅವರ ಅಂದಿನ ಪ್ರಧಾನ ಅಭಿವ್ಯಕ್ತಿ ಮಾಧ್ಯಮವಾದ ಸಣ್ಣತೆ ಹಾಗೂ ಕವಿತೆಗಳನ್ನು ಸಾಹಿತ್ಯ ವಿಶ್ಲೇಷಣೆಗೆ ಬಳಸಲಾಗಿದೆ. ಹಾಗೂ ಇವುಗಳು ಈವರೆಗೆ ನಡೆಸಿರುವ ಪಾಯ ಸಂಶೋಧನೆಯ ಶೋಧದ ವ್ಯಾಪ್ತಿಯಿಂದ ಹೊರಗುಳಿದವಾಗಿವೆ.

ಈಗಾಗಲೇ ಪ್ರಸ್ತಾಪಿಸಿರುವಂತೆ ೧೯೩೦-೪೦ರ ದಶಕದ ಪತ್ರಿಕೋದ್ಯಮದಲ್ಲಿನ ಮಹಿಳೆಯ ಬರಹವು ಪ್ರಾತಿನಿಧಿಕವಾದುದಾದರೂ, ಅದನ್ನು ಈಡೇರಿಸಿಕೊಳ್ಳುವ ದಿಕ್ಕಿನಲ್ಲಿ ಅದರ ವೇದಿಕೆಯ ನಿರ್ಮಾಣದ ಪ್ರಕ್ರಿಯೆಯು ಸಾಕಷ್ಟು ಪ್ರಮುಖ ಪಾತ್ರವಹಿಸಿರುತ್ತದೆ. ಪ್ರಾಧಾನಧಾರೆಯ ಪ್ರೋತ್ಸಾಹ, ನಿರ್ದೇಶನಗಳೊಂದಿಗೆ ಸ್ತ್ರೀಯರು ತೋರಿಸಿದ ಪರಿಶ್ರಮದ ಫಲವಾಗಿ ೧೯೩೦-೪೦ರ ದಶಕದ ಪತ್ರಿಕೆಳಲ್ಲಿ ಮಹಿಳೆಯರು ಕಣ್ಗಾತ್ತಾರೆ. ಈ ಕಾರಣಕ್ಕಾಗಿ ಸಾಹಿತ್ಯ ಸನ್ನಿವೇಶದ ವಿಶ್ಲೇಷಣೆಯ ಸಂದರ್ಭದಲ್ಲಿ ೧೯೦೦ರ ಸಂದರ್ಭದಿಂದಲೇ ಮಾಹಿತಿಯನ್ನು ಆಕರವಾಗಿ ಕಲೆಹಾಕಿ ಬಳಸಿಕೊಳ್ಳಲಾಗಿದೆ.

ಈಗಾಗಲೇ ಗುರುತುಗೊಂಡಿರುವ ನವೋದಯ, ನವ್ಯ ಇತ್ಯಾದಿ ಪಂಥಾಧಾರಿತ ಸಾಹಿತ್ಯ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ೧೯೩೦-೪೦ರ ಲೇಖಕಿಯರ ಸಾಹಿತ್ಯ ರಚನೆಯನ್ನು ಗಮನಿಸುವುದಾದರೆ ಈ ಸಂದರ್ಭದ ಪದ್ಯಗಳು ಸಂಪೂರ್ಣವಾಗಿ ನವೋದಯ ಪರಂಪರೆ ಎಂದು ಗುರುತಿಸಲಾಗಿರುವ ಮಾದರಿಯಲ್ಲಿ ರಚನೆಗೊಂಡಿದ್ದಾಗಿದೆ. ಇವುಗಳಲ್ಲಿ ಪ್ರಕೃತಿಗೀತೆ, ಭಾವಗೀತೆ, ಶೋಕಗೀತೆ, ಕಥನಕವನ, ದೇಶಭಕ್ತಿಗೀತೆ, ನಾಡಗೀತೆ ಇತ್ಯಾದಿ ಎಲ್ಲ ವಿಧಗಳನ್ನು ನಾವು ಕಾಣಬಹುದಾಗಿದೆ. ನವೋದಯ ಕಾವ್ಯದ ರಮ್ಯತೆ, ಭಾವುಕತೆ, ಆದರ್ಶ ಇತ್ಯಾದಿ ಭಾವಗಳನ್ನು ಈ ಕವಿತೆಗಳು ನವೋದಯದ ಲಯಗಾರಿಕೆ ಯಲ್ಲಿಯೇ ಕಟ್ಟಿಕೊಡಲು ಯತ್ನಿಸಿವೆ. ಅಂದಿನ ಪ್ರಮುಖ ಕವಿಗಳೆಂದು ಗುರುತುಗೊಂಡಿರುವವರ ರಚನೆಗಳಿಗೆ ಸಂವಾದಿಯಾಗಿಯೇ ಇವು ಕಂಡುಬರುತ್ತವೆ. ಹಾಗಾಗಿ ಇದುವರೆಗಿನ ಅಧ್ಯಯನಗಳು ಯಾವ ಆಕರಗಳನ್ನು ಮಾನ್ಯ ಮಾಡಿ ನವೋದಯ ಕಾವ್ಯ ಎಂಬ ಪರಿಕಲ್ಪನೆಯನ್ನು ವ್ಯಾಖ್ಯಾನಿಸಿದೆಯೋ ಅದಕ್ಕೆ ಅಗತ್ಯವಾದ ಆಕರವಾಗಿ ಗುರುತುಗೊಳ್ಳುವ ಸ್ವಭಾವ-ಸತ್ವವನ್ನು ಮಹಿಳೆಯರ ಕವಿತೆಗಳು ಹೊಂದಿವೆ. ಈ ಅರ್ಥದಲ್ಲಿ ಮಹಿಳೆಯರ ಕವಿತೆಗಳು ಕನ್ನಡ ಸಾಹಿತ್ಯ ಅಧ್ಯಯನದ ಸಮರ್ಥ ಆಕರವಾಗಿ ಬಳಕೆಗೊಳ್ಳಬಲ್ಲವಾಗಿದೆ. ಆದರೆ ಮಹಿಳೆಯರ ಈ ಸಾಹಿತ್ಯ ಪರಿಶ್ರಮವನ್ನು ಅನುಕರಣೆಯ ವಿಚಾರವಾಗಿ ಪರಿಗಣಿಸಿ ಪ್ರಧಾನಧಾರೆಯು ಪಕ್ಕಕ್ಕಿಟ್ಟು ಮುಂದುವರಿಯುತ್ತದೆ. ನವೋದಯ ಕಾವ್ಯ ನಿರ್ಮಾಣದ ಅಧಿಕೃತ ವಕ್ತಾರರಾಗಿ ಲೇಖಕರು ಮಾತ್ರ ಗುರುತುಗೊಳ್ಳುತ್ತಾರೆ. ಅಂತಿಮವಾಗಿ ಈ ವಾರಸದಾರತ್ವವು ಒಂದಿಬ್ಬರು ಲೇಖಕರ ಹೆಸರಿನಲ್ಲಿ ಕೇಂದ್ರಿಕೃತಗೊಳ್ಳುತ್ತವೆ. ಪುರುಷರಲ್ಲೂ ಕೆಲವರು ಪರಂಪರೆಯ ನಿರ್ಮಾಣಕಾರರಾಗಿ, ಪ್ರಧಾನರಾಗಿ ಉಳಿದವರು ಅಪ್ರಧಾನರಾಗುತ್ತಾರೆ. ಈ ಅಪ್ರಧಾನತೆಯು ತೀವ್ರಗೊಂಡಂತೆ ಮಹಿಳೆಯರು ಅದೃಶ್ಯರಾಗುತ್ತಾರೆ, ಹೂಲ್ಪಡುತ್ತಾರೆ.

ಈ ಕಾಲಘಟ್ಟದ ಮಹಿಳೆಯರ ಕಾವ್ಯ ರಚನೆಯು ನವೋದಯ ಪರಂಪರೆಯ ಗುಣಲಕ್ಷಣವನ್ನೇ ಹೊಂದಿದ್ದರೂ, ಅದು ಮಹಿಳಾ ಸಂವೇದನೆಯ ದೃಷ್ಟಿಯಿಂದ ಭಿನ್ನವಾದ ಓದಿಗೂ ಅವಕಾಶ ಕಲ್ಪಿಸಿಕೊಡಬಲ್ಲದಾಗಿದೆ. ಇಲ್ಲಿನ ಬಾಲೆಯ ಗೋಳು, ಉತ್ತರಾ ವಿಲಾಪ, ಹೊಲೆಯರ ಹೆಣ್ಣು, ಹೆಣ್ಣು-ಹೆಣ್ಣು, ಹೊಣೆಯಾರು ಕಂದ ನೀನೆನ್ನ ಕಣ್ಣಂಗಳ ದೊಳಾಡುತಿರು ಇತ್ಯಾದಿ ಕವಿತೆಗಳು ವೈಧವ್ಯ, ಸ್ತ್ರೀ ದೌರ್ಜನ್ಯ, ತಾಯ್ತನ ಇತ್ಯಾದಿ ಮಹಿಳಾ ವಿಷಯಗಳನ್ನು ಸಮಸ್ಯಿಕರಿಸಿಕೊಂಡ ಕವಿತೆಗಳಾಗಿವೆ. ಅದರಲ್ಲಿ ಉತ್ತರ ವಿಲಾಪ ಕವಿತೆಯು ಪೌರಾಣಿಕ ಸ್ತ್ರೀ ಪಾತ್ರವೊಂದನ್ನು ಆಧುನಿಕ ಸಂವೇದನೆಯೊಂದಿಗೆ ಪುನಾರಚಿಸುವ ಮೂಲಕ ವೈಧವ್ಯದ ಕುರಿತ ಸಮಕಾಲೀನ ಚರ್ಚೆಯನ್ನು ಬೆಳೆಸುವುದಾಗಿದೆ. ಅಂದು ಮಹತ್ವದ ಸಾಮಾಜಿಕ ಸಮಸ್ಯೆಗಳಲ್ಲಿ ಒಂದಾಗಿ ಚರ್ಚಿಸಲ್ಪಡುತ್ತಿದ್ದ ವೈಧವ್ಯವನ್ನು ಈ ಕವಿತೆ ‘ಆರಿದ್ದರೇನೆನಗೆ, ಹೃನ್ಮಂದಿರ ಮೂರ್ತಿ’ ಎಂಬ ನೆಲೆಯಲ್ಲಿ ವೈಯಕ್ತೀಕರಿಸಿ ಕೊಂಡು ವಿಶ್ಲೇಷಿಸುತ್ತದೆ. ಈ ಕವಿತೆಯ ಅಂತಿಮ ಆಶಯವು ಪುರುಷಪ್ರಧಾನತೆಯ ಚೌಕಟ್ಟಿನೊಳಗೆ ರೂಪಿತವಾದುದಾದರೂ ಅದು ಸ್ಪಷ್ಟವಾಗಿ ಪುರುಷಪ್ರಧಾನ ಸಮಾಜದ ವೈಧವ್ಯವು ಹೆಣ್ಣಿಗೆ ತರುವ ಒಂಟಿತನವನ್ನು ದಾಖಲಿಸುತ್ತದೆ. ಹೆಣ್ಣು ಹೆತ್ತವರನ್ನು, ಒಡಹುಟ್ಟಿದವರನ್ನು ತೊರೆದು ಬರುವ ವಿವಾಹ ಸಂದರ್ಭ, ವೀರಸತಿ ನೀನಹುದು ಧೈರ್ಯವನು ತಾಳು ಎನ್ನುವ ಮೂಲಕ ಸಹಗಮನ ಪದ್ಧತಿಯನ್ನು ಈ ಸಮಾಜವು ತನ್ನ ಅಗತ್ಯಕ್ಕೆ ತಕ್ಕಂತೆ ವಿವರಿಸಿಕೊಳ್ಳುವ ಕ್ರಮವನ್ನು ಇಲ್ಲಿ ದಾಖಲಿಸಲಾಗಿದೆ. ಅಂತೆಯೇ ಬಾಲೆಯ ಗೋಳು ಕವಿಯು ವೈಧವ್ಯದ ಅನಾಹುತವನ್ನು ಬಾಲವಿಧವೆಯೊಬ್ಬಳ ಕಣ್ಣಿನಿಂದಲೇ ವಿಶ್ಲೇಷಿಸುವ ಪ್ರಯತ್ನವಾಗಿ ಗಮನ ಸೆಳೆಯುತ್ತದೆ. ಮಹತ್ವದ ಸಾಮಾಜಿಕ ಸಮಸ್ಯೆಯಾಗಿ, ಸಂಸ್ಕೃತಿಯ ಪ್ರಶ್ನೆಯಾಗಿ ವೈಚಾರಿಕ ಜಗತ್ತಿನಲ್ಲಿ ಪ್ರಸ್ತುತಗೊಳ್ಳುತ್ತಿದ್ದ ವೈಧವ್ಯವನ್ನು ಪುಟ್ಟ ಬಾಲೆಯೊಬ್ಬಳ ಅರಿಯಲಾರದ ಪ್ರಶ್ನೆಯಾಗಿ ಇಲ್ಲಿ ಸಮಸ್ಯೀಕರಸಿಕೊಂಡಿರುವುದು ಮಾರ್ಮಿಕವಾಗಿದೆ.

[1] ೧೮೦೦-೧೯೧೦ರ ಕಾಲಘಟ್ಟದ ಭಾರತೀಯ ಸಾಹಿತ್ಯದ ಇತಿಹಾಸವನ್ನು ಸಿಸಿರಕುಮಾರ್‌ದಾಸ್ ‘ಪಶ್ಚಿಮದ ಪ್ರಭಾವ, ಭಾರತದ ಪ್ರತಿಕ್ರಿಯೆ’ ಎಂಬುದಾಗಿ ಕಟ್ಟಿಕೊಡುತ್ತಾರೆ. Sisir Kumar Das, A History of Indian Literature, 1800-1910 Sahitya Akademi, New Delhi, 2000 (F. P. 1991)

[2] ಕುರ್ತಕೋಟಿ, ಯುಗಧರ್ಮ ಮತ್ತು ಸಾಹಿತ್ಯ ವಿಕಾಸ, ಮನೋಹರ ಗ್ರಂಥಮಾಲೆ, ಧಾರವಾಡ, ೨೦೦೨, ಪು. ೧

[3] ಶ್ರೀನಿವಾಸ ಹಾವನೂರ, ಹೊಸಗನ್ನಡ ಅರುಣೋದ್ಯಯ, ಕರ್ನಾಟಕ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೦

[4] ಶಿವಣ್ಣ ಎನ್., ಕರ್ನಾಟಕ ಕವಿಚರಿತೆಯ ಅನುಕ್ತ ಕೃತಿ ಸೂಚಿ, ಕನ್ನಡ ಅಧ್ಯಯನ ಸಂಸ್ಥೆ, ಶ್ರೀನಿವಾಸ ಹಾವನೂರರು ತಮ್ಮ ಹೊಸಗನ್ನಡ ಅರುಣೋದಯ ಪತ್ರಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ.

[5] Sisir Kumar Das, A History of Indian Literature, 2000, Pp. 29

[6] ಪದ್ಮಾವತಿದೇವಿ, ಅಂಗಡಿ, ಮಹಿಳಾ ಗೋಷ್ಠಿಯ ಅಧ್ಯಕ್ಷ ಭಾಷಣ, ೭೪ನೇ ಕನ್ನಡ ಸಾಹಿತ್ಯ ಸಮ್ಮೇಳನ, ರಬಕವಿ, ೧೯೪೪

[7] ಈ ಮಾತುಗಳಿಗೆ ಎಚ್. ವಿ. ಸಾವಿತ್ರಮ್ಮನವರು ಅಪವಾದವಾಗಿದ್ದಾರೆ.

[8] ಮನೋರಮಾ ಎಂ. ಭಟ್ (ಸಂ), ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಲೇಖಕಿಯರು, ಕರಾವಳಿ ಲೇಖಕಿಯರ ವಾಚಕಿಯರ ಸಂಘ, ದ. ಕ. ೧೯೯೬

[9] ಉಷಾ ಎಂ., ಮಹಿಳೆ ಮತ್ತು ಪತ್ರಿಕೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ೧೯೯೯ ಪು.

[10] ನವಯುವತಿ, ಅಡುಗೆಯ ಮನೆಯ ಅವಶ್ಯವಿದೆಯೆ? ಜಯಂತಿ ಸಂ. ೧, ಸಂ. ೧, ಧಾರವಾಡ, ೧೯೩೬, ಜೋಶಿರಾಮಾಚಾರ್ಯ, ಹೆಣ್ಣು ಅಡುಗೆ ಮನೆಯಲ್ಲಿ ಏಕೆ?, ಜಯಂತಿ ಸಂ., ಸಂ. ೫, ಧಾರವಾಡ, ೧೯೩೮, ಜೋಶಿ ಶಂಕರರಾಯರ ಬರಹವನ್ನು ನೋಡಲು ಸಾಧ್ಯವಾಗಿಲ್ಲ.