ಅಕ್ಕಮಹಾದೇವಿಯ ಸಂದರ್ಭದಲ್ಲಿ ಪ್ರಧಾನಧಾರೆ ಹಾಗೂ ಸ್ತ್ರೀವಾದಿ ವಿಮರ್ಶೆಗಳ ಈ ಕೈಕುಲುವಿಕೆಯು ನಮ್ಮನ್ನು ಈ ಕೆಳಗಿನ ಮೂರು ಭಿನ್ನ ದಿಕ್ಕಿನಲ್ಲಿ ಆಲೋಚಿಸುವಂತೆ ಒತ್ತಾಯಿಸುತ್ತವೆ.

೧. ಭಿನ್ನ ತಾತ್ವಿಕ ಹಾಗೂ ರಾಜಕೀಯ ನಿಲುವುಗಳನ್ನು ಹೊಂದಿರುವ ಮೇಲಿನ ಎರಡು ಸಾಹಿತ್ಯ ವಿಶ್ಲೇಷಣಾ ಕ್ರಮಗಳನ್ನು ಸಹಮತದೆಡೆಗೆ ತಂದು ನಿಲ್ಲಿಸುವ ಯಾವ ಅಂಶ ಅಕ್ಕನ ಬದುಕು-ಬರಹದಲ್ಲಿದೆ? ಅಥವಾ

೨. ಕನ್ನಡದ ಸ್ತ್ರೀವಾದಿ ಸಾಹಿತ್ಯ ವಿಮರ್ಶೆಗೆ ಇರುವ ಪ್ರಧಾನಧಾರೆಯೊಂದಿಗಿನ ಭಿನ್ನಾಭಿಪ್ರಾಯ ಮೇಲುಸ್ಥರದ್ದು ಮಾತ್ರವೇ ಆಗಿರಬಹುದೇ? (ಸರಳವಾಗಿ ಬಗೆಹರಿಸಬಹುದಾದುದೇ) ಅಥವಾ

೩. ಪ್ರಧಾನಧಾರೆಯ ಸಾಹಿತ್ಯ ವಿಮರ್ಶೆಯ ಲಿಂಗರಾಜಕಾರಣ ಕುರಿತಾದ ಸ್ತ್ರೀವಾದದ ಅನುಮಾನಗಳೇ ಪುನರ್‌ಪರಿಶೀಲನೆಗೊಳಗಾಗಬೇಕಾದುದೆ?

ಅಂತೆಯೇ ಆಧುನಿಕ ಸಂದರ್ಭದಲ್ಲಿ ತಿರುಮಲಾಂಬ ತಮ್ಮ ನಭಾ ಕಾದಂಬರಿಯನ್ನು ಬರಯುವ ಸಂದರ್ಭದಲ್ಲಿ ಸ್ವವೃತ್ತಾಂತವಾಗಿ ಪರಿಗಣಿಸಬಾರದು ಎಂಬುದನ್ನು ಸ್ಪಷ್ಪಪಡಿಸುತ್ತಾ, ಒಬ್ಬ ಲೇಖಕನ ಸಂದರ್ಭದಲ್ಲಿ ಹೇಗೆ ಬದುಕು-ಬರಹವನ್ನು ಪ್ರತ್ಯೇಕಿಸಿ ನೋಡಬಹುದೋ ಹಾಗೆ ತಮ್ಮ ಕೃತಿಯನ್ನು ಆಸ್ವಾದಿಸಬಹುದೆಂದು ಸೂಚಿಸುತ್ತಾರೆ.

ಅನೇಕರು ಸ್ವಚರಿತೆ ಎಂದು ಭ್ರಾಂತರಾಗಬಹುದು. ಆದರೆ ಸ್ತ್ರೀಯು ನಭಳಷ್ಟು ಯೋಗ್ಯತೆಯುಳ್ಳವಳೆಂದು ಮಾತ್ರ ಹೇಳಲಾರೆ.[1]

ಹೀಗೆ ಮಹಿಳಾ ಸಾಹಿತ್ಯ ಮತ್ತು ಮಹಿಳಾ ಸಾಹಿತ್ಯ ಪರಂಪರೆಯ ಕುರಿತ ಕನ್ನಡದ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಪ್ರಯತ್ನಗಳು ಅಪಾರ ಪರಿಶ್ರಮದಿಂದ ನಡೆದುದಾದರೂ, ಅವು ಬಳಸಿಕೊಂಡ ವೈಧಾನಿಕತೆಯು ಪ್ರಧಾನಧಾರೆಯೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ತಳುಕು ಹಾಕಿಕೊಂಡಿರುವುದೇ ಆಗಿದೆ. ಹಾಗೆ ನೋಡಿದರೆ ಪರಂಪರೆಯೊಂದರ ನಿರ್ಮಾಣದ ಮೂಲಕ ತನ್ನ ರಾಜಕಾರಣವನ್ನು ಈಡೇರಿಸಿಕೊಳ್ಳಬಹುದೆಂಬ ಆಶಯವೇ ಮೂಲತಃ ಪ್ರಧಾನಧಾರೆಯದು. ಈ ಆಶಯದಿಂದಾಗಿಯೇ ಕಳೆದ ೧೨೫ ವರ್ಷಗಳಿಂದ ಕನ್ನಡ ರಾಜಕಾರಣವು ಸಾಹಿತ್ಯ ಚರಿತ್ರೆಯ ನಿರ್ಮಾಣದಲ್ಲಿ ಚರ್ಚೆಯಲ್ಲಿ ನಿರತವಾಗಿದೆ. ಹಾಗಾಗಿ ಈ ಪ್ರಧಾನಧಾರೆಯ ರಾಜಕಾರಣವನ್ನು ತನ್ನ ಆಶಯಕ್ಕನುಗುಣವಾಗಿ ದುಡಿಸಿಕೊಳ್ಳುವ ಸಂದರ್ಭ ಅತ್ಯಂತ ಕ್ಲಿಷ್ಟವಾದುದು. ಇಲ್ಲಿ ಅರಿವಿದ್ದು, ಅರಿವಿಲ್ಲದೆಯೋ ಅನುಕರಣೆಗಳು, ಸಹಯೋಗಗಳು ಸಿದ್ಧಿಸಿ ಬಿಡುತ್ತವೆ. ಆದ್ದರಿಂದಲೇ ಕನ್ನಡದ ಸಂದರ್ಭದಲ್ಲಿನ ಮಹಿಳಾ ಸಾಹಿತ್ಯದ ಪರಂಪರೆಯ ಹಂಬಲವು ಲೇಖಕರ ಎದುರು ನ್ಯಾಯಕ್ಕಾಗಿ ತನ್ನ ಬೇಡಿಕೆ ಮಂಡಿಸುತ್ತಲೇ, ಮಹಿಳೆಯರ ಎಲ್ಲ ಬರವಣಿಗೆ ನ್ಯಾಯ ಸಲ್ಲಿಸುವುದರಲ್ಲಿ ಸೋಲುತ್ತದೆ. ಮಹಿಳಾ ಸಾಹಿತ್ಯವನ್ನು ಅಖಂಡವಾಗಿ ಹಿಡಿದಿಡುವುದರಲ್ಲಿ ತೊಡಕುಗಳುಂಟಾಗುತ್ತದೆ. ಅಂತೆಯೇ ಮಹಿಳೆಯರ ಬದಲಾದ ಆಲೋಚನಾ ಕ್ರಮವನ್ನು, ಕ್ರಿಯೆ-ಪ್ರಕ್ರಿಯೆಗಳನ್ನು ಅರಿತು ಅವುಗಳ ಮೇಲೆ ತನ್ನ ಹಿಡಿತ ಸಾಧಿಸುವುದನ್ನು ಪ್ರಧಾನಧಾರೆಯು ನಿರಂತರವಾಗಿ ಮಾಡುತ್ತಲೇ ಬಂದಿರುವುದಕ್ಕೆ ಸಾಕ್ಷಿ ಎನ್ನುವಂತೆ ಈ ಸಾಹಿತ್ಯ ಪರಂಪರೆಯ ನಿರ್ಮಾಣದ ಸಂದರ್ಭದಲ್ಲಾದರೂ ಅವರ ನಿರ್ದೇಶನಗಳು, ನಿರ್ವಚನಗಳು ಸಹಯೋಗದ, ಸಂವಾಸದ, ಪ್ರೋತ್ಸಾಹದ ರೂಪದಲ್ಲಿ ಮುಂದುವರಿದೆ ಇದೆ.

ಪ್ರೋತ್ಸಾಹದ ಸಂಕೋಲೆಯೊಳಗೆ ಮೂಡಿದ ಹೆಜ್ಜೆ ಗುರುತುಗಳು

ಪಿತೃಪ್ರಧಾನ ಸಾಮಾಜಿಕ ರಚನೆಯಲ್ಲಿ ಬರವಣಿಗೆ ಸ್ತ್ರೀಯರಿಗೆ ಅಸಾಂಪ್ರದಾಯಿಕವಾದುದು ಹಾಗೂ ದುಬಾರಿಯಾದುದೂ ಆದ ಚಟುವಟಿಕೆ. ಸ್ತ್ರೀಯ ಎಲ್ಲ ಅಭಿವ್ಯಕ್ತಿ ‘ಸಾಧ್ಯತೆ’ಗಳೇ ನಿರಾಕರಣೆಗೊಂಡ/ನಿಯಂತ್ರಿಸಲ್ಪಟ್ಟ ಸಮಾಜದಲ್ಲಿ ಅಭಿವ್ಯಕ್ತಿ ‘ಸಾಧನೆ’ ಯೆಂಬುದು ತೀರ ಅಪರೂಪದ ಸಂಗತಿ. ಆ ಕಾರಣಕ್ಕಾಗಿಯೇ ಈ ಸಮಾಜದಲ್ಲಿ ಲೇಖಕಿಯೊಬ್ಬಳ ಹುಟ್ಟು ಎಷ್ಟು ಅಪರೂಪದ ಸಂಗತಿಯೇ ಅಷ್ಟೇ ಅಪರೂಪದ ಸಂಗತಿ ಅವಳೊಬ್ಬ ಪೂರ್ಣಪ್ರಮಾಣದ ಲೇಖಕಿಯಾಗಿ ಮುಂದುವರಿಯುವುದು: ತನ್ನ ಸಾಹಿತ್ಯ ಚಟುವಟಿಕೆಯನ್ನು ನಿರಂತರವಾಗಿ ಉಳಿಸಿಕೊಳ್ಳುವುದು. ಸಮಾಜದ ಪ್ರೋತ್ಸಾಹ ಅಥವಾ ಪ್ರತಿಕೂಲಗಳಿಂದ ಲೇಖಕಿಯೊಬ್ಬಳು ಹುಟ್ಟಬಹುದಾದರು, ಸಾಧನೆ ಮಾಡಬಹುದಾದರೂ ಅದು ಮೂಲಭೂತವಾಗಿಯೇ ಒಂದು ಭಿನ್ನ ಸಂಗತಿಯಾಗಿರುತ್ತದೆ. ಏಕೆಂದರೆ ಪ್ರತಿಭೆ ಮತ್ತು ಪ್ರೋತ್ಸಾಹಗಳನ್ನು ಹೊರತುಪಡಿಸಿಯೂ ಅವಳ ಮುಂದೆ ಭಿನ್ನವಾದೊಂದು ಸಾಮಾಜಿಕ ಸಂದರ್ಭವಿರುತ್ತದೆ.

ಲಿಂಗಭೇದಾದಾರಿತ ಸಮಾಜದಲ್ಲಿ ಪುರುಷನೊಬ್ಬನು ಲೇಖಕನಾಗುವ ಪ್ರಕ್ರಿಯೆ ಹಾಗೂ ಸ್ತ್ರೀಯೊಬ್ಬಳು ಲೇಖಕಿಯಾಗುವ ಪ್ರಕ್ರಿಯೆಗೆ ಅಪಾರ ವ್ಯತ್ಯಾಸವಿದೆ. ಈ ವ್ಯತ್ಯಾಸ ಕೆಲವೊಮ್ಮೆ ವ್ಯಕ್ತವಾದುದಾಗಿರಬಹುದು. ಇನ್ನು ಕೆಲವು ಬಾರಿ ಅವ್ಯಕ್ತಗೊಂಡುದಾಗಿರಬಹುದು. ಲಿಂಗ ಬೇದದ ಸಮಾಜದಲ್ಲಿ ಮಹಿಳೆಗೆ ಲೇಖಕಿಯಾಗಬೇಕೆಂಬ ಕನಸು ಬೀಳದಿರುವ ಸಾಧ್ಯತೆಗಳಿವೆ. ಲೇಖಕಿಯಾದ ನಂತರವೂ ಹೆಚ್ಚಿನದನ್ನು ಸಾಧಿಸಲಾರದ ಅಸಹಾಯಕತೆ, ಸಾಧಿಸಿದ್ದರ ಬಗೆಗಿನ ಅಪನಂಬಿಕೆಗಳು ಅವಳನ್ನೂ ಕಾಡಬಹುದು. ಹೆಣ್ಣು ಎನ್ನುವ ಕಾರಣಕ್ಕಾಗಿಯೇ ಉಂಟಾಗುವ ಕೌಟುಂಬಿಕ ಅಡಚಣೆಗಳು, ಹೊಣೆಗಾರಿಕೆಗಳು, ಸಮಾಜದ ನಿರುತ್ಸಾಹ, ನೀರಸ ಪ್ರತಿಕ್ರಿಯೆಗಳು, ಸಾಮಾಜಿಕ ನಿರ್ಬಂಧಗಳು ಯಾವ ಹಂತದಲ್ಲಿ ಬೇಕಾದರೂ ಅವಳನ್ನು ಹಿಮ್ಮೆಟ್ಟಿಸಬಹುದು. ಕೊನೆಗೆ ಸ್ಪಷ್ಟವಾದ ಏನೊಂದು ಕಾರಣವಿಲ್ಲದೆಯೂ ಅವಳು ತನ್ನಿಂದ ತಾನೇ ಅದರಿಂದ ದೂರ ಸರಿಯಬಹುದು. ತನ್ನ ಬದುಕಿನ ಪ್ರಾತಿನಿಧ್ಯಗಳಲ್ಲಿ ಬರಹವನ್ನು ಆಯ್ಕೆ ಮಾಡಿಕೊಳ್ಳದಿರುವ ‘ವೈಚಾರಿಕ ಜಾಣ್ಮೆ’ ಯನ್ನು ಆಕೆ ತೋರಬಹುದು.

ಹೀಗೆ ಸ್ತ್ರೀಯ ಮೇಲೆ ಪುರುಷಪ್ರಧಾನ ಸಮಾಜವು ಬೀರುವು ಪ್ರತ್ಯಕ್ಷ-ಪರೋಕ್ಷ ಒತ್ತಡಗಳೆಲ್ಲವೂ ಒಂದು ರೀತಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೇಗೆ ಶಾಲೆ ಬಿಡುವಿಕೆಯ ಪ್ರವೃತ್ತಿಯನ್ನು ಹುಟ್ಟು ಹಾಕುವುದೋ ಹಾಗೆ ಸಾಹಿತ್ಯ ಕ್ಷೇತ್ರದಲ್ಲೂ ಹುಟ್ಟು ಹಾಕಬಹುದು. ತಮ್ಮ ಒಂದೆರಡು ಬರಹಗಳಲ್ಲಿ ಭರವಸೆ ಮೂಡಿಸಿದವರು ನಂತರ ಕಣ್ಮರೆಯಾಗಬಹುದು ಉದಾಹರಣೆಗೆ, ಮದ್ರಾಸಿನ ಅಮೆಚ್ಯೂರ ನಾಟಕ ಸಂಸ್ಥೆಯು ನಡೆಸಿದ ನಾಟಕ ಸ್ಪರ್ಧೆಯಲ್ಲಿ ತಿರುಮಲೆ ರಾಜಮ್ಮ ಮತ್ತು ಕೈಲಾಸಂ ಭಾಗವಹಿಸಿ ಕ್ರಮವಾಗಿ ಪ್ರಥಮ ಮತ್ತು ಸಮಾಧಾನಕರ ಬಹುಮಾನವನ್ನು ಪಡೆದರಾದರು ಮುಂದೆ ಇವರಿಬ್ಬರು ಸಾಹಿತ್ಯಿಕವಾಗಿ ಬೆಳೆದ ರೀತಿಯಲ್ಲಿ ಅಪಾರ ವ್ಯತ್ಯಾಸವಿದೆ. ಹಾಗೆಯೇ ೧೯೪೯ರ ಜಯಂತಿ ಪತ್ರಿಕೆಯನ್ನು ಗಮನಿಸುವುದಾದರೆ ಅಲ್ಲಿನ ಸಾಹಿತ್ಯ ವಿಮರ್ಶೆಯ ಸ್ಪರ್ಧೆಯಲ್ಲಿ ಎಂ. ಚಿದಾನಂದಮೂರ್ತಿ, ಕೆ. ವಿ. ಸುಬ್ಬಣ್ಣ ಮುಂತಾದವರೊಂದಿಗೆ ಕುಮಾರಿ ಪದ್ಮಾವತಿ ಬುರ್ಲಿ ಎನ್ನುವವರು ಅತ್ಯುತ್ತಮ ವಿಮರ್ಶೆಯ ಬಹುಮಾನವನ್ನು ಒಂದಲ್ಲ ಎರಡು ಬಾರಿ ಪಡೆದಿರುವುದು ಕಂಡುಬರುತ್ತದಾದರೂ ಮುಂದೆ ಆಕೆಯ ಸಾಹಿತ್ಯಿಕ ಪರಿಶ್ರಮ ಏನಾಯಿತೋ ಎಂಬುದು ಅರಿವಾಗುವುದಿಲ್ಲ. ಇಂತಹ ಉದಾಹರಣೆಗಳಿಗೆ ವ್ಯತಿರಿಕ್ತವೆನ್ನುವಂತೆ ತಿರುಮಲಾಂಬ ಅವರಂತೆ ಪುರುಷಪ್ರಧಾನ ಸಮಾಜವು ಸ್ತ್ರೀಗೆಂದೇ ಗುರುತಿಸಲಾದ ಬದುಕಿನ ಖಾಲಿತನವನ್ನು ತುಂಬಿಕೊಳ್ಳುವ ಪ್ರಕ್ರಿಯೆಯಲ್ಲಿಯೂ ಲೇಖಕಿಯೂ ಹುಟ್ಟಿಕೊಳ್ಳಬಹುದು. ಒಟ್ಟಿನಲ್ಲಿ ಸ್ತ್ರೀಯ ಬರಹದ-ಬದುಕು ಆಕೆಯ ವ್ಯಕ್ತಿಗತ ನೆಲೆಗಿಂತ ಹೆಚ್ಚಾಗಿ ಸಾಮಾಜಿಕ ಆಗುಹೋಗುಗಳಿಂದಲೇ ಪ್ರಭಾವಿತಗೊಳ್ಳುತ್ತಿರುತ್ತದೆ.

ಮೇಲಿನ ಮಾತುಗಳು ಒಂದು ನೆಲೆಯಲ್ಲಿ ಅತಿ ಎನಿಸುತ್ತವೆ. ನಿಜ, ಹುಟ್ಟಿದ ಮನಷ್ಯರೆಲ್ಲಿ ಲೇಖಕಿ (ಕ) ಯರಾಗಬೇಕೆಂದಿಲ್ಲ. ಅದು ಸಾಧ್ಯವೂ ಅಲ್ಲ. ಆದರೆ ತನಗೊಂದು ನಿರಂತರವಾಗಿ ಮುಂದುವರಿದು ಸಾಧನೆ ಮಾಡಬೇಕು ಇತ್ಯಾದಿ ಆಶಯಗಳ ಸಂದರ್ಭದಲ್ಲಿ ಖಂಡಿತವಾಗಿ ಲಿಂಗರಾಜಕಾರಣದ ಪ್ರಭಾವವನ್ನು ಖಚಿತವಾಗಿ ಗುರುತಿಸಬಹುದು.

ಮಾನವ ಜೀವಿಯೊಂದು ಬರಹಗಾರಳಾಗಿ/ನಾಗು ರೂಪುಗೊಳ್ಳುವ ಸಂದರ್ಭದಲ್ಲಿ, ಸಾಧನೆ ಮಾಡುವ ಹಂತದಲ್ಲಿ ಸಾಮಾಜಿಕವಾದ ಹಲವು ಪರಿಕರಗಳು ಮುಖ್ಯವಾಗುತ್ತವೆ. ವಾದಿಸಿದರೂ ಅದು ಹೊರಹೊಮ್ಮುವುಕ್ಕೆ, ಒಳಗೆ ಅದುಮಲ್ಪಡುವುದಕ್ಕೆ ಕಾರಣವಾದ ಹಲವು ಸಂಗತಿಗಳಿರುತ್ತವೆ. ‘ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣತಮತಿಗಳ್’ ಎಂಬ ಮಾತು ಎಷ್ಟೇ ರಮ್ಯವಾದುದಾದರೂ, ವಾಸ್ತವದಲ್ಲಿ ಸಾಹಿತ್ಯಕ್ಕೂ ಶಿಕ್ಷಣಕ್ಕೂ ಇರುವ ಸಂಬಂಧ ಅತ್ಯಂತ ನೇರವಾದುದು. ಹಾಗೆಯೇ ಸ್ತ್ರೀಯ ದಿನದ ೨೪ ಗಂಟೆಗಳು ‘ಅನ್ಯ’ಕ್ಕೆ ಮೀಸಲಾಗಿರಿಸಿದ ಸಾಮಾಜಿಕ ಸನ್ನಿವೇಶದಲ್ಲಿ ಅವಳ ಆಸಕ್ತಿಗಳು, ಅಭಿರುಚಿಗಳು ಆಕೃತಿಗೊಳ್ಳಲಾರದ ಒತ್ತಡವನ್ನು ಉಂಟುಮಾಡುತ್ತದೆ. ನೂರಾರು ಒತ್ತಡಗಳ ನಡುವ ಪುರುಷನೂ ಬಂಧಿಯಾಗಿರುತ್ತಾನಾದರು ಅವುಗಳನ್ನೇ ತನ್ನ ಅಭಿವ್ಯಕ್ತಿಯು ಪರಿಕರಗಳಾಗಿ ಬದಲಾಯಿಸಿಕೊಳ್ಳಬಲ್ಲ ಸ್ವಾತಂತ್ರ್ಯ, ತರಬೇತಿ ಆತನಿಗಿರುತ್ತದೆ. ಸಾಹಿತ್ಯ ರಚನೆಯನ್ನೊಂದ ವೃತ್ತಿಯಾಗಿ, ಪ್ರವೃತ್ತಿಯಾಗಿ ಕಂಡುಕೊಳ್ಳುವಲ್ಲಿ, ಸಾಧನೆ ಮಾಡುವಲ್ಲಿ ಆತನಿಗೆ ಕೊಡಮಾಡಿದ ಸಾಮಾಜಿಕ ಒಪ್ಪಿಗೆ ಇರುತ್ತದೆ. ಆದರೆ ಈ ಬಗೆಯ ರಹದಾರಿ ಸ್ತ್ರೀಯ ಬರಹದ ಚಟುವಟಿಕೆಗೆ ಇಲ್ಲ.

ಸ್ತ್ರೀಯ ಸಾಹಿತ್ಯ ಪ್ರಕ್ರಿಯೆಯ ಬಹುಪಾಲು ಸಂಗತಿಗಳು ಆಕೆ ಹೆಣ್ಣು ಎಂಬ ಗುರುತಿನೊಂದಿಗೆ ನೇರ ಸಂಬಂಧವನ್ನು ಹೊಂದಿದ್ದಾಗಿರುತ್ತದೆ. ಹೆಣ್ಣು ಎಂಬ ಕಾರಣಕ್ಕಾಗಿ ಆಕೆಗೆ ದೊರಕುವ ‘ಸಾಮಾಜಿಕ ಅವಕಾಶ’ (Social Space)ಕ್ಕೆ ಅನುಗುಣವಾಗಿ ವಿನಾಕಾರಣ ನಿಯಂತ್ರಣ, ನಿರ್ದೇಶನಗಳ ಹಿನ್ನೆಲೆಯ್ಲಲಿ ಆಕೆ ಕ್ರಿಯಾಶೀಲಳಾಗುತ್ತಾಳೆ. ಇತಿಹಾಸದಲ್ಲಿ ದೊರೆಯುವ ಕೆಲವು ಪ್ರತಿರೋಧದ ಉದಾಹರಣೆಗಳೂ ಕೂಡ ವಿಸ್ತೃತ ಅರ್ಥದಲ್ಲಿ ಇವುಗಳೊಂದಿಗೆ ಗುರುತುಗೊಂಡವಾಗಿರುತ್ತವೆ. ಹೀಗಾಗಿಯೇ ಮಹಿಳೆಯ ಸಾಹಿತ್ಯ ಸಂದರ್ಭದಲ್ಲಿ ಸ್ಫೂರ್ತಿಗಳ ‘ಪ್ರೋತ್ಸಾಹ’ದ, ಪ್ರತಿಭೆಗಿಂತ ‘ವಿರಾಮ’ದ ಪರಿಕಲ್ಪನೆಗಳು ಮುಖ್ಯವಾಗುತ್ತದೆ. ಈ ಕಾರಣಕ್ಕಾಗಿಯೇ ಸ್ತ್ರೀವಾದಿ ವಿಮರ್ಶೆ ಸಾಹಿತ್ಯವನ್ನು ವ್ಯಕ್ತಿ ವಿಶಿಷ್ಟ ರಚನೆ, ಸಾಧನೆ ಎಂದು ಪರಿಭಾವಿಸುವುದಕ್ಕಿಂತ ಹೆಚ್ಚಾಗಿ ಸಾಮಾಜಿಕ ರಚನೆಯಾಗಿ ಗುರುತಿಸುತ್ತದೆ. ಅಂತೆಯೇ ಗಂಡು-ಹೆಣ್ಣು ಎಂಬುದು ಜೈವಿಕ ನಿರ್ಮಾಣವಾದರೆ ಲೇಖಕ-ಲೇಖಕಿ ಎಂಬುದು ಸಾಮಾಜಿಕ ನಿರ್ಮಾಣವಾಗುತ್ತದೆ. ಈ ವಿಚಾರವನ್ನು ಪುಷ್ಟಿಕರೀಸುವುದಕ್ಕೆ ಬೇಕಾದ ಸಾಕಷ್ಟು ಪುರಾವೆಗಳು ಆಧುನಿಕ ಕನ್ನಡದ ಸಂದರ್ಭದಲ್ಲಿಯೂ ದೊರೆಯುತ್ತವೆ ಸಹ.

ಆಧುನಿಕ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಉಂಟಾದ ಮಹತ್ವದ ಬದಲಾವಣೆಗಳಲ್ಲಿ ಒಂದು ಮಹಿಳೆಯರನ್ನು ಲೇಖಕಿಯಾಗಿ ಸ್ವೀಕರಿಸುವುದರಲ್ಲಿ ಪುರುಷರು ತೋರಿಸಿದ ಆಕಸ್ತಿ. ಸ್ತ್ರೀ ಶಿಕ್ಷಣದ ಮುಂದುವರಿಕೆಯಾಗಿ ಒಂದೆಡೆ ಸ್ತ್ರೀ ಉದ್ಯೋಗದ ಪ್ರಸ್ತಾಪ ಕಂಡುಬಂದರೆ, ಇನ್ನೊಂದು ಕಡೆ ಸಾಕ್ಷರತಾ ಸ್ತ್ರೀಯ ಬರಹದ ಸಾಧ್ಯತೆಗಳನ್ನು ಗುರುತಿಸಿ ಅದಕ್ಕೆ ತನ್ನ ಮಾರ್ಗದರ್ಶನ ನೀಡುವುದರತ್ತ ಗಮನಹರಿಸಲಾಗಿದೆ. ಪುರುಷ ಪ್ರಧಾನತೆಯ ಒಳಗೇ ಆಧುನಿಕತೆಯು ಹಂತಹಂತವಾಗಿ ವಿಸ್ತರಿಸುತ್ತ ಹೋದ ಸ್ತ್ರೀ ಶಿಕ್ಷಣದ ಅವಕಾಶಗಳು ಅವಳ ಉದ್ಯೋಗದ ಅವಕಾಶಗಳನ್ನು ರೂಪಿಸತೊಡಗಿತು. ಆದರ್ಶ ಗೃಹಿಣಿಯ ಅಗತ್ಯವಾಗಿ ಮುನ್ನೆಲೆಗೆ ಬಂದ ಶಿಕ್ಷಣದ ಸಾಧ್ಯತೆಯಂತೆ ಉದ್ಯೋಗವು ಕೂಡ ಆಧುನಿಕ ಕುಟುಂಬದ ಕ್ಷೇಮಾಭಿವೃದ್ಧಿಯ ಹಿನ್ನೆಲೆಯಲ್ಲಿ ವ್ಯಾಖ್ಯಾನಗೊಂಡಿತು. ಸ್ತ್ರೀ ತನ್ನ ಪೋಷಕರನ್ನು ಕಳೆದುಕೊಂಡು ಅತಂತ್ರಳಾದಾಗ ಮತ್ತು ಕುಟುಂಬದ ಅಗತ್ಯಗಳನ್ನು ಸರಿದೂಗಿಸುವ ಸಂದರ್ಭದಲ್ಲಿ ಉದ್ಯೋಗಸ್ಥಳಾಗುವುದು ಉಚಿತವೆನ್ನುವ ಅಭಿಪ್ರಾಯ ಮನ್ನಣೆಗೊಂಡಿತು. ಇದಲ್ಲದೆ ಸಮಾಜದ ಕೆಲವು ಅಗತ್ಯಗಳನ್ನು ಪೂರೈಸುವ ಸಂದರ್ಭದಲ್ಲಿ ಆಕೆ ಕುಟುಂಬದಿಂದ ಹೊರಬಂದು ಸಾರ್ವಜನಿಕ ಸೇವಾ‌ಕ್ಷೇತ್ರದಲ್ಲಿ ತೊಡಗುವುದನ್ನು ಮಾನ್ಯಮಾಡಿತು. ಉದಾ. ಹೆಣ್ಣುಮಕ್ಕಳ ಶಿಕ್ಷಣ, ವೈದ್ಯಕೀಯ, ಉಳಿದಂತೆ ರಾಷ್ಟ್ರೀಯತೆಯಂತಹ ತುರ್ತಿನ ಸಂದರ್ಭದಲ್ಲಿ ಆಕೆಯ ಪಾಲ್ಗೊಳ್ಳುವಿಕೆ ಪ್ರೋತ್ಸಾಹಗೊಂಡಿತು. ಒಟ್ಟಿನಲ್ಲಿ ಇವೆಲ್ಲವೂ ಪ್ರಧಾನಧಾರೆಯ ಅಗತ್ಯಗಳೊಂದಿಗೆ, ಅವುಗಳ ನಿರ್ದೇಶನದೊಳಗೆ ಗುರುತುಗೊಂಡವಾಗಿದ್ದು, ಉಳಿದಂತೆ ಹೆಣ್ಣಿನ ಗುರುತು, ಆರ್ಥಿಕ ಸ್ವಾವಲಂಬನೆ, ಸಮಾನ ಅವಕಾಶ ಇತ್ಯಾದಿ ಸೈದ್ಧಾಂತಿಕತೆಗಳು ಗೈರುಹಾಜರಾಗಿದ್ದವು. ಇನ್ನು ಶಿಕ್ಷಿತ ಸ್ತ್ರೀಯ ಸಾಹಿತ್ಯ ಚಟುವಟಿಕೆಯ ಸಂದರ್ಭವಾದರೂ ಇದಕ್ಕೆ ಹೊರತಾಗಿರುವುದಿಲ್ಲ.

ಹಾಗೆ ನೋಡಿದರೆ ಕನ್ನಡದ ಸಂದರ್ಭದಲ್ಲಿ ಸ್ತ್ರೀಯ ಉದ್ಯೋಗಕ್ಕಿಂತ ಬರಹದ ಸಂಗತಿಯನ್ನು ವಿಶೇಷವಾಗಿ ಗಮನಿಸಲಾಗಿದೆ. ಶಿಕ್ಷಿತ ಸ್ತ್ರೀಯನ್ನು ತನ್ನೊಬ್ಬ ವಿನಯಶೀಲ, ಸಹೃದಯ ಓದುಗಳಾಗಿ ರೂಪಿಸುವುದು ಹಾಗೂ ತನ್ನ ವಿಚಾರ ಪ್ರನಾಳಿಕೆಗೆ ಅಗತ್ಯವಾದ ಸ್ತ್ರೀ ಕುರಿತ ಜ್ಞಾನದ ಉತ್ಪಾದನೆಯಲ್ಲಿ, ಪ್ರಸರಣದಲ್ಲಿ ಅವಳನ್ನೇ ತೊಡಗಿಸುವುದು ಇದರ ಮುಖ್ಯ ಕಾಳಜಿಯಾಗಿತ್ತು ಎಂಬುದನ್ನು ಅಂದಿನ ಸಾಹಿತ್ಯ ಸಂದರ್ಭದ ಹಲವು ಉದಾಹರಣೆಗಳು ಪುಷ್ಟೀಕರಿಸುತ್ತವೆ.

೧೮೮೮ರಲ್ಲಿ ಮೈಸೂರಿನಿಂದ ಹೊರಡುತ್ತಿದ್ದ ಕರ್ನಾಟಕ ವಾಣಿವಿಲಾಸ ಪತ್ರಿಕೆ (ಸಂ. ಸುಬ್ಬರಾವ್ ಎಲ್. ಎಸ್.) ಕನ್ನಡದ ಮೊಲದ ಮಹಿಳಾ ಪತ್ರಿಕೆ ಎಂಬ ಮಾಹಿತಿಯನ್ನು ಆಧರಿಸುವುದಾದರೆ,[2] ೧೯೦೦ರ ಆಸುಪಾಸಿನಲ್ಲಿ ಕನ್ನಡ ಪತ್ರಿಕೆಗಳು ಮಹಿಳೆಯನ್ನು ತನ್ನೊಂದು ಓದುಗವರ್ಗವಾಗಿ ಸ್ವೀಕರಿಸಿದ್ದು ಖಚಿತಗೊಳ್ಳುತ್ತದೆ. ಈ ವಿಚಾರಕ್ಕೆ ಪೂರಕವಾಗಿ ಮಹಿಲಾ ಓದುಗರಿಗೆ ರಿಯಾಯಿತಿ ದರದಲ್ಲಿ ಓದುವ ಸಾಮಗ್ರಿ ಒದಗಿಸುವ ಭರವಸೆಯನ್ನು ವಾಗ್ಭೂಷಣ ಮತ್ತು ಶ್ರೀಕೃಷ್ಣಸೂಕ್ತಿ ಪತ್ರಿಕೆಗಳ ಸಂಸ್ಥೆಗಳು ೧೯೦೬ರಲ್ಲಿ ನೀಡಿದ್ದನ್ನು ಗಮನಿಸಬಹುದು.[3] ನಂತರದಲ್ಲಿ ಮಹಿಳೆಯರಿಗಾಗಿ ಮೇಲಾಟಗಳು, ಪ್ರತ್ಯೇಕ ಅಂಕಣಗಳು, ಮಹಿಳಾ ಪತ್ರಿಕೆಗಳು ಹೆಚ್ಚಾಗಿ ಕಾಣಿಸಿಕೊಳ್ಳತೊಡಗಿದವು.[4]  ಇನ್ನು ಮಹಿಳೆಯರ ಬರವಣಿಗೆಯ ಬಗ್ಗೆ ಗಮನಿಸುವುದಾದರೆ ವಾಗ್ಭೂಷಣದಂತಹ ಅಂದಿನ ಪ್ರತಿಷ್ಠಿತ ಪತ್ರಿಕೆ ೧೯೦೮ರಲ್ಲಿಯೇ ಪ್ರೋತ್ಸಾಹಕರವಾದ ಪುಸ್ತಕ ರಚನೆಯ ಸ್ಪರ್ಧೆಯನ್ನು ನಡೆಸಿತು. ಅಂತಹ ಸ್ಪರ್ಧೆಯ ಪರಿಣಾಮವಾಗಿಯೇ ಶಾಂತಾಬಾಯಿ ನೀಲಗಾರ ಎಂಬ ಮೊದಲ ಆಧುನಿಕ ಲೇಖಕಿ ಹುಟ್ಟಿಕೊಂಡಳು.

ಸಾಹಿತ್ಯ ಪರಿಷತ್ತಿನಂತಹ ಪ್ರತಿಷ್ಠಿತ ಸಂಸ್ಥೆಯು ಪರಿಷತ್ತಿನ ಚಟುವಟಿಕೆಯ ಭಾಗವಾಗಿ ೧೯೩೮ರಲ್ಲಿ ಮಹಿಳಾ ಶಾಖೆಯನ್ನು ಆರಂಭಿಸಿ, ಮಹಿಳಾ ವೇದಿಕೆಗಳನ್ನು ನಿರ್ಮಿಸಿ ಅದರ ಸಂಪೂರ್ಣ ನಿರ್ವಹಣೆಯನ್ನು ಮಹಿಳೆಯರಿಗೆ ವಹಿಸಿತು. ೧೯೩೮ರಲ್ಲಿ ಮಹಿಳೆಯರಿಗಾಗಿ ಮೇಲಾಟವನ್ನು ಏರ್ಪಡಿಸಿತು. ಮಹಿಳಾ ಶಾಖೆ ಆರಂಭಿಸಿದ ಮರುವರ್ಷ ಬೆಳಗಾವಿಯ ತನ್ನ ೨೪ನೇ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾ ಗೋಷ್ಠಿಯನ್ನು ೧೯೩೯ರಲ್ಲಿ ಏರ್ಪಡಿಸಿತು. ಮೊದಲ ಅಧ್ಯಕ್ಷರಾಗಿ ಸೊಲ್ಲಾಪುರದ ಶ್ರೀ ಪಂಚವ್ವ ಸರದಾರ ಭಾಗವಹಿಸಿದ್ದರು.[5] ಮಹಿಳಾಶಾಖೆಯಡಿಯಿಂದ ೧೯೪೧ರಲ್ಲಿ ನಡೆದ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಬರಹಗಳನ್ನು ‘ಹೂಮಾಲೆ’ ಎಂಬ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ೧೯೪೩ರಲ್ಲಿ ಪ್ರಕಟಿಸಿತು.[6] ಅಂದಿನ ಸಾಹಿತ್ಯಾಸಕ್ತ ಮಹಿಳೆಯರನ್ನು ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ತನ್ನ ಆರಂಭದ ದಿನದಿಂದಲೂ ಆಯ್ಕೆ ಮಾಡಿತು. ತಿರುಮಲಾಂಬ, ಬಿ. ಎಲ್. ಸುಶೀಲಮ್ಮ, ಎಂ. ಕೆ. ಲಕ್ಷ್ಮಮ್ಮ, ಎ. ಶೇಷಮ್ಮ, ಆರ್. ಕಲ್ಯಾಣಮ್ಮ, ಡಿ. ಚಂಪಾಬಾಯಿ ಮುಂತಾದವರು ಹಾಗೆ ಪರಿಷತ್ತಿನ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಸದಸ್ಯರಾಗಿದ್ದಾರೆ. ಇವರಲ್ಲಿ ಬಿ. ಎಲ್. ಸುಶೀಲಮ್ಮ ೧೯೪೨ರಲ್ಲಿ ಸಾಹಿತ್ಯಪರಿಷತ್ಪತ್ರಿಕೆ ಸಂಪಾದಕ ಮಂಡಳಿಯ ಸದಸ್ಯರಾದ ಮೊದಲ ಮಹಿಳೆ. ಹೀಗೆ ೨೦ನೇ ಶತಮಾನದ ಆರಂಭದ ದಶಕಗಳು ಮಹಿಳೆಯನ್ನು ಹಂತಹಂತವಾಗಿ ಓದುಗಳಾಗಿ, ಬರಹಗಾರಳಾಗಿ ಹಾಗೂ ಸಾಹಿತ್ಯ ಚಟುವಟಿಕೆಗಳ ಸಂಘಟಕಳಾಗಿ ಸ್ವೀಕರಿಸಿದ್ದನ್ನು ಅಂದಿನ ಹಲವು ದಾಖಲೆಗಳು ಪುಷ್ಪೀಕರಿಸುತ್ತವೆ.

ಪ್ರಧಾನಧಾರೆಯ ಪ್ರೋತ್ಸಾಹದ ಮೇರೆಗೆ ಲೇಖನಿ ಹಿಡಿದ ಈಗ ಗುರುತುಗೊಂಡಿರುವ ಅಂತಹ ಇಬ್ಬರು ಮೊದಲ ಲೇಖಕಿಯರು ಶಾಂತಬಾಯಿ ನೀಲಗಾರ ಹಾಗೂ ತಿರುಮಲಾಂಬ. ಶಾಂತಬಾಯಿ ನೀಲಗಾರ ತಮ್ಮ ಸದ್ಗುಣಿ ಕೃಷ್ಣಾಬಾಯಿ[7] ಕೃತಿಯಲ್ಲಿ ಶಿಕ್ಷಿತ ಸ್ತ್ರೀ ಆದರ್ಶ ಗೃಹಿಣಿಯಾಗಬಲ್ಲಳು ಎಂಬುದನ್ನು ನಿರೂಪಿಸ ಹೊರಟರೆ, ತಿರುಮಲಾಂಬ ಅವರ ಸುಶೀಲೆ[8] ಕೃತಿ ಆಧುನಿಕ ಗೃಹಿಣಿಯ ವಿರಾಮದ ಸದುಪಯೋಗ ಓದುವ ಕ್ರಿಯೆಯಲ್ಲಿರಬೇಕು ಎಂಬುದನ್ನು ಕುರಿತ ವಾಗ್ವಾದದೊಂದಿಗೆ ಆರಂಭಗೊಳ್ಳುತ್ತದೆ ಹಾಗೂ ಕೃತಿಯ ಉದ್ದಕ್ಕೂ ಓದಿನ ಹವ್ಯಾಸ, ಅಭಿರುಚಿಗಳ ಕುರಿತ ಚರ್ಚೆ ಸ್ತ್ರೀ ಸಂಬಂಧಿತವಾಗಿ ನಡೆಯುತ್ತದೆ. ಸುಶೀಲೆಯ ಓದುವ ಹವ್ಯಾಸ ಸಾಂಪ್ರದಾಯಿಕ ಸ್ತ್ರೀಯರಿಗೆ ಅಪಚಾರವಾಗಿ ಕಂಡು, ಅವರು ಅವಳನ್ನು ಉನ್ಮಾದಿನಿ, ಗರ್ವಿಷ್ಟೆ ಎಂಬ ಅಪವಾದಕ್ಕೆ ಒಳಪಡಿಸುವುದು ಹಾಗೂ ಅದನ್ನು ಗೆದ್ದು ಓದುವ ಹವ್ಯಾಸವುಳ್ಳ ಹೆಣ್ಣುಕೂಡ ‘ಸುಶೀಲೆ’ ಎಂಬುದನ್ನು ಸಾಬೀತುಮಾಡಿಸುವುದು ಕೃತೀಯ ಆಶಯವಾಗಿದೆ. ಹೀಗೆ ಕನ್ನಡದ ಮೊದ ಮೊದಲ ಎರಡು ಮಹಿಳಾ ಕೃತಿಗಳು ಸ್ತ್ರೀ ಶಿಕ್ಷಣ ಹಾಗೂ ಸಾಹಿತ್ಯ ಓದುವಿಕೆಯ ಪರ ಅಭಿಪ್ರಾಯ ರೂಪಿಸಲು ಯತ್ನಿಸುತ್ತವೆ ಎಂಬುದು ಅತ್ಯಂತ ಮಾರ್ಮಿಕವಾದುದು.

ಆರಂಭಿಕ ಕಾಲಘಟ್ಟದಲ್ಲಿ ಮಹಿಳೆಯರ ಸಾಹಿತ್ಯ ಚಟುವಟಿಕೆಯನ್ನು ಕುರಿತಂತೆ ಅಂದಿನ ಪ್ರಧಾನಧಾರೆಗೆ ತನ್ನದೇ ಆದ ಉದ್ದೇಶಗಳಿದ್ದರೂ ಅದು ತೋರಿದ ಪ್ರೋತ್ಸಾಹ ಗಮನಾರ್ಹವಾದುದಾಗಿದೆ. ಹಾಗೂ ಇಡೀ ಸಾಹಿತ್ಯ ಪರಂಪರೆಯ ಸಂದರ್ಭದಲ್ಲಿಯೇ ಹೆಚ್ಚಿನದಾದುದಾಗಿದೆ.[9] ಅದನ್ನು ಸಾಬೀತುಪಡಿಸುವಂತೆ ಈ ಪ್ರೋತ್ಸಾಹದ ಕಾರಣಕ್ಕಾಗಿಯೇ ಮಹಿಳೆಯರ ಹೆಸರಿನಲ್ಲಿ ಪುರುಷರು ತಮ್ಮ ಬರಹಗಳನ್ನು ಪ್ರಕಟಿಸುವ ಪ್ರವೃತ್ತಿಯೂ ಕಾಣತೊಡಿಗಿದೆ ಎಂಬ ಗುಮಾನಿಯು ಅಂದು ವ್ಯಕ್ತಗೊಂಡಿದೆ.

ಮೇಲಾಟಕ್ಕೆ ಬಂದಿರುವ ವಿಮರ್ಶೆಗಳಲ್ಲಿ ಹೆಣ್ಣು ಮಕ್ಕಳ ಹೆಸರಿಸಿಕೊಂಡು ಗಂಡಸರೇ ಬರೆದ ವಿಮರ್ಶೆಗಳು ಬಂದಿರುವುದೆಂದು-೩ ತಿಂಗಳಿಂದಲೂ ಪರೀಕ್ಷಕರು ನಮಗೆ ಎಚ್ಚರಿಗೆ ಕೊಡುತ್ತಲಿದ್ದಾರೆ. ಈ ಎಚ್ಚರಿಕೆ ನಿಜವಿದ್ದುದಾದರೆ ಇದೊಂದು ವಿಷಾದದ ಸಂಗತಿ. ಮೇಲಾಟದ ಪರೀಕ್ಷಕರು ಯಾವ ಬಗೆಯ ದಾಕ್ಷಿಣ್ಯಕ್ಕೂ ಒಳಗಾಗದೆ ನಿರ್ಣಯ ಕೊಡುತ್ತಾರೆಂಬುದನ್ನು ಯಾರೂ ಮರೆಯಲಾರರು. ಅದರಂತೆಯೇ ಸೋಲು ಒದಗಿದರೂ ಬೇರೆಯ ಹೆಸರಿಗೆ ಒದಗಲಿ ಎಂಬ ಅಪ್ರಮಾಣಿಕವೂ ಸರಿಯೆನಿಸದು.[10]

ಆರಂಭಿಕ ಕಾಲಘಟ್ಟದಲ್ಲಿ ಪ್ರಧಾನಧಾರೆಯ ಮಹಿಳೆಯನ್ನು ಬರಹಗಾರಳಾಗಿ ರೂಪಿಸಲು ತೋರಿದ ಆಸಕ್ತಿಯು ಇನ್ನೊಂದು ದಿಕ್ಕಿನಿಂದ ನೋಡಿದರೆ ಅದರ ನಿರ್ದೇಶನಗಳನ್ನು ಗುರುತಿಸಿಕೊಡುತ್ತದೆ. ಮಹಿಳೆಯರನ್ನು ಏನನ್ನು ಕುರಿತು ಬರೆಯಬೇಕು? ಹೇಗೆ ಬರೆಯಬೇಕು ಇತ್ಯಾದಿ ಹಲವು ವಿಚಾರಗಳಲ್ಲಿ ಅವರಿಗೆ ಸ್ಪಷ್ಟ ನಿರ್ದೇಶನಗಳನ್ನು ಈ ಪ್ರೋತ್ಸಾಹದ ಮಾತುಗಳು ನೀಡಿವೆ. ಶಾಂತಾಬಾಯಿ ಅವರ ‘ಸದ್ಗುಣಿ ಕೃಷ್ಣಾಬಾಯಿ’ ಕೃತಿ ಇರಲಿ, ತಿರುಮಲಾಂಬರ ‘ಸುಶೀಲ’ ಕೃತಿ ಇರಲಿ ಈ ಬಗೆಯ ನಿರ್ದೇಶನಗಳನ್ನು ಹೊತ್ತೇ ರೂಪುಗೊಂಡದ್ದಾಗಿದೆ. ಈ ನಿರ್ದೇಶನವು ಒಟ್ಟಾರೆಯಾಗಿ ‘ಆದರ್ಶ ಗೃಹಿಣಿ’ ಪರಿಕಲ್ಪನೆಯನ್ನು ಮಹಳೆಯರ ಮೂಲಕವೇ ಪ್ರಚುರಪಡಿಸುವುದಾಗಿದೆ. ಅಂತೆಯೇ ಮಹಿಳೆಯರಿಗಾಗಿ ರೂಪಿಸಲಾದ ಪತ್ರಿಕಾ ಅಂಕಣಗಳಿಗೂ ಈ ಕ್ರಮದ ಚೌಕಟ್ಟನ್ನೇ ಹಾಕಲಾಗಿದೆ. ಗೃಹಾಲಂಕಾರ, ತಾಯಿಮಗು, ಅಡಿಗೆ, ಮನೆ ಮದ್ದು, ಇತ್ಯಾದಿಯಾಗಿ ಅದರ ವ್ಯಾಪ್ತಿಯನ್ನು ನಿರ್ಧರಿಸಲಾಗಿದೆ.[11]

ಪ್ರಧಾನರಧಾರೆಯ ಮಾರ್ಗದರ್ಶನವು ಪ್ರೋತ್ಸಾಹವು ಒಂದು ಬಗೆಯ ಯಜಮಾನ್ಯವೇ ಎಂಬುದನ್ನು ಅರಿಯುವುದಕ್ಕೆ ಇಲ್ಲಿನ ಅಂದಿನ ಜಯಂತಿ ಪತ್ರಿಕೆಯ ಒಂದು ವಾಗ್ವಾದವನ್ನು ಗಮನಿಸಬಹುದು.

ಜಯಂತಿ ಪತ್ರಿಕೆ ೧೯೪೮ರ ೧೦ನೇ ಸಂಚಿಕೆಯಲ್ಲಿ ಮಹಿಳೆಯರಿಗಾಗಿ ಕೆಲವು ಪುಟಗಳನ್ನು ಮೀಸಲಿಡುವ ಬಗ್ಗೆ ಪ್ರಕಟನೇ ಹೊರಡಿಸಿ, ಆ ಪುಟಗಳನ್ನು ಹೊಸ ಮಾದರಿ ಅಡುಗೆ, ಕೌಟುಂಬಿಕ ಕಲೆ, ಮನೆಯ ವೈದ್ಯ ಇತ್ಯಾದಿಗಳಿಂದ ಅಲಂಕರಿಸುವುದಾಗಿದೆ ಹಾಗೂ ಅದಕ್ಕೆ ಮಹಿಳಾ ಓದುಗರು ಬರಹಗಾರರಾಗುವ ಮೂಲಕವೂ ಸ್ಪಂದಿಸಬೇಕೆಂದು ಕರೆ ನೀಡುತ್ತದೆ. ಅದರಂತೆ ೧೯೪೮ರ ೧೧ನೇ ಸಂಚಿಕೆಯಿಂದ ‘ಮಹಿಳೆಯ ಮಾತುಕತೆ’ ಎಂಬ ಅಂಕಣ ಆರಂಭಗೊಂಡಿದ್ದು ಅದು ಕಾರಣಾಂತರಗಳಿಂದ ನಿಲ್ಲುತ್ತದೆ. ಕೂತೂಹಲಕಾರಿ ವಿಚಾರವೆಂದರೆ ಮಹಿಳಾ ಅಂಕಣವು ನಿಂತಿದ್ದರ ಬಗ್ಗೆ ೧೯೪೯ರ ೧೧ನೇ ಸಂಚಿಕೆಯಲ್ಲಿ ಪ್ರತಿಕ್ರಿಯಿಸಿರುವ ಜಾ. ನ. ಇಂದಿರಾ ಅವರು “ಅಡಿಗೆಯ ವಿಭಾಗ ಒಮ್ಮೆಲೆ ಅಸ್ತವಾದುದಕ್ಕೆ ಮಹಿಳೆಯರಿಗಿಂತ ಮಹನೀಯರಿಗೆ ಹೆಚ್ಚು ಖೇದವೆನಿಸೀತೆ….” ಎಂದು ಪ್ರಸ್ತಾಪಿಸಿ ಮಹಿಳೆಯ ಮಾತುಕತೆ ಅಂಕಣವು ಅಡಿಗೆಗೆ ಸೀಮಿತವಾಗುವುದನ್ನು ವಿರೋಧಿಸಿರುವುದನ್ನು ಗಮನಿಸಬಹುದು.[12]

ಈ ಉದಾಹರಣೆಯು ಮಹಿಳೆಯರ ಅಭಿರುಚಿಯನ್ನು ರೂಪಿಸುವ ಸಂದರ್ಭದಲ್ಲಿ ಪ್ರಧಾನಧಾರೆಯು ಹೊಂದಿದ್ದ ಯಾಜಮಾನ್ಯವನ್ನು ಸೂಚಿಸುವುದರೊಂದಿಗೆ ಆ ಯಾಜಮಾನ್ಯ ಕುರಿತ ಮಹಿಳೆಯರ ಪ್ರತಿರೋಧದ ದನಿಯನ್ನು ಸ್ಪಷ್ಟಪಡಿಸುತ್ತದೆ. ಈ ಪ್ರತಿರೋಧಕ್ಕೆ ಬಹಳದೊಡ್ಡ ಭಿತ್ತಿಯೊಂದು ಅಂದು ಕಾಣುವುದಿಲ್ಲವಾದರೂ ಅದು ಅಲ್ಲೊಮ್ಮೆ ಇಲ್ಲೊಮ್ಮೆ ವ್ಯಂಗದ ಧಾಟಿಯಲ್ಲಿ ಕಿಡಿಯ ರೂಪದಲ್ಲಿ ಹೊರಹೊಮ್ಮಿರುವುದನ್ನು ಗಮನಿಸಬಹುದು. ಈ ಪ್ರತಿರೋಧದ ವೇದಿಕೆಯಾಗಿಯೂ ಪತ್ರಿಕೆಯ ಅಂಕಣಗಳು, ಸಾಹಿತ್ಯ ಸಮ್ಮೇಳನದ ವೇದಿಕೆಗಳು ಒದಗಿ ಬಂದಿವೆ ಎಂಬುದನ್ನು ಮರೆಯುವಂತಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ ಸಿಂಪಿಬಾಯಮ್ಮನವರ ಹೇಳಿಕೆ:

….ನಮ್ಮ ಚಟುವಟಿಕೆ ಮುಟ್ಟುಗೋಲನ್ನು ಹಾಕಿದವರು ಗಂಡಸರು. ನಮ್ಮನ್ನು ಕತ್ತಲೆಯಲ್ಲಿ ಕೆಡವಿ ನುಡಿಯಲ್ಲಿ-ನಾಡಿಯಲ್ಲಿ ಹೆಂಗಳೆಯರು, ಹೆಣ್ಣುಮಕ್ಕಳು ಇರುವರೋ ಇಲ್ಲವೋ ಎಂದು ಭಾವನೆಯನ್ನು ತಂದವನು ಗಂಡಸು. ಆದರೆ ಇದೀಗಿನ ಕಾಲದಲ್ಲಿ ಅದೇ ಗಂಡಸು ಮತ್ತೆ ನಮ್ಮನ್ನು ಬೆಳಕಿನಲ್ಲಿ ತರಲು ಅಪೇಕ್ಷಿಸುತ್ತಾನೆ. ಇಂದಿನ ಅಪೇಕ್ಷೆ ಅಂದಿನ ಉಪೇಕ್ಷಿಗಳ ತಥ್ಯಾಂಶವು ಹೊಳೆಯದ ಮಾತಾಗಿದೆ.[13]

ಆಧುನಿಕ ಸಂದರ್ಭದ ಮಹಿಳೆಯರ ಧಾರ್ಮಿಕ ಅಭಿವ್ಯಕ್ತಿ

ಆಧುನಿಕತೆ ಎದರೇನು ಎಂಬುದನ್ನು ವಿವರಿಸಿಕೊಳ್ಳುವಾಗ ಬಳಸಲ್ಪಡುವ ಸಾಮಗ್ರಿಗಳಲ್ಲಿ ಧಾರ್ಮಿಕತೆಯು ಮುಖ್ಯವಾದುದು. ಸಾಂಪ್ರದಾಯಿಕತೆ ಮತ್ತು ಆಧುನಿಕತೆಗಳನ್ನು ವಿರುದ್ಧಾರ್ಥಕ ಪರಕಲ್ಪನೆಗಾಗಿ ಬಳಸುವ ಭಾರತೀಯ ಸಂದರ್ಭದಲ್ಲಿ ಧಾರ್ಮಿಕತೆಯನ್ನು ಸಾಂಪ್ರದಾಯಿಕತೆಯ ಪ್ರಧಾನ ಲಕ್ಷಣವಾಗಿ ಪರಿಭಾವಿಸುತ್ತ, ಅದಕ್ಕೆ ವಿರುದ್ದಾರ್ಥಕವಾದ ಆಧುನಿಕತೆಯ ಧರ್ಮನಿರಪೇಕ್ಷವಾದುದೆಂದು ವಿವರಿಸಲಾಗಿದೆ. ಈ ವ್ಯಾಖ್ಯಾನವನ್ನೇ ಅನುಸರಿಸಿ ಆಧುನಿಕ ಕನ್ನಡ ಸಾಹಿತ್ಯ ಸಂದರ್ಭವು ಸಾಂಪ್ರದಾಯಿಕ ಸಾಹಿತ್ಯವನ್ನು ಧರ್ಮಪ್ರಧಾನ ಸಾಹಿತ್ಯವಾಗಿ ಗುರುತಿಸುತ್ತ ಆಧುನಿಕ ಸಾಹಿತ್ಯವು ಅದಕ್ಕಿಂತ ಭಿನ್ನವಾಗಿರಬೇಕೆಂದು ಬಯಸುತ್ತದೆ.

ಭಸ್ಮ ರುದ್ರಾಕ್ಷಿಗಳ ಮಹಾತ್ಮ್ಯವನ್ನು ಗೋಪೀಚಂದನ ತುಳಸೀ ಮಣಿಗಳ ಮಹಾತ್ಮ್ಯವನ್ನು ತೋರಿಸಿಕೊಡುವ ಗ್ರಂಥಗಳಿಗಿಂತ, ಶಾಸ್ತ್ರೀಯವಾಗಿ ಕಲ್ಲೊಡೆಯುವ ರೀತಿಯನ್ನೂ, ಶಾಸ್ತ್ರೀಯವಾಗಿ ಗಾರೆ ಅರೆಯುವ ರೀತಿಯನ್ನು, ಶಾಸ್ತ್ರೀಯವಾಗಿ ಅಡುಗೆ ಮಾಡುವ ರೀತಿಯನ್ನೂ, ಶಾಸ್ತ್ರೀಯವಾಗಿ ಗಡಿಯಾರ ಸರಿಪಡಿಸುವ ರೀತಿಯನ್ನೂ ಹೇಳಿಕೊಡುವ ಪುಸ್ತಕಗಳು ನಮಗೆ ಹೆಚ್ಚು ಅವಶ್ಯವೆಂದು ನಾನು ತಿಳಿದುಕೊಂಡಿದ್ದೇನೆ. ಹೀಗೆ ಹೇಳುವುದರಿಂದ ಮತಾಚಾರಗಳನ್ನು ನಾನು ಜರಿಯತಕ್ಕವನೆಂದು ಯಾರೂ ಅನುಮಾನ ಪಡಕೂಡದೆಂದು ಬೇಡಿಕೊಳ್ಳುತ್ತೇನೆ. ಮತಾಚಾರಗಳನ್ನು ಆಧ್ಯಾತ್ಮ ವಿಚಾರಗಳನ್ನು ಕುರಿತು ಗ್ರಂಥಗಳನ್ನು ನಮ್ಮ ಪೂರ್ವಿಕರು ಹೇರಳವಾಗಿ ಬರೆದಿರಿಸಿದ್ದಾರೆ. ಅವುಗಳನ್ನು ನಾವು ಅರ್ಥ ಮಾಡಿಕೊಂಡರೆ ಸಾಕಾಗಿದೆ. ನಮ್ಮಲ್ಲಿ ಸಾಕಾದಷ್ಟಿಲ್ಲದಿರುವುದು ನಮ್ಮ ನಿತ್ಯ ಜೀವನದ ಪ್ರಶ್ನೆಗಳಿಗೂ ವ್ಯವಹಾರಗಳಿಗೂ ಸಂಬಂಧಪಟ್ಟ ಪ್ರಪಂಚದ ಗ್ರಂಥಗಳು.[14]

ಆಧುನಿಕ ಕನ್ನಡ ಸಾಹಿತ್ಯವು ಮತ-ಧರ್ಮ ನಿರಪೇಕ್ಷವಾದುದೇ ಅಲ್ಲವೆ ಎಂಬ ಪ್ರಶ್ನೆ ಇಲ್ಲಿಗೆ ಹೊರತಾದುದಾದರೂ ಅಂದಿನ ಸಾಹಿತ್ಯ ಕ್ಷೇತ್ರದ ಹಿರಿಯಣ್ಣನಂತಿರುವ ಸಾಹಿತ್ಯ ಪರಿಷತ್ತು ಮತಧರ್ಮಕ್ಕೆ ಹೊರತಾದ ಸಾಹಿತ್ಯಕ್ಕೆ ಹೆಚ್ಚು ಗಮನ ನೀಡಬೇಕಿದೆ ಎಂದಿರುವುದು, ಮಹಿಳೆಯರ ಸಾಹಿತ್ಯ ರಚನೆಯ ಸಂದರ್ಭದಲ್ಲಿ ಧರ್ಮದ ಪ್ರಶ್ನೆಯು ಗುರುತುಗೊಂಡ ಕ್ರಮವನ್ನು ಕುರಿತು ಚರ್ಚಿಸುವ ಸಂದರ್ಭದಲ್ಲಿ ಉಪಯುಕ್ತವಾದುದಾಗಿದೆ.

ಆಧುನಿಕ ಪೂರ್ವ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹಿಳಾ ಪ್ರಸ್ತಾಪವು ಅತ್ತಿಮಬ್ಬೆಯಿಂದ ಆರಂಭಗೊಳ್ಳುತ್ತದೆ. ಅತ್ತಿಮಬ್ಬೆ ಸ್ವತಃ ಸಾಹಿತಿಯಾಗದಿದ್ದರೂ ಸಾಹಿತ್ಯ ರಚನೆಗೆ ಪ್ರೇರಕಳಾಗಿ ನಿಂತವಳು. ಕುತೂಹಲಕಾರಿ ಸಂಗತಿ ಎಂದರೆ ಆಧುನಿಕ ಸಾಹಿತ್ಯದ ಸಂದರ್ಭವು ಕೂಡ ಇಂತದ್ದೇ ಉದಾಹರಣೆಗಳನ್ನು ಹೊಂದಿದೆ ಎಂಬುದು. ಮಂಗಳೂರು ಪ್ರಾಂತ್ಯದ ಶ್ರೀಮತಿ ದೇಜಮ್ಮನೆಂಬ ಮಹಿಳೆ ಜೈನಶಾಸ್ತ್ರದಾನ ಪರಂಪರೆಯನ್ನು ಮುಂದುವರಿಸಿ ಗೋವಿಂದ ಪೈಯಿಂದ ಶ್ರೀ ಪಾರ್ಶ್ವನಾಥ ತೀರ್ಥಂಕರ ಚರಿತ್ರೆ (೧೯೩೩)[15] ಹಾಗೂ ಶ್ರೀ ಬಾಹುಬಲಿ ಗೋಮಟೇಶ್ವರ ಚರಿತ್ರೆ (೧೯೩೯)[16] ಎಂಬ ಕೃತಿಗಳನ್ನು ಬರೆಸಿ ಪ್ರಕಟಿಸಿರುವುದು ಕಂಡುಬರುತ್ತದೆ. ಆಧುನಿಕ ಸಾಹಿತ್ಯ ಸಂದರ್ಭದಲ್ಲಿ ಪ್ರಮುಖರಾದ ಪೈಯವರು ದಾನ ಚಿಂತಾಮಣಿ ಅತ್ತಿಮಬ್ಬೆಯ ಹೆಸರನ್ನು ಬಳಸುತ್ತಲೇ ತಮ್ಮ ಈ ಧಾರ್ಮಿಕ ಸಾಹಿತ್ಯ ರಚನೆಯನ್ನು ಧರ್ಮಬಾಂಧವ್ಯದ ಹಿನ್ನೆಲೆಯಲ್ಲಿ ಸಮರ್ಥಿಸುತ್ತಾರೆ. ಓದುಗರು ಇದನ್ನು ಧರ್ಮಸಮನ್ವಯ ದೃಷ್ಟಿಯಿಂದಲೇ ನೋಡಬೇಕೆನ್ನುತ್ತಾರೆ.

ಪ್ರಬಂಧಗಳನ್ನು ನಾನೇನೂ ಸಾಹಿತ್ಯ ದೃಷ್ಟಿಯಿಂದ ಬರೆದುದಲ್ಲ. ಪರಸ್ಪರ ಧರ್ಮ ಬಾಂಧವ್ಯವದ ಸೇತುವೆಯಲ್ಲಿ ಇದೊಂದು ಅಳಿಲುಗೊರೆಟೆಯಂತಾದರೂ ನಿಂತಿರಲಿ ಎಂದು ಜೈನಧರ್ಮದಲ್ಲಿ ನನಗಿರುವ ಗೌರವದೊಂದು ಕುರುಹಾಗಿ ಧರ್ಮದೃಷ್ಟಿಯಿಂದ ರಚಿಸಿದೆನಷ್ಟೆ.[17]

ಈ ಮಾತುಗಳು ಒಂದೆಡೆ ಪ್ರಧಾನ ಲೇಖಕರು ಆಧುನಿಕ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತಮ್ಮ ಧಾರ್ಮಿಕ ರಚನೆಯ ಬಗ್ಗೆ ಸಮರ್ಥನೆಯನ್ನು ನೀಡಬೇಕಾದ ಅಗತ್ಯವನ್ನು ಸೂಚಿಸುವುದರ ಮೂಲಕ ಈ ಹಿಂದೆ ಪ್ರಸ್ತಾಪಿಸಲಾದ ಧರ್ಮನಿರಪೇಕ್ಷ ರಾಜಕಾರಣದಲ್ಲಿ ತೊಡಗಿದ್ದನ್ನು ಸಾಬೀತುಪಡಿಸುತ್ತದೆ. ಇನ್ನೊಂದೆಡೆ ಲಿಂಗ ವ್ಯತ್ಯಾಸದ ತಾತ್ವಿಕನೆಲೆಯಿಂದ ಗ್ರಹಿಸುವುದಾದರೆ ಆಧುನಿಕ ಸಂದರ್ಭದ ಮಹಿಳೆ ಹಾಗೂ ಪುರುಷರ ಸಾಹಿತ್ಯಿಕ ಆಸಕ್ತಿ ಹಾಗೂ ಕ್ರಿಯೆಗಳು ಭಿನ್ನ ಸ್ಥರದಲ್ಲಿ ನಿಂತವು ಎಂಬುದನ್ನು ತೋರಿಸುತ್ತದೆ. ಗೋವಿಂದ ಪೈಯವರಿಗೆ ಧಾರ್ಮಿಕ ಸಾಹಿತ್ಯ ರಚನೆ ಧರ್ಮನಿರಪೇಕ್ಷದ, ಸಮನ್ವಯದ ಸಂಗತಿಯಾದರೆ, ಶ್ರೀಮತಿ ದೇಜಮ್ಮನವರಿಗೆ ಇದೊಂದು ಶ್ರದ್ಧೆಯ ಧಾರ್ಮಿಕ ಸೇವೆ. ಹಾಗೆಯೇ ಈ ಉದಾಹರಣೆಯು ಸಾಹಿತ್ಯ ರಚನೆಯ ಸಂದರ್ಭದಲ್ಲಿ ಹತ್ತಿಕ್ಕಲ್ಪಟ್ಟ ಅಥವಾ ಪುರುಷರ ಪ್ರೋತ್ಸಾಹದ ನೆರಳಿನಲ್ಲಿಯೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರೂಪಿಸಿಕೊಳ್ಳಬೇಕಾದ ಆಶ್ರಿತಸ್ಥಿತಿ ಸ್ತ್ರೀಗೆ ಒಂದೆಡೆ ಇದ್ದರೂ, ಇನ್ನೊಂದೆಡೆ ಶಾಸ್ತ್ರದಾನದ ಮೂಲಕ ಸಾಹಿತ್ಯ ರಚನೆಗೆ ಪ್ರೇರಕಳಾಗಬಲ್ಲ, ಆಶ್ರಯದಾತಳ ಸ್ಥಾನದಲ್ಲಿ ಆಕೆ ನಿಂತಿದ್ದಾಳೆ ಎಂಬುದನ್ನು ಸೂಚಿಸುತ್ತ ಪುರುಷಪ್ರಧಾನ ಸಮಾಜದ ಲಿಂಗವ್ಯವಸ್ಥೆಯ ಸಂಕೀರ್ಣತೆಯನ್ನು ಎತ್ತಿ ತೋರಿಸುವುದಾಗುತ್ತದೆ. ಈ ಸಾಹಿತ್ಯಿಕ ಸನ್ನಿವೇಶವು ಈ ಹಿಂದೆ ಪ್ರಸ್ತಾಪಿಸಲಾದ ‘ಶೋಷಣೆ-ರಕ್ಷಣೆ’ ‘ಲಕ್ಷ್ಯ-ನಿರ್ಲಕ್ಷ್ಯ’ ವೈರುಧ್ಯಪೂರ್ಣ ಸಮಾಜದ ಮಾದರಿಗೆ ಪೂರಕವಾದುದಾಗಿದೆ. ಮತ್ತು ಆಧುನಿಕ ಮಹಿಳಾ ಸಾಹಿತ್ಯ ಸಂದರ್ಭವು ಪರಂಪರೆಯೊಂದಿಗೆ ಹೊಂದಿರುವ ಸಂಬಂಧದ ಸ್ವರೂಪವನ್ನು ವ್ಯಕ್ತಗೊಳಿಸುತ್ತದೆ.

ಆಧುನಿಕ ಸಂದರ್ಭದ ಮಹಿಳೆಯರ ಸಾಹಿತ್ಯ ಚಟುವಟಿಕೆಯ ಬೇರನ್ನು ಪರಂಪರೆಯಿಂದ ಗುರುತಿಸಬಹುದಾದ ಇನ್ನೊಂದು ನೆಲೆಯೂ ಇದೆ. ಕನ್ನಡದಲ್ಲಿ ಶಿಷ್ಯಸಾಹಿತ್ಯಾಸಕ್ತ ಮಹಿಳಾ ಓದುಗ ವಲಯವೊಂದನ್ನು ಮೊತ್ತ ಮೊದಲಿಗೆ ಪೂರ್ಣಪ್ರಮಾಣದಲ್ಲಿ ಕಲ್ಪಿಸಿಕೊಂಡವಳು ಸಂಚಿಯ ಹೊನ್ನಮ್ಮ. ಅದಕ್ಕೆ ಪೂರ್ವದಲ್ಲಿ ೧೨೦೦ರ ಸುಮಾರಿಗೆ ಬಂಧುವರ್ಮನು ಸತಿಧರ್ಮಸಾರವೆಂಬ ಕೃತಿಯನ್ನು ರಚಿಸಿದ್ದಾನೆ. ಆದರೆ ಈ ಕೃತಿಯು ಧಾರ್ಮಿಕ ಗುರುತನ್ನು ಮಹಿಳೆಗೆ ನೀಡುತ್ತ ಜೈನ ಮಹಿಳೆಯನ್ನು ಓದುಗಳಾಗಿ ಪರಿಭಾವಿಸಿಕೊಂಡ ಕೃತಿಯಾಗಿದ್ದು, ಇಲ್ಲಿ ಕವಿ ಸತೀಧರ್ಮ ಎಂಬುದನ್ನು ಕೇವಲ ಹೆಣ್ಣಿನ ಪಾವಿತ್ರ್ಯಕ್ಕೆ ಸೀಮಿತಗೊಳಿಸದೆ, ಜೈನಾಚಾರಗಳಿಗೂ ವಿಸ್ತರಿಸಿದ್ದಾನೆ. ಈ ವ್ಯಾಪ್ತಿಯ ಒಳಗೆ ಪುರುಷನನ್ನು ಜೈನಾಚಾರದತ್ತ ಬದ್ದವಾಗಿಸಬೇಕಾದ ಧಾರ್ಮಿಕ ಜವಾಬ್ದಾರಿಯೊಂದನ್ನು ಸತೀಧರ್ಮ ವ್ಯಾಪ್ತಿಯೊಳಗೆ ಸ್ತ್ರೀಗೆ ವಹಿಸುತ್ತಾನೆ. ಹಾಗಾಗಿ ಈ ಕೃತಿ ಕಲ್ಪಿಸುವ ಸತಿಧರ್ಮಸಾರದ ಓದುಗಳಗಿಗೂ ಸಂಚಿ ಹೊನ್ನಮ್ಮನ ಹದಿಬರೆಯ ಧರ್ಮದ ಓದುಗಳಿಗೂ ಸಂಚಿ ಹೊನ್ನಮ್ಮನ ಹದಿಬರೆಯ ಧರ್ಮದ ಓದುಗಳಿಗೂ ಮುಖ್ಯ ವ್ಯತ್ಯಾಸವಿದೆ.[18] ಪ್ರಭುತ್ವ ನೀನು ಕವಿಯಾಗು ಎಂದು ಧಾರಾಳ ಮನದಿಂದ ಅಪ್ಪಣೆ ನೀಡಿದಾಗ ಅವಳು ತನ್ನಂತಹ ಮಹಿಳೆಯರಿಗಾಗಿಯೇ ಕಾವ್ಯ ಬರೆಯುತ್ತೇನೆ ಎಂದು ಮಹಿಳಾ ಓದುಗ ವಲಯವೊಂದನ್ನು ಪ್ರತ್ಯೇಕವಾಗಿ ಗುರುತಿಸಿಕೊಂಡು ‘ಹದಿಬದೆಯ ಧರ್ಮ’ವೆಂಬ ಮಹಿಳಾಸಕ್ತ/ಮಹಿಳಾಉಪಯುಕ್ತ ವಸ್ತುವೊಂದನ್ನು (?) ಕಾವ್ಯಕ್ಕೆ ಗುರುತಿಸಿಕೊಂಡಳು. ಈ ಹಿಂದೆ ಅಕ್ಕಮಹಾದೇವಿಯು ಕೌಟುಂಬಿಕ ಹಿತಾಸಕ್ತಿಯನ್ನು ಕಡೆಗಣಿಸಿ ದಕ್ಕಿಸಿಕೊಂಡಿದ್ದ ಧಾರ್ಮಿಕಾಭಿವ್ಯಕ್ತಿಯನ್ನು ಹೊನ್ನಮ್ಮ ಕೌಟುಂಬಿಕ ನೆಲೆಗೆ ಮತ್ತೆ ಹೊಂದಿಸಿದಳು. ಪತಿವ್ರತಾಧರ್ಮಕ್ಕೆ ಇನ್ನಿತರ ಧರ್ಮಗಳಿಗೆ ಸರಿಸಮಾನವಾದ ಸ್ಥಾನವನ್ನು ಕಲ್ಪಿಸಿ ಸ್ತ್ರೀಯರ ಸಂದರ್ಭದಲ್ಲಿ ಅದು ಎಲ್ಲಕ್ಕಿಂತ ಮಿಗಿಗಾದುದೆಂದಳು. ಪತಿವ್ರತಾ ಧರ್ಮವನ್ನು ಅನ್ಯಧರ್ಮಗಳಿಗೆ ಸಮಾನವಾಗಿ ಕಾವ್ಯವಸ್ತುವಾಗಿಸಿದಳು. ಅದಕ್ಕಾಗಿ ಮೀಮಾಂಸೆಯ ಕೆಲವು ನಿಯಮಗಳನ್ನು ಮುರಿದಳು. ಈ ಅರ್ಥದಲ್ಲಿ ಹೊನ್ನಮ್ಮನ ಕಾವ್ಯಕ್ಕೊಂದು ಚಾರಿತ್ರಿಕ ಮಹತ್ವವಿದೆ.

[1] ಉಲ್ಲೇಖಿತ: ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಸಂಚಿಕೆ ೧, ೧೯೧೬ ೧೭, ತಿರುಮಲಾಂಬ, ಮುನ್ನುಡಿ ಸಭಾಪತಿ ಹಿತೈಷಿಣಿ ಗ್ರಂತಮಾಲೆ, ನಂಜನಗೂಡು

[2] ೧೮೮೮ ರಲ್ಲಿ ಮೈಸೂರಿನಿಂದ ಹೊರಡುತ್ತಿದ್ದ ಕರ್ನಾಟಕ ವಾಣಿವಿಲಾಸ ಪತ್ರಿಕೆಯನ್ನು (ಸಂಪಾದಕರು: ಸುಬ್ಬರಾವ್ ಎಲ್. ಎಸ್. ) ಮೊದಲ ಮಹಿಳಾ ಪತ್ರಿಕೆ ಎಂಬ ಮಾಹಿತಿಯನ್ನು ಪರಿಗಣಿಸುವುದಾದರೆ ಈ ಅಂಶವು ಸ್ತ್ರೀಯನ್ನು ಪತ್ರಿಕೆಗಳ ಓದುಗ ವರ್ಗವಾಗಿ ಪರಿಭಾವಿಸಿದ ಅಂಶವನ್ನು ಸಮರ್ಥಿಸುತ್ತದೆ. ಉಲ್ಲೇಖಿತ : ಉಷಾರಾಣಿ ಎಸ್., ಮಹಿಳೆ ಮತ್ತು ಮಾಧ್ಯಮ ರಾಗೌ ಟ್ರಸ್ಟ ಪ್ರಕಾಶನ, ೨೦೦೨

[3] ವಾಗ್ಭೂಷಣ ಪತ್ರಿಕೆ ಹಾಗೂ ಧಾರವಾಡದಿಂದ ೧೯೯೬ ರಿಂದ ಹೊರಡುತ್ತಿದ್ದ ೧೯೦೬ರಲ್ಲಿ ಹೊರಡುತ್ತಿದ್ದ ಕರೋಡಿ ಸುಬ್ಬರಾವ್ ಸಂಪಾಕತ್ವದ ಶ್ರೀ ಕೃಷ್ಣಸೂಕ್ತಿ ಪತ್ರಿಕೆಗಳು ಸ್ತ್ರೀಯರಿಗೂ, ಪುಸ್ತಕ ವಿದ್ಯಾಶಾಲೆಗಳಿಗೂ ರಿಯಾಯತಿ ದರದಲ್ಲಿ ನೀಡುತ್ತಿದ್ದವು.

[4] ಸ್ವಾತಂತ್ರ್ಯ ಪೂರ್ವದಲ್ಲಿ ಸಾಹಿತ್ಯ ಸ್ಪರ್ಧೆಗಳು ಎಂಬುದಕ್ಕೆ ಬದಲಾಗಿ ‘ಮೇಲಾಟ’ ಎಂಬ ಶಬ್ದವನ್ನು ಬಳಸಲಾಗಿದೆ. ೧೯೩೦-೪೦ರ ಕಾಲಘಟ್ಟದಲ್ಲಿ ಅಂದಿನ ಪ್ರಮುಖ ಪತ್ರಿಕೆಗಳಾದ ಜಯಕರ್ನಾಟಕ, ಜಯಂತಿ ಇತ್ಯಾದಿ ಪತ್ರಿಕೆಗಳಲ್ಲದೆ ಕನ್ನಡ ಸಾಹಿತ್ಯ ಪರಿಷತ್ ಕೂಡ ತನ್ನ ಮಹಿಳಾ ಶಾಖೆಯ ವತಿಯಿಂದ ಮೇಲಾಟಗಳನ್ನು ಏರ್ಪಡಿಸುವುದನ್ನು ಗಮನಿಸುವುದು.

[5] ಮುದವೀಡು ಕೃಷ್ಣರಾಯರು ಸಮ್ಮೇಳನಾಧ್ಯಕ್ಷರಾಗಿದ್ದ ಈ ಸಾಹಿತ್ಯ ಸಮ್ಮೇಳನದ ಮಹಿಳಾ ಗೋಷ್ಠಿಯ ಅಧ್ಯಕ್ಷ ಭಾಷಾಣದ ಸಾರಾಂಶವು ೧೯೪೦ರಲ್ಲಿ ಜಯಕರ್ನಾಟಕದಲ್ಲಿ ಪಂಚವ್ವ ಸರದಾರ ಅವರ ಹೆಸರಿನಲ್ಲಿ ಪ್ರಕಟಗೊಂಡಿದೆ. ಲೇಖನದ ಶೀರ್ಷಿಕೆ ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡಿತಿಯರ ಮುನ್ನಡೆ ಎಂದಾಗಿದ್ದು, ಲೇಖನದಲ್ಲಿ ‘ಈ ಮಹಿಳಾಗೋಷ್ಠಿಗೆ ಸೊಲ್ಲಾಪುರದ ಪ್ರಸಿದ್ಧ ಕನ್ನಡತಿಯರಾದ ಶ್ರೀ. ಸೌ. ಪಂಚವ್ವ ಸರದಾರ ಅವರು ಅಧ್ಯಕ್ಷರಾಗಿದ್ದರು ಎಂದಿದೆ. ಜಯಕರ್ನಾಟಕ, ಸಂ. ೧೮, ಸಂ. ೨, ೧೯೪೦.

[6] ಹೂ ಮೂಲೆ (ಐದು ಕದನಗಳು : ಐದು ದೃಶ್ಯಗಳು) ಪ್ರ. ಮೈಸೂರು ಪ್ರಾಂತ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು. ಈ ಪ್ರಕಟಿತ ಕೃತಿಯಲ್ಲಿ ಇರಾ, ಶ್ರೀಮತಿ ಕಾತ್ಯಾಯಿನಿ ಎಚ್. ಎಸ್., ಶ್ರೀಮತಿ ರುಕ್ಮಿಣಿ ಡಿ. ಎಸ್. ಮತ್ತು ಶ್ರೀಮತಿ ನೂರ್ ಜಹಾನ್ ಬೇಗಂ ರ ಐದು ಕವನಗಳಿವೆ. ಅದರಲ್ಲಿನ ೨ ಕವನಗಳನ್ನು ಪ್ರಸ್ತುತ ಸಂಕಲನದಲ್ಲಿ ಸೇರಿಸಿಕೊಳ್ಳಲಾಗಿದೆ. ಚಕ್ರಬಂಧ ಸ್ಪರ್ಧೆ (ಕಾತ್ಯಾಯಿನಿ ಎಚ್. ಎಸ್. ) ಮೂಕ ಸಂಕಟ (ಕೆ. ವೊ. ರತ್ನಮ್ಮಾ), ಅಪ್ಪನ ಗೌರವ (ಕೆ. ರತ್ನಮ್ಮ) ಬೇಡುವ ಬಂಧು (ಸುಶೀಲಮ್ಮ ಬಿ. ಎಲ್. ) ಹಾಗೂ ಸಾವಿತ್ರಮ್ಮನ ಸಡಗರ (ಲೀಲ ಎಂ. ವಿ.) ಅವರ ೫ ಕಿರುನಾಟಕಗಳಿವೆ. ಮಹಿಳೆಯರ ನಾಟಕ ಸಾಹಿತ್ಯವನ್ನು ಪರಿಶೀಲಿಸುವವರು ಗಮನಿಸಬೇಕಾದ ಕೃತಿ ಇದಾಗಿದೆ. ಈ ಕೃತಿಯನ್ನು ವಿಜಯಾದಬ್ಬೆಯವರು ತಮ್ಮೊಂದು ಲೇಖನದಲ್ಲಿ ಹೆಸರಿಸಿದ್ದಾರೆ.

[7] ಶಾಂತಾಬಾಯಿ ನೀಲಗಾರ, ಸದ್ಗುಣಿ ಕೃಷ್ಣಬಾಯಿ (ಉತ್ತಮ ಗೃಹಿಣಿ), ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ೧೯೯೬, (ಮೊ. ಮು. ೧೯೦೮)

[8] ತಿರುಮಲಾಂಬ, ಸುಶೀಲೆ, ಸತೀ ಹಿತೈಷಿಣಿ ಗ್ರಂಥಮಾಲೆ, ನಂಜನಗೂಡು, ೧೯೧೩

[9] ಪ್ರಸ್ತುತ ಸಂಕಲನದಲ್ಲಿರುವ ಬಾಗಲಕೋಟೆಯ ಶ್ರೀ ಪದ್ಮವತಿಯವರ ನಿರ್ಭಾಗೈ ಎಂಬ ಕತೆಗೆ ಸಂಪಾದಕರು ‘ಉತ್ತರ ಕರ್ನಾಟಕದ ಹೆಣ್ಣು ಮಗಳೊಬ್ಬಕೆ ಬರೆದುದು. ಪ್ರೋತ್ಸಾಹಕ್ಕಾಗಿ ಇದ್ದಂತೆಯೆ ಮುದ್ರಿಸಿ ಬಿಟ್ಟಿದೆ’ ಎಂಬ ಅಡಿಟಿಪ್ಪಣಿ ನೀಡಿದ್ದಾರೆ. (ಜಯಕರ್ನಾಟಕ ಸಂ-೧೦, ಸಂಚಿಕೆ ೨, ೧೯೩೧) ೧೯೩೭ ರಲ್ಲಿ ಪ್ರಕಟಗೊಂಡ ಕನ್ನಡದ ಮೊದಲ ಲೇಖಕಿಯರ ಪ್ರತನಿಧಿತ ಕಥಾಸಂಕಲನದಲ್ಲಿ ಇವರ ‘ಅವಳ ಬಾಳು’ ಎಂಬ ಕತೆಯೂ ಸೇರ್ಪಡೆಗೊಂಡಿದೆ.

[10] ಮೇಲಾಟದ ಬಹುಮಾನಗಳ ಪ್ರಕಟನೆಯ ಬಗ್ಗೆ ತಿಳಿಸುತ್ತ ಸಂಪಾದಕರಾದ ಆನಂದಕಂದ ಅವರು ಬಾಕ್ಸನ ಒಳಗೆ ಈ ಮಾತುಗಳನ್ನು ಬರೆಯುತ್ತಾರೆ. ಜಯಂತಿ, ಸಂಪುಟ ೧೧ ಸಂಚಿಕೆ ೧೧, ಧಾರವಾಡ ೧೯೪೯

[11] ಜಯಕರ್ನಾಟಕದಲ್ಲಿ ಶ್ಯಾಮಲಾದೇವಿ ಸಹ ಸಂಪಾದಕಿಯಾಗಿ ಕೆಲಸ ನಿರ್ಮಿಸುತ್ತಿದ್ದ ಕಾಲದಲ್ಲಿ ತಾಯಿ-ಮಗು ಅಂಕಣವು ಮಾತ್ರ ಇದನ್ನು ವಿಸ್ತರಿಸಿ ಸ್ತ್ರೀಯರ ಸಾಮಾಜಿಕ, ರಾಜಕೀಯ ಹಕ್ಕು ಬಾದ್ಯತೆಗಳು, ಆಸೆ, ಆಕಾಂಕ್ಷೆಗಳು ಅವರ ಪ್ರಗತಿ ವಿಚಾರಗಳು, ದೇಶ ವಿದೇಶಗಳಲ್ಲಿನ ಸ್ತ್ರೀಯರ ಪ್ರಗತಿ ಕ್ರಮದ ಪರಿಚಯ ಮತ್ತು ಮಕ್ಕಳ ಮನೋವಿಕಾಸಕ್ಕೂ ಸರ್ವಾಂಗೀಣ ಉನ್ನತಿಗೂ ಅಗತ್ಯವಾದ ವಿಷಯಗಳು ಶಿಕ್ಷಣ ತತ್ವಗಳು ಮೊದಲಾದ ವಿವೇಚನೆಗೆ ಈ ಭಾಗವು ಮೀಸಲು ಎಂದು ಘೋಷಿಸಿದೆ. ಇಷ್ಟಾಗಿಯೂ ಈ ಅಂಕಣದ ಶೀರ್ಷಿಕೆ ಹಾಗೂ ಈ ಅಂಕಣದಲ್ಲಿ ಪ್ರಕಟಗೊಂಡಿರುವ ಲೇಖನಗಳು ಸ್ವರೂಪ ನೋಡಿದರೆ ಅಂದಿನ ಕಾಲಘಟ್ಟಕ್ಕೆ ಇದೊಂದು ಅಪವಾದ ರೂಪದ ಉದಾಹರಣೆ ಎನಿಸುತ್ತದೆ (ಜಯಕನಾಟಕ ಸಂ. ೧೮, ಸಂ. ೧, ಪು. ೧೯

[12] ಇಂದಿರಾ ಜಾ. ನ., ಒಂದು ಪತ್ರ, ಜಯಂತಿ, ಸಂ. ೧೧, ಸಂಚಿಕೆ ೯, ೧೯೪೯

[13] ಬಾಯಮ್ಮ ಶಿಂಪಿ, ಕನ್ನಡ ಬರಹಗಾರ್ತಿಯನ್ನು, ಕನ್ನಡ ನುಡಿ, ಬೆಂಗಳೂರು, ೧೯೩೮

[14] ಗುಂಡಪ್ಪ ಡಿ. ವಿ., ಭಾಷೆಯ ನವೀಕರಣ, ಕನ್ನಡ ಸಾಹಿತ್ಯ ಪರಿಷತ್ತಿನ ೨ನೇ ವಿಶೇಷ ಸಾಹಿತ್ಯೋತ್ಸವ ಭಾಷಣ ೧೯೩೫, ಡಿ. ವಿ. ಜಿ. ಕೃತಿ ಶ್ರೇಣಿ, ಸಂಪುಟ ೧, ಹಾಮಾನಾ(ಸಂ) ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ೧೯೮೭, ಪು. ೨೩೧

[15] ಗೋವಿಂದ ಪೈ, ಶ್ರೀ ಪಾರ್ಶ್ವನಾಥ ತೀರ್ಥಂಕರ ಚರಿತ್ರೆ, ಶ್ರೀ ಅನಂತಕೀರ್ತಿ ಗ್ರಂಥಮಾಲೆಯ ೪ನೇ ಪುಷ್ಪ ಶಾಸ್ತ್ರದಾನ ಪಣಪೀಲ ಅರಮನೆ, ಶ್ರೀಮತಿ ದೇಜಮ್ಮನವರು ಜಯಂತಿ ಛಾಪಖಾನೆ, ಕಾರ್ಕಳ, ದಕ್ಷಿಣ ಕನ್ನಡ, ೧೯೩೩

[16] ಗೋವಿಂದ ಪೈ, ಶ್ರೀ ಬಾಹುಬಲಿ ಗೋಮಟೇಶ್ವರ ಚರಿತ್ರ, ಪ್ರಕಾಶಿಕೆ ಶ್ರೀಮತಿ ದೇಜಮ್ಮನವರು, ಸರಸ್ವತಿ ಪ್ರಿಂಟಿಂಗ್ ವರ್ಕ್ಸ್‌, ಮಂಗಳೂರು, ೧೯೩೯

[17] ಗೋವಿಂದ ಪೈ, ಮುನ್ನುಡಿ ಶ್ರೀ ಪಾಶ್ವನಾರ್ಥ ತೀರ್ಥಂಕರ ಚರಿತೆ, ೧೯೩೩

[18] ಬಂಧುವರ್ಮ, ಸತೀಧರ್ಮಸಾರ, ಬಿ. ಎಸ್. ಸಣ್ಣಯ್ಯ (ಸಂ), ಕನಕಗಿರಿ ಪ್ರಕಾಶನ, ಮಲೆಯೂರು, ೧೯೭೬