ಈಗ ನಾನು ಬರೆಯುವ ಕಥೆಗೆ ೪ ವರುಷಗಳಾದುವು. ನಮ್ಮ ಅಜ್ಜನವರ ಮನೆಯ ಹತ್ತಿರ ಶ್ರೀಪತರಾಯರೆಂಬೊಬ್ಬ ಸದ್ಗೃಹಸ್ಥರಿದ್ದರು. ಅವರಿಗೆ ರಮೇಶನೆಂಬೊಬ್ಬನೇ ಮಗ. ಅವನಿಗೆ ೧೨ನೇ ವರುಷ ಎನ್ನುವಾಗ ಅವನ ಸೋದರ ಅತ್ತೆ ಕಲ್ಯಾಣಮ್ಮನವರು ಪತಿವಿಯೋಗವಾದುರಿಂದ ತನ್ನ ಏಕ ಮಾತ್ರ ಪುತ್ರಿಯಾದ ಲೀಲೆಯೊಡನೆ ಅಣ್ಣನಮನೆಯಲ್ಲಿ ಬಂದಿದ್ದರು. ರಮೇಶನೂ ಲೀಲೆಯೂ ಒಂದೇ ಶಾಲೆಗೆ ಹೋಗಿ ಕಲಿತಿದ್ದರು. ಇಬ್ಬರಲ್ಲೂ ಅನ್ಯೋನ್ಯ ಪ್ರೇಮವಿತ್ತು. ಲೀಲೆಯು ಸ್ವಲ್ಪ ನನ್ನಂತೆ ಕಪ್ಪು. ಆದರೆ ಬಹಳ ಚಂದವಾಗಿದ್ದಳೇ ಸರಿ. ಅವಳ ಕಪ್ಪಾದ ದೊಡ್ಡ ಕಣ್ಣುಗಳು, ಜಾಣತನ, ಬುದ್ಧಿ, ವಿನಯ ಈಗಲೂ ನನಗೆ ನೆನಪಾದರೆ ಹೊಟ್ಟೆ ಉರಿಯುತ್ತದೆ. ಅವಳು ಸ್ವಲ್ಪ ಮಟ್ಟಿಗೆ ಕಲಿತಿದ್ದಳು. ಓದುಬರಹದಲ್ಲಿ ಅವಳಿಗೆ ಬಹಳ ಉತ್ಸಾಹ, ಪ್ರೀತಿ ಇತ್ತಾದರೂ ದುದೈರ್ವವು ಅದನ್ನು ಮರೆ ಮಾಡಿತು. ಇರಲಿ, ಲೀಲೆಗೆ ೧೧ ವರುಷ ತುಂಬುತ್ತಲೇ ಸೋದರ ಮಾವ ಶ್ರೀಪತರಾಯರು ಅವಳನ್ನು ಮನೆ ಆಚೆ ಅಟ್ಟಿಬಿಡುವ ಯೋಚನೆಯಲ್ಲಿದ್ದರು. ರಮೇಶ, ಲೀಲೆಯರಿಬ್ಬರಲ್ಲೂ ಪ್ರೇಮವು ಬೆಳೆದ ಸಂಗತಿಯೂ ಅವರಿಗೆ ಗೊತ್ತಿತ್ತು. ತನ್ನ ವಿನಹ ಲೀಲೆಗೆ ಇನ್ನಾರು ಆಶ್ರಿತರಿಲ್ಲವೆಂಬುದನ್ನು ಅವರು ಅರಿತಿದ್ದರು. ಆದರೆ, ಆದರೇನು – ತಂಗಿಯ ಮೇಲೆ ಸ್ವಲ್ಪವಾದರೂ ಕರುಣೆ ಪ್ರೇಮವಿದ್ದರೆ ಅವರು ತನ್ನ ಮಗನೊಡನೆ ಅವಳ ವಿವಾಹವನ್ನು ನೆರವೇರಿಸಬಹುದಿತ್ತು. ಹಾಗೆ ಮಾಡಿದರೆ ಅವರ ದೊಡ್ಡಸ್ತಿಕೆಗೆ ಕುಂದುಂಟಾಗುವುದಲ್ಲವೇ? ಅನಾಥರಾದ ತಾಯಿ ಮಗಳಿಬ್ಬರನ್ನು ೧೦ ವರುಷದಿಂದ ಸಾಕಿದ್ದೇ ದೊಡ್ಡ ಉಪಕಾರವೆಂದೆಣಿಸುವವರು ಲೀಲೆಯನ್ನೇ ಮನೆಸೊಸೆ ಮಾಡುವರೇ? ಹಣವಂತರ ನಿಜವಾದ ಪ್ರೇಮ, ಆದರಗಳು ಹಣವಂತರ ಮೇಲೆ; ಒಡಹುಟ್ಟಿದ ತಂಗಿ, ಅಕ್ಕ, ಅಣ್ಣತಮ್ಮ ಮುಂತಾದ ಬಂಧುಬಾಂಧವರಲ್ಲಿಲ್ಲ. ಅದರಲ್ಲೂ ದೈವವಶಾತ್ ಶ್ರೀಪತರಾಯರಿಗೆ ಉತ್ತರ ಕನ್ನಡದಲ್ಲಿ ತಕ್ಕಮಟ್ಟಿಗೆ ಉಂಡು ತಿಂದು ಇದ್ದ ಒ‌ಬ್ಬ ೪೫ ವರುಷದ ಯುವಕನು ಸಿಕ್ಕಿದನು. ಲೀಲೆಯು ಆತನ ಪತ್ನಿಯಾದಳು. ರಮೇಶನಿಗೆ ಅತಿದುಃಖವಾಯಿತು. ಏನು ತಾನೇ ಮಾಡಬಲ್ಲನು.

ಲೀಲೆಯು ಮದುವೆಗೆ ಆಗಲೇ ವರುಷವಾಯಿತು. ಅವಳಮ್ಮನು ತೀರಿಹೋಗಿದ್ದರು. ಅಮ್ಮನ ಕಾಯಿಲೆಯಲ್ಲಿ ಒಂದೇ ಒಂದು ಸಲ ಅವಳು ಸೋದರಮಾವನ ಮನೆಗೆ ಬಂದಿದ್ದಳು. ಕ್ಷಯರೋಗಪೀಡಿತನಾದ ಲೀಲೆಗೆ ಬಡದಾಟವೂ ಬೈಗಳವೂ ಸಿಗುತ್ತಿದ್ದುವು. ಆದರೂ ಅವಳು ಎಲ್ಲವನ್ನು ಸಹಿಸಿಕೊಂಡು ತನ್ನಿಂದಾದಮಟ್ಟಿಗೆ ಪತಿಯನ್ನು ಸಂತೋಷಗೊಳಿಸುತ್ತಿದ್ದಳು.

ರಾತ್ರಿ ಘಂಟೆ ಮೂರು ಇರಬಹುದು. ಲೀಲೆಯು ಪತಿಯ ಬಳಿಯಲ್ಲಿ ಕೂತುಕೊಂಡು ಅವನಿಗೆ ಗಾಳಿ ಹಾಕುತ್ತಿದ್ದಳು. ಅಕಸ್ಮಾತಾಗಿ ರಂಗಣ್ಣ (ಲೀಲೆಯ ಪತಿ)ನಿಗೆ ರಕ್ತವಾಂತಿಯಾಯಿತು. ವಾಂತಿಯಾದೊಡನೆ ಅವನ ಅವಸ್ಥೆಯು ನೋಡಲಸಾಧ್ಯವಾಯಿತು. ರಂಗಣ್ಣನು ಕೈಕಾಲು ಬಡಿಯಲಾರಂಭಿಸಿದನು. ಕಣ್ಣುಗಳಿಂದ ನೀರು ಸುರಿಯುತ್ತಿತ್ತು. ಸ್ನೇಹಪೂರ್ವ ನೇತ್ರಗಳಿಂದ ಒಮ್ಮೆ ಲೀಲೆಯನ್ನು ನೋಡಿ ಅವಳ ಮುದ್ದಾದ ಕೈಗಳನ್ನು ತನ್ನ ಎದೆಯ ಮೇಲಿಟ್ಟುಕೊಂಡು “ಲೀಲಾ, ನನ್ನನ್ನು ಕ್ಷಮಿಸಲಾರೆಯಾ? ನಾನು ನಿನ್ನನ್ನು ನನಗೆ ಕಠಿಣ ರೋಗವಿತ್ತಾದರೂ ಈ ಮುದಿವಯಸ್ಸಿನಲ್ಲಿ ಹುಚ್ಚುತನದಿಂದ ನಿನ್ನನ್ನು ಮದುವೆ ಮಾಡಿಕೊಂಡು ನಿನ್ನ ಜನ್ಮವನ್ನೇ ಹಾಳುಮಾಡಿದೆನು” ಎಂದೊಡನೆ ಲೀಲೆಯು ಮುಗ್ದೆಯಂತೆ ಅಳುತ್ತಿದ್ದಳು. ರಮೇಶ ಅಣ್ಣ, ತಂದೆತಾಯಿ ಎಲ್ಲರೂ ಅವನಿಗೆ ವಾಂತಿಯಾದಾಕ್ಷಣ ಅಲ್ಲಿ ಬಂದಿದ್ದರು. ಅತ್ತೆಯು ಹೇಳಿದಳು “ಚಾಂಡಾಲಿನಿ, ಸುಮ್ಮನೇ ಕೂತಿರುವೆ! ನಿನ್ನನ್ನು ಈ ಮನೆಗೆ ತಂದಿದ್ದರಿಂದ ನನ್ನ ಮಗನಿಗೆ ಈ ಅವಸ್ಥೆ ಬಂತು” ಅಯ್ಯೋ! ರಂಗಣ್ಣ ದುಃಖ, ರೋಷ ಒಟ್ಟಾಗಿ ಬಂತು. “ಅಮ್ಮ, ಸಾಕು ನಿಮ್ಮ ಪುರಾಣ. ಏನು ಅರಿಯದಂತಹ ಬಾಲೆಯನ್ನು ಏಕೆ ದೂಷಿಸುತ್ತಿರುವೆ? ಈವರೆಗೆ ನೀವೆಲ್ಲರೂ ನಿಮ್ಮಷ್ಟಕ್ಕೆ ನಾನು ನನ್ನಿಷ್ಟಕ್ಕೆ ಅವಳನ್ನು ಹಿಂಸಿಸಿದೆವು. ಈಗ ಏಕೆ ಅವಳನ್ನು ಬೈಯುತ್ತಿ? ತಪ್ಪು ಮಾಡಿದವರು ನಾವು. ದೇವಾ! ನನ್ನ ಲೀಲೆಯನ್ನು ರಕ್ಷಿಸು. ನನ್ನನ್ನು ಕ್ಷಮಿಸು” ಹೀಗೆ ಹೇಳಿ ಲೀಲೆಯನ್ನು ಘಟ್ಟಿಯಾಗಿ ಅಪ್ಪಿಕೊಂಡು ಧಪ್ಪನೇ ಬಿದ್ದನು. ಪ್ರಾಣವಾಯುವು ಹಾರಿಹೋಯಿತು.

ಇತ್ತ ರಮೇಶನು ೩ ವರುಷಗಳಿಂದ ಲೀಲೆಯನ್ನು ನೋಡಿರಲಿಲ್ಲ. ಒಮ್ಮೆ ಅವನು ವಿಧವೆಯಾದ ಲೀಲೆಯನ್ನು ನೋಡಲು ಬಂದನು. ಒಬ್ಬರನ್ನೊಬ್ಬರು ನೋಡಿ ಅಳಲಾರಂಭಿಸಿದರು. ಇಬ್ಬರು ಈಗ ಚಕ್ಕವರಲ್ಲ. ವಯಸ್ಸಿಗೆ ಬಂದವರು. ರಮೇಶನು ಕೇಳಿದನು – ‘ನಿನ್ನನ್ನು ಈ ಚಿಕ್ಕ ವಯಸ್ಸಿನಲ್ಲಿ ಈ ದೆಸೆಯಲ್ಲಿ ನೋಡುವ ದುರಾದೃಷ್ಟವು ನನ್ನ ಪಾಲಿಗೆ ಬಂತಲ್ಲ. ಅಪ್ಪನೂ, ಅಮ್ಮನೂ ತೀರಿಕೊಂಡರು. ೩ ದಿನಗಳಿಗಾದರೂ ಮನೆಗೆ ಕರಕೊಂಡು ಹೋಗೋಣವೆಂದರೆ, ನಾನೇ ಈಗ ಅಲ್ಹಾಬಾದಿನೊಂದು ಕೋಲೆಜಿನಲ್ಲಿ ಓದುತ್ತಿರುವೆನು. ಅಯ್ಯೊ!

ವಿಧವೆಯರಿಗಿರುವಷ್ಟು ಅವಮಾನ ಪರದೂಷಣೆ ಲೋಕದಲ್ಲಿ ನಮ್ಮ ಸಮಾಜದಲ್ಲಿ ಇನ್ನಾರಿಗೂ ಇಲ್ಲ. ವಿಧವೆ ಎಂದಾಕ್ಷಣ ಅವಳ ಮೇಲೆ ಸಂಶಯ. ಎಲ್ಲರ ಕಣ್ಣುಗಳಿಗೂ ಅವಳೊಂದು ಮುಳ್ಳು. ಸಾವಿರಾರು ಒಳ್ಳೆ ಗುಣಗಳು ಅವಳಲ್ಲಿದ್ದರೂ ಅವಳ ಹೃದಯವೂ ಮನಸ್ಸೂ ಎಷ್ಟು ನಿಷ್ಕಪಟವಾಗಿದ್ದರೂ ವೈಧವ್ಯದೆಸೆಯಲ್ಲಿ ಎಲ್ಲಾ ಮಾಯವಾಗುತ್ತದೆ. ವಿಧವೆಯಾಗಿ ಪರತಂತ್ರಳಾಗಿರುವುದಕ್ಕಿಂತ ಸಾವೇ ಮೇಲು. ಲೀಲೆಯು ಇಂತಹವರಲ್ಲೊಬ್ಬಳು. ಅವಳು ಏನು ಕೆಲಸ ಮಾಡಿದರೂ ಕೂತರೂ ಎದ್ದರೂ ಅದು ತಪ್ಪಾಗುತ್ತಿತ್ತು. ಒಂದು ದಿನ ಕೆಲಸವೆಲ್ಲಾ ಆದನಂತರ ಕೂದಲುಗಳನ್ನು ಆರಿಸಿಕೊಳ್ಳುತ್ತಾ ಅವಳು ಕೂತಿದ್ದಳು. ಅತ್ತೆಯ ಸವಾರಿ ಬಂತು – “ಅಬ್ಬಬ್ಬ ನೋಡಿದಿರಾ ಇವಳ ಸೊಬಗು! ಶೃಂಗಾರವಲ್ಲಿಯ ಅಲಂಕಾರ ಮಾಡಿಕೊಂಡು ಯಾರನ್ನು ಮೋಹಿಸಲು ಹೊರಟಿರುವಳೋ ಕಾಣೆ. ದೋಸೆಗೆ ಹಾಕಿದ ಅಕ್ಕಿ ಅಲ್ಲೇ ಬಿದ್ದುಕೊಂಡಿದೆ, ಭೀಮನಂತೆ ತಿಂದುಕೊಂಡು ಅಲೆಯುವುದೇ ಮಗುವನ್ನು ಕೊಂದುಹಾಕಿದ ಮಾರಿ ಎಂದು ಸಾಯುವಳೋ.”

ಲೀಲೆಯು ಯಾವಾಗಲೂ ಇಂತಹ ಮಾತುಗಳನ್ನು ಕೇಳುತ್ತಿದ್ದಳು. ಇಂದು ಮಾತ್ರ ಅವಳಿಗೆ ಬಹಳ ದುಃಖವಾಯಿತು. ಇಷ್ಟು ದಿನದಿಂದ ಒತ್ತಿಟ್ಟ ಮಾತುಗಳು ಹೊರಬಿದ್ದುವು. “ಹೌದು ಅತ್ತೆಮ್ಮ, ನಾನು ಯಾರ ಕೈಹಿಡಿದಾದರೂ ಹೋಗುವೆನು. ಇಂದಿನ ನನಗೆ ಈ ಮನೆಯ ಋಣಾನುಬಂಧವೂ ತೀರಿತು. ನನ್ನ ಮನೆಯವರ ಮೇಲಿನ ಪ್ರೀತಿಯಿಂದಲೂ ಯಾವ ತರದ ಸಹಾಯವಿಲ್ಲದ ಅನಾಥೆಯಾಗಿದ್ದದರಿಂದಲೂ ಇಷ್ಟರವರೆಗೆ ನಿಮ್ಮೆಲ್ಲರ ಹೇಳಲಸಾಧ್ಯವಾದ ದೂಷಣೆಗಳನ್ನು ತಿಂದು ಇದ್ದೆನು. ಇಂದು ನೀವೆ ನನಗೆ ಹೊಟ್ಟೆಗಾಗಿ ದಾರಿ ತೋರಿಸಿದಿರಿ. ಅನಾಥರಿಗೆ ಆ ದೇವರೇ ಗತಿ. ನನ್ನ ಹಣೆಬರಹದಲ್ಲಿ ಇದ್ದದ್ದಾಗಲಿ, ಇಗೋ ಈಗಲೇ ಹೊರಡುವೆನು” ಎಂದು ಎದ್ದಳು.

ಅತ್ತೆ -“ನೀನು ಹೋದರೆ ನಮ್ಮ ಪೀಡೆ ಹೋಯಿತು, ಹೋಗು ಈಗಲೇ?”

“ಆಗಲಿ” ಎಂದು ಹೇಳುತ್ತಾ ಅಲ್ಲಿಂದ ಮಾಯವಾದಳು.

ಇತ್ತ ರಮೇಶನ ಓದೆಲ್ಲ ತೀರಿದ ನಂತರ ಅಲ್ಹಾಬಾದಿನಲ್ಲೇ ಅವನಿಗೆ ೩೦೦ ರೂಪಾಯಿ ಕೆಲಸವಾಗಿತ್ತು. ಮದುವೆಯಾಗಿರಲಿಲ್ಲ. ಪ್ರಭಾಕರನೆಂಬೊಬ್ಬ ದುಮಾರ್ಗಪ್ರವರ್ತಕನಾದವನು ಅವನ ಸ್ನೇಹಿತನಾಗಿದ್ದನು. ಅವನು ಕೆಟ್ಟವನೆಂದು ರಮೇಶನಿಗೆ ಗೊತ್ತಿತ್ತು. ಆದರೆ ತಾನು ಘಟ್ಟಿಮನಸ್ಸು ಮಾಡಿಕೊಂಡಿದ್ದರೆ ಅವನು ಏನು ತಾನೇ ಮಾಡುವನು ಎಂದು ಅವನೊಡನೆ ಸ್ನೇಹ ಬೆಳೆಸಿದನು.

ಒಂದು ದಿನ ಪ್ರಭಾಕರನು ರಮೇಶನನ್ನು ಒತ್ತಾಯದಿಂದ ಒಂದು ದೊಡ್ಡ ಮನೆಗೆ ಕರಕೊಂಡು ಹೋದನು. ಮನೆಯು ೬ ಅಂತಸ್ಥಿನ ದೊಡ್ಡಮನೆ. ಇವರಿಬ್ಬರನ್ನು ಬಹಳ ಮರ್ಯಾದೆಯಿಂದ ಒಬ್ಬನು ಕರಕೊಂಡು ಹೋಗಿ ಒಂದು ದೊಡ್ಡ ಹಾಲಿನಲ್ಲಿ ಸೋಫದ ಮೇಲೆ ಕೂಡ್ರಿಸಿದನು. ಅಲ್ಲಿನ ವ್ಯವಸ್ಥೆ ಎಲ್ಲಾ ನೋಡಿ ರಮೇಶನಿಗೆ ಸಂಶಯ ಹುಟ್ಟಿತು. ಪ್ರಭಾಕರನು ತಾನೇ ಈಗಲೇ ಬರುವೆನೆಂದು ಹೇಳಿ ಹೊರಗೆ ಹೋಗಿ ಬಾಗಿಲನ್ನು ಭದ್ರಪಡಿಸಿದನು. ಸ್ವಲ್ಪ ಹೊತ್ತಿನ ಮೇಲೆ ಒಬ್ಬ ಪರಿಚಾರಿಕೆಯು ಅನೇಕ ತಿಂಡಿಪದಾರ್ಥಗಳನ್ನು ತಂದು ಮುಂದಿಟ್ಟು ಹೋದಳು. ಆ ಮೇಲೆ ಬಹಳ ಸೊಗಸಾಗಿ ಜರತಾರೆಯ ಸೀರೆಯನ್ನುಟ್ಟು ವೀಳ್ಯವನ್ನು ಹಾಕಿಕೊಂಡು ಒಬ್ಬ ಸುಂದರಿಯು ನಟಿಸುತ್ತಾ ಬಂದು ರಮೇಶನ ಬಳಿಯಲ್ಲಿ ಕೂತಳು. ರಮೇಶನಿಗೆ ಏನು ಮಾಡೋಣವೆಂಬುದು ತಿಳಿಯಲಿಲ್ಲ. ಅವಳ ಮುಖವನ್ನೇ ದಿಟ್ಟಿಸಿ ನೋಡಿದನು.

“ಲೀಲೆ, ಹಾ!ಲೀಲೆ, ನಿನ್ನ ಅವಸ್ಥೆ ಹೀಗಾಯಿತೇ?” ಎಂದು ಕಣ್ಣು ಮುಚ್ಚಿಕೊಂಡು ಮೂರ್ಛಾಗತನಾದನು. ಲೀಲೆಯು ಉಪಚಾರ ಮಾಡಿದಳು. ರಮೇಶನು ಕಣ್ಣುಬಿಟ್ಟನು. ಲೀಲೆ “ರಮೇಶ, ನನ್ನನ್ನು ಕ್ಷಮಿಸು. ನನ್ನನ್ನು ಈ ಮಾರ್ಗಕ್ಕೆ ಎಳೆತಂದ ನಿಮ್ಮ ಸಮಾಜಕ್ಕೆ ಧಿಃಕಾರವಿರಲಿ. ಇದರಲ್ಲಿ ನನ್ನದೇನು ತಪ್ಪಿಲ್ಲ. ನಿಮ್ಮ ಸಮಾಜದ ತಪ್ಪು.” ರಮೇಶನು ಎದ್ದು ಕೂತನು. ಲೀಲೆಯ ಎರಡು ಕೈಗಳನ್ನು ತನ್ನ ಎದೆಯ ಮೇಲಿಟ್ಟುಕೊಂಡು “ಪ್ರಿಯೆ ಲೀಲಾ, ಇನ್ನು ಸಹ ನೀನು ನನಗೆ ಪ್ರಿಯಳೇ ಸರಿ. ಈ ಮಾರ್ಗಕ್ಕಿಂತ ನಿನಗೆ ಬೇರೆ ಯಾವ ಮಾರ್ಗವೂ ಸಿಗಲಿಲ್ಲವೇ?”

ಲೀಲೆ -“ರಮೇಶ, ನನ್ನಂಥ ವಿದ್ಯಾಹೀನೆ, ಅನಾಥೆ, ದಿಕ್ಕಿಲ್ಲದ ವಿಧವೆಗೆ ಇದೇ ಗತಿ. “

ರಮೇಶ -“ಲೀಲಾ, ಆದದ್ದಾಯಿತು. ಇನ್ನಾದರೂ ನಾನು ಹೇಳುವ ಮಾತನ್ನು ಕೇಳು. “

ಲೀಲಾ – “ಏನು!”

ರಮೇಶ – “ಸಮಾಜಕ್ಕಾಗಲಿ, ಜನರಿಗಾಗಲಿ ಹೆದರುವ ಪಾಪಿಯು ನಾನಲ್ಲ. ನನ್ನನ್ನು ಮದುವೆ ಮಾಡಿಕೊಳ್ಳುತ್ತೀಯಾ? ಉಪಾಯವಿಲ್ಲದೇ ದುರ್ಮಾರ್ಗಪ್ರವೃತ್ತಳಾದವಳನ್ನು ನಾನು ಕರೆದುಕೊಳ್ಳುವೆನು. ಬಾ, ಇಷ್ಟರವರೆಗೆ ನಡೆದ ಕಥೆ ಎಲ್ಲಾ ಹೇಳು. ಹೊರಡು; ನಮ್ಮ ಮನೆಗೆ ಹೋಗೋಣ.” ಲೀಲೆಯೂ ಹೊರಟು ಹೋದಳು. ಪಾಪ! ಪ್ರಭಾಕರನು ತಾನು ರಮೇಶನನ್ನು ದುರ್ಮಾರ್ಗಕ್ಕೆ ಹಚ್ಚಿದನೆಂದು ಬಹಳ ಸಂತೋಷದಲ್ಲಿದ್ದನು. ಕೆಲವು ದಿನಗಳಲ್ಲೇ ಇಬ್ಬರಿಗೂ ಮದುವೆಯಾಯಿತು. ಇಂತಹ ಅನೇಕ ಸಂಗತಿಗಳು ನಮ್ಮ ಸಮಾಜದ ಕುರುಡತನದಿಂದ ನಡೆಯುತ್ತಿವೆ. ಈಗಲಾದರೂ ಸಮಾಜವು ಕಣ್ಣು ಬಿಟ್ಟೀತೆ?

 

– ಶ್ರೀಮತಿ ವಾಸಂತೀಬಾಯಿ ಪಡುಕೋಣೆ,
ಜಯಕರ್ನಾಟಕ, ಸಂಪುಟ ೮, ಸಂಚಿಕೆ ೩, ಕಲಕತ್ತ, ೧೯೩೦