ಆನಂದಕಂದರು ಕಾವ್ಯರಚನೆಯಿಂದ ಸೃಜನ ಸಾಹಿತ್ಯಕ್ಕೆ ಶ್ರೀಕಾರ ಹಾಕಿದರು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಆನಂದಕಂದ ಹಾಗೂ ಅವರಣ್ಣ ಬಲರಾಮಪ್ಪ ಜತೆಯಾಗಿ ಕವಿತೆಯ ಒಂದೊಂದು ಸಾಲು ರಚಿಸುತ್ತಿದ್ದರು. ಇಬ್ಬರಲ್ಲಿಯೂ ಇದೊಂದು ಮೇಲಾಟವಾಗಿತ್ತು. ಬಾಲ್ಯದ ಕವಿತಾರಚನೆಯ ಆಟವೇ ಅವರನ್ನು ನಾಡಿನ ಪ್ರತಿಷ್ಠಿತ ಕವಿಗಳಲ್ಲಿ ಒಬ್ಬರನ್ನಾಗಿ ಮಾಡಿತು. ಇವರ ಸೃಜನ ಕೃತಿಗಳಲ್ಲಿ ಕವನ ಸಂಕಲನಗಳೇ ಅಧಿಕ. ಅನಂತರ ‘ಜಯಂತಿ’ ಪತ್ರಿಕೆಯಲ್ಲಿ ‘ಸಾಮಾಜಿಕ’ ಎಂಬ ಹೆಸರಿನಿಂದ ಬರೆದ ಆಧುನಿಕ ವಚನಗಳು ಅಸಂಖ್ಯ.

ಮುದ್ದನಮಾತು, ಅರುಣೋದಯ, ವಿರಹಿಣಿ, ಒಡನಾಡಿ, ಕಾರಹುಣ್ಣಿಮೆ ಹಾಗೂ ನಲ್‌ ವಾಡಗಳು ಇವು ಪ್ರಮುಖವಾದ ಕವನ ಸಂಕಲನಗಳು. ದೇಶ, ಭಾಷೆ ಹಾಗೂ ಇತರ ಸಂದರ್ಭಗಳಿಗಾಗಿ ಬರೆದ ಕವಿತೆಗಳು, ಸಂಕಲನಗಳು ಬೇರೆ.

ಬೆಳಗಾವಿಯ ರಾಷ್ಟ್ರೀಯ ಶಾಲೆಯಲ್ಲಿದ್ದಾಗ ಅಲ್ಲಿಯ ಒತ್ತಾಯದ ಮರಾಠಿ ಹಾಡುಗಳಿಗೆ ಪ್ರತಿಯಾಗಿ ೨೧ರ ಹರೆಯದಲ್ಲಲಿಯೇ ರಚಿಸಿದ-

“ಎನಿತು ಇನಿದು ಈ ಕನ್ನಡ ನುಡಿಯು
ಮನವನು ತಣಿಸುವ ಮೋಹನ ಸುಧೆಯು!”

ಈ ಪದ್ಯ ನಾಡಗೀತೆಯ ಮಟ್ಟಕ್ಕೆ ಬಂದು ನಿಂತಿದೆ.

‘ಮುದ್ದನ ಮಾತು’

[1] ಕವನ ಸಂಕಲನದಲ್ಲಿ ಆನಂದಕಂದರು ಮುದ್ದು ಮಕ್ಕಳ ಮೋಹಕ ವರ್ಣನೆಯ ಜತೆ ಮಕ್ಕಳ ಆಟನೋಟಗಳನ್ನು, ಮಕ್ಕಳ ಮನೋಭಾವವನ್ನು, ಮಾನಸಿಕಕ ವಿಶ್ಲೇಷಣೆಯನ್ನೂ ಸಮರ್ಥವಾಗಿ ಚಿತ್ರಿಸಿದ್ದಾರೆ.

ಮಗು ತಾಯಿಯ ತೊಡೆಯ ಮಡಿಲಲ್ಲಿ ಮಲಗಿದಾಗ-

“ಎನಿತು ಕೋಮಲ! ಎನಿತು ಮಿದು! ನಿನ್ನ ಮೆಯ್ಯಿಹುದು?
ಎನಿಸುವುದ ನನಗೆ ‘ಮೂಳೆಗಳಿಲ್ಲವೋ’ ಎಂದು…”

– ಎಂದು ಹೇಳುತ್ತಾರೆ.

ಹುಡುಗರಲ್ಲಿ ಮಂಗತನವು ಮನೆಮಾಡಿಕೊಂಡಿರುವುದಕ್ಕೆ ಸಾಕ್ಷಿಯಾಗಿ ‘ಹುಡುಗತನ’ ಕವಿತೆಯಲ್ಲಿ ಒಬ್ಬ ಹುಡುಗ.

“ಹುಡುಗರೆಲ್ಲ ಗುಬ್ಬಿಮನೆ ಮಾಡಿಯಾಡುವರು.
ಹೋಗಿ ನಾ ಕೆಡಿಸಿ ಬರಲೆ?”

– ಎಂದು ಕೇಳುತ್ತಾನೆ.

ಮಕ್ಕಳ ಸ್ವಭಾವವನ್ನು, ಅವರ ಆಟಪಾಟಗಳನ್ನು, ಮಕ್ಕಳ ಕಣ್ಣಿಗೆ ಕಾಣುವ ಪರಿಸರವನ್ನು ಮನ ಮುಟ್ಟುವಂತೆ ಈ ಸಂಕಲನದ ಕವಿತೆಗಳಲ್ಲಿ ಆನಂದಕಂದರು ರೂಪಸಿದ್ದಾರೆ.

‘ಅರುಣೋದಯ’ ಕವನ ಸಂಕಲನದಲ್ಲಿ ಕನ್ನಡದ ಬಗೆಗೆ ಅಭಿಮಾನ ತುಂಬಿಸುವ, ಕೆಚ್ಚನ್ನು ಪ್ರಚೋದಿಸುವ ಕವಿತೆಗಳಿವೆ. ‘ಎನಿತು ಇನಿದು ಈ ಕನ್ನಡ ನುಡಿಯು’ ಇದರಲ್ಲಿದೆ. ‘ರಾಮರಾಯನ ರಣದುಂದುಭಿ’ಯಲ್ಲಿ ವಿಜಯನಗರದ ಅಂದಿನ ಕೆಚ್ಚು, ಇಂದಿನ ಕನ್ನಡಿಗರಲ್ಲಿ ಪ್ರಜ್ವಲಿಸುವಂತೆ ಕವಿ,

“ಏಳಿರೇಳಿರಿ! ಬಂಟರೆಲ್ಲರು! ತಾಳಿಕೋಟೆಗೆ ತೆರಳುವಾ!” ಎಂದು ಆಹ್ವಾನಿಸುತ್ತಾರೆ. ಕನ್ನಡನಾಡಿನ ಕೆಚ್ಚಿನ ಜತೆ, ದೇಶಭಕ್ತಿ, ಸ್ವಾತಂತ್ಯ್ರಾಭಿಮಾನದ ಕವಿತೆಗಳೂ ಇದರಲ್ಲಿವೆ.

‘ವಿರಹಿಣಿ’ ಹೆಣ್ಣಿನ ವಿರಹಭಾವವನ್ನು ಮನ ಕಲಕುವಂತೆ ತೋರುವ ಪ್ರಣಯಗೀತೆಗಳ ಸಂಗ್ರಹ. ಇಲ್ಲಿಯ ಭಾವಗೀತೆಗಳು ಹಾಡಲು ಅನುಕೂಲವಾಗುವಂತೆ ಪ್ರತಿ ಕವಿಗೆ ಉಚಿತವಾದ ರಾಗಗಳ ಹೆಸರನ್ನೂ ಸೂಚಿಸಿದ್ದಾರೆ. ಆನಂದಕಂದರು ಇಲ್ಲಿ ವಿರಹದ ನೂರಾರು ತರಹಗಳನ್ನು ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಮೂರು ಕವಿತೆಗಳು ಇಲ್ಲಿ ಗಜಲ್‌ ಧಾಟಿಯಲ್ಲಿರುವುದು ವಿಶೇಷ. ಇದರಲ್ಲಿಯ ‘ಶಬರಿಯ ಬಾಳು’ ಒಂದು ಸ್ವತಂತ್ರ ಖಂಡ ಕಾವ್ಯದಂತಿದೆ. ರಾಮನಿಗಾಗಿ ನಿರೀಕ್ಷೆಯಲ್ಲಿದ್ದ ಶಬರಿ ತಳೆದ ಆಶಾ ಭಾವ ಮನಸ್ಸನ್ನು ಕಲಕುತ್ತದೆ. ಕನ್ನಡ ಪ್ರೇಮಗೀತೆಗಳ ಮಾಲಿಕೆಯ ಕಾವ್ಯ ಸಂಕಲನಗಳಲ್ಲಿ ‘ವಿರಹಿಣಿ’ ಒಂದು ವಿಶಿಷ್ಟ ಸ್ಥಾನವನ್ನು ಪಡೆಯುತ್ತದೆ.

ವಿರಹಿಯ ನೋವು ಚಿತ್ರಿಸುವ ‘ವಿರಹಿಣಿ’ ಕವನಗಳಂತೆ’ ‘ಒಡನಾಡಿ’ ಸಂಕಲನದ ಕವಿತೆಗಳು ಪ್ರೀತಿ, ಒಲವಿನ ವಿಸ್ತಾರವನ್ನು ತೋರಿವೆ. ಈ ಸಂಗ್ರಹದಲ್ಲಿ ಹೆಚ್ಚು ಯಶಸ್ವಿ ಕವಿತೆಗಳೆಂದರೆ, ‘ಬಂತು ಬಂತು ಮಾಗಿ’ ನೋಡು, ಬರುವ ಸುಗ್ಗಿಯಾಟ ‘ಜಯ ಜಯ ಜಯ ಫಾಲ್ಗುಣ’ ಹಾಗೂ ‘ಹೊಸ ದಿನ’ ಇವು.

“….ಮುಂಬಯದ ಮುಗ್ಧ ಪ್ರಣಯದ ಆತುರ-ಕಾತರಗಳನ್ನು, ಏರುವರಯದ ಕಾಮಪ್ರಣಯದ ಇತಿಹಾಸಗಳನ್ನೂ, ತುಂಬುವರಯದ ಅನುಭವ ಪ್ರಣಯದ ಸುಖದುಃಖಗಳ ಉಯ್ಯಾಲೆಯಾಟವನ್ನೂ, ಇಳಿವರಯದ ಪರಿಪಕ್ವ ಪ್ರಣಯದ ತತ್ತ್ವಜ್ಞತೆಯನ್ನೂ ಇಲ್ಲಿಯ ಕೃತಿಗಳಲ್ಲಿ ನೋಡಬಹುದು.[2] ಎಂದು ಆನಂದಕಂದರಿಗೆ ಹೇಳಿಕೊಂಡಂತೆ ಪ್ರೀತಿ-ಪ್ರಣಯ-ಕಾಮದ ವಿವಿಧ ಹಂತಗಳನ್ನು ಈ ಸಂಕಲನದ ಕವಿತೆಗಳಲ್ಲಿ ಗುರುತಿಸಬಹುದು.

“ಒಡನಾಡಿ ಬೇಕೆಂದು
ಮಿಡುಕಿಯೇ ಮಿಡುಕಿದೆನು

ಕಡೆಗೆ ನೀ ಬಂದೆನ್ನ ಮಿಡುಕ ಕಳೆದೆ;

ಕೆಡಿಸಿ ಜೀವನಕೆ ಬಂ-
ದಡಿಸಿರುವ ಕಾರಿರುಳ,
ಬೆಡಗುಗಾತಿಯೆ ಬೆಳಗ ಮೊಗ ತೋರಿದೆ!”

-ಎಂದು ಕವಿ ಬರಡು ಬಾಳಿನಲ್ಲಿ ಜತೆಗಾತಿಯನ್ನು ಪಡೆದು, ಬಾಳಿನಲ್ಲಿ ಹೊಸಬೆಳಕನ್ನು ಕಾಣಲು ಹಂಬಲಿಸುತ್ತಾರೆ. ‘ಒಡನಾಡಿ’ಯಲ್ಲಿಯ ಪ್ರಣಯ ಗೀತೆಗಳಿಗೆ ವಾಸ್ತವ ಜೀವನದ ತಳಹದಿಯಿರುವುದರಿಂದ ಹೆಚ್ಚು ನೈಜವಾಗಿದೆ.

‘ಕಾರ ಹುಣ್ಣಿಮೆ’ ಸಂಕಲನದ ಕವಿತೆಗಳಲ್ಲಿ ವಿಷಯ ವೈವಿಧ್ಯತೆ ಇದೆ. ಭಕ್ತಿ, ವಿಡಂಬನೆ, ವಿನೋದ, ಸಾಮಾಜಿಕಪ್ರಜ್ಞೆ, ರಾಷ್ಟ್ರಭಕ್ತಿ, ಸ್ವಾತಂತ್ಯ್ರ, ಕನ್ನಡನಾಡು, ತತ್ತ್ವಜ್ಞಾನ ಮುಂತಾದ ಬಗೆಯಲ್ಲಿ ಇಲ್ಲಿ ಕಾವ್ಯ ರೂಪಗೊಂಡಿದೆ. ‘ಮನದಮಾತು’, ‘ಮಾಟಗಾರ್ತಿ’, ‘ಕೊಳಲ ನುಡಿಸು’. ‘ಸಾರಥಿಗೆ’, ‘ಬಯಕೆ’, ‘ಮೊರೆ’, ‘ನಾವಾಡಿಗ’, ‘ಶ್ರೀ ಕೃಷ್ಣನ ಕೊಳಲಿಗೆ’ ‘ಪರಾತ್‌ಪರ’, ‘ಮುರಲಿನಾದ’ ಈ ಕವಿತೆಗಳಲ್ಲಿ ದಾಸ ಸಾಹಿತ್ಯದ ಪ್ರಭಾವವಿದ್ದಂತೆ ಕಂಡರೂ ಕವಿಯ ಸ್ವಾನುಭವದಿಂದಲೇ ಮೂಡಿಬಂದಿವೆ. ಸರ್ವಜ್ಞನ ಕುರಿತಾದ ‘ಹಿರಿಯ ಜೀವ’ ವಲ್ಲಭಭಾಯಿ ಪಟೇಲರನ್ನು ಕುರಿತ ‘ಮಾಯದ ನೋವು’, ‘ಮಹಾತ್ಮನಿಗೆ’ ಇವು ವ್ಯಕ್ತಿಪರ ಗೀತೆಗಳಾಗಿವೆ. ‘ಪ್ರಜಾರಾಜ್ಯ’, ‘ಕನ್ನಡಿಗರ ಹಾಡು’, ‘ಸ್ವಾತಂತ್ಯ್ರ’, ‘ಜಯಭಾರತ’, ‘ಏರಿತು ಗಗನಕೆ ನಮ್ಮ ಧ್ವಜ’, ‘ಇದೋ ಬಂದ ಭಾನು’ ಇವು ರಾಷ್ಟ್ರಾಭಿಮಾನ ಹಾಗೂ ದೇಶಾಭಿಮಾನ ಕುರಿತಾದ ಕವಿತೆಗಳು. ‘ಹೊಸಕಾಲದ ಕವಿ’, ‘ಕಾಫಿಯ ಕೆರೆ’, ‘ಸೆಟ್ಟಿಯ ಲೆಕ್ಕಾಚಾರ’, ‘ಕ್ರಿಮಿಕುಲವಿಮರ್ಶೆ’, ‘ಗೂಢಗುಂಜನ’ ಇವು ಅಣಕವಾಡು ಹಾಗೂ ವಿಡಂಬನಾತ್ಮಕ ಕವಿತೆಗಳಾಗಿವೆ. ‘ಬಾಳಿದು ಕಾಳೆಗದ ಕಣ’, ‘ನಿತ್ಯಪೂಜೆ’, ‘ಸಮಾಜ ದೈವತೆ’, ‘ಬರಲಿರುವ ದಿನ’, ‘ಅವಿರತಯಜ್ಞ’ ಇವು ಸಮಾಜಪ್ರಜ್ಞೆ ಹಾಗೂ ಕವಿಯ ಜೀವನ ತತ್ತ್ವಗಳನ್ನು ಒಳಗೊಂಡ ಪದ್ಯಗಳು. ಒಬ್ಬ ಕವಿಯ ಆಲೋಚನೆ ಹಾಗೂ ವಿಚಾರ ವೈವಿಧ್ಯತೆಗೆ ‘ಕಾರಹುಣ್ಣಿಮೆ’ ಸಾಕ್ಷಿಯಾಗಿದೆ.

ಗ್ರಾಮೀಣ ಜನಜೀವನದಲ್ಲಿ ಹಾಸುಹೊಕ್ಕಾಗಿ ಬೆಳೆದುಬಂದ ಆನಂದಕಂದರು ಕನ್ನಡ ಜಾನಪದ ಸತ್ವ ತುಂಬಿದ ವಿದ್ವಾಂಸರಲ್ಲಿ ಒಬ್ಬರು. ಅಂಥ ಜಾನಪದ ಸೊಗಡಿನ ಆನಂದಕಂದರ ‘ನಲ್ವಾಡುಗಳು’ ಕವನ ಸಂಕಲನ ಕನ್ನಡ ಭಾವಗೀತೆಗಳಿಗೆ ಒಂದು ಮಹತ್ವದ ಕೊಡುಗೆಯಾಗಿವೆ. ಇಲ್ಲಿಯ ಎಲ್ಲ ಕವಿತೆಗಳು ಮೂಲಜಾನಪದ ಹಾಡುಗಳೆಂದೇ ಭ್ರಮೆ ಹುಟ್ಟಿಸುವಷ್ಟು ಮಣ್ಣಿನ ಗುಣ ಪಡೆದಿವೆ. ಉತ್ತರ ಕರ್ನಾಟಕದ ಬಯಲು ಪ್ರದೇಶದ ಜನಜೀವನವನ್ನು, ಕೃಷಿಕರ ಅಂತರಂಗವನ್ನು , ರೈತಾಪಿ ಜನರ ಒಲವು-ನಿಲುವುಗಳನ್ನು ಅವರವರ ಆಡುನುಡಿಗಳಲ್ಲಿಯೇ ನೇಯ್ದ ಚಿತ್ರಣ ಅತ್ಯದ್ಭುತ. ಈ ಸಂಕಲನಕ್ಕೆ ಕಳಸವಿಟ್ಟಂತೆ ಕರ್ನಾಟಕದ ಪ್ರಸಿದ್ಧ ಜಾನಪದ ಗಾಯಕರಾಗಿದ್ದ ಹುಕ್ಕೇರಿ ಬಾಳಪ್ಪನವರು ಈ ಸಂಕಲನದ ಹಲವು ಹಾಡುಗಳನ್ನು ಹಾಡಿ ಇಡೀ ನಾಡನ್ನೇ ಮಂತ್ರ ಮುಗ್ಧಗೊಳಿಸಿದರು. ಜನಸಾಮಾನ್ಯರ ನಾಲಿಗೆಯ ಮೇಲೆ ಈ ಹಾಡುಗಳೆಲ್ಲ ಕುಣಿಯುವಂತಾದವು. ಹಳ್ಳಿಯ ಜನ ಇವುಗಳಿಗೆ ಹುಕ್ಕೇರಿ ಬಾಳಪ್ಪನ ಹಾಡುಗಳಿಂದಲೇ ಕರೆದು. ‘ನಲ್ವಾಡುಗಳು’ ಹಾಗೂ ಹುಕ್ಕೇರಿ ಬಾಳಪ್ಪ ಈ ಎರಡರಲ್ಲಿ ಅವಿನಾಭಾವ ಸಂಬಂಧ ಬೆಳೆದಂತಿತ್ತು.

ಯೌವನ, ಪ್ರೀತಿ, ಪ್ರಣಯ, ಬಯಕೆ, ದಾಂಪತ್ಯದ ಒಲವು ಒಲವಿನ ಬದುಕು ಒಂದೇ, ಎರಡೇ ಇಡೀ ಗ್ರಾಮೀಣ ಒಲವಿನ ಹೃದಯವೇ ಇಲ್ಲಿ ಅರಳಿನಿಂತಿದೆ. ‘ಬುತ್ತಿ ತಗೊಂಡು ಹೋಗ್ತೀನಿ ಹೊಲಕ’ ‘ನಮ್ಮೂರ ಜಾತ್ರೆ ಬಲುಜೋರ’ ‘ನಮಗ್ಯಾಕ ಹುಬ್ಬಳ್ಳಿ-ಧಾರವಾಡ’ ‘ನಾಜೂಕದ ನಾರಿ’ ಬೆಳವಲ ಒಕ್ಕಲತಿ’ ಮುಂತಾದ ನಲ್ಗವಿತೆಗಳು ಕನ್ನಡ ರಸಿಕ ಕಾವ್ಯದಲ್ಲಿ ಶಾಶ್ವತವಾಗಿ ನಿಲ್ಲುವಂಥವು.

ಹಳ್ಳಿಯ ಯುವತಿ ಗಂಡನಿಗೆ ಬುತ್ತಿ ಕಟ್ಟಿಕೊಂಡು ಹೊಲಕ್ಕೆ ನಡೆದಿದ್ದಾಳೆ. ಅಲ್ಲಿ ಆತ ಹೊಲಗೆಲಸ ಮಾಡಿ ದಣಿದು, ತನ್ನ ಒಲವಿನ ಹೆಂಡತಿಯ ದಾರಿ ಕಾಯುತ್ತಿರುತ್ತಾನೆ. ಆಕೆ ಬಂದ ಬಳಿಕ ಒಂದು ಗಿಡ ನೆರಳಿಗೆ ಬರುತ್ತಾನೆ. ಇಬ್ಬರೂ ಬುತ್ತಿ ಬಿಚ್ಚಿಕೊಂಡು ಪರಸ್ಪರ ಎದುರು ಬದುರು ಕುಳಿತಾಗ ಆ ತರುಣಗೆ ಹೆಂಡತಿ ಹೇಳುತ್ತಾಳೆ:

“ಆಡ್ತೀವ ಕೂಡಿ ಏನೊ ಮಾತಾ…
ಮಾಡ್ತೀವ ಬದುಕಿನಾ ಬೇತಾ…
ನೋಡ್ತೀನ ಪ್ರೀತಿಯಿಂದ ಕೂತಾ..
ನಾಚಿಕೆ ಬರತೈತಿ ಮುಂದಿಂದೆಲ್ಲಾ ಹೇಳಾಕ.
ಬುತ್ತಿ ತೊಗೊಂಡ ಹೋಗ್ತಿನಿ ಹೊಲಕ!”

ಯುವ ದಂಪತಿಗಳ ರಸನಿಮಿಷಗಳ ಚಿತ್ರಣ ಹೃದಯಂಗಮವಾಗಿದೆ.

ಆ ಯುವತಿ ಇನ್ನೂ ಯಾರ ಕೈಹಿಡಿದಿಲ್ಲ. ಆದರೆ ಕೈಹಿಡಿಯುವ ಬಯಕೆಯಿದ್ದರೂ ಬಾಯಿ ಬಿಚ್ಚಿ ಹೇಳುವಂತಿಲ್ಲ. ಹೃದಯದಲ್ಲಿಯೇ ಒಲವಿನ ಕನಸುಗಳನ್ನು ಕಟ್ಟಬೇಕು. ಅದಕ್ಕಾಗಿ ‘ನಾಜೂಕದ ನಾರಿ’ ತನ್ನಲ್ಲಿ ತಾನೇ ಹೀಗೆ ಹೇಳಿಕೊಳ್ಳುತ್ತಾಳೆ:

“ಕಣ್ಣಾಗ ಸೂಸsತದ ಬಯಕಿ
ಮಾರೀ ಮ್ಯಾಗ ಎದಿಯ ಹಾರಯಿಕಿ
ಏನೇನೋ ನೆನಪು ತಿಳಿವಳಿಕೆ…
ಕೆನ್ನಗೇರತದ ನಾಚಿಕೆ..!”

‘ನಲ್ವಾಡಗಳು’ ಪ್ರಕಟವಾದ ಬಳಿಕ ಬಹಳ ದಿನಗಳ ನಂತರ ಆನಂದಕಂದರ ‘ಉತ್ಸಾಹ ಗಾಥಾ’ ಕವನ ಸಂಕಲನ ಪ್ರಕಟವಾಯಿತು. ಆನಂದಕಂದರ ಮೊದಲ ಕಾವ್ಯದ ಗುಣಲಕ್ಷಣಗಳೇ ಇಲ್ಲಿಯ ಕವಿತೆಗಳಲ್ಲಿವೆ. ಮೊದಲಿನ ಕವಿತೆಗಳಲ್ಲಿ ಸ್ವಾತಂತ್ಯ್ರ, ರಾಷ್ಟ್ರ, ಕನ್ನಡಭಾಷೆ, ಕನ್ನಡ ನಾಡು ಕುರಿತಾಗಿ ಕಳಕಳಿಯಿದ್ದರೆ, ಈ ಸ್ವಾತಂತ್ಯ್ರಾನಂತರದ ದೇಶದ ಸ್ಥಿತಿಗತಿ ಕುರಿತ ಕವಿಯ ಕಾಳಜಿಯಿದೆ. ಇಂದಿನ ಕರ್ಮಹೀನತೆ ಜೀವನ ವಿಕೃತಿಯ ವರ್ತಮಾನ ಚಿತ್ರಣವನ್ನು ಇಲ್ಲಿಯ ಬಹಳಷ್ಟು ಕವಿತೆಗಳು ನೀಡುತ್ತವೆ.

ಸ್ವಾತಂತ್ಯ್ರ ದೊರೆತ ಬಳಿಕ ದೇಶದ ಸಾಮಾಜಿಕ ದುಃಸ್ಥಿತಿ, ಸ್ವಾರ್ಥ ರಾಜಕೀಯ, ನೈತಿಕ ಅಧಃಪತನ, ಬದುಕಿನ ಅಪಮೌಲ್ಯ ಇಂಥ ಅನೇಕ ಪ್ರಸ್ತುತ ವಿಷಯಗಳನ್ನು ಕುರಿತು ಆನಂದಕಂದರು ‘ಜಯಂತಿ’ ಪತ್ರಿಕೆಯ ಮುಖಪುಟದ ಮೇಲೆ ‘ಸಾಮಜಿಕ’ ಹೆಸರಿನಿಂದ ವಚನರೂಪದಲ್ಲಿ ಬರೆಯುತ್ತಿದ್ದರು. ‘ಸಾಮಾಜಿಕದ ಸಂವಚನಗಳು’ ಎಂಬ ಹೆಸರಿನಲ್ಲಿ ಈ ಸಂಕಲನ ಆನಂದಕಂದರ ಕೊನೆಗಾಲದಲ್ಲಿ ಪ್ರಕಟವಾಯಿತು.[1]  ದೇವರಾಜ ಬಹಾದ್ದೂರ ಪಾರಿತೋಷಕ ಪಡೆದ ಕೃತಿ

[2]  ‘ಒಡನಾಡಿ’ ಮೊದಲಮಾತು.