ಸದಾ ಹಸಿರು ಸೂಸುವ ಗಿಡ. ಬಣ್ಣ ಬಣ್ಣದ ಹೂಗಳಿಂದ ಚಿಟ್ಟೆಗಳೊಂದಿಗೆ, ಸಸ್ಯ ಪ್ರೇಮಿಗಳನ್ನೂ ಆಕರ್ಶಿಸುವ ಗಿಡ ಈ ಆಂಥೋರಿಯಂ. ತನ್ನ ವಿಚಿತ್ರ ಆಕಾರದ ಹೂವಿನಿಂದಾಗಿ ಈ ಗಿಡಕ್ಕೆ ‘ಫ್ಲೆಮಿಂಗೋ ಫ್ಲವರ್’ ಎಂಬ ಹೆಸರೂ ಇದೆ. ಮಧ್ಯ ಅಮೆರಿಕ, ದಕ್ಷಿಣ ಅಮೆರಿಕ, ಪನಾಮ, ಕೊಲಂಬಿಯ, ಬ್ರೆಜಿಲ್, ಗಯಾನ, ಮತ್ತು ಈಕ್ವೆಡಾರ್, ಹಾಲೆಂಡ್ ಮುಂತಾದ ದೇಶಗಳಲ್ಲಿ ಬೆಳೆಯುತ್ತಿದ್ದ ಈ ಹೂವಿನ ಗಿಡ ಈಗ ಭಾರತದಲ್ಲಿ ಬಹು ಬೇಡಿಕೆಯುಳ್ಳ ಸಸ್ಯ.

ಬೀಜದಿಂದ ಸಸ್ಯಾಭಿವೃದ್ಧಿ ಮಾಡಬಹುದಾದರೂ ಇದಕ್ಕೆ  ಹೆಚ್ಚಿನ ತಾಂತ್ರಿಕತೆಯ ಅವಶ್ಯಕತೆ ಇರುವುದರಿಂದ ಕೆಲವರಷ್ಟೇ ಈ ವಿಧಾನದಲ್ಲಿ ಜಯಗಳಿಸುವಲ್ಲಿ ಸಫಲರಾಗಿದ್ದಾರೆ. ಗಿಡದ ಬೇರಿನ ಸಮೀಪದಲ್ಲಿ ಬರುವ ಕಂದುಗಳಿಂದ ಹೊಸ ಗಿಡ ಮಾಡ ಬಹುದು. ನೀರು ಬಸಿದು ಹೋಗುವ ಮಣ್ಣಿನ ಮಿಶ್ರಣ ಒಳ್ಳೆಯದು. ಹೆಚ್ಚಿನ ಸಾವಯವ ಅಂಶ ಇರುವ ಕಾಂಪೋಸ್ಟ್,  ಕಾಯರ್ ಪೀಟ್, ಇಜ್ಜಲಿನ ಚೂರು, ಇಟ್ಟಿಗೆ ಚೂರು, ತೆಂಗಿನ ನಾರಿನ ಭಾಗದ ಕತ್ತರಿಸಿದ ತುಂಡುಗಳು ಆವಶ್ಯಕತೆಗೆ ತಕ್ಕಂತೆ ಹಾಕಿ ಮಿಶ್ರಣ ತಯಾರಿಸಿ ಕೊಳ್ಳ ಬಹುದು. ಹೆಚ್ಚಾದ ನೀರು ಸರಾಗವಾಗಿ ಹೊರಗೆ ಹೋಗುವಂತೆ ನೋಡಿಕೊಳ್ಳುವುದು ತುಂಬ ಮುಖ್ಯ.

ಗುಲಾಬಿ ಬಣ್ಣದ ಆಂಥೋರಿಯಂ ಗಳು.

ಹೆಚ್ಚಿನ ಸಾವಯವ ಅಂಶ ಇರುವ ಮಿಶ್ರಣದಲ್ಲಿ ಆಂಥೋರಿಯಂ ತುಂಬ ಚೆನ್ನಾಗಿ ಬೆಳೆಯುತ್ತದೆ. ಹೆಚ್ಚು ಬೆಳಕು, ನೆರಳು ಇರುವ ಜಾಗದಲ್ಲಿ ಗಿಡವಿದ್ದರೆ, ಹೆಚ್ಚು ಹೂವು ಬಿಡುವ ಸಾಧ್ಯತೆ ಜಾಸ್ತಿ. ಆದರೆ ಹೆಚ್ಚು ಬಿಸಿಲು ಬಿದ್ದರೆ ಎಲೆಗಳು ಸುಟ್ಟಂತಾಗಿ ಕೆಂಪಗಾಗುತ್ತದೆ. ಹೂವುಗಳು ಬಣ್ಣ ಕಳೆದುಕೊಂಡು ಬಿಳಚಿಕೊಳ್ಳುತ್ತವೆ. ಹಾಗೇ ಹೂವಿನ ತಾಳಿಕೆಯ ಅವಧಿ ಸಹ ಕಮ್ಮಿಯಾಗುತ್ತದೆ. ಮಂಜು ಹಾಗೂ ವಾತಾವರಣದಲ್ಲಿ ಶೀತ ಹೆಚ್ಚಾದರೆ, ತಡೆಯುವುದಿಲ್ಲ.  ಗಿಡ ಸ್ವಲ್ಪ ಭಾರವಾಗಿರುವುದರಿಂದ ಆ ತೂಕ ತಡೆದುಕೊಳ್ಳುವ ಮಿಶ್ರಣ ಅಗತ್ಯ. ತೇವಾಂಶ ಕಾಪಾಡಿಕೊಂಡು ಗಿಡ ನೇರವಾಗಿ ಬೆಳೆಯುವಂತೆ ನೋಡಿಕೊಳ್ಳ ಬೇಕು. ನೀರು ಬಸಿದು ಹೋಗುವ ಮಣ್ಣಿನ ಮಿಶ್ರಣ ಅಗತ್ಯ. ಆಗಾಗ್ಗೆ ಎಲೆ ಮತ್ತು ಹೂಗಳನ್ನು ನೀರಿನಲ್ಲಿ ಅದ್ದಿದ ‘ಸ್ಪಾಂಜ್’ ನಿಂದ ಒರೆಸುತ್ತಿದ್ದರೆ  ಗಿಡ ಆರೋಗ್ಯ ವಾಗಿ ಇರುವುದಲ್ಲದೆ  ಆಕರ್ಶಣೀಯವಾಗಿರುತ್ತೆ. ಹೂವು ಬಿಡುವ ಹಂತದಲ್ಲಿ ವಾರಕ್ಕೊಮ್ಮೆ ‘ದ್ರವ ಗೊಬ್ಬರ’ ಕೊಟ್ಟರೆ ಒಳ್ಳೆಯದು. ಆಂಥೋರಿಯಂ ತುಂಬ ನಾಜೂಕಿನ ಗಿಡ. ಒಣಗಿದ ಎಲೆ, ಹೂವು ಮುಗಿದ ಕಡ್ಡಿ, ವಿಕಾರ ಗೊಂಡ ಎಲೆಗಳನ್ನು ಕತ್ತರಿಸಿ ತೆಗೆದರೆ ಗಿಡ ಸುಂದರವಾಗಿ ಕಾಣುತ್ತದೆ.

ಒಮ್ಮೆ ಹಾಕಿದರೆ ಹತ್ತಾರು ವರ್ಷ ಇರುವಂತಹ ಗಿಡ. ಹೂವೂ ಅಷ್ಟೇ, ತಿಂಗಳವರೆಗೆ ಚೆನ್ನಾಗಿಯೇ ಇರುತ್ತದೆ. ಕತ್ತರಿಸಿ ಹೂದಾನಿಯಲ್ಲಿಟ್ಟರೆ, ೪೫ ದಿನಗಳವರೆಗೂ ಉಳಿಯುತ್ತದೆ, ಹೂದಾನಿಯಲ್ಲಿರುವ ನೀರಿಗೆ ೧/೨ಚಮಚ ಸಕ್ಕರೆ ಹಾಕಿದರೆ , ಹೂವು ಬಹಳ ದಿನ ಹೊಸದಾಗಿಯೇ ಇರುತ್ತದೆ.  ಗಿಡ ಬೆಳೆಯುವ ಯಾವ ಹಂತದಲ್ಲೂ ರಾಸಾಯನಿಕಗಳನ್ನು ಉಪಯೋಗಿಸದಿದ್ದಾಗ. ಬಣ್ಣದ ಓಕುಳಿಯಾಟ ಈ ಹೂವುಗಳದು. ಒಂದೇ ಬಣ್ಣದಲ್ಲಿ ಕೆಲವು ಹೂಗಳಿದ್ದರೆ, ಎರಡೆರೆಡು ಬಣ್ಣಗಳ ಆಹ್ಲಾದಕರ ಮಿಶ್ರಣ ಇನ್ನು ಕೆಲವು ಹೂಗಳದ್ದು. ಕಡು ಕಿತ್ತಳೆ, ಹಂಚಿಕೊಂಡ ಹಸಿರು-ಕೆಂಪು, ಅಚ್ಚ ಕೆಂಪು. ದಟ್ಟ ಗುಲಾಬಿ, ಅಚ್ಚ ಬಿಳಿಯ ಬಣ್ಣದ ಹೂಗಳೇ ಅಲ್ಲದೆ, ಹೈಬ್ರೀಡ್ ತಳಿಗಳಲ್ಲಿ ಹಲವು ಆಕರ್ಶಕ ಬಣ್ಣಗಳಿವೆ.

ಆಕರ್ಶಕ ಕಿತ್ತಳೆ ಬಣ್ಣದ ಆಂಥೋರಿಯಂ ಹೂವು

ಇದರಲ್ಲಿ ದಂಟಿನಾಕಾರದಲ್ಲಿರುವ ಭಾಗದಲ್ಲಿ  ಬಿಡುವ ಹೂವು ಅತ್ಯಂತ ಸಣ್ಣದು. ಇದಕ್ಕೆ ಸೇರಿದಂತೆ ಇರುವ ಎಲೆಯಾಕಾರದ ಭಾಗವೇ ಬಹು ಆಕರ್ಶಣೀಯ. ತಿಳಿ ಹಸಿರು, ಬಿಳಿ, ಗುಲಾಬಿ, ಕಿತ್ತಳೆ, ಅಥವ ಹೊಳೆಯುವ ಕೆಂಪು ಬಣ್ಣದ್ದಾಗಿರುತ್ತದೆ. ಬಣ್ಣ ಬದಲಾದಂತೆ ಅದರ ಬೆಲೆ ಕೂಡ ಏರುತ್ತ ಹೋಗುತ್ತದೆ. ಎರೆಡು ಬಣ್ಣಗಳ ಮಿಶ್ರಣ ಇರುವ ಹೂವುಗಳಿಗೆ ಮಾರುಕಟ್ಟೆಯಲ್ಲಿ ಬಹು ಬೇಡಿಕೆ.

ಪುಷ್ಪ ಜೋಡಣೆಯಲ್ಲಿ ಈ ಹೂವಿಗೆ  ಪ್ರಾಮುಖ್ಯತೆ, ಒಳಾಂಗಣ ಅಲಂಕಾರಕ್ಕೆ, ಸಮಾರಂಭಗಳಲ್ಲಿನ ಶೋಭೆ ಹೆಚ್ಚಿಸಲು, ಹೆಚ್ಚಾಗಿ ಈ ಹೂವಿನ ಬಳಕೆಯಾಗುತ್ತದೆ. ಕತ್ತರಿಸಿದ ಬಿಡಿ ಹೂಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಬಹಳ. ಇತ್ತೀಚೆಗೆ ವಾಣಿಜ್ಯ ಮಟ್ಟದಲ್ಲಿ, ಹಸಿರು ಮನೆಗಳಲ್ಲಿ ಬೆಳೆಯಲಾಗುತ್ತಿದೆ. ಆದರೆ ಇದಕ್ಕಾಗಿ ಉತ್ತಮ ಗುಣಮಟ್ಟದ ಸಸಿಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.  ಹಾಲೆಂಡಿನ ಸಸಿಗಳಿಗೆ ಬೇಡಿಕೆ ಬಹಳ. ಹಲವು ಕೃಷಿಕರು ಇದನ್ನು  ಯಶಸ್ವಿಯಾಗಿ ಬೆಳೆದಿದ್ದಾರೆ.

ಹೂವಿನ ಹತ್ತಿರದ ನೋಟ

ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಈ ಹೂವುಗಳಿಗೆ ಆದ್ಯತೆ. ಹಾಗೆ ನೋಡಿದರೆ, ಈ ಹೂಗಳ ಜೋಡಣೆ  ನೋಡುಗರನ್ನು ಆಕರ್ಶಿಸುವುದರಲ್ಲಿ ಎಂದೆಂದಿಗೂ ಮುಂದೆ. ಅದು ಮನೆಯಿರಲಿ, ತೋಟವಿರಲಿ,ಇದರ ಸ್ಥಾನ ಪ್ರಮುಖ  ಜಾಗದಲ್ಲೇ.

ಕೊನೆಹನಿ:  ಆಂಥೋರಿಯಂ ಗಿಡದ ನರ್ಸರಿ ಮಾಡಿ, ಅದರ ಮಾರಾಟದಿಂದ ಆದಾಯ ಗಳಿಸಬಹುದು. ಈ ಗಿಡಗಳು ತುಂಬ ಬೆಲೆ ಬಾಳುವಂತಹವು. ಒಂದು ಗಿಡ ನೆಟ್ಟು ಸರಿಯಾಗಿ ಪೋಷಣೆ ಮಾಡಿದರೆ ಹತ್ತಾರು ಸಣ್ಣ ಕಂದುಗಳು ಬೇರಿನ ಸುತ್ತ ಬರುತ್ತದೆ. ಬೇರು ಬಿಡಿಸುವಾಗ ತುಂಬ ಜಾಗ್ರತೆ ಬೇಕು. ಬೇರುಗಳಿಗೆ ಘಾಸಿಯಾಗದಂತೆ, ನಾಟಿ ಮಾಡ ಬೇಕು. ನಾಟಿ ಮಾಡಿದ ಕೆಲವು ದಿನಗಳು ಗಿಡ ನೇರ ಬಿಸಿಲಿಗೆ ಬೀಳದಂತೆ ಜಾಗ್ರತೆ ವಹಿಸ ಬೇಕು. ಆಂಥೋರಿಯಂ ಬೆಳೆಯುವುದನ್ನು ಮನೆಯಲ್ಲೇ ಆದಾಯ ತರುವ ಒಂದು ಸಣ್ಣ ಉದ್ಯಮವನ್ನಾಗಿ ಮಾಡಿಕೊಳ್ಳ ಬಹುದು. ಸ್ವಸಹಾಯ ಗುಂಪುಗಳಿಗೂ ಆದಾಯದ ಮೂಲವಾಗ ಬಹುದು. ಇರುವ ಅಲ್ಪ ಸ್ವಲ್ಪ ಜಾಗದಲ್ಲಿ ಹತ್ತಾರು ಗಿಡಗಳನ್ನು ಅಭಿವೃದ್ಧಿ ಪಡಿಸ ಬಹುದು. ಹೂವುಗಳ ಮಾರಾಟದಿಂದ ಒಂದು ನಿಶ್ಚಿತ ಆದಾಯ ಬಂದರೆ, ಅವುಗಳ ಸಸ್ಯಾಭಿವೃದ್ಧಿ ಮಾಡುವುದರಿಂದ ಸಹ ಆದಾಯ ನಿರೀಕ್ಷಿಸ ಬಹುದು.

– ಚಿತ್ರಗಳು : ಎಆರ್‌ಎಸ್ ಶರ್ಮ