ರೈತರೊಂದಿಗೆ ಒಂದು ಅರ್ಥಪೂರ್ಣ ಸಂವಾದ

ಆನುವಂಶಿಕವಾಗಿ ಮಾರ್ಪಡಿಸಿದ ಬೆಳೆಗಳು ಮತ್ತು ಆನುವಂಶಿಕವಾಗಿ ಮಾರ್ಪಡಿಸಿದ ಆಹಾರ ಕುರಿತು ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಈ ವಿಷಯ ಕುರಿತ ವಾದ ವಿವಾದಗಳು ಚಲಾವಣೆಯಲ್ಲಿ ಇವೆ. ಸಹಜವಾಗಿ ಈ ವಿಷಯ ಕುತೂಹಲ ಮತ್ತು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಬಿ.ಟಿ. ಬದನೆ ಕುರಿತು ನಡೆದಿರುವ ಚರ್ಚೆ ಈ ಮಾತಿಗೆ ಒಂದು ನಿದರ್ಶನ ಮಾತ್ರ. ಈ ವಿಷಯ ಕುರಿತು ರೈತರು ಹೇಗೆ ಆಲೋಚಿಸುತ್ತಾರೆ? ಅವರ ಮನಸ್ಸಿನಲ್ಲಿರುವ ಆತಂಕಗಳು ಏನು? ಅನುವಂಶಿಕವಾಗಿ ಮಾರ್ಪಡಿಸಿದ ಬೆಳೆಗಳ ಫಲಾಫಲಗಳ ಅರಿವು ಅವರಿಗೆ ಇದೆಯೇ? ಅವರು ಬೆಳೆಗಳನ್ನು ಆಯ್ಕೆ ಮಾಡುವಾಗ ಬೀಜಗಳ ಯುಕ್ತಾಯುಕ್ತತೆಯನ್ನು ಪರಿಶೀಲಿಸಿ ನಿರ್ಣಯ ಕೈಗೊಳ್ಳುತ್ತಿದ್ದಾರೆಯೇ?

ಹೀಗೆ ಅವರ ಅಭಿಪ್ರಾಯಗಳಿಗೆ ಧ್ವನಿ ಕೊಡುವ ಮತ್ತು ಆನುವಂಶಿಕ ತಳಿಗಳ ಬಗ್ಗೆ ರೈತರೊಂದಿಗೆ ಮುಕ್ತ ಸಮಾಲೋಚನೆ ಮಾಡುವ ಆಶಯದಿಂದ ಒಂದು ಸಂವಾದ ಕಾರ್ಯಕ್ರಮ, ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ಹ್ಯಾಂಡ್‌ಪೋಸ್ಟಿನ ಬಳಿ ಇರುವ ಮೈರಾಡಾ ಆವರಣದಲ್ಲಿ ದಿನಾಂಕ 23.04.2010ರಂದು ಏರ್ಪಾಡಾಗಿತ್ತು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪ್ರಾಯೋಜಿಸಿದ್ದ ಈ ಕಾರ್ಯಕ್ರಮವನ್ನು ಮೈಸೂರು ವಿಜ್ಞಾನ ಕೇಂದ್ರವು ಮೈರಾಡಾ ಸಹಕಾರದೊಡನೆ ಸಂಘಟಿಸಿದ್ದಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಗ್ರಾಹಕ ಪರಿಷತ್ತಿನ ನಿವೃತ್ತ ಮೇಜರ್ ಜನರಲ್ ಶ್ರೀ ಸುಧೀರ್ ಒಂಬತ್ಕೆರೆ ಅವರು ವಿಷಯ ಪ್ರಸ್ತಾಪಿಸುತ್ತ, ಅಲ್ಲಿ ನೆರೆದಿದ್ದ 50ಕ್ಕೂ ಹೆಚ್ಚು ರೈತರು ಬಿ.ಟಿ. ಬೆಳೆ ಕುರಿತಂತೆ ತಮ್ಮ ಅನುಭವವನ್ನು ಹಂಚಿಕೊಳ್ಳುವಂತೆ ಕೋರಿದರು. ಎಚ್.ಡಿ. ಕೋಟೆಯ ರೈತರಿಗೆ ಆನುವಂಶಿಕವಾಗಿ ಮಾರ್ಪಡಿಸಿದ ಬೆಳೆ ಹೊಸತೇನೂ ಅಲ್ಲ. ಆ ತಾಲ್ಲೂಕಿನ ಬಹಳಷ್ಟು ರೈತರು ಈಗಾಗಲೇ ಬಿ.ಟಿ. ಹತ್ತಿಯನ್ನು ನಾಲ್ಕಾರು ವರ್ಷಗಳಿಂದ ಬೆಳೆಯುತ್ತಲೇ ಬಂದಿದ್ದಾರೆ. ರೈತರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದರು. ಅವರ ಅಭಿಪ್ರಾಯಗಳು ಹೀಗಿದ್ದುವು:

  • ಬಿ.ಟಿ. ಬೀಜಗಳನ್ನೇ ಬಳಸುವಂತೆ ಅವುಗಳನ್ನು ಉತ್ಪಾದಿಸುತ್ತಿರುವ ಕಂಪೆನಿಗಳು ರೈತರ ಮೇಲೆ ತೀವ್ರ ಒತ್ತಡ ಮತ್ತು ಪ್ರಲೋಭನೆಗಳನ್ನು ಒಡ್ಡುತ್ತಿವೆ.
  • ಆನುವಂಶಿಕ ಬೆಳೆಗಳನ್ನು ಕುರಿತಂತೆ ವಿಜ್ಞಾನಿಗಳು ಸತ್ಯ ಹೇಳುತ್ತಿಲ್ಲ. ಅವರು ಬಹುರಾಷ್ಟ್ರೀಯ ಬೀಜ ಕಂಪೆನಿಗಳ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ.
  • ಆನುವಂಶಿಕ ಬೆಳೆಗಳನ್ನು ಕುರಿತಂತೆ, ತಿಳಿದವರು ಎರಡು ಧ್ವನಿಗಳಲ್ಲಿ ಮಾತಾಡುತ್ತಿರುವುದು ರೈತರಲ್ಲಿ ಗೊಂದಲ ಹೆಚ್ಚಿಸುತ್ತಿದೆ. ವಿಜ್ಞಾನಿಗಳಲ್ಲಿ ಈ ಬಗ್ಗೆ ಸಹಮತ ಇಲ್ಲದಿರುವುದು ರೈತರ ಆತಂಕಕ್ಕೆ ಪ್ರಮುಖ ಕಾರಣವಾಗಿದೆ.
  • ನಾವು ಪ್ರಕೃತಿಯ ನಿಯಮಗಳಿಗೆ ಅನುಗುಣವಾಗಿ ಬದುಕಬೇಕು. ಹಾಗೆ ಮಾಡದಿದ್ದರೆ ನಮ್ಮ ನಡೆಗಳು ನಮಗೇ ಮಾರಕವಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.
  • ಬಿ.ಟಿ. ಹತ್ತಿಯ ಉತ್ಪನ್ನಗಳನ್ನು ತಿನ್ನುವ ದನ ಕರುಗಳಲ್ಲಿ ವಿಚಿತ್ರ ರೀತಿಯ ಗೂರಲು ಮತ್ತು ಕೆಮ್ಮು ಕಾಣಿಸಿಕೊಂಡಿದೆ. ಅದ್ದರಿಂದ ಅದು ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಇನ್ನಷ್ಟು ಪರಿಶೀಲನೆ ಮತ್ತು ಸಂಶೋಧನೆ ಅಗತ್ಯ.
  • ಹೆಚ್ಚು ಪರಿಸರ ಸ್ನೇಹಿ ಮತ್ತು ತಾಳಿಕೆಯುಳ್ಳ ಅಭಿವೃದ್ದಿಗೆ ಸಾವಯವ ಕೃಷಿ ಪೂರಕ ವಿಧಾನವಾಗಿದೆ.

ಅನಂತರ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದವರು ತಮ್ಮ ತಮ್ಮ ವಿಚಾರಗಳನ್ನು ಮಂಡಿಸಿದರು. ಮೊದಲು ಮಾತನಾಡಿದ ಡಾ. ವಸಂತ್‌ಕುಮಾರ್ ತಿಮಕಾಪುರ, ಕೃಷಿಜ್ಞಾನ ವಿಜ್ಞಾನ ವೇದಿಕೆ,  ಪಿರಿಯಾಪಟ್ಟಣ ಅವರ ಪ್ರಸ್ತಾವನೆಯ ಮುಖ್ಯ ಅಂಶಗಳು ಇಷ್ಚು: ನಮ್ಮ ದೇಶದ ಅಭಿವೃದ್ದಿಗೆ ‘ಹಸಿರು ಕ್ರಾಂತಿ’ ಕಾರಣ. ಆಹಾರದ ಅಭಾವ ನೀಗಲು ಮತ್ತು ರೈತರ ಜೀವನಮಟ್ಟ ಉತ್ತಮಗೊಳ್ಳಲು ಹೊಸ ಹೊಸ ತಂತ್ರಜ್ಞಾನಗಳನ್ನೂ ವೈಜ್ಞಾನಿಕ ಕೃಷಿ ಪದ್ಧತಿಗಳನ್ನೂ ರೈತರು ಅಳವಡಿಸಿಕೊಳ್ಳುವುದು ಅನಿವಾರ್ಯ. ವಿಶ್ವಾಸಾರ್ಹ ಮಾಹಿತಿ ಮತ್ತು ಮಾರ್ಗದರ್ಶನದ ಕೊರತೆ ಇರುವುದರಿಂದ ಅವರು ನಷ್ಟ ಅನುಭವಿಸುತ್ತಿದ್ದಾರೆ. ಬಡವರ ಹಸಿವು ಹಿಂಗಬೇಕಾದರೆ ಆನುವಂಶಿಕವಾಗಿ ಮಾರ್ಪಡಿಸಿದ ಬೆಳೆಗಳನ್ನು ಬೆಳೆಯುವುದೂ ಸೇರಿದಂತೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದೆ ಅನ್ಯ ಮಾರ್ಗವಿಲ್ಲ.

ಆನಂತರ ಮಾತನಾಡಿದ ಶ್ರೀ ಎಚ್.ಎಲ್. ಸತೀಶ್, ವಿಜ್ಞಾನ ಶಿಕ್ಷಕರು, ‘ಜೈವಿಕ ತಂತ್ರಜ್ಞಾನ ಮತ್ತು ಆನುವಂಶಿಕವಾಗಿ ಮಾರ್ಪಡಿಸಿದ ಬೆಳೆ’ ಇವುಗಳ ವ್ಯತ್ಯಾಸವನ್ನು ತಿಳಿಸುತ್ತಾ ಜೈವಿಕ ತಂತ್ರಜ್ಞಾನದ ಬಳಕೆ ಅನಿವಾರ್ಯವಾದರೂ ಅದರ ಒಂದು ಭಾಗವಾದ ಆನುವಂಶಿಕ ತಂತ್ರಜ್ಞಾನವನ್ನು ತುರಾತುರಿಯಲ್ಲಿ ಅಳವಡಿಸಿಕೊಳ್ಳುವುದರ ಅಪಾಯಗಳನ್ನು ಪಟ್ಟಿಮಾಡಿದರು. ಆಹಾರದ ಕೊರತೆಯಿಂದ ಅಪೌಷ್ಟಿಕತೆ ಮತ್ತು ಹಸಿವೆ ಉಂಟಾಗಿದೆ ಎಂಬುದು ಮಿಥ್ಯೆ. ವಾಸ್ತವವಾಗಿ ಎಲ್ಲಾ ಮನುಷ್ಯರೂ ಹೊಟ್ಟೆ ತುಂಬ ಉಣ್ಣುವಷ್ಟು ಆಹಾರ ಇದೆ. ಅದು ಬೇರೆ ಕಾರಣಗಳಿಂದಾಗಿ ಎಲ್ಲರಿಗೂ ಲಭ್ಯವಾಗುತ್ತಿಲ್ಲ. ಹಸಿವೆಗೆ ಬಡತನ, ಆಹಾರದ ಅಸಮರ್ಪಕ ನಿರ್ವಹಣೆ ಮತ್ತು ಅಸಮರ್ಪಕ ವಿತರಣೆಗಳೂ ಸೇರಿದಂತೆ ಹಲವು ಹತ್ತು ಕಾರಣಗಳು ಇವೆ ಎಂಬುದನ್ನು ಅಂಕಿಅಂಶಗಳ ಆಧಾರದ ಮೇಲೆ ವಿಶದ ಪಡಿಸಿದರು.  ಆನುವಂಶಿಕವಾಗಿ ಮಾರ್ಪಡಿಸಿದ ಆಹಾರವು ಆರ್ಥಿಕವಾಗಿ, ಸಾಮಾಜಿಕವಾಗಿ, ಪರಿಸರಾತ್ಮಕವಾಗಿ ಮತ್ತು ನೈತಿಕವಾಗಿ ಯಾವ ಸವಾಲುಗಳನ್ನು ಮಾನವ ಜನಾಂಗದ ಮುಂದೆ ತೆರೆದಿಟ್ಟಿದೆ ಎಂಬುದನ್ನು ವಿವರಿಸುತ್ತಾ ‘ಆನುವಂಶಿಕ ತಂತ್ರಜ್ಞಾನ’ದ ಪ್ರಭುತ್ವ ನಮಗಿನ್ನೂ ನಿಖರವಾಗಿ ಸಿದ್ದಿಸಿಲ್ಲ; ಭೂಮಿಯಲ್ಲಿ ಅಸ್ತಿತ್ವದಲ್ಲೇ ಇರದಿರುವ ಮತ್ತು ನಿಸರ್ಗ ಸೃಷ್ಟಿಸದಿರುವ ಜೀವ ಪ್ರಭೇದಗಳನ್ನು ಪರಿಸರಕ್ಕೆ ತರುವುದರ ಅಪಾಯಗಳನ್ನು ವಿವರಿಸಿ ‘ಈ ತಂತ್ರಜ್ಞಾನ’ ಕುರಿತು ಅತಿಯಾದ ಆತುರ ಸಲ್ಲದು ಎಂದು ಹೇಳಿದರು.

ಅನಂತರ ಎಂಜಿನಿಯರ್ ಶ್ರೀ ಯು.ಎನ್. ರವಿಕುಮಾರ್, ಪರಿಸರವಾದಿಗಳು, ಕೇಂದ್ರ ಸರಕಾರದ ತೀವ್ರ ಪರಿಶೀಲನೆಯಲ್ಲಿ ಇರುವ ‘ಜೈವಿಕ ತಂತ್ರಜ್ಞಾನ ಮಸೂದೆ’ ಕುರಿತು ಮಾತನಾಡಿ ಈ ಮಸೂದೆಯ ಕೆಲವು ಪ್ರಸ್ತಾವನೆಗಳು ಹೇಗೆ ಪ್ರಜಾಪ್ರಭುತ್ವ ವಿರೋಧಿ ತತ್ವಗಳನ್ನು ಒಳಗೊಂಡಿವೆ ಎಂಬುದನ್ನು ವಿವರಿಸಿದರು. ಪ್ರಸ್ತಾವಿತ ಮಸೂದೆಯು ಜನರಿಗೆ ಮಾತನಾಡಲು ಅವಕಾಶವಿಲ್ಲದಂತೆ ರೂಪಿತವಾಗಿರುವಂತೆ ತೋರುತ್ತದೆ ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿ, ಈ ಮಸೂದೆಯು ರೈತರ ಹಿತಕಾಯುವುದಿಲ್ಲ, ಬದಲಾಗಿ ಅದು, ಬಹುರಾಷ್ಟ್ರೀಯ ಕಂಪೆನಿಗಳ ಹಿತಕಾಯುತ್ತದೆ. ಆದ್ದರಿಂದ ಎಲ್ಲರೂ ಸಂಘಟಿತರಾಗಿ ಈ ಮಸೂದೆ ಅಂಗೀಕಾರವಾಗದಂತೆ ನೋಡಿಕೊಳ್ಳಬೇಕು ಎಂದು ಕರೆಯಿತ್ತರು.

ಶ್ರೀ ಉಗ್ರನರಸಿಂಹೇಗೌಡ, ಸಾವಯವ ಕೃಷಿ ರೈತರು ಮಾತನಾಡುತ್ತಾ ಈ ಕೃಷಿಯು ಇಂಥ ಎಲ್ಲಾ ಗೊಂದಲಗಳಿಗೆ ಒಂದು ಪರ್ಯಾಯ ಮಾರ್ಗ. ಕೇವಲ ಹೆಚ್ಚು ಬೆಳೆಯುವುದರಿಂದ ರೈತರ ಬಾಳು ಹಸನಾಗದು. ರೈತರು ಬೆಳೆಯುವ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತಾಗಬೇಕು ಮತ್ತು ರೈತರನ್ನು ಶೋಷಿಸುತ್ತಿರುವ ಮಧ್ಯವರ್ತಿಗಳಿಂದ ಮುಕ್ತಿ ಸಿಗುವ ತನಕ ರೈತರ ಕಷ್ಟಗಳು ಪರಿಹಾರ ಆಗುವುದಿಲ್ಲ ಎಂದು ಹೇಳಿದರು.

ಕೊನೆಯಲ್ಲಿ ಪ್ರಶ್ನೋತ್ತರ ಕಾರ್ಯಕ್ರಮವಿತ್ತು. ರೈತರು ಹಲವು ಉತ್ತಮ ಪ್ರಶ್ನೆಗಳನ್ನು ಕೇಳಿ ಸಂಪನ್ಮೂಲ ವ್ಯಕ್ತಿಗಳ ಅಭಿಪ್ರಾಯ ಪಡೆದುಕೊಂಡರು. ಈ ಬಗ್ಗೆ ಇನ್ನಷ್ಟು ವ್ಯಾಪಕ ಚರ್ಚೆಗಳು ಆಗಬೇಕು ಮತ್ತು ಇಂತಹ ಚರ್ಚೆಗಳು ಗ್ರಾಮಮಟ್ಟದಲ್ಲಿ ಆಗಬೇಕು ಎಂಬುದು ಹಲವರ ಅಭಿಪ್ರಾಯ ಆಗಿತ್ತು. ತಮ್ಮ ಊರಿನಲ್ಲಿ ಇಂತಹ ಚರ್ಚೆ ಏರ್ಪಡಿಸಿದರೆ ಅದಕ್ಕೆ ಸಕಲ ಸಹಕಾರ ಕೊಡುವುದಾಗಿ ಕೆಲವು ರೈತರು ಹೇಳಿದರು.

ಕೊನೆಯಲ್ಲಿ, ಅಧ್ಯಕ್ಷತೆ ವಹಿಸಿದ್ದ ಶ್ರೀ ಒಂಬತ್ಕೆರೆ ಅವರು ವಿಷಯಗಳನ್ನು ಸಮನ್ವಯಗೊಳಿಸಿ ಯಾವುದೇ ವಿಷಯದ ಪೂರ್ರಾಪರಗಳನ್ನು ವಿವೇಚಿಸಿ ಕಾರ್ಯಪ್ರವೃತ್ತರಾಗುವುದು ಮುಖ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ, ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಯೋಜಕಿ ಶ್ರೀಮತಿ ಶ್ರೀಮತಿ ಹರಿಪ್ರಸಾದ್, ಮೈಸೂರು ವಿಜ್ಞಾನ ಕೇಂದ್ರದ ಶ್ರೀ ಆರ್. ಶ್ರೀನಿವಾಸನ್, ಮೈರಾಡ ಸಂಸ್ಥೆಯ ಶ್ರೀ ವಿಲಿಯಮ್ ಡಿಸೋಜಾ ಮತ್ತು ಅಲ್ಲಿಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ವರದಿ: ಸತೀಶ್ ಎಚ್.ಎಲ್.