ಇವರ ತಾತ ಸುಬ್ಬರಾಯಶಾಸ್ತ್ರಿ, ತಂದೆ ವಿ. ಶಾಮಣ್ಣ, ಚಿಕ್ಕಪ್ಪ ಆನೂರು ಸೂರ್ಯನಾರಾಯಣ ಇವರೆಲ್ಲರೂ ಸಂಗೀತ ವಿದ್ವಾಂಸರು. ಇಂತಹ ಮನೆತನದಲ್ಲಿ  ೨೬-೧೧-೧೯೩೧ ರಂದು ಜನಿಸಿದ ರಾಮಕೃಷ್ಣರವರು ಬಾಲ್ಯದ ಶಿಕ್ಷಣವನ್ನು ತಂದೆಯವರಿಂದ ಪಡೆದು ಮುಂದೆ ರತ್ನಗಿರಿ ಸುಬ್ಬಾಶಾಸ್ತ್ರಿ ಹಾಗೂ ವಿದ್ಯಾಸಾಗರ, ಆರ್.ಆರ್. ಕೇಶವಮೂರ್ತಿಯವರ ಸಮರ್ಥ ಮಾರ್ಗದರ್ಶನದಲ್ಲಿ ನಾಡಿನ ಹೆಸರಾಂತ ಪಿಟೀಲು ವಾದಕರಾದರು. ಗಾಯನ ಹಾಗೂ ವೀಣಾ ವಾದನಗಳಲ್ಲೂ ಸುಶಿಕ್ಷಿತರಾಗಿದ್ದರು.

ಅಯ್ಯನಾರ್ ಕಲಾ ಶಾಲೆಯ ಪ್ರಾಂಶುಪಾಲರಾಗಿ, ಅಧ್ಯಾಪಕರಾಗಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಇವರು ಕ್ಷೇತ್ರಕ್ಕೆ ಕೊಡುಗೆಯಾಗಿಸಿರುವ ಗಾಯನ, ಪಿಟೀಲು, ವೀಣಾ, ಕೊಳಲು, ನಾಗಸ್ವರ ವಿದ್ವಾಂಸರುಗಳು ಅಸಂಖ್ಯಾತ. ನಾಡಿನ ನೆರೆ ನಾಡುಗಳ ಪ್ರತಿಷ್ಠಿತ ಸಭೆ-ಸಂಸ್ಥೆಗಳಲ್ಲಿ ಮಾತ್ರವಲ್ಲದೇ ಯೂರೋಪ್‌ನ ಹಲವಾರು ದೇಶಗಳಲ್ಲೂ ಇವರ ಕಛೇರಿ ಮತ್ತು ಪ್ರದರ್ಶನ ಭಾಷಣ ಕಾರ್ಯಕ್ರಮಗಳು ನಡೆದಿವೆ.

‘ಲಯ ಲಹರಿ’ ಇವರ ಆಸಕ್ತಿಯ ಫಲವಾಗಿ ಮೂಡಿರುವ ತಂಡ. ಪುತ್ರರಾದ ದತ್ತಾತ್ರೇಯ ಶರ್ಮ ಅನಂತ ಕೃಷ್ಣಶರ್ಮ ಸೋದರ ದ್ವಯರು ನೇತಾರರಾಗಿ ಈ ತಂಡವು ದೇಶ ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿ ಪ್ರಖ್ಯಾತಿ ಹೊಂದಲು ಕಾರಣರಾಗಿದ್ದಾರೆ. ಹೆಚ್‌.ವಿ. ಕೃಷ್ಣಮೂರ್ತಿ ಮತ್ತು ಎ. ವೀರಭದ್ರಯ್ಯ ಇವರೊಡನೆ ಸೇರಿ ಪಿಟೀಲು ತ್ರಯ ನೀಡಿರುವ ಕಛೇರಿಗಳು ಅನೇಕ ಹಾಗೂ ವಿಖ್ಯಾತ. ಉತ್ತಮ ಗುರುವಾಗಿ ವಾತ್ಸಲ್ಯದಿಂದ ಶಿಷ್ಯರನ್ನು ತರಬೇತಿಗೊಳಿಸಿರುವ ರಾಮಕೃಷ್ಣ ಅವರಿಗೆ ‘ಗಾನ ಸುಧಾ ವಿಶಾರದ’, ‘ಕಲಾ ಭೂಷಣ’, ‘ವಯೋಲಿನ್‌ವಾದನ ಪ್ರವೀಣ’, ‘ಸಂಗೀತ ಸಾಮ್ರಾಟ್‌’, ‘ರಾಜ್ಯೋತ್ಸವ ಪ್ರಶಸ್ತಿ’, ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾ ತಿಲಕ’ ಮುಂತಾದ ಗೌರವಗಳು ಲಭಿಸಿದುವು.

೧೯೯೫ರಲ್ಲಿ ನಾದದೇವಿಯಲ್ಲಿ ಐಕ್ಯರಾದ ರಾಮಕೃಷ್ಣ ಅವರ ಕೊಡುಗೆ ಸಂಗೀತ ಕ್ಷೇತ್ರದಲ್ಲಿ ಎಂದಿಗೂ ಹಚ್ಚ ಹಸಿರಾಗಿ ನಿಲ್ಲುವಂಥದು.