ಇವರು ಬೆಂಗಳೂರಿನಲ್ಲಿ ವೈಣಿಕರ ಮನೆತನದಲ್ಲಿ ೧೦-೪-೧೯೨೪ರಂದು ಜನಿಸಿದರು. ಬಾಲ್ಯದಲ್ಲಿ ತಂದೆ ಸುಬ್ಬಾಶಾಸ್ತ್ರಿ ಹಾಗೂ ಅಣ್ಣ ಶಾಮಣ್ಣ ಇವರುಗಳಲ್ಲೂ ನಂತರ ಪಾಲಕ್ಕಾಡು ಸೋಮೇಶ್ವರ ಭಾಗವತರು, ಕರೂರು ಕೃಷ್ಣರಾಯರುಗಳಲ್ಲಿ, ಪ್ರೌಢ ಪಾಠ ಗಾಯನದ ಜೊತೆಗೆ ವೀಣೆ, ಮೃದಂಗ, ಹಾರ್ಮೋನಿಯಂ ವಾದನಗಳಲ್ಲೂ ಪರಿಶ್ರಮ ಉಂಟು. ಪಂಡನಲ್ಲೂರು ಮೀನಾಕ್ಷಿ ಸುಂದರಂ ಪಿಳೈ, ಮೈಲಾಪುರ ಗೌರಿ ಅಮ್ಮಾಳ್ ಇವರುಗಳಲ್ಲಿ ನಟುವಾಂಗ ಮತ್ತು ನಾಟ್ಯಕ್ಕೆ ಹಿನ್ನೆಲೆ ಗಾಯನವನ್ನು ಕಲಿತರು. ಟೈಗರ್ ವರದಾಚಾರ್ ಅವರಿಂದ ಸಂಗೀತದಲ್ಲಿ ಮಾರ್ಗದರ್ಶನವನ್ನೂ ಪಡೆದರು. ಇವರು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಅನೇಕ ಗಾಯನ ಕಚೇರಿಗಳನ್ನೂ ನೀಡಿದ್ದಾರೆ. ವಿಶ್ವಖ್ಯಾತಿ ಪಡೆದ ನಾಟ್ಯ ಕಲಾವಿದರನೇಕರ ಜೊತೆಗೆ ವಿದೇಶಗಳಲ್ಲಿ ಸಂಚರಿಸಿ ನಟುವಾಂಗ ಮಾಡಿ, ಹಾಡಿದ್ದಾರೆ. ಇವರ ಗಾಯನ ಆಕಾಶವಾಣಿಯಿಂದಲೂ ಪ್ರಸಾರವಾಗುತ್ತಿದೆ. ಲಲಿತ ಕಲಾ ಭಾರತಿ ಸಂಸ್ಥೆಯ ಸ್ಥಾಪಕ ನಿರ್ದೇಶಕರು. ಉದಯ ಕಲಾ ನಿಕೇತನದ ಸಂಗೀತ, ನೃತ್ಯ ವಿಭಾಗದ ಸ್ಥಾಪಕ ನಿರ್ದೇಶಕರು. “ಆನೂರು ಸೂರು’ ಎಂದೇ ಚಿರಪರಿಚಿತರಾದ ಇವರು ಅನೇಕ ಕೀರ್ತನೆಗಳನ್ನೂ ವರ್ಣ ಜಾವಣಿಗಳನ್ನೂ ರಚಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದ ಶ್ರೀಯುತರಿಗೆ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯ ತನ್ನ ೧೯೮೭-೮೮ನೇ ಸಾಲಿನ ಪ್ರಶಸ್ತಿಯನ್ನು ಇತ್ತು ಗೌರವಿಸಿದೆ.

ರಾಂಗೋಪಾಲ್ ಯು. ಎಸ್.ಕೃಷ್ಣರಾವ್‌ ದಂಪತಿಗಳು, ತಾರಾ ಚೌಧುರಿ ಮುಂತಾದ ಅನೇಕ ಖ್ಯಾತ ನೃತ್ಯ ಕಲಾವಿದರಿಗೆ ಹಿನ್ನೆಲೆಯ ಗಾಯಕರಾಗಿ ಕೀರ್ತಿ ಶೇಷರಾಗಿದ್ದಾರೆ.