ಕಬಿನಿಯಲ್ಲಿ ಸಿಕ್ಕ ಆನೆಗಳ ಶವಗಳಿರಬಹುದು ಅಥವಾ ಕೊಲ್ಕೊತ್ತಾದಲ್ಲಿ ರಐಲಿಗೆ ಸಿಕ್ಕ ಸತ್ತ ಆನೆಗಳಿರಬಹುದು.  ಎಲ್ಲೆಲ್ಲೂ ಅಭಿವೃದ್ಧಿಯ ಪರಿಣಾಮಗಳೇ ಆನೆಗಾತ್ರದ್ದಾಗಿ ಕಾಣುವುದು ಸಹಜ.  ವಾಸ್ತವವಾಗಿ ಇದನ್ನು ಪ್ರಶ್ನಿಸಿ ಅಧಿಕಾರಿಗಳ ಭ್ರಷ್ಟಾಚಾರವನ್ನು ಹೊರಗೆಳೆಯಬೇಕಿದ್ದ ಮಾಧ್ಯಮಗಳು ಕೆವಲ ರೋಚಕ ಸುದ್ದಿಯಾಗಿ ಬಿಂಬಿಸಿ ಸುಮ್ಮನಾದವು.

ಕೃಷಿ ಅಭಿವೃದ್ಧಿ ಎಂಬ ಮಂತ್ರ.  ಒತ್ತುವರಿ ಎನ್ನುವ ತಂತ್ರ.  ಕಾಡಿನಾನೆಗಳ ತಿರುಗಾಟದ, ಮೇವಿನ ತಾಣಗಳ ನಾಶಕ್ಕೆ ಕಾರಣವಾಗಿದೆ.  ಹೀಗಿರುವಾಗ ಕೃಷಿ ಜಮೀನಿಗೆ ದಾಳಿ ಇಡುವ ಆನೆಗಳನ್ನು ಹೊಡೆಯುವುದು ಸುಲಭವಲ್ಲ.  ಇದಕ್ಕೆ ಆನೆ ತಜ್ಞ ಆರ್. ಸುಕುಮಾರನ್ ಹೇಳುತ್ತಾರೆ.  ಆನೆಗಳು ಬರೀ ಹುಲ್ಲು ತಿನ್ನುವುದಿಲ್ಲ.  ಪ್ರೋಟೀನ್‌ಯುಕ್ತ ಆಹಾರವೂ ಅದಕ್ಕೆ ಬೇಕು.  ಹೆಣ್ಣು ಆನೆಯ ನೇತೃತ್ವದಲ್ಲಿರುವ ಗುಂಪು ಹೊಲ-ಗದ್ದೆಗಳಿಗೆ ದಾಳಿ ಮಾಡುವುದಕ್ಕಿಂತ ಗಂಡಾನೆ-ಒಂಟಿಸಲಗದ ದಾಳಿ ಹೆಚ್ಚು.  ಹೀಗಾಗಿ ರೈತರು ಅವುಗಳನ್ನು ಕೊಲ್ಲುವುದು ಸುಲಭವಾಗುತ್ತದೆ.

WWಈನವರು ರೈತರಿಗೆ ಅನೇಕ ತರಬೇತಿಗಳ ಮೂಲಕ ಆನೆಗಳ ದಾಳಿ ಎದುರಿಸುವ ಕ್ರಮ ತಿಳಿಸುತ್ತಾರೆ.  ತಂಡಗಳನ್ನು ರಕ್ಷಣೆಗೆ ನಿಯಮಿಸಿ ಸರ್ಚ್‌ಲೈಟ್ ಅಥವಾ ಪಟಾಕಿ ಬಳಸಿ ಓಡಿಸುವುದು.  ಮೆಣಸಿನಕಾಯಿ ಪುಡಿ ಬಳಸಿ ಘಾಟು ಎಬ್ಬಿಸಿ ಓಡಿಸುವುದು.  ಮನುಷ್ಯರ ತಲೆಕೂದಲನ್ನು ಬೇಲಿಯ ಮೇಲೆ ಚೆಲ್ಲಿ ಆನೆಗಳು ಬಾರದಂತೆ ನಿಗ್ರಹಿಸುವುದು-ಇವೆಲ್ಲಾ ಅಹಿಂಸೆ ಮಾರ್ಗಗಳು.

ಆದರೂ ಆನೆಗಳು ದಾಳಿ ಮಾಡಿದ್ದಾದರೆ; ಸಾಕಿದ ಆನೆಗಳನ್ನೇ ಬಳಸಿ ಕಾಡಾನೆಗಳನ್ನು ದೂರಕ್ಕೆ ಓಡಿಸುವುದು.  ಆನೆಗಳು ತಿನ್ನುವ ಬೆಳೆಗಳನ್ನು ಬಿಟ್ಟು ಬೇರೆ ಬೆಳೆಗಳನ್ನು ಬೆಳೆಸುವುದು.  ಅಂದರೆ ಅರಿಶಿನ, ಶುಂಠಿಗಳನ್ನು ಬೆಳೆಯುವುದರಿಂದ ಆನೆಗಳು ಅಲ್ಲಿಗೆ ಬರಲು ಸಾಧ್ಯವೇ ಇಲ್ಲ.

ಅರಣ್ಯ ಇಲಾಖೆಯ ದ್ವಂದ್ವ

ರೈತರು ಅರಣ್ಯ ಒತ್ತುವರಿ ಮಾಡಿದ್ದನ್ನು ಬಿಡಿಸುವ ತಾಕತ್ತು ಅರಣ್ಯ ಇಲಾಖೆಗೆ ಇಲ್ಲ.  ಸೂಕ್ತ ಪರಿಹಾರವನ್ನಾದರೂ ಕೊಟ್ಟಿದ್ದಿದ್ದರೆ ಈ ರೀತಿಯ ಆನೆಗಳ ಸಾವು-ರೈತರ ಸಾವು ಸಂಭವಿಸುತ್ತಿರಲಿಲ್ಲ.  ಹೋಗಲಿ, ರೈತರು ಹೊಲಕ್ಕೆ ಕರೆಂಟ್ ಬೇಲಿಯನ್ನು ಅಕ್ರಮವಾಗಿ ಹಾಕಿದಾಗ ತೆಗೆಸುವುದು ಅರಣ್ಯರಕ್ಷಕರ ಕೆಲಸ.  ಅಂತಹ ರೈತರಿಗೆ ಸೂಕ್ತ ಶಿಕ್ಷೆ ವಿಧಿಸುವುದೂ ಸರಿಯಾದ ಕ್ರಮ.  ಆದರೆ ಇಲ್ಲಿಯವರೆಗೆ ಯಾವ ರೈತರಿಗೂ ಆನೆ ಕೊಂದಿರುವುದಕ್ಕೆ ಶಿಕ್ಷೆಯಾಗಿಲ್ಲ [ಯಾವ ವನ್ಯಜೀವಿಯನ್ನು ಕೊಂದರೂ ಶಿಕ್ಷೆಯಿಲ್ಲ].  ಇನ್ನುಳಿದಂತೆ ವಿಷಪ್ರಾಶನ, ಬೇಟೆ ಇವೆಲ್ಲಾ ಅಪರಾಧಗಳು.  ಅಪರಾಧಿಗಳು ಸಿಕ್ಕಿಲ್ಲ.

ಆನೆಗಳು ಓಡಾಡುವ ಹಾಗೂ ಆಶ್ರಯತಾಣದ ಸುತ್ತಲೂ ಕಂದಕ ನಿರ್ಮಾಣವಾಗಿದೆ ಎಂಬುದು ಅರಣ್ಯ ಇಲಾಖೆಯ ದಾಖಲಾತಿ.  ಸೋಲಾರ್ ಬೇಲಿ ನಿರ್ಮಾಣದಿಂದ ನಿಯಂತ್ರಣ ಸಾಧ್ಯವೆಂದು ಅದಕ್ಕೂ ಸಹ ಅನುದಾನ ಬಂದಾಗಿದೆ.  ಕಂದಕಗಳು, ಬೇಲಿಗಳು ಎಲ್ಲಿ ಹೋಗಿದ್ದಾವೋ ಯಾರಿಗೆ ಗೊತ್ತು.  ಇಷ್ಟಾಗಿಯೂ ಕಾಡಿನಲ್ಲಿ ಸೂಕ್ತ ಆಹಾರವಿರುವಂತೆ ಇವರಿಗೆ ಅರಣ್ಯ ಬೆಳೆಸಲು, ಹೋಗಲಿ ಉಳಿಸಲು ಆಗದು ಎಂದಾದರೆ ಅರಣ್ಯಕ್ಕಾಗಿ, ವನ್ಯಜೀವಿಗಳ ರಕ್ಷಣೆಗಾಗಿ ಇಲಾಖೆ ಏಕೆ ಬೇಕು?

ಇಷ್ಟಾಗಿಯೂ ಆನೆತಜ್ಞ ಆರ್. ಸುಕುಮಾರನ್‌ರವರಿಗೆ ಭರವಸೆ ಇದೆ.  ಆನೆಗಳು ಇದನ್ನೆಲ್ಲ ಹೊಂದಿಕೊಂಡೂ ಬೆಳೆಯುತ್ತಿವೆ.  ಮನುಷ್ಯರ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಆನೆ ಪ್ರಮಾಣದ ಪ್ರಯತ್ನ ಪಡುತ್ತಿದೆ ಹಾಗೂ ಈ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಿದೆ.

ಈ ಭರವಸೆಯು ಮನುಷ್ಯನಿಗೆ ಸವಾಲಾಗದಿರಲಿ.  ಅವುಗಳಿಗೆ ಬದುಕಿನ ಕಿರಣಗಳಾಗಲಿ