ಮಾನವ ಮತ್ತು ಮಾನವ ಸ್ವರೂಪದ ಪ್ರಾಣಿಗಳ ಆದಿರೂಪವು ಉಗಮವಾದದ್ದು ಆಫ್ರಿಕಾದಲ್ಲಿ ಎಂಬುದು ಪುರಾತತ್ವ ಶೋಧನೆಗಳಿಂದ ತಿಳಿದುಬಂದಿದೆ. ೧೯೬೦ ಹಾಗೂ ೧೯೭೦ರ ದಶಕಗಳಲ್ಲಿ ಇಥಿಯೋಪಿಯಾ, ಕಿನ್ಯಾ ಮತ್ತು ಟಾಂಜೆನಿಯಾಗಳಲ್ಲಿ ಕೆಲಸ ಮಾಡುತ್ತಿದ್ದ ವಿಜ್ಞಾನಿಗಳು, ೩೭,೫೦,೦೦೦ ವರ್ಷಗಳಷ್ಟು ಹಿಂದಿನ ಪ್ರಾಗೈತಿಹಾಸಿಕ ಮಾನವರ ಅಸ್ಥಿಪಂಜರಗಳನ್ನು ಪತ್ತೆ ಹಚ್ಚಿದ್ದಾರೆ. ನಮಗೆ ಕರಾರುವಾಕ್ಕಾಗಿ ತಿಳಿದಿರುವಂತೆ ಅತಿ ಪ್ರಾಚೀನ ಆಫ್ರಿಕಾ ಜನತೆ ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ, ಚೆನ್ನಾಗಿ ಮಳೆಬಿದ್ದು ಸಸ್ಯರಾಶಿಗಳಿಂದ ನಳನಳಿಸುತ್ತಿದ್ದ ಸಹಾರಾ ಪ್ರದೇಶದಲ್ಲಿ ವಾಸಿಸುತ್ತಿದ್ದರು. ತಮ್ಮ ಸಂಸ್ಕೃತಿಯ ದಾಖಲೆಗಳಾಗಿ ಅವರು ಅನೇಕ ಗುಹಾ ವರ್ಣಚಿತ್ರಗಳನ್ನು ಬಿಟ್ಟು ಹೋಗಿದ್ದಾರೆ. ಈ ಪೂರ್ವಮಾನವರು ಮೀನು ಹಿಡಿದು ಜೀವಿಸುತ್ತಿದ್ದರು. ಆದರೆ ಬಹುಶಃ ಕ್ರಿ.ಪೂ.೫೦೦೦ದ ಸುಮಾರಿಗೆ ಹವಾಮಾನ ಶುಷ್ಕವಾಗುತ್ತ ಬಂದು ಮರುಭೂಮಿ ಉಂಟಾಗಲು ಪ್ರಾರಂಭವಾದಾಗ, ಈ ಸಹರಾದ ಜನತೆ ಎಲ್ಲೆಡೆ ಚದುರಿ ಹೋಗಿ ಅವರ ಸಂಸ್ಕೃತಿ ನಾಶಗೊಂಡಂತೆ ಕಂಡುಬರುತ್ತದೆ. ಮನುಷ್ಯ ಕಾಡಿನೊಳಕ್ಕೆ ವಲಸೆ ಹೋದ ಮೇಲೆ ಒಂದು ಸ್ಪಷ್ಟವಾದ ನಿಗ್ರಾಮ್ಡ್ ಬುಡಕಟ್ಟು, ಹೋಮೊಸೆಪಿಯನ್ ಆಗಿ ವಿಕಾಸ ಹೊಂದಿ ಉತ್ತರ ಹಾಗು ಪೂರ್ವದಲ್ಲಿ ಹೆಚ್ಚು ಪ್ರಬಲಗೊಂಡಿತು. ತನ್ನ ಅತಿಪೂರ್ವ ಉಗಮದಲ್ಲಿ ಒಂದು ಬುಷ್ ಬುಡಕಟ್ಟು ರೂಪುಗೊಂಡು ಆಧುನಿಕ ಬುಷ್‌ಮನ್ ಜನಾಂಗದ ಪೂರ್ವಿಕರು ರೂಪುಗೊಂಡರು. ಪ್ರಾಚೀನ ಶಿಲಾಯುಗದ ಮೇಲು ಅವಧಿಯ ಕಾಲಕ್ಕೆ ಅಂದರೆ ೧೦,೦೦೦ ವರ್ಷಗಳ ಹಿಂದೆ ಆಫ್ರಿಕಾದಲ್ಲಿ ಇನ್ನೂ ಎರಡು ಜನಾಂಗಗಳು ರೂಪುಗೊಂಡವು. ನೀಗ್ರೋಗಳು ಮತ್ತು ಬುಷ್ ಜನಾಂಗದವರ ಜೊತೆಗೆ ಪಿಗ್ಮಿಜನಾಂಗ ಸೇರಿಕೊಂಡಿತು. ಬಹುಶಃ ಇದು ನೀಗ್ರೋ ಮತ್ತು ಬುಷ್ ಬುಡಕಟ್ಟುಗಳಿಂದ ಬಂದ ಪೀಳಿಗೆಯೇ ಇರಬೇಕು. ಉತ್ತರ ಮತ್ತು ಪೂರ್ವ ಆಫ್ರಿಕಾದಲ್ಲಿ ನೈರುತ್ಯ ಏಷ್ಯಾದ ಜನರ ಸಂಸರ್ಗದಿಂದಾಗಿ ಅವರ ಗುಣಲಕ್ಷಣವುಳ್ಳ ನಸುಗಪ್ಪು ಬಣ್ಣದ ಚರ್ಮದ ಪ್ರೋಜನರು ಹುಟ್ಟಿಕೊಂಡರು.

ಆಫ್ರಿಕಾದ ಇತಿಹಾಸವು ಈಜಿಪ್ಟಿನ ನಾಗರಿಕತೆಯೊಂದಿಗೆ ಪ್ರಾರಂಭವಾಗುತ್ತದೆ. ಹೀಗಿದ್ದರೂ ಈಜಿಪ್ಟಿನ ಈ ವಿಶಿಷ್ಟ ಚರಿತ್ರೆಯನ್ನು ಪುಸ್ತಕ ಸಮೀಕ್ಷೆಯಲ್ಲಿ ಇನ್ನುಳಿದ ಆಫ್ರಿಕಾದ ಭಾಗಗಳಿಗಿಂತ ಮೆಡಿಟರೇನಿಯನ್ ಜಗತ್ತಿಗೆ ಸೇರಿರುವ ಕಾರಣ ಕೈಬಿಡಲಾಗಿದೆ. ಕ್ರಿ.ಪೂ.೪೦೦೦ದ ಸುಮಾರಿಗೆ ಈಜಿಪ್ಟರು ಮರಳು ಗುಡ್ಡಗಾಡು ಪ್ರದೇಶದಿಂದ ಫಲವತ್ತಾದ ನೈಲ್ ನದಿಯ ತೀರಕ್ಕೆ ಇಳಿದುಬಂದರು. ಇದಾದ ತರುವಾಯ ಜನಸಂಖ್ಯೆ ಹೆಚ್ಚಿತು ಮತ್ತು ಬೌದ್ದಿಕ ವಾಗಿ, ಸಾಂಸ್ಕೃತಿಕವಾಗಿ ಮತ್ತು ಯುದ್ಧತಂತ್ರದಲ್ಲಿ ನಿಪುಣರಾದ ಒಂದು ಪ್ರಜ್ವಲ ನಾಗರಿಕತೆ ಬೆಳೆದು ಈಜಿಪ್ಟ್ ಕ್ರಿ.ಪೂ.೩೦೦೦ರಿಂದ ೧೦೦೦ದವರೆಗೆ ವಿಜೃಂಭಿಸಿತು. ಚಿನ್ನ, ದಂತ ಮತ್ತು ಗುಲಾಮರ ಮೂಲಸ್ಥಾನವಾದ ನೈಲ್‌ನ ದಕ್ಷಿಣ ಪ್ರದೇಶವನ್ನು ಸೇರಿಸಿ ಕೊಳ್ಳ ಲಾಯಿತು. ಸಮುದ್ರ ವ್ಯಾಪಾರವನ್ನು ಅರೇಬಿಯ, ಮೆಸಪೊಟೋಮಿಯಾ, ಫಿನೇಷಿಯಾ ಮತ್ತು ಗ್ರೀಕ್(ಏಜಿಯನ್) ಸಮುದ್ರದ ದ್ವೀಪಗಳೊಂದಿಗೆ ಪ್ರಾರಂಭಿಸಲಾಯಿತು. ಹಸಿರಾದ ಮತ್ತು ಸಂಪತ್ ಸಮೃದ್ಧವಾದ ಈಜಿಪ್ಟ್ ಪಶ್ಚಿಮದ ಲಿಬಿಯಾದ ಅಲೆಮಾರಿ (ಮುಂದೆ ಅವರನ್ನು ಬರ್ಬರರು ಎಂದು ಕರೆಯಲಾಗಿದೆ) ಜನರನ್ನು ಆಕರ್ಷಿಸಿತು. ಕ್ರಿ.ಪೂ.೧೩ನೇ ಶತಮಾನದಲ್ಲಿ ನಡೆಸಿದ ದಾಳಿಯಲ್ಲಿ ಅವರನ್ನು ಸೋಲಿಸಲಾಯಿತು. ಆದರೆ ಕ್ರಿ.ಪೂ.೧೦ನೇ ಶತಮಾನದಲ್ಲಿ ಅವರು ವಿಜೇತರಾದರು ಮತ್ತು ಈಜಿಪ್ಟನ್ನು ನೂರು ವರ್ಷಕ್ಕೂ ಹೆಚ್ಚು ಕಾಲ ಆಳಿದರು. ಲಿಬಿಯಾದ ರಾಜರುಗಳ ತರುವಾಯ ಕ್ರಿ.ಪೂ. ೭ನೇ ಶತಮಾನದಲ್ಲಿ ಈಜಿಪ್ಪಿನ ದಕ್ಷಿಣ ಭಾಗದ ಒಂದು ರಾಜ್ಯವಾದ ಕುಷ್‌ನ ಒಂದು ರಾಜವಂಶ ಆಳ್ವಿಕೆ ನಡೆಸಿತು. ಈ ರಾಜ್ಯ ಒಂದಾದ ನಂತರ ಒಂದರಂತೆ, ಪರ್ಷಿಯನ್ನರು, ಗ್ರೀಕರು ಮತ್ತು ಬೈಜಾಂಟಿಯನ್ನರ ಆಳ್ವಿಕೆಗೆ ಒಳಗಾಯಿತು.

ಫಿನೀಷಿಯನ್ನರು ಮತ್ತು ಗ್ರೀಕರು

ಮೆಡಿಟರೇನಿಯನ್ ಪ್ರದೇಶದ ಪ್ರಪ್ರಥಮ ನೌಕಾಯಾತ್ರಿ ಜನಾಂಗವಾದ ಫಿನೀಷಿಯನ್ನರು ಟುನಿಷಿಯಾದ ಕಡಲ ತೀರದಲ್ಲಿ ವಸಾಹತು ನಿರ್ಮಾಣವನ್ನು ಕ್ರಿ.ಪೂ. ೯ನೆಯ ಶತಮಾನದಲ್ಲಿ ಪ್ರಾರಂಭಿಸಿ, ಯುಟಿಕಾದಲ್ಲಿ ಮೊದಲು ನೆಲಸಿದರು. ತರುವಾಯ ಅನೇಕ ನೈಸರ್ಗಿಕ ಅನುಕೂಲಗಳಿದ್ದಂತಹ ಕಾರ್ಥೇಜಿನಲ್ಲಿ ಪ್ರಸಿದ್ಧ ನಗರ ರಾಜ್ಯವನ್ನು ಸ್ಥಾಪಿಸಲಾಯಿತು. ಕಾರ್ಥೇಜ್ ಮೊರಾಕ್ಕೋದ ಪಶ್ಚಿಮಭಾಗದಿಂದ ಹಿಡಿದು ಮೆಡಿಟರೇನಿಯನ್ ಸಮುದ್ರವನ್ನೂ ಹಾಯ್ದು ಸ್ಪೈನ್ ಮತ್ತು ಸಿಸಿಲಿಗಳವರೆಗೆ ಹಬ್ಬಿದ್ದ ಒಂದು ಸಾಮ್ರಾಜ್ಯದ ಕೇಂದ್ರಸ್ಥಾನವಾಯಿತು. ಕಾರ್ಥೇಜಿಯನ್ನರು ಪ್ರಮುಖವಾಗಿ ನೌಕಾ ವ್ಯಾಪಾರದಲ್ಲಿ ಆಸಕ್ತರಾಗಿದ್ದರು. ಮತ್ತು ತಮ್ಮ ತೀರದಿಂದ ಬಲುದೂರಕ್ಕೆ ಹೋಗುವ ಪ್ರಯತ್ನಕ್ಕೆ ತೊಡಗಲಿಲ್ಲ. ಅವರ ಚಟುವಟಿಕೆಗಳು ಮೆಡಿಟರೇನಿಯನ್ ಮತ್ತು ಅಟ್ಲಾಂಟಿಕ್ ಹಾಗೂ ದಕ್ಷಿಣ ಮೊರಾಕ್ಕೊದ ಸಮುದ್ರದವರೆಗೆ ಹಬ್ಬಿದ್ದ ಮರುಭೂಮಿ ಕ್ಷೇತ್ರಗಳ ಒಂದು ಮಾರಾಟ ಕೇಂದ್ರಗಳ ಸರಣಿಗೆ ಹೋಗುವುದಕ್ಕೆ ಮಾತ್ರ ಕೇಂದ್ರೀಕೃತವಾಗಿತ್ತು. ಕ್ರಿ.ಪೂ.೫ನೆಯ ಶತಮಾನದಲ್ಲಿ ಹನ್ನೋ ಆಧುನಿಕ ಸಿಯಾರಾಲಿಯೋನ್ ಪ್ರದೇಶದವರೆಗೂ ಯಾತ್ರ ಕೈಗೊಂಡಿದ್ದನು. ಕಾರ್ಥೇಜಿನ ಉಚ್ಛ್ರಾಯ ಕಾಲದಲ್ಲಿ ಗ್ರೀಕ್‌ನ ಶಕ್ತಿ ವರ್ಧಿಸಲಾರಂಭಿಸಿತು. ಗ್ರೀಕ್ ದೇಶದ ತೀರದ ಎದುರಿನ ಸಿರಿನೇಷಿಯಾದಲ್ಲಿ ಒಂದು ಗ್ರೀಕ್ ವಸಾಹತು ನೆಲಸಿತು. ಇದರ ಪರಿಣಾಮವಾಗಿ ಸಿರೋನೇಷಿಯಾದ ಗ್ರೀಕ್ ವಸಾಹತು ಮತ್ತು ಪಶ್ಚಿಮದ ಕಾರ್ಥೇಜಿನ ನಡುವೆ ಸೀಮಾರೇಖೆಯ ಇತ್ಯರ್ಥದ ವಿಷಯದಲ್ಲಿ ಗ್ರೀಕರು ಮತ್ತು ಕಾರ್ಥೇಜಿಯನ್ನರ ನಡುವೆ ಮೊದಲ ವಿವಾದ ಪ್ರಾರಂಭವಾಯಿತು. ಉತ್ತರ ಆಫ್ರಿಕಾ ಹಾಗೂ ಗ್ರೀಕರು ಇಬ್ಬರಿಗೂ ಪ್ಯೂನಿಕ್ ಸಾಮಾನ್ಯ ವ್ಯಾಪಾರ ಭಾಷೆಯಾಯಿತು. ಗ್ರೀಕರೊಂದಿಗೆ ಯುದ್ಧವು ಮೆಡಿಟರೇನಿಯನ್ ಸುತ್ತಲೆಲ್ಲ ಅದರಲ್ಲೂ ಸಿಸಿಲಿ ಮತ್ತು ದಕ್ಷಿಣ ಇಟಲಿ ಭಾಗಗಳಲ್ಲಿ ಶತಮಾನಗಳಿಂದ ಮುಂದುವರಿಯಿತು. ಕ್ರಿ.ಪೂ.೩೦೦ರ ಹೊತ್ತಿಗೆ ಕಾರ್ಥೇಜಿಯನ್ನರು ಟಿರ್ಹೇನಿಯನ್ ಸಮುದ್ರ ಹಾಗೂ ಸಿಸಿಲಿಗಳಲ್ಲಿ ಸರ್ವಶ್ರೇಷ್ಠರಾದರು. ಆದರೆ ರೋಮ್‌ನ ಪ್ರಾಬಲ್ಯ ಬೆಳೆದಂತೆ ಅದು ಅವರಿಗೆ ಬೆದರಿಕೆ ಒಡ್ಡಿತು.

ರೋಮ್‌ನಲ್ಲಿ ಕ್ರಿ.ಪೂ.೨೬೪ರಿಂದ ೧೪೬ರ ನಡುವೆ ನಡೆದ ಮೂರು ಪ್ಯೂನಿಕ್ ಯುದ್ಧಗಳು ಕಾರ್ಥೇಜಿನ ಶಕ್ತಿಯನ್ನು ಪೂರ್ಣವಾಗಿ ನಿರ್ನಾಮ ಮಾಡಿದವು. ಕಾರ್ಥೇಜ್ ಪ್ರದೇಶ ‘ಆಫ್ರಿಕಾ’ ಎಂಬ ಹೆಸರಿನ ಪ್ರಾಂತವಾಯಿತು. ರೋಂ ತನ್ನ ಉತ್ತರ ಆಫ್ರಿಕಾದ ಪ್ರಾಂತ್ಯಗಳನ್ನು ಕ್ರಮೇಣ ಪೂರ್ವ ಪಶ್ಚಿಮಕ್ಕೆ ವಿಸ್ತರಿಸುತ್ತ ಬಂದಿತು. ಅದು ಸಿರ್ರೆನೇಷಿಯಾವನ್ನು ಕ್ರಿ.ಪೂ.೯೬ರಲ್ಲಿ ತನ್ನೊಳಗೆ ಸೇರಿಸಿಕೊಂಡಿತು. ನುಮಿಡಿಯಾವನ್ನು (ಆಧುನಿಕ ಅಲ್ಜೀರಿಯಾ ತೀರಪ್ರದೇಶವೆಂದು ಸ್ಥೂಲವಾಗಿ ಹೇಳಬಹುದು) ಕ್ರಿ.ಪೂ.೪೬ರಲ್ಲಿ ಈಜಿಪ್ಟರು ವಶಪಡಿಸಿಕೊಂಡರು. ಲಿಬಿಯಾದ ಅಲೆಮಾರಿಗಳಲ್ಲಿ ಬರ್ಬರರಲ್ಲಿ ಕೆಲವರನ್ನು ಪರಿವರ್ತಿಸಿ ಬೇಸಾಯಗಾರರನ್ನು ನೆಲಸುಜೀವನಕ್ಕೆ ತೊಡಗುವಂತೆ ಮಾಡಿದರು. ಈಜಿಪ್ಟಿನ ಪಶ್ಚಿಮ ಭಾಗದ ಆಫ್ರಿಕಾದಲ್ಲಿನ ರೋಮನ್ನರು ಮೆಡಿಟರೇನಿಯನ್ ತೀರದ ಪಶ್ಚಿಮ ಭಾಗದುದ್ದಕ್ಕೂ, ಅಲ್ಲಿ ಸಾಕಷ್ಟು ಮಳೆಯಾಗಿ ಚೆನ್ನಾಗಿ ಬೆಳೆ ಬರುತ್ತಿದ್ದ ಕಾರಣ ನೆಲಸಿದರು. ಕ್ರೈಸ್ತ ಯುಗ ಪ್ರಾರಂಭ ವಾಗುವುದಕ್ಕೆ ಮೊದಲೇ ಸೈರಿನ್ ಗತಾವಶೇಷವಾಯಿತು. ಪ್ರಮುಖ ನಗರಗಳೆಂದರೆ ಲೆಪ್ಟಿಸ್ ಮ್ಯಾಗ್ನಾ(ಈಗಿನ ಟಿಪೋಲಿಯಾ ಹತ್ತಿರ), ಕಾರ್ಥೇಜ್ (ಜ್ಯೂಲಿಯಸ್ ಸೀಸರ್ ಮತ್ತು ಅಗಸ್ಟಸ್ ಅವರು ಪುನಃ ನಿರ್ಮಾಣ ಮಾಡಿದ್ದು), ಹಿಪ್ಯೂರೇಜಿಸ್ (ಬೋನ್), ಸಿರ್ವಾ (ಕಾನ್ಸ್ಯ್‌ಡೈನ್), ಸಿಜೇರಿಯಾ (ಶರ್ಚೆಲ್) ಮತ್ತು ಟೆಂಗಿಲ್(ಟ್ಯಾಂಜೈರಿಸ್) ಬೇಸಾಯ ಪ್ರದೇಶದಿಂದ ದೂರಕ್ಕೆ ವಾಸಿಸುತ್ತಿದ್ದೊಲಿಬಿಯಾದ ಅಲೆಮಾರಿಗಳು  ರೋಮನ್ನರ ಆಡಳಿತವನ್ನು ದ್ವೇಷಿಸ ತೊಡಗಿದರು ಮತ್ತು ಕ್ರಿ.ಪೂ.೪ನೆಯ ಶತಮನದ ಉತ್ತರಾರ್ಧದಲ್ಲಿ ನೆಲೆದಾಣಗಳ ಮೇಲೆ ದಾಳಿ ನಡೆಸಿದರು. ರೋಮನ್ನರ ಕಾಲದಲ್ಲಿ ಒಂಟೆ ಉತ್ತರ ಆಫ್ರಿಕಾದ ಬಲು ಸಾಮಾನ್ಯ ಸಾಕುಪ್ರಾಣಿಯಾಯಿತು. ಇದರಿಂದ ಲಿಬಿಯಾದವರು ಮರುಭೂಮಿಯೊಳಕ್ಕೆ ನುಗ್ಗಿ ಹೋಗಿ ಮೂಲನಿವಾಸಿ ನೀಗ್ರೋಗಳ ಮೇಲೆ ದಬ್ಬಾಳಿಕೆ ಮಾಡುವುದು ಸಾಧ್ಯ ವಾಯಿತು. ಒಂಟೆ ಪೂರ್ವದ ವ್ಯಾಪಾರ ವಾಣಿಜ್ಯದಲ್ಲಿ ಕತ್ತೆಗಳನ್ನು ಮತ್ತು ಎತ್ತುಗಳನ್ನು ಬಹುಶಃ ಹೇರು ಹೊರುವ ಪ್ರಾಣಿಗಳಾಗಿ ಬಳಸುತ್ತಿದ್ದರು. ಕಾರವಾನ್ ಆಗಿ ಒಂಟೆ ಉತ್ತಮ ಪ್ರಾಣಿ ಎಂದು ಅದರ ಬಳಕೆ ಪ್ರಾರಂಭವಾದ ಮೇಲೆ ವ್ಯಾಪಾರದ ಪ್ರಮಾಣ ನಿಸ್ಸಂದೇಹವಾಗಿ ಹೆಚ್ಚಾಯಿತು (ಆದರೆ ಈ ಬದಲಾವಣೆಯ ಜೊತೆಜೊತೆಗೆ ಕಾರವಾನ್ ಮಾರ್ಗಗಳಲ್ಲಿ ಯುದ್ಧಕೋರ ಬುಡಕಟ್ಟುಗಳ ಹಾವಳಿಯೂ ಜಾಸ್ತಿಯಾಯಿತು).

ವಂಡಾಲರು

ಕ್ರಿ.ಶ.೪೨೯ರಲ್ಲಿ ಸ್ಪೇನಿನ ಒಂದು ಜರ್ಮನ್ ಬುಡಕಟ್ಟು ಜನಾಂಗವಾದ ವಂಡಾಲರು ಗ್ರಿಬ್ರಾಲ್ಟರ್ ಸ್ಟೈಟ್ ಅನ್ನು ದಾಟಿ ಮಾರೆಟೇನಿಯಾಕ್ಕೆ ಬಂದರು. ಹಾಗೆ ಬಂದಿಳಿದ ಅವರನ್ನು ರೋಮನ್ನರಾಗಲೀ ಲಿಬಿಯಾದ ಅಲೆಮಾರಿಗಳಾಗಲಿ ವಿರೋಧಿಸಲಿಲ್ಲ. ವಂಡಾಲರ ನಾಯಕ ಜೆನ್‌ಸೆರಿಕ್ ಅನೇಕ ರಾಜ್ಯಗಳಲ್ಲಿ ಕಗ್ಗೊಲೆ ಎಸಗಿ ಧೂಳಿಪಟ ಮಾಡಿ ಪೂರ್ವದತ್ತ ಸಾಗಿದ. ನುಮಿಡಿಯಾ ಅಧಿಕ್ರಾಂತವಾಯಿತು. ಕ್ರಿ.ಶ.೪೩೯ರಲ್ಲಿ ಕಾರ್ಥೇಜ್ ಲಿಬಿಯಾದವರ ವಶವಾಯಿತು. ಕ್ರಿ.ಶ.೪೫೦ರಲ್ಲಿ ದಕ್ಷಿಣ ಇಟಲಿ ಹಾಗೂ ರೋಂ ಅಧೀನವಾದವು. ಮತ್ತೆ ಆಫ್ರಿಕಾಕ್ಕೆ ಬಂದ ಆತ ಕ್ರಿ.ಶ.೪೬೮ರಲ್ಲಿ ರೋಮನ್ನರ ದಾಳಿಯನ್ನು ಬಹುಸುಲಭವಾಗಿ ಎದುರಿಸಿ ಹಿಮ್ಮೆಟ್ಟಿಸಿದ. ಜೆನ್ಸರಿಕ್‌ನ ಉತ್ತರಾಧಿಕಾರಿಗಳು ಬಲು ದುರ್ಬಲರಾಗಿದ್ದರು. ೫ನೇ ಶತಮಾನದ ಕೊನೆಯ ಹೊತ್ತಿಗೆ ಅವರು ಮರುಭೂಮಿ ಲಿಬಿಯಾದವರು ದಾಳಿಯನ್ನು ತಡೆಯಲು ಸಾಧ್ಯವಾಗಲಿಲ್ಲ.

ಬೈಜಾಂಡೈನ್‌ಗಳು

ಕ್ರಿ.ಶ.ಆರನೇ ಶತಮಾನದ ಹೊತ್ತಿಗೆ ರೋಮನ್ ಚಕ್ರಾಧಿಪತ್ಯದ ಕೇಂದ್ರ ರಾಜಧಾನಿ ರೋಂನಿಂದ ಕಾನ್‌ಸ್ಟಾಂಟಿನೋಪಲ್‌ಗೆ ವರ್ಗವಾಗಿತ್ತು. ಕ್ರಿ.ಪೂ.೫೩೩ರಲ್ಲಿ ಚಕ್ರವರ್ತಿ ಜಸ್ಟಿನಿಯನ್ ತನ್ನ ಸೇನಾಧಿಪತಿ ಬೆಲಿಸಾರಿಯಸ್ ನನ್ನು ಆಫ್ರಿಕಾಕ್ಕೆ ಕಳುಹಿಸಿಕೊಟ್ಟನು. ವಂಡಾಲರ ಪ್ರಾಬಲ್ಯವನ್ನು ಪೂರ್ಣವಾಗಿ ನಿರ್ನಾಮಗೊಳಿಸಲಾಯಿತು. ಆದರೆ ಲಿಬಿಯಾದವರು ಮಾತ್ರ ತಮ್ಮ ದಂಗೆಯನ್ನು ಮುಂದುವರಿಸಿದರು ಮತ್ತು ಐರೋಪ್ಯರ ಪ್ರಭಾವ ತೀರ ಪ್ರದೇಶಗಳಿಗೆ ಮಾತ್ರ ಸೀಮಿತವಾಯಿತು. ಕ್ರಿ.ಶ.೬೦೦ರ ಪ್ರಾರಂಭದಲ್ಲಿ ಪರ್ಷಿಯಾ ಈಜಿಪ್ಟನ್ನು ಮುತ್ತಿಗೆ ಹಾಕಿತು. ಆದರೆ ಬೈಜಾಂಡಿಯನ್ ಚಕ್ರವರ್ತಿ ಹೆರಾಸಿಲಸ್ ಅವರನ್ನು ಒದ್ದೋಡಿಸಿದನು. ಬೈಜಾಂಡಿಯಾದ ಆಡಳಿತ ದಮನ ರೂಪದ್ದಾಗಿದ್ದರೂ ಪ್ರಾಗೈತಿಹಾಸಿಕ ಉಳಿಕೆಗಳು. ಅವರು ಈ ನಾಡಿಗೆ ಆರ್ಥಿಕ ಮತ್ತು ಕಲಾತ್ಮಕ ಪುನರುಜ್ಜೀವನ ಮಾಡಿದರು ಎಂಬುದನ್ನು ತೋರಿಸುತ್ತವೆ.

ಮುಸ್ಲಿಂರ ದಾಳಿ

ಕ್ರಿ.ಶ.೬೩೯ರಲ್ಲಿ ಅರಬ್ ಪ್ರವಾಸಿ ಮೊಹಮ್ಮದನ ಮುಸ್ಲಿಂ ಅನುಯಾಯಿಗಳು ಮತ್ತು ಆತ ಬೋಧಿಸಿದ ಧರ್ಮವಾದ ಇಸ್ಲಾಂ ಧರ್ಮ ಈಜಿಪ್ಟನ್ನು ಆಕ್ರಮಿಸಿದವು. ಅವರ ಮೊದಲ ಯುದ್ಧಯಾತ್ರೆಗಳು ಈಜಿಪ್ಟಿನ ನೆಲೆಗಳಿಂದ ಹೊರಟು ದಾಳಿ ಮಾಡುವುದು ಮಾತ್ರವಾಗಿದ್ದವು. ಬೈಜಾಂಡಿಯನ್ ಚರ್ಚ್‌ನಿಂದ ಬೇರ್ಪಟ್ಟಿದ್ದ ಕೋಷ್ಟಿಸ್ (ಈಜಿಪ್ತ) ಚರ್ಚ್‌ನ ಸದಸ್ಯರು ತಮಗೆ ಧಾರ್ಮಿಕ ಸ್ವಾತಂತ್ರ್ಯ ಕೊಡುವುದಾದರೆ ತಾವು ಅವರಿಗೆ ಬೆಂಬಲ ನೀಡುವುದಾಗಿ ಒಪ್ಪಿಕೊಂಡರು. ಕ್ರಿ.ಶ.೬೪೨ರಲ್ಲಿ ಆ ದೇಶದಿಂದ ಬೈಜಾಂಡೈನರನ್ನು ಹೊರಗೋಡಿಸಲಾಯಿತು ಮತ್ತು ಈಜಿಪ್ಟ್ ಮುಸ್ಲಿಂ ಜಗತ್ತಿನ ಅಂಗಭಾಗವಾಗಿ ಹೋಯಿತು. ಆರ್ ಕ್ವಾಯರವಾನ್‌ನ ಆರಂಭದ (ಆಧುನಿಕ ಟುನೇಷಿಯಾದ ಕೈರುಆನ್) ದಿನಾಂಕದಿಂದ ಮುಸ್ಲಿಂನ ಸ್ಥಾಪನೆಯನ್ನು ಕರಾರುವಾಕ್ಕಾಗಿ ಗುರುತಿಸಬಹುದು. ಅಂದರೆ ಕ್ರಿ.ಶ.೬೭೦ರ ಸುಮಾರಿನ ‘‘ಉಕ್ಬಾ ಇಬ್ನ್ ನಫಿ’’ಯಿಂದ ಗುರುತಿಸಬಹುದು. ಈ ನಗರವು ತರುವಾಯ ಒಂದು ಪ್ರಮುಖ ಧಾರ್ಮಿಕ ಮತ್ತು ಬೌದ್ದಿಕ ಕೇಂದ್ರವಾಗಿ ಬೆಳೆಯಿತು. ಅರಬ್ ದಾಳಿಕೋರರ ಮೊದಲ ಆಗಮನ ತೀರ ಚಿಕ್ಕದಾಗಿದ್ದು ಅದು ಜನಾಂಗೀಯವಾಗಿ ಯಾಗಲೀ, ಭಾಷಾವಾರಾಗಲಿ ಯಾವುದೇ ಪರಿಣಾಮ ಬೀರಲಿಲ್ಲ. ಬಾರ್ದೆ ೧೧ನೆಯ ಶತಮಾನದ ಬೆಡೇಯಿನ್ ಆಕ್ರಮಣವಾಗುವವರೆಗೆ ಬಲುಪ್ರಧಾನವಾಗಿ ಒಂದು ಬರ್ಬರ ರಾಷ್ಟ್ರವಾಗಿತ್ತು. ಕ್ರಿ.ಶ.೬೯೮ರಲ್ಲಿ ಕಾರ್ಥೇಜ್ ಅರಬರ ವಶವಾಯಿತು. ಮುಸ್ಲಿಂ ಆಡಳಿತ ಅಲ್-ಕ್ವಯರ್‌ಖಾನ್‌ನನ್ನು ಆಧರಿಸಿತ್ತು ಮತ್ತು ಮೊದಲು ಡಮಾಸ್ಕಸ್ ಅಥವಾ ಬಾಗ್ದಾದ್ ನ ಖಲೀಫನ ಪ್ರಜೆಗಳಾಗಿದ್ದ ಅಮೀರರ ಆಡಳಿತದಲ್ಲಿತ್ತು. ಆದರೆ ತರುವಾಯ ಅವರ ಸ್ಥಾನಕ್ಕೆ ಕ್ರಿ.ಶ.೮೦೦ರಲ್ಲಿ ಅಗ್ಲಾಬಿಡ್ಡರ ಸ್ವತಂತ್ರ ರಾಜವಂಶ ಬಂದಿತು. ಅಗ್ಲಾಬಿಡ್ಡರ ಆಡಳಿತ ಈಗಿನ ಟ್ಯೂನಿಷಿಯಾ ಮತ್ತು ಪೂರ್ವದ ಅಲ್ಜೀರಿಯಾವನ್ನು ವ್ಯಾಪಿಸಿತು. ಕ್ರಿ.ಶ.೭೮೮ರಲ್ಲಿ ಪ್ರವಾದಿ ಮಹಮ್ಮದನ ವಂಶಜನಾದ ಹಿರಿಯ ಇಡ್ರಿಸ್ ಎಂಬಾತನು ಇಡ್ರಿನಡ್ ರಾಜವಂಶವನ್ನು ಸ್ಥಾಪಿಸಿದನು. ಆತನ ಮಗ ಅದರ ರಾಜಧಾನಿ ಫೆನ್‌ನನ್ನು ಸ್ಥಾಪಿಸಿದನು. ಮಧ್ಯ ಮಘರಿಬ್‌ನಲ್ಲಿ ರುಸ್ತಮೀರ್‌ಗಳು, ಒಂದು ಖರೀಜಿ ರಾಜ್ಯ ಆಧಾರಿತ ಟಹಾರತ್ ಸ್ಥಾಪಿಸಿದರು. ಹೀಗೆ ಕ್ರಿ.ಶ.೯೦೦ರ ಹೊತ್ತಿಗೆ ಬಾದ್ ಬರಿ ಹೆಚ್ಚು ಕಡಿಮೆ ಸಂಪೂರ್ಣವಾಗಿ ಮುಸ್ಲಿಂರ ಆಡಳಿತಕ್ಕೆ ಒಳಪಟ್ಟಿತ್ತು. ಮುಸ್ಲಿಂ ರಾಜ್ಯಗಳು ಹೀಗಿದ್ದರೂ ಶಾಂತವಾಗಿಯೇನೂ ಇರಲಿಲ್ಲ. ದಾರ್‌ಬರಿಯ ಇತಿಹಾಸ ಎಂದರೆ ಯುದ್ಧ, ದಂಗೆ, ದುರಾಡಳಿತ ಹಾಗೂ ಅರಾಜಕತೆಯು ತುಂಬಿದ ಜುಗುಪ್ಸಾಕಾರಿ ಇತಿಹಾಸ. ಅಗ್ಲಾವಿಡ್ಸ್‌ರ ತರುವಾಯ ಕ್ರಿ.ಶ.೯೦೯ರಲ್ಲಿ ಫಾತಿಮಿಡ್ಸ್ ಬಂದನು. ಫಾತಿಮಿಡ್ಡರು ಮಗಾರಿಬ್‌ನಲ್ಲಿ ರಾಜಕೀಯವಾಗಿ ಮತ್ತು ಸೈನಿಕ ಶಕ್ತಿಯಾಗಿ ಬಹಳ ಯಶಸ್ವಿಯಾಗಿದ್ದರು. ಅವರು ತಮ್ಮ ಪ್ರಜೆಗಳನ್ನು ಯಶಸ್ವಿಯಾಗಿ ತಮ್ಮ ಧರ್ಮಕ್ಕೆ ಪರಿವರ್ತಿಸುವುದು ಸಾಧ್ಯವಾಗಲಿಲ್ಲ. ಕ್ರಿ.ಶ.೯೭೨ರಲ್ಲಿ ಅವರು ತಮ್ಮ ರಾಜಧಾನಿಯನ್ನು ಕೈರೋಗೆ ಬದಲಾಯಿಸಿದರು ಮತ್ತು ಟುನೀಷಿಯಾದಲ್ಲಿ ಜಿರ್ದೆಗಳನ್ನು ತಮ್ಮ ಸಾಮಂತರಾಗಿ ಬಿಟ್ಟು ಹೋದರು. ತರುವಾಯ ಬೆದೂಯಿನ್‌ಗಳು  (ಫಾತಿಮಿಡ್‌ಗಳು ಕಳುಹಿಸಿದ ಅರಬ್ಬ ಅಲೆಮಾರಿ ಬುಡಕಟ್ಟು ಜನರು) ಮಿಘಂಟ್ ಮೇಲೆ ದಾಳಿ ಮಾಡಿದರು. ಇದರಿಂದ ಜನವಸತಿ ಪ್ರದೇಶಗಳು ಅಗಾಧವಾಗಿ ಕುಗ್ಗಿ ಹೋದವು ಮತ್ತು ಸಾಂಸ್ಕೃತಿಕ ಬದುಕು ಹಾಗೂ ಸಮೃದ್ದಿ ತೀರ ಇಳಿಮುಖವಾಯಿತು ಹಾಗೂ ವಿನಾಶಕಾರಿ ಬೆಡೂಯಿನ್‌ಗಳ ದಾಳಿಯಿಂದಾಗಿ ರಾಜ್ಯಾಡಳಿತ ಮಾಡುವುದು ದುಸ್ತರವಾಯಿತು. ಇಂದಿನ ಅಲ್ಜಿರಿಯಾ ಪ್ರದೇಶವು ಕ್ರಿ.ಶ.೧೯ನೆಯ ಶತಮಾನದಲ್ಲಿೊಫ್ರೆಂಚರ ಆಗಮನದವರೆವಿಗೂ ವಾಸ್ತವವಾಗಿ ಯಾವುದೇ ಕೇಂದ್ರ ಸರ್ಕಾರವಿಲ್ಲದೇ ಉಳಿಯಿತು.

ಲಿಬಿಯಾದ ಅಲೆಮಾರಿಗಳು ಮತ್ತು ಅವರ ಭಾಷೆಯನ್ನು ಬಹಳ ದೂರದ ಜನಸಂಪರ್ಕ ಕಡಿಮೆ ಇರುವ ಪ್ರದೇಶಗಳಿಗೆ ಓಡಿಸಲಾಯಿತು ಮತ್ತು ವಿಶಾಲ ಜನಸಂಪರ್ಕವುಳ್ಳ ನಾಡು ಅರಬ್ಬರ ಮತ್ತು ಅರಾಬಿಕ್ ಭಾಷೆಯ ನೆಲೆವೀಡಾಯಿತು. ೧೧ನೆಯ ಶತಮಾನದ ಹೊತ್ತಿಗೆ ಸಹರಾ ಮರುಭೂಮಿಯ ಪಶ್ಚಿಮಭಾಗದ ಅಲ್ಮೊರಾವಿಡ್‌ಗಳೆಂಬ ಇನ್ನೊಂದು ರಾಜವಂಶ ಪ್ರಬಲವಾಗುತ್ತ ಬಂದಿತು. ಒರಟು ಸಹರಾ ಸಂಸ್ಕೃತಿಯ ಅಲ್ಮೊರಾವಿಡರು, ಸ್ಪ್ಯಾನಿಷ್ ಮುಸ್ಲಿಂ ಕ್ಷೀಣಿಸುವ ವಿಧಾನಗಳು ಒಮ್ಮೆಲೆ ಪ್ರವೇಶಗೊಂಡದ್ದರಿಂದ ಕೃಶವಾಗುತ್ತಾ ಬಂದು ಒಂದು ಶತಮಾನಕ್ಕೂ ಕಡಿಮೆ ಕಾಲಾವಧಿಯಲ್ಲಿ ಆಲ್ಮೊಹಡ್‌ಗಳಿಗೆ ದಾರಿಮಾಡಿಕೊಟ್ಟರು. ಈ ಲಿಬಿಯಾದ ಅಲೆಮಾರಿಗಳ ರಾಜವಂಶಸ್ಥರು ಮೂಲತಃ ಉನ್ನತ ಅಡ್ಲಾಸ್ ಗಿರಿ ಶ್ರೇಣಿಗಳಿಂದ ಬಂದವರು. ಅಲ್ಮೊಹಾಡ್ ರಾಜವಂಶದವರು ಬಲಪ್ರಯೋಗ ಮತ್ತು ಸ್ನೇಹಸಂಧಾನಗಳ ಚತುರ ಕಾರ್ಯನೀತಿಯನ್ನು ಅರಬ್ಬರೊಂದಿಗೆ ಅನುಸರಿಸುತ್ತ, ರ್ನೂನಿಂದ ಟ್ರಿಪೋಲಿವರೆಗಿನ ಎಲ್ಲ ಮಘಾರಿಬ್ ಪ್ರದೇಶವನ್ನು ಏಕೈಕ ಹಾಗೂ ಬಹಳ ಪರಿಣಾಮಕಾರಿಯಾದ ಆಡಳಿತದ ಅಡಿಗೆ ತಂದರು (೧೧೫೯). ಕಾಲ ಸರಿದಂತೆ ಆಲ್ಮೊಹಾಡ್ ಸಾಮ್ರಾಜ್ಯವು ಶಿಥಿಲವಾಗುತ್ತಾ ಬಂತು. ಮೊರಕ್ಕೊದಲ್ಲಿ ಅವರ ಸ್ಥಾನಕ್ಕೆ ಮಾರಿನಿಡ್ ಜನಾಂಗ ಬಂದರು ಮತ್ತು ಟುನೀಷಿಯಾದಲ್ಲಿ ಹಫ್ ಸಿಡ್ ವಂಶಸ್ಥರು ಬಂದರು. ಇವರು ಇದೇ ಕಾರ್ಯನೀತಿ ಮತ್ತು ಇದೇ ಆಡಳಿತ ಯಂತ್ರವನ್ನು ಅನುಸರಿಸುತ್ತಾ ಬಂದರು. ಅರಬ್ಬರನ್ನು ದೂರದಲ್ಲಿರಿಸಿ ರಾಷ್ಟ್ರವನ್ನು ಸಾಕಷ್ಟು ಸಮೃದ್ಧವಾಗಿ ಇರಿಸಿಕೊಂಡು ಬರುವಲ್ಲಿ ಯಶಸ್ವಿಯಾದರು. ತುರುಕರ ಆಗಮನದವರೆಗೂ ಇದು ಸಾಗಿತು.

ಆಲ್ಮೊಹಾಡ್‌ರು ಕಣ್ಮರೆಯಾದ ತರುವಾಯ ಹೊರಜಗತ್ತಿನಲ್ಲಿ ಕ್ರಮೇಣ ಇಳಿಮುಖ ಕಂಡುಬಂತು. ಇದಕ್ಕೆ ಸರಿಯಾಗಿ ಹೊರಗಿನಿಂದ ಸ್ಪೈನಿಯಾರ್ಡ್‌ಗಳು ಮತ್ತು ಪೋರ್ಚುಗೀಸ್ ಗಳ ಬೆಳವಣಿಗೆ ಕಂಡುಬರುತ್ತದೆ. ೧೨ನೆಯ ಶತಮಾನದಲ್ಲಿ ಸಿಸಿಲಿಯಿಂದ ಸಾರ್ಸನ್ ಗಳನ್ನು ಹೊರದೂಡಿದ್ದ ನಾರ್ಮನ್ನರು ಟುನೀಷಿಯಾದ ಕರಾವಳಿ ಪ್ರದೇಶವನ್ನು ತಮ್ಮ ಆಡಳಿತಕ್ಕೆ ಸೇರಿಸಿಕೊಂಡರು ಮತ್ತು ಎರಡು ದಶಕಗಳ ಕಾಲ ಆಳಿದರು. ಪವಿತ್ರ ಭೂಮಿಯಲ್ಲಿ ಮುಸ್ಲಿಂರ ವಿರುದ್ಧ ಕ್ರೈಸ್ತರು ನಡೆಸಿದ ಕ್ರುಸೇಡ್ ಯುದ್ಧದಲ್ಲಿ ಉತ್ತರ ಆಫ್ರಿಕಾದ ಮೇಲೂ ದಾಳಿ ಮಾಡಲಾಯಿತು. ೫ನೆಯ ಮತ್ತು ೭ನೆಯ ಕ್ರುಸೇಡ್ ಯುದ್ಧದಲ್ಲಿ ಈಜಿಪ್ಟಿನ ಮೇಲೆ ದಾಳಿ ಮಾಡಲಾಯಿತು. ೮ನೆಯ ಕ್ರುಸೇಡ್ ಯುದ್ಧದಲ್ಲಿ ಟುನೇಷಿಯಾದ ಮೇಲೆ ದಾಳಿ ಮಾಡಲಾಯಿತು. ೧೨೧೨ರಲ್ಲಿ ಸ್ಪೈನ್‌ನ ಲಾಸ್-ನವಾಗ್-ದ ಕೋಲೋಸಾದಲ್ಲಿ ಕ್ರೈಸ್ತರ ಜಯವಾದಾಗ ಐಬೀರಿಯನ್ ಜಂಬೂ ದ್ವೀಪದಿಂದ ಮೂರ್ ಜನಾಂಗವನ್ನು  (ಸ್ಪೈನ್‌ನಲ್ಲಿನ ಆಫ್ರಿಕನ್ನರು) ಹೊರದೂಡಲಾಯಿತು.

ಆಟೊಮನ್ ಟರ್ಕರು

ಬಾರ್ಬರಿಯಲ್ಲಿ ಟರ್ಕರು ಮೊದಲು ಸ್ಥಾಪಿತವಾದದ್ದು ೧೫೧೧ರಲ್ಲಿ. ಅಲ್ಜೀರಿಯಾದ ಬಿಜ್ಜಿಲ್ಲಿಯಲ್ಲಿ ಖಾಸಗಿ ವ್ಯಾಪಾರಸ್ಥನಾದ ಕಾರ್ಸೈನ್ ಅರುಬ್ ೧೫೧೧ರಲ್ಲಿ ನೆಲೆಯೂರಿದನು ಇಸ್ತಾನ್‌ಬುಲ್‌ನ ಅಟೊಮನ್ ಸರ್ಕಾರ ಅವನಿಗೆ ಅಧಿಕೃತ ಮನ್ನಣೆ ನೀಡಿತು. ೧೫೫೧ರಲ್ಲಿ ಇನ್ನಿಬ್ಬರು ಕಾರ್ಸೈನ್‌ಗಳು ಟ್ರಿಪೋಲಿಯಲ್ಲಿ ನೆಲೆಯೂರಿದರು. ಆಗ ಟರ್ಕರ ನೆಲೆಗಳು ನಾಮ ಮಾತ್ರಕ್ಕೆ ಆಟೊಮನ್ ಸರ್ಕಾರದ ಅಡಿಯಲ್ಲಿತ್ತು. ಟರ್ಕರು ಏನಿದ್ದರೂ ಕಡಲ್ಗಳ್ಳತನದ ಬಗ್ಗೆ ಆಸಕ್ತರಾಗಿದ್ದರು ಮತ್ತು ಚಿಂತಿತರಾಗಿದ್ದರು.

ತಮ್ಮ ವ್ಯಾಪಾರ ವ್ಯವಹಾರಕ್ಕೆ ಅವಶ್ಯವಾದ ಕನಿಷ್ಠ ಸಹಕಾರ ನೀಡುತ್ತಿರುವವರೆಗೆ ಅವರು ದೇಶಿಯವಾಸಿಗಳ ಗೊಡವೆಗೆ ಹೋಗದೆ ಇರುತ್ತಿದ್ದರು. ಹೀಗಾಗಿ ಕಡಲ್ಗಳ್ಳತನವನ್ನು ೧೯ನೆಯೊಶತಮಾನದವರೆಗೆ ಯಶಸ್ವಿಯಾಗಿ ನಡೆಸಿಕೊಂಡು ಬರಬಹುದಾಯಿತು. ಮೆರಿನಾಡ್ ಗಳು ಇಳಿಮುಖವಾದಂತೆ ಸೈಯದ್ದಿ ಎಂಬ ಹೆಸರಿನ ಮೊದಲ ಶೆರಿಫ್ ರಾಜವಂಶ ಮೊರಾಕ್ಕೋದಲ್ಲಿ ನೆಲೆಯೂರಿತು. ಅವರ ಸಂಪ್ರದಾಯದಲ್ಲಿ ಹೇಳಲಾದ ಜಿಹಾದ್ ಎಂಬುದು ವಾಸ್ತವವಾಗಿ ಆತ್ಮರಕ್ಷಣೆ ಯುದ್ಧವಾಗಿತ್ತು. ೧೫೭೮ರಲ್ಲಿ ನಡೆದ ಆ ಯುದ್ಧದಲ್ಲಿ ಮೂವರು ರಾಜರು ಮಡಿದರು. ಅಂತಿಮವಾಗಿ ಮುಸ್ಲಿಮರು ವಿಜೇತರಾದರು. ಈ ಯುದ್ಧ ಮೊರಾಕ್ಕೋದ ನೆಲದಲ್ಲೇ ನಡೆಯಿತು. ಮುಸ್ಲಿಂ ಟರ್ಕರ ವಿರುದ್ಧ ಅವರು  ಸ್ಪೈನಿಯಾರ್ಡರ ಜೊತೆ ಒಂದು ಒಪ್ಪಂದವನ್ನೂ ಮಾಡಿಕೊಂಡರು. ಅವರ ವೈಭವವೇನಿದ್ದರೂ ಪ್ರಜೆಗಳ ಹಣದ ಬಲದಿಂದ ಮತ್ತು ಅಧಿಕಾರಿ ಹಾಗೂ ಕೂಲಿ ಸಿಪಾಯಿಗಳ ದಬ್ಬಾಳಿಕೆಯಿಂದ ವೈಭವೋಪೇತ ದರ್ಬಾರು ನಡೆಸುವುದಾಗಿತ್ತು. ೧೭ನೆಯ ಶತಮಾನದಿಂದ ೨೦ನೆಯ ಶತಮಾನದವರೆಗೆ ಎರಡನೇ ಶರೀಫ ರಾಜವಂಶ ಆಳ್ವಿಕೆಗೆ ಬಂತು. ಆದರೆ ಕಾಲಕ್ರಮೇಣ ಅದು ಅವನತಿಗೀಡಾಯಿತು. ಸುಲ್ತಾನ ಬಲು ಶಕ್ತಿ, ಉತ್ಸಾಹವುಳ್ಳವನಾದರೂ ಆಂತರಿಕ ಅರಾಜಕತೆ ಹೆಚ್ಚಾಯಿತು. ಕೇಂದ್ರ ಸರ್ಕಾರ ಮೊರಾಕ್ಕೋ ಮೇಲೆ ಕೇವಲ ನಾಮಮಾತ್ರದ ನಿಯಂತ್ರಣ ಹೊಂದಿ್ತು. ಮೊರಾಕ್ಕೋವನ್ನು ಬುಡಕಟ್ಟು ಮತ್ತು ಧಾರ್ಮಿಕ ನಾಯಕರು ಆಳುತ್ತಿದ್ದರು. ಅಂತಿಮವಾಗಿ ೧೮೩೦ರಲ್ಲಿ ಫ್ರಾನ್ಸ್ ಆಲ್ಜೀರ್ಸ್ ಅನ್ನು ಅಕ್ರಮಿಸಿತು ಮತ್ತು ಕಡಲ್ಗಳ್ಳತನವನ್ನು ಅಂತ್ಯಗೊಳಿಸಲು ಇಚ್ಛಿಸಿತು.

ಸಹರಾ ಕೆಳಭಾಗದ ಆಫ್ರಿಕಾ

ಸಹರಾ ಎಂಬ ಹೆಸರು ಆರೇಬಿಯನ್ ಪದವಾದ ‘ಸೆಹ್ರಾ’ ಎಂಬುದರಿಂದ ಬಂದದ್ದು. ‘ಸೆಹ್ರಾ’ ಎಂದರೆ ಮರುಭೂಮಿ. ಆದರೂ ಸಹರಾ ೧೦,೦೦,೦೦೦ ವರ್ಷಗಳ ಹಿಂದೆ ಅಂದರೆ ಸಿನೋಚೋಯರ್ ಯುಗದ ಉತ್ತರ ಭಾಗದಲ್ಲಿ ಮರುಭೂಮಿಯಾಯಿತು. ಅದಕ್ಕಿಂತ ಮುಂಚೆ ಅದು ಚೆನ್ನಾಗಿ ನೀರು ವಸತಿ ಇದ್ದ ಹುಲ್ಲುಗಾವಲಾಗಿತ್ತು. ವಿವಿಧ ಬಗೆಯ ಪ್ರಾಣಿಸಂಕುಲ ಅಲ್ಲಿ ಮನೆ ಮಾಡಿದ್ದವು. ನೀಗ್ರೋ ಮತ್ತು ಮೆಡಿಟರೇನಿಯನ್ ಜನಾಂಗ ಇಬ್ಬರೂ ಅಲ್ಲಿ ಬೇಟೆಯಾಡುತ್ತಿದ್ದರು. ತರುವಾಯ ಆ ಪ್ರದೇಶ ಒಣಗಿ ಮರುಭೂಮಿ ವಿಸ್ತಾರವಾದಂತೆ, ಅಲ್ಲಿ ವಾಸಿಸುತ್ತಿದ್ದ ಪ್ರಾಣಿಗಳು ಹಾಗೂ ಜನರು ಸೂಡಾನ್ ಮೆಡಿಟರೇನಿಯನ್ ಕರಾವಳಿ ಪ್ರದೇಶ ಮತ್ತು ನೈಲ್ ಕಣಿವೆಗೆ ವಲಸೆ ಹೋದರು. ಈ ರೀತಿ ಕಪ್ಪು ಜನರು ಮೆಡಿಟರೇನಿಯನ್ ಜನಾಂಗದಿಂದ ಬೇರ್ಪಟ್ಟರು. ನೈಲ್ ಕಣಿವೆಯಲ್ಲಿ ನವಶಿಲಾಯುಗದ ಸಂಸ್ಕೃತಿ ಬಲುಬೇಗ ಪ್ರಗತಿ ಹೊಂದಿತು ಮತ್ತು ಕ್ರಿ.ಪೂ.೪೦೦೦ದ ಅಂತ್ಯದ ಹೊತ್ತಿಗೆ ಐಗುಪ್ತ ಸಂಸ್ಕೃತಿ ಒಡಮೂಡಿತು. ಸಹರಾದ ದಕ್ಷಿಣದ ಸುಡಾನ್‌ನಲ್ಲಿ ಪ್ರತ್ಯೇಕಗೊಂಡ ಕಪ್ಪು ಜನಾಂಗದವರ ಬೆಳವಣಿಗೆ ನಿಧಾನ ಗತಿಯಲ್ಲಿ ಆಯಿತು. ಹೀಗಿದ್ದರೂ, ಕ್ರಿ.ಪೂ.೯೦೦ರಷ್ಟು ಮುಂಚೆಯೇ ಉತ್ತರ ನೈಜೀರಿಯಾದಲ್ಲಿ ನೋಕ್ ಸಂಸ್ಕೃತಿಯೆಂದು ಕರೆಯುವ ಒಂದು ಕೃಷಿಕ ನಾಗರಿಕತೆ ಬೆಳೆದದ್ದು ತಿಳಿದುಬಂದಿದೆ. ಕ್ರಿ.ಪೂ.೧೮೦೦ರಲ್ಲಿ ಈಜಿಪ್ತಿನ ದಕ್ಷಿಣ ಭಾಗದಲ್ಲಿ ತರುವಾಯದಲ್ಲಿ ನುಬಿಯಾ ಎಂದು ಹೆಸರು ಪಡೆದ ಮತ್ತು ಅಲ್ಲಿನ ಚಿನ್ನಕ್ಕಾಗಿ ಈಜಿಪ್ಟರು ಬಹುಮಾನ್ಯ ಮಾಡುತ್ತಿದ್ದ ಒಂದು ಪ್ರದೇಶದಲ್ಲಿ ಮತ್ತೊಂದು ನಾಗರಿಕತೆ ಬೆಳೆಯಿತು. ಐಗುಪ್ತರು ಆಗಾಗ್ಗೆ ನುಬಿಯಾದ ಮೇಲೆ ದಾಳಿ ಮಾಡುತ್ತಿದ್ದರು ಮತ್ತು ೧೫೦೦ರಲ್ಲಿ ಅಂತಿಮವಾಗಿ ಅದನ್ನು ಗೆದ್ದು ತಮ್ಮ ಒಂದು ಪ್ರಾಂತ್ಯವನ್ನಾಗಿಸಿಸಿಕೊಂಡರು.

ಕುಶ್

ಕ್ರಿ.ಶ.೧೦೦೦ದ ಯಾವುದೋ ಒಂದು ಕಾಲಾವಧಿಯಲ್ಲಿ ಕುಶೈಟ್ಸ್ ಎಂಬ ಹೆಸರಿನ ನುಬಿಯನ್ ಜನಾಂಗದವರು ಐಗುಪ್ತರ ಆಳ್ವಿಕೆಯಿಂದ ಬಿಡಿಸಿಕೊಂಡು ಹೊರಬಂದು ತಮ್ಮದೇ ಆದ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿದರು. ಮುಂದೆ ಈ ಕುಶೈಟರು ಎಷ್ಟು ಪ್ರಬಲರಾದರೆಂದರೆ ಅವರು ಈಜಿಪ್ಟನ್ನೇ ಗೆಲ್ಲುವಂತಾದರು. ಒಂದು ಶತಮಾನದ ತರುವಾಯ ಅಸ್ತಿರಿಯನ್ನರು ಕುಶೈಟರನ್ನು ಉತ್ತರ ನುಬಿಯಾದಲ್ಲಿನ ಅವರ ಮಾತೃಭೂಮಿಗೆ ಹೊಡೆದಟ್ಟಿದರು. ತರುವಾಯ ಕುಶ್‌ರ ಆಡಳಿತ ಮೆರೋ ನಗರದ ಸುತ್ತಲಿನ ಮಧ್ಯ ನುಬಿಯಾದಲ್ಲಿ ಕೇಂದ್ರೀಕೃತವಾಯಿತು. ಮೂಲ ಕುಶೈಟರು ಕಕೇಶಿಯನ್ ಜನಾಂಗದವರು. ಆದರೆ ಮೇರೋ ಕಪ್ಪು ವರ್ಣದ ಜನರ ಪ್ರದೇಶವಾಗಿತ್ತು. ಕುಶೈಟರು ಈ ಜನಾಂಗದ ವರೊಂದಿಗೆ ವಿವಾಹ ಸಂಬಂಧ ಬೆಳೆಸಿದರು. ಕುಶ್ ದಕ್ಷಿಣ ಸಂತರಾದ ಅತ್ಯಂತ ಪ್ರಬಲ ರಾಜ್ಯಗಳಲ್ಲಿ ಒಂದಾಯಿತು. ಬಹುಶಃ ಅಸ್ತಿರಿಯನ್ನರಿಂದ ಕಬ್ಬಿಣದ ಕೆಲಸಗಾರಿಕೆಯನ್ನು ಕಲಿತಿದ್ದರಿಂದ ಸಹರಾ ಕೆಳಗಿನ ಆಫ್ರಿಕಾದಲ್ಲಿ ಕಬ್ಬಿಣದ ಪ್ರಾಯೋಗಿಕ ಬಳಕೆ ತಂದ ಮೊದಲಿಗರು ಕುಶೈಟರು ಎಂದು ನಂಬಲಾಗಿದೆ. ಹೀಗೆ ಈ ಕಪ್ಪುಬಣ್ಣದ ಜನರು ಶಿಲಾಯುಧಗಳ ಬಳಕೆಯಿಂದ ತಾಮ್ರ ಮತ್ತು ಕಂಚಿನ ಬಳಕೆಯ ಹಂತವನ್ನು ಹಾಯ್ದು ಹೋಗದೆ, ನೇರವಾಗಿ ಕಬ್ಬಿಣದ ಬಳಕೆಗೆ ತೊಡಗಿದರು. ಕ್ರಿ.ಶ.೧ನೆಯ ಶತಮಾನದ ಮಧ್ಯಭಾಗದಲ್ಲಿ ಈ ಮಿರೋಯಿಟಿಕ್ ನಾಗರಿಕತೆ ಇಳಿಮುಖಾಯಿತು. ಇಥಿಯೋಪಿಯನ್ ಉತ್ತರದ ನಾಡಿನ ಆಕ್ಸಂನ ಮೂಲದ ಒಂದು ಎದುರಾಳಿ ವಾಣಿಜ್ಯ ಸಾಮ್ರಾಜ್ಯ ಇದರ ಪ್ರಭೆಯನ್ನು ಮಸುಕುಗೊಳಿಸಿತು. ಆಕ್ಸಂ ಸಾಮ್ರಾಜ್ಯವು ಕುಶ್ ಅನ್ನು ೪ನೇ ಶತಮಾನದಲ್ಲಿ ಧೂಳಿಪಟ ಮಾಡಿ ಮೆರೋ ನಗರಗಳನ್ನು ಸುಟ್ಟು ಹಾಕಿತು ಮತ್ತು ಕುಶ್ ಆಳರಸರನ್ನು ಪಶ್ಚಿಮಕ್ಕೆ ಕೊರ್ಡೊಫಾನ್ ಮತ್ತು ದಾರ್ ಫುರ್ ಗೆ ಓಡಿಸಿತು. ಅಲ್ಲಿ ಅವರು ತಮ್ಮ ನಾಗರಿಕತೆಯ ಅಂಶಗಳನ್ನು ಪುನರ್ ಸೃಷ್ಟಿಮಾಡಿ ತರುವಾಯ ಜಾಡ್ ಸರೋವರದವರೆಗಿನ ಜನಜೀವನ ವಿಧಾನದ ಮೇಲೆ ಪ್ರಭಾವ ಬೀರಲು ಸಮರ್ಥರಾದರು. ಕುಶ್‌ರ ತರುವಾಯ ಅಷ್ಟೊಂದು ಪ್ರಗತಿ ಹೊಂದಿರದ ಮೂರು ಸಾಮ್ರಾಜ್ಯಗಳು ಅಂದರೆ ಉತ್ತರ ನುಬಿಯಾದ ನೋಬೇಟಿಯಾ, ಮಧ್ಯ ನುಬಿಯಾದ ಮಕೂರಿಯಾ ಮತ್ತು ದಕ್ಷಿಣ ನುಬಿಯಾದ ಆಲ್ವ ಸಾಮ್ರಾಜ್ಯಗಳು ಬಂದವು. ಆರನೇ ಶತಮಾನದಲ್ಲಿ ಕ್ರೈಸ್ತ ಮಿಷನರಿಗಳು ಈ ಸಾಮ್ರಾಜ್ಯ ಗಳನ್ನು ಕ್ರೈಸ್ತಧರ್ಮಕ್ಕೆ ಮತಾಂತರಗೊಳಿಸಿದರು. ೭ನೆಯ ಶತಮಾನದಲ್ಲಿ ಮಕೂರಿಯಾ ನೊಬೇಶಿಯಾವನ್ನು ವಿಲೀನಗೊಳಿಸಿಕೊಂಡಿತು. ಮಕೂನಿಯಾವನ್ನು ಅದರ ರಾಜಧಾನಿ ಹೆಸರಿನಿಂದ ಡೊಂಗೋಲಾ ಎಂದು ಕರೆಯಲಾಗುತ್ತಿತ್ತು.

೮ನೆಯ ಶತಮಾನದಲ್ಲಿ ಇಸ್ಲಾಂ ಧರ್ಮದ ಪ್ರವರ್ಧಮಾನದಿಂದಾಗಿ ಕ್ರೈಸ್ತ ರಾಜ್ಯಗಳ ಸುತ್ತ ವಿರೋಧಿ ಮುಸ್ಲಿಂ ಶಕ್ತಿಗಳು ಬೆಳೆದುಕೊಂಡವು. ಮಕೂನಿಯಾ ೧೪ನೆಯ ಶತಮಾನದ ವರೆಗೂ ತನ್ನ ಕ್ರೈಸ್ತತನವನ್ನು ಹೇಗೋ ಉಳಿಸಿಕೊಂಡು ಬಂದಿತು ಮತ್ತು ಆಲ್ವಾ ಹದಿನಾರನೇ ಶತಮಾನದವರೆಗೆ ಉಳಿದುಬಂದಿತು. ತರುವಾಯ ಅದನ್ನು ನಾಶಗೊಳಿಸಿ ಮುಸ್ಲಿಂ ಸೆನ್ನಾರ್ ಸಾಮ್ರಾಜ್ಯ ಅಸ್ತಿತ್ವಕ್ಕೆ ಬಂತು. ಅಷ್ಟರಲ್ಲಿ ಆಕ್ಸಂ ೪ನೇ ಶತಮಾನದಲ್ಲಿ ಕ್ರೈಸ್ತಧರ್ಮವನ್ನು ಅಳವಡಿಸಿಕೊಂಡಿತ್ತು. ೮ನೇ ಶತಮಾನದ ತರುವಾಯ ಮುಸ್ಲಿಂರ ಒತ್ತಡ ತಾಳಲಾರದೆ ಆಕ್ಸಂಮೈಟರು ಇಥಿಯೋಪಿಯನ್ ಎತ್ತರದ ನಾಡುಗಳಿಗೆ ಮತ್ತೆ ವಾಪಸಾಗಬೇಕಾಯಿತು. ಅಲ್ಲಿಂದ ಇಥಿಯೋಪಿಯನ್ ಸಾಮ್ರಾಜ್ಯ ಒಡಮೂಡಿ ೧೩ನೆಯ ಶತಮಾನದ ಹೊತ್ತಿಗೆ ವಿಸ್ತಾರವಾಯಿತು. ಮಧ್ಯಯುಗದ ಉತ್ತರ ಭಾಗದಲ್ಲಿ ಇಥಿಯೋಪಿ ಯಾದ ಜೊತೆ ಯುರೋಪಿಯನ್ನರ ಸಂಸರ್ಗ ಬೆಳೆಯಿತು. ಪವಿತ್ರಭೂಮಿಗೆ ಬಂದ ಇಥಿಯೋಪಿಯಾದ ಯಾಂತ್ರಿಕರಿಂದ ಮುಸ್ಲಿಂ ಮಧ್ಯೆ ಉಳಿದಿರುವ ಏಕೈಕ ಕ್ರೈಸ್ತ ರಾಜ್ಯ ಇಥಿಯೋಪಿಯಾ ಎಂಬುದನ್ನು ಅರಿತು ಡೊಮಿನಿಕನ್ನರು ಇಥಿಯೋಪಿಯಾಕ್ಕೆ ಪ್ರತಿನಿಧಿಗಳನ್ನು ೧೪ನೆಯ ಶತಮಾನದ ಆರಂಭದಲ್ಲಿ ಕಳುಹಿಸಿಕೊಟ್ಟರು. ಇದರಿಂದಾಗಿ ೧೫ ಮತ್ತು ೧೬ನೆಯ ಶತಮಾನದಲ್ಲಿ ಪೋರ್ಚುಗಲ್‌ನ ಜೊತೆಯಲ್ಲಿ ಬಲವಾದ ಮಿಲಿಟರಿ ಮತ್ತು ರಾಯಭಾರಿ ಸಂಬಂಧ ಏರ್ಪಟ್ಟಿತು.