ಆಫ್ರಿಕಾ ಖಂಡದಲ್ಲಿ ವಿವಿಧ ಬಗೆಯ ಜನರು, ಭಾಷೆಗಳು ಮತ್ತು ಸಂಸ್ಕೃತಿಗಳು ಕಾಣಸಿಗುತ್ತವೆ. ಹೊಮಿನಿಡೆಯ ಅಂದರೆ ಮಾನವ ಕಾಲದ ತೊಟ್ಟಿಲು ಆಫ್ರಿಕಾ ಎಂಬುದು ಈಗ ಎಲ್ಲೆಡೆ ಮಾನ್ಯವಾಗಿದೆ. ಅಂಗರಚನಾ ಶಾಸ್ತ್ರದ ಪ್ರಕಾರ ಆಧುನಿಕ ಆಫ್ರಿಕಾದ ಜನರು ೧೦೦ ಸಾವಿರ ವರ್ಷಗಳ ಹಿಂದೆ ಸಹರಾ ಕೆಳಗಿನ ಆಫ್ರಿಕಾದಲ್ಲಿ ಜನಿಸಿದರು ಎಂದು ನಂಬಲಾಗಿದೆ. ಉತ್ತರ ಆಫ್ರಿಕಾವು ಈಗ ದಕ್ಷಿಣದಲ್ಲಿ ಐರೋಪ್ಯ ಭೌಗೋಳಿಕ ಜನಾಂಗಗಳಿಂದ ಸಮೃದ್ಧವಾಗಿದೆ. ಅವರಲ್ಲಿ ಬಹಳಷ್ಟು ಮಂದಿ ಸಹಾರ ಕೆಳಗಿನ ಜನರು. ಈ ಭೌಗೋಳಿಕ ಜನಾಂಗಗಳನ್ನು ಅವರ ದೈಹಿಕ ಲಕ್ಷಣಗಳ ಆಧಾರದ ಮೇಲೆ ಸ್ಥೂಲವಾಗಿ ವಿಂಗಡಿಸಬಹುದು. ಆದರೆ ಅವರುಗಳ ನಡುವಿನ ನಿಜವಾದ ವ್ಯತ್ಯಾಸಗಳು ಬಹುಪಾಲು ಜೀವರಸಾಯನ ಶಾಸ್ತ್ರದ್ದು (ಉದಾಹರಣೆಗೆ ರಕ್ತ ಗುಂಪುಗಳ ಭಿನ್ನತೆ).

ಉತ್ತರದ ತೀರದುದ್ದಕ್ಕೂ ಮತ್ತು ಈಶಾನ್ಯ ಭಾಗದಲ್ಲಿ ಅಟ್ಲಾಸ್ ಗಿರಿಶ್ರೇಣಿಗಳ ಬರ್ಬರದಿಂದ ಹಿಡಿದು ಇಥಿಯೋಫಿಯಾದ ಅಮಹರ್‌ಗಳವರೆಗೆ ಕಾಕಸಾಯಿಡ್ ಜನಾಂಗ ಗಳನ್ನು ಕಾಣುತ್ತೇವೆ. ಇವರು ಚರ್ಮದ ಬಣ್ಣದಲ್ಲಿ ವೈವಿಧ್ಯವನ್ನು ಹೊಂದಿದ್ದರೂ, ಮೆಟ್ಟಲು ಕೂದಲು ಹಾಗೂ ನೀಗ್ರೋ ಸ್ವರೂಪದ್ದಲ್ಲದ ಮುಖಲಕ್ಷಣಗಳನ್ನು ಹೊಂದಿರು ತ್ತಾರೆ. ಇನ್ನೊಂದು ತುತ್ತತುದಿಯನ್ನು ನೋಡಿದರೆ, ಮೊದಲು ಎಲ್ಲೆಡೆ ಹರಡಿಕೊಂಡಿದ್ದು ಈಗ ನೈರುತ್ಯ ಮರುಭೂಮಿ ಪ್ರದೇಶಕ್ಕೆ ಸೀಮಿತರಾದ ಬುಷ್‌ಮನ್ ಹಾಗು ಹೊಡೆನ್ ಟೌಡ್‌ಗಳನ್ನು ಕಾಣುತ್ತೆವೆ. ಇವರು ಕುಳ್ಳಗಿದ್ದು ಹಳದಿ ಕಂದು ಮೈಬಣ್ಣ ಹಾಗೂ ವಿಶಿಷ್ಟ ಬಗೆಯ ಕೂದಲು ಹೊಂದಿರುತ್ತಾರೆ. ಈ ಎರಡೂ ತೀರ ವಿಭಿನ್ನ ಬುಡಕಟ್ಟುಗಳ ನಡುವೆ ಅಲ್ಲಲ್ಲಿ ವಿರಳವಾಗಿ ಹರಡಿಕೊಂಡಂತೆ ವರ್ಷಾರಣ್ಯಗಳಲ್ಲಿ ತುಂಬ ಜನವಿರುವ ಪ್ರದೇಶ ಗಳಲ್ಲಿ ಬೇರೆಯದೇ ಆದ ಪಿಗ್ಮಿ ಬುಡಕಟ್ಟಿನ ಜನರಿದ್ದಾರೆ. ಸಹರಾ ಕೆಳಗಿನ ಆಫ್ರಿಕಾದಲ್ಲಿ ಮಿಕ್ಕೆಲ್ಲರಿಗಿಂತ ಪ್ರಮುಖವಾಗಿ ನೀಗ್ರೋ ಬುಡಕಟ್ಟಿನ ಜನರಿದ್ದಾರೆ. ಮೈಬಣ್ಣ ಹಾಗೂ ಎತ್ತರದಲ್ಲಿ ಅವರು ಗಣನೀಯ ಪ್ರಮಾಣದಲ್ಲಿ ಭಿನ್ನತೆಯನ್ನು ತೋರುತ್ತಾರೆ. ಒಟ್ಟಾರೆ ಪೂರ್ವ ಆಫ್ರಿಕಾ ಮತ್ತು ನೈಲ್ ನದಿ ಮೇಲಿನ ಪ್ರದೇಶದಲ್ಲಿ ಎತ್ತರವಾದ ನಸುಗಪ್ಪು ಬಣ್ಣದ ಜನಾಂಗ ಕಾಣುತ್ತಾರೆ. ಈ ಖಂಡಕ್ಕೆ ಹೋಲಿಕೆಯಲ್ಲಿ ಇತ್ತೀಚಿಗೆ ವಲಸೆ ಬಂದ ಜನಾಂಗವಾಗಿ ಮಡಗಾಸ್ಕರ್‌ನಲ್ಲಿ ಮಂಗೋರಿಯನ್ ಬುಡಕಟ್ಟಿನ ಜನ ಕಾಣುತ್ತಾರೆ.

ನೆಲಸು ವಿನ್ಯಾಸ

ಸಹರಾದ ಉತ್ತರಕ್ಕಿರುವ ಆಫ್ರಿಕಾದಲ್ಲಿ ಆಫ್ರೊ ಏಷಿಯನ್ ಗುಂಪಿನ ಭಾಷೆಗಳನ್ನಾಡುವ ಜನರು ಪ್ರಮುಖವಾಗಿ ನೆಲಸಿದ್ದಾರೆ. ಮೊರಾಕ್ಕೊ, ಆಲ್ಜೀರಿಯಾ ಮತ್ತು ಟುನಿಷಿಯಾದ ಬುಡಕಟ್ಟುಗಳು ಇವರಲ್ಲಿ ಪ್ರಮುಖರು. ಇವರಲ್ಲಿ ಅನೇಕರು ನಸುಗಪ್ಪು ಮೈಬಣ್ಣ, ಕಪ್ಪು ತಲೆಗೂದಲು, ತೆಳು ನೀಳನಾಸಿಕ ಮತ್ತು ಮೇಲೆತ್ತಿಕೊಂಡಿರುವ ತುಟಿಗಳನ್ನು ಹೊಂದಿರುತ್ತಾರೆ. ಅನೇಕ ಪ್ರದೇಶಗಳಲ್ಲಿ ಸಾಂಸ್ಕೃತಿಕ ಸಂಪರ್ಕದ ಕಾರಣದಿಂದ ಮತ್ತು ಅಂತರ ವಿವಾಹ ಗಳಿಂದ ಬುಡಕಟ್ಟುಗಳು, ಅರೇಬಿಯಾದಿಂದ ಉತ್ತರ ಆಫ್ರಿಕಾಕ್ಕೆ ಅನೇಕ ತಂಡಗಳಲ್ಲಿ ವಲಸೆ ಬಂದ ಸೆಮೆಟಿಕ್ ಭಾಷೆ ಮಾತನಾಡುವ ಅರಬ್ಬರೊಂದಿಗೆ ಬಹುಪಾಲು ಕಲೆತು ಹೋಗಿದ್ದಾರೆ. ಪರಿಣಾಮವಾಗಿ ಮಘಾರಿಬ್ ಸಂಸ್ಕೃತಿ ಹುಟ್ಟಿತು. ಸಹರಾದಲ್ಲಿ ಶುವಾ ಎಂಬಂತಹ ಅರಬ್ ಜನರು ತಾವುರೆಗ್‌ನಂತಹ ಬರ್ಬರರ ಜೊತೆ ಜೊತೆಯಲ್ಲೇ ವಾಸಿಸುತ್ತಿದ್ದಾರೆ. ಪಶ್ಚಿಮ ಆಫ್ರಿಕಾದಲ್ಲಿ ಪಶ್ಚಿಮ ಮತ್ತು ಮಧ್ಯಸೂಡಾನ್ ಎಂದು ಕರೆಯಲ್ಪಡುವ ಮರುಭೂಮಿಯ ದಕ್ಷಿಣದ ಭಾಗದಲ್ಲಿ ಗೋವಳ ಫುಲಾನಿಗಳಿರುವುದು ಕಪ್ಪು ಜನಾಂಗದೊಂದಿಗೆ ನಸುಗಪ್ಪು ಬಣ್ಣದ ಜನರು ಸಮ್ಮಿಲನಗೊಂಡಿರುವುದಕ್ಕೆ ಸಾಕ್ಷಿ. ಪೂರ್ವ ಆಫ್ರಿಕಾದ ತೀರದಲ್ಲಿ ಬಂಟು ಮಾತನಾಡುವ ಜನರು ಅರಬ್ ನೆಲಸಿಗರೊಂದಿಗೆ ಸಂಪರ್ಕ ಬೆಳೆಸಿದರು. ಅಂತರ ವಿವಾಹದ ಕಾರಣದಿಂದಾಗಿ ಒಂದು ವಿಶಿಷ್ಟ ಸ್ವಾಹಿಲಿ ಸಂಸ್ಕೃತಿ ಬೆಳೆಯಿತು. ಇಥಿಯೋಫಿಯಾ ಮತ್ತು ಸೋಮಾಲಿಯಾದಲ್ಲಿ ಕುಶಡಿಕ್ ಕವಲಿನ ಮತ್ತು ಹೆಮೆಡಿಕ್ ಭಾಷೆ ಮಾತನಾಡುವ ಜನರು ವಾಸಿಸುತ್ತಿದ್ದರು. ಕ್ರಿ.ಪೂ.೭ನೆಯ ಮತ್ತು ೮ನೇ ಶತಮಾನಗಳಲ್ಲಿ ಸೆಮೆಟಿಕ್ ಭಾಷೆಗಳನ್ನು ಮಾತನಾಡುವ ಜನರು ತಂಡತಂಡಗಳಲ್ಲಿ ವಲಸೆ ಬಂದ ಕಾರಣ ಪೂರ್ವದ ಆಕ್ಸುಮೈಟ್ ಸಂಸ್ಕೃತಿ ಒಡಮೂಡಿತು. ಇನ್ನು ಈ ಖಂಡದ ಉಳಿದ ಭಾಗಗಳಲ್ಲಿ ಪ್ರಧಾನವಾಗಿ ಕಪ್ಪು ಬುಡಕಟ್ಟಿನ ಕಂದುವರ್ಣದಿಂದ ಕಡುಗಂದುವರ್ಣದ ಮತ್ತು ಮುಖ್ಯವಾಗಿ ಗುಂಗರುಗೂದಲು, ದಪ್ಪ ಮೂಗು ಹಾಗೂ ದಪ್ಪ ಮೇಲೆತ್ತಿದ ತುಟಿಗಳುಳ್ಳ ಜನರು ವಾಸಿಸುತ್ತಾರೆ. ಅವರಲ್ಲಿ ನಾಲ್ಕು ಮುಖ್ಯ ಪಂಗಡಗಳನ್ನು ಗುರುತಿಸ ಬಹುದು. ಸಹರಾ ಮರುಭೂಮಿಯ ದಕ್ಷಿಣಕ್ಕೆ ಈ ಖಂಡದ ಉದ್ದಕ್ಕೂ ಹರಡಿಕೊಂಡ ಪ್ರದೇಶದ ಸುಡಾನಿಕ್ ಜನರು, ಪಶ್ಚಿಮ ಆಫ್ರಿಕಾದ ಅರಣ್ಯಗಳ ಗಿರಿ ತೀರದ ಜನರು, ಪೂರ್ವ ಆಫ್ರಿಕಾದ ನೈಲಾಡಿಕ್ ಜನರು ಮತ್ತು ಮಧ್ಯ ಹಾಗೂ ದಕ್ಷಿಣ ಆಫ್ರಿಕಾದ ಬಂಟು ಜನರು. ಮಾಲಿಂಕೆ, ಹೌಸಶಾಂಗೈ ಮತ್ತು ಬೋರ್ನುನಂತಹ ಅನೇಕ ಸುಡಾನಿಕ್ ಜನರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುತ್ತಾರೆ. ಕ್ರೈಸ್ತಮತಕ್ಕೆ ಪರಿವರ್ತನೆ ಸಹರಾ ಕೆಳಗಿನ ಆಫ್ರಿಕಾದ ಕರಾವಳಿ ಪ್ರದೇಶಗಳಲ್ಲಿ ಗನನೀಯವಾಗಿ ಕಂಡುಬರುತ್ತದೆ.

ಬಂಟು ಮಾತನಾಡುವ ಜನರು ಭೂಮಧ್ಯರೇಖೆಯ ದಕ್ಷಿಣದ ಆಸುಪಾಸಿನಲ್ಲಿ ವಾಸಿಸುತ್ತಿದ್ದಾರೆ. ಜಾಂಬೆಜಿಯಲೋಜ ಜನರು, ನಮೀಬಿಯಾದ ನೈರುತ್ಯ ಆಫ್ರಿಕಾದ ಹೆರೇರೋ, ದಕ್ಷಿಣ ಆಫ್ರಿಕಾದ ಜುಲು ಜನರು ಬಂಟು ಮಾತನಾಡುವ ಸಮೂಹದವರು. ಕಾಂಗೋ ವರ್ಷಾರಣ್ಯಗಳ ದಕ್ಷಿಣದ ಅರಣ್ಯ ಪ್ರದೇಶಗಳು ಬಂಟು ಜನರ ಮೂಲಸ್ಥಾನ. ಈ ಪ್ರದೇಶದಿಂದ ಬಂಟು ಮತನಾಡುವ ಜನರು ತಮ್ಮೊಂದಿಗೆ ಕಬ್ಬಿಣಯುಗದ ಸಂಸ್ಕೃತಿಯನ್ನು ಕೊಂಡೊಯ್ಯುತ್ತ ಎಲ್ಲ ದಿಶೆಗಳಿಗೂ ಹರಡಿಕೊಂಡರು. ಬಂಟು ಮಾತ ನಾಡುವ ಜನರು ಆಕ್ರಮಿಸಿಕೊಂಡ ಅನೇಕ ಪ್ರದೇಶಗಳಲ್ಲಿ ಬಂಟು ಪೂರ್ವದ ಸಂಸ್ಕೃತಿಯ ಅವಶೇಷಗಳು ದೊರೆಯುತ್ತವೆ.

ಇವರಲ್ಲಿ ಪ್ರಮುಖರಾದವರೆಂದರೆ ವರ್ಷಾರಣ್ಯಗಳ ಪಿಗ್ಮಿ ಜನಾಂಗ ಮತ್ತು ಕಲಹರಿಯ (ಬುಷ್ ಮನ್) ಸಾನ್ ಜನಾಂಗ, ಇವರಿಬ್ಬರೂ ಬೇಟೆ ಹಾಗೂ ಹಣ್ಣು ಹಂಪಲು ಸಂಗ್ರಹಿಸುವವರು ಹಾಗೂ ನಮೀಬಿಯಾ (ನೈರುತ್ಯ ಆಫ್ರಿಕಾದ) ಮತ್ತು ದಕ್ಷಿಣ ಆಫ್ರಿಕಾದ ಖೋಯಿಖೋಯಿನ್ (ಹಾಡೆನ್ ಟಾಡ್) ಜನರು. ಎಲ್ಲ ಕಡೆಯೂ ಪ್ರಾಚೀನ ಸಮಾಜಗಳ ಮೇಲೆ ದಬ್ಬಾಳಿಕೆ ತೋರಿ ಬಂಟು ಕೃಷಿಕರು ವಿಸ್ತಾರವಾಗಿ ಹರಡಿಕೊಂಡರು. ಈ ಪ್ರಾಚೀನ ಸಮಾಜಗಳ ಜನರನ್ನು ತಮ್ಮಲ್ಲಿ ವಿಲೀನ ಮಾಡಿಕೊಂಡರು ಇಲ್ಲವೇ ಅವರನ್ನು ತೀರ ಶುಷ್ಕ ಅಥವಾ ಬಲು ಆರ್ದ್ರವಾದ ಪ್ರದೇಶಗಳಿಗೆ ಅಟ್ಟಿದರು. ಈ ಖಂಡದ ದಕ್ಷಿಣ ತುತ್ತ ತುದಿಯ ಪ್ರದೇಶಗಳಲ್ಲಿ ಡಚ್ ಮತ್ತು ಇಂಗ್ಲಿಷ್ ಮೂಲದ ಜನರು ಪ್ರಧಾನವಾಗಿ ಇರುವುದನ್ನು ಕಾಣುತ್ತೇವೆ. ಇದರ ಜೊತೆಗೆ ಭಾರತೀಯ ಮೂಲದ ಸಣ್ಣ ಪುಟ್ಟ ಜನಾಂಗಗಳು, ಖೋಯಿಖೋಯಿನ್, ಐರೋಪ್ಯ ಮತ್ತು ಏಷ್ಯಾದ ಬುಡಕಟ್ಟುಗಳ ಸಮ್ಮಿಶ್ರವಾದ ‘ಕೇಫ್ ಕಲರ್ಡ್’ ಎಂದು ಕರೆಯಲಾಗುವ ಜನರಿದ್ದಾರೆ. ಡಚ್ ಅಥವಾ ಬೋಯರ್ ವಲಸೆ ೧೭ನೆಯ ಶತಮಾನದಲ್ಲಿ ಪ್ರಾರಂಭಗೊಂಡಿತು. ೧೯ನೆಯ ಶತಮಾನದಲ್ಲಿ ಬ್ರಿಟಿಷರು ನಟಾಲ್, ಜಾಂಬಿಯ ಮತ್ತು ಜಿಂಬಾಬ್ವೆಗಳಲ್ಲಿ ನೆಲೆಸಿದರು. ವಲಸೆ ಬಂದ ಜನರೇ ಬಹುಸಂಖ್ಯಾತರಾಗಿ ಇದ್ದ ಕಾರಣ, ದಕ್ಷಿಣ ಆಫ್ರಿಕಾ ನೈರುತ್ಯ ಆಫ್ರಿಕಾ, ಜಿಂಬಾಬ್ವೆ, ಅಂಗೋಲ ಮತ್ತು ಮೊಜಾಂಬಿಕ್‌ಗಳಲ್ಲಿ ಆಫ್ರಿಕಾ ಜನರು ಸ್ವಯಮಾಡಳಿತವನ್ನು ಸಾಧಿಸುವುದು ನಿಧಾನ ವಾಗುವುದಕ್ಕೆ ಕಾರಣವಾಗಿದೆ. ಇದರಿಂದಾಗಿ ಜನಾಂಗಗಳ ನಡುವೆ ಕಹಿ ಮನೋಭಾವ ಉಂಟಾಗಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಉತ್ತರ ಆಫ್ರಿಕಾದಲ್ಲಿ ಫ್ರಾನ್ಸ್, ಇಟಲಿ ಮತ್ತು ಸ್ಪೈನ್ ದೇಶಗಳಿಂದ ಬಹುಸಂಖ್ಯಾತರಾಗಿ ಐರೋಪ್ಯರು ನೆಲಸಿದರೂ ಅರಬ್ ರಾಷ್ಟ್ರೀಯತಾ ಭಾವನೆ ಬೆಳೆಯಿತು. ಮೊರಾಕ್ಕೊ, ಟ್ಯುನಿಷಿಯಾ ಹಾಗೂ ಅಲ್ಜೀರಿಯಾಗಳು ಸ್ವತಂತ್ರ ನಾಡಾದವು. ಸ್ಥಳೀಯ ಜನರೇ ರಾಜಕೀಯವಾಗಿ ಬಲಿಷ್ಠರಾದ ಕಾರಣ ವಸಾಹತು ಮಾಡಿಕೊಂಡಿದ್ದ ವಿದೇಶಿಯರು ತಮ್ಮ ತಾಯ್ನಡುಗಳಿಗೆ ಹಿಂದಿರುಗುವಂತಾಯಿತು.

ಜನಾಂಗಗಳು ಮತ್ತು ಭಾಷೆ

ಆಫ್ರಿಕಾದ ಬುಡಕಟ್ಟುಗಳು ಮತ್ತು ಜನಾಂಗೀಯ ರಚನೆಯು ವೈವಿಧ್ಯ ಮತ್ತು ಸಂಕೀರ್ಣವಾಗಿದೆ. ಈ ಜನಾಂಗ ರಚನೆ ಪ್ರಮುಖವಾಗಿ ನಿಲುವು, ಮೈಬಣ್ಣ, ತಲೆಗೂದಲ ಸ್ವರೂಪ ಮುಂತಾದ ಬಹುರೂಪರೇಷೆಗಳನ್ನು ಆಧರಿಸಿದೆಯೇ ಹೊರತು ಆನುವಂಶಿಕ ಅಥವಾ ರಕ್ತದ ಗುಂಪುಗಳ ಲಕ್ಷಣಗಳನ್ನು ಆಧರಿಸಿರುವುದಿಲ್ಲ. ಇವರನ್ನು ಐದು ಬಗೆಯಾಗಿ ವಿಂಗಡಿಸಬಹುದಾಗಿದೆ.

. ಬುಷ್ ಮನಾಯಿಡ್ ಜನರು: ಇವರು ಪೂರ್ವ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಬಹಳ ಭಾಗಗಳಲ್ಲಿ ಹರಡಿಕೊಂಡಿದ್ದರು. ಇವರು ಕುಳ್ಳಗೆ ಮತ್ತು ಹಳದಿ ಕಂದು ವರ್ಣದವರಾಗಿರುತ್ತಾರೆ ಹಾಗೂ ಅವರ ತಲೆಗೂದಲು ಒಂದು ವಿಶಿಷ್ಟ ಮೆಣಸು ಕಾಳಿನ ವರ್ಣದ್ದಾಗಿರುತ್ತದೆ. ಈಗ ನೈರುತ್ಯ ಆಫ್ರಿಕಾದ ಸಾನ್ ಮತ್ತು ಖೋಯಿಖೋಯಿನ್‌ಗಳು ಮತ್ತು ಟಾಂಜೇನಿಯಾದ ತೀರ ಜನವಿದೂರ ಪ್ರದೇಶಗಳ ಬುಷ್‌ಮನಾಯ್ಡ ಜನರು ಈಗ ಇವರ ಪ್ರತಿನಿಧಿಗಳು ಎನ್ನಬಹುದು.

. ಪಿನ್ಮಾಯ್ಡಾ ಜನರು: ಇವರೂ ಕುಳ್ಳು ಹಾಗೂ ಕಂದು ಮೈಬಣ್ಣದವರು.

. ನಿಗ್ರಾಯ್ಡಾ ಜನರು: ಈ ಖಂಡದಲ್ಲಿ ಬಹಳವಾಗಿ ಹರಡಿಕೊಂಡಿರುವವರು ಈ ಜನರೇ. ಇವರ ಮೈಬಣ್ಣ ಪಶ್ಚಿಮ ಆಫ್ರಿಕಾದ ಕಡುಗಪ್ಪಿನಿಂದ ಹಿಡಿದು ಪೂರ್ವ ಮತ್ತು ದಕ್ಷಿಣ ಆಫ್ರಿಕಾದಲ್ಲಿನ ಕಂದು ಬಣ್ಣದವರೆಗೆ ವೈವಿಧ್ಯಪೂರ್ಣವಾಗಿದೆ. ಎತ್ತರದಲ್ಲಿ ಪಶ್ಚಿಮದ ಕುಳ್ಳ ಜನರಿಂದ ಹಿಡಿದು ದಕ್ಷಿಣ ಸೂಡಾನ್‌ನ ಅತಿ ಎತ್ತರ ಹಾಗೂ ತೆಳುಕಾಯದ ನೈಲೋಡ್‌ಗಳವರೆಗೆ ವೈವಿಧ್ಯವಿದೆ.

. ಉತ್ತರ ಮತ್ತು ಶಾನ್ಯ ಆಫ್ರಿಕಾದ ಕಾಕಸಾಯಿಡ್‌ಗಳು: ಇವರು ಆಫ್ರಿಕೇತರ ಮೆಡಿಟರೇನಿಯನ್ ಕಾಕಸಾಯಿಡ್‌ಳಿಗೆ ಸಂಬಂಧಿಕರಾಗಿರುತ್ತಾರೆ. ಅವರ ಮೈಬಣ್ಣ ಉತ್ತರ ಆಫ್ರಿಕಾದ ನಸು ಕಂದುಬಣ್ಣದಿಂದ ಹಿಡಿದು ಸೋಮಾಲಿಯಾದ ಕಡುಗಪ್ಪು ಬಣ್ಣದವರೆಗೆ ಮೈವಿಧ್ಯಮಯವಾಗಿದೆ. ಅವರ ಕೂದಲು ಸಾಮಾನ್ಯವಾಗಿ ಮೆಟ್ಟಲು ಗೂದಲು.

. ಮಂಗೋರಿಯನ್ ಬುಡಕಟ್ಟು ಜನಾಂಗ: ಇವರು ಮಡಗಾಸ್ಕರ್‌ನಲ್ಲಿ ಕಾಣಸಿಗುತ್ತಾರೆ. ಈ ಖಂಡಕ್ಕೆ ಇವರು ಇತ್ತೀಚೆಗೆ ವಲಸೆ ಬಂದವರು.

ಆಫ್ರಿಕಾದ ದೇಶೀಭಾಷೆಗಳನ್ನು ಸ್ಥೂಲವಾಗಿ, ಆಫ್ರಿಕಾ ನೈಜರ್, ಕಾರ್ಡೊಫನೈಯ, ನೈಲ್, ಸಹರಾ ಮತ್ತು ಸಹರಾದ ದಕ್ಷಿಣಕ್ಕೆ ಖೋಯಿಯನ್ ಕುಟುಂಬಗಳ ಹೆಮಿಟೋ-ಸೆಮಿಟಿಕ್ ಗುಂಪು ಮತ್ತು ಆಸ್ಟ್ರೋನೇಷಿಯನ್ ಎಂದು ವಿಂಗಡಿಸಬಹುದು. ಆದರೆ ಈ ವರ್ಗೀಕರಣ ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಒಟ್ಟಾರೆ ಸಹರಾ ಹಾಗೂ ಸೂಡಾನ್‌ನಲ್ಲಿ ಅರಾಬಿಕ್ ಭಾಷೆ ಅಧಿಕೃತ ಹಾಗೂ ಅನಧಿಕೃತ ಭಾಷೆ. ಹಾಗೆಯೇ ಇತರ ಕೆಲವು ರಾಜ್ಯಗಳಲ್ಲಿ ಅದು ಧಾರ್ಮಿಕ ಭಾಷೆ. ಸಹರಾದಿಂದ ಜಾಂಬೆಸಿ ನದಿಗಳ ನಡುವಿನ ರಾಜ್ಯಗಳಲ್ಲಿ ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಫ್ರೆಂಚ್ ಪಶ್ಚಿಮ ಆಫ್ರಿಕಾ-ಫ್ರೆಂಚ್ ಈಕ್ವೆಟೋರಿಯಲ್ ಆಫ್ರಿಕಾ ಮತ್ತು ಮಡ್ಗಾಸ್ಕರ್(ಮಾಲಗಾಸ್ಸೆ ಕೂಡ ಇಲ್ಲಿ ಅಧಿಕೃತ ಭಾಷೆ) ಜೈರ್‌ಗಳಲ್ಲಿ ಅಧಿಕೃತ ಭಾಷೆಯಾಗಿದೆ. ಪಶ್ಚಿಮ, ಮಧ್ಯ ಮತ್ತು ಪೂರ್ವ ಆಫ್ರಿಕಗಳಲ್ಲಿ ಇಂಗ್ಲಿಷ್ ಅಧಿಕೃತ ಭಾಷೆ. ಈ ಹಿಂದೆ ಪೋರ್ಚುಗಲ್‌ನ ಅಡಿಯಲ್ಲಿ ಇದ್ದ ದೇಶಗಳ ಪೋರ್ಚುಗೀಸ್ ಭಾಷೆ ಅಧಿಕೃತ ಅಥವಾ ಅನ್ಯಥಾ ಆಡುಭಾಷೆಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಆಫ್ರಿಕನ್ ಹಾಗು ಇಂಗ್ಲಿಷ್ ಭಾಷೆ ಎರಡೂ ಅಧಿಕೃತ ಭಾಷೆಗಳು. ಇಥಿಯೋಫಿಯಾದಲ್ಲಿ ಅಮಹಾನಿಕ್ ಅಧಿಕೃತ ಭಾಷೆ. ಕೆಲವು ಆಫ್ರಿಕನ್ ಭಾಷೆಗಳು ಅವುಗಳ ತಾಯ್ನಡಿನಿಂದ ಹೊರಗೆ ಸಂಪರ್ಕ ಭಾಷೆಯಾಗಿ ಚಾಲ್ತಿಗೆ ಬಂದಿದೆ. ಇವು  ಒಂದು ವಿಶಾಲ ಪ್ರದೇಶದಲ್ಲಿ ವ್ಯಾಪಾರ ಮತ್ತಿತರ ಸಂಪರ್ಕಕ್ಕೆ ಉಪಯುಕ್ತವಾಗಿ ಕಂಡುಬಂದ ಭಾಷೆಗಳು. ಇವುಗಳಲ್ಲಿ ಸ್ವಾಹಿಲಿ ಭಾಷೆಯೂ ಒಂದು. ಇದು ಒಂದು ಉಪಕುಟುಂಬದ ಕಾಂಗೋ ಕೊರಡೋಶಿಯನ್ ಭಾಷೆ. ಇದು ಕಾಲಾಂತರದಲ್ಲಿ ಅರಾಬಿಕ್ ನಿಂದ ಅನೇಕ ಶಬ್ದಾವಳಿಯನ್ನು ತನ್ನಲ್ಲಿ ಸೇರಿಸಿಕೊಂಡಿತು. ಜಿಂಜಿಬಾರ್ ಮತ್ತು ಅದರ ಅಕ್ಕಪಕ್ಕದ ಕರಾವಳಿ ಪ್ರದೇಶಕ್ಕೆ ಅರಬ್ ವ್ಯಾಪಾರದ ಕಾರಣದಿಂದ ಈ ರೀತಿ ಅರಾಬಿಕ್ ಶಬ್ದಾವಳಿ ಸೇರುವುದು ಸಾಧ್ಯವಾಯಿತು. ಇತರ ಆಫ್ರಿಕನ್ನರೂ ವ್ಯಾಪಾರ ವಾಣಿಜ್ಯದಲ್ಲಿ ಇದರ ಉಪಯುಕ್ತತೆ ಗುರುತಿಸಿದರು. ಹೀಗಾಗಿ ಇಂದು ಕೀನ್ಯಾ, ಟಾಂಜೇನಿಯಾ ಉಗಾಂಡಗಳಲ್ಲಿರುವ ಐರೋಪ್ಯ ಮತ್ತು ಅಮೇರಿಕನ್ ನಿವಾಸಿಗಳೂ ಸೇರಿದಂತೆ ಅಲ್ಲಿನ ಜನರು ಸ್ವಾಹಿಲಿಯ ಒಂದಲ್ಲೊಂದು ಉಪಭಾಷೆಯನ್ನು ಮಾತನಾಡುತ್ತಾರೆ. ಆಫ್ರಿಕಾದ ಉಳಿದೆಡೆ ಬೆಂಬ(ಮಧ್ಯ ಆಫ್ರಿಕಾದ ಬಂಟುಭಾಷೆ), ಲಿಂಗಲಾ ಮತ್ತು ಕೊಂಗ (ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಬಂಟುಭಾಷೆ), ಹೌಸ (ನೈಜೀರಿಯಾದಲ್ಲಿ ಮಾತನಾಡುವ ಆಫ್ರೊಏಷಿಯಾಟಿಕ್ ಕುಟುಂಬದ ಜಾಡ್‌ನ ಉಪಕುಟುಂಬದ ಒಂದು ಸದಸ್ಯ ಭಾಷೆ), ಮಂಡಿಂಗೋ (ಗಿನಿಯಲ್ಲಿ ಮಾತನಾಡುವ ಕಾಂಗೋ ಕೊರಡೋಫೇರಿಯನ್ ಉಪಕುಟುಂಬದ ಒಂದು ಸದಸ್ಯಭಾಷೆ) ಮತ್ತು ಫುಲಾನಿಯಾದಂತಹ ಭಾಷೆಗಳು ಅವರವರ ಪ್ರದೇಶಗಳ ಸಂಪರ್ಕ ಭಾಷೆಗಳಾಗಿವೆ. ಇನ್ನೂ ಪಶ್ಚಿಮಕ್ಕೆ ಹೋದರೆ ಡೈಯಲಿ ಎಂದು ಮಾಲಿಂಕೆ ಭಾಷೆಯ ಉಪಭಾಷೆ ಸಂಪರ್ಕ ಭಾಷೆಯ ಸ್ಥಾನಮಾನವನ್ನು ಗಳಿಸಿದೆ. ಈ ಖಂಡದ ಪ್ರಮುಖ ಭಾಷಾ ಕುಟುಂಬಗಳೆಂದರೆ:

೧. ನೈಜರ್ ಕೊರಡೋಫೇನಿಯನ್ ಬಹಳ ಪ್ರಚಲಿತವಿರುವಂತಹ ಭಾಷಾ ಕುಟುಂಬ. ಇದರಲ್ಲಿ ಎರಡು ಉಪಕುಟುಂಬಗಳಿವೆ. ನೈಜರ್-ಕಾಂಗೋ, ಮತ್ತು ಕೊರಡೋಫೇ ನಿಯನ್ ಎಂಬ ಈ ಭಾಷೆಗಳನ್ನು ಸೆನೆಗಲ್‌ನಿಂದ ಕಾಂಗೋವರೆಗೆ ಕಾಣಬಹುದು ಮತ್ತು ಇತ್ತೀಚಿನ ವಲಸೆಗಳಿಂದ ಪೂರ್ವ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕಾಣಬಹುದು. ನೈಜರ್ ಕಾಂಗೋ ಪ್ರದೇಶಗಳೆಂದರೆ ಪಶ್ಚಿಮ ಅಟ್ಲಾಂಟಿಕ್, ಮಂಡೆ, ವೊಲ್ವಾಯಿಕ್, ಕ್ವಾ, ಬೆನು ಎಕಾಂಗೋ ಮತ್ತು ಅಡ್ಮಾವ ಪೂರ್ವ ಉಪಗುಂಪುಗಳು. ಕೊರಡೋಫೇನಿಯನ್ ೧೫ ಉಪಗುಂಪುಗಳನ್ನು ಒಳಗೊಂಡಿದೆ. ಇವೆಲ್ಲವನ್ನೂ ಸೂಡಾನಿ ಒಂದು ಅತಿ ಸಣ್ಣ ಪ್ರದೇಶದೊಳಗೆ ಮಾತನಾಡಲಾಗುತ್ತಿದೆ.

೨. ನೈಲೋ ಸಹರಾ ಕುಟುಂಬದಲ್ಲಿ ಸಹರಾದ ದಕ್ಷಿಣಕ್ಕೆ ನೈಜರ್ ಮಧ್ಯಭಾಗದಿಂದ ನೈಲ್ ನದಿವರೆಗಿನ ಸವನ್ನಾ ವಲಯದುದ್ದಕ್ಕೂ ಮಾತನಾಡುವ ಭಾಷೆಗಳು ಒಳ ಗೊಂಡಿದೆ. ಅದರ ಉಪಗುಂಪುಗಳೆಂದರೆ ಶೊಂಗ್ಯಾ, ಸಹಾರಾನ್, ಮಾಬನ್, ಫರ್, ಬಾರಿನೈಲ್ ಮತ್ತು ಕೋಮನ್.

೩. ಹ್ವಾಮಿಡೋ ಸೆಮೆಟಿಕ್; ಪುರಾತನ ಈಜಿಪ್ಟ್ ಭಾಷೆ, ಬರ್ಬರ್ ಕುರೆಟಿಕ್ ಮತ್ತು ಜಾಡ್.

೪. ಕೋಯಿಸಿನ್ ಅಥವಾ ಕ್ಲಿಕ್ ಕುಟುಂಬದಲ್ಲಿ ಸಾನ್ ಮತ್ತು ಖೋಯಿಖೋಯಿನ್ ಭಾಷೆಗಳಿವೆ. ಇಂದು ಇವು ನೈರುತ್ಯ ಆಫ್ರಿಕಾ ಮತ್ತು ಉತ್ತರ ಟಾಂಜೇನಿಯಾದ ಹೊರ ವಲಯದ ಹಡ್ಡಾ ಮತ್ತು ಸಂದಾವೇ.

೫. ಅಸ್ಟ್ರೋನೇಷಿಯನ್ ಕುಟುಂಬವು ಮಡ್ಗಾಸ್ಕರ್‌ನ ಮಲಿಗೆಸೆಯ ವಿವಿಧ ಉಪಭಾಷೆಗಳನ್ನು ಹೊಂದಿದೆ.

ಪಶ್ಚಿಮ ಆಫ್ರಿಕಾದಲ್ಲಿ ಕ್ರಿಯೋಲ್(ಕ್ರಿಯೋ) ಮತ್ತು ಪಿಜಿನ್‌ನ ರೂಪಗಳು ಕರಾವಳಿ ನಗರಗಳಲ್ಲಿ ಬಹಳ ಪ್ರಚಲಿತವಿದೆ. ಹೌಸ ಮತ್ತು ಫುಲಾನಿ ಸವನ್ನಾ ವಲಯದಲ್ಲಿ ಬಹಳ ಪ್ರಚಲಿತ. ದಕ್ಷಿಣ ಆಫ್ರಿಕಾದಲ್ಲಿ ಇಂಗ್ಲಿಷ್ ಮತ್ತು ಸ್ಥಳೀಯ ಬಂಟುವಿನ ಒಂದು ಮಿಶ್ರ ಭಾಷೆಯಾದ ಫ್ಯಾನಗಲೋವನ್ನು ಗಣಿ ಪ್ರದೇಶದಲ್ಲಿ ಮಾತನಾಡುತ್ತಾರೆ.

ಬಹಳಷ್ಟು ಆಫ್ರಿಕನ್ ಭಾಷೆಗಳಿಗೆ ಸ್ವದೇಶಿ ಲಿಪಿಗಳಿಲ್ಲ. ಈಗೇನೋ ಸರ್ಕಾರ ಮತ್ತು ಮಿಶನ್‌ಗಳು ಅವನ್ನು ಲಿಖಿತರೂಪಕ್ಕಿಳಿಸಲು ಪ್ರಯತ್ನಿಸುತ್ತಿದ್ದಾರೆ(ಸ್ವಾಹಿಲಿಯಂತಹ) ಅನೇಕ ಆಫ್ರಿಕನ್ ಭಾಷೆಗಳನ್ನು ಶತಶತಮಾನಗಳಿಂದ ಅರಾಬಿಕ್ ಲಿಪಿಯಲ್ಲಿ ಬರೆಯ ಲಾಗುತ್ತಿದೆ. ಹೇಗಿದ್ದರೂ ಕೆಲವು ಅಪವಾದಗಳಿವೆ. ಅವುಗಳಲ್ಲಿ ಪ್ರಸಿದ್ಧವಾದವೆಂದರೆ, ಸಿಯಾರಲಿಯೇನ್‌ನ ವಾಯ್, ಕಾಮೆರೂನ್‌ನ ಮಯ್, ಟೂಯರೆಗ್ ಮತ್ತಿತರ ದಕ್ಷಿಣ ಸಹರಾದ ಬರ್ಬರ ಗುಂಪುಗಳು ತಮ್ಮದೇ ಲಿಪಿ ಹೊಂದಿದೆ.

ಸಂಸ್ಕೃತಿ ಮತ್ತು ಜನಾಂಗೀಯ ಗುಂಪುಗಳು

ಆಫ್ರಿಕಾದಲ್ಲಿ ೩೦೦೦ ಜನಾಂಗೀಯ ಗುಂಪುಗಳು, ಬುಡಕಟ್ಟು ಅಥವಾ ಜನರನ್ನು ಹೊಂದಿದೆ. ಇವರೇ ಸಹರಾ ಕೆಳಗಿನ ಆಫ್ರಿಕಾ ಸಮಾಜದ ಆಧಾರ. ಈ ಆಫ್ರಿಕನ್ ಸಂಸ್ಕೃತಿಯ ಪಾರಂಪರಿಕ ಸಾಮಾಜಿಕ ಮತ್ತು ಆರ್ಥಿಕ ಸಂಘಟನೆಗಳು ಸ್ವತಂತ್ರವಾದವು. ಈ ಸಾಮಾಜಿಕ ಘಟಕಗಳು ವಿಶಿಷ್ಟ ಭಾಷೆ ಮತ್ತು ಧರ್ಮದ ವಿಷಯದಲ್ಲಿ ಸಾಂಸ್ಕೃತಿಕ ವಾಗಿ ತಾವು ಒಂದೇ ಎಂದು ಭಾವಿಸುವ ಗುಂಪುಗಳು. ಅವರ ನಡುವಿನ ಸೀಮಾರೇಖೆಯನ್ನು ಕಟ್ಟುನಿಟ್ಟಾಗಿ ಎಳೆಯಲಾಗದು. ಒಂದೇ ಬಗೆಯ ಸಮುದಾಯಗಳ ಗುಂಪನ್ನು ಒಂದೇ ಬುಡಕಟ್ಟು ಗುಂಪು ಎಂದು ಪರಿಗಣಿಸಬೇಕೇ ಅಥವಾ ಅನೇಕ ಬುಡಕಟ್ಟು ಗುಂಪುಗಳೆಂದು ಪರಿಗಣಿಸಬೇಕೇ ಎಂಬುದು ನಿರ್ಣಯಿಸುವುದು ಕಷ್ಟದ ವಿಷಯ.

ಹೀಗಿದ್ದರೂ ಈ ಜನರನ್ನು ಅವರ ಭಾಷೆ ಹಾಗೂ ಅವರ ಸಂಸ್ಕೃತಿಯ ಮುಖ್ಯ ರೂಪರೇಷೆಯ ಆಧಾರದ ಮೇಲೆ ವರ್ಗೀಕರಿಸುವುದು ಹೆಚ್ಚು ಅನುಕೂಲ. ಈ ಸಾಂಸ್ಕೃತಿಕ ವರ್ಗೀಕರಣವನ್ನು ಕೆಲವು ಸಾಮಾನ್ಯ ಗುಣಲಕ್ಷಣಗಳನ್ನುಳ್ಳ ಅನೇಕ ಸಮಾಜಗಳನ್ನು ಒಳಗೊಂಡು ಸಾಂಸ್ಕೃತಿಕ ಪ್ರದೇಶಗಳನ್ನು ಆಧರಿಸಿ ಮಾಡಲಾಗುತ್ತದೆ. ಆದರೆ ಆಫ್ರಿಕಾದ ಸಂದರ್ಭದಲ್ಲಿ ಅಂಥ ವರ್ಗೀಕರಣವು ಅರ್ಥಪೂರ್ಣವಾಗುವುದಿಲ್ಲ. ಏಕೆಂದರೆ ಇಲ್ಲಿನ ಸಾಂಸ್ಕೃತಿಕ ಪ್ರದೇಶ ತೀರಾ ದೊಡ್ಡದು ಮತ್ತು ಪ್ರತಿಯೊಂದರಲ್ಲೂ ಬೇರೆ ಬೇರೆ ಬಗೆಯ ಸಾಮಾಜಿಕ ಮತ್ತು ರಾಜಕೀಯ ಸಂಘಟನೆಗಳಿವೆ. ಅಮೆರಿಕದ ಮಾನವಶಾಸ್ತ್ರಜ್ಞನಾದ ಮೆಲ್‌ಹಿಲ್ಲಿ ಜೆ ಹೆಸ್‌ಹೌಸ್ಟ್ ಮತ್ತು ತರುವಾಯ ಜಿ.ಪಿ.ಮುರ್‌ಡೋಕ್ ಮಾಡಿದ ವರ್ಗೀಕರಣಗಳಿವೆ. ಜಿ.ಪಿ. ಮುರ್‌ಡೋಕ್ ಅವರು ಭಾಷಾವಾರು ಮತ್ತು ಜನಾಂಗೀಯ ಇತಿಹಾಸ ಗುಂಪುಗಳಾಗಿ ಗುರುತಿಸಿದ ಜನರ ಸಣ್ಣ ಗುಂಪುಗಳನ್ನು ಘಟಕಗಳಾಗಿ ತೆಗೆದು ಕೊಂಡಿರುತ್ತಾರೆ. ಈ ಬಹುಸಂಖ್ಯಾತ ವಿಭಾಗಗಳನ್ನು ಬಿಟ್ಟು ನೋಡಲು ಇಚ್ಛಿಸುವುದಾದರೆ ಆಗ ಪ್ರಮುಖ ಪ್ರದೇಶಗಳೆಂದರೆ (ಉತ್ತರ ಆಫ್ರಿಕಾವನ್ನು ಬಿಟ್ಟು) ಪಶ್ಚಿಮ, ಪಶ್ಚಿಮಮಧ್ಯ, ಪೂರ್ವ ಮತ್ತು ಮಧ್ಯ ಹಾಗೂ ದಕ್ಷಿಣ ಆಫ್ರಿಕಾ.

ಪಶ್ಚಿಮ ಆಫ್ರಿಕಾ

ಪಶ್ಚಿಮ ಆಫ್ರಿಕಾದಲ್ಲಿ ಗಣನೀಯವಾಗಿ ವಿಭಿನ್ನ ಜನಾಂಗೀಯ ಮತ್ತು ಸಾಂಸ್ಕೃತಿಕ ಗುಂಪುಗಳಿವೆ. ಈ ಪ್ರದೇಶ ಎರಡು ಪ್ರಮುಖ ವಲಯಗಳನ್ನು ಹೊಂದಿದೆ. ೧. ದಕ್ಷಿಣ ಸಹರಾ ಗಡಿ ನಾಡಿನ ಉದ್ದಕ್ಕೂ ಸಹರಾ ಮತ್ತು ೨. ಅಟ್ಲಾಂಟಿಕ್ (ಪಶ್ಚಿಮ) ಕರಾವಳಿ ಉದ್ದಕ್ಕೂ ವರ್ಷಾರಣ್ಯ. ಸಹರಾ ವಲಯದ ಪ್ರಮುಖ ಬೆಳೆಗಳೆಂದರೆ ಮಿಲೆಟ್, ಜೋಳ, ಮುಸುಕಿನ ಜೋಳ, ಎಳ್ಳು ಮತ್ತು ಬೇಳೆಕಾಳುಗಳು. ಗಾಂಬಿಯಾದಿಂದ ಲೈಬಿರಿಯಾವರೆಗಿನ ಪಶ್ಚಿಮ ಭಾಗದಲ್ಲಿ ಗದ್ದೆ ಮತ್ತು ಹೊಲದ ಭತ್ತ ಮುಖ್ಯ ಬೆಳೆ. ಸವನ್ನಾ ಪ್ರದೇಶದಲ್ಲಿ ಹತ್ತಿಯನ್ನು ಬೆಳೆಯುತ್ತಾರೆ ಮತ್ತು ಮಗ್ಗವು ಪಾರಂಪರಿಕವಾದದ್ದು. ಅವರ ದೇಶಿ ಹಸ್ತಕಲೆ ಎಂದರೆ ಹಿತ್ತಾಳೆ ಮತ್ತು ಕಂಚಿನ ಎರಕ ಹುಯ್ಯುವುದು, ಬೆಳ್ಳಿ ಹಾಗೂ ಚಿನ್ನದ ಕುಸುರಿ ಕೆಲಸ, ಚರ್ಮಗಾರಿಕೆ, ಮಣ್ಣಿನ ಇಟ್ಟಿಗೆಯಿಂದ ಕಮಾನು ಛಾವಣಿ ಹಾಗೂ ಕಮಾನು ಗೋಡೆಗಳುಳ್ಳ ಮನೆ ಕಟ್ಟುವುದು. ಇವರ ಎರಡು ಬಹುಮುಖ್ಯ ಪ್ರಾಣಿಗಳೆಂದರೆ ಹಸು ಮತ್ತು ಕುದುರೆ. ಕುದರೆಯನ್ನು ವ್ಯಾಪಾರ, ಸಾರಿಗೆ ಮತ್ತು ಈ ಹಿಂದೆ ಯುದ್ಧಗಳಲ್ಲಿ ಬಳಸುತ್ತಿದ್ದರು. ಅರಣ್ಯ ವಲಯಗಳಲ್ಲಿ ಗೆಡ್ಡೆಗೆಣಸುಗಳು (ಯಾಮ್ ಮತ್ತು ಕೋಕೋ ಯಾಮ್), ಎಣ್ಣೆ ಹಾಗೂ ರಫಿಯಾ ತಾಳೆಗಳು ಮುಖ್ಯ ಬೆಳೆ. ಹಣ್ಣುಗಳು, ಕೋಕೋ, ಮೆಣಸು, ಕೋಲ ಇವು ಅವರ ಜೀವನೋಪಾಯಕ್ಕಾಗಿ ಮತ್ತು ವ್ಯಾಪಾರಕ್ಕಾಗಿ ಬಹಳ ಮುಖ್ಯವಾದವು. ಸಾಕು ಪ್ರಾಣಿಗಳೆಂದರೆ, ಮೇಕೆ, ಹಂದಿ, ಕೋಳಿ ಮತ್ತು ಇನ್ನು ಕೆಲವು ಪ್ರದೇಶಗಳಲ್ಲಿ ಕುಳ್ಳ ದನಕರುಗಳು. ಅರಣ್ಯ ಮತ್ತು ಕರಾವಳಿ ಪ್ರದೇಶದಲ್ಲಿ ಬಾಕ್ಸೈಟ್, ವಜ್ರಗಳು ಮತ್ತು ಚಿನ್ನದಂತಹ ಪ್ರಮುಖ ಖನಿಜಗಳನ್ನು ಹೊಂದಿದೆ. ಮರದ ಕೆತ್ತನೆ, ಕುಂಭಗಾರಿಕೆ, ಲೋಹದ ಎರಕ ಮತ್ತು ಕಬ್ಬಿಣದ ಕುಲುಮೆಗಾರಿಕೆ ಬಹಳವಿದೆ. ಬಹುಪಾಲು ಪರಂಪರಾಗತ ಸಮಾಜಗಳಲ್ಲಿ ಅನೇಕ ಶಕ್ತಿಶಾಲಿ ರಾಜ್ಯಗಳಿವೆ. ಅವುಗಳ ಸುತ್ತ ಚಿಕ್ಕಪುಟ್ಟ ಹಾಗೂ ರಾಜಕೀಯವಾಗಿ ದುರ್ಬಲವಾದ ಸಮುದಾಯಗಳಿವೆ. ಸವನ್ನಾದ ಮುಖ್ಯ ಜನತೆಯಲ್ಲಿ ಮೂರು ಪ್ರಮುಖ ಗುಂಪುಗಳಿವೆ. ಅಂದರೆ ಮಂಡೆ(ಸೆನಗಲ್ ಮತ್ತು ಮಾಲಿಯಲ್ಲಿ ಇದರಲ್ಲಿ ಬುಡಕಟ್ಟುಗಳ ಜನರು ಮಾಲಿಂಕೆ, ಸೋನಿಂಕೆ ಮತ್ತಿತರರು ಸೇರಿರುತ್ತಾರೆ). ಸವನ್ನಾದ ಪೂರ್ವ ವಲಯದಲ್ಲಿ ವೊಲ್ಟಾನಿಕ್ ಗುಂಪು (ಸೆನ್ನಫೋ ಲೋಬಿ, ಗ್ರುಂಷಿ, ಡಾಗನ್ ಮತ್ತು ಮೊಸ್ಸಿ), ಉತ್ತರ ನೈಜೀರಿಯಾದಲ್ಲಿ ನೈಜರ್ ಮತ್ತು ಕಮರೂಗ್ ಹಾಗೂ ಪ್ರಧಾನವಾಗಿ ಮುಸ್ಲಿಮರಲ್ಲದ ಅನೇಕ ಸಣ್ಣ ಬುಡಕಟ್ಟುಗಳು. ಈ ಪ್ರದೇಶದುದ್ದಕ್ಕೂ ಫುಲಾನಿ ಗುಂಪುಗಳನ್ನು ನೋಡುತ್ತೇವೆ. ಪ್ರಮುಖವಾಗಿ ಇವರು ದನಗಾಹಿ ಮುಸ್ಲಿಂ ಜನರು. ಇವರು ದೇಶೀಯ ಜನರನ್ನು(ಹೌಸ್)ಗೆದ್ದು ನೆಲೆಸಿರುವಂತಿದೆ. ಸಹರಾದ ಅಂಚಿನಲ್ಲಿ ಅನೇಕ ಬುಡಕಟ್ಟು ಭಾಷೆ ಮಾತನಾಡುವ ಜನರಿದ್ದಾರೆ. ಅವರನ್ನು ಒಟ್ಟಾಗಿ ಕುವರೆಗ್, ಜಾಡ್ ಸರೋವರದ ಕಾನ್ಮಿ ಮತ್ತು ಅನೇಕ ಸೆಮೆಡಿಕ್ ಮಾತನಾಡುವ ಬೆಡೌವಿನ್ ಅರಬ್ ಜನರೆಂದು ಕರೆಯಲಾಗುತ್ತದೆ. ಕರಾವಳಿ ವಲಯದಲ್ಲಿರುವ ವಿಶಾಲ ಸಮುದಾಯಗಳೂ ಬಹುಪಾಲು ರಾಜ್ಯಗಳೇ ಆಗಿವೆ. ನೈಜೀರಿಯಾದಲ್ಲಿ ಇಗ್ಬೋ ಮತ್ತು ಇದೈಬೋಗಳೂ ಇರುತ್ತಾರೆ. ಇವರು ಅನೇಕ ಸ್ವಾಯತ್ತ ರಾಜ್ಯಗಳಾಗಿ ಸಂಘಟಿತರಾಗಿರುತ್ತಾರೆ. ಈಡೋ ಮತ್ತಿತರ ಯರೂಬಾದ ಶಕ್ತಿಶಾಲಿ ರಾಜ್ಯಗಳು ಇರುತ್ತವೆ. ಪಶ್ಚಿಮಕ್ಕೆ ಹೋದರೆ ಬೆನಿನ್‌ನ ಫಾನ್ ಅಕಾನ್ ಒಕ್ಕೂಟದ ವಿವಿಧ ಜನರು ಅದರಲ್ಲೂ ಬಹುಪಾಲು ಘಾನಾದಲ್ಲಿ ಇರುತ್ತಾರೆ. ಇವರಲ್ಲಿ ಬಲುದೊಡ್ಡ ಗುಂಪೆಂದರೆ ಅರೊಂಟಿ, ಈವ್, ಗಾ, ಘಾಂಟಿ ಮತ್ತು ಕರಾವಳಿಯ ಅನಯಿ; ಸಿಯಾರಾ ಲಿಯೋನ್‌ನ ಮೆಂಡೆ ಮತ್ತು ಟೆಮ್ನೆ ಲೈಬೀರಿಯಾದ ಕ್ರು, ಸೆನೆಗಲ್‌ನ ವುಲೋಫ್, ಸೆರೆರ್, ಡ್ಯೂಲ್ ಮತ್ತಿರರು; ಸಿಯೋನೈ ಲಿಯೋನ್ ಹಾಗೂ ಲೈಬಿರಿಯಾದ ಕ್ರಿಯಾಲರು ಇವರು ನವಜಗತ್ತಿನ ವಿಮುಕ್ತ ಗುಲಾಮರ ವಂಶದವರು.

ಪಶ್ಚಿಮ ಮಧ್ಯ ಆಫ್ರಿಕಾ

ಪಶ್ಚಿಮ ಮಧ್ಯ ಆಫ್ರಿಕಾವು ಉತ್ತರದಲ್ಲಿ ಚಾಡ್‌ನ ಸವನ್ನಾ, ಉಬಾಂಗಿ ಮತ್ತು ಸೂಡಾನ್‌ನಿಂದ ನೈಲ್‌ವರೆಗೂ ಹಬ್ಬುತ್ತದೆ. ದಕ್ಷಿಣದಲ್ಲಿ ಇದು ಬಹುಪಾಲು ಕಾಂಗೋವಿನ ಅರಣ್ಯ ಭೂಮಿ. ಜನಾಂಗೀಯವಾಗಿ ಇದು ಉತ್ತರದಲ್ಲಿ ಅರಬ್ಬರೊಂದಿಗೆ ಕಾಂಗೋ ಮತ್ತು ಗಬಾನ್‌ನಲ್ಲಿ ಪಿಗ್ಮಿಗಳೊಂದಿಗೆ ಹಾಗೂ ಇನ್ನೂ ದಕ್ಷಿಣದಲ್ಲಿ ಸುಡಾನ್ ಹಾಗೂ ಬಂಟು ಮಾತನಾಡುವ ಜನರೊಂದಿಗೆ ಬೆರೆತು ಹೋಗಿದೆ. ಈ ಇಡೀ ಪ್ರದೇಶದ ಪ್ರಧಾನ ಅರ್ಥವ್ಯವಸ್ಥೆ ವ್ಯವಸಾಯದ್ದಾಗಿದೆ. ಉತ್ತರ ಸವನ್ನಾ ಕಾಮರೂನ್ ಪ್ರದೇಶದ ಅನೇಕ ಜನರನ್ನು ಹೊಂದಿದೆ. ಇವರು ಸಣ್ಣ ಪುಟ್ಟ ರಾಜ್ಯಗಳಾಗಿ ವಿಂಗಡಿತರಾಗಿದ್ದಾರೆ. ಇವರಲ್ಲಿ ಬಮರಿಕೆ ಬುಡಕಟ್ಟಿನವರು ಬಹುಸಂಖ್ಯಾತರಾಗಿದ್ದಾರೆ. ಕಮರೂನ್ ಹಾಗೂ ನೈಲ್ ನಡುವೆ ಸಾರ, ಮಾಂಗ್‌ಬೆಟು ಮತ್ತು ಅಜೆಂಡೆಯಂತಹ ಸುಡಾನಿಕ್ ಮಾತನಾಡುವ ಜನರಿದ್ದಾರೆ. ದಕ್ಷಿಣಕ್ಕೆ ಹೋದಂತೆ ಬಂಟು ಜನರು ಸಿಗುತ್ತಾರೆ. ಅವರಲ್ಲಿ ಗೆಬಾನ್ ಮತ್ತು ಕಾಂಗೋವಿನ ಫಾಂಗ್, ಮಾಂಗೋ, ಕುಬಾ ಲುಬಾ, ಕಾಂಗೋ ಮತ್ತು ಅಂಗೋಲಾದ ಜೊಕ್ವೆಗಳಿದ್ದಾರೆ.

ಪೂರ್ವ ಆಫ್ರಿಕಾ

ಈ ಪ್ರದೇಶ ಅನೇಕ ಜೀವಿ ಪರಿಸರ ಹಾಗೂ ಸಾಂಸ್ಕೃತಿಕ ಪ್ರದೇಶಗಳನ್ನು ಹೊಂದಿದೆ. ಉತ್ತರ ಮತ್ತು ಪೂರ್ವದಲ್ಲಿ ಇಥಿಯೋಫಿಯಾದ ಎತ್ತರ ಭೂಮಿಗಳಿಂದ ವಿಭಜಿತವಾದ ಸುಡಾನ್ ಹಾಗೂ ಸೋಮಾಲಿಯಾದ ಒಣ ಭೂಮಿಗಳಿವೆ. ಮಧ್ಯದಲ್ಲಿ ಕಿನ್ಯಾಪರ್ವತ ಮತ್ತು ಕಿಲಿಮಂಜಾರೋ ಸುತ್ತಮುತ್ತಲ ಮಹಾಸರೋವರಗಳು ಹಾಗೂ ಎತ್ತರ ಭೂಮಿಗಳ ಫಲವತ್ತಾದ ಪ್ರದೇಶಗಳಿವೆ. ಉಳಿದ ಭಾಗವೆಂದರೆ ಸವನ್ನಾ, ಉತ್ತರದಿಂದ ದಕ್ಷಿಣಕ್ಕೆ ಹಬ್ಬಿರುವ ಗ್ರೇಡ್ ರಿಫ್ಟ್ ಕಣಿವೆಯ ತಗ್ಗುಪ್ರದೇಶ. ಫಲವತ್ತಾದ ಪ್ರದೇಶ ಹತ್ತಿ ಮತ್ತು ಕಾಫಿಯಂತಹ ನಗದು ಬೆಳೆಗಳನ್ನು ಉತ್ಪಾದಿಸುತ್ತದೆ. ಸಾಂಪ್ರದಾಯಿಕ ಮುಖ್ಯ ಆಹಾರಗಳೆಂದರೆ ಆಹಾರ ಧಾನ್ಯಗಳು. ಆದರೆ ವಿಕ್ಟೋರಿಯಾ ಸರೋವರದ ಜನರಿಗೆ ಬಾಳೆಹಣ್ಣು, ಗೆಡ್ಡೆಗೆಣಸುಗಳೂ ಸಹ ತಿಳಿದಿವೆ. ಈ ಪ್ರದೇಶದುದ್ದಕ್ಕೂ ದನಕರು, ಮೇಕೆ, ಕುರಿ, ಕೋಳಿ, ಕತ್ತೆ, ನಾಯಿಗಳು ಕಾಣಬರುತ್ತವೆ. ಸುಡಾನ್, ಸೋಮಾಲಿಯಾ ಮತ್ತು ಕೀನ್ಯಾ ಹಾಗೂ ಟಾಂಜೇನಿಯಾಗಳ ಮಧ್ಯ ಮೈದಾನ ಭಾಗಗಳಲ್ಲಿ ಗೋವಳ ಸಮುದಾಯವೂ ಕಾಣಬರುತ್ತದೆ. ಈ ಸಂಕೀರ್ಣ ಜನಾಂಗೀಯ ಸಮುದಾಯಗಳುಳ್ಳ ಪ್ರದೇಶದಲ್ಲಿ ನೈಲ್ ಕಣಿವೆಯ ಪಾರಾಗೈಲೋಟಿಕ್ ಮಾತನಾಡುವ ಗೋವಳ ವರ್ಗದವರು (ಶಿಲ್ಲುಕ್, ದಿಂಕ, ಲುಓ ಲಾಂಗೋ ಮತ್ತು ಈ ಹಿಂದೆ ನೈಲೋಟ್‌ಗಳೆಂದು ಕರೆಯಲ್ಪಡು ತ್ತಿದ್ದ ಇತರರು), ಮಧ್ಯ ಮೈದಾನದವರು(ನಿಲೋಹಿ ಮೈಟ್‌ಗಳೆಂದು ಈ ಹಿಂದೆ ಕರೆಯುತ್ತಿದ್ದ ಮಸಾಯಿ, ನಂದಿ ಮತ್ತಿತರರು ಹಾಗೂ ಆಫ್ರಿಕಾದ ಕೊಂಬಿನ ಸೋಮಾಲಿ ಮತ್ತು ಗಲ್ಲ ಎಂಬ ಕುಶೈಟಿಕ್ ಮಾತನಾಡುವವರು, ಇಂಥಿಯೋಫಿಯಾದಲ್ಲೂ ಸೆಮೆಟಿಕ್ ಮಾತನಾಡುವ ಅಮಹರ ಮತ್ತಿತರರು. ಈ ಪ್ರದೇಶದ ಉಳಿದ ಬಹಳಷ್ಟು ಜನರು ಬಂಟು ಭಾಷೆ ಮಾತನಾಡುವವರು. ಇವರು ರಾಜಕೀಯ ಮತ್ತಿತರ ಸಾಂಸ್ಕೃತಿಕ ಗುಣಲಕ್ಷಣಗಳಲ್ಲಿ ವೈವಿಧ್ಯವುಳ್ಳವರು. ಆದರೆ ಇವರೆಲ್ಲಾ ರೈತರು. ಮಹಾಸರೋವರಗಳ ಪ್ರದೇಶಗಳಲ್ಲಿ ಈ ಹಿಂದೆ ಬಲಿಷ್ಠರಾಗಿದ್ದ ಅನೇಕ ಬಂಟು ರಾಜ್ಯಗಳಿದ್ದವು (ಗಾಂಡ, ನಯಾರೋ, ವಾರ‌್ವಾಂಡ, ರುಂಡಿ ಮತ್ತು ಇತರೆ). ಕೀನ್ಯಾ ಮೇಲುನಾಡಿನಲ್ಲಿ ಕಿಕುಯು ಲುಹ್ಯಾ ಮತ್ತಿತರರಿದ್ದಾರೆ. ಕರಾವಳಿ ಪ್ರದೇಶದಲ್ಲಿ ಸ್ವಾಹಿಲಿ ಭಾಷೆ ಮಾತನಾಡುವ ವಿವಿಧ ಬುಡಕಟ್ಟುಗಳಿವೆ. ಟಾಂಜೇನಿಯಾದಲ್ಲಿ ಜಾಗಾ, ನ್ಯಾಮವೇಜಿ, ಸುಕುಮ ಇನ್ನೂ ಅನೇಕರಿದ್ದಾರೆ. ಇತರ ಕೆಲವು ಜನಾಂಗೀಯ ಗುಂಪುಗಳ ಸಣ್ಣ ಪಳೆಯುಳಿಕೆಗಳಿವೆ. ಇವುಗಳೆಂದರೆ ಬೇಟೆಗಾರ ಬಕೈಕ್ ಅಥವಾ ಡೊರೋಟೋ, ಹಾಡ್ಜ ಮತ್ತು ಕೆಲವು ಪಿಗ್ಮಿಗಳು. ಕಡಲ ತೀರದಲ್ಲಿ ಒಂದು ಕಾಲದಲ್ಲಿ ಜಾಂಜಿಬಾರ್ ಅನ್ನು ನೆಲೆಯಾಗಿ ಹೊಂದಿದ್ದ ಹಾಗೂ ರಾಜಕೀಯವಾಗಿ ಬಲಿಷ್ಠರಾಗಿದ್ದ ಅರಬ್ಬರಿದ್ದಾರೆ.

ಮಧ್ಯ ಮತ್ತು ದಕ್ಷಿಣ ಆಫ್ರಿಕಾ

ಮಧ್ಯ ಮತ್ತು ದಕ್ಷಿಣ ಆಫ್ರಿಕಾದ ಬಹುಭಾಗ ತೆರೆದ ಒಣ ಸವನ್ನಾ ಹುಲ್ಲುಗಾವಲು ಪ್ರದೇಶವಾಗಿದ್ದು ಇದೊಂದು ವಿಶಾಲವಾದ ಸಾಂಸ್ಕೃತಿಕ ಪ್ರದೇಶ ಎಂದು ಪರಿಗಣಿಸಲಾಗುತ್ತದೆ. ವಾಯುವ್ಯಕ್ಕೆ ಕಾಂಗೋ ಅರಣ್ಯದ ಅಂಟುಗಳಿವೆ. ನೈರುತ್ಯಕ್ಕೆ ಭೂಮಿ ಹೆಚ್ಚು ಶುಷ್ಕವಾಗಿದೆ ಮತ್ತು ದಕ್ಷಿಣ ಆಫ್ರಿಕಾದ ಕರಾವಳಿ ಪ್ರದೇಶ ಹೊಂದಿದೆ. ಮೊಜಾಂಬಿಕ್ ಹೆಚ್ಚು ಫಲವತ್ತಾದದ್ದು ಮತ್ತು ಅದರಲ್ಲಿ ಬಹುಪಾಲು ಮೆಡಿಟರೇನಿಯನ್ ಹವಾಮಾನ ಹೊಂದಿದೆ. ಈ ಪ್ರದೇಶದಲ್ಲಿ ಒಂದಾನೊಂದು ಕಾಲದಲ್ಲಿ ಸಾನ್ (ಬುಷ್ ಮೆನ್) ಮತ್ತು ಖೋಯಿಖೋಯಿನ್ (ಹಾಡೆನ್‌ಟಾಟ್‌ಗಳು) ವಾಸಿಸುತ್ತಿದ್ದರು. ಇಬ್ಬರೂ ಖೋಯಿಷನ್ ಮಾತನಾಡುವ ಜನರು. ಬುಷ್‌ಮನ್‌ಗಳು ಬೇಟೆಗಾರರು ಮತ್ತು ಖೋಯಿ ಖೋಯಿನ್‌ಗಳು ಗೋವಳರು. ಸಾನ್‌ಗಳು ಇಂದು ನೈರುತ್ಯ ಆಫ್ರಿಕಾದ ಒಣ ಭಾಗಗಳು ಮತ್ತು ಬೇಟ್ಸ್‌ವಾನಾಗಳಿಗೆ ಸೀಮಿತರಾಗಿದ್ದಾರೆ. ಬಹುಪಾಲು ಖೋಯಿಖೋಯಿನ್‌ಗಳು ಐರೋಪ್ಯ ಮತ್ತು ಏಷ್ಯನ್ ಸಂಕರಗಳೊಂದಿಗೆ ಕೇಪ್ ಪ್ರಾಂತದಲ್ಲಿನ ಕೇಪ್ ವರ್ಣದ ಜನರೊಂದಿಗೆ ಬೆರೆತುಹೋಗಿದ್ದಾರೆ. ಇತರ ದೇಶೀ ಜನರೆಂದರೆ ಬಂಟು ಮಾತನಾಡುವ ನೀಗ್ರೋ ಬುಡಕಟ್ಟಿನ ಜನರು. ಇವರು ಮೂಲತಃ ಕಮರೂನ್ ಪ್ರದೇಶದಿಂದ ಬಂದವರು. ಸುಮಾರು ೨೦೦೦ ವರ್ಷಗಳ ಹಿಂದೆ ಈ ಪ್ರದೇಶದುದ್ದಕ್ಕೂ ಹರಡಿಕೊಂಡರು. ಮಂಚೂಣಿಯಲ್ಲಿದ್ದ ಭಾಷಾ ದೃಷ್ಟಿಯಿಂದ ದಕ್ಷಿಣ ಬಂಟು ಎಂದು ಕರೆಯಲಾದ ಜನಾಂಗದವರು ತಮಗಿಂತ ಮುಂಚೆ ಇದ್ದ ಖೋಯಿಸನ್‌ಗಳನ್ನು ಹೊಡೆದಟ್ಟಿದರು ಮತ್ತು ಅವರ ಭಾಷೆಯಲ್ಲಿದ್ದ ಕೀರಲು ಕಂಠ್ಯಗರನ್ನು ತಮ್ಮ ಭಾಷೆಗೆ ಸೇರಿಸಿಕೊಂಡರು. ೧೮ನೆಯ ಮತ್ತು ೧೯ನೆಯ ಶತಮಾನದಲ್ಲಿ ಐರೋಪ್ಯರೊಂದಿಗೆ ಸಂಪರ್ಕಕ್ಕೆ ಬಂದ ಮೇಲೆ ಬಂಟು ಮಾತನಾಡುವ ಜನರು ತಮ್ಮ ತಮ್ಮಲ್ಲೇ ಒಬ್ಬರು ಮೇಲೊಬ್ಬರು ತಿರುಗಿ ಬಿದ್ದರು. ಜುಲು, ಸ್ವಾಜಿ, ಸ್ವಾನ, ಡೆಬೆಲೆ, ಸೋಕೋ ಮತ್ತಿತರ ವಿಜೇತ ರಾಜ್ಯಗಳನ್ನು ಸ್ಥಾಪಿಸಿದರು.

ಉತ್ತರದಲ್ಲಿ ಕಾಂಗೋದಿಂದ ಮಾಲವಿವರೆಗೆ ಮಧ್ಯ ಬಂಟು ಭಾಷೆಯ ಜನರಿದ್ದಾರೆ. ಜೊತೆಗೆ ತಮ್ಮ ಬಂಧುತ್ವ ಪದ್ಧತಿಯಲ್ಲಿ ದಕ್ಷಿಣ ಬಂಟು ಭಾಷಿಕ ಜನರಿಗಿಂತ ಸ್ಪಷ್ಟ ಭಿನ್ನತೆಯುಳ್ಳ ಅನೇಕ ಬಗೆಯ ರಾಜಕೀಯ ಪದ್ಧತಿಗಳುಳ್ಳ ರೈತರು ಸಹ ಇದ್ದಾರೆ. ಇವರಲ್ಲಿ ಬೆಂಬಾ, ತೊಂಗ, ಚೀವಾ ನ್ಯಾನ್ಜ, ಯಾವೊ ಮತ್ತಿತರರು ಪ್ರಮುಖರು. ನೈರುತ್ಯ ಆಫ್ರಿಕಾದಲ್ಲಿ ನೈರುತ್ಯ ಬಂಟುಗಳು ಇದ್ದಾರೆ. ಇವರಲ್ಲಿ ಒವಾಂಬೋ ಮತ್ತು ಹೆರೇರೋಗಳು ಪ್ರಮುಖರು.