ಮಧ್ಯ ಆಫ್ರಿಕಾ

ಮಧ್ಯ ಆಫ್ರಿಕಾದ ದೇಶೀಯ ನಿವಾಸಿಗಳು ಬಂಟು ಭಾಷೆಯನ್ನು ಮಾತನಾಡುವ ಕಪ್ಪು ಜನಾಂಗ. ಇವರು ಪಿಗ್ಮಿಯಂತಹ ಕೆಲವು ಪ್ರತ್ಯೇಕ ಗುಂಪುಗಳನ್ನು ಬಿಟ್ಟರೆ ಕಮರೂನ್‌ನಿಂದ ದಕ್ಷಿಣ ಇಥಿಯೋಪಿಯಾವರೆಗಿನ ಬಂಟು ಗೆರೆಯಿಂದ ದಕ್ಷಿಣದ ಆಫ್ರಿಕಾದ ಬಹುಭಾಗದಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ಭಾಷೆಗಳ ತೌಲನಿಕ ಅಧ್ಯಯನದಿಂದ ಬಂಟು ಮಾತನಾಡುವ ಜನರು ಸಾಡಾನಿಕ್ ಎಂದು ವರ್ಗೀಕರಿಸಲಾದ ಭಾಷೆಯನ್ನು ಮಾತನಾಡುವ ಪಶ್ಚಿಮ ಆಫ್ರಿಕಾದ ಕಪ್ಪು ಜನಾಂಗದ ಒಂದು ಕವಲು ಆಗಿದ್ದಿರಬಹುದು. ಮಧ್ಯ ಆಫ್ರಿಕಾದ ಕಟಾಂಗ ಪ್ರದೇಶವು ಈ ಬಂಟು ಮಾತನಾಡುವ ಜನರು ವಾಸಿಸುತ್ತಿದ್ದ ಕೇಂದ್ರ ಪ್ರದೇಶವಾಗಿದ್ದು ಅಲ್ಲಿಂದ ಹರಡಿಕೊಂಡಂತೆ ಕಂಡುಬರುತ್ತದೆ. ಭಾಷಾ ಪುರಾವೆಗಳಿಂದ ಅವರು ಆಧುನಿಕ ಕಮರೂನ್ ಪ್ರದೇಶದಿಂದ ಉಗಮಗೊಂಡು ಪೂರ್ವಕ್ಕೆ ಮತ್ತು ದಕ್ಷಿಣದೆಡೆಗೆ ವಲಸೆ ಹೋಗಿರುವಂತೆ ಕಂಡುಬರುತ್ತದೆ. ಕ್ರಿಸ್ತಶಕದ ಆರಂಭದ ಕಾಲದಲ್ಲಿ ಈ ಜನರು ವಿಸ್ತಾರಗೊಂಡು ಎಲ್ಲೆಡೆ ಪ್ರಸರಿಸಿರುವುದು ಕಂಡುಬರುತ್ತದೆ. ಕಾಂಗೋನದಿ ಮುಖಜ ಭೂಮಿಯಲ್ಲಿ ಮಹಾನ್ ಕಾಂಗೋ ಸಾಮಾನ್ಯವು ೧೪೦೦ರ ಸುಮಾರಿನಲ್ಲಿ ಅಧಿಕಾರಕ್ಕೆ ಬಂತು. ಇಷ್ಟೊಂದು ವಿಶಾಲವಾದ ಪ್ರದೇಶದಲ್ಲಿ ಬಂಟು ಜನರು ಬಹುಬೇಗ ನೆಲೆ ಯೂರಲು ಬಹುಶಃ ಅವರ ಕಬ್ಬಿಣದ ಯುಗದ ತಂತ್ರಜ್ಞಾನ ಮತ್ತು ಆಗ್ನೇಯ ಏಷ್ಯಾ ಮೂಲದ ಬಾಳೆಹಣ್ಣು ಯಾಮ್, ಕೋಕೋ ಮತ್ತು ಕಬ್ಬು ಈ ಬೆಳೆಗಳನ್ನು ಅಳವಡಿಸಿ ಕೊಂಡು ಅಭಿವೃದ್ದಿ ಪಡಿಸಿದ್ದೂ ಮುಖ್ಯ ಕಾರಣವಿರಬಹುದು. ಮಧ್ಯ ಬಂಟು ಜನಾಂಗ ವನ್ನು ಕುರಿತ ಐತಿಹಾಸಿಕ ಅತಿ ಪ್ರಾಚೀನ ಉಲ್ಲೇಖಗಳು, ಸುಮಾರು ಕ್ರಿ.ಶ.೧೦ನೆಯ ಶತಮಾನದಿಂದೀಚೆಗೆ ಪೂರ್ವ ಕರಾವಳಿಯನ್ನು ಕುರಿತ ಅರಬ್ಬರ ದಾಖಲೆಗಳಲ್ಲಿ ಕಾಣಬರುತ್ತದೆ. ಸೋಫಾಲ ಮೊಜಾಂಬಿಕ್‌ನ ಹಿನ್ನಾಡಿನಿಂದ ಅರಬ್ ವ್ಯಾಪಾರಿಗಳು ಚಿನ್ನವನ್ನು ಪಡೆಯುತ್ತಿದ್ದರು. ಅದಕ್ಕೆ ಪ್ರತಿಯಾಗಿ ಅವರು ಏಷ್ಯಾದ ಉತ್ಪನ್ನಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ. ಪೋರ್ಚುಗೀಸರು ಕಾಂಗೋ ಮತ್ತು ಅಂಗೋಲಗಳಿಗೆ(೧೪೮೩ರಿಂದ) ಮತ್ತು ಮೊಜಾಂಬಿಕ್‌ಗೆ (೧೫೦೫ರಿಂದ) ಬಂದಾಗ ಆ ಎರಡೂ ಪ್ರದೇಶಗಳಲ್ಲಿ ಅವರು ಅನೇಕ ಬಂಟು ರಾಜ್ಯಗಳೊಂದಿಗೆ ಸಂಪರ್ಕ ಬೆಳಸಿಕೊಂಡರು. ಪಶ್ಚಿಮ ತೀರದಲ್ಲಿ ಕಾಂಗೋ, ಕಕಾಂನೋ, ಲೊಆಂಗೋ, ಡೊಂಗಾ ಇತ್ಯಾದಿ ರಾಜ್ಯಗಳು, ಇನ್ನೂ ಒಳಭಾಗದ ಕೂವಾ ರಾಜ್ಯವನ್ನು ಅನೇಕ ವಲಸೆಗಳ ತರುವಾಯ ೧೫೭೦ರ ಸುಮಾರಿನಲ್ಲಿ ಕಂಡುಹಿಡಿಯಲಾಯಿತು ಎಂಬುದು ತಿಳಿದುಬರುತ್ತದೆ. ಮವೀನೇ ಮಟಾಪ ಸಾಮ್ರಾಜ್ಯವೆಂದು ಸಾಮಾನ್ಯವಾಗಿ ಉಲ್ಲೇಖಿಸಲಾದ ಒಂದು ಗಮನಾರ್ಹ ರಾಜ್ಯ ಸಂಕೀರ್ಣವನ್ನು ಪೋರ್ಚುಗೀಸ್ ಅನ್ವೇಷಕರು ಹಾಗೂ ಮಿಷನರಿಗಳು ಪತ್ತೆ ಹಚ್ಚಿದರು. ಶಿಲಾ ಅವಶೇಷಗಳಲ್ಲಿ ವಿಖ್ಯಾತವಾದದ್ದು ಮತ್ತು ಹೆಚ್ಚು ಗಮನಾರ್ಹ ವಾದದ್ದು ಜಿಂಬಾಬ್ವೆಯಲ್ಲಿ ಮಾಸ್ವಿಂಗೋ ಬಳಿಯ ಬೃಹತ್ ಜಿಂಬಾವ್ವೆ. ಇದನ್ನು ಪುರಾತತ್ವ ಶಾಸ್ತ್ರಜ್ಞರು ಶೋಧನೆ ಮಾಡಿರುತ್ತಾರೆ. ಕಲ್ಲಿನ ಗೋಡೆಗಳು, ಮಣ್ಣಿನ ಮನೆಗಳ ಸುತ್ತಲೂ ಕೋಟೆ ಇರುವಂತಿದೆ. ಕಲ್ಲಿನ ಕಟ್ಟಡಗಳ ನಿರ್ಮಾಣ ಸುಮಾರು ೧೧೦೦ರಿಂದ ಪ್ರಾರಂಭವಾಯಿತು ಎಂದು ತೋರಿಸಲಾಗಿದೆ. ಇದು ೧೪೫೦ರಿಂದ ೧೫೩೦ರವರೆಗೆ (ರೋಜ್ವಿಗಳ ಅಡಿಯಲ್ಲಿ) ತನ್ನ ಗರಿಷ್ಠ ಮಟ್ಟಕ್ಕೆ ಅಭಿವೃದ್ದಿ ಹೊಂದಿತು. ‘ಜಿಂಬಾವ್ವೆ’ಯನ್ನು ನಿರ್ಮಿಸಿದವರು ಆ ಪ್ರದೇಶದ ಆಧುನಿಕ ಜನರ ಪೂರ್ವಿಕರಾದ ಕಬ್ಬಿಣದ ಕೆಲಸಗಾರರು ಮತ್ತು ಚಿನ್ನದ ಗಣಿಗಾರಿಕೆ ಮಾಡುತ್ತಿದ್ದ ಬಂಟು ಜನರು ಎಂದು ಪರಿಗಣಿಸಲಾಗಿದೆ. ಮವಾನೆ ಮಟಾಪ ಸಂಸ್ಕೃತಿಯು ಪೋರ್ಚುಗೀಸರು ಅದಕ್ಕೆ ಭೇಟಿ ಇತ್ತಾಗ ಬಹುಶಃ ತನ್ನ ಅವನತಿಯ ಹಾದಿಯಲ್ಲಿತ್ತು. ಅದರ ಅವಸಾನಕ್ಕೆ ಚಿನ್ನದ ಉತ್ಪತ್ತಿ ಕಮ್ಮಿ ಆಗಿದ್ದು ಮತ್ತು ಬಂಟು ಜನರು ಪದೇ ಪದೇ ಮುತ್ತಿಗೆ ಹಾಕಿ ಗೆದ್ದದ್ದು ಕಾರಣವಿರುವಂತಿದೆ. ಈ ಸಂಸ್ಕೃತಿಯ ಮೇಲೆ ಸೋತೋ ಮತ್ತು ಶೋನಾ ಜನರು ಮತ್ತು ೧೪೫೦ರಲ್ಲಿ ರೋಜ್ವಿ ಜನರು ದಾಳಿ ಮಾಡಿದರು. ಈ ಜನರು ಮೆಂಬೋ ಸಾಮ್ರಾಜ್ಯವನ್ನು ನಿರ್ಮಿಸಿದರು. ಈ ಮೆಂಬೋ ಸಾಮ್ರಾಜ್ಯ ೧೮೩೦ರಲ್ಲಿ ನಗೋನಿ ಹಾಗೂ ನಡೆಬೆಲೆ ಅವರು ಅದನ್ನು ನಾಶಪಡಿಸುವವರೆಗೂ ಉಳಿದುಬಂದಿತ್ತು. ವಿಕ್ಟೋರಿಯಾ ಸರೋವರದ ವಾಯುವ್ಯ ಭಾಗದಲ್ಲಿ ಬಂಟು ಭಾಷೆ ಮಾತನಾಡುವ ಜನರು ಬುನ್ಯಾರೋ (ಅಥವಾ ಕಿರ್ತಾರ್) ಎಂದು ಕರೆಯಲಾದ ಒಂದು ಪ್ರಬಲ ರಾಜ್ಯವನ್ನು ೧೪ನೆಯ ಶತಮಾನದಲ್ಲಿ ಸ್ಥಾಪಿಸಿದರು. ಅದು ಈಗ ಉಗಾಂಡ ಎಂದು ಕರೆಯಲಾಗುವ ಪ್ರದೇಶವನ್ನು ಆಳುತ್ತಿತ್ತು. ಇದೇ ರೀತಿಯ ರಾಜ್ಯಗಳ ಗುಂಪುಗಳಿದ್ದವು. ಆದರೆ ಅವು ಇದಕ್ಕೂ ಹೆಚ್ಚು ವಿಶಾಲವಾಗಿದ್ದರೂ ಸಾಮಾನ್ಯವಾಗಿ ಅಷ್ಟೊಂದು ಸುಸ್ಥಿರವಾಗಿರಲಿಲ್ಲ. ಇದು ಬಹುಶಃ ವಿದೇಶಿ ವ್ಯಾಪಾರವಿಲ್ಲದೇ ಇದ್ದ ಕಾರಣದಿಂದ ಇರಬಹುದು. ಮಧ್ಯ ಬಂಟು ಜನಾಂಗದ ಉತ್ತರದ ರಾಜ್ಯಗಳಲ್ಲಿ ಪ್ರಮುಖವಾದದ್ದು ಆಗ್ನೇಯ ಕಾಂಗೋದ ಲುಬಾ ಸಾಮ್ರಾಜ್ಯ. ಇದು ಕ್ರಿ.ಶ.೧೫ ಮತ್ತು ೧೬ನೆಯ ಶತಮಾನಗಳಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಈಶಾನ್ಯ ಜಾಂಬಿಯಾದ ಕಜೆಂಬಾ ರಾಜ್ಯವು ೧೮ನೆಯ ಶತಮಾನದಲ್ಲಿ ಬಹಳ ಜನಪ್ರಿಯವಾಗಿತ್ತು. ದಕ್ಷಿಣದ ಇತರ ಚಿಕ್ಕ ಸಾಮ್ರಾಜ್ಯಗಳೆಂದರೆ ಅಂಕೋಲೆ, ಬುರುಂಡಿ ಮತ್ತು ವಾರ‌್ವಾಂಡಾ ಹಾಗೂ ಲೋಜಿ ಸಾಮ್ರಾಜ್ಯಗಳು. ಇವು ಜಾಂಬೇಜಿ (ಬರೋಡ್ಸೆಲ್ಯಾಂಡ್) ಮೇಲು ಭಾಗದ ಸಮೃದ್ಧ ನದಿ ಭೂಮಿಯ ರಾಜ್ಯಗಳು. ಇವು ತಮ್ಮ ಪರಾಕಾಷ್ಠೆಯನ್ನು ೧೯ನೆಯ ಶತಮಾನದಲ್ಲಿ ತಲುಪಿದವು.

ಪೋರ್ಚುಗೀಸರಿಂದ ಶೋಷಣೆ

ಕಾಂಗೋ ಕೆಳಭಾಗ ಮತ್ತು ಮೊಜಾಂಬಿಕ್‌ನ ಹಿನ್ನಾಡಿನಲ್ಲಿನ ರಾಜರನ್ನು ಪೋರ್ಚುಗೀಸ್ ರಾಜರ ಕ್ರೈಸ್ತ ಸಾಮಂತರುಗಳನ್ನಾಗಿ ಪರಿವರ್ತಿಸಿ, ದೇಶೀಯ ರಾಜರು ಮತ್ತು ಅವರ ವ್ಯಾಪಾರವನ್ನು ನಿಯಂತ್ರಿಸಲು ಪೋರ್ಚುಗೀಸರು ಪ್ರಯತ್ನಿಸಿದರು. ಪಶ್ಚಿಮದಲ್ಲಿ ಪೋರ್ಚುಗೀಸರು ರಾಜಕೀಯ ಹಾಗೂ ಧಾರ್ಮಿಕವಾಗಿ ಹಸ್ತಕ್ಷೇಪ ಮಾಡಿದ್ದು ಮತ್ತು ಅವರು ವಿದೇಶಿ ವ್ಯಾಪಾರವನ್ನು ಏಕಮಾನ್ಯ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ಬಂಟು ರಾಜ್ಯಗಳ ಮೇಲೆ ಒತ್ತಡ ಹೇರಿ ಅವರ ವ್ಯವಸ್ಥಿತ ರಾಜ್ಯಭಾರವನ್ನು ದುರ್ಬಲಗೊಳಿಸಿತು. ಪೂರ್ವದಲ್ಲಿ ಪೋರ್ಚುಗೀಸರು ಚಿನ್ನದ ವ್ಯಾಪಾರದಲ್ಲಿ ನಿರತರಾಗಿದ್ದರು ಮತ್ತು ಒಳನಾಡ ಮವಾನೆ ಮಟಾಪಗಳೊಂದಿಗೆ ಸಂಪರ್ಕ ಬೆಳೆಸಲು ಕಷ್ಟವಾಗಿದ್ದರಿಂದ ಮತ್ತು ಸರ್ಕಾರದ ದೌರ್ಬಲ್ಯ ಹೆಚ್ಚುತ್ತ ಬಂದದ್ದರಿಂದ ಬೇಸತ್ತಿದ್ದರು. ೧೭ ಮತ್ತು ೧೮ನೆಯ ಶತಮಾನದಲ್ಲಿ ಪೋರ್ಚುಗೀಸರು ಅಂಗೋಲ ಹಾಗೂ ಮೊಜಾಂಬಿಕ್‌ನ ತೀರ ಪ್ರದೇಶಗಳಲ್ಲಿ ನೇರ ಶೋಷಣೆಯನ್ನು ಮತ್ತೆ ಪ್ರಾರಂಭಿಸಿದರು. ಮೊಜಾಂಬಿಕ್‌ನಲ್ಲಿ ನೆಡುತೋಪು ಅರ್ಥ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಿದರು. ಅಂಗೋಲವನ್ನು ಲುಆಂಡಾ ಮತ್ತು ಬೆಂಗುವಲಾ ಬಂದರುಗಳ ಮೂಲಕ ಬಳಸಿಕೊಂಡರು. ೧೯ನೆಯ ಶತಮಾನದಲ್ಲಿ ಮಧ್ಯ ಆಫ್ರಿಕವು ಇನ್ನೂ ದಕ್ಷಿಣ ಭಾಗದಲ್ಲಿದ್ದ ಐರೋಪ್ಯ ನೆಲೆಗಳ ಪ್ರಭಾವಕ್ಕೆ ಒಳಗಾಗಲಾರಂಭಿಸಿತು. ಮೊದಲಿಗೆ ಭೂಮಿ ಕೊರತೆ ಇದ್ದಂತಹ ಬಂಟು ಜನರು ಉತ್ತರ ಭಾಗಗಳ ಮೇಲೆ ದಾಳಿ ಮಾಡಿ ಗೆದ್ದರು. ರೋಜ್ವಿ ರಾಜ್ಯವು ನಗೋನಿಗಳಿಂದ ನಾಶವಾಯಿತು. ಇವರು ಇನ್ನೂ ಮುಂದೆ ಹೋಗಿ ನೆಲೆಸಿದರು ಮತ್ತು ಮಾಲವಿಗಳ ಮೇಲೆ ದಾಳಿ ಮಾಡಿದರು. ಜಿಂಬಾವ್ವೆಯ ಶೋನಾಗಳ ಮೇಲೆ ಇತರ ಜುಲು ತುಂಡು ಗುಂಪಿನವರು ದಾಳಿ ಮಾಡಿದರು. ಮಜಿಲಿ ಕಾಜಿಗಳ ಅಡಿಯಲ್ಲಿ ನಡೆಬೆಲೆ ಅವರು ಬುಲವಾಯೋ ಸುತ್ತಮುತ್ತ ನೆಲೆಯೂರಿದರು. ಲೋಜಿ ರಾಜ್ಯವನ್ನು ದಕ್ಷಿಣ ಸೋತೋವಿನ ಒಂದು ಕವಲಾದ ಕೊಲಾಲೋ ಅವರು ಗೆದ್ದರು. ಎರಡನೆಯದಾಗಿ ಐರೋಪ್ಯ ಬೇಟೆಗಾರರು ವ್ಯಾಪಾರಗಳು, ಮಿಶನರಿಗಳು ಮತ್ತು ರಿಯಾಯಿತಿ ಅರಸುವವರು ಮಜಿಲಿಕೆ ಮತ್ತು ಅವರ ಉತ್ತರಾಧಿಕಾರಿಗಳಾದ ಲೊಬೆಂಗುಲ ಅವರು ಎಷ್ಟೇ ವಿರೋಧ ಒಡ್ಡಿದರೂ ಉತ್ತರದೆಡೆಗೆ ಮುನ್ನುಗ್ಗಿದರು. ಜಿಂಬಾವ್ವೆ ಹಾಗೂ ಅದರ ಚಿನ್ನದ ಗಣಿಗಳು ಕಾರ್ಲ್‌ಮೌಚ್, ಥಾಮಸ್ ಬೈನ್ ಫ್ರೆಡ್ರಿಕ್ ಸೆತಾನ್ ಮುಂತಾದವರ ಯಾತ್ರೆಗಳ ಮೂಲಕ ಹೊರಜಗತ್ತಿಗೆ ತಿಳಿದುಬಂದವು.

ದಕ್ಷಿಣ ಆಫ್ರಿಕಾ

ಲಿಂಪಾಪೋ ಮತ್ತು ಜಾಂಬೇಜಿ ಕಣಿವೆಯ ಬಂಟು ಭಾಷೆ ಮಾತನಾಡುವ ಜನರು ಕ್ರಿ.ಶ.೧೫ನೆಯ ಶತಮಾನದ ಹೊತ್ತಿಗೆ ವ್ಯವಸಾಯ ಹಾಗೂ ಕಬ್ಬಿಣ ಮತ್ತು ಚಿನ್ನದ ಗಣಿಗಾರಿಕೆ ಮಾಡುತ್ತಿದ್ದ ಮುಂದುವರೆದ ರಾಜ್ಯಗಳನ್ನು ಬೆಳೆಸಿದ್ದರು. ಈ ಜನರು ಸ್ಯಾನ್ ಬೇಟೆಗಾರರು ಹಾಗೂ ಗೋವಳರಾದ ಕೋಯ್‌ಕೊಯಿನ್ ಜನರು ವಾಸಿಸುತ್ತಿದ್ದ ದಕ್ಷಿಣದ ಪ್ರದೇಶಕ್ಕೆ ವಲಸೆ ಬಂದರು. ಬಂಟು ಮಾತನಾಡುವ ಜನರು ಫಲವತ್ತಾದ ಪೂರ್ವದ ತೀರಪ್ರದೇಶದಲ್ಲಿ ನೆಲೆಸಿದರು ಮತ್ತು ಅಳಿದುಳಿದ ಸಾನ್ ಜನರನ್ನು ಕಲಹರಿ ಮರುಭೂಮಿಯ ಕಡೆಗೆ ಪಶ್ಚಿಮಕ್ಕೆ ಅಟ್ಟಿದರು. ಕೊಯ್‌ಕೊಯಿನ್ ಜನಾಂಗದ ಬಹು ಪಾಲನ್ನು ಈ ಹೊಸಬರು ತಮ್ಮ ಸಮಾಜದೊಳಗೆ ವಿಲೀನ ಮಾಡಿಕೊಂಡರು. ಅಳಿದುಳಿದ ಅವರ ಬುಡಕಟ್ಟಿನ ಜನರು ಕೇಪ್ ಪ್ರಾಂತದ ಪಶ್ಚಿಮ ಭಾಗಕ್ಕೆ ಸೀಮಿತರಾಗಬೇಕಾಯಿತು. ಉಳಿದು ಬಂದಿರುವ ಪರಂಪರಾಗತ ಐತಿಹ್ಯಗಳಿಂದ ದಕ್ಷಿಣದ ಬಂಟು ಜನಾಂಗದ ಆರಂಭದ ಚರಿತ್ರೆ ಸುಲಭವಾಗಿ ತಿಳಿದುಬರುವುದಿಲ್ಲ. ಅವರು ಪ್ರವೇಶಿಸಿದ ಭೂಮಿ ಬಹಳ ವಿಶಾಲವಾಗಿದ್ದು ಬಲು ವಿರಳವಾಗಿ ಜನರು ವಾಸಿಸುತ್ತಿದ್ದುದರಿಂದ ಅವರು ಹರಡಿ ಹೋಗಿರುವ ಸಾಧ್ಯತೆ ಬಹಳ. ಪರಿಣಾಮವಾಗಿ ಬುಡಕಟ್ಟು ಜನರು ಸತತವಾಗಿ ಸಣ್ಣ ಗುಂಪುಗಳಾಗಿ ಚದುರಿ ಹೋದರು. ಹೀಗಿದ್ದರೂ ೧೮ನೆಯ ಶತಮಾನದ ಹೊತ್ತಿಗೆ ನಾವು ನಾಲ್ಕು ಪ್ರಧಾನ ವಿಧಾನಗಳನ್ನು ಕಾಣುತ್ತೇವೆ. ಉತ್ತರ ಟ್ರಾನ್ಸ್‌ವಾಲ್ ಮತ್ತು ದಕ್ಷಿಣ ರೊಡೇಷಿಯಾದಲ್ಲಿ ಲೆಂಬಾ ಮತ್ತು ವೆಂಡಾ ಗುಂಪುಗಳಿದ್ದುವು. ಬಹುಶಃ ಇವರು ಹಿಂದಿನ ಲಿಂಪಾಪೋ, ಜಾಂಬೇಜಿ ರಾಜ್ಯಗಳ ದಕ್ಷಿಣದಲ್ಲಿ ಉಳಿದುಬಂದ ಜನರಿರಬೇಕು. ಇನ್ನೂ ದಕ್ಷಿಣಕ್ಕೆ ಕೆಳಲಿಂಪಾಪೋ ಕಣಿವೆಯಲ್ಲಿ ಮತ್ತು ದಕ್ಷಿಣ ಮೊಜಾಂಬಿಕ್‌ನಲ್ಲಿ ಕೃಷಿಕ ಟಾಂಗಾಗಳಿದ್ದರು. ಇವರು ಬಹಳ ಹಿಂದೆಯೇ ನೆಲೆ ಊರಿದವರು. ಇದಕ್ಕೆ ದಕ್ಷಿಣದಲ್ಲಿ ಡ್ರಾಕೆನ್ಸ್ ಬರ್ಗ್‌ನ ಪೂರ್ವದ ಶ್ರೀಮಂತ ಕರಾವಳಿ ಬಯಲು ಪ್ರದೇಶದಲ್ಲಿ ಅನೇಕ ನುಗುನಿ ಗುಂಪಿನವರಿದ್ದರು. ಇನ್ನೂ ಪಶ್ಚಿಮಕ್ಕೆ ಹೋದರೆ ಸೋತೋ ಬುಡಕಟ್ಟಿನವರು ಮತ್ತು ಪೂರ್ವದ ಸೋತೋಗಳು ನುಗುನಿ ಜನಾಂಗದವರನ್ನು ತಮ್ಮಲ್ಲಿ ವಿಲೀನ ಮಾಡಿಕೊಂಡಿದ್ದರು. ಹಾಗೆಯೇ ಪಶ್ಚಿಮ ಸೋತೋ ಜನಾಂಗದವರು ಕೆಲವು ಸಾನ್ ಬುಡಕಟ್ಟಿನವರನ್ನು ತಮ್ಮಲ್ಲಿ ವಿಲೀನ ಮಾಡಿಕೊಂಡಿದ್ದರು.

ಐರೋಪ್ಯ ನೆಲೆಗಳು

ಕರಾವಳಿ ನಾಡಿನ ಜನರಲ್ಲಿ ಹೆಚ್ಚೇನೂ ವ್ಯಾಪಾರ ಸರಕಿರದ ಕಾರಣ ಮತ್ತು ಸುರಕ್ಷಿತವಾಗಿ ಲಂಗರು ಹಾಕುವುದಕ್ಕೆ ತಾಣಗಳು ಇರದಿದ್ದ ಕಾರಣದಿಂದಾಗಿ ೧೭ನೇ ಶತಮಾನದವರೆಗೆ ದಕ್ಷಿಣ ಆಫ್ರಿಕಾಕ್ಕೆ ಬಹಳ ಮಂದಿ ಐರೋಪ್ಯರು ಬಂದು ನೆಲಸಲಿಲ್ಲ. ಹೀಗಿದ್ದರೂ ೧೬೫೨ರಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿ ಜಾನ್‌ವಾನ್ ರೈಬೆಕ್‌ನ ನೇತೃತ್ವದಲ್ಲಿ ಒಂದು ಸಣ್ಣ ಸೈನಿಕ ತುಕಡಿಯನ್ನು ಕೇಪ್ ಜಂಬೂದ್ವೀಪಕ್ಕೆ ಕಳುಹಿಸಿತು. ಹೀಗಿದ್ದರೂ ಸದರಿ ಕಂಪನಿ ರೈತರು ಪ್ರತ್ಯೇಕವಾಗಿ ಕೇಪ್‌ನಲ್ಲಿ ನೆಲೆಸಲು ಉತ್ತೇಜಿಸಿತು. ಆರಂಭದಲ್ಲಿ ೧೬೮೮ರಲ್ಲಿ ವಲಸೆ ಬಂದವರು ಕೇವಲ ಡಚ್ ಜನರು. ತರುವಾಯ ಫ್ರೆಂಚ್ ಹ್ಯೂಗೋನಾಟ್‌ಗಳೂ ಬಂದು ನೆಲಸಿದರು. ೧೮ನೆಯ ಶತಮಾನದ ಹೊತ್ತಿಗೆ ಈ ನೆಲೆನಿಂತ ಜನ ತಮಗೆ ಕಂಪನಿಯವರು ವಹಿಸಿಕೊಟ್ಟ ಕೆಲಸದ ಬಗ್ಗೆ ಅತೃಪ್ತರಾಗಲಾರಂಭಿಸಿದರು. ಈ ಕುಟುಂಬಗಳವರ ಮಕ್ಕಳು ಕಂಪನಿ ಅಡಳಿತದಲ್ಲಿ ಅವಕಾಶಗಳು ಇಲ್ಲದಿರುವುದಕ್ಕೆ ಅಸಂತುಷ್ಟರಾಗಿ ಕೇಪ್ ಪ್ರದೇಶವನ್ನು ಬಿಟ್ಟರು ಮತ್ತು ಇನ್ನೂ ಒಳಕ್ಕೆ ಹೋಗಿ ಬೇಟೆ ಹಾಗೂ ಸ್ಥಳೀಯ ಜನರೊಂದಿಗೆ ವ್ಯಾಪಾರ ಮಾಡುತ್ತ ತಮ್ಮದೇ ಆದ ಹೊಸದೊಂದು ಸಾಮ್ರಾಜವನ್ನು ಕಟ್ಟಿದರು. ‘ಟ್ರೆಕ್ ಬೋರೆನ್’(ಅರೆ ಅಲೆಮಾರಿ ರೈತರು) ಎಂಬ ಸಮಾಜ ವಿಶಾಲವಾದದ್ದಾಗಿದ್ದು, ಗೋವಳ ಮೂಲದವರು ತಾವು ಮತ್ತು ದೇವರು ಇಬ್ಬರಲ್ಲಿ ಮಾತ್ರ ದೃಢವಾದ ನಂಬಿಕೆ ಉಳ್ಳವರಾಗಿದ್ದರು. ಈ ಪರಿಸ್ಥಿತಿಯಲ್ಲಿ ಕ್ಯಾಲ್ವಿನಿಸ್ಟ್ ಬೋಯಲ್‌ಗಳು ದಟ್ಟ ಅರಣ್ಯದಲ್ಲಿನ ದೇವರ ಮಕ್ಕಳು ಎಂದು ತಮ್ಮನ್ನು ಭಾವಿಸಲಾರಂಭಿಸಿದರು. ಮಳೆ ಚೆನ್ನಾಗಿ ಬೀಳುತ್ತಿದ್ದ ಪೂರ್ವ ಹಾಗೂ ಈಶಾನ್ಯದ ಭಾಗಗಳೆಡೆಗೆ ಈ ಬೋಯಲ್‌ಗಳು ವಿಸ್ತರಿಸಲಾರಂಭಿಸಿದರು. ಅಲ್ಲಲ್ಲಿ ಚದುರಿಹೋಗಿದ್ದ ಕೊಯ್‌ಕೊಯಿನ್ ಬುಡಕಟ್ಟಿನವರನ್ನೂ ಈ ಬೋಯಲ್‌ಗಳು ವಿಲೀನಗೊಳಿಸಿಕೊಳ್ಳಲಾರಂಭಿಸಿದರು. ಎದುರುಗಡೆಯಿಂದ ಮುಂದು ವರಿದು ಬರುತ್ತಿದ್ದ ಮತ್ತು ಕೊಯ್‌ಕೊಯಿನ್‌ಗಳಿಗಿಂತ ಹೆಚ್ಚು ಸಂಘಟಿತರಾಗಿದ್ದ ಬಂಟು ಜನಾಂಗದವರು ಬೋಯರ್‌ಗಳ ಜೊತೆ ಸಂಘರ್ಷಕ್ಕಿಳಿದರು. ತತ್ಪರಿಣಾಮವಾಗಿ ೧೭೭೯ರಲ್ಲಿ ಮೊದಲ ಕೇಪ್ ಗಡಿನಾಡ ಯುದ್ಧವು ಕೇಪ್ ವಸಾಹತಿನ ಪೂರ್ವ ಗಡಿನಾಡಿನುದ್ದಕ್ಕೂ ಪ್ರಾರಂಭ ವಾಯಿತು. ಕಾಲಾನುಕ್ರಮದಲ್ಲಿ ಗ್ರೇಟ್ ಬ್ರಿಟನ್ ಕೇಪ್ ಅನ್ನು ಆಕ್ರಮಿಸಿಕೊಂಡಿತು ಮತ್ತು ೧೮೧೪ರಲ್ಲಿ ಕೇಪ್ ಅನ್ನು ವಿಧ್ಯುಕ್ತವಾಗಿ ಗ್ರೇಟ್ ಬ್ರಿಟಿನ್‌ಗೆ ಬಿಟ್ಟು ಕೊಡ ಲಾಯಿತು. ಹೀಗೆ ಬಂಟು ಮಾತನಾಡುವ ಜನರು, ಬೋಯರ್‌ಗಳು ಮತ್ತು ಬ್ರಿಟಿಷರ ನಡುವಿನ ಸಂಘರ್ಷ ಪ್ರಧಾನವಾಯಿತು.

ಪೂರ್ವ ಆಫ್ರಿಕಾ

ಕ್ರಿ.ಶ.೧ನೆಯ ಶತಮಾನದ ಅನಾಮಧೇಯ ಗ್ರೀಕ್ ಕೃತಿ ‘ಪೆರಿಪ್ಲಸ್ ಮಾರಿಸ್ ಎರಿತ್ರೈ’ ನಲ್ಲಿ ಆಫ್ರಿಕಾದ ಪೂರ್ವತೀರಗಳ ಉಲ್ಲೇಖವಿದೆ. ಇದು (ಕ್ರಿ.ಶ.೨ನೆಯ ಶತಮಾನದ) ಭೂಗೋಳಶಾಸ್ತ್ರಜ್ಞ ಟಾಲೆಮಿಯ ಬರಹಗಳಲ್ಲಿ ದೃಢೀಕರಿಸಲ್ಪಟ್ಟಿದೆ. ಸೊಮಾಲಿಯಾದ (ಪೋರ್ಟ್‌ದುರ್ನ್, ಫೋರ್ಡ್) ಬಿರ್‌ಕಾವ್‌ನಲ್ಲಿ ರೋಮನ್ ನಾಣ್ಯಗಳು ಮತ್ತು ಮಸ್ತಾನಿ ಯಲ್ಲಿ ಈಜಿಪ್ಟ್ ವಂಶಾವಳಿಗಳ ನಾಣ್ಯಗಳು ದೊರೆತಿರುವ ಬಗ್ಗೆ ತಿಳಿದುಬಂದಿದೆ. ತೀರದುದ್ದಕ್ಕೂ ಕಂಡುಬಂದ ಕಲ್ಲಿನ ಕಲಾಕೃತಿಗಳು ಇಸ್ಲಾಂ ಪೂರ್ವದ ಕಾಲಕ್ಕೆ ಸೇರಿದ್ದು. ಪೂರ್ವ ಆಫ್ರಿಕಾವು ದಂತಕ್ಕಾಗಿ ಕಬ್ಬಿಣದ ಉಪಕರಣಗಳನ್ನು ವ್ಯಾಪಾರ ಮಾಡುತ್ತಿತ್ತು. ಆಫ್ರಿಕಾದಿಂದ ತಾಳೆ ಎಣ್ಣೆ, ಖಡ್ಗಮೃಗದ ಕೊಂಬು ಬರುತ್ತಿದ್ದವು. ಅರಬ್ಬರು ಈ ಸರಕುಗಳನ್ನು ಕೆಂಪು ಸಮುದ್ರ ಮಾರ್ಗದಲ್ಲಿ ಮೆಡಿಟರೇನಿಯನ್ ರಾಷ್ಟ್ರಗಳಿಗೆ ಅಲ್ಲಿಂದ ಅರೇಬಿಯಾ, ಪರ್ಷಿಯಾ ಮತ್ತು ಹಿಂದೂ ಮಹಾಸಾಗರ ದಾಟಿ ಭಾರತಕ್ಕೆ ಸಾಗಿಸುತ್ತಿದ್ದರು. ಈ ಆರಂಭದ ವ್ಯಾಪಾರದಲ್ಲಿ ಚೀನಿಯರೂ ಸೇರಿದ್ದರು. ಪೂರ್ವತೀರದ ದಾಖಲೆಗಳಲ್ಲಿ ಎಲ್ಲೂ ಗುಲಾಮ ವ್ಯಾಪಾರದ ಉಲ್ಲೇಖವಿಲ್ಲ. ಬಂಟೂ ಜನಾಂಗದವರು ಪೂರ್ವಕ್ಕೆ ವಿಸ್ತರಿಸುತ್ತ ಬಂದಂತೆ ಕಪ್ಪು ಗುಲಾಮರು ಹಿಂದೂ ಮಹಾಸಾಗರದ ಉದ್ದಕ್ಕೂ, ಒಂದು ವ್ಯಾಪಾರದ ವಸ್ತುವಾಗಿ ಪಟ್ಟಿಯಲ್ಲಿ ಸೇರಿದರು. ಮಡ್ಗಾಸ್ಕರ್‌ನಲ್ಲಿ ವಸಾಹತು ಹೂಡಿದ ಇಂಡೋನೇಷಿಯನ್ನರು ೮ನೇ ಶತಮಾನದಿಂದ ೧೨ನೆಯ ಶತಮಾನದವರೆಗೆ ವ್ಯಾಪಾರ ಮಾರ್ಗವನ್ನು ಹಿಂದೂ ಮಹಾಸಾಗರದ ಉದ್ದಕ್ಕೂ ವಾಣಿಜ್ಯ ಬೆಳೆದಂತೆ ಅರಬ್ಬರು ಪೂರ್ವ ಆಫ್ರಿಕಾದಲ್ಲಿ ನೆಲೆ ಊರುವುದೂ ಹೆಚ್ಚಾಯಿತು. ಈ ನೆಲೆಸುವಿಕೆ ೮ನೆಯ ಶತಮಾನ ದಿಂದ ಆರಂಭಗೊಂಡು ೧೩ರಿಂದ ೧೫ನೆಯ ಶತಮಾನದ ಹೊತ್ತಿಗೆ ಗರಿಷ್ಠ ಮಟ್ಟವನ್ನು ಮುಟ್ಟಿತು. ಪೂರ್ವ ಆಫ್ರಿಕಾ ಅರಬ್ ವ್ಯಾಪಾರದ ವಲಸಿಗರ ಒಂದು ಅಂಗ ಭಾಗವಾಗಿ ಹೋಯಿತು. ಹಿಂದೂ ಮಹಾಸಾಗರದುದ್ದಕ್ಕೆ ಮತ್ತು ಪೂರ್ವ ಆಫ್ರಿಕಾ ತೀರದುದ್ದಕ್ಕೆ ವ್ಯಾಪಾರ ಬೆಳೆದಂತೆ ನಗರ ಇಸ್ಲಾಮಿಕ್ ರಾಷ್ಟ್ರಗಳೂ ಬೆಳೆದವು. ಇವುಗಳಲ್ಲಿ ಬಹಳ ಮುಖ್ಯವಾದವುಗಳಲ್ಲಿ ಚಿನ್ನದ ವ್ಯಾಪಾರಕ್ಕಾಗಿ ಸ್ಥಾಪಿತವಾದ ಕಿಲ್ವಾ ಒಂದು.

ಕಿಲ್ವಾದ ಸರ್ವೋನ್ನತತೆ

ಆಧುನಿಕ ಟಾಂಜೇನಿಯಾದ ತೀರದಿಂದಾಚೆಗೆ ಇರುವ ಒಂದು ದ್ವೀಪವಾದ ಕಿಲ್ವಾ ಆರಂಭದ ಕಾಲದಲ್ಲಿ ಅರೇಬಿಯನ್ ಮೂಲದ ಒಂದು ಇಸ್ಲಾಮಿಕ್ ಸಂಸ್ಕೃತಿಗೆ ಸೇರಿತ್ತು. ಆಗ ಕರಾವಳಿಯ ಅನೇಕ ನಗರಗಳಲ್ಲಿ ಇಸ್ಲಾಂ ಸಂಸ್ಕೃತಿ ಹುಲುಸಾಗಿ ಬೆಳೆಯಿತು. ಕಿಲ್ವಾದ ರಾಜರುಗಳು ಇತರ ಕೆಲವು ನಗರಗಳ ಮೇಲೆ ಒಂದು ಸೀಮಿತ ಅವಧಿಯವರೆಗೆ ಒಂದು ಬಗೆಯ ಅಧಿಕಾರ ಚಲಾಯಿಸಿರುವ ಸಾಧ್ಯತೆ ಇದೆ. ಕೆಲವು ಅಂತರ್ಜಾತಿ ವಿವಾಹಗಳೂ ಆಗಿ, ಎರಡು ಬಗೆಯ ಜನಾಂಗದ ಸಂಸರ್ಗದಿಂದ ಒಂದು ಸಮ್ಮಿಶ್ರ ಅರಬ್ ಆಫ್ರಿಕಾ (ಸ್ವಾಹಿಲಿ) ಸಂಸ್ಕೃತಿ ಬೆಳೆಯಿತು. ಜಿಂಬಾವ್ವೆಯಿಂದ ಸೋಫಾಲಾಕ್ಕೆ (ಮೊಜಾಂಬಿಕ್ ತೀರದಲ್ಲಿ) ಬರುವ ಚಿನ್ನವನ್ನು ಕಿಲ್ವಾ ಬಹುಕಾಲ ನಿಯಂತ್ರಿಸುತ್ತಿತ್ತು. ಇದೇ ಕಿಲ್ವಾದ ಸರ್ವೋನ್ನತೆಗೆ ಕಾರಣ. ಹೀಗಿದ್ದರೂ ಪೂರ್ವ ಆಫ್ರಿಕಾದ ವ್ಯಾಪಾರ ಇನ್ನೂ ವೈವಿಧ್ಯಮಯ ಸರಕುಗಳನ್ನು ಹೊಂದಿತ್ತು. ಅದರಲ್ಲಿ ದಂತ ಹಾಗೂ ಗುಲಾಮರೂ ಸೇರಿದ್ದರು. ಅವರು ಸಂಸರ್ಗಿಸುತ್ತಿದ್ದ ಪ್ರಮುಖ ರಾಷ್ಟ್ರಗಳೆಂದರೆ ಅರೇಬಿಯಾ ಮತ್ತು ಭಾರತ. ಈ ರಾಷ್ಟ್ರಗಳೂ ಪೂರ್ವ ಕರಾವಳಿಯ ಸಾಂಸ್ಕೃತಿಕ ಅಭಿವೃದ್ದಿಯ ಮೇಲೆ ಪ್ರಭಾವ ಬೀರಿದವು. ಎರಡು ಚೀನಿ ಅನ್ವೇಷಕ ತಂಡಗಳು ಅಂದರೆ ಒಂದು ೧೪೧೭-೧೮೧೯ರ ನಡುವೆ ಹೊರಟು ಮಾಲಿಂದಿ ತಲುಪಿತು ಮತ್ತು ಇನ್ನೊಂದು ೧೪೨೧-೧೪೨೨ರಲ್ಲಿ ಪ್ರಯಾಣ ಹೊರಟು ಸೋಮಾಲಿ ತೀರದ ಬ್ರಾವ ಮತ್ತು ಮೊಗಡಿಷುವಿನಷ್ಟು ದಕ್ಷಿಣಕ್ಕೆ ಪ್ರಯಾಣ ಮಾಡಿದವು.

ಪೋರ್ಚುಗೀಸ್ ನೆಲೆಗಳು

ಕಿಲ್ವಾದ ಅವನತಿಯ ಪರಿಣಾಮವಾಗಿ ೧೫ನೇ ಶತಮಾನದಲ್ಲಿ ಬಂದ ಪೋರ್ಚುಗೀಸರು ಕರಾವಳಿಯ ಉದ್ದಕ್ಕೂ ನೆಲೆಗಳು ಮತ್ತು ಕೋಟೆಗಳನ್ನು ಸ್ಥಾಪಿಸಿದರು. ಕಾಲಕ್ರಮದಲ್ಲಿ ಮೊಂಬಾಸ ಪೋರ್ಚುಗೀಸರನ್ನು ಪ್ರತಿಭಟಿಸುವ ಕೇಂದ್ರವಾಯಿತು. ೧೫೨೯ರಲ್ಲಿ ಪೋರ್ಚು ಗೀಸರು ಮೊಂಬಾಸದ ಮೇಲೆ ದಾಳಿ ಮಾಡಿದರು. ಪೋರ್ಚುಗೀಸರು ಮೊಜಾಂಬಿಕ್, ಸೋಫಾಲ್, ಜಾಂಜಿಬಾರ್, ಪೆಂಬಾ ಮತ್ತು ಮಾಲಿಂದಿಗಳನ್ನು ಪೂರ್ವ ಕಡಲ ತೀರದಲ್ಲಿ ವಶಪಡಿಸಿಕೊಂಡರು. ಚಿನ್ನದ ವ್ಯಾಪಾರ ತರುವಾಯ ಕಿಲ್ವಾದವರ ಕೈನಿಂದ ಪೋರ್ಚುಗೀಸರ ಕೈಗೆ ೧೫ನೇ ಶತಮಾನದಲ್ಲಿ ಬದಲಾಯಿತು. ಈ ಪ್ರದೇಶಗಳ ಆಳ್ವಿಕೆಯನ್ನು ಸ್ಥಳೀಯ ರಾಜರ ಸಹಾಯದೊಂದಿಗೆ ಮಾಡಲಾಯಿತು. ೧೫೮೫ರಲ್ಲಿ ಪೂರ್ವ ಕರಾವಳಿಯನ್ನು ತುರುಷ್ಕ ಸೇನಾನಿ ಮಿರಾಲೆಬೇ ದಾಳಿ ಮಾಡಿದನು. ೧೫೮೯ರಲ್ಲಿ ಅವನು ಮೊಂಬಾಸವನ್ನು ವಶಪಡಿಸಿಕೊಂಡನು. ಆದರೆ ಪೋರ್ಚುಗೀಸರು ಅವನ ಮೇಲೆ ದಾಳಿ ಮಾಡಿದರು. ಮಿರಾಲೆಬೇ ಪೋರ್ಚುಗೀಸರಿಗೆ ಶರಣಾದನು. ಆದರೆ ಆ ನಗರವನ್ನು ಜಿಂಬಾ ಬುಡಕಟ್ಟಿನವರು ನಾಶಪಡಿಸಿದರು. ಕಾಂಗೋದ ಮೇಲ್ಭಾಗದಿಂದ ಬಂದ ಜಿಂಬಾಗಳು ಬಲು ವಿನಾಶಕಾರಿ ದಳಗಳೊಂದಿಗೆ ಆಗಮಿಸಿದರು. ೧೫೮೭ರಲ್ಲಿ ಅವರು ಕಿಲ್ವಾವನ್ನು ಸೂರೆ ಗೈದರು. ಪೋರ್ಚುಗೀಸರು ಮಿರಾಲೆಬೆಯೊಡನೆ ಕಾದಾಡುತ್ತಿದ್ದಾಗ ಮೊಂಬಾಸದ ಮೇಲೂ ದಾಳಿ ಮಾಡಿದರು. ಸ್ಥಳೀಯ ಜನರ ನೆವಿಗೆ ಬಂದ ಸಗೇಜು ಬುಡಕಟ್ಟಿನ ಜನರು ಜಿಂಬಾಗಳ ನಾಮಾವಶೇಷ ಮಾಡಿದರು. ಹೀಗೆ ಜಿಂಬಾ ಪೂರ್ಣವಾಗಿ ಮಾಯವಾಯಿತು. ಸಗೇಜು ಮೊಂಬಾಸಕ್ಕೆ ತೆರಳಿ ಅದನ್ನು ೧೫೯೨ರಲ್ಲಿ ವಶಪಡಿಸಿಕೊಂಡು ತನ್ನ ಮಿತ್ರ ಮಾಲಿಂದಿಯ ಸುಲ್ತಾನನಿಗೆ ಕೊಟ್ಟಿತು. ಆತ ಅದನ್ನು ಪೋರ್ಚುಗೀಸರಿಗೆ ಇತ್ತನು. ೧೫೯೨ರಲ್ಲಿ ಅವರು ಅಲ್ಲಿ ಪೋರ್ಡ್ ಜೀಸಸ್ ಕಟ್ಟಲು ಪ್ರಾರಂಭಿಸಿದನು. ೧೬೩೧ರಲ್ಲಿ ಮೊಂಬಾಸಾದ ಸುಲ್ತಾನ ತನ್ನ ತಂದೆಯನ್ನು ಪೋರ್ಚುಗೀಸರ ಪ್ರಚೋದನೆಯಿಂದ ಕೊಲೆ ಮಾಡಿದ್ದರಿಂದ ತನ್ನ ಮಾಜಿ ಮಿತ್ರರ ವಿರುದ್ದ ದಂಗೆ ಎದ್ದನು. ಅವನನ್ನು ಶೀಘ್ರವೇ ನಗರದಿಂದ ಹೊಡೆದಟ್ಟಿದನು. ಅವನು ಆಗಾಗ್ಗೆ ಪೋರ್ಚುಗೀಸರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದನು. ಇದು ಅವರ ಅಧಿಕಾರಕ್ಕೆ ಬಲವಾದ ಪೆಟ್ಟು ನೀಡಿತು ಮತ್ತು ಅನೇಕ ನಗರಗಳು ಮೊಂಬಾಸಾದ ದಾರಿಯನ್ನೇ ಅನುಸರಿಸಿದವು. ಬಹಳ ಗಂಭೀರವಾದ ದಾಳಿ ನಡೆದದ್ದು ೧೬೯೬ರಲ್ಲಿ. ಆಗ ಅರೇಬಿಯನ್ ಜಂಬೂದ್ವೀಪದಲ್ಲಿನ ಒಮಾನ್‌ನ ಸೇನೆ ಯೊಂದು ಮೊಂಬಾಸಾವನ್ನು ಮುತ್ತಿಗೆ ಹಾಕಿತು. ಮೂರು ವರ್ಷಗಳ ತರುವಾಯ ಮೊಂಬಾಸಾ ಮತ್ತಿತರ ಕಡಲ ತೀರದ ಪಟ್ಟಣಗಳು ಅವರ ನೇರ ಆಳ್ವಿಕೆಗೆ ಒಳಪಟ್ಟವು. ೧೭೨೮ರಲ್ಲಿ ಒಮಾನ್‌ನ ಸುಲ್ತಾನನು ತನ್ನ ರಾಜ್ಯದಲ್ಲಿ ಕಾರ್ಯ ನಿರತನಾಗಿದ್ದುದರ ಲಾಭ ಪಡೆದುಕೊಂಡು ಬೊಂಬಾಸವನ್ನು ಪೋರ್ಚುಗೀಸರು ವಶಪಡಿಸಿಕೊಂಡರು. ಆದರೆ ಅವರು ಅದನ್ನು ಕೇವಲ ಒಂದು ವರ್ಷದ ಕಾಲ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸಾಧ್ಯವಾಯಿತು. ಪೋರ್ಚುಗೀಸರು ಮೊಜಾಂಬಿಕ್ ಮತ್ತು ಸೋಫಾಲ್‌ನ ಕೋಟೆಗಳನ್ನು ನೋಡಿಕೊಳ್ಳುವುದಕ್ಕಷ್ಟೇ ತೃಪ್ತಿಪಡಬೇಕಾಯಿತು. ಆದರೆ ರುವುಮಾ ನದಿಯ ಉತ್ತರದಲ್ಲಿನ ಅವರ ಆಧಿಪತ್ಯ ಅಂತ್ಯವಾಯಿತು. ಮೊಂಬಾಸದಲ್ಲಿ ಮಜ್ ರುಯಿ ಕುಟುಂಬವು ತನ್ನ ಅಧಿಪತ್ಯ ಸ್ಥಾಪಿಸಿತು. ಕಿಲ್ವಾ ಕೂಡ ಒಮಾನ್‌ನ ಅಧಿಪತ್ಯವನ್ನು ನಿರಾಕರಿಸಿತು. ೧೭೭೦ರಲ್ಲಿ ಗುಲಾಮರನ್ನು ಅರಸಿಬಂದ ಫ್ರೆಂಚರು ಕಿಲ್ವಾದ ಸುಲ್ತಾನನೊಂದಿಗೆ ವ್ಯವಹಾರ ಮಾತುಕತೆ ನಡೆಸಿದರು. ಮತ್ತೆ ಆಚರಣೆಗೆ ಬಂದ ಈ ಗುಲಾಮ ವ್ಯಾಪಾರ ೧೯ನೇ ಶತಮಾನದ ಹೊತ್ತಿಗೆ ಬೃಹತ್ ಗಾತ್ರವನ್ನು ತಲುಪಿತು. ಕಿಲ್ವಾದ ಮಹತ್ವ ಏರುತ್ತ ಬಂದಂತೆ ಅದು ೧೭೮೦ರಲ್ಲಿ ಒಮಾನ್‌ನ ಸುಲ್ತಾನನಿಗೆ ನಿಷ್ಠೆಯಿಂದಿದ್ದಿತು ಮತ್ತು ಒಮಾನ್‌ನ ಸುಲ್ತಾನನ ಹೊಸ ಕಾರ್ಯಕೇಂದ್ರವಾಯಿತು. ೧೯ನೆಯ ಶತಮಾನದ ಆದಿಭಾಗದಲ್ಲಿ ಬ್ರಿಟಿಷರು ಗುಲಾಮಗಿರಿ ವಿರುದ್ಧ ಸಮರ ಸಾರಿ ಪೂರ್ವದ ತೀರಕ್ಕೆ ಆಗಮಿಸಿದರು. ಇದು ಕರಾವಳಿ ಪ್ರದೇಶದಲ್ಲಿ ಜರುಗಿದ ಒಂದು ಮಹತ್ವದ ಘಟನೆ. ೧೮೪೧ರಲ್ಲಿ ಒಬ್ಬ ಬ್ರಿಟಿಷ್ ಕೌನ್ಸಿಲ್‌ನನ್ನು ಜಾಂಜಿಬಾರ್‌ನಲ್ಲಿ ನೇಮಿಸಲಾಯಿತು. ೧೮೫೬ರ ತರುವಾಯ ಫ್ರಾನ್ಸ್ ಗುಲಾಮ ವ್ಯಾಪಾರವನ್ನು ಕೈಬಿಟ್ಟಿತ್ತು ಮತ್ತು ಜಾಂಜಿಬಾರ್‌ನ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಿತು. ೧೮೭೩ರಲ್ಲಿ ಬ್ರಿಟಿಷರು, ಸುಲ್ತಾನನು ಗುಲಾಮ ವ್ಯಾಪಾರವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದಾಗ ಆತ ತನ್ನ ಪ್ರಜೆಗಳ ವಿರುದ್ಧ ಬ್ರಿಟಿಷ್ ಬೆಂಬಲವನ್ನು ಪೂರ್ಣವಾಗಿ ಅವಲಂಬಿಸಿ ಉಳಿಯಬೇಕಾಯಿತು.

ಐರೋಪ್ಯರ ಪ್ರಭಾವ

೧೪೬೭ ಮತ್ತು ೧೪೯೪ರ ನಡುವೆ ಪೋರ್ಚುಗೀಸರು ಸಿಯಾರಾಲಿಯೇನ್, ಪರ್ನಾಡೋಪೋ, ಕೇಪ್ ಸೈಂಟ್ ಕ್ಯಾಥರಿನ್ ಮತ್ತು ಕಾಂಗೋಗಳವರೆಗೆ ದಕ್ಷಿಣದ ಪ್ರದೇಶಗಳನ್ನು ಪತ್ತೆ ಮಾಡಿದಂದಿನಿಂದ ೧೫ನೆಯ ಶತಮಾನದಲ್ಲಿ ಆಫ್ರಿಕಾದ ಮೇಲೆ ಐರೋಪ್ಯದ ಪ್ರಭಾವ ಪ್ರಾರಂಭವಾಯಿತು. ೧೪೮೭ರಲ್ಲಿ ಬಾರ್ತಲೋಮಿಯಾ ಡೈಯಾಸನು ಕೇಪ್ ಆಫ್ ಗುಡ್‌ಹೋಪ್ ಅನ್ನು ಕಂಡುಹಿಡಿದನು. ೧೪೯೭ರಲ್ಲಿ ವಾಸ್ಕೋಡಿಗಾಮಾ ಭಾರತಕ್ಕೆ ಕೇಪ್ ಮಾರ್ಗವನ್ನು ಕಂಡುಹಿಡಿದನು. ಪೋರ್ಚುಗೀಸರು ಇನ್ನೂ ಒಳಕ್ಕೆ ಪ್ರಯಾಣ ಬೆಳಸಿ ೧೬ ಮತ್ತು ೧೭ನೆಯ ಶತಮಾನದಲ್ಲಿ ಪೂರ್ವದ ಕಡಲ ತೀರದಲ್ಲಿ ನೆಲೆಸಿದರು. ೧೭ನೆಯ ಶತಮಾನದಲ್ಲಿ ಫ್ರೆಂಚರು ಗಾಂಬಿಯಾ ನದಿಗೆ ಹಡಗುಗಳನ್ನು ಕಳುಹಿಸಿದರು ಮತ್ತು ೧೮ನೆಯ ಶತಮಾನದ ಆದಿಭಾಗದ ಹೊತ್ತಿಗೆ ಸೆನೆಗಲ್ ನಾಡಿನವರೆಗೆ ಕಳುಹಿಸಿದರು. ೧೭೯೫, ೧೭೯೬ ಮತ್ತು ೧೮೦೫ರಲ್ಲಿ ಡಚ್ಚರು ಮತ್ತು ಬ್ರಿಟಿಷರು ಅನ್ವೇಷಣೆಯನ್ನು ಪ್ರಾರಂಭಿಸಿದರು. ೧೯ನೆಯ ಶತಮಾನದ ಮಧ್ಯಭಾಗದ ಹೊತ್ತಿಗೆ ಇಥಿಯೋಪಿಯಾ, ನೈಲ್ ಕಣಿವೆ ಮೇಲುಭಾಗ, ಉತ್ತರ ಆಫ್ರಿಕಾ ಮತ್ತು ದಕ್ಷಿಣ ಆಫ್ರಿಕಾದವರೆಗೆ ಅನ್ವೇಷಣೆ ಮಾಡಲಾಯಿತು. ಆರಂಭದ ವಾಣಿಜ್ಯ ಸಂಪರ್ಕವೇನಿದ್ದರೂ ಗುಲಾಮ ವ್ಯಾಪಾರದ ಮೇಲೆ ಕೇಂದ್ರೀಕೃತವಾಗಿತ್ತು. ೧೭ನೆಯ ಶತಮಾನದಿಂದೀಚೆಗೆ ಕೂಲಿ ಗುಲಾಮರಿಗೆ ಅಮೆರಿಕದ ನೆಡುತೋಪುಗಳಲ್ಲಿ ಬಹಳ ಬೇಡಿಕೆ ಬಂದದ್ದರಿಂದ ಆಫ್ರಿಕಾದ ವ್ಯಾಪಾರ ವಾಣಿಜ್ಯಕ್ಕೆ ಒಂದು ಹೊಸ ಆಯಾಮ ಬಂದಿತು. ೧೮ನೆಯ ಶತಮಾನವು ಮಧ್ಯ, ಪೂರ್ವ ಹಾಗೂ ಪಶ್ಚಿಮ ಆಫ್ರಿಕಾಗಳಿಂದ ಗುಲಾಮ ವ್ಯಾಪಾರದ ಅಂತಿಮಘಟ್ಟ ಆಗಿತ್ತು. ಆದರೆ ಈ ವ್ಯಾಪಾರದಿಂದ ಜನಸಂಖ್ಯೆ ಇಲ್ಲವಾಗುವುದಾಗಲಿ ಮತ್ತು ರಾಜಕೀಯ ಗೊಂದಲವಾಗುವುದಾಗಲಿ ಆಗಲಿಲ್ಲ. ಅಂಗೋಲವು ಗುಲಾಮರ ಸರಬರಾಜು ಮಾಡುತ್ತಿದ್ದ ಮುಖ್ಯ ಪ್ರದೇಶ. ಆದರೆ ಕಾಂಗೋರಾಜ್ಯ ಒಂದು ರಾಜಕೀಯ ಅಖಂಡ ಪ್ರದೇಶವಾಗಿರುವುದು ಅಂತ್ಯವಾಯಿತು. ಗುಲಾಮ ಯುದ್ಧಗಳು ಮತ್ತು ಅದರಿಂದ ಉಂಟಾದ ಪರಸ್ಪರ ನಾಮಾವಶೇಷಗೊಳಿಸುವ ಕಲಹಗಳನ್ನು ಪೋರ್ಚುಗೀಸರು ಉತ್ತೇಜಿಸಿದ್ದೇ ಇದಕ್ಕೆ ಮುಖ್ಯ ಕಾರಣ. ಪೋರ್ಚುಗೀಸರೊಂದಿಗಿನ ಸಂಪರ್ಕದಿಂದ ಲುಂಬ ಮತ್ತು ಲುಂಡ ರಾಜ್ಯಗಳು ದಂತ ಹಾಗೂ ಸ್ವಲ್ಪಮಟ್ಟಿಗೆ ಗುಲಾಮರ ವಿನಿಮಯದಿಂದ ಬಂೂಕು ಹಾಗೂ ಮದ್ದು ಗುಂಡುಗಳನ್ನು ಪಡೆದುಕೊಂಡವು. ಪೋರ್ಚುಗೀಸರು ಇನ್ನೂ ಒಳ ಭಾಗಗಳಿಗೆ ಪ್ರವೇಶಿಸಿ ೧೫೬೦ರಲ್ಲಿ ಮಾನೋಮಟಾಪದ ಮೇಲೆ ನಿಯಂತ್ರಣವನ್ನು ಸ್ಥಾಪಿಸಿದರು. ಆದರೆ ಚಂಗಮೈರ್‌ಗಳು ೧೬೯೩-೧೬೯೫ರಲ್ಲಿ ಮಾನೋಮಡಾಪ ಮತ್ತು ಪೋರ್ಚುಗೀಸರನ್ನು ಕರಾವಳಿ ತೀರಕ್ಕೆ ಅಟ್ಟಿದರು. ಇನ್ನೂ ಉತ್ತರಕ್ಕೆ ಮೂಲತಃ ಜಾಂಬಿಬಾರ್‌ನಲ್ಲಿ ನೆಲೆಸಿ, ಗುಲಾಮ ವ್ಯಾಪಾರ ಮುಖ್ಯಭೂಮಿಯ ದೇಶಿ ಆಫ್ರಿಕನ್ನರ ಕೈಯಲ್ಲೇ ಇದ್ದರೂ ಅದಕ್ಕೆ ಆರಂಭದ ವಿದೇಶಿ ಸಂಪರ್ಕವನ್ನು ಒದಗಿಸಿದರು.

ಇಲ್ಲಿ ಗುಲಾಮ ವ್ಯಾಪರವು ದಂತದ ವ್ಯಾಪಾರದೊಂದಿಗೆ ಹೆಣೆದುಕೊಂಡಿತ್ತು. ಇದೇ ರೀತಿ ಪಶ್ಚಿಮ ಆಫ್ರಿಕಾದಲ್ಲಿ ಗುಲಾಮ ವ್ಯಾಪಾರ ಬಂದೂಕು ಮತ್ತು ಚಿನ್ನದ ವ್ಯಾಪಾರಗಳೊಂದಿಗೆ ಸಂಬಂಧಿತವಾಗಿತ್ತು. ೧೯ನೆಯ ಶತಮಾನದಲ್ಲಿ ಗುಲಾಮ ವ್ಯಾಪಾರ ಅಂತ್ಯಗೊಂಡದ್ದರಿಂದ ಸಕ್ರಮವಾದ ನ್ಯಾಯಯುತ ವ್ಯಾಪಾರ ವಾಣಿಜ್ಯಕ್ಕೆ ನಾಂದಿಯಾಯಿತು. ಈ ಅವಧಿಯಲ್ಲಿ ಐರೋಪ್ಯ ಕೈಗಾರಿಕೆಗಳ ಬೇಡಿಕೆಗೆ ನೇರ ಪ್ರಕ್ರಿಯೆಗಾಗಿ ಆಫ್ರಿಕಾದ ಆರ್ಥಿಕ ಚಟುವಟಿಕೆ ಬೆಳೆಯಿತು.

 

ಪರಾಮರ್ಶನ ಗ್ರಂಥ

೧. ಚೇಂಬರ್ಲಿನ್ ಎಂ.ಇ., ೧೯೭೪. ದಿ ಸ್ಕ್ರಾಂಬಲ್ ಫಾರ್ ಆಫ್ರಿಕಾ, ಲಂಡನ್: ಲಾಂಗ್‌ಮೇನ್ ಗ್ರೂಪ್ ಲಿಮಿಟೆಡ್.

೨. ಜೋನ್ ಪ್ಲಿಂಡ್(ಸಂ), ೧೯೭೫. ದಿ ಕೇಂಬ್ರಿಡ್ಜ್ ಹಿಸ್ಟರಿ ಆಫ್ ಆಫ್ರಿಕಾ, ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್.

೩. ಬೆಸಿಲ್ ಡೇವಿಡ್ಸನ್, ೧೯೭೩. ವಿಚ್ ವೇ ಆಫ್ರಿಕಾ?,  ಮೂರನೆಯ ಮುದ್ರಣ, ಲಂಡನ್: ಪೆಂಗ್ವಿನ್ ಬುಕ್ಸ್.