ಪೂರ್ವ ಆಫ್ರಿಕಾ

ಪಶ್ಚಿಮ ಆಫ್ರಿಕಾದಂತೆ ಪೂರ್ವ ಆಫ್ರಿಕಾದಲ್ಲೂ ಯುರೋಪಿನ ರಾಷ್ಟ್ರಗಳು ತಮ್ಮ ವ್ಯಾಪಾರಕ್ಕೆ ಭವ್ಯವಾದ ನೆಲೆಗಳನ್ನು ಕಂಡುಹಿಡಿಯುವ ಕಾರ್ಯದಲ್ಲಿ ತೊಡಗಿದವು. ಬ್ರಿಟನ್, ಜರ್ಮನಿ, ಸ್ಪ್ಯೆನ್, ಇಟಲಿ ಮತ್ತು ಫ್ರಾನ್ಸ್ ಪೂರ್ವ ಕರಾವಳಿಯುದ್ದಕ್ಕೂ ತಮ್ಮ ಪ್ರಭಾವಿ ನೆಲೆಗಳನ್ನು ಸ್ಥಾಪಿಸಿಕೊಂಡವು. ಆಫ್ರಿಕಾದ ಪೂರ್ವಕರಾವಳಿ ಭಾರತದೊಡನೆ ಸಂಪರ್ಕವನ್ನು ಇಟ್ಟುಕೊಂಡಿತ್ತು. ಯುರೋಪಿಯನ್ನರು ಕೇಪ್ ಹಾದಿಯ ಮೂಲಕ ಭಾರತಕ್ಕೆ ಬರಬೇಕಾಗಿತ್ತು. ಸುಯೇಜ್ ಕಾಲುವೆಯ ಕಾಮಗಾರಿ ಮುಗಿಯುವಲ್ಲಿಯವರೆಗೆ ಅಂದರೆ ೧೮೬೯ರವರೆಗೆ ಕೇಪ್ ಮಾರ್ಗವೇ ಪ್ರಮುಖ ಸಮುದ್ರ ಮಾರ್ಗವಾಗಿತ್ತು. ಬ್ರಿಟನ್ನಿನ ಪಶ್ಚಿಮ ಆಫ್ರಿಕಾದಲ್ಲಿದ್ದಷ್ಟು ವ್ಯಾಪಾರ ಸಂಪರ್ಕ ಪೂರ್ವ ಅಫ್ರಿಕಾದಲ್ಲಿ ಇರಲಿಲ್ಲ. ೧೮೭೩ರಲ್ಲಿ ಬ್ರಿಟನ್ ಜಾನ್ ಸಿಬಾರ್‌ನ ಸುಲ್ತಾನನೊಡೆನೆ ಒಡಂಬಡಿಕೆಯನ್ನು ಏರ್ಪಡಿಸಿಕೊಂಡಿತು. ಸುಲ್ತಾನನಿಗೆ ಸೈನಿಕ ಸಹಾಯವನ್ನು ನೀಡಿ ಆತನನ್ನು ತಮ್ಮ ಕಕ್ಷೆಗೆ ತರುವಲ್ಲಿ ಬ್ರಿಟನ್ ಸಫಲವಾಯಿತು. ಕಿಲಿಮಾಂಜರೋ ಪರ್ವತದ ಸುತ್ತಲಿನ ಪ್ರದೇಶ ಮತ್ತು ಬುಗಾಂಡಾವನ್ನು ತಮ್ಮ ಸ್ವಾಧೀನಕ್ಕೆ ತರಲು ೧೮೭೭ರಲ್ಲಿ ಬ್ರಿಟನ್ ಯೋಜನೆಯೊಂದನ್ನು ರೂಪಿಸಿತು. ಈ ಯೋಜನೆಯ ಪ್ರಕಾರ ಸುಲ್ತಾನನ ಹೆಸರಿನಲ್ಲಿ ಎಲ್ಲಾ ಪ್ರದೇಶಗಳನ್ನು ತಾವೇ ನೋಡಿಕೊಳ್ಳುವುದಾಗಿತ್ತು. ಆದರೆ ಈ ಯೋಜನೆ ಕಾರ್ಯಗತವಾಗಲಿಲ್ಲ. ಇದರಿಂದಾಗಿ ಬ್ರಿಟನ್ನಿನ ವಿದೇಶ ಕಾರ್ಯದರ್ಶಿ ಲಾರ್ಡ್ ್ಯಾಲಿಸ್ ಬ್ಯೂರಿ ಮತ್ತು ವಿಲ್ಯಮ್ ಗ್ಲಾಡ್ ಸ್ಟೋನ್ ಅವರಿಗೆ ಮುಖಭಂಗವಾದಂತಾಯಿತು. ಪೂರ್ವ ಆಫ್ರಿಕಾದಲ್ಲಿ ಸಾಮ್ರಾಜ್ಯ ವಿಸ್ತರಣೆಯ ಧೋರಣೆಯನ್ನು ಗ್ಲಾಡ್‌ಸ್ಟೋನ್ ಬಲವಾಗಿ ವಿರೋಧಿಸಿದ. ಏಕೆಂದರೆ ಇದರಿಂದ ಆರ್ಥಿಕ ಲಾಭ ಇರಲಿಲ್ಲ ಮತ್ತು ಜರ್ಮನಿ ಬ್ರಿಟನ್ನಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಪೂರ್ವ ಆಫ್ರಿಕಾದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಪೂರ್ವ ಆಫ್ರಿಕಾದಲ್ಲಿದ್ದ ಬ್ರಿಟನ್ನಿನ ವ್ಯಾಪಾರಸ್ಥರ ಹಿತಾಸಕ್ತಿಗಳನ್ನು ಕಾಪಾಡುವುದೂ ಬ್ರಿಟಿಷ್ ಸರಕಾರಕ್ಕೆ ಆರ್ಥಿಕವಾಗಿ ಹೊರೆಯೇ ಆಗಿತ್ತು.

ಜರ್ಮನಿ ಜಾನ್ ಸಿಬಾರ್‌ನ ಸುಲ್ತಾನನೊಡನೆ ಮಾತುಕತೆ ನಡೆಸಿ ವ್ಯಾಪಾರದ ಸವಲತ್ತುಗಳನ್ನು ಪಡೆದುಕೊಂಡಿತು. ಜರ್ಮನಿಯ ಅನ್ವೇಷಕ ಕಾರ್ಲ್‌ಪೀಟರ್ ಪೂರ್ವ ಆಫ್ರಿಕಾಕ್ಕೆ ತೆರಳಿ ಅಲ್ಲಿನ ಸ್ಥಳೀಯ ನಾಯಕರೊಡನೆ ಒಪ್ಪಂದಗಳನ್ನು ಏರ್ಪಡಿಸಿಕೊಂಡ. ಇದರಿಂದ ಕಳವಳಗೊಂಡ ಬ್ರಿಟಿಷ್ ವ್ಯಾಪಾರಸ್ಥರು ರಕ್ಷಣೆಗಾಗಿ ಸರಕಾರದ ಮೇಲೆ ಒತ್ತಡವನ್ನು ತಂದರು. ಸುಲ್ತಾನನ ಅಧಿಕಾರವನ್ನು ಮೊಟಕುಗೊಳಿಸಲು ೧೮೮೫ರಲ್ಲಿ ಬ್ರಿಟನ್, ಜರ್ಮನಿ ಮತ್ತು ಫ್ರಾನ್ಸ್ ರಾಷ್ಟ್ರಗಳು ಯೋಜನೆಯೊಂದನ್ನು ರೂಪಿಸಿದವು. ೧೮೬೬ರಲ್ಲಿ ಸುಲ್ತಾನ್ ಮೈತ್ರಿಕೂಟವನ್ನು ವಿಶ್ವಾಸಕ್ಕೆ ತೆಗೆದುಕೊಂಡು ತನ್ನ ಸಾಮ್ರಾಜ್ಯದ ಗಡಿರೇಖೆಗಳನ್ನು ಪುನರ್‌ರಚಿಸಲು ಒಪ್ಪಿಕೊಂಡ. ಅದೇ ರೀತಿ ಕರಾವಳಿ ಪ್ರದೇಶವನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡ ಕೀನ್ಸಾ ಮತ್ತು ಉಗಾಂಡವನ್ನು ಬ್ರಿಟನ್ನಿಗೆ ಮತ್ತು ಟಾಂಗಾನ್ಯಕಾವನ್ನು ಜರ್ಮನಿಯ ಸ್ವಾಧೀನಕ್ಕೆ ಬಿಟ್ಟುಕೊಡಲಾಯಿತು. ಬ್ರಿಟಿಷ್ ಈಸ್ಟ್ ಆಫ್ರಿಕಾ ಕಂಪೆನಿಯು ೧೮೮೮ರಲ್ಲಿ ಅಸ್ತಿತ್ವಕ್ಕೆ ಬಂತು. ಆದರೆ ಈ ಕಂಪೆನಿ ಪೂರ್ವ ಆಫ್ರಿಕಾದಲ್ಲಿ ತೀವ್ರ ಹಣಕಾಸಿನ ಸಮಸ್ಯೆಯನ್ನು ಎದುರಿಸಬೇಕಾಗಿ ಬಂತು. ಇದೇ ರೀತಿ ಜರ್ಮನಿಯ ಕೆಲವೊಂದು ಸಂಸ್ಥೆಗಳೂ ದಿವಾಳಿಯಾದವು. ಪೂರ್ವ ಆಫ್ರಿಕಾದಲ್ಲಿ ವ್ಯಾಪಾರದಲ್ಲಿ ಲಾಭ ಗಳಿಸಬೇಕಾದರೆ ಸಾಕಷ್ಟು ಹಣವನ್ನು ವ್ಯಯಮಾಡಬೇಕಾಗಿತ್ತು. ಪೂರ್ವ ಆಫ್ರಿಕಾದಲ್ಲಿ ಹತ್ತಿ ಮತ್ತು ಕಾಫಿ ಪ್ರಮುಖ ಉತ್ಪಾದನೆಯಾಗಿದ್ದು ಇದರಿಂದ ವಿದೇಶಿ ಕಂಪೆನಿಗಳಿಗೆ ಲಾಭ ದೊರೆಯುತ್ತಿರಲಿಲ್ಲ. ಬ್ರಿಟಿಷ್ ಈಸ್ಟ್ ಆಫ್ರಿಕಾ ಕಂಪೆನಿ ದಿವಾಳಿಯಾಗಲು ಮತ್ತೊಂದು ಕಾರಣ ಪ್ರಸಿದ್ಧ ಉಗಾಂಡಾ ರೈಲ್ವೇ ಯೋಜನೆ. ಈ ಉದ್ದೇಶಿತ ಯೋಜನೆ ಮೊಂಬಾಸಾದಿಂದ ವಿಕ್ಟೋರಿಯಾ ಸರೋವರದವರೆಗಿತ್ತು. ವ್ಯಾಪಾರದಲ್ಲಿ ಲಾಭ ಗಳಿಸಲು ರೈಲ್ವೆಯ ಅಗತ್ಯವಿದ್ದರೂ ಸಾಕಷ್ಟು ಪ್ರಮಾಣದಲ್ಲಿ ಲಾಭ ಬರುತ್ತಿರಲಿಲ್ಲ. ಬ್ರಿಟನ್ ನಿಜವಾಗಿಯೂ ಚಿಂತೆಯಲ್ಲಿ ಮುಳುಗಿತು. ಬ್ರಿಟನ್ನಿನ ಪೂರ್ವ ಆಫ್ರಿಕಾದಲ್ಲಿದ್ದ ವಿದೇಶಾಂಗ ಕಾರ್ಯದರ್ಶಿ ಸಾಲಿಸ್‌ಬ್ಯೂರಿ ಹತಾಶನಾಗಿ ಬ್ರಿಟನ್ನಿಗೆ ಮರಳಿದ.

ಪೂರ್ವ ಆಫ್ರಿಕಾದಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಬದಲಾಯಿಸಲು ಯುರೋಪಿನ ರಾಷ್ಟ್ರಗಳು ಪರಸ್ಪರ ಒಪ್ಪಂದ ಮಾಡಿಕೊಳ್ಳಲು ತೀರ್ಮಾನಿಸಿದವು. ಇದೇ ಪ್ರಕಾರ ಬ್ರಿಟನ್ ೧೮೯೦ರಲ್ಲಿ ಜರ್ಮನಿಯೊಡನೆ ಒಪ್ಪಂದ ಮಾಡಿಕೊಂಡಿತು. ಜರ್ಮನಿಯ ಬಿಸ್ಮಾರ್ಕ್ ಬ್ರಿಟನ್ನಿನೊಡನೆ ಶಾಂತಿಯುತವಾಗಿ ವ್ಯವಹರಿಸಿದ. ಈ ಒಪ್ಪಂದದ ಪ್ರಕಾರ ಜರ್ಮನಿಯು ಜಾನ್ ಸಿಬಾರ್‌ನ ಮೇಲೆ ಬ್ರಿಟಿಷರ ಪಾಲಕಪ್ರಭುತ್ವವನ್ನು ಅಂಗೀಕರಿಸಿತು. ಇದಕ್ಕೆ ಪ್ರತಿಯಾಗಿ ಪಶ್ಚಿಮ ಆಫ್ರಿಕಾದಲ್ಲಿ ಕೆಲವೊಂದು ಪ್ರದೇಶಗಳನ್ನು ಜರ್ಮನಿಗೆ ಬಿಟ್ಟುಕೊಡಲಾಯಿತು. ಅವುಗಳೆಂದರೆ ಕ್ಯಾಫ್ರಿವಿ ಸ್ಟ್ರೀಪ್ ಮತ್ತು ಹೊಲಿಗೋಲ್ಯಾಂಡ್. ಇದೇ ಪ್ರಕಾರ ಫ್ರಾನ್ಸ್ ಜಾನ್‌ಸಿಬಾರ್‌ನ ಮೇಲೆ ಬ್ರಿಟಿಷರ ಪಾಲಕಪ್ರಭುತ್ವವನ್ನು ಒಪ್ಪಿಕೊಂಡಿತು. ಇದಕ್ಕಾಗಿ ಮಡಗಾಸ್ಕರ್‌ನ ಸಂಪೂರ್ಣ ಅಧಿಕಾರವನ್ನು ಫ್ರಾನ್ಸ್‌ಗೆ ಬಿಟ್ಟುಕೊಡಲಾಯಿತು. ಮನೋನಾಲ್ಯಾಂಡ್ ಮತ್ತು ನ್ಯಾಸಾಲ್ಯಾಂಡ್‌ಗಳು ಬ್ರಿಟಿಷರ ಅಧೀನಕ್ಕೆ ಬಂದವು. ಇದೇ ಸಂದರ್ಭದಲ್ಲಿ ಉಗಾಂಡಾದ ಕುರಿತಾಗಿ ಬ್ರಿಟನ್ ಮತ್ತು ಜರ್ಮನಿಯ ಸಂಬಂಧದ ನಡುವೆ ಬಿರುಕು ಉಂಟಾಯಿತು. ಆಂಗ್ಲೋ-ಜರ್ಮನ್ ಒಪ್ಪಂದಗಳು ಏರ್ಪಟ್ಟರೂ ಸಮಸ್ಯೆ ಬಗೆಹರಿಯಲಿಲ್ಲ. ಇಂಗ್ಲೆಂಡಿನ ಈಸ್ಟ್ ಆಫ್ರಿಕಾ ಕಂಪೆನಿಯು ಆರ್ಥಿಕ ದಿವಾಳಿತನವನ್ನು ಎದುರಿಸುತ್ತಿದ್ದರೂ ನೈಜೀರಿಯಾದ ಗವರ್ನರ್ ಕ್ಯಾಪ್ಟನ್ ಲುಗಾರ್ಡ್‌ನನ್ನು ಉಗಾಂಡಕ್ಕೆ ಕಳುಹಿಸಿಕೊಟ್ಟಿತು. ಈ ನಿರ್ಧಾರವನ್ನು ಬ್ರಿಟನ್ನಿನ ಸರಕಾರವೇ ಕೈಗೊಂಡಿತ್ತು. ಜರ್ಮನಿಯ ಅನ್ವೇಷಕ ಕಾರ್ಲ್‌ಪೀಟರ್ ಉಗಾಂಡದುದ್ದಕ್ಕೂ ಸಂಚರಿಸಿ ಅಲ್ಲಿನ ಜನರ ವಿಶ್ವಾಸವನ್ನು ಗಳಿಸಿಕೊಂಡಿದ್ದ. ಉಗಾಂಡಾ ಬ್ರಿಟನ್ ಮತ್ತು ಜರ್ಮನಿಗೆ ಆರ್ಥಿಕ ಪ್ರಶ್ನೆ ಮಾತ್ರ ಆಗಿರದೆ ಪ್ರತಿಷ್ಠೆಯ ಪ್ರಶ್ನೆಯೂ ಆಗಿತ್ತು. ಬ್ರಿಟನ್ನಿನ ವ್ಯಾಪಾರಸ್ಥರು ಲುಗಾರ್ಡನ ನೀತಿಯನ್ನು ವಿರೋಧಿಸಿದರೂ ಬ್ರಿಟನ್ನಿನ ವಿದೇಶ ಕಾರ್ಯದರ್ಶಿ ಲಾರ್ಡ್ ರೋಸಿಬೆರಿ ಈ ನೀತಿಯನ್ನು ಸಮರ್ಥಿಸಿಕೊಂಡ. ರೋಸಿಬೆರಿ ಸಾಮ್ರಾಜ್ಯಶಾಹಿ ನೀತಿಯನ್ನು ಬಲವಾಗಿ ಪ್ರತಿಪಾದಿಸುವ ವ್ಯಕ್ತಿಯಾಗಿದ್ದು ಆಫ್ರಿಕಾದಲ್ಲಿನ ಬ್ರಿಟನ್ನಿನ ವಸಾಹತುಗಳನ್ನು ರಕ್ಷಿಸುವ ಕಾರ್ಯದಲ್ಲಿ ಮಗ್ನನಾದ. ರೋಸಿಬೆರಿಯ ರಾಜತಾಂತ್ರಿಕ ನೀತಿಯ ಫಲವಾಗಿ ೧೮೯೪ರಲ್ಲಿ ಬ್ರಿಟನ್ ಉಗಾಂಡಾದ ಮೇಲೆ ತನ್ನ ಪಾಲಕಪ್ರಭುತ್ವವನ್ನು ಸ್ಥಾಪಿಸಿತು.

ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾದ ಸನ್ನಿವೇಶ ಪೂರ್ವ ಮತ್ತು ಪಶ್ಚಿಮ ಆಫ್ರಿಕಾಗಳಿಗಿಂತ ಭಿನ್ನ ವಾದದ್ದಾಗಿತ್ತು. ಭೌಗೋಳಿಕವಾಗಿ ಎಲ್ಲ ಲಕ್ಷಣಗಳು ಯುರೋಪಿನ ರಾಷ್ಟ್ರಗಳಿಗೆ ಸಹಕಾರಿಯಾಗಿಯೇ ಇದ್ದುವು. ಅಲ್ಲಿನ ಮೂಲ ನಿವಾಸಿಗಳಾದ ಬುಶ್‌ಮೆನ್ ಮತ್ತು ಹಾಟೆನ್‌ಟೋಸ್ ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಸುಮಾರು ಹದಿನೈದನೇ ಶತಮಾನ ದಿಂದಲೇ ಪೋರ್ಚುಗೀಸ್, ಡಚ್ ಮತ್ತು ಫ್ರೆಂಚರು ದಕ್ಷಿಣ ಆಫ್ರಿಕಾಕ್ಕೆ ಬರಲು ಪ್ರಾರಂಭಿಸಿದ್ದರು. ಬಂಟು ಭಾಷೆಯನ್ನಾಡುವ ನೀಗ್ರೋ ಜನಾಂಗದವರೂ ದಕ್ಷಿಣ ಆಫ್ರಿಕಾಕ್ಕೆ ಪ್ರವೇಶಿಸಿದರು. ಇವರು ಮೊದಲು ಪಶ್ಚಿಮ ಆಫ್ರಿಕಾದ ಅಡವಿಗಳಲ್ಲಿ ವಾಸಿಸುತ್ತಿದ್ದರು. ದಕ್ಷಿಣ ಆಫ್ರಿಕಾದ ಬೊಯಿರ್ ಜನಾಂಗದವರು ಯುರೋಪಿಯನ್ನರ ಆಗಮನವನ್ನು ವಿರೋಧಿಸಿದರು. ಬಂಟು ಜನರು ಕಿನ್ಯಾ ಮತ್ತು ತಾಂಜಾನಿಯಾಗಳಲ್ಲಿ ನೆಲೆಸಿದರು. ದಕ್ಷಿಣ ಆಫ್ರಿಕಾದ ನಿವಾಸಿಗಳಾದ ಜುಲೂಸ್ ಮತ್ತು ಕಾಫಿಕ್ಸ್ ತಮ್ಮ ಪ್ರಾಂತ್ಯಗಳ ಗಡಿಸಮಸ್ಯೆಯಿಂದಾಗಿ ಪರಸ್ಪರ ಹೋರಾಡುತ್ತಿದ್ದರು. ಆದರೆ ಯುರೋಪಿನ ವಸಾಹತುಶಾಹಿ ಆಳ್ವಿಕೆ ದಕ್ಷಿಣ ಆಫ್ರಿಕಾದಲ್ಲೂ ಪ್ರಾರಂಭಗೊಂಡಾಗ, ಅಲ್ಲಿನ ಮೂಲನಿವಾಸಿಗಳ ಹೋರಾಟದ ಸ್ವರೂಪವೇ ಬದಲಾಯಿತು.

ನೆಪೋಲಿಯನ್ ಬೊನಾಪಾರ್ಟೆಯ ಯುದ್ಧಗಳ ಸಂದರ್ಭದಲ್ಲಿಯೇ ಬ್ರಿಟನ್ ದಕ್ಷಿಣ ಆಫ್ರಿಕಾದ ಕೇಪ್ ಗುಡ್‌ಹೋಪ್‌ನ್ನು ಸ್ವಾಧೀನಪಡಿಸಿಕೊಂಡಿತು. ಅಲ್ಲಿನ ನಿವಾಸಿಗಳಾದ ಬೊಯಿರ್ ಜನರು ಬ್ರಿಟನ್ನಿನ ಆಂಗ್ಲೀಕರಣ ನೀತಿಯನ್ನು ಬಲವಾಗಿ ವಿರೋಧಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚು ಚರ್ಚೆಗೆ ಆಸ್ಪದ ಮಾಡಿಕೊಟ್ಟಿರುವ ಪ್ರದೇಶಗಳೆಂದರೆ ಟ್ರಾನ್ಸ್ ವಾಲ್ ಮತ್ತು ಆರೆಂಜ್ ಫ್ರೀ ಸ್ಟೇಟ್. ೧೮೪೫ರಲ್ಲಿ ಬ್ರಿಟನ್ ನಾಟಾಲನ್ನು ವಶಪಡಿಸಿಕೊಂಡಿತು. ೧೮೫೪ರಲ್ಲಿ ಟ್ರಾನ್ಸ್ ವಾಲ್ ಮತ್ತು ಆರೆಂಜ್ ಫ್ರೀ ಸ್ಟೇಟ್‌ಗಳಿಗೆ ಸ್ವಾತಂತ್ರ್ಯವನ್ನು ನೀಡಲಾಯಿತು. ಆದರೂ ಬೊಯಿರ್ ಮತ್ತು ಬ್ರಿಟಿಷರ ನಡುವಿನ ಅಸಮಾಧಾನ ಕೊನೆಗೊಳ್ಳಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಉದ್ಭವಿಸಿದ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಡಿಸ್ರೈಲೀ ಸರಕಾರದ ವಸಾಹತು ಕಾರ್ಯದರ್ಶಿ ಲಾರ್ಡ್ ಕಾರ್ನೇರ್ವಾನ್ ಯೋಜನೆಯೊಂದನ್ನು ರೂಪಿಸಿದ. ಇವನ ಯೋಜನೆಯೆಂದರೆ ದಕ್ಷಿಣ ಆಫ್ರಿಕಾದ ನಾಲ್ಕು ದೇಶಗಳಾದ ಕೇಪ್ ಕಾಲೋನಿ, ನೆಟಾಲ್, ಟ್ರಾನ್ಸ್‌ವಾಲ್ ಮತ್ತು ಆರೆಂಜ್ ಫ್ರೀ ಸ್ಪೇಟ್‌ಗಳನ್ನು ಒಟ್ಟುಗೂಡಿಸುವುದು. ಆದರೆ ಈ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ. ಈ ಯೋಜನೆ ವಿಫಲವಾಗುವುದಕ್ಕೆ ಜುಲೂ ಜನರು ಪ್ರಮುಖ ಕಾರಣ. ಜುಲೂ ಜನರು ಪ್ರಬಲ ಸೈನ್ಯವನ್ನು ಹೊಂದಿದ್ದರು. ಅನೇಕ ತಿಂಗಳುಗಳ ಕಾಲ ನಡೆದ ಯುದ್ಧದಲ್ಲಿ ಜುಲೂ ಸೈನ್ಯ ಬ್ರಿಟಿಷರಿಗೆ ಸೋಲಬೇಕಾಯಿತು. ಜುಲೂಸ್ ಸಮರ್ಥರಾಗಿದ್ದಷ್ಟು ಸಮಯ ಬೊಯಿರ್ ಜನರು ತಟಸ್ಥರಾಗಿದ್ದರು. ೧೮೮೧ರಲ್ಲಿ ಬೊಯಿರ್ ಸೇನೆ ಮಜುಬಾ ಪರ್ವತ ಪ್ರದೇಶದಲ್ಲಿ ಬ್ರಿಟಿಷರ ಸೇನೆಯನ್ನು ಸೋಲಿಸಿತು. ಬ್ರಿಟನ್ ಬೊಯಿರ್ ಜನರು ತಟಸ್ಥರಾಗಿದ್ದರು. ೧೮೮೧ರಲ್ಲಿ ಬೊಯಿರ್ ಸೇನೆ ಮಜುಬಾ ಪರ್ವತ ಪ್ರದೇಶದಲ್ಲಿ ಬ್ರಿಟಿಷರ ಸೇನೆಯನ್ನು ಸೋಲಿಸಿತು. ಬ್ರಿಟನ್ ಬೊಯಿರ್ ಸೇನೆಯೊಡನೆ ಎರಡು ಒಪ್ಪಂದಕ್ಕೆ ಸಹಿ ಹಾಕಿತು. ಅವುಗಳೆಂದರೆ ೧೮೮೧ರ ಪ್ರಿಟೋರ್ಯ ಒಪ್ಪಂದ ಮತ್ತು ೧೮೮೪ರ ಲಂಡನ್ ಒಪ್ಪಂದ. ಈ ಒಪ್ಪಂದದ ಪ್ರಕಾರ ಬ್ರಿಟನ್ ಟ್ರಾನ್ಸ್ ವಾಲ್‌ನ್ನು ಸ್ವಾಧೀನಪಡಿಸಿಕೊಂಡಿತು. ಇದು ದಕ್ಷಿಣ ಆಫ್ರಿಕಾದಲ್ಲಿ ಬ್ರಿಟನ್ನಿನ ಮಹತ್ವಪೂರ್ಣ ವಸಾಹತು ರಾಜ್ಯ ವಿಸ್ತರಣೆಯಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಬ್ರಿಟನ್ನಿನ ವಸಾಹತು ಧೋರಣೆಯ ಕುರಿತು ಚರ್ಚಿಸುವಾಗ ಗೋಚರಿಸುವ ಪ್ರಮುಖ ಸಂಗತಿಯೆಂದರೆ, ಸಿಸಿಲ್ ಜೋನ್ ರೋಡ್ಸ್‌ನ ಮಹತ್ವಾಕಾಂಕ್ಷೆಯ ಯೋಜನೆಗಳು. ರೋಡ್ಸ್ ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಕನಸು ಕಂಡಿದ್ದ. ೧೮೭೦ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಆಗಮಿಸಿದ ರೋಡ್ಸ್ ನೆಟಾಲ್ ಮತ್ತು ಕಿಂಬರ್ಲಿಯಲ್ಲಿ ಹೆಚ್ಚಿನ ಸಮಯವನ್ನು ಕಳೆದ. ಸಿಸಿಲ್ ರೋಡ್ಸ್‌ನ ಯೋಜನೆಯಂತೆ ೧೮೮೫ರಲ್ಲಿ ಬ್ರಿಟನ್ ಬಿಚ್ಚುನಾಲ್ಯಾಂಡ್‌ನ್ನು ವಶಪಡಿಸಿಕೊಂಡಿತು. ರೋಡ್ಸ್‌ನ ಪ್ರಕಾರ ಬಿಚ್ಚುನಾಲ್ಯಾಂಡ್ ದಕ್ಷಿಣ ಆಫ್ರಿಕಾದ ಸುಯೇಜ್ ಕಾಲುವೆ. ೧೮೮೬ರಲ್ಲಿ ಬಂಗಾರದ ನಿಕ್ಷೇಪದ ಕುರಿತಾಗಿ ಬೊಯಿರ್ ಮತ್ತು ಬ್ರಿಟಿಷರಿಗೆ ಮನಸ್ತಾಪ ಉಂಟಾಯಿತು. ಬ್ರಿಟನ್ ವಿಟ್‌ವಾಟರ್ಸ್‌ಲ್ಯಾಂಡ್ ನಲ್ಲಿ ಬಂಗಾರದ ಹುಡುಕಾಟ ಪ್ರಾರಂಭಿಸಿತು. ಬೊಯಿರ್ ಜನರು ಪೌಲ್ ಕ್ರುಗೇರ್‌ನ ನೇತೃತ್ವದಲ್ಲಿ ಬ್ರಿಟಿಷರ ನೀತಿಯನ್ನು ವಿರೋಧಿಸಿದರು. ಆದರೆ ರೋಡ್ಸ್‌ನ ಸಮರ್ಥ ನೇತೃತ್ವದಲ್ಲಿ ಬ್ರಿಟನ್ ದಕ್ಷಿಣ ಆಫ್ರಿಕಾದಲ್ಲಿ ಗಣಿಗಾರಿಕೆಯನ್ನು ಪ್ರಾರಂಭಿಸಿತು. ಬಂಗಾರ ಮತ್ತು ವಜ್ರದ ಲಭಿಸುವಿಕೆಯಿಂದಾಗಿ ಬ್ರಿಟನ್ ಪ್ರಬಲ ವಸಾಹತು ಶಕ್ತಿಯಾಗಿ ದಕ್ಷಿಣ ಆಫ್ರಿಕಾದಲ್ಲಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿತು. ಇದಾದ ನಂತರ ರೋಡ್ಸ್ ಟ್ರಾನ್ಸ್‌ವಾಲ್‌ನ ಉತ್ತರಭಾಗದಲ್ಲಿರುವ ಪ್ರದೇಶಗಳಾದ ಮಶೋನಾಲ್ಯಾಂಡ್ ಮತ್ತು ಮೆಟಾಬಿಲಿನ್ಯಾಂಡ್ ಗಳತ್ತ ತನ್ನ ದೃಷ್ಟಿಯನ್ನು ಕೇಂದ್ರೀಕರಿಸಿದ. ಸ್ಥಳಿೀಯ ನಿವಾಸಿಗಳು ಅವರ ಮುಖಂಡ ಲೊಬಿನ್ ಗುಲಾನ ನೇತೃತ್ವದಲ್ಲಿ ಬ್ರಿಟನ್‌ನ ನೀತಿಯನ್ನು ವಿರೋಧಿಸಲು ಪ್ರಾರಂಭಿಸಿದರು. ಮಶೋನಾಲ್ಯಾಂಡ್ ಮತ್ತು ಮೆಟಾಬಿಲಿಲ್ಯಾಂಡ್‌ಗಳಲ್ಲಿ ಅಪಾರ ಚಿನ್ನದ ನಿಕ್ಷೇಪಗಳಿದ್ದವು. ಲೊಬಿನ್‌ಗುಲಾ ಪೋರ್ಚುಗೀಸ್, ಜರ್ಮನ್, ಬ್ರಿಟನ್ ಮತ್ತು ಬೊಯಿರ್ ಜನರ ಪ್ರದೇಶವನ್ನು ಈ ಪ್ರದೇಶಗಳಿಗೆ ನಿಷೇಧಿಸಿದ. ಆದರೂ ಬ್ರಿಟನ್ನಿಗೆ ಕೆಲವೊಂದು ರಿಯಾಯಿತಿಗಳಿದ್ದವು. ಏಕೆಂದರೆ ಲೊಬಿನ್ ಗುಲಾ ಬ್ರಿಟನ್ನಿನ ಬಗ್ಗೆ ತಪ್ಪು ತಿಳುವಳಿಕೆಯನ್ನು ಹೊಂದಿದ್ದ. ಅದೇನೆಂದರೆ ಬ್ರಿಟನ್ನಿನ ಉದ್ದೇಶ ಖನಿಜ ಸಂಪನ್ಮೂಲಗಳೇ ಹೊರತು ಭೂಮಿಯನ್ನು ಆಕ್ರಮಿಸುವುದಿಲ್ಲ ಎನ್ನುವ ನಂಬಿಕೆ. ರೋಡ್ಸ್ ಈ ಪ್ರದೇಶಗಳಿಗೆ ರೊಡೇಶಿಯಾ ಎಂಬುದಾಗಿ ನಾಮಕರಣ ಮಾಡಿದ. ಆದರೆ ಬೊಯಿರ್ ಜನರ ವೈರುತ್ವವಿದ್ದುದರಿಂದಾಗಿ ರೊಡೇಶಿಯಾದ ವ್ಯಾಪಾರ ಹೆಚ್ಚು ಲಾಭದಾಯಕವಾಗಿರಲಿಲ್ಲ. ೧೮೮೭ರಲ್ಲಿ ಬೊಯಿರ್ ಮತ್ತು ಲೊಬಿನ್‌ಗುಲಾನ ನಡುವೆ ಕಲಹ ಏರ್ಪಟ್ಟಿತು. ಅನಿವಾರ್ಯವಾಗಿ ಲೊಬಿನ್‌ಗುಲಾ ಬ್ರಿಟಿಷರ ಸಹಾಯವನ್ನು ಯಾಚಿಸಬೇಕಾಯಿತು. ಇವರುಗಳ ನಡುವೆ ಒಡಂಬಡಿಕೆ ಏರ್ಪಟ್ಟಿತು. ಇದನ್ನು ರುಡ್ಡ್ ರಿಯಾಯಿತಿ ಎಂಬುದಾಗಿ ಕರೆಯಲಾಗಿದೆ. ಇದರ ಪ್ರಕಾರ ಬ್ರಿಟನ್ನಿಗೆ ಖನಿಜಗಳ ಎಲ್ಲಾ ಹಕ್ಕುಗಳನ್ನೂ ಬಿಟ್ಟುಕೊಡಲಾಯಿತು.

ಸಿಸಿಲ್ ರೋಡ್ಸ್ ೧೮೯೦ರಲ್ಲಿ ಕೇಪ್‌ನ ಪ್ರಧಾನಮಂತ್ರಿಯಾಗಿ ನೇಮಕಗೊಂಡ. ಆ ಹೊತ್ತಿಗಾಗಲೇ ರೋಡ್ಸ್‌ಗೆ ಬ್ರಿಟನ್ನಿನಲ್ಲಿ ಅನೇಕ ವಿರೋಧಿ ಬಣಗಳು ಹುಟ್ಟಿಕೊಂಡಿದ್ದವು ಮತ್ತು ದಕ್ಷಿಣ ಆಫ್ರಿಕಾದಲ್ಲಿ ರೋಡ್ಸ್‌ನ ಅಸ್ತಿತ್ವ ಬೊಯಿರ್ ಜನಾಂಗದ ರಾಜಕೀಯವನ್ನು ಅವಲಂಬಿಸಿಕೊಂಡಿತ್ತು. ಬ್ರಿಟನ್ನಿನ ಅನೇಕ ವ್ಯಾಪಾರಿ ಕಂಪೆನಿಗಳು ಲಾಭಕ್ಕಾಗಿ ಪರಸ್ಪರ ವೈರತ್ವವನ್ನು ಬೆಳೆಸಿಕೊಂಡಿದ್ದವು. ರೋಡ್ಸ್ ತನ್ನದೇ ಆದ ಚಾರ್ಟರ್ಡ್ ಕಂಪೆನಿಯನ್ನು ಹೊಂದಿದ್ದ. ಬ್ರಿಟನ್ನಿನ ಇತರ ವ್ಯಾಪಾರಿ ಕಂಪೆನಿಗಳು ರೋಡ್ಸ್‌ನ ಚಾರ್ಟರ್ಡ್ ಕಂಪೆನಿಯನ್ನು ಸಂಶಯದಿಂದಲೇ ನೋಡುತ್ತಿದ್ದವು. ಇದರಿಂದಾಗಿ ರೋಡ್ಸ್ ತನ್ನ ಚಾರ್ಟರ್ಡ್ ಕಂಪೆನಿ ಮತ್ತು ರೊಡೇಶ್ಯಾದ ಬಗ್ಗೆ ಭಯಪಡಬೇಕಾಯಿತು. ಬ್ರಿಟನ್ ಸರಕಾರ ಜೋಸೆಫ್ ಚೇಂಬರ್ಲಿನ್ ಎಂಬಾತನನ್ನು ದಕ್ಷಿಣ ಆಫ್ರಿಕಾಕ್ಕೆ ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಿಸಿತು. ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ರೋಡ್ಸ್ ಕೇಪ್‌ನ ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಇದೇ ಸಂದರ್ಭದಲ್ಲಿ ಯುರೋಪಿನ ಇತರ ರಾಷ್ಟ್ರಗಳೂ ದಕ್ಷಿಣ ಆಫ್ರಿಕಾದಲ್ಲಿನ ಬ್ರಿಟನ್ನಿನ ಆಸಕ್ತಿಯನ್ನು ಗಂಭೀರವಾಗಿ ಚಿಂತಿಸಲು ಪ್ರಾರಂಭಿಸಿದವು. ಬೊಯಿರ್‌ನ ಮುಖಂಡ ಕ್ರುಗೇರ್ ಜರ್ಮನಿಯ ಎರಡನೆಯ ಕೈಸರ್ ವಿಲ್ಯಮ್‌ನ ಸಹಾಯದಿಂದ ಬ್ರಿಟನ್ನಿನ ಸಾಮ್ರಾಜ್ಯಶಾಹಿ ನೀತಿಯನ್ನು ಖಂಡಿಸಿ ೧೮೯೯ರಲ್ಲಿ ಯುದ್ಧ ಪ್ರಾರಂಭಿಸಿದ. ಬೊಯಿರ್ ಗಣರಾಜ್ಯವನ್ನು ಸ್ಥಾಪಿಸುವುದೇ ಕ್ರುಗೇರ್‌ನ ಮುಖ್ಯ ಉದ್ದೇಶವಾಗಿತ್ತು. ೧೮೯೯ರಲ್ಲಿ ಪ್ರಾರಂಭಗೊಂಡ ಅಂಗ್ಲೋ-ಬೋಯಿರ್ ಯುದ್ಧ ೧೯೦೨ರಲ್ಲಿ ಕೊನೆಗೊಂಡಿತು. ಬೊಯಿರ್ ಸೈನ್ಯ ಗೆರಿಲ್ಲಾ ಯುದ್ಧ ತಂತ್ರವನ್ನು ಅನುಸರಿಸಿದ್ದರಿಂದಾಗಿ ಬ್ರಿಟನ್ ಅನೇಕ ರೀತಿಯ ಕಷ್ಟ-ನಷ್ಟಗಳನ್ನು ಅನುಭವಿಸಬೇಕಾಗಿ ಬಂತು. ೧೯೦೨ರಲ್ಲಿ ವೆರೀನಿಜಿಂಗ್ ಒಪ್ಪಂದದೊಡನೆ ಯುದ್ಧ ಕೊನೆಗೊಂಡಿತು. ಬ್ರಿಟನ್ ಯುದ್ಧದಲ್ಲಿ ಜಯಗಳಿಸಿದರೂ ಯುರೋಪಿನಾದ್ಯಂತ ಬ್ರಿಟನ್ ವಿರೋಧಿ ಭಾವನೆಗಳು ಪ್ರಾರಂಭವಾದ್ದರಿಂದ ದಕ್ಷಿಣ ಆಫ್ರಿಕಾಕ್ಕೆ ಜವಾಬುದಾರಿಕೆಯ ಸರಕಾರವನ್ನು ನೀಡಲಾಯಿತು. ಆರೆಂಜ್ ಫ್ರೀ ಸ್ಟೇಟ್ ಮತ್ತು ಟ್ರಾನ್ಸ್‌ವಾಲ್‌ಗಳನ್ನು ಬೊಯಿರ್ ಜನರಿಗೆ ಬಿಟ್ಟುಕೊಡಲಾಯಿತು. ಇವು ೧೯೦೭ರಲ್ಲಿ ನೆಟಾಲ್ ಮತ್ತು ಕೇಪ್ ಕಾಲೋನಿಯೊಡನೆ ವಿಲೀನಗೊಂಡು ಸಂಯುಕ್ತ ಒಕ್ಕೂಟವೊಂದನ್ನು ರಚಿಸಿಕೊಂಡವು. ಬ್ರಿಟನ್ ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ಯುದ್ಧ ಯುರೋಪಿನ ಪ್ರಜ್ಞಾವಂತ ಜನವರ್ಗಕ್ಕೆ ಚರ್ಚೆಯ ವಸ್ತುವಾಯಿತು. ಇದು ನವಸಾಮ್ರಾಜ್ಯಶಾಹಿ ನೀತಿಯಾಗಿದ್ದು ಬ್ರಿಟನ್ನಿನ ಉದಾರವಾದಿ ಜನಸಮೂಹ ಲೊಯಿಲ್ಡ್ ಜ್ಯೋರ್ಜ್‌ನ ನೇತೃತ್ವದಲ್ಲಿ ವಿರೋಧಿಸಿತು. ಇವರು ಬೊಯಿರ್ ಗಣರಾಜ್ಯಕ್ಕೆ ತಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸಿದರು. ಬ್ರಿಟನ್ನಿನ ದಕ್ಷಿಣ ಆಫ್ರಿಕಾದ ಸಾಮ್ರಾಜ್ಯದ ಬಗ್ಗೆ ಕನಸು ಕಂಡಿದ್ದ ರೋಡ್ಸ್ ೧೯೦೨ರಲ್ಲಿ ಅಸುನೀಗಿದ. ಇವನ ಯೋಜನೆಗಳು ಬ್ರಿಟನ್ನಿನ ವಸಾಹತುಶಾಹಿ ನೀತಿಗೆ ಪೂರಕವಾಗಿದ್ದರೂ ಅನೇಕ ವಿರೋಧಾಭಾಸಗಳಿಂದ ಕೂಡಿತ್ತು. ಆದರೂ ರೋಡ್ಸ್ ಹುಟ್ಟುಹಾಕಿದ ವ್ಯಾಪಾರಿ ಸಂಸ್ಥೆ ೧೯೨೩ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು.

ಫಾಶೋಡಾ ಘಟನೆ

ಆಫ್ರಿಕಾ ಖಂಡವನ್ನು ಯುರೋಪಿನ ರಾಷ್ಟ್ರಗಳು ವಿಂಗಡಿಸುವ ಸಂದರ್ಭದಲ್ಲಿ ಉಂಟಾದ ಮತ್ತೊಂದು ಸಮಸ್ಯೆಯೆಂದರೆ ಫಾಶೋಡಾ ಘಟನೆ. ಇದೊಂದು ಅಂತಾರಾಷ್ಟ್ರೀಯ ಸಮಸ್ಯೆಯಾಗಿದ್ದು ಪ್ರತಿಷ್ಠೆಯ ಪ್ರಶ್ನೆಯೂ ಆಗಿತ್ತು. ಯುರೋಪಿಯನ್ನರು ಈಜಿಪ್ಟ್‌ಗೆ ಆಗಮಿಸಿದಾಗಲೇ ಸುಡಾನ್‌ನಲ್ಲಿ ಸಮಸ್ಯೆ ತಲೆದೋರಿತ್ತು. ಈ ಕಿತ್ತಾಟದಲ್ಲಿ ಬ್ರಿಟನ್ ಮತ್ತು ಫ್ರಾನ್ಸ್ ಭಾಗವಹಿಸಿದ್ದವು. ಬ್ರಿಟನ್ ೧೮೮೫ರ ನಂತರವೂ ಈಜಿಪ್ಟ್‌ನ ಮೇಲೆ ಪರೋಕ್ಷ ವಾಗಿ ಹತೋಟಿ ಸಾಧಿಸಿತ್ತು. ಬ್ರಿಟನ್ನಿನಂತೆ ಫ್ರಾನ್ಸ್‌ಗೆ ಆಫ್ರಿಕಾದಲ್ಲಿ ಭದ್ರವಾದ ನೆಲೆ ಇರಲಿಲ್ಲ. ನೈಲ್ ನದಿಯ ಮೇಲಿನ ಭಾಗದಲ್ಲಿ ಇತರ ರಾಷ್ಟ್ರಗಳು ವ್ಯವಹರಿಸುವುದನ್ನು ಬ್ರಿಟನ್ ಸಂಪೂರ್ಣವಾಗಿ ವಿರೋಧಿಸಿತು. ಆದರೆ ಫ್ರಾನ್ಸ್ ಮೇಜರ್ ಮರ್ಚೆಂಡ್‌ನ ನೇತೃತ್ವದಲ್ಲಿ ಸೆನೆಗಲ್‌ನಿಂದ ಕೆಂಪು ಸಮುದ್ರದವರೆಗೆ ಫ್ರೆಂಚ್ ವ್ಯಾಪಾರಿ ಮಾರ್ಗವನ್ನು ಹೊಂದುವ ಯೋಜನೆ ಹಾಕಿತು. ಅದೇ ರೀತಿ ಬ್ರಿಟನ್ ಕೇಪ್ ಗುಡ್‌ಹೋಪ್‌ನಿಂದ ಕೈರೋದವರೆಗೆ ಬ್ರಿಟನ್ನಿನ ವ್ಯಾಪಾರದ ಮಾರ್ಗವನ್ನು ಹೊಂದುವ ಕನಸು ಕಂಡಿತು. ಫ್ರೆಂಚರ ಮರ್ಚೆಂಡ್ ೧೮೯೬ರಿಂದ ೧೮೭೮ರ ಮಧ್ಯೆ ಕಾಂಗೋದಿಂದ ಫಾರೋಡಾಕ್ಕೆ ಸಂಚರಿಸಿದ. ಇದು ಬ್ರಿಟಿಷರ ಉದ್ದೇಶಕ್ಕೆ ವಿರುದ್ಧವಾಗಿತ್ತು. ಏಕೆಂದರೆ ಫಾಶೋಡಾ ನೈಲ್ ನದಿಯ ಮೇಲಿನ ಭಾಗದ ಖಾರ್ಟೋಂಮ್‌ನ ಹತ್ತಿರವಿರುವ ಪ್ರದೇಶ. ಇದು ಬ್ರಿಟಿಷರ ಅಧೀನದಲ್ಲಿತ್ತು. ಬ್ರಿಟನ್ ಸುಾನನ್ನು ತನ್ನ ಕಕ್ಷೆಗೆ ತರುವುದಕ್ಕೋಸ್ಕರ ಜನರಲ್ ಕಿಚನೀರ್‌ನನ್ನು ನೇಮಿಸಿತು.

ಕಿಚನೀರ್ ೧೮೯೬ರಲ್ಲಿ ಸುಡಾನ್‌ಗೆ ರೈಲ್ವೇ ಮಾರ್ಗ ಕಲ್ಪಿಸುವ ಯೋಜನೆ ಹಾಕಿ ವಿಫಲನಾದ. ಆದರೆ ೧೮೯೮ರಲ್ಲಿ ಬ್ರಿಟನ್ ಸುಡಾನಿನ ಅಧಿಕಾರವನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಆದರೂ ಈಜಿಪ್ಟ್ ಸರಕಾರದ ಹೆಸರಿನಲ್ಲಿಯೇ ಆಡಳಿತ ನಡೆಸಬೇಕೆಂದು ಕಿಚನೀರ್‌ಗೆ ಬ್ರಿಟನ್ ಆದೇಶ ನೀಡಿತ್ತು. ಫ್ರಾನ್ಸ್ ಮರ್ಚೆಂಡ್‌ನ ನೇತೃತ್ವದಲ್ಲಿ ಫಾಶೋಡಾಕ್ಕೆ ಸೈನ್ಯವನ್ನು ಕಳುಹಿಸಿಕೊಟ್ಟಿತ್ತು. ಆದರೆ ಎರಡೂ ಸರಕಾರ ರಾಜತಾಂತ್ರಿಕ ನೀತಿಯನ್ನು ಅನುಸರಿಸಿದವು. ಬ್ರಿಟನ್ ಯುದ್ಧಕ್ಕೆ ಸಿದ್ಧವಾಗಿದ್ದರೂ ಫ್ರಾನ್ಸ್ ಒಡಂಬಡಿಕೆ ಯನ್ನೇ ಮುಂದಿಟ್ಟಿತು. ಏಕೆಂದರೆ ಯುರೋಪಿನಲ್ಲಿ ಜರ್ಮನಿಯ ವಿರುದ್ಧ ತನ್ನ ಸ್ಥಾನವನ್ನು ಭದ್ರವಾಗಿಸಿಕೊಳ್ಳುವುದು ಫ್ರಾನ್ಸ್‌ಗೆ ಅಂದು ಅನಿವಾರ್ಯವಾಗಿತ್ತು. ೧೮೯೯ರಲ್ಲಿ ಫ್ರಾನ್ಸ್ ಬ್ರಿಟನ್‌ನೊಡನೆ ಒಪ್ಪಂದ ಮಾಡಿಕೊಂಡು ಸುಡಾನನ್ನು ಬ್ರಿಟನ್ನಿಗೆ ಬಿಟ್ಟುಕೊಟ್ಟಿತು. ಇದರಿಂದಾಗಿ ಸುಡಾನ್ ಬ್ರಿಟನ್ನಿನ ಅಧೀನಕ್ಕೆ ಬಂತು. ಸುಡಾನ್‌ನ ಸ್ವಾಧೀನದೊಡನೆ ಆಫ್ರಿಕಾದ ವಿಭಜನೆ ಹೆಚ್ಚು ಕಡಿಮೆ ಮುಗಿದಂತೆಯೇ ಸರಿ. ಆದರೂ ಫ್ರಾನ್ಸ್ ಈಜಿಪ್ಟ್‌ನಲ್ಲಿ ತನಗಾದ ಅನ್ಯಾಯವನ್ನು ಸರಿಪಡಿಸಲು ಮೊರಾಕ್ಕೋದ ಮೇಲೆ ದೃಷ್ಟಿ ಹಾಯಿಸಿತು. ಈ ಕುರಿತು ೧೯೦೪ರಲ್ಲಿ ಆಂಗ್ಲೋ ಫ್ರೆಂಚ್ ಒಪ್ಪಂದಗಳು ಏರ್ಪಟ್ಟವು. ಈ ಒಪ್ಪಂದದ ಪ್ರಕಾರ ಬ್ರಿಟನ್ ಈಜಿಪ್ಟ್‌ನಲ್ಲಿ ಸ್ವತಂತ್ರವಾಗಿ ವ್ಯವಹರಿಸಿದರೆ ಫ್ರಾನ್ಸ್ ಮೊರಾಕ್ಕೋದಲ್ಲಿ ಸ್ವತಂತ್ರವಾಗಿ ವ್ಯವಹರಿಸಬಹುದಾಗಿತ್ತು. ಈ ಒಪ್ಪಂದದಿಂದಾಗಿ ಬ್ರಿಟನ್ ಮತ್ತು ಫ್ರಾನ್ಸ್‌ನ ಸಂಬಂಧ ಉತ್ತಮಗೊಂಡಿತು. ೧೯೧೪ರಲ್ಲಿ ಪ್ರಾರಂಭಗೊಂಡ ಪ್ರಥಮ ಜಾಗತಿಕ ಯುದ್ಧದಲ್ಲಿ ಬ್ರಿಟನ್, ಫ್ರಾನ್ಸ್ ಮತ್ತು ರಷ್ಯಾ ಮೈತ್ರಿಯನ್ನು ಸಂಪಾದಿಸಿಕೊಂಡು ಆಸ್ಟ್ರಿಯಾ ಮತ್ತು ಜರ್ಮನಿಯ ವಿರುದ್ಧ ಯುದ್ಧ ಸಾರಿದವು. ಜರ್ಮನಿಯು ಮೊರಾಕ್ಕೋದ ಮೇಲೆ ಆಸಕ್ತಿಯನ್ನು ಹೊಂದಿರುವುದೂ ಯುದ್ಧಕ್ಕೆ ಒಂದು ಕಾರಣವಾಯಿತು. ಅಂದರೆ ಪ್ರಥಮ ಜಾಗತಿಕ ಯುದ್ಧಕ್ಕೆ ಯುರೋಪಿನ ರಾಷ್ಟ್ರಗಳ ಆಫ್ರಿಕಾದ ರಾಜಕೀಯವೂ ಕಾರಣವಾಯಿತು.

ಈ ಮೇಲೆ ವಿವರಿಸಿದಂತೆ ಆಫ್ರಿಕಾ ಖಂಡವನ್ನು ಯುರೋಪಿನ ರಾಷ್ಟ್ರಗಳು ತಮ್ಮ ಹಿತಾಸಕ್ತಿಗಳಿಗನುಗುಣವಾಗಿ ವಿಂಗಡಿಸಿಕೊಂಡವು. ಆಫ್ರಿಕಾ ಖಂಡವನ್ನು ಕೆಳಕಂಡಂತೆ ಯುರೋಪಿನ ರಾಷ್ಟ್ರಗಳು ವಿಭಜಿಸಿಕೊಂಡವು. ಇವುಗಳ ವಿವರಗಳನ್ನು ಈಗಾಗಲೇ ಚರ್ಚಿಸಲಾಗಿದೆ. ಬ್ರಿಟನ್ ತನ್ನ ಸ್ವಾಧೀನಕ್ಕೆ ತಂದ ಪ್ರದೇಶಗಳೆಂದರೆ ಈಜಿಪ್ಟ್, ಸುಡಾನ್, ಗ್ಯಾಂಬಿಯಾ, ಗೋಲ್ಡ್‌ಕೋಸ್ಟ್, ಕೇಪ್ ಗುಡ್‌ಹೋಪ್, ಬ್ರಿಟಿಷ್ ಪೂರ್ವ ಆಫ್ರಿಕಾ, ಸೊಮಾಲಿಲ್ಯಾಂಡ್, ನೈಜೀರಿಯಾ, ಉತ್ತರ ಮತ್ತು ದಕ್ಷಿಣ ರೊಡೇಶಿಯಾ, ಉಗಾಂಡ, ಬೆಚ್ಚುನಾಲ್ಯಾಂಡ್, ನ್ಯಾಸಾಲ್ಯಾಂಡ್, ಸೀರಾ ಲಿಯೋನೆ ಮುಂತಾದ ಪ್ರದೇಶಗಳು. ಫ್ರಾನ್ಸ್ ಮುಖ್ಯವಾಗಿ ಮೊರಾಕ್ಕೊ, ಟ್ಯೂನಿಸ್, ಅಲ್ಜೀರಿಯಾ ಫ್ರೆಂಚ್ ಉತ್ತರ ಮತ್ತು ಪಶ್ಚಿಮ ಆಫ್ರಿಕಾ, ಗೇಬನ್, ಸಹಾರಾ, ಮಡಗಾಸ್ಕರ್, ಸೆನೆಗಲ್, ಐವರಿ ಕೋಸ್ಟ್, ಕಾಂಗೋ ಮುಂತಾದ ಪ್ರದೇಶಗಳಲ್ಲಿ ವಸಾಹತುಗಳನ್ನು ಸ್ಥಾಪಿಸಿಕೊಂಡಿತು. ನೈರುತ್ಯ ಆಫ್ರಿಕಾ, ಆಗ್ನೇಯ ಆಫ್ರಿಕಾ, ಕೇಮ್‌ರೂನ್ ಮತ್ತು ಟೊಗೋಲ್ಯಾಂಡ್ ಜರ್ಮನಿಯ ಪಾಲಾದವು. ಸ್ಪೈನ್ ವಾಯುವ್ಯ ಆಫ್ರಿಕಾದ ಕೆಲವು ಪ್ರದೇಶಗಳು ಮತ್ತು ಜಿಬ್ರಾಲ್ಟರನ್ನು ವಶಪಡಿಸಿಕೊಂಡಿತು. ಇಟಲಿ ದೇಶವು ತಡವಾಗಿ ಆಗಮಿಸಿದರೂ ಸೊಮಾಲಿಲ್ಯಾಂಡ್ ಇರಿಟ್ರ್ಯ, ನೈಲ್ ಪ್ರದೇಶ, ಟ್ರಿಪೋಲಿ, ಸಿರಿನೈಕಾ, ಅಬಿಸಿನೀಯಾ ಮತ್ತು ಲಿಬಿಯಾದ ಮೇಲಿನ ಹಿಡಿತವನ್ನು ಸಾಧಿಸಿತ್ತು. ಪೋರ್ಚುಗೀಸರು ಅಂಗೋಲಾ, ಗಿನಿಯಾ, ಮೊಜಾಂಬಿಕ್ ಮತ್ತು ಇನ್ನಿತರ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದರು. ಬೆಲ್ಜಿಯಂ ಕಾಂಗೋದ ಮೇಲೆ ಆಸಕ್ತಿಯನ್ನು ಹೊಂದಿತ್ತು. ಆದರೆ ಈ ಎಲ್ಲಾ ರಾಷ್ಟ್ರಗಳ ಗಡಿರೇಖೆಗಳು ಬದಲಾಗುತ್ತಲೇ ಇದ್ದವು. ಸಾಮ್ರಾಜ್ಯಶಾಹಿ ವ್ಯವಸ್ಥೆಯಲ್ಲಿ ಇದು ಅನಿವಾರ್ಯವೂ ಆಗಿತ್ತು.

ಸಾಮ್ರಾಜ್ಯಶಾಹಿಯ ದೀರ್ಘ ಚರಿತ್ರೆಯಲ್ಲಿ ಆಫ್ರಿಕಾದ ವಿಭಜನೆ ಪ್ರಮುಖ ಅಧ್ಯಾಯ ವಾಗುತ್ತದೆ. ಆಫ್ರಿಕಾದ ವಿಭಜನೆಯಲ್ಲಿ ಸಾಮ್ರಾಜ್ಯಶಾಹಿಯ ಪಾತ್ರದ ಕುರಿತು ಜೆ.ಎ.ಹೋಬ್ಸನ್, ಲೆನಿನ್, ರಾಬಿನ್‌ಸನ್ ಮತ್ತು ಗೆಲೆಗರ್ ಮುಂತಾದ ವಿದ್ವಾಂಸರು ಚರ್ಚೆ ನಡೆಸಿದ್ದಾರೆ. ಹೋಬ್ಸನ್ ಅವರ ಪ್ರಕಾರ

ಹತ್ತೊಂಬತ್ತನೇ ಶತಮಾನದ ಕೊನೆಯ ಅವಧಿಯಲ್ಲಿ ಯುರೋಪಿನ ವಸಾಹತು ಸಾಮ್ರಾಜ್ಯ ಹೆಚ್ಚಿನ ಆರ್ಥಿಕ ಲಾಭವನ್ನು ಗಳಿಸಲು ಸಾಧ್ಯ ವಾಗಲಿಲ್ಲ. ಏಕೆಂದರೆ ಅಲ್ಲಿ ರಾಷ್ಟ್ರೀಯ ಆಸಕ್ತಿಯ ಬದಲು ಸೀಮಿತ ಗುಂಪುಗಳ ಆಸಕ್ತಿಯೇ ಅಂತಿಮವಾಗಿತ್ತು. ಈ ಅಂಶವನ್ನು ನಾವು ಆಫ್ರಿಕಾದ ವಿಭಜನೆಯಲ್ಲಿ ಕಾಣಲು ಸಾಧ್ಯ. ಲೆನಿನ್ ಪ್ರಕಾರ ಆಫ್ರಿಕಾದ ವಿಭಜನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಬಂಡಾವಳ-ಬಂಡವಾಳಶಾಹಿಯ ಅತ್ಯುನ್ನತ ಮಟ್ಟವೇ ಸಾಮ್ರಾಜ್ಯಶಾಹಿ ವ್ಯವಸ್ಥೆ.

ರೋಬಿನ್ ಸನ್ ಮತ್ತು ಗೆಲೆಗರ್ ಆಫ್ರಿಕಾದ ವಿಭಜನೆಯನ್ನು ಪೌರ್ವಾತ್ಯ ಪ್ರಶ್ನೆಯ ಮುಂದುವರಿಕೆ ಎಂಬುದಾಗಿ ವ್ಯಾಖ್ಯಾನಿಸಿದ್ದಾರೆ. ಸಾಮ್ರಾಜ್ಯಶಾಹಿ ವ್ಯವಸ್ಥೆ ಆಫ್ರಿಕಾದಲ್ಲಿ ಗಟ್ಟಿಯಾಗಿ ನೆಲೆಯಾಗಲು ಇನ್ನೊಂದು ಕಾರಣ ಆಫ್ರಿಕಾದಲ್ಲಿ ಅಸ್ತಿತ್ವಕ್ಕೆ ಬರುತ್ತಿದ್ದ ಅನೇಕ ಇಸ್ಲಾಂ ಸಂಘಟನೆಗಳನ್ನು ವಿರೋಧಿಸುವುದೂ ಆಗಿತ್ತು ಎನ್ನುವ ವಾದವೂ ಇದೆ. ಆಫ್ರಿಕಾದ ವಿಭಜನೆಯಲ್ಲಿ ಯುರೋಪಿಯನ್ನರ ಪಾತ್ರದ ಕುರಿತು ವಿವೇಚಿಸುವಾಗ ಈ ಅಂಶವೂ ಮುಖ್ಯವೆನಿಸುತ್ತದೆ. ಯುರೋಪಿನ ರಾಷ್ಟ್ರಗಳ ನಡುವಿನ ಸ್ಪರ್ಧೆ ಮಿಲಿಟರಿ ಹಸ್ತಕ್ಷೇಪ ಮಾತ್ರವಾಗಿರದೆ ಹಳೆಯ ಮತ್ತು ಹೊಸ ಪ್ರದೇಶಗಳ ಮೇಲೆ ಏಕಸ್ವಾಮ್ಯವನ್ನು ಸ್ಥಾಪಿಸುವ ಉದ್ದೇಶದಿಂದ ಪ್ರಾರಂಭಗೊಂಡ ರಾಜಕೀಯ ಮತ್ತು ಆರ್ಥಿಕ ಹಸ್ತಕ್ಷೇಪವೂ ಆಗಿದೆ. ಆದರೆ ಆಫ್ರಿಕಾದ ವಿವಿಧ ಜನಾಂಗಗಳು ಪರಸ್ಪರ ಸ್ಪರ್ಧೆ, ಕಿತ್ತಾಟಗಳಲ್ಲಿ ತೊಡಗಿರುವ ಸಾಮ್ರಾಜ್ಯವಾದೀ ಶಕ್ತಿಗಳ ಬೆಳವಣಿಗೆಯನ್ನು ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿರಲಿಲ್ಲ. ಯೂರೋಪಿನ ರಾಷ್ಟ್ರಗಳ ಯಜಮಾನಿಕೆಯಿಂದಾಗಿ ಆಫ್ರಿಕಾದ ದೇಶಗಳ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸ ಯುರೋಪ್ ಕೇಂದ್ರಿತ ಅಧ್ಯಯನಕ್ಕೆ ಒಂದು ವಸ್ತುವಾಗಿ ಮಾತ್ರ ಪರಿಗಣಿಸಲ್ಪಟ್ಟಿತು. ಒಟ್ಟಾರೆಯಾಗಿ ಆಫ್ರಿಕಾ ತನ್ನ ಅಸ್ತಿತ್ವವನ್ನು ಕಳೆದುಕೊಂಡು ವಿದೇಶಿ ರಾಷ್ಟ್ರಗಳ ಸಾಮ್ರಾಜ್ಯವಾದದ ಆಕ್ರಮಣಕಾರಿ ಉದ್ದೇಶವನ್ನು ಈಡೇರಿಸುವ ಸಾಧನವಾಗಿ ಪರಿವರ್ತನೆ ಹೊಂದಲು ಪ್ರಮುಖ ಕಾರಣ, ಯುರೋಪಿನ ರಾಷ್ಟ್ರಗಳ ಸಾಮ್ರಾಜ್ಯವಾದದ ಆಕ್ರಮಣಕಾರಿ ಸ್ವಭಾವ. ಆದರೆ ಈ ಬೆಳವಣಿಗೆಯೇ ಇಪ್ಪತ್ತನೆಯ ಶತಮಾನದ ಪ್ರಥಮಾರ್ಧದಲ್ಲಿ ಆಫ್ರಿಕಾದಲ್ಲಿ ರಾಷ್ಟ್ರೀಯ ವಿಮೋಚನಾ ಚಳುವಳಿ ಪ್ರಾರಂಭವಾಗುವಂತೆ ಮಾಡಿತು.

 

ಪರಾಮರ್ಶನ ಗ್ರಂಥಗಳು

೧. ಆಲಿವರ್, ಆರ್ ಮತ್ತು ಆಲಿವರ್ ಸಿ.(ಸಂ), ೧೯೬೫. ಆಫ್ರಿಕಾ ಇನ್ ದ ಡೇಸ್ ಆಫ್ ಎಕ್ಸ್‌ಫ್ಲೋರೇಷನ್ ಫ್ರಿಂಟ್ಯಸ್ ಹಾಲ್, ಸ್ಪೆಕ್ಟ್ರಮ್ ಬುಕ್ಸ್.

೨. ಬೇಸಿಲ್ ಡೇವಿಡ್ಸ್‌ನ್, ೧೯೭೦. ಓಲ್ಡ್ ಆಫ್ರಿಕಾ ರಿಡಿಸ್ಕವರ್ಡ್, ಲಾಂಗ್ ಮನ್.

೩. ಜೋನ್ ಪ್ಲಿಂಟ್(ಸಂ), ೧೯೭೫. ದ ಕೇಂಬ್ರಿಡ್ಜ್ ಹಿಸ್ಟರಿ ಆಫ್ ಆಫ್ರಿಕಾ, ಲಂಡನ್: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್.

೪. ಚೇಂಬರ್ಲಿನ್ ಎಂ.ಇ., ೧೯೭೪. ದ ಸ್ಕ್ರಾಂಬಲ್ ಫಾರ್ ಆಫ್ರಿಕಾ, ಇಂಗ್ಲೆಂಡ್: ಲಾಂಗ್‌ಮೇನ್ ಗ್ರೂಪ್ ಲಿಮಿಟೆಡ್.

೫. ಆಲಿವರ್ ಆರ್ ಮತ್ತು ಅಟೆಮೋರ್ ಎ., ೧೯೬೭. ಆಫ್ರಿಕಾ ಸಿನ್ಸ್ ೧೮೦೦, ಲಂಡನ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್.

೬. ಲಿಮೇ, ಜಿ. ಹೆಚ್., ೧೯೬೩. ಬ್ರಿಟಿಷ್ ಸುಪ್ರಿಮೆಸೀ ಇನ್ ಸೌತ್ ಆಫ್ರಿಕಾ, ೧೮೧೯೧೯೦೭, ಆಕ್ಸ್‌ಫರ್ಡ್: ಕ್ಲೇರೆನ್‌ಡನ್ ಪ್ರೆಸ್.

೭. ಹೋಬ್ಸನ್ ಜೆ.ಎ., ೧೯೩೮. ಇಂಪೀರ್ಯಲಿಸಂ: ಎ ಸ್ಟಡಿ, ಲಂಡನ್: ಆಲೆನ್ ಮತ್ತು ಅನ್‌ವಿನ್.