ಆಫ್ರಿಕಾದ ವಿಭಜನೆಗಾಗಿ ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದಲ್ಲಿ ಯುರೋಪಿನ ರಾಷ್ಟ್ರಗಳ ನಡುವೆ ನಡೆದ ಕಿತ್ತಾಟ ಯುರೋಪಿನ ಸಾಮ್ರಾಜ್ಯಶಾಹಿ ಮಹತ್ವಾಕಾಂಕ್ಷೆಗೆ ಉತ್ತಮ ಉದಾಹರಣೆಯಾಗಿದೆ. ಬಂಡವಾಳ ಶೇಖರಣೆಯಷ್ಟೇ ಮೂಲ ಉದ್ದೇಶವಾಗಿರುವ ಬಂಡವಾಳಶಾಹಿ ವ್ಯವಸ್ಥೆ ಎಂದಿಗೂ ಸ್ತಬ್ಧ ವ್ಯವಸ್ಥೆಯಾಗಿರುವುದಿಲ್ಲ. ಅದು ಸದಾ ಬದಲಾಗುತ್ತಲೇ ಇರುತ್ತದೆ. ಉತ್ಪಾದನೆ ಮತ್ತು ವಿತರಣೆಗಳ ಕುರಿತ ಹಳೆ ವಿಧಾನಗಳನ್ನು ಬದಿಗೊತ್ತುತ್ತಾ, ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾ, ತನ್ನ ಗಡಿಯನ್ನು ಸದಾ ವಿಸ್ತರಿಸಿಕೊಳ್ಳುತ್ತಾ ಸಾಗುತ್ತದೆ. ದುರ್ಬಲ ಸಮುದಾಯಗಳನ್ನು ತನ್ನ ಉದ್ದೇಶಗಳಿಗೆ ಅನುಗುಣವಾಗಿ ದುಡಿಸಿಕೊಳ್ಳುತ್ತದೆ. ವ್ಯಾಪಾರ ಮತ್ತು ರಾಜ್ಯವಿಸ್ತಾರದ ಧೋರಣೆಯ ಉದ್ದೇಶದ ಈಡೇರಿಕೆಗಾಗಿ ಅವಿರತ ಸಂಶೋಧನೆ ಹಾಗೂ ವಿಸ್ತರಣೆಗಳಲ್ಲಿ ಈ ವ್ಯವಸ್ಥೆ ಮುಳುಗಿರುತ್ತದೆ. ಆಫ್ರಿಕಾದ ಇತಿಹಾಸವನ್ನು ಆವಲೋಕಿಸುವಾಗ ಈ ಅಂಶ ಸತ್ಯವೆನಿಸುತ್ತದೆ. ಆಫ್ರಿಕಾದ ವಿಭಜನೆ ಯುರೋಪಿನ ರಾಷ್ಟ್ರಗಳ ಆಕ್ರಮಣಕಾರಿ ಸ್ವಭಾವದ ಪೂರ್ಣ ಪರಿಚಯವನ್ನು ಮಾಡಿಸುತ್ತದೆ. ಆಫ್ರಿಕಾದ ಇತಿಹಾಸ ಕುರಿತು ಯುರೋಪಿನ ಅನೇಕ ವಿದ್ವಾಂಸರು ಚರ್ಚೆ ನಡೆಸಿದ್ದಾರೆ. ಇತಿಹಾಸಕಾರರು ಆಫ್ರಿಕಾದ ಇತಿಹಾಸವನ್ನು ಪುನರ್‌ರಚಿಸುವ ಮತ್ತು ಪುನರ್ವಿಮರ್ಶಿಸುವ ಕಾರ್ಯದಲ್ಲಿ ತೊಡಗಿ ದ್ದುಂಟು. ಆದರೂ ಹೆಚ್ಚಿನ ಅಧ್ಯುನಗಳು ಯುರೋಪ್ ಕೇಂದ್ರಿತ ಅಧ್ಯಯನವಾಗಿದ್ದು ವಾಸ್ತವಾಂಶಗಳು ಗೌಣವೆನಿಸುವಷ್ಟು ಮಟ್ಟಿಗೆ ಪ್ರಭಾವಿಯಾಗಿವೆ.

ಯುರೋಪಿಯನ್ನರ ಪ್ರಕಾರ ಆಫ್ರಿಕಾ ಬದಲಾವಣೆ ಹೊಂದದ ನಾಗರಿಕವಲ್ಲದ ರಾಷ್ಟ್ರ. ಅಲ್ಲಿನ ಇತಿಹಾಸವೆಂದರೆ ಯೂರೋಪಿನ ಇತಿಹಾಸ. ಏಕೆಂದರೆ ಯೂರೋಪಿನ ಇತಿಹಾಸ ಕಾರರ ಪ್ರಕಾರ ಆಫ್ರಿಕಾದ ಕತ್ತಲೆಯನ್ನು ಹೋಗಲಾಡಿಸಿದವರು ಯುರೋಪಿಯನ್ನರು. ಆಫ್ರಿಕಾದ ಮಧ್ಯಭಾಗದ ರಾಷ್ಟ್ರಗಳಿಗಂತೂ ಇತಿಹಾಸವೇ ಇಲ್ಲ ಮತ್ತು ಅಲ್ಲಿನ ನೀಗ್ರೋ ಜನಾಂಗ ಸ್ಥಿರ ಸರಕಾರವನ್ನು ಕಂಡವರೇ ಇಲ್ಲ. ವರ್ಷದಿಂದ ವರ್ಷಕ್ಕೆ, ತಲೆಮಾರಿನಿಂದ ತಲೆಮಾರಿಗೆ, ಶತಮಾನದಿಂದ ಶತಮಾನಕ್ಕೆ ಆಫ್ರಿಕಾದ ಬುಡಕಟ್ಟು ಜನರು ಅನಾಗರಿಕರಾಗಿಯೇ ಉಳಿದರೆನ್ನುವ ವ್ಯಾಖ್ಯಾನಗಳನ್ನು ನಾವು ಯುರೋಪಿನ ವಿದ್ವಾಂಸರ ಬರಹಗಳಲ್ಲಿ ಕಾಣುತ್ತೇವೆ. ಆದರೆ ನಾವಿಲ್ಲಿ ಆಫ್ರಿಕಾದ ಶ್ರೀಮಂತ ಇತಿಹಾಸವನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಕಾಗುತ್ತದೆ. ಬಂಡವಾಳಶಾಹಿ ರಾಷ್ಟ್ರಗಳು ವಸಾಹತುಗಳ ಇತಿಹಾಸವನ್ನು ತಮ್ಮ ಆಸಕ್ತಿಗಳಿಗನುಗುಣವಾಗಿ ನಿರ್ಮಿಸುತ್ತವೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಪ್ರಪಂಚದ ಇತರ ಎಲ್ಲಾ ಖಂಡಗಳಿಗಿಂತಲೂ ದೀರ್ಘವಾದ ಮಾನವ ಇತಿಹಾಸವಿರುವುದು ಆಫ್ರಿಕಾದಲ್ಲಿ ಎನ್ನುವ ಅಂಶ ತಿಳಿದುಬಂದಿದೆ. ಏಷ್ಯವನ್ನು ‘ನಾಗರಿಕತೆಯ ತೊಟ್ಟಿಲು’ ಎಂಬುದಾಗಿ ಕರೆದರೆ ಆಫ್ರಿಕಾ ಮಾನವನ ಜನ್ಮಸ್ಥಳವೇ ಆಗಿದೆ. ಆಫ್ರಿಕಾದ ವಿಭಜನೆ ಅಥವಾ ಆಫ್ರಿಕಾವನ್ನು ತಮ್ಮಲ್ಲೇ ಹಂಚಿಕೊಳ್ಳುವುದಕ್ಕಾಗಿ ಯುರೋಪಿನ ರಾಷ್ಟ್ರಗಳ ನಡುವೆ ನಡೆದ ಕಿತ್ತಾಟ ಇತಿಹಾಸಕಾರರಿಗಂತೂ ಹೊಸ ಅನುಭವಗಳನ್ನು ನೀಡಿದೆ. ಇದು ಒಮ್ಮಿಂದೊಮ್ಮೆಗೆ ನಡೆದ ಘಟನೆಯಾಗಿರದೆ ದೀರ್ಘ ಪ್ರಕ್ರಿಯೆಯಾಗಿದೆ. ಆಫ್ರಿಕಾಕ್ಕೆ ಪ್ರವೇಶಿಸುವ ಮೊದಲು ಯುರೋಪಿನ ರಾಷ್ಟ್ರಗಳಿಗೆ ನಿರ್ದಿಷ್ಟ ಪ್ರದೇಶದ ಪರಿಚಯವಾಗಲಿ ಅಥವಾ ಇಂತದ್ದೇ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಬೇಕೆಂಬ ಖಚಿತತೆಯಾಗಲಿ ಇರಲಿಲ್ಲ. ಆದರೂ ಯುರೋಪಿನ ರಾಜಕೀಯ ಮತ್ತು ಆರ್ಥಿಕ ಅಂಶಗಳು ಇಲ್ಲಿ ಪ್ರಮುಖ ಪಾತ್ರ ವಹಿಸಿದವು.

ಹೊಸ ಯಂತ್ರಗಳ ಆವಿಷ್ಕಾರದಿಂದಾಗಿ ಯುರೋಪಿನ ಒಟ್ಟು ಪರಿಸ್ಥಿತಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಉಂಟಾದವು. ಹತ್ತೊಂಬತ್ತನೇ ಶತಮಾನದ ಪ್ರಮುಖ ಲಕ್ಷಣಗಳಲ್ಲಿ ಪ್ರಪಂಚವನ್ನು ಯುರೋಪೀಕರಣಗೊಳಿಸುವುದೂ ಒಂದು. ಸುಮಾರು ಹದಿನೈದನೇ ಶತಮಾನದಿಂದಲೇ ಈ ಪ್ರಕ್ರಿಯೆ ಪ್ರಾರಂಭಗೊಂಡರೂ ಕೈಗಾರಿಕಾ ಕ್ರಾಂತಿಯ ನಂತರ ಅದೊಂದು ಸಿದ್ಧಾಂತವಾಗಿ ರೂಪುಗೊಂಡಿತು. ವಸಾಹತುಶಾಹಿ ಧೋರಣೆ ಪ್ರಮುಖವಾಗಿ ಆಫ್ರಿಕಾ ಮತ್ತು ಏಷ್ಯಾದ ರಾಷ್ಟ್ರಗಳನ್ನು ನೇರವಾಗಿ ಯುರೋಪ್ ಕೇಂದ್ರಿತ ವ್ಯವಸ್ಥೆಯ ಹತೋಟಿಗೆ ತಂದಿತು. ಬ್ರಿಟಿಷ್, ಫ್ರೆಂಚ್, ಪೋರ್ಚುಗೀಸ್, ಸ್ಪೈನ್ ಹಾಗೂ ಡಚ್ಚರು ಈ ಬೆಳವಣಿಗೆಯ ಪ್ರಮುಖ ಸೂತ್ರಧಾರಿಗಳು. ನೆಪೋಲಿಯನ್ ಬೊನಾಪಾರ್ಟಿಯ ಅವನತಿಯಿಂದ ಪ್ರಥಮ ಜಾಗತಿಕ ಯುದ್ಧದವರೆಗಿನ ಅವಧಿಯಲ್ಲಿ, ಯುರೋಪಿಯನ್ನರು ಹೆಚ್ಚು ಸಂಖ್ಯೆಯಲ್ಲಿ ಸಮುದ್ರದಾಚೆಯ ಪ್ರದೇಶಗಳಿಗೆ ವಲಸೆ ಹೋಗಿ ತಮ್ಮ ಪ್ರಭುತ್ವವನ್ನು ಸ್ಥಾಪಿಸುವ ಕಾರ್ಯದಲ್ಲಿ ತೊಡಗಿದರು. ಇಲ್ಲಿ ವಸಾಹತುಶಾಹಿಯ ಉಗಮಕ್ಕೆ ಅನೇಕ ಕಾರಣಗಳನ್ನು ಗುರುತಿಸಬಹುದು. ಲೆನಿನ್ ಅವರ ಪ್ರಕಾರ ಆರ್ಥಿಕ ಅಂಶಗಳೇ ವಸಾಹತುಶಾಹಿಯ ಉಗಮಕ್ಕೆ ಪ್ರಮುಖ ಕಾರಣ. ಆದರೆ ಎಲ್ಲಾ ಸಂದರ್ಭದಲ್ಲಿಯೂ ಇದು ಸರಿಯೆನಿಸುವುದಿಲ್ಲ. ಏಕೆಂದರೆ ಫ್ರಾನ್ಸ್‌ನ ಉದ್ದೇಶ ಹೊರನಾಡಿನಿಂದ ಸಂಪನ್ಮೂಲಗಳನ್ನು ತರುವುದೇ ಆಗಿರಲಿಲ್ಲ. ಇಲ್ಲಿ ದೇಶದ ಘನತೆ ಮತ್ತು ರಾಜಕೀಯ ಪ್ರತಿಷ್ಠೆಯೂ ಬಹುಮುಖ್ಯವಾದ ಸಂಗತಿಯಾಗಿದೆ. ಆಫ್ರಿಕಾ ಖಂಡದಲ್ಲಿ ವಸಾಹತುಶಾಹಿ ಧೋರಣೆ ಅನುಷ್ಠಾನಗೊಳ್ಳುವಲ್ಲಿ ಯುರೋಪಿನ ಭೂಶೋಧಕರ ಪಾತ್ರವೂ ಹಿರಿದಾದದ್ದು.

ಹೊಸ ಅನ್ವೇಷಣೆಗಳು

ಹತ್ತೊಂಬತ್ತನೆಯ ಶತಮಾನವನ್ನು ಅನ್ವೇಷಣೆಯ ಯುಗವೆಂದೂ ಕರೆಯಲಾಗಿದೆ. ಆರಂಭದ ಅವಧಿಯಲ್ಲಿ ಆಫ್ರಿಕಾದ ಕರಾವಳಿ ಪ್ರದೇಶದ ಪರಿಚಯ ಮಾತ್ರವಿಲ್ಲ ಯೂರೋಪಿಯನ್ನರಿಗೆ ಅನ್ವೇಷಣೆಯಿಂದಾಗಿ ಒಳಭಾಗಕ್ಕೂ ಪ್ರವೇಶ ಪಡೆಯಲು ಸಾಧ್ಯವಾಯಿತು. ಅಮೆರಿಕ, ಆಸ್ಟ್ರೇಲಿಯಾ ಹಾಗೂ ಏಷ್ಯಾದ ಹಲವಾರು ಪ್ರದೇಶಗಳನ್ನು ಅದೇ ಹೊತ್ತಿಗೆ ಕಂಡುಹಿಡಿಯಲಾಯಿತು. ಆಫ್ರಿಕಾದ ಪ್ರಸಿದ್ಧ ನೈಲ್ ನದಿಯ ಕುರಿತು ಇಂಗ್ಲೆಂಡಿನ ಅನ್ವೇಷಕ ಸ್ಪೀಕೇ ಎನ್ನುವಾತ ೧೮೫೮ರಲ್ಲಿ ಹೊಸ ಮಾಹಿತಿಗಳನ್ನು ನೀಡಿದ. ನೈಲ್ ಪರಿಸರದಲ್ಲಿ ಒಂದು ಸರೋವರವನ್ನು ಪತ್ತೆ ಮಾಡಿ ಅದಕ್ಕೆ ವಿಕ್ಟೋರಿಯಾ ನ್ಯಾಸಾ ಎಂದು ಹೆಸರಿಸಿದ. ಆರು ವರ್ಷಗಳ ತರುವಾಯ ಸರ್ ಸ್ಯಾಮ್‌ವೆಲ್ ಬೇಕರ್ ಎಂಬಾತ ಮತ್ತೊಂದು ಸರೋವರವನ್ನು ಕಂಡುಹಿಡಿದು ಅದಕ್ಕೆ ಆಲ್ಬರ್ಟ್ ನ್ಯಾಸಾ ಎಂದು ಹೆಸರಿಟ್ಟ. ಆಫ್ರಿಕಾದ ವಿವಿಧ ಭೂಪ್ರದೇಶಗಳನ್ನು ಕಂಡುಹಿಡಿದವರಲ್ಲಿ ಇಬ್ಬರು ಪ್ರಮುಖರು. ಅವರೆಂದರೆ ಹೆನ್ರೀ ಹೆಚ್.ಸ್ಪೇನ್ ಲೀ ಮತ್ತು ಡೇವಿಡ್ ಲಿವಿಂಗ್ ಸ್ಟೋನ್ ೧೮೪೦ರಲ್ಲಿ ಆಫ್ರಿಕಾದ ಅನ್ವೇಷಣೆಯಲ್ಲಿ ತೊಡಗಿದರು. ೧೮೭೩ರವರೆಗೆ ಅಂದರೆ ಅವರ ಸಾವಿನವರೆಗೂ ಆಫ್ರಿಕಾದ ವಿವಿಧ ಭಾಗಗಳಲ್ಲಿ ಸಂಚರಿಸಿ ಹೊರಪ್ರಪಂಚಕ್ಕೆ ಅನೇಕ ಕುತೂಹಲಕಾರಿ ಅಂಶಗಳನ್ನು ಹೊರಗೆಡವಿದರು. ಆಫ್ರಿಕಾದ ಮಧ್ಯಭಾಗವನ್ನು ಅಂದರೆ ಕಾಂಗೋ ಪ್ರದೇಶವನ್ನು ಪ್ರವೇಶಿಸಿ ಜಾಂಬೆಸೀ ನದಿಯ ಕುರಿತು ಶೋಧ ಪ್ರಾರಂಭಿಸಿದರು. ಟಾಂಗಾನ್ಯಕಾ ಮತ್ತು ನ್ಯಾಸಾ ಸರೋವರಗಳನ್ನೂ ಕಂಡುಹಿಡಿದರು. ಸಮುದ್ರದಿಂದ ಸಮುದ್ರಕ್ಕೆ ಆಫ್ರಿಕಾವನ್ನು ದಾಟಿ ಪ್ರಪಂಚಕ್ಕೆ ಆಫ್ರಿಕಾದ ಶ್ರೀಮಂತ ಭೂಪ್ರದೇಶಗಳ ಕುರಿತು ಮಾಹಿತಿಗಳನ್ನು ಒದಗಿಸಿದರು. ಆದರೆ ಲಿವಿಂಗ್ ಸ್ಟೋನ್ ಅವರ ಸುಳಿವೇ ಸಿಕ್ಕದ ಕಾರಣ ಹೆನ್ರೀ ಸ್ಟೇನ್ ಲೀ ಅವರನ್ನು ಆಫ್ರಿಕಾಕ್ಕೆ ಕಳುಹಿಸಲಾಯಿತು. ೧೮೭೨ರಲ್ಲಿ ಸ್ಟೇನ್ ಲೀಯು ಲಿವಿಂಗ್ ಸ್ಟೋನ್ ಅವರನ್ನು ಭೇಟಿಯಾದ.

ಸ್ಟೇನ್ ಲೀ ಮತ್ತು ಲಿವಿಂಗ್ ಸ್ಟೋನ್‌ರವರ ಅನ್ವೇಷಣೆಯ ಉದ್ದೇಶಗಳು ಬೇರೆ ಬೇರೆಯದಾಗಿತ್ತು. ಲಿವಿಂಗ್ ಸ್ಟೋನ್ ಕುತೂಹಲದಿಂದ ಆಫ್ರಿಕಾದ ವಿವಿಧ ಭಾಗಗಳಿಗೆ ಸಂಚರಿಸಿದರೆ, ಸ್ಟೇನ್ಲೀ ರಾಜಕೀಯ ಹಾಗೂ ಆರ್ಥಿಕ ಉದ್ದೇಶಗಳಿಗಾಗಿ ಸೂಕ್ತ ಪ್ರದೇಶಗಳ ಹುಡುಕಾಟವನ್ನು ಆರಂಭಿಸಿದ. ಆಫ್ರಿಕಾದಲ್ಲಿ ತಾನು ಕಂಡುಹಿಡಿದ ಹೊಸ ಪ್ರದೇಶಗಳ ಮಾಹಿತಿಯನ್ನು ಬೆಲ್ಜಿಯಂನ ಅರಸ ಎರಡನೆಯ ಲಿಯೋಪೋಲ್ಡ್‌ಗೆ ಕಳುಹಿಸುತ್ತಿದ್ದ. ಮಧ್ಯ ಆಫ್ರಿಕಾವನ್ನು ಬೆಲ್ಜಿಯಂನ ಅಧೀನಕ್ಕೆ ತರುವ ನಿರ್ಧಾರವನ್ನು ಲಿಯೋಪೋಲ್ಡ್ ಹೊಂದಿದ್ದ. ಸ್ಟೇನ್ಲಿಯ ಮಹತ್ವದ ಸಾಧನೆಯೆಂದರೆ ಕಾಂಗೋ ನದಿಯ ಕುರಿತಾಗಿ ಮಾಡಿದ ಅನ್ವೇಷಣೆ ಹಾಗೂ ಅದರ ಉಪಯುಕ್ತತೆಯ ಬಗ್ಗೆ ಕೊಟ್ಟಿರುವ ಮಾಹಿತಿ. ಆಫ್ರಿಕಾದ ಅನ್ವೇಷಣೆಯ ಸಂದರ್ಭದಲ್ಲಿ ಮುಖ್ಯವಾಗಿ ನಾಲ್ಕು ನದಿಗಳನ್ನು ಗಮನದಲ್ಲಿರಿಸಿಕೊಳ್ಳಲಾಗಿತ್ತು. ಅವುಗಳೆಂದರೆ ನೈಗರ್, ಜಾಂಬೆಸ್ಸೀ, ನೈಲ್ ಮತ್ತು ಕೀಂಗೋ. ನೈಗರ್ ನದಿಯ ಕುರಿತು ಮುನ್ ಗೋ ಪಾರ್ಕ್, ಹ್ಯೂಗ್ ಕ್ಲಾಪ್ಟರ್ ಟನ್, ಲಾಂಡರ್ ಸಹೋದರರು, ವಿಲ್ಯಮ್ ಬೈಕೀ, ರೇನೀ ಕ್ಯೆಲೀ, ಫ್ರೆಂಚ್ ಮತ್ತು ಜರ್ಮನ್ ಅನ್ವೇಷಕರು ಶೋಧನೆ ನಡೆಸಿದರು. ಡೇವಿಡ್ ಲಿವಿಂಗ್ ಸ್ಟೋನ್ ಜಾಂಬೆಸ್ಸೀ ನದಿಯನ್ನು ಕಂಡುಹಿಡಿದರು. ರಿಚರ್ಡ್ ಬರ್ಟನ್, ಜೋನ್ ಹ್ಯಾನಿಂಗ್ ಸ್ಪೀಕೇ ಮತ್ತು ಸ್ಯಾಮ್ ವೆಲ್ ಬೇಕರ್ ನೈಲ್ ನದಿಯನ್ನು ಕಂಡುಹಿಡಿದರೆ, ಸ್ಟೇನಿ್ಲೀ ಕಾಂಗೋ ನದಿಯನ್ನು ಪತ್ತೆ ಮಾಡಿದ. ಇದೇ ರೀತಿ ಜರ್ಮನಿಯ ಗೆರ್ ಹಾರ್ಡ್ ರೋಲ್ಪ್, ಕಾರ್ಲ್‌ಪೀಟರ್, ಪೋರ್ಚುಗೀಸರ ಸೆರ್ಪಾ ಪಿಂಟೋ, ಫ್ರಾನ್ಸ್ ದೇಶದ ಡಿ ಬ್ರಾಸ್ಸಾ ಮುಂತಾದವರು ಮಧ್ಯ ಆಫ್ರಿಕಾದ ಕುರಿತು ಯೂರೋಪಿನಾದ್ಯಂತ ಹೆಚ್ಚಿನ ಆಸಕ್ತಿ ಮತ್ತು ಕುತೂಹಲವನ್ನು ಮೂಡಿಸಿದ್ದು ಸ್ಟೇನ್ಲೀಯವರು ಕೃತಿಗಳು. ಅವುಗಳೆಂದರೆ ಹೌ ಐ ಫೌಂಡ್ ಲಿವಿಂಗ್ ಸ್ಟೋನ್ ತ್ರೂ ದ ಡಾರ್ಕ್ ಕಾಂಟಿನೆಂಟ್ ಮತ್ತು ಇನ್ ಡಾರ್ಕೆಸ್ಟ್ ಆಫ್ರಿಕಾ. ಈ ಎಲ್ಲಾ ಅನ್ವೇಷಕರು ತಮ್ಮ ಭಾಷಣಗಳಲ್ಲಿ, ಲೇಖನಗಳಲ್ಲಿ ಮತ್ತು ಗ್ರಂಥಗಳಲ್ಲಿ ತಾವು ಕಂಡುಕೊಂಡ ಹೊಸ ವಿಷಯಗಳ ಕುರಿತು ಪ್ರಚಾರ ಮಾಡಿದ್ದರಿಂದಾಗಿ ಯುರೋಪಿನಾದ್ಯಂತ ಆಫ್ರಿಕಾ ಒಂದು ಅಧ್ಯಯನದ ವಸ್ತುವಾಯಿತು.

ಸುಯೇಜ್ ಕಾಲುವೆಯ ನಿರ್ಮಾಣ

ಆಫ್ರಿಕಕ್ಕಾಗಿ ಯುರೋಪಿನ ರಾಷ್ಟ್ರಗಳ ನಡುವೆ ನಡೆದ ಕಿತ್ತಾಟದ ಬಗ್ಗೆ ಚರ್ಚಿಸುವಾಗ ಈಜಿಪ್ಟ್ ಬಹುಮುಖ್ಯವಾದ ಅಧ್ಯಾಯವಾಗುತ್ತದೆ. ಈಜಿಪ್ಟ್‌ನ ಇತಿಹಾಸದ ಕುರಿತು ಚರ್ಚಿಸುವಾಗ ಅದು ಆಫ್ರಿಕಾಕ್ಕೆ ಸಂಬಂಧಪಟ್ಟಿಲ್ಲವೇನೋ ಎಂಬ ರೀತಿಯಲ್ಲಿ ಕೆಲ ಇತಿಹಾಸಕಾರರು ವ್ಯಾಖ್ಯಾನಿಸುತ್ತಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಈಜಿಪ್ಟ್ ಹಿಂದಿನಿಂದಲೂ ಮೆಡಿಟರೇನಿಯನ್ ಮತ್ತು ಏಷ್ಯಾದೊಡನೆ ಹೆಚ್ಚಿನ ಸಂಪರ್ಕವನ್ನು ಇಟ್ಟುಕೊಂಡಿದೆ. ಆದರೆ ಇದೇ ರೀತಿ ದಕ್ಷಿಣದ ನೀಗ್ರೋ ಜನಾಂಗದೊಡನೆಯೂ ಸಂಪರ್ಕವನ್ನು ಇಟ್ಟುಕೊಂಡಿದೆ. ಈಜಿಪ್ಟ್‌ಗೆ ಯುರೋಪಿನ ರಾಷ್ಟ್ರಗಳು ಆಗಮಿಸುವ ಮೊದಲೇ ಅಂದರೆ ಕ್ರಿ.ಶ.೧೫೧೭ರಲ್ಲಿಯೇ ಅಟ್ಟೋಮಾನ್ ಟರ್ಕರು ಈಜಿಪ್ಟನ್ನು ವಶಪಡಿಸಿಕೊಂಡಿದ್ದರು. ಹತ್ತೊಂಬತ್ತನೇ ಶತಮಾನದಲ್ಲಿ ಈಜಿಪ್ಟ್‌ನಲ್ಲಿ ಪ್ರಾರಂಭಗೊಂಡ ರಾಷ್ಟ್ರೀಯ ಚಳುವಳಿಯು ಯುರೋಪಿನ ರಾಷ್ಟ್ರಗಳನ್ನು ವಿರೋಧಿಸುವುದಕ್ಕಿಂತ ಮುಂಚಿತವಾಗಿ ಟರ್ಕಿಯನ್ನು ವಿರೋಧಿಸಿತ್ತು ಎನ್ನುವ ಅಂಶವನ್ನು ನಾವು ಗಮನಿಸ ಬೇಕಾಗುತ್ತದೆ. ಯುರೋಪಿಯನ್ ರಾಷ್ಟ್ರಗಳ ಗಮನ ಈಜಿಪ್ಟ್‌ನತ್ತ ಸೆಳೆಯಲು ಪ್ರಮುಖ ಕಾರಣ ನೆಪೋಲಿಯನ್ ಬೊನಾಪಾರ್ಟೆಯ ೧೭೮೯-೯೯ರ ಈಜಿಪ್ಟ್‌ನ ದಂಡಯಾತ್ರೆ. ಈ ದಂಡ ಯಾತ್ರೆಯ ಉದ್ದೇಶ ಹಲವಾರಿದ್ದರೂ ಬ್ರಿಟಿಷರನ್ನು ಸದೆಬಡಿಯುವುದೇ ಪ್ರಮುಖವಾಗಿತ್ತು. ಈಜಿಪ್ಟ್‌ನಲ್ಲಿ ನಡೆದ ಯುದ್ಧದ ದೃಷ್ಟಿಯಿಂದ ವಿಶ್ಲೇಷಿಸಿದರೆ ಇದೊಂದು ದೊಡ್ಡ ದುರಂತ. ಆದರೂ ಇದರ ಪರಿಣಾಮ ಮಹತ್ವದ ಬೆಳವಣಿಗೆಗೆ ಕಾರಣವಾಯಿತು. ಈಜಿಪ್ಟ್‌ನ ಅಧಿಕಾರವನ್ನು ವಹಿಸಿಕೊಂಡ ಅಲ್ಬೇನಿಯಾದ ಮೆಹೆಮತ್ ಆಲಿಯು ನೆಪೋಲಿಯನ್ ಬೊನಾಪಾರ್ಟಿಯ ಸುಧಾರಣೆಗಳನ್ನೇ ಜಾರಿಗೆ ತರಲು ನಿರ್ಧರಿಸಿದ. ಇದೇ ಹೊತ್ತಿಗೆ ಸೂಡಾನ್ ಮತ್ತು ಸಿರಿಯಾವನ್ನು ಈಜಿಪ್ಟ್‌ಗೆ ಸೇರಿಸಿಕೊಳ್ಳಲಾಯಿತು. ಈಜಿಪ್ಟ್‌ನ್ನು ಆಧುನೀಕರಿಸುವ ಯೋಜನೆಯನ್ನು ಕೈಗೊಂಡು ಅದರ ಈಡೇರಿಕೆಗೆ ಫ್ರೆಂಚ್ ಅನುಭವಿಗಳನ್ನು ನೇಮಿಸಿಕೊಂಡ. ಈಜಿಪ್ಟ್ ಫ್ರಾನ್ಸ್ ನೊಡನೆ ಉತ್ತಮ ಸಂಬಂಧವನ್ನು ಹೊಂದಿರುವುದರಿಂದಾಗಿ ಬ್ರಿಟನ್ ಈಜಿಪ್ಟ್‌ನ ವಿರುದ್ಧ ಪಿತೂರಿ ನಡೆಸಲು ಪ್ರಾರಂಭಿಸಿತು. ಇದೇ ಉದ್ದೇಶದಿಂದ ಬ್ರಿಟನ್ನಿನ ವಿದೇಶಾಂಗ ಕಾರ್ಯದರ್ಶಿ ಪಾಮರ್ ಸ್ವನ್ ೧೮೪೦ರಲ್ಲಿ ರಷ್ಯಾ, ಪ್ರಷ್ಯಾ ಮತ್ತು ಆಸ್ಟ್ರಿಯಾದೊಡನೆ ಮೈತ್ರಿ ಸಂಪಾದಿಸಿಕೊಂಡು ಮೆಹೆಮತ್ ಆಲಿಯ ಅಧಿಕಾರವನ್ನು ಕುಂಠಿತಗೊಳಿಸಲು ಮತ್ತು ಟರ್ಕಿಯ ಅರಸರಿಗೆ ಸಹಾಯ ಮಾಡಲು ನಿರ್ಧರಿಸಿದ. ಈ ಅವಧಿಯಲ್ಲಿ ಕ್ರಿಮಿಯಾ ಯುದ್ಧವೂ ನಡೆಯುತ್ತಿತ್ತು. ೧೮೪೯ರಲ್ಲಿ ಅಬ್ಬಾಸ್ ಅಧಿಕಾರಕ್ಕೆ ಬಂದಾಗ ಹೆಚ್ಚು ಚರ್ಚೆಗೆ ಈಡಾದ ಅಂಶವೆಂದರೆ ಸುಯೇಜ್ ಕಾಲುವೆಯ ನಿರ್ಮಾಣದ ಕುರಿತು ಉದ್ಭವಿಸಿದ ಸಮಸ್ಯೆ.

ಸುಯೇಜ್ ಕಾಲುವೆಯ ನಿರ್ಮಾಣ ಬ್ರಿಟನ್ ಮತ್ತು ಫ್ರಾನ್ಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಎರಡೂ ರಾಷ್ಟ್ರಗಳು ನೇರವಾಗಿ ಭಾಗವಹಿಸಿದವು. ಈಜಿಪ್ಟ್‌ನಲ್ಲಿ ಏಕಸಾಮ್ಯವನ್ನು ಸ್ಥಾಪಿಸುವುದೇ ಎರಡೂ ರಾಷ್ಟ್ರಗಳ ಉದ್ದೇಶವಾಗಿತ್ತು. ಸುಯೇಜ್ ಕಾಲುವೆಗೆ ಇಂಗ್ಲೆಂಡ್ ಪ್ರಾಮುಖ್ಯತೆಯನ್ನು ಕೊಡಲು ಅನೇಕ ಕಾರಣಗಳಿದ್ದವು. ಈ ಕಾಲುವೆಯ ಮೂಲಕ ಬ್ರಿಟನ್ನಿನ ಸುಮಾರು ಶೇಕಡಾ ಎಂಬತ್ತೆರಡರಷ್ಟು ವ್ಯಾಪಾರ ಹಾದುಹೋಗುತ್ತಿತ್ತು. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ನಲ್ಲಿದ್ದ ಬ್ರಿಟನ್ನಿನ ವಸಾಹತು ಸಾಮ್ರಾಜ್ಯಕ್ಕೂ ಈ ಕಾಲುವೆಯೇ ಪ್ರಮುಖ ಹಾದಿಯಾಗಿತ್ತು. ಭಾರತ, ಸಿಲೋನ್, ಬರ್ಮಾ ಹಾಗೂ ಚೀನಾ ದೇಶಗಳಿಗೆ ಈ ಕಾಲುವೆಯ ಮೂಲಕವೇ ಹಾದುಹೋಗಬೇಕಾಗಿತ್ತು. ಈ ಕಾರಣದಿಂದಾಗಿಯೇ ಫ್ರಾನ್ಸ್ ಮತ್ತು ಇಂಗ್ಲೆಂಡಿನ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಯಿತು. ಅಬ್ಬಾಸ್‌ನ ಮರಣದ ನಂತರ ಅಧಿಕಾರಕ್ಕೆ ಬಂದ ಇಸ್ಮಾಯಿಲ್ ಸುಯೇಜ್ ಕಾಲುವೆಗಾಗಿ ನಡೆಯುತ್ತಿದ್ದ ವಾದ-ವಿವಾದಗಳಲ್ಲಿ ಭಾಗಿಯಾಗಬೇಕಾಯಿತು. ೧೮೬೯ರಲ್ಲಿ ಸುಯೇಜ್ ಕಾಲುವೆಯ ಕಾಮಗಾರಿ ಫ್ರಾನ್ಸ್‌ನ ನೆರವಿನಿಂದಾಗಿ ಪೂರ್ಣಗೊಂಡಿತು. ಬ್ರಿಟನ್ ಇದನ್ನು ವಿರೋಧಿಸಿ ಇಸ್ಮಾಯಿಲ್‌ನ ಮೇಲೆ ಅನೇಕ ಒತ್ತಡಗಳನ್ನು ಹೇರಿತು. ಇಲ್ಲಿ ಎರಡೂ ರಾಷ್ಟ್ರಗಳು ಈಜಿಪ್ಟ್‌ನ ಆರ್ಥಿಕ ಪರಿಸ್ಥಿತಿಯ ಕುರಿತು ಹೆಚ್ಚಿನ ನಿಗಾ ವಹಿಸಿದವು. ೧೮೮೨ರಲ್ಲಿ ಈಜಿಪ್ಟ್ ಬ್ರಿಟನ್ನಿನ ಅಧೀನಕ್ಕೆ ಬಂತು. ಇದರ ಜತೆಗೇ ಸುಯೇಜ್ ಕಾಲುವೆಯ ಮೇಲಿನ ಅಧಿಕಾರವೂ ಬಂದಿತು.

ಅಪಾರವಾದ ಹಣವನ್ನು ಸುಯೇಜ್ ಕಾಲುವೆಯ ಕಾಮಗಾರಿಗೆ ವಿನಿಯೋಗಿಸಿದ್ದರಿಂದಾಗಿ ಫ್ರಾನ್ಸ್‌ನ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಬ್ರಿಟನ್ ಈಜಿಪ್ಟ್‌ನ ಮೇಲೆ ಸೈನಿಕ ದಾಳಿಯನ್ನು ನಡೆಸಿತು. ಯೂರೋಪಿನ ಇತರ ರಾಷ್ಟ್ರಗಳು ಬ್ರಿಟಿನ್ನಿನ ಸಾಮ್ರಾಜ್ಯಶಾಹಿ ನೀತಿಯನ್ನು ಖಂಡಿಸಿದವು. ಆದರೂ ಪಾಮರ್‌ಸ್ಟನ್, ಡಿಸ್ ರೈಲೀ, ಗೋಸ್ಟನ್ ಗ್ಲಾಡ್‌ಸ್ಟೋನ್ ಮತ್ತು ಚರ್ಚಿಲ್‌ರ ಯೋಜನೆಗಳಿಂದಾಗಿ ಬ್ರಿಟನ್ ಯುದ್ಧದಲ್ಲಿ ಜಯಶಾಲಿಯಾಯಿತು. ಇದರೊಡನೆ ಸುಯೇಜ್ ಕಾಲುವೆಗಾಗಿ ಬ್ರಿಟನ್ ಮತ್ತು ಫ್ರಾನ್ಸ್‌ನ ನಡುವೆ ನಡೆಯುತ್ತಿದ್ದ ಹೋರಾಟ ಮುಕ್ತಾಯಗೊಂಡಿತು. ೧೯೦೪ರಲ್ಲಿ ಎರಡೂ ರಾಷ್ಟ್ರಗಳೊಡನೆ ಒಡಂಬಡಿಕೆ ಏರ್ಪಟ್ಟಿತು. ಈಜಿಪ್ಟ್‌ನಲ್ಲಿ ಬ್ರಿಟನ್ ಮತ್ತು ಫ್ರಾನ್ಸ್ ತಮ್ಮ ವೈಯಕ್ತಿಕ ಹಿತಾಸಕ್ತಿಗಳ ಈಡೇರಿಕೆಗಾಗಿ ನಡೆಸಿದ ಹೋರಾಟ ಅಷ್ಟಕ್ಕೇ ಸೀಮಿತವಾಗಿರದೆ ಇಡೀ ಆಫ್ರಿಕಾ ಖಂಡಕ್ಕೆ ಹರಡಿತು. ಅಫ್ರಿಕಾದ ವಿಭಜನೆಯ ಪ್ರಥಮ ಹಂತ ಇಲ್ಲಿಂದಲೇ ಪ್ರಾರಂಭಗೊಂಡಿತು. ಜೆ.ಎ. ಹೋಬ್ಸನ್‌ರ ಪ್ರಕಾರ ಈಜಿಪ್ಟ್‌ನಲ್ಲಾದ ರಾಜಕೀಯ ಹಾಗೂ ಆರ್ಥಿಕ ಬದಲಾವಣೆಗಳು ಸಾಮ್ರಾಜ್ಯಶಾಹಿ ಧೋರಣೆಯ ಎಲ್ಲಾ ಅಂಶಗಳನ್ನೂ ಒಳಗೊಂಡಿವೆ ಮತ್ತು ಹಣಕಾಸಿನ ಪ್ರಶ್ನೆಯೇ ಮುಖ್ಯವಾಗಿರದೆ ರಾಜಕೀಯ ಉದ್ದೇಶವೂ ಬೆಸೆದುಕೊಂಡಿದೆ.

ಪಶ್ಚಿಮ ಆಫ್ರಿಕಾ

ಪಶ್ಚಿಮ ಆಫ್ರಿಕಾಕ್ಕೆ ಯೂರೋಪಿನ ಬಹುತೇಕ ಎಲ್ಲಾ ರಾಷ್ಟ್ರಗಳೂ ಪ್ರವೇಶಿಸಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು, ತಮ್ಮ ವ್ಯಾಪಾರದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಪರಸ್ಪರ ಕಿತ್ತಾಟ ಪ್ರಾರಂಭಿಸಿದವು. ಪಶ್ಚಿಮ ಅಫ್ರಿಕಾದಲ್ಲಿ ಹೆಚ್ಚು ಪ್ರದೇಶಗಳನ್ನು ಬ್ರಿಟನ್ ಸ್ವಾಧೀನಪಡಿಸಿಕೊಂಡಿತ್ತು. ಬ್ರಿಟನ್ ಗಿನಿಯಾ ಕಿನಾರೆಯ ಮೂಲಕ ವೆಸ್ಟ್ ಇಂಡೀಸ್‌ನೊಡನೆ ವ್ಯಾಪಾರ ಸಂಪರ್ಕವನ್ನು ಇಟ್ಟುಕೊಂಡಿತ್ತು. ಇದು ತನ್ನ ವಸಾಹತು ನೆಲೆಯಾದ ಲಾಗೋಸ್‌ನ್ನು ನೈಗರ್‌ನೊಡನೆ ಸೇರಿಸಿಕೊಂಡು ೧೮೬೫ರಲ್ಲಿ ಉತ್ತರದ ಕಡೆಗೆ ಸಾಮ್ರಾಜ್ಯ ವಿಸ್ತರಿಸಿ ನೈಜೀರಿಯಾವನ್ನು ವಶಪಡಿಸಿಕೊಂಡಿತು. ಆದರೆ ಫ್ರೆಂಚರು ಸೆನೆಗಲ್‌ನಲ್ಲಿ ಬಲಿಷ್ಠವಾಗಿದ್ದರಿಂದಾಗಿ ಗಾಂಬಿಯಾವನ್ನು ಸಂಪೂರ್ಣವಾಗಿ ಸ್ವಾಧೀನಕ್ಕೆ ತರಲು ಸಾಧ್ಯವಾಗಲಿಲ್ಲ. ೧೮೫೦ ಮತ್ತು ೧೮೭೨ರಲ್ಲಿ ಕೇಪ್‌ಕೋಸ್ಟ್ ಮತ್ತು ಡಚ್ಚರ ಅನೇಕ ವ್ಯಾಪಾರಿ ನೆಲೆಗಳನ್ನು ವಶಪಡಿಸಿಕೊಳ್ಳಲಾಯಿತು. ಗೋಲ್ಡ್ ಕೋಸ್ಟ್ ಬ್ರಿಟಿನ್ನಿನ ಪ್ರಮುಖ ವ್ಯಾಪಾರದ ಸ್ಥಳವಾಗಿತ್ತು. ಇಲ್ಲಿನ ಸ್ಥಳೀಯ ಪಾಂತಿ ಜನಾಂಗದವರು ಬ್ರಿಟೀಷರೊಡನೆ ಉತ್ತಮ ಸಂಬಂಧವನ್ನು ಹೊಂದಿದ್ದರೂ ಅವರದ್ದೇ ಆದ ಅಶಾಂತಿ (ಇದೊಂದು ಬುಡಕಟ್ಟಿನ ಹೆಸರು) ಒಕ್ಕೂಟದೊಡನೆ ನೇರ ಭಾಗಿಗಳಾಗಿದ್ದರು. ಅಶಾಂತಿ, ಮೊದಲು ಸೀಮಿತ ಜನಾಂಗದ ಒಕ್ಕೂಟವಾಗಿದ್ದು ಕ್ರಮೇಣ ಬಲಿಷ್ಠ ಒಕ್ಕೂಟವಾಗಿ, ಪಶ್ಚಿಮ ಆಫ್ರಿಕಾದ ಬಲಿಷ್ಠ ರಾಜ್ಯವಾಗಿ ರೂಪುಗೊಂಡಿತು. ಅಶಾಂತಿ ಒಕ್ಕೂಟದ ರಾಜಧಾನಿ ಕುಮಾಷಿ ಗೋಲ್ಡ್ ಕೋಸ್ಟನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಅಶಾಂತಿ ಒಕ್ಕೂಟ ಪ್ರಯತ್ನಿಸುತ್ತಿತ್ತು. ಆದರೆ ಬ್ರಿಟೀಷರೂ ಗೋಲ್ಡ್‌ಕೋಸ್ಟಿನ ಮೇಲೆ ಆಸಕ್ತಿ ಹೊಂದಿದ್ದರಿಂದಾಗಿ ಅದು ಸುಲಭದ ಕೆಲಸವಾಗಿರಲಿಲ್ಲ. ಇದರಿಂದಾಗಿ ಪ್ರಥಮ ಅಶಾಂತಿ ಯುದ್ಧ ೧೮೨೦ರಲ್ಲಿ ಪ್ರಾರಂಭಗೊಂಡಿತು. ಪ್ರಾರಂಭದಲ್ಲಿ ಬ್ರಿಟನ್ ಸೋತರೂ ೧೮೨೬ರಲ್ಲಿ ಅಶಾಂತಿಯನ್ನು ಸೋಲಿಸಿ ತಮ್ಮ ಅಧೀನಕ್ಕೆ ತಂದರು. ಆದರೆ ಡಚ್ಚರು ಕೆಲವು ವ್ಯಾಪಾರದ ಸ್ಥಳಗಳನ್ನು ಬ್ರಿಟಿಷರಿಗೆ ಹಸ್ತಾಂತರಿಸಿದ್ದು ಇನ್ನೊಂದು ಅಶಾಂತಿ ಯುದ್ಧಕ್ಕೆ ಕಾರಣವಾಯಿತು. ೧೮೭೩ರಲ್ಲಿ ಬ್ರಿಟಿಷರ ಕಾರ್‌ನೆಟ್ ಓಲ್ಸ್ ಲೀ ಎಂಬಾತ ಅಶಾಂತಿ ಒಕ್ಕೂಟವನ್ನು ಸೋಲಿಸಿದ. ಈ ಘಟನೆ ಬ್ರಿಟನ್ನಿನ ಸಾಮ್ರಾಜ್ಯಶಾಹಿ ಧೋರಣೆಯನ್ನು ತಿಳಿಸುತ್ತದೆ. ವ್ಯಾಪಾರ ಮತ್ತು ಸಾಮ್ರಾಜ್ಯದ ವಿಸ್ತರಣೆ ಮಾತ್ರ ಬ್ರಿಟನ್ನಿನ ಉದ್ದೇಶವಾಗಿದ್ದು ಪಶ್ಚಿಮ ಆಫ್ರಿಕಾ ಈ ಪ್ರಕ್ರಿಯೆಗೆ ಸಾಧನವಾಗಬೇಕಾಯಿತು.

ಪಶ್ಚಿಮ ಆಫ್ರಿಕಾದಲ್ಲಿ ವ್ಯಾಪಾರ ಮತ್ತು ರಾಜ್ಯವಿಸ್ತಾರದ ಧೋರಣೆಯನ್ನುೊಹೊಂದಿದ್ದ ಯುರೋಪಿನ ಇನ್ನೊಂದು ರಾಷ್ಟ್ರವೆಂದರೆ ಫ್ರಾನ್ಸ್. ಗಾಂಬಿಯಾದ ಕುರಿತು ಫ್ರಾನ್ಸ್ ಮತ್ತು ಬ್ರಿಟನ್ ೧೮೬೧ರಲ್ಲಿ ಒಪ್ಪಂದವನ್ನು ಮಾಡಿಕೊಂಡವು. ಗಾಂಬಿಯಾ ಫ್ರಾನ್ಸ್‌ಗೆ ಹೆಚ್ಚು ಉಪಯುಕ್ತವಾಗಿದ್ದು ಅದನ್ನು ಸೆನೆಗಲ್‌ನೊಡನೆ ಸೇರಿಸಿಕೊಳ್ಳಲು ಪ್ರಯತ್ನ ನಡೆಸುತ್ತಿತ್ತು. ಆದರೆ ಗಾಂಬಿಯಾ ಬ್ರಿಟನ್ನಿನ ಅಧೀನದಲ್ಲಿತ್ತು. ೧೯೦೪ರಲ್ಲಿ ಆಂಗ್ಲೋ-ಫ್ರೆಂಚ್ ಒಪ್ಪಂದ ಏರ್ಪಟ್ಟಿತು. ಫ್ರೆಂಚರ ಜನರಲ್ ಪೆಡೆರ್ಬ್‌ಸೆನೆಗಲ್‌ನ ಗವರ್ನರ್ ಆಗಿ ನೇಮಕಗೊಂಡ. ಇದೇ ಸಂದರ್ಭದಲ್ಲಿ ಬ್ರಿಟನ್ನಿನ ಗೋಲ್ಡೀಯ ನೇತೃತ್ವದಲ್ಲಿ ನ್ಯಾಷನಲ್ ಆಫ್ರಿಕನ್ ಕಂಪೆನಿ ಹುಟ್ಟಿಕೊಂಡಿತು. ೧೮೮೨ರಲ್ಲಿಯೇ ಈ ಕಂಪೆನಿ ಅಧಿಕೃತವಾಗಿ ಕಾರ್ಯ ಪ್ರಾರಂಭಿಸಿತು. ೧೮೭೧ರ ಸೆಡಾನ್ ಯುದ್ಧದಲ್ಲಿ ಫ್ರಾನ್ಸ್‌ನ ಅರಸ ಮೂರನೇ ನೆಪೋಲಿಯನ್ ಸೋತಾಗ ಫ್ರಾನ್ಸ್‌ನ ವಸಾಹತುಗಳೂ ಅದರ ಪರಿಣಾಮವನ್ನು ಎದುರಿಸಬೇಕಾಗಿ ಬಂತು. ಆದರೆ ಜೂಲಿಸ್ ಪೆರ‌್ರಿಯ ನೇತೃತ್ವದಲ್ಲಿ ಫ್ರಾನ್ಸ್ ಮತ್ತೊಮ್ಮೆ ಬಲಿಷ್ಠಶಕ್ತಿಯಾಗಿ ರೂಪುಗೊಂಡು ಆಫ್ರಿಕಾದ ವಿಭಜನೆಯಲ್ಲಿ ಪಾಲ್ಗೊಂಡಿತು. ಪೆರ‌್ರಿಯ ಮಹತ್ವಾಕಾಂಕ್ಷೆಯ ಯೋಜನೆಯೆಂದರೆ ಸೆನೆಗಲ್, ಅಲ್ಜೀರಿಯಾ ಮತ್ತು ನೈಗರ್‌ಗಳಿಗೆ ರೈಲ್ವೇ ಮೂಲಕ ನೇರ ಸಂಪರ್ಕ ಕಲ್ಪಿಸುವುದು. ಸಿಯಾರಾ ಲಿಯೋನಿನಿಂದ ಕಾಂಗೋದವರೆಗಿನ ಎಲ್ಲಾ ಪ್ರಾಂತ್ಯಗಳನ್ನು ಫ್ರಾನ್ಸ್ ತನ್ನ ಹತೋಟಿಗೆ ತಂದಿತು. ೧೮೩೩ರಲ್ಲಿ ಫ್ರಾನ್ಸ್ ಪೊರ್ಟೊನೋವೋದ ಮೇಲೆ ತನ್ನ ಪಾಲಕಪ್ರಭುತ್ವ(protectorate)ವನ್ನು ಸ್ಥಾಪಿಸಿತು. ಇದರ ಮುಖ್ಯ ಉದ್ದೇಶ ಲಾಗೋಸ್‌ನಿಂದ ಗೋಲ್ಡ್‌ಕೋಸ್ಟ್‌ವರೆಗಿನ ಪ್ರದೇಶದಲ್ಲಿ ಬ್ರಿಟಿಷರ ಪ್ರಭಾವವನ್ನು ತಡೆಗಟ್ಟುವುದೇ ಆಗಿತ್ತು.

ಪಶ್ಚಿಮ ಆಫ್ರಿಕಾದ ಇತಿಹಾಸದಲ್ಲಿಯೇ ಕಾಂಗೋ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವ ಪ್ರದೇಶ. ಯುರೋಪಿನ ಎಲ್ಲಾ ರಾಷ್ಟ್ರಗಳೂ ಕಾಂಗೋದಲ್ಲಿ ತಮ್ಮ ಪ್ರಭುತ್ವವನ್ನು ಸ್ಥಾಪಿಸುವ ಸಲುವಾಗಿ ಪರಸ್ಪರ ಕಿತ್ತಾಡಿಕೊಂಡವು. ಕಾಂಗೋದ ಪ್ರಮುಖ ವ್ಯಾಪಾರಸ್ಥರು ಡಚ್ಚರು. ಆದರೆ ಪೋರ್ಚುಗೀಸರು ಹದಿನೈದನೇ ಶತಮಾನದ ಅಂತಿಮ ಭಾಗದಲ್ಲಿಯೇ ಕಾಂಗೋಗೆ ಪ್ರವೇಶಿಸಿದ್ದರು. ಕಾಂಗೋದ ಜನರಿಗೆ ಯುರೋಪಿನ ಪರಿಚಯವನ್ನು ಮಾಡಿಸಿಕೊಟ್ಟವರೇ ಪೋರ್ಚುಗೀಸರು. ಕ್ರಮೇಣ ಬ್ರೆಜಿಲ್‌ನ ಕಡೆಗೆ ಆಕರ್ಷಿತರಾಗಿದ್ದರಿಂದ ಕಾಂಗೋದೊಡನೆ ನೇರ ಸಂಪರ್ಕವನ್ನು ಹೊಂದಲು ಸಾಧ್ಯವಾಗಲಿಲ್ಲ. ಆದರೆ ಹತ್ತೊಂಬತ್ತನೇ ಶತಮಾನದಲ್ಲಿ ಯುರೋಪಿನ ರಾಷ್ಟ್ರಗಳು ಕಾಂಗೋಗೆ ಹೆಚ್ಚಿನ ಮಹತ್ವವನ್ನು ಕೊಟ್ಟಾಗ ಪೋರ್ಚುಗಲ್ ಮತ್ತೊಮ್ಮೆ ತನ್ನ ಹಿಂದಿನ ಸಂಬಂಧವನ್ನು ಮುಂದುವರಿಸಲು ಪ್ರಯತ್ನಿಸಿತು. ಬ್ರಿಟನ್ನಿನ ವಿರೋಧದಿಂದಾಗಿ ಈ ಯೋಜನೆ ಯಶಸ್ವಿಯಾಗಲಿಲ್ಲ. ಈ ಎಲ್ಲಾ ಸಂಗತಿಗಳೊಡನೆ ಹೊಸದಾಗಿ ಸೇರ್ಪಡೆಗೊಂಡ ಅಂಶವೆಂದರೆ ಬೆಲ್ಜಿಯಂನ ಅರಸ ಎರಡನೇ ಲಿಯೋಪೋಲ್ಡ್‌ನ ಕಾಂಗೋದ ಕುರಿತ ಮಹತ್ವಾಕಾಂಕ್ಷೆ. ೧೯೬೦ರಿಂದಲೇ ಲಿಯೋಪೋಲ್ಡ್ ಆಫ್ರಿಕಾದಲ್ಲಿ ತನ್ನ ವಸಾಹತು ಸಾಮ್ರಾಜ್ಯವನ್ನು ಸ್ಥಾಪಿಸುವ ಕನಸು ಕಂಡಿದ್ದ. ಇದೇ ಉದ್ದೇಶಕ್ಕಾಗಿ ೧೮೭೬ರಲ್ಲಿ ಬ್ರುಸೆನ್ಸ್‌ನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಕರೆದು ಅಲ್ಲಿಗೆ ಅನ್ವೇಷಕರು, ಭೂಗೋಳಶಾಸ್ತ್ರಜ್ಞರನ್ನು ಆಹ್ವಾನಿಸಲಾಯಿತು. ಈ ಸಮ್ಮೇಳನದ ಫಲವಾಗಿ ಅಂತಾರಾಷ್ಟ್ರೀಯ ಆಫ್ರಿಕಾ ಸಂಸ್ಥೆಯೊಂದು ಹುಟ್ಟಿಕೊಂಡಿತು. ಈ ಸಂಸ್ಥೆಯ ಅಧ್ಯಕ್ಷನಾಗಿ ಲಿಯೋಪೋಲ್ಡ್ ನೇಮಕಗೊಂಡ. ಈ ಸಂಸ್ಥೆ ಆಫ್ರಿಕಾದ ಅನೇಕ ಬುಡಕಟ್ಟು ನಾಯಕರೊಡನೆ ಸಂಪರ್ಕವನ್ನು ಇಟ್ಟುಕೊಂಡಿತು. ಲಿಯೋಪೋಲ್ಡ್‌ನ ಉದ್ದೇಶಕ್ಕೆ ಸ್ಟೇನ್ಲೀ ಸಹಾಯ ನೀಡಿದ. ೧೮೮೩ರಲ್ಲಿ ಅಂತಾರಾಷ್ಟ್ರೀಯ ಕಾಂಗೋ ಸಂಸ್ಥೆ ಹುಟ್ಟಿಕೊಂಡಿತು. ಆರಂಭದಲ್ಲಿ ಮಾಡಿಕೊಂಡ ವಾಣಿಜ್ಯ ಒಪ್ಪಂದಗಳು ಕ್ರಮೇಣ ರಾಜಕೀಯ ಒಪ್ಪಂದಗಳಾಗಿ ಮಾರ್ಪಾಡಾದವು. ಲಿಯೋಪೋಲ್ಡ್‌ನ ಈ ಯೋಜನೆ ಯುರೋಪಿನ ಇತರ ರಾಷ್ಟ್ರಗಳಿಗೆ ಆಫ್ರಿಕಾದ ಭೂಪ್ರದೇಶಗಳಿಗೆ ಸಂಬಂಧಪಟ್ಟಂತೆ ಯೋಜನೆ ರೂಪಿಸಲು ಸಹಕಾರಿಯಾಯಿತು.

ಕಾಂಗೋದಲ್ಲಿನ ಅಪಾರ ಸಂಪತ್ತನ್ನು ಗಮನದಲ್ಲಿಟ್ಟುಕೊಂಡು ಫ್ರಾನ್ಸ್ ೧೮೭೬ರಲ್ಲಿ ರಾಷ್ಟ್ರೀಯ ಕಮಿಟಿಯೊಂದನ್ನು ಹುಟ್ಟು ಹಾಕಿತು. ಫ್ರಾನ್ಸ್‌ನ ಅನ್ವೇಷಕ ಬ್ರಾಸ್ಸಾ ಈ ಯೋಜನೆಯ ರೂವಾರಿಯಾಗಿದ್ದ. ಬ್ರಾಸ್ಸಾ ಆಫ್ರಿಕಾದ ಬುಡಕಟ್ಟು ನಾಯಕ ಮೆಕಾಕೊ ನೊಡನೆ ಒಪ್ಪಂದ ಮಾಡಿಕೊಂಡು ಕಾಂಗೋದಲ್ಲಿನ ವ್ಯಾಪಾರದಲ್ಲಿ ಫ್ರಾನ್ಸ್ ಲಾಭ ಗಳಿಸುವಂತೆ ಮಾಡಿದ. ಈ ಒಪ್ಪಂದ ಬ್ರಿಟನ್ನಿನ ಮೇಲಿನ ನೇರ ಆಕ್ರಮಣವೂ ಆಗಿತ್ತು. ಇದೇ ಸಂದರ್ಭದಲ್ಲಿ ಬ್ರಿಟನ್ ಪೋರ್ಚುಗೀಸರೊಡನೆ ಕಾಂಗೋಗೆ ಸಂಬಂಧ ಪಟ್ಟಂತೆ ಒಪ್ಪಂದವನ್ನು ಮಾಡಿಕೊಂಡಿತು. ಈ ಒಪ್ಪಂದದ ಮುಖ್ಯ ಉದ್ದೇಶವೆಂದರೆ ಕಾಂಗೋ ಪ್ರಶ್ನೆಯನ್ನು ಅಂತಾರಾಷ್ಟ್ರೀಯಗೊಳಿಸುವುದು ಮತ್ತು ಫ್ರಾನ್ಸ್ ಕಾಂಗೋದಲ್ಲಿ ಲಾಭ ಗಳಿಸದಂತೆ ನೋಡಿಕೊಳ್ಳುವುದು. ಈ ಸಂದರ್ಭದಲ್ಲಿ ಜರ್ಮನಿಯ ಅಟ್ಟೋವಾನ್ ಬಿಸ್ಮಾರ್ಕ್ ಮಧ್ಯ ಪ್ರವೇಶಿಸಿದ. ಕಾಂಗೋದ ಸಮಸ್ಯೆಯ ಕುರಿತು ಚರ್ಚೆ ನಡೆಸಲು ೧೮೮೫ರಲ್ಲಿ ಬರ್ಲಿನ್‌ನಲ್ಲಿ ಸಭೆಯನ್ನು ಕರೆಯಲಾಯಿತು. ಬಿಸ್ಮಾರ್ಕ್ ಸಭೆಯ ನೇತೃತ್ವ ವಹಿಸಿದ. ಈ ಸಭೆಯಲ್ಲಿ ಅಮೆರಿಕವೂ ಭಾಗವಹಿಸಿತು. ಈ ಸಭೆಯು ಕಾಂಗೋಗೆ ಸಂಬಂಧಪಟ್ಟಂತೆ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿತು. ಅವುಗಳೆಂದರೆ ಕಾಂಗೋವನ್ನು ಅಂತಾರಾಷ್ಟ್ರೀಯ ರಾಜ್ಯವನ್ನಾಗಿ ಪರಿವರ್ತಿಸುವುದು ಮತ್ತು ಯುರೋಪಿನ ಶಕ್ತಿಗಳಿಗೆ ಅಂತರಾಷ್ಟ್ರೀಯ ನೀತಿಸಂಹಿತೆಯನ್ನು ರೂಪಿಸುವುದು. ಬಲಿನ್‌ರ್ ಕಾಯಿದೆಯ ಪ್ರಕಾರ ಯುರೋಪಿನ ಯಾವುದೇ ಒಂದು ರಾಷ್ಟ್ರಕ್ಕೂ ಕಾಂಗೋದ ಮೇಲಿನ ಅಧಿಕಾರವಿರು ವುದಿಲ್ಲ. ಎಲ್ಲಾ ರಾಷ್ಟ್ರಗಳ ವ್ಯಾಪಾರಸ್ಥರು ಕಾಂಗೋದಲ್ಲಿ ಮುಕ್ತವಾಗಿ ವ್ಯಾಪಾರವನ್ನು ನಡೆಸಬಹುದು. ಕಾಂಗೋ ನದಿಯನ್ನು ಅಂತಾರಾಷ್ಟ್ರೀಯಗೊಳಿಸಲಾಯಿತು. ಬ್ರಿಟನ್ ನೈಗರ್‌ನ ಮೇಲೆ ಹೊಂದುವ ಅಧಿಕಾರದ ಕುರಿತೂ ತೀರ್ಮಾನವನ್ನು ಕೈಗೊಳ್ಳಲಾಯಿತು. ಇಲ್ಲಿ ವಿಪರ್ಯಾಸವೆಂದರೆ ಸ್ಥಳೀಯ ಜನರ ಮೇಲೆ ಈ ಕಾಯಿದೆ ಯಾವ ರೀತಿಯ ಪ್ರಭಾವವನ್ನು ಬೀರಿತು ಎನ್ನುವುದು ಯಾವ ರಾಷ್ಟ್ರಕ್ಕೂ ಪ್ರಾಮುಖ್ಯವಾಗಿರಲಿಲ್ಲ.

ಬರ್ಲಿನ್ ಕಾಯಿದೆಯ ನಂತರ ಬ್ರಿಟನ್ ಮತ್ತು ಜರ್ಮನಿಯ ನಡುವೆ ಕೇಪ್ ಪ್ರಾಂತ್ಯ ಮತ್ತು ಪೋರ್ಚುಗೀಸರ ವಸಾಹತು ಅಂಗೋಲಾದ ಕುರಿತಾಗಿ ಮನಸ್ತಾಪ ಉಂಟಾಯಿತು. ೧೮೭೮ರಲ್ಲಿ ಬ್ರಿಟನ್ ಅಂಗೋಲಾದ ಪ್ರಾಂತ್ಯವೊಂದನ್ನು ವಶಪಡಿಸಿಕೊಂಡಿತು. ಇಲ್ಲಿನ ಬರ್ಲಿನ್ ಕಾಯಿದೆಯ ನಿರ್ಣಯಗಳನ್ನು ಎರಡೂ ರಾಷ್ಟ್ರಗಳು ಅನುಸರಿಸಲಿಲ್ಲ. ಬ್ರಿಟನಿನ ವಿರುದ್ಧ ಜರ್ಮನಿ ತನಿಖೆಯನ್ನು ಆರಂಭಿಸಿತು. ಆದರೆ ಜರ್ಮನಿಯೂ ಅದೇ ಪ್ರಾಂತ್ಯವನ್ನು ಸ್ವಾಧೀನಪಡಿಸಲು ಹಾತೊರೆಯುತ್ತಿತ್ತು. ಇದನ್ನರಿತ ಕೇಪ್ ಸರಕಾರ ಕೇಪ್‌ನಿಂದ ಅಂಗೋಲಾದವರೆಗಿನ ಯಾವುದೇ ಪ್ರದೇಶದಲ್ಲಿ ಯುರೋಪಿನ ರಾಷ್ಟ್ರಗಳು ವ್ಯಾಪಾರ ನಡೆಸುವುದನ್ನು ವಿರೋಧಿಸಿತು. ಜರ್ಮನಿ ಮತ್ತು ಬ್ರಿಟನ್ನಿನ ಸಂಬಂಧ ಹದಗೆಡುವುದಕ್ಕೆ ಇನ್ನೊಂದು ಕಾರಣ ಕೇಮ್‌ರೂನ್. ಬ್ರಿಟನ್ ಬಹಳ ವರ್ಷಗಳ ಹಿಂದೆಯೇ ಕೇಮ್‌ರೂನ್ ನಲ್ಲಿ ವ್ಯಾಪಾರ ನಡೆಸುತ್ತಿತ್ತು ಮತ್ತು ಸ್ಥಳೀಯ ಜನರೂ ಬ್ರಿಟನ್ನಿನ ವ್ಯಾಪಾರದೊಡನೆ ಸೇರಿಕೊಂಡಿದ್ದರು. ೧೮೮೦ರಲ್ಲಿ ಜರ್ಮನಿಯೂ ಕೇಮ್‌ರೂನ್‌ಗೆ ಪ್ರವೇಶ ಪಡೆಯಿತು. ಈ ರಾಜಕೀಯ ಬದಲಾವಣೆಯಲ್ಲಿ ಬ್ರಿಟನ್ ಜಯಶಾಲಿಯಾಗಿ ಸ್ಥಳೀಯ ಜನರು ಬ್ರಿಟನ್ನಿನೊಡನೆ ಒಪ್ಪಂದವನ್ನು ಮಾಡಿಕೊಂಡರು.

ಇತಿಹಾಸಕಾರರ ಪ್ರಕಾರ ಆಫ್ರಿಕಕ್ಕಾಗಿ ಯುರೋಪಿನ ರಾಷ್ಟ್ರಗಳ ನಡುವೆ ಕಿತ್ತಾಟ ಪ್ರಾರಂಭವಾಗಿರುವುದೇ ಪಶ್ಚಿಮ ಆಫ್ರಿಕಾದಲ್ಲಿ. ಬ್ರಿಟನ್, ಫ್ರಾನ್ಸ್, ಪೋರ್ಚುಗೀಸ್, ಡಚ್, ಜರ್ಮನಿ, ಬೆಲ್ಜಿಯಂ ಮುಂತಾದ ರಾಷ್ಟ್ರಗಳು ತಮ್ಮ ಪ್ರಭುತ್ವವನ್ನು ಸ್ಥಾಪಿಸಲು ಆಫ್ರಿಕಾದ ಬೇರೆ ಬೇರೆ ಪ್ರದೇಶಗಳನ್ನು ಆಯ್ದುಕೊಂಡರು. ಆಫ್ರಿಕಾವನ್ನು ತಮ್ಮ ಆಸಕ್ತಿಗಳಿಗನುಗುಣವಾಗಿ ವಿಭಜಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದವರು ಬ್ರಿಟಿಷರು. ಹತ್ತೊಂಬತ್ತನೇ ಶತಮಾನದಲ್ಲಿ ಕೈಗಾರಿಕಾ ದೇಶವಾಗಿ ರೂಪುಗೊಂಡ ಬ್ರಿಟನ್ ಸಂಪನ್ಮೂಲಗಳ ಹುಡುಕಾಟವನ್ನು ಪ್ರಾರಂಭಿಸಿ ಆಫ್ರಿಕಾವನ್ನು ಯುರೋಪಿನ ರಾಷ್ಟ್ರಗಳಿಗೆ ಪರಿಚಯಿಸಿತು. ೧೮೭೩ರಲ್ಲಿ ಯುರೋಪಿನಲ್ಲಿ ಕಾಣಿಸಿಕೊಂಡ ಆರ್ಥಿಕ ಮುಗ್ಗಟ್ಟನ್ನು ಹೋಗಲಾಡಿಸಲು ಆಫ್ರಿಕಾದ ಅನಿವಾರ್ಯತೆ ಇತ್ತು. ಪಶ್ಚಿಮ ಆಫ್ರಿಕಾದಲ್ಲಿ ವಿವಿಧ ಪ್ರದೇಶಗಳನ್ನು ಹಂಚಿಕೊಳ್ಳುವಲ್ಲಿ ಯುರೋಪಿನ ರಾಷ್ಟ್ರಗಳು ನಡೆಸಿದ ಹೋರಾಟ ಹೆಚ್ಚಾಗಿ ರಕ್ಷಣೆಗೆ ಸಂಬಂಧಪಟ್ಟದ್ದು. ತಮ್ಮ ವ್ಯಾಪಾರದ ಹಿತಾಸಕ್ತಿಗಳನ್ನು ಹೊಸದಾಗಿ ಪ್ರವೇಶಿಸುವ ರಾಷ್ಟ್ರಗಳ ಅಥವಾ ಸ್ಪರ್ಧೆಯ ವಿರುದ್ಧ ಕಾಪಾಡುವುದೇ ಮುಖ್ಯ ಉದ್ದೇಶವಾಗಿತ್ತು. ಯುರೋಪಿನ ರಾಷ್ಟ್ರಗಳ ವ್ಯಾಪಾರ ಮತ್ತು ರಾಜ್ಯವಿಸ್ತಾರದ ಧೋರಣೆ ಪಶ್ಚಿಮ ಆಫ್ರಿಕಾವನ್ನು ತುಂಡುತುಂಡಾಗಿ ವಿಂಗಡಿಸಿ ಕ್ರಮೇಣ ರಾಷ್ಟ್ರೀಯ ಚಳುವಳಿ ರೂಪುಗೊಳ್ಳುವಂತೆ ಮಾಡಿತು.