ವಿಶ್ವದ ಬಹುಪಾಲು ಎಲ್ಲ ದೇಶಗಳು ಸ್ವತಂತ್ರ ಆಡಳಿತಕ್ಕೊಳಪಟ್ಟು ೨೧ನೆಯ ಶತಮಾನಕ್ಕೆ ಹತ್ತಿರವಾಗುತ್ತಿರುವಾಗ ನಮಗಿಂದು ಉತ್ತರದ ಸಣ್ಣ ದ್ವೀಪವೊಂದು ವಿಶ್ವದ ಅರ್ಧಕ್ಕಿಂತ ಹೆಚ್ಚಿನ ಭೂ ಭಾಗವನ್ನು ಆಕ್ರಮಿಸಿ, ಅಲ್ಲಿನ ಜೀವನ, ಸಂಸ್ಕೃತಿಗಳನ್ನು ವಿನಾಶಗೊಳಿಸಿತ್ತೆಂಬುದನ್ನು ನಂಬುವುದು ಸುಲಭ ಸಾಧ್ಯವಿಲ್ಲ. ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಚಕ್ರಾಧಿಪತ್ಯವನ್ನು ನಾವು ಅವರ ಅನೇಕ ಬರವಣಿಗೆಗಳ ಮೂಲಕ, ಸಾಹಿತ್ಯ, ಪತ್ರಲೇಖನ, ಟಿಪ್ಪಣಿ ಮುಂತಾದ ವಿವಿಧ ಪ್ರಕಾರಗಳ ಮೂಲಕ ಅನುಭವಿಸುತ್ತೇವೆ. ಬ್ರಿಟಿಷ್ ಚಕ್ರಾಧಿಪತ್ಯ ತನ್ನ ಸಾಮ್ರಾಜ್ಯಶಾಹಿ ಪ್ರಯತ್ನಗಳ ಉತ್ತುಂಗದಲ್ಲಿದ್ದಾಗ ವಿಶ್ವಾದಾದ್ಯಂತ ವಾರ್ತಾಜಾಲವೊಂದನ್ನು ಹೆಣೆದುಕೊಂಡು ತನ್ಮೂಲಕ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ರಾಜ್ಯಭಾರ ನಡೆಸಿತ್ತು. ಹೊಸ ನಾಡು-ನೆಲೆಗಳ ಅನ್ವೇಷಣೆಯಿಂದ ಆರಂಭಗೊಂಡ ಸಾಹಸಯಾತ್ರೆಗಳು ಸಮಯ ಕಳೆದಂತೆ ಹೊಸನಾಡುಗಳನ್ನು ಕಂಡು ಹಿಡಿಯುವುದೇ ಅಲ್ಲದೆ, ಸೂಕ್ಷ್ಮವಾಗಿ ಹಾಗೂ ಧೂರ್ತತೆಯಿಂದ ನೆಲಸುನಾಡಿನ ಆ ಜನಾಂಗಕ್ಕೆ ತಾನು ಉಪಕಾರ ವೆಸಗಿದ ಗೌರವ ಖ್ಯಾತಿ ಹಾಗೂ ಇತರ ಜನಾಂಗಗಳ ಕುರಿತಾದ ತನ್ನ ಔದಾರ್ಯದ ನಂಬಿಕೆಗೆ ಅನುವು ಮಾಡಿಕೊಟ್ಟಿತು.

ವಸಾಹತುಗಳ ನಿರ್ಮಾಣ ಕಾಲದಲ್ಲಿ ಬ್ರಿಟಿಷರು ತಮ್ಮನ್ನು ಕುರಿತಂತೆ ತಾವು ವಿಶ್ವ ವಿಜಯಿಗಳೆಂದೂ ವಿಶ್ವಕ್ಕೆ ನಾಗರಿಕತೆಯನ್ನು ಪರಿಚಯಿಸಿಕೊಟ್ಟವರೆಂಬ ವೀರೋಚಿತ ಕಲ್ಪನೆಯನ್ನು ಕಾಣುತ್ತಿದ್ದರು. ಅದು ಅವರ ಕಂಡರಿಯದ ಸೀಮೆಗಳನ್ನು ಭೇದಿಸುತ್ತಾ ಹೋದಂತೆ ಅವರು ಕ್ರಮೇಣ ತಮಗರಿಯದ ಬಿಂಬಗಳನ್ನೂ, ಭೌಗೋಳಿಕ ಪ್ರದೇಶಗಳನ್ನೂ, ಅಜ್ಞಾತವಾದ ದಿಗ್ಭ್ರಮೆಗೊಳಿಸುವಂತಹ ಸಂಸ್ಕೃತಿ ಹಾಗೂ ಜೀವನ ಶೈಲಿಗಳನ್ನು ಸಂಧಿಸಿದಾಗ, ಅಜ್ಞಾತದಿಂದಾವರಿಸಿದ ಭೀತಿಗೊಳಗಾಗಿ ಈ ಭಿನ್ನ ಕಲ್ಪನೆಗಳಿಗೆ ತಮ್ಮ ಜ್ಞಾನದ ಪರಿಧಿಯಲ್ಲಿದ್ದ ಹೆಸರುಗಳನ್ನೇ ಕೊಟ್ಟು ನಾಮಕರಣ ಮಾಡಿದರು. ಸಾಮ್ರಾಜ್ಯಶಾಹಿ ಗಳು ತಮ್ಮಲ್ಲಿದ್ದ ನಿತ್ಯಸಿದ್ಧರೂಪಕಗಳನ್ನೂ, ಕಲ್ಪನೆಗಳನ್ನೂ, ಈ ಅಜ್ಞಾತ ಸ್ಥಳಗಳ ಅಸಂಭವ ಸನ್ನಿವೇಶಗಳಿಗೆ ವರ್ಗಾಯಿಸಿ ಅವುಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಸಿದರು. ಬ್ರಿಟಿಷರ ದೃಷ್ಟಿಯಲ್ಲಿ ವಸಾಹತುವಾದ ಒಂದು ಭೌಗೋಳಿಕ ಹಾಗೂ ನ್ಯಾಯಯುತವಾದ ಹೊಣೆಗಾರಿಕೆ. ಅವರು ಸ್ಥಳೀಯರ ಅಥವಾ ದೇಶೀಯರ ಅರಿವಿಲ್ಲದಂತೆಯೇ ಅವರ ಪರೋಕ್ಷ ಸಮ್ಮತಿಯಿಂದ ಈ ಹೊಣೆಗಾರಿಕೆಯ ಭಾರವನ್ನು ವಹಿಸಿಕೊಂಡರು. ವಸಾಹತಿಗೆ ಬಲಿಯಾದವರ ದೃಷ್ಟಿಯಲ್ಲಿ ಈ ಗ್ರಂಥಪಾಠದ ಹೊಣೆಗಾರಿಕೆಯ ನಿರ್ವಹಣೆ ಎಂದರೆ ತಮ್ಮ ನೆಲ-ನಾಡುಗಳನ್ನೂ, ಆಸ್ತಿ-ಪಾಸ್ತಿಗಳನ್ನೂ ಕಳೆದುಕೊಳ್ಳುವುದು, ದೊಡ್ಡ ಪ್ರಮಾಣದಲ್ಲಿ ಗುಲಾಮಗಿರಿಗೂ, ಬಲವಂತದ ಒಪ್ಪಂದಗಳಿಗೂ, ಬಡತನಕ್ಕೂ ಒಳಗಾಗುವು ದೆಂದರ್ಥ. ಈ ಪರಕೀಯ ವಾತಾವರಣದ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಲಾಗದ ಶೋಷಕರು ತಾವು ವಸಾಹತುಗಳನ್ನು ಆರಂಭಿಸಿ ಅವುಗಳನ್ನು ಊರ್ಜಿತಗೊಳಿಸಿದೆಲ್ಲೆಡೆ ಹೊಸ ಇತಿಹಾಸದ ಆರಂಭವನ್ನು ಘೋಷಿಸಿದರು. ಈ ಸಾಮ್ರಾಜ್ಯಶಾಹಿ ಪ್ರಜ್ಞೆಯು ಹುಟ್ಟುಹಾಕಿದ ಕಲ್ಪನೆಯನ್ನು ನಾವು ವಸಾಹತುಶಾಹಿ ವ್ಯಾಖ್ಯಾನ ಅಂದರೆ ವಾಸ್ತವವಾಗಿ ಗ್ರಂಥಪಾಠದ ಕ್ರಮವನ್ನನುಸರಿಸಿ ಕೂಡಿದ ಕಾನೂನುಗಳ ಸಂಗ್ರಹ ಹಾಗೂ ಆಚರಣೆ ಮತ್ತು ಅವುಗಳ ಸೂಚ್ಯಾರ್ಥಗಳ ಸಂಮಿಶ್ರಣ ಎಂದು ವರ್ಣಿಸಬಹುದು. ನೆಲೆಸುನಾಡಿನಲ್ಲಿ ತನ್ನ ಅಧಿಕಾರವನ್ನು ಖಚಿತಗೊಳಿಸಿ ಅದನ್ನು ಶಾಶ್ವತಗೊಳಿಸಲು ವಸಾಹತುಶಾಹಿಯು ಚರ್ಚೆ, ನ್ಯಾಯಾಲಯ ಮುಂತಾದ ಕುರುಹುಗಳನ್ನು ಎಲ್ಲೆಡೆ ಹರಡಿಸಿದರು. ಇಷ್ಟೇ ಅಲ್ಲದೆ, ವಸಾಹತುಶಾಹಿ ಶಕ್ತಿಗಳು ಜಗತ್ತಿನದಾದ್ಯಂತ ತಾವು ಸ್ವಾಧೀನಪಡಿಸಿಕೊಂಡು ರಾಜ್ಯಗಳಲ್ಲಿ ಸಮಾಂತರ ಜಗತ್ತನ್ನು ಸೃಷ್ಟಿಸಿದರು. ಸಾಮ್ರಾಜ್ಯದ ವಿಸ್ತಾರದೊಂದಿಗೇ ಸಾಂಸ್ಕೃತಿಕವಾಗಿ ಹಾಗೂ ಭೌಗೋಳಿಕವಾಗಿ ಪ್ರತ್ಯೇಕವಾಗಿದ್ದ ಪ್ರದೇಶಗಳ ಮಧ್ಯ ನಿತ್ಯಸಿದ್ಧಕಲ್ಪನೆಗಳ ವಿನಿಮಯ ಖಚಿತಗೊಂಡು ಅವುಗಳ ನಡುವಣ ಇದ್ದ ವ್ಯತ್ಯಾಸಗಳು ಮಸುಕಾಗುತ್ತಾ ಹೋದವು. ವಸಾಹತುಶಾಹಿ ಸಾಹಿತ್ಯದಲ್ಲಿ ಚಿತ್ರಿತಗೊಂಡಿರುವ ಸಮಾಜದ ದೃಶ್ಯಗಳು ತಾಯ್ನಡಿನಲ್ಲಿ ಬಿಟ್ಟು ಬಂದಿರುವ ಸಮಾಜದ ಬಿಂಬವನ್ನೇ ಕಕ್ಕಿದಂತಿದೆ. ಈ ಮೂಲಕ ವಸಾಹತುವಾದಿಗಳು ತಾವು ಬಿಟ್ಟು ಬಂದಿರುವ ಇತಿಹಾಸ ಹಾಗೂ ನಂಬಿಕೆಗಳನ್ನು ತಮಗಾಗಿ ರೂಪಿಸಿಕೊಂಡು, ಎಡೆಬಿಡದಂತೆ ಅವುಗಳನ್ನು ಪುನರಾವರ್ತಿಸುತ್ತಾ ಹೋಗಿ ಅದರ ಅಜೇಯತನದಲ್ಲಿ ತಮ್ಮ ನಂಬಿಕೆಯನ್ನು ವಿಸ್ತರಿಸುತ್ತಾ ಹೋದರು.

ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ವಸಾಹತುಶಾಹಿಗಳು ತಮ್ಮ ಜನಾಂಗದ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ತಮ್ಮ ಹಾಗೂ ಸ್ಥಳೀಯ ಜನರ ಮಧ್ಯೆ ಕಟ್ಟುನಿಟ್ಟಿನ ಭೇದವನ್ನು ನಿರ್ಮಿಸುವ ಶತಪ್ರಯತ್ನ ನಡೆಸಿದರು. ಬಿಳಿಯನ ಶ್ರೇಷ್ಠತೆಯ ಕಲ್ಪನೆಯನ್ನು ಪುಷ್ಟಿಗೊಳಿಸಲು ಈ ಜನಾಂಗೀಯ ವಿಭಜನೆ ಅವಶ್ಯಕವಾಯಿತು. ಆದರೂ ಸಹ, ಈ ಪರಕೀಯ ವಾತಾವರಣದಲ್ಲಿ ಸೃಷ್ಟಿಯಾದ ಈ ಸಾಂಸ್ಕೃತಿಕ ಪರಾಮರ್ಶೆಗಳು ಹಾಗೂ ಅವು ಮೂಡಿಸಿದ ವಿಭಿನ್ನ ಅರ್ಥಗಳು, ಕೆಲವು ಯುರೋಪಿಯನ್ನರಿಗೆ ಕಥನ ರೂಪಗಳ ಹಾಗೂ ಕವಿತಾಯೋಗ್ಯ ಆಸಕ್ತಿಯ ಮೂಲಗಳಾದವೆಂಬುದನ್ನು ಇಲ್ಲಿ ಗಮನಿಸಬೇಕಾಗಿದೆ. ಪರಕೀಯ ವಾತಾವರಣದಲ್ಲಿ ತಮ್ಮ ಪ್ರಮಾಣಗಳು ಹಾಗೂ ನಿಸ್ಸಂದೇಹವಾದ ನಂಬಿಕೆಗಳು ಕಮರಿಹೋಗಬಹುದೆಂಬ ಅಜೀವ ಭಯ ಬ್ರಿಟಿಷ್ ವಸಾಹತುವಾದಿಗಳನ್ನು ಸದಾ ಕಾಡುತ್ತಿತ್ತು. ಈ ಆತಂಕವು ಒಂದೆಡೆ ಮಲಿನತೆ ಹಾಗೂ ನೀತಿ ಭ್ರಷ್ಟತೆಗಳಿಗೆ ಜನ್ಮ ನೀಡಿದರೆ, ಇನ್ನೊಂದೆಡೆ ಪಠ್ಯದಲ್ಲಿ ವಸಹಾತುಶಾಹಿ ದೃಷ್ಟಿ ಎಂದು ಕರೆಯಲ್ಪಡುವ ಬ್ರಿಟಿಷರಿಂದ ಸ್ವಯಂ ಅಂಗೀಕೃತಗೊಂಡ ಆಜ್ಞಾಪನೆಯ ಯಥಾದೃಷ್ಟ ರೂಪಣವನ್ನು ಹುಟ್ಟು ಹಾಕಿತು. ಈ ವಸಾಹತುಶಾಹಿ ದೃಷ್ಟಿಯು ಹೊಸ ನೆಲನಾಡುಗಳ ವಸಾಹತುಶಾಹಿ ಭೇದನೆಯೊಂದಿಗೆ ಯುಕ್ತವಾಗಿದ್ದ ಅವುಗಳ ಸಂಶೋಧನೆ, ಪರೀಕ್ಷೆ ಹಾಗೂ ತನಿಖೆಗಳಲ್ಲಿ ವ್ಯಕ್ತವಾಗುತ್ತದೆ.

ಈ ಕಾಲದ ಬರಹಗಳಲ್ಲಿ ನಾವು ಸಾಮ್ರಾಜ್ಯಶಾಹಿಗಳ ಭ್ರಾಮಕ ಕಲ್ಪನೆಗಳನ್ನು ಹುರಿದುಂಬಿಸುವಂತಹ ಅಂಶಗಳನ್ನು ಕಾಣಬಹುದು. ಅಂದು ಸಾಹಸಕಥೆಗಳು ಅತ್ಯಂತ ಜನಪ್ರಿಯವಾಗಿದ್ದವು. ಬಹುಪಾಲು ನಾಯಕ ಹಾಗೂ ಆತನ ಸಾಹಸ ಕಾರ್ಯಗಳ ಸುತ್ತುವರೆದಂತೆ ಹೆಣೆಯಲ್ಪಟ್ಟ ಈ ಕಥನಗಳು ಆತ ಕೈಗೊಳ್ಳುವ ಸಾಹಸಯಾತ್ರೆಯು (ಅದು ದೈಹಿಕ ಅಥವಾ ಆಧ್ಯಾತ್ಮಿಕವಾಗಿರಬಹುದು, ಲೌಕಿಕ ಅಥವಾ ಪ್ರಾದೇಶಿಕವಾಗಿರ ಬಹುದು. ಮೂಲತಃ ಅದೊಂದು ಸ್ಥಿತ್ಯಂತರ ಸಂಸ್ಕಾರ) ಅವಶ್ಯಕವಾಗಿ ಸ್ಥಳೀಯರ ಮೇಲೆ ಸಾಧಿಸುವ ವಿಜಯದಲ್ಲೋ, ಅತ್ಮತಾ ಜ್ಞಾನಪ್ರಾಪ್ತಿ ಮತ್ತು ತಾನು ಉತ್ಕರ್ಷಿತ ಸ್ಥಾನಕ್ಕೇರುವುದರಲ್ಲೋ, ವೈಯಕ್ತಿಕ ಅಥವಾ ರಾಷ್ಟ್ರೀಯ ಗೌರವ ಪ್ರಾಪ್ತಿ ಹಾಗೂ ಅಪರಿಮಿತ ಧನಪ್ರಾಪ್ತಿಗಳೊಂದಿಗೆ ಕೊನೆಗೊಳ್ಳುವ ಅನ್ವೇಷಣೆಯಾಗಿದೆ. ಹೀಗಾಗಿ ವಿಕ್ಟೋರಿಯನ್ ಕಾಲದ ಪೂರ್ವಾರ್ಧದಲ್ಲಿ ಮೂಡಿ ಬಂದ ಗೃಹ ಕಾದಂಬರಿಗಳು ಆ ಕಾಲದ ಉತ್ತರಾರ್ಧದಲ್ಲಿ ಸಾಹಸಗಾಥೆಗಳಿಗೂ, ಪರಿಶೋಧಕರ ಬರವಣಿಗೆಗಳಿಗೂ ಸ್ಥಾನವನ್ನು ಅನುವು ಮಾಡಿಕೊಟ್ಟವು. ಪುರುಷನೋರ್ವನಿಂದ ದಪ್ಪಕ್ಷರಗಳಲ್ಲಿ ಬರೆದು ಮುದ್ರಿಸಲ್ಪಟ್ಟ ಸ್ಮಾರಕಗಳಾಗಿ ಅಗಾಧ ಸಂಖ್ಯೆಯಲ್ಲಿ ಉತ್ಪತ್ತಿಯಾದ ವಸಾಹತುಶಾಹಿ ಅನುಭವದ ಈ ಗ್ರಂಥಪಠ್ಯವು ನಿತ್ಯಸಿದ್ಧ ಕಲ್ಪನೆಗಳನ್ನು ಭವಿಷ್ಯದ ವಸಾಹತುಶಾಹಿ ಅಧಿಕಾರಿಗಳ ಮನಸ್ಸಿನ ಮೇಲೆ ಮುದ್ರೆಯೊತ್ತಿತು. ವಸಾಹತುವಾದಿ ಸ್ವಯಂ ಕುರಿತಾದ ಉತ್ಕಷ್ಟ ಚಿತ್ರಣದ ಒಂದು ಪ್ರಮುಖ ಅಂಶವೆಂದರೆ – ಆ ಮತ್ತೊಂದರ ಅಂದರೆ ನೆಲಸು ನಾಡಿನ ಸ್ಥಳೀಯನ ಸೃಷ್ಟಿ- ವಸಾಹತುಶಾಹಿ ಆಕ್ರಮಣದಲ್ಲಿ ಈ ಬೇರೆತನದ ಸೃಷ್ಟಿಯ ಪ್ರಕ್ರಿಯೆ ಮೂಲಭೂತವಾದುದು. ವಸಾಹತುವಾದಿಗಳನ್ನು ಸದಾ ನೆಲಸುನಾಡಿನ ಸ್ಥಳೀಯರಿಗಿಂತ ಉತ್ತಮರೆಂದು ಚಿತ್ರಿಸಲಾಗುತ್ತಿತ್ತು. ಸ್ಥಳೀಯರನ್ನು ಕೀಳಾಗಿ, ಕುಬ್ಜರನ್ನಾಗಿ ಮಗುವಿನಂತೆಯೋ, ಕಾಡುಪ್ರಾಣಿಯಂತೆಯೋ, ಅಸಂಸ್ಕೃತ ಅಥವಾ ಅರೆ ಸಂಸ್ಕೃತ ಮನುಜರಾಗಿ ಚಿತ್ರಿಸಲಾಗುತ್ತಿತ್ತು. ಅವರನ್ನು ಪ್ರತ್ಯೇಕಿಸುವ, ಕೆಳದರ್ಜೆಗಿಳಿಸುವ ಶಕ್ತಿಯುತ ತಂತ್ರಗಳ ಮೂಲಕ ಈ ಅಸಂಸ್ಕೃತರನ್ನು ಪಳಗಿಸಿ ಅವರನ್ನು ಅಂಕೆಯಲ್ಲಿಡುವ ಬಿಳಿಯನ ಕೈವಾಡದ ಅಗತ್ಯದ ಮಿಥ್ಯೆಯನ್ನು ಸದಾ ಚಿರಸ್ಮರಣೀಯವಾಗಿ ಉಳಿಯುವಂತೆ ಮಾಡಲಾಯಿತು. ಸ್ವಿವಾಕರು ಸೂಚಿಸಿರುವಂತೆ ಇಂತಹ ಪಾತ್ರ ನಿರೂಪಣೆಯ ತಾತ್ವಿಕ ಹಾಗೂ ಜ್ಞಾನಕ್ಕೆ ಸಂಬಂಧಿಸಿದಂತಹ ಹಿಂಸೆಯನ್ನು ಒದಗಿಸಿ ತನ್ಮೂಲಕ ಪ್ರತ್ಯಕ್ಷ ದುರಾಕ್ರಮಣದ ಪಾಶವತೆಗೆ ಕುಮ್ಮಕ್ಕು ನೀಡಿ ಅದಕ್ಕೆ ಒತ್ತಾಸೆಯಾಗಿ ನಿಂತಿತು. ವಸಾಹತಿನ ಜನತೆಯನ್ನು ದುರ್ಬಲ, ಗತಿಹೀನ ಹೆಣ್ಣಿಗರೆಂದೂ ಯುರೋಪಿಯನ್ನರಿಗಿಂತ ಕೆಳದರ್ಜೆಯವರೆಂದು ಚಿತ್ರಿಸಲಾಯಿತು. ಹೀಗಾಗಿ ಆ ಬೇರೆಯವನು ವಸಾಹತುವಾದಿಗಳ ಮತ್ತು ವಸಾಹತಿನ ಜನತೆಯ ನಡುವಣ ಸಾಂಸ್ಕೃತಿಕ ಸಂಘರ್ಷದ ಐತಿಹಾಸಿಕ (ಮೇಲಿಂದ ಮೇಲೆ ಕೆತ್ತಲ್ಪಟ್ಟ) ಹಸ್ತಪ್ರತಿಯಾಗಿದ್ದಾನೆಂಬುದನ್ನು ನಾವು ಕಾಣಬಹುದು.

ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಬಂದ ಆಫ್ರಿಕಾದ ಕುರಿತಾದ ಯುರೋಪಿಯನ್ ನಿರೂಪಣೆಗಳಲ್ಲಿ ಸಾಮಾಜಿಕ ಅಂಧಃಪತನ ಹಾಗು ಅಶಾಂತಿಯ ಭಯದ ಕುರಿತಾದ ಆತಂಕ ವ್ಯಕ್ತವಾಗಿದೆ. ಆಫ್ರಿಕಾ ಯುರೋಪಿಯನ್ನರ ದಯಾಪರತೆಯ ಅಗತ್ಯವಿದ್ದ ಕಪ್ಪು ಖಂಡ, ಅನಾಗರಿಕವಾದ ಹಾಗೂ ನೀತಿಗೆಟ್ಟ ‘ಕತ್ತಲೆ ತುಂಬಿದ ಹೃದಯ, ಜೀವ ಪ್ರಭೇದಗಳ ಉಗಮ ಹಾಗೂ ವಿಕಸನ ವ್ಯತ್ಯಾಸಗಳ ಕುರಿತಾದ ಡಾರ್ವಿನ್ನರ ತತ್ವಗಳು ವಸಾಹತುವಾದಿಯ ಮೇಲೆ ಯಾವ ಪ್ರಭಾವವನ್ನೂ ಬೀರಿದಂತೆ ಕಾಣಲಿಲ್ಲ. ಆಫ್ರಿಕಾದ ಕುರಿತಾದ ಪರಿಶೋಧಕರ ಚಿತ್ರಣದಲ್ಲಿ ನೆಲಸುನಾಡಿನ ಭೂಪ್ರದೇಶವನ್ನು ಹೆಣ್ಣಾಗಿಸಲಾಗಿದೆ. ಉದಾಹರಣೆಗೆ ರೈಡರ್ ಹ್ಯಾಗರ್ಡರ್ ‘ಕಿಂಗ್ ಸೊಲೊಮನ್ಸ್ ಮೈನ್ಸ್’(೧೮೮೫)ನಲ್ಲಿ ‘ಶೀಬಾಳ ಸ್ತನ ಬೆಟ್ಟಗಳು’ ಆಯೀಶಾಳ ಆಳವಾದ ಗುಹೆಗಳು ಇತ್ಯಾದಿ.

ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ವಸಾಹತುವಾದಿ ಬುದ್ದಿಜೀವಿಗಳು ಸಾಂಸ್ಕೃತಿಕ ಪುನರುಜ್ಜೀವನವನ್ನು ಸಂಘಟಿಸುವ ಮೂಲಕ ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ದನಿಯೆತ್ತಲಾರಂಭಿಸಿದರು. ದಕ್ಷಿಣ ಆಫ್ರಿಕಾ, ಕೀನ್ಯಾ ಹಾಗೂ ನೈಜೀರಿಯಾಗಳಲ್ಲಿ ಸ್ಥಳೀಯರು ದಂಗೆಯೆದ್ದರು; ಅಲ್ಲಿ ಆಂತರಿಕ ಅಶಾಂತಿ ಕಾಣಿಸಿಕೊಂಡಿತು. ೧೯೧೨ರಲ್ಲಿ ದಕ್ಷಿಣ ಆಫ್ರಿಕಾ ನೇಟಿವ್ ನ್ಯಾಷನಲ್ ಕಾಂಗ್ರೆಸ್ ಮತ್ತು ಅನಂತರ ಅಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ಎ.ಎನ್.ಸಿ)ಗಳ ರಚನೆಯಾಯಿತು. ರಾಷ್ಟ್ರೀಯತೆಯ ಆರಂಭಿಕ ಬೆಳವಣಿಗೆ ಆ ಕಾಲದ ಯುಟೋಪಿಯನ್ ಆದರ್ಶವಾದಿ ತತ್ವಗಳ ಬೆಂಬಲ ದೊರಕಿತು. ಜೊತೆಗೆ ಅದು ಸಂಪದ್ಭರಿತವಾದ ಹಾಗೂ ಪವಿತ್ರವಾದ ನೈಜ ಸ್ಥಳೀಯ ಸಂಸ್ಕೃತಿ ಸದ್ಗುಣಗಳನ್ನು ಆರಿಸಿಕೊಂಡು ನಾಡಿಗರ ಸಹಜ ಪ್ರತಿರೋಧವೆನಿಸಿಕೊಂಡಿತು. ವಸಾಹತುವಾದಿಗಳಿಂದ ಪರಂಪರೆಯಾಗಿ ಪಡೆದ ಸಾಹಿತ್ಯದ ಆಚಾರ, ನಿಬಂಧಗಳಾದ ಕಾವ್ಯ, ಕಾದಂಬರಿ ಹಾಗೂ ಸಾಹಿತ್ಯದ ಇನ್ನಿತರ ಪ್ರಕಾರಗಳನ್ನು ವಶಪಡಿಸಿಕೊಂಡು, ಅದನ್ನು ವಿಕೇಂದ್ರೀಕರಿಸಿ ವಿವಿಧ ರೀತಿಯಲ್ಲಿ ಮಿಶ್ರತಳಿಗೊಳಿಸಲಾಯಿತು. ದಕ್ಷಿಣ ಆಫ್ರಿಕಾ ಹಾಗೂ ಪಶ್ಚಿಮ ಆಫ್ರಿಕಾದ ಬರಹಗಾರರು ಸಾಂಸ್ಕೃತಿಕ ಪ್ರದೇಶ ಹಾಗೂ ಅನುಭವಗಳ ಕುರಿತಾದ ತಮ್ಮ ಅರಿವನ್ನು ತಮ್ಮದೇ ಆದ ಸ್ಪಷ್ಟ ಮಾತುಗಳಲ್ಲಿ ವ್ಯಕ್ತಪಡಿಸಿದರು.

ಇಂಗ್ಲೀಷಿನಲ್ಲಿ ಬಹುಶಃ ಮೊಟ್ಟ ಮೊದಲನೇ ಬಾರಿ ರಚಿತಗೊಂಡ ಆಫ್ರಿಕನ್ ಕಾದಂಬರಿ ದಕ್ಷಿಣ ಆಫ್ರಿಕಾದ ಸೊಲೊಮನ್ ಪ್ಲಾಟ್‌ಜೀ ಅವರ ಕೃತಿ ಮಹುಡಿ (೧೯೨೦). ಈ ಕಾದಂಬರಿಯಲ್ಲಿ ಪ್ಲಾಟ್‌ಜೀಯವರು ಪಾಶ್ಚಿಮಾತ್ಯ ಸಾಹಿತ್ಯದ ಪ್ರಭೇದಗಳಿಂದಲೂ ಆಫ್ರಿಕಾದ ಮೌಖಿಕ ಸಂಪ್ರದಾಯಗಳಿಂದಲೂ ಆಯ್ದುಕೊಂಡ ವಿನೂತನ ಸಾಹಿತ್ಯ ಪ್ರಭೇದಗಳನ್ನು ಹಾಗೂ ಭಾಷಿಕ ಸೂಚಿಗಳನ್ನು ಸಂಯೋಜಿಸಿದ್ದಾರೆ. ಸಾಹಸ ಕಾದಂಬರಿಗಳ ಸಂಪ್ರದಾಯಕ್ಕೆ ವೈದ್ಯಶ್ಯ ತೋರಿಸುವ ಸಂವಾದಿಯಾಗಿ ಬರೆದಿರುವ ಮಹುಡಿಯ ಕಥೆಯು ಪರಿವರ್ತನೆಯ ಹಂತದಲ್ಲಿರುವ ಕರಿಯ ಸಮಾಜದ ಕಥೆ. ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಸ್ವಾಧೀನ ಪಡಿಸಿಕೊಂಡು ರಾಷ್ಟ್ರೀಯತಾವಾದಿ ಬರಹಗಾರನು ವಸಾಹತುವಾದಿ ದೃಷ್ಟಿಯನ್ನು ಇಲ್ಲವಾಗಿಸಿ ತನ್ನದೇ ಆದ ಅನುಭವವನ್ನು ಪರಿಚಯಿಸಬಲ್ಲನೆಂಬುದೇ ಇದರ ಅರ್ಥ. ಆದರೆ ತದ್ವಿರುದ್ಧ ಅರ್ಥಗಳ ಪಂಗಡವನ್ನು ಸೃಷ್ಟಿಸುವಾಗಲೂ ಕೂಡ ರಾಷ್ಟ್ರೀಯ ವಾದಿ ಸಾಹಿತ್ಯ ವಸಾಹತುವಾದಿಯ ಶಕ್ತಿಯ ಶಬ್ದ ಭಂಡಾರವನ್ನೇ ಉಪಯೋಗಿಸ ಬೇಕೆಂದಾಯಿತು. ‘ಸಮೀಪನ’ ಎಂದು ಕರೆಯಲ್ಪಡುವ ಈ ಸಮಸ್ಯೆಯೇ ಆಫ್ರಿಕಾದ ಸಾಂಸ್ಕೃತಿಕ ದ್ವಂದ್ವಕ್ಕೆ ಆಧಾರತತ್ವವಾಗಿದೆ.

ಸಮೀಪನದಿಂದಾಗಿ ನೀಗ್ರೋವಾದ ಎಂಬ ಹೆಸರಿನ ಹೊಸ ವರ್ಗದ ಬರವಣಿಗೆಯ ಉದಯವಾಯಿತು. ನೀಗ್ರೋವಾದಿ ಬರಹಗಾರರು ಹೆಚ್ಚುವರಿ ಫ್ರೆಂಚ್ ಭಾಷಾ ಬರಹಗಾರರು. ಅವರು ಯುರೋಪಿಯನ್ನರು ತಮ್ಮ ತಲೆಗೆ ಕಟ್ಟಿರುವ ನೇತ್ಯರ್ಥಕ ಚಿತ್ರಣವನ್ನು ಕೆಡವಿ ಹಾಕಿ ಅವುಗಳಿಂದ ಸಕಾರಾತ್ಮಕ ಚಿತ್ರಣದ ಪುನರ್ ರಚನೆಯ ಜವಾಬ್ದಾರಿಯನ್ನು ತಮ್ಮ ಮೇಲೆ ಹೊತ್ತುಕೊಂಡರು. ಅವರು ದಬ್ಬಾಳಿಕೆಗೊಳಗಾದವರನ್ನು ಎತ್ತಿ ಹಿಡಿದರು. ಆ ಕಾರಣ ತುಚ್ಛವೆಂದು ಗುರುತಿಸಲ್ಪಟ್ಟ ಪ್ರತಿಯೊಂದನ್ನೂ ಅಂದರೆ ಪಿತ್ರಾರ್ಜಿತ ರಹಸ್ಯಗಳನ್ನೂ, ಗತಕಾಲದ ಕಪ್ಪು ಆಫ್ರಿಕಾದ ಸಹಜ ಪ್ರೇರಣೆಯ ಮತ್ತು ಕರುಳಿನಿಂದ ಹೊರಡುವ ತರಂಗ ಧಾಟಿಯನ್ನೂ, ಪ್ರಕೃತಿಯೊಂದಿಗೆ ತಮ್ಮ ಗಾಢ ಸಂಬಂಧವನ್ನು ಕೊಂಡಾಡಿದರು.

ಏಯಮೆ ಸೆಜಾಯರ್, ಡೇವಿಡ್ ಡಯೊಪ್, ಲಿಯೊಪಾಲ್ಡ್ ಸೆಂಗ್ ಹರ್ ಮತ್ತಿತರರಿಗೆ ನೀಗ್ರೋವಾದ ಯುರೋಪಿಯನ್ನರ ತರ್ಕಸಮ್ಮತವಾದ ಹಾಗೂ ವಿಶ್ಲೇಷಕ, ಗ್ರಹಣ ಶಕ್ತಿಗೆ ವಿರುದ್ಧವಾದ ‘ಭಾವೋತ್ತೇಜಕ ಹಾಗೂ ಅಂತರ್ಬೋಧೆಯ’ ಗ್ರಹಣ ಶಕ್ತಿಯನ್ನು ಅರಿತುಕೊಳ್ಳುವ ಬೌದ್ದಿಕ ಚಳವಳಿಯಾಯಿತು. ‘ಆಫ್ರಿಕನ್ನನು ನಿಸರ್ಗದೊಂದಿಗೆ ಹತ್ತಿರದ ಸಂಬಂಧ ಹೊಂದಿದ್ದು, ತನಗೂ ವಸ್ತುಗಳಾದ ಮರ, ಕಲ್ಲು, ಮತ್ತಿತರ ವಸ್ತುಗಳಿಗೂ ಮಧ್ಯೆ ಯಾವುದೇ ಭೇದವನ್ನು ಕಾಣುವುದಿಲ್ಲ’ ಎಂದು ಸೆಂಗ್ ಹರ್ ಹೇಳುತ್ತಾರೆ.

ಸೆಂಗ್‌ಹರ್ ಅವರ ಅಭಿಪ್ರಾಯಗಳು ಆಫ್ರಿಕಾದ ಬುದ್ದಿಜೀವಿಗಳ ಮಧ್ಯೆ ದೊಡ್ಡ ವಿವಾದಗಳಿಗೆ ಎಡೆ ಮಾಡಿಕೊಟ್ಟಿವೆ. ಅಬಿಯೋಲಾ ಇರೆಲೆಯವರಂತಹ ವಿಮರ್ಶಕರು ‘ಎಲ್ಲಾ ಆಫ್ರಿಕನರು’ (ಪ್ಯಾನ್ ಆಫ್ರಿಕನಿಸಂ) ವಾದವನ್ನೂ, ಬಂಟು, ಅಕಾನ್, ಯೊರೂಬಾ, ಕಿಕುಯು, ಮೊಕಾಂಡೋ, ಜುಲು, ನ್ಡೆಬೆಲೆ, ಮಸ್ಸಾಯಿ ಮತ್ತಿತರ ಎಲ್ಲಾ ಕರಿಯ ಬುಡಕಟ್ಟುಗಳೂ ಒಂದಾಗಿ ಒಂದೇ ಸಂಸ್ಕೃತಿಯ ಸಂತತಿಗೆ ಸೇರಿದವರೆಂದು ನಂಬಿದರೆ, ಏಜೆಕಿಯಲ್ ಮ್ಫೆಲೀಲೆ ಹಾಗೂ ಸೊಯಿಂಕಾರಂತಹ ವಿಮರ್ಶಕರು ನೀಗ್ರೋವಾದ (ನೆಗ್ರಿಟ್ಯೂಡ್)ವನ್ನು ತಿರಸ್ಕರಿಸಿದ್ದಾರೆ. ಜನಾಂಗಗಳ ಪ್ರತ್ಯೇಕತೆಯ ಮೇಲೆ ನಿಂತಿರುವ ವರ್ಣಭೇದ ನೀತಿಯ(ಅಪರ್ ಥೈಡ್) ಜನಾಂಗವಾದಿ ತತ್ವಕ್ಕೆ ನೀಗ್ರೋವಾದ ಬೆಂಬಲ ನೀಡುತ್ತವೆಂದೂ, ಈ ಕಲ್ಪನೆ ಸೃಜನಾತ್ಮಕ ಸಹಜ ಪ್ರವೃತ್ತಿಗೆ ತಕ್ಕಮಟ್ಟಿಗೆ ನಿರ್ಬಂಧ ಹೇರುತ್ತದೆಂದೂ ಮೈಲೀಲೆ ತೋರಿಸಿಕೊಟ್ಟರು. ನೈಜೀರಿಯಾದ ಸೋಯಿಂಕಾ ಅವರು, ಹುಲಿಯನ್ನು ಹುಲಿತನದಿಂದಲೂ, ಡುಯಿಕರ್(ಒಂದು ಬಗೆಯ ಜಿಂಕೆ) ಅನ್ನು ಅದರ ಡುಯಿಕರ್ ತನದಿಂದಲೂ ಗುರುತಿಸಲಾಗದು. ಅವನ್ನು ಅವುಗಳ ನೆಗೆತದಿಂದ ಗುರುತಿಸಲಾಗುತ್ತದೆಂದೂ ಘೋಷಿಸಿದರು.

ಇಲ್ಲಿಗೆ ನಾವು ಆಫ್ರಿಕನ್ ಸಾಹಿತ್ಯ ಬೆಳೆವಣಿಗೆಯ ಎರಡನೇ ಘಟ್ಟದ ಹಂತಕ್ಕೆ ತಲುಪುತ್ತೇವೆ. ಐವತ್ತರ ದಶಕದ ಮಧ್ಯಭಾಗದಲ್ಲಿ ಎರಡನೇ ಮಹಾಯುದ್ಧಕ್ಕೆ ಮೊದಲು ಸಂವಿಧಾನಾತ್ಮಕ ಬೇಡಿಕೆಯೊಂದಿಗೆ ಆರಂಭವಾದ ಈ ವಸಾಹತುಶಾಹಿ ವಿರೋಧಿ ಸ್ವಾತಂತ್ರ್ಯ ಚಳವಳಿ ಬೆಳೆಯುತ್ತಾ ಹೋಗಿ ಜಗತ್ತಿನದಾದ್ಯಂತ ವಸಾಹತುಶಾಹಿಗಳ ಆಳ್ವಿಕೆಯನ್ನು ವಿರೋಧಿಸಿದ ಯಾರೂ ತಡೆಯಲಾರದಂತಹ ಸಿಟ್ಟಿನ ಮಹಾಪೂರವಾಗಿ ಕಂಡುಬಂದಿತು. ಜನಾಂಗೀಯವಾದಿ ಪಡಿಯಚ್ಚುಗಳನ್ನು ವ್ಯತಿರಿಕ್ತಗೊಳಿಸುವ ನೀಗ್ರೋವಾದದ ಆರಂಭಿಕ ಪ್ರಯತ್ನಗಳಂತಿರದೆ, ಈ ರಾಷ್ಟ್ರೀಯತಾವಾದಿಗಳು ತಮ್ಮದೇ ಆದ ಪರಿಭಾಷೆಯಲ್ಲಿ ಪ್ರಾತಿನಿಧ್ಯಕ್ಕಾಗಿ ವಾದಿಸತೊಡಗಿದರು. ರಾಜಕೀಯ ಆಂದೋಲನಕ್ಕೆ ಬರಹಗಾರರು ದಾರಿದೀಪವಾದರು. ಅವರು ಕಾಲಜ್ಞಾನಿಗಳೂ, ಪ್ರವಾದಿಗಳೂ ಆದರು. ಪ್ರತಿಭಟನೆಯ ಈ ಮಹಾಪೂರವೂ ನಿಜವಾಗಿಯೂ ವಸಾಹತುವಾದಿ ಪಾಶ್ಚಾತ್ಯ ಸಾಹಿತ್ಯ ಎಂದು ಕರೆಯಬಹುದಾದ ಸಾಹಿತ್ಯಕ್ಕೆ ಜನ್ಮ ನೀಡಿತು. ಆಫ್ರಿಕಾದ ರಾಷ್ಟ್ರೀಯತಾವಾದಿ ಬರಹಗಾರರು ತಮ್ಮ ಪ್ರಸ್ತುತ ಐತಿಹಾಸಿಕ, ಜನಾಂಗೀಯ ಅಥವಾ ಅಪ್ರಾಕೃತ ಸ್ಥಾನದಿಂದ ಇಲ್ಲಿಯ ವರೆಗೂ ವಸಾಹತುವಾದಿ ಅನುಭವದ ಆಘಾತಕ್ಕೊಳಗಾಗಿದ್ದ ತಮ್ಮ ಸಾಂತಿಕ ಅನನ್ಯತೆಯ ಪುನರ್ ಜೋಡಣೆಗೆ ಹೆಚ್ಚು ಮಹತ್ವ ನೀಡಿದರು. ಸಾಮ್ರಾಜ್ಯಶಾಹಿ ವಿರೋಧಿ ಸಂಗ್ರಾಮ ಗಳ ಇತಿಹಾಸವನ್ನೂ ಆಕ್ರಮಣಕಾರಿ ಶಕ್ತಿಗಳ ವಿರುದ್ಧ ಹೋರಾಡಿದ ತಮ್ಮ ದೇಶದ ವೀರರ ಗೌರವಗಾಥೆಗಳನ್ನು ತಮ್ಮ ಪೂರ್ವಜರ ಪರಾಕ್ರಮದ ಐತಿಹ್ಯಗಳನ್ನೂ ಶೋಧಿಸಿ ತೆಗೆದರು. ತಮ್ಮ ಆತ್ಮ ಚರಿತ್ರೆಗಳಲ್ಲಿಯೇ ದಾಖಲಿಸುವಂತೆ ಕ್ವಾಮೆನ್‌ ಕ್ರೂಮ್‌ಹ, ಕೆನ್ನೆತ್ ಕ್ವಾಂಡಾರಂತಹ ರಾಷ್ಟ್ರೀಯತಾವಾದಿ ನಾಯಕರು ಆಫ್ರಿಕಾದ ವಿಮೋಚನಾ ಹೋರಾಟಗಳಿಗೆ ಸಮೂಹ ರಾಜಕೀಯ ಪ್ರತಿಭಟನೆಯ ಮಾದರಿಯ ಮೊರೆ ಹೊಕ್ಕರು. ದಕ್ಷಿಣ ಆಫ್ರಿಕಾ ಹಾಗೂ ಭಾರತಗಳಲ್ಲಿ ಗಾಂಧಿಯವರು ನಡೆಸಿದ ಪ್ರತಿಭಟನೆಯ ವಿಧಾನದಿಂದ ಪ್ರೇರಣೆ ಹಾಗೂ ಸ್ಫೂರ್ತಿಗಳನ್ನು ಪಡೆದುಕೊಂಡರು. ಈ ರೀತಿಯಾಗಿ ಪ್ರಭಾವಿತಗೊಂಡ ರಾಷ್ಟ್ರೀಯತಾವಾದಿ ಸಾಹಿತ್ಯವು ೧೯೫೦ರ ಹಾಗೂ ೧೯೬೦ರ ದಶಕಗಳಲ್ಲಿ ಹೆಚ್ಚೆಚ್ಚು ಕಲಹಪ್ರಿಯವಾಯಿತು ಹಾಗೂ ಅನೇಕ ವೇಳೆ ನಿರ್ಲಜ್ಜವಾಗಿ ರಾಜಕೀಯ ವಿವಾದಾತ್ಮಕ ಲಕ್ಷಣಗಳನ್ನು ಪಡೆದುಕೊಂಡಿತು.

ವಸಾಹತುವಾದಿಗಳಡಿಯಲ್ಲಿದ್ದ ಸ್ಥಳೀಯರ ಹೃದಯಗಳಿಗೆ ಹತ್ತಿರವಾದ ಹೋರಾಟ ಗಳನ್ನೂ, ಅವರ ಭಾವೋದ್ರೇಕಗಳನ್ನೂ, ಅಲ್ಲಿನ ಭೂದೃಶ್ಯಗಳನ್ನೂ ಸಾಹಿತ್ಯ ಪ್ರತಿನಿಧಿಸ ಬೇಕಾಯಿತು. ಚಿನುವಾ ಅಚಿಬೆಯವರ ಕಾದಂಬರಿ ‘ಥಿಂಗ್ಸ್ ಫಾಲ್ ಅಪಾರ್ಟ್’(೧೯೫೮) ವಸಾಹತುವಾದಿ ಆತಿಕ್ರಮಣಕ್ಕೊಳಪಟ್ಟು, ಛಿದ್ರವಾದ ಇಬೋ ಸಮುದಾಯದ ಅನುಭವವನ್ನು ದಾಖಲಿಸುತ್ತದೆ. ಉಮೋಫಿಯಾದ ಮೇಲ್ವರ್ಗದ ಮುಖಂಡ ರಲ್ಲೊಬ್ಬರಾದ ಒಕೊಂಕ್ವೋ ಅವರು ಕ್ರೈಸ್ತ ಧರ್ಮ ಪ್ರಚಾರದ ಜೊತೆ ಯಾವುದೇ ರಾಜಿ ಮಾಡಿಕೊಳ್ಳಲೊಪ್ಪುವುದಿಲ್ಲ. ವಸಾಹತುವಾದಿ ಶಕ್ತಿಯನ್ನು ಮೂಲಭೂತವಾಗಿ ಪ್ರತಿರೋಧಿಸುವ ಆತನಲ್ಲಿ ತನ್ನ ಕುರಿತಾದ ಸ್ವಯಂ ಪ್ರಜ್ಞೆ ಹಾಗೂ ತನ್ನ ಸಮುದಾಯದ ಸಾಂಸ್ಕೃತಿಕ ಅನನ್ಯತೆಯ ಪ್ರಜ್ಞೆಗಳು ಗಾಢವಾಗಿ ಬೇರೂರಿವೆ. ಆದರೆ ಬಿಳಿಯನ ಮೇಲೆ ಸಂಪೂರ್ಣ ದೂಷಣೆ ಹೊರಿಸದಿರುವುದರಲ್ಲಿ ಅವನ ಮಹಾನತೆ ಅಡಗಿದೆ. ವಾಸ್ತವ ಪ್ರತ್ಯಕ್ಷದರ್ಶಿಯಾಗಿ ಉಮೋಫಿಯಾದ ಜನಾಂಗವು ತನಗಿಂತ ದೊಡ್ಡದಾದ ತನಗಿಂತ ಅಧಿಕವಾಗಿ ಪ್ರೇರಿತವಾದ ವಸಾಹತುವಾದಿ ಶಕ್ತಿಗಳ ಸಮ್ಮುಖದಲ್ಲಿ ಛಿದ್ರಗೊಳ್ಳುವುದನ್ನು ಅವರು ಇಲ್ಲಿ ಚಿತ್ರಿಸಿದ್ದಾರೆ; ಅಲ್ಲದೆ ಸಮುದಾಯ ಛಿದ್ರಗೊಳ್ಳಲು ಅದರ ಆಂತರಿಕ ಕಲಹಗಳೂ, ಅದರಲ್ಲಡಗಿರುವ ಭ್ರಾರ್ತೃಹಂತಕ ಸಂಘರ್ಷಗಳೂ ಕಾರಣವೆಂಬುದನ್ನು ಅವರಿಲ್ಲಿ ಕಾಣಿಸಿದ್ದಾರೆ.

ಅಚಿಬೆಯವರ ಎರಡನೆಯ ಕಾದಂಬರಿ ‘ಅರೋ ಆಫ್ ಗಾಡ್’ನಲ್ಲಿ ಇಬೋ ಸಮುದಾಯದ ವೈಶಿಷ್ಟ್ಯ ಹಾಗೂ ಪ್ರಧಾನ ಲಕ್ಷಣಗಳು, ಅದರಲ್ಲೂ ಬಿಳಿಯರ ಸಾಂತಿಕ, ಭಾವಾತ್ಮಕ ಹಾಗೂ ರಾಜಕೀಯ ಆಧಿಪತ್ಯವನ್ನು ಏಕನಿಷ್ಠವಾಗಿ ವಿರೋಧಿಸುವ ನಾಯಕರ ಪ್ರತಿರೋಧವನ್ನು ದಾಖಲಿಸಲಾಗಿದೆ. ಆಫ್ರಿಕಾದೊಳಗೆ ಬಿಳಿಯರ ಆಗಮನ ಹಾಗೂ ಅವರ ಆಡಳಿತ ಸ್ಥಾಪನೆಗೆ ಮೊದಲು ಆಫ್ರಿಕಾದ ಇತಿಹಾಸದಲ್ಲಿ ಯಾವುದೇ ಗಮನಾರ್ಹ ಕ್ರಿಯೆ ಅಥವಾ ಸಾಧನೆ ಕಂಡುಬಾರದೆ ಅದನ್ನೊಂದು ಖಾಲಿ ಪುಟವಾಗಿ ಚಿತ್ರಿಸಿದ್ದ ಯುರೋಪಿಯನ್ನರ ಚಿತ್ರಣಕ್ಕೆ ಪ್ರತಿಕ್ರಿಯೆಯಾಗಿ ಮೂಡಿಬಂದ ಕಾದಂಬರಿಗಳಿವು. ಆಫ್ರಿಕಾದ ಗತಕಾಲವು ‘ಒಂದು ಅನಾಗರಿಕ ಕರಾಳ ರಾತ್ರಿಯಲ್ಲ’ವೆಂದು ನಿದರ್ಶಿಸುವ ಶಕ್ತಿಯು ಕಾದಂಬರಿ ಕಾರರಲ್ಲಡಗಿದೆಯೆಂದು ಅಚಿಬೆಯವರು ಸ್ಪಷ್ಟವಾಗಿ ಹೇಳುತ್ತಾರೆ.

ಕಾದಂಬರಿಕಾರರಿಂದ ನಾಟಕೀಕರಿಸಲ್ಪಟ್ಟಿರುವ ಕಾಲವು ವಸಾಹತು ನಿರ್ಮಾಣದ ಪೂರ್ವಕಾಲವೇ ಆಗಲಿ ಅಥವಾ ಬಹುಬಾರಿ ಆದಂತೆ ಹೋರಾಟದ ಸಮಯದ ಕೃತಿಗಳೇ ಆಗಿರಲಿ, ಈ ರೀತಿಯಾದ ಐತಿಹಾಸಿಕ ಪುನಃ ಸಂಪಾದನೆಯು ಈ ಚಿತ್ರಣವನ್ನು ಸರಿಪಡಿಸುವ ಪ್ರಯತ್ನದಂತೆ ಕಂಡುಬರುತ್ತದೆ. ಬರಹಗಾರರು ಸ್ಥಳೀಯರ ಒಳಜೀವನ ಹಾಗೂ ಐತಿಹಾಸಿಕ ಪಾತ್ರಗಳಾಗಿ ಅವರ ಅನುಭವಗಳನ್ನೂ ಅಲ್ಲಗಳೆದಂತಹ ವಸಾಹತುವಾದಿ ವ್ಯಾಖ್ಯಾನದೊಂದಿಗೆ ಈ ಪುನಶ್ಚೇತನಕಾರಕ ಸಂಬಂಧವನ್ನು ಸ್ಥಿರಪಡಿಸಿದರು.

ವೋಲೆ ಸೊಯಿಂಕಾ ಅವರು ಯೊರೂಬಾ ದಾಖಲೆಗಳನ್ನಾಧರಿಸಿ ನಾಟಕ ಕಾದಂಬರಿ ಹಾಗೂ ಪದ್ಯಗಳನ್ನು ಬರೆದರು. ಅವರ ನಾಟಕ, ಪದ್ಯ ಹಾಗೂ ಕಾದಂಬರಿಗಳಲ್ಲಿ ಒಗೂವಾ, ಒಬಾತಲಾ, ಮುಂತಾದ ದೇವರುಗಳು ಪದೇ ಪದೇ ಕಾಣಿಸಿಕೊಳ್ಳುತ್ತಾರೆ. ಸೊಯಿಂಕಾ ಅವರು ಒಗುವಾ ದೇವರನ್ನು ಪಾರಮಾರ್ಥಿಕ ಮಾನವೀಯ ಆದರೂ ನಿಷ್ಠುರವಾಗಿ ನ್ಯಾಯದ ಪುನರ್ ಸ್ಥಾಪನೆಯನ್ನು ಪ್ರತಿನಿಧಿಸುವ ದೇವರೆಂದು ವರ್ಣಿಸಿದ್ದಾರೆ. ಈತನೇ ಬಿಂಬ, ಪರಿಕಲ್ಪನೆ, ನೀತಿಸೂತ್ರ ಹಾಗೂ ಸಹಾನುಭೂತಿಗಳ ಸ್ಥೂಲ ಹೊಡೆತದ ಪ್ರಥಮ ಕಲಾವಿದ. ಈ ಕುಲುಮೆಯ ಮೊಟ್ಟ ಮೊದಲನೆಯ ತಂತ್ರಜ್ಞ, ಒಬಾತಾಲಾ ದೇವರು ಸೃಷ್ಟಿಯ ಸೌಮ್ಯತೆಯ ಸಾರವಾದರೆ, ಸೃಜನಶೀಲ ಪ್ರೇರಣೆ ಮತ್ತು ಸ್ವತಃ ಸೃಜನಶೀಲ ಸಹಜ ಪ್ರವೃತ್ತಿಯೇ ತಾನಾದ ಸೃಜನಶೀಲತೆಯ ಸಾಕ್ಷಾತ್ ಸಾರವೇ ಒಗುನ್.

ವಸಾಹತುವಾದದ ತರುವಾಯ ಮೂಡಿ ಬಂದ ಬರಹಗಾರರ ಕೃತಿಗಳಲ್ಲಿ ಅವರ ಮೇಲೆ ಪ್ರಭಾವ ಬೀರಿರುವ ಸಂಸ್ಕೃತಿ ಹಾಗೂ ಮಿಥಕಗಳ ಕಲಸು ಮೇಲೋಗರಕ್ಕೆ ಕೊನೆಯಿಲ್ಲ; ಈ ಪ್ರಭಾವವು ಅವರ ಬರಹಗಳಲ್ಲಿ ಅಲ್ಲಲ್ಲಿ ಅಡ್ಡಾದಿಡ್ಡಿಯಾಗಿ ಕಂಡುಬರುತ್ತದೆ. ಉದಾಹರಣೆಗೆ ಕೀನ್ಯಾದ ಗೂಗಿ ವಾ ಥಿಯಾಂಗೋ ಅವರು ಸ್ವಿಫ್ಟ್ ಕಾನ್ರಾಡ್ ಹಾಗೂ ಕಾಫ್ಕಾರವರಿಂದ ಎರವಲು ಪಡೆದು ಅದನ್ನು ಆಫ್ರಿಕಾದ ಸನ್ನಿವೇಶಕ್ಕೆ ಜೋಡಿಸಿದ್ದಾರೆ. ವಸಾಹತುವಾದಿ ಶಿಕ್ಷಣದ ಅಂಗವಾಗಿದ್ದ ಬೈಬಲ್‌ನಿಂದ ಮೊದಲಿನ ಮಾದರಿಯಾಗಿ ಮೊಸಸ್ ಅನ್ನು ಆಫ್ರಿಕಾದ ಪ್ರಕರಣಗಳಲ್ಲಿ ಉಪಯೋಗಿಸಿಕೊಂಡಿದ್ದಾರೆ(ಉದಾಹರಣೆಗೆ ಇಸ್ರೇಲಿನವರನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುವ ನಾಯಕನ ಪಾತ್ರ). ಈ ರೀತಿಯಾಗಿ ವರ್ತಮಾನವನ್ನು ಪೂರ್ವದ ಸಂಕೇತಗಳ ಮೂಲಕ ಚಿತ್ರಿಸುವುದೂ ವಸಾಹತು ಸ್ವಾತಂತ್ರ್ಯ ಪ್ರಾಪ್ತಿಯ ಒಂದು ತಂತ್ರ.

ಸಂಸ್ಕೃತಿಯ ಯಥಾರ್ಥತೆ, ಬೆರಕೆ ಹಾಗೂ ಪ್ರತಿರೋಧಕ್ಕೆ ಸಂಬಂಧಪಟ್ಟ ವಸಾಹತು ಪಾಶ್ಚಾತ್ಯ ಚರ್ಚೆಗಳ ಕ್ಲಿಷ್ಟಾಂಶವನ್ನು ನಾವು ಪ್ರಧಾನವಾಗಿ ಭಾಷೆಯ ಬಳಕೆಯಲ್ಲಿ ಕಾಣುತ್ತೇವೆ. ‘ಭಾಷೆಯನ್ನು ಬಳಸುವುದೆಂದರೆ, ಸಂಸ್ಕೃತಿಯನ್ನು ಅಂಗೀಕರಿಸುವುದು’ ಎಂದು ಫಾನನ್ ಹೇಳುತ್ತಾರೆ. ಆದ ಕಾರಣ ತನ್ನ ಮಾತೃಭಾಷೆಯೊಂದಿಗೆ ಸಂಪರ್ಕ ಕಳೆದು ಕೊಳ್ಳುವುದೆಂದರೆ, ತನ್ನ ಸಾಂಸ್ಕೃತಿಕ ಮೂಲಗಳೊಂದಿಗೆ ಸಂಬಂಧವನ್ನು ಕಳೆದುಕೊಂಡು ಅದರ ಆಘಾತದಿಂದ ನಷ್ಟವನ್ನು ಸೂಚಿಸುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಹಾಗೂ ತಾವು ಆರಂಭದಲ್ಲಿ ಕೆಲವು ಇಂಗ್ಲಿಷ್ ಕಾದಂಬರಿಗಳನ್ನು ಬರೆದುದರಿಂದ ಆದ ಈ ನಷ್ಟವನ್ನು ಭರ್ತಿ ಮಾಡಿಕೊಳ್ಳಲೆಂದು ಗೂಗಿ ವಾಥಿಯಾಂಗೋ ಅವರು ಇನ್ನು ಮುಂದೆ ತಾವು ಕೇವಲ ತಮ್ಮ ಮಾತೃಭಾಷೆಯಾದ ಗಿಕುಯು ಭಾಷೆಯಲ್ಲಿ ಮಾತ್ರ ಬರೆಯಬೇಕೆಂದು ನಿರ್ಧರಿಸಿದ್ದಾರೆ.

ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಕೆಲವು ಬರಹಗಾರರು ಬೇರೆ ವಿಧಾನಗಳನ್ನು ಕಂಡುಕೊಂಡಿದ್ದಾರೆ. ಚಿನೂವಾ ಆಚಿಬೆ, ಗೇಬ್ರಿಯಲ್ ಒಕಾರಾ, ನುರುದ್ದೀನ್ ಫರಾಹ, ಏಯ್ ಕ್ವೇಯ್ ಅರ್ಮಾಹ್‌ರಂತಹ ಕಾದಂಬರಿಕಾರರು ತಮ್ಮ ಭಾಷೆಯ ಒಳಭೇದದ ನುಡಿಗಟ್ಟುಗಳನ್ನು ಇದ್ದಕ್ಕಿದ್ದ ಹಾಗೆ ಇಂಗ್ಲಿಷ್‌ಗೆ ಲಿಪ್ಯಂತರ ಮಾಡಿದ್ದಾರೆ. ಈ ಸಾಹಿತಿಗಳು ಸುಲಭಸಾಧ್ಯವಾಗಿ ಸಾಮಾನ್ಯ ಭಾಷೆಗೆ ತಿರುಗಿಸಲಾಗದಂತಹ ಧ್ವನಿಗಳ ಕಲಕಲವನ್ನು ಇಂಗ್ಲಿಷ್ ಭಾಷೆಯ ಒಳಗೆ ಸೇರಿಸಿದ್ದಾರೆ. ದಕ್ಷಿಣ ಆಫ್ರಿಕಾದ ಐ.ಎಂ.ಕೋಟ್ ಜೀಯಂತಹ ಬರಹಗಾರರು ಯುರೋಪಿಯನ್ ಚಿಂತನ ಕ್ರಮಗಳನ್ನು ವಸಾಹತುವಾದಿ ಪ್ರಪಂಚವನ್ನು ಸಂಘಟಿಸಿದ್ದ ನೋಟವನ್ನೂ ಅದರ ತೀರ್ಮಾನಗಳನ್ನು ಬುಡಮೇಲು ಮಾಡುವುದನ್ನು ಕಲಿತಿದ್ದಾರೆ.

‘ರಾಬಿಸನ್ ಕ್ರೂಸೋ’ನ ಪುನಾರಚನೆಯಾಗಿರುವ ಐ.ಎಂ.ಕೊಟ್‌ಜೀಯವರ ಕಾದಂಬರಿ ‘ಫೋ’(೧೮೯೦)ವನ್ನು ನಾವು ಆವಶ್ಯಕವಾಗಿ ಪಾಶ್ಚಾತ್ಯ ಆಧುನಿಕ ಕಾದಂಬರಿಯೆನ್ನಬಹುದು. ಬಿಳಿಯನ ಭಾಷೆಯನ್ನರಿಯದ ಫ್ರೈಡ್ ಈ ಸಮಸ್ಯೆಯನ್ನು ಪಕ್ಕಕ್ಕಿಟ್ಟು ಸುಲಭವಾಗಿ ಗುರುತಿಸಲಸಾಧ್ಯವಾಗುವಂತಹ ಅರ್ಥಗಳನ್ನು ಸೃಷ್ಟಿಸಲಾರಂಭಿಸುತ್ತಾನೆ. ವಸಾಹತುವಾದಿ ಪಶ್ಚಾತ್ಯಾ ಬರಹಗಳಲ್ಲಿ ಅನುಕರಣ ನಿಪುಣರು ವಸಾಹತುವಾದಿಯ ಮೇಲೆ ಪ್ರತಿಬಿಂಬಿತವಾಗಿ ಅವನ ಕುರಿತಾದ ವಿರೂಪ ಬಿಂಬವನ್ನು ನಮಗೆ ನೀಡಿದ್ದಾರೆ.

ವಸಾಹತುವಾದಿ ಪಾಶ್ಚಾತ್ಯ ಬರವಣಿಗೆಯನ್ನು ನಾವು ಬಹು ಪ್ರಕಾರದ ವಿವಿಧ ಸಂಸತಿಗಳನ್ನು ಹಾಗೂ ಅನೇಕ ತತ್ವಗಳನ್ನು ಆವರಿಸಿರುವ ದಿಗ್ಭ್ರಾಂತಗೊಳಿಸುವಷ್ಟು ಉಡಿಗೆ-ತೊಡಿಗೆಗಳಿಂದಾವೃತ್ತವಾದ ಪಠ್ಯವೆಂದು ವರ್ಣಿಸಬಹುದು. ಆಧುನಿಕ ಪಾಶ್ಚಾತ್ಯ ಮತ್ತು ವಸಾಹತು ಪಾಶ್ಚಾತ್ಯ ವ್ಯಾಖ್ಯಾನಗಳೆರಡೂ ಸೇರಿ ವಸಾಹತು ಪಾಶ್ಚಾತ್ಯ ವಿಮರ್ಶೆಯ ಬೆಳವಣಿಗೆಗೆ ಸಹಾಯಕವಾಗಿವೆ. ಈ ವಿಮರ್ಶೆಯು ತನ್ನ ಸಿದ್ಧಾಂತಕ್ಕೆ ಹೊಂದಿಕೊಳ್ಳುವ ಕಥನಗಳ ಪರವಾಗಿ ವಾದಿಸುತ್ತದೆ. ವಸಾಹತು ಪಾಶ್ಚಾತ್ಯ ವಿಮರ್ಶೆಯು ‘ಮಹಾನ್’ ಕಥನಗಳ ದುರ್ಬಲತೆಯನ್ನು ನಿದರ್ಶಿಸಿ ಅತಿಶಯವಾದ ಅಧಿಕಾರದ ಕಲ್ಪನೆಯನ್ನು ಪ್ರಶ್ನಿಸುತ್ತದೆ. ಭೂಗೋಳದಾದ್ಯಂತ ಶಕ್ತಿ ಕೇಂದ್ರಗಳನ್ನು ಕೆಡವಿ ಹಾಕುವುದು ವಸಾಹತ್ತಿನ ಸ್ವಾತಂತ್ರ್ಯ ಪ್ರಾಪ್ತಿಯ ಒಂದು ವಿಧಾನವಾಗಿದೆ. ಆಫ್ರಿಕಾದ ಸಾಹಿತ್ಯವು ಸ್ಥಳೀಯ ಮೂಲ ಹೊಂದಿ, ತನ್ನದೇ ಆದ ಅನನ್ಯ, ವಿಶಿಷ್ಟ ದೃಷ್ಟಿಕೋನವನ್ನು ಹೊಂದಿರುವ ಕಾರಣ, ವಸಾಹತು ಪಾಶ್ಚಾತ್ಯ ಓದುಗರು ಇತರ ಸಂಸ್ಕೃತಿಗಳಿಂದ ಮೂಡಿ ಬರುವ ಪಠ್ಯಗಳಿಗೆ ಪಠ್ಯೇತರ ಸಂಶೋಧನೆಯ ರೂಪದಲ್ಲಿ ಅಲ್ಲಿನ ಮೌಖಿಕ ಸಂಪ್ರದಾಯ, ಸಂಸ್ಕಾರಗಳ, ಜನಪ್ರಿಯ ಹಾಗೂ ಇನ್ನಿತರ ಜ್ಞಾನಗಳಿಂದ ಚೈತನ್ಯ ಪಡೆಯಬೇಕಾಗುತ್ತದೆಂಬುದನ್ನು ಮನಗಾಣಬೇಕು. ವಿಮರ್ಶೆಯ ವಿಭಿನ್ನ ಗ್ರಂಥಪಾಠದ ಸನ್ನಿವೇಶಗಳಲ್ಲಿ ಉದ್ಯುಕ್ತವಾಗಬೇಕು.

ಆಫ್ರಿಕಾದ ಸಿದ್ಧಾಂತದ ಕುರಿತಾಗಿ ಎರಡು ವಿಭಿನ್ನ ಪಂಥಗಳ ನಡುವೆ ಉಗ್ರ ವಿವಾದ ನಡೆದಿದೆ. ಡೇವಿಡ್ ಡಯೊಪ್, ನಗೂಗಿ ಹಾಗೂ ಫಾನನ್ ಮತ್ತು ಚಿನ್ ವೀಜುರಂತಹ ವಿಮರ್ಶಕರು ಆಫ್ರಿಕನ್ ಸಾಹಿತ್ಯ ಹಾಗೂ ರಾಜಕೀಯ ಚರ್ಚೆಗಳ ಮಧ್ಯೆ ಸಂಬಂಧದ ಪರವಾಗಿ ವಾದಿಸಿ, ಇದು ಆಫ್ರಿಕಾಗೇ ಸೀಮಿತವಾಗಿರುವ ವಿಶೇಷ ಸನ್ನಿವೇಶ ಎನ್ನುತ್ತಾರೆ. ಆದರೆ ಸೊಯಿಂಕಾರಂತಹ ವಿಮರ್ಶಕರು ಆಫ್ರಿಕಾದ ಸಾಂಸ್ಕೃತಿಕ ಅನುಭವದಲ್ಲಿ ಬಹುತತ್ವಗಳತ್ತ ಬೊಟ್ಟು ತೋರಿಸಿದ್ದಾರೆ. ಸೊಯಿಂಕಾ ಅವರು ಯೊರಾಬಾ ಮಿಥಕವನ್ನೂ, ಆಫ್ರಿಕನ್ ಜಗತ್ತಿನೊಂದಿಗೆ ಅದರ ಸಂಬಂಧವನ್ನೂ ಪುನರ್ ಸೃಷ್ಟಿಸಿದರೆ, ಅಚಿಬೆಯವರು ಯೊರೂಬಾ ಸಂಸ್ಕೃತಿಗೆ ಭಿನ್ನವಾಗಿರುವ ಅದಕ್ಕಿಂತಲೂ ಹೆಚ್ಚು ಪ್ರಜಾಪ್ರಭುತ್ವವಾದಿಯಾದ ಇಬೋ ಸಂತತಿಯನ್ನು ಪುನರಾವರ್ತಿಸುತ್ತಾರೆ. ಪೂರ್ವ ಆಫ್ರಿಕಾದಲ್ಲಿ ಕೀನ್ಯಾದ ಗೂಗಿ ಯವರ ಹೆಸರನ್ನು ಸೋಮಾಲಿಯಾದ ಕಾದಂಬರಿಕಾರ ನುರುದ್ದಿನ್ ಫರಾಹ ಅವರ ಹೆಸರಿನೊಂದಿಗೆ ಸೇರಿಸಲಾಗದು.

ಪೂರ್ವ ಆಫ್ರಿಕಾದ ಪದ್ಯವನ್ನು ಇಲ್ಲಿ ವಿಶೇಷವಾಗಿ ಉಲ್ಲೇಖಿಸಬೇಕು. ಉಗಾಂಡದ ವರಾದ ತಬನ್‌ಲೆ ಲಿಯಾಂಗ್ ಹಾಗೂ ಓಕೊಲ್ ಪಿ ಬೆಟಿಕ್ ಇವರೀರ್ವರೂ ಪೂರ್ವ ಆಫ್ರಿಕಾದ ಕಾವ್ಯ ಪ್ರಪಂಚದ ತದ್ವಿರುದ್ಧವಾದ ಎರಡು ಧ್ರುವಗಳು. ಲಿಯೊಂಗ್ ಅವರು ಇಪ್ಪತ್ತನೇ ಶತಮಾನದ ಯುರೋಪಿಯನ್ ಆಧುನಿಕ ಕವಿತೆಗಳ ವಿಧಾನಗಳನ್ನು ಶ್ರದ್ಧೆ ಯಿಂದ ಅನುಕರಿಸುವ ಯುರೋ ಆಧುನಿಕರು(ಯುರೋ ಮಾಡರ್ನಿಸ್ಟ್). ಪಿಬೆಟ್ ಕರು ಆಫ್ರಿಕಾದ ಕಾವ್ಯದಿಂದ ಮೂಲ ಸಂಪತ್ತನ್ನು ಪಡೆದು, ಮಾರ್ಪಡಿಸಲಾದ ಆಂಗ್ಲ ಭಾಷೆಯನ್ನು ಅದಕ್ಕೆ ಅಳವಡಿಸಿರುವ ಸಂಪ್ರದಾಯಶರಣರು. ಪಿಬೆಟಿಕ್‌ರು ಆಫ್ರಿಕಾದ ದೃಶ್ಯ ಶಬ್ದಗಳನ್ನೂ ಸಾಂಪ್ರದಾಯಿಕ ಕಾವ್ಯರೂಪಗಳನ್ನೂ ಗಾದೆಗಳನ್ನೂ ಉಪಯೋಗಿಸಿ ಕೊಂಡು ತಮ್ಮ ದನಿಗೆ ಅನನ್ಯ ವೈವಿಷ್ಟ್ಯತೆಯನ್ನು ತಂದುಕೊಂಡಿದ್ದಾರೆ. ಅತ್ಯಂತ ಹೆಚ್ಚಿನ ಖ್ಯಾತಿ ಪಡೆದ ಪದ್ಯಗಳಾದ ‘ಲಾನಿನೋಳ ಹಾಡು’ ಹಾಗೂ ‘ಒಕೊಲ್ ನ ಹಾಡು’ (ಸಾಂಗ್ ಆಫ್‌ಲಾವಿನೊ ಮತ್ತು ಸಾಂಗ್ ಆಫ್ ಓಕೊಲ್)ಗಳನ್ನು ಅವರದೇ ಆದ ಮಾತುಗಳಲ್ಲಿ ವರ್ಣಿಸಬೇಕೆಂದರೆ ‘ಅವುಗಳನ್ನು ಹಾಡಬಹುದು, ಆಡಬಹುದು ಅಥವಾ ಬರೆಯಬಹುದು.’ ‘ಲಾವಿನೋಳ ಹಾಡು’ ಮತ್ತು ‘ಒಕೊಲ್‌ನ ಹಾಡು’ಗಳಲ್ಲಿ ಒಕೊಲ್ ಎಂಬ ಅಕೋಲಿಯ ಮನುಷ್ಯನೇ ಕೇಂದ್ರ ಬಿಂದು. ಅಕೋಲಿಯ ಸಂಪ್ರದಾಯ ಹಾಗೂ ಜೀವನ ಶೈಲಿಗಳನ್ನು ತಿರಸ್ಕರಿಸಿ ತನ್ನದಾಗಿಸಿಕೊಂಡಿರುವ ಒಕೊಲಿಯ ಹೆಂಡತಿ ಲಾವಿನೋ ಆಫ್ರಿಕನ್ ಜೀವನ ಶೈಲಿಯ ಮೂರ್ತ ಸ್ವರೂಪ. ಕವಿ ಮತ್ತು ಅವನಿಂದ ಸೃಷ್ಟಿಯಾದ ಈ ಪಾತ್ರಗಳ ನಡುವಣ ಘರ್ಷಣೆಯಲ್ಲಿಯೇ ಈ ಪದ್ಯಗಳ ಅರ್ಥ ಮೋಹಕತೆ ಅಡಗಿದೆ. ಓಕೊಲನ ಹೆಂಡತಿ ಲಾವಿನೊಳ ಕುರಿತಾಗಿ ಹಾಗೂ ಅಕೋಲಿಯ ಸಾಂಪ್ರದಾಯಿಕ ಜೀವನದ ಸೌಂದರ್ಯ ಹಾಗೂ ಅದರ ಸಮಂಜಸತೆಯ ಕುರಿತಾಗಿ ಓದುಗರ ಮನಸ್ಸಿನಲ್ಲಿ ಸಂವೇದನೆ ಮೂಡುವಂತೆ ಕವಿ ಜಾಣ್ಮೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಓಕೊಲ್ ಹಾಗೂ ಆತನ ಆಡಂಬರವನ್ನು ಲಾವಿನೋ ಸದಾ ಅಪಹಾಸ್ಯ ಮಾಡುತ್ತಿರುತ್ತಾಳೆ.

ನಾಟಕೀಯ ಸ್ವಗತ ಭಾಷಣ ಹಾಗೂ ಸಾಂಪ್ರದಾಯಿಕ ಹಾಡುಗಳ ಬೆಸುಗೆಯಲ್ಲಿ ಈ ಹಾಡುಗಳ ನವೀನತೆ ಅಡಗಿದೆ. ಆರಂಭದಲ್ಲಿ ಅದರ ಪರಿಣಾಮ ಸ್ಪಷ್ಟ ಹಾಗೂ ಸರಳವೆನಿಸುತ್ತದೆ; ಎರಡೂ ಹಾಡುಗಳು ಓದುಗರ ಓಕೊಲ್ ಹಾಗೂ ಆತನ ಪಾಶ್ಚಾತ್ಯ ರೀತಿ ನೀತಿಗಳನ್ನು ಅಪಹಾಸ್ಯ ಮಾಡಿ ಅಕೋಲಿ ಗ್ರಾಮ್ಯ ಜೀವನವನ್ನು ಹೊಗಳುವಂತೆ ಮಾಡುತ್ತವೆ. ಆದರೆ ಹೊರನೋಟಕ್ಕೆ ವ್ಯಕ್ತವಾಗುವ ಈ ಸರಳತೆ ನಮ್ಮನ್ನು ತಪ್ಪು ದಾರಿಗೆಳೆಯಬಲ್ಲದು; ಕಾರಣ ಈ ಪಾತ್ರಗಳೇ ಸ್ವತಃ ಜಟಿಲವಾದ ಪಾತ್ರಗಳು. ಈ ಪದ್ಯಗಳು ನವೀನ ಆಕಾರವನ್ನು ಹೊಂದಿದ್ದು, ಇಂಗ್ಲಿಷ್‌ನಲ್ಲಿ ಬರೆಯಲ್ಪಟ್ಟಿವೆಯಾದರೂ ಇವು ವಿನೋದದ ಮೂಲಕ ಎಳೆಯರಿಗೆ ನೀತಿ ಪಾಠ ಮಾಡುವ, ಬುಡಕಟ್ಟಿನ ಮೌಲ್ಯ ಹಾಗೂ ರೂಢಿಗಳನ್ನು ಎಳೆಯರಿಗೆ ಪರಿಚಯಿಸುವ ಗ್ರಾಮ್ಯ ಪದ್ಯಗಳ ಮತ್ತು ಜಾನಪದ ಕಥೆಗಳ ಸಾಂಪ್ರದಾಯಿಕ ಕರ್ತವ್ಯವನ್ನು ನಿರ್ವಹಿಸುತ್ತವೆ.

ಲಾವಿನೋಳ ಹಾಡಿನಲ್ಲಿ ಹೊಗಳಿಕೆಯ ಹಾಗೂ ತೆಗಳಿಕೆಯ ಹಾಡುಗಳೂ, ಜೋಗು ಳವೂ, ಸಾಂಪ್ರದಾಯಿಕ ಗಾದೆಗಳೂ ಸೇರಿಕೊಂಡಿವೆ. ಹಾಡಿಗೆ ಅಂತರ್ಭಾವವನ್ನು ನೀಡುವ ಪ್ರಮುಖ ಗಾದೆ ಹೀಗಿದೆ

ಹಳೆ ಹೊಲಮನೆಯಲ್ಲಿರುವ ಕುಂಬಳಕಾಯಿಯನ್ನು ಬೇರು ಸಮೇತ ಕೀಳಕೂಡದು

ದಕ್ಷಿಣ ಆಫ್ರಿಕಾದ ಸಾಹಿತ್ಯವು ಸಾಂಪ್ರದಾಯಿಕ ಆಫ್ರಿಕಾದ ವಾಗ್ಮೀಯತೆಯಿಂದ ಕೂಡ ಎರವಲು ಪಡೆದಿದೆ. ದಕ್ಷಿಣ ಆಫ್ರಿಕಾದಲ್ಲಿ ಮೂರು ವಿಧದ ವಾಗ್ಮೀಯತೆಗಳಿವೆ.

೧. ದೇವರನ್ನು ಆರಾಧಿಸುವ ಹಾಡುಗಳು – ಇವು ಸಂವಾದ ಗೀತ ಗುಚ್ಛಗಳು ಹಾಗೂ ಭಾವಗೀತೆಗಳ ವೈಲಕ್ಷಣ್ಯ ಹೊಂದಿವೆ. ಎದುರಾಳಿಯ ಕುರಿತಾದ ಭಯ-ಭಕ್ತಿ ತುಂಬಿದ ಬೇಟೆ ಹಾಡುಗಳು; ವಿಜಯ ಪ್ರಾಪ್ತಿಯ ಆನಂದಭರಿತ ಹಾಡುಗಳು; ಅಥವಾ ತನ್ನನ್ನು ಮೀರಿಸಿದ ಎದುರಾಳಿಯ ಕುರಿತಾದ ಮಾತ್ಸರ್ಯದ ಹಾಡುಗಳು; ಹೆಂಗಸರ ಗೃಹಕೃತ್ಯ ಗಳನ್ನು ಪುರುಷರ ವೀರ್ಯವತ್ತಾದ ಕಾರ್ಯಗಳನ್ನು ವರ್ಣಿಸುವ ಹಾಡುಗಳು, ಸಮರ ಗೀತೆಗಳು, ಶೃಂಗಾರ ಗೀತೆಗಳು ಮತ್ತು ಯುದ್ಧ ಹಾಗೂ ಸಾವುಗಳ ಕುರಿತಾದ ಹಾಡುಗಳು.

೨. ಮೂಲಭೂತವಾಗಿ ಸ್ತುತಿಗಳನ್ನು ಗಾದೆಗಳನ್ನೂ ಅಭಿಶಾಪ ಮತ್ತು ಒಗಟುಗಳನ್ನೊಳ ಗೊಂಡ ಸಾರೋಕ್ತಿಗಳು(ಅಪೋರಿಸಂ)

೩. ಬುಡಕಟ್ಟಿನ ಮೌಲ್ಯಗಳನ್ನು ಮುಂದುವರಿಸಿಕೊಂಡು ಹೋಗುವಂತೆ ಉಪದೇಶ ನೀಡುವ ಉದ್ದೇಶಭರಿತ ಕಥನಗಳು. ಮಿಥಕಗಳಲ್ಲೂ, ನೀತಿಕಥೆಗಳಲ್ಲೂ, ಜಾನಪದ ಕಥೆಗಳಲ್ಲೂ ಈ ಕಥನ ರೂಪಗಳು ಸೇರಿ ಹೋಗಿವೆ.

ವಿಮರ್ಶೆಯ ಕ್ಷೇತ್ರದಲ್ಲಿ ಚೀಕಾ ಅಂಟಾ ಡಯೋಪ್ ಅವರು ಆಫ್ರಿಕಾದ ನೈಲ್ ಪ್ರಾಂತ್ಯವನ್ನು ಸಮಗ್ರ ಆಫ್ರಿಕಾದ ವಸಾಹತುವಾದಿ ಕಥನಗಳ ಸಾಂಸ್ಕೃತಿಕ ಕೇಂದ್ರವೆಂದು ಎತ್ತಿಹಿಡಿದರು. ಆಫ್ರಿಕಾದ ನೈಲ್ ಕಣಿವೆಯ ಅಕ್ಷರಸ್ಥ ಸಂಸತಿಗಳು ಮೆಡಿಟರೆನಿಯನ್ ಸಂಸ್ಕೃತಿಗೆ ಅಕ್ಷರ ಜ್ಞಾನ ನೀಡಿದರೆಂಬುದು ಅವರ ವಾದ. ಹೀಗೆ ರಾಜಕೀಯವಾಗಿ ವಿಚ್ಛಿದ್ರಗೊಂಡ ಆಫ್ರಿಕಾದ ಸಾಂಸ್ಕೃತಿಕ ರಾಜ್ಯಗಳನ್ನು ರಾಜಕೀಯವಾಗಿ ಪ್ರೇರಿತಗೊಂಡ ಭಾಷಾ ಸಂಬಂಧವಾದ ಕಾರ್ಯಸೂಚಿಯ ಮೂಲಕ ಸ್ವತಂತ್ರ ‘ಎಲ್ಲಾ ಆಫ್ರಿಕನರು’ ವಾದವನ್ನು(ಪ್ಯಾನ್ ಆಫ್ರಿಕನ್) ಪುನಃ ಸ್ಥಾಪಿಸುವ ಶತಪ್ರಯತ್ನ ನಡೆಸಿದರು.

ಆಫ್ರಿಕಾದ ಅತ್ಯಂತ ಪ್ರಭಾವಶಾಲಿ ತಾತ್ವಿಕರಾದ ಫ್ರಾನ್‌ಟ್ಜ್ ಫಾನನ್ ಹಾಗೂ ಅವರ ಕೃತಿ ‘ದಿ ರಿಚಡ್ ಆಫ್ ದಿ ಅರ್ತ್’ ಅನ್ನು ಪಾಶ್ಚಾತ್ಯ ನಾಗರಿಕತೆಯ ಅತ್ಯಂತ ಪ್ರಮುಖ ವಿಮರ್ಶೆ ಎಂದು ಸಮರ್ಥಿಸಬಹುದು. ಕರಿಯತನವನ್ನು ವಿಚಾರಣಾಧಿಕಾರಿ/ ವಿಚಾರಣೆ ಗೊಳಪಟ್ಟವನು, ಶ್ರೀಮಂತಿಕೆ/ಬಡತನ ಹಾಗೂ ಸ್ವ ಈಡೇರಿಕೆ/ ನಿರಾಕರಣೆಗಳಂತಹ ವಿರೋಧಗಳಂತಹ ವಿರೋಧಗಳ ನಿದರ್ಶನಗಳನ್ನು ಮರೆ ಮಾಚಿದ ಬಿಳಿಯ ಅನ್ವಯ ಎಂದು ಅವರು ಸಾಧಿಸಿದರು. ಭದ್ರವಾಗಿ ತಳವೂರಿರುವ ಶಕ್ತಿಗಳನ್ನು ಸಾಮಾನ್ಯ ಭಾಷೆ ಯಲ್ಲಿ ಅರ್ಥ ಮಾಡಿಕೊಂಡು ಸಾಂಸ್ಕೃಕ ಕೇಂದ್ರಗಳನ್ನು ಪುನರ್‌ಸ್ಥಾಪಿಸಿ ಮುಕ್ತಾಯ ಗೊಂಡು ಸ್ಥಾಯಿಯಾಗಿರುವ ವಸಾಹತುವಾದಿ ವ್ಯಾಖ್ಯಾನಗಳನ್ನು ನಿಶ್ಶಕ್ತಗೊಳಿಸುವ ಅಗತ್ಯಕ್ಕೆ ಅವರು ಒತ್ತು ಕೊಡುತ್ತಾರೆ.

ಕ್ರಾಂತಿಕಾರಿ, ರಾಷ್ಟ್ರೀಯತಾವಾದಿ ಸೌಂದರ್ಯೋಪಾಸನೆಯನ್ನು ದೃಢಪಡಿಸುವ ವಿರೋಧಗಳೊಂದೆಡೆ ಹಾಗೂ ಇನ್ನೊಂದೆಡೆ ಸಾಂಸ್ಕೃತಿಕ ಬಹುತತ್ವ – ಇವು ವಸಾಹತುಗಳ ಹಾಗೂ ವಸಾಹತುವಾದಿಗಳ ಐತಿಹಾಸಿಕ ವಿರೋಧಕ್ಕೆ ಪ್ರತಿಕ್ರಿಯೆಗಳಾಗಿವೆ. ಈ ಪ್ರತಿಕ್ರಿಯೆ ಗಳು ಭಾಗಶಃ ಪ್ರಧಾನ ವ್ಯಾಖ್ಯಾನದಿಂದ ನಿರ್ಧರಿತಗೊಳ್ಳುತ್ತವೆ. ವಿಮೋಚನ ಪಠ್ಯಗಳು ಭಾಗಶಃ ತಾವು ವಿಕೇಂದ್ರೀಕರಿಸಿ ಹೊಸದಾಗಿ ಸೃಷ್ಟಿಸುವ ನೂತನ ಕೇಂದ್ರಗಳ ಶಕ್ತಿಕೇಂದ್ರ ದಿಂದ ನಿರ್ಧರಿತಗೊಳ್ಳುತ್ತವೆ. ತನ್ನ ಇತಿಹಾಸದ ಸ್ತಂಭದಿಂದ ರಕ್ಷಿಸಲ್ಪಟ್ಟ ಭಾಷೆಯ ಈ ಪರಿಸ್ಥಿತಿ ಎಲ್ಲಾ ಸಾಹಿತ್ಯಗಳಲ್ಲೂ ಕಂಡುಬರುತ್ತದೆ.

ಒಟ್ಟಾರೆ ಹೇಳಬೇಕೆಂದರೆ, ವಸಾಹತು ಪಾಶ್ಚಾತ್ಯ ವ್ಯಾಖ್ಯಾನಗಳನ್ನು ಹಿಂದಿನ ವಸಾಹತು ವಾದಿ ಸಂಸತಿಗಳಿಗೆ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸಗಳ ಪುನರ್ ನಿರ್ಣಯಗಳನ್ನು ಪ್ರಕಟಿಸುವ, ತಾವು ಹುಟ್ಟಿ ಬಂದ ಭಾಷೆಗಳನ್ನು ಪುನಾರಚಿಸುವ ಅರ್ಥ ವಿವರಣೆ ನೀಡುವ ವ್ಯಾಖ್ಯಾನಗಳೆಂದು ಕರೆಯಬಹುದು.

 

ಪರಾಮರ್ಶನ ಗ್ರಂಥಗಳು

೧. ಆಲಿವರ್ ಆರ್ ಮತ್ತು ಅಟೆಮೋರ್ ಎ., ೧೯೬೭. ಆಫ್ರಿಕಾ ಸಿನ್ಸ್, ಆಕ್ಸ್‌ಫರ್ಡ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್.

೨. ವಿಲ್ಸನ್ ಮೊನಿಕಾ ಮತ್ತು ಲಿಯೋನಾಡ್‌ನ ಥೋಮ್ಸನ್(ಸಂ), ೧೯೭೧. ಆಕ್ಸ್‌ಫರ್ಡ್  ಹಿಸ್ಟರಿ ಆಫ್ ಸೌತ್ ಆಫ್ರಿಕಾ, ಸಂ.೨, ಲಂಡನ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್.

೩. ಅಬ್ರಹಾಂ ಡಬ್ಲ್ಯು.ಇ., ೧೯೬೨. ದಿ ಮೈಂಡ್ ಆಫ್ ಆಫ್ರಿಕಾ.