ಮೌಖಿಕ ಸಂಪ್ರದಾಯ

ಆಫ್ರಿಕಾದ ಮೌಖಿಕ ಸಂಪ್ರದಾಯದ ಸಾಹಿತ್ಯವು ಸಾರ ಮತ್ತು ವೈವಿಧ್ಯದಲ್ಲಿ ಬೇರೆ ಯಾವುದೇ ಜಾನಪದ ಅಥವಾ ಶಿಷ್ಟ ಪ್ರಾಚೀನ ಅಥವಾ ಅರ್ವಾಚೀನ ಪ್ರಮುಖ ಸಂಸ್ಕೃತಿಗಳ ಸಾಹಿತ್ಯಕ್ಕೆ ಸರಿಸಮವಾಗಿದೆ. ಸಹರಾದ ದಕ್ಷಿಣ ಭಾಗದಲ್ಲಿ ವಾಸಿಸುತ್ತಿರುವ ಜನಗಳ ತೋಂಡಿ ಸಂಪ್ರದಾಯದ ಕಾವ್ಯ ಮತ್ತು ಕಥನ ಪ್ರಕಾರಗಳು ಬಲು ಶ್ರೀಮಂತ ಮತ್ತು ವೈವಿಧ್ಯಪೂರ್ಣವಾಗಿದೆ. ಇದರಲ್ಲಿ ಪುರಾಣಗಳಿವೆ, ಸ್ತುತಿಗೀತಗಳಿವೆ, ಮಹಾಕಾವ್ಯ, ಜನಪದ ಕಥೆಗಳಿವೆ, ಒಗಟು, ಗಾದೆಗಳು ಮತ್ತು ಮಂತ್ರ ತಂತ್ರಗಳಿವೆ. ಈ ಪ್ರಕಾರಗಳ ವಸ್ತು ಸಾರಗಳು ಬಹಳ ವೈವಿಧ್ಯಮಯವಾಗಿವೆ. ಇದರಲ್ಲಿ ಶಿಶು ಪ್ರಾಸಗಳಿವೆ. ಮೌಖಿಕ ಇತಿಹಾಸ ಹಾಗೂ ಬುದ್ದಿಗೆ ಸವಾಲನ್ನು ಒಡ್ಡುವ ಸಾಂಕೇತಿಕ ಕೃತಿಗಳೂ ಇವೆ. ಆಫ್ರಿಕಾದ ಮೌಖಿಕ ಸಾಹಿತ್ಯದಿಂದ ಸಂಗ್ರಹಿಸಿದ ಗದ್ಯ ಕಥನಗಳೆಂದರೆ ಐತಿಹ್ಯಗಳು, ಪುರಾಣಗಳು, ಜನಪದ ಕಥೆಗಳು, ಘಟನಾವಳಿ ಮತ್ತು ನಗೆಹನಿಗಳೂ ಪ್ರಮುಖವಾದವು. ಆದರೆ ಆಫ್ರಿಕಾದ ಸಮಾಜದಲ್ಲಿ ಅಷ್ಟೇ ಪ್ರಾಮುಖ್ಯತೆ ಪಡೆದವೆಂದರೆ ಗಾದೆಗಳು, ಒಗಟುಗಳು, ಗೀತ ನಾಟಕಗಳು, ಪದ್ಯ, ಸ್ತುತಿನಾಮಾವಳಿ ಮತ್ತು ಬಾಯಿ ತೊಡರಿಸುವ ಮಾತುಗಳು. ಈ ಸಾಹಿತ್ಯ ತ್ವರಿತವಾಗಿ ಸಾಂಸ್ಕೃತಿಕವಾಗಿ ಬದಲಾಗುತ್ತಿರುವ ನಗರವಾಸಿಗಳಲ್ಲೂ ಪ್ರಚಲಿತವಿದ್ದು ಮೂಲಭೂತವಾದ ಸಮರೂಪತೆ ಮತ್ತು ಗಣನೀಯ ಚೈತನ್ಯಶಿೀಲತೆ ಮತ್ತು ಸಾಹಿತ್ಯದಲ್ಲಿ ಕಾಣಬರುತ್ತದೆ. ಆಫ್ರಿಕಾದ ಈ ಮೌಖಿಕ ಸಾಹಿತ್ಯದ ಒಂದು ಪ್ರಮುಖ ಲಕ್ಷಣವೆಂದರೆ ಅದಕ್ಕೂ ಸಂಗೀತಕ್ಕೂ ಇರುವ ನಿಕಟ ಸಂಬಂಧ. ಬಹಳಷ್ಟು ಕಾವ್ಯವನ್ನು ಆಡುವುದು ಅಥವಾ ಹಾಡುವುದಕ್ಕಿಂತ ಸಂಗೀತದ ಮೂಲಕ ಅಭಿವ್ಯಕ್ತಿಸಲಾಗುವುದು. ದೇಶೀಯವಾಗಿ ಐತಿಹ್ಯ ಹಾಗೂ ಪುರಾಣಗಳನ್ನು ಅಷ್ಟಾಗಿ ಭಿನ್ನವಾಗಿ ಪರಿಗಣಿಸುವುದಿಲ್ಲ. ಜನಪದ ಗೀತೆಗಳನ್ನು ಕಾಲ್ಪನಿಕ ಎಂದು ಪರಿಗಣಿಸುತ್ತಾರೆ. ಆದರೆ ಅದಕ್ಕೆ ಭಿನ್ನವಾಗಿ ಐತಿಹ್ಯ ಹಾಗೂ ಪುರಾಣಗಳನ್ನು ನಿಜವಾದ ಐತಿಹಾಸಿಕ ಕಥನಗಳೆಂದು ಪರಿಗಣಿಸುತ್ತಾರೆ. ಪ್ರಾಣಿ ಚಮತ್ಕಾರಗಳ ಜನಪದ ಕಥೆಗಳು ಅಂದರೆ ಆಮೆ, ಮೊಲ, ಕಾಡುಮೊಲ, ಚಿರೆತೈನ್ ಅಥವಾ ಜೇಡಗಳನ್ನು ಒಳಗೊಂಡ ಕಥೆಗಳು ಬಹಳ ಪ್ರಚಲಿತವಾದ ಆಫ್ರಿಕನ್ ಕಥೆಗಳು. ಇದಲ್ಲದೆ ಆಫ್ರಿಕನ್ ಕಥೆಗಳಲ್ಲಿ ಮಾನವ ಮತ್ತು ದೈವೀವಂಚಕರು, ರಾಜರು ಮತ್ತು ಶ್ರೀ ಸಾಮಾನ್ಯರು, ಅವಳಿಗಳು, ಬೇಟೆಗಾರರು, ರಾಕ್ಷಸರು ಮತ್ತು ಕುಳ್ಳರು ಇನ್ನೂ ಏನೇನೋ ಪಾತ್ರಗಳು ಭಾಗವಹಿಸುತ್ತವೆ. ಆದರೆ ಈ ಕಥೆಗಳನ್ನು ಪ್ರಾಣಿ ಕಥೆಗಳಷ್ಟು ಹೆಚ್ಚಾಗಿ ಸಂಗ್ರಹಿಸಿರುವುದಿಲ್ಲ. ಹೇಳುವ ವಿಷಯವನ್ನು ನಾಟುವಂತೆ ಹೇಳುವುದಕ್ಕಾಗಿ ಮತ್ತು ಮಾತಿಗೊಂದು ಸೊಗಸು ನೀಡುವುದಕ್ಕಾಗಿ ಗಾದೆಗಳನ್ನು ಬಳಸುತ್ತಾರೆ. ಅವುಗಳನ್ನು ಕೌಶಲ್ಯ ಪೂರ್ಣವಾಗಿ ಬಳಸುವುದು ಆಫ್ರಿಕನ್ ಸಮಾಜದಲ್ಲಿ ವಾಗ್ಮಿಕೆಯ ಕುರುಹು. ಇವು ಮಾತಿನ ಅಂದಗಾರಿಕೆಯನ್ನು ಸೂಚಿಸುತ್ತದೆ. ಅನೇಕ ಗಾದೆಗಳ ಅರ್ಥ ಬಹಳ ನಿಗೂಢವಾಗಿರುತ್ತದೆ. ಅದನ್ನು ಬಳಸುವವರ ಸಂಸ್ಕೃತಿ ಅರ್ಥವಾಗಿದ್ದರೆ ಮಾತ್ರ ಅದನ್ನು ಅರ್ಥ ಮಾಡಿಕೊಳ್ಳಬಹುದು. ಗಾದೆಗಳ ಒಂದು ತಂಡವನ್ನು ವಿಶ್ಲೇಷಿಸಿ ನೋಡಿದರೆ ಆ ಗಾದೆಗಳು ಅಂಗ ಭಾಗವಾಗಿರು ವಂತಹ ಸಂಸ್ಕೃತಿಯ ಮೂಲಭೂತ ಮೌಲ್ಯಗಳು ಅರ್ಥವಾಗುತ್ತವೆ. ಗಾದೆಗಳ ಬಗ್ಗೆ ಅಧ್ಯಯನ ಮಾಡಿರುವಷ್ಟು ಒಗಟುಗಳನ್ನು ಅಧ್ಯಯನ ಮಾಡಿರುವುದಿಲ್ಲ. ಏಕೆಂದರೆ ಅವನ್ನು ಹೆಚ್ಚಾಗಿ ಮಕ್ಕಳೇ ಹೇಳಿಕೊಳ್ಳುತ್ತಿರುತ್ತವೆ. ಸಾಮಾನ್ಯವಾಗಿ ಅವು ಪ್ರಶ್ನೆಗಳ ರೂಪದಲ್ಲಿರದೆ ಹೇಳಿಕೆಗಳ ರೂಪದಲ್ಲಿರುತ್ತವೆ. ಪ್ರಶ್ನೆ ಮತ್ತು ಉತ್ತರಗಳ ನಡುವಿನ ಸಂಪರ್ಕ ಬಲು ಸೂಕ್ಷ್ಮವಾಗಿರುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಲು ಅದಕ್ಕೆ ಮೂಲ ಮಾತೃಕೆಯಾದ ಸಂಸ್ಕೃತಿಯ ಆಳವಾದ ಪರಿಚಯವಿರಬೇಕು. ಇಂಗಿತಾರ್ಥ ಒಗಟುಗಳು ಮತ್ತು ಗಾದೆ ಒಗಟುಗಳು ಎರಡೂ ಆಫ್ರಿಕನ್ ಸಾಹಿತ್ಯದಲ್ಲಿವೆ. ಕಥೆ ಹೇಳುವುದು ಆಫ್ರಿಕಾದಲ್ಲಿ ಒಂದು ಲಲಿತ ಕಲೆಯಾಗಿದೆ ಮತ್ತು ಕೆಲವು ಸಮಾಜದಲ್ಲಿ ಅದು ವೃತ್ತಿಪರ ಕಲೆಯಾಗಿ ಹೋಗಿದೆ.  ಜನಪದ ಕಥೆಗಳನ್ನು ಸಾಮಾನ್ಯವಾಗಿ ಬೇಸಿಗೆಯ ರಾತ್ರಿಗಳಲ್ಲಿ ಹೇಳುತ್ತಾರೆ. ಕಥನಕಾರ ಹಾಗೂ ಕೇಳುಗರ ನಡುವಿನ ಸಂವಾದ ಅತ್ಯಂತ ನಾಟಕೀಯವಾಗಿರುತ್ತದೆ. ಉತ್ತಮ ಕನಕಾರ ಒಳ್ಳೆಯ ನಟ ಕೂಡ. ಆತ ತನ್ನ ಧ್ವನಿ, ಕೈಗಳು ಮತ್ತು ದೈಹಿಕ ಅಭಿನಯಗಳ ಮೂಲಕ ವಂಚಕನ ನಡವಳಿಕೆಗಳನ್ನು ಮತ್ತು ಬೇಟೆಗಾರ ತನ್ನ ಬೇಟೆ ಅಟಕಾಯಿಸುವುದನ್ನು ಅನುಕರಿಸಿ ತೋರುತ್ತಾನೆ. ಕಥೆಯ ಪ್ರಾರಂಭಕ್ಕೆ ಒಗಟು ಹೇಳುವುದು ನಡೆಯುತ್ತದೆ. ಜನಪದ ಕಥೆಗಳ ನಡುನಡುವೆ ಸಂಗೀತ ಹಾಗೂ ಹಾಡುಗಾರಿಕೆ ಬರುತ್ತದೆ. ಕೇಳುಗರೂ ಅದರಲ್ಲಿ ಭಾಗವಹಿಸುತ್ತಾರೆ. ಕಥೆಗಾರ ಕೇಳಿದ ಒಂದು ಪ್ರಶ್ನೆಗೆ ಕೇಳುಗರೂ ಉತ್ತರಿಸಬಹುದು ಅಥವಾ ಕಥೆಗಾರ ಹಾಡುವಾಗ ಕೇಳುಗರು ಮೇಳಗಾಯಕರಾಗಿ ವರ್ತಿಸಬಹುದು. ಆಫ್ರಿಕಾದ ಮೌಖಿಕ ಸಂಪ್ರದಾಯದ ಸಾಹಿತ್ಯದ ವಿವಿಧ ಪ್ರಕಾರಗಳು ಆಫ್ರಿಕನ್ ಸಮಾಜದಲ್ಲಿ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತವೆ. ಇವು ಮನೋರಂಜನೆಯನ್ನು ನೀಡುವುದಷ್ಟೇ ಅಲ್ಲ ತಮ್ಮ ಎಳೆಯರಿಗೆ ಶಿಕ್ಷಣ ನೀಡಲು, ಆಚಾರ ಮತ್ತು ನಂಬಿಕೆಗಳ ಮೌಲ್ಯ ಪ್ರತಿಪಾದನೆ ಮಾಡಲು ಸಾಂಸ್ಕೃತಿಕ ನಡಾವಳಿಗಳನ್ನು ಪಾಲಿಸುವಂತೆ ಉತ್ತೇಜಿಸಲು ಮತ್ತು ಸಾಂಸ್ಥಿಕ ನಡವಳಿಕೆಗಳಿಗೆ ಮನೋವೈಜ್ಞಾನಿಕ ಹೊರ ಅರಿವನ್ನು ನೀಡಲು ಇದನ್ನು ಬಳಸಲಾಗುತ್ತದೆ. ಒಗಟುಗಳು ಕಿರಿಯರ ಬುದ್ದಿಶಕ್ತಿಯುನ್ನು ನಿಶ್ಚಿತಗೊಳಿಸುತ್ತದೆ. ಇದೇ ರೀತಿ ನಿರ್ದಿಷ್ಟ ಉತ್ತರವಿಲ್ಲದ ಡೋಲಾಯಮಾನ ಜನಪದ ಕಥೆಗಳು ಹಿರಿಯರ ಧೀಶಕ್ತಿಯನ್ನು ಚುರುಕುಗೊಳಿಸುತ್ತವೆ. ಪುರಾಣಗಳು ಅಧಿ ಪ್ರಾಕೃತಿಕ ನಂಬಿಕೆಗಳು ಮತ್ತು ಆಚಾರಗಳನ್ನು ಕುರಿತ ಪ್ರಶ್ನೆಗಳಿಗೆ ಉತ್ತರ ನೀಡುವ ಆಕರಗಳೆಂದು ಪರಿಗಣಿಸುತ್ತಾರೆ. ಭೂಮಾಲೀಕತ್ವ, ಸಾಮಾಜಿಕ ಸ್ಥಾನಮಾನ ಮತ್ತು ರಾಜಕೀಯ ಅಧಿಕಾರವನ್ನು ಕುರಿತು ಸಮರ್ಥನೆ ನೀಡಲು ಇದನ್ನು ಬಳಸಲಾಗುತ್ತದೆ.

ವಾಡಿಕೆಯ ಸಂಭಾಷಣೆಯಲ್ಲಿ ಗಾದೆಗಳನ್ನು, ಮಾರ್ಗದರ್ಶನ ನೀಡಲು, ಪೋತ್ಸಾಹ ನೀಡಲು ಅಥವಾ ಪ್ರಶಂಸಿಸಲು ಬಳಸುತ್ತಾರೆ. ಇಟೈಬೋ ಮಾತನಾಡುವ ಜನರ ನಾಟಕ ಸಂಸ್ಥೆಗಳು ಸಾಂಸ್ಕೃತಿಕ ಕಟ್ಟುಕಟ್ಟಳೆಗಳನ್ನು ಪಾಲಿಸಲು ತಪ್ಪಿದ ಜನರ ಮೇಲೆ ಸಾಮಾಜಿಕ ನಿಯಂತ್ರಣವನ್ನು ಸಾಧಿಸುವುದಕ್ಕಾಗಿ, ಜನರು ಹಾಗೂ ಬೊಂಬೆಗಳು ನಟಿಸುವಂತಹ ನಾಟಕಗಳನ್ನು ಆಡುತ್ತಾರೆ. ಅಂತಿಮವಾಗಿ ಜನಪದ ಕಥೆಗಳಲ್ಲಿ ಸಾಂಸ್ಕೃತಿಕ ನೈಜತೆಯನ್ನು ತಿರುಚಿ ಹೇಳುವ ಪ್ರಕ್ರಿಯೆ ಮನಸ್ಸಿನ ಇಚ್ಛೆಯನ್ನು ಪರ್ಯಾಯವಾಗಿ ಪೂರ್ಣಗೊಳಿಸುವುದಕ್ಕೆ ಮಾಡಿದ ಪ್ರಯತ್ನಗಳನ್ನು ಸೂಚಿಸುತ್ತವೆ. ಈ ಕಥಾನಕಗಳ ಪಾತ್ರಗಳು, ಜನರು ಸಾಮಾಜಿಕ ಕಟ್ಟುಪಾಡುಗಳ ಕಾರಣ ಮಾಡಲಾರದಿದ್ದ ಆದರೆ ಮನಸ್ಸಿನಲ್ಲಿ ತಾವು ಮಾಡಬೇಕೆಂದು ಬಯಸುವ ರೀತಿಗಳಲ್ಲಿ ವರ್ತಿಸುತ್ತವೆ. ಹೀಗೆ ಜನಪದ ಕಥೆಗಳು ಕೇಳುಗರ ಭಾವ ಪರಿಶೋಧನೆಯ ಕೆಲಸ ನಿರ್ವಹಿಸುತ್ತವೆ.

ಸಾಹಿತ್ಯ

ಬರವಣಿಗೆಯ ಕಲೆ ರೂಪುಗೊಳ್ಳುವುದಕ್ಕೆ ಬಹಳ ಮೊದಲೇ ಆಫ್ರಿಕಾದ ಜನತೆ ಪುರಾಣ, ಐತಿಹ್ಯ, ನೀತಿಕಥೆಗಳು, ಒಗಟು ಮತ್ತು ಉತ್ತಮ ಸಂವಾದಗಳ ಮೂಲಕ ತಮ್ಮ ಆಲೋಚನೆಗಳು, ಭಾವನೆಗಳು ಮತ್ತು ಕಾಳಜಿಗಳಿಗೆ ಕಲಾತ್ಮಕ ಅಭಿವ್ಯಕ್ತಿ ನೀಡಿದ್ದಾರೆ. ಮೌಖಿಕ ಸಾಹಿತ್ಯದ ಸಾಂಪ್ರದಾಯಿಕ ರೂಪಗಳು ಇಂದಿಗೂ ಮುಂದುವರಿಯುತ್ತಿವೆ ಹಾಗೂ ಸಮಕಾಲೀನ ವಸ್ತುಗಳನ್ನು ಮತ್ತು ಪುರಾತನ ವಸ್ತುಗಳನ್ನು ಒಳಗೊಂಡಿರುತ್ತವೆ. ಯೊರೂಬಾದ ಸಮೃದ್ಧ ಮೌಖಿಕ ಸಾಹಿತ್ಯ ಲಿಖಿತ ಸಾಹಿತ್ಯದ ಮೇಲೆ ತನ್ನ ಪ್ರಭಾವವನ್ನು ಬೀರಿದೆ. ಹೌಸಾ ಭಾಷೆಯನ್ನು ಅರಾಬಿಕ್ ಮತ್ತು ರೋಮನ್ ಲಿಪಿಗಳಲ್ಲಿ ಬರೆದಿರುತ್ತಾರೆ. ಗಮನಿಸಬೇಕಾದ ಮುಖ್ಯ ಅಂಶವೆಂದರೆ ಮೌಖಿಕ ಮತ್ತು ಲಿಖಿತ ಸಾಹಿತ್ಯಗಳ ನಡುವಿನ ಕೊಳ್ಕೊಡೆ. ಕಥಾಕಾಲಕ್ಷೇಪಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಇಥಿಯೋಪಿಯಾದ ಭಾಷೆಗಳಲ್ಲಿ ಪ್ರಮುಖವಾದವು ಅಮ್ಹಾರಿಕ್, ಸೋಮಾಲಿ, ಸ್ವಾಹಿಲಿ. ಸೋಮಾಲಿಯಲ್ಲಿ ಬಹಳ ಪುರಾತನವಾದ ಸಮೃದ್ಧವಾದ ಮೌಖಿಕ ಸಾಹಿತ್ಯ ವಿದೆ. ಅದು ಇಂದಿಗೂ ಪ್ರವರ್ಧಿಸುತ್ತಿದೆ ಮತ್ತು ಆಧುನಿಕ ಬರವಣಿಗೆಯ ಮೇಲೆ ಪ್ರಭಾವವ ಬೀರುತ್ತಿದೆ. ಅಮ್ಹಾರಿಕ್ ಅಧಿಕೃತ ಭಾಷೆ. ಸ್ವಾಹಿಲಿಯ ಹಳೆಯ ಕಿಂಗೋಜಿ ಉಪಭಾಷೆಯನ್ನು ಅರಾಬಿಕ್ ಲಿಪಿಯಲ್ಲಿ ಬರೆಯಲಾಗುತ್ತದೆ. ಸ್ವಾಹಿಲಿ ಕಾವ್ಯದಲ್ಲಿ ಸಾರ್ವಜನಿಕ ಮತ್ತು ಧಾರ್ಮಿಕ ವಿಮರ್ಶಾತ್ಮಕವಾದ ರಚನೆು ಒಂದು ಪ್ರಬಲ ಸಂಪ್ರದಾಯವಿದೆ. ಈ ರೀತಿ ಬೋಧನಾಪ್ರಧಾನ ಕಾವ್ಯ ರಚಿಸಿದ ಪ್ರಖ್ಯಾತ ಕವಿ ಎಂದರೆ ಮಾನ ಕುಪೋನ ಬಿಂಟಿ ಮಷ್ದಾ ಎಂಬ ಕಿನ್ಯಾದ ಲಾಮೂ ದ್ವೀಪದ ಕವಿ. ದಕ್ಷಿಣ ಆಫ್ರಿಕಾವು ಶೋನಾ ಬೆಂಬಾ, ಡಾವಾನ್, ಜುಲು, ಪೇಡಿ, ಕ್ಸೋಸ ಮತ್ತು ಸೋಕೋ ಎಂಬ ಆಫ್ರಿಕಾ ಭಾಷೆಗಳಲ್ಲಿ ಅಗಾಧ ಸಾಹಿತ್ಯವನ್ನು ರಚಿಸಿದೆ.

ಸಂಗೀತ ಮತ್ತು ನೃತ್ಯ

ಆಫ್ರಿಕಾದ ಸಂಗೀತ ಮತ್ತು ನೃತ್ಯವನ್ನು ಒಟ್ಟೊಟ್ಟಿಗೆ ಅಧ್ಯಯನ ಮಾಡಲಾಗುತ್ತದೆ. ಏಕೆಂದರೆ ಇವುಗಳಲ್ಲಿ ಒಂದು ಕಲೆಯನ್ನು ಪ್ರದರ್ಶಿಸುವಾಗ ಇನ್ನೊಂದು ಕಲೆಯನ್ನೂ ಜೊತೆ ಜೊತೆಯಲ್ಲೇ ಬಳಸುತ್ತಾರೆ. ಇಂದು ಶಾಸ್ತ್ರೀಯ ಅಥವಾ ಸಾಂಪ್ರದಾಯಿಕ ಎಂದು ಕರೆಯುತ್ತಿರುವ ಸಂಗೀತ ಬಹುಶಃ ಈ ಹಿಂದೆ ಬಳಕೆಯಾಗುತ್ತಿದ್ದ ಆಫ್ರಿಕನ್ ಸಂಗೀತಕ್ಕಿಂತ ಭಿನ್ನ. ಆಫ್ರಿಕನ್ ಸಂಗೀತ ಹಿಂದೆ ಒಂದು ನಿರ್ದಿಷ್ಟ ಜನಾಂಗೀಯ ಸಮುದಾಯಕ್ಕೆ ಕಟ್ಟುನಿಟ್ಟಾಗಿ ಸೇರಿರಲಿಲ್ಲ. ಆಫ್ರಿಕನ್ ಸಂಗೀತದ ಅತಿ ಪ್ರಾಚೀನ ಕುರುಹುಗಳು ಪ್ರಾಗೈತಿಹಾಸಿಕ ಶೋಧನೆಯಿಂದ ದೊರೆತಿವೆ. ಸಹಾರ ಕೆಳಗಿನ ಹವಾಮಾನ ವಲಯಗಳಲ್ಲಿನ ನಿಕ್ಷೇಪಗಳಲ್ಲಿ ಸಸ್ಯಮೂಲದಿಂದ ತಯಾರಿಸಿದ ಸಂಗೀತ ಸಾಧನಗಳು ಉಳಿದಿಲ್ಲವಾದರೂ, ನೈಜೀರಿಯಾದ ಸಂಗೀತದ ಬಗ್ಗೆ ಪ್ರಾಗೈತಿಹಾಸಿಕ ಮೂಲಗಳು ಅಂದರೆ ಕಲ್ಲು ಮತ್ತು ಆವೆಮಣ್ಣಿನಲ್ಲಿ ಸಂಗೀತ ಉಪಕರಣಗಳ ಪ್ರತಿಕೃತಿಗಳು ರಚಿತವಾಗಿರುವುದು ದೊರೆಯುತ್ತವೆ. ಕ್ರಿ.ಶ.೧೦ನೇ ಶತಮಾನದಿಂದ ಮತ್ತು ೧೪ನೆಯ ಶತಮಾನದಿಂದ ಇಗ್ಬಿನ್(ತಮಟೆ) ತಾಳ ವಾದ್ಯಗಳು ಬಳಕೆಯಲ್ಲಿದ್ದಂತಿದೆ. ಈಗ ಯೊರೂಬಾ ಸಂಸ್ಕೃತಿಗೆ ಸೇರಿದ್ದೆಂದು ಹೇಳುವ ಆದರೆ ಸವನ್ನಾದ ಉದ್ದಗಲಕ್ಕೂ ವಿಶಾಲ ಪ್ರದೇಶದಲ್ಲಿ ಚಿರಪರಿಚಿತವಾದ ಡುನ್‌ಡುನ್ ಒತ್ತಡ ತಮಟೆಗಳು ಬಹುಶಃ ೧೫ನೆಯ ಶತಮಾನದ ಸುಮಾರಿಗೆ ಬಳಕೆಗೆ ಬಂದವಾಗಿರಬೇಕು. ಏಕೆಂದರೆ ಬೆನಿನ್ ರಾಜ್ಯಾದಲ್ಲಿ ಆ ಕಾಲಾವಧಿಯಲ್ಲಿ ತಯಾರಾದ ಫಲಕಗಳಲ್ಲಿ ಅವುಗಳ ಉಲ್ಲೇಖವಿದೆ. ಯೊರೂಬಾ ತಮಟೆಗಳನ್ನು ಒರಿಕ್ಕಿ ಕಾವ್ಯವಾಚನದೊಂದಿಗೆ ‘‘ಮಾತನಾಡುವ ತಮಟೆ’’ಗಳೆಂದು ಬಳಸುತ್ತಾರೆ. ಜೋಡು ಕಬ್ಬಿಣದ ಕ್ಲಾಪರ್ ಇಲ್ಲದ ಗಂಟೆಗಳು ಈ ಮಾತಾಡುವ ತಮಟೆಗಳಿಗಿಂತ ಮುಂಚೆ ಬಂದಿರುವಂತಿದೆ. ಮಣಿಗಂಟೆ ಮತ್ತು ನೀಳಗಂಟೆಗಳು ಅವುಗಳ ಕ್ಲಾಪರ್ ಸಮೇತ ೧೫ನೆಯ ಶತಮಾನದ ಹೊತ್ತಿಗೆ ಪರಿಚಿತವಾಗಿದ್ದವು. ಸಂಗೀತಕ್ಕೆ ಸಂಬಂಧಿಸಿದಂತೆ ದೊರೆತ ಇತರ ಪ್ರಾಗೈತಿಹಾಸಿಕ ವಸ್ತುಗಳೆಂದರೆ ಜೈರ್ ನ ಶಬಾ ವಲಯದಲ್ಲಿ ಮತ್ತು ಜಿಂಬಾಬ್ಬೆಯ ಅಮೇಲ ನಿವೇಶನಗಳಲ್ಲಿ ದೊರೆತ ಕಬ್ಬಿಣದ ಗಂಟೆ ಗಳು, ಬೆನಿನ್‌ನ ಕಂಚಿನ ಫಲಕಗಳು ಸಂಗೀತ ಕುರಿತ ಇತಿಹಾಸಕ್ಕೆ ಇನ್ನಷ್ಟು ಮತ್ತು ಅಪರಿಮಿತವಾದ ಆಕರಗಳನ್ನು ಒದಗಿಸುತ್ತದೆ. ಆಫ್ರಿಕಾದ ಜನರ ಬೃಹತ್ ಹಾಗೂ ಸಣ್ಣ ಪುಟ್ಟ ವಲಸೆಗಳು, ಸಂಗೀತ ಶೈಲಿ ಹಾಗೂ ಉಪಕರಣಗಳು ಹೊಸ ಪ್ರದೇಶಗಳನ್ನು ತಲುಪುಲು ಕಾರಣವಾದವು. ಪಶ್ಚಿಮ ಆಫ್ರಿಕಾದ ಕ್ವಾ ಭಾಷೆ ಮಾತನಾಡುವ ಜನರಿಂದ ಬಹುಶಃ ಆರಂಭಗೊಂಡ ಒಂಟಿ ಹಾಗೂ ಜೋಡಿ ಕಬ್ಬಿಣದ ಗಂಟೆಗಳು ಕಬ್ಬಿಣ ಯುಗದ ಒಂದು ಮಾತನಾಡುವ ಜನರಿರುವ ಪಶ್ಚಿಮ ಮಧ್ಯ ಆಫ್ರಿಕಾಕ್ಕೆ ಹರಡಿತು ಮತ್ತು ಅಲ್ಲಿಂದ ಜಿಂಬಾಬ್ವೆ ಹಾಗು ಜಾಂಬೆಸಿ ನದಿ ಕಣಿವೆಗೆ ತಲುಪಿತು.

ಆಫ್ರಿಕಾದ ಸಂಗೀತ ವಾದ್ಯ ಉಪಕರಣಗಳಲ್ಲಿ ತಮಟೆಗೆ ಬಹಳ ಪ್ರಾಮುಖ್ಯ ದೊರಕಿದೆ. ಹೀಗಿದ್ದರೂ ಈ ಖಂಡದ ಸಂಗೀತದಲ್ಲಿ ಪ್ರಮುಖ ಪಾತ್ರವಹಿಸುವಂತಹ ಇನ್ನೂ ಅನೇಕ ವಾದ್ಯಗಳಿವೆ. ಉಸಿರು ವಾದ್ಯವಾದ ಹನ್ನೋ ಸರಳವಾದ ಮುಖ ಬಿಲ್ಲಿನಿಂದ ಹಿಡಿದು ಸಂಕೀರ್ಣ ವಾದ್ಯಗಳಾದ ಜಿತರ್, ಹಾರ್ಪ, ಲೂದ್ ಮತ್ತು ಲೈರ್ ಗಳಂತಹ ತಂತಿ ವಾದ್ಯಗಳಿವೆ. ಖಂಡದಾದ್ಯಂತ ಹರಡಿದ ವಿವಿಧ ಬಗೆಯ ಗಿಲಕಿ ವಾದ್ಯಗಳಿವೆ. ಅವುಗಳೆಂದರೆ ಲಯ ಸಾಧನ ಗಿಲಕಿ ವಾದ್ಯಗಳು ಅಂದರೆ, ಗಿಲಕಿ, ಸಿಸ್ಟ್ರಂ, ಪೂಳ್ಳುಗಿಲಂ, ಮಾರಿಂಬ ಎಂದು ಕರೆಯುವ ವಿವಿಧ ಸೈಲೋಪೋನ್‌ಗಳು ಸಹಾರಾ ಕೆಳಗಿನ ಆಫ್ರಿಕಾದ ಜನತೆಗೆ ಬಹಳ ಪರಿಚಿತವಿದ್ದವು. ಲಾಮಲ್ಲೊ ಪೋನ್ ಅಥವಾ ತಂದ್ ಪಿಯಾನೋ ಎಂಬ ಇಡಿಯೋ ಪೋನ್ ಆಫ್ರಿಕಾಕ್ಕೆ ವಿಶಿಷ್ಟವಾದದ್ದು. ತಾಳ ಹಾಗೂ ಸಂಗೀತ ವಾದ್ಯಗಳ ನಡುವೆ ಬರುವ ಆಫ್ರಿಕಾದ ಸ್ಪ್ರಕ್ ಇಡೋ ಪೋನ್ ಅಥವಾ ಸ್ಲಿಡ್ ಡ್ರಮ್ ಅನ್ನು ಡೊಳ್ಳು ಮಾಡಿದ ದಿಮ್ಮಿಗಳಿಂದ ತಯಾರಿಸಲಾಗುತ್ತದೆ. ಕಾರ್ಡೊಪೋನ್ ಎಂಬುದು ಎರಡು ನಿಶ್ಚಿತ ಬಿಂದುಗಳ ನಡುವೆ ಎಳೆದು ಕಟ್ಟಿದ ತಂತಿಗಳಿಂದ ಧ್ವನಿ ಹೊರಡಿಸುವಂತಹ ವಾದ್ಯ. ಸಂಗೀತ ಬಿಲ್ಲು ಲೂಟ್, ಪಿಟೀಲು, ಹಾರ್ಪ್‌ಲ್ಯಾಟ್‌ಗಳು, ಲೈರ್‌ಗಳು, ಹಾರ್ಫ್‌ಗಳು ಈ ತರಹದ ವಾದ್ಯಗಳು. ಏರೋಪೋನ್ ಅಥವಾ ಆಫ್ರಿಕಾದಲ್ಲಿ ಬಳಸಲಾಗುವ ಉಸಿರು ವಾದ್ಯಗಳನ್ನು ಮೂರು ಬಗೆಯಾಗಿ ವಿಂಗಡಿಸಲಾಗುತ್ತದೆ. ಕೊಳಲು, ಬಿದುರು ಪೀಪಿ ಮತ್ತು ತುತ್ತೂರಿ.

ಆಫ್ರಿಕನ್ ಸಮೂಹದ ನೃತ್ಯಗಳು ವಿವಿಧ ಬಗೆಯ ಸಾಮಾಜಿಕ ಉದ್ದೇಶಗಳಿಗೆ ಸಲ್ಲುತ್ತವೆ. ಒಂದು ಸ್ವದೇಶಿ ನೃತ್ಯ ಪರಂಪರೆಯ ಒಳಗೆ ಪ್ರತಿ ನೃತ್ಯ ಪ್ರದರ್ಶನವೂ ಒಂದು ಮುಖ್ಯ ಹಾಗೂ ಅನೇಕ ಉಪ ಉದ್ದೇಶಗಳನ್ನು ಹೊಂದಿರುತ್ತದೆ. ಇದು ಜನರೊಸಾಮುದಾಯಿಕ ಮೌಲ್ಯಗಳು ಮತ್ತು ಸಾಮಾಜಿಕ ಸಂಬಂಧಗಳನ್ನು ಅಭಿವ್ಯಕ್ತಿಸುತ್ತದೆ ಅಥವಾ ಬಿಂಬಿಸುತ್ತದೆ. ವಿವಿಧ ಬಗೆಯ ನೃತ್ಯ ಶೈಲಿಗಳ ಭಿನ್ನತೆಯನ್ನು ಗುರುತಿಸಬೇಕಾದರೆ ಪ್ರತಿಯೊಂದು ನೃತ್ಯವನ್ನು ಏತಕ್ಕಾಗಿ ಮಾಡಲಾಗುತ್ತದೆ ಎಂಬುದನ್ನು ಗುರುತಿಸುವುದು ಅಗತ್ಯ. ಉತ್ಸವ ಆಚರಣೆ ಹಾಗೂ ಸಾಮಾಜಿಕ ಮನೋರಂಜನೆಗಳ ನಡುವೆ ಇಲ್ಲಿ ಭಿನ್ನತೆ ಸ್ಪಷ್ಟವಾಗಿ ಕಾಣಸಿಗದು. ಒಂದು ಉದ್ದೇಶ ಇನ್ನೊಂದರೊಳಗೆ ಮಿಳಿತವಾಗಿರುತ್ತದೆ. ನೃತ್ಯವನ್ನು ಒಂದು ಸಾಮಾಜಿಕ ಉತ್ಸವವಾಗಿ ಆನಂದಿಸುತ್ತಾರೆ. ಹಾಗೆಯೇ ಅದು ಸಾಮುದಾಯಿಕ ಜೀವನದ ಒಂದು ಅಭಿವ್ಯಕ್ತಿಯಾಗಿ ಮನೋರಂಜನೆ ಹಾಗೂ ಸಂತೋಷವನ್ನು ನೀಡುವ, ಅದನ್ನು ಅದಕ್ಕಾಗಿಯೇ ಆನಂದಿಸಬಲ್ಲ ಒಂದು ಚಟುವಟಿಕೆಯಾಗಿರುತ್ತದೆ. ಇನ್ನೂ ಅನೇಕ ಆಚಾರ ವಂತ ಸಮಾಜಗಳಲ್ಲಿ ಚಿಕಿತ್ಸಾ ವಿಧಾನವಾಗಿ ಇದನ್ನು ಬಳಸಲಾಗುತ್ತದೆ. ಉದಾಹರಣೆಗೆ ಹೌಸಾ ಹೆಂಗಸಸರು ನೃತ್ಯದ ಮೂಲಕ ರೋಗ ವಾಸಿ ಮಾಡಿಸುತ್ತಾರೆ. ಬೋರಿ ಪಂಥದಲ್ಲಿ ದೆವ್ವ ಮೈಮೇಲೆ ಬರುವುದು ನೃತ್ಯದಿಂದ. ಅನೇಕ ಪ್ರದೇಶಗಳಲ್ಲಿ ದ್ಮವೇಷ ನೃತ್ಯ ಧಾರ್ಮಿಕ ಸಮಾಜಗಳಲ್ಲಿ ಸಾಮಾನ್ಯ ಆಚರಣೆಯಾಗಿರುತ್ತದೆ. ಪ್ರಾಣಿಗಳ ಮುಖವಾಡ, ಬಟ್ಟೆ ಹಾಗೂ ರಫಿಯಾದಿಂದ ಸುತ್ತಲಾದ ಬಿದುರಿನ ರಚನೆಗಳನ್ನು ಬಳಸಲಾಗುವುದು. ಎಲ್ಲ ಆಫ್ರಿಕನ್ ಸಂಸ್ಕೃತಿಗಳಲ್ಲಿ ನೃತ್ಯ, ಸಂಗೀತ ಹಾಗೂ ಹಾಡುಗಳು ಒಂದು ಸಮುದಾಯ ದಲ್ಲಿ ವ್ಯಕ್ತಿ ಹಾಗೂ ಗುಂಪಿನ ಪಾತ್ರವನ್ನು ನಿರ್ಧರಿಸುತ್ತದೆ. ಪದ್ಧತಿಯ ನೃತ್ಯಗಳಲ್ಲಿ ರಾಜನಾದವನು ತನ್ನ ನೃತ್ಯ ಕ್ಷಮತೆಯನ್ನು ತೋರಿಸಬೇಕಾಗುತ್ತದೆ. ಅಗತ್ಯ ಗುಣಮಟ್ಟ ವನ್ನು ಆತ ತೋರದಿದ್ದರೆ ಅವನ ಪ್ರತಿಷ್ಠೆಗೆ ಕುಂದುಂಟಾಗುತ್ತದೆ. ಆತ ಆಸ್ಥಾನದಲ್ಲಿ ರಾಜಗಾಂಭೀರ್ಯದಿಂದ ಕುಳಿತಿರುವಾಗ ಆತನ ಸೇನಾನಾಯಕರು ಪ್ರತಿಯೊಬ್ಬರೂ ಅವರವರಿಗೆ ಗುಪ್ತವಾದ ನರ್ತನ ಲಯದಿಂದ ಅವನನ್ನು ಸ್ವಾಗತಿಸುತ್ತಾರೆ. ಆಮೇಲೆ ಬೇಟೆಗಾರರು ಸಂಕೀರ್ಣ ನರ್ತನ ಲಯದಲ್ಲಿ ನೃತ್ಯ ಮಾಡಲಾರಂಭಿಸುತ್ತಾರೆ. ಅರಮನೆ ಮುಖ್ಯಸ್ಥರು, ಹೆಂಗಸರು, ಮಾರುಕಟ್ಟೆ ಮುಖ್ಯಸ್ಥರು, ಹುಡುಗಿಯರು, ಯುವಕರು, ಮಕ್ಕಳು ಎಲ್ಲರೂ ರಾಜನನ್ನು ಸ್ತುತಿಸುವುದಕ್ಕೆ ತಮ್ಮ ತಮ್ಮದೇ ಆದ ನೃತ್ಯ ವಿಧಾನ ಹೊಂದಿರುತ್ತಾರೆ. ಕೆಲವು ಪ್ರದೇಶಗಳಲ್ಲಿ ಅಂತ್ಯಕ್ರಿಯೆಗಳಲ್ಲಿ ಮಣ್ಣು ಮಾಡಿ ಬಂದ ಮೇಲೆ ನರ್ತಿಸಲು ಮತ್ತು ವಾರ್ಷಿಕೋತ್ಸವಗಳಲ್ಲಿ ನರ್ತಿಸಲು ನೃತ್ಯಗಳನ್ನು ವಿನ್ಯಾಸಗೊಳಿಸಲಾಗಿದೆ. ವೃತ್ತೀಯ ಕೂಟಗಳು ಮತ್ತು ವೃತ್ತಿಪರರ ಸಂಘಗಳು ಅಂದರೆ ಕಮ್ಮಾರರು, ಬೇಟೆಗಾರರು, ಮರದ ಕೆತ್ತನೆ ಕೆಲಸಗಾರರು ಮುಂತಾದವರು ತಮ್ಮದೇ ಆದ ಅಭಿವ್ಯಕ್ತಿ ನೃತ್ಯಗಳನ್ನು ಹೊಂದಿರುತ್ತಾರೆ. ಘಾನಾದ ಆಕನ್ ಅವರು ಅಬೋಫಾರ್ ನೃತ್ಯವನ್ನು ಆಡುತ್ತಾರೆ. ಇದು ಕ್ರೂರ ಪ್ರಾಣಿಯನ್ನು ಕೊಂದ ತರುವಾಯ ಆಡಲಾಗುವ ಮೂಕಾಭಿನಯ ನೃತ್ಯ. ನೃತ್ಯ ಆಫ್ರಿಕಾದಲ್ಲಿ ಅತ್ಯಂತ ಜನಪ್ರಿಯವಾದ ಮನೋರಂಜನ ಪ್ರಕಾರ. ಹಳ್ಳಿಗಳಲ್ಲಿ ಸಂಜೆ ಹೊತ್ತಿನಲ್ಲಿ ಅನೌಪಚಾರಿಕ ನೃತ್ಯಕ್ಕೆ ಅವಕಾಶವಿರಬಹುದು, ಆದರೆ ಅಲ್ಲಿ ಸ್ತ್ರೀ ಪುರುಷರ ನಡುವೆಯೂ ಸಂಬಂಧವನ್ನು ಬಹಳ ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತದೆ. ಕೆಲಸ ಮಾಡುವ, ಸಾಮಾಜಿಕ ಹಾಗೂ ಮನೋರಂಜನಾ ಚಲನೆಗಳಲ್ಲಿ ಪರಿಸರ, ಚಾರಿತ್ರಿಕ ಹಾಗೂ ಸಾಮಾಜಿಕ ಸನ್ನಿವೇಶಗಳು ಹೇಗೆ ಅಭಿವ್ಯಕ್ತವಾಗುತ್ತವೆ ಎಂಬುದನ್ನು ಅವಲಂಬಿಸಿ ಒಂದು ಸಂಸ್ಕೃತಿಯಿಂದ ಇನ್ನೊಂದು ಸಂಸ್ಕೃತಿಗೆ ನೃತ್ಯಶೈಲಿ ಬದಲಾಗುತ್ತದೆ. ನೈಜೀರಿಯಾದ ಕಂಬಾರಿಗಳು ತಮ್ಮ ತಗ್ಗಾದ ಬಾಗಿಲುಗಳ ಮೂಲಕ ಮನೆಗಳನ್ನು ಪ್ರವೇಶಿಸಲು ಸದಾ ಮುಂದೆ ಬಗ್ಗಿ ನಡೆಯುತ್ತಾರೆ. ಅವರ ನೃತ್ಯ ಭಂಗಿಗಳಲ್ಲೂ ಇದೇ ಬಿಂಬಿತವಾಗಿರುತ್ತದೆ. ಕೆಲವೆಡೆ ನೃತ್ಯವನ್ನು ಪೂರ್ಣ ವೃತ್ತಾಕಾರವಾಗಿ ಮತ್ತು ವೃತ್ತದ ಕೇಂದ್ರದೆಡೆ ಎಲ್ಲರೂ ಮುಖ ಮಾಡಿ ವೃತ್ತಾಕಾರವಾಗಿ ಚಲಿಸುತ್ತಾ ನರ್ತಿಸುತ್ತಾರೆ. ಶಕ್ತಿಶಾಲಿ ಯೋಧ ಸಂಪ್ರದಾಯವಿರುವ ಸಂಸ್ಕೃತಿಗಳಲ್ಲಿ ನೇರವಾ ಪಂಕ್ತಿಗಳಲ್ಲಿ ನರ್ತಿಸುವುದು ಬಹಳ ಸಾಮಾನ್ಯ.

ವಾಸ್ತುಶಿಲ್ಪ

ಆಫ್ರಿಕಾದ ವಾಸ್ತುಶಿಲ್ಪ ವೈವಿಧ್ಯ, ಪ್ರಾಕೃತಿಕ ಸಂಪನ್ಮೂಲಗಳು, ಹವಾಮಾನ, ಸಸ್ಯಸಮೃದ್ದಿ ಮುಂತಾದ ಪರಿಸರದ ಅಂಶಗಳ ಪರಸ್ಪರ ಸಂಸರ್ಗವನ್ನು ಬಿಂಬಿಸುತ್ತದೆ. ಕಟ್ಟಡ ನಿರ್ಮಾಣದಲ್ಲಿ ಬಳಸಿದ ವಸ್ತುಗಳಲ್ಲಿ ಕಲ್ಲು ಬಹುಕಾಲ ಬಾಳಿಕೆ ಬರುವಂತಹದ್ದಾದ್ದ ರಿಂದ ಪ್ರಾಚೀನ ಕಟ್ಟಡಗಳ ಕಲ್ಲಿನ ಭಾಗವು ಇಂದೂ ಉಳಿದಿದೆ. ಆದರೆ ಇತರ ಸಾಮಗ್ರಿ ಗಳು, ಮಳೆ, ಕೊಳೆತ ಅಥವಾ ಗೆದ್ದಲಿಗೆ ಗುರಿಯಾಗಿ ಹಾಳಾಗಿ ಹೋಗಿವೆ. ಆರಂಭದ ಸೋತೋ ಮತ್ತು ಸ್ವಾನಾ ವಸತಿಗಳ ಕಲ್ಲಿನ ಗೋಡೆಯ  ಕೊಪ್ಪಲುಗಳು ಮತ್ತು ಪಿಗ್ಮಿಗಳು ದನಕರುಗಳಿಗಾಗಿ ಕಟ್ಟಲಾದ ಕಲ್ಲು ಗೋಡೆಯ ಗುಂಡಿ ವೃತ್ತಗಳು ಹುದುಗಿದ ಕೊಪ್ಪಲುಗಳು ಈಗ ಅಧ್ಯಯನದ ವಸ್ತುಗಳಾಗಿವೆ. ಸೋತೋಗಳು ಇಪ್ಪತ್ತನೇ ಶತಮಾನದಲ್ಲಿ ಕಲ್ಲಿನ ಕಾರ್ಬೆಲ್‌ಗಳು ಇರುವ ನಿವಾಸಿಗಳನ್ನು ಮತ್ತು ವೃತ್ತಾಕಾರದ ಹುಲ್ಲು ಹಾಗು ಛಾವಣಿಯ ಗುಡಿಸಲುಗಳನ್ನು ಕಟ್ಟುತ್ತಾರೆ. ಅಲೆಮಾರಿಗಳು ಮತ್ತು ದನಗಾಹಿಗಳು ಲಘು ಚಪ್ಪರದ ಗೂಡುಗಳನ್ನು ಕಡ್ಡಿಗಳು ಹಾಗೂ ರಂಬೆಗಳನ್ನು ಬಳಸಿ ಅದರ ಮೇಲೆ ಹುಲ್ಲು ಹೊದಿಸಿ ನಿರ್ಮಿಸುತ್ತಾರೆ. ಈ ಗುಡಿಸಲುಗಳು ಬಿರುಗಾಳಿಯನ್ನು ತಡೆದುಕೊಳ್ಳುವಷ್ಟು ಭದ್ರವಾಗಿರುತ್ತವೆ. ದಕ್ಷಿಣ ಆಫ್ರಿಕಾದಲ್ಲಿ ಜುಲು, ಸ್ವಾಜಿ, ನಟಾಲ್ ಮತ್ತು ಗಣಿಗಳು ಸಮಕೇಂದ್ರದ ಕಮಾನುಗಳನ್ನು ಬಳಿಸಿ ಗುಮ್ಮಾಟ ಹಂದರಗಳನ್ನು ನಿರ್ಮಿಸುತ್ತಾರೆ. ಕ್ಯೂನಾ ಅವರ ತರುವಾಯದ ಗೃಹಗಳು ಒಂದು ನಿಯತ ಬಗೆಯ ರೂಪವನ್ನು ಹೊಂದಿರಲು ಪ್ರಾರಂಭಿಸಿದವು. ಅಂದರೆ ಸ್ತಂಭಾಕಾರದ ಒಂದೇ ಕೊಠಡಿಯುಳ್ಳ ಮೇಲೆ ಶಂಕುವಿನಾಕೃತಿಯ ಛಾವಣಿಯುಳ್ಳ ಮನೆಗಳು. ಈ ತರಹದ ಮನೆಗಳು ಆಫ್ರಿಕಾದ ಉದ್ದಕ್ಕೂ ಕಾಣಬರುತ್ತವೆ. ಇಂಥ ಮನೆಗಳನ್ನು ಸವನ್ನಾದ ಬಹುಪಾಲು ಜನರು ಮತ್ತು ಅರೆ ಮರುಭೂಮಿಯ ಸೂಡಾನ್ ಮತ್ತು ಪಶ್ಚಿಮ ಆಫ್ರಿಕಾದ ಜನರು ನಿರ್ಮಿಸುತ್ತಾರೆ. ಮರ ಅಷ್ಟಾಗಿ ಸಿಗುವುದಿಲ್ಲವಾದ ಕಾರಣ ಇದನ್ನು ಮಣ್ಣಿನಲ್ಲಿ ಸುರುಳಿ ಕುಂಭಕಲೆಯ ವಿಧಾನದಿಂದ ನಿರ್ಮಿಸುತ್ತಾರೆ. ಮಣ್ಣಿನ ಗೋಡೆಗಳು ಮತ್ತು ನೆಲವನ್ನು ನಯವಾಗಿ ಗಿಲಾವು ಮಾಡಿ ಕಲ್ಲಿನಷ್ಟು ಗಟ್ಟಿ ಮಾಡುತ್ತಾರೆ. ಇವುಗಳ ಮೇಲ್ಮೈಯನ್ನು ಕುಸುರಿ ಕಲೆಯಿಂದ ಅಂದಗೊಳಿಸಿ ಮಣ್ಣಿನಿಂದ ಬಣ್ಣ ನೀಡಲಾಗುತ್ತದೆ. ಕೆಲವು ಬಾರಿ ಪುರಾತನ ಚಿತ್ರಕೃತಿಗಳಿಂದ ಕೆತ್ತನೆ ಮಾಡಿರುವುದು ಕಾಣುತ್ತದೆ. ವಾಸದ ಗುಡಿಸಲುಗಳು, ಕಣಜಗಳು, ಇತರ ಉಗ್ರಾಣ ಮತ್ತು ಆಡು, ಕೋಳಿಗಳ ಗೂಡುಗಳನ್ನು ಒಂದೇ ಅಂಗಳದಲ್ಲಿ ನಿರ್ಮಿಸುತ್ತಿದ್ದರು. ಸಹಾರ ಕೆಳಗಿನ ಆಫ್ರಿಕಾದ ಬಹಳ ಜನಸಾಂದ್ರತೆಯುಳ್ಳ ಭಾಗಗಳಲ್ಲಿ ನೈಜೀರಿಯಾ ೧೬ನೆಯ ಶತಮಾನ ದಿಂದಲೂ ಐರೋಪ್ಯ ವ್ಯಾಪಾರಿಗಳ ಸಂಪರ್ಕ ಹೊಂದಿತ್ತು. ಅಕಾನ್ ಜನರು, ಘಾನಾದ ಅಶ್ದಾಡಿಗಳ ಆಯತಾಕಾರದ ಮನೆಗಳಲ್ಲಿ ಗಣೆ ಕಂಬಗಳನ್ನು ಹಂದವಾಗಿ ಬಳಸಿ ಅದಕ್ಕೆ ಮಣ್ಣನ್ನು ಮಧ್ಯೆ ಮಧ್ಯೆ ತುಂಬಲಾಗುತ್ತಿತ್ತು. ಅನೇಕ ಬಾರಿ ಅವುಗಳ ಮೇಲೆ ಒಳಗೆ ಹುಲ್ಲು, ಮೇಲೆ ಮಣ್ಣಿನ ಹೊದಿಕೆಗಳುಳ್ಳ ಆಕೃತಿಗಳಿಂದ ಅಲಂಕಾರ ಮಾಡಲಾಗುತ್ತಿತ್ತು.

ಚಿನ್ನವನ್ನು ತೂಗಲು ಬಳಸುತ್ತಿದ್ದ ಬಟ್ಟುಗಳ ಮೇಲೆ ಕಂಡುಬರುತ್ತಿದ್ದ ಸಾಂಕೇತಿಕ ಸುರುಳಿಯಾಕೃತಿ ಮೋಟಿಫ್‌ಗಳನ್ನು ಮಾಡಿಸಲಾಗುತ್ತಿತ್ತು. ಪಶ್ಚಿಮ ಆಫ್ರಿಕಾದ ತೀರಕ್ಕೆ ಹತ್ತಿರದಲ್ಲಿ ಕೆಲವು ಜನರು ಊರುಕಂಬಗಳ ಮೇಲೆ ಮನೆ ಕಟ್ಟುತ್ತಾರೆ. ಉದಾಹರಣೆಗೆ ಬೆನಿನ್‌ನ ಗಾನ್ವಿ ಹಳ್ಳಿ, ಸ್ವಾಹಿಲಿ ಮಾತನಾಡುವ ಕೀನ್ಯಾದ ಜನರು ಮಾಂಗ್ರೋಲ್ ಕಂಬ ಗಳನ್ನು ಬಳಸಿ ಕಟ್ಟಡ ಕಟ್ಟುತ್ತಿದ್ದರು. ಕಮರೂನ್‌ನಲ್ಲಿ ದುಆಲಾ ಮನೆಗಳು ಮಣ್ಣಿನ ಗಿಲಾವು ಉಳ್ಳವಾಗಿದ್ದರೂ ಅವನ್ನು ಬಿದುರಿನಿಂದ ಕಟ್ಟಲಾಗುತ್ತದೆ. ಬಮಿಲಿಕೆ ಮತ್ತು ನೆರೆಯ ಬಪೂಕ್‌ಗಳು ರಾಫಿಯ ತಾಳೆಯನ್ನೂ ಬಳಸುತ್ತಾರೆ. ಅಂಗೋಲಾದ ಕಾಂಗೋ ಜನಾಂಗ ಮತ್ತು ಜೈರ್‌ನ ಬುಷಾಂಗೋ ಜನರಿಗೂ ಇದು ಬಹಳ ಪ್ರಮುಖವಾದ ಕಟ್ಟಡ ಸಾಮಗ್ರಿ. ಅವರ ಮನೆಗಳು ಸ್ತಂಭಾಕಾರವಾಗಿದ್ದು ಚಾವಣಿ ಶಂಕುವಿನ ಆಕಾರದ್ದು, ಮಣ್ಣಿನ ಗಿಲಾವು ಹಾಗೂ ಜ್ಯಾಮಿತಿ ಆಕೃತಿಗಳಿಂದ ಅಲಂಕೃತವಾಗಿರುತ್ತವೆ. ಅಶಾಂಡಿ ಸಾಮ್ರಾಜ್ಯದ ರಾಜಧಾನಿ ನಗರವಾದ ಕುಮಾಸಿಯ ಮಣ್ಣು ಮತ್ತು ಕಲ್ಲಿನ ಅರಮನೆ ಐದು ಎಕರೆಗಳ ವಿಸ್ತಾರದ್ದಾಗಿತ್ತು. ಅದರಲ್ಲಿ ಅನೇಕ ಅಂಗಳಗಳು ಮತ್ತು ವರಾಂಡಗಳು, ೬೦ಕ್ಕೂ ಹೆಚ್ಚು ಕೊಠಡಿಗಳು ಬಲು ಇಳಿಜಾರಾದ ಚಾವಣಿಗಳನ್ನು ಹೊಂದಿತ್ತು. ಇದಕ್ಕೂ ವಿಶಾಲವಾದ ಅರಮನೆ ಎಂದರೆ ನೈಜೀರಿಯಾದ ಬೆನಿನ್ ನಗರದ ಓಬಾನ ಬೃಹತ್ ಅರಮನೆ. ಓಯೋ ಸಾಮ್ರಾಜ್ಯದ ರಾಜಧಾನಿಯಾದ ಓಯೋ ೬೪೦ ಎಕರೆಗಳಷ್ಟು ವಿಸ್ತಾರವಾಗಿತ್ತು ಎಂದು ಹೇಳಲಾಗಿದೆ. ಅರಮನೆ ಕಟ್ಟಡಗಳನ್ನು ಬಲು ಗಣನೀಯ ಗಾತ್ರದಲ್ಲಿ ಕಟ್ಟಲಾಗುತ್ತಿತ್ತು. ತೆರೆದ ವರಾಂಡಗಳಿಗೆ ಸ್ತ್ರೀ ಆಕೃತಿ ಕೆತ್ತಿದ ಕಂಬಗಳಿಂದ ಆಧಾರ ನೀಡಲಾಗಿತ್ತು. ದಕ್ಷಿಣ ಮಧ್ಯ ಆಫ್ರಿಕಾದ ರೋಜ್ವಿ ಮಹಾರಾಜರು ೧೭ನೆಯ ಮತ್ತು ೧೮ನೆಯ ಶತಮಾನದಲ್ಲಿ ಕಟ್ಟಿದ ಜಿಂಬಾಬ್ವೆಯ (ಕಲ್ಲು ಕಟ್ಟಡಗಳು) ರಾಜವಾಡೆಗಳಾಗಿದ್ದವು. ಒಂದು ಉದಾಹರಣೆ ಆಧುನಿಕ ಜಿಂಬಾಬ್ವೆಯ ಖಾಮಿಯಲ್ಲಿ ನಾಯಕ ಚಂಗಮೈರ್‌ನ ಕೋಟೆ, ರೆಜಿನಾ, ನಲಟಾಲಿಯಾ ಮತ್ತ ಡೋಲಾಡೋಲೋಗಳಲ್ಲಿನ ಅವಶೇಷಗಳನ್ನು ಗಮನಿಸಿದಾಗ ಯಾವುದೇ ಗಾರೆ ಬಳಸದೆ ಉತ್ತಮವಾದ ಕಲ್ಲು ಕಟ್ಟಡ ಹಾಗೂ ಅದರ ಮೇಲೆ ಬಾಣಾಕೃತಿಯ ವಿನ್ಯಾಸಗಳ ಮತ್ತು ಬಣ್ಣದ ಪಟ್ಟೆಗಳನ್ನು ಬಳಿದಿರುತ್ತಿದ್ದರು. ಪ್ರಕೃತಿ ಆರಾಧಕ ಧರ್ಮಗಳಲ್ಲಿ ಮರಗಳಲ್ಲಿ ಮೂರ್ತಿಗಳಲ್ಲಿ ಅಥವಾ ಬಲು ಸರಳವಾದ ಗುಡಿಗಳಲ್ಲಿ ದೇವರು ಇರುತ್ತಾನೆಂದು ನಂಬಿಕೆಯಾದ ಕಾರಣ ಸ್ಮಾರಕರೂಪಿಯಾದ ದೇಗುಲ ಶಿಲ್ಪ ಆಫ್ರಿಕಾದಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಕುಲಗುಡಿಗಳು ಮತ್ತು ದೇವರ ಕೊಠಡಿಗಳು, ಅವುಗಳಲ್ಲಿ ದೈವಗಳು ಮತ್ತು ಪಿತೃಗಳಿಗೆ ಸಲ್ಲಿಸಿದ ಮುಡಿಪು ಕಾಣಿಕೆಗಳು ಬಲು ಸಾಮಾನ್ಯ.

೧೧ನೆಯ ಶತಮಾನದಲ್ಲಿ ಘಾನಾ ಸಾಮ್ರಾಜ್ಯದ ರಾಜಧಾನಿಯಾದ ಕುಂಬಿಯಲ್ಲಿ ೧೨ ಮಸೀದಿಗಳಿದ್ದವೆಂದು ವರ್ಣಿಸಲಾಗಿದೆ. ತರುವಾಯ ಮಾಲಿ ಮತ್ತು ಸೊಂಗಾರ್ಯ ರಾಜ್ಯಗಳು ಪುರಾತನ ಘಾನಾವನ್ನು ಮೀರಿ ಬೆಳೆದವು. ಪಶ್ಚಿಮ ಆಫ್ರಿಕಾದ ನಗರಗಳ ಮಸೀದಿಗಳಲ್ಲಿ ಇಸ್ಲಾಂ ಧರ್ಮೀಯ ರಚನೆಗಳು ಹಾಗೂ ಪೂರ್ವಜರ ಕಂಬಗಳು ಮತ್ತು ಗುಡಿಗಳಲ್ಲಿದ್ದ ಶಂಕು ಆಕೃತಿಗಳ ಸಂಗಮವನ್ನು ಕಾಣಬಹುದು. ಆಫ್ರಿಕಾದ ಪೂರ್ವ ತೀರದಲ್ಲಿ ಇಸ್ಲಾಂ ಪ್ರಭಾವವು ಡೊವ್ ನೌಕೆ ವ್ಯಾಪಾರದೊಂದಿಗೆ ಪ್ರಾರಂಭವಾಯಿತು. ಈ ನೌಕೆಗಳು ವಾಣಿಜ್ಯ ಮಾರುತಗಳ ಮೇಲೆ ಅವಲಂಬಿಸಿದ್ದು ಪೂರ್ವ ಆಫ್ರಿಕಾವನ್ನು ಅರೇಬಿಯಾ ಮತ್ತು ಪರ್ಷಿಯಾದ ಕೊಲ್ಲಿಗಳು ಹಾಗೂ ಭಾರತದೊಂದಿಗೆ ಸಂಪರ್ಕ ಕಲ್ಪಿಸಿದವು. ೧೯ನೇ ಶತಮಾನದವರೆಗೆ ಆಫ್ರಿಕನ್ ವಾಸ್ತುಶಿಲ್ಪದ ಮೇಲೆ ಕ್ರೈಸ್ತ ಪ್ರಭಾವ ತೀರ ಕಡಿಮೆಯಾಗಿತ್ತು. ಇಥಿಯೋಪಿಯಾದ ಲಾಲಿಬೆಲ್ಲಾವ ಬಂಡೆ ಚರ್ಚುಗಳು ಇದಕ್ಕೊಂದು ಅಪವಾದ. ಲಾಲಿಬೆಲ್ಲಾ ಸಂತ ರಾಜನಾದ ಜೇಗ್ ರಾಜನ ಆಳ್ವಿಕೆಯ ಕಾಲವಾದ ೧೩ನೆಯ ಶತಮಾನದಲ್ಲಿ ಕೆಂಪು ಟುಫಾಕಲ್ಲಿನಲ್ಲಿ ೧೧ ಚರ್ಚುಗಳನ್ನು ಕೊರೆದು ನಿರ್ಮಿಸಲಾಗಿತ್ತು. ಇಥಿಯೋಪಿಯಾದ ಟಿಗ್ರೆ ಪ್ರದೇಶದುದ್ದಕ್ಕೂ ಅನೇಕ ಬಂಡೆಯಲ್ಲಿ ಕೊರೆದ ಗುಹಾ ಚರ್ಚುಗಳಿವೆ.

ವರ್ಣಚಿತ್ರಕಲೆ

ಸಹಾರಾ ಕೆಳಗಿನ ಪ್ರದೇಶದಲ್ಲಿ ಒಂದಲ್ಲ ಒಂದು ರೀತಿಯ ವರ್ಣಚಿತ್ರಕಲೆ ಕಂಡುಬರುತ್ತದೆ. ವರ್ಣಚಿತ್ರವಷ್ಟೇ ಅಲ್ಲದೆ ಬಂಡೆಗಳ ಮೇಲೆ ಕೊರೆದ ಚಿತ್ರಗಳು ಅನೇಕ ಬಗೆಯ ಶರೀರ ವರ್ಣಚಿತ್ರಕಲೆಗಳಿವೆ. ಹಾಗೆಯೇ ಮನೆಗಳನ್ನು ಹಾಗೂ ಕಟ್ಟಡಗಳನ್ನು ವರ್ಣಚಿತ್ರ ಬರೆದು ಅಲಂಕರಿಸುತ್ತಾರೆ. ಶಿಲ್ಪಕೃತಿಗಳು ಮುಖವಾಡಗಳ ವರ್ಣಚಿತ್ರ ರಚನೆಗಳೂ ಇವೆ. ಬಂಡೆಗಳ ಮೇಲೆ ಮೂಕಚಿತ್ರ ಹಾಗೂ ಕೊರೆಚಿತ್ರಗಳ ರಚನೆ ಸಹರಾ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಕಂಡುಬರುತ್ತವೆ. ಸಹರಾದ ಕಲಾಕೃತಿಗಳಲ್ಲಿ ವಿವಿಧ ಶೈಲಿ ಹಾಗೂ ವಿವಿಧ ಬಗೆಯ ವಸ್ತುಗಳು ಇರುವ ಕಾರಣ ಅದನ್ನು ಪೀಳಿಗೆಯಿಂದ ಪೀಳಿಗೆಗೆ ಬಂದ ಕಲಾವಿದರು ರಚಿಸಿರುವುದು ಸ್ಪಷ್ಟವಾಗಿರುತ್ತದೆ. ದಕ್ಷಿಣ ಆಫ್ರಿಕಾದ ಬಹಳಷ್ಟು ಕಲಾಕೃತಿಗಳನ್ನು ಸಾನ್ ಜನಾಂಗದ ಪೂರ್ವಿಕರು ಮತ್ತು ಆ ಪ್ರದೇಶದ ಬೇಟೆಗಾರ ಹಾಗೂ ಕಂದಮೂಲ ಸಂಗ್ರಹಿಸುವ ಜನಾಂಗ ರಚಿಸಿದ್ದಾರೆ. ಆಫ್ರಿಕಾದ ಬಂಡೆ ಕಲಾಕೃತಿಗಳ ಅತಿ ಪ್ರಾಚೀನ ಕಲಾಕೃತಿಗಳಲ್ಲಿ ೩೦,೦೦೦ ಕೊರೆ ಚಿತ್ರಗಳು ಮತ್ತು ವರ್ಣಚಿತ್ರಗಳು ಸಹಾರದ ಬಂಡೆಗಳಲ್ಲಿವೆ. ಅದರಲ್ಲಿ ಈಗ ಮರುಭೂಮಿಯಲ್ಲಿ ಕಾಣಸಿಗದ ಅನೇಕ ಪ್ರಾಣಿಗಳನ್ನು ಚಿತ್ರಿಸಲಾಗಿದೆ. ದಕ್ಷಿಣ ಬಮಾನ್, ಅಲ್ಜೀರಿಯಾ ಮತ್ತು ಲಿಬಿಯಾದಲ್ಲಿನ ಅತಿ ಪ್ರಾಚೀನ ಕಲಾಕೃತಿಗಳಲ್ಲಿ ಬೇಟೆಗಾರರ ಜೀವನ ಹಾಗೂ ಈಗ ನಾಮಾವಶೇಷವಾಗಿರುವ ಕಾಡುಪ್ರಾಣಿಗಳು ಬಿಂಬಿತವಾಗಿವೆ. ತಸ್ಸಿಲ್ ಎನ್. ಅಜ‰ನಿಂದ ದೊರೆಯುವ ಮತ್ತೊಂದು ಚಿತ್ರದಲ್ಲಿ ಮುಖವಾಡ ಧರಿಸಿದ ಗಂಡು ಹೆಣ್ಣುಗಳನ್ನು ಬಿಂಬಿಸಲಾಗಿದೆ. ಇದರ ನಂತರ, ದನಗಾಹಿ ಅವಧಿ ಮತ್ತು ಅದರಲ್ಲಿ ಸಾಕಿದ ದನಕರುಗಳು ಚಿತ್ರಿತವಾಗಿವೆ. ಕುದುರೆ ಮತ್ತು ಒಂಟೆಗಳ ಕಾಲವನ್ನು ತೋರುವ ಚಿತ್ರಗಳಿವೆ.

ಶಿಲ್ಪಕಲೆ

ಆಫ್ರಿಕಾದ ಶಿಲ್ಪಕಲೆಗೆ ಮರವೇ ಬಹಳ ಪ್ರಚಲಿತ ಮಾಧ್ಯಮವಾಗಿದ್ದರೂ, ತಾಮ್ರದ ಮಿಶ್ರಲೋಹಗಳು, ಕಬ್ಬಿಣ, ದಂತ, ಸುಟ್ಟ ಮಣ್ಣಿನ ಕೃತಿಗಳು, ಹಸಿಮಣ್ಣಿನ ಕಲೆಗಳು ಹಾಗೂ ಇದರ ಜೊತೆಗೆ ಬಲು ಅಪರೂಪವಾಗಿ ಕಲ್ಲು ಬಳಕೆಯಾಗಿವೆ. ಹಸಿ ಜೇಡಿಮಣ್ಣು ಇಡೀ ಖಂಡದಲ್ಲಿ ಬಹಳವಾಗಿ ಬಳಸಲಾಗುತ್ತಿದ್ದ ಮಾಧ್ಯಮ. ಇದು ಬಹಳ ಶಿಥಿಲವಾಗಿ ಒಡೆದು ಹೋಗುವುದರಿಂದ ಮತ್ತು ಅವುಗಳನ್ನು ಸಂಗ್ರಹಿಸುವುದು ಕಷ್ಟವಾದ್ದರಿಂದ ಅದನ್ನು ಸಾಹಿತ್ಯದಲ್ಲಿ ಬಹಳಷ್ಟು ನಿರ್ಲಕ್ಷಿಸಲಾಗಿದೆ. ಸೈರ್ ಪರ್ದೂ ತಂತ್ರವನ್ನು ಬಳಸಿ ತಾಮ್ರದ ಮಿಶ್ರಲೋಹದಲ್ಲಿ ಎರಕ ಹುಯ್ದಿರುವುದನ್ನು ಕಂಡರೆ ಕ್ರಿ.ಶ.೯ನೆಯ ಶತಮಾನದಷ್ಟು ಹಿಂದಕ್ಕೆ ಬಹಳ ಮುಂದುವರಿದ ಶಿಲ್ಪಕಲಾಗಾರಿಕೆಯನ್ನು ಕಾಣಬಹುದು. ಹೀಗಿದ್ದರೂ, ತಾಮ್ರಕ್ಕಿಂತಲೂ ಹೆಚ್ಚಾಗಿ, ಸತು ಮತ್ತು ಹಿತ್ತಾಳೆಯನ್ನು ಬಳಸಿರುವುದನ್ನು ಕಾಣಬಹುದು. ಬೆನಿನ್‌ನಲ್ಲಿ ಸತು ಹಿತ್ತಾಳೆಯನ್ನು ಅತಿ ಹೆಚ್ಚು ಬಳಸಿರುವುದನ್ನು ಕಾಣಬಹುದು. ಅನೇಕ ಸಂಸ್ಕೃತಿಗಳಲ್ಲಿ ಬೀಡು ಕಬ್ಬಿಣ ಶಿಲ್ಪಗಳು ಕಾಣಸಿಗುತ್ತವೆ. ದೋಗೋನ್, ಬಾಂಬರಾ, ಫಾನ್ ಮತ್ತು ಯೊರೂಬಾ ಜನರೂ ಸೇರಿದಂತೆ ಪಶ್ಚಿಮ ಆಫ್ರಿಕಾದಲ್ಲಿ ಇದು ಹೆಚ್ಚು. ಶಿಲಾಕೃತಿಗಳು ಅನೇಕ ಬೇರೆ ಬೇರೆ ಕೇಂದ್ರಗಳಲ್ಲಿ ಕಂಡುಬರುತ್ತವೆ. ಗಟ್ಟಿ ಮತ್ತು ಮೆದು ಕಲ್ಲುಗಳನ್ನು ಬಳಸಿ ಕೃತಿಗಳನ್ನು ರಚಿಸಲಾಗಿದೆ. ಆದರೆ ಒಂದೇ ಸ್ಥಳದಲ್ಲಿ ಕಾಲಾಂತರದಲ್ಲಿ ಈ ಶಿಲ್ಪಕಲೆ ಬೆಳೆದಿರುವುದು ಕಾಣಸಿಗುವುದಿಲ್ಲ. ಆಫ್ರಿಕಾದ ಅನೇಕ ಭಾಗಗಳಲ್ಲಿ ದಂತ ಬಹಳ ಬೆಲೆ ಬಾಳುವ ಕಲಾಮಾಧ್ಯಮ. ನಯನುಣುಪಿನ ವಸ್ತುವಾದ ಕಾರಣ ಅದರಲ್ಲಿ ಕುಸುರಿ ಕೆಲಸ ಚೆನ್ನಾಗಿ ಮಾಡಲಾಗುತ್ತದೆ. ಬಲು ಅಪೂರ್ವವಾದ್ದರಿಂದ ಪ್ರತಿಷ್ಠೆಯ ವಸ್ತುವಾಗಿ ಕೆಲವು ಸಂಸ್ಕೃತಿಗಳಲ್ಲಿ ಬಳಸುತ್ತಾರೆ. ಆಫ್ರಿಕಾದ ಕಾಷ್ಠಶಿಲ್ಪಗಳನ್ನು ಆ ಖಂಡದುದ್ದಕ್ಕೂ ಒಂದೇ ಬಗೆಯ ಸಾಧನಗಳ ಮೂಲಕ ಕೆತ್ತುತ್ತಾರೆ. ಡೋಗನ್ ಶಿಲ್ಪಗಳು ಪಿತೃಪಂಥದ ಜೊತೆಗೆ ಸಂಬಂಧಿತವಾಗಿದೆ. ಬಾಗಾಗಳು ಅವರ ಬೃಹದಾಕಾರದ ಡಂಬಾ ಮುಖವಾಡಗಳಿಗೆ ಪ್ರಸಿದ್ಧವಾಗಿದೆ. ಸಹಾರ ಕೆಳಗಿನ ಆಫ್ರಿಕಾದ ಬಹಳ ಪ್ರಾಚೀನ ಕಲಾಕೃತಿಗಳೆಂದರೆ ಉತ್ತರ ನೈಜೀರಿಯಾದ ನೋಕ್ ಸಂಸ್ಕೃತಿಯ ಕಾಲಕೃತಿಗಳು. ಈಡೋ ಜನಾಂಗದವರು ಬೆನಿನ್ ನಗರಕ್ಕೆ ಹಿತ್ತಾಳೆ ಎರಕವನ್ನು ಪರಿಚಯಿಸಿದರು. ನೈಜಲ್ ಸುತ್ತಿನ ಈಜೋ ಜನಾಂಗ ಜಲದೈವಗಳ ಪಂಥದ ಮುಖವಾಡಗಳನ್ನು ತಯಾರಿಸಿದರು. ನೂಪ್‌ಗಳು ನೆಯ್ಗೆ, ಕಸೂತಿ, ಬ್ರೆಕ್ ತಯಾರಿಕೆ, ಮರ ಕೆತ್ತನೆ, ತಗಡು ಲೋಹರಚನೆಗಳು ಮುಂತಾದವಕ್ಕೆ ಪ್ರಸಿದ್ಧರು. ಮಧ್ಯ ಆಫ್ರಿಕಾದ ಗಾಬನ್‌ಗಳು ಕೋರೆ ಹಲ್ಲಿನ ಮುಖ ವಾಡಗಳಿಗೆ ಪಸ್ರಿದ್ಧ. ಒಂದೊಂದು ಪ್ರದೇಶದ ಪರಿಸರ, ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಅನುಗುಣವಾಗಿ ಇದೇ ಬಗೆಯ ಮುಖವಾಡಗಳು ಶಿಲ್ಪಗಳು ಮತ್ತು ಕಲಾಕೃತಿಗಳನ್ನು ಆಫ್ರಿಕಾದ ಉದ್ದಕ್ಕೂ ತಯಾರಿಸುತ್ತಾರೆ. ಘಾನಾದ ಆಶ್ದಾಡಿಗಳಲ್ಲಿನ ಸಮಾಧಿ ಸ್ಮಾರಕಗಳಂತೆ ಕೆಲವು ಪ್ರದೇಶಗಳಲ್ಲಿ ಕುಂಭಕಲಾ ತಂತ್ರವನ್ನು ಬಳಸುತ್ತಾರೆ. ನೈಜೀರಿಯಾ ಮಾಲಿಗಳಲ್ಲಿ ಇಫೆ ಹಾಗೂ ನೋಕ್‌ಗಳ ಕುಂಭಕಲಾ ಶಿಲ್ಪಗಳಿಗೆ ಇವೇ ತಂತ್ರಜ್ಞಾನ ಬಳಸಲಾಗಿದೆ ಎಂದು ಊಹಿಸಲಾಗಿದೆ. ಪೂರ್ವ ಹಾಗೂ ಪಶ್ಚಿಮ ಆಫ್ರಿಕಾಗಳಲ್ಲಿ ಬಟ್ಟೆಗಳನ್ನು ಸ್ಥಳೀಯವಾಗಿ ಬೆಳೆದ ಸ್ಪನ್ ಹತ್ತಿಯಿಂದ ಸಾಂಪ್ರದಾಯಿಕವಾಗಿ ನೇಯುತ್ತಾರೆ.

 

ಪರಾಮರ್ಶನ ಗ್ರಂಥಗಳು

೧. ಆಫ್ರಿಕಾ ಇನ್ ದಿ ಟ್ವೆಂಟಿ ಫಸ್ಟ್ ಸೆಂಚುರಿ ಎ ಪ್ಯೂಚರಿಸ್ಟಿಕ್ ಎಕ್ಸರ್‌ಸೈಜ್

೨. ಜಾಕ್ ವುಡ್ಸ್, ೧೯೭೭. ನ್ಯೂ ಥಿಯರಿಸ್ ಆಫ್ ರೆವಲ್ಯೂಷನ್,  ನ್ಯೂಯಾರ್ಕ್ ಇಂಟರ್ ನ್ಯಾಷನಲ್ ಪಬ್ಲಿಷರ್ಸ್‌.

೩. ಬೆಸಿಲ್ ಡೇವಿಡ್ಸನ್, ೧೯೭೩. ವಿಚ್ ವೇ ಆಫ್ರಿಕಾ?  ಮೂರನೇ ಮುದ್ರಣ, ಲಂಡನ್: ಪೆಂಗ್ವಿನ್ ಬುಕ್ಸ್.