ಮಡ್ಗಾಸ್ಕರ್

ಅಂತಿಮವಾಗಿ ಮಡ್ಗಾಸ್ಕರ್ ದ್ವೀಪ ಒಂದು ವಿಶಿಷ್ಟ ಸಾಂಸ್ಕೃತಿಕ ಪ್ರದೇಶವಾಗಿದೆ. ವಿವಿಧ ಮಲಗಾಸೆ ಬುಡಕಟ್ಟಿನ ಜನರು ಅವರಲ್ಲಿ ರಾಜಕೀಯವಾಗಿ ಪ್ರಮುಖರೆಂದರೆ ಮೆರಿನಾ. ಇವರು ಇಂಡೋನೇಷಿಯಾ ಮೂಲದವರು. ಇವರು ಬಹುಶಃ ಕ್ರಿ.ಶ.೫ ಮತ್ತು ೬ನೆಯ ಶತಮಾನದಲ್ಲಿ ಹಿಂದೂ ಮಹಾಸಾಗರ ದಾಟಿ ವಲಸೆ ಬಂದಿರುವಂತಿದೆ.

ಸಮಾಜದ ವಿವಿಧ ಆಯಾಮಗಳು

ಆಫ್ರಿಕಾದ ಸಮಾಜಗಳು ಸದಾ ಒಂದು ನಿಧಾನಗತಿಯ ಬದಲಾವಣೆಯಲ್ಲೇ ನಿರತ ವಾಗಿವೆ. ಈ ಅನೇಕ ಸಮಾಜಗಳು, ಕಿರುಗಾತ್ರದ ಸಂಕುಚಿತ ವ್ಯಾಪ್ತಿಯೊಸಾಂಪ್ರದಾಯಿಕ ಸಮಾಜದಿಂದ ವಿಶ್ವಾದ್ಯಂತದ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಗಳ ಒಂದು ಭಾಗವಾದ ವಿಶಾಲ ವ್ಯಾಪ್ತಿಯ ರೂಪಗಳಿಗೆ ಬದಲಾಗುತ್ತಿವೆ. ಈ ಬದಲಾವಣೆಯನ್ನು ಸಾಂಪ್ರದಾಯಿಕ ಸಮಾಜದ ‘ವಿಘಟನೆ’ ಎಂದು ಕರೆಯಲಾಗುತ್ತದೆ.

ಅರ್ಥವ್ಯವಸ್ಥೆ

ಆಫ್ರಿಕಾದ ಬಹುಪಾಲು ಮಂದಿ ಸಣ್ಣ ಪ್ರಮಾಣದ ರೈತರು, ಸಾಂಪ್ರದಾಯಿಕ ತಂತ್ರಜ್ಞಾನ, ಸಾಧನ ಮತ್ತು ಸರಳ ಸಂಪನ್ಮೂಲ ಅವಲಂಬಿಸಿದವರು. ಸಂಪರ್ಕ ಸಾಧನಗಳು ಚೆನ್ನಾಗಿ ಇಲ್ಲದ ಕಾರಣ ವ್ಯಾಪಕ ವ್ಯಾಪಾರದಲ್ಲಿ ನಿರತರಾಗಿರಲಿಲ್ಲ. ಪರಂಪರಾಗತವಾಗಿ ಅವರ ಉತ್ಪನ್ನಗಳೆಲ್ಲಾ ಕೇವಲ ಜೀವನಾಧಾರಕ್ಕಾಗಿ ಇದ್ದವು. ಸಾಮಾನ್ಯವಾಗಿ ಉತ್ಪಾದಕ ಮತ್ತು ವಿತರಕ ಘಟಕ ಎಂದರೆ ಸಮುದಾಯ ಅಥವಾ ಕುಟುಂಬ ಆಗಿರುತ್ತಿದ್ದವು. ಇವು ಮೂಲತಃ ಅರ್ಥವ್ಯವಸ್ಥೆಯ ಘಟಕವಾಗಿದ್ದಷ್ಟೇ ಅಲ್ಲ ಕೌಟುಂಬಿಕ, ರಾಜಕೀಯ ಮತ್ತು ಧಾರ್ಮಿಕ ಘಟಕಗಳೂ ಆಗಿದ್ದವು. ಒಂದು ನಿರ್ದಿಷ್ಟ ಪ್ರದೇಶದೊಳಗೆ ಸಾಂಪ್ರದಾಯಿಕವಾಗಿ ಜೀವನಮಟ್ಟ ಒಂದೇ ಸಮನಾಗಿರುತ್ತಿತ್ತು. ಹಿಂದೆ ಮಾರುಕಟ್ಟೆಗಳು ಇರುತ್ತಿರಲಿಲ್ಲ. ಹಣವು ಯಾವುದೇ ರೂಪದಲ್ಲಿ ಕಾಣುತ್ತಿರಲಿಲ್ಲ. ವ್ಯಾಪಾರ ವಿನಿಮಯ ಕೊಡುಗೆ ವಿನಿಮಯದಿಂದ ನಡೆಯುತ್ತಿತ್ತು ಕೂಲಿ ಕೊಟ್ಟು ಕೆಲಸ ಮಾಡಿಸುವುದು ಅವರಿಗೆ ತಿಳಿದೇ ಇರಲಿಲ್ಲ. ಬಹುಪಾಲು ಎಲ್ಲ ಕಡೆಯೂ ಅದು ಹೊಲಗದ್ದೆ ಕೆಲಸವಿರಲಿ ಅಥವಾ ಇತರ ಕೆಲಸವಿರಲಿ ಪರಸ್ಪರ ಸಹಕಾರ ಇರುತ್ತಿತ್ತು. ಕೆಲವು ಅಪವಾದಗಳೆಂದರೆ ಬಲುದೂರದ ವ್ಯಾಪಾರ ನಡೆಸುತ್ತಿದ್ದ ಮತ್ತು ವ್ಯಾಪಕ ವಿನಿಮಯ ಹಾಗೂ ಸಂಪರ್ಕ ಮತ್ತು ಶತಮಾನಗಳಿಂದ ವ್ಯಾಪಾರ ಮಾರ್ಗಗಳನ್ನು ನಿರ್ವಹಿಸಿಕೊಂಡು ಬರುವುದಕ್ಕೆ ಒಂದು ರಾಜಕೀಯ ವ್ಯವಸ್ಥೆಯನ್ನು ರೂಪಿಸಿಕೊಂಡು ಬಂದ ಎರಡು ಸಮಾಜಗಳು ವಸಾಹತು ಆಡಳಿತ ಸ್ಥಾಪಿಸಿ ಆದ ಮೇಲೆ ಯುರೋಪಿನಲ್ಲಿ ನವಜಗತ್ತು ಹಾಗೂ ಹಿಂದೂ ಮಹಾಸಾಗರ ದಾಟಿ ಇತರೆ ಮಾರುಕಟ್ಟೆಗಳು ಬೆಳೆದದ್ದರಿಂದ ಈ ಸಾಮ್ರಾಜ್ಯಗಳು ಮುಹೊರ ಮಾರುಕಟ್ಟೆಗಳನ್ನು ನಿಯಂತ್ರಿಸುವಲ್ಲಿ ತಮ್ಮ ಮಹತ್ವವನ್ನು ಕಳೆದುಕೊಂಡವು. ಮಹತ್ವದ ಬೆಳವಣಿಗೆಗಳೆಂದರೆ ಅಮೆರಿಕನ್ನರು ಮತ್ತು ಪೂರ್ವ ಪ್ರದೇಶಗಳಿಗೆ ಗುಲಾಮ ವ್ಯಾಪಾರ. ಖನಿಜಗಳು ಮತ್ತು ಲಾಭದಾಯಕ ಬೆಳೆಗಳನ್ನು ಪತ್ತೆ ಹಚ್ಚಿ ಅವುಗಳ ಲಾಭ ಪಡೆದುಕೊಂಡದ್ದು. ಅನೇಕ ವಸಾಹತು ರಾಷ್ಟ್ರಗಳಲ್ಲಿ ತೆರಿಗೆ ಪದ್ಧತಿಯನ್ನು ಜಾರಿಗೆ ತಂದದ್ದರಿಂದ ಮತ್ತು ಅದನ್ನು ನಗದಾಗಿಯೇ ಸಂದಾಯ ಮಾಡ ಬೇಕೆಂದು ಒತ್ತಾಯಿಸಿದ್ದರಿಂದ ಜನರು ನಗದು ಬೆಳೆಗಳನ್ನು ಬೆಳೆಯುವಂತೆ ಒತ್ತಾಯವನ್ನು ತಂದಿತು. ಇಲ್ಲವೇ ತಮ್ಮ ಶ್ರಮ ದುಡಿಮೆಯನ್ನು ಕೈಗಾರಿಕಾ ಅಥವಾ ಆಡಳಿತ ನಗರಗಳಲ್ಲಿ ಮಾರಿಕೊಳ್ಳುವಂತಾಯಿತು. ಇದರ ಪರಿಣಾಮವಾಗಿ ರೈತರ ಉತ್ಪಾದನೆಯಲ್ಲಿ ಬೆಳವಣಿಗೆ ಮತ್ತು ಗ್ರಾಹಕ ಸಾಮಗ್ರಿಗಳ ಆಮದು ಹೆಚ್ಚಾಯಿತು. ಸಾಂಪ್ರದಾಯಿಕವಾಗಿ ಇದ್ದ ಸಮಾನ ಜೀವನಮಟ್ಟ ಹೊರಟುಹೋಗಿ ಬಡವ-ಬಲ್ಲಿದ ಎಂಬ ತಾರತಮ್ಯ ಎದ್ದು ಕಾಣತೊಡಗಿತು. ಹಣ ಮತ್ತು ಮಾರುಕಟ್ಟೆಗಳನ್ನು ಆಧರಿಸಿ ವಿಶಾಲ ಶ್ರೇಣಿಯ ವಿನಿಮಯ ಪದ್ಧತಿಗಳು ಬೆಳೆದದ್ದರಿಂದ ಜನರ ಪ್ರಮಾಣಕ್ಕೆ ಮತ್ತು ರಫ್ತು ಬೆಳೆಯ ಸಾಗಣೆಗೆ ರಸ್ತೆ ಮತ್ತು ರೈಲು ಮಾರ್ಗಗಳ ಸ್ಥಾಪನೆಗಳಿಂದಾಗಿ ಕೂಲಿ ಆಳುಗಳು ದೂರದ ಮತ್ತು ಕಡುಬಡತನದ ಹಳ್ಳಿ ಪ್ರದೇಶಗಳಿಂದ ನಗರಗಳಿಗೆ ಹಾಗೂ ರಫ್ತು ಬೆಳೆ ಬೆಳೆಯುವ ಪ್ರದೇಶಗಳಿಗೆ ವಲಸೆ ಹೋಗುವಂತಾಯಿತು. ನಗರಗಳೇ ಬಹುಪಾಲು ನಿಯಂತ್ರಿಸುವ ಬೃಹತ್ ಗಾತ್ರದ ಆರ್ಥಿಕ ಮತ್ತು ರಾಜಕೀಯ ಪ್ರದೇಶಗಳು ನಿರ್ಮಾಣಗೊಂಡವು. ಇದರಿಂದ ಸಾಂಪ್ರದಾಯಿಕವಾಗಿ ಕಿರಿದಾದ ಬುಡಕಟ್ಟು ಘಟಕಗಳು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಂಡವು. ಇದರೊಂದಿಗೆ ನಗರದಲ್ಲಿ ಬಡವರಾದ ಮತ್ತು ಶೋಷಿತರಾದ ನಗರಕೂಲಿಕಾರ ವರ್ಗ ಅಕುಶಲತೆ ಹಾಗೂ ಪೂರ್ಣ ನಿಯೋಜನೆ ಇಲ್ಲದ ಗಂಭೀರ ಸಮಸ್ಯೆಯಿಂದ ಬಳಲು ವಂತಾಯಿತು. ಹಳ್ಳಿಗಳಲ್ಲಿ ದುಡಿಯುವ ದೃಢಕಾಯ ಯುವಕರು ಸಂಖ್ಯೆ ಕಡಿಮೆಯಾಯಿತು. ಇದರಿಂದ ನಗರಗಳಲ್ಲೂ ಹಳ್ಳಿಗಾಡುಗಳಲ್ಲೂ ಬಡತನ ತಾಂಡವವಾಡುವ ಒಂದು ವಿಷವರ್ತುಲ ನಿರ್ಮಾಣವಾಯಿತು.

ಹೀಗೆ ಸ್ವಾರ್ಥ ಪರವಾದಂತಹ ವಸಾಹತುಶಾಹಿ ಆಫ್ರಿಕಾ ಸಮಾಜವನ್ನು ವಿಶ್ವವ್ಯಾಪಿ ಅರ್ಥವ್ಯವಸ್ಥೆಗೆ ಸೆಳೆದು ತಂದರೂ ಅದು ಪ್ರತ್ಯೇಕವಾಗಿ ಸ್ವಯಂಪೂರ್ಣವಾಗಿದ್ದ ಸಾಂಪ್ರದಾಯಿಕ ಸಮಾಜವನ್ನು ಪೂರ್ಣವಾಗಿ ನಾಶಗೊಳಿಸಿತು. ಆಧುನಿಕ ಆಫ್ರಿಕನ್ ಸಮಾಜವು ತನ್ನ ವಸಾಹತುಶಾಹಿ ಒಡೆಯರ ಅಗತ್ಯತೆಗಳನ್ನು ಬೇಡಿಕೆಗಳನ್ನು ಪೂರೈಸುವುದಕ್ಕಾಗಿ ಬೆಳೆದವೇ ಹೊರತು ಆಫ್ರಿಕನ್ ರಾಜ್ಯಗಳ ನಿಜವಾದ ಹಿತಾಸಕ್ತಿಯಿಂದಲ್ಲ.

ಚದುರಿದಂತಹ ಹಳ್ಳಿಗಳು ಕುಗ್ರಾಮಗಳು ಬಹಳ ಪ್ರಚಲಿತವಿದ್ದ ನೆಲಸು ವಿನ್ಯಾಸ. ಸಂಯುಕ್ತ ಮತ್ತು ವಿಶಾಲ ಕುಟುಂಬಗಳು ತಮ್ಮನ್ನು ರಕ್ಷಿಸಿಕೊಳ್ಳಲು ಹಾಗೂ ಕೌಟುಂಬಿಕ ಸಹಕಾರಕ್ಕೆ ತಕ್ಕಷ್ಟು ದೊಡ್ಡವಾಗಿದ್ದವು. ಆದರೆ ಕಟ್ಟಡ ನಿರ್ಮಿತಿಯ ಸಾಮಗ್ರಿಗಳು ಬಹುಕಾಲ ಬಾಳಿಕೆ ಬಾರದಿರುವ ಕಾರಣ ಇವು ಶಾಶ್ವತವಾಗಿರುವುದಿಲ್ಲ. ಸಾಂಪ್ರದಾಯಿಕ ಆಫ್ರಿಕನ್ ಮನೆಗಳನ್ನು ಸ್ಥಳೀಯವಾಗಿ ದೊರೆಯುವ ಸಾಮಗ್ರಿಗಳಿಂದ ಕಟ್ಟಲಾಗುತ್ತದೆ. ಉತ್ತರ ಆಫ್ರಿಕಾದ ದನಗಾಹಿಗಳು ಬಟ್ಟೆ ಅಥವಾ ಕುರಿ-ಮೇಕೆಗಳ ತೊಗಲುಗಳಿಂದ ನಿರ್ಮಿಸಿದ ಡೇರೆಗಳಲ್ಲಿ ವಾಸಿಸುತ್ತಾರೆ. ಚರ್ಮ ಅಥವಾ ಕಂಬಳಿಯನ್ನು ಮರುಳು ನೆಲದ ಮೇಲೆ ಹಾಸಿರುತ್ತಾರೆ. ಉಷ್ಣವಲಯ ಮತ್ತು ಉಪ ಉಷ್ಣವಲಯಗಳಲ್ಲಿ ದನಗಾಹಿಗಳು ಸಾಮಾನ್ಯವಾಗಿ ಮರದ ಕಂಬಗಳು, ಒಪಿಯರ್(ಬಳುಕುವ ರಂಬೆಗಳು) ಮತ್ತು ತೊಗಲಿನಿಂದ ನಿರ್ಮಿತವಾದ ಗುಂಡನೆಯ ಗುಡಿಸಿಲಿನಲ್ಲಿ ವಾಸಿಸುತ್ತಿದ್ದರು. ಆಫ್ರಿಕಾದ ಹುಲ್ಲುಗಾವಲಿನಲ್ಲಿ ಬಹುಪಾಲು ದೊಡ್ಡ ಮಣ್ಣಿನ ಮನೆಗಳನ್ನುಳ್ಳ ಗ್ರಾಮಗಳು ಸಾಂಪ್ರದಾಯಿಕ. ಆಫ್ರಿಕಾದ ಬಹಳಷ್ಟು ಕಡೆ ಕಂಡುಬರುವ ಮನೆಗಳು ಮಣ್ಣಿನ ಗೋಡೆಗಳು ಮತ್ತು ಹುಲ್ಲು ಅಥವಾ ತಾಳೆಗರಿಯ ಛಾವಣಿ ಹೊಂದಿರುತ್ತದೆ. ವಸಾಹತುಶಾಹಿಗಿಂತಲೂ ಹಿಂದಿನ ಕಾಲದ ದೊಡ್ಡ ಹಾಗೂ ಶಾಶ್ವತ ಪಟ್ಟಣಗಳು ಪ್ರಮುಖವಾಗಿ ಪಶ್ಚಿಮ ಆಫ್ರಿಕಾದಲ್ಲಿ ಅರಣ್ಯ ಮತ್ತು ಸವನ್ನಾ ವಲಯಗಳೆರಡರಲ್ಲೂ ಕಾಣಸಿಗುತ್ತವೆ. ಟಿಂಬಿಕ್ಟು, ಚೆಲ್ನೆ, ಕಾನೋ ಮತ್ತಿತರ ಪಟ್ಟಣಗಳು ಮಧ್ಯಯುಗದಿಂದ ಇದೆ. ಬೆನಿನ್ ಮತ್ತು ಇನ್ದಾನ್‌ವ, ಯರೋಬಾ ನಗರ ಗಳು ಮತ್ತು ಓಯೋಗಳು ಅದಕ್ಕಿಂತ ಇತ್ತೀಚಿನವಾದರೂ ಅನೇಕ ಶತಮಾನಗಳಷ್ಟು ಹಿಂದಿನವು. ಪೂರ್ವ ಆಫ್ರಿಕಾದಲ್ಲಿ ಮೊಂಬಾಸದಂತಹ ಮಧ್ಯಕಾಲೀನ ಅರಬ್ ಕರಾವಳಿ ಪಟ್ಟಣಗಳಿವೆ. ಈ ಎಲ್ಲ ಪಟ್ಟಣಗಳು ಇನ್ನೂ ದೇಶೀಯ ಮತ್ತು ಸರಿಸುಮಾರು ಒಂದೇ ಬಗೆಯ ಜನರನ್ನು ಹೊಂದಿವೆ. ಕೃಷಿ ಮತ್ತು ಕರಕುಶಲ ಕಲೆಗಳೂ ಸೇರಿದಂತೆ ಅನೇಕ ವೃತ್ತಿಗಳಿವೆ. ಆದರೆ ಕೈಗಾರಿಕೆಗಳು ಇಲ್ಲವೇ ಇಲ್ಲ ಎನ್ನಬಹುದು. ಸಂಪತ್ತು ಅಧಿಕಾರವೆಲ್ಲಾ ಅರಸನಲ್ಲಿ ನಿಹಿತವಾಗಿರುತ್ತವೆ. ಆತನ ರಾಜ್ಯಾಡಳಿತ ಸುತ್ತಮುತ್ತಲ ಗ್ರಾಮೀಣ ಪ್ರದೇಶಕ್ಕೂ ಹರಡಿರುತ್ತದೆ. ಹೀಗಾಗಿ ಪಟ್ಟಣವೆಂಬುದು ಒಂದು ಪ್ರತ್ಯೇಕ ಘಟಕವಾಗಿರದೆ ವಿಶಾಲ ಕ್ಷೇತ್ರದ ಕೇಂದ್ರಸ್ಥಾನವಾಗಿರುತ್ತದೆ. ಬದಲಾಗಿ ವಸಾಹತುಶಾಹಿ ಅಡಿಯಲ್ಲಿ ಸ್ಥಾಪಿತವಾದ ಪಟ್ಟಣ ಮತ್ತು ನಗರಗಳು ಭಿನ್ನವಾದವು. ಅವನ್ನು ಆಫ್ರಿಕಾದ ಉದ್ದಕ್ಕೂ ನೋಡಬಹುದು. ಬಡತನದ ಬೇಗೆಯಲ್ಲಿರುವ ಹಿನ್ನಾಡುಗಳಿಂದ ವಲಸೆ ಬರಲು ಕೇಂದ್ರ ಪ್ರದೇಶಗಳಾಗಿದ್ದ ಕಾರಣ ಇಲ್ಲಿ ವಿವಿಧ ಜನಾಂಗದ ಜನರಿದ್ದಾರೆ. ನಗರ ಹಾಗೂ ಅದರ ಸುತ್ತಮುತ್ತಲ ಗ್ರಾಮೀಣ ಪ್ರದೇಶಕ್ಕೂ ನಡುವೆ ಕಡಿದಾದ ಅಂತರವಿದೆ. ಕುಶಲ ಕೆಲಸಗಾರರು ಮತ್ತು ಅಕುಶಲ ಕೆಲಸಗಾರರ ನಡುವೆ ಸ್ಪಷ್ಟವಾದ ತಾರತಮ್ಯವಿದೆ. ಕುಶಲ ಕೆಲಸಗಾರರು (ನಗರಾಡಳಿತದ ಸದಸ್ಯರೊಂದಿಗೆ) ವಿದೇಶಿಯರಾಗಿರುತ್ತಾರೆ ಮತ್ತು ವಸಾಹತುಶಾಹಿ ದಿನಗಳಲ್ಲಿ ಒಟ್ಟಾರೆ ಜನಸಮುದಾಯಕ್ಕಿಂತ ಜನಾಂಗೀಯವಾಗಿ ಭಿನ್ನ.

ದೇಶೀಯ ಗುಂಪು

ಬಹಳಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣಬರುವ ಕೌಟುಂಬಿಕ ಗುಂಪುಗಳೆಂದರೆ ಅವಿಭಕ್ತ ಅಥವಾ ಒಟ್ಟು ಕುಟುಂಬಗಳು. ಅದರಲ್ಲಿ ಅನೇಕ ತಲೆಮಾರುಗಳ ಬಂಧುಗಳು ಮತ್ತು ಅವರ ಪತಿ ಅಥವಾ ಪತ್ನಿಯರು ಇರುತ್ತಾರೆ. ಅವರೆಲ್ಲರಿಗೂ ಮುಖಂಡನಾಗಿ ಹಿರಿಯನೊಬ್ಬ ಇರುತ್ತಾನೆ. ಈ ಸಮುದಾಯದ ಗಾತ್ರ ಭಿನ್ನವಾಗಿರುತ್ತದೆ. ಆದರೆ ಸಾಮಾನ್ಯವಾಗಿ ಮೂರರಿಂದ ಐದು ತಲೆಮಾರುಗಳ ಬಂಧುಗಳಿರುತ್ತಾರೆ. ಅದು ಸ್ಥಿರವಾದ ಮತ್ತು ಬಹುಕಾಲವಾಳುವ ಕೌಟುಂಬಿಕ ಘಟಕವಾಗಿರುತ್ತದೆ. ಒಂದು ಪರಸ್ಪರ ಸಹಕಾರಿಯಾದ, ಇತರರ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳಬಲ್ಲ ಮತ್ತು ತನ್ನೆಲ್ಲಾ ಸದಸ್ಯರನ್ನು ಅವರ ಜೀವನದುದ್ದಕ್ಕೂ ಪರಿಪಾಲಿಸಬಲ್ಲ ಗುಂಪಾಗಿರುತ್ತದೆ. ಕೃಷಿಕರು ಮತ್ತು ಗೋವಳರ ನಡುವೆ ನಡೆಯುವ ಮದುವೆಗಳಲ್ಲಿ ಹೆಣ್ಣಿನ ಸಂಬಂಧಿಕರಿಗೆ ‘ಹೆಣ್ಣಿನ ತೆರ’ ಕೊಡಬೇಕಾಗಿ ಬರುತ್ತದೆ. ಬಹುಪತ್ನಿತ್ವ ಬಹಳ ಪ್ರಚಲಿತವಾಗಿತ್ತು ಮತ್ತು ಆದರ್ಶವೆಂದು ಪರಿಗಣಿತವಾಗಿತ್ತು. ಎಷ್ಟು ಪತ್ನಿಯರು ಎಂಬುದು ಗಂಡನ ಅಂತಸ್ತು ಹಾಗೂ ಸಂಪತ್ತನ್ನು ಅವಲಂಬಿಸಿತ್ತು. ಮುಖಂಡರು ಮತ್ತು ರಾಜರಿಗೆ ತಮ್ಮ ಅಂತಸ್ತಿನ ಹಿರಿಮೆಗಾಗಿ ಮತ್ತು ತಮ್ಮ ಅಸಂಖ್ಯಾತ ಪ್ರಜೆಗಳಿಗೆ ಔತಣಾತಿಥ್ಯ ನೀಡಲು ಸಾಧ್ಯವಾಗುವಂತೆ ಅನೇಕ ಪತ್ನಿಯರು ಇರಬೇಕಿತ್ತು. ಆಫ್ರಿಕಾದಲ್ಲಿ ಬಹಳ ಕಡೆ ಈ ನಿವಾಸಿ ಗುಂಪುಗಳೆಂದರೆ ವಂಶಸ್ಥರು ಅಥವಾ ಪೀಳಿಗೆ ಎನ್ನುವಂತೆ ಆನುವಂಶಿಕವಾಗಿ ಬಂದ ಜರನ್ನು ಉಳ್ಳ ಗುಂಪು. ವಂಶಸ್ಥರ ತರುವಾಯದ ಟಿಸಿಲುಗಳವರೇ ಪೀಳಿಗೆಗಳು. ಒಂದು ಪೀಳಿಗೆಯ ಸದಸ್ಯರುಗಳಿಗೆಲ್ಲಾ ತೀರ ಇತ್ತೀಚಿನ ಪೀಳಿಗೆಯ ಒಬ್ಬ ಪಿತೃ ಇರುತ್ತಾನೆ. ಅವರು ಸಹ ಸಾಮಾನ್ಯವಾಗಿ ಗಣನೀಯರಾದ ಮುಖಂಡರು ಮತ್ತು ಕಾರ್ಯಭಾರವುಳ್ಳ ಒಂದು ನಿಕಾಯದ ಸದಸ್ಯರಾಗಿರುತ್ತಾರೆ. ಪೀಳಿಗೆಯ ಕಾರಣದಿಂದ ವಿಶಾಲ ಸಾಮುದಾಯಿಕ ವ್ಯವಹಾರಗಳಲ್ಲಿ ಅವರು ಒಂದು ನಿರ್ದಿಷ್ಟ ರಾಜಕೀಯ ಅಧಿಕಾರದ ಸ್ಥಾನ ಪಡೆಯಲು ಅರ್ಹರಾಗುತ್ತಾರೆ. ಒಂದೊಂದು ಆನುವಂಶಿಕ ಗುಂಪಿಗೂ ಕೊಟ್ಟ ಮಹತ್ವ ಬೇರೆ ಬೇರೆಯಾಗಿರುತ್ತದೆ. ಆದರೆ ವಾರಸುದಾರರು, ಪುತ್ರ ಪೌತ್ರರು ಮತ್ತು ಮದುವೆಯಾಗಿ ಬಂದವರಿಗೆ ಸೂಕ್ತ ವ್ಯವಸ್ಥೆ ಮಾಡಲು ಇದು ಬಹಳ ಮುಖ್ಯ. ೨೦ನೆಯ ಶತಮಾನದ ದ್ವಿತೀಯಾರ್ಧದಲ್ಲಿ ಈ ವ್ಯವಸ್ಥೆ ಬದಲಾಗುತಿ್ತದೆ. ಅವಿಭಕ್ತ ಕುಟುಂಬಗಳು ಇಲ್ಲವಾಗಿ ಗಂಡ, ಹೆಂಡತಿ, ಮಕ್ಕಳು ಎನ್ನುವಂತಹ ಕುಟುಂಬ ವ್ಯವಸ್ಥೆ ಜಾರಿಗೆ ಬರುತ್ತಿದೆ. ಏಕೆಂದರೆ ತಮ್ಮ ಹಿರಿಯರು ಹೆಂಗಸರು ಮಕ್ಕಳನ್ನು ಅದೇ ಬಡತನದ ಹುಟ್ಟೂರುಗಳಲ್ಲಿ ಬಿಟ್ಟು ನಗರಕ್ಕೆ ವಲಸೆ ಬರುತ್ತಿದ್ದಾರೆ. ಆಫ್ರಿಕಾದಲ್ಲಿ ಸರಿಸುಮಾರು ಹದಿಹರೆಯ ತಲುಪುವ ವಯಸ್ಸಿನಲ್ಲಿ ಅನೇಕ ಬುಡಕಟ್ಟುಗಳಲ್ಲಿ ಯುವಜನರಿಗೆ ಅವರನ್ನು ವಯಸ್ಕ ಪ್ರಪಂಚಕ್ಕೆ ಪಾದಾರ್ಪಣ ಮಾಡಿಸುವ ವಿಧ್ಯುಕ್ತ ಆಚಾರಗಳನ್ನು ಮಾಡುತ್ತಾರೆ. ಆಫ್ರಿಕಾದ ಇನ್ನೂ ಕೆಲವು ಭಾಗಗಳಲ್ಲಿ ಬುಡಕಟ್ಟು ಸಮುದಾಯದಲ್ಲಿ ಒಂದು ಕ್ರಮಬದ್ಧತೆಯನ್ನು ಕಾಪಾಡುವುದಕ್ಕಾಗಿ ಕೆಲವು ಸಾಂಪ್ರದಾಯಿಕ ಕರ್ತವ್ಯಗಳನ್ನು ಮಾಡುವಂತಹ ಗಂಡಸರ ಅಥವಾ ಹೆಂಗಸರ ಗುಪ್ತಸಮಾಜಕ್ಕೆ ಅವರನ್ನು ಪಾದಾರ್ಪಣ ಮಾಡಿಸಲಾಗುತ್ತದೆ.

ರಾಜಕೀಯ ವ್ಯವಸ್ಥೆ

ಆಫ್ರಿಕಾದ ರಾಜಕೀಯ ವ್ಯವಸ್ಥೆಗಳು ವೈವಿಧ್ಯಮಯವಾಗಿವೆ. ಒಂದು ತುದಿಯಲ್ಲಿ ಸರ್ವಾಧಿಕಾರಿ ಮುಖಂಡತ್ವ ಇದ್ದರೆ ಇನ್ನೊಂದು ತುದಿಯಲ್ಲಿ ಮುಖಂಡರೇ ಇಲ್ಲವೇನೋ ಎಂಬಂತಹ ಬಂಧುಗಳ ಸಮೂಹವನ್ನು ಕಾಣುತ್ತೇವೆ. ಸಾಂಪ್ರದಾಯಿಕವಾದ ಮೂರು ಮುಖ್ಯ ಆಡಳಿತ ವ್ಯವಸ್ಥೆಗಳನ್ನು ನೋಡುತ್ತೇವೆ. ಒಂದು ಸಾನ್ ಮತ್ತು ಪಿಗ್ಮಿಜನಾಂಗಗಳಲ್ಲಿ ಇರುವಂತೆ ಬೇಟೆಗಾರ ತಂಡದ ಸರಳ ಸಂಘಟನೆ. ಇದರಲ್ಲಿ ಈ ತಂಡವೇ ರಾಜಕೀಯ ವ್ಯವಸ್ಥೆ. ಇವರು ಒಂದೇ ಬಂಧುತ್ವ ಗುಂಪಿನವರಾಗಿದ್ದು ನೆರೆಹೊರೆಯವರೊಂದಿಗೆ ಅಂತರ ವಿವಾಹದ ಕಾರಣದಿಂದ ಸಂಬಂಧ ಹೊಂದಿದ್ದು ಒಂದೇ ಸಾಂಸ್ಕೃತಿಕ ಗುಣಲಕ್ಷಣ ಹೊಂದಿರುವುದನ್ನು ಅರಿತಿರುವವರು. ಇಲ್ಲಿ ಅಧಿಕಾರವು ಅತಿವೃದ್ಧ ಗಂಡಸರ ಕೈಯಲ್ಲಿರು ತ್ತದೆ. ಎರಡನೆಯ ಬಗೆ ಎಂದರೆ ಬಹಳ ಪ್ರಚಲಿತವಿರುವಂತಹದು. ಇದರಲ್ಲಿ ಕೇಂದ್ರೀಕೃತ ರಾಜಕೀಯ ಆಡಳಿತವಿಲ್ಲದ ಸಮೂಹಗಳು ಬರುತ್ತದೆ. ಇವು ರಾಜಕೀಯ ವ್ಯವಸ್ಥೆ ಹಾಗೂ ತಮ್ಮ ಪ್ರತ್ಯೇಕ ವೈಶಿಷ್ಟ್ಯವನ್ನು ಅನ್ಯಥಾ ಉಳಿಸಿಕೊಂಡು ಬರುತ್ತವೆ. ರಾಜಕೀಯ ಅಧಿಕಾರ ಇದರಲ್ಲಿ ಪ್ರತ್ಯೇಕವಾದ ರೂಪ ಪಡೆದುಕೊಂಡಿರುವುದಿಲ್ಲ. ಹಾಗಾಗಿ ಬಂಧುತ್ವ ಮತ್ತು ಮತೀಯ ಅಧಿಕಾರಕ್ಕಿಂತ ಭಿನ್ನವಾಗಿರುವುದಿಲ್ಲ. ಇಂತಹ ಅನೇಕ ಸಮಾಜಗಳು ವಂಶಸ್ಥರು ಮತ್ತು ಪೀಳಿಗೆಗಳನ್ನು ಆಧರಿಸಿರುತ್ತವೆ. ಇಲ್ಲಿ ಬಹುಪಾಲು ರಾಜಕೀಯ ಅಧಿಕಾವು ವಂಶಸ್ಥರು ಮತ್ತು ಪೀಳಿಗೆಯ ವಂಶವೃಕ್ಷದಲ್ಲಿ ಹಿರಿಯರಾದ ಗಂಡಸರ ಕೈಯಲ್ಲಿ ಇರುತ್ತದೆ. ಹೀಗಿದ್ದರೂ ಈ ವ್ಯವಸ್ಥೆಯಲ್ಲಿ ವಿವಾದಗಳನ್ನು ಸಂಘಟಿತ ಬಲದಿಂದ (ಜಗಳ ಮತ್ತು ಯುದ್ಧದಿಂದ) ಪರಿಹರಿಸಲಾಗುತ್ತದೆ. ಇತರ ಬಗೆಯ ರಾಜಕೀಯ ಅಧಿಕಾರ ಕೇಂದ್ರೀಕೃತ ವಾಗಿರದ ಸಮಾಜಗಳಲ್ಲಿ ಅಧಿಕಾರವು ವಯಸ್ಸಿನಲ್ಲಿ ಹಿರಿಯರಾದ ಗಂಡಸರ ಕೈಯಲ್ಲಿ ಇರುತ್ತದೆ. ಇಡೀ ಸಮಾಜವು ವಾಡಿಕೆಯಾಗಿ ಗುರುತಿಸಲ್ಪಟ್ಟ ವಯೋಮಾನದ ತಲೆಮಾರುಗಳಾಗಿ ವಿಂಗಡಿತವಾಗಿರುತ್ತವೆ. ಇಲ್ಲಿ ಒಂದು ವಿಶಾಲ ಪ್ರದೇಶದ ಸ್ಥಳೀಯ ಗುಂಪುಗಳನ್ನು ಪ್ರತಿನಿಧಿಸುವ ಹಿರಿಯರ ಪರಿಷತ್ತು ಆಡಳಿತ ಅಧಿಕಾರ ಹೊಂದಿರುತ್ತದೆ. ಜಗಳವನ್ನು ಚರ್ಚೆ, ಸಮಾಲೋಚನೆಗಳ ಮೂಲಕ ಪರಿಹರಿಸುತ್ತಾರೆ. ಇದನ್ನು ಸಾಂಪ್ರದಾಯಿಕವಾಗಿ ದನಕರು ಸಾಕುವ ಯುದ್ಧ ಪ್ರಿಯ ಮಸಾಯಿ ಮತ್ತಿತರ ಪೂರ್ವ ಆಫ್ರಿಕಾದ ಜನರಲ್ಲಿ ಹಾಗೂ ಮತ್ತಿತರ ದಕ್ಷಿಣ ಆಫ್ರಿಕಾದ ಜನರಲ್ಲಿ ಕಾಣಬಹುದು. ಮೂರನೇ ಮುಖ್ಯವಾದ ರಾಜಕೀಯ ವ್ಯವಸ್ಥೆ ಎಂದರೆ ವಿವಿಧ ಗಾತ್ರದಲ್ಲಿರುವ ಪರಂಪರಾಗತ ಆಫ್ರಿಕಾದ ಸಂಸ್ಥಾನಗಳು. ಇದು ರಾಜನಯುಳ್ಳದ್ದು ಅಧಿಕಾರ ವ್ಯಾಪ್ತಿ ರಾಜ ಮತ್ತು ಪ್ರಜೆಗಳ ಸಂಬಂಧ ಇವುಗಳೂ ಒಂದು ಸಂಸ್ಥಾನದಿಂದ ಇನ್ನೊಂದಕ್ಕೆ ಭಿನ್ನವಾಗಿವೆ. ಈ ಸಂಬಂಧದಲ್ಲಿ ಆತನನ್ನು ಜುಲು ಮತ್ತು ಸ್ವಾಜಿ ಜನಾಂಗಗಳಲ್ಲಿ ಇರುವಂತೆ ಹಿರಿಯ ಸಂಬಂಧಿಕ ಎಂದು ಮಾತ್ರವೇ ಪರಿಗಣಿಸ ಬಹುದು. ಅನೇಕ ರಾಜರ ಒಂದು ಮಹಾ ಒಕ್ಕೂಟದಲ್ಲಿ ಘಾನಾದ ಅಶ್ದಾಟಿ ಜನರಲ್ಲಿರು ವಂತೆ ಆತ ‘ಸಮಾನರಲ್ಲಿ ಪ್ರಪ್ರಥಮ’-‘ಪ್ರೈಮಸ್ ಇಂಟರ್ ಪೇರ್ಸ್’ ಎಂದು ಪರಿಗಣಿಸಬಹುದು. ಇಲ್ಲವೇ ವಾಂಡ, ರುಂಡಿ ಅಥವಾ ಜಾಂಜಿವಾರ್‌ನ ಅರಬ್ ಸುಲ್ತಾನ ರಾಜ್ಯದಲ್ಲಿದ್ದಂತೆ ಆತನು ತನ್ನ ಪ್ರಜೆಗಳಿಗಿಂತಲೂ ಜನಾಂಗೀಯವಾಗಿ ಭಿನ್ನವಾದವರು ಎಂದು ಪರಿಗಣಿಸುತ್ತಿರುವ ಅವರನ್ನು ಗೆದ್ದ ಆಳುತ್ತಿರುವ ವರ್ಗದ ಸದಸ್ಯನಾಗಿರಬಹುದು. ರಾಜನಿಗೆ ರಾಜಕೀಯ ಹಾಗೂ ಧಾರ್ಮಿಕ ಎರಡೂ ಅಧಿಕಾರಗಳಿದ್ದವು. ಅವು ಅತ್ಯಂತ ಸಂಘಟಿತ ಮತ್ತು ಪ್ರಬಲ ರಾಜ್ಯಗಳಾಗಿದ್ದವು. ರಾಜನ ಅಧಿಕಾರವನ್ನು ಪರಿಭಾವಿಸಿ ನಿಯಂತ್ರಿಸಲು ಕೆಲವು ಸಂಕೀರ್ಣ ಸಂಸ್ಥೆಗಳಿದ್ದವು. ಅನೇಕ ರಾಜ್ಯಗಳು ವಿಶ್ವದ ಇತರರ ಭಾಗಗಳಲ್ಲಿನ ರಾಜ್ಯಗಳಿಗೆ ಹೋಲಿಸಬಹುದಾದಂತೆ ಅನೇಕ ಶತಮಾನಗಳಿಂದ ವಂಶ ಪಾರಂಪರ್ಯವಾಗಿ ಆಳಲ್ಪಡುತ್ತಿದ್ದವು ಮತ್ತು ಶ್ರೀಮಂತ ಆಸ್ಥಾನ ಹಾಗೂ ಆಡಳಿತ ನಡೆಸುವ ಅಧಿಕಾರಿ ವರ್ಗಗಳನ್ನು ಹೊಂದಿದ್ದವು.

ರಾಜ್ಯಗಳು ಅರಣ್ಯ ಪ್ರದೇಶದಲ್ಲಿ ಬೆಳೆಯುತ್ತಿದ್ದುದು ಬಲು ವಿರಳ. ಆದರೆ ಸವನ್ನಾ ಭಾಗದಲ್ಲಿ ಚೆನ್ನಾಗಿ ಬೆಳೆದವು. ೧೯ನೆಯ ಶತಮಾನದಲ್ಲಿ ಸಣ್ಣ ಸಣ್ಣ ಪಾಳೆಯಗಾರರು ಇರುತ್ತಿದ್ದ ಪ್ರದೇಶಗಳು ಸರ್ವೇಸಾಮಾನ್ಯವಾಗಿದ್ದವು. ಇವೇ ಮುಂದೆ ರಾಜ್ಯಗಳಾಗಿ ಬೆಳೆದವು ಉದಾಹರಣೆಗೆ ಜುಲು, ಪೂರ್ವ ಆಫ್ರಿಕಾದ ಬಯಲುನಾಡಿನಲ್ಲಿ ಬುನ್ಯಾರೋವಿ ನಂತಹ ಮಹಾನ್ ಮತ್ತು ಇನ್ನೂ ಪ್ರಾಚೀನವಾದ ವಿಜೇತ ರಾಜ್ಯಗಳು ಬೆಳೆದವು. ಕಾಂಗೋ ಅರಣ್ಯದ ದಕ್ಷಿಣದ ಸವನ್ನಾದಲ್ಲಿ ಕಾಂಗೋ, ಲುಂಡಾ ಮತ್ತಿತರ ರಾಜ್ಯಗಳಿವೆ. ಉತ್ತರದಲ್ಲಿ ಸಹರಾದ ದಕ್ಷಿಣ ಭಾಗಕ್ಕೆ ಸೋಂಗೆ ಮತ್ತು ಬೋರ್ನುಗಳಂತಹ ಗಣನೀಯ ರಾಜ್ಯಗಳ ಒಂದು ಸರಣಿಯೇ ಇತ್ತು. ನೈರುತ್ಯ ಆಫ್ರಿಕಾದಲ್ಲಿ ಅರಣ್ಯ ರಾಜ್ಯಗಳು ಎಂದು ಭಾವಿಸಲಾದ ಅನೇಕ ರಾಜ್ಯಗಳಿದ್ದವು. ಆದರೆ ಸಂಕೀರ್ಣ ಹವಾಮಾನ ಕಾರಣಗಳಿಗಾಗಿ ಇವರ ಪ್ರದೇಶ ಗಳಲ್ಲಿ ಸವನ್ನಾ ಹುಲ್ಲುಗಾವಲು ಹತ್ತಿರದ ಕಡಲತೀರದವರೆಗೂ ಹಬ್ಬಿದೆ. ಅಶಾಂತಿ, ದಹೊಮೆ ಮತ್ತು ಯರೂಚಾ ರಾಜ್ಯಗಳು ಪ್ರಮುಖವಾಗಿ ಹುಲ್ಲುಗಾವಲು ಪ್ರದೇಶದಲ್ಲಿ ಕೇಂದ್ರೀಕೃತವಾಗಿದ್ದವು. ಕೇವಲ ಬೆನಿನ್ ಪ್ರಾಚೀನ ಅರಣ್ಯ ರಾಜ್ಯವಾಗಿತ್ತು. ರಾಜ್ಯಗಳಿಗೂ ಬಯಲುನಾಡಿಗೂ ಇದ್ದ ಸಂಬಂಧಕ್ಕೆ ಕಾರಣವೇನೆಂದರೆ ಇಲ್ಲಿನ ರೈತರ ಬಹು ಸುಲಭವಾಗಿ ಗೆದ್ದು ಅವರು ಕಪ್ಪಕಾಣಿಕೆಗಳನ್ನು ಕೊಡುವಂತೆ ಮಾಡಬಹುದಾಗಿದೆ. ಅಷ್ಟೇ ಅಲ್ಲ, ಹುಲ್ಲುಾವಲಿನ ಉತ್ಪನ್ನಗಳಾದ ದನಕರುಗಳು ಮತ್ತು ದವಸ ಧಾನ್ಯಗಳನ್ನು ಕಾಡಿನ ಗೆಡ್ಡೆಗೆಣಸುಗಳಿಗಿಂತ ಬಹಳ ಸುಲಭವಾಗಿ ಸಾಗಿಸಬಹುದಾಗಿದೆ. ಅರಣ್ಯ ಒಂದು ಒಳ್ಳೆಯ ಅಡಗುದಾಣವೂ ಆಗಿರುತ್ತಿತ್ತು. ಅದರಲ್ಲೂ ಉತ್ತರದಲ್ಲಿ ಅವರ ಮಹತ್ವ ಹೆಚ್ಚು. ಉತ್ತರದ ಸವನ್ನಾ ರಾಜ್ಯಗಳ ಬಹಳ ಪ್ರಮುಖ ಆಯುಧವಾದ ಅಶ್ವದಳದಿಂದ ಅರಣ್ಯ ತನ್ನ ನಿವಾಸಿಗಳನ್ನು ರಕ್ಷಿಸುತ್ತಿತ್ತು. ನಾವು ಹಿಂದೆ ಹೇಳಿದ ಆಫ್ರಿಕಾದಲ್ಲಿ ವ್ಯಾಪಾರಕ್ಕೆ ಅಂತಹ ಮಹತ್ವದ ಸ್ಥಾನ ಇರಲಿಲ್ಲ ಎಂಬ ಹೇಳಿಕೆಗೆ ಸವನ್ನಾದ ವಿಶಾಲ ರಾಜ್ಯಗಳು ಅಪವಾದ ಗಳಾಗಿದ್ದವು. ಉತ್ತರ ಸವನ್ನಾ ರಾಜ್ಯಗಳು ವಿಶಾಲ ಸಹರಾ ವ್ಯಾಪಾರವನ್ನು ಬಹಳವಾಗಿ ಅವಲಂಬಿಸಿದ್ದವು. ಈ ವ್ಯಾಪಾರವನ್ನು ಎಷ್ಟರ ಮಟ್ಟಿಗೆ ತಾವು ನಿಯಂತ್ರಿಸಲು ಸಾಮರ್ಥ್ಯ ವನ್ನು ಹೊಂದಿದ್ದುವು ಎಂಬುದಕ್ಕೆ ಅನುಸಾರವಾಗಿ ಅವುಗಳಲ್ಲಿ ಏಳು ಬೀಳುಗಳೂ ಉಂಟಾಗುತ್ತಿದ್ದವು.

ಇತರ ಅನೇಕ ರಾಜ್ಯಗಳು ಅದರಲ್ಲೂ ಪಶ್ಚಿಮ ಆಫ್ರಿಕಾ ಮತ್ತು ದಕ್ಷಿಣ ಕಾಂಗೋ ಸವನ್ನಾ ಪ್ರದೇಶದ ರಾಜ್ಯಗಳು ಗುಲಾಮ ವ್ಯಾಪಾರದೊಂದಿಗೆ ಬಹಳ ನಿಕಟ ಸಂಬಂಧ ಹೊಂದಿದ್ದವು. ಈ ರಾಜಕೀಯ ವ್ಯವಸ್ಥೆಗಳಲ್ಲಿ ಅನೇಕ ವ್ಯವಸ್ಥೆಗಳು ಇನ್ನೂ ಅಸ್ತಿತ್ವ ದಲ್ಲಿವೆ. ಹೊಸ ರಾಷ್ಟ್ರಗಳ ರಾಜ್ಯದಲ್ಲಿ ಅವಲಂಬಿತ ಭಾಗಗಳಾಗಿ ಉಳಿದಿವೆ ಮತ್ತು ಅವುಗಳ ಒಡೆಯರು ಹಾಗೂ ರಾಜರ ಹಿಂದಿನ ಅಧಿಕಾರ ಬಹುಪಾಲು ಕುಂಠಿತವಾಗಿವೆ ಇಲ್ಲವೇ ರದ್ದಾಗಿವೆ. ವಸಾಹತು ಸರ್ಕಾರಗಳು ರಾಜಕೀಯ ಅಧಿಕಾರದ ಏಕಸಾಮ್ಯವನ್ನು ಹೊಂದಿದ ಕಾರಣ ಈ ಎಲ್ಲ ರಾಜ್ಯಗಳು ವಸಾಹತುಶಾಹಿಯ ಅವಧಿಯಲ್ಲಿ ದುರ್ಬಲಗೊಂಡವು.

ಸಾಂಪ್ರದಾಯಿಕ ಆಫ್ರಿಕನ್ ಸಮಾಜಗಳು ಬಹಳಷ್ಟು ಸಂಪತ್ತು ಮತ್ತು ಅಧಿಕಾರಕ್ಕೆ ಅನುಗುಣವಾಗಿ ಸಾಮಾಜಿಕ ಸ್ತರಗಳನ್ನು ಹೊಂದಿದ್ದವು. ಆದರೆ ಆಫ್ರಿಕಾದಲ್ಲಿ ಸಾಹಸೋದ್ಯಮಿ ಗಳು ವ್ಯಾಪಾರಿಗಳು ಹೆಚ್ಚಿದಂತೆ ವಿದ್ಯಾಭ್ಯಾಸದ ಮಧ್ಯದ ಅಂತರ ಹೆಚ್ಚಾದಂತೆ ಆರ್ಥಿಕ ಮತ್ತು ರಾಜಕೀಯ ಭಿನ್ನತೆಗಳು ಬಹುವಾಗಿ ಹೆಚ್ಚುತ್ತಿವೆ. ಎಲ್ಲ ರಂಗಗಳಲ್ಲೂ ಆರ್ಥಿಕ ಮತ್ತು ರಾಜಕೀಯ ಗಣ್ಯವರ್ಗವೊಂದು ಬೆಳೆಯುತ್ತಿದೆ. ಇವರು ಸಾಂಪ್ರದಾಯಿಕ ಬುಡಕಟ್ಟು ಮತ್ತು ಕೌಟುಂಬಿಕ ಸಂಬಂಧಗಳನ್ನು ಕೈಬಿಟ್ಟು ಹೊಸದಾದ ಶ್ರೀಮಂತ ಮತ್ತು ಮಧ್ಯಮ ವರ್ಗಗಳ ಸದಸ್ಯರಾಗಿರುತ್ತಾರೆ.

ಧರ್ಮಗಳು

ನೀಗ್ರೊ ಜನಗಳ ಸಾಂಪ್ರದಾಯಿಕ ಧರ್ಮ ಇಸ್ಲಾಂ. ಇದು ಆಫ್ರಿಕಾದ ಅತಿ ಪ್ರಚಲಿತ ಧರ್ಮಗಳು. ಕ್ರಿಸ್ತಶಕದ ಆದಿಭಾಗದಲ್ಲಿ ಉತ್ತರ ಆಫ್ರಿಕಾದಲ್ಲಿ ಕ್ರೈಸ್ತಧರ್ಮ ಕಾಲಿಟ್ಟಿತು. ಆದರೆ ಈ ಆರಂಭದ ಪ್ರಭಾವದಿಂದ ಈಗ ಉಳಿದಿರುವುದು ಈಜಿಪ್ಟಿನ ಮತ್ತು ಇಥಿಯೋಪಿಯಾದ ಕೋಪ್ಟಿಕ್ ಚರ್ಚ್ ಎಂಬ ಒಂದು ದೊಡ್ಡ ಧಾರ್ಮಿಕ ವರ್ಗ ಮಾತ್ರ. ನಗರ ಪ್ರದೇಶದಲ್ಲಿ ಮಾತ್ರ ಜುದಾಯಿಸಂ ಕಾಣಬರುತ್ತದೆ. ಇಥಿಯೋಪಿಯಾದ ಫಿಲಾಸ ಕ್ರಿ.ಪೂ.೧ನೇ ಶತಮಾನದಷ್ಟು ಹಿಂದಿನ ಜುದಾಯಿಸಂನ ಒಂದು ವರ್ಗ. ಇಸ್ಲಾಂ ಧರ್ಮ ೭ನೇ ಶತಮಾನದಲ್ಲಿ ಪಾದಾರ್ಪಣ ಮಾಡಿತು ಮತ್ತು ೧೩ನೆಯ ಶತಮಾನದ ಹೊತ್ತಿಗೆ ಸಹರಾದ ದಕ್ಷಿಣ ಭಾಗಕ್ಕೆ ಹಬ್ಬಲಾರಂಭಿಸಿತು. ಉತ್ತರ ಮತ್ತು ಪೂರ್ವ ಆಫ್ರಿಕಾದಲ್ಲಿ ಇದೇ ಪ್ರಮುಖ ಧರ್ಮ. ಸ್ವದೇಶಿ ಧರ್ಮಗಳಲ್ಲಿ ಕೆಲವು ಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿದೆ. ಧರ್ಮ ಎಂಬುದು ಉತ್ಸವಗಳು ಮಾತ್ರವಲ್ಲ; ದೈನಂದಿನ ಬದುಕಿನ ಒಂದು ಬಹುಮುಖ್ಯ ಭಾಗ. ಸರ್ವಶಕ್ತ ಮಹಾದೇವ, ಎಲ್ಲ ಸೃಷ್ಟಿಸಿದ ಕರ್ತೃ ಆದ ಒಂದು ಅದಿದೈವ ಆಫ್ರಿಕಾದ ಎಲ್ಲ ಸಾಂಪ್ರದಾಯಿಕ ಧರ್ಮಗಳ ಕೇಂದ್ರ ಬಿಂದು. ಆತ ಸದಾಚಾರಗಳ ಮೂಲಸ್ತೋತ್ರ ಮತ್ತು ದುಷ್ಟ ಶಿಕ್ಷಕ(ಆತನನ್ನು ಪ್ರಾರ್ಥನೆ, ಬಲಿದಾನ ಮತ್ತಿತರ ಆಚಾರಗಳಿಂದ ಕೆಳಮಟ್ಟದ ಅಧಿ ಪ್ರಾಕೃತಿಕ ಶಕ್ತಿಗಳ ಮೂಲಕ ತಲುಪಬಹುದು). ಈ ದೇವರಿಗೆ ಸಾಮಾನ್ಯವಾಗಿ ಗಂಡು ಅಥವಾ ಹೆಣ್ಣು ಎಂಬ ಯಾವುದೇ ಲಿಂಗಭೇದ ಮಾಡಿರುವುದಿಲ್ಲ. ಆದರೆ ಕೆಲವು ಸಂದರ್ಭದಲ್ಲಿ ಗಂಡು ಅಥವಾ ಹೆಣ್ಣು ಎಂದು ಕರೆದಿರುವುದುಂಟು. ಹಲವು ಬಾರಿ ದೇವರಿಗೆ ಒಂದು ಸರ್ವಾಂತರ್ಯಾಮಿ ಮೂರ್ತ ಸ್ವರೂಪವನ್ನು ನೀಡಿರುವುದೂ ಉಂಟು. ಜನರು ದೈನಂದಿನ ಸಂಪರ್ಕ ಹೊಂದಿರುವ ಅಥವಾ ತಾವು ಹಿಂದಿನಿಂದಲೂ ಅರಿತಿರುವ ವಸ್ತುಗಳು ಅಥವಾ ವ್ಯಕ್ತಿಗಳಿಗೆ ಬಲು ಮುಖ್ಯ ಆಧ್ಯಾತ್ಮಿಕ ಶಕ್ತಿಗಳನ್ನು ಆರೋಪಿಸುತ್ತಿದ್ದರು. ಹೀಗಾಗಿ, ಗಾಳಿಯ ಅನೇಕ ಬಗೆ, ಅನೇಕ ಸ್ತರಗಳ ಚೇತನಗಳು ಇರುತ್ತಿದ್ದವು. ಈಗ ದೈವದ ಸ್ಥಾನ ಪಡೆದ ಪಿತೃಗಳು ಅಥವಾ ಪ್ರೇತಗಳು ಇರಬಹುದು. ತಮ್ಮ ಜನರನ್ನು ಇಂದಿನ ನಾಡಿಗೆ ಕರೆತಂದು ಈಗಿರುವಂತೆ ಅವರ ಸಮಾಜವನ್ನು ಸ್ಥಾಪಿಸಿದ ಪುರಾಣ ವೀರರು ಇರಬಹುದು. ಹೀಗೆ ಪಿತೃಗಳು ತಾವು ತೀರಿ ಹೋದ ಮೇಲೂ ತಮ್ಮ ವಂಶಿಕರ ಬದುಕಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಾರೆ ಎಂಬ ನಂಬಿಕೆಯ ಮೇಲೆ ಪಿತೃಪೂಜೆ ಆಫ್ರಿಕಾದಲ್ಲಿ ಬಹಳ ಸಾಮಾನ್ಯವಾಗಿ ಆಚರಣೆ ಯಲ್ಲಿತ್ತು.

ಉತ್ಸವ ಹಾಗೂ ಪೂಜಾ ಕಾರ್ಯ ನಿರ್ವಹಿಸುವವರೆಂದರೆ ಪೂಜಾರಿಗಳು, ವಂಶ ಅಥವಾ ಪೀಳಿಗೆಯ ಹಿರಿಯರು, ಮಳೆ ಬರಿಸುವವರು ದೇವರ ಆವಾಹಕರು, ಪ್ರವಾದಿಗಳು ಮತ್ತಿತರರು. ಇವರಲ್ಲಿ ತಜ್ಞರು ಎನ್ನಬಹುದಾದವರು ಬಲು ಕಡಿಮೆ. ತಮ್ಮ ವಯಸ್ಸು, ವಂಶಪಾರಂಪರ್ಯ ಅಥವಾ ರಾಜಕೀಯ ಹುದ್ದೆಯ ಕಾರಣದಿಂದ ಅವರಿಗೆ ಈ ಅಧಿಕಾರ ದೊರಕುತ್ತಿತ್ತು. ತಾವು ಮುಖಂಡರಾಗಿರುವ ಸಾಮಾಜಿಕ ಗುಂಪಿನ ತಮ್ಮ ಅವಿಭಕ್ತ ಕುಟುಂಬದ, ಪೀಳಿಗೆಯ, ವಂಶದ, ಸ್ಥಳೀಯ ಗ್ರಾಮ, ಸಮುದಾಯ, ತಮ್ಮ ಪಾಳೆಗಾರಿಕೆ ಯಲ್ಲಿನ ಸಮುದಾಯ ಇವೇ ಮುಂತಾದವುಗಳ ಆಚಾರ ಸಮರ್ಪಕವಾಗಿರುವಂತೆ ನೋಡಿ ಕೊಳ್ಳಲು ಅವರು ಜವಾಬ್ದಾರರು. ಇವರ ಉತ್ಸವಾಧಿಕಾರವು ಅವರ ಜಾತ್ಯತೀತ ಮತ್ತು ಆಂತರಿಕ ಅಧಿಕಾರಕ್ಕೆ ಒಂದು ಮಂಜೂರಾತಿಯಾಗಿರುತ್ತದೆ.

ಪ್ರತಿಯೊಂದು ದೇಶಿ ಆಫ್ರಿಕನ್ ಧರ್ಮದ ಮತ್ತೊಂದು ಮಹತ್ವದ ಅಂಶವೆಂದರೆ ಲೋಕೋತ್ಪತ್ತಿ ಶಾಸ್ತ್ರ-ಇದರಲ್ಲಿ ಬುಡಕಟ್ಟುಗಳ ಆರಂಭ ಮತ್ತು ಅವರ ಆರಂಭದ ವಲಸೆ ಮತ್ತು ಸಾವಿನ ಮೂಲ, ಸಮಾಜದ ಸ್ವರೂಪ, ಹೆಣ್ಣು ಗಂಡುಗಳ ಸಂಬಂಧ, ಬದುಕು ಮತ್ತು ಸತ್ತವರ ಬಗ್ಗೆ ಇತ್ಯಾದಿ ಪ್ರತಿಯೊಂದು ಸಂಸ್ಕೃತಿ ಸೈದ್ಧಾಂತಿಕ ಸಮಸ್ಯೆಗಳನ್ನು ವಿವರಿಸಲಾಗುತ್ತದೆ. ಪುರಾಣಗಳು ಪುಣ್ಯಕತೆಗಳು, ಜನಪದ ಕಥೆಗಳು ಮತ್ತು ಒಗಟುಗಳಲ್ಲಿ ಸಾಮಾಜಿಕ ಮೌಲ್ಯಗಳು ವ್ಯಕ್ತವಾಗುತ್ತವೆ. ಇವುಗಳ ಬಾಹ್ಯ ಅರ್ಥದ ಹಿಂದೆ ಅನೇಕ ಬಾರಿ ಹೊರಗಿನವರಿಗೆ ಬಹುಬೇಗನೇ ಅರ್ಥವಾಗದಂತಹ ಸಾಮಾಜಿಕ ಮತ್ತು ಐತಿಹಾಸಿಕ ಅರ್ಥಗಳು ಅಡಗಿರುತ್ತವೆ. ಜನರು ದುರದೃಷ್ಟಗಳನ್ನು ವಿವರಿಸಿ ಹೇಳಲು ಮತ್ತು ಅದನ್ನು ನಿಯಂತ್ರಿಸಲು ಹಿಂದೆ ಮಾಟ, ಮಾಯಮಂತ್ರಗಳಿಗೆ ಬಲು ಪ್ರಾಧಾನ್ಯ ನೀಡಲಾಗುತ್ತಿತ್ತು. ಮಾಟ ಮತ್ತು ಮಾಯಮಂತ್ರಗಳಲ್ಲಿ ಜನರ ನಂಬಿಕೆ ಕಡಿಮೆಯಾಗುತ್ತಾ ಬಂದಿದ್ದರೂ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಅದಕ್ಕೆ ಇಂದಿಗೂ ಮಹತ್ವವಿದೆ. ನಗರವಾಸಿಗಳು ಮತ್ತು ವಲಸೆ ಬಂದ ಕೂಲಿಗಾರರ ದುರದೃಷ್ಟ ಇತ್ಯಾದಿಗಳನ್ನು ವಿವರಿಸಿ ಹೇಳಲು ಈಗಲೂ ಅದನ್ನು ಬಳಸಲಾಗುತ್ತಿದೆ.

ಕಲೆ

ಆಫ್ರಿಕಾದ ಕಲೆ ಮೊದಲಿಗೆ ಕ್ರಿಯಾತ್ಮಕ ಮತ್ತು ಅವು ಅವರ ನಂಬಿಕೆಗಳ ಪ್ರತೀಕಗಳು. ಹೀಗಾಗಿ ಅವು ಐರೋಪ್ಯ ಕಲಾಪ್ರಕಾರಗಳಿಗಿಂತ ಭಿನ್ನವಾದವು. ಆಫ್ರಿಕನ್ ಕಲೆ ಎಂದರೆ ಇಲ್ಲಿ ಕಪ್ಪು ಜನಾಂಗದ ಕಲೆಯನ್ನು, ಅಂದರೆ ಸಹರಾ ಕೆಳಗಿನ ಆಫ್ರಿಕಾದ ಕಲೆಯನ್ನು, ಅಂದರೆ ಉತ್ತರ ಆಫ್ರಿಕಾದ ಕರೇಶಿಯನ್ ಜನಾಂಗದವರ ಸಂಸ್ಕೃತಿಗಿಂತ ಭಿನ್ನವಾದ ನೀಗ್ರೊ ಮೂಲವಾಸಿಗಳು ಇದ್ದಂತಹ ಭೂಖಂಡದ ಕಲೆಯನ್ನು ಉದ್ದೇಶಿಸಿ ಹೇಳಲಾಗಿದೆ. ಸಹರಾ ಕೆಳಗಿನ ಪ್ರದೇಶಗಳನ್ನು ಈ ಮುಂದಿನ ಭೂಪ್ರದೇಶಗಳಾಗಿ ವಿಂಗಡಿಸುವುದು ಸಾಮಾನ್ಯವಾಗಿ ರೂಢಿ. ಸಹರಾದ ನಿಕಟ ದಕ್ಷಿಣ ಭಾಗದಲ್ಲಿ ಖಂಡದ ಅಗಲಕ್ಕೂ ಹರಡಿಕೊಂಡ ಸೂಡಾನ್‌ನ ಹುಲ್ಲುಗಾವಲಿನ ತೆರೆದ ಬಯಲುಗಳು, ಪಶ್ಚಿಮ ಆಫ್ರಿಕಾದ ಅರಣ್ಯ ಪ್ರದೇಶ ಮತ್ತು ಕಾಡುಗಳು, ಮಧ್ಯ ಆಫ್ರಿಕಾದ ಕಾಂಗೂ ನದಿ ಕಣಿವೆ ಪ್ರದೇಶ, ಪೂರ್ವ ಆಫ್ರಿಕಾದ ಸವನ್ನಾಗಳು, ದಕ್ಷಿಣ ಆಫ್ರಿಕಾದ ಸವನ್ನಾಗಳು ಮತ್ತು ಮರುಭೂಮಿಗಳು, ಈ ಯಾವ ಪ್ರದೇಶದಲ್ಲೂ ಸಮಾನವಾದ ಸಂಸ್ಕೃತಿ ಇಲ್ಲ. ಉದಾಹರಣೆಗೆ ದಕ್ಷಿಣ ಸುಡಾನ್ ಶಿಲ್ಪಕಲಾ ವೈವಿಧ್ಯ ಹಾಗೂ ಶಿಲ್ಪಕೃತಿಗಳಿಗೆ ಪ್ರಸಿದ್ಧವಾದದ್ದು. ಆದರೆ ಪೂರ್ವ ಪ್ರದೇಶದಲ್ಲಿ ಶಿಲ್ಪಕಲೆ ಇಲ್ಲವೇ ಇಲ್ಲ ಎನ್ನಬಹುದು, ಬದಲಾಗಿ ಸಂಗೀತ ಮತ್ತು ಮೌಖಿಕ ಸಾಹಿತ್ಯದಲ್ಲಿ ಇಲ್ಲಿನ ಕಲೆ ಸಮೃದ್ಧವಾಗಿದೆ. ಇಷ್ಟೊಂದು ವೈವಿಧ್ಯವಿದ್ದರೂ ಆಫ್ರಿಕನ್ ಕಲೆಯನ್ನು ಹಲವಾರು ಕಾರಣಗಳಿಂದ ಇಡಿಯಾಗಿ ಚರ್ಚಿಸಬಹುದಾಗಿದೆ. ಒಂದು ಕಾರಣ ಹೀಗಿದೆ: ಬೇರೆ ಬೇರೆ ಜನಾಂಗದ ಕಲಾಕೃತಿಗಳು ಸ್ವರೂಪದಲ್ಲಿ ಬೇರೆ ಬೇರೆಯಾಗಿಯೇ ಇದ್ದರೂ ಜನರ ಸಾಂಸ್ಕೃತಿಕ ಜೀವನದಲ್ಲಿ ಕಲೆ ಹಾಗೂ ಕಲಾವಿದನ ಸಾಂಪ್ರದಾಯಿಕ ಪಾತ್ರ ಇಡೀ ಖಂಡ ದಲ್ಲಿ ಒಂದೇ ತೆರನಾಗಿರುತ್ತದೆ. ಇನ್ನೊಂದು ಕಾರಣವೆಂದರೆ ಆಧುನಿಕ ಆಫ್ರಿಕಾದ ದೇಶಗಳ ಗಡಿಗಳೂ ಮತ್ತು ಆಫ್ರಿಕಾದ ಸಾಂಸ್ಕೃತಿಕ ಗಡಿಗಳೂ ಒಂದೇ ಆಗಿರುವುದಿಲ್ಲ. ಹೀಗಾಗಿ ಇಲ್ಲಿ ಕಲೆಯನ್ನು ಒಂದು ದೇಶದ ಕಲೆ ಎಂದು ಚರ್ಚಿಸದೆ ಒಂದು ಪ್ರದೇಶದ ಕಲೆ ಎಂದು ಚರ್ಚಿಸುವುದು ಅವಶ್ಯಕ.

ಸಹರಾದ ದಕ್ಷಿಣದ ಆಫ್ರಿಕಾದಲ್ಲಿನ ಕಲೆಗಳ ಇತಿಹಾಸ ದೊರಕುವುದು ತೀರ ಅಲ್ಪಸ್ವಲ್ಪ. ಏಕೆಂದರೆ ಆರ್ದ್ರತೆ ಮತ್ತು ಗೆದ್ದಲು ಕಾಟ ಬೇಗ ಹಾಳಾಗುವಂತಹ ವಸ್ತುಗಳನ್ನು ಬಲುಬೇಗ ನಾಶಪಡಿಸುತ್ತದೆ. ನೂರು ವರ್ಷಕ್ಕಿಂತಲೂ ಹಳೆಯದಾದ ಮರದ ಕೆತ್ತನೆಯ ಕೃತಿಯನ್ನು ಕಾಣುವುದು ಬಲು ಅಪರೂಪ. ಹೀಗಿದ್ದರೂ ಇಬನ್ ಬಟುಟಾ ಎಂಬುವನು ಮಾಲಿಯಲ್ಲಿ, ನೈಜರ್ ತಿರುವಿನ ಪ್ರದೇಶದಲ್ಲಿ ಈಗಲೂ ಧರಿಸುವ ಬೋಬೋ ಮುಖ ವಾಡಕ್ಕೆ ಸರಿಸಮನಾದ ಮರದ ಹಕ್ಕಿಯ ಮುಖವಾಡಗಳನ್ನು ಕುರಿತು ೧೩೫೨ರಲ್ಲಿ ಹೇಳುತ್ತಾನೆ. ಕೆಲವು ಆಫ್ರಿಕನ್ ಕಲೆಗಳು ಮನೋರಂಜಕ ಮೌಲ್ಯ ಹೊಂದಿವೆ. ಕೆಲವಕ್ಕೆ ರಾಜಕೀಯ ಅಥವಾ ತಾತ್ತ್ವಿಕ ಮಹತ್ವವಿದೆ. ಕೆಲವು ಆಚಾರ ಸಂಪ್ರದಾಯದ ಸಾಧನಗಳಾಗಿವೆ. ಇನ್ನು ಕೆಲವು ಸ್ಪಷ್ಟ ಸೌಂದರ್ಯ ಮೌಲ್ಯವುಳ್ಳ ವಸ್ತುಗಳಾಗಿವೆ. ಆಫ್ರಿಕಾದ ಕಲೆ ಕೇವಲ ಕಾರ್ಯೋದ್ದೇಶ ಉಳ್ಳದ್ದು. ಯಾವುದೇ ಕಲಾಕೃತಿಯ ಹಿಂದಿನ ಆಶಯ ಆಫ್ರಿಕಾದಲ್ಲಿಯಾಗಲಿ ಇನ್ನೆಲ್ಲಾದರೂ ಆಗಿರಲಿ ಅನಿವಾರ್ಯವಾಗಿ ಸಂಕೀರ್ಣವಾಗಿರುತ್ತದೆ. ಆಫ್ರಿಕಾದ ಕೆತ್ತನೆ ಕೆಲಸದ ಕಲಾಕೃತಿಗಳನ್ನು ಒಂದಿಲ್ಲೊಂದು ವ್ಯಾವಹಾರಿಕ ಬಳಕೆಗೆ ತಯಾರಿಸಲಾಗಿದೆ ಎಂದ ಮಾತ್ರಕ್ಕೆ ಅವು ಅದೇ ಸಮಾಯದಲ್ಲಿ ಸೌಂದರ್ಯಾನುಭೂತಿಯನ್ನೂ ನೀಡುತ್ತವೆ ಎಂಬ ಅಂಶವನ್ನು ಅಲ್ಲಗಳೆಯಲಾಗದು. ಒಂದು ನಿರ್ದಿಷ್ಟ ಆಫ್ರಿಕನ್ ಕಲಾಕೃತಿಯನ್ನು ಒಂದು ನಿರ್ದಿಷ್ಟ ಸ್ಥಳ, ಪ್ರದೇಶ ಅಥವಾ ಕಾಲಮಾನಕ್ಕೆ ಸೇರಿದ್ದು ಎಂದು ಹೇಳಬಹುದಾದಷ್ಟು ಶೈಲಿಯ ಭಿನ್ನತೆ, ರೂಪ, ಸಾಮ್ಯತೆ ಮತ್ತು ಸಾಂಪ್ರದಾಯಿಕತೆ ಕಂಡುಬರುತ್ತದೆ. ಮೊದಲನೆಯದು ಭೂಗೋಳಕ್ಕೆ ಸಂಬಂಧಿಸಿದ್ದು, ಇನ್ನಿತರ ಅಂಶಗಳು ಸಮಾನವಾಗಿದ್ದು, ಬೇರೆ ಬೇರೆ ಪ್ರದೇಶದ ಜನ ಕೃತಿಗಳನ್ನು ಬೇರೆ ಬೇರೆ ರೀತಿಯಲ್ಲಿ ತಯಾರಿಸುತ್ತಾರೆ. ಎರಡನೆಯದು ತಂತ್ರಜ್ಞಾನ; ಇನ್ನು ಕೆಲವು ಪ್ರದೇಶಗಳಲ್ಲಿ ಶೈಲಿಯ ಭಿನ್ನತೆ ಬಳಸಿದ ಸಾಮಗ್ರಿಯನ್ನು ಅವಲಂಬಿಸಿರುತ್ತದೆ. ಮೂರನೆಯದು ಸ್ವೋಪಜ್ಞತೆ; ತಜ್ಞರಾದವರು ಒಬ್ಬನೇ ಕಲಾವಿದನ ಕೃತಿಯನ್ನು ಗುರುತಿಸಬಲ್ಲರು. ನಾಲ್ಕನೆಯದು ಸಂಸ್ಥೆಗಳು. ಏಕೆಂದರೆ ಕಲಾಕೃತಿಗಳ ನಿರ್ಮಿತಿಯು ಒಂದು ನಿರ್ದಿಷ್ಟ ಸ್ಥಳಕ್ಕೆ ವಿಶಿಷ್ಟವಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಭಾವದಿಂದ ಉಂಟಾಗುತ್ತದೆ. ಕಲಾಕೃತಿಗಳನ್ನು ಮಾರಬಹುದು ಮತ್ತು ಅವುಗಳ ಪ್ರತಿ ಕೃತಿಗಳನ್ನು ತಯಾರಿಸಬಹುದು. ಕಲಾವಿದರೂ ಒಂದೂರಿನಿಂದ ಇನ್ನೊಂದಕ್ಕೆ ಪ್ರಯಾಣ ಬೆಳಸುತ್ತಾರೆ. ಸಂಸ್ಥೆಗಳು ಅವುಗಳ ಫಲವಾದ ಕಲಾಕೃತಿಗಳ ಸಮೇತ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಬಹುದು ಅಥವಾ ಹರಡಬಹುದು. ಕೆಲವು ಬಾರಿ ನೆರೆಹೊರೆಯ ಜನರು ಅದರ ನಕಲು ಮಾಡಿರಬಹುದು. ಕೆಲವು ಬಾರಿ ಅವನ್ನು ಕೊಂಡುಕೊಂಡಿರಬಹುದು. ಕೆಲವು ಬಾರಿ ಯುದ್ಧ ಮಾಡಿ ಗೆದ್ದು ಸೂರೆಹೊಡೆದು ಕೊಂಡೊಯ್ದಿರಬಹುದು. ಅಂತಿಮ ಫಲವೇನೆಂದರೆ ಆಫ್ರಿಕನ್ ಕಲೆಯ ಶೈಲಿಯ ಸಂಕೀರ್ಣತೆ ಮತ್ತು ಈ ಕಾರಣದಿಂದಾಗಿ ವರ್ಗೀಕರಣವನ್ನು ಸುಲಭವಾಗಿ ಮಾಡುವುದು ಸಾಧ್ಯವಿಲ್ಲ.