ಭಾಗ ೨
ಯುರೋಪು, ಪಶ್ಚಿಮ ಮತ್ತು ಆಫ್ರಿಕಾ : ಸಂಕಥನಗಳ ಮುಖಾಮುಖಿ

‘… ಇದು ಕಗ್ಗತ್ತಲ ಖಂಡ’

‘… ಇದು ಅಚಾರಿತ್ರಿಕ ಆಫ್ರಿಕಾ’

‘… ಈ ಆಫ್ರಿಕನ್ನರಿಗೆ ಆತ್ಮವಿದೆಯೇ?’

‘… ಈ ಆಫ್ರಿಕನ್ನರಿಗೆ ಮಿದುಳು ಇದೆಯೇ?’

‘… ಈ ಆಫ್ರಿಕನ್ನರ ಮೈ ಚರ್ಮ ಸರಿಯಾಗಿ ಬೆಳೆದಿಲ್ಲವೆಂದು ಕಾಣುತ್ತದೆ’

‘… ಕಪ್ಪುತನ ದೇವರೇ  ಕೊಟ್ಟ ಕರಾಳ ಸ್ಥಿತಿ’

‘… ಮಾನವ ಜನಾಂಗವನ್ನು ಬಿಳಿ, ಹಳದಿ, ಕೆಂಪು ಹಾಗೂ ಕಪ್ಪು ಎಂದು ವಿಂಗಡಿಸಲಾಗಿದೆ.’

-ಇವು ಆಫ್ರಿಕಾದ ವಿರುದ್ಧ ಚರಿತ್ರೆಯಲ್ಲಿ ಸೃಷ್ಟಿಯಾಗಿದ್ದ ಸಂಕಥನಗಳು.

ಅಚೀಬೆಯ ಆಫ್ರಿಕಾ, ಕಾನ್ರಾಡ್‌ನ ಆಫ್ರಿಕಾ

ಇಂಗ್ಲಿಷಿನಲ್ಲಿ ಬರೆಯುವ ಪೋಲೆಂಡಿನ ಕಾದಂಬರಿಕಾರ ಜೋಸೆಫ್ ಕಾನ್ರಾಡ್‌ನ ‘ಹಾರ್ಟ್ ಆಫ್ ಡಾರ್ಕ್‌ನೆಸ್’ ಕಾದಂಬರಿಯಲ್ಲಿ ಎರಡು ನದಿಗಳಿವೆ. ಒಂದು, ಇಂಗ್ಲೆಂಡಿನಲ್ಲಿ ಹರಿಯುವ ಥೇಮ್ಸ್ ನದಿ. ಇನ್ನೊಂದು, ಆಫ್ರಿಕಾದಲ್ಲಿ ಹರಿಯುವ ಕಾಂಗೋ ನದಿ. ಈ ಕಾದಂಬರಿಯ ತಾತ್ವಿಕ ನೋಟದಿಂದಾಗಿ ಈ ನದಿಗಳಿಗೆ ಪರಸ್ಪರ ವಿರುದ್ಧವಾದ ಅರ್ಥಗಳು ಹುಟ್ಟಿಕೊಳ್ಳುವುದನ್ನು ಚಿನುವ ಅಚೀಬೆ ಈ ಕೃತಿಯ ನಿಕಟ ಓದಿನ ಮೂಲಕ ತೋರಿಸಿಕೊಡುತ್ತಾನೆ. ಅಚೀಬೆಯ ಸಾಂಸ್ಕೃತಿಕ ಓದು ತೋರಿಸಿಕೊಡುವಂತೆ, ಈ ಕಾದಂಬರಿಯ ಥೇಮ್ಸ್ ನದಿ ‘ನಾಗರಿಕ’ ಪಶ್ಚಿಮವನ್ನು ಸಂಕೇತಿಸುತ್ತದೆ; ಕಾಂಗೋ ನದಿ ‘ಅನಾಗರಿಕ’ ಆಫ್ರಿಕಾವನ್ನು ಪ್ರತಿನಿಧಿಸುತ್ತದೆ. ಆಫ್ರಿಕಾ ಕುರಿತಂತೆ ಆ ಹೊತ್ತಿಗಾಗಲೇ ಹಲಬಗೆಯ ಸಿದ್ಧಮಾದರಿಗಳನ್ನು ಯುರೋಪ್‌ಕೇಂದ್ರಿತ ಚರಿತ್ರೆ, ವಿಜ್ಞಾನ, ಪ್ರವಾಸ ಕಥನ, ಸಮಾಜಶಾಸ್ತ್ರ ಸೃಷ್ಟಿಸಿತ್ತು. ಅದೇ ಹಾದಿಯಲ್ಲಿ ಆಫ್ರಿಕಾದ ವಿರುದ್ಧ ಯುರೋಪಿಯನ್ ಕಾದಂಬರೀ ರಾಜಕಾರಣದ ಹಲವು ಸೂಕ್ಷ್ಮ ಮುಖಗಳನ್ನು ಅಚೀಬೆಯ ವಿಶ್ಲೇಷಣೆ ತೆರೆದಿಡುತ್ತದೆ. ಅವನ ಪ್ರಕಾರ, ‘ಹಾರ್ಟ್ ಆಫ್ ಡಾರ್ಕ್‌ನೆಸ್’ ಸೃಷ್ಟಿಸುವ ಆಫ್ರಿಕಾ ಯುರೋಪಿಗೆ, ಅಂದರೆ ನಾಗರಿಕತೆಗೆ, ತದ್ವಿರುದ್ಧವಾದ ಜಗತ್ತಾಗಿ ಕಾಣುತ್ತದೆ. ಪಶ್ಚಿಮವನ್ನು ಪ್ರತಿನಿಧಿಸುವ ಥೇಮ್ಸ್ ನದಿ ಪ್ರಶಾಂತವಾಗಿ ಕಂಡರೆ, ಆಫ್ರಿಕಾವನ್ನು ಪ್ರತಿನಿಧಿಸುವ ಕಾಂಗೋ ನದಿಯ ಸ್ತಬ್ಧತೆ ಭಯಾನಕವಾಗಿ ಕಾಣುತ್ತದೆ. ಕಾದಂಬರಿಯ ನಿರೂಪಕನೇ ಈ ಅಂಶವನ್ನು ಸೂಚಿಸುತ್ತಾನೆ: ‘…ಆ ಸ್ತಬ್ಧತೆ ಪ್ರಶಾಂತತೆಯನ್ನು ನೆನಪಿಗೆ ತರುವಂತಿರಲಿಲ್ಲ. ನಿಗೂಢ ಉದ್ದೇಶವೊಂದನ್ನು ಕುರಿತು ರೋದಿಸುತ್ತಿರುವಂತೆ ತೋರುವ ಅತೃಪ್ತ ಶಕ್ತಿಯೊಂದರ ಮೌನ ಅದು. ಅದು ನಿಮ್ಮತ್ತ ಸೇಡಿನಿಂದ ನೋಡುತ್ತದೆ’. ಆಫ್ರಿಕಾವನ್ನು ಭಿತ್ತಿಯಾಗಿ, ಕತೆ ನಡೆಯುವ ರಂಗವಾಗಿ ಬಳಸಿಕೊಳ್ಳುವ ಈ ಕಾದಂಬರಿ ಯಲ್ಲಿ  ಆಫ್ರಿಕನ್ನನನ್ನು ಮನುಷ್ಯನನ್ನಾಗಿ ನೋಡಲು ಒಲ್ಲದ ಧೋರಣೆಯೊಂದು ಸುಪ್ತವಾಗಿ ಕೆಲಸ ಮಾಡುತ್ತಿದ್ದಂತಿದೆ. ಆದ್ದರಿಂದ ಇಲ್ಲಿನ ಆಫ್ರಿಕಾ ಮಾನವೀಯ ಅಂಶ ಗಳಿಲ್ಲದ ಮೆಟಫಿಸಿಕಲ್ ಯುದ್ಧಭೂಮಿಯಂತೆ ಕಾಣುತ್ತದೆ. ಇಲ್ಲಿ ಕಾನ್ರಾಡನ ಕಣ್ಣಿಗೆ ಕಾಣುವುದು ಆದಿಮ ಸ್ಥಿತಿಯಲ್ಲಿರುವ ಆಫ್ರಿಕನ್ ಚೇತನಗಳು ಮಾತ್ರ… ಇದು ಅಚೀಬೆಯ ವಾದದ ಸಾರ.

ಅಚೀಬೆಯ ಪ್ರಕಾರ, ಈ ಕಾದಂಬರಿಯ ಪ್ರತಿಮೆಗಳು ಹಾಗೂ ರೂಪಕಗಳು ಜನಾಂಗೀಯವಾದಿ ಪಶ್ಚಿಮದ ಚಿತ್ತ ಅಥವಾ ಮಾನಸಿಕ ರಚನೆ(psyche)ಯಿಂದ ಹುಟ್ಟಿದಂಥವು. ಆದ್ದರಿಂದ ಇದು ಮೂಲತಃ ಕಾನ್ರಾಡ್ ಪ್ರತಿಭೆ ಸೃಷ್ಟಿಸಿದ ಆಫ್ರಿಕಾ ಅಲ್ಲ; ಇದು ಪಶ್ಚಿಮದ ಪೂರ್ವಗ್ರಹ ಸೃಷ್ಟಿಸಿದ ಆಫ್ರಿಕಾ:

(ಇದು)ಪಶ್ಚಿಮದ ಕಲ್ಪನೆಯಲ್ಲಿರುವ ಆಫ್ರಿಕಾದ ಪ್ರತಿಬಿಂಬ. ಕಾನ್ರಾಡ್ ತನ್ನ ಅದ್ಭುತ ಪ್ರತಿಭಾಶಕ್ತಿಯಿಂದ ಅದನ್ನು ಪುನರ್‌ಸೃಷ್ಟಿಸುತ್ತಾನೆ, ಅಷ್ಟೆ. ಪಶ್ಚಿಮಕ್ಕೆ ತನ್ನ ಸಂಸ್ಕೃತಿಯ ಅಸ್ಥಿರತೆಗಳನ್ನು ಕುರಿತು ಆಳದ ಆತಂಕ ಗಳಿವೆ. ಆಳವಾದ ಮನಃಶಾಸ್ತ್ರೀಯ ವಿಶ್ಲೇಷಣೆಯಿಂದ ಮಾತ್ರ ಅರಿಯ ಬಹುದಾದ ಕಾರಣಗಳಿವು. ಆದ್ದರಿಂದಾಗಿ ಸದಾ ತನ್ನನ್ನು ತಾನು ಆಫ್ರಿಕಾಕ್ಕೆ ಹೋಲಿಸಿಕೊಂಡು ತನ್ನ ಸಂಸ್ಕೃತಿ ಉತ್ತಮವಾದದ್ದೆಂದು ಸಮಾಧಾನ ಮಾಡಿಕೊಳ್ಳಬೇಕಾದ ಅಗತ್ಯಗಳು ನಿರಂತರವಾಗಿ ಪಶ್ಚಿಮಕ್ಕಿರುವುವೆಂದು ತೋರುತ್ತದೆ.

ಅಚೀಬೆ ಕಾನ್ರಾಡನ ಕೃತಿಯನ್ನು ಓದುವ ರೀತಿಯಲ್ಲೇ ಸಮಸ್ಯೆಗಳಿರುವಂತೆ ಕಾಣುತ್ತದೆ. ಕಾದಂಬರಿಯ ನಿರೂಪಕ ಮಾರ್ಲೋನ ನಿಲುವುಗಳನ್ನು ಕಾನ್ರಾಡನ ನಿಲುವುಗಳೆನ್ನುವುದು ಕಾದಂಬರಿಯ ಅಸಮರ್ಪಕವಾದ ಓದಿನಂತೆ ಕೂಡ ತೋರುತ್ತದೆ. ‘ಹಾರ್ಟ್ ಆಫ್ ಡಾರ್ಕ್‌ನೆಸ್’ ಕೃತಿಯನ್ನು ‘ಸಾಮ್ರಾಜ್ಯವಾದದ ಉಗ್ರ ವಿಮರ್ಶೆಯ ರೂಪಕವಾಗಿ’ ‘ಸಂಪೂರ್ಣ ಜ್ಞಾನೋದಯ ಪಡೆದ ಯುರೋಪಿಯನ್ನನಿಗೂ ಆಫ್ರಿಕನ್ನರನ್ನು ಮಾನವ ಜೀವಿಗಳನ್ನಾಗಿ ಕಾಣಲು ಅಸಾಧ್ಯವಾಗುವುದನ್ನು ಸೂಕ್ಷ್ಮವಾಗಿ ಶೋಧಿಸುವ ಕಾದಂಬರಿಯಾಗಿ’ ಓದುವ ಸಾಧ್ಯತೆಗಳಿವೆ. ಹೀಗಾಗಿ, ಅಚೀಬೆ ಈ ಕಾದಂಬರಿಯ ಅರ್ಥಸಾಧ್ಯತೆಗಳನ್ನು ಸೀಮಿತಗೊಳಿಸುವಂತೆ ಕಾಣುತ್ತದೆ. ಕಾನ್ರಾಡನ ಸಾಮ್ರಾಜ್ಯ ವಿರೋಧೀ ತಾತ್ತ್ವಿಕ ನಿಲುವುಗಳನ್ನು ಕುರಿತು ಬರೆಯುತ್ತಾ ಎಲಿಯಟ್ ‘ವ್ಯವಸ್ಥೆ, ಸಾಮ್ರಾಜ್ಯ ಹಾಗೂ ಜನಾಂಗ ವನ್ನು ಕಿಪ್ಲಿಂಗ್ ಸಮರ್ಥಿಸುತ್ತಿದ್ದರೆ, ಕಾನ್ರಾಡ್ ಈ ಮೂರಕ್ಕೂ ವಿರುದ್ಧವಾಗಿದ್ದ’ ಎನ್ನುತ್ತಾನೆ.

ಆದರೆ ಅಚೀಬೆಯ ಪ್ರತಿಕ್ರಿಯೆಯನ್ನು ಒಂದು ಸಂಸ್ಕೃತಿಯ ಪ್ರತಿಕ್ರಿಯೆಯನ್ನಾಗಿ ನೋಡಿದರೆ, ಅಚೀಬೆ ಕಾದಂಬರಿಯನ್ನು ಓದುವ ರೀತಿಗೂ ವಿಶಾಲ ಅರ್ಥಗಳು ಹುಟ್ಟಿ ಕೊಳ್ಳುತ್ತವೆ. ‘ಕಾನ್ರಾಡನ ಕಾದಂಬರಿಯಲ್ಲಿರುವುದು ಕಾನ್ರಾಡನ ಆಫ್ರಿಕಾ ಅಲ್ಲ’ ಎಂಬ ಅಚೀಬೆಯ ಮಾತಿನ ಹಿನ್ನೆಲೆಯಲ್ಲಿ ನೋಡಿದರೆ, ಅಚೀಬೆಯ ಪ್ರತಿಕ್ರಿಯೆಯಲ್ಲಿರುವುದೂ ಅಚೀಬೆಯ ಪ್ರತಿಕ್ರಿಯೆಯಲ್ಲ; ಅದು ಆಫ್ರಿಕಾದ ಪ್ರತಿಕ್ರಿಯೆ. ಕಾದಂಬರಿಕಾರನಾಗಿ ಕಾನ್ರಾಡನ ಮಹತ್ವವನ್ನು ಒಪ್ಪಿಕೊಂಡರೂ ಈ ಕೃತಿಯ ಶ್ರೇಷ್ಠತೆ ಕುರಿತು ಅಚೀಬೆಗೆ ಅನುಮಾನಗಳಿವೆ. ಕಾರಣ, ಕಾದಂಬರಿಯ ತುಂಬ ಕಪ್ಪು, ಕಪ್ಪುತನ ಹಾಗೂ ಆಫ್ರಿಕಾ ಕುರಿತಂತೆ ಕಾದಂಬರಿಕಾರನ ಅಸಹನೆ, ಅಸಹ್ಯ, ಜಿಗುಪ್ಸೆಗಳು ಸ್ಥಾಯಿಯಾಗಿವೆ. ಇದು ಕಾದಂಬರಿಯ ಪ್ರಧಾನ ದೃಷ್ಟಿಕೋನವೇ ಆಗಿಬಿಟ್ಟಿದೆ ಎನ್ನುತ್ತಾ ‘… a black figure stood up. Strode on black legs waving black arms’ ಎಂಬ ವಾಕ್ಯ ಕುರಿತು ಅಚೀಬೆಯ ಪ್ರತಿಕ್ರಿಯೆ:

ಕಪ್ಪು ಮನುಷ್ಯನೊಬ್ಬ ಮೇಲೆದ್ದು, ವೇಗವಾಗಿ ಕಪ್ಪು ಹೆಜ್ಜೆ ಹಾಕುತ್ತಾ ಬರುವಾಗ ಬಿಳಿಯ ಕೈಗಳನ್ನು ಮೇಲೆತ್ತಿ ಬೀಸುತ್ತಾನೆಂದು ಯಾರಾದರೂ ಊಹಿಸುತ್ತಾರೆಯೆ? ಇದು ಕಾನ್ರಾಡನಿಗೆ ನೀಗ್ರೋಗಳನ್ನೂ ಕಪ್ಪನ್ನೂ ಕುರಿತಂತೆ ಇದ್ದ ವಿಚಿತ್ರ ಪೂರ್ವಗ್ರಹಕ್ಕೊಂದು ಉದಾಹರಣೆ.

ಕಾನ್ರಾಡನಲ್ಲಿ ಕಾಣುವ ಆಫ್ರಿಕಾ ಕುರಿತ ಅಸಹನೆ ಹಾಗೂ ಅವನ ಕಾದಂಬರಿಯಲ್ಲಿ ಆಫ್ರಿಕನ್ನನ ನಿರ್ಮಾನವೀಕರಣವನ್ನು ಚರ್ಚಿಸುತ್ತಾ ಜೊನಾಹ್ ರಾಸ್ಕಿನ್ ಬರೆಯುತ್ತಾನೆ:

ಭ್ರಷ್ಟತೆ ಮತ್ತು ಕೇಡಿನ ಎರಡು ಮೂಲಗಳನ್ನು ಕಾನ್ರಾಡ್ ಹುಡುಕುತ್ತಾನೆ. ಒಂದು ಘಟ್ಟದಲ್ಲಿ ಈ ಎರಡಕ್ಕೂ ಸಾಮ್ರಾಜ್ಯವಾದವೇ ಮೂಲ ಕಾರಣವೆಂದು ಸೂಚಿಸುವಂತೆ ತೋರುವ ಕಾನ್ರಾಡ್, ಕೊನೆಗಳಿಗೆಯಲ್ಲಿ ಅದಕ್ಕೆ ಕಾರಣ ಕಪ್ಪು ಮನುಷ್ಯ ಎನ್ನುತ್ತಾನೆ… ಕಾನ್ರಾಡನಿಗೆ ಕಪ್ಪು ಮನುಷ್ಯನೆಂದೆ ಪರಕೀಯ, ನಿಗೂಢ, ನಂಬಿಕೆಗೆ ಅರ್ಹನಲ್ಲದವನು… ಕಪ್ಪುತನವೆಂದರೆ ದುಷ್ಟತನ.

ಡೇವಿಡ್ ಕ್ಯಾರೋಲ್ ಕೂಡ ಕಾನ್ರಾಡ್ ಆಫ್ರಿಕಾ ಕುರಿತ ಕ್ಲೀಷೆಗಳಿಗೆ ದಟ್ಟವಾದ ರೂಪ ಕೊಡುವುದನ್ನು ಚರ್ಚಿಸುತ್ತಾನೆ:

ಇದು ಥಟ್ಟನೆ ಸೂರ್ಯ ಮುಳುಗುವ, ಹದ್ದುಗಳ, ಕರಿನೀರಿನ ಜ್ವರದ ಆಫ್ರಿಕಾ. ಇಲ್ಲಿ ಉರಿಯುವ ಸೂರ್ಯನನ್ನು ಏಕಾಏಕಿ ಕವಿಯುವ ಮಂಕು, ಎದೆ ನಡುಗಿಸುವ ಸ್ತಬ್ಧತೆ. ಇದು ಅರ್ಥವಿಲ್ಲದ, ಆಕಾರವಿಲ್ಲದ, ಇಲ್ಲಿ ನಡೆಯುವ ಒಂದೊಂದು ಘಟನೆಗಳ ನಡುವೆ ಪರಸ್ಪರ ಸಂಬಂಧವೇ ಇಲ್ಲದ ಆಫ್ರಿಕಾ.

‘ಈ ಬಗೆಯ ಕಲಾಕೃತಿಗಳಲ್ಲಿ ಅಡಗಿರುವ ಜನಾಂಗೀಯವಾದ ನಾಜೀವಾದಕ್ಕಿಂತ ಭೀಕರವಾದದ್ದು’ ಎನ್ನುವ ಅಚೀಬೆ ಕಾನ್ರಾಡನ ಕೃತಿಯಲ್ಲಿ ಸುಪ್ತವಾಗಿರುವ ಜನಾಂಗೀಯ ವಾದಕ್ಕೆ ಹಲವು ಉದಾಹರಣೆಗಳನ್ನು ಕೊಡುತ್ತಾ, ಕೊನೆಗೆ ಈ ನಿಲುವನ್ನು ತಲುಪುತ್ತಾನೆ:

ಲೇಖಕನೊಬ್ಬ ದೃಶ್ಯಗಳನ್ನೂ, ಘಟನೆಗಳನ್ನೂ, ಅವುಗಳ ಪರಿಣಾಮಗಳನ್ನೂ ದಾಖಲಿಸುವಂತೆ ನಟಿಸುತ್ತಲೇ, ವಾಸ್ತವದಲ್ಲಿ ತನ್ನ ಭಾವುಕ ಶಬ್ದಜಾಲ ಹಾಗೂ ಇತರ ಅಗ್ಗದ ತಂತ್ರಗಳ ಬಾಂಬ್ ದಾಳಿಯ ಮೂಲಕ ಓದುಗನನ್ನು ವಶೀಕರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆಂದರೆ, ಅಲ್ಲಿ ಶೈಲಿಯ ಪ್ರಶ್ನೆಗಿಂತ ಬೇರೇ ಯಾವುದೋ ಉದ್ದೇಶವೇ ಇರುವಂತೆ ಕಾಣುತ್ತದೆ.

ಪಶ್ಚಿಮದ ಕಾದಂಬರಿಯ ಇಂಥ ಉದ್ದೇಶಗಳನ್ನು ಮುಖಾಮುಖಿಯಾಗುವ, ಹಾಗೂ ಶತಶತಮಾನಗಳ ಇತಿಹಾಸವುಳ್ಳ ಸಮುದಾಯವೊಂದು ಸಂಸ್ಕೃತಿಯೇ ಇಲ್ಲದೆ ಬದುಕಿದೆ ಎಂದು ಸೂಚಿಸುವ ‘ಸಂಸ್ಕೃತಿಹೀನ ಆಫ್ರಿಕಾ’ ಎಂಬ ಪಶ್ಚಿಮದ ಬಾಲಿಶ ಕಲ್ಪನೆಗೆ ಉತ್ತರ ನೀಡುವ ತುಡಿತಗಳು ಆಫ್ರಿಕನ್ ಕಾದಂಬರಿಯ ಆರಂಭದ ಘಟ್ಟದಲ್ಲಿ  ಪ್ರಧಾನವಾಗಿದ್ದವು. ಇದನ್ನೇ ಆಫ್ರಿಕಾದ ಸಾಹಿತ್ಯ ಚರಿತ್ರಕಾರರು ‘ಅಥೆಂಟಿಕ್ (ಅಧಿಕೃತ ಅಥವಾ ನಿಜ) ಆಫ್ರಿಕಾದ ಹುಡುಕಾಟ’ ಎಂದು ಕರೆದರು.

ಆಫ್ರಿಕಾ ಕುರಿತ ಪಶ್ಚಿಮದ ಸಿದ್ಧಮಾದರಿಗಳು ಕಾನ್ರಾಡನಂಥ ಮಹತ್ವದ ಲೇಖಕನಲ್ಲೇ ಸುಪ್ತವಾಗಿ ವ್ಯಕ್ತವಾಗುತ್ತವೆ ಎಂದಮೇಲೆ ಉಳಿದ ಜನಾಂಗೀಯವಾದಿ ಲೇಖಕರ ಮಾದರಿ ಗಳನ್ನು ಊಹಿಸುವುದು ಸುಲಭ. ಜನಪ್ರಿಯ ಕಾದಂಬರಿಗಳ ಜೊತೆಜೊತೆಗೆ, ಯುರೋಪ್ ಸೃಷ್ಟಿಸಿದ ಆಫ್ರಿಕನ್ ಚರಿತ್ರೆ, ವಸಾಹತು ಅಧಿಕಾರಿಗಳ ದಾಖಲೆಗಳು, ಪ್ರವಾಸ ಕಥನಗಳು ಹಾಗೂ ಅದ್ಭುತರಮ್ಯ ಕತೆಗಳಲ್ಲಿ ಈ ಮಾದರಿಗಳು ಮತ್ತೆ ಮತ್ತೆ ಪ್ರತ್ಯಕ್ಷವಾಗುತ್ತಿದ್ದವು. ವಿಕಾಸವಾದಿಗಳು, ವಿಜ್ಞಾನಿಗಳು, ಹಾಗೂ ಮಾನವಶಾಸ್ತ್ರಜ್ಞರ ಸಿದ್ಧಾಂತಗಳು ಈ ಮಾದರಿ ಗಳನ್ನು ಮತ್ತಷ್ಟು ಅಧಿಕೃತಗೊಳಿಸುತ್ತಿದ್ದವು. ಇವೆಲ್ಲದರ ಹಿನ್ನೆಲೆಗೆ ‘ಕಪ್ಪು’ ಹಾಗೂ ‘ಬಿಳುಪು’ಗಳ ನಡುವಣ ವೈರುಧ್ಯದ ಸಾಂಕೇತಿಕ ಅರ್ಥಗಳ ಸುದೀರ್ಘ ಚರಿತ್ರೆಯಿತ್ತು. ಮೆರಿಯನ್ ಬರ್ಗಮ್ ಬರೆಯುತ್ತಾರೆೊ:

ಕಪ್ಪು-ಬಿಳುಪಿನ ಧೃವೀಕರಣ ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಇಂದಿಗೂ ಇತಿಹಾಸದುದ್ದಕ್ಕೂ ಬಂದಿರುವ ಸಾಂಕೇತಿಕ ಅರ್ಥವನ್ನೇ ಉಳಿಸಿಕೊಂಡು ಬಂದಿದೆ. ಬಿಳುಪಿಗೆ ‘ಒಳ್ಳೆಯ’, ‘ಸುಂದರ’,‘ಪವಿತ್ರ’ಮುಂತಾದ ಒಳ್ಳೆಯ ಅರ್ಥಗಳನ್ನೇ ಸಾಂಪ್ರದಾಯಿಕ ದೃಷ್ಟಿಕೋನ ಸೂಚಿಸುತ್ತದೆ. ಅದೇ ರೀತಿ, ಕಪ್ಪು ಎಂದರೆ ‘ಕೆಟ್ಟ’, ‘ದುಷ್ಟ’, ‘ಕಾಳರಾತ್ರಿ’, ‘ಕುರೂಪ’, ‘ನರಕ’, ‘ದುರಾದೃಷ್ಟ’ಮೊದಲಾದ ಕೆಟ್ಟ ಅರ್ಥಗಳೂ ಇದೇ ಸಾಂಪ್ರದಾಯಿಕ ನೆಲೆಯಿಂದಲೇ ಹೊರಡುತ್ತವೆ. ಈ ಕಪ್ಪು-ಬಿಳುಪಿನ ಸಾಂಕೇತಿಕ ದ್ವಂದ್ವ ಆಫ್ರಿಕನ್ ಸಂಸ್ಕೃತಿಗಳೂ ಸೇರಿದಂತೆ ಹಲವು ಸಂಸ್ಕೃತಿಗಳಲ್ಲಿದೆ. ಕಪ್ಪು-ಬಿಳುಪಿನ ಮುಖಾಮುಖಿ ಬೈಬಲ್ಲಿನಲ್ಲಿ ‘ಸರ್ವಶಕ್ತನು ಬೆಳಕನ್ನು ಕತ್ತಲೆಯಿಂದ ಬೇರ್ಪಡಿಸುವ’ಪ್ರಯತ್ನದಲ್ಲೂ ಕಾಣುತ್ತದೆ. ಇಂಥ ದೃಷ್ಟಿಕೋನಗಳು ಬೆಳೆಯುತ್ತಾ ಬೆಳೆಯುತ್ತಾ ಕೊನೆಗೆ ಆಫ್ರಿಕನ್ನರ ಅಜ್ಞಾನ, ಅಂಧಕಾರಗಳಿಗೂ, ಮೂರ್ತಿಪೂಜೆಗೂ ಅವರ ಚರ್ಮದ ಬಣ್ಣಕ್ಕೂ ಸಂಬಂಧವಿದೆಯೆಂದು ಸಿದ್ಧಮಾಡಲೆತ್ನಿಸುತ್ತವೆ. ಈ ನಿಲುವುಗಳ ತಾರ್ಕಿಕ ಮುಂದುವರಿಕೆಯಿಂದಾಗಿ ಕಪ್ಪು ಆಫ್ರಿಕನ್ನರೆಂದರೆ ಸೈತಾನನ ಮಕ್ಕಳು ಎಂಬ ಹಣೆಪಟ್ಟಿಯನ್ನು (ಆಫ್ರಿಕನ್ನರಿಗೆ)ಹಚ್ಚಲಾಗುತ್ತದೆ;ಬೈಬಲ್ಲಿನಲ್ಲಿ ಬರುವ ‘ನೋಹನ*ಶಾಪ’ವನ್ನು ‘ಕಪ್ಪುತನ ದೇವರೇ ಕೊಟ್ಟ ಕರಾಳ ಸ್ಥಿತಿ’ಎಂದು ಈ ಇಪ್ಪತ್ತನೆಯ ಶತಮಾನದಲ್ಲೂ ಅರ್ಥೈಸಲಾಗುತ್ತದೆ. ನೋಹನ ಶಾಪದ ವೈಚಿತ್ರ್ಯವೇನೆಂದರೆ, ಮೊದಮೊದಲು ಆ ಶಾಪವನ್ನು ಕಪ್ಪು ಮೈ ಬಣ್ಣ ಉಂಟಾದ ಬಗೆಯನ್ನು ವಿವರಿಸಲು ಬಳಸಿಕೊಳ್ಳಲಾಗುತ್ತಿತ್ತು.ನಂತರ ಕಪ್ಪುಜನರ ಗುಲಾಮಗಿರಿಯ ಸಮರ್ಥನೆಗೂ ಅದನ್ನು ಬಳಸಿಕೊಳ್ಳುವುದು ಆರಂಭವಾಯಿತು.’

ಇಂಥ ಕಪ್ಪು-ಬಿಳುಪಿನ ಆದಿಮ ರೂಪಗಳು ಆಫ್ರಿಕನ್ ಲೋಕದರ್ಶನದಲ್ಲೂ ಇದ್ದವು, ನಿಜ. ಯೊರೂಬಾ ನಂಬಿಕೆಯಲ್ಲೇ ದುರಾದೃಷ್ಟವೆಂದರೆ ‘ಕಪ್ಪು’ ಅದೃಷ್ಟ ಎಂಬ, ಅಥವಾ ‘ಬಿಳಿ’ ಯೊರೂಬಾ ಭೂಮಿತಾಯಿ ಎಂಬ ಕಲ್ಪನೆಗಳೂ ಇವೆ. ‘ಕಪ್ಪು-ಬಿಳುಪಿನ ಸಾಂಕೇತಿಕ ಅರ್ಥಗಳನ್ನು ಚರ್ಮಕ್ಕೂ ಅನ್ವಯಿಸುವುದು ಮಾತ್ರ ವಸಾಹತುಶಾಹಿ ಚಾರಿತ್ರಿಕ ಸನ್ನಿವೇಶದ ಸೃಷ್ಟಿ’ ಎನ್ನುತ್ತಾನೆ ಲೂಯಿಸ್ ಜೇಮ್ಸ್. ಹೀಗೆ ಸಾಂಕೇತಿಕ ಅರ್ಥಗಳನ್ನು ನಾಗರಿಕತೆಗಳಿಗೆ ಅನ್ವಯಿಸಿದ್ದರಿಂದ ಹುಟ್ಟಿದ ಆಫ್ರಿಕಾದ ಚಿತ್ರಕ್ಕೆ ಹಲವು ಜ್ಞಾನಶಾಖೆಗಳ ಸಂಕಥನಗಳ ಸಮರ್ಥನೆಗಳು ದೊರೆತವು. ಹೆಗೆಲ್ ಕೊಡುವ ಚರಿತ್ರೆಯಿಲ್ಲದ ಆಫ್ರಿಕಾ ಇದು: ‘ಚಾರಿತ್ರಿಕ ಚಲನೆಯನ್ನು ಪ್ರದರ್ಶಿಸಬಲ್ಲ ಚಳುವಳಿಯಾಗಲೀ, ಬೆಳವಣಿಗೆಯಾಗಲೀ ಆಫ್ರಿಕಾದಲ್ಲಿ ಕಾಣುತ್ತಿಲ್ಲ…(ಈಗ) ನಾವು ಕಾಣುವ ಆಫ್ರಿಕಾ ಅಚಾರಿತ್ರಿಕವಾದ, ಅಪ್ರಬುದ್ಧ ಚೇತನದ, ಇನ್ನೂ ಪ್ರಕೃತಿಯ ಸ್ಥಿತಿಯಲ್ಲೇ ಇರುವ ಆಫ್ರಿಕಾ.’

ಯುರೋಪಿಯನ್ ಪುನರುಜ್ಜೀವನ ಘಟ್ಟದ ಬಹುಮುಖ್ಯ ಸಿದ್ಧಾಂತಗಳಲ್ಲೊಂದಾದ ಡಾರ್ವಿನ್ನನ ವಿಕಾಸವಾದೀ ಸಿದ್ಧಾಂತವೂ ಆಫ್ರಿಕನ್ನನ ಕನಿಷ್ಠತೆ ಕುರಿತಂತೆ ಈಗಾಗಲೇ ಇದ್ದ ಸಿದ್ಧಾಂತಗಳನ್ನು ಸಮರ್ಥಿಸುವಂತೆ ಹಲವರಿಗೆ ಕಂಡಿತು. ಹದಿನೆಂಟನೆಯ ಶತಮಾನದ ‘ನೋಬಲ್ ಸ್ಯಾವೇಜ್’ನ ಕಲ್ಪನೆ ಪ್ರಕೃತಿಯ ಸ್ಥಿತಿಯಲ್ಲಿ ಇರುವ ಜೀವಿಯ ಚಿತ್ರವನ್ನು ಸೃಷ್ಟಿಸಿದರೆ, ಆ ನಂತರ ಬಂದ ಸಿದ್ಧಾಂತಗಳು ನೀಗ್ರೋನನ್ನು ‘ಸ್ಯಾವೇಜ್’ ಎಂದು ಪರಿಗಣಿಸಿ ಮಾನವನ ವರ್ಗೀಕರಣದಲ್ಲಿ ಕೊನೆಯ ಸ್ಥಾನದಲ್ಲಿಟ್ಟವು: ಡೇವಿಡ್ ಕ್ಯಾರೊಲ್ ಹೇಳುವಂತೆ ‘ಹದಿನೆಂಟನೆಯ ಶತಮಾನದಲ್ಲಿ ಮಾನವ ಜನಾಂಗವನ್ನು ಬಿಳಿ, ಹಳದಿ ಕೆಂಪು ಹಾಗೂ ಕಪ್ಪು ಜನಾಂಗಗಳನ್ನಾಗಿ ವಿಂಗಡಿಸಿದ ಲಿನಿಯನ್ ವರ್ಗೀಕರಣದಂತೆ, ಹತ್ತೊಂಬತ್ತನೆಯ ಶತಮಾನದ ಡಾರ್ವಿನ್ ವಿಕಾಸವಾದವೂ ಆಫ್ರಿಕನ್ನರನ್ನು ಕಟ್ಟಕಡೆಯ ಸ್ಥಾನದಲ್ಲಿಟ್ಟಿತು. ಈ ಆಫ್ರಿಕನ್ನರು ಹಿಂದುಳಿದಿರಲು ಅವರು ಕನಿಷ್ಠರಾಗಿರುವುದೇ ಕಾರಣ ಎಂದು ಅದು ವಾದಿಸಿತು.’

ಡಾರ್ವಿನ್ ಸಿದ್ಧಾಂತದ ಕೇಂದ್ರ ಪರಿಕಲ್ಪನೆಗಳಾದ ‘ಶಕ್ತಿಶಾಲಿಯ ಉಳಿವು’, ‘ಸಹಜ ಆಯ್ಕೆ’ಮತ್ತು ಡಾರ್ವಿನ್‌ವಾದವನ್ನು ಆಧರಿಸಿ ಯುರೋಪು ರೂಪಿಸಿಕೊಂಡ ‘ಪ್ರಕೃತಿಯ ವಿಶೇಷ ಸವಲತ್ತುಪಡೆದ ಜನಾಂಗ’ ಇವುಗಳನ್ನು ಚರ್ಚಿಸುತ್ತಾ, ಎ.ಜಿ.ಆರ್ನಾಲ್ಡ್ ‘ಡಾರ್ವಿನ್‌ನ ವಿಕಾಸವಾದೀ ಸಿದ್ಧಾಂತವೂ ಯುರೋಪಿಯನ್ ಜನಾಂಗೀಯವಾದದ ವಿಕಾಸದ ಒಂದು ತಾರ್ಕಿಕ ಬೆಳವಣಿಗೆಯೇ’ ಎನ್ನುತ್ತಾನೆ. ಇದು ಕೊಂಚ ಉತ್ಪ್ರೇಕ್ಷೆಯ ಮಾತಾದರೂ, ಚರಿತ್ರೆ, ವಿಜ್ಞಾನ ಹಾಗೂ ಇತರ ಮಾನವಿಕಶಾಸ್ತ್ರಗಳ ಸಂಕಥನಗಳು ಪ್ರತಿಪಾದಿಸುತ್ತಿದ್ದ ಆಫ್ರಿಕಾದ ಮಾದರಿಗಳು ಆಫ್ರಿಕೇತರರ ಮನಸ್ಸಿನಲ್ಲಿ ಆಳವಾಗಿ ಬೇರೂರಿಬಿಟ್ಟಿದ್ದವು: ವಿ.ಜೆ.ಕಿಯರ‌್ನನ್ ಸೂಚಿಸುವಂತೆ ‘ಕೆಲವೊಮ್ಮೆ ಲಿವಿಂಗ್‌ಸ್ಟೋನ್ ನಂಥವರು ಕೂಡ ಸಮರ್ಥಿಸುವ, ಆಫ್ರಿಕನ್ನರೆಂದರೆ ನಿಕೃಷ್ಟರೆಂಬ ನಂಬಿಕೆ ಹಾಗೂ ವಾದಗಳೆರಡೂ ಎಷ್ಟು ಆಳವಾಗಿ ಬೇರೂರಿದ್ದವೆಂದರೆ, ಸ್ಪೇನೀಯರು ಮತ್ತು ಬೋಯರ್ ಜನಾಂಗದವರು ಈ ಸ್ಥಳೀಯರಿಗೆ (ಆಫ್ರಿಕನ್ನರಿಗೆ) ಆತ್ಮವಿದೆಯೇ ಎಂದು ಪ್ರಶ್ನಿಸುತ್ತಿದ್ದರು. ಆಧುನಿಕ ಯುರೋಪಿಯನ್ನರಿಗಂತೂ ಆಫ್ರಿಕನ್ನರಿಗೆ ಮೆದುಳಿರುವುದರ ಬಗೆಗೇ ಅನುಮಾನವಿತ್ತು; ಅಕಸ್ಮಾತ್ ಮೆದುಳಿದ್ದರೂ ಅದು ಪ್ರೌಢ ಹಂತಕ್ಕೆ ಬೆಳೆಯುವುದರ ಬಗೆಗಂತೂ ತೀರಾ ಅನುಮಾನವಿತ್ತು, ಆಫ್ರಿಕನ್ನರ ಬೌದ್ದಿಕ ಬೆಳವಣಿಗೆ ಬಾಲ ಹಂತದಲ್ಲೇ ನಿಂತುಬಿಟ್ಟಿದೆಯೆಂದು ವಾದಿಸುವ ಅನೇಕ ಜನಪ್ರಿಯ ಸಿದ್ಧಾಂತಗಳಿದ್ದವು.

ಈ ಬಗೆಯ ಜನಪ್ರಿಯ ಸಿದ್ಧಾಂತಗಳಿಂದಾಗಿ ಆಫ್ರಿಕೇತರರಲ್ಲಿ ಆಫ್ರಿಕನ್ನರ ಬಗ್ಗೆ ಹುಟ್ಟುತ್ತಿದ್ದ ಧೋರಣೆಗಳನ್ನು ಚರ್ಚಿಸುತ್ತಾ, ಫ್ಯಾನನ್ ‘ಆಲ್ಜೀರಿಯನ್ನರು ಒಬ್ಬರನ್ನೊಬ್ಬರು ಕೊಲ್ಲುವುದನ್ನು ನೋಡಿದರೆ ಅವರ ಮೈ ಚರ್ಮ ಸರಿಯಾಗಿ ಬೆಳೆದಿಲ್ಲವೆಂದು ಕಾಣುತ್ತದೆ’ ಎಂಬ ರೀತಿಯ ಪ್ರತಿಕ್ರಿಯೆಗಳು ಮನೋವೈದ್ಯರ ಸಮ್ಮೇಳನವೊಂದರಲ್ಲಿ ಹುಟ್ಟಿದ್ದನ್ನು ಉಲ್ಲೇಖಿಸುತ್ತಾನೆ. ಇದೇ ರೀತಿ, ಆಫ್ರಿಕನ್ನರು ತಮ್ಮ ಕಿವಿಯ ಹಾಲೆಗಳನ್ನು(frontal lobes) ಬಳಸಿಕೊಳ್ಳುವುದೇ ಕಡಿಮೆಯೆಂಬ ಭಾವನೆ ಮಧ್ಯ ಆಫ್ರಿಕಾದಲ್ಲಿ ವ್ಯಾಪಕವಾಗಿತ್ತು. ಎಡ್ವರ್ಡ್ ಟೈಸನ್ ಎಂಬ ಬ್ರಿಟಿಷ್ ವಿಜ್ಞಾನಿ ಮಂಡಿಸಿದ ‘ಪಿಗ್ಮೀಸ್’ ಎಂದರೆ ಮಾನವ ಮತ್ತು ಮಂಗಗಳ ನಡುವಣ ‘ತಪ್ಪಿದ ಕೊಂಡಿ’ ಎಂಬ ಸಿದ್ಧಾಂತ ಕೂಡ ಈ ನೆಲೆಗಳಿಂದಲೇ ಹೊರಟಿತ್ತು. ಇಲ್ಲಿನ ಸಿದ್ಧಾಂತಗಳಲ್ಲಿ ಕೆಲವು ಯುರೋಪಿನ ಪುನರುಜ್ಜೀವನ ಹಾಗೂ ಜ್ಞಾನೋದಯ ಯುಗದ ನಂತರ ಹುಟ್ಟಿದವು ಎಂಬ ಅಂಶ ಪಶ್ಚಿಮ ತನ್ನ ನಿರ್ಣಾಯಕ ವೈಚಾರಿಕ ಜಿಗಿತಗಳ ಘಟ್ಟಗಳಲ್ಲಿ ಕೂಡ ಆಫ್ರಿಕಾವನ್ನು ಕುರಿತ ಸಿದ್ಧ ಆಲೋಚನಾ ಕ್ರಮವನ್ನು ಬದಲಿಸಿಕೊಳ್ಳಲಿಲ್ಲ ಎಂಬುದಕ್ಕೆ ಐತಿಹಾಸಿಕ ಸಾಕ್ಷಿಯಂತಿದೆ.

ಆಧುನಿಕ ಪುರಾಣಗಳ ಹಣಾಹಣಿ

ಯುರೋಪ್‌ಕೇಂದ್ರಿತ ಅಥವಾ ಪಶ್ಚಿಮ ಕೇಂದ್ರಿತ ಅಪ್ರಜ್ಞೆ ಕೆಲವು ಸಿದ್ಧ ಮಾದರಿಗಳು ಹಾಗೂ ಸಿದ್ಧ ಸಂಕಥನಗಳ ಮೂಲಕ ಮಾತ್ರ ಆಫ್ರಿಕಾವನ್ನು ಅರಿಯಲು ಹಾಗೂ ವ್ಯಾಖ್ಯಾನಿಸಲು ಸಾಧ್ಯವಾದದ್ದನ್ನು ಹಿಂದಿನ ಭಾಗದಲ್ಲಿ ಚರ್ಚಿಸಲಾದ ಎಲ್ಲ ಅಂಶಗಳೂ ಹೇಳುತ್ತವೆ. ಈ ಹಿನ್ನೆಲೆಯಲ್ಲಿ, ‘ನನ್ನೆದುರಿಗಿರುವ ಮುಖ್ಯ ಪ್ರಶ್ನೆಯೆಂದರೆ, ಆದಿಯಿಂದಲೂ ಆಫ್ರಿಕಾ ಕುರಿತ ಈ ಧೋರಣೆ ಆಫ್ರಿಕನ್ನರನ್ನೂ, ಆಫ್ರಿಕಾವನ್ನೂ ನಿರ್ಮಾನವೀಕರಣಗೊಳಿಸಿದ್ದು, ಹಾಗೂ ಅದು ಈಗಲೂ ಮುಂದುವರಿಯುತ್ತಿರುವುದು’ ಎನ್ನುತ್ತಾನೆ ಅಚೀಬೆ. ಈ ಮಾತಿನಲ್ಲಿ ಆರಂಭದ ಘಟ್ಟದ ಆಫ್ರಿಕನ್ ಕಾದಂಬರಿಕಾರರ ಮನೋಲೋಕವನ್ನು ಯುರೋಪಿಯನ್ ಮನಸ್ಸು ಸೃಷ್ಟಿಸಿದ ಯುರೋಪ್ ಹಾಗೂ ಆಫ್ರಿಕಾದ ಮಾದರಿಗಳು ಪ್ರಧಾನವಾಗಿ ಆಕ್ರಮಿಸಿಕೊಂಡದ್ದರ ಸೂಚನೆಯಿದೆ. ಆದರೆ ಮೇಲಿನ ಅನೇಕ ಸಂಕಥನಗಳನ್ನು ಹುಟ್ಟುಹಾಕಿದ್ದ ಪಶ್ಚಿಮದಲ್ಲೇ ಈ ಬಗ್ಗೆ ಭಿನ್ನಮತ ಆರಂಭವಾಗಿತ್ತು. ಈ ಸಿದ್ಧಾಂತಗಳಾಗಲೇ ಫ್ರಾಯ್ಡಾ ಹಾಗೂ ಯೂಂಗರ ಯುಗದಲ್ಲಿ ಪ್ರಶ್ನಿತವಾಗುತ್ತಿದ್ದವು. ಆ ಕಾಲದಲ್ಲಿ ಹುಟ್ಟಿದ ಆಫ್ರಿಕನ್ ಕಾದಂಬರಿ ಮುಖ್ಯವಾಗಿ ಮುಖಾಮುಖಿಯಾಗಲು ಹೊರಟಿದ್ದು ಕಾದಂಬರಿಯ ಮೂಲಕವೇ ಪಶ್ಚಿಮ ಸೃಷ್ಟಿಸಿದ್ದ ಆಫ್ರಿಕಾದ ಚಿತ್ರವನ್ನು. ಕಾರಣ, ಮೇಲೆ ಚರ್ಚಿತವಾದ ಸಿದ್ಧಾಂತಗಳು ಹಾಗೂ ಕಲ್ಪನೆಗಳು ಸೃಜನಶೀಲ ಸೃಷ್ಟಿಯಾದ ಸಾಹಿತ್ಯವೂ ಮೀರಲುೊದುಃಸ್ಸಾಧ್ಯವಾದ ಮಿತಿಗಳನ್ನು ನಿರ್ಮಿಸಿದ್ದವು: ಒಬಿಚೀನಾ ಗುರುತಿಸುವಂತೆ,

ಯುರೋಪಿಯನ್ ಸಾಹಿತಿಗಳು ವಸ್ತುನಿಷ್ಠ ದೃಷ್ಟಿಕೋನದಿಂದ ಆಫ್ರಿಕನ್ ವಸ್ತುವನ್ನು ಶೋಧಿಸಹೊರಟಾಗಲೂ, ಆಗಲೇ ಚಾಲ್ತಿಯಲ್ಲಿದ್ದ ಆಫ್ರಿಕಾ ಕುರಿತ ಪುರಾಣಗಳು ಅವರ ಕಲ್ಪನಾಶಕ್ತಿಯನ್ನು ಹೇಗೆ ನಿಯಂತ್ರಿಸುತ್ತಿದ್ದ ವೆಂದರೆ, ತಮ್ಮ ಅನುಭವನಿಷ್ಠ ಸೃಷ್ಟಿಯ ಹಾದಿಯನ್ನೇ ಬಿಟ್ಟು ಯುರೋಪಿನ ಜನಪ್ರಿಯ ಕಲ್ಪನೆ ಯಾವುದನ್ನು ಆಫ್ರಿಕತ್ವ ಅಥವಾ ಆಫ್ರಿಕನ್ ಬದುಕು ಎಂದು ಗುರುತಿಸುತ್ತಿತ್ತೋ ಅಂಥ ಜನಪ್ರಿಯ ಕಲ್ಪನೆಯ ಹಳ್ಳಕ್ಕೇ ಬಿದ್ದುಬಿಡುತ್ತಿದ್ದರು.

ಯುರೋಪಿಯನ್ ಕಾದಂಬರಿಕಾರರ ಇಂಥ ಸೃಜನಶೀಲ ಮಿತಿಗಳಿಗೆ ಆಫ್ರಿಕಾ ಕುರಿತಂತೆ ಸಿದ್ಧ ನೆಲೆಯಿಂದ ಹೊರಡುತ್ತಿದ್ದ ಧೋರಣೆಗಳು, ಆಫ್ರಿಕನ್ ವಾಸ್ತವವನ್ನು ಆ ಲೇಖಕರು ಹೊರ ನಿಂತು ನೋಡಿ ಸೃಷ್ಟಿಸಿದ ಆಧುನಿಕ ಪುರಾಣಗಳು ಹಾಗೂ ಕೆಲವು ಲೇಖಕರ ಸಂದರ್ಭದಲ್ಲಿ ವಸಾಹತು ಸನ್ನಿವೇಶ ಇವೆಲ್ಲ ಕಾರಣವಾಗಿದ್ದವು. ವಸಾಹತುಕಾರ ಹಾಗೂ ಸ್ಥಳೀಯರ ನಡುವಣ ಸಂಬಂಧದ ಸ್ವರೂಪದಿಂದ ಹುಟ್ಟಿದ ವಸಾಹತುವಾದೀ ತಾತ್ತ್ವಿಕತೆ ಇಂಥ ಕೃತಿಗಳ ತಾತ್ತ್ವಿಕತೆಯನ್ನೂ ರೂಪಿಸಿರಬಹುದಾದ ಸಾಧ್ಯತೆಗಳಿದ್ದವು. ಆಫ್ರಿಕಾ ಎಂಬ ‘ಕಗ್ಗತ್ತಲ ಖಂಡ’ವನ್ನು ಸಾಹಸದಿಂದ ಭೇದಿಸುವ ಅಥವಾ ‘ಕತ್ತಲ ಆಫ್ರಿಕಾ’ಕ್ಕೆ ‘ಬೆಳಕು ತರುವ’ ಎರಡು ನೆಲೆಗಳು ಇಂಥ ಕಾದಂಬರಿಗಳಲ್ಲಿ ಪ್ರಧಾನವಾಗಿ ಕಾಣುತ್ತವೆ. ಎಲ್ಸ್‌ಪೆತ್ ಹಕ್ಸ್ಲೀ, ರಾಬರ್ಟ್ ರೂರಕ್, ರೈಡರ್ ಹ್ಯಾಗಾರ್ಡ್ ಮುಂತಾದವರ ಕಾದಂಬರಿಗಳ ಆಫ್ರಿಕನ್ ಪಾತ್ರಗಳ ಸಿದ್ಧ ಮಾದರಿಗಳನ್ನು ಕುರಿತು ನುಗುಗಿ ಬರೆಯುತ್ತಾನೆ:

ರೈಡರ್ ಹ್ಯಾಗಾರ್ಡ್‌ನ ಕೃತಿಯಲ್ಲಿರುವ ಆಫ್ರಿಕನ್ ಪಾತ್ರಗಳು ದೈನೇಸಿಯಾಗಿ ಬಿಳಿಹಲ್ಲು ಕಿರಿಯುತ್ತಾ ತಮ್ಮ ಬಿಳಿಯ ಒಡೆಯನ ಕೃಪಾದೃಷ್ಟಿಗಾಗಿ ಕಣ್ಣಗಲಿಸಿ ನಿಂತಿರುತ್ತವೆ, ಅಥವಾ ಬಿಳಿಯ ಉದ್ಧಾರಕನನ್ನು ಕೊಲ್ಲಲು ಕತ್ತಲಲ್ಲಿ ಹೊಂಚು ಹಾಕುತ್ತಿರುವ ಅಮಾನುಷ ನೀಚ ಪಾತ್ರಗಳಾಗಿರುತ್ತವೆ. ….. ಇಂಥ ಕಾದಂಬರಿಗಳಲ್ಲಿ ಒಳ್ಳೆಯ ಆಫ್ರಿಕನ್ನನೆಂದರೆ ಯುರೋಪಿಯನ್ ವಸಾಹತುಕಾರನೊಂದಿಗೆ ಶಾಮೀಲಾದವನು; ಆಫ್ರಿಕನ್ ನೆಲವನ್ನೂ, ಆಫ್ರಿಕನ್ನರನ್ನೂ ವಸಾಹತುಕಾರ ತನ್ನ ನಿಯಂತ್ರಣದಲ್ಲಿರಿಸಿಕೊಳ್ಳಲು ಸಹಾಯ ಮಾಡುವವನು. ದುಷ್ಟ ಆಫ್ರಿಕನ್ನನೆಂದರೆ, ತನ್ನ ನೆಲವನ್ನು ಕಬಳಿಸುತ್ತಿರುವ ವಿದೇಶೀಯನನ್ನೂ ಅವನ ಆಕ್ರಮಣವನ್ನೂ ವಿರೋಧಿಸು ವವನು.

ಮೂಲತಃ ಜನಾಂಗೀಯವಾದೀ ಧೋರಣೆಯಿಂದ ಹೊರಡದ ಯುರೋಪಿಯನ್ ಲೇಖಕರು ಕೂಡ ತಾವು ಬಲ್ಲ ಅಥವಾ ಕಂಡುಕೊಂಡ ಮನಃಶಾಸ್ತ್ರೀಯ ಅಥವಾ ಸಮಾಜ ಶಾಸ್ತ್ರೀಯ ತತ್ತ್ವವೊಂದನ್ನು ಸಿದ್ಧಮಾಡಲು ಆಫ್ರಿಕಾದ ಭೂಮಿಕೆಯನ್ನು ಮಾತ್ರ ಬಳಸಿಕೊಳ್ಳುತ್ತಿದ್ದರು; ಭಯಾನಕದ ಅಥವಾ ನಿಗೂಢತೆಯ ಭಿತ್ತಿಗಾಗಿ ಆಫ್ರಿಕಾವನ್ನು ಸೃಷ್ಟಿಸುತ್ತಿದ್ದರು; ಅಥವಾ ಪಶ್ಚಿಮದ ಸಂಸ್ಕೃತಿ ಇತರ ಸಮಾಜಗಳಲ್ಲಿ ತರುವ ಬದಲಾವಣೆ ಗಳನ್ನು ಕುರಿತ ಥೀಸಿಸ್ ಕಾದಂಬರಿಗಳಿಗಾಗಿ ಆಫ್ರಿಕಾ ಬಳಕೆಯಾಗುತ್ತಿತ್ತು. ಪಶ್ಚಿಮದ ಮನಸ್ಸು ಆಫ್ರಿಕನ್ ಅನುಭವವನ್ನು ಗ್ರಹಿಸುವ ರೀತಿ ಕುರಿತು ‘ಥಿಂಗ್ಸ್ ಫಾಲ್ ಅಪಾರ್ಟ್’ ಕಾದಂಬರಿಯ ಕೊನೆಯಲ್ಲಿ ವ್ಯಂಗ್ಯದ ಸನ್ನಿವೇಶವೊಂದಿದೆ. ಇಬೋ ಸಮಾಜದ ನಾಯಕ ನಾದ ಒಕಾಂಕೋನ ಆತ್ಮಹತ್ಯೆ ಹಾಗೂ ಇಬೋ ಸಂಸ್ಕೃತಿಯ ವಿಘಟನೆಯ ದುರಂತವನ್ನು ಕಾದಂಬರಿಯ ನಿರೂಪಕ ವಿಷಾದದ ದನಿಯಲ್ಲಿ ನಿರೂಪಿಸುತ್ತಿರುವಾಗ, ಒಕಾಂಕೋನ ಶವ ತೂಗಾಡುವಲ್ಲಿಗೆ ಬಂದ ಇಂಗ್ಲಿಷ್ ಜಿಲ್ಲಾಧಿಕಾರಿ ತಾನು ಬರೆಯಲಿರುವ ‘ದಿ ಪ್ಯಾಸಿಫಿ ಕೇಶನ್ ಆಫ್ ದಿ ಪ್ರಿಮಿಟಿವ್ ಟ್ರೈಬ್ಸ್ ಆಫ್ ದಿ ಲೋಯರ್ ನೈಜಿರ್’ ಪುಸ್ತಕದಲ್ಲಿ ಒಕಾಂಕೋನ ಸಾವಿಗೆ ಒಂದು ಪ್ಯಾರಾವನ್ನು ಮೀಸಲಿಡಲು ನಿರ್ಧರಿಸುತ್ತಾನೆ. ಹೀಗೆ ಪಶ್ಚಿಮದ ಮಾದರಿಗಳು ಆಫ್ರಿಕಾ ಕುರಿತು ಸರಳ ಗ್ರಹಿಕೆಗಳನ್ನು ಅಥವಾ ವಿಕೃತ, ನಿಕೃಷ್ಟ, ಕರುಣಾಜನಕ ಚಿತ್ರಗಳನ್ನು ಅಥವಾ ಅದ್ಭುತ ರಮ್ಯದ ಚಿತ್ರಗಳನ್ನು, ಅಥವಾ ಹಗುರವಾದ ಸಿದ್ಧಾಂತಗಳನ್ನು ಮಂಡಿಸುತ್ತಿದ್ದವು. ಇಂಥ ಕೃತಿಗಳು ಉಳಿದೆಲ್ಲ ಸಾಮಾಜಿಕ ವಿಜ್ಞಾನಗಳು ಪ್ರತಿಪಾದಿಸುತ್ತಿದ್ದ ಸಿದ್ಧಾಂತಗಳಿಗಿಂತ ಪರಿಣಾಮಕಾರಿಯಾಗಿ ಹಾಗೂ ವ್ಯಾಪಕವಾಗಿ ಯುರೋಪಿಯನ್ ಶಾಲೆಗಳಲ್ಲಿ ಪಠ್ಯಗಳಾಗಿ, ಮಧ್ಯಮವರ್ಗದ ಜನಪ್ರಿಯ ಕಾದಂಬರಿ ಗಳಾಗಿ ಯುರೋಪಿಯನ್ ನೋಟಕ್ರಮಗಳನ್ನು ನಿಯಂತ್ರಿಸುತ್ತಿದ್ದವು. ಈ ಕೃತಿಗಳು ವಸಾಹತು ಆಫ್ರಿಕಾದಲ್ಲಿ ಹೊಸ ಶಾಲೆಗಳ ಮೂಲಕ ಆಫ್ರಿಕಾದ ನವಸಾಕ್ಷರ ವರ್ಗದ ನೋಟಕ್ರಮವನ್ನೂ ನಿಯಂತ್ರಿಸಲಾರಂಭಿಸಿದವು. ಆಫ್ರಿಕನ್ ಅನುಭವವನ್ನು ಯುರೋಪಿ ಯನ್ ಕಣ್ಣುಗಳ ಮೂಲಕ ಅರಿಯಬೇಕಾದ ವಿರೋಧಾಭಾಸದ ಸನ್ನಿವೇಶವನ್ನು ಆಫ್ರಿಕಾದಲ್ಲಿ ಇಂಗ್ಲಿಷ್ ಶಿಕ್ಷಣ ಪಡೆದ ಮೊದಲ ಜನಾಂಗ ಎದುರಿಸಬೇಕಾಯಿತು. ‘ಆಫ್ರಿಕಾ ಒಂದು ಕಗ್ಗತ್ತಲ ಖಂಡ’ ಎಂಬ ಪಠ್ಯಪುಸ್ತಕಗಳ ವರ್ಣನೆ ಮೂಲತಃ ಪಶ್ಚಿಮದ ಗ್ರಹಿಕೆಯಿಂದ ಉಂಟಾದ ಒಂದು ನಿರ್ಮಿತಿ ಎಂಬುದನ್ನು ಜಗತ್ತಿನ ವಿವಿಧ ಶಾಲಾ ಕಾಲೇಜುಗಳ ಪಠ್ಯಪುಸ್ತಕ ರಚನಕಾರರು ಇವತ್ತಿಗೂ ಅರಿಯಲು ಸಾಧ್ಯವಾಗಿಲ್ಲ. ಹೀಗಿರುವಾಗ ಆಫ್ರಿಕಾದಲ್ಲಿ ಇಂಗ್ಲಿಷ್ ಅಕ್ಷರಜ್ಞಾನ ಪಡೆದ ಮೊದಲ ತಲೆಮಾರಿನ ಮಕ್ಕಳ ಮನಸ್ಸನ್ನು ಈ ಬಗೆಯ ವರ್ಣನೆಗಳು ಹೇಗೆ ಆಕ್ರಮಿಸಿರಬಹುದು, ಪ್ರಭಾವಿಸಿರಬಹುದು ಎಂಬುದನ್ನು ಸುಲಭವಾಗಿ ಊಹಿಸಬಹುದು.

‘ಒಂದು ಪುರಾಣವನ್ನು ಎದುರಿಸುವ ಅತ್ಯುತ್ತಮ ಮಾರ್ಗವೆಂದರೆ ಹೊಸ ಪುರಾಣಗಳನ್ನು ಸೃಷ್ಟಿಸುವುದು ಅಥವಾ ಅರ್ಥಪೂರ್ಣವಾದ ಪುರಾಣಗಳಿಗೆ ಮರುಜೀವ ಕೊಡುವುದು’ ಎಂದು ಅಶೀಶ್ ನಂದಿ ಭಾರತೀಯ ನಿರ್ವಸಾಹತೀಕರಣವನ್ನು ಚರ್ಚಿಸುವಾಗ ಹೇಳು ತ್ತಾರೆ. ಯುರೋಪ್‌ಕೇಂದ್ರಿತ ಯುರೋಪಿಯನ್ ಪುರಾಣ ಮತ್ತು ಆಫ್ರಿಕನ್ ಪುರಾಣಕ್ಕೆ ಪ್ರತಿಯಾಗಿ, ಆಫ್ರಿಕಾಕೇಂದ್ರಿತ ಯುರೋಪಿಯನ್ ಪುರಾಣ ಮತ್ತು ಆಫ್ರಿಕನ್ ಪುರಾಣ ಸೃಷ್ಟಿಯೇ ಉತ್ತರ ಎಂಬುದನ್ನು ಆಫ್ರಿಕನ್ ಕಾದಂಬರಿಯ ಆರಂಭದ ಘಟ್ಟ ಗ್ರಹಿಸಿತು. ಅಮೋಸ್‌ಟುಟುವೋಲನಂಥ ಕಾದಂಬರಿಕಾರರು ಅಪ್ರಜ್ಞಾಪೂರ್ವಕವಾಗಿ ಆರಂಭಿಸಿದ್ದ ಈ ಆಫ್ರಿಕನ್ ಪುರಾಣದ ಸೃಷ್ಟಿಯನ್ನು ಅಚೀಬೆ, ನುಗುಗಿ ಹಾಗೂ ಷೋಯಿಂಕಾ ಹೆಚ್ಚು ಆಳವಾದ ತಾತ್ತ್ವಿಕ ನೆಲೆಗಟ್ಟಿನಿಂದ ಆರಂಭಿಸಿದರು.

ಈ ಹಿನ್ನೆಲೆಯಲ್ಲಿ, ಇಂಗ್ಲಿಷ್ ಸಾಹಿತ್ಯದ ಜನಾಂಗೀಯವಾದೀ ಪರಿಭಾಷೆ ಹಾಗೂ ಜನಪ್ರಿಯ ಸಂಕೇತಗಳ ದಬ್ಬಾಳಿಕೆಯ ಎದುರು ಚಿನುವ ಅಚೀಬೆ ತಾನು ಕಾದಂಬರಿ ಬರೆಯಲಾರಂಭಿಸಿದ್ದು ‘ಜಾಯ್ಸ ಕ್ಯಾರಿಯ ‘ಮಿಸ್ಟರ್ ಜಾನ್ಸನ್’ ಕಾದಂಬರಿಗೆ ಪ್ರತಿಯಾಗಿ’ ಎಂದಾಗ ಕಾದಂಬರಿ ಪ್ರಕಾರಗಳ ಮುಖಾಮುಖಿ ಹಾಗೂ ಎರಡು ಸಂಸ್ಕೃತಿಗಳ ಮುಖಾಮುಖಿಯ ಸೂಚನೆಗಳು ಈ ಮಾತಿನಲ್ಲಿದ್ದವು. ‘ಜಾಯ್ಸಕ್ಯಾರಿಯ ಕತೆ ನಾವು ಹೇಳಲೇಬೇಕಾದ ಕತೆಯನ್ನು ಹೇಳುವಂತೆ ನನ್ನನ್ನು ಒತ್ತಾಯಿಸಿತು’ ಎಂದು ಅಚೀಬೆ ಇನ್ನೊಂದು ಸಂದರ್ಭದಲ್ಲಿ ಬರೆಯುತ್ತಾನೆ.

ಆದರೆ ರಾಬರ್ಟ್ ರೂರಕ್ ಅಥವಾ ರೈಡರ್ ಹ್ಯಾಗಾರ್ಡ್‌ರಂತೆ ಜಾಯ್ಸಕ್ಯಾರಿ ಜನಾಂಗೀಯವಾದೀ ಲೇಖಕನಲ್ಲ. ಜೊನಾ ರಾಸ್ಕಿನ್ ಗುರುತಿಸುವಂತೆ, ಈತ ‘ನೋಬಲ್ ಸ್ಯಾವೇಜ್’ನ ಆಫ್ರಿಕನ್ ಸಿದ್ಧ ಮಾದರಿಯನ್ನು ಬದಲಿಸುವ ಆಶಯದಿಂದ ಕಾದಂಬರಿ ಬರೆಯಹೊರಟವನು’. ಜೊತೆಗೆ, ಉದಾರವಾದೀ ಮಾನವತಾವಾದೀ ವರ್ಗಕ್ಕೆ ಸೇರುವ ಕಾದಂಬರಿಕಾರ. ಆದರೆ ವಸಾಹತು ಸಂದರ್ಭದಲ್ಲಿ ಆ ಮಾನವತಾವಾದೀ ಕರುಣೆಯೂ ಮೂಲತಃ ವಸಾಹತುವಾದೀ ನೆಲೆಯಿಂದಲೇ ಹುಟ್ಟುವುದಕ್ಕೆ ಕ್ಯಾರಿಯ ಕಾದಂಬರಿ ಸಾಕ್ಷಿಯಂತಿದೆ. ಆದ್ದರಿಂದಲೇ ಈ ಕಾದಂಬರಿಯಲ್ಲಿರುವುದೂ ಆಫ್ರಿಕನ್ ವ್ಯಕ್ತಿತ್ವದ ರಮ್ಯೀಕರಣ ಹಾಗೂ ಇಂಥ ರಮ್ಯೀಕರಣವೂ ನಿರ್ಮಾನವೀಕರಣದ ಇನ್ನೊಂದು ಮುಖ. ಈ ಬಗೆಯ ರಮ್ಯೀಕರಣದ ಮಾದರಿಯಲ್ಲಿರುವ ಪಶ್ಚಿಮದ ಉದಾರವಾದವನ್ನು ‘ಸಾಮ್ರಾಜ್ಯವಾದೀ ಸಿಹಿ ಸಿದ್ಧಾಂತ’ ಎನ್ನುವ ನುಗುಗಿ ಇಂಥ ಸಿದ್ಧ ಮಾದರಿಗಳನ್ನು (ಕ್ಯಾರೆನ್ ಬ್ಲಿಕ್ಸನಳ ಕೃತಿಗಳ ಸಂದರ್ಭದಲ್ಲಿ) ವಿವರಿಸುತ್ತಾನೆ:

(ಇಂಥ ಲೇಖಕರಿಗೆ)ಆಫ್ರಿಕನ್ನರೆಂದರೆ ವಿಚಿತ್ರ ಮಾನವ ಪ್ರಾಣಿಗಳು; ಪ್ರಾಣಿ ಸಹಜವಾದ ಗುಣಗಳೆಲ್ಲವನ್ನೂ ಉಳಿಸಿಕೊಂಡವರು. ಅಲೌಕಿಕ’ ‘ಆಧ್ಯಾತ್ಮಿಕ ಹಾಗೂ ನಿಗೂಢ ಶಕ್ತಿಯುಳ್ಳವರು’. ನಾವು ಯುರೋಪಿನಲ್ಲಿ ಕಳೆದುಕೊಂಡಿರುವ ಮುಗ್ಧತೆಯನ್ನು ಉಳಿಸಿಕೊಂಡಿರುವವರು.

ಜಾಯ್ಸ ಕ್ಯಾರಿಯ ಕಾದಂಬರಿಯ ಜಾನ್ಸನ್ ಇಂಥ ಒಂದು ಮಾದರಿ. ಅವನು ಜನತೆಯ ಕವಿ, ಹಾಡುಗಾರ. ಕಾದಂಬರಿಯ ನಿರೂಪಕ ಪ್ರಜ್ಞೆ ಅವನ ‘ಸಹಜತೆ’ಯನ್ನೂ ಹಾಸ್ಯಪ್ರಜ್ಞೆಯನ್ನೂ ಆರಾಧಿಸುತ್ತದೆ. ಆದರೆ ಜಾನ್ಸನ್ ಯುರೋಪಿಯನ್ನನ ಪೋಷಣೆಯಲ್ಲಿ ಬೆಳೆಯಬೇಕಾದ ‘ಮುಗ್ಧ’ ಕೂಡ. ಕಾದಂಬರಿಯ ಇನ್ನೊಂದು ಕೇಂದ್ರ ಪಾತ್ರವೆಂದರೆ ನಿರ್ಮಾಣಗೊಳ್ಳುತ್ತಿರುವ ರಸ್ತೆ. ವಸಾಹತು ಅಧಿಕಾರಿ ರುಡ್‌ಬೆಕ್ ನಿರ್ಮಿಸುತ್ತಿರುವ ಈ ರಸ್ತೆಗೆ ಜಾನ್ಸನ್ನನದೇ ನಾಯಕತ್ವ. ಆದರೆ ರಸ್ತೆ ಭ್ರಷ್ಟಾಚಾರವನ್ನೂ ತರುತ್ತದೆ. ಜಾನ್ಸನ್ ಭ್ರಷ್ಟನಾಗುತ್ತಾನೆ. ಗೊಲಪ್ ಎಂಬಾತನನ್ನು ಕೊಂದು ತಾನು ಜೈಲು ಸೇರುತ್ತಾನೆ. ಮರಣ ದಂಡನೆ ಖಾತ್ರಿಯಾದಾಗ ಜಾನ್ಸನ್ನನ ಕೊನೆಯ ಆಸೆಯೊಂದೇ: ತನ್ನ ಒಡೆಯನಾದ ರುಡ್‌ಬೆಕ್‌ನ ಗುಂಡಿನಿಂದ ಸಾಯಬೇಕು.

-ಇದು ಕಾದಂಬರಿಯ ಸಾರ. ಕಾದಂಬರಿಯನ್ನು ಚರ್ಚಿಸುತ್ತಾ ನುಗುಗಿ ಹೇಳುತ್ತಾನೆ: ‘ಮಿಸ್ಟರ್ ಜಾನ್ಸನ್ ಎಂದರೆ ತಮಾಷೆಯ, ದಟ್ಟ ಜೀವನ ಪ್ರೀತಿಯ, ಮಗುವಿನಂತೆ ಬೆಚ್ಚಗಿನ ಪ್ರೀತಿ ತೋರುವ ಆಫ್ರಿಕನ್. ಅವನ ಎದೆಯಾಳದ ಏಕಮಾತ್ರ ಆಸೆಯೆಂದರೆ, ಯುರೋಪಿಯನ್ ಜಿಲ್ಲಾಧಿಕಾರಿಯ ಗುಂಡಿಗೆ ಬಲಿಯಾಗಬೇಕೆನ್ನುವುದು. ಇಲ್ಲಿ ಜಿಲ್ಲಾಧಿಕಾರಿ ಹಾಗೂ ಜಾನ್ಸನ್ ಇಬ್ಬರನ್ನೂ ಓದುಗ ಮೆಚ್ಚಿಕೊಳ್ಳಬೇಕೆಂಬುದು ಕಾದಂಬರಿಯ ನಿರೂಪಕನ ಉದ್ದೇಶ. ಕಡೆಗೂ ಅವರಿಬ್ಬರ ನಡುವೆ ಸಂಬಂಧವೊಂದು ನಿರ್ಮಾಣವಾಗಿದೆ. ಆದರೆ ಅದು ಎಂಥ ಸಂಬಂಧವೆಂದರೆ, ಕುದುರೆ ಹಾಗೂ ಅದರ ಸವಾರನ ನಡುವಣ ಸಂಬಂಧ; ಅಂದರೆ ಗುಲಾಮ ಹಾಗೂ ಒಡೆಯರ ಸಂಬಂಧ’.

ಇದು ಕಾದಂಬರಿ ನೀಡುವ ಜಾನ್ಸನ್‌ನ ಚಿತ್ರವಾದರೆ, ಕಾದಂಬರಿಯ ಕ್ರಿಯೆ ನಡೆಯುವ ಆಫ್ರಿಕಾದ ಊರಿನ ಚಿತ್ರ ಇದು:

ಫಾದಾ ಪಶ್ಚಿಮ ಸೂದಾನಿಗೆ ಸೇರಿದ ಒಂದು ಸಾಮಾನ್ಯವಾದ ಊರು. ಈ ಊರಲ್ಲಿ ಸೌಂದರ್ಯವಾಗಲೀ ಸೌಲಭ್ಯಗಳಾಗಲೀ, ಆರೋಗ್ಯವಾಗಲೀ ಕಾಣುವುದಿಲ್ಲ… ಊರಿನ ಜನ… ಇಲಿಗಳಂತೆ ಬದುಕುತ್ತಾರೆ; ಅದ್ಭುತವಾದ ಕತೆಗಳು, ತತ್ವಗಳು, ಹೊಸ ಜ್ಞಾನ, ನಾಗರಿಕತೆಯ ಹಲವು ಸೆಣಸಾಟಗಳು ಅವರ ತಲೆಯ ಮೇಲೆ ಹಾಯ್ದುಹೋಗುತ್ತಿರುತ್ತವೆ. ಆದರೆ ಊರಿನ ಜನಕ್ಕೆ ಅದರ ಕಲ್ಪನೆಯೂ ಇಲ್ಲ….

…..ಕುತೂಹಲ ಹಾಗೂ ಉತ್ಸಾಹ ತುಂಬಿದ ಇಲ್ಲಿನ ಹರೆಯದ ಹುಡುಗರು ನೋಡುನೋಡುತ್ತಿದ್ದಂತೆಯೇ ಮುದುಕರಾಗುತ್ತಾರೆ…. ಈ ಊರಿನ ಕೊಳಕು, ದುರ್ಗಂಧ, ಬೆತ್ತಲೆ ಮೈಯಲ್ಲಿ ಕೀವು ತುಂಬಿದ ಗಾಯಗಳು, ತಿರುಚಿಕೊಂಡ ಕಾಲು ಕೈಯಿನ, ಗುಡಾಣವಾದ ಹೊಟ್ಟೆಯ, ಹರ್ನಿಯಾ ಬಂದ ಮಕ್ಕಳನ್ನು ನೋಡಿದ್ದೇ ಆದರೆ, ಬ್ರಿಟಿಷ್ ಮಕ್ಕಳು ಹೆದರಿ ಸತ್ತೇಬಿಡಬಹುದೇನೋ. ಭೂಮಿಯ ಮೇಲೆ ಕಜ್ಜಿ ಗಾಯದಂತೆ ಇದ್ದ ಊರು ಅದು….

ಈ ಚಿತ್ರಕ್ಕೆ ಪ್ರತಿಯಾಗಿ ರುಡ್‌ಬೆಕ್‌ನ ಹೆಂಡತಿ ಸಿಲಿಯಾಳ ಕಣ್ಣಲ್ಲಿ ಫಾದಾ ಎಂದರೆ ಇನ್ನೂ ‘ಕೆಟ್ಟುಹೋಗದ ಆದಿವಾಸಿಗಳ ತಾಣ’ ಎಂಬ ರಮ್ಯೀಕರಣವೂ ಕಾದಂಬರಿಯಲ್ಲಿದೆ. ಇಂಥ ಊರಿಗೆ ರುಡ್‌ಬೆಕ್ ನಿರ್ಮಿಸಬಯಸುವ ರಸ್ತೆ ಕಾದಂಬರಿಯ ಕೇಂದ್ರ ರೂಪಕ. ಆಧುನಿಕ ಸಾಹಿತ್ಯದ ಚಿರಪರಿಚಿತ ರೂಪಕವಾದ ಈ ರಸ್ತೆ ಎಲ್ಲರನ್ನೂ ಉದ್ದೇಶಿಸಿ ಹೀಗೆನ್ನುತ್ತದೆ:

ನಾನು ಹಳೆಯ ಫಾದಾವನ್ನು ನಿರ್ನಾಮ ಮಾಡುತ್ತಿದ್ದೇನೆ. ಇಲ್ಲಿರುವ ಎಲ್ಲರನ್ನೂ, ಎಲ್ಲವನ್ನೂ ಬದಲಿಸುತ್ತೇನೆ…. ಹಳೆಯ ರೀತಿ ರಿವಾಜು, ಹಳೆಯ ಆಲೋಚನೆಗಳು, ಹಳೆಯ ಕಾನೂನುಗಳು ಎಲ್ಲವನ್ನೂ. ಒಳ್ಳೆಯದಕ್ಕೋ, ಕೆಟ್ಟದ್ದಕ್ಕೋ ಅಂತೂ ಸಂಪತ್ತು ಹಾಗೂ ಅವಕಾಶಗಳನ್ನು ತರುತ್ತೇನೆ. ಮನುಷ್ಯನಿಗೆ ಹೊಸ ಅಧಿಕಾರಗಳನ್ನೂ ತನ್ಮೂಲಕ ಹೊಸ ಸಂಘರ್ಷಗಳನ್ನೂ ತರುತ್ತೇನೆ. ನಾನು ಕ್ರಾಂತಿ. ನಿರ್ನಾಮ ಮಾಡಿ ಹೊಸತನ್ನು ಬೆಳೆಯುತ್ತೇನೆ. (ಮನುಷ್ಯನೇ) ಈಗೇನು ಮಾಡುತ್ತೀಯ? ನಿನ್ನ ಕಲ್ಪನೆಯಿಂದ ತಾನೇ ನಾನು ಹುಟ್ಟಿದ್ದು? ಆದ್ದರಿಂದ ಏನು ಮಾಡಬೇಕೆಂದು ನಿನಗೇ ಗೊತ್ತಿರಬೇಕು.

‘ನಾಗರಿಕತೆ’ ತರುವ ವಿಘಟನೆಯ ಅನುಭವವನ್ನು, ರಸ್ತೆಯ ಮೂಲಕ ಕಳ್ಳರು, ದುಷ್ಟತನ, ದರೋಡೆ ಎಲ್ಲವೂ ಬರುವುದನ್ನು ಕಾದಂಬರಿ ಹಿಡಿದಿಡುತ್ತದೆ, ನಿಜ. ಆದರೆ ಇದು ಕೂಡ ವಸಾಹತುವಾದೀ ಸಂಸ್ಕೃತಿ ಆಫ್ರಿಕಾವನ್ನು ಗ್ರಹಿಸುವ ಸರಳ ಮಾದರಿ. ಈ ಸರಳ ಮಾದರಿಯ ಪ್ರಕಾರ ಪಶ್ಚಿಮ ‘ಅನಾಗರಿಕರಿಗೆ ನಾಗರಿಕತೆಯನ್ನು’ ಕೊಡುತ್ತದೆ; ಆ ನಾಗರಿಕತೆ ಭ್ರಷ್ಟತೆಯನ್ನು ತರುತ್ತದೆ. ಆದರೆ, ರಾಸ್ಕಿನ್ ಗುರುತಿಸುವಂತೆ, ‘ಸಾಮ್ರಾಜ್ಯವಾದೀ ಯುರೋಪು ಆಫ್ರಿಕಾದ ಸಂಪತ್ತನ್ನು ಲೂಟಿ ಹೊಡೆಯಲು ರಸ್ತೆಯನ್ನು ನಿರ್ಮಾಣ ಮಾಡುತ್ತಿರುವ ಸೂಚನೆಯನ್ನು ಮಾತ್ರ ಕಾದಂಬರಿ ನೀಡುವುದಿಲ್ಲ’. ಜಾಯ್ಸಕ್ಯಾರಿ ಕಡೆಗಣಿಸಿದ ಸತ್ಯವನ್ನು ಅಚೀಬೆಯ ‘ಆರೋ ಆಫ್ ಗಾಡ್’ ಕಾದಂಬರಿಯಲ್ಲಿ ಬರುವ ರಸ್ತೆಯ ರೂಪಕ ಗ್ರಹಿಸುತ್ತದೆ. ಉಮುವಾರೋ ಹಾಗೂ ಒಕ್ವೇರಿ ಎಂಬ ಊರುಗಳನ್ನು ಒಗ್ಗೂಡಿಸುವ ರಸ್ತೆ ಬಿಳಿಯ ಮನುಷ್ಯನ ಹಲವು ಆಯುಧಗಳಲ್ಲೊಂದು ಎಂದು ಕಾದಂಬರಿಯ ಪಾತ್ರವೊಂದು ಹೇಳುತ್ತದೆ.

ಜಾಯ್ಸಕ್ಯಾರಿಯ ಕಾದಂಬರಿ ಆಫ್ರಿಕಾದ ಪ್ರಾಚೀನ ನಾಗರಿಕತೆಯನ್ನೇನೋ ಗುರುತಿಸುತ್ತದೆ. ಆದರೆ, ಆ ನಾಗರಿಕತೆ ಮಲೆತುಹೋಗಿದೆಯೆನ್ನುತ್ತದೆ. ಆದ್ದರಿಂದಲೇ ಜಾಯ್ಸ ಕ್ಯಾರಿ ಸೃಷ್ಟಿಸುವ ‘ಮುಗ್ಧ’ ಹಾಗೂ ಬಿಡುಗಡೆಯ ಬೆಳಕಿಗಾಗಿ ಕಾದು ನಿಂತ ಆಫ್ರಿಕಾಕ್ಕೆ ಪ್ರತಿಯಾಗಿ ತಾನು ಕಾದಂಬರಿ ಬರೆಯಹೊರಟಿದ್ದೇನೆಂಬ ಅಚೀಬೆಯ ಮಾತಿನಲ್ಲಿ ಆಫ್ರಿಕನ್ ಕಾದಂಬರಿಯ ಪ್ರಧಾನ ತಾತ್ತ್ವಿಕ ನೆಲೆಯೊಂದು ಸೂಚಿತವಾಗುತ್ತಿದೆ. ಈ ದೃಷ್ಟಿಯಿಂದ ಅಚೀಬೆ ಹಾಗೂ ಕ್ಯಾರಿಯ ಆಫ್ರಿಕವನ್ನು ಮುಖಾಮುಖಿಯಾಗಿಸಬೇಕು. ಜಾಯ್ಸ ಕ್ಯಾರಿಯ ಫಾದಾ ವೈರುಧ್ಯಗಳ ತವರಾಗಿ ಕಂಡರೆ, ಅಚೀಬೆಯ ‘ಥಿಂಗ್ಸ್ ಫಾಲ್ ಅಪಾರ್ಟ್’ ಕಾದಂಬರಿಯಲ್ಲಿರುವ ಆಧುನಿಕಪೂರ್ವ ಉಮೋಫಿಯ ವ್ಯವಸ್ಥಿತವಾದ ಹಾಗೂ ತನ್ನದೇ ಆದ ಘನತೆಯುಳ್ಳ ಊರು. ಜಾಯ್ಸ ಕ್ಯಾರಿಗೆ ನಿಗೂಢವಾಗಿ, ಬರ್ಬರವಾಗಿ ಕಾಣುವ ಆಚರಣೆಗಳ ಅರ್ಥ ಹಾಗೂ ಸಾಂಕೇತಿಕ ಮಹತ್ವ ಅಚೀಬೆಗೆ ಗೋಚರವಾಗುತ್ತದೆ. ‘ಫಾದಾ ಬದಲಾವಣೆಗೆ ಒಳಗಾಗುವ ‘ವಸ್ತು’ ವಾದರೆ, ಅಚೀಬೆ ತನ್ನನ್ನು ತಾನು ರೂಪಿಸಿಕೊಳ್ಳುವ ಸಮಾಜವನ್ನು ಸೃಷ್ಟಿಸುತ್ತಾನೆ. ಜಾಯ್ಸಕ್ಯಾರಿ ಹೇಳುವ ವಿಘಟನೆಯ ಕತೆಯನ್ನೇ  ಅಚೀಬೆ ನಿರೂಪಿಸುತ್ತಿದ್ದರೂ ಅಚೀಬೆ ಆಫ್ರಿಕನ್ ಸಮಾಜದೊಳಗೆ ನಿಂತು ಕತೆ ಹೇಳುತ್ತಿದ್ದಾನೆ. ಜಾಯ್ಸಕ್ಯಾರಿಯ ನೈಜೀರಿಯನ್ ಪಾತ್ರಗಳು ಜಾಯ್ಸಕ್ಯಾರಿಯಂತೆಯೇ ಇಂಗ್ಲಿಷ್ ಮಾತನಾಡುತ್ತಿದ್ದರೆ, ಅಚೀಬೆಯ ಪಾತ್ರಗಳು ಜಾನಪದ ಕತೆ, ಪುರಾಣ, ಉಪಕತೆ, ಗಾದೆ, ನೀತಿಕತೆಗಳ ಮೂಲಕ ಮನುಷ್ಯರಂತೆ ಕಾಣುತ್ತಾರೆ’.

ಆಫ್ರಿಕಾವನ್ನು ಒಂದು ಪರಿಕಲ್ಪನೆಯಾಗಿ, ಐಡಿಯಾ ಆಗಿ ಕಾಣುವ ಕ್ಯಾರಿಯನ್ನು ಅಚೀಬೆ ಮುಖಾಮುಖಿಯಾಗುವಲ್ಲಿ ಕಾಣುವುದು ಕೂಡ ಈ ಹಿಂದೆ ಹೇಳಲಾದ ಎರಡು ಸಂಸ್ಕೃತಿಗಳ ಮುಖಾಮುಖಿ. ಅದು ಯುರೋಪಿನ ಕಲ್ಪನೆಯ ರಮ್ಯ ಸ್ವ-ಪ್ರತಿಬಿಂಬ ಹಾಗೂ ಆಫ್ರಿಕನ್ ಕಲ್ಪನೆಯ ರಮ್ಯ ಸ್ವ-ಪ್ರತಿಬಿಂಬಗಳ ನಡುವಣ ಮುಖಾಮುಖಿ ಕೂಡ. ‘ಪ್ರತಿಯೊಂದು ಜನಾಂಗವೂ ತನ್ನ ಸಂಸ್ಕೃತಿ ಕುರಿತ ಆದರ್ಶೀಕೃತ ಚಿತ್ರವೊಂದನ್ನು ಪ್ರಜ್ಞೆಯಲ್ಲಿಟ್ಟು ಕೊಂಡಿರುತ್ತದೆ. ಈ ಚಿತ್ರ ಸೃಷ್ಟಿಯಲ್ಲಿ ಮೂರು ಪ್ರೇರಣೆಗಳಿರುತ್ತವೆ: ಒಂದು, ಮನಃಶಾಸ್ತ್ರೀಯವಾದದ್ದು. ಎರಡು, ಸೃಜನಶೀಲ ಕಲ್ಪನೆ. ಮೂರು, ಚರಿತ್ರೆ’ ಎನ್ನುವ ಅಲಿ ಮುಝರಾಯ್, ಒಂದು ಸಂಸ್ಕೃತಿಯ ಸ್ವಂತಿಕೆಯ ಹುಡುಕಾಟವನ್ನು ಹೀಗೆ ವಿವರಿಸುತ್ತಾನೆ:

ತನ್ನತನವನ್ನು ಕಂಡುಕೊಳ್ಳಬೇಕೆಂಬ ಮಾನಸಿಕ ಅಗತ್ಯ ಒಂದು ಜನಾಂಗದ ಕಲ್ಪನಾಶಕ್ತಿಯನ್ನು ಪ್ರಚೋದಿಸುತ್ತದೆ. ಆಗ ಕಲ್ಪನಾಶಕ್ತಿ ಆ ಜನಾಂಗದ  ಇತಿಹಾಸದತ್ತ ತಿರುಗುತ್ತದೆ. ಕ್ಷಕಿರಣ ಬೀರುತ್ತದೆ. ಅಲ್ಲಿ ತನ್ನದು ಎಂದು  ಗುರುತಿಸಿಕೊಳ್ಳಬಹುದಾದ ನೈತಿಕ ಹಾಗೂ ಬೌದ್ದಿಕ ಗುಣಗಳನ್ನು ಎತ್ತಿ ಹಿಡಿಯಲೆತ್ನಿಸುತ್ತದೆ.

ಆಫ್ರಿಕನ್ ಸಮುದಾಯದ ಕಲ್ಪನಾಶಕ್ತಿ ಆಫ್ರಿಕನ್ ಕಾದಂಬರಿಯ ಮೂಲಕ ಆರಂಭಿಸಿದ್ದು ಇಂಥ ಹುಡುಕಾಟವನ್ನು. ಸರಿಸುಮಾರು ಇದೇ ವೇಳೆಗೆ ಫ್ರೆಂಚ್ ಆಕ್ರಮಿತ ಆಫ್ರಿಕಾದ ಕವಿಗಳು, ರಾಜಕಾರಣಿಗಳು ನೆಗ್ರಿಟ್ಯೂಡ್(negritude) ಚಳುವಳಿಯ ಮೂಲಕ ‘ನೀಗ್ರೋತನ’ದ ಹುಡುಕಾಟದಲ್ಲಿ ತೊಡಗಿದ್ದರು. ಪಶ್ಚಿಮದ ನಾಗರಿಕತೆಗೆ ಪರ್ಯಾಯದ ಸೃಷ್ಟಿಯ ಹಂಬಲವಿದು. ಯುರೋಪ್‌ಕೇಂದ್ರಿತ ಭೌತಿಕವಾದ, ಮಾನವ ಸಂಬಂಧಗಳ ಸ್ವರೂಪ ಹಾಗೂ ಮಾನವ-ಪ್ರಕೃತಿಯ ಸಂಬಂಧಕ್ಕಿಂತ ಭಿನ್ನವಾದ ಆಫ್ರಿಕನ್ ಲೋಕದರ್ಶನದ ಪ್ರತಿಪಾದನೆಯಿದು. ‘ನೆಗ್ರಿಟ್ಯೂಡ್ ಕಲ್ಪನೆ ಆಫ್ರಿಕನ್ನರ ಕಲೆ, ಸಂಪ್ರದಾಯ, ಸಂಗೀತ ಹಾಗೂ ನೃತ್ಯಗಳಲ್ಲಿ ತಂತಾನೇ ಪ್ರತಿಬಿಂಬಿತಗೊಳ್ಳುತ್ತದೆ’ ಎನ್ನುವ ಸಾರ್ತ್ರ್‌ನ ದೃಷ್ಟಿಯಲ್ಲಿ ‘ನೆಗ್ರಿಟ್ಯೂಡ್ ಎಂಬುದು ಅಖಂಡ ಆಫ್ರಿಕತ್ವದ ಪ್ರತಿಪಾದನೆ’.

ಆದರೆ ಮೂಲತಃ ಫ್ರೆಂಚ್ ಆಫ್ರಿಕಾದಲ್ಲಿ ಹಾಗೂ ದಕ್ಷಿಣ ಆಫ್ರಿಕಾದಲ್ಲಿ, ಅದರಲ್ಲೂ ಫ್ರೆಂಚ್ ಆಫ್ರಿಕಾದ ಕಾವ್ಯದಲ್ಲಿ ತೀವ್ರವಾಗಿ ಪ್ರತಿಪಾದಿಸಲ್ಪಟ್ಟ ನೆಗ್ರಿಟ್ಯೂಡ್ ಕಲ್ಪನೆಯನ್ನು ಪಶ್ಚಿಮ ಆಫ್ರಿಕಾದ ಕಾದಂಬರಿಕಾರರು ಸಂಪೂರ್ಣವಾಗಿ ಸ್ವೀಕರಿಸಲಿಲ್ಲ. ಯುರೋಪಿನ ಕೆಲಚಿಂತಕರು ಆಫ್ರಿಕನ್ನನನ್ನು ವೈಭವೀಕರಿಸಿ ರೂಪಿಸಿಕೊಂಡ ‘ನೋಬಲ್ ಸ್ಯಾವೇಜ್’(‘ಉದಾತ್ತ ಕಾಡುಮನುಷ್ಯ’) ಕಲ್ಪನೆಯನ್ನೇ ನೆಗ್ರಿಟ್ಯೂಡ್ ಕೂಡ ರಮ್ಯವಾಗಿ ಮುಂದುವರಿಸುತ್ತಿದೆ ಎಂಬ ಹಿನ್ನೆಲೆಯಲ್ಲಿ ಷೋಯಿಂಕಾ, ಅಚೀಬೆ, ನುಗುಗಿಯಂಥ ಮುಖ್ಯ ಕಾದಂಬರಿಕಾರರು ನೆಗ್ರಿಟ್ಯೂಡ್ ಕಲ್ಪನೆಯನ್ನು ಸಂದೇಹಿಸುತ್ತಾರೆ. ಇಂಥ ಭೂತ ಸಮರ್ಥನೆಯ ರಾಜಕಾರಣದ ಸಾಹಿತ್ಯವನ್ನು ಮೂಲತಃ  ರಾಷ್ಟ್ರೀಯವಾದೀ ಬೂರ್ಜ್ವಾವರ್ಗದ ಸಾಹಿತ್ಯವೆನ್ನುವ ನುಗುಗಿ, ಇಂಥ ಸಾಹಿತ್ಯ ರಾಷ್ಟ್ರೀಯವಾದೀ ವರ್ಗಕ್ಕೆ ಅಧಿಕಾರ ಗಳಿಸಿಕೊಳ್ಳುವ ರಾಜಕೀಯ ಏಣಿಯಾಗಿ ಬದಲಾಗುವುದನ್ನು ಗುರುತಿಸುತ್ತಾನೆ.

‘ನೆಗ್ರಿಟ್ಯೂಡ್’ ಕಲ್ಪನೆ ಕೂಡ ಮೂಲತಃ ಯುರೋಪಿನ ಸೃಷ್ಟಿಯೇ. ನೆಗ್ರಿಟ್ಯೂಡ್ ಕಲ್ಪನೆಯಲ್ಲಿರುವ ನೀಗ್ರೋ ವೈಭವೀಕರಣವನ್ನು ವಿಮರ್ಶಿಸುತ್ತಾ ಫ್ಯಾನನ್, ‘ನೀಗ್ರೋ ಗಳನ್ನು ದ್ವೇಷಿಸುವವರಂತೆಯೇ ನೀಗ್ರೋಗಳನ್ನು ಆರಾಧಿಸುವವರೂ ಖಾಯಿಲೆಯ ಮನಸ್ಸಿನವರೇ’ ಎನ್ನುತ್ತಾನೆ. ‘ಹುಲಿ ತನ್ನ ಹುಲಿತನವನ್ನು ಪ್ರತಿಪಾದಿಸುವ ಅಗತ್ಯವಿದೆಯೆ!’ ಎಂದು ಷೋಯಿಂಕಾ ನೆಗ್ರಿಟ್ಯೂಡ್ ಕಲ್ಪನೆಯನ್ನು ತಮಾಷೆ ಮಾಡಿದರೆ, ‘ನೆಗ್ರಿಟ್ಯೂಡಿನಂಥ ಪುರಾಣೀಕರಿಸಿದ ಚಿತ್ರಣ ಆಫ್ರಿಕನ್ನರಿಗೆ ಹೊಸ ಸೆರೆಮನೆಯಾಗಿಬಿಡುತ್ತದೆ’ ಎಂದು ಚಿನ್ವೆಜು ಹಾಗೂ ಸಹ ಲೇಖಕರು ಎಚ್ಚರಿಸುತ್ತಾರೆ. ‘ನೆಗ್ರಿಟ್ಯೂಡಿನ ಜನಾಂಗವಾದೀ ಸ್ವ-ಪ್ರತಿ ಪಾದನೆಯ ಉಗ್ರತೆಗಿಂತ, ಸಹಜವಾಗಿ ತನ್ನನ್ನು ತಾನು ಒಪ್ಪಿಕೊಳ್ಳುವುದೇ ಅಥೆಂಟಿಕ್ ಆಫ್ರಿಕನ್ ಸಾಹಿತ್ಯ’ಎನ್ನುವ ಷೋಯಿಂಕಾ, ನೆಗ್ರಿಟ್ಯೂಡಿನ ಉಗ್ರ ಪ್ರತಿಪಾದಕನಾದ ‘ಸೆಂಘಾರನಿಗಿಂತ ಅಚೀಬೆಯೇ ಮೊದಲು ಅಧಿಕೃತ ಆಫ್ರಿಕನ್ ಸಾಹಿತ್ಯ ಸೃಷ್ಟಿಸಿದವನು’ ಎಂದು ಬರೆಯುತ್ತಾನೆ.

ಇಂಥ ಹಿನ್ನೆಲೆಯಲ್ಲಿ ಪಶ್ಚಿಮದ ಸಿದ್ಧಮಾದರಿಗಳನ್ನು ಮುಖಾಮುಖಿಯಾಗಲು ಹೊರಟ  ಆಫ್ರಿಕನ್ ಕಾದಂಬರಿ ಯುರೋಪಿಯನ್ ಕಾದಂಬರಿಯ ಅಥವಾ ಇಂಗ್ಲಿಷ್ ಕಾದಂಬರಿಯ ಪರಂಪರೆಯಿಂದ ಕಲಿಯುತ್ತಲೇ ಯುರೋಪಿಯನ್ ಹಾಗೂ ಇಂಗ್ಲಿಷ್ ಕಾದಂಬರಿ ಸೃಷ್ಟಿಸಿದ್ದ ಆಫ್ರಿಕನ್ ಪ್ರತಿಬಿಂಬವನ್ನೂ ಮುಖಾಮುಖಿಯಾಗಬೇಕಾಯಿತು. ಜೊತೆಗೆ ಯುರೋಪು ಸೃಷ್ಟಿಸಿದ ಸ್ವ-ವಿಮರ್ಶೆಯ ಮಾದರಿಯನ್ನೂ ಸ್ವೀಕರಿಸಬೇಕಾಯಿತು. ಹೀಗೆ ಕಲಿಯುವ ಹಾಗೂ ಪ್ರತಿಭಟಿಸುವ ದ್ವಿಮುಖೀ ಚಲನೆಯ ಘಟ್ಟವೆಂದರೆ ಕಾದಂಬರೀ ಪ್ರಕಾರದ ರಾಜಕಾರಣದ ಕುತೂಹಲಕಾರಿ ಘಟ್ಟ.*      ನೋಹ ಬೈಬಲಿನಲ್ಲಿ ಬರುವ ಒಬ್ಬ ಯಹೂದಿ ಕುಲಪತಿ. ಒಮ್ಮೆ ನೋಹ ತಾನೇ ಬೆಳೆದ ದ್ರಾಕ್ಷಿ ಹಣ್ಣುಗಳಿಂದ ತಯಾರಿಸಿದ ದ್ರಾಕ್ಷಾರಸ ಕುಡಿದು ಮತ್ತೇರಿ ಬೆತ್ತಲೆ ಮಲಗುತ್ತಾನೆ. ಅದನ್ನು ಕಂಡ ಅವನ ಹಿರಿಯ ಮಗ ಹ್ಯಾಮ್ ತನ್ನ ತಮ್ಮಂದಿರಾದ ಶೆಮ್ ಹಾಗೂ ಜೆಸ್‌ಪತ್‌ಗೆ ತಂದೆ ಬೆತ್ತಲಾಗಿ ಮಲಗಿರುವ ವಿಷಯ ಹೇಳುತ್ತಾನೆ. ಆ ದೃಶ್ಯವನ್ನು ನೋಡಲು ಒಲ್ಲದ ಆ ತಮ್ಮಂದಿರು ಹಿಮ್ಮುಖವಾಗಿ ಬಂದು ಹೊದಿಕೆ ಹೊದಿಸಿ ತಂದೆಯ ಬೆತ್ತಲೆಯನ್ನು ಮುಚ್ಚುತ್ತಾರೆ. ನೋಹನಿಗೆ ಎಚ್ಚರವಾದಾಗ ಈ ವಿಷಯ ತಿಳಿಯುತ್ತದೆ. ತನ್ನನ್ನು ಬೆತ್ತಲೆ ಕಂಡ ಹ್ಯಾಮ್‌ನ ಮಗನ ಸಂತತಿಯು ಶೆಮ್ ಹಾಗೂ ಜೆಸಪತ್‌ರ ಮಕ್ಕಳ ಸಂತತಿಗೆ ಗುಲಾಮ ಸಂತತಿಯಾಗಲೆಂದು ನೋಹ ಶಾಪ ಕೊಡುತ್ತಾನೆ. ಈ ಗುಲಾಮ ಸಂತತಿಯ ಒಂದು ಜನಾಂಗ ಆಫ್ರಿಕನ್ನರದು ಎಂಬ ಕತೆಯಿದೆ. ಇದನ್ನಾಧರಿಸಿ ಕರಿಯರು ಬಿಳಿಯರ ಗುಲಾಮರಾದರು ಎಂಬ ಸಂಕಥನ ಕಾಲಕ್ರಮೇಣ ನಿರ್ಮಾಣ ಗೊಂಡಂತಿದೆ.